ಮೈಸೂರು ಸದಾಶಿವರಾಯರು ೧೯ನೇ ಶತಮಾನದ ಮಹಾನ್‌ವಾಗ್ಗೇಯಕಾರರಲ್ಲೊಬ್ಬರು. ಕರ್ನಾಟಕ ಸಂಗೀತದ ತ್ರಿಮೂರ್ತಿಗಳ ಪಥದಲ್ಲೆ ಸಾಗಿ ನಾದೋಪಾಸನೆ ಮಾಡಿ ಸಂಗೀತಕ್ಕೆ ಅತ್ಯುತ್ತಮ ಕೊಡುಗೆಯನ್ನಿತ್ತಿದ್ದಾರೆ. ಇವರ ಜೀವನ ಚರಿತ್ರೆಗೆ ಸಂಬಂಧ ಪಟ್ಟ ವಿಷಯಗಳಲ್ಲಿ ನಿಖರವಾದ ದಾಖಲೆಗಳಿಲ್ಲದಿದ್ದ ಕಾರಣ ಬಹಳಷ್ಟು ಘಟನೆಗಳು ದಂತಕಥೆಗಳಾಗಿ ಬಿಟ್ಟಿದೆ. ಆದರೂ ಸಹ ಸಿಕ್ಕಿರುವ ಮಾಹಿತಿಗಳಲ್ಲೆ ಒಂದು ಸಮಗ್ರ ಚಿತ್ರಣವನ್ನು ಪ್ರತಿಬಿಂಬಿಸುವ ಪ್ರಯತ್ನವಿಲ್ಲಿದೆ.

ಜನನ ಕಾಲ: ರಾಯರ ಜನನ ಕಾಲ ಸುಮಾರು ೧೯ನೇ ಶತಮಾನದ ಆದಿಯಲ್ಲಿರಬಹುದೆಂಬ ವಾದಕ್ಕೆ ಒಪ್ಪುವಂಥ ಸಾಮಗ್ರಿಯು ಸುಬ್ಬರಾಯ ದೀಕ್ಷಿತರ “ಸಂಪ್ರದಾಯ ಪ್ರದರ್ಶಿನಿ”ಯಲ್ಲಿ ದೊರಕುತ್ತದೆ. “ಈತನು ಮಹಾರಾಷ್ಟ್ರ ಬ್ರಾಹ್ಮಣ, ಊರು ಮೈಸೂರು ಸಂಸ್ಥಾನ, ಸಂಗೀತ ಸಂಸ್ಕೃತಾಂಧ್ರದಲ್ಲಿ ಪಂಡಿತ. ಈತನಿಂದ ರಚಿತವಾದ ಕೀರ್ತನ, ವರ್ಣ. ತಿಲ್ಲಾನಗಳು ಪ್ರಸಿದ್ಧವಾಗಿದೆ. ಈತನು ೨೦ ವರ್ಷಗಳ ಹಿಂದೆ ಇದ್ದನು” ಈ ಗ್ರಂಥ ೧೯೦೪ರಲ್ಲಿ ಪ್ರಕಟವಾಗಿದೆ. ಆದಕಾರಣ, ೨೦ ವರ್ಷಗಳ ಹಿಂದೆ ಎಂದು ಹೇಳಿರುವುದರಿಂದ ೧೮೮೩-೧೮೮೪ ರಲ್ಲಿ ರಾಯರು ಜೀವಿಸಿದ್ದರೆಂದು ಹೇಳಬಹುದು. ರಾಯರು ೮೦ ವರ್ಷಗಳ ಕಾಲ ಬದುಕಿ ಬಾಳಿದರೆಂಬ ವಿದ್ವಾಂಸರ ಅಭಿಪ್ರಾಯವನ್ನು ಒಪ್ಪಿದರೆ, ರಾಯರ ಜೀವಿತ ಕಾಲ ೧೮೦೦-೧೮೦೪ ರಿಂದ ೧೮೮೦-೧೯೯೪ ಎಂದು ಪರಿಗಣಿಸಬಹುದು. ಸುಬ್ಬರಾಮ ದೀಕ್ಷಿತರೇ ಇವರ ಬಗ್ಗೆ ಈ ರೀತಿಯಾಗಿ ಹೇಳಿರುವುದರಿಂದ ರಾಯರ ಪ್ರಖ್ಯಾತಿ ವೇದ್ಯವಾಗುತ್ತದೆ.

ರಾಯರ ಮೂಲ ಪುರುಷರು ಮರಾಠಾ ರಾಜರ ಆಳ್ವಿಕೆಗೆ ಒಳಪಟ್ಟ ಆಗಿನ ತಮಿಳುನಾಡಿನ, ಈಗ ಆಂಧ್ರಪ್ರದೇಶದಲ್ಲಿರುವ ಆರ್ಕಾಟು ಜಿಲ್ಲೆಯ ಚಿತ್ತೂರಿನ ಗಿರಂಪೇಟೆಯಲ್ಲಿ. (ಜಿಲ್ಲಾ ಕಲೆಕ್ಟರ್‌‘ಗ್ರೀಮ್ಸ್’ ಎಂಬುವವನ ಹೆಸರೇ ಇದಕ್ಕೆ ಬಂದಿರುವುದು.) ಗಣೇಶರಾಯ ಕೃಷ್ಣಾ ಬಾಯಿಯ ದಂಪತಿಗಳ ಮೂರು ಮಕ್ಕಳಲ್ಲಿ ಹಿರಿಯ ಪುತರರು ಸದಾಶಿವರಾಯರು. ಇವರು ಮಾಧ್ವ ಬ್ರಾಹ್ಮಣರೋ, ಸ್ಮಾರ್ತ ಬ್ರಾಹ್ಮಣರೋ ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳುಂಟು. ರಾಯರ ಕೆಲವೊಂದು ಕೃತಿಗಳು ಸ್ಮಾರ್ತ ಸಂಪ್ರದಾಯವನ್ನು, ಹಾಗೆಯೆ ಒಂದೆರಡು ಕೃತಿಗಳು ಮಾಧ್ವರೆಂಬುದನ್ನು ಪ್ರತಿಪಾದಿಸುತ್ತದೆ. ರಾಯರ ಮತ್ತು ರಾಯರ ತಂದೆಯ ಹೆಸರು ಮಾಧ್ವರಲ್ಲಿಲ್ಲ. ತ್ಯಾಗರಾಜರ ಪರಂಪರೆಯಲ್ಲಿ ಬರುವ ರಾಯರು ಸ್ಮಾರ್ತರಾಗಿದ್ದು ಭಾಗವತ ಸಂಪ್ರದಾಯವನ್ನು ಅನುಸರಿಸಿದರಬಹುದೆಂಬ ವಾದದ ತಿರುಳು ಒಪ್ಪುವಂತಹ ಮಾತೇ. ರಾಯರು ಚಿಕ್ಕಂದಿನಿಂದಲೇ ಬಹಳ ಸ್ವಾಭಿಮಾನಿ. ಇವರ ಬಾಲ್ಯದಲ್ಲಿ ಒಮ್ಮೆ ಊಟ ಮಾಡುವಾಗ ತುಪ್ಪಕ್ಕೆ ಕೈ ಒಡ್ಡಿದರಂತೆ, ಆಗ ಅವರ ತಾಯಿ “ನಿನಗಿರುವ ಸಂಪಾದನೆಗೆ ಕೈ ತುಂಬ ತುಪ್ಪಬೇಕೇನಪ್ಪ” ಎಂದು ಮೂದಲಿಸಿದಾಗ, ರಾಯರಿಗೆ ಅವಮಾನವಾಗಿ ಮನೆ ಬಿಟ್ಟು ಹೊರಟು ಹೋದರಂತೆ. ಅನಂತರ ಎಲ್ಲಿಗೆ ಹೋದರೋ, ಏನೂ ತಿಳಿಯದು. ಅವರು ತಮ್ಮ ಪ್ರಾಪ್ತವಯಸ್ಸಿನಲ್ಲಿ ಚಿತ್ತೂರು ಕಲೆಕ್ಟರ್‌ಆಫೀಸಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದ್ದರೆಂಬ ವಿಷಯ ತಿಳಿದು ಬರುತ್ತದೆ. ಆಗಿನ ಕಾಲದ ವಾಗ್ಗೇಯಕಾರರಲ್ಲಿ ಲೌಕಿಕ ವಿದ್ಯಾಭ್ಯಾಸದ ಜೊತೆಗೆ ಸರ್ಕಾರಿ ಸೇವೆ ಸಲ್ಲಿಸಿರುವವರಲ್ಲಿ ರಾಯರೇ ಮೊದಲಿಗರು.

ರಾಯರ ಧರ್ಮಪತ್ನಿ ಆರಣಿಯ ಜಮಿನ್ದಾರರಾಗಿದ್ದ ತಿರುಮಲರಾವ್‌ಸಾಹೇಬರ ಸೋದರತ್ತೆಯಾದ ಸುಂದರಬಾಯಿ. ರಾಯರ ತೋಡಿ ರಾಗದ ‘ಕೃಪಾಲಯ’ ಕೃತಿಯಲ್ಲಿ ಹಾಗೂ ಧನ್ಯಾಸಿಯ ‘ನಮಾಯಿ ಸತ್ಯವಿಜಯ ಸ್ವಾಮಿ ಗುರೋ’ ಎಂಬ ಕೃತಿಯಲ್ಲಿ ತಿರುಮಲರಾಯರ ಪ್ರಸ್ತಾಪವಿದೆ. ಉತ್ತರಾದಿ ಮಠದ ಗುರುಗಳಾಗಿದ್ದ (೧೭ನೇ ಶತಮಾನದಲ್ಲಿ) ಸತ್ಯ ವಿಜಯ ತೀರ್ಥರ ಪರವಾದ ಈ ಕೃತಿಗಳು, ರಾಯರಿಗೆ ಇವರ ಮೇಲಿದ್ದ ಭಕ್ತಿ ಗೌರವಗಳನ್ನು ಸೂಚಿಸುತ್ತದೆ.

ಸಂಗೀತ ಶಿಕ್ಷಣ: ರಾಯರು ತ್ಯಾಗರಾಜರ ಶಿಷ್ಯರಾದ ವಾಲಾಜಪೇಟೆ ವೆಂಕಟರಮಣ ಭಾಗವತರ ಶಿಷ್ಯರು. ಇದಕ್ಕೆ ಅವರ ಕಿರಣಾವಳಿಯ ಕೃಪಜೂಡರ’ ಕೃತಿಯೇ ಸಾಕ್ಷಿ. ಈ ಕೃತಿಯ ಚರಣ ಭಾಗವು ಈ ರೀತಿಯಾಗಿದೆ.

ಚ. ವೆಂಕಟರಮಣ ಭಾಗವತುಲ ಕಿಂಕರುಡೈನ ಕವಿ ಸದಾಶಿವುನಿ
ಸಂಕಟಂಬು ದೀರ್ಚಿ ಬಾಗುಗಾ ರಕ್ಷಿಂಚು ಕುಂಕುಮಾಧರ ರಾಮಚಂದ್ರ ನಾಪೈ.

ಈ ಕೃತಿ ಬಹುಶಃ ರಾಯರ ಪ್ರಾರಂಭಿಕ ಕೃತಿಗಳಲ್ಲೊಂದು ಎಂದು ವಿದ್ವಾಂಸರ ಅಭಿಪ್ರಾಯ. ಜೊತೆಗೆ ವೆಂಕಟರಮಣ ಭಾಗವತರು ತಮ್ಮ ಶಿಷ್ಯರಿಗೆ ಪಾಠ ಹೇಳುತ್ತಿರುವ ಚಿತ್ರವನ್ನು ವಾಲಾಜಪೇಟೆ ಭಾಗವತರ ಮನೆಯಲ್ಲಿ ಇಂದಿಗೂ ನೋಡಬಹುದು. ಈ ಚಿತ್ರದಲ್ಲಿ ರಾಯರು ಮೊದಲಿನ ಸಾಲಿನಲ್ಲಿ ಕುಳಿತಿದ್ದಾರೆ.

ರಾಯರು ಶ್ರೀ ತ್ಯಾಗರಾಜರ ಸಮ್ಮುಖದಲ್ಲಿ ಹಾಡಿ ಅವರ ಆಶೀರ್ವಾದವನ್ನೂ ಪಡೆದಿದ್ದರಂತೆ. ಇದಕ್ಕೆ ‘ತ್ಯಾಗಬ್ರಹ್ಮೋಪನಿಷತ್‌’ಪುಸ್ತಕದಲ್ಲಿ ಇದರ ಬಗ್ಗೆ ಈ ರೀತಿಯಾದ ವ್ಯಾಖ್ಯಾನವಿದೆ. “ಶ್ರೀ ತ್ಯಾಗರಾಜ ಸ್ವಾಮಿಗಳ ವಾಲಾಜಪೇಟೆಯ ಪುರ ಪ್ರವೇಶ ಮಹಾ” ಸಮಾರಂಭದಲ್ಲಿ “ಮೈಸೂರು ಆಸ್ಥಾನ ಮಹಾ ಸಂಗೀತ ವಿದ್ವಾನ್‌ಸದಾಶಿವರಾಯರು’ ತೋಡಿ ರಾಗದಲ್ಲಿ ‘ತ್ಯಾಗರಾಜ ಸ್ವಾಮಿ ವೆಡಲಿನ’ ಎಂಬ ಕೀರ್ತನೆಯನ್ನು ಸಾಮಯಿಕವಾಗಿ ರಚಿಸಿ ತ್ಯಾಗರಾಜರ ಇದಿರಿನಲ್ಲೇ ಹಾಡಿ ಅವರಿಂದ ಆಶೀರ್ವಾದವನ್ನು ಪಡೆದರು.” ಸ್ವತಃ ಶ್ರೀ ತ್ಯಾಗರಾಜರೇ ರಾಯರನ್ನು ಆಶೀರ್ವದಿಸಿರುವರೆಂದರೆ ಸಾಮಾನ್ಯ ಸಂಗತಿಯಲ್ಲ.

ರಾಯರ ಕಾಂಭೋಜಿ ರಾಗದ ‘ಸೀತಾ ಲಕ್ಷ್ಮಣ ಸಮೇತ’ (ಸಂಗೀತ ಕಲಾಭಿವರ್ಧಿನಿ ಸಭಾ-ಪ್ರಕಟಣೆ) ಕೃತಿಯಲ್ಲಿ ವೆಂಕಟರಮಣ ಭಾಗವತರ, ವಾಲಾಜಪೇಟೆಯ ನಗರದ ಭಾಗವತರ ನೂತನ ಗೃಹ ಮಂಟಪದ ಹಾಗೂ ತ್ಯಾಗರಾಜರ ಪ್ರಸ್ತಾಪವನ್ನು ಕಾಣಬಹುದು.

ಮೈಸೂರಿಗೆ ಆಗಮನ: ರಾಯರು ಮೈಸೂರಿಗೆ ಆಗಮಿಸಿದಾಗ ಸುಮಾರು ೩೦ ವರ್ಷದ ಪ್ರಾಯದವರೆಂದು ತಿಳಿದು ಬರುತ್ತದೆ. ಆಗ ಮುಮ್ಮಡಿ ಕೃಷ್ಣರಾಜ ಒಡೆಯರು ಆಳುತ್ತಿದ್ದ ಸಮಯ. ಗಿರಂಪೇಟೆಯಲ್ಲಿದ್ದ ತಮ್ಮ ಮನೆಯನ್ನು ಒಬ್ಬ ಗೃಹಸ್ಥನಿಗೆ ದಾನ ಮಾಡಿ ಬಮದರಂತೆ. ರಾಯರು ತಾವಾಗಿಯೇ ಮೈಸೂರಿಗೆ ಬಂದರೋ ಅಥವಾ ಕೊಪ್ಪರಂ ಚಿನ್ನಮುನಿ ಸ್ವಾಮಿ, ಪೆದ್ದಮುನಿ ಸ್ವಾಮಿ ಶೆಟ್ಟಿ ಸಹೋದರರು ಅವರನ್ನು ಕರೆತಂದರೋ ಯಾವುದೂ ಖಚಿತವಾಗಿ ತಿಳಿದು ಬರುವುದಿಲ್ಲ. ಆದರೂ ಶ್ರೇಷ್ಠಿ ಸಹೋದರರು ರಾಯರ ಸಂಗೀತಕ್ಕೆ ಮರುಳಾಗಿ, ರಾಯರ ವಾಸಕ್ಕೆ ಉಚಿತವಾಗಿ ಮನೆಯನ್ನು ಕೊಟ್ಟಿದ್ದ ವಿಷಯವು ತಿಳಿದು ಬರುತ್ತದೆ. ಒಟ್ಟಾರೆ ರಾಯರು ಮೈಸೂರಿನವರಲ್ಲದಿದ್ದರೂ ಮೈಸೂರಿನಲ್ಲಿಯೇ ಸುಮಾರು ೫೦ ವರ್ಷಗಳ ಕಾಲ ನೆಲೆಸಿ ‘ಮೈಸೂರು ಸದಾಶಿವರಾಯ’ರೆಂದೇ ಪ್ರಖ್ಯಾತಿ ಹೊಂದಿದರು.

