ಮೈಸೂರು ಸದಾಶಿವರಾವ್ಕರ್ನಾಟಕ ಸಂಗೀತದ ಜಗತ್ತಿನಲ್ಲಿ ದೊಡ್ಡ ಹೆಸರು ಇವರದು. ಸೊಗಸಾಗಿ ಹಾಡುವ ಶಕ್ತಿಯೊಡನೆ ಒಳ್ಳೆಯ ಹಾಡುಗಳನ್ನು ರಚಿಸುವ ಶಕ್ತಿ ಪಡೆದವರು. ಶುಭ್ರ ಜೀವನ ನಡೆಸಿದರು. ತಮ್ಮ ಮಾರ್ಗದರ್ಶನದಿಂದ ಕರ್ನಾಟಕ ಸಂಗೀತಕ್ಕೆ ಹಲವರು ಶ್ರೇಷ್ಠ ಸಂಗೀತಗಾರರನ್ನು ನೀಡಿದರು.

ಮೈಸೂರು ಸದಾಶಿವರಾವ್

‘ನುಡಿದಂತೆ ನಡೆಯುವುದೂ, ತಾವು ನಂಬಿದುದನ್ನು ಅನುಷ್ಠಾನದಲ್ಲಿ ತರುವುದೂ ಮಹಾಪುರುಷರ ಲಕ್ಷಣಗಳು. ಇದರಿಂದಾಗಿ ಅವರು ನಮಗೆ ಪೂಜ್ಯರು. ಅವರು ತಮ್ಮ ಆತ್ಮೋದ್ಧಾರಕ್ಕಾಗಿ ಶ್ರಮಿಸಿದರೂ, ಅದರಿಂದಾಗಿ ಇತರರಿಗೂ ಮಾರ್ಗದರ್ಶಕರಾಗಿರುತ್ತಾರೆ. ಪ್ರಸಿದ್ಧ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರು ನಮ್ಮ ದೇಶದ ಸಂತ ಶ್ರೇಣಿಯಲ್ಲಿ ಒಂದು ಚಿರಂತನ ಸ್ಥಾನವನ್ನು ಪಡೆದಿದ್ದಾರೆ. ರಾಮಭಕ್ತಿ, ಸಂಗೀತ ಮತ್ತು ಸಾಹಿತ್ಯ ಇವು ತ್ರಿವೇಣಿಯಂತೆ ಅವರಿಂದ ಹರಿದು ಬಂದು ಅನೇಕ ತಲೆಮಾರಿನ ಗಾಯಕರಿಗೂ ವಾಗ್ಗೇಯಕಾರರಿಗೂ ಸ್ಫೂರ್ತಿಯನ್ನಿತ್ತಿವೆ.

ಶ್ರೀ ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಮುಖ್ಯರಾದವರನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸುತ್ತಾರೆ. (೧) ವಾಲಾಜಪೇಟೆ ವೆಂಕಟರಮಣ ಭಾಗವತರು ಮತ್ತು ಅವರ ಶಿಷ್ಯ ವರ್ಗ(೨) ಉಮೈಯಾಳಪುರಂ ಕೃಷ್ಣ ಮತ್ತು ಸುಂದರ ಭಾಗವತರು ಮತ್ತು ಅವರ ಶಿಷ್ಯರು (೩) ತಿಲ್ಲಸ್ಥಾನಂ ರಾಮಯ್ಯಂಗಾರ್ ಮತ್ತು ಅವರ ಶಿಷ್ಯರು. ಕಣ್ಮರೆಯಾಗಬಹುದಾಗಿದ್ದ ಶ್ರೀ ತ್ಯಾಗರಾಜರ ವಿಷಯಕವಾದ ಅನೇಕ ಸಂಗತಿಗಳು ಮೊದಲನೆಯ ಶಾಖೆಗೆ ಸೇರಿದ ವಾಲಾಜಪೇಟೆ ವೆಂಕಟರಮಣ ಭಾಗವತರಿಂದಾಗಿಯೆ ನಮಗೆ ತಿಳಿದು ಬಂದಿವೆ. ವೆಂಕಟರಮಣ ಭಾಗವತರು ವಾಲಾಜ ಪೇಟೆಯಲ್ಲಿಯೆ ನೆಲೆಸಿ ಅನೇಕ ಶಿಷ್ಯರಿಗೆ ಸಂಗೀತ ಪಾಠ ಹೇಳುತ್ತಿದ್ದುದಲ್ಲದೆ, ತಮ್ಮ ಗುರು ಶ್ರೀ ತ್ಯಾಗರಾಜರು ತಪ್ಪದೆ ನಡೆಸುತ್ತಿದ್ದ ಭಜನ ಗೋಷ್ಠಿಯನ್ನೂ ನಡೆಸುತ್ತಿದ್ದರು. ಈ ವೆಂಕಟರಮಣ ಭಾಗವತರ ಶಿಷ್ಯರಲ್ಲಿ ಪ್ರಮುಖರಾದವರು ಸದಾಶಿವರಾಯರು.

ಮೂಲವಂಶ

ಸದಾಶಿವರಾಯರ ಮೂಲಪುರುಷರು ತೆಲುಗು ದೇಶಕ್ಕೆ ಸೇರಿದವರಂತೆ ಕಾಣುವುದಿಲ್ಲ. ತಮಿಳು ನಾಡಿನ ಕೆಲವು ಭಾಗ ಹಿಂದೆ ಮರಾಠಾ ರಾಜರುಗಳ ಆಳ್ವಿಕೆಗೆ ಒಳಪಟ್ಟಿತ್ತು. ಅದರಿಂದಾಗಿ ಅನೇಕ ಮರಾಠರು ತಮಿಳುನಾಡಿನಲ್ಲಿ ನೆಲೆಸಿದರು. ಅಂತಹ ಕುಟುಂಬಗಳಲ್ಲಿ ಸದಾಶಿವರಾಯರ ಪೂರ್ವಜರ ಕುಟುಂಬವೂ ಒಂದೆಂದು ಊಹಿಸಬಹುದು. ಈಗ ಆಂಧ್ರ ಪ್ರದೇಶದಲ್ಲಿರುವ ಚಿತ್ತೂರು ಜಿಲ್ಲೆ ಆಗ ಮದರಾಸು ಪ್ರಾಂತದ ಉತ್ತರ ಆರ್ಕಾಟು ಜಿಲ್ಲೆಗೆ ಸೇರಿತ್ತು. ಚಿತ್ತೂರಿನ ಒಂದು ಬಡಾವಣೆ ಗಿರಿಂಪೇಟ. (ಜಿಲ್ಲಾ ಕಲೆಕ್ಟರ್ ಆಗಿದ್ದ ‘ಗ್ರೀಮ್ಸ್’ ಎಂಬುವನ ಹೆಸರನ್ನೇ ಈ ಪೇಟೆಗೆ ಇಟ್ಟಿರುವುದು.) ಇಲ್ಲಿ ಮರಾಠ ದೇಶಸ್ಥನಾದ ಗಣೇಶರಾಯ ಎಂಬ ಗೃಹಸ್ಥನೊಬ್ಬನಿದ್ದನು. ಅವನ ಹೆಂಡತಿ ಕೃಷ್ಣಾಬಾಯಿ. ಇವರಿಬ್ಬರ ಹಿರಿಯ ಮಗನೆ ಸದಾಶಿವರಾಯರು. ಸದಾಶಿವರಾಯರಿಗೆ ಮಲ್ಹಾರಿರಾಯ ಎಂಬ ಒಬ್ಬ ತಮ್ಮನೂ, ಒಬ್ಬ ತಂಗಿಯೂ ಇದ್ದರಂತೆ. ಸದಾಶಿವರಾಯರ ಹುಟ್ಟಿದ ದಿನಾಂಕ ಸರಿಯಾಗಿ ತಿಳಿದು ಬಂದಿಲ್ಲ. ಹತ್ತೊಂಬತ್ತನೆಯ ಶತಮಾನದ ಪ್ರಾರಂಭದಲ್ಲಿ ಅಂದರೆ ಸುಮಾರು ೧೮೦೦ ರಲ್ಲಿ ಇವರು ಹುಟ್ಟಿರಬಹುದೆಂದು ಊಹಿಸಲಾಗಿದೆ. ಸದಾಶಿವರಾಯರ ವಿದ್ಯಾಭ್ಯಾಸ ಎಲ್ಲಾಯಿತು ಇತ್ಯಾದಿ ವಿಷಯಗಳು ನಮಗೆ ನಿಷ್ಕೃಷ್ಟವಾಗಿ ತಿಳಿದಿಲ್ಲ. ಇವರು ಹನ್ನೆರಡು ವರುಷದವರಿರುವಾಗ ಊಟಕ್ಕೆ ಕುಳಿತ ವೇಳೆಯಲ್ಲಿ ತುಪ್ಪ ಬಡಿಸುವಾಗ ಕೈಸೆರೆಯನ್ನು ಒಡ್ಡಿದರಂತೆ. ಆಗ ಇವರ ತಾಯಿಯು ‘‘ನಿನಗಿರುವ ಸಂಪಾದನೆಗೆ ಕೈತುಂಬ ತುಪ್ಪ ಬೇಕೇನಪ್ಪ?’’ ಎಂದರಂತೆ. ಸರಿ, ಆ ಮಾತು ಅವರ ಮನಸ್ಸನ್ನು ಚುಚ್ಚಿದುದರಿಂದ ಯಾರಿಗೂ ಹೇಳದೆ ಮನೆ ಬಿಟ್ಟು ಹೋದರಂತೆ. ಆಮೇಲೆ ಎಲ್ಲಿದ್ದರೊ, ಯಾರಲ್ಲಿ ವಿದ್ಯಾಭ್ಯಾಸ ಮಾಡಿದರೊ ಒಂದೂ ಗೊತ್ತಾಗಿಲ್ಲ. ಅಂತೂ ಮನೆಗೆ ಹಿಂದಿರುಗುವ ಕಾಲಕ್ಕೆ, ಸ್ವಲ್ಪ ಲೌಕಿಕ ವಿದ್ಯೆಯನ್ನೂ ಸಂಗೀತವನ್ನೂ ಅಭ್ಯಾಸ ಮಾಡಿಕೊಂಡಿದ್ದರೆಂದೂ ಗೊತ್ತಾಗುತ್ತದೆ.

ವಿದ್ಯೆ, ವೃತ್ತಿ ಮತ್ತು ವಿವಾಹ

ಸದಾಶಿವರಾಯರು ತಮ್ಮ ಪ್ರೌಢಾವಸ್ಥೆಯಲ್ಲಿ ಚಿತ್ತೂರು ಜಿಲ್ಲಾ ಕಚೇರಿಯಲ್ಲಿ ಸ್ವಲ್ಪಕಾಲ ಗುಮಾಸ್ತರಾಗಿದ್ದರಂತೆ. ಲೌಕಿಕ ವಿದ್ಯೆಯನ್ನು ಕಲಿತಿದ್ದರೆಂದು ಇದರಿಂದ ಗೊತ್ತಾಗುತ್ತದೆ. ಅರಣಿಯ ಜಮೀನುದಾರರಾಗಿದ್ದ ತಿರುಮಲರಾವ್ ಸಾಹೇಬರ ಸೋದರತ್ತೆ ಸುಂದರಾಬಾಯಿ. ಈ ಸುಂದರಾ ಬಾಯಿಯವರೇ ಸದಾಶಿವ ರಾಯರ ಧರ್ಮಪತ್ನಿ.

