ಭಾರತೀಯ ಕಲೆಗಳಲ್ಲಿ ನೃತ್ಯಕ್ಕೆ ಮಹತ್ತರವಾದ ಹಾಗೂ ವಿಶಿಷ್ಠ ಸ್ಥಾನವಿದೆ. ದೈವಿಕ ಭಾವನೆಯನ್ನೊಳಗೊಂಡ ಈ ವರ್ಣರಂಜಿತ ಕಲೆಯನ್ನು ಪೂರ್ವಜರು ಅತ್ಯಂತ ಶ್ರದ್ಧೆ, ಸಾಧನೆಗಳಿಂದ ಉಳಿಸಿಬೆಳೆಸಿದ್ದಾರೆ. ಇವರುಗಳು ಅಮೂಲ್ಯ ಕೊಡುಗೆಯಾಗಿ ಇಂದಿಗೂ ವೈಭವದಿಂದ ತನ್ನ ಪ್ರಜ್ವಲತೆಯ ಜ್ಯೋತಿಯ ರೂಪದಲ್ಲಿ ಕಂಗೊಳಿಸುತ್ತಿರುವ ಈ ಸುಂದರ ಕಲೆಯೇ ನಾಟ್ಯಕಲೆ.

ರಾಜಮಹಾರಾಜರುಗಳ ಕಾಲದಿಂದಲೂ ವೈಭವೋಪೇತ ಹೆಮ್ಮರವಾಗಿ ಬೆಳೆದು ಬಂದಿರುವ ಈ ಕಲೆಯು ಅಳಿಯದೇ ಉಳಿಯಲು ರಾಜ ಮಹಾರಾಜರುಗಳ ಪ್ರಭಾವಶೀಲ ಕಲಾ ಪ್ರೋತ್ಸಾಹವೇ ಇದಕ್ಕೆ ಕಾರಣವೆನ್ನಬಹುದು. ಕೇವಲ ನೃತ್ಯಕ್ಕೆ ಅಲ್ಲದೆ ಶಿಲ್ಪಕಲೆ, ಸಂಗೀತ ಇವೇ ಮುಂತಾದ ಕಲಾಭಾಗಗಳಿಗೂ ರಾಜಮಹಾರಾಜರುಗಳ ಘನ ಪ್ರೋತ್ಸಾಹ ದೊರಕಿದೆ.

ಉದಾ: ವಿಜಯನಗರ ಸಾಮ್ರಾಜ್ಯ, ರಾಜರಾಜ ಜೋಳರು, ಪಲ್ಲವ ಅರಸು, ಮೈಸೂರು ಮನೆತನದ ಅರಸರು ತಾವೇ ಸ್ವತಃ ಕವಿಗಳೂ, ಸಂಗೀತ ಸಾಹಿತ್ಯ ಇವೇ ಮೊದಲಾದ ಕಲೆಗಳನ್ನು ಅರಿತವರಾಗಿದ್ದರಿಂದ ಕಲೆಯ ಬೆಲೆಯನ್ನು ಅರಿತು ಮಹತ್ತರದಿಂದ ಪ್ರೋತ್ಸಾಹವನ್ನಿತ್ತು ಕಲೆಯ ಉಳಿವಿಗೆ ಕಾರಣ ಕರ್ತೃಗಳಾದರು.ಇವರ ಉನ್ನತ ಕೊಡುಗೆಯನ್ನು ಸಕಲ ಕಲಾವಿದರೂ ಸ್ಮರಿಸಲೇ ಬೇಕು.

ಮೈಸೂರು ಶೈಲಿ

ಇದು ಏನು? ಶೈಲಿ ಎಂದರೇನು? ಇದಕ್ಕೆ ಸಂಬಂಧ ಪಟ್ಟಂತೆ ಅನೇಕ ಸಂಘ ಸಭೆಗಳಲ್ಲಿ ವಾದವಿವಾದ ಚರ್ಚೆ – ಉತ್ತರ ಎಲ್ಲವೂ ನಡೆದಿರುವುದು ಸರಿಯಷ್ಟೆ. ಮೈಸೂರು ಶೈಲಿಯ ಕರ್ತೃ ದಿಗ್ಗಜೆ, ಮಹಾನ್ ಕಲಾವಿದೆ ಎನಿಸಿದ್ದ ನಾಟ್ಯ ಸರಸ್ವತಿ ಜೆಟ್ಟಿತಾಯಮ್ಮನವರು ಈ ಶೈಲಿಯ ಬಗೆಗೆ ಉತ್ತರಿಸುತ್ತಿದ್ದುದು ಸೌಮ್ಯತೆಯ ವಾಕ್ಯಗಳಿಂದ ಕೂಡಿರುತ್ತಿತ್ತು. ಶೈಲಿಗಾಗಿ ಜಗಳವಲ್ಲ. ಇದು ಆಯಾಯ ಗುರುಗಳಿಂದ ಬಂದ ಕೊಡುಗೆ ಹಾಗೂ ಆಯಾಯ ಗುರುಗಳು ವಂಶಪಾರಂಪರ‍್ಯ ಕೊಡುಗೆ. ಇದರಲ್ಲಿ ಬೇರೆ ಮಾತೇ ಇಲ್ಲ. ಆದರೆ ಶೈಲಿಗಳು ಬೇರೆ ಬೇರೆಯಾಗಿರಬಹುದು. ಅಂದರೆ ಪಾಠಕ್ರಮ, ಬೇರೆ ಬೇರೆ ಭಿನ್ನ ಭಿನ್ನ ರೀತಿಯಲ್ಲಿ ನೃತ್ಯ ಅಭಿನಯಗಳಲ್ಲಿ ಭಿನ್ನತೆ ಕಂಡು ಬರುತ್ತವೇ ಹೊರತು ಎಲ್ಲಾ ಶೈಲಿಗಳೂ ಅದರದರ ಸ್ಥಾನವನ್ನು ಮಹತ್ವವನ್ನು ಅಳಿಯದೇ ಉಳಿಸಿಕೊಂಡೇ ಬರುತ್ತಿದೆ. ಎಲ್ಲಾ ಶೈಲಿಗಳೂ ಸುಂದರವಾದವುಗಳೇ. ಅಂದವಾಗೇ ಇರುವುದು ಎಂದು ತಿಳಿಯಪಡಿಸಿರುವ ಈ ಮಹಾನ್ ಕಲಾವಿದೆ ಸಂಗೀತ ಕಲಾರತ್ನ, ಶಾಂತಲ, ನಾಡೋಜ ಪ್ರಶಸ್ತಿ ವಿಜೇತೆ ಪದ್ಮಭೂಷಣ ಡಾ|| ಕಡೂರು ವೆಂಕಟಲಕ್ಷ್ಮಮ್ಮನವರ ಆಪ್ತ ಗುರುಗಳೂ, ಮಾರ್ಗದರ್ಶಕರೂ, ಮೈಸೂರು ಶೈಲಿಯ ನೃತ್ಯ ಗುರುವೂ ಆಗಿದ್ದರು. ಶೈಲಿಗಳು ಅಳಿಯದೇ ಉಳಿಯಲು ಅನೇಕಾನೇಕ ಪ್ರಸಿದ್ದ ನೃತ್ಯಪಟುಗಳೂ ನಟುವಾನರೂ ಪ್ರಸಿದ್ದ ಗುರುಪರಂಪರೆಯೂ ಇದಕ್ಕೆ ಉದಾಹರಣೆಯಾಗಿದೆ.

