“Culture” ಅನ್ನುವ ಇಂಗ್ಲೀಷ್ ಪದಕ್ಕೆ ಸಂವಾದಿಯಾಗಿ “ಸಂಸ್ಕೃತಿ” ಎಂಬ ಪದವನ್ನು ಬಳಸಲಾಗುತ್ತದೆ. ಪ್ರತಿಯೊಂದು ಜನಾಂಗ/ಜಾತಿಗಳಿಗೂ ತನ್ನದೇ ಆದ ಸಂಸ್ಕೃತಿಯಿರುತ್ತದೆ. ಆಧುನಿಕ ಮಾನವ ಶಾಸ್ತ್ರಜ್ಞ ಇ.ಬಿ. ಟೈಲರ್ ತನ್ನ  Primitive Culture ಗ್ರಂಥದಲ್ಲಿ ಸಂಸ್ಕೃತಿ ಕುರಿತು ಹೀಗೆ ಹೇಳುತ್ತಾರೆ. “ಸಂಸ್ಕೃತಿ ಅಥವಾ ನಾಗರೀಕತೆಯನ್ನು ಒಂದು ಜನತೆಯ ಬದುಕಿನ ಹಿನ್ನೆಲೆಯಲ್ಲಿ ಸಮಗ್ರವಾಗಿ ಪರಿಭಾವಿಸಿದಾಗ ಜ್ಞಾನ, ನಂಬಿಕೆ, ಕಲೆ, ನೀತಿ, ಕಾನೂನು, ಸಂಪ್ರದಾಯಗಳು ಹಾಗೂ ಮನುಷ್ಯ ತನ್ನ ಸಮಾಜದ ಸದಸ್ಯನಾಗಿ ಗಳಿಸಬಹುದಾದ ಬೇರೆ ಯಾವುದೇ ಅರ್ಹತೆಗಳ ಮತ್ತು ಅಭ್ಯಾಸಗಳ ಸಂಕೀರ್ಣ ಮೊತ್ತ ಎಂದಾಗುತ್ತದೆ. ಪ್ರತಿಯೊಬ್ಬ ಜೀವಿಯೂ ತನ್ನ ಸಮಾಜದ ಸದಸ್ಯನಾಗಿದ್ದುಕೊಂಡು ಬದುಕಲು ತಕ್ಕಂತೆ ಕಲಿತ ಎಲ್ಲ ಒಳ್ಳೆಯ ಹಾಗೂ ಕೆಟ್ಟ ನಡೆ-ನುಡಿ, ಕಲೆ, ಕಾನೂನು, ಬೇಸಾಯ, ಬಹುಮಾನ, ಅವಮಾನ, ಪ್ರಸಂಗಗಳು ಇವೆಲ್ಲವನ್ನೂ ಒಡಮೂಡಿಸಿ ಕೊಂಡ ಒಟ್ಟು ಜೀವನ ಕ್ರಮವೇ ಸಂಸ್ಕೃತಿ ಎಂದು ಹೇಳಬಹುದು.”

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವು ಪರಿಶಿಷ್ಟ ಜಾತಿಗಳಿವೆ. ಮುಂಡಾಲ, ಮನ್ಸ, ನಲಿಕೆ, ಪರವ, ಪಂಬದ, ಬಾಕುಡ… ಈ ಮೊದಲಾದ ದ.ಕ. ಜಿಲ್ಲೆಯ ಪರಿಶಿಷ್ಟ ಜಾತಿಗಳಿಗಿಂತ ಮೊಗೇರರು ತಾವೇ ಮೇಲಿನವರೆಂದು ಹೇಳಿಕೊಳ್ಳುತ್ತಾರೆ. ಪಿರಮಿಡ್ಡಿನಾಕಾರದ ಜಾತಿಯ ಸ್ತರಗಳಲ್ಲಿ ತಳಸ್ತರದಲ್ಲಿರುವ ಜಾತಿಗಳು ಕೂಡಾ ತಮ್ಮಲ್ಲಿ ಇಂತಹ ಅಂತರವನ್ನು ಇಟ್ಟುಕೊಂಡಿರುವುದು ವಿಷಾದನೀಯ. ಮೂಲತಃ ತುಳಿತಕ್ಕೊಳಗಾದವರೆಲ್ಲರೂ ಒಂದೇ ಎನ್ನುವ ಅರಿವು ಅವರಲ್ಲಿ ಮೂಡಬೇಕಾಗಿದೆ.

