ಗಮಕ ಕ್ಷೇತ್ರದಲ್ಲಿ ಗಮಕ ಭಗೀರಥರೆಂದೇ ಖ್ಯಾತರಾದ ಭಾರತ ಬಿಂದೂರಾಯರು, ಕೃಷ್ಣಗಿರಿ ಕೃಷ್ಣರಾಯರು, ಹಾಗೂ  ಕಳಲೆ ಸಂಪತ್ಕುಮಾಋಆಚಾರ್ಯರನ್ನು ಬಿಟ್ಟರೆ ಇದೇ ಸಾಲಿಗೆ ಸೇರುವ ಮತ್ತೊಬ್ಬ ಗಮಕಿ ಕೊಡಗಿನ ಮೈ.ಶೇ. ಅನಂತಪದ್ಮನಾಭರಾಯರು. ಅಲ್ಲದೆ ಈ ಭಗೀರಥತ್ರಯರ ಶಿಷ್ಯತ್ವಮಾಡಿ ಅವರೆಲ್ಲರ ವಾಚನ ಶೈಲಿಯನ್ನು ರೂಢಿಸಿಕೊಂಡವರು. ಸ್ವಲ್ಪ ಮಟ್ಟಿಗೆ ಸಂಗೀತ ಜ್ಞಾನವಿದ್ದು ಉತ್ತಮ ಕಂಠಶ್ರೀಯನ್ನು ಹೊಂದಿದ್ದ ರಾಯರು (ಇವರನ್ನು ಆತ್ಮೀಯವಾಗಿ ಎಲ್ಲರೂ ‘ರಾಯರು’ ಎಂದೇ ಕರೆಯುತ್ತಿದ್ದುದು) ತಮ್ಮ ತಂದೆಯವರು ಹಾಡುತ್ತಿದ್ದ ದೇವರನಾಮಗಳಿಂದ ಪ್ರಭಾವಿತರಾಗಿ ಅದರ ಸಹಾಯದಿಂದ ಕೀರ್ತನ ಕಲೆಯನ್ನು ರೂಢಿಸಿಕೊಂಡವರು. ಹರಿಕಥೆ ಮಾಡುವ ಹವ್ಯಾಸವನ್ನಿಟ್ಟುಕೊಂಡಿದ್ದರು. ಅವರ ಮೊಟ್ಟಮೊದಲಲ ಹರಿಕಥೆ ೧೯೨೪ರಲ್ಲಿ ಮಡಿಕೇರಿಯ ವೇದಾಂತ ಸಂಘದ ಸಭಾಂಗಣದಲ್ಲಿ ನಡೆಯಿತು. ಹೀಗೆ ಕೀರ್ತನ ಕಲೆಯನ್ನು ಕರಗತ ಮಾಡಿಕೊಂಡಿದ್ದ ರಾಯರು ಗಮಕಕ್ಕೆ ವಾಲಿದ್ದು ಒಂದು ಆಕಸ್ಮಿಕವೇ!

ಮಡಿಕೇರಿಯಲ್ಲಿ ೧೯೩೨ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ೧೮ನೇ ಸಾಹಿತ್ಯ ಸಮ್ಮೇಳನವನ್ನು ನಡೆಸಿತು. ಆಚಾರ್ಯ ಡಿ.ವಿ. ಗುಂಡಪ್ಪನವರ ಅಧ್ಯಕ್ಷತೆ. ಆಗ ರಾಯರಿಗೆ ೨೮ ವರ್ಷ. ಸಾಹಿತ್ಯಾಸಕ್ತಿ ಹೊಂದಿದ್ದ ಇವರು ಉತ್ಸಾಹೀ ಯುವ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಮ್ಮೇಳನದ ಮೂರು ದಿನಗಳ ಕಾಲ ‘ಶ್ಲೋಕ ಸಂಗೀತ’ ಎಂದೇ ಖ್ಯಾತರಾಗಿದ್ದ ಕಳಲೆ ಸಂಪತ್ಕುಮಾರಾಚಾರ್ಯರ ಕಾವ್ಯವಾಚನ ಏರ್ಪಾಡಾಗಿತ್ತು. ಅವರ ಕಂಠಶ್ರೀ, ವಾಚನ ಶೈಲಿಗಳಿಗೆ ರಾಯರು ಮುಗ್ಧರಾದರು. ಈ ಮೂರು ದಿನಗಳ ಕಾಲ ಅತ್ಯಂತ ಆಸಕ್ತಿಯಿಂದ ಕೇಳಿದ್ದ ವಾಚನದ ಶೈಲಿ ಅವರ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿತು. ಆಚಾರ್ಯರನ್ನು ಮನಸ್ಸಿನಲ್ಲೇ ತಮ್ಮ ಗುರುಗಳನ್ನಾಗಿ ಸ್ವೀಕರಿಸಿದರು. ಗಮಕ ಕಲೆಯ ಅಭ್ಯಾಸಕ್ಕೆ ತೊಡಗಿದರು. ಹೀಗೆ ಕೊಡಗಿನಲ್ಲೊಂದು ಗಮಕದ ತಾರೆಯ ಉದಯವಾಯಿತು.

ರಾಯರ ವಂಶಾ ಪರಂಪರೆ: ರಾಯರು ಮೂಲತಃ ಕೊಡಗಿನವರಲ್ಲ. ಮೇಲುಕೋಟೆಯ ಬೆಟ್ಟದ ಮೇಲಿರುವ ನರಸಿಂಹ ದೇವಾಲಯದ ಬೀಗಮುದ್ರೆ ವಂಶಸ್ಥರು. ಮಧ್ವರಾಯರೆಂಬುವರ ಮನೆತನದವರು. ಇವರ ತಂದೆ ಎಂ.ಎಸ್‌. ಶೇಷಗಿರಿರಾಯರು (ಕಲ್ಲೀರಾಯರೆಂದೇ ಪ್ರಸಿದ್ಧರಾಗಿದ್ದವರು) ಇದ್ದದ್ದು ಮೈಸೂರಿನಲ್ಲಿ. ಆಗ ಕೊಡಗು ಪ್ರತ್ಯೇಕ ಸಂಸ್ಥಾನವಾಗಿದ್ದು ಹಾಲೇರಿಯ ವಂಶಸ್ಥರ ಆಳ್ವಿಕೆಗೆ ಒಳಪಟ್ಟಿತ್ತು. ಅಲ್ಲಿನ ಅರಸರು ಕೊಡಗಿಗೆ ವಲಸೆ ಬಂದ ಬ್ರಾಹ್ಮಣ ಕುಟುಂಬಗಳಿಗೆ ಆðರಯ -ಉಂಬಳಿ ನೀಡಿ ಸೌಕರ್ಯ ಕಲ್ಪಿಸಿದರು. ಹಾಗೆ ಕೊಡಗಿಗೆ ವಲಸೆ ಹೋದ ನಾಲ್ಕಾರು ಮಾಧ್ವಕುಟುಂಬದಲ್ಲಿ ಕಲ್ಲೀರಾಯರ ಕುಟುಂಬವೂ ಒಂದು. ಪತ್ನಿ ನರಸಮ್ಮ, ಹಿರಿಯ ಮಗಳು ನಾಗವೇಣಿ, ಮಗ ಅನಂತನೊಂದಿಗೆ ಕೊಡಗಿಗೆ ಹೋದ ಶೇಷಗಿರಿರಾಯರು ಮೊದಲಿಗೆ ವೀರರಾಜ ಪೇಟೆಯಲ್ಲಿ ಕೆಲ ಕಾಲವಿದ್ದು ಮುಂದೆ ಅವರಿಗೆ ‘ಸಬ್‌ ರಿಜಿಸ್ಟಾರ್’ ಹುದ್ದೆ ದೊರೆತ ನಂತರ ಮಡಿಕೇರಿಗೆ ವರ್ಗಾಯಿಸಲ್ಪಟ್ಟು ಅಲ್ಲಿಯೇ ನೆಲಸಿದರು.