ಶ್ರೀ ತ್ಯಾಗರಾಜರ ಆಶೀರ್ವಾದ

ಶ್ರೀ ತ್ಯಾಗರಾಜರು ನಮ್ಮ ಕರ್ಣಾಟಕ ಸಂಗೀತಕ್ಕೆ ಕೊಟ್ಟಿರುವ ಮೂರು ಕಾಣಿಕೆಗಳೆಂದರೆ ರಾಮ ಭಕ್ತಿ, ಸಂಗೀತ ಮತ್ತು ತೆಲುಗು ಸಾಹಿತ್ಯ. ಇವರಾದ ಮೇಲೆ ಬಂದ ಅನೇಕ ದೊಡ್ಡ ಮತ್ತು ಚಿಕ್ಕ ವಾಗ್ಗೇಯಕಾರರೂ, ಗಾಯಕರೂ ಸಾಂಪ್ರದಾಯಿಕವಾಗಿ ವಿವಿಧ ದೇವತೋಪಾಸಕರಾದರೂ ಮತ್ತು ಮನೆಮಾತು ತೆಲುಗು ಭಾಷೆಯಲ್ಲದಿದ್ದರೂ, ರಾಮನನ್ನೇ ಇಷ್ಟ ದೈವವನ್ನಾಗಿಯೂ, ತೆಲುಗು ಭಾಷೆಯನ್ನೇ ಮಾಧ್ಯಮವನ್ನಾಗಿಯೂ ಇಟ್ಟುಕೊಂಡು ಕೃತಿಗಳನ್ನು ರಚಿಸುತ್ತಾ ಬಂದರು. ಶ್ರೀ ತ್ಯಾಗರಾಜರಿಂದ ಅನೇಕ ವಾಗ್ಗೇಯಕಾರರು (ಎಂದರೆ, ಸ್ವತಃ ಹಾಡುಗಳನ್ನು ರಚಿಸುವವರು ಮತ್ತು ಹಾಡುವವರು) ಸ್ಫೂರ್ತಿ ಹೊಂದಿ ಸಂಗೀತಕ್ಕೆ ತಮ್ಮ ಸೇವೆಯನ್ನೂ ಸಲ್ಲಿಸಿ ಕೃತಕೃತ್ಯರಾದರು. ಯಾವ ವಿಧವಾದ ಅಧಿಕಾರ ದರ್ಪಗಳನ್ನು ತೋರಿಸದೆ, ಅಬ್ಬರ ಆಡಂಬರಗಳಿಲ್ಲದೆ ಕೇವಲ ಅನುಷ್ಠಾನದಿಂದ ಮಾತ್ರ ಮಾರ್ಗದರ್ಶನ ಮಾಡಿದರು.

ಮನೆ ಬಿಟ್ಟು ಹೊರಟ ಸದಾಶಿವರಾಯರು ಶ್ರೀ ತ್ಯಾಗರಾಜರ ಪ್ರಮುಖ ಶಿಷ್ಯರಾದ ವಾಲಾಜಪೇಟೆ ವೆಂಕಟರಮಣ ಭಾಗವತರಲ್ಲಿ ಸಂಗೀತಾಭ್ಯಾಸ ಮಾಡಿದರೆಂದು ಗೊತ್ತಾಗುತ್ತದೆ. ಶ್ರೀ ತ್ಯಾಗರಾಜರು ತಮ್ಮ ಶಿಷ್ಯರ ಆಹ್ವಾನದ ಮೇರೆಗೆ ವಾಲಾಜಪೇಟೆಗೆ ಬಂದಿದ್ದರು. ವೆಂಕಟರಮಣ ಭಾಗವತರವರು ಹೊಸ ಭಜನಾ ಮಂದಿರವನ್ನು ಸ್ಥಾಪಿಸಿದ ಸಮಯವಿರಬಹುದು. ಶ್ರೀ ತ್ಯಾಗರಾಜರನ್ನು ಬಹಳ ಆದರದಿಂದ ಬರಮಾಡಿಕೊಂಡರು. ಅದೇ ಸಮಾರಂಭಕ್ಕೆ ಆಗಲೇ ಮೈಸೂರು ಆಸ್ಥಾನ ಮಹಾವಿದ್ವಾಂಸರಾಗಿದ್ದ ಸದಾಶಿವರಾಯರೂ ಬಂದಿದ್ದು ‘ಶ್ರೀತ್ಯಾಗರಾಜಸ್ವಾಮಿ ವೆಡಲಿನ’ ಎಂಬ ಒಂದು ಕೃತಿಯನ್ನು ತೋಡಿರಾಗದಲ್ಲಿ ರಚಿಸಿ, ಹಾಡಿ ಶ್ರೀತ್ಯಾಗರಾಜರ ಆಶೀರ್ವಾದವನ್ನು ಪಡೆದರು. ಈ ವಿಷಯವು ವೆಂಕಟರಮಣ ಭಾಗವತರ ಮೊಮ್ಮಗ ರಾಮಸ್ವಾಮಿ ಭಾಗವತರು ಬರೆದಿರುವ ‘ತ್ಯಾಗಬ್ರಹ್ಮೋಪನಿಷದ್’ ಎಂಬ ಪುಸ್ತಕದಿಂದ ನಮಗೆ ಗೊತ್ತಾಗುತ್ತದೆ. ಬರಿಯ ಸಾಹಿತ್ಯವಷ್ಟೇ ದೊರೆತಿರುವ ಕಾಂಬೋಧಿ ರಾಗದ ‘ಸೀತಾ ಲಕ್ಷ್ಮಣ ಸಮೇತ’ ಎಂಬ ಕೃತಿಯಲ್ಲಿ ನಾರದಾಂಶಜಾತ ತ್ಯಾಗರಾಜ ಮೂರ್ತಿ ಸಹಿತುಡವೈ’ (ನಾರದಾಂಶದಿಂದ ಹುಟ್ಟಿದ ತ್ಯಾಗರಾಜ ಮೂರ್ತಿ ಸಹಿತವಾಗಿ) ಎಂದಿರುವುದರಿಂದ ಸದಾ ಶಿವರಾಯರು ತ್ಯಾಗರಾಜರ ದರ್ಶನವನ್ನು ಪಡೆದಿದ್ದರೆಂದು ಧಾರಾಳವಾಗಿ ಹೇಳಬಹುದು.

ಮೈಸೂರಿನ ಆಸ್ಥಾನ ಮಹಾ ವಿದ್ವಾನ್

ಸದಾಶಿವರಾಯರು ತ್ಯಾಗರಾಜರನ್ನು ಸಂಧಿಸುವ ವೇಳೆಗಾಗಲೇ ಅವರು ಮೈಸೂರು ಆಸ್ಥಾನ ಮಹಾ ವಿದ್ವಾಂಸರಾಗಿದ್ದರೆಂದು ಮೇಲೆಯೇ ಹೇಳಿದೆಯಷ್ಟೆ. ಆಗ ಮೈಸೂರನ್ನು ಮುಮ್ಮಡಿ ಕೃಷ್ಣರಾಜರು (ಕ್ರಿ.ಶ.೧೭೯೪-೧೮೬೮) ಆಳುತ್ತಿದ್ದರು. ಮಹಾರಾಜರ ಆಪ್ತ ವರ್ಗಕ್ಕೆ ಸೇರಿದ್ದ ಕೊಪ್ಪರಂ ಪೆದ್ದ ಮುನಿಸ್ವಾಮಿ ಶ್ರೇಷ್ಠಿ ಮತ್ತು ಚಿನ್ನಮುನಿಸ್ವಾಮಿ ಶ್ರೇಷ್ಠಿ ಎಂಬಿಬ್ಬರು ಸಹೋದರರು ಸದಾಶಿವರಾಯರನ್ನು ಮೈಸೂರಿಗೆ ಕರೆತಂದಿದ್ದಿರಬಹುದು. ಅಥವಾ ಕಲಿಕರ್ಣರೆಂದು ಪ್ರಖ್ಯಾತರಾಗಿದ್ದ ಮುಮ್ಮಡಿ ಕೃಷ್ಣರಾಜರ ಔದಾರ್ಯವನ್ನು ಕೇಳಿ ಸದಾಶಿವರಾಯರೇ ಬಂದಿದ್ದಿರಬಹುದು. ಆದರೆ ಶ್ರೇಷ್ಠಿ ಸಹೋದರರಿಗೆ ಸದಾಶಿವರಾಯರಲ್ಲಿ ಬಹಳ ಆದರಾಭಿಮಾನವಿತ್ತು. ಆ ವೇಳೆಗಾಗಲೇ ಗಾಯಕರಾಗಿಯೂ ವಾಗ್ಗೇಯ ಕಾರರಾಗಿಯೂ ಪ್ರಸಿದ್ಧರಾಗಿದ್ದ ಸದಾಶಿವರಾಯರೇ ಗಿರಿಂ ಪೇಟೆಯಲ್ಲಿದ್ದ ತಮ್ಮ ಮನೆಯನ್ನು ಒಬ್ಬ ಸದ್ಗ ಹಸ್ಥನಿಗೆ ದಾನ ಮಾಡಿ ಮೈಸೂರಿಗೆ ಬಂದರಂತೆ. ಅರಮನೆಗೆ ಸೇರಿದ ದೇವಸ್ಥಾನಗಳಲ್ಲಿ ಪ್ರತಿದಿನವೂ ಸಂಜೆ ಉತ್ಸವಗಳಿರುತ್ತಿದ್ದವು. ಅವುಗಳಲ್ಲಿ ಸಂಗೀತ ಸೇವೆಯೂ ಒಂದು. ಒಂದು ಸಂಜೆ ಸಂಗೀತ ಸೇವೆಯನ್ನು ತಾವು ನೆರವೇರಿಸುವುದಾಗಿ ಸದಾಶಿವರಾಯರು ಪಾರುಪತ್ತೇಗಾರನ ಅಪ್ಣಣೆ ಪಡೆದರು. ಉತ್ಸವಕ್ಕೆ ಬಂದಿದ್ದ ಭಕ್ತರು ರಾಯರ ಗಾನ ಮಾಧುರ‍್ಯಕ್ಕೆ ಮನಸೋತು ರಾಯರನ್ನು ಬಹಳವಾಗಿ ಕೊಂಡಾಡಿದರು. ಶ್ರೇಷ್ಠಿ ಸಹೋದರರು ಉತ್ಸವಕ್ಕೆ ದಿನವೂ ಬರುತ್ತಿದ್ದರು. ರಾಯರ ಕವಿತಾ ಶಕ್ತಿಗೂ ಮತ್ತು ಗಾನಮಾಧುರ್ಯಕ್ಕೂ ಅವರು ಮನಸೋತರು. ರಾಯರ ಪೂರ್ವೋತ್ತರಗಳನ್ನು ವಿಚಾರಿಸಿ ತಮ್ಮ ಒಂದು ಮನೆಯನ್ನು ಅವರಿಗೆ ವಾಸಿಸಲು ಕೊಟ್ಟರು. ಪ್ರಭುಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಿದ್ದ ಈ ಸಹೋದರರು ಸದಾಶಿವರಾಯರ ಕವಿತಾಶಕ್ತಿಯನ್ನು, ಗಾನ ಪ್ರೌಢಿಮೆಯನ್ನು ಪ್ರಶಂಸಿಸಿ ಅವರ ಮುಂದೆ ಹಾಡಿಸಲು ಅನುಮತಿ ಬೇಡಿದರು. ರಾಯರ ಅಮೋಘವಾದ ಗಾಯನವನ್ನು ಕೃಷ್ಣರಾಜರು ಕೇಳಿ ಬಹುವಾಗಿ ಸಂತೋಷಿಸಿ, ವಿಶೇಷವಾಗಿ ಮರ್ಯಾದೆ ಮಾಡಿ ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿಕೊಂಡರು. ರಾಯರ ವಯಸ್ಸು ಆ ವೇಳೆಗೆ ಮೂವತ್ತು ದಾಟಿದ್ದಿರಬಹುದೆಂದು ಕಾಣುತ್ತದೆ. ಅಂದಿನಿಂದ ರಾಯರು ಮೈಸೂರು ಸದಾಶಿವರಾಯರಾದರು.

ವ್ಯಕ್ತಿತ್ವ

ಸದಾಶಿವರಾಯರ ವ್ಯಕ್ತಿತ್ವ ಹೀಗಿತ್ತೆಂದು ನಿಖರವಾಗಿ ಹೇಳಲು ಅವರ ಭಾವಚಿತ್ರ ಯಾವುದೂ ನಮಗೆ ದೊರೆತಿಲ್ಲ. ವಾಲಾಜಪೇಟೆ ವೆಂಕಟರಮಣ ಭಾಗವತರು ತಮ್ಮ ಮಕ್ಕಳೊಂದಿಗೂ ಮತ್ತು ಶಿಷ್ಯರೊಂದಿಗೂ ಕುಳಿತಿರುವ ಒಂದು ಚಿತ್ರ ಮಧುರೈ ಸೌರಾಷ್ಟ್ರ ಸಭಾದವರ ಹತ್ತಿರ ಇದೆ. ಈ ಶಿಷ್ಯರಲ್ಲಿ ಒಬ್ಬರು ಸದಾಶಿವರಾಯರೆಂದು ಹೇಳುತ್ತಾರೆ. ಸಂಗೀತ ಶಾಸ್ತ್ರರತ್ನ ಕೆ. ವಾಸುದೇವಾ ಚಾರ್ಯರು ಅವರ ಎಳೆತನದಲ್ಲಿ ನೋಡಿದ ಸದಾಶಿವರಾಯರ ವ್ಯಕ್ತಿತ್ವವನ್ನು ಹೀಗೆ ವರ್ಣಿಸುತ್ತಾರೆ.

‘‘ರಾಯರದು ಸಾಮಾನ್ಯ ಎತ್ತರ, ಗಟ್ಟಿಯಾದ ಮೈಕಟ್ಟು. ಅಗಲವಾದ ಎದೆ. ಉಬ್ಬಿದ ಹಣೆ. ಹೊಳೆಯುವ ಕಣ್ಣುಗಳು, ಗಿರಲು ಮೀಸೆ, ಆಡಂಬರವಿಲ್ಲದ ಉಡಿಗೆ ತೊಡಿಗೆ, ಮಧುರವಾದ ದನಿ, ವಿನಯ ಪೂರ್ವಕವಾದ ನಡೆವಳಿಕೆ. ಕಂಡೊಡನೆಯೇ ಅವರನ್ನು ಗೌರವಿಸಬೇಕೆಂಬ ಮನೋವೃತ್ತಿಯನ್ನು ಬೆಳೆಸುವ ಠೀವಿ.‘‘ಈ ವರ್ಣನೆಯು ಅಂತಹ ಸುಪ್ರಸಿದ್ಧ ಗಾಯಕನಿಗೆ ಒಪ್ಪುವಂತಹುದೆ ಅಲ್ಲವೆ? ಕೀರ್ತಿಶೇಷರಾದ ಗಾನವಿಶಾರದ ಬಿಡಾರಂ ಕೃಷ್ಣಪ್ಪನವರು ಒಮ್ಮೆ ಸದಾಶಿವರಾಯರ ಸಂಗೀತವನ್ನು ಕೇಳಿದ್ದ ವೃದ್ಧೆಯೊಬ್ಬಳನ್ನು ಕುರಿತು, ರಾಯರ ಸಂಗೀತವು ಹೇಗಿರುತ್ತಿತ್ತಮ್ಮ ಎಂದು ಪ್ರಶ್ನಿಸಿದರಂತೆ. ಅದಕ್ಕೆ ಆ ಮುದುಕಿಯು, ‘‘ಅಪ್ಪಾ, ಅದೇನೆಂದು ಹೇಳಲಿ? ‘‘ಪೆದ್ದ ದೇವುಂಡನಿ ನಿನು ನಮ್ಮಿತಿರ’’ ಎಂದು ಹಾಡಲು ಪ್ರಾರಂಭಿಸಿದರೆ, ಉರಿಯುತ್ತಿದ್ದ ದೀಪಗಳೆಲ್ಲ ಅದರುತ್ತಿದ್ದವು, ಕೇಳುವವರಿಗೆ ಮೈಮೇಲೆ ಎಚ್ಚರಿಕೆಯೇ ಇರುತ್ತಿರಲಿಲ್ಲ’’ ಎಂದಳಂತೆ.

ಅತಿಥಿಸತ್ಕಾರ

ಅತಿಥಿಯನ್ನು ದೇವರೆಂದು ಕಾಣು ಎಂದು ನಮ್ಮ ಧರ್ಮಶಾಸ್ತ್ರ ಹೇಳುತ್ತದೆ. ಅಂದರೆ ಊಟದ ವೇಳೆಗೆ ಯಾರಾದರೂ ಬಂದರೆ ಅವರನ್ನು ಕರೆದು ಉಪಚರಿಸುವುದು ನಮ್ಮಲ್ಲಿ ಬಹುಕಾಲದಿಂದಲೂ ರೂಢಿಯಲ್ಲಿದೆ. ಆದರೆ ಸದಾಶಿವರಾಯರು ತಾವಾಗಿಯೇ ಬಂದ ಬ್ರಾಹ್ಮಣರನ್ನು ಊಟಕ್ಕೆ ಕರೆದು ಉಪಚರಿಸುವುದು ಮಾತ್ರವಲ್ಲ, ಮಧ್ಯಾಹ್ನದ ವೇಳೆಗೆ ಸೊಂಟ ಕಟ್ಟಿ ತಲೆಬಾಗಿಲಲ್ಲಿ ನಿಂತು ಯಾರಾದರೂ ಅತಿಥಿಗಳನ್ನು ನಿರೀಕ್ಷಿಸುತ್ತಿದ್ದರಂತೆ. ದಾರಿಯಲ್ಲಿ ಹೋಗುವ ಬ್ರಾಹ್ಮಣರಿಗೆ ಕೈ ಮುಗಿದು ಊಟಕ್ಕೆ ಕರೆಯುವುದು, ಚೊಕ್ಕ ಭೋಜನವಾದ ನಂತರ ತಾಂಬೂಲ ದಕ್ಷಿಣೆಯನ್ನು ಕೊಟ್ಟು ಕಳುಹಿಸಿ ನಂತರ ತಾವು ಊಟ ಮಾಡುವುದು ಅವರ ನಿತ್ಯ ಪದ್ಧತಿಯಾಗಿತ್ತಂತೆ. ಸಂಗೀತಾಭ್ಯಾಸ ಮಾಡಲು ಮನೆಯಲ್ಲೇ ಇದ್ದ ಅನೇಕ ಶಿಷ್ಯರುಗಳ ಊಟದ ವ್ಯವಸ್ಥೆಯ ಜತೆಗೆ ಈ ಅತಿಥಿ ಭೋಜನವೂ ಸೇರಿ ರಾಯರಿಗೆ ಆಗಿಂದಾಗ್ಗೆ ಹಣದ ಕೊರತೆಯು ಬೀಳುತ್ತಿತ್ತಂತೆ. ರಾಯರ ಈ ಔದಾರ‍್ಯವು ಅಸಾಮಾನ್ಯವಾದುದು.

ಸರಳ ಮನಸ್ಸು

ರಾಯರದು ಬಹಳ ಸರಳವಾದ ಮನಸ್ಸು. ಸಮಯ ಬಂದಾಗ ಇದು ತನ್ನದು. ಇದು ಬೇರೆಯವರದು ಎಂಬ ಭೇದವನ್ನೆಣಿಸದೆ, ಬೇಡಿ ಬಂದವರಿಗೆ ಕೊಟ್ಟು ಬಿಡುತ್ತಿದ್ದರು ಎನ್ನುವುದಕ್ಕೆ ಒಂದು ಘಟನೆಯನ್ನು ಉದಾಹರಿಸಬಹುದು. ಒಂದಾವರ್ತಿ ರಾಯರಿಗೆ ಆಪ್ತರಾಗಿದ್ದ ಕೊಪ್ಪರಂ ರಾಮಸ್ವಾಮಿ ಶೆಟ್ಟರೆಂಬುವರು ಏನೋ ಕೆಲಸವಾಗಿ ಸ್ವಲ್ಪ ಕಾಲ ಬೇರೆಯ ಊರಿಗೆ ಹೋಗಬೇಕಾಗಿ ಬಂತು. ತಮ್ಮ ಜವಳಿ ಅಂಗಡಿಯ ಮೇಲು ವಿಚಾರಣೆಯನ್ನು ಸದಾಶಿವರಾಯರಿಗೆ ವಹಿಸಿ ಹೊರಟರಂತೆ. ರಾಯರ ಮನಸ್ಸನ್ನು ಅರಿತಿದ್ದ ಜನಗಳು ಮದುವೆ, ಮುಂಜಿ ಇವೇ ಮೊದಲಾದ ನೆಪಗಳನ್ನು ಹೇಳಿ ಅಂಗಡಿಯಿಂದ ಜವಳಿಯನ್ನು ತೆಗೆದುಕೊಂಡು ಹೋದರು. ಅಂಗಡಿ ಬರಿದಾಯಿತು. ಶೆಟ್ಟರು ಬಂದು ನೋಡುತ್ತಾರೆ ಅಂಗಡಿಯಲ್ಲಿ ಏನೂ ಇರಲಿಲ್ಲ. ಶೆಟ್ಟರ ದುಗುಡವನ್ನು ಕಂಡ ರಾಯರು ‘‘ಕೊಟ್ಟಿರುವುದೆಲ್ಲಾ ‘ಕೃಷ್ಣಾರ್ಪಣ’ ಎಂದುಹೇಳಿ ಪುಣ್ಯ ಸಂಪಾದಿಸುತ್ತೀರೋ ಅಥವಾ ನನ್ನಿಂದ ಅವುಗಳಿಗೆ ಹಣವನ್ನು ಪಡೆದು ಆ ಪುಣ್ಯವನ್ನು ನನಗೇ ಬಿಟ್ಟು ಕೊಡುತ್ತೀರೋ?’’ ಎಂದು ಕೇಳಿದರು. ಮೋಸ ಕೊಂಕುಗಳಿಲ್ಲದ ರಾಯರ ಮನಸ್ಸನ್ನು ಚೆನ್ನಾಗಿ ಬಲ್ಲವರಾಗಿದ್ದ ಶೆಟ್ಟರು ‘ಕೃಷ್ಣಾರ್ಪಣ’ ಎಂದೇ ಹೇಳಿದರಂತೆ. ಕೆಲವು ತಿಂಗಳೊಳಗಾಗಿಯೇ ಅವರ ವ್ಯಾಪಾರವು ಎರಡರಷ್ಟು ಹೆಚ್ಚಾಗಿ ಲಾಭ ಬಂದಿತೆಂದೂ ಹೇಳುತ್ತಾರೆ.

ಮೃದು ಸ್ವಭಾವ

ಸದಾಶಿವರಾಯರದು ಬಹಳ ಮೃದು ಸ್ವಭಾವ. ಯಾರ ಮನಸ್ಸನ್ನೂ ನೋಯಿಸುತ್ತಿರಲಿಲ್ಲ. ಇತರರು ನೊಂದಾಗ ಆ ನೋವು ತಮಗೇ ಆದಷ್ಟು ಸಂಕಟಪಡುತ್ತಿದ್ದರು. ಬೆಳಗಾದರೆ ನಾಲ್ಕಾರು ಮಂದಿ ದಾಸರು ಭಿಕ್ಷೆ ಬೇಡುವುದಕ್ಕೆ ರಾಯರ ಮನೆ ಮುಂದೆ ಹಾಜರಿರುತ್ತಿದ್ದರು. ಆ ದಾಸರು ಹಾಡುತ್ತಿದ್ದ ಹಾಡುಗಳು ಸುಸ್ವರವೊ, ಅಪಸ್ವರವೊ, ಅಂತೂ ಶಾಂತರಾಗಿ ಕೇಳಿ ತಮ್ಮ ಕೈಲಾದಷ್ಟು ಸಹಾಯ ನೀಡಿ ಕಳುಹಿಸುತ್ತಿದ್ದರು. ಒಂದಾವರ್ತಿ ದಾಸರೊಬ್ಬರು ರಾಯರ ಮನೆಯ ಮುಂದೆ ಹಾಡುತ್ತಿದ್ದರು. ದಾಸರು ಅಷ್ಟು ಚೆನ್ನಾಗಿ ಹಾಡುತ್ತಿರಲಿಲ್ಲ ಎಂದು ಕಾಣುತ್ತದೆ. ಸದಾಶಿವರಾಯರ ಕೆಲವರು ಶಿಷ್ಯರು, ಅಷ್ಟು ನಯ ತಿಳಿಯದವರು, ದಾಸರ ಹಾಡಿನ ರೀತಿಯನ್ನು ಹಾಸ್ಯ ಮಾಡಿ ನಗುತ್ತಿದ್ದರು. ಸದಾಶಿವರಾಯರು ಇದನ್ನು ನೋಡಿದರು. ದಾಸರ ಮನಸ್ಸು ನೊಂದಿತು ಎಂಬುದನ್ನು ಕಂಡರು. ತಮ್ಮ ಶಿಷ್ಯರ ಪರವಾಗಿ ಸ್ವತಃ ಶ್ರೇಷ್ಠ ಸಂಗೀತಗಾರರಾದ ಸದಾಶಿವರಾಯರು ದಾಸರಲ್ಲಿ ಕ್ಷಮೆ ಬೇಡಿದರು. ಅವರ ಹಾಡನ್ನು ಕೇಳಿದರು. ಅವರಿಗೆ ಸೂಕ್ತ ಸನ್ಮಾನ ಮಾಡಿ ಕಳುಹಿಸಿದರು. ಅನಂತರ ಶಿಷ್ಯರಿಗೆ, ಯಾರಿಗೂ ಅಪಮಾನ ಮಾಡಬಾರದು, ತಾವೇ ತಿಳಿದವರು ಎಂದು ಹೆಮ್ಮೆ ಪಡಬಾರದು ಎಂದು ಬುದ್ಧಿ ಹೇಳಿದರು. ಜತೆಗೆ ಶಿಷ್ಯರಿಗೆ ‘‘ಸಂಗೀತವನ್ನು ಹಿಂಸಿಸಬಾರದಪ್ಪ, ಗಾನಾಭಿಮಾನಿ ದೇವತೆಗಳು ನೊಂದುಕೊಳ್ಳುತ್ತಾರೆ’’ ಎಂದು ಬುದ್ಧಿ ಹೇಳಿದರಂತೆ.