ಇದೇ ರೀತಿ ಮೈಸೂರ ಶೈಲಿಯೂ ಒಂದು. ಮೇಲೆ ಹೆಸರಿರುವ ಇಬ್ಬರು ಮಹಾನ್ ಕಲಾವಿದೆಯರು ಮೈಸೂರು ಶೈಲಿಯ ದಿಗ್ಗಜರು ಹಾಗೂ ಕಲಾನಿಪುಣೆಯರು ಮೈಸೂರು ಶೈಲಿ ಭರತನಾಟ್ಯದಲ್ಲಿ ಅಭಿನಯ ಭಾಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದ್ದು, ನೃತ್ಯ ಭಾಗವೂ ಅತ್ಯಂತ ಸೌಮ್ಯ ರೂಪದಲ್ಲಿ ನರ್ತಿಸಲಾಗುತ್ತದೆ. ಅಭಿನಯಕ್ಕೆ ನೀಡುವ ಸ್ಥಾನವನ್ನು ನೃತ್ಯಕ್ಕೂ ನೀಡಿ, ಒರಟಾದ ನೃತ್ಯವಲ್ಲದೆ, ಸೌಮ್ಯತೆಯಿಂದ ಲಕ್ಷಣಯುಕ್ತವಾಗಿ ನಾಟ್ಯಧರ್ಮಿ ರೂಪವನ್ನು ಕೈಬಿಡದೇ ಶುದ್ಧ ನೃತ್ಯವನ್ನು ಕಲಿಯಬೇಕು ಎಂಬುದೇ ಈ ಶೈಲಿಯ ಒಂದು ವಿಶೇಷ.