ರಾಯರು ಹುಟ್ಟಿದ್ದು ೧೯೦೩ನೇ ಇಸವಿ ಸೆಪ್ಟಂಬರ್ ೬ ರಂದು ಮೈಸೂರಿನಲ್ಲಿ. ಅನಂತ ಚತುರ್ದಶೀ ವ್ರತ ಸಾಂಗವಾಗಿ ನಡೆದು ಪೌರ್ಣಮಿ ದಿನ ಪುತ್ರೋತ್ಸವವಾದ್ದರಿಂದ ಮಗುವಿಗೆ ಅನಂತಪದ್ಮನಾಭನೆಂದೇ ನಾಮಕರಣವಾಯಿತು. ಮೈಸೂರಿನ ದಳವಾಯಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ. ಅನಂತರ ಮಡಿಕೇರಿ ಸೆಂಟ್ರಲ್‌ ಹೈಸ್ಕೂಲಿನಲ್ಲಿ ಪ್ರೌಢ ವಿದ್ಯಾಭ್ಯಾಸ. ಅಲ್ಲಿ ಇವರು ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗ ಅಲ್ಲಿಗೆ ಮುಖ್ಯೋಪಧ್ಯಾಯರಾಗಿ ಬಂದವರು ‘ಕವಿಶಿಷ್ಯ’ ಪಂಜೆ ಮಂಗೇಶರಾಯರು. ಪ್ರಥಮ ಭಾರತೀಯ  ಮುಖ್ಯೋಪಾಧ್ಯಾಯರು. ರಾಯರು ಇವರ ಪ್ರಥಮ ವಿದ್ಯಾರ್ಥಿ. ಪಂಜೆಯವರು ರಾಯರಲ್ಲಿ ಸುಪ್ತವಾಗಿದ್ದ ಸಾಹಿತ್ಯ-ಗಾಯನದ ಪ್ರತಿಭೆಯನ್ನು ಗುರುತಿಸಿ ಅದು ಬೆಳಕಿಗೆ ಬರಲು ಕಾರಣರಾದರು. ಒಳ್ಳೆಯ ಪ್ರೋತ್ಸಾಹ-ಮಾರ್ಗದರ್ಶನ ನೀಡಿದರು. ಹೀಗಾಗಿ ರಾಯರ ಚೊಚ್ಚಲ ಕೃತಿ ‘ಕಲಿ ಪ್ರಭುತ್ವ’ ಮೈಸೂರಿನ ‘ಸಾಧ್ವಿ’ ಪತ್ರಿಕೆಯಲ್ಲಿ ಪ್ರಕಟಗೊಂಡಿತು.

೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದ ಡಿ.ವಿ.ಜಿ.ಯವರ ಕಣ್ಣಿಗೆ ಬಿದ್ದರು. ಉತ್ಸಾಹೀ ಯುವಕನಾಗಿ ಪಾದರಸದಂತೆ ಓಡಾಡುತ್ತಿದ್ದ ರಾಯರ ಬಗ್ಗೆ ಅವರಿಗೆ ಭರವಸೆ ಮೂಡಿತು. ಸಮ್ಮೇಳನ ನಡೆದ ನಂತರದ ಉಳಿಕೆ ಹಣವನ್ನು ಅಲ್ಲೇ ತೊಡಗಿಸಿ ‘ಕೊಡಗು ಕರ್ನಾಟಕ ಸಂಘ’ವನ್ನು ಸ್ಥಾಪಿಸಿಯೇ ಬಿಟ್ಟರು. ಕೊಡಗಿನಲ್ಲಿ ಕನ್ನಡದ ಕಹಳೆ ಮೊಳಗಲು ಭದ್ರ ಬುನಾದಿಯನ್ನೇ ಹಾಕಿದರು. ಆ ಹೊತ್ತಿಗೆ ಸೆಂಟ್ರಲ್‌ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದ ಸಿ.ಎಂ. ರಾಮರಾಯರನ್ನು ಅದರ ಅಧ್ಯಕ್ಷರನ್ನಾಗಿಯೂ, ಕನ್ನಡ-ಸಂಸ್ಕೃತ ವಿದ್ವಾಂಸರಾಗಿದ್ದ ಓಡ್ಲೆಮನೆ ಆತ್ಮಾರಾಮ ಶಾಸ್ತ್ರಿಯವರನ್ನು  ಕಾರ್ಯದರ್ಶಿಯನ್ನಾಗಿ ನೇಮಿಸಿ ರಾಯರನ್ನು ಯುವ ಕಾರ್ಯಕರ್ತರನ್ನಾಗಿ ಮಾಡಿ ಪ್ರೋತ್ಸಾಹಿಸಿದರು. ಮುಂದೆ ೧೯೩೪ರಲ್ಲಿ ಅದರ ಕಾರ್ಯದರ್ಶಿಯಾದ ರಾಯರು ೧೯೪೩ರ ತನಕ ಅವಿರತವಾಗಿ ಆ ಜವಾಬ್ದಾರಿಯನ್ನು ಹೊತ್ತಿದ್ದಲ್ಲದೆ ವೀರಾಜಪೇಟೆ, ಸೋಮವಾರಪೇಟೆಗಳಲ್ಲೂ ಕರ್ನಾಟಕ ಸಂಘಗಳ ಶಾಖೆಯನ್ನು ತೆರೆಯಲು ಕಾರಣರಾದರು. ಮುಂದೆ ಅವರ ಉಪಾಧ್ಯಕ್ಷರಾಗಿ ೧೯೬೦ರವರೆಗೂ ಕಾರ್ಯನಿರ್ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿ, ಅನಂತರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದರು.

 

ಸಾಹಿತ್ಯ ಕೃಷಿ: ಈ ಹೊತ್ತಿಗೆ ರಾಯರ ಸಾಹಿತ್ಯ ಕೃಷಿ ಸತತವಾಗಿ ನಡೆದು ಅನೇಕ ಕೃತಿಗಳ ರಚನೆಯಾಗಿತ್ತು. ಹರಿಕಥೆಯಲ್ಲಿ ಸಾಕಷ್ಟು ಪಳಗಿದ್ದ ರಾಯರು ‘ಜಡಭರತಾಖ್ಯಾನ’ ಎಂಬ ಕಥಾಕೀರ್ತನ ಪ್ರಸಂಗವನ್ನು ಬರೆದು ಪ್ರಕಟಿಸಿದರು. ೧೯೩೦ರಲ್ಲಿ ‘ಮಹಾತ್ಮಾ ಕಬೀರ್’ ಎಂಬ ಕಾವ್ಯವನ್ನು ಭಾಮಿನಿಷಟ್ಪದಿಯಲ್ಲಿ ರಚಿಸಿದ್ದರು. ಇದು ಚಾಮರಾಜನಗರದ ‘ಕಾದಂಬರಿ ಸಂಗ್ರಹ’ದಲ್ಲಿ ಮುದ್ರಣ ಕಂಡಿತ್ತು. ೧೯೩೩ರಲ್ಲಿ “ಎರಡು ಕುಸುಮಗಳು” ಎಂಬ ಶೀರ್ಷಿಕೆಯಡಿಯಲ್ಲಿ  “ಶ್ರೀರಾಮಲೀಲೆ” ಮತ್ತು “ಪುಟ್ಟ ಕಿಟ್ಟನ ಗುಟ್ಟು” ಎಂಬ ಕಥೆಗಳು ರಚನೆಯಾಗಿ ಇವು “ಜಯಕರ್ನಾಟಕ” ಹಾಗೂ ಮುಂಬಯಿಯ “ಪ್ರಬೋಧಕ” (ಡಾ. ಬಿ.ಸಿ. ರಾಮಚಂದ್ರ ಶರ್ಮ ಅವರ ತಂದೆ ಚಂದ್ರಶೇಖರಯ್ಯ ಅವರು ನಡೆಸುತ್ತಿದ್ದ ಪತ್ರಿಕೆ) ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಕನ್ಮಡ

ಸಾಹಿತ್ಯ ಪರಿಷತ್ಪತ್ರಿಕೆ ಇದರ ವಿಮರ್ಶೆಯನ್ನು ಪ್ರಕಟಿಸಿತು.

“ಗೋಪೂ ಮದುವೆ” (ಕತೆಗಾರ್ತಿ ಗೌರಮ್ಮನನ್ನು ರಾಯರ ಗೆಳೆಯ ಬಿ.ಟಿ. ಗೋಪಾಲಕೃಷ್ಣ ಮದುವೆಯಾದ ಪ್ರಸಂಗಂ), “ದೊಡ್ಡಂಚಿನ ಸೀರೆ” (ದೊಡ್ಡ ಮನುಷ್ಯರೊಬ್ಬರ ಮನೆಯಲ್ಲಿ ರಾಯರ ತಾಯಿಗಾದ ಕಹಿ ಅನುಭವ), ‘ನಮ್ಮದಲ್ಲ’; ‘ಅಯ್ಯೋಭೂತ; ‘ಕಲಾವಿದ’ ಮೊದಲಾದ ಕಥೆಗಳು ಕಥಾವಳಿ, ಕತೆಗಾರ, ಉಷಾ ಎಂಬ ಮಾಸ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ರಾಯರಿಗೆ ಕಾವ್ಯಗಾಯನ ಕಲೆಯಲ್ಲಿ ಸರಿಯಾದ ಮಾರ್ಗದರ್ಶನ ಸಿಗದೆ ತಮ್ಮದೇ ಆದ ಶೈಲಿಯಲ್ಲಿ ವಾಚನ ಮಾಡುತ್ತಿದ್ದರು. ಆಗ ಅವರು ಓದುತ್ತಿದ್ದುದು ಕುಮಾರವ್ಯಾಸ ಭಾರತ. ಕುಮಾರವ್ಯಾಸನ ಕಾವ್ಯ ಪ್ರೌಢಿಮೆ, ಶಬ್ದಲಾಲಿತ್ಯ, ರಾಯರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಇದು ಅವರ ಮನಸ್ಸಿನ ಮೇಲೆ ಸಾಕಷ್ಟು  ಪರಿಣಾಮವನ್ನುಂಟು ಮಾಡಿತ್ತು. ಈ ಹೊತ್ತಿಗಾಗಲೇ ಪಂಜೆಯವರು ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು. ಕಾವ್ಯಗಳನ್ನು ರಾಗಬದ್ಧವಾಗಿ ಓದುವಂತೆ ಆಗಾಗ ಮಾರ್ಗದರ್ಶನ ನೀಡಿದ್ದರು. ಜೊತೆಗೆ ತಾವು ಪ್ರತಿದಿನ ಸಂಜೆಯ ಹೊತ್ತು ತಮ್ಮ ತಾಯಿಯವರನ್ನು ಕೂಡಿಸಿಕೊಂಡು ಅವರ ಮುಂದೆ ತಮಗೆ ತಿಳಿದ ರೀತಿಯಲ್ಲಿ ವಾಚನ ಮಾಡುತ್ತಿದ್ದರು. ಆದರೂ ಈ ಕಲೆಯಲ್ಲಿ ಸರಿಯಾದ ಮಾರ್ಗದರ್ಶನ ಅವರಿಗೆ ದೊರೆತಿರಲಿಲ್ಲ. ಆಗ ಅವರ ನೆರವಿಗೆ ಬಂದವರು ಮೈಸೂರಿನ ಭಾರತದ ಕೃಷ್ಣರಾಯರೆಂದೇ ಖ್ಯಾತಿ ಪಡೆದ ಕೃಷ್ಣಗಿರಿ ಕೃಷ್ಣರಾಯರು.

 

ಕೊಡಗು ಕರ್ನಾಟಕ ಸಂಘದ ಆಶ್ರಯದಲ್ಲಿ ಮಡಿಕೇರಿಯಲ್ಲಿ ಪ್ರತೀ ವರ್ಷ ವಸಂತ ಸಾಹಿತ್ಯೋತ್ಸವ ನಡೆಯುತ್ತಿತ್ತು. ಇಂಥ ಒಂದು ಸಂದರ್ಭದಲ್ಲಿ ಪ್ರೊ. ಟಿ.ಎಸ್‌. ವೆಂಕಣ್ಣಯ್ಯನವರನ್ನು ಕರೆಸಲಾಗಿತ್ತು. ಅವರ ಜೊತೆಯಲ್ಲಿ ಕೃಷ್ಣಗಿರಿ ಕೃಷ್ಣರಾಯರೂ ಬಂದಿದ್ದರು. ವೆಂಕಣ್ಣಯ್ಯನವರಿಗೆ ಕೃಷ್ಣರಾಯರ ವಾಚನವೆಂದರೆ ಅಚ್ಚು ಮೆಚ್ಚು. ಹಾಗಾಗಿ ಅವರು ಎಲ್ಲೇ ಹೋದರೂ ಅವರನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಅವರಿಬ್ಬರನ್ನೂ ಕರ್ನಾಟಕ ಸಂಘದ ಅಧ್ಯಕ್ಷರೂ, ಸೆಂಟ್ರಲ್‌ ಹೈಸ್ಕೂಲಿನ ಮುಖ್ಯೋಪಧ್ಯಾಯರೂ ಆಗಿದ್ದ ಸಿ.ಎಂ. ರಾಮರಾಯರ ಮನೆಯಲ್ಲಿ ಇಳಿಸಿಲಾಗಿತ್ತು. ಅದರ ಮನೆಯ ಹಿಂಬದಿಯಲಕ್ಲೇ ರಾಯರ ಮನೆ. ಹಿಂದಿನ ದಿನ ಕೃಷ್ಣರಾಯರ ವಾಚನ ಕಾರ್ಯಕ್ರಮ ನಡೆದಿದ್ದು ಅದನ್ನು ಕೇಳಿದ ರಾಯರು ಅದರಲ್ಲೇ ತಲ್ಲೀನರಾಗಿ ಬಿಟ್ಟಿದ್ದರು. ಅವರ ಹಾಡಿಕೆಯ ಶೈಲಿಯನ್ನು ಗ್ರಹಿಸಿ ಅಂದು ಬೆಳಿಗ್ಗೆ ತಮ್ಮಷ್ಟಕ್ಕೆ ತಾವೇ ಉಚ್ಚಸ್ವರದಲ್ಲಿ ಅಭ್ಯಾಸ ಮಾಡುತ್ತಿದ್ದರು. ಅದೇ ಸಮಯಕ್ಕೆಕ ಕೃಷ್ಣರಾಯರು ಬಹಿರ್ದಿಶೆಗೆ ಹೊರಟಿದ್ದವರು ಈ ಧ್ವನಿಯನ್ನು ಕೇಳಿ ಆಲಿಸುತ್ತಾ ತಮ್ಮ ಕೆಲಸವನ್ನು ಮರೆತು ನಿಂತು ಬಿಟ್ಟರು. ತಮ್ಮ ಹಾಡಿನ ಅನುಕರಣೆ ಅಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅನಂತರ ರಾಮರಾಯರನ್ನು  ವಿಚಾರಿಸಿದಾಗ ರಾಮರಾಯರು ರಾಯರ ವಿಚಾರವನ್ನು ತಿಳಿಸಿ ಪರಸ್ಪರ ಭೇಟಿಮಾಡಿಸಿದರು. ಇಬ್ಬರ ಪರಿಚಯವಾದ ಮೇಲೆ ರಾಯರ ವಿಷಯ ತಿಳಿದು ವೆಂಕಣ್ಣಯ್ಯನವರಿಗೆ ಹೇಳಿ ಸಂಜೆ ಅವರ ವಾಚನ ಏರ್ಪಡಿಸಿಯೇ ಬಿಟ್ಟರು. ಅಂದೂ ಸಹ ಕೃಷ್ಣರಾಯರ ವಾಚನವಿತ್ತು. ಈ ಹೊತ್ತಿಗಾಗಲೇ ರಾಯರು ಗೋಸ್ವಾಮಿ ತುಲಸಿದಾಸರ ‘ಶ್ರೀರಾಮಚರಿತ ಮಾನಸ’ ಕಾವ್ಯವನ್ನು ಕನ್ನಡೀಕರಿಸಿದ್ದರು. ಭಾಮಿನಿಷಟ್ಪದಿಯ ಈ ಬೃಹತ್ಕಾವ್ಯವನ್ನು ಅವಲೋಕಿಸಿದ ಕೃಷ್ಣರಾಯರು ಅಂದು ಅದರಿಂದಲೇ ಒಂದು ಪ್ರಸಂಗವನ್ನು ವಾಚಿಸಿದರು. ಅಲ್ಲದೇ ಅಂದೇ ಅವರು `I have accepted Mr. Rao as my desciple’ ಎಂದು  ಘೋಷಿಸಿಯೇಬಿಟ್ಟರು. ಅಂದಿನಿಂದ ಅವರ ಮಾರ್ಗದರ್ಶನದಲ್ಲಿ ರಾಯರ ಕಾವ್ಯ ವಾಚನದ ಶಿಕ್ಷಣ ಅವ್ಯಾಹತವಾಗಿ ಸಾಗಿತು. ಆದರೆ ರಾಯರು ಇದ್ದದ್ದು ಮಡಿಕೇರಿಯಲ್ಲಿ! ಕೃಷ್ಣರಾಯರು ಮೈಸೂರಿನಲ್ಲಿ! ಪಾಠ ಹೇಗೆ ನಡೆಯಬೇಕು. ಅದಕ್ಕೆ ಒಂದು ದಾರಿಯಾಯಿತು. ಶನಿವಾರ ಭಾನುವಾರಗಳಂದು ಪಾಠ. ಒಂದುವಾರ ಅವರು ಮಡಿಕೇರಿಗೆ ಬರುವುದು ಇನ್ನೊಂದು ವಾರ ಇವರು ಮೈಸೂರಿಗೆ ಹೋಗುವುದು ಹೀಗೆ ಸಾಗಿತು. ಆಗ ರಾಯರು ಪೋಲೀಸ್‌ ಇಲಾಖೆಯ ಹೆಡ್ಮನ್ಯಿಯಾಗಿದ್ದರು  (ಈಗಿನ ಮೇನೇಜರ್) ಹಾಗಾಗಿ ಅವರಿಗೆ ಬಸ್‌ ಪಾಸ್‌ ಸೌಲಭ್ಯವಿದ್ದುದರಿಂದ ಪ್ರಯಾಣದ ಖರ್ಚಿನ ತೊಂದರೆ ಇರಲಿಲ್ಲ. ಇವರ ಓಡಾಟಕ್ಕೆ ಇದೂ ಒಂದು ರೀತಿಯಲ್ಲಿ ಅನುಕೂಲವೇ ಆಯಿತು. ಈ ತರಹದ ಸತತ ಪರಿಶ್ರಮದಿಂದ ರಾಯರ ಗಮಕ ಕಲೆಯು ಉರ್ಜಿತಗೊಂಡದ್ದೇ ಅಲ್ಲದೆ ಕೃಷ್ಣರಾಯರ ಆಪ್ತ ಶಿಷ್ಯರಲ್ಲೊಬ್ಬರಾದರು.