ವ್ಯಕ್ತಿತ್ವ: “ರಾಯರದು ಸಾಮಾನ್ಯ ಎತ್ತರ, ಧೃಡಕಾಯರು, ವಿಶಾಲವಾದ ಹಣೆ, ಕಾಂತಿಯುತವಾದ ಕಣ್ಣುಗಳು, ಗಿರಲು ಮೀಸೆ, ಮುಖದಲ್ಲಿ ಸಿಂಹಠೀವಿ, ನಿರಾಡಂಬರದ ಉಡಿಗೆ, ರಾಜ ಗಾಂಭೀರ್ಯದ ನಡೆನುಡಿ, ಮಧುರವಾದ ಶಾರೀರ ಸಂಪತ್ತು ಕಂಡೊಡನೆಯೇ ಗೌರವಿಸಬೇಕೆಂಬ ಮನೋಭಾವವನ್ನು ಬೆಳೆಸುವ ಠೀವಿ” ಇದು ಸಂಗೀತ ಶಾಸ್ತ್ರವಿಶಾರದ ಮೈಸೂರು ವಾಸುದೇವಾಚಾರ್ಯರ ನಿರೂಪಣೆ. ರಾಯರ ಮೊಮ್ಮಕ್ಕಳೇ ಆದ ಸೋನಾಬಾಯಿಯವರು ರಾಯರ ಭಾವಚಿತ್ರವನ್ನು ನೋಡಿದ್ದ ನೆನಪಿನಿಂದ ಕೊಟ್ಟಿರುವ ನಿರೂಪಣೆ ಹೀಗಿದೆ. “ರಾಯರು ತಮ್ಮ ಮಂಡಿಗಳ ಮೇಲೆರಡು ಮೊಳಕೈಗಳನ್ನು ಊರಿಕೊಂಡು, ಅಂಗೈಗಳಲ್ಲಿ ಗಲ್ಲವನ್ನಿಟ್ಟುಕೊಂಡು ಕುಳಿತಿದ್ದರು. ಪಂಚೆಯನ್ನುಟ್ಟು ಅಂಗಿಯನ್ನು ತೊಟ್ಟು ಪಾಗನ್ನಿಟ್ಟಿದ್ದರು. ಅವರ ವಿಶಾಲವಾದ ಗುಂಡು ಮುಖದಲ್ಲಿ ಹೊಳೆವ ಕಣ್ಣುಗಳು, ಗಿರಲು ಮೀಸೆಯು, ಒಪ್ಪುತ್ತಿದ್ದವು”. ಈಗ ವೆಂಕಟರಮಣ ಭಾಗವತರ ಮನೆಯಲ್ಲಿರುವ ರಾಯರ ಭಾವ ಚಿತ್ರವೊಂದೇ ಆಧಾರ. ಈ ಚಿತ್ರದ ಎಡ ಹಾಗೂ ಬಲ ಪಾರ್ಶ್ವ ಮುಖವುಳ್ಳ ರಾಯರ ಚಿತ್ರವು ಪ್ರಕಟವಾಗಿದೆ.

ರಾಯರದು ಬಹಳ ಉದಾರವಾದ ಮನಸ್ಸು. ಅತಿಥಿ ಸತ್ಕಾರಕ್ಕೆ ಕಂಕಣಬದ್ದರಾಗಿ ನಿಂತ ಧೀಮಂತ ವ್ಯಕ್ತಿ. ಪ್ರತಿದಿನ ಇವರ ಮನೆಯಲ್ಲಿ ಕನಿಷ್ಠ ಪಕ್ಷ ಇಪ್ಪತ್ತೈದು ಮಂದಿಗಾದರೂ ಊಟದ ವ್ಯವಸ್ಥೆಯಾಗಿರುತ್ತಿತ್ತು. ಇವರೇ ಸ್ವತಃ ಬಾಗಿಲ ಮುಂದೆ ನಿಂತು ಸೊಮಟಕಟ್ಟಿ ಅತಿಧಿಗಳನ್ನು ಆಹ್ವಾನಿಸುತ್ತಿದ್ದರಂತೆ. ಜೊತೆಗೆ ತಾವೇ ತುಪ್ಪವನ್ನು ನೀರಿನಂತೆ ಬಡಿಸುತ್ತಿದ್ದರಂತೆ. ಇವರ ಸತ್ಕಾರಕ್ಕೆ ಮಣಿದು ಬಂದ ಬ್ರಾಹ್ಮಣರಿಗೆ ಭೈರಿ ಭೋಜನ, ಧಾರಾಳದ ದಕ್ಷಿಣೆ. ಇವರು ಸಾಕಷ್ಟು ಸ್ಥಿತಿವಂತರಾಗಿದ್ದಿರಬಹುದೆಂದು ಊಹಿಸಬಹುದು.

ಒಮ್ಮೆ ಮೈಸೂರಿನ ಜವಳಿ ವರ್ತಕರೊಬ್ಬರು (ಆರುವೇಟ್ಟ ರಾಮಸ್ವಾಮಿ ಶೆಟ್ಟಿ, ಕೊಪ್ಪರಂ ರಾಮಸ್ವಾಮಿ ಶೆಟ್ಟಿ ಎಂಬ ಎರಡು ಅಭಿಪ್ರಾಯ.) ವ್ಯಾಪಾರಕ್ಕಾಗಿ ನೆರೆ ರಾಜ್ಯಕ್ಕೆ ಹೋಗುವ ಸಲುವಾಗಿ, ವ್ಯಾಪಾರವನ್ನು ರಾಯರಿಗೆ ಒಪ್ಪಿಸಿದ್ದರಂತೆ. ರಾಯರ ಮೃದು ಸ್ವಭಾವದ ಪರಿಚಯವಿದ್ದ ಜನರು ಕಷ್ಟಸುಖವನ್ನು ತೋಡಿಕೊಂಡು, ಬಟ್ಟೆಗಳನ್ನು ತೆಗೆದುಕೊಂಡು ಹೋದರಂತೆ. ಇದರಿಂದ ಬಹಳ ಬೇಗ ಅಂಗಡಿಯಲ್ಲಿದ್ದ ಬಟ್ಟೆಗಳೆಲ್ಲ ಬರಿದಾಗಿ, ಶೆಟ್ಟರು ಬರುವ ವೇಳೆಗೆ ಅಂಗಡಿ ಮುಚ್ಚಿದ್ದರಂತೆ. ಶೆಟ್ಟರಿಗೆ ತಾವು ಎಲ್ಲ ಬಟ್ಟೆಗಳನ್ನು ದಾನ ಮಾಡಿದೆನಂತಲೂ. ‘ಕೃಷ್ಣಾರ್ಪಣ’ವೆಂದು ಪುಣ್ಯ ಸಂಪಾದಿಸುವಿರೊ ಅಥವಾ ದುಡ್ಡನ್ನು ಪಡೆದು ಪುಣ್ಯದ ಫಲವನ್ನು ಬಿಟ್ಟುಕೊಡುವಿರೋ ಎಂದು ಕೇಳಿದಾಗ ಶೆಟ್ಟರು ತಮಗೇ ಪುಣ್ಯ ಫಲ ಲಭಿಸಲಿ ಎಂದರಂತೆ. ಮುಂದೆ ಶೆಟ್ಟರಿಗೆ ವ್ಯಾಪಾರದಲ್ಲಿ ಸಾಕಷ್ಟು ಅಭಿವೃದ್ಧಿಯಾಯಿತೆಂದು ಪ್ರತೀತಿ.

ಮಧುರೈ ಮೀನಾಕ್ಷಿ ದೇವಿಯ ಉತ್ಸವ ಕಾಲಕ್ಕೆ ರಾಯರು ಒಮ್ಮೆ ಹೋಗಿದ್ದ ಸಂದರ್ಭ. ಅಪರಿಚಿತರ ಜೊತೆಗೆ ಉತ್ಸವದಲ್ಲಿ ಪಾಲ್ಗೊಂಡ ರಾಯರು ತಮ್ಮ ಗಾಯನದಿಂದ ಎಲ್ಲರಿಗೂ ಪರಿಚಿತರಾಗಿ, ತಿರುಮಲ ನಾಯಕರಿಂದ ಧನ, ಕನಕ, ವಸ್ತ್ರಾದಿಗಳನ್ನು ಮತ್ತು ಒಂದು ಕುದುರೆಯನ್ನು ಪಡೆದು ಸನ್ಮಾನಿತರಾದರಂತೆ. ಅಲ್ಲಿಂದ ಬರುವಾಗ ಚಾಮರಾಜನಗರದಲ್ಲಿದ್ದ ತಮ್ಮ ಬಂಧುವೊಬ್ಬರ ಮನೆಗೆ ಬಂದು ನಡೆಯಲಿದ್ದ ಮದುವೆಗೆ ತಾವು ಗಳಿಸಿದ್ದೆಲ್ಲವನ್ನೂ ಕೊಟ್ಟುಬಿಟ್ಟರಂತೆ. ರಾಯರ ಉದಾರತೆ, ನಿಸ್ವಾರ್ಥತೆ ಇದೊಂದು ನಿದರ್ಶನ.

ರಾಯರ ಮೃದು ಮನಸ್ಸನ್ನು ಸೂಚಿಸುವ ಪ್ರಸಂಗ ವೊಂದಿಲ್ಲಿದೆ. ಪ್ರತಿದಿನ ಬೆಳಗ್ಗೆ ರಾಯರ ಮನೆಯ ಮುಂದೆ ದಾಸರು ಭಿಕ್ಷೆ ಬೇಡುವ ನೆಪದಲ್ಲಿ ಬಂದು ಹೇಗಾದರೊಂದು ಹಾಡಿ ಭಿಕ್ಷೆ ಪಡೆದು ಹೋಗುವ ವಾಡಿಕೆ. ಹೀಗೊಬ್ಬ ದಾಸರು ಒಮ್ಮೆ ಹಾಡಲು, ರಾಯರ ಶಿಷ್ಯರು ಅಣಕಿಸಿದಾಗ, ನೊಂದ ರಾಯರು ಶಿಷ್ಯರ ಪರವಾಗಿ ಕ್ಷಮೆಯನ್ನು ಕೋರಿ, ದಾಸರಿಗೆ ಫಲತಾಂಬೂಲಗಳನ್ನು, ಸಂಭಾವನೆಯನ್ನು ಕೊಟ್ಟರಂತೆ. ನಂತರ ಶಿಷ್ಯರಿಗೆ “ಸಂಗೀತವನ್ನು ಹಿಂಸಿಸಬಾರದು, ಯಾರನ್ನೂ ನೋಯಿಸಬಾರದು, ಗಾನಾಭಿಮಾನಿ ದೇವತೆಗಳು ನೊಂದುಕೊಂಡಾರು” ಎಂದು ಬುದ್ಧಿವಾದ ಹೇಳಿದ ಉಲ್ಲೇಖವಿದೆ.