ಇನ್ನೊಂದು ಪ್ರಮುಖವಾದ ಮಾತನ್ನು ಇಲ್ಲಿ ಗಮನಿಸಬೇಕು. ನಾಟ್ಯ ಸರಸ್ವತಿ ಜೆಟ್ಟಿತಾಯಮ್ಮನವರ ಪಾಠ ಕ್ರಮದಲ್ಲಿ ಸಂಗೀತ ಸಾಹಿತ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಿದ್ದರು. ಹಾಗೂ ಇವುಗಳು ಪಾಠ ಕ್ರಮದಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿತ್ತು. ಸಂಗೀತವಿಲ್ಲದ ನೃತ್ಯವಿಲ್ಲ. ತಾಳಜ್ಞಾನವಿಲ್ಲದ ನೃತ್ಯವಿಲ್ಲ. ಈ ಎರಡೂ ಭಾಗಗಳು ಮಾತಾ ಪಿತೃಗಳಿಗೆ ಸಮಾನ. ಈ ಎರಡೂ ಜ್ಞಾನವಿಲ್ಲದವರು ಪಶುವಿಗೆ ಸಮಾನ. ಅಂದರೆ ಸಂಗೀತವನ್ನು ಖಡ್ಡಾಯವಾಗಿ ಅಭ್ಯಾಸ ಮಾಡಲೇಬೇಕಿತ್ತು. ಎಲ್ಲಾ ಅಡವುಗಳನ್ನು (ತಾಳಮಾಲಿಕೆ) ಖಚಿತವಾಗಿ ತಾಳದೊಡನೆ ಸ್ಫುಠವಾಗಿ ಬಾಯಲ್ಲಿ ಹೇಳಲೇ ಬೇಕಿತ್ತು. ನೃತ್ಯ ಹಾಗೂ ನೃತ್ಯ ಬಂಧುಗಳನ್ನು ಶ್ರುತಿಯೊಂದಿಗೆ ತಾಳಲಯಬದ್ಧವಾಗಿ ಮೊದಲು ಹಾಡುವುದನ್ನು ಕಲಿಯಬೇಕಿತ್ತು. ನೃತ್ಯ ಭಾಗದಲ್ಲಿ ತಗ್ಗಿ ಎರಡು ಮಂಡಿಗಳನ್ನು ಬಗ್ಗಿಸಿ ಹಸ್ತಗಳನ್ನು ಆಯಾಯ ಕ್ಷೇತ್ರಗಳಲ್ಲಿ ನಿಲ್ಲಿಸಿ ನೃತ್ಯವನ್ನು ಅಭ್ಯಾಸ ಮಾಡಬೇಕಾಗಿತ್ತು. ಅಭಿನಯ ಭಾಗಕ್ಕೆ ತೆರಳಿದಾಗ ಮೊಟ್ಟಮೊದಲಿಗೆ ಸಾಹಿತ್ಯದ ಅರ್ಥವನ್ನು ಮನದಟ್ಟು ಮಾಡಿಕೊಂಡು ನಂತರ ಹಸ್ತವಿನಿಯೋಗ ಜೊತೆಜೊತೆಗೂ ಮುಖದ ಭಾವನೆ ಇವುಗಳನ್ನು ಅಭ್ಯಸಿಸಬೇಕಿತ್ತು. ಇವುಗಳನ್ನು ಉಲ್ಲಂಘಿಸಿ ಅಭ್ಯಾಸ ಮಾಡುವಂತಿರಲಿಲ್ಲ. ತಾಯಮ್ಮನವರು ಸಮ್ಮತಿಸುತ್ತಲೂ ಇರಲಿಲ್ಲ. ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ತಣ್ಣೀರಿನಲ್ಲಿ ಮುಖವನ್ನು ತೊಳೆದು ಶ್ರುತಿಪೆಟ್ಟಿಗೆಯೊಂದಿಗೆ ಸರಳೆ, ಜಂಟಿವರಸೆ, ಅಲಂಕಾರ, ಗೀತೆಗಳನ್ನು ಅಭ್ಯಾಸ ಮಾಡಬೇಕು. ನಂತರ ಅಂಗಸಾಧನೆಗಳು, ಕೈಸುತ್ತುವುದು, ಕುಪ್ಪಳಿಸುವುದು, ದಂಡೆ ಒತ್ತುವುದು, ಕಾಲುಗಳ ಮೇಲೆ ಕುಳಿತ ಭಂಗಿಗಳ ಬದಲಾವಣೆ, ಹಿಂದಕ್ಕೆ ಬಾಗಿ ಕಣ್ಣಿನಲ್ಲಿ (ಕಣ್ಣು ರಪ್ಪೆಯಲ್ಲಿ) ಸೂಜಿ, ತೊಗರಿಬೇಳೆಯನ್ನು ತೆಗೆಯುವುದು ಇವೇ ಮೊದಲಾದ ಕಷ್ಟಸಾಧ್ಯ ಅಂಗಸಾಧನೆಗಳ ನಂತರ ನೃತ್ಯ ಪಾಠದಲ್ಲಿ ಅಡವುಗಳು (ವೈವಿಧ್ಯ ಹಾಗೂ ತಾಳ ನಡೆ ಭೇದಗಳಲ್ಲಿ ಬಾಯಿಯಲ್ಲಿ ಹೇಳಿಕೊಂಡು ನರ್ತಿಸಬೇಕಾಗಿತ್ತು. ನಂತರ ಜಾತಿಗಳು, ಅಲರಿಪು, ಜತಿಸ್ವರ, ಸ್ವರಜತಿ, ಪದವರ್ಣ, ತಿಲ್ಲಾನ ಇವೇ ಮೊದಲಾದ ನೃತ್ಯ ಬಂಧಗಳ ಅಭ್ಯಾಸ ಸಾಗುತ್ತಿತ್ತು. ಸಂಜೆಯ ವೇಳೆ ಅಭಿನಯ ಪಾಠಗಳು. ಪ್ರಾರಂಭದ ಪಾಠಗಳು ಕನ್ನಡ ದೇವರ ನಾಮಗಳಿಂದ ಆರಂಭ, ನಂತರ ಅವರವರ ವಯಸ್ಸಿಗನುಗುಣವಾಗಿ ಅಭಿನಯ ಪಾಠಗಳು ಮುಂದುವರೆಯುತ್ತಿತ್ತು. ಕೃಷ್ಣ ಕರ್ಣಾಮೃತ ಶ್ಲೋಕಗಳು, ಅಮರು ಶತಕ ಶ್ಲೋಕಗಳು, ಕ್ಷೇತ್ರಯ್ಯಪದಗಳು, ತೆಲುಗು ಜಾವಳಿಗಳು, ಕಂದಪದ್ಯದೊಂದಿಗೆ ಕನ್ನಡ ಜಾವಳಿಗಳು, ಇವೇ ಮುಂತಾದ ಅಭಿನಯದಲ್ಲಿ ಭಾವ, ರಸ ಇವುಗಳ ವಿವರಣೆಯೊಂದಿಗೆ ನವರಸಾಭಿನಯವನ್ನು ಕ್ರಮ ಕ್ರಮವಾಗಿ ಕಲಿಸಲಾಗುತ್ತಿತ್ತು. ನಂತರ ಜಯದೇವ ಕವಿರಚಿತ ಗೀತಗೋವಿಂದ ಇನ್ನು ಇತರ ಶೃಂಗಾರಾತ್ಮಕ ರಚನೆಗಳ ಪಾಠ ಮುಂದುವರೆಯುತ್ತಿತ್ತು.

ನೃತ್ಯ ಸಂಗೀತ : ಇನ್ನು ನಾಟ್ಯ ಸರಸ್ವತಿಯವರು ಹೇಳುತ್ತಿದ್ದ ಪದಗಳು ಮಹತ್ತರವಾದುದು. ಅರ್ಥಬದ್ದವಾದುದು. ಸಂಗೀತ ಕಛೇರಿ ಬೇರೆ -ನೃತ್ಯ ಕಛೇರಿ ಬೇರೆ. ಎರಡೂ ವಿಭಿನ್ನ ಸಂಗೀತವನ್ನು ಅಂದರೆ ಬಾಯಿ ಹಾಡುಗಾರಿಕೆಯಲ್ಲಿಯೂ ಒಂದು ವಿಧ. ಅರ್ಥಬದ್ಧವಾಗಿ ಹಾಡಬೇಕು. ಸಾಹಿತ್ಯದ ಅರ್ಥವನ್ನು ಅರಿತು, ಅನುಭವಿಸಿ ಹಾಡಬೇಕು. ಸಾಹಿತ್ಯದ ಅರ್ಥಕ್ಕೆ ಲೋಪ ಎಸಗಬಾರದು. ಸಂಗೀತದಲ್ಲಿ ಭಾವ-ರಸಗಳಿವೆ. ಇವುಗಳನ್ನು ಅರಿತು ಸಂಗೀತ ಕಛೇರಿ ನಿರ್ವಹಿಸಬೇಕು.

ನೃತ್ಯ ಕಛೇರಿ: ನೃತ್ಯ ಕಾರ್ಯಕ್ರಮಗಳಲ್ಲಿ ಹಿನ್ನೆಲೆಗಾಯನಕ್ಕೆ ಹೆಚ್ಚಿನ ಮಹತ್ವವಿದೆ. ರಸಾಸ್ವಾದವಾಗಬೇಕು. ನೃತ್ಯವನ್ನು ಅರಿಯದವನೂ ಹಿನ್ನೆಲೆ ಸಂಗೀತದಿಂದ ನೃತ್ಯವನ್ನು ಅರಿತು ಆನಂದಪಡಬೇಕು. ಅಂದರೆ ಯಾವ ಹಾಡನ್ನೇ ಹಾಡಿದರೂ ಸಾಹಿತ್ಯದ ಅರ್ಥವನ್ನು ಸಂದರ್ಭವನ್ನು ಅರಿತು ರಸೋತ್ಪತ್ತಿಯಾಗುವಂತೆ ನೃತ್ಯ ಕಲಾವಿದೆಯ ಭಾವಾಭಿನಯಕ್ಕೆ ಅನುಗುಣವಾಗಿ ಒತ್ತಾಸೆಯಾಗಿ ಹಿನ್ನೆಲೆಗಾಯನವಿರಬೇಕು. ಈ ರೀತಿ ಅನುಸರಿಸದಿದ್ದರೆ, ಹಾಡದಿದ್ದರೆ ಅಭಿನಯ ಭಾಗಕ್ಕೆ ದೋಷ ಉಂಟುಮಾಡಿದಂತಾಗುತ್ತದೆ. ಈ ರೀತಿ ಕ್ರಮವೂ ಸರಿಯಲ್ಲ ಎಂದು ಖಡಾಖಂಡಿತವಾಗಿ ನುಡಿಯುತ್ತಿದ್ದರು. ಪಕ್ಕವಾದ್ಯ ಸಹಕಾರವೂ ಇದಕ್ಕೆ ಹೊಂದಿಕೊಂಡಂತಿರಬೇಕು ಎಂದು ಸ್ಪಷ್ಟವಾಗಿ ಅರಿವು ಮೂಡಿಸಿರುವ ಈ ಮಹಾನ್ ಕಲಾವಿದೆಯು ತಾವು ನರ್ತಿಸುವಾಗ ಸ್ವತಃ ಹಾಡಿಕೊಂಡೇ ನರ್ತಿಸುತ್ತಿದ್ದರೆಂಬ ವಿಷಯವನ್ನು ನಾವು ಜ್ಞಾಪಿಸಿಕೊಳ್ಳಬೇಕು. ನೃತ್ಯ ಪಾಠದ ಜೊತೆಗೆ ನಟುವಾಂಗ ನಿರ್ವಹಿಸುವುದನ್ನು ಅವರು ಅಭ್ಯಾಸ ಮಾಡಿಸುತ್ತಿದ್ದರು.

ಈ ಮೈಸೂರು ಶೈಲಿಯಲ್ಲಿ ಮೂರು ಕ್ರಮಗಳಿದ್ದು, ಅವು ಸಾಧಕ ಪೂಜೆ, ಒದ್ದಿಗೆ ಪೂಜೆ, ಗೆಜ್ಜೆಪೂಜೆ ಈ ಮೂರು ಭಾಗಗಳು ಕ್ರಮಬದ್ದವಾಗಿದ್ದವು. ಇವುಗಳ ವಿವರಗಳನ್ನು ಸೂಕ್ಷ್ಮವಾಗಿ ತಿಳಿಸಬಯಸುತ್ತೇನೆ.

ಸಾಧಕ ಪೂಜೆ: ಮೊದಲಿಗೆ ನೆಲದ ಮೇಲೆ 5 ಸೇರು ಭತ್ತವನ್ನು ಚೌಕಟ್ಟಿನಂತೆ ಹರಡಿ ಅದರ ಮೇಲೆ ಹೊಚ್ಚ ಹೊಸ ಬಿಳಿ ಬಟ್ಟೆಯನ್ನು ಹಾಸಿ ಮೊದಲಿಗೆ ಸರಸ್ವತಿ ದೇವಿಗೆ, ತಟ್ಟುಮಣೆ ತಟ್ಟುಕೋಲು, ಗೆಜ್ಜೆ ತಾಳಿಗಳಿಗೆ ಪೂಜೆ ಸಲ್ಲಿಸಿ ನಂತರ ಗುರುವಿನ ಪಾದರವಿಂದಗಳಿಗೆ ನಮಿಸಿ ವಿದ್ಯಾರ್ಥಿಯನ್ನು ಪೂರ್ವಾಭಿಮುಖವಾಗಿ ಭತ್ತದ ಹಾಸಿನ ಮೇಲೆ ನಿಲ್ಲಿಸಿ ಬಲಗಾಲನ್ನು ನಂತರ ಎಡಗಾಲನ್ನು ಇರಿಸಿ ಪುಷ್ಪಾಂಜಲಿ ಶ್ಲೋಕ ಆದ್ಯ ಶ್ರೀ ಶಶಿಖಂಡ ಮೌಳಿಮುರಭಿತ್ ಪದ್ಮಾಸನಾಂವಂದೇ ಬ್ರಹ್ಮ, ವಿಷ್ಣು ಮಹೇಶ್ವರ, ಲಕ್ಷ್ಮಿ ಸರಸ್ವತಿ, ಪಾರ್ವತಿ ದೇವಿಯರ ಪ್ರಾರ್ಥನಾ ರೂಪದ ಈ ಶ್ಲೋಕದ ಕೊನೆಯ ಪಾದ “ಸೇಯಂ ನಾಟ್ಯಕಲಾ ಪ್ರವರ್ತಕ ಬುಧಾನಂದಾಯ ಸಂದರ್ಶತೇ” ಅಂದರೆ ಈ ನಾಟ್ಯಕಲೆಯನ್ನು ಪ್ರದರ್ಶನ ಮಾಡಲು ಈ ಮೇಲ್ಕಂಡ ದೇವಾದಿ ದೇವತೆಗಳು, ಅಷ್ಟದಿಕ್ಪಾಲಕರ ಅನುಮತಿಯನ್ನು ಯಾಚಿಸಿ ಈ ಶ್ಲೋಕವನ್ನು ವಿದ್ಯಾರ್ಥಿಯು ಸ್ವತಃ ಬಾಯಿಂದ ಹೇಳಿದ ನಂತರ ಭತ್ತದ ಮೇಲೆ 5 ಹೆಜ್ಜೆಗಳನ್ನು ತಟ್ಟಿ ಪ್ರದಕ್ಷಿಣೆ ಬಂದು ನಮಸ್ಕರಿಸುವ ಪದ್ದತಿ ಇತ್ತು. ಸಾಧಕ ಪೂಜೆಯೆಂದು ವಿದ್ಯಾರ್ಥಿಯು ತೈಲ ಅಭ್ಯಂಜನ ಮಾಡಿ ಹೊಸಶರಾಯಿ ಜುಬ್ಬವನ್ನು (ಬಿಳಿಯದು) ಧರಿಸಿ ತಯಾರಾಗಬೇಕಿತ್ತು. ಅಡವುಗಳು, ಜತಿಗಳು (ವರಕಾಶಿನಾಥ ವಿನುತ ಚರಿತ್ರ) ನಾಯಕ ಎಂಬ ವಿನ್ಯಾಸ್ತುತಿ, ವಾಮನ ಸ್ತುತಿ ಇದನ್ನು ಶ್ರೀ ವಾಸುದೇವಾಚಾರ್ಯರು ನಾಟ್ಯ ಸರಸ್ವತಿ ಜೆಟ್ಟಿ ತಾಯಮ್ಮನವರಿಗೆ ಬಳುವಳಿಯಾಗಿ ನೀಡಿದ್ದರು. ಅಲರಿಪು (ಚತುರಶ್ರ) ಸ್ವರಜತಿ, ಭಕ್ತಿರಸ ಪ್ರಧಾನ ಹಾಡುಗಳಿಗೆ ಸರಳ ಅಭಿನಯಪಾಠ ನಡೆಯುತ್ತಿತ್ತು.

ಬದ್ದಿಗೆ ಪೂಜೆ: 101 ಗೆಜ್ಜೆಗಳನ್ನು ಅರಿಶಿನದ ದಾರದಲ್ಲಿ ಹಣೆದು ಮೇಲೆ ಹೇಳಿದಂತೆ ಸರಸ್ವತಿ, ವಾದ್ಯಗಳಿಗೆ ಗೆಜ್ಜೆತಾಳಗಳಿಗೆ ಪೂಜೆ ಸಲ್ಲಿಸಿ ಗೆಜ್ಜೆಯನ್ನು ಗುರುಗಳೇ ತಮ್ಮ ಸ್ವಹಸ್ತದಿಂದ ವಿದ್ಯಾರ್ಥಿಯು ಬಲಗಾಲಿಗೆ ನಂತರ ಎಡಗಾಲಿಗೆ ಕಟ್ಟಿ ಆಶೀರ್ವದಿಸಿದ ನಂತರ ಗುರುನಮನ ಸಲ್ಲಿಸಿ ನಂತರ ಜತಿಸ್ವರ, ಪದವರ್ಣ, ತಿಲ್ಲಾನ, ಕ್ಷೇತ್ರಯ್ಯಪದ, ಅಮರುಶತಕ ಮತ್ತು ಕೃಷ್ಣಕರ್ಣಾಮೃತ ಶ್ಲೋಕ, ತೆಲುಗು ಜಾವಳಿ, ಕಂದಪದ್ಯದೊಡನೆ ಕನ್ನಡ ಜಾವಳಿ, ಗೀತಗೋವಿಂದ, ದೇವರನಾಮ ಇವೇ ಮೊದಲದ ನೃತ್ಯ ಬಂಧಗಳನ್ನು ಪರಿಪೂರ್ಣವಾಗಿ ಗುರುಕುಲ ಪದ್ಧತಿಯ ಪ್ರಕಾರ, ಕ್ಲಿಷ್ಟ ಅಭ್ಯಾಸದ ನಂತರ, ಗುರುಗಳ ಅಪ್ಪಣೆ, ಆಜ್ಞೆಯಂತೆ, ಗುರುವಿಗೆ ಸಮಾಧಾನಕರ ಅಂದರೆ ಕಾರ್ಯಕ್ರಮ ನೀಡಲು ಯೋಗ್ಯಳು ಎಂದು ಮನದಟ್ಟಾದಾಗ ಮುಂದಿನ ಗೆಜ್ಜೆಪೂಜೆ ಕಾರ್ಯಕ್ಕೆ ಸಮ್ಮತಿ ಸೂಚಿಸುತ್ತಿದ್ದರು.

ಗೆಜ್ಜೆಪೂಜೆ: ಅಂದು ಶುಭದಿನ. ಶುಭದಿನವನ್ನು ನಿಶ್ಚಿಯಿಸಿ ವಿದ್ಯಾರ್ಥಿಯು ಬೆಳಗಿನ ಜಾವದಲ್ಲಿಯೇ ಎಣ್ಣೆ ಅಭ್ಯಂಜನಮಾಡಿ ಮನೆದೇವರಿಗೆ ಪೂಜೆ ಸಲ್ಲಿಸಿ ಗುರುವಿನ ಗೃಹಕ್ಕೆ ತೆರಳಬೇಕಿತ್ತು. ಗುರುವಿನ ನಿವಾಸದಲ್ಲಿಯೇ ಗೆಜ್ಜೆಪೂಜೆ ಕಾರ್ಯಕ್ರಮ ನಡೆಯುತ್ತಿತ್ತು. ಈ ಮೊದಲ ರಂಗ ಪ್ರವೇಶ ಕಾರ್ಯಕ್ರಮಕ್ಕೆ (ಗೆಜ್ಜೆಪೂಜೆ) ಆಹ್ವಾನ ಮೇರೆಗೆ ಸಂಗೀತ ಸಾಹಿತ್ಯ ಸಂಸ್ಕೃತಿ ಶಾಸ್ತ್ರಧ್ಯಯನ ವಿದ್ವಾಂಸರು, ನೃತ್ಯಪಟುಗಳು, ಆಗಮಿಸಿ ಆಸನವನ್ನಲಂಕರಿಸುತ್ತಿದ್ದರು. ಅನಂತರ ವಿದ್ವಾಂಸರ ಅಪ್ಪಣೆಯ ಮೇರೆ ಒಟ್ಟಿಗೆ ಪೂಜೆಯಲ್ಲಿ ಅಭ್ಯಾಸ ಮಾಡಿದ ನೃತ್ಯಬಂಧಗಳನ್ನು ಅಭಿನಯಿಸುತ್ತಿದ್ದರು. ವಿದ್ವಾಂಸರ ಮೆಚ್ಚುಗೆ ಆಶೀರ್ವಾದಕ್ಕೆ ಪಾತ್ರರಾಗುತ್ತಿದ್ದರು.

ಪಕ್ಕವಾದ್ಯ ಸಹಕಾರ: ಶೃತಿಗೆ ಪುಂಗಿ, ಹಾರ್ಮೋನಿಯಂ, ಮುಖವೀಣೆ, ಪಿಟೀಲು, ಸಾರಂಗಿ, ಮದ್ದಲೆ ಇವೇ ಮೊದಲಾದ ವಾದ್ಯಗಳನ್ನು ನುಡಿಸುತ್ತಿದ್ದರು.

ನೇಪಥ್ಯ: ಅಂದಿನ ಕಾಲದಲ್ಲಿ ಮುಖವರ್ಣಿಕೆ ಇರಲಿಲ್ಲ. ಬದಲಾಗಿ ಹೆಸರು ಕಾಳು ಅಥವಾ ಕಡಲೆಕಾಳು ಹಿಟ್ಟನ್ನು ಮುಖಕ್ಕೆ ಲೇಪಿಸಿಕೊಂಡು (ನುಣ್ಣಗಿರುವ) ಮುಖವನ್ನು ಶುಭ್ರಗೊಳಿಸುತ್ತಿದ್ದರು. ಇದರಿಂದ ಮುಖದ ಕಾಂತಿ ಸೌಂಧರ್ಯಯುತವಾಗಿ ಕಂಡು ಬರುತ್ತಿತ್ತು. ತುಟಿಯ ಲೇಪನವಿರಲಿಲ್ಲ. ಹಣೆಗೆ ಬೆವರಿನಿಂದ ತೋಯದ ಕುಂಕುಮವನ್ನು ಉಪಯೋಗಿಸುತ್ತಿದ್ದರು. ಕೃತಕ ಆಭರಣಗಳ ಬಳಕೆ ಇರಲಿಲ್ಲ. ಚಿನ್ನ ಹಾಗೂ ವಜ್ರ ಖಚಿತ ಆಭರಣಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ಅಂದರೆ ಕಿವಿಗಳಿಗೆ ಓಲೆ, ಮೂಗುತಿ, ಬೈತಲೆಬೊಟ್ಟು, ಸೂರ್ಯಚಂದ್ರ, ನಾಗರು ಅಥವಾ ರಾಗಟ್ಟಿ ಜಡೆಬಿಲ್ಲೆ, ಜಡೆಕುಚ್ಚು, ಅಡಿಕೆ (ವಜ್ರ ಕೆಂಪು ಹರಳಿನಿಂದ ತಯಾರಾದ) ಕಾಸಿನಸರ, ಸೊಂಟಕ್ಕೆ ಚಿನ್ನದ ಗೆಜ್ಜೆ ವಡ್ಯಾಣ, ಇವೇ ಒದಲಾದ ಆಭರಣಗಳನ್ನು ಧರಿಸುತ್ತಿದ್ದರು. ಇವೇ ಅಲ್ಲದೆ ಕೊರಳಿಗೆ ಜೋಮಾಲೆಸರ, ಕಾಸಿನ ಸರ, ಕೈಗೆ ಚಿನ್ನದ ಬಳೆಗಳು, ಕಾಲುಗಳಿಗೆ ಬೆಳ್ಳಿಯ ಕಾಲ್ಜೆನುಗಳು, ಕಾಲ್ಕಡಗಗಳು, ಅರಿಶಿನ ದಾರದಿಂದ ಕಟ್ಟಿದ (ಪೋಣಿಸಿದ) ಗೆಜ್ಜೆಗಳು, ಕೈ ಬೆರಳುಂಗುರುಗಳು ಧರಿಸುತ್ತಿದ್ದರು.

ವಸ್ತ್ರ : ಕಿನ್‌ಕಾಪಿನ ಷರಾಯಿ, ಹದಿನೆಂಟು ಮೊಳದ ಜರತಾರೀ ಸೀರೆಯನ್ನು ಕಾಸಿ ಹಾಕಿಟ್ಟು ಸೆರಗನ್ನು ಮುಂದೆ ಬೀಸಣಿಗೆಯ ರೂಪದಲ್ಲಿ ಇಳಿಬಿಡುತ್ತಿದ್ದರು. ಇದು ಗುರು ನಾಟ್ಯಸರಸ್ವತಿ ಜೆಟ್ಟಿ ತಾಯಮ್ಮನವರ ಮೈಸೂರು ಶೈಲಿಭರತ ನಾಟ್ಯ ಪದ್ಧತಿಯ ಗುರುಶಿಕ್ಷಣ, ನೃತ್ಯಕಲಿಕೆ, ಕಾರ್ಯಕ್ರಮಗಳ ರೂಪುರೇಷೆಗಳು, ನೃತ್ಯ ಕಾರ್ಯಕ್ರಮವನ್ನು ನೀಡುವ ಕ್ರಮ, ಪದ್ಧತಿ ಇವೆಲ್ಲವೂ ಶಾಸ್ತ್ರ ಬದ್ಧವಾಗಿ, ಲಕ್ಷಣಯುಕ್ತವಾಗಿ ನೆರವೇರುತ್ತಿತ್ತು.

ಗುರುದಕ್ಷಿಣೆ: ಸಾಧಕ ಪೂಜೆಯಿಂದ ಗೆಜ್ಜೆಪೂಜೆಯವರೆಗೆ ಮೂರು ಕಂತಿನಂತೆ ಎರಡು ಸಾವಿರ ರೂಪಾಯಿಗಳನ್ನು (ಅಂದಿನ ರೂಪಾಯಿ ನಾಣ್ಯಗಳು) ಗುರುಕಾಣಿಕೆಯಾಗಿ ಸಲ್ಲಿಸುತ್ತಿದ್ದುದೇ ಅಲ್ಲದೆ ಸೀರೆ, ವಸ್ತ್ರಗಳನ್ನು ಫಲತಾಂಬೂಲದೊಂದಿಗೆ ಬೆಳ್ಳಿ ರೂಪಾಯಿ ನಾಟ್ಯಗಳ ಜೊತೆ ತಟ್ಟೆಯಲ್ಲಿ ಅಣಿಪಡಿಸಿ ಗುರುವಿಗೆ ಸಲ್ಲಿಸಿ ಶಿಷ್ಯರು ಗುರುವಿನ ಆಶೀರ್ವಾದ ಪಡೆಯುತ್ತಿದ್ದರು. ವಿದ್ಯಾರ್ಥಿ ವಿದ್ಯಾರ್ಥಿನಿಯರ ಮನೆಯ ಹಿರಿಯರೂ ತಮ್ಮ ಮಕ್ಕಳೊಂದಿಗೆ ಆಗಮಿಸಿ ಗುರುಕಾಣಿಕೆಯನ್ನು ಸಲ್ಲಿಸಿ ವಂದಿಸುತ್ತಿದ್ದರು.

ಮತ್ತೊಂದು ಪ್ರಮುಖ ಸಂದರ್ಭವೆಂದರೆ ಹಿಂದೆ ರಾಜಾಶ್ರಯ ದೊರಕುತ್ತಿದ್ದಂತೆ ಇದೇ ರೀತಿ ಧನಿಕ ಮಹಾಶಯರಾದ ಕಲಾಭಿಮಾನಿಗಳು ನೃತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದುದು ಒಂದು ಸಂಭ್ರಮದ, ಹೆಗ್ಗಳಿಕೆಯ ವಿಷಯ ಎನ್ನಬಹುದು. ಇದಕ್ಕೆ ಸಂದರ್ಭಗಳೂ ಮುಖ್ಯ. ಇವರು ಕಲೆಯನ್ನು ಅತ್ಯಂತ ಗೌರವಿಸುತ್ತಿದ್ದರು. ಸಾಮಾನ್ಯವಾಗಿ ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಎಡತೊರೆ, ರಾವಂದೂರು, ಬಸವಾಪಟ್ಟಣ, ಕೊಳ್ಳೇಗಾಲ, ಚಾಮರಾಜನಗರ ಇವೇ ಮೊದಲಾದ ಊರಿನ ಶ್ರೀಮಂತ ವ್ಯಕ್ತಿಗಳ ಮನೆಯ ಶುಭ ಸಮಾರಂಭಗಳಿಗೆ ನೃತ್ಯ ಕಾರ್ಯಕ್ರಮ ಏರ್ಪಾಡಾಗುತ್ತಿತ್ತು. ಜೆಟ್ಟಿತಾಯಮ್ಮನವರಿಗೆ ತಕ್ಷಣ ಕರೆಬರುತ್ತಿತ್ತು. ಶುಭ ಕಾರ್ಯ ನಡೆಯುತ್ತಿದ್ದ ಆ ಮನೆ ಯಜಮಾನಿಯು ದೊಡ್ಡ ಬೆಳ್ಳಿತಟ್ಟೆಯಲ್ಲಿ ಅರಿಶಿನ ಕುಂಕುಮ ಸೀರೆ ರವಿಕೆ, ಹಣ್ಣು ಹೂವುಗಳೊಂದಿಗೆ ಸುತ್ತುವಿಳ್ಯೆದ ಜೊತೆಗೆ ಸಾವಿರಾರು ವರಹಗಳ ಹಣದ ಚೀಲವನ್ನಿರಿಸಿ, ತಾಯಮ್ಮನವರನ್ನು ಮಣೆಯ ಮೇಲೆ ಕುಳ್ಳರಿಸಿ ಈ ತಾಂಬೂಲ ತಟ್ಟೆಯನ್ನು ನೀಡಿ ನಮ್ಮ ಮನೆಯ ಶುಭ ಸಮಾರಂಭಕ್ಕೆ ಆಗಮಿಸಿ ನೃತ್ಯ ಕಾರ್ಯಕ್ರಮ ನಡೆಸಿಕೊಡಬೇಕೆಂದು ವಿನಂತಿಸಿ ಆಹ್ವಾನಿಸುತ್ತಿದ್ದರು. ಈ ಶುಭ ಸಮಾರಂಭಕ್ಕೆ ಅರ್ಧಮೈಲಿ ದೂರದ ಚಪ್ಪರದೊಳಗೆ ಜಮಖಾನಗಳನ್ನು ಹಾಸಿ ನೃತ್ಯ ಕಲಾವಿದರು ಒಂದು ಭಾಗದಲ್ಲಿ, ಪಂಚವಾದ್ಯ, ನಾಗಸ್ವರ ಇವರುಗಳು ಒಂದು ಭಾಗದಲ್ಲಿ, ಪ್ರೇಕ್ಷಕ ವರ್ಗಕ್ಕೆ ಮತ್ತೊಂದು ಭಾಗದಲ್ಲಿ ಕುಳಿತುಕೊಳ್ಳುವಂತೆ ಸಜ್ಜಾಗುತ್ತಿತ್ತು. ನೃತ್ಯ ಕಾರ್ಯಕ್ರಮವು ರಾತ್ರಿ ಪ್ರಾರಂಭವಾದರೆ ಬೆಳಗಿನ ಜಾವದವರೆಗೆ ವಿದ್ವಾಂಸರ ಅಪೇಕ್ಷೆ ಅನುಮತಿ ಮೇರೆಗೆ ಮುಂದುವರೆಯುತ್ತಿತ್ತು. ಜೆಟ್ಟಿತಾಯಮ್ಮನವರು ತಮ್ಮ ಪಟ್ಟ ಶಿಷ್ಯೆ, ಪ್ರಮುಖ ಶಿಷ್ಯೆ ವೆಂಕಟಲಕ್ಷ್ಮಮ್ಮನವರೊಂದಿಗೆ ಮತ್ತೊಬ್ಬ ಶಿಷ್ಯೆ ಸುಂದರಮ್ಮ ಹಾಗೂ ಇತರ ಕೆಲವು ಶಿಷ್ಯರಿಂದ ನರ್ತನ ಮಾಡಿಸಿ ಅನೇಕ ನೃತ್ಯ ಭಾಗಗಳನ್ನು ಪ್ರದರ್ಶಿಸಿದ ನಂತರ ತಾಯಮ್ಮನವರು ತಾವೇ ಸ್ವತಃ ಅಭಿನಯದ ಅಂಶಗಳನ್ನು ಅಭಿನಯಿಸುತ್ತಿದ್ದರು. ಶ್ಲೋಕಗಳು, ಪದಗಳು, ಅಷಪದಿ, ರಾಜಶೇಖರ ವಿಳಾಸ ಸ್ತುತಿಗಳು, ಚಿಕ್ಕದೇವರಾಯರ ಸಪ್ತಪದಿಯಿಂದ ಆಯ್ದ ಪದ್ಯ, ವೇಣುಗೋಪಾಲ ಸ್ತುತಿ, ಕಂದಪದ್ಯದೊಂದಿಗೆ ಕನ್ನಡ ಜಾವಳಿ, ತೆಲುಗು ಜಾವಳಿ, ವಚನಗಳು, ಇವೇ ಮೊದಲಾದವುಗಳಿಗೆ ಅಭಿನಯಿಸುತ್ತಿದ್ದರು. ಇವರ ಪ್ರಮುಖವಾದ ಶ್ಲೋಕ : “ಮಲೆಃ ಶೈಲೆಂದ್ರಕಲ್ಪಃ” ಇದು ಶ್ರೀಕೃಷ್ಣ ಕಂಸರ ಮಲ್ಲಯುದ್ಧ. ಈ ಶ್ಲೋಕವನ್ನು ಶ್ರೀಕೃಷ್ಣನಾಗಿ ಕಂಸನಾಗಿ ತಾಯಮ್ಮನವರು ಅಭಿನಯಿಸಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿ “ಆಹಾ” ಎಂತಹ ಅದ್ಭುತ ಅಭಿನಯ ಶಿರೋಮಣಿ, ಅಭಿನಯಶಾರದೆ ಎಂಬ ಬಿರುದನ್ನು ತನ್ನದಾಗಿಸಿಕೊಂಡಿದ್ದರು. ಪ್ರೇಕ್ಷಕ ವರ್ಗದಲ್ಲಿ ಶ್ರೀಮತಿ ಜಮೀನ್ದಾರರು, ಸಾಹುಕಾರರು, ಮಣೀಗಾರರು, ಸೇರೆವಗಾರರು ಇವರೇ ಮುಂತಾದ ಕಲಾಭಿಮಾನಿ ಪ್ರಮುಖ ವ್ಯಕ್ತಿಗಳು ಈ ಶುಭ ಸಮಾರಂಭಕ್ಕೆ ಆಗಮಿಸಿ, ತಾವೇ ನೀಡಿದ “ಅಶುಕವಿತ್ವ”ದ ಹಾಡುಗಳಿಗೆ, ಕೆಲವು ಶ್ಲೋಕಗಳನ್ನು ತಾಯಮ್ಮನವರಿಗೆ ನೀಡಿ ಅಭಿನಯಿಸುವಂತೆ ವಿನಂತಿಸುತ್ತಿದ್ದರು. ತಕ್ಷಣವೇ ವಿದ್ವಾಂಸರು ಕಲಾಭಿಮಾನಿಗಳು ನೀಡಿದ ಮೇಲ್ಕಂಡವುಗಳಿಗೆ ಅಭಿನಯಿಸಿ ಅವರ ಮೆಚ್ಚುಗೆಗೆ ಪಾತ್ರರಾಗಿ ಅಭಿನಯವೆಂದರೆ ತಾಯಮ್ಮ, ಅಭಿನಯಶಾರದೆ ಎಂಬ ಮೆಚ್ಚುಗೆ ಪಡೆದಿದ್ದರು. ಅಂದಿನ ಪ್ರೇಕ್ಷಕ ವರ್ಗವೂ ಕೂಡ ವಿದ್ವಾಂಸರು, ಸಂಸ್ಕೃತ ಸಾಹಿತ್ಯ ಪಂಡಿತರು, ಶಾಸ್ತ್ರಾಧ್ಯಯನ ಅರಿತವರು ಆಗಿರುತ್ತಿದ್ದರು. ಇಂತಹ ವಿದ್ವಾಂಸರ ಮೆಚ್ಚುಗೆ ಗೌರವಗಳಿಗೆ ಪಾತ್ರರಾಗಿದ್ದವರು ಮೈಸೂರು ಶೈಲಿಯ ದಿಗ್ಗಜೆ ನಾಟ್ಯ ಸರಸ್ವತಿ ಜೆಟ್ಟಿತಾಯಮ್ಮ. ಇಂತಹ ಗುರುಗಳ ಸನ್ನಿಧ್ಯದಲ್ಲಿ ನೃತ್ಯ, ಶಿಕ್ಷಣವನ್ನು ಕಲಿತು, ಗುರುವಿನ ನೆರಳಿಗೆ ನೆರಳಾಗಿ, ತನ್ನ ಗುರುವಿನ ಮಾರ್ಗದರ್ಶನದಲ್ಲಿ ನುರಿತ ಕಲಾವಿದೆ ಆಗಿದ್ದರು. ಪದ್ಮಭೂಷಣ ಡಾ|| ಕಡೂರು ವೆಂಕಟಲಕ್ಷ್ಮಮ್ಮನವರು.

ಇಂತಹ ಮಹಾನ್ ಕಲಾವಿದೆಯರು ಮೈಸೂರು ಶೈಲಿಯ ದಿಗ್ಗಜೆಯರೆಂದು ಹೇಳುವುದರಲ್ಲಿ ಸಂಶಯವೇ ಇಲ್ಲ. ಇದು ನಮ್ಮ ನಾಡಿನ ಪುಣ್ಯಸುಕೃತ-ಹೆಮ್ಮೆ ಕೂಡ ಅಗಿದೆ. ನಾಟ್ಯ ಸರಸ್ವತಿ ಜೆಟ್ಟಿತಾಯಮ್ಮನವರ ಹಾಗೂ ಪದ್ಮಭೂಷಣ ಡಾ|| ಕೆ. ವೆಂಕಟಲಕ್ಷ್ಮಮ್ಮನವರ ಪಾದಾರವಿಂದಗಳಿಗೆ ನನ್ನ ನಮನ.