ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮಿಯವರು ಚೆನ್ನೈಯಲ್ಲಿರುವ ಕಲಾಕ್ಷೇತ್ರದ ಒಂದು ಸಂಗೀತ ಕಚೇರಿಯಲ್ಲಿ “ಬ್ರೋಚೆವಾರೆವರುರಾ ನಿನ್ನುವಿನಾ ರಘುವರ” ಎಂಬ ಕಮಾಚ್ ರಾಗದ ಕೃತಿಯನ್ನು ಅದ್ಭುತವಾಗಿ ಹಾಡಿದರಂತೆ. ಅದುವರೆಗೆ ಆ ಕೃತಿಯು ಇನ್ನೂ ಪ್ರಚಾರಕ್ಕೆ ಬಂದಿರಲಿಲ್ಲ. ಇದನ್ನು ಕೇಳಿ ಬಹಳ ಸಂತೋಷಪಟ್ಟ ರಚನಕಾರರು ಈ ಕೃತಿಯು ತಮ್ಮದೇ ಎಂದು ನಂಬುವುದು ಕಷ್ಟವಾಯಿತಂತೆ. ಇಂತಹ ಕೃತಿಯನ್ನು ರಚಿಸಿ ಕಮಾಚ್ ರಾಗಕ್ಕೆ ಅಪೂರ್ವ ಹೊಸ ಮೆರಗನ್ನು ನೀಡಿದ ಮಹಾನ್ ವಾಗ್ಗೇಯಕಾರರೇ ಮೈಸೂರು ವಾಸುದೇವಾಚಾರ್ಯರು. ಇವರ ‘ಬಿಲಹರಿ’ ರಾಗದ ಜನಪ್ರಿಯ “ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ” ಕೃತಿಯನ್ನು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಕೇಳದವರೇ ಇಲ್ಲ.

ಸುಬ್ರಹ್ಮಣ್ಯಾಚಾರ್ಯ, ಕೃಷ್ಣಾಬಾಯಿ ದಂಪತಿಗಳಿಗೆ ೧೮೬೫ ಮೇ ೨೮ರಂದು ಅಂದರೆ ಜ್ಯೇಷ್ಠ ಶುದ್ಧ ಚೌತಿಯಂದು ವಾಸುದೇವಾಚಾರ್ಯರು ಜನಿಸಿದರು. ಮಾಧ್ವ ವೈದಿಕ ಸಂಪ್ರದಾಯಕ್ಕೆ ಸೇರಿದ ಸುಬ್ರಹ್ಮಣ್ಯಾಚಾರ್ಯರು ಪೌರಾಣಿಕ ಶ್ರೇಷ್ಠರು ಹಾಗೂ ವೇದಾಧ್ಯಯನ ಸಂಪನ್ನರೆಂದು ಹೆಸರು ಗಳಿಸಿದ್ದರು. ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ ವಿದ್ವತ್ತು, ವಿದ್ಯಾಪಕ್ಷಪಾತ ಮತ್ತು ಕಲಾ ಪ್ರೋತ್ಸಾಹಗಳಿಂದ ಆಕರ್ಷಿತರಾದ ಸುಬ್ರಹ್ಮಣ್ಯಾಚಾರ್ಯರು ತಮ್ಮ ಹುಟ್ಟಿದ ಊರಾದ ಕೊಯಮತ್ತೂರು ಜಿಲ್ಲೆಯ ಚೇವೂರು ಗ್ರಾಮವನ್ನು ಬಿಟ್ಟು ಬೆಂಗಳೂರಿನ ಸಮೀಪವಿರುವ ಕಾನಕಾನಹಳ್ಳಿಯಲ್ಲಿ (ಇಂದಿನ ಕನಕಪುರ) ಸ್ವಲ್ಪಕಾಲ ಇದ್ದು ಅನಂತರ ಮೈಸೂರಿಗೆ ಬಂದು ನೆಲೆಸಿದರು.