ಬಿಚ್ಚು ಮನಸ್ಸಿನ ಮೆಚ್ಚಿಕೆ

ಹರಿಕಥೆ ದಾಸರುಗಳ ವಿಷಯವಾಗಿ ಸದಾಶಿವರಾಯರಿಗೆ ಅಷ್ಟಾಗಿ ಗೌರವವಿರಲಿಲ್ಲ. ಅದಕ್ಕೆ ಕಾರಣ ಅವರೆಲ್ಲ ಸಂಸ್ಕಾರವಿಲ್ಲದವರು, ನಾಲ್ಕಾರು ಪ್ರಸಂಗಗಳನ್ನು ಕಂಠಪಾಠ ಮಾಡಿ ಒದರುತ್ತಿರುತ್ತಾರೆ ಎನ್ನುವ ಭಾವನೆ. ಆದುದರಿಂದ ಅವರು ಹರಿಕಥೆಯನ್ನು ಕೇಳಲು ಹೋಗುತ್ತಿರಲಿಲ್ಲ. ಒಮ್ಮೆ ತೀರ್ಥಹಳ್ಳಿಯ ಗುಂಡಾಚಾರ್ಯರೆಂಬುವರು ಮೈಸೂರಿಗೆ ಬಂದಿದ್ದರು. ಸದಾಶಿವರಾಯರನ್ನು ಕಂಡು ತಮ್ಮ ಪರಿಚಯ ಮಾಡಿಕೊಂಡರು. ರಾಯರು ಸಂತೋಷವನ್ನು ಸೂಚಿಸಿ ಎಂಟು ಆಣೆ ದಕ್ಷಿಣೆಯನ್ನು ಕೊಟ್ಟು ಕಳುಹಿಸಿದರು. ಆದರೆ ಗುಂಡಾಚಾರ್ಯರು ಅದಕ್ಕಾಗಿ ಬಂದವರಲ್ಲ. ರಾಯರ ಎದುರಿನಲ್ಲಿ ಹರಿಕಥೆ ಮಾಡಿ ಭಲೆ ಎನಿಸಿಕೊಳ್ಳಬೇಕೆಂದು ಅವರ ಆಸೆ. ಆ ದಾಸರು ಗಣಪತಿಯ ಉಪಾಸಕರು, ಶಾಸ್ತ್ರಜ್ಞಾನ, ಸಂಗೀತಜ್ಞಾನ ಎಲ್ಲಾ ಚೆನ್ನಾಗಿ ಇದ್ದುವು. ಆದುದರಿಂದ ಸದಾಶಿವರಾಯರ ಆಪ್ತರಾದ ಕೊಪ್ಪರಂ ರಾಮಸ್ವಾಮಿ ಶೆಟ್ಟರ ಬಳಿಗೆ ಬಂದು, ರಾಯರನ್ನು ತಮ್ಮ ಹರಿಕಥೆಗೆ ಹೇಗಾದರೂ ಕರೆದುಕೊಂಡು ಬರಬೇಕೆಂದು ಒತ್ತಾಯಪಡಿಸಿದರು. ಶೆಟ್ಟರ ಸ್ನೇಹಕ್ಕೆ ಕಟ್ಟುಬಿದ್ದು ಸದಾಶಿವರಾಯರು ಅರ್ಧಗಂಟೆ ಕಾಲ ಮಾತ್ರ ಇರುತ್ತೇನೆ ಎಂದು ಹೇಳಿ ಬಂದು ಕುಳಿತರು. ಗುಂಡಾಚಾರ್ಯರ ಹರಿಕಥೆಯ ಬಹಳ ಸ್ವಾರಸ್ಯವಾಗಿದ್ದುದರಿಂದ, ಕಥೆಯು ಮುಗಿಯುವವರೆಗೂ ರಾಯರು ಏಳಲೇ ಇಲ್ಲ. ಮುಗಿದ ಮೇಲೆ ದಾಸರ ಪಾಂಡಿತ್ಯವನ್ನು ಮನಸಾರ ಹೊಗಳಿದರು. ಅದಕ್ಕೆ ದಾಸರು ‘ನೀವು ಅರ್ಧ ರೂಪಾಯನ್ನು ಕೊಟ್ಟಿರುವುದರಿಂದ ನನ್ನ ಯೋಗ್ಯತೆಯ ಅರ್ಧಕ್ಕೆ ಮಾತ್ರ ಬೆಲೆ ದೊರೆಯಿತು. ಆದುದರಿಂದ ಇನ್ನರ್ಧ ರೂಪಾಯನ್ನು ಅನುಗ್ರಹಿಸಬೇಕು’ ಎಂದು ಕೇಳಿಕೊಳ್ಳಲು, ಸದಾಶಿವರಾಯರು, ‘ನಿಜವಾಗಿ ನೀವು ಪೂರ್ಣ ಯೋಗ್ಯತೆಯನ್ನುಳ್ಳವರು’ ಎಂದು ಒಂದು ಉಂಡೆ ರೂಪಾಯನ್ನೇ ಕೊಟ್ಟು ಕಳುಹಿಸಿದರಂತೆ.

ನರಸಿಂಹನ ಉಪಾಸನೆ

ಸದಾಶಿವರಾಯರ ಜೀವನದಲ್ಲಿ ಕೆಲವು ಅಸಾಧಾರಣ ಘಟನೆಗಳು ನಡೆದವು ಎಂದು ಹೇಳುತ್ತಾರೆ.

ಸದಾಶಿವರಾಯರು ನರಸಿಂಹ ದೇವರ ಉಪಾಸಕರು. ಕಮಲಾಮನೋಹರಿ ರಾಗದಲ್ಲಿ ‘ನರಸಿಂಹುಡ ದಯಿಂಚೆನು’ ಎಂಬ ಒಂದು ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯನ್ನು ಮಡಿಯಲ್ಲಿದ್ದಾಗ ಮಾತ್ರ ಹಾಡುತ್ತಿದ್ದರಂತೆ. ಒಂದಾವರ್ತಿ ಇವರು ಪ್ರದೋಷ ಕಾಲದಲ್ಲಿ ಹಾಡುತ್ತಿದ್ದಾಗ ಶ್ರೋತೃಗಳು ಈ ಕೃತಿಯನ್ನು ಹಾಡಲು ಬಿನ್ನವಿಸಿಕೊಂಡರು. ರಾಯರಿಗೆ ಅದು ಒಪ್ಪಿಗೆಯಾಗಲಿಲ್ಲ, ಆದರೂ ದಾಕ್ಷಿಣ್ಯಪರರಾಗಿ ಶ್ರೋತೃಗಳ ಮನಸ್ಸನ್ನು ನೋಯಿಸಲಾರದೆ, ಆ ಕೃತಿಯನ್ನು ಹಾಡಲು ತೊಡಗಿದರು. ‘‘ಸರಸಿಜಾಸನಾಂಡಮುಪಗುಲ’’ ಎಂದು ಅನುಪಲ್ಲವಿಯ ಸಾಹಿತ್ಯವನ್ನು ಹಾಡಲು ತೊಡಗಿದಾಗ, ಎದುರಿಗಿದ್ದ ನೃಸಿಂಹ ಪಟದ ಗಾಜು ಪಟಪಟನೆ ಒಡೆದು ದೀಪಗಳೆಲ್ಲ ಆರಿಹೋದುವಂತೆ. ಆ ಕೀರ್ತನೆಯನ್ನು ಅಷ್ಟಕ್ಕೇ ನಿಲ್ಲಿಸಿ ಮಂಗಳವನ್ನು ಹಾಡಿದರು. ಅಂದಿನಿಂದ ಶ್ರೋತೃಗಳು ರಾಯರು ಹಾಡುತ್ತಿದ್ದುದನ್ನು ಮಾತ್ರ ಕೇಳುತ್ತಿದ್ದರೇ ವಿನಾ, ಇದನ್ನು ಹಾಡಿ ಅದನ್ನು ಹಾಡಿ ಎಂದು ಕೇಳುತ್ತಿರಲಿಲ್ಲ.

ವಿಶಿಷ್ಟ ದರ್ಶನ

ವೀಣೆ ಶೇಷಣ್ಣ ಮತ್ತು ವೀಣೆ ಸುಬ್ಬಣ್ಣ ಎಂಬುವರು ನಮ್ಮ ನಾಡಿನ ಅತ್ಯಂತ ಶ್ರೇಷ್ಠ ಸಂಗೀತಗಾರರ ಪಂಕ್ತಿಗೆ ಸೇರಿದವರು. ಅವರಿಬ್ಬರೂ ಸದಾಶಿವರಾಯರ ಶಿಷ್ಯರು. ಒಮ್ಮೆ ರಾಯರು ಅವರಿಗೆ ತಾವೇ ರಚಿಸಿದ್ದ ‘ಸಾಮ್ರಾಜ್ಯ ದಾಯಕೇಶ’ ಎಂಬ ಕಾಂಬೋಧಿ ರಾಗದ ಕೀರ್ತನೆಯನ್ನು ಹೇಳಿಕೊಡುತ್ತಿದ್ದರಂತೆ. ‘ಶ್ರೀಕಾಂಚೀಪುರಾಧೀಶ’ ಎಂಬ ಚರಣದ ಭಾಗವನ್ನು ವಿಸ್ತರಿಸಿಕೊಂಡು ಮೈಮರೆತು ಹಾಡುತ್ತಿದ್ದರು. ಆಗ ಎಲ್ಲಿಂದಲೋ ಒಂದು ನಾಗರಹಾವು ಬಂದು ಅವರ ತೋಳನ್ನು ಸುತ್ತಿಕೊಂಡು ಹೆಡೆಯಾಡಿಸುತ್ತಿತ್ತಂತೆ. ಶಿಷ್ಯರಿಬ್ಬರೂ ಹೆದರಿ ನಿಶ್ಶಬ್ದವಾಗಿ ಹೊರಬಂದರು. ಸ್ವಲ್ಪ ಹೊತ್ತಿನ ನಂತರ ಹಾವು ಮಾಯವಾಗಿತ್ತು. ರಾಯರು ಎಚ್ಚರಗೊಂಡು ನಡೆದ ಸೋಜಿಗದ ವೃತ್ತಾಂತವನ್ನು ಕೇಳಿ ‘‘ಸಾಕ್ಷಾತ್ ಏಕಾಮ್ರೇಶ್ವರನ ದರ್ಶನ ನಿಮಗಾಯಿತು, ನೀವೇ ಧನ್ಯರು’’  ಎಂದು ಸಂತಸಪಟ್ಟರಂತೆ.

