ವೀಣೆಯೊಡನೆ ಅವಿನಾ ಬಂಧ ಹೊಂದಿದ್ದ ಶೇಷಣ್ಣನವರ ಮರಿಮಗ ಸ್ವರಮೂರ್ತಿಯೆಂಬ ಮುಂಪ್ರತ್ಯಯದೊಡನೆ ಬೆರೆತ ಹೆಸರುಳ್ಳವರಾಗಿದ್ದ ವಿ.ಎನ್‌.ರಾವ್‌ ಅವರ ಪುತ್ರ ಸುಬ್ರಹ್ಮಣ್ಯರವರು ಜನಿಸಿದ್ದು ೨೬-೧-೧೯೪೮ ರಂದು. ಬಾಲ್ಯದಿಂದಲೇ ವೀಣೆ ಮತ್ತು ಗಾಯನಗಳೆರಡರಲ್ಲೂ ಶಿಕ್ಷಣ ಪಡೆದು ಸಂಗೀತ-ಸಾಹಿತ್ಯಗಳ ಸಮರಸ ಕಂಡುಕೊಂಡಿರುವ ಕನ್ನಡದಲ್ಲಿ ಸ್ನಾನಾತಕೋತ್ತರ ಪದವಿ ಪಡೆದಿರುವ ವೀಣಾ ಗಾನ ಮಂದಿರದ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ಹಲವು ಸಂಘ-ಸಂಸ್ಥೆಗಳು ಉಸಿರಾಗಿರುವ ನೇರ ನುಡಿಯ ದಿಟ್ಟರು.

ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ದಿನಪತ್ರಿಕೆಗಳ ಕಲಾ ವಿಮರ್ಶಕರಾಗಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಸುಧಾ, ತರಂಗ, ಟೈಮ್ಸ್ ಆಫ್‌ ಇಂಡಿಯಾ, ಈವನಿಂಗ್‌ ಹೆರಾಲ್ಡ್‌, ಮಾರ್ಚ್ ಆಫ್‌ ಕರ್ನಾಟಕ, ವನಿತಾ ಮುಂತಾದ ದೈನಿಕ, ಮಾಸಿಕ, ನಿಯತಕಾಲಿಕ ಪತ್ರಿಕೆಗಳ ಅಂಕಣಕಾರರಾಗಿ ‘ಗಾನ ಕಲಾಸಿರಿ’ಯ ಸಂಪಾದಕರಾಗಿ ಇವರು ಸಲ್ಲಿಸಿರುವ ಸೇವೆ ಅಪಾರ.

ಇವರ ನಿರ್ದೇಶನದಲ್ಲಿ ರೂಪತಾಳಿದ ಸಂಗೀತ ಕಾರ್ಯಕ್ರಮಗಳು ಆಕಾಶವಾಣಿ – ದೂರದರ್ಶನ ಹಾಗೂ ನಾಡಿನ ಹಲವಾರು ಪ್ರತಿಷ್ಠಿತ ವೇದಿಕೆಗಳಿಂದ ಜನರನ್ನು ತಲುಪಿವೆ. ಸಭೆ ಸಮ್ಮೇಳನಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕರಾಗಿ ಉಪನ್ಯಾಸ-ಪ್ರಾತ್ಯಕ್ಷಿಕೆಗಳನ್ನು ನೀಡಿರುತ್ತಾರೆ. ನಮ್ಮ ಹಿಂದಿನ ತಲೆಮಾರುಗಳ ವಿದ್ವಾಂಸರ, ಕಲಾವಿದರ ಭಾವಚಿತ್ರಗಳನ್ನು ಸಂಗ್ರಹಿಸಿ’ ಎಂ.ವಿ.ಎಸ್‌. ಆರ್ಚೀವ್ಸ್’ ಎಂಬ ಶೀರ್ಷಿಕೆಯಡಿ ಸಂಪಾದಿಸಿದ್ದಾರೆ. ಕರ್ನಾಟಕ ಗಾನಕಲಾ ಪರಿಷತ್ತಿನ ಯುವ ಜನ ವಿಭಾಗದದ ಮೊದಲ ಸಂಚಾಲಕರಾಗಿ, ನಂತರ ಪ್ರಧಾನ ಕಾರ್ಯದರ್ಶಿಯಾಗಿ ಇವರು ಸಲ್ಲಿಸಿರುವ ಸೇವೆ ಅನನ್ಯವಾದುದು. ಅಂಧ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ನಿರ್ಮಿಸಿದ ರೂವಾರಿ; ರಾಜ್ಯ ಸಂಗೀತ ನೃತ್ಯ ಅಕಾಡೆಮಿ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ ಆಕಾಶವಾಣಿ ಆಡಿಷನ್‌ ಮಂಡಲಿ, ಕನಕಪುರಂದರ ಪ್ರಶಸ್ತಿ – ಟಿ. ಚೌಡಯ್ಯ ರಾಷ್ಟ್ರ ಪ್ರಶಸ್ತಿಗಳ ಆಯ್ಕೆ ಸಮಿತಿಗಳ ಸದಸ್ಯ – ಇತ್ಯಾದಿ ಕಾರ್ಯಭಾರಗಳನ್ನು ವಹಿಸಿರುವ ಶ್ರೀಯುತರಿಗೆ ಅನೇಕ ಸಂಘ – ಸಂಸ್ಥೆಗಳ ಸನ್ಮಾನಗಳೊಡನೆ ‘ಸಂಗೀತ ಕಲಾ ಭೂಷಣ’, ‘ಸಾಹಿತ್ಯ ಕಲಾ ವಿಮರ್ಶಕ ಶಿರೋಮಣಿ’, ‘ಸಾಹಿತ್ಯ ಕಲಾಶ್ರೀ’, ಪ್ರಶಸ್ತಿಗಳೂ ಲಭಿಸಿವೆ. ಚೆನ್ನೈನ ಸುಸ್ವರ ಸಂಸ್ಥೆಯಿಂದ ‘ಗಾನ ಸರಸ್ವತಿ’ ಪುರಸ್ಕಾರ ಪಡೆದ ಕರ್ನಾಟಕದ ಎರಡನೇ ವ್ಯಕ್ತಿಯಾಗಿರುವ ಶ್ರೀಯುತರು ಸ್ವರಮೂರ್ತಿ ವಿ.ಎನ್‌.ರಾವ್‌, ಮೆಮೊರಿಯಲ್‌ ಟ್ರಸ್ಟ್‌ ಹಾಗೂ ಮೈಸೂರು ಅರಮನೆ ಟ್ರಸ್ಟ್‌ಗಳಿಗೆ ವ್ಯವಸ್ಥಾಪಕ ವಿಶ್ವಸ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಪಾದರಾಜರ ಮಠ, ತ್ಯಾಗರಾಜ ಗಾನಸಭಾ, ತ್ಯಾಗರಾಜ ಸಂಗೀತ ಸಭಾ, ಜೆ.ಎಸ್‌.ಎಸ್‌. ಸಂಗೀತ ಸಭಾ, ಆರ್.ಟಿ. ನಗರ ಸಂಗೀತ ಸಭಾ, ರಾಜಾಮಹಲ್‌ ವಿಲಾಸ್‌ ಬಡಾವಣೆಯ ಸಂಗೀತ ಸಭಾ ಮುಂತಾದ ಹಲವಾರು ಸಂಸ್ಥೆಗಳಿಂದ ಪುರಸ್ಕೃತರಾಗಿರುವ ಸುಬ್ರಹ್ಮಣ್ಯರವರು ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರವು ಹೊರತರಲಿರುವ ‘ಕಲಾವಿದರ ಕೈಪಿಡಿ’ಯ ಸಂಪಾದಕರಾಗಿದ್ದಾರೆ. ಗಾಯನ ಸಮಾಜದ ಮೂವತ್ತೆಂಟನೆ ವಾರ್ಷಿಕ ಸಮ್ಮೇಳನಾಧ್ಯಕ್ಷರಾಗಿ ‘ಸಂಗೀತ ಕಲಾರತ್ನ’ ಪ್ರಶಸ್ತಿಯನ್ನು ಪಡೆದಿದ್ದಾರೆ.