ವಾಸುದೇವನಿಗೆ ಮೂರು ವರ್ಷ ತುಂಬುವುದರಲ್ಲೇ ತಂದೆ ದೈವಾಧೀನರಾದರು. ಮುಂದೆ ಇವನನ್ನು ಪೋಷಿಸುವ ಜವಾಬ್ದಾರಿ ತಾತ (ತಾಯಿಯ ತಂದೆ) ಗೋಪಾಲಾಚಾರ್ಯರ ಮೇಲೆ ಬಿತ್ತು. ಇವರು ಮೈಸೂರಿನ ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾಗಿದ್ದ ಪೆರಿಯಸ್ವಾಮಿ ತಿರುಮಲಾಚಾರ್ಯ ಅವರಲ್ಲಿ ಮೊಮ್ಮಗನನ್ನು ಶಿಷ್ಯ ವೃತ್ತಿಗೆ ಸೇರಿಸಿದರು. ಮುಂದೆ ಹನ್ನೆರಡನೆಯ ವಯಸ್ಸಿನಲ್ಲಿ ಪ್ರೌಢ ಸಂಸ್ಕೃತ ವಿದ್ಯಾಭ್ಯಾಸಕ್ಕೆ ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಗೆ ಸೇರಿಸಿದರು. ಇಲ್ಲಿ ವ್ಯಾಕರಣ ಮತ್ತು ಸಂಸ್ಕೃತ ಅಧ್ಯಯನ ನಡೆಯುತ್ತಿತ್ತು. ಆದರೆ ವಾಸುದೇವನಿಗೆ ಸಣ್ಣ ವಯಸ್ಸಿನಿಂದಲೂ ಸಂಗೀತದಲ್ಲಿ ಒಲವು. ಪಕ್ಕದ ಮನೆಯಲ್ಲೆ ಇದ್ದ ಸಂಗೀತ ವಿದ್ವಾಂಸರಾದ ಸುಬ್ಬರಾಯರಲ್ಲಿ ಸಂಗೀತ ಕಲಿಯಲು ಆಸೆ. ಆ ಕಾಲದಲ್ಲಿ ಸಂಗೀತ, ನಾಟಕ ಇಂಥ ಕಲೆಗಳನ್ನು ಗೌರವಸ್ಥ ಮನೆತನದವರು ಕಲಿಯಲೇಬಾರದೆಂಬ ಮನೋವೃತ್ತಿಯನ್ನು ಬೆಳೆಸಿಕೊಂಡಿದ್ದವರು. ಆದರೆ ಸೋದರಮಾವ ಪದ್ಮನಾಭಾಚಾರ್ಯರ ಸಹಕಾರದಿಮದ ತಾತನ ಕಣ್ಣು ತಪ್ಪಿಸಿ ವಾಸುದೇವ ಸುಬ್ಬರಾಯರಿಂದಲೇ ಸಂಗೀತ ಕಲಿಯಲು ಪ್ರಾರಂಭಿಸಿದ. ಎಷ್ಟು ದಿನ ತಾನೇ ಇದನ್ನು ಗುಟ್ಟಾಗಿಡಲು ಸಾಧ್ಯ? ತಾತನಿಗೆ ಇದು ಗೊತ್ತಾಗಿ ವಂಶಕ್ಕೆ ಎಲ್ಲಿ ಕಳಂಕ ತಂದು ಬಿಡುತ್ತಾನೋ ಎಂಬ ಭಯದಿಂದ ಇನ್ನು ಮುಂದೆ ಅವರ ಮನೆಗೆ ಹೋಗದಂತೆ ಕಟ್ಟಾಜ್ಞೆ ಮಾಡಿದರು. ಹುಡುಗನ ಸಂಗೀತಾಭಿರುಚಿಗೆ ಸಿಡಿಲು ಬಡಿದಂತಾಯಿತು.

ಸಂಸ್ಕೃತ ಪಾಠಶಾಲೆಯ ಕ್ರಮದಂತೆ ವಿದ್ಯಾರ್ಥಿಗಳು ತಮ್ಮ ತಮ್ಮ ಪಠ್ಯವಿಷಯಗಳನ್ನು ಸ್ವಂತವಾಗಿ ಆಯುವಂತಿರಲಿಲ್ಲ. ಎಲ್ಲ ಪಠ್ಯ ವಿಷಯಗಳನ್ನು ಬೇರೆ ಬೇರೆ ಚೀಟಿಗಳಲ್ಲಿ ಬರೆದು ಪಾಠಶಾಲೆಯ ಮಹಾಗಣಪತಿಯ ಮುಂದೆ ಇಟ್ಟು, ಒಂದು ಸಣ್ಣ ಮಗುವಿನ ಕೈಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರಿನಲ್ಲೂ ತೆಗೆಸುವುದು ರೂಢಿಯಲ್ಲಿತ್ತು. ವಿದ್ಯಾರ್ಥಿಯ ಹೆಸರಿನಲ್ಲೂ ತೆಗೆಸುವುದು ರೂಢಿಯಲ್ಲಿತ್ತು. ವಿದ್ಯಾರ್ಥಿಯ ಹೆಸರಿನಲ್ಲಿ ತೆಗೆದ ಎರಡು ಶಾಸ್ತ್ರಗಳನ್ನು ಆತ ಅಭ್ಯಾಸ ಮಾಡಬೇಕಿತ್ತು. ಅದರಂತೆ ಚೀಟಿ ತೆಗೆದಾಗ ವಾಸುದೇವನ ಹೆಸರಿನಲ್ಲಿ ಬಂದದ್ದು ಸಂಗೀತ ಮತ್ತು ಸಾಹಿತ್ಯ. ಹೀಗಾಗಿ ಸಹಜವಾಗಿಯೇ ಆಸಕ್ತಿ ಇದ್ದ ಆತನ ಸಂಗೀತದ ಪುರೋಭಿವೃದ್ಧಿಗೆ ಅನುಕೂಲವಾಯಿತು. ಪಾಠಶಾಲೆಯಲ್ಲೇ ಸಂಗೀತ ಅಧ್ಯಾಪಕರಾಗಿದ್ದ ವೀಣಾ ಪದ್ಮನಾಭಯ್ಯನವರಿಂದ ಸಂಗೀತ ಶಿಕ್ಷಣ ಮುಂದುವರೆಯಿತು.