ಗಮಕ ತರಗತಿಗಳು: ರಾಯರ ಕಾವ್ಯಗಾಯನಕಲೆ ಅವರಿಗೇ ಮಾತ್ರ ಸೀಮಿತವಾಗಬಾರದು ಅದು ಸಾಕಷ್ಟು ರೀತಿಯಲ್ಲಿ ಪ್ರಚಾರವಾಗಬೇಕು; ;ಅಭಿವೃದ್ಧಿಯಾಗಬೇಕು; ಇದಕ್ಕೆ ತಕ್ಕ ಶಿಷ್ಯವೃಂದದ ತಯಾರಿ ಆಗಬೇಕು ಎಂಬ ಕೃಷ್ಣರಾಯರ ಸಲಹೆಗೆ ಸ್ಪಂದಿಸಿದ ರಾಯರು ೧೯೪೨ರಲ್ಲಿ ಮನೆಯಲ್ಲಿಯೇ ಗಮಕ ತರಗತಿಗಳನ್ನು ನಡೆಸಲು ಆರಂಭಿಸಿದರು. ಆಗ ಅವರಿಗೆ ದೊರೆತಿದ್ದು ಇಬ್ಬರು ವಿದ್ಯಾರ್ಥಿಗಳು ಮಾತ್ರ. ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಸಾಹಿತಿ-ಗಮಕಿ ಮುಳಿಲಯ ತಿಮ್ಮಪ್ಪಯ್ಯನವರ ಸೊಸೆ (ರಾಜ್ಯ ಸರಕಾರದ ಕನ್ನಡ ಭಾಷಾಂತರಕಾರರಾಗಿದ್ದ ಎಂ. ಕೇಶವ ಭಟ್ಟರ ಪತ್ನಿ) ರಾಜಲಕ್ಷ್ಮಿ ಹಾಗೂ ಟಿ. ಚೌಡಯ್ಯನವರ ಸಮಕಾಲಿನರೂ ಬಿಡಾರಂ ಕೃಷ್ಣಪ್ಪನವರ ಶಿಷ್ಯರೂ ಆಗಿದ್ದ ರಾಮಕೃಷ್ಣನಾಯುಡು ಅವರ ಏಕೈಕ ಪುತ್ರ ಆರ್. ರಾಜ (ಇವರು ಕಾಫಿ ಮಂಡಳಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು ಈಗ ಕೆಲವು ವರ್ಷಗಳ ಹಿಂದೆ ನಿಧನರಾದರು).

ಕನ್ನಡ ಸಾಹಿತ್ಯ ಪರಿಷತ್ತು ರಾಯರು ನಡೆಸುತ್ತಿದ್ದ ಗಮಕ ತರಗತಿಗೆ ಮನ್ನಣೆ ನೀಡಿ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿತು. ಹೀಗೆ ಆರಂಭಗೊಂಡ ಗಮಕ ತರಗತಿಗಳನ್ನು ೧೯೬೭೦ರವರೆಗೂ ನಡೆಸಿ ನೂರಾರು ವಿದ್ಯಾರ್ಥಿಗಳನ್ನು ತಯಾರು ಮಾಡಿದರು. ಕನ್ನಡದ ಗಂಧವೇ ಇಲ್ಲದೆ ಆಂಗ್ಲ ಸಂಸ್ಕೃತಿಗೇ ಜೋತು ಬಿದ್ದಿದ್ದ ಕೊಡಗಿನಲ್ಲಿ ಕನ್ನಡ ಸಾಹಿತ್ಯದೊಂದಿಗೆ ಗಮಕ ಕಲೆಯ ಸೌರಭವನ್ನೂ ಉಣಿಸಿದ ಕೀರ್ತಿ ರಾಯರ ಪಾಲಿನದಾಯಿತು. ಹೀಗೆ ರಾಯರು ಕಾವ್ಯ ಸೌರಭವನ್ನು ಜನತೆಗೆ ನೀಡಿದ್ದು ಅಲ್ಲಿನ ಜನರಿಗೆ ರಸದೌತಣವಾಯಿತು. ಇವರನ್ನು ಗೌರವಪೂರ್ವಕವಾಗಿ “ಭಾರತವಾಚನ ಸ್ವಾಮಿ” ಎಂದೇ ಕರೆದರು.ಮುಂದೆ ೧೯೬೦ರಲ್ಲಿ  ಕಾರಣಾಂತರಗಳಿಂದ ಕೊಡಗನ್ನು ಬಿಟ್ಟು ಶಿವಮೊಗ್ಗೆಗೆ ವಲಸೆ ಹೋದ ರಾಯರೂ ಅಲ್ಲಿಯೂ ಗಮಕ ತರಗತಿಗಳನ್ನ ನಡೆಸಿದರು. ಕೊಡಗಿನ ಜನತೆ ರಾಯರನ್ನು ಅತ್ಯಂತ ಗೌರವ ಪೂರ್ವಕವಾಗಿ ಬೀಳ್ಕೊಟ್ಟು ಆಗಿನ ಕಾಲಕ್ಕೆ ದೊಡ್ಡ ಮೊತ್ತ ಎನಿಸುವ ರೂ. ೧,೧೦೦.೦೦ ಗಳ ನಿಧಿ ಸಮರ್ಪಣೆ ಮಾಡಿದರು.

ರಾಯರ ಕುಟುಂಬ: ಅನಂತಪದ್ಮನಾಭರಾಯರದ್ದು ಅವಿಭಕ್ತ ಕುಟುಂಬ. ಪತ್ನಿ ಲಕ್ಷ್ಮಿದೇವಿ, ನಾಲ್ವರು ಮಕ್ಕಳು-ಮೂವರು ಗಂಡು ಒಬ್ಬ ಹೆಣ್ಣು ಮಗಳು. ಹಿರಿಯ ಮಗ ಶೇಷಗಿರಿ (ತಾತನ ಹೆಸರನ್ನೇ ಇವನಿಗೆ ಇಟ್ಟಿದ್ದರು-ರಾಜ್ಯ ಅರಣ್ಯ ಇಲಾಖೆಯಲ್ಲಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳ ಗೆಜೆಟೆಡ್‌ ಸಹಾಯಕನಾಗಿ ನಿವೃತ್ತಿ ಪಡೆದು ಈಗ ಮೈಸೂರಿನಲ್ಲಿ ನೆಲೆಸಿದ್ದಾನೆ). ಎರಡನೆಯ ಮಗ ಜಯರಾಮರಾವ್ (ಪತ್ರಕರ್ತನಾಗಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕಾ ಸಮೂಹದಲ್ಲಿ ಸೇವೆಯಲ್ಲಿದ್ದು ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾನೆ). ಮಗಳು ಪದ್ಮಿನಿ ಶ್ರೀನಿವಾಸರಾವ್‌ (ಕೊಡಗಿನ ಕುಶಾಲನಗರದಲ್ಲಿದ್ದಾಳೆ). ಕಿರಿಯಮಗ ನಾಗೇಂಧ್ರ (ಕೆನರಾಬ್ಯಾಂಕ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದು ಸ್ವಯಂ ನಿವೃತ್ತಿ ಪಡೆದು ಮೈಸೂರಿನಲ್ಲಿ ನೆಲೆಸಿದ್ದಾನೆ). ಪತ್ನಿ ಲಕ್ಷ್ಮಿದೇವಿಯವರದು  ಧಾರಾಳ ಮನಸ್ಸು. ಯಾವ ಭೇದವೂ ಇಲ್ಲದೆ ಎಲ್ಲರಿಗೂ ಒಂದೇ ಭಾವದಿಂಧ ಬಡಿಸುತ್ತ ಉಪಚರಿಸುತ್ತಿದ್ದರು. ಮನೆಯಲ್ಲಿ ಹೀಗೆ ಎಲ್ಲರ ಸೇವೆ ಮಾಡುತ್ತಲೇ ತಮ್ಮ ತುಂಬು ಕುಟುಂಬವನ್ನು ನೋಡಿ ತೃಪ್ತಿ ಹೊಂದಿ ಒಂದು ದಿನ ಯಾವ ಮುನ್ಸೂಚನೆಯೂ ಇಲ್ಲದೆ ಹರಿಪಾದ ಸೇರಿ ಬಿಟ್ಟರು (೧೬.೧೦.೧೯೯೨).

ರಾಯರು ಮಕ್ಕಳಿಗೆ ಸಂಗೀತ-ಗಮಕ ಎರಡರಲ್ಲೂ ಶಿಕ್ಷಣ ನೀಡಿದ್ದರು. ಎರಡನೆಯ ಮಗ ಜಯರಾಮನದ್ದು ಗಮಕಕ್ಕೆ ಹೊಂದುವಂಥ ಕಂಠಶ್ರೀ. ಮುಂದೆ ತಂದೆ ಜಾಡನ್ನೇ ಹಿಡಿದು ಅವರಮತೆ ವಾಚನ-ವ್ಯಾಖ್ಯಾನಕಾರನಾಗಿ ಗಮಕ ಕಲೆಯನ್ನು ರೂಢಿಸಿಕೊಂಡು ಈಗ ಪ್ರಸಿದ್ಧ ಗಮಕಿಗಳ ಸಾಲಿಗೆ ಸೇರಿದ್ದಾನೆ. ಮಗಳು ಪದ್ಮಿನಿ ಸಹ ಗಮಕಿಯಾಗಿದ್ದು ಕುಶಾಲನಗರದ ಆಸುಪಾಸುಗಳಲ್ಲಿ ಗಮಕ ತರಗತಿಗಳನ್ನು ನಡೆಸುತ್ತಿದ್ದಾಳೆ.

ಕಿರಿಯ ಮಗ ನಾಗೇಂದ್ರ ರಾಯರ ಅತ್ಯಂತ ಪ್ರೀತಿಯ ಪುತ್ರ. ಈತ ಸ್ವಪ್ರಯತ್ನದಿಂದ ಮುಂದ ಬಂದವನು. ಸುಗಮ ಸಂಗೀತದ ಕಡೆ ಒಲವು ಮೂಡಿಸಿಕೊಂಡವನು. “ಮಡಿಕೇರಿ ನಾಗೇಂದ್ರ”ನೆಂಧೇ ಖ್ಯಾತಿಗಳಿಸಿದ್ದಾನೆ.

ಗಮಕಕ ಕಲೆಯ ಪ್ರಚಾರ: ರಾಯರ ಗಮಕ ಕಲಾ ಪ್ರಚಾರ ವಿಪುಲವಾದುದು. ಕೇವಲ ಕೊಡಗು ಜಿಲ್ಲೆ ಮಾತ್ರವಲ್ಲದೆ ಹತ್ತಿರದ ದಕ್ಷಿಣ ಕನ್ನಡ, ಕಾಸರಗೋಡು, ಮಂಜೇಶ್ವರ ಹಾಗೂ ರಾಜ್ಯದ ಅನೇಕ ಭಾಗಗಳಲ್ಲಿ ಸಂಚರಿಸಿ ಕಾವ್ಯವಾಚನದೊಂದಿಗೆ ಗಮಕ ಕಲೆಯ ವೈಶಿಷ್ಟ್ಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಹರಪನಹಳ್ಳಿ, ರಬಕವಿ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲುಗೊಂಡು ಗಮಕ ಕಲೆಯ ಬಗ್ಗೆ ಸೋದಾಹರಣ ನೀಡಿದ್ದಾರೆ. ವರಕವಿ ದ.ರಾ. ಬೇಂದ್ರೆಯವರಿಗೆ ಇವರ ವಾಚನವೆಂದರೆ ಅಚ್ಚುಮೆಚ್ಚು. ತಮ್ಮ ೫೦ನೇ ವರ್ಧಂತಿಯ ಸಂದರ್ಭದಲ್ಲಿ ತಮ್ಮ ಮನೆಯಲ್ಲೇ ಅಲ್ಲದೆ ಧಾರವಾಡದ ಇತರ ಕಡೆಗಳಲ್ಲೂ ವಾಚನ ಏರ್ಪಡಿಸಿ ಉತ್ತೇಜಿಸಿದ್ದಾರೆ.

ರಾಷ್ಟ್ರಕವಿ ಕುವೆಂಪುನವರು ರಾಯರ ವಾಚನವನ್ನ ಕೇಳಿ ಆನಂದಿಸಿ “ಕೃಷ್ಣರಾಯರ ಅನುಗ್ರಹ ನಿಮ್ಮ ಮೇಲೆ ಸಂಪೂರ್ಣ ಆಗಿದೆ. ನೀವು ಕೇವಲ ಗಾಯಕರಲ್ಲ ಕೊಡಗಿನ ಕೋಗಿಲೆ” ಎಂದು ಕರೆದಿದ್ದಾರೆ.

ಬಿಜಾಪುರದಲ್ಲಿ ಸುಮಾರು ಒಂಬತ್ತು ತಿಂಗಳ ಕಾಲ ಗಮಕ ತರಗತಿ ನಡೆಸಿದ್ದಾರೆ. ಅಲ್ಲಿನ ಸಂದರ್ಶನ ಪತ್ರಿಕೆಯ ಸಂಪಾದಕರಾಗಿದ್ದ ವ್ಹಿ.ಬಿ. ನಾಯಕರ ಮನವಿಯಂತೆ ಕನ್ನಡ ಸಾಹಿತ್ಯ ಪರಿಷತ್ತು ಇವರನ್ನೇ ಅಲ್ಲಿಗೆ ಕಳುಹಿಸಿತ್ತು. ಹಿಂದುಸ್ತಾನೀ ರಾಗಗಳ ಕಡೆ ಹೆಚ್ಚಿನ ಒಲವಿದ್ದ ರಾಯರು ಅಲ್ಲಿ ಅದಕ್ಕೆಕ ಹೊಂದುವಂಥ ಪ್ರಮುಖವಾಗಿ ಭೈರವಿ, ದೇಶ್‌, ತಿಲಂಗ್‌, ತಿಲಕ್ಕಾವೋದ್‌, ಭೀಂಪಲಾಸ್‌, ಮುಂತಾದ ರಾಗಗಳನ್ನು ಅಳವಡಿಸಿ ಪಾಠ ಮಾಡುತ್ತಿದ್ದುದು ಗಮನಾರ್ಹ ಅಂಶ. ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈಗಳಂತೂ ಇವರ ವಾಚನ ಕೇಳಿ ತಮ್ಮಲ್ಲಿಗೆ ಬರಮಾಡಿಕೊಂಡು ಅನೇಕ ಕಾರ್ಯಕ್ರಮಗಳನ್ನು ಕೇಳಿ ಸಂತೋಷ ಪಟ್ಟಿದ್ದಾರೆ. ರಾಯರನ್ನು ಗುರಸ್ವರೂಪರಾಗಿ ಕಂಡಿದ್ದಾರೆ.

ಭಿಲಾಯಿ (ಮಧ್ಯಪ್ರದೇಶ), ನಾಗಪುರ (ಮಹಾರಾಷ್ಟ್ರ) ಹೈದರಾಬಾದ್‌ (ಆಂಧ್ರ), ಮುಂತಾದೆಡೆಗಳಲ್ಲಿ ತಮ್ಮ ಸ್ವರಚಿತ ಮಧ್ವಚರಿತ ಮಾನಸ ಕಾವ್ಯ ವಾಚನದ ಮೂಲಕ ಮಧ್ವತತ್ವ ಪ್ರಸಾರ ಮಾಡಿದ್ದಾರೆ. ಮೈಸೂರು ಆಕಾಶವಾಣಿ ಆರಂಭವಾದಂದಿನಿಂದ ಇವರ ಕಾವ್ಯವಾಚನ ಪ್ರಸಾರವಾಗುತ್ತಿತ್ತು.

೧೯೫೮ರಲ್ಲಿ ಸರಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ( ಆ ಹೊತ್ತಿನಲ್ಲಿ ಅವರ ಕೊಡಗು ರಾಜ್ಯ ವಿಧಾನ ಸಭೆಯ ಹಿರಿಯ ವರದಿಗಾರರಾಗಿದ್ದು ಅನಂತರ ಅರಣ್ಯ ಇಲಾಖೆಯ ಅಧೀಕ್ಷಕರಾಗಿದ್ದರು) ತಮ್ಮ ಸಂಪೂರ್ಣ ಸಮಯವನ್ನು ಗಮಕ ಕಲಾರಾಧನೆ ಹಾಗೂ ಸಾಹಿತ್ಯ ಸೇವೆಗಾಗಿ ಮೀಸಲಿಟ್ಟರು. ರನ್ನನ ಗದಾಯುದ್ಧ ಕಾವ್ಯವನ್ನು ತಮ್ಮ ತುಂಬು ಕಂಠದಿಮದ ವಾಚಿಸುವಲ್ಲಿ ಸಿದ್ಧಹಸ್ತರೆನಿಸಿದ್ದರು. ಆಚಾರ್ಯ ಪ್ರೊ.ಡಿ.ಎಲ್‌. ನರಸಿಂಹಾಚಾರ್ಯರು ರಾಯರ ಗದಾಯುದ್ಧವಾಚನ ಕೇಳಲು ಅದೆಷ್ಟೋ ಬಾರಿ ಮೈಸೂರಿನಿಂದ ಮಡಿಕೇರಿಗೆ ಹೋಗುತ್ತಿದ್ದರು.

ರಾಯರಿಂದ ರಚಿತವಾದ ಕೃತಿಗಳು: ರಾಯರು ಕೇವಲ ಒಬ್ಬ ಗಮಕಿಯಾಗಿ, ಒಬ್ಬ ಕಲಾವಿದನಾಗಿ ಮಾತ್ರ ಮರೆಯಲಿಲ್ಲ. ಒಬ್ಬ ಸಮರ್ಥ ಆಡಳಿತಗಾರನಾಗಿಯೂ ಹೆಸರು ಗಳಿಸಿದವರು. ಅಬಕಾರಿ ಇಲಾಖೆಯಲ್ಲಿ ಗುಮಾಸ್ತನಾಗಿ ಸೇರಿ ಮುಂದೆ ದಂಡಾಧಿಕಾರಿಗಳ ಆಪ್ತಸಹಾಯಕರಾಗಿ, ಪೋಲಿಸ್‌ ಇಲಾಖೆಯಲ್ಲಿ ಹೆಡ್ಮುನ್ಮಿಯಾಗಿ ಅನಂತರ ಮಡಿಕೇರಿ ಸರಕಾರಿ ಕಾಲೇಜಿನ ಆಡಳಿತಾಧಿಕಾರಿಗಳಾಗಿ, ಕೊಡಗು ಪ್ರತ್ಯೇಕ ರಾಜ್ಯವಾದಾಗ ಅಲ್ಲಿನ ವಿಧಾನ ಸಭೆಯ ಪ್ರಧಾನ ವರದಿಗಾರರಾಗಿ ಮುಂದೆ ರಾಜ್ಯ ವಿಭಜನೆಯಾಗಿ ಕೊಡಗು ಮೈಸೂರು ರಾಜ್ಯಕ್ಕೆ ವಿಲೀನವಾದಾಗ ತಮ್ಮ ಸೇವೆಯ ಕೊನೆಯ ಎರಡು ವರ್ಷ ಅರಣ್ಯ ಇಲಾಖೆ ಕೊಡಗು ವಲಯದ ಸುಪರಿಂಟೆಂಡೆಂಟ್‌ ಆಗಿ ನಿವೃತ್ತರಾದರು.

ಇವು ಪೋಲಿಸ್‌ ಇಲಾಖೆಯಲ್ಲಿ ಹುದ್ದೆಯಲ್ಲಿದ್ದಾಗಿನ ತಮ್ಮ ಅನುಭವವನ್ನು ‘ಹೆಡ್ಮುನ್ಯಿ’ ಎಂಬ ಕತೆಯಲ್ಲಿ ವಿಡಂಬನಾತ್ಮಕವಾಗಿ ನಿರೂಪಿಸಿದ್ದಾರೆ. ಒಬ್ಬ ಪ್ರಕಾಂಡ ಸಾಹಿತಿಯಾಗಿ ಕನ್ನಡ ಸಾರಸ್ವತ ಲೋಕದಲ್ಲೂ ಹೆಸರುಗಳಿಸಿದವರು. ಕತೆ, ಕವನ, ಪ್ರಬಂಧ, ವಿಮರ್ಶೆ, ನಾಟಕಗಳೇ ಅಲ್ಲದೆ ಕೆಲವು ಬೃಹತ್ಕಾವ್ಯಗಳನ್ನೂ ರಚನೆ ಮಾಡಿದ್ದಾರೆ.

ಕಾವೇರಿ ಕಥಾಮೃತಮ್‌ ವಾರ್ಧಿಕ ಷಟ್ಪದಿಯ ಒಂದು ಕಿರುಕಾವ್ಯ. ಸಾಹಿತಿ ಮುಳಿಯ ತಿಮ್ಮಪ್ಪಯ್ಯನವರು ಇದಕ್ಕೆ ಮುನ್ನುಡಿ ಬರೆದಿದ್ದಾರೆ; ಶ್ರೀರಾಮಕೃಷ್ಣ ಪರಮಹಂಸ ಹಾಗೂ ಕರ್ಣ ಎರಡೂ ಸರಳ ರಗಳೆಯಲ್ಲಿದೆ. ‘ಕರ್ಣ’ ಮದರಾಸು ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿತ್ತು. ಆಚಾರ್ಯ ಬಿ.ಎಂ.ಶ್ರೀಯವರು ಇದರ ಕುರಿತು ಪ್ರಶಂಸಾತ್ಮಕ ಮುನ್ನುಡಿ ಬರೆದಿದ್ದಾರೆ. ಶೃಂಗಿಯ ಶಾಪ ಒಂದು ಕಾವ್ಯನಾಟಕ; ದೇವಮ್ಮಾಜಿ, ಕೊಡಗಿನ ಕೊನೆಯ ರಾಜಕುಮಾರಿಯ ಕುರಿತ ಐತಿಹಾಸಿಕ ನಾಟಕ (ಆಕಾಶವಾಣಿಯಿಂದ ಪ್ರಸಾರವಾಗಿದೆ); ಶವಸಂಸ್ಕಾರ -ಸಾಮಾಜಿಕ ನಾಟಕ ಅಲ್ಲದೆ ಅನೇಕ ಸಣ್ಣ ಕತೆಗಳು, ಬೃಂದಾವನ (ಕವನ ಸಂಕಲನ), ಕಾಣಿಕೆ, ಗುರು ರಾಘವೇಂದ್ರ ಕೀರ್ತನ ಮಾಲಾ (ಭಕ್ತಿಗೀತೆಗಳು); ಬೃಹತ್ಕಾವ್ಯಗಳಾಗಿ ಕಬೀರ್ ದಾಸ್‌, ಮೀರಾಬಾಯಿ, ಶ್ರೀತುಲಸೀ ರಾಮಾಯಣಂ ಅಥವಾ ಶ್ರೀ ರಾಮ ಚರಿತ ಮಾನಸ (ಭಾಮಿನಿ ಹಾಗೂ ವಾರ್ಧಿಕ ಷಟ್ಪದಿ) -ಇದಕ್ಕೆ ಆಚಾರ್ಯ ಡಿ.ವಿ.ಜಿ. ಯವರು ಉತ್ತಮ ಮುನ್ನುಡಿ ಬರೆದಿದ್ದಾರೆ; ಶ್ರೀ ಕೃಷ್ಣ ಚರಿತಾಮೃತಮ್‌ (ವಾರ್ಧಿಕ) ಮತ್ತು ಕರ್ಣಾಟ ಭಾರತ ಕಥಾಮಂಜರಿಯ ಕೊನೆಯ ಅಷ್ಟಪರ್ವಗಳುಸುಮಾರು ೭,೮೦೦ ಪದ್ಯಗಳನ್ನೊಳಗೊಂಡ ಈ ಬೃಹತ್ಕಾವ್ಯ ಇತ್ತೀಚೆಗೆ ಪ್ರಕಟಗೊಂಡು ಬಿಡುಗಡೆಯಾಗಿದೆ.

ಇವಲ್ಲದೆ ಶ್ರೀಮನ್ಮಧ್ವ ಚರಿತ ಮಾನಸ (ವಾರ್ಧಿಕ); ವಿಶ್ವಾಮಿತ್ರ(ಭಾಮಿನಿ) ಎಂಬ ಕಾವ್ಯಗಳು ಹಸ್ತಪ್ರತ್ತಿಯಲ್ಲಿವೆ. ಕೊಡಗಿನ ಕೊನೆಯ ರಾಜ ಚಿಕ್ಕವೀರ ರಾಜೇಂದ್ರ ಕಾದಂಬರಿಯನ್ನು ಮಾಸ್ತಿವೆಂಕಟೇಶ ಅಯ್ಯಂಗಾರ್ಯರು ಬರೆಯುವಾಗ ರಾಯರು ಅವರಿಗೆ ತುಂಬಾ ನೆರವು ನೀಡಿ ಸಾಕಷ್ಟು ಮಾಹಿತಿಗಳನ್ನು ಒದಗಿಸಿದ್ದಾರೆ. ಕೊಡಗಿನ ಇತಿಹಾಸಕ್ಕೆ ಸಂಬಂಧ ಪಟ್ಟಂತೆ ಅನೇಕ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ.

ರಾಯರ ಇತರ ಚಟುವಟಿಕೆಗಳು: ಅನಂತಪದ್ಮನಾಭರಾಯರು ಕೊಡಗು ಕರ್ನಾಟಕ ಸಂಘದ ಸ್ಥಾಪಕರಾಗಿ ಅದರ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ದುಡಿದಿರುವುದಲ್ಲದೆ ಮಡಿಕೇರಿಯ ಶ್ರೀಮದಾಂಜನೇಯ ದೇವಸ್ಥಾನದ ಶ್ರೀರಾಮೋತ್ಸವ ಸಮಿತಿಯ ಸಂಚಾಲಕರಾಗಿ ಅವರು ಅಲ್ಲಿದ್ದಷ್ಟು ಕಾಲವೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಮಡಿಕೇರಿ ವೇದಾಂತ ಸಂಘದ ಕಾರ್ಯದರ್ಶಿಯಾಗಿಯೂ ಅದರ ಏಳಿಗೆಗೆ ಕಾರಣರಾಗಿದ್ದಾರೆ.

ಕೊಡಗು ರಾಜ್ಯ ಸರ್ಕಾರ ಸ್ಥಾಪಿಸಿದ ಸಂಗೀತ ನಾಟಕ ಅಕಾಡೆಮಿಯ ಸ್ಥಾಪಕ ಕಾರ್ಯದರ್ಶಿಯಾಗಿ ರಾಯರು ನೇಮಕಗೊಂಡಾಗ ಇವರಿಗೆ ಸಂಗೀತ ಕಲಾನಿಧಿ ಮೈಸೂರು ಟಿ. ಚೌಡಯ್ಯನವರ ನಿಕಟ ಸಂಪರ್ಕವುಂಟಾಯಿತು. ರಾಯರ ಕಾವ್ಯವಾಚನವನ್ನು ಕೇಳಿದ ಚೌಡಯ್ಯನವರು ಮೆಚ್ಚುಗೆ ಸೂಚಿಸಿ ಒಂದು ಸಂದರ್ಭದಲ್ಲಿ ಅವರ ವಾಚನಕ್ಕೆ ತಾವು ಪಿಟೀಲನ್ನು ಪಕ್ಕವಾದ್ಯವಾಗಿ ನುಡಿಸಿ ಸಂತೋಷ ಪಟ್ಟಿದ್ದಾರೆ. ಈ ರೀತಿ ಗಮಕವಾಚನಕ್ಕೆ ಚೌಡಯ್ಯನವರು ಪಿಟೀಲು ನುಡಿಸಿದ ವಿದ್ವಾಂಸರೆಂದರೆ ಒಬ್ಬರು  ಕೃಷ್ಣಗಿರಿ ಕೃಷ್ಣರಾಯರು ಮತ್ತೊಬ್ಬರು ಅನಂತಪದ್ಮನಾಭರಾಯರು. ಇದೊಂದು ವಿಶಿಷ್ಟ ದಾಖಲೆಯೆಂದೇ ಹೇಳಬಹುದು.

 

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ಪ್ರತಿವರ್ಷವೂ ವಸಂತ ಸಾಹಿತ್ಯೋತ್ಸವವನ್ನು ನಡೆಸಿ ನಾಡಿನ ಉದ್ದಾಮ ಸಾಹಿತಿ-ಕವಿ-ನಾಟಕಕಾರರು-ಗಾಯಕರನ್ನು ಕೊಡಗಿಗೆ ಪರಿಚಯಿಸಿದ ಹೆಗ್ಗಳಿಕೆ ರಾಯರದ್ದು. ಅಲ್ಲದೆ ವೀರಾಜಪೇಟೆ, ಸೋಮವಾರಪೇಟೆಗಳಲ್ಲೂ ಕರ್ನಾಟಕ ಸಂಘಗಳನ್ನು ಸ್ಥಾಪಿಸಿ ಅಲ್ಲೂ ಕನ್ನಡ ಪರ ಕಾರ್ಯ ಚಟುವಟಿಕೆಗಳು ನಡೆಯಲು ಕಾರಣರಾಗಿದ್ದವರು.

ಕೇಂದ್ರ ಸರಕಾರ ಕೊಡಗು ಇತಿಹಾಸ ಸಂಶೋಧನಾ ಸಮಿತಿಯೊಂದನ್ನು ರಚಿಸಿ ಅದಕ್ಕೂ ರಾಯರನ್ನೇ ಕಾರ್ಯದರ್ಶಿಯನ್ನಾಗಿ ನೇಮಿಸಿದರು. ಆ ಸಂದರ್ಭದಲ್ಲಿ ಇವರು ಸಂಪಾದಿಸಿದ ಎರಡು ಹಸ್ತಪ್ರತಿಗಳು-ಒಂದು ರೆ. ಮೊಗ್‌ಲಿಂಗ್‌ರ Coorg and itfs Rulers ಹಾಗೂ ಕೊಡಗಿನ ಅರಸರ ಕಾಲದಲ್ಲಿ ಆಡಳಿತಾಧಿಕಾರಿಯಾಗಿದ್ದ ಆಂಗ್ಲ ಅಧಿಕಾರಿಯೊಬ್ಬರು ಕೊಡಗಿನ ಅರಸರ ಆಳ್ವಿಕೆಯ ಬಗ್ಗೆ ಬರೆದದ್ದು-ಇವರಿಗೆ ದೊರಕಿ ಅದು ಪುಸ್ತಕ ಭಂಡಾರದಲ್ಲಿ ಅಡಗಿ ಕುಳಿತಿತ್ತು. ಅದು ಇತ್ತೀಚೆಗೆ ದೊರೆತು ಈಗ ಅದರ ಪರಿಷ್ಕೃತ ಸಂಪುಟಗಳನ್ನು ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರ ಪ್ರಕಟಿಸಲು ಮುಂದೆ ಬಂದಿದೆ.

ಇಷ್ಟೇ ಅಲ್ಲದೆ ಮಡಿಕೇರಿಯ ಯಾವುದೇ ಸಭೆ-ಸಮಾರಂಭಗಳಲ್ಲಿ ರಾಯರದ್ದು ಪ್ರಮುಖ ಪಾತ್ರ. ಕೊನೆಗೆ ಯಾರದೇ ಅಂತ್ಯಯಾತ್ರೆಯಲ್ಲೂ ರಾಯರ ನೆರವು ಇರಲೇಬೇಕಾಗಿತ್ತು.

ಗೌರವ ಪ್ರಶಸ್ತಿಗಳು: ತಮ್ಮ ಜೀವಮಾನದಲ್ಲಿ ಎಂದೂ ಯಾವುದೇ ಪ್ರಶಸ್ತಿ-ಸನ್ಮಾನಗಳನ್ನು ರಾಯರು ಹುಡುಕಿಕೊಂಡು ಹೋದವರಲ್ಲ. ಅದೇ ಅವರನ್ನು ಹುಡುಕಿಕೊಂಡು ಬಂದವು.

೧೯೭೭ರಲ್ಲಿ ಕರ್ನಾಟಕ ಸರಕಾರದಿಂದ ಗಮಕ ಕಲಾ ಸೇವೆಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಹಾಗೂ ಗೌರವ ಮಾಸಾಶನ; ಮಡಿಕೇರಿ ವೇದಾಂತ ಸಂಘ, ರಾಮೋತ್ಸವ ಸಮಿತಿ ವತಿಯಿಂದ ಶಾಲು ಜೋಡಿಯ ಸನ್ಮಾನ; ಎಲ್ಲಾ ಮಾಧ್ವ ಮಠಾಧಿಪತಿಗಳಿಂದ, ಶೃಂಗೇರಿ ಜಗದ್ಗುರುಗಳಿಂದ ಗೌರವ ಸನ್ಮಾನಗಳನ್ನು ಪಡೆದಿದ್ದಾರೆ. ಇವರ ಕೃತಿ ಶ್ರೀ ತುಳಸೀ ರಾಮಾಯಣಂ ಗ್ರಂಥಕ್ಕೆ ದೇವರಾಜ ಬಹದ್ದೂರ್ ದತ್ತಿ ಪ್ರಶಸ್ತಿ ಲಭಿಸಿದೆ. ಮಡಿಕೇರಿಗೆ ಗೌರವ ಪೂರತಿ ಆಹ್ವಾನದ ಮೇಲೆ ಆಗಮಿಸಿದ್ದ ಮೈಸೂರಿನ ಅರಸರಾಗಿದ್ದ ಜಯಚಾಮರಾಜ ಒಡೆಯರ ಸಮ್ಮುಖದಲ್ಲಿ ಮೈಸೂರರಸರ ಪರಂಪರೆಯ ಕುರಿತು ಗೀತೆಯೊಂದನ್ನು ತಾವೇ ರಚಿಸಿ ಹಾಡಿದಾಗ ಒಡೆಯರಿಂದ ಮುಕ್ತಕಂಠದ ಪ್ರಶಂಸೆ.

ಕರ್ನಾಟಕ ಗಮಕ ಕಲಾಪರಿಷತ್ತಿನ ಅಖಿಲ ಕರ್ನಾಟಕ ಪ್ರಥಮ ಗಮಕ ಸಮ್ಮೇಳನದ ಅಧ್ಯಕ್ಷ ಪದವಿ ರಾಯರ ಪಾಲಿಗೇ ಬಂದದ್ದು ಅವರ ಅವಿರತ ಗಮಕ ಕಲಾ ಸೇವೆಗಾಗಿ ಸಂದ ಅತ್ಯುನ್ನತ ಗೌರವ.

ಹೀಗೆ ಗಮಕ, ಸಾಹಿತ್ಯ, ಸಮಾಜ ಸೇವೆಗಳಲ್ಲಿ ತಮ್ಮನ್ನೇ ತೊಡಗಿಸಿಕೊಂಡಿದ್ದ ರಾಯರು ಅವರ ಕೊನೆಯ ದಿನಗಳನ್ನು ತಮ್ಮ ಹಿರಿಯ ಮಗನ ಮನೆಯಲ್ಲೇ ಕಳೆದರು. ೧೯೮೩ರಲ್ಲಿ ತೀವ್ರ ಪಾರ್ಶರ್ವ ವಾಯುವಿಗೆ ತುತ್ತಾದ ರಾಯರು ಮುಂದೆ ಚೇತರಿಸಿಕೊಳ್ಳಲಿಲ್ಲ. ೧೯೮೭ ನವೆಂಬರ್ ನಲ್ಲಿ ಮತ್ತೊಮ್ಮೆ ಪಾರ್ಶ್ವವಾಯು ತಗುಲಿ ದಿನಾಂಕ ೨೯ ರಂದು (ಭಾನುವಾರ) ಸಂಜೆ ಇಹಲೋಕ ವ್ಯಾಪಾರ ಮುಗಿಸಿದರು.

ಗಮಕ ಲೋಕದ ಧ್ರುವ ತಾರೆಯೊಂದು ಅಸ್ತಂಗತವಾಗಿ ಅನಂತದಲ್ಲಿ ಲೀನವಾಯಿತು.