ನಾನು, ನಿನ್ನ ದೇವಸ್ಥಾನಕ್ಕೆ ಬಿಟ್ಟ ಬಸವ ;
ಕರುವಾಗಿ ಎಳಗರುಕೆ ಮೇದು, ಹೆಗ್ಗೂಳಿಯಾಗಿ
ಗುಟುರು ಹಾಕಲು ಕಲಿತದ್ದು ಇಲ್ಲಿ
ಸುತ್ತ ಹತ್ತೂಕಡೆಗೆ ಹರಿದಾಡಿ ಹಸಿರು
ಮೇದಿದ್ದೇನೆ. ನಿಂತನೆಲೆಗಳನೆಲ್ಲ ಗೊರಸಿನಿಂದೊರಸಿ
ಗಟ್ಟಿನೆಲ ಹುಡುಕಿದ್ದೇನೆ.
ಪ್ರಶ್ನೆಯಾಗೆದ್ದ ಕೊಂಬುಗಳಿಂದ ತಿವಿದಿದ್ದೇನೆ
ಸಂಶಯದ ಹುತ್ತಗಳ. ನಿನ್ನ
ಹಬ್ಬಕ್ಕೆ ನಿನ್ನ ತೇರಿನ ಮುಂದೆ ಹೊತ್ತು
ಸಾಗಿದ್ದೇನೆ ನಿನ್ನ ನಂದೀ ಧ್ವಜವ.

ನಾನು ನಿನ್ನ ಈ ಕಮ್ಮಟದಲ್ಲಿ ಪುಟಗೊಂಡು
ಹೊರಬಿದ್ದ ವರಹ. ಹೊತ್ತು
ಉರುಳಿದ್ದೇನೆ ನಿನ್ನ ಮುದ್ರೆಯ ವರವ.
ಇಲ್ಲಿ ಸಂದದ್ದು ಎಲ್ಲಿಯೂ ಸಲ್ಲುವುದೆಂಬ
ನಂಬಿಗೆಯಿಂದ ಪಡೆದಿದ್ದೇನೆ ಬೆಲೆಯ
ನೀನು ಕನ್ನಡದ ಜನಮನದ ನಿಧಿಯ ನಿಲಯ.

ನಾನು ನಿನ್ನ ಫ್ಯಾಕ್ಟರಿಯಿಂದ ತಯಾರಾಗಿ
ಹೊರಬಿದ್ದ ಅಲಾರಾಂ ಟೈಂಪೀಸು.
ನೀನಿಟ್ಟ ಸ್ಪ್ರಿಂಗಿನ ಬಲದೊಳಿದುವರೆಗು
ನಡೆದಿದ್ದೇನೆ ಸರಿಯಾಗಿ. ಎಚ್ಚರಿಸಿದ್ದೇನೆ
ಮಲಗಿದ್ದವರ. ಜತೆಗೆ ನಾನೂ ಎಚ್ಚರ-
ದೊಳಿದ್ದೇನೆ. ನಿನ್ನ ಎಚ್ಚರದೊಳಗೆ
ಎದ್ದು ಬಂದವರೊಳಗೆ ನಾನೂ ಒಬ್ಬ;
ನನಗೆ ಹೆಮ್ಮೆ, ಈ ದಿನ ನಿನಗೆ ಹಬ್ಬ.

ಪ್ರಾಣವೋ, ಮಂತ್ರವೋ, ಯಂತ್ರವೋ, ತಂತ್ರವೋ-
ಎಲ್ಲವೂ ನೀನೆ. ನನ್ನ ಕೀರ್ತಿಗೆ ಸ್ಫೂರ್ತಿ ನೀನೆ ;
ನನ್ನ ಸ್ಫೂರ್ತಿಗೆ ಮೂರ್ತಿ ನೀನೇ. ನಿನ್ನ ಮಂದಿರದ
ಕಲಶಗಳ ಮೇಲೆ ಈಗ ಚಿನ್ನದ ಬೆಳಕು.
ಕೆಳಗೆ ಬಿದ್ದಿದೆ ಬದುಕು ನಿನ್ನ ಬೆಳಕಿನ
ಮೊಲೆ ಹಾಲಿನೊಂದು ಬಿಂದುವಿಗಾಗಿ ತೊದಲುತ್ತ,
ನೀನಿರುವೆ ಸದಾ ಹಾಲೂಡುತ್ತ
ನಸು ನಗುತ್ತ.