ಒಮ್ಮೆ ವಾಸುದೇವನಿಗೆ ಪ್ರಸಿದ್ಧ ಸಂಗೀತ ವಿದ್ವಾಂಸರಾಗಿದ್ದ ಮಹಾ ವೈದ್ಯನಾಥ ಅಯ್ಯರ್ ಮತ್ತು ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್ ಅವರ ಸಂಗೀತ ಕೇಳುವ ಸುಯೋಗ ಒದಗಿತು. ಇವರಿಬ್ಬರ ಸಂಗೀತ ಕೇಳಿ ಬಾಲಕ ದಿಗ್ಬ್ರಾಂತನಾದ. ಪಟ್ಟಣಂರವರ ಬಿಕ್ಕಟ್ಟಿನ ಮಧ್ಯ ನಡೆಯ ಗಂಭೀರವಾದ ಗಾಯನವು ಬಾಲಕನ ಮನಸ್ಸನ್ನು ಸೂರೆ ಗೊಂಡಿತು. ಹೇಗಾದರೂ ಮಾಡಿ ಅವರಲ್ಲಿ ಸಂಗೀತ ಶಿಕ್ಷಣ ಮುಂದುವರಿಸಬೇಕೆಂದು ನಿರ್ಧಾರಮಾಡಿದ. ಈತನ ಹಂಬಲ ಅಂದಿನ ಮಹಾರಾಜರಾಗಿದ್ದ ಚಾಮರಾಜ ಒಡೆಯರಿಗೆ ಹೇಗೋ ತಿಳಿಯಿತು. ಈತನ ವಿಷಯದಲ್ಲಿ ಆಸಕ್ತಿ ತಳೆದಿದ್ದ ಪ್ರಭುಗಳು ಇವನನ್ನು ತಮಿಳುನಾಡಿನ ತಿರುವಯ್ಯಾರಿನಲ್ಲಿ ಪಟ್ಟಣಂ ಸುಬ್ರಹ್ಮಣ್ಯಂ ಅಯ್ಯರ್‌ರವರ ಬಳಿ ಉನ್ನತ ಸಂಗೀತ ಶಿಕ್ಷಣ ಕೊಡಿಸಲು ಕಳುಹಿಸಿಕೊಟ್ಟರು. ತಮಿಳು ಭಾಷೆಯ ಪರಿಚಯವಿಲ್ಲದ ಹಾಗೂ ಅನೇಕ ಆಕಾಂಕ್ಷೆಗಳಿಂದ ಬಂದ ವಾಸುದೇವನು ತಿರುವಯ್ಯಾರಿನ ಯಾವುದೋ ಒಂದು ಬೀದಿಯಲ್ಲಿ ತಾನು ಬಯಸಿ ಬಂದ ಗುರುಗಳು ಇದ್ದಾರೆಂದು ಕೇಳಿದ್ದನು. ಮಹಾರಾಜರು ಈತನನ್ನು ಆಸಕ್ತಿ ತಳೆದು ಕಳಿಸದಿದ್ದಲ್ಲಿ ಇಂತಹ ಸ್ಥಳಗಳಲ್ಲಿ ಸಂಗೀತವನ್ನು ಕಲಿಸಲು ಯಾರೂ ಒಪ್ಪಿಕೊಳ್ಳುತ್ತಿರಲಿಲ್ಲ. ಯಾವುದೋ ಒಂದು ಮನೆಯನ್ನು ಪತ್ತೆ ಮಾಡಿ ಬಾಗಿಲನ್ನು ತಟ್ಟಿ ವಿಚಾರಿಸಿದಾಗ ಒಂದು ಸುಂದರಾಕಾರದ ವ್ಯಕ್ತಿ ಹೊರಗೆ ಬಂದು ಎದುರು ಮನೆ ಎಂದು ತಿಳಿಸಿದರು. ಆ ವ್ಯಕ್ತಿ ಪ್ರಸಿದ್ಧ ಸಂಗೀತ ವಿದ್ವಾಂಸರಾದ ಮಹಾ ವೈದ್ಯಾನಾಥ ಅಯ್ಯರ್. ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್‌ರವರು ಸದ್ಗುರು ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿದವರು. ಇವರ ಬಳಿ ೧೮೮೪ರಿಂದ ೧೮೯೦ರವರೆಗೆ ಸಂಗೀತ ಶಿಕ್ಷಣವನ್ನು ಮುಂದುವರಿಸಿದರು.

ವಾಸುದೇವಾಚಾರ್ಯರು ಸಂಪ್ರದಾಯ ಶುದ್ಧ ಸಂಗೀತ ಶಿಕ್ಷಣ ಪಡೆದದ್ದೇ ಅಲ್ಲದೆ ಕೃತಿ ರಚನೆ ಮಾಡುವುದನ್ನೂ ಕಲಿತರು. ಆಚಾರ್ಯರು ಮೈಸೂರಿಗೆ ಹಿಂದಿರುಗಿದ ಬಳಿಕ ಆಸ್ಥಾನ ವಿದ್ವಾಂಸರಾಗಿ ನೇಮಿಸಲ್ಪಟ್ಟರು. ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದ ಇವರು ಸಂಗೀತ ಮತ್ತು ಶಾಸ್ತ್ರಗಳಲ್ಲೂ ಘನ ವಿದ್ವಾಂಸರಾಗಿದ್ದರು. ಜೊತೆಗೆ ಕೃತಿರಚನಾ ಕೌಶಲ ಹಾಗೂ ಸರಿಯಾಗಿ ವಿಮರ್ಶೆ ಮಾಡುವ ಜ್ಞಾನವನ್ನು ಬೆಳೆಸಿಕೊಂಡಿದ್ದರು.

ಗಡುಸಾದ ತಮ್ಮ ಶಾರೀರವನ್ನು ಕ್ರಮಬದ್ಧ ಸಾಧನೆಯಿಂದ ಹತೋಟಿಗೆ ತಂದಿದ್ದರು. ಮಂದ್ರಸ್ಥಾಯಿಯಲ್ಲಿ ತಮ್ಮದೇ ಆದ ತಾನ ಹಾಡುವ ಶೈಲಿಯನ್ನು ರೂಪಿಸಿಕೊಂಡಿದ್ದರು. ರಾಗಾಲಾಪನೆ, ಮಧ್ಯಮಕಾಲ ತಾನ ಹಾಡುವುದರಲ್ಲಿ ಅದ್ವಿತೀಯರಾಗಿದ್ದರು. ಅಲ್ಲದೆ ಕೃತಿಗಳನ್ನು ಅರ್ಥಮಾಡಿಕೊಂಡು ರಂಜನೀಯವಾಗಿ ನಿರೂಪಿಸುತ್ತಿದ್ದರು. ಸಾಹಿತ್ಯ ಹಾಗೂ ರಾಗ ಭಾವವನ್ನರಿತು ನೆರವಲ್ (ಸಾಹಿತ್ಯ ವಿನ್ಯಾಸ) ಮಾಡುತ್ತಿದ್ದುದೇ ಅಲ್ಲದೆ ಸಂಸ್ಕೃತ ಶ್ಲೋಕಗಳನ್ನು ರಸವತ್ತಾಗಿ ಹಾಡುತ್ತಿದ್ದರು. ಈ ಶತಮಾನದ ಪ್ರಸಿದ್ಧ ವಾಗ್ಗೇಯಕಾರರಾಗಿರುವ ಇವರು ಮಾಡಿರುವ ರಚನೆಗಳು ಸುಮಾರು ಮುನ್ನೂರು. ಇವು ತೆಲುಗು ಮತ್ತು ಸಂಸ್ಕೃತ ಭಾಷೆಯಲ್ಲಿವೆ. ಇವರ ಮೊತ್ತ ಮೊದಲ ಕೃತಿ ಮಾಯಾಮಾಳವ ಗೌಳರಾಗದ ‘ಚಿಂತಯೇಹಂ ಜಾನಕೀಕಾಂತಂ’. ೧೯೦೦ರಲ್ಲಿ ಇದನ್ನು ರಚಿಸಿದರು. ಸುಮಾರು ನೂರನಲ್ವತ್ತು ಕೃತಿಗಳನ್ನು ಎರಡು ಭಾಗಗಳಲ್ಲಿ “ವಾಸುದೇವ ಕೀರ್ತನ ಮಂಜರಿ” ಎಂಬ ಗ್ರಂಥದಲ್ಲಿ ಸ್ವರಸಹಿತವಾಗಿ ಪ್ರಕಟಿಸಿದ್ದಾರೆ. ಮೊದಲ ಭಾಗ ಕೇಶವಾದಿ ದ್ವಾದಶನಾಮ ಕೃತಿಗಳನ್ನೂ, ಎರಡನೆಯ ಭಾಗ ಸಂಕರ್ಷಣಾದಿ ದ್ವಾದಶನಾಮ ಕೃತಿಗಳನ್ನೂ ಒಳಗೊಂಡಿವೆ. ‘ಸುನಾದ ವಿನೋದಿನಿ’ ಒಂದು ಅಪರೂಪ ರಾಗ. ಈ ರಾಗದಲ್ಲಿ ‘ದೇವಾದಿದೇವ’ ಎಂಬ ಇವರ ಕೃತಿ ಬಹಳ ಜನಪ್ರಿಯವಾಗಿದೆ. ಹೀಗೆಯೇ ಹಲವಾರು ಪ್ರಚಲಿತ ಮತ್ತು ಅಪ್ರಚಲಿತ ರಾಗಗಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಇಂದು ಪ್ರಚಾರದಲ್ಲಿರುವ ಕಮಾಚ್ ರಾಗದ ನಿರ್ಮಾತೃ ಎಂದು ಇವರನ್ನು ನಿಸ್ಸಂದೇಹವಾಗಿ ಕರೆಯಬಹುದು. ಇವರ ಕೆಲವು ಜನಪ್ರಿಯ ಕೃತಿಗಳಾದ ಮೋಹನ ರಾಗದ ‘ರಾರಾ ರಾಜೀವಲೋಚನ’, ಅಭೇರಿಯಲ್ಲಿ ‘ಭಜರೇ ಮಾನಸ’, ಗೌಳ ದಲ್ಲಿ ‘ಪ್ರಣಮಾಮ್ಯಹಂ ಗೌರೀಸುತಂ’, ಹಿಂದೋಳದ ರಾಗದ ‘ಮಾಮವತು ಶ್ರೀ ಸರಸ್ವತಿ’, ದೇವ ಮನೋಹರಿಯಲ್ಲಿ ‘ಪಲುಕವದೇಮಿರಾ’ ಮುಂತಾದವುಗಳು ತ್ಯಾಗರಾಜರ ರಚನೆಗಳಂತೆ ರಾಗ ಭಾವಗಳಿಂದ ತುಂಬಿ ಸರಳವಾಗಿವೆ ಹಾಗೂ ತಮ್ಮದೇ ಆದ ಸ್ವಂತಿಕೆಯನ್ನು ಬೆಳೆಸಿಕೊಂಡಿವೆ.

ಇವರ ರಚನೆಗಳಲ್ಲಿ ಸ್ವರಜತಿ, ತಾನವರ್ಣ, ಕೃತಿ ತಿಲ್ಲಾನ, ರಾಗಮಾಲಿಕೆ ಇವೆಲ್ಲ ಸೇರಿವೆ. ಇವರು ಕೆಲವು ಕೃತಿಗಳಿಗೆ ಮಧ್ಯಮಕಾಲ ಸಾಹಿತ್ಯವನ್ನೂ, ಇನ್ನು ಕೆಲವಕ್ಕೆ ಚಿಟ್ಟೇಸ್ವರಗಳಗಳನ್ನೂ ಸೇರಿಸಿದ್ದಾರೆ. ಸಂಗೀತ ತ್ರಿಮೂರ್ತಿಗಳಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾ ಶಾಸ್ತ್ರಿಗಳನ್ನು ಕುರಿತು ರಾಗಮಾಲಿಕೆಗಳನ್ನೂ ರಚಿಸಿದ್ದಾರೆ. ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಆಡುಭಾಷೆಯಾದ ಕನ್ನಡದಲ್ಲಿ ರಚನೆಗಳನ್ನು ಮಾಡುವಂತೆ ಆದೇಶಿಸಿದಾಗ ತಾವು ಸಂಸ್ಕೃತ ಹಾಗೂ ತೆಲುಗು ಭಾಷೆಗಳಲ್ಲಿ ನೈಪುಣ್ಯವನ್ನು ಪಡೆದಿರುವುದರಿಂದ ಪುರಂದರದಾಸರಂತೆ ಕನ್ನಡದಲ್ಲಿ ನಿರರ್ಗಳವಾಗಿ ರಚಿಸಲು ಸಾಧ್ಯವಾಗುವುದಿಲ್ಲವೆಂದು ನಿವೇದಿಸಿಕೊಂಡರಂತೆ. ಮಹಾರಾಜರ ಒತ್ತಾಯಕ್ಕೆ ಸರಸ್ವತಿ ಮನೋಹರಿ ರಾಗದಲ್ಲಿ ಕರುಣಿಸೌತಾಯೇ ಎಂಬ ಕನ್ನಡ ಕೃತಿಯೊಂದನ್ನು ರಚಿಸಿ ನಂತರ ಕನ್ನಡದಲ್ಲಿ ರಚನೆಗಳನ್ನು ಮುಂದುವರಿಸಲು ಸಾಧ್ಯವಾಗದೇ ತೆಲುಗು, ಸಂಸ್ಕೃತ ಭಾಷೆಗಳಲ್ಲೇ ರಚನೆ ಮುಂದುವರಿಸಿದರಂತೆ.

ಆಚಾರ್ಯರು ತ್ಯಾಗರಾಜರ ಶಿಷ್ಯಪರಂಪರೆಗೇ ಸೇರುವುದರಿಂದ ಈ ಪರಂಪರೆಯ ಸಂಪ್ರದಾಯ ಶುದ್ಧತೆ, ಭಾವಗಳು ಇವರ ರಚನೆಗಳಲ್ಲೂ ಕಂಡುಬರುವುದು ಸಹಜ. ಇವರ ಕೃತಿಗಳು ಪ್ರಚಾರಕ್ಕೆ ಬಂದ ಹೊಸದರಲ್ಲಿ ಇವನ್ನು ತ್ಯಾಗರಾಜರ ಕೃತಿಗಳೇ ಎಂದು ರಸಿಕರು ಭ್ರಮಿಸುತ್ತಿದ್ದರಂತೆ. ಒಂದು ಬಾರಿ ಆಚಾರ್ಯರು ವೀಣೆ ಶೇಷಣ್ಣನವರ ಮನೆಯಲ್ಲಿ ಖರಹರಪ್ರಿಯ ರಾಗದಲ್ಲಿ ‘ಗಾನ ಸುಧಾರಸ’ ಎಂಬ ತಮ್ಮ ಕೃತಿಯನ್ನು ಹಾಡಿದರಂತೆ. ಚರಣದಲ್ಲಿ ‘ತ್ಯಾಗರಾಜುನಿ ಮಹಾತ್ಮುಲನು ದಲಚುಕೊನಿ’ ಎಂಬ ಸಾಹಿತ್ಯವನ್ನು ಕೇಳಿ ಎಲ್ಲರಿಗೂ ಸಂದೇಹ ಉಂಟಾಯಿತಂತೆ. ತಡೆಯಲಾರದೆ ಆಚಾರ್ಯರನ್ನು ಕೇಳಿ ನಿಜಸಂಗತಿ ತಿಳಿದ ಮೇಲೆ ಶೇಷಣ್ಣನವರು, ಕೃಷ್ಣಪ್ಪನವರು ಬಹಳ ಪ್ರಶಂಸಿಸಿದರಂತೆ.

‘ಪ್ರಣತಾರ್ತಿಹರಮಹಂ ಭಜೇ’ ಎಂಬ ರಚನೆಯಲ್ಲಿ ಜಂಜೂಟಿ ರಾಗದ ಭಾವ ಸುಂದರವಾಗಿ ಚಿತ್ರಿತವಾಗಿದೆ. ಖರಹರಪ್ರಿಯ ರಾಗದಲ್ಲಿ ಇವರ ಇನ್ನೊಂದು ಶ್ರೇಷ್ಠ ರಚನೆ ‘ರಾರಾಯನಿ ಪಿಲಚಿತೇ’. ಸ್ವರಾಕ್ಷರಗಳಿಂದ ಪ್ರಾರಂಭವಾಗುವ ‘ಮಮ ಹೃದಯೇ’ ಒಂದು ರಮ್ಯಕೃತಿ. ರಿಷಭಪ್ರಿಯ ರಾಗದ ‘ಮಹಾತ್ಮುಲೇ’ ಎಂಬ ಇವರ ಕೃತಿಯು ಬಹಳ ಜನಪ್ರಿಯವಾಗಿದೆ.