ಎಲ್ಲಿಯೂ ಸಲ್ಲುವರು

ಇದ್ದಲ್ಲಿ ಸಲುವ ಹೋ| ಗಿದ್ದಲ್ಲಿಯೂ ಸಲುವ
ವಿದ್ಯವ ಕಲಿತ ಬಡವ ತಾ| ಗಿರಿಯ ಮೇ|
ಲಿದ್ದರೂ ಸಲುವ ಸರ್ವಜ್ಞ||

ಎಂದಿದ್ದಾನೆ ಸರ್ವಜ್ಞ ಕವಿ. ಅಂದರೆ ವಿದ್ಯಾವಂತನು ತಾನು ಎಲ್ಲೇ ಇರಲಿ ಪ್ರಕಾಶಕ್ಕೆ ಬಂದೇ ತೀರುತ್ತಾನೆ. ಇದಕ್ಕೆ ನಿದರ್ಶನ ಸದಾಶಿವರಾಯರು. ಒಮ್ಮೆ ಕಾರ್ಯಾರ್ಥಿಯಾಗಿ ಸದಾಶಿವರಾಯರು ಮಧುರೆಗೆ ಹೋಗಿದ್ದರು. ಆಗ ಮಧುರೆ ಮೀನಾಕ್ಷಿ ಅಮ್ಮನವರ ಉತ್ಸವ ಕಾಲ. ಉತ್ಸವವು ರಾತ್ರಿ ಎಂಟು ಗಂಟೆಗೆ ಭಜನೆ ಮತ್ತು ಸಂಗೀತ ಗೋಷ್ಠಿಗಳೊಂದಿಗೆ ಪ್ರಾಕಾರ ಸುತ್ತಲು ಹೊರಟರೆ ಹಿಂತಿರುಗುವ ವೇಳೆಗೆ ರಾತ್ರಿ ಹನ್ನೊಂದಾಗುತ್ತಿತ್ತು. ಸದಾಶಿವರಾಯರು ತಮಗೆ ಯಾರ ಪರಿಚಯವಿಲ್ಲದಿದ್ದರೂ ಆ ಭಜನೆ ಗೋಷ್ಠಿಯಲ್ಲಿ ಬೆರೆತು ಅಮೋಘವಾದ ತಮ್ಮ ಗಾನಾಮೃತದಿಂದ ಎಲ್ಲರನ್ನೂ ಸಂತೋಷಪಡಿಸಿದರು. ಅಂದು ಉತ್ಸವವು ಮೂಲಸ್ಥಾನಕ್ಕೆ ಹಿಂತಿರುಗುವ ವೇಳೆಗೆ ಬೆಳಗಿನ ಜಾವ ನಾಲ್ಕು ಗಂಟೆಯಾಗಿತ್ತು. ಆಗ ಸದಾಶಿವರಾಯರು ಯಾರು ಎಂಬುದು ಗೊತ್ತಾಗಿ ಎಲ್ಲರೂ ಅವರಿಗೆ ವಿಶೇಷವಾದ ಗೌರವವನ್ನು ಸಲ್ಲಿಸಿದರು. ಮಧುರೆಯ ತಿರುಮಲ ನಾಯಕನು ಸದಾಶಿವರಾಯರಿಗೆ ಹಣವನ್ನೂ, ರೇಷ್ಮೆ ವಸ್ತ್ರಗಳನ್ನೂ, ಜೊತೆಗೆ ಒಂದು ಕುದುರೆಯನ್ನೂ ಕೊಟ್ಟನು. ಚಾಮರಾಜ ನಗರದಲ್ಲಿ ರಾಯರ ಬಂಧುಗಳೊಬ್ಬರಿದ್ದರು. ಅವರ ಮನೆಯಲ್ಲಿ ಮದುವೆ. ಅವರಿಗೆ ಸಹಾಯ ಮಾಡಬೇಕೆಂದು ಸದಾಶಿವರಾಯರ ಮನಸ್ಸಿನಲ್ಲಿತ್ತು. ರಾಯರು ಮೈಸೂರಿಗೆ ಹಿಂತಿರುಗಿ ಬರುವಾಗ ಆ ಕುದುರೆಯನ್ನು ನಾಯಕರಿಗೇ ಕೊಟ್ಟು ಅದಕ್ಕೆ ಪ್ರತಿಯಾಗಿ ಕೊಟ್ಟ ಹಣವನ್ನು ತೆಗೆದುಕೊಂಡರು. ಅದನ್ನು ತಮ್ಮ ಬಂಧುಗಳಿಗೆ ಕೊಟ್ಟುಬಿಟ್ಟರು.

ಯೋಗ್ಯತೆಯ ಪರೀಕ್ಷೆ

ಸದಾಶಿವರಾಯರ ಪಾಂಡಿತ್ಯದ ಬಗ್ಗೆ ಆಗಿನ ಕಾಲದ ಇತರ ವಿದ್ವಾಂಸರಿಗೆ ಎಷ್ಟು ನಂಬಿಕೆಯಿತ್ತು ಎಂಬುದಕ್ಕೆ ನಿದರ್ಶನವಾಗಿ ಇದೊಂದು ಘಟನೆ ನಡೆಯಿತು. ಮದರಾಸು ಪ್ರಾಂತಕ್ಕೆ ಸೇರಿದ ಇಬ್ಬರು ಸಂಗೀತ ವಿದ್ವಾಂಸರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂದು ತೀರ್ಮಾನಿಸಬೇಕಾಯಿತು. ಅದನ್ನು ತೀರ್ಮಾನಿಸಲು ಸದಾಶಿವರಾಯರೇ ತಕ್ಕವರೆಂದು ಎಲ್ಲರೂ ಅಭಿಪ್ರಾಯಪಟ್ಟರು. ವಿದ್ವಾಂಸರಿಬ್ಬರೂ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿದರು. ಸದಾಶಿವರಾಯರು ತುಂಬಿದ ಸಭೆ ಎದುರಿನಲ್ಲಿ ಯಾವ ಪಕ್ಷಪಾತವೂ ಇಲ್ಲದೆ ತಮ್ಮ ತೀರ್ಪನ್ನು ಕೊಟ್ಟರು. ಸೋತವರಿಗೆ ತುಂಬಾ ಕೋಪಬಂದಿತು. ‘ನಮ್ಮ ಯೋಗ್ಯತೆಯನ್ನು ಅಳೆಯಲು ನಿಮಗಿರುವ ಯೋಗ್ಯತೆಯೇನು?’  ಎಂದು ಪ್ರಶ್ನಿಸಿದರು. ಒಂದು ಕಷ್ಟವಾದ ರಾಗ ತಾಳಗಳನ್ನು ಹೆಸರಿಸಿ, ಇಷ್ಟೇ ಆವರ್ತ ಸಂಖ್ಯೆಯ ಸ್ವರ ವಿನ್ಯಾಸಮಾಡಿ ‘‘ಅವರು ನಿಲ್ಲಿಸಿದ ಜಾಗದಿಂದ ಎತ್ತಿಕೊಳ್ಳಿ ಬನ್ನಿ’’ ಎಂದರಂತೆ. ಆಗ ಸದಾಶಿವರಾಯರು ಸ್ವಲ್ಪವೂ ಉದ್ರೇಕಗೊಳ್ಳದೆ, ನಿರರ್ಗಳವಾಗಿ ಯಾವ ನ್ಯೂನತೆಯೂ ಇಲ್ಲದಂತೆ ಸ್ಪರ್ಧಿಗಳು ಹೇಳಿದ್ದ ಜಾಗಕ್ಕೆ ತಂದು ನಿಲ್ಲಿಸಿದರು. ಆಗ ಆ ವಿದ್ವಾಂಸರಿಗೆ ಮುಖಭಂಗವಾಗಿ, ಭಯಭಕ್ತಿಗಳಿಂದ ರಾಯರಿಗೆ ನಮಸ್ಕರಿಸಿ ಕ್ಷಮೆಯನ್ನು ಬೇಡಿದರಂತೆ. ರಾಯರದು ಅಂತಹ ತುಂಬಿದ ಪಾಂಡಿತ್ಯ.

ಎಂತಹ ಆದರ!

ದಿವಾನ್ ವೆಂಕಟೇ ಅರಸ್ ಅವರ ಬಂಧುಗಳೊಬ್ಬರು ಸದಾಶಿವರಾಯರಲ್ಲಿ ಬಹಳ ಪ್ರೀತಿ ವಿಶ್ವಾಸಗಳನ್ನು ಇಟ್ಟುಕೊಂಡಿದ್ದರು. ರಾಯರು ಅನಾರೋಗ್ಯ ಕಾರಣದಿಂದಾಗಿ ಹಾಸಿಗೆ ಹಿಡಿದಿದ್ದರು. ಅವರ ಹೆಂಡತಿ ಸುಂದರಾಬಾಯಿಯವರು ತಮ್ಮ ಪತಿಗೆ ಬೇಗ ಗುಣವಾದರೆ ಬಾಯಿಗೆ ಬೀಗ ಹಾಕಿಕೊಂಡು ನಂಜನಗೂಡಿನ ಶ್ರೀಕಂಠೇಶ್ವರನನ್ನು ಸೇವಿಸುವುದಾಗಿ ಹರಕೆ ಹೊತ್ತರು. ಸ್ವಲ್ಪ ಕಾಲದಲ್ಲಿ ರಾಯರಿಗೆ ಕಾಯಿಲೆಯು ವಾಸಿಯಾಗಲು ಸುಂದರಾಬಾಯಿಯವರು ಹೊತ್ತ ಹರಕೆಯ ವಿಷಯ ಬಯಲಾಯಿತು. ಆಗ ಆ ಅರಸಿನವರು ಸುಂದರಾಬಾಯಿ ಯವರನ್ನು ಕಾಡಿಬೇಡಿ ಒಪ್ಪಿಸಿ ತಾವೇ ಬಾಯಿಗೆ ಬೀಗ ಧರಿಸಿ ಶ್ರೀಕಂಠೇಶ್ವರನಿಗೆ ಹರಕೆಯನ್ನು ಸಲ್ಲಿಸಿದರಂತೆ. ಸದಾಶಿವರಾಯರಲ್ಲಿ ಆಗಿನ ಜನ ಇಟ್ಟಿದ್ದ ಪ್ರೀತಿ ಆದರಗಳಿಗೆ ಇದೊಂದು ನಿದರ್ಶನ.

ತೋಡಿರಾಗದ ಪ್ರಭುತ್ವ

ಮೈಸೂರಿನಲ್ಲಿ ರಾಮೋತ್ಸವವನ್ನು ಪ್ರಾರಂಭಿಸಿದವರು ಸದಾಶಿವರಾಯರೆಂದು ಹೇಳುತ್ತಾರೆ. ಕನ್ನಡಿಯ ಮೇಲೆ ಚಿತ್ರಿತವಾಗಿದ್ದ ಸೀತಾರಾಮರ ಪಟವನ್ನು ರಾಯರು ಪೂಜಿಸುತ್ತಿದ್ದರಂತೆ. ಅದು ಆಮೇಲೆ ಯಾವಾಗಲೊ ಒಡೆದು ಹೋಯಿತು. ಆ ಪಟವನ್ನು ಕೂರಿಸುತ್ತಿದ್ದ ಮಂಟಪವು ಈಗಿನ ಆಶೋಕ ರಸ್ತೆಯಲ್ಲಿರುವ ಕನ್ಯಕಾಪರಮೇಶ್ವರಿ ದೇವಸ್ಥಾನ ದಲ್ಲಿದೆ. ಈ ಮಂಟಪದಲ್ಲಿ ‘‘ಮುಮ್ಮಡಿ ಕೃಷ್ಣರಾಜರ ಪಾದಸೇವಕ ಮುನಿಸ್ವಾಮಿ ಶ್ರೇಷ್ಠಿ ಮಾಡಿಸಿಕೊಟ್ಟ ಮಂಟಪ’’ ಎಂದಿರುವುದನ್ನು ಇಂದಿಗೂ ಗುರುತಿಸಬಹುದು. ಕೊಪ್ಪರಂ ಮುನಿಸ್ವಾಮಿ ಶೆಟ್ಟರವರು ವಾಸಿಸುತ್ತಿದ್ದ ದೊಡ್ಡ ಮನೆಯ ಮಹಡಿ ಮೇಲೆಯೆ ರಾಯರು ಭಜನೆಯನ್ನು ನಡೆಸುತ್ತಿದ್ದರಂತೆ. ಒಮ್ಮೆ ಮದರಾಸು ಪ್ರಾಂತದಿಂದ ಬಂದ ಒಬ್ಬ ವಿದ್ವಾಂಸರ ಸಂಗೀತ ಕಛೇರಿ ಏರ್ಪಾಡಾಗಿತ್ತು. ಕಛೇರಿಗೆ ಬಂದಿದ್ದ ರಾಯರು ಆ ವಿದ್ವಾಂಸರನ್ನು ತೋಡಿರಾಗವನ್ನು ಹಾಡಿ ಎಂದು ಕೇಳಿದರು. ಅದಕ್ಕೆ ಆ ವಿದ್ವಾಂಸರು ‘‘ಆ ರಾಗವನ್ನು ಜಮೀನುದಾರರೊಬ್ಬರಲ್ಲಿ ಒತ್ತೆ ಇಟ್ಟಿದ್ದೇನೆ. ಹಾಡುವ ಸ್ವಾತಂತ್ರ್ಯವಿಲ್ಲ’’  ಎಂದರು. ರಾಯರು ಸುಮ್ಮನಾಗಿ ಮತ್ತೊಂದು ದಿನ ಭಜನೆಯ ವೇಳೆಗೆ ಆ ವಿದ್ವಾಂಸರನ್ನೂ ಬರಮಾಡಿಕೊಂಡು, ತೋಡಿರಾಗವನ್ನು ಹಾಡಲು ಪ್ರಾರಂಭಿಸಿದರು.

ಈ ವಿಷಯವನ್ನು ಮೊದಲೇ ತಿಳಿದಿದ್ದ, ಸಂಗೀತ ಪ್ರಿಯರಾದ ಮುಮ್ಮಡಿ ಕೃಷ್ಣರಾಜರು ವೇಷ ಮರೆಸಿಕೊಂಡು ಹೋಗಿ ಜನರ ಗುಂಪಿನಲ್ಲಿ ಸೇರಿಕೊಂಡು ತಾವೂ ಸಂಗೀತವನ್ನು ಕೇಳುತ್ತಿದ್ದರು. ಜನಜಂಗುಳಿಯಲ್ಲಿ ದೊರೆಗಳಿರುವ ಗುಟ್ಟು ಬಯಲಾಗುವ ಸೂಚನೆಗಳು ಕಂಡುಬರಲು, ದೊರೆಗಳು ಅರಮನೆಗೆ ಹಿಂತಿರುಗಿದರು. ಅನಂತರ ತಮ್ಮ ನಿಜವಾದ ಉಡುಪಿನಲ್ಲೇ ಸಾರೋಟಿನಲ್ಲಿ ಕುಳಿತು ಮತ್ತೆ ಸಂಗೀತ ಕೇಳಲು ದಯಮಾಡಿಸಿದರಂತೆ. ಶ್ರೇಷ್ಠಿ ಸಹೋದರರು ದೊರೆಗಳನ್ನು ಭಕ್ತಿ ವಿನಯಗಳಿಂದ ಬರಮಾಡಿಕೊಂಡು ಕೂರಿಸಿ ಉಪಚರಿಸಿದರು. ಪ್ರಭುಗಳೇ ಎದುರಿಗಿದ್ದುದರಿಂದ ರಾಯರಿಗೆ ಅಮಿತ ಆನಂದವಾಗಿ ಮೈಮರೆತು ಹಾಡುತ್ತಿದ್ದರು. ರಾತ್ರಿ ಹತ್ತು ಗಂಟೆಗೆ ಪ್ರಾರಂಭವಾದ ತೋಡಿ ರಾಗವು ಬೆಳಗಿನ ಜಾವವಾದರೂ ಮುಗಿಯಲೇ ಇಲ್ಲವಂತೆ. ಪರಸ್ಥಳದ ವಿದ್ವಾಂಸರು ರಾಯರ ಅಸಾಮಾನ್ಯ ಪ್ರತಿಭೆಯನ್ನು ಕಂಡು ಬೆರಗಾದರು. ತೋಡಿರಾಗವನ್ನು ತನ್ನಂತೆ ಹಾಡುವಂತಹವರು ಇನ್ನು ಯಾರೂ ಇಲ್ಲ ಎಂದು ಅವರಿಗೆ ಗರ್ವವಿತ್ತು. ರಾಯರ ಮುಂದೆ ತಾವು ಅತ್ಯಲ್ಪ ಎಂದು ಅರಿವಾಯಿತು. ಅದುವರೆಗೆ ತಾವು ಸಂಪಾದಿಸಿದ್ದ ಬಿರುದುಗಳನ್ನು ರಾಯರ ಪಾದಗಳಿಗೆ ಸಮರ್ಪಿಸಿ ಕೆಲವು ಕಾಲ ಅವರ ಶಿಷ್ಯನಾಗಿಯೂ ಇದ್ದರಂತೆ. ಕೃಷ್ಣರಾಜರು ಸಂತಸಪಟ್ಟು ಎಲ್ಲರನ್ನೂ ಅಭಿನಂದಿಸಿ ಅರಮನೆಗೆ ಹಿಂತಿರುಗಿದರಂತೆ.

ಕ್ಷೇತ್ರ ಯಾಟನೆ

ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿನ ಅಧಿದೇವತೆಗಳನ್ನು ಕುರಿತು ಸ್ತೋತ್ರಗಳನ್ನು ಅಥವಾ ಕೀರ್ತನೆಗಳನ್ನು ರಚಿಸುವ ಸತ್ಸಂಪ್ರದಾಯವನ್ನು ನಮ್ಮ ಎಲ್ಲಾ ಆಚಾರ್ಯರೂ ಕೀರ್ತನಕಾರರೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಸದಾಶಿವರಾಯರೂ ಅದೇ ಮೇಲ್ಪಂಕ್ತಿಯನ್ನು ಅನುಸರಿಸಿ ಪ್ರಸಿದ್ಧ ಕ್ಷೇತ್ರಗಳನ್ನು ಸಂದರ್ಶಿಸಿ ಕೆಲವು ಕೀರ್ತನೆಗಳನ್ನು ರಚಿಸಿದ್ದಾರೆ. ಮದರಾಸಿನ ತಿರುವಲ್ಲಿಕ್ಕೇಣಿ(ಟ್ರಿಪ್ಲಿಕೇನ್) ಯಲ್ಲಿರುವ ಶ್ರೀ ಪಾರ್ಥಸಾರಥಿ ಸ್ವಾಮಿ ದೇವಸ್ಥಾನಕ್ಕೆ ಹೋಗಿ, ಪಾರ್ಥಸಾರಥಿಯನ್ನು ದರ್ಶಿಸಿ ಭೈರವಿರಾಗದಲ್ಲಿ ‘‘ಶ್ರೀ ಪಾರ್ಥಸಾರಥೇ’’ ಎಂಬ ಕೀರ್ತನೆಯನ್ನು ರಚಿಸಿದರು. ಕಂಚಿಗೆ ಹೋಗಿ ಶ್ರೀ ಏಕಾಮ್ರೇಶನನ್ನು ಕುರಿತು ಕಾಂಬೋಧಿರಾಗದಲ್ಲಿ ‘‘ಸಾಮ್ರಾಜ್ಯದಾಯಕೇಶ’’ ಎಂಬ ಕೀರ್ತನೆಯನ್ನೂ ಅದೇ ಕಂಚಿಯ ಶ್ರೀ ಕಾಮಾಕ್ಷಿದೇವಿಯನ್ನು ಕುರಿತು ಕಲ್ಯಾಣಿರಾಗದಲ್ಲಿ ‘‘ಕನುಗೊನಿ ಧನ್ಯುಡ ನೈತಿನಿ’’, ‘‘ಓ ರಾಜರಾಜೇಶ್ವರಿ’’ ಕೀರ್ತನೆಗಳನ್ನೂ ಸಾವೇರಿ ರಾಗದಲ್ಲಿ ‘‘ಶ್ರೀ ಕಾಮಕೋಟಿ ಪೀಠಸ್ಥಿತೇ’’ ಎಂಬ ಕೀರ್ತನೆಯನ್ನೂ ರಚಿಸಿದರು. ಶ್ರೀರಂಗಕ್ಷೇತ್ರದಲ್ಲಿ ಶ್ರೀ ರಂಗನಾಥನನ್ನು ಕುರಿತು ಕಮಾಚ್ ರಾಗದಲ್ಲಿ ‘‘ಪರಮಾದ್ಭುತಮೈನ ನೀ ಸೇವ’’ ಎಂಬ ಕೀರ್ತನೆಯನ್ನೂ ಪಳನಿಯ ಶ್ರೀ ವೇಲಾಯುಧ ಸ್ವಾಮಿಯ ದರ್ಶನ ಮಾಡಿ, ಕಾಂಬೋಧಿ ರಾಗದಲ್ಲಿ ‘‘ಶ್ರೀ ಸುಬ್ರಹ್ಮಣ್ಯ’’ ಎಂಬ ಕೀರ್ತನೆಯನ್ನೂ ರಚಿಸಿದರು. ಪ್ರಸಿದ್ಧವಾದ ಬೇಲೂರಿಗೆ ಹೋಗಿ ಕೇಶವನ ದರ್ಶನವನ್ನು ಮಾಡಿ ಮೋಹನ ರಾಗದಲ್ಲಿ ‘ಸ್ತ್ರೀ ವೇಶಮುದಾಲ್ಜಿನ’ ಎಂಬ ಕೀರ್ತನೆಯನ್ನು ರಚಿಸಿದರು.