ರಾಯರ ಪ್ರಶಂಸೆಗೆ ತೀರ್ಥಹಳ್ಳಿಯ ಗುಂಡಾಚಾರ್ಯರು ಪಾತ್ರರಾಗಿದ್ದರು. ಗುಂಡಾಚಾರ್ಯರ ಹರಿಕಥೆ ಕೇಳುವ ಮೊದಲು ರಾಐರಿಗೆ ಹರಿಕಥೆಯಲ್ಲಿ ಆಸಕ್ತಿಯಿರಲಿಲ್ಲ. ಕಾರಣ, ಕೀರ್ತನಕಾರರು ಹೊಟ್ಟೆಪಾಡಿಗೆ ಪ್ರಸಂಗಗಳನ್ನು ಬಾಯಿಪಾಠ ಮಾಡಿ ಒದರುತ್ತಾರೆಂಬ ಮನೋಭಾವ ರಾಯರದಾಗಿತ್ತಂತೆ. ಆದರೆ ಗುಂಡಾಚಾರ್ಯರ ಮಾತು ಬೇರೆಯದಾಗಿತ್ತು. ಒಳ್ಳೆ ಶಾರೀರ, ಪಾಂಡಿತ್ಯವಿದ್ದು ಅತ್ಯುತ್ತಮ ನಿರೂಪಕರಾಗಿದ್ದ ಕಾರಣ, ಶೆಟ್ಟರ ಒತ್ತಾಯಕ್ಕೆ ಹರಿಕಥೆಯನ್ನು ಕೇಳಿ, ಪ್ರಸನ್ನರಾಗಿ ಅರ್ಧ ಗಂಟೆಯ ಕಾಲ ಮಾತ್ರವೇ ಕೇಳಲು ಬಂದವರು ಪೂರ್ತಿಯಾಗಿ ಕೇಳಿಕೊಂಡು, ಆಚಾರ್ಯರಿಗೆ ಸಕಲ ರೀತಿಯಿಂದ ಮರ್ಯಾದೆ ಮಾಡಿ ಕಳುಹಿಸಿಕೊಟ್ಟರಂತೆ.

ರಾಯರು ಒಮ್ಮೆ ಸ್ವರಚಿತವಾದ ಹರಿಕಾಂಭೋಜಿ ರಾಗದ ‘ಸಾಕೇತನಗರನಾಥ’ ಎಂಬ ಕೃತಿಯನ್ನು ವೀಣೆ ಸುಬ್ಬಣ್ಣ, ಶೇಷಣ್ಣನವರಿಗೆ ಪಾಠ ಮಾಡಿ ಕಚೇರಿ ಮಾಡಿಸಿದ್ದರಂತೆ. ಶಿಷ್ಯರ ಪ್ರತಿಭೆಯನ್ನು ಕಂಡು ರಾಯರು ‘ನಿಮಗಾಗಿಯೇ ರಚಿಸಿದಂತಿದೆ!’ ಎಂದು ತಮ್ಮ ಮೆಚ್ಚುಗೆಯನ್ನು ಅಭಿವ್ಯಕ್ತ ಪಡಿಸಿ, ಭೇದವಿಲ್ಲದ ಬಿಚ್ಚು ಮನಸ್ಸಿನ ಸ್ವಭಾವವನ್ನು ಕಾಣಿಸಿದ್ದಾರೆ. ಮತ್ತೊಮ್ಮೆ ಇದೇ ಶಿಷ್ಯರಿಗೆ ಕಾಂಭೋಜಿ ರಾಗದ ‘ಸಾಮ್ರಾಜ್ಯ-ದಾಯಕೇಶ’ ಕೃತಿ ಪಾಠ ಮಾಡುತ್ತ, ಚರಣದ ಭಾಗವನ್ನು ವಿನ್ಯಾಸ ಮಾಡುತ್ತ ತನ್ಮಯರಾಗಿ ಹಾಡುತ್ತಿದ್ದ ಸಂದರ್ಭ. ಒಂದು ಸರ್ಪರಾಯರ ತೋಳನ್ನು ಬಳಸಿಕೊಂಡು, ಭುಜದ ಮೇಲೆ ಹೆಡೆಯಾಡಿಸುತ್ತ ಕೂತಿರುವ ದೃಶ್ಯ ಹೆದರಿ ನಿಂತ ಶಿಷ್ಯರು ಹಾವು ಹೋದ ಮೇಲೆ ಧೈರ್ಯವಹಿಸಿ ಹತ್ತಿರ ಬಂದಾಗ, ನಡೆದುದರ ಬಗ್ಗೆ ಕೇಳಿದ ರಾಯರು ಪರಮಾಶ್ಚರ್ಯಗಳಿಂದ ‘ಏಕಾಮ್ರೇಶನ ದರ್ಶನವಾದ ನೀವೇ ಧನ್ಯರು’ ಎಂದು ಸಂತಸಪಟ್ಟರಂತೆ.

ರಾಯರು ಆಗಿನ ಕಾಲದಲ್ಲಿ ಪ್ರಖ್ಯಾತ ವಿದ್ವಾಂಸರಾಗಿದ್ದರೆಂಬುದಕ್ಕೆ ಇಬ್ಬರು ಖ್ಯಾತ ವಿದ್ವಾಂಸರ ನಡುವೆ ನಡೆದ ಸ್ಪರ್ಧೆಗೆ ತೀರ್ಪುಗಾರರಾಗಿ ಮದ್ರಾಸಿನಿಮದ ಬಂದ ನಿಮಂತ್ರಣವೇ ಸಾಕ್ಷಿ. ಸರಳ ಸ್ವಭಾವದ ರಾಯರು ತಮ್ಮ ತೀರ್ಪನ್ನು ಕೊಡಲು, ಕೋಪಗ್ರಸ್ತರಾದ ಸ್ಪರ್ಧಿಗಳು ನಮ್ಮನ್ನು ಅಳೆಯಲು ನಿಮಗಿರುವ ಅರ್ಹತೆಯೇನು’ ಎಂದು ಪ್ರಶ್ನಿಸಿ, ಯಾವುದೋ ಕಷ್ಟವಾದ ರಾಗ ತಾಳಗಳಲ್ಲಿ, ಇಷ್ಟು ಆವರ್ತ ಸಂಖ್ಯೆಯ ಸ್ವರ ವಿನ್ಯಾಸ ಮಾಡಿ ಎತ್ತುಗಡೆಗೆ ಬನ್ನಿರೆಂದು ಹೇಳಲು ರಾಯರು ಯೋಚಿಸದೆ, ಅಚ್ಚುಕಟ್ಟಾಗಿ, ನಿರರ್ಗಳವಾಗಿ ಹಾಡಿ ತೋರಿಸಿದರಂತೆ. ಸೋತ ಆ ಸ್ಪರ್ಧಿಗಳು ರಾಯರಿಗೆ ನಮಸ್ಕರಿಸಿ ಕ್ಷಮಾಪಣೆ ಕೇಳಿದ ಘಟನೆ ಬಹಳ ರೋಚಕವಾಗಿದೆ.

ರಾಯರು ಮತ್ತೊಮ್ಮೆ ತಂಜಾವೂರಿನಲ್ಲಿ ನಡೆದ ಸ್ಪರ್ಧೆಗೆ ತೀರ್ಪುಗಾರರಾಗಿ ಹೋಗಿದ್ದರಂತೆ. ಸ್ಪರ್ಧಾಳುಗಳ ಪಾಂಡಿತ್ಯವನ್ನು ಗ್ರಹಿಸಿದ ರಾಯರು ಇಬ್ಬರಿಗೂ ಇಟ್ಟಿದ್ದ ಎರಡು ಬಹುಮಾನಗಳನ್ನು ಕೊಟ್ಟು ಬಿಟ್ಟರಂತೆ. ಪ್ರೇಕ್ಷಕರು ಇದನ್ನು ಪ್ರಶ್ನಿಸಿದಾಗ, ರಾಯರು ಸಮಾನವಾಗಿ ತೀರ್ಪಿತ್ತಿಲ್ಲವೆಂದು, ಹೆಚ್ಚು ಪಾಂಡಿತ್ಯವಿದ್ದ ಸ್ಪರ್ಧಿಗೆ ಬಲಗೈಯಲ್ಲಿ ಮತ್ತು ಮತ್ತೊಬ್ಬರಿಗೆ ಎಡಗೈಯಲ್ಲಿ ತೀರ್ಪಿತ್ತಿರುವರೆಂದು ಹೇಳಿದಂತೆ. ತೀರ್ಪನ್ನು ಘೋಷಿಸದೆಯೆ ಕೈಯಲ್ಲಿ ತೀರ್ಪಿತ್ತಿರುವ ರಾಯರ ಜಾಣತನವನ್ನು ಕಾಣಬಹುದು. ರಾಯರ ಆಸ್ತಿಕರು. ನರಸಿಂಹ ದೇವರ ಉಪಾಸಕರು. ಅವರದೇ ಆದ ‘ನರಸಿಂಹುಡುದಯಿಂಚೆನು’ ಕಮಲಾಮನೋಹರಿ ರಾಗದ ಕೃತಿಯ ಮನೋಜ್ಞ ಪ್ರಸಂಗದ ಚಿತ್ರಣವಿಲ್ಲಿದೆ. ರಾಯರ ಕಚೇರಿಯಲ್ಲೊಮ್ಮೆ ‘ನರಸಿಂಹುಡು’ ಕೃತಿಯನ್ನು ಹಾಡಲು ಒತ್ತಾಯ ಮಾಡಿದಾಗ, ಮಡಿ ನಿಷ್ಠೆಯಿಂದ ದೇವರ ಮುಂದೆ ಹಾಡುವ ಸಂಪ್ರದಾಯವಿದ್ದ ಕಾರಣ ನಿರಾಕರಿಸಿದರೂ ಸಹ, ಒತ್ತಾಯ ಹೆಚ್ಚಾಗಿ, ಹಾಡಲೇಬೇಕಾದ ಸಂದರ್ಭ. ಹಾಡುತ್ತಿದ್ದ ಹಾಗೆಯೇ ಅಲ್ಲೇ ನೇತುಹಾಕಿದ್ದ ನರಸಿಂಹನ ಪಟದ ಗಾಜು ಸೀಳಿ ಎಲ್ಲರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿದ ಘಟನೆಯನ್ನು ವೀಣೆ ಸುಬ್ಬಣ್ಣನವರು ಪ್ರತ್ಯಕ್ಷವಾಗಿ ನೋಡಿದುದರ ಬಗ್ಗೆ ತಮ್ಮ ೮೦ನೇ ವರ್ಷದ ಷಷ್ಠಿಪೂರ್ತಿ ಸಮಾರಂಭದಲ್ಲಿ ಮಾತನಾಡಿದ್ದಾರೆ. ‘ವೈಣಿಕ ಪ್ರವೀಣ ವೀಣೆ ಸುಬ್ಬಣ್ಣ’ ಹೊತ್ತಗೆಯಲ್ಲಿ ಇದರ ಉಲ್ಲೇಖವಿದೆ.

ಮೈಸೂರಿನಲ್ಲಿ ರಾಮೋತ್ಸವವನ್ನು ಪ್ರಾರಂಭಿಸಿದ ಯಶಸ್ಸು ರಾಯರಿಗೆ ಸಲ್ಲುತ್ತದೆ. ರಾಯರು ಪೂಜಿಸುತ್ತಿದ್ದ ದೇವರ ಮಂಟಪವು ಈಗಿನ ಅಶೋಕ ರಸ್ತೆಯಲ್ಲಿರುವ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಇಂದಿಗೂ ಇರುವುದನ್ನು ನೋಡಬಹುದು. ಶಿಥಿಲವಾಗಿದ್ದರೂ ಸಹ ಮೂಲ ರೂಪವನ್ನು ಕಳೆದು ಕೊಳ್ಳದೆ ಇರುವ ಈ ಸುಂದರ ಮಂಟಪ ಸುಮಾರು ೪-೫ ಅಡಿಯಿದ್ದು ಈಗಲೂ ದಸರಾ ಮತ್ತು ರಾಮೋತ್ಸವಗಳಲ್ಲಿ ಉಪಯೋಗಿಸಲ್ಪಡುತ್ತಿದೆ.

ರಾಯರ ಅಸಾಧಾರಣ ಪ್ರತಿಭೆಯನ್ನು ಕಾಣುವಂತಹ ಒಂದು ಪ್ರಸಂಗವಿದೆ. ಒಮ್ಮೆ ಮದರಾಸಿನ ಒಬ್ಬ ವಿದ್ವಾಂಸರು ರಾಯರ ಭಜನೆ ಮನೆಗೆ ಬಂದಾಗ ತೋಡಿ ರಾಗವನ್ನು ಹಾಡಲು ಕೇಳಿದಾಗ, ಆ ವಿದ್ವಾಂಸರು ಒಬ್ಬ ಜಮೀನುದಾರರಲ್ಲಿ ಒತ್ತೆಯಿಟ್ಟಿರುವುದಾಗಿ ಹೇಳಿದರಂತೆ. ರಾಯರು ಮರುದಿನ ತೋಡಿರಾಗವನ್ನು ಸವಿಸ್ತಾರವಾಗಿ. ರಾತ್ರಿ ಹತ್ತು ಘಂಟೆಯಿಂದ ಮರುದಿನ ಬೆಳಗಿನ ಜಾವವಾದರೂ ಮುಗಿಯುವ ಸೂಚನೆಯೇ ಕಂಡು ಬರದಂತೆ ಆಲಾಪಿಸತೊಡಗಿದರು. ಮದರಾಸಿನ ವಿದ್ವಾಂಸರು ತಾವು ಗಳಿಸಿದ್ದ ಬಿರುದು ಬಾವಲಿಗಳನ್ನೆಲ್ಲ ರಾಯರ ಪಾದಕ್ಕರ್ಪಿಸಿ, ಅವರ ಬಳಿಯಲ್ಲೆ ಶಿಷ್ಯರಾಗಿ, ಗುರುಕುಲವಾಸದಲ್ಲಿದ್ದು ಬಿಟ್ಟರಂತೆ. ಮಾರುವೇಷದಲ್ಲಿ ಬಂದಿದ್ದ ಮುಮ್ಮಡಿಕೃಷ್ಣರಾಜರು ಆನಂದಿತರಾಗಿ ರಾಯರನ್ನು ಅಭಿನಂದಿಸಿ ಅರಮನೆಗೆ ತೆರಳಿದರಂತೆ.

ಗಾನ ವಿಶಾರದ ಬಿಡಾರಂ ಕೃಷ್ಣಪ್ಪನವರು ಸ್ವತಃ ಒಬ್ಬ ವೃದ್ಧೆಯನ್ನು ರಾಯರ ಗಾಯನದ ವೈಖರಿಯ ಬಗೆಗೆ ಕೇಳಿದಾಗ “ಅಪ್ಪಾ ಅದನ್ನೇನೆಂದು ಹೇಳಬಲ್ಲೆ! ಪೆದ್ದದೇವುಂಡನಿ  ನಿನು ನಮ್ಮಿತಿರ ಎಂದು ಹಾಡಲು’ ಆರಂಭಿಸಿದರೆ ಹತ್ತಿಸಿದ ದೀಪಗಳೆಲ್ಲ ಅದುರುತ್ತಿದ್ದವು. ಶೋತೃಗಳಿಗೆ ಮೈಮೇಲೆ ಎಚ್ಚರಿಕೆಯೇ ಇರುತ್ತಿರಲಿಲ್ಲ” ಎಂದರಂತೆ. ಇದು ಸ್ವತಃ ಕೃಷ್ಣಪ್ಪನವರೇ ಹೇಳಿದ ಮಾತುಗಳೆಂದು ತಿಳಿದುಬಂದಿದೆ.

ರಾಯರ ನಿಕಟ ಸಂಪರ್ಕವನ್ನು ಹೊಂದಿದ್ದವರಲ್ಲಿ ದಿವಾನ್‌ವೆಂಕಟೇ ಅರಸ್‌ರವರು ಒಬ್ಬರು. ರಾಯರೊಮ್ಮೆ ಅನಾರೋಗ್ಯಕ್ಕೆ ಒಳಗಾದಾಗ, ಪತ್ನಿ ಸುಂದರಾಬಾಯಿಯವರು, ನಂಜನಗೂಡಿನ ನಂಜುಂಡೇಶ್ವರನಲ್ಲಿ ಬಾಯಿಗೆ ಬೀಗ ಧರಿಸಿ ಸೇವಿಸುವುದಾಗಿ ವಿಚಿತ್ರ ಹರಕೆ ಹೊತ್ತಿದ್ದರೆಂತೆ. ಇದನ್ನು ಅರಿತ ಅರಸುರವರು ರಾಯರು ಚೇತರಿಸಿಕೊಂಡ ನಂತರ, ತಾವು ಹರಕೆಯನ್ನು ತೀರಿಸುವುದಾಗಿ ಭಿನ್ನವಿಸಿಕೊಂಡು ಸೇವಿಸಿದರಂತೆ.

ತಿರುವಯ್ಯಾರ್ ತೀರ್ಥಯಾತ್ರೆಯ ಸಮಯದಲ್ಲಿ ರಾಯರು ಪಟ್ನಂ ಸುಬ್ರಹ್ಮಣ್ಯ ಅಯ್ಯರ್‌ಅವರನ್ನು ಭೇಟಿ ಮಾಡಿದಾಗ, ಪಟ್ಲಂ ಅವರು ‘ಲೋಕಾವನ ಚತುರ ಮಾಂ ಪಾಹಿ’ ಎಂಬ ಬೇಗಡೆ ಪಲ್ಲವಿಗೆ ರಾಗ, ತಾನವನ್ನು ದೀರ್ಘವಾಗಿ ಹಾಡಿದಾಗ ರಾಯರು ಭಾವ ಪರವಶರಾಗಿ ‘ಬೇಗಡೆ ರಾಗಕ್ಕಾಗಿಯೇ ನೀವು ಅವತರಿಸಿದ್ದೀರೋ, ನಿಮಗಾಗಿಯೇ ಬೇಗಡೆರಾಗ ರೂಪುಗೊಂಡಿದೆಯೋ’ ಎಂದು ಹೇಳಿ ‘ಬೇಗಡೆ ಸುಬ್ರಹ್ಮಣ್ಯ ಅಯ್ಯರ್’ ಎಂದು ಕರೆದರಂತೆ.

ಕ್ಷೇತ್ರ ಪರ್ಯಟನೆ: ಮದ್ರಾಸಿಗೆ ತೀರ್ಪಿನ ನಿಮಿತ್ತವಾಗಿ ಹೋಗಿದ್ದ ರಾಯರು ದಕ್ಷಿಣ ಭಾರತದ ತೀರ್ಥಕ್ಷೇತ್ರಗಳ ಪರ್ಯಟನೆ ಕೈಗೊಂಡು, ಅದೇ ಸಂದರ್ಭದಲ್ಲಿ ಪಟ್ನಂ ಅವರನ್ನು ಸಹ ಭೇಟಿಯಾಗಿದ್ದರೆಂದು ತಿಳಿದು ಬರುತ್ತದೆ. ರಾಯರ ಕ್ಷೇತ್ರಕೃತಿಗಳಿಂದ ತಿಳಿಯುವ ವಿಷಯಗಳು ಹೀಗಿದೆ. ಮದರಾಸ್‌ತಿರುವಲ್ಲಿಕ್ಕೇಣಿ (ಟ್ರಿಪ್ಲಿಕೇನ್‌) ಭಾಗದಲ್ಲಿರುವ ಶ್ರೀ ಪಾರ್ಥಸಾರಥಿ ದೇವರ ಪರವಾಗಿ ‘ಶ್ರೀ ಪಾರ್ಥಸಾರಥೆ (ಭೈರವಿ) ಎಂಬ ಕೃತಿ, ಕಂಚಿಯಲ್ಲಿ ಶ್ರೀ ಏಕಾಮ್ರನಾಥೇಶ್ವರನ ದರ್ಶನದಿಂದ ‘ಸಾಮ್ರಾಜ್ಯದಾಯಕೇಶ’ (ಕಾಂಬೋಜಿ) ಮಹಾದೇವ’ (ಸುರಟಿ), ಶ್ರೀ ಕಾಮಾಕ್ಷಿದೇವಿಯನ್ನಧಿಕರಿಸಿ ‘ಓ ರಾಜರಾಜೇಶ್ವರಿ’(ಕಲ್ಯಾಣಿ), ‘ಕನುಗೊನಿ’(ಕಲ್ಯಾಣಿ), ‘ಶ್ರೀ ಕಾಮಕೋಟಿ’ (ಸಾವೇರಿ). ‘ಪಾಮರುನಿ (ಕಲ್ಯಾಣಿ) ಎಂಬ ನಾಲ್ಕು ಕೃತಿಗಳು ಲಭ್ಯವಿದೆ. ವಿಷ್ಣು ಕಂಚಿಯ ವರದರಾಜ ಸ್ವಾಮಿಯ ದೇವಾಲಯದ ಮಹಾಲಕ್ಷ್ಮಿಸ್ತುತಿ ‘ಸಾಗರಕನ್ಯಕಾ’(ಬೇಗಡೆ).

ಎದುರಿಗೆ ಶ್ರೀರಂಗ ದೇವರ ಉತ್ಸವವಮೂರ್ತಿಯನ್ನು ಕಂಡು ಭಕ್ತಿ ಭಾವಪರವಶರಾಗಿ, ‘ಪರಮಾದ್ಭುತಮೈನ’,(ಕಮಾಚ್‌) ಎಂಬುದಾಗಿ, ಪಳನಿ ಕ್ಷೇತ್ರದ ಶ್ರೀ ವೇಲಾಯುಧ ಸ್ವಾಮಿಯ ಪರವಾಗಿ ‘ಶ್ರೀ ಸುಬ್ರಹ್ಮಣ್ಯ’ (ಕಾಂಭೋಜಿ) ಎಂತಲೂ, ಭವಾನಿಯಲ್ಲಿ ‘ಶ್ರೀ ಲಕ್ಷ್ಮೀರಮಣ’ ಎಂಬ ಕೃತಿಯನ್ನು ರಚಿಸಿ, ಬೇಲೂರಿನ ‘ಶ್ರೀ ಚೆನ್ನಕೇಶವ ರಾಯನ ಬಗ್ಗೆ ‘ಸ್ತ್ರೀವೇಷಮುದಾಲ್ಚಿನ’ (ಮೋಹನ) ಎಂಬ ನಿಂದಾ ಸ್ತುತಿ ರಚನೆಯನ್ನು ಮಾಡಿದ್ದಾರೆ.

ಅವಸಾನ: ರಾಯರ ಅವಸಾನದ ಸನ್ನಿವೇಶ ಒಂದು ರೀತಿಯಲ್ಲಿ ಅಸದೃಶವಾಗಿದೆ. ರಾಯರು ಅಂದು ತಮ್ಮ ದಿನದ ಕೆಲಸ ಮುಗಿಸಿ, ಹೊರಗಿನ ಹಜಾರದಲ್ಲಿ ಉತ್ತರಾಭಿಮುಖವಾಗಿ ಕುಳಿತು ಮೆಲುದನಿಯಲ್ಲಿ ‘ಕಮಲಾಕಾಂತ ಸುಸ್ವಾಂತ’ ಎಂಬ ಲಲಿತ ರಾಗದ ಕೃತಿಯನ್ನು ಹಾಡುತ್ತ, ತುಪ್ಪವನ್ನು ನೆತ್ತಿಯಮೇಲೆ ಉಜ್ಜಿಕೊಂಡು, ಲಘುಶ್ವಾಸಧಾರಣೆ ಮಾಡಲು, ಬ್ರಹ್ಮರಂಧ್ರವು ಬಿರಿದು, ಪ್ರಾಣ ಜ್ಯೋತಿಯು ನಾದದಲ್ಲಿ ಐಕ್ಯವಾಯಿತು. ತಂಬೂರಿ ಮೊದಲಾದ ವಾದ್ಯಗಳೆಲ್ಲವು ಅಸಮಯದಲ್ಲಿ ತನ್ನಷ್ಟಕ್ಕೆ ತಾನೆ ಮೊಳಗಿತೆಂಬುದು ಪ್ರತೀತಿ. ರಾಯರು ತಮ್ಮ ಅವಸಾನದ ಬಗ್ಗೆ ಮುಂಚಿತವಾಗಿಯೇ ತಿಳಿದಿದ್ದರೆಂದು ಊಹಿಸಬಹುದಾಗಿದೆ.

ರಾಯರ ಮಕ್ಕಳು ಹಾಗೂ ಶಿಷ್ಯರು: ರಾಯರಿಗೆ ಮಲ್ಹಾರಿರಾವ್‌, ಕೃಷ್ಣರಾವ್‌ಎಂಬ ಇಬ್ಬರು ಗಂಡುಮಕ್ಕಳು, ಲಕ್ಷ್ಮಿಬಾಯಿ, ಕಾಮಾಕ್ಷಿ ಬಾಯಿ, ಗೋಜಿ ಬಾಯಿ ಎಂಬ ಮೂವರು ಹೆಣ್ಣು ಮಕ್ಕಳಿದ್ದರೆಂಬುದು ತಿಳಿಯಲ್ಪಟ್ಟಿದೆ. ಇವರ ಮೊಮ್ಮಕ್ಕಳಾದ ಸರ್ಟನ್ ರಾಮರಾವ್‌(ಕರ್ಟನ್‌) ಎಂಬುವವರು ಶ್ರೀ ಜಯಚಾಮರಾಜೇಂದ್ರ ಒಡೆಯರ್‌(೧೮೬೮-೧೮೯೪) ಕಾಲದಲ್ಲಿ ‘ಕರ್ನಾಟಕ ನಾಟಕ ಮಂಡಳಿಯಲ್ಲಿ. ಅಭಿನಯಿಸಿ ಪ್ರಭುಗಳ ಕೃಪೆಗೆ ಪಾತ್ರರಾಗಿದ್ದರಂತೆ.

ರಾಯರ ಶಿಷ್ಯರುಗಳಲ್ಲಿ ಪ್ರಖ್ಯಾತರಾದವರು ವೈಣಿಕ ಶಿಖಾಮಣಿ ವೀಣೆ ಶೇಷಣ್ಣನವರು, ವೈಣಿಕ ಪ್ರವೀಣ ಸುಬ್ಬಣ್ಣನವರು, ಹಾನಗಲ್‌ಚಿದಂಬರಯ್ಯನವರು, ಬೆಟ್ಟಪುರದ ಶಾಮಣ್ಣನವರು, ಚಿಕ್ಕನಾಯಕನ ಹಳ್ಳಿ ವೆಂಕಟೇಶಯ್ಯನವರು ಮತ್ತು ಗಂಜಾಂ ಸೂರ್ಯನಾರಾಯಣನವರು. ಚಿಂತಲಪಲ್ಲಿ ವೆಂಕಟರಾಯರು ಸಹ ತಮ್ಮ ಐದನೆಯ ವಯಸ್ಸಿನಲ್ಲಿ, ರಾಯರ ಬಳಿ ಐದು ವರ್ಷಗಳ ಕಾಲ ಶಿಷ್ಯರಾಗಿ ಸಂಗೀತ ಶಿಕ್ಷಣವನ್ನು ಪಡೆದಿದ್ದರೆಂದು ತಿಳಿಯಲ್ಪಡುತ್ತದೆ. ರಾಯರು ಹೆಂಗಸರಿಗೆ ಪಾಠ ಹೇಳಿಕೊಡುತ್ತಿರಲಿಲ್ಲ. ಒಮ್ಮೆ ಅಂತಹ ಪ್ರಮೇಯ ಬಂದಾಗ, ದಾಕ್ಷಿಣ್ಯಕ್ಕೊಳಗಾಗಲಿಚ್ಛಿಸದೆ ಕೆಲಕಾಲ ತಲೆ ಮರೆಸಿಕೊಂಡು ಹೊರಟು ಹೋಗಿದ್ದರಂತೆ.

ರಾಯರು ಕಾಲವಾದ ನಂತರ ಚಿಂತಲಪಲ್ಲಿ ವೆಂಕಟರಾಯರು ಹಾನಗಲ್‌ಚಿದಂಬರಯ್ಯನವರ ಹತ್ತಿರ ಶಿಷ್ಯವೃತ್ತಿಯನ್ನು ಮುಂದುವರೆಸಿಕೊಂಡು ಹೋಗಿರುವ ವಿಷಯವು ತಿಳಿದು ಬಂದಿದೆ. ರಾಯರ ಅನೇಕ ಕೃತಿಗಳನ್ನು ಇವರು ಸಂಗ್ರಹಿಸಿದ್ದು, ಇವರ ಹಸ್ತ ಪ್ರತಿಗಳು ಈಗಲೂ ಲಭ್ಯವಿದೆ. ಇವರ ಶಿಷ್ಯರೂ ಮಕ್ಕಳೂ ಆದ ಚಿಂತಲಪಲ್ಲಿ ರಾಮಚಂದ್ರರಾಯರು, ರಾಯರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವರು. ಅವರ ಮೊಮ್ಮಕ್ಕಳಾದ ವಿದ್ವಾನ್‌ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿಯವರು ಸಹ ರಾಯರ ಕೃತಿಗಳನ್ನೊಳಗೊಂಡ ಹೊತ್ತಗೆಯನ್ನು ಹೊರತಂದಿದ್ದಾರೆ.

ರಾಯರ ರಚನೆಗಳು ಅದರ ವೈಶಿಷ್ಟ್ಯ:ರಾಯರ ನೂರಾರು ಕೃತಿಗಳಹನ್ನು ಚಿದಂಬರಯ್ಯನವರು ಹಾಡುತ್ತಿದ್ದರೆಂದು ತಿಳಿದು ಬಂದಿದೆ. ರಾಯರ ಎಷ್ಟೋ ರಚನೆಗಳು ಬೆಳಕಿಗೆ ಬಾರದೆ ಹೋಗಿರುವುದು ದುರದೃಷ್ಟಕರವಾದ ಸಂಗತಿ. ಒಟ್ಟು ಪ್ರಕಟವಾದ ರಚನೆಗಳು ೬೫ ಸ್ವರ ರಹಿತವಾಗಿ ೫೫ ರಚನೆಗಳಾದರೆ, ಸ್ವರ ರಹಿತವಾಗಿ ೧೦ ರಚನೆಗಳು ಪ್ರಕಟವಾಗಿದೆ. ಇದರಲ್ಲಿ ಒಂದೊಂದು ತಾನವರ್ಣ, ಪದವರ್ಣ, ಸ್ವರಜತಿ, ರಾಗಮಾಲಿಕೆ, ಜಾವಳಿ, ತಿಲ್ಲಾನಗಳಿವೆ.

ರಾಯರ ರಚನೆಗಳಲ್ಲಿ ಒಂದು ವಿಶಿಷ್ಟವಾದ ಶೈಲಿಯನ್ನು ಮತ್ತು ಬಿಗಿತವನ್ನು ಕಾಣಬಹುದು. ಅಂತಹ ಒಂದು ರಚನೆ ಇದು ಕಾಮವರ್ಧಿನಿ ರಾಗದ ‘ಇಂತಚೌಕ’ ಆದಿತಾಳದ ತಾನವರ್ಣ, ಅಭ್ಯಾಸಗಾನಕ್ಕೆ ಯೋಗ್ಯವಾಗಿದೆ. ಹಂಸಧ್ವನಿ ರಾಗದ ‘ಶ್ರೀರಾಮಾಭಿರಾಮ’ ಎಂಬ ಸ್ವರಜತಿ, ಧನ್ಯಾಸಿ ರಾಗದ ‘ಏಮಗುವ’ ಪದವರ್ಣವು ಸಹ ಅಭ್ಯಾಸಗಾನಕ್ಕೆಂದೇ ರಚಿತವಾದ ರಚನೆಗಳು. ಮಹಾವೈದ್ಯನಾಥ ಅಯ್ಯರ್‌ರವರ ೭೨ ಮೇಳಕರ್ತರಾಗಮಾಲಿಕೆಯನ್ನು ನೆನಪಿಗೆತರುವಂತಹ ಕೃತಿ, ರಾಯರ ಪಂಚರಾಗಮಾಲಿಕೆ ‘ಪಂಚಬಾಣ’. ಈ ಕೃತಿಯಲ್ಲಿ ಐದು ರಾಗಗಳು ಕ್ರಮವಾಗಿ ತೋಡಿ (ಪಲ್ಲವಿ, ಅನುಪಲ್ಲವಿ), ಆಭೋಗಿ (೧ನೇ ಚರಣ), ಶಾಂಕರಾಭರಣ (೨ನೇ ಚರಣ), ಕಾಂಭೋಜಿ (೩ನೇ ಚರಣ), ಶಹನ್‌(೪ನೇ ಚರಣ). ಪಂಚರಾಗಗಳಲ್ಲೂ ರಾಗದ ಸ್ವರೂಪ ಪ್ರಾರಂಭದಲ್ಲೆ ಪ್ರಕಟವಾಗಿ, ಚಿಟ್ಟೆ ಸ್ವರಗಳೆಲ್ಲವೂ ಮಧ್ಯಮ ಕಾಲದಲ್ಲಿ ರಚಿತವಾಗಿದ್ದು, ಶಂಕರಾಭರಣ ಮತ್ತು ಶಹನ ರಾಗದ ಚಿಟ್ಟೆಸ್ವರಗಳು ಸಂಗತಿಗಳಿಂದ ಶೋಭಿತವಾಗಿದೆ. ಕಡೆಯ ರಾಗದ ಚಿಟ್ಟೆಸ್ವರದ ನಂತರ ವಿಲೋಮ ಕ್ರಮದಲ್ಲಿ ಒಂದೊಂದು ಆವರ್ತದಷ್ಟು ಚಿಟ್ಟೆಸ್ವರವು ಸಂಪ್ರದಾಯದಂತೆ ರಚಿಸಲ್ಪಟ್ಟಿದೆ. ಶ್ಲೇಷೆಯೊಂದಿಗೆ ರಾಗ ಮುದ್ರೆಯು ರಚಿತವಾಗಿರುವುದನ್ನು ಕಾಣಬಹುದು. ಇವರ ಪೂರ್ವಿಕಲ್ಯಾಣಿಯ ತಿಲ್ಲಾನವು ಚಿಕ್ಕದಾಗಿ ಚೊಕ್ಕದಾಗಿದ್ದರೂ ಸಹ ಘನವಾದ ರಚನೆಯಾಗಿದೆ. ವಿಳಂಬ ಕಾಲದಲ್ಲಿರುವ ಈ ರಚನೆಯ ಜೀವಾಳವೆಲ್ಲ ಅನುಪಲ್ಲವಿಯಲ್ಲಿದ್ದು, ವಿಶೇಷವಾಗಿ ನಾಲಿಗೆಯಪಳಗುವಿಕೆಗೆಂದೇ ರಚಿಸಲ್ಪಟ್ಟಿರುವ ಹಾಗಿದೆ. ದ್ರುತಕಾಲದ ಜತಿಗಳನ್ನು ಸಮರ್ಥವಾಗಿಹಾಡಲು ಪರಿಶ್ರಮದ ಅಗತ್ಯ ಕಂಡು ಬರುತ್ತದೆ. ಶೃಂಗಾರ ರಸ ಪ್ರಧಾನವಾದ ಅಠಾಣರಾಗದ ಜಾವಳಿಯು ಯಾರು ಬಳಸದೆಇರುವ ಮಧ್ಯಮ ಕಾಲ ಸಾಹಿತ್ಯದಿಂದ ರಚಿಸಲ್ಪಟ್ಟಿದ್ದು, ಈ ರಚನೆಯಲ್ಲಿ ವಿಶಿಷ್ಟವಾದ ಪ್ರಯೋಗವನ್ನು ಮಾಡಿ ಒಂದು ಹೊಸ ಆಯಾಮ ನೀಡಿದ್ದಾರೆ ರಾಯರು.

ರಾಯರ ಹಲವು ಕೃತಿಗಳಲ್ಲಿ ಆಲಂಕಾರಿಕಕ ಅಂಗಗಳಾದ ಚಿಟ್ಟೆಸ್ವರ ವೈವಿಧ್ಯಮಯವಾಗಿಯೂ ಅದಕ್ಕೆ ಸುಂದರವಾಗಿ ಹೊಂದಿಕೊಂಡು ಹೋಗುವಂತಹ ಸ್ವರ ಸಾಹಿತ್ಯದ ಜೋಡಣೆಯನ್ನೂ ಕಾಣಬಹುದು. ಮುತ್ತುಸ್ವಾಮಿ ದೀಕ್ಷಿತರು ರಚಿಸಿರುವಂತಹ ಮಧ್ಯಮ ಕಾಲ ಸಾಹಿತ್ಯವನ್ನು ರಾಯರ ಕೆಲವು ಕೃತಿಗಳಲ್ಲಿ ಕಾಣಬಹುದು. ತ್ರಿಸ್ಥಾಯಿ ಸಂಚಾರವನ್ನು ಕಾಣಬಹುದು. ರಚನೆಗಳಲ್ಲಿ ಮುಂಬರುವ ಸಂಚಾರವು ಕಲ್ಪನೆಗೆ ಎಟುಕದೆ ಅನೂಹ್ಯವಾದ ರೀತಿಯಲ್ಲಿ ಸಾಗುವುದು ರಾಯರ ರಚನೆಗಳ ವೈಶಿಷ್ಟ್ಯ.

ಜನಕ-ಜನ್ಯ ರಾಗಗಳಲ್ಲಿ ಅದರಲ್ಲೂ ಅಪರೂಪದ ಜನ್ಯರಾಗಗಳಲ್ಲಿ ರಾಯರು ರಚಿಸಿದ್ದಾರೆ. ಬಲಹಂಸ,ಗಂಭೀರನಾಟ, ಪೂರ್ಣಷಡ್ಜ, ಪುನ್ನಾಗತೋಡಿ, ಜಯಂತಸೇನ, ಕಿರಣಾವಳಿ ಮತ್ತು ಚಂದ್ರಚೂಡದಂತಹ ರಾಗಗಳಲ್ಲಿ ಇವರ ರಚನೆಗಳಿವೆ ಅದರಲ್ಲೂ ಚಂದ್ರಚೂಡದಂತಹ ರಾಗದಲ್ಲಿ ಇವರ ‘ನಮಾಮಿ ಶ್ರೀ ಮನ್‌ಮಹಾದೇವೇಂದ್ರ ಸರಸ್ವತಿ’ ಎಂಬ ಕೃತಿಯೊಂದೇ ಲಭ್ಯ. ಇವರ ರಚನೆಗಳು ಹೆಚ್ಚಾಗಿ ಆದಿತಾಳದಲ್ಲಿದ್ದರೆ, ಅಪರೂಪತಾಳವಾದ ಚೌತಾಳದಲ್ಲಿ ರಚಿಸುವ ಸಾಮರ್ಥ್ಯವನ್ನು ನೋಡಬಹುದು. ೨ ದ್ರುತ, ೨ ಅನುದ್ರುತವಿರುವ ಈ ತಾಳದಲ್ಲಿ ಇಲ್ಲಿಯವರೆಗೆ ಯಾವ ರಚನೆಯು ಕಂಡುಬಂದಿಲ್ಲ.

ಛಂದಸ್ಸು ಅಲಂಕಾರದ ದೃಷ್ಠಿಯಿಂದಲೂ ಸಹ ರಾಯರ ರಚನೆಗಳು ಶಾಸ್ತ್ರಬದ್ಧವಾಗಿ ರಚಿತವಾಗಿದೆ. ಆದಿಪ್ರಾಸ, ಅನುಪ್ರಾಸ, ಅಂತ್ಯಪ್ರಾಸವು ಹೇರಳವಾಗಿ ದೊರಕುತ್ತದೆ. ಯಮಕ, ಯತಿ, ಪ್ರಾಸಯತಿ ಹಾಗೂ ಕಾವ್ಯಗಳಲ್ಲಿ ಹೆಚ್ಚುಪ್ರಯೋಗವಾಗುವ ವಿರೋಧಾಭಾಸ ಅಲಂಕಾರಗಳಲ್ಲೂ ಇವರು ಅಷ್ಟೇ ಜಾಣ್ಮೆಯನ್ನು ತೋರಿಸಿದ್ದಾರೆ.

ಶ್ರೀ ತ್ಯಾಗರಾಜರ ಹಾಗೆ ಶ್ರೀ ರಾಮದೇವರ ಪರವಾದ ಹಾಗೂ ತೆಲುಗು ಭಾಷೆಯ ಕೃತಿಗಳು ಹೆಚ್ಚು. ಅಲ್ಲದೆ ಸ್ತುತಿ, ನಿಂದಾಸ್ತುತಿ, ಪೌರಾಣಿಕ ಉಪದೇಶಗಳನ್ನೊಳಗೊಂಡ ವಸ್ತು ನಿರೂಪಣೆಯನ್ನೂ ಸಹ ಕಾಣಬಹುದಾಗಿದೆ.

ಉಪಸಂಹಾರ: ಸಾಹಿತ್ಯ ಶೈಲಿಯಲ್ಲಿ ತ್ಯಾಗರಾಜರನ್ನು, ಪ್ರಾಸ ಮಾಧ್ಯಮ ಕಾಲ ಸಾಹಿತ್ಯದಲ್ಲಿ ದೀಕ್ಷಿತರನ್ನು, ಚಿಟ್ಟೇಸ್ವರ ಸಾಹಿತ್ಯದಲ್ಲಿ ಶ್ಯಾಮಶಾಸ್ತ್ರಿಯವರ ಶೈಲಿಯನ್ನು ರಾಯರ ರಚನೆಗಳಲ್ಲಿ ಕಾಣಬಹುದು. ಸಂಗೀತ ತ್ರಿಮೂರ್ತಿಗಳ ರಚನಾ ಕ್ರಮದ ವೈವಿಧ್ಯತೆಯನ್ನು ಮೈಗೂಡಿಸಿಕೊಂಡು ತಮ್ಮದೇ ಆದ ವಿಭಿನ್ನ ಶೈಲಿಯನ್ನು ನಿರೂಪಿಸಿದ್ದಾರೆ. ಸಾಹಿತ್ಯವು ಹೆಚ್ಚು ಒತ್ತೊತ್ತಾಗಿ ಉಸಿರಿಗೆ ಅವಿರೋಧವಾಗಿ ರಚಿಸಲ್ಪಟ್ಟಿದೆ. ಒಟ್ಟಾರೆಯಾಗಿ ತ್ರಿಮೂರ್ತಿಗಳ ನಂತರ ಪ್ರಯೋಗ ಶೀಲರೆನಿಸಿ ತಮ್ಮ ಅದ್ವಿತೀಯವಾದ ಪ್ರತಿಭೆ ಪಾಂಡಿತ್ಯಗಳಿಂದ ೧೯ನೇ ಶತಮಾನದ ವಾಗ್ಗೇಯಕಾರರಲ್ಲಿ “ಮೈಸೂರು ಸದಾಶಿವರಾಯರು” ಅಗ್ರ ಪಂಕ್ತಿಗೆ ಸೇರಿದವರಾಗಿದ್ದಾರೆ.

ಲೇಖನಕ್ಕೆ ನೆರವು: ಶ್ರೀಮತಿ ವೀಣಾ ಶ್ರೀನಿವಾಸ್‌

ಗ್ರಂಥ ಋಣ

೧. ಮೈಸೂರು ಸದಾಶಿವರಾಯರ ಕೀರ್ತನೆಗಳು (೧೯೫೪), ಸಂಗೀತ ಕಲಾಭಿವರ್ಧಿನಿ ಸಭಾ-ಮೈಸೂರು (ಸಂಪಾದಕರು-ಎನ್‌.ಚೆನ್ನಕೇಶವಯ್ಯ ಬಿ.ಕೆ. ಪದ್ಮನಾಭರಾವ್‌, ಹೆಚ್‌. ಯೋಗಾರನರಸಿಂಹಂ), ೨. ಅಪೂರ್ವ ಸದಾಶಿವ -ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ (೧೯೯೮), ೩. ನಾ ಕಂಡ ಕಲಾವಿದರು- ಕೆ. ವಾಸುದೇವಾಚಾರ್ಯ (೧೯೫೪), ೪. ಮೈಸೂರು ಸದಾಶಿವರಾವ್‌ಎಸ್‌.ಶೇಷಾದ್ರಿ (೧೯೭೯), ೫. ನಾದಯೋಗಿ ತ್ಯಾಗರಾಜ-ತ್ಯಾಗರಾಜರು ಮತ್ತು ಮೈಸೂರು ಸಂಗೀತ ಪರಂಪರೆ-ಬಿ.ವಿ.ಕೆ. ಶಾಸ್ತ್ರಿ (೧೯೬೭), ೬. ವೈಣಿಕ ಪ್ರವೀಣ ವೀಣೆ ಸುಬ್ಬಣ್ಣನವರು-ಎನ್‌. ಚೆನ್ನಕೇಶವಯ್ಯ (೧೯೭೦), ೭. ಕರ್ನಾಟಕ ಸಂಗೀತಕ್ಕೆ ಮೈಸೂರು ಸದಾಶಿವರಾಯರ ಕೊಡುಗೆ ಎಂ.ಫಿಲ್‌. ಸಂಶೋಧನಾ ಪ್ರಬಂಧ-ಬಿ.ಎಸ್‌. ವೀಣಾ ಮೂರ್ತಿ (೨೦೦೦)