ತ್ಯಾಗರಾಜರನ್ನು ಕುರಿತು ‘ಶ್ರೀಮದಾದಿ ತ್ಯಾಗರಾಜ ಗುರುವಂ’, ಪುರಂದರದಾಸರನ್ನು ಕುರಿತು ‘ಶ್ರೀ ಪುರಂದರ ಗುರುವಂ’, ಗಣೇಶ, ಸರಸ್ವತಿ, ಲಕ್ಷ್ಮಿ, ವಿಷ್ಣು, ಈಶ್ವರ, ಚಾಮುಂಡೇಶ್ವರಿ, ಮಾರುತಿ, ಗುರು ಹೀಗೆ ಎಲ್ಲರನ್ನೂ ಕುರಿತು ಕೃತಿ ರಚನೆ ಮಾಡಿದ್ದಾರೆ.

ತ್ಯಾಗರಾಜರನ್ನು ಕುರಿತು ರಚಿಸಿದ ಒಂದು ಸಂಸ್ಕೃತ ಶ್ಲೋಕ ಹೀಗಿದೆ.

ರಾಮಬ್ರಹ್ಮಾಖ್ಯ ವಿಪ್ರೇಂದ್ರ ಸುಪುತ್ರಂ ಲೋಕ ವಿಶ್ರುತಂ

ರಾಮಸಂಕೀರ್ತನ ಧ್ಯಾನ ಪೂಜನಾಸಕ್ತ ಮಾನಸಂ

ಕಾಮಕ್ರೋಧಾದಿ ರಹಿತಂ ರಾಮಭಕ್ತಿ ಶಿರೋಮಣಿಂ

ತ್ಯಾಗರಾಜ ಗುರುಂ ವಂದೇ ಸಂಗೀತಾಬ್ದೀಕಲಾನಿಧಿಂ

ಇವರ ಒಂದೆರಡು ರಚನೆಗಳು ಪಾಶ್ಚಾತ್ಯ ದಾಟಿಯಂತಿವೆ. ಉದಾಹರಣೆಗೆ ಸರಸ್ವತಿ ಮನೋಹರಿ ರಾಗದಲ್ಲಿರುವ ಕರುಣಿಸೌತಾಯೇ, ಶಂಕರಾಭರಣ ರಾಗದ ನನ್ನು ಬ್ರೋಚುಟಿಕೆವರುನ್ನಾರು. ಅವರು ತಮ್ಮ ರಚನೆಗಳಿಗೆ ಬಳಸಿರುವ ಅಂಕಿತ ‘ವಾಸುದೇವ’.

ಇವರ ಮೊದಲ ಕಚೇರಿ ವೀಣೆ ಶೇಷಣ್ಣನವರ ಆಶೀರ್ವಾದದೊಡನೆ ೧೮೬೯ರಲ್ಲಿ ನಡೆಯಿತು. ದೇಶಾದ್ಯಂತ ಕಚೇರಿಗಳನ್ನು ನಡೆಸಿ ಮೈಸೂರಿನ ಗೌರವ, ಘನತೆ ಹಾಗೂ ಕೀರ್ತಿಪತಾಕೆಯನ್ನು ಎತ್ತಿಹಿಡಿದರು. ೧೯೧೨ರಲ್ಲಿ ಜಲಂಧರ್‌ನಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ ಪ್ರಥಮ ಬಹುಮಾನ ಪಡೆದರು. ಅವರಿಗೆ ಸಂದ ಬಿರುದು ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ. ೧೯೩೧ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸಂಗೀತಶಾಸ್ತ್ರರತ್ನ, ೧೯೩೫ರಲ್ಲಿ ಮದರಾಸಿನ ಮ್ಯೂಸಿಕ್ ಅಕಾಡೆಮಿಯಿಂದ ಸಂಗೀತ ಕಲಾನಿಧಿ, ೧೯೪೪ರಲ್ಲಿ ಜಯಚಾಮರಾಜ ಒಡೆಯರಿಂದ ಸಂಗೀತಶಾಸ್ತ್ರ ವಿಶಾರದ ಇತ್ಯಾದಿ ಬಿರುದುಗಳನ್ನು ಪಡೆದಿರುವರು. ೧೯೫೪ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಕರ್ನಾಟಕ ಸಂಗೀತಕ್ಕೆ ರಾಷ್ಟ್ರಪ್ರಶಸ್ತಿ, ೧೯೫೯ರಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ ಇವರಿಗೆ ಲಭಿಸಿತು.

ಆಚಾರ್ಯರು ಇಷ್ಟಾದರೂ ಸರಳರು, ಸೌಜನ್ಯಶೀಲರು ಅಲ್ಲದೆ ನಮ್ರತೆ ವಿನಯಗಳಿಗೆ ಹೆಸರುವಾಸಿ.

ಕರ್ನಾಟಕ ಸಂಗೀತಕ್ಕೆ ಇವರು ನೀಡಿರುವ ಗ್ರಂಥರತ್ನಗಳು: ವಾಸುದೇವ ಕೀರ್ತನ ಮಂಜರಿ ಭಾಗ ೧(೧೯೨೯), ಶ್ರೀವಾಸುದೇವ ಕೀರ್ತನ ಮಂಜರಿ ಭಾಗ ೨(೧೯೨೯), ಶ್ರೀವಾಸುದೇವ ಕೀರ್ತನ ಮಂಜರಿ ಭಾಗ(೧೯೫೬), ಮೈಸೂರು ಸದಾಶಿವರಾಯರ ಕೃತಿಗಳು (೧೯೪೭), (ಮದರಾಸು ಮ್ಯೂಸಿಕ್ ಅಕಾಡೆಮಿ ಪ್ರಕಟಣೆ ೧೬ ಕೃತಿಗಳು ಮತ್ತು ಒಂದು ಸ್ವರಜತಿಯನ್ನು ಒಳಗೊಂಡಿದೆ), ನಾ ಕಂಡ ಕಲಾವಿದರು (೧೬೫೫), ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್ (೧೯೫೫), ನವರತ್ನ ರಾಗಮಾಲಿಕಾ(೧೯೫೬), (ಮದರಾಸಿನ ಕಲಾಕ್ಷೇತ್ರದ ಪ್ರಕಟಣೆ), ವಾಲ್ಮೀಕಿ ರಾಮಾಯಣ (ಮದರಾಸಿನ ಕಲಾಕ್ಷೇತ್ರದ ಪ್ರಕಟಣೆ), ಕರ್ನಾಟಕ ಸಂಗೀತದ ಲಕ್ಷ್ಮಣ ಭಾಗ, ವಾಸುದೇವ ಕೀರ್ತನ ಮಂಜರಿ (ಸ್ವದೇಶ ಮಿತ್ರನ್ ಪ್ರಕಟಣೆ-ತಮಿಳಿನಲ್ಲಿ), ನೆನಪುಗಳು(೧೯೬೨)

ಆಚಾರ್ಯರು ತಮ್ಮ ಜೀವನದ ಕೊನೆಯ ಹತ್ತು ವರ್ಷಗಳಲ್ಲಿ ಮದರಾಸಿನ ಅಡಯಾರಿನಲ್ಲಿರುವ ಕಲಾಕ್ಷೇತ್ರದಲ್ಲಿ ಶ್ರೀಮತಿ ರುಕ್ಮಿಣಿದೇವಿ ಅರುಂಡೇಲರ ಆಮಂತ್ರಣವನ್ನು ಅಂಗೀಕರಿಸಿ ಸಂಸ್ಥೆಯ ಉಪಾಧ್ಯಕ್ಷರಾಗಿದ್ದರು. ಆಗ ಶ್ರೀಮದ್ವಾಲ್ಮೀಕಿ ರಾಮಾಯಣವನ್ನು ಉಪಯೋಗಿಸಿಕೊಂಡು ಸೀತಾ ಸ್ವಯಂವರ, ಶ್ರೀರಾಮ ವನಗಮನ, ಪಾದುಕಾ ಪಟ್ಟಾಭಿಷೇಕ ಮುಂತಾದ ನೃತ್ಯ ನಾಟಕಗಳ ಒಂದೊಂದು ಸನ್ನಿವೇಶದ ಸಂದರ್ಭಗಳನ್ನರಿತು ಸಮಯೋಚಿತವಾಗಿ ರಾಗ ಸಂಯೋಜನೆಗಳನ್ನು ಮಾಡಿದರು. ರುಕ್ಮಿಣಿದೇವಿಯವರ ನೇತೃತ್ವದಲ್ಲಿ ನೃತ್ಯ ನಾಟಕಗಳು ರಂಗದ ಮೇಲೆ ಪ್ರದರ್ಶಿಸಲ್ಪಟ್ಟಾಗ ಸಂಗೀತವನ್ನು ಕೇಳಿದ ಪ್ರತಿಯೊಬ್ಬರೂ ಬೆರಗಾಗಿದ್ದನ್ನು ಮರೆಯುವಂತಿಲ್ಲ. ಇವರ ಜೀವನದಲ್ಲಿ ಇದೊಂದು ಮಹತ್ಸಾಧನೆ ಎಂದೇ ಹೇಳಬಹುದು.

ಗುರುಗಳಾದ್ ಪಟ್ಟಣಮ ಸುಬ್ರಹ್ಮಣ್ಯ ಅಯ್ಯರ್‌ರವರು ತಮ್ಮ ಶಿಷ್ಯ ಆಚಾರ್ಯರಿಗೆ ಹೀಘೆ ಸಂಗೀತ ಸಾಧನೆ ಮಾಡಿಸುತ್ತಿದ್ದರಂತೆ.

ವರ್ಣದ ಪ್ರತಿ ಆವರ್ತವನ್ನು ತ್ರಿಕಾಲಗಳಲ್ಲಿ ಸ್ವರಸಾಹಿತ್ಯ ಸಮೇತ ಸಾಧಕ ಮಾಡಿಸುವುದು, ಹೀಗೆ ವರ್ಣವನ್ನು ಒಂದೇ ಸಮನೆ ಮೂರು ತಿಂಗಳು ಸಾಧಕ ಮಾಡಿಸುತ್ತಿದ್ದುದರಿಂದ ತಾಳಗತಿ ಪ್ರಮಾಣ ನಿಲ್ಲುವುದರ ಜೊತೆಗೆ ರಾಗ ಭಾವಗಳು ಒಂದೊಂದು ಸಲವೂ ಹೊರಹೊಮ್ಮಿ ರಾಗದ ಪೂರ್ಣ ಪರಿಚಯ ಉಂಟಾಗಲು ಅವಕಾಶವಾಗುತ್ತಿತ್ತು.

ಗಾಯಕನ ಬಗೆಗೆ ಆಚಾರ್ಯರ ಕೆಲವು ಸಲಹೆಗಳು:

೧. ರಾಗ ವಿನ್ಯಾಸ ಮಾಡುವಾಗ ಪ್ರತಿಯೊಂದು ಸ್ವರಸ್ಥಾನಗಳಲ್ಲೂ ಸ್ವಲ್ಪ ಹೊತ್ತು ನಿಂತು ಅಭ್ಯಾಸ ಮಾಡಬೇಕು. ಅಂದರೆ ಏಕಸ್ವರ ವೃದ್ಧಿ ಕ್ರಮವನ್ನು ಅನುಸರಿಸಬೇಕು. ಇದರಿಂದ ರಾಗಭಾವಕ್ಕೆ ಹೆಚ್ಚು ಪ್ರಾಶಸ್ತ್ಯ ಬರುತ್ತದೆ.

೨. ಒಬ್ಬ ಗಾಯಕ ಇನ್ನೊಬ್ಬ ಗಾಯಕನನ್ನು ಅನುಕರಿಸಿ ಹಾಡುವುದು ಸಾಮಾನ್ಯವಾಗಿ ಸಾಧ್ಯವಾಗುವುದಿಲ್ಲ. ಅವರವರ ಶಾರೀರ ಧರ್ಮಕ್ಕೆ ಅನುಕೂಲವಾಗುವಂತೆ ಸಂಗತಿ ನುಡಿಕಾರಗಳು ಬರುತ್ತವೆ. ಯಾವುದೇ ತರಹ ಸಾಧನೆ ಮಾಡಿದರೂ ಸಾಧ್ಯವಾಗದ್ದು ಬರುವುದಿಲ್ಲ. ಆದ್ದರಿಂದ ಇದನ್ನು ಅರ್ಥಮಾಡಿಕೊಳ್ಳದೆ ಆಗದೇ ಇರುವುದನ್ನು ಆಗುವಂತೆ ಮಾಡುವುದು ಶುದ್ಧ ಮೌಢ್ಯ. ಪ್ರತಿಯೊಬ್ಬನಲ್ಲೂ ಒಂದು ರೀತಿಯ ವೈಶಿಷ್ಟ್ಯವಿರುತ್ತದೆ. ಆ ಪ್ರತಿಭೆಯನ್ನು ತೋರಿಸಲು ಪ್ರಯತ್ನಿಸಬೇಕೇ ಹೊರತು ಇನ್ನೊಬ್ಬರನ್ನು ಅನುಕರಣೆ ಮಾಡಲು ಹೋಗಿ ತನ್ನ ತನವನ್ನು ಕಳೆದುಕೊಳ್ಳುವುದು ಬಹಳ ತಪ್ಪು. ಪ್ರತಿಯೊಬ್ಬ ಕಲಾವಿದನೂ ಮನೋಧರ್ಮ ಸಂಗೀತವನ್ನು ವೃದ್ಧಿಸಿಕೊಳ್ಳಬೇಕು. ಇದನ್ನು ತೋರಿಸಲು ತಕ್ಕ ಶಾರೀರವನ್ನು ಹತೋಟಿಯಲ್ಲಿಟ್ಟು ಕೊಳ್ಳಬೇಕು. ಕ್ರಮಬದ್ಧ ಸಾಧನೆಯಿಂದ ಇದು ಸಾಧ್ಯವಾಗುವುದು.

“ದೇವರೇ, ನನಗೆ ಅನಾಯಾಸ ಮರಣ ಕೊಡು” ಎಂಬ ಅವರ ಇಚ್ಛೆಗೆ ತಕ್ಕಂತ ಆಚಾರ್ಯರು ೧೯೬೧ ಮೇ ೧೭ರಂದು ಸಂಜೆ ಅನಾಯಾಸವಾಗಿಯೇ ದೈವಾಧೀನರಾದರು.

ವಾಸುದೇವಾಚಾರ್ಯರು ಸಮಗ್ರ ಕೃತಿಗಳನ್ನು ಅನೇಕ ಸಂಗೀತ ವಿದ್ವಾಂಸರಿಂದ ಹಾಡಿಸಿ ಶಾರದಾ ಕಲಾ ಕೇಂದ್ರದ ವಿದ್ವಾನ್ ಆರ್.ಕೆ. ಪದ್ಮನಾಭರವರು ಧ್ವನಿಸುರುಳಿಗಳನ್ನು ಹೊರತಂದಿರುವುದೇ ಅಲ್ಲದೆ ಅವರ ಸ್ಮರಣಾರ್ಥ ಬೆಂಗಳೂರು ನಗರದ ಹೊರವಲಯದಲ್ಲಿರುವ ಅಕ್ಷಯನಗರ ಬಡಾವಣೆಯಲ್ಲಿ ಅವರ ಹೆಸರಿನಲ್ಲಿ ಸ್ಮಾರಕಭವನವನ್ನು ನಿರ್ಮಿಸಿರುವುದು ಆ ಮಹಾನ್ ಚೇತನಕ್ಕೆ ನೀಡಿದ ಒಂದು ಗೌರವ.