ಕೃತಿ ಶೈಲಿ

ಸದಾಶಿವರಾಯರ ಮಾತೃಭಾಷೆ ಮರಾಠಿಯಾದರೂ ಆಗಿನ ಸಂಪ್ರದಾಯವನ್ನು ಅನುಸರಿಸಿ ಸಂಸ್ಕೃತದಲ್ಲಿಯೂ, ತೆಲುಗಿನಲ್ಲಿಯೂ ಕೃತಿಗಳನ್ನು ರಚಿಸಿದರು. ಮುನಿಸ್ವಾಮಿ ಶ್ರೇಷ್ಠಿ ಸಹೋದರರಲ್ಲಿ ಒಬ್ಬರಾದವರೂ, ಸದಾಶಿವರಾಯರ ಆಪ್ತ ಮಿತ್ರರೂ ಆಗಿದ್ದ ಆಂಧ್ರಕವಿ ಅಪ್ಪಾವು ಶೆಟ್ಟರು (ಇವರೂ ತೆಲುಗಿನಲ್ಲಿ ಕವಿತೆಯನ್ನೂ ಕೀರ್ತನೆಯನ್ನೂ ರಚಿಸಿದ್ದಾರೆ) ರಾಯರು ಕೃತಿಗಳನ್ನು ರಚನೆ ಮಾಡುವಾಗ ಎಷ್ಟೋ ಸಲಹೆಗಳನ್ನು ಕೊಡುತ್ತಿದ್ದರಂತೆ. ರಾಯರ  ಇಷ್ಟ ದೈವವು ಶ್ರೀರಾಮನಾದರೂ ಇತರ ದೇವತೆಗಳನ್ನೂ ಮತ್ತು ಮತಾಚಾರ್ಯರುಗಳನ್ನೂ ಕುರಿತು ಹಾಡುವಾಗ ಅಷ್ಟೇ ಭಕ್ತಿಯಿಂದ ಹಾಡಿದ್ದಾರೆ. ರಾಯರು ಅನೇಕ ವರ್ಣ ಕೃತಿ, ಜತಿಸ್ವರ, ತಿಲ್ಲಾನಗಳನ್ನು ರಚಿಸಿರುವರೆಂದು ತಿಳಿದು ಬರುವುದಾದರೂ ನಮಗೆ ದೊರೆತಿರುವುದು ೬೦ ಕ್ಕೂ ಕಡಿಮೆ. ಅವುಗಳಲ್ಲಿ ಕೆಲವಕ್ಕೆ ಮಾತ್ರ ಸಾಹಿತ್ಯ ದೊರೆತಿದೆ. ಧನ್ಯಾಸಿ ರಾಗದ ಒಂದೇ ಒಂದು ಪದವರ್ಣ (ಏಮಗುವ ಬೋಧಿಂಚೆರ) ದೊರೆತಿದೆ. ಕಛೇರಿಗಳಲ್ಲಿ ಆಗಾಗ ಕೇಳಿ ಬರುವ ಕೃತಿಗಳೆಂದರೆ, ಹರಿಕಾಂಬೋಧಿ ರಾಗದ ‘ಸಾಕೇತನಗರನಾಥ’  ಮತ್ತು ಅಠಾಣ ರಾಗದ ‘ವಾಚಾ ಮಗೋಚರುಂಡನಿ’. ಸಾಹಿತ್ಯ ಸ್ವಲ್ಪ ಹೆಚ್ಚೇ ಎನ್ನಬಹುದಾದ ಇವರ ಕೃತಿಗಳನ್ನು ಹಾಡಲು ಗಾಯಕರಿಗೆ ಸಾಹಿತ್ಯಜ್ಞಾನವೂ, ಒಳ್ಳೆಯ ಸ್ವರಜ್ಞಾನವೂ ಮತ್ತು ದೃಢವಾದ ಶಾರೀರವೂ ಇರಬೇಕು. ಇವರು ತಮ್ಮ ಕೃತಿಗಳಲ್ಲಿ ಅನೇಕವುಗಳಿಗೆ ರಚಿಸಿರುವ ಚಿಟ್ಟೆ ಸ್ವರಗಳೂ ಮತ್ತು ಅವಕ್ಕೆ ಸಾಹಿತ್ಯವೂ ಅಲಂಕಾರಪ್ರಾಯವಾಗಿವೆ. ಶ್ಯಾಮಾಶಾಸ್ತ್ರಿಗಳು ಮತ್ತು ಸುಬ್ಬರಾಯ ಶಾಸ್ತ್ರಿಗಳನ್ನು ಬಿಟ್ಟರೆ ಕೃತಿಗೆ ಅಲಂಕಾರವೆನ್ನಿಸುವ ಈ ಚಿಟ್ಟೆಸ್ವರ ಮತ್ತು ಅದಕ್ಕೆ ಸಾಹಿತ್ಯವನ್ನು ತಮ್ಮ ಕೃತಿಗಳಿಗೆ ಹೆಚ್ಚಾಗಿ ಅಳವಡಿಸಿದವರೆಂದರೆ ಸದಾಶಿವರಾಯರು. ಆಯಾ ಸನ್ನಿವೇಶಕ್ಕೆ ತಕ್ಕಂತೆ ಕೃತಿರಚನೆಯನ್ನು ಮಾಡುವ ಇವರ ಸಾಮರ್ಥ್ಯವನ್ನು ಕಾಂಬೋಧಿರಾಗದ ‘ಸೀತಾಲಕ್ಷ್ಮಣ ಸಮೇತ’ ಎಂಬ ಕೃತಿಯಲ್ಲೂ ಚಂದ್ರಚೂಡ ರಾಗದ ‘ನಮಾಮಿ ಶ್ರೀಮನ್ಮಹಾದೇವೇಂದ್ರ ಸರಸ್ವತಿ’ ಎಂಬ ಕೃತಿಯಲ್ಲೂ ಕಾಣಬಹುದು. ಇವೆಲ್ಲ ಶ್ರೀ ತ್ಯಾಗರಾಜಸ್ವಾಮಿಗಳ ಕೃತಿಗಳಂತೆ ಭಕ್ತಿಭಾವ ಪೂರಿತವಾದುವು. ಭಕ್ತನೊಬ್ಬ ತುಂಬಾ ದೈನ್ಯದಿಂದ ಭಗವಂತನನ್ನು ಬೇಡಿಕೊಳ್ಳುವ ಧ್ವನಿ ಇವರ ಕೃತಿಗಳಲ್ಲಿ ಅಡಗಿದೆ. ಕಷ್ಟ ಅಡರಿದಾಗ ತಮ್ಮ ಇಷ್ಟ ದೈವವಾದ ರಾಮನನ್ನೇ ಇವರು ಶರಣುಹೋಗುವುದು. ಉದಾಹರ ಣೆಗಾಗಿ ಅವರ ಮೋಹನರಾಗದ ‘‘ಪೆದ್ದ ದೇವುಂಡನಿ ನಿನ್ನು ನಮ್ಮಿತಿರಾ’’ ಎಂಬ ಹಾಡನ್ನು ಇಲ್ಲಿ ಕೊಟ್ಟಿದೆ.

ಪೆದ್ದ ದೇವುಂಡನಿ ನಿನು ನಮ್ಮಿತಿ ರಾಮ ರಾಮಾ
ಭೀತಿ ಚೆಂದಿನ ನನ್ನು ಬ್ರೋವ ಸಮಯಮಿಪುಡು ರಾರಾ
ವ್ರೊಕ್ಕೇನುರ |ಪ|
ಸಿದ್ಧಮಾರ್ಗಮು ತೆಲಿಯಜಾಲನು ಕರ್ಮ ಮಾರ್ಗಮು
ಮೊದಲೇ ತೆಲಿಯದು|
ವೇದಾಂತ ವಿಚಾರಮು ಸುಂತೈನ ತೆಲಿಯಲೇದು
ಸೀತಾರಾಮ||ಅ.ಪ||
ನೀವು ಗಾಕ ನನ್ನು ಬ್ರೊಚುವಾರು ಜಗತಿಗಲರಾ ಸದಯ
ರಘುಪತಿ ಸುಹೃದಯ|
ನಿರವಧಿಸುಖಮುಲೀರ ಜಲಜನಯನ ವಿಧಿಹರನುತ
ವಿಮಲಚರಿತ ಕವಿನುತ ||ಚಿ.ಸಾ||
ಮತಮುಲಲೋ ಜೊರಬಡುದಾಮಂಟೇ ಶಾಂತಭಾವಮು
ಗಾನದಾಯೆನು|
ಶ್ರುತಿ ಇತಿಹಾಸಾದಿ ಪುರಾಣಂಬುಲು ಚದಿವಿ ಅರ್ಥಮೇ
ತೆಲುಸುಕೋಜಾಲ|
ಸತತಮು ನೀಚರಣಭಜನಸೇಯ ಮನಸೇ ನಿಲ್ವದೇಮಿ
ಸುತರ|
ಗತಿ ನೀವೇರ ಸದಾಶಿವಕವಿನುತ ನಿರ್ವ್ಯಾಜಕರುಣಾ
ಮೂರ‍್ತೇ ||ಚ||
ಈ ಕೃತಿಯ ಸರಳಾನುವಾದವನ್ನು ಕೆಳಗೆ ಕೊಟ್ಟಿದೆ:-
(ಪಲ್ಲವಿ)
ದೊಡ್ಡದೇವರೆಂಬುದಾಗಿ ನಿನ್ನನ್ನು ನಂಬಿದ್ದೇನೆ ರಾಮರಾಮರಾಮ||
ಭಯಗೊಂಡ ನನ್ನನ್ನು ಕಾಪಾಡಲು ಇದೇ ಸಮಯ ಬಾರೋ, ಮರೆಹೊಕ್ಕಿದ್ದೇನೆ||
(ಅ||ಪ||)
ಸಿದ್ಧ ಮಾರ್ಗವನ್ನು (ಮೋಕ್ಷಮಾರ್ಗವನ್ನು) ತಿಳಿದವನಾಗಿಲ್ಲ|
ಕರ್ಮಮಾರ್ಗ ಮೊದಲೇ ತಿಳಿಯದು| ವೇದಾಂತ ವಿಚಾರವನ್ನು ಸ್ವಲ್ಪವೂ ತಿಳಿದಿಲ್ಲ ಸೀತಾರಾಮ||
(ಚಿಟ್ಟೆಸ್ವರ ಸಾಹಿತ್ಯ)
ನೀನಲ್ಲದೆ ನನ್ನನ್ನು ಕಾಪಾಡುವವರು ಜಗತ್ತಿನಲ್ಲಿ ಇದ್ದಾರೆಯೆ ಸದಯ, ರಘುಪತಿ, ಸುಹೃದಯ||
ನಿರವಧಿಸುಖವನ್ನು ಕೊಡು, ಜಲಜನಯನ, ವಿಧಿಹರ ನುತ, ವಿಮಲಚರಿತ||
(ಚರಣ)
ಮತಗಳಲ್ಲಿ ಪ್ರವೇಶಿಸೋಣವೆಂದರೆ ಶಾಂತಭಾವವು ಕಾಣದಾಗಿದೆ|
ಶ್ರುತಿಇತಿಹಾಸಾದಿ ಪುರಾಣಗಳನ್ನು ಓದಿ ಅರ್ಥ ತಿಳಿಯಲಾರದವನಾಗಿದ್ದೇನೆ|
ಸತತವಾಗಿ ನಿನ್ನ ಪಾದ ಭಜನೆಯನ್ನು ಮಾಡೋಣ ವೆಂದರೆ ಮನಸ್ಸು ನಿಲ್ಲುತ್ತಿಲ್ಲ ಏನು ಮಾಡಲಿ|
ಗತಿ ನೀನೇ, ಸದಾಶಿವಕವಿನುತ,ನಿರ್ವ್ಯಾಜ ಕರುಣಾ ಮೂರ್ತೇ||

ಈ ಕೃತಿಯ ಸಾಹಿತ್ಯದ ಭಕ್ತಿಭಾವವು ಕೇಳುವವರನ್ನು ಪರವಶರನ್ನಾಗಿ ಮಾಡುತ್ತದೆ. ಸದಾಶಿವನುತ, ಕವಿಸದಾ ಶಿವನುತ, ಬುಧವರ‍್ಯಕವಿಸದಾಶಿವಸುತ, ಸದಾ ಶಿವಾರ್ತಿಹರ, ಸದಾಶಿವ ಕವಿಮಾನಸಚರ,ಸದಾಶಿವ ಕವಿಪೋಷಣ ಧುರೀಣ,ಸದಾಶಿವ ಭಯಹರ ಎಂಬಿತ್ಯಾದಿ ಮುದ್ರಿಕೆ ಗಳೊಡನೆ ಕೃತಿಗಳನ್ನು ರಚಿಸಿದ್ದಾರೆ. ರಾಯರು ನೂರಾರು ಕೃತಿಗಳನ್ನು ರಚಿಸಿರುವರೆಂದು ಹೇಳುವುದಾದರೂ ನಮಗೆ ದೊರೆತಿರುವುದು ಕೆಲವೇ.

ರಾಯರ ಶಿಷ್ಯರು

ಹೊಟ್ಟೆಯ ಪಾಡಿಗಾಗಿ ಮನೆ ಮನೆಗೆ ಹೋಗಿ ಸಂಗೀತ ಪಾಠಗಳನ್ನು ಹೇಳಿಕೊಡುವ ಪದ್ಧತಿ ಹಿಂದೆ ಇರಲಿಲ್ಲ. ವಿದ್ಯಾರ್ಥಿಯು ಬಡವನಾದರೂ ಸರಿಯೆ, ಶ್ರೀಮಂತ ನಾದರೂ ಸರಿಯೆ, ಗುರುಗಳ ಮನೆಯಲ್ಲೇ ವಾಸಮಾಡಿಕೊಂಡು ಅವರ ಸೇವೆಯನ್ನು ಮಾಡಿ ವಿದ್ಯೆ ಕಲಿಯಬೇಕಾಗಿತ್ತು. ಶಿಷ್ಯನು ಶ್ರೀಮಂತನಾದರೆ ಗುರುದಕ್ಷಿಣೆ ಸಲ್ಲಿಸಬಹುದು. ಗುರುಗಳು ಶಿಷ್ಯನ ಮನೆಗೆ ಬಂದರೆ ಆ ದಿನ ಸುದಿನ. ಗುರುಗಳನ್ನು ಪರಮಾದರದಿಂದ ಬರಮಾಡಿಕೊಂಡು ಉಪಚರಿಸಿ ಯಥಾಶಕ್ತಿ ಮರ‍್ಯಾದೆ ಮಾಡಿ ಕಳುಹಿಸುತ್ತಿದ್ದರು. ರಾಯರ ಶಿಷ್ಯ ವರ್ಗಕ್ಕೆ ಸೇರಿದ ಅಂತಹ ಶಿಷ್ಯರಲ್ಲಿ ಅಗರ್ಭ ಶ್ರೀಮಂತರಾಗಿದ್ದ ವೈಣಿಕಪ್ರವೀಣ ವೀಣೆ ಸುಬ್ಬಣ್ಣನವರು ಒಬ್ಬರು. ರಾಯರನ್ನು ಅನೇಕಾವರ್ತಿ ತಮ್ಮ ಮನೆಗೆ ಬರಮಾಡಿಕೊಂಡು ಮರ‍್ಯಾದೆ ಮಾಡಿ ಕಳುಹಿಸಿದ್ದರಂತೆ. ಇವರಲ್ಲದೆ, ರಾಯರ ಇನ್ನೊಬ್ಬ ಶಿಷ್ಯರು ಅತ್ಯಂತ ಪ್ರಖ್ಯಾತರಾದ ವೈಣಿಕಶಿಖಾಮಣಿ ವೀಣೆ ಶೇಷಣ್ಣ ನವರು. ಬೆಟ್ಟದಪುರದ ಶಾಮಣ್ಣನವರು, ಚಿಕ್ಕನಾಯಕನ ಹಳ್ಳಿ ವೆಂಕಟೇಶಯ್ಯ, ಗಂಜಾಂ ಸೂರ‍್ಯನಾರಾಯಣಪ್ಪ, ಹಾನಗಲ್ ಚಿದಂಬರಂಯ್ಯ ಇವರುಗಳೂ ರಾಯರ ಅಚ್ಚುಮೆಚ್ಚಿನ ಚಿದಂಬರಯ್ಯನವರು ರಾಯರ ನೂರಾರು ಕೃತಿಗಳನ್ನು ಹಾಡುತ್ತಿದ್ದರೆಂದು ಅವರ ಶಿಷ್ಯರಾದ ಚಿಂತಲಪಲ್ಲಿ ವೆಂಕಟರಾಯರು ಹೇಳುತ್ತಿದ್ದರಂತೆ. ಅಂತೂ ಇಷ್ಟು ಮಂದಿ ಶಿಷ್ಯರುಗಳು ಆಗಿಹೋದರೂ ಒಬ್ಬರ ಹತ್ತಿರವೂ ರಾಯರ ಎಲ್ಲ ಕೃತಿಗಳು ಉಳಿದು ಬರಲಿಲ್ಲವೆಂಬುದು ದುರದೃಷ್ಟಕರ.

ರಾಯರು ಹೆಂಗಸರಿಗೆ ಪಾಠ ಹೇಳುತ್ತಿರಲಿಲ್ಲ. ನಾಟಕ ಮಂಡಳಿಯೊಂದರಲ್ಲಿ ಪಾತ್ರ ಧರಿಸುತ್ತಿದ್ದವಳೊಬ್ಬಳಿಗೆ ಪಾಠ ಹೇಳುವ ಕಠಿಣಪ್ರಸಂಗಕ್ಕೆ ಸಿಕ್ಕಿ ಬೀಳುವುದರಲ್ಲಿದ್ದಾಗ, ಕೆಲವು ಕಾಲ ಊರನ್ನು ಬಿಟ್ಟು ಹೊರಟು ಹೋಗಿದ್ದರಂತೆ. ಸೂಕ್ಷ್ಮವನ್ನರಿತ ಆಪ್ತರು ರಾಯರಿಗೆ ಭರವಸೆ ನೀಡಿ ಹಿಂದಕ್ಕೆ ಕರೆಸಿಕೊಂಡರಂತೆ.

ಅಂತ್ಯ

ಸದಾಶಿವರಾಯರ ಹುಟ್ಟಿದ ದಿನಾಂಕವು ಹೇಗೋ ಹಾಗೆ ಸತ್ತ ದಿನಾಂಕವೂ ನಮಗೆ ತಿಳಿಯದು. ಇವರು ಸುಮಾರು ೮೦ ವರ್ಷಗಳು ಜೀವಿಸಿದ್ದರೆಂದು ತಿಳಿದು ಬರುತ್ತದೆ. ೧೯೦೩ರಲ್ಲಿ ಸುಬ್ಬರಾಮ ದೀಕ್ಷಿತರು ಪ್ರಕಟಿಸಿದ ‘ಸಂಗೀತ ಸಂಪ್ರದಾಯ ಪ್ರದರ್ಶಿನಿ’ ಎಂಬ ಪುಸ್ತಕದಲ್ಲಿ ಸದಾಶಿವರಾಯರ ಬಗ್ಗೆ ಹೀಗೆ ಹೇಳಿದ್ದಾರೆ. ‘‘ಈತನು ಮಹಾರಾಷ್ಟ್ರ ಬ್ರಾಹ್ಮಣ, ಊರು ಮೈಸೂರು ಸಂಸ್ಥಾನ. ಸಂಗೀತ ಸಂಸ್ಕೃತಾಂಧ್ರದಲ್ಲಿ ಪಂಡಿತ. ಈತನಿಂದ ರಚಿತವಾದ ಕೀರ್ತನ ವರ್ಣ ತಿಲ್ಲಾನಗಳು ಪ್ರಸಿದ್ಧವಾಗಿವೆ. ಈತನು ೨೦ ವರ್ಷಗಳ ಹಿಂದೆ ಇದ್ದನು.’’ ಪ್ರಾಯಶಃ ೧೮೮೦-೧೮೮೩ ರ ಮಧ್ಯೆ ಯಾವಾಗಲೋ ಸದಾಶಿವರಾಯರು ಕಾಲವಾದರೆಂದು ಗೊತ್ತಾಗುತ್ತದೆ. ಕೊನೆಯದಿನ ದೇವತಾರಾಧನೆಯನ್ನು ಮುಗಿಸಿ, ಹಜಾರದ ಕುರ್ಚಿಯ ಮೇಲೆ ಕುಳಿತು ತಾವೇ ರಚಿಸಿದ ಲಲಿತರಾಗದ ‘ಕಮಲಕಾಂತ ಶ್ರೀ ಕೃಷ್ಣಾನಂತ’ ಎಂಬ ಕೀರ್ತನೆಯನ್ನು ಹಾಡಿಕೊಳ್ಳುತ್ತ, ಸ್ವಲ್ಪ ತುಪ್ಪ ತರುವಂತೆ ಹೆಂಡತಿಗೆ ಹೇಳಿದರು. ಆಕೆಯು ತಂದು ಕೊಡಲು ಅದನ್ನು ನಡುನೆತ್ತಿಗೆ ಉಜ್ಜಿಕೊಂಡು ಉಸಿರು ಬಿಗಿಹಿಡಿಯಲು ಪ್ರಾಣವು ಹೋಯಿತಂತೆ. ಆ ಕಾಲದಲ್ಲಿ ಮನೆಯಲ್ಲಿದ್ದ ಸಂಗೀತ ವಾದ್ಯಗಳು ತಮಗೆ ತಾವೇ ರೆsಂಕರಿಸಿದುವಂತೆ.  ತಮ್ಮ ಅಂತ್ಯಕಾಲವನ್ನು ಅರಿತುಕೊಂಡು ಅದಕ್ಕೆ ಸಿದ್ಧರಾಗಿದ್ದ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಾದ ಶ್ರೀ ತ್ಯಾಗರಾಜ, ಶ್ಯಾಮಾಶಾಸ್ತ್ರಿ, ಮುತ್ತುಸ್ವಾಮಿ ದೀಕ್ಷಿತರ ಸಾಲಿಗೆ ಸದಾಶಿವರಾಯರೂ ಸೇರಿದವರಾದರು.

ಸಂತತಿ

ಸದಾಶಿವರಾಯರಿಗೆ ಮಲ್ಹಾರಿರಾವ್ ಮತ್ತು ಕೃಷ್ಣರಾವ್ ಎಂಬ ಇಬ್ಬರು ಗಂಡು ಮಕ್ಕಳೂ, ಲಕ್ಷ್ಮೀಬಾಯಿ, ಗೋಜೀಬಾಯಿ ಮತ್ತು ಕಾಮಾಕ್ಷಿಬಾಯಿ ಎಂಬ ಮೂವರು ಹೆಣ್ಣು ಮಕ್ಕಳೂ ಆದರು. ಆದರೆ ಯಾರಲ್ಲಿಯೂ ಸಂಗೀತವು ಬೆಳೆದು ಬರಲಿಲ್ಲ. ಹಿರಿಯ ಮಗಳಾದ ಲಕ್ಷ್ಮೀಬಾಯಿಯ ಮಗ ರಾಮರಾವ್ ಎಂಬುವರು ಮಾತ್ರ ಕರ್ಣಾಟಕ ನಾಟಕ ಮಂಡಳಿಯಲ್ಲಿ ಪ್ರಖ್ಯಾತ ನಟರಾಗಿದ್ದರಂತೆ. ಅವರ ನಟನೆಯನ್ನು ಬಹಳವಾಗಿ ಮೆಚ್ಚಿ ಶ್ರೀ ಚಾಮರಾಜೇಂದ್ರ ಒಡೆಯರವರು ಅವರಿಗೆ ಆಶ್ರಯವನ್ನು ಕೊಟ್ಟಿದ್ದರಂತೆ.

ಮುಮ್ಮಡಿ ಕೃಷ್ಣರಾಜರು ಸದಾಶಿವರಾಯರಿಗೆ ಕೊಡುತ್ತಿದ್ದ ಮಾಸಾಶನವು ರಾಯರ ಮರಣಾನಂತರ ಅವರ ಹೆಂಡತಿಗೂ, ಅವರಾದಮೇಲೆ ಕಿರಿಯ ಮಗನ ಹೆಂಡತಿ ರಾಧಾಬಾಯಿ, ಅವರಾದ ನಂತರ ಅವರ ಮಕ್ಕಳಿಗೂ ಮುಂದುವರಿದು ಬರುತ್ತಿತ್ತಂತೆ.

ಸೊಗಸಾದ ಹಾಡುಗಳನ್ನು ರಚಿಸುವ ಶಕ್ತಿ, ವಿದ್ವತ್ಪೂರ್ಣವಾಗಿ ಮತ್ತು ಕೇಳುವವರ ಮನಸ್ಸು ಸಂತೋಷದಿಂದ ಉಕ್ಕುವಂತೆ ಹಾಡುವ ಶಕ್ತಿ ಎರಡನ್ನೂ ಸದಾಶಿವರಾಯರು ಪಡೆದಿದ್ದರು. ಹಾಡುಗಳನ್ನು ರಚಿಸುವ ಶಕ್ತಿಯನ್ನು ಭಗವಂತನಿಗೆ ಅರ್ಪಿಸಿದರು. ಹಾಡುವ ಶಕ್ತಿಯನ್ನು  ರಸಿಕರಿಗೆ ಅರ್ಪಿಸಿದರು. ತಾವು ವಿನಯದಿಂದ, ಆತ್ಮ ಗೌರವದಿಂದ ಶುದ್ಧ ಜೀವನ ನಡೆಸಿದರು. ಹಣವನ್ನು ಗಳಿಸಲು ಸಂಗೀತವನ್ನು ಮಾರಲಿಲ್ಲ. ತ್ಯಾಗರಾಜರಿಂದ ನಡೆದು ಬಂದಿರುವ ಶುದ್ಧ ಜೀವನ, ಒಳ್ಳೆಯ ಶಿಷ್ಯರಿಗೆ ಮಾರ್ಗದರ್ಶನ ಈ ಸಂಪ್ರದಾಯವನ್ನು ಬೆಳೆಸಿದ ಹಿರಿಯರು ಮೈಸೂರು ಸದಾಶಿವರಾಯರು.