ಮೊಗೇರರನ್ನು ಮೇರ / ಮುಗೇರ / ಮುಗ್ಗೇರ ಎಂದು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ದ.ಕ. ಜಿಲ್ಲೆ, ಉಡುಪಿ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ನೆಲೆಸಿರುವ ಇವರು ಪರಿಶಿಷ್ಟ ಜಾತಿಯವರಾಗಿದ್ದಾರೆ. ಸಂವಿಧಾನವು ಇವರನ್ನು “Moger” ಎಂದು ಗುರುತಿಸಿಕೊಂಡಿದೆ. ಪ್ರಸ್ತುತ ಲೇಖನದಲ್ಲಿ ಇವರನ್ನು ಮೊಗೇರರು ಎಂದೇ ಕರೆಯಲಾಗಿದೆ. ಇವರು, ದ.ಕ. ಜಿಲ್ಲೆ, ಉಡುಪಿ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಯಾದ್ಯಂತ ಗುಂಪು ಮನೆಗಳ ಕಾಲೊನಿಗಳಲ್ಲಿ ವಾಸಿಸುತ್ತಾರೆ. ಇಲ್ಲಿನ ಮೂಲನಿವಾಸಿಗಳಾದ ಇವರು ಹಿಂದೆ ಭೂಮಾಲಿಕರ ಮನೆಯಲ್ಲಿ ಮೂಲದ ಆಳುಗಳಾಗಿ, ಧನಿಗಳಿಗೆ ನಿಷ್ಟಾವಂತರಾಗಿ ದುಡಿಯುತ್ತಿದ್ದರು.

ಮೊಗೇರರ ಕುರಿತು ಈವರೆಗೆ ನಡೆದಿರುವ ಅಧ್ಯಯನಗಳ ಸಮೀಕ್ಷೆ

ಮೊಗೇರ ಜನಾಂಗದ ಕುರಿತಾಗಿ ಲೇಖನಗಳು ಬಂದಿವೆ. ಮೊಗೇರ ಮಹಿಳೆಯರ ಕುರಿತಾಗಿ ಲೇಖನಗಳು ಬಂದಿಲ್ಲವೆಂದೇ ಹೇಳಬೇಕು. ಒಟ್ಟಾಗಿ ಜನಾಂಗದ ಕುರಿತಾಗಿ ಬಂದಿರುವ ಲೇಖನಗಳಲ್ಲಿ ೧೯೬೮ ರಲ್ಲಿ ಪಿ. ಕಮಲಾಕ್ಷ ಅವರ ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ಮತ್ತು ಗಿರಿಜನರ ಸಾಮಾಜಿಕ ಇತಿಹಾಸ ಕೃತಿ ಮುಖ್ಯವಾದುದು. ಈ ಕೃತಿಯಲ್ಲಿ ಮೊಗೇರರ ಕುರಿತಾಗಿ ಈ ವಿವರಗಳು ಬರುತ್ತವೆ. “ಇದ್ದುದರಲ್ಲಿಯೇ ತೃಪ್ತ ಜೀವನ ಮಾಡುವ ಹರಿಜನರಲ್ಲಿ ಇವರು ಒಂದು ಹೆಜ್ಜೆ ಮುಂದಿದ್ದಾರೆ. ಇವರ ಹೆಂಗಸರು ಗಂಡಸರ ಜೊತೆ ಕೆಲಸದಲ್ಲಿ ಪಾಲ್ಗೊಳ್ಳುವರಲ್ಲದೆ ಬಿಡುವಿನ ಸಮಯದಲ್ಲಿ ಚಾಪೆ ಹೆಣೆಯುವುದು, ಕಾಡಿಗೆ ಹೋಗಿ ಸೊಪ್ಪು, ಕಟ್ಟಿಗೆ ತಂದು ಮಾರುತ್ತಾರೆ. ಈ ಪಂಗಡದವರು ನೋಡಲು ಹೆಚ್ಚಾಗಿ ಕಪ್ಪುವರ್ಣದವರು. ಇವರ ಹೆಂಗಸರು ಪೂರ್ವದಲ್ಲಿ ಹೆಚ್ಚಾಗಿ ಮೈಮೇಲೆ ಬಟ್ಟೆ ಧರಿಸುವ ಪದ್ಧತಿ ಇರದೆ, ಕೇವಲ ಸೊಂಟಕ್ಕೆ ಮಾತ್ರ ಕಪ್ಪ ವಸ್ತ್ರವನ್ನು ತೊಡುತ್ತಿದ್ದರು. ಕೊರಳಿಗೆ, ಕೈಗಳಿಗೆ, ತಾಮ್ರದ, ಹಿತ್ತಾಳಿಯ ಸರಗಳನ್ನಾಗಲೀ, ಮಣಿಗಳ ಮಾಲೆಗಳನ್ನಾಗಲೀ ತೊಡುವ ಆಭರಣ ಪ್ರಿಯರಾಗಿದ್ದರು. ಹಗಲಲ್ಲಿ ದುಡಿದು ರಾತ್ರಿ ಹೊತ್ತು ದಣಿವಾರಿಸಲು ತಾವೇ ತಯಾರಿಸಿದ ದಡಿ (ಒಂದು ರೀತಿಯ ಚರ್ಮದ ಡೋಲು) ಬಾರಿಸಿ ಜೊತೆಗೆ ತಮ್ಮ ಮಧುರ ಕಂಠದಿಂದ ತುಳು ಪಾಡ್ದನವನ್ನು ಹಾಡುವರು. ಇದಕ್ಕೆ ತಕ್ಕಂತೆ ಇವರ ಹೆಂಗಸರು ಬಲು ಚಲೊದಾಗಿ ಪಾಡ್ದನಕ್ಕೆ ಸರಿಯಾಗಿ ಕುಣಿಯುವರು. ಇವರ ಮದುವೆ ನಿರಾಡಂಬರ. ಯಜಮಾನ ಇದ್ದು ತಂದೆ ತಾಯಿಗಳ ಸಮಕ್ಷಮ ಧಾರೆ ಎರೆದು ಕೊಡುವ ಪದ್ಧತಿ. ಇವರು ಮದುವೆಗೆ ತುಲ್ಲೆಲ್ ಎಂದು ಕರೆಯುವರು. ಮದುವೆ ಕಾಲದಲ್ಲಿ ದುಡಿಯೆಂಬ ಡೋಲನ್ನು ೨-೩ ಮಂದಿ ಸೇರಿ ಚೆನ್ನಾಗಿ ಶ್ರುತಿಯೇರಿಸಿ ಬಾರಿಸುವುದರೊಂದಿಗೆ ತುಳು ಪಾಡ್ದನವನ್ನು ಹಾಡುವಾಗ ಹೆಂಗಸರೂ ಗಂಡಸರೂ ಜೊತೆಗೂಡಿ ಕುಣಿಯುವುದನ್ನು ನೋಡಲು ಬಲು ರಮ್ಯ. ಇವರ ಊಟ, ತಿಂಡಿ, ಮನೆ, ವಠಾರ ಹಾಗೂ ಉಡುಪು ಇತ್ಯಾದಿ ಬದು ಚೊಕ್ಕಟ. ಹಿಂದಿನ ಕಾಲದ ಗಿಡಮೂಲಿಕೆಗಳ ಮದ್ದು ಮಾಡುವ ಹಾಗೂ ಮದ್ದು ಕೊಡುವ ಕಲೆಯಲ್ಲಿ ಇವರು ಅತೀ ನಿಪುಣರು. ಮೊಗೇರರು ತಮ್ಮ ಮದುವೆಯನ್ನು ಅನುಕೂಲಕ್ಕೆ ತಕ್ಕಂತೆ ಮಾಡುವರು. ಹಿಂದಿನ ಕಾಲದಲ್ಲಿ ಇವರ ಮದುವೆ ಹೆಚ್ಚಾಗಿ ಭಾನುವಾರ ರಾತ್ರಿ ಸಮಯದಲ್ಲಿ ಜರಗುತ್ತಿತ್ತು. ಅಂದು ರಾತ್ರಿ ವರನ ದಿಬ್ಬಣ ವಧುವಿನ ಮನೆಗೆ ಅತೀ ವಿಜೃಂಭಣೆಯಿಂದ ದುಡಿ ಬಾರಿಸುತ್ತಾ ಹೋಗುವುದು. ವಧುವಿನ ಅಲಂಕಾರ ಈ ರೀತಿ ಮಾಡುತ್ತಿದ್ದರು ಎಂದು ಇವರು ಈ ಮಾಹಿತಿಗಳನ್ನು ಕೊಡುತ್ತಾರೆ “ವಧುವನ್ನು ಕೂಡಾ ಹೂಮುಡಿಸಿ ಸಿಂಗರಿಸಿ ಮಗ್ಗದ ಸೀರೆ ಉಡಿಸಿ ಸೊಂಟದ ಮೇಲೆ ಮಗ್ಗದ ಒಂದು ತುಂಡು ವಸ್ತ್ರವನ್ನು ಸುತ್ತುವರು. (ರವಿಕೆ ಹಾಕುವ ಪದ್ಧತಿ ಹಿಂದೆ ಇರಲಿಲ್ಲ) ವಧುವಿನ ಕೈ ಮತ್ತು ಕಿವಿಗಳಿಗೆ ಹಿತ್ತಾಳೆ, ಬೆಳ್ಳಿ ಅಥವಾ ಕಂಚಿನ ಆಭರಣಗಳನ್ನು ಅತಿಯಾಗಿ ತೊಡಿಸುವರು. ಕೊರಳಿನ ತುಂಬಾ ಮಣಿಸರಗಳನ್ನು ಧರಿಸುವರು. ತಾಳಿಯ ಜೊತೆಗೆ ಬೆಳ್ಳಿಯ ಉದ್ದದ ನೂಲನ್ನು ವಧುವಿನ ಬೆನ್ನಿನ ಸುತ್ತ ಕಟ್ಟುವ ಪದ್ಧತಿ ಹಿಂದೆ ರೂಢಿಯಲ್ಲಿತ್ತು. ಹಿಂದಿನ ಕಾಲದಲ್ಲಿ ಇವರ ಮದುವೆ ಐದು ದಿನಗಳ ಕಾಲ ನಡೆಯುತ್ತಿತ್ತು. ಆದರೆ ಈಗ ಒಂದೇ ದಿನದಲ್ಲಿ ನಡೆಯುತ್ತದೆ. ಮದುವೆಯ ಮರುದಿನ ವಧೂವರರು ಹತ್ತಿರದ ನದಿಗೆ ಯಾ ಕೆರೆಗೆ ಹೋಗಿ ಹೊಸ ಚಾಪೆಯನ್ನು ಕೆರೆಯಲ್ಲಿ ಮುಳುಗಿಸಿ, ವಧೂವರರಿಬ್ಬರೂ ಮೀನು ಹಿಡಿಯುವ ಪದ್ಧತಿ ಹಿಂದೆ ಬಳಕೆಯಲ್ಲಿತ್ತು. ಈಗ ಇವರ ಮದುವೆಯ ಪದ್ಧತಿ ತೀರಾ ಸುಧಾರಿತವಾಗಿದೆ. ಮುಗ್ಗೇರರಲ್ಲಿ ವರನು ವಧುವಿಗೆ ರೂ. ೧೬ ನ್ನು ವಧುದಕ್ಷಿಣೆಯಾಗಿ ಕೊಡುವ ರೂಢಿ ಇತ್ತು.” -(ಪಿ. ಕಮಲಾಕ್ಷ).

ಬಿ.ಎ. ವಿವೇಕ ರೈ ಅವರು ತುಳುವ ಅಧ್ಯಯನ ಕೆಲವು ವಿಚಾರಗಳು (೧೯೮೦) ಕೃತಿಯಲ್ಲಿ ಮೊಗೇರರನ್ನು ಸಾರ್ವತ್ರಿಕವಾಗಿ ಕರೆಯಲಾಗುವ ಮೇರರು ಎಂದು ಉಲ್ಲೇಖಿಸುತ್ತಾ ಹರಿಜನ ವರ್ಗಗಳಲ್ಲಿ ಮೇರರು ಅಥವಾ ಮುಗೇರರು ಒಂದು ವರ್ಗ. ಇವರು ಹರಿಜನ ವರ್ಗಗಳೆಲ್ಲೆಲ್ಲಾ ತಾವು ಮೇಲಿನವರೆಂದು ಹೇಳಿಕೊಳ್ಳುತ್ತಾರೆ. ಮೇರರು ಆಡುವ ಭಾಷೆ ತುಳು. ಇವರಲ್ಲಿ ಗಂಡಸನ್ನು ಮುಗೇರೆ ಎಂದೂ ಹೆಂಗಸನ್ನು ಮುಗೇರ್ತಿ ಎಂದೂ ಕರೆಯುತ್ತಾರೆ. ಮೇರರಲ್ಲಿ ಗ್ರಾಮಕ್ಕೊಬ್ಬ ಗುರಿಕಾರ ಎನ್ನುತ್ತಾ ಮುಗೇರರ ಭಾಷೆ, ನಂಬಿಕೆ, ಜೀವನಾವರ್ತನ ಆಚರಣೆಗಳ ಕುರಿತಾಗಿ ವಿವರ ನೀಡುತ್ತಾರೆ. ಮೊಗೇರರ ಕುಣಿತಗಳ ಕುರಿತಾಗಿ ಯದುಪತಿ ಗೌಡ ಅವರು ಬೆಳ್ತಂಗಡಿ ಪರಿಸರದ ಮೇರರ ಕುಣಿತಗಳು ಎಂಬ ತಮ್ಮ ಎಂ.ಫಿಲ್‌.ಪ್ರಬಂಧದಲ್ಲಿ ಮೊಗೇರರ ವಾಸದ ಕುರಿತಾಗಿ ಪರಿಚಯಾತ್ಮಕ ಮಾಹಿತಿ ನೀಡಿದ್ದಾರೆ. ೧೯೯೨ರಲ್ಲಿ ಕೊಯಿರಾ ಬಾಳೆಪುಣಿಯವರು ತುಳುನಾಡಿನ ಮೊಗೇರರ ಒಂದು ಜನಾಂಗೀಯ ಅಧ್ಯಯನ ಲೇಖನದಲ್ಲಿ ಮುಗೇರರ ವೃತ್ತಿ, ಮೊಗೇರ ಹೆಸರು ಬರಲು ಕಾರಣ, ಅವರ ಜೀವನಾವರ್ತನ ಆಚರಣೆಗಳ ಪರಿಚಯ, ಅವರ ಮೌಖಿಕ ಸಾಹಿತ್ಯದ ಕುರಿತಾಗಿ ದೀರ್ಘವಾದ ಪರಿಚಯಾತ್ಮಕ ಲೇಖನ ಬರೆದಿರುತ್ತಾರೆ.

ಮೊಗೇರರಲ್ಲಿ ಪ್ರಚಲಿತವಿರುವ ಕುಣಿತಗಳ ಕುರಿತಾಗಿ ಪಾಲ್ತಾಡಿ ರಾಮಕೃಷ್ಣ ಆಚಾರ್ ಜಾನಪದ ಸ್ಪಂದನ ಕೃತಿಯಲ್ಲಿ (೧೯೯೦)  ಪಿಲಿಪಂಜಿ, ಚೆನ್ನು ಕುಣಿತರ ಬಗ್ಗೆ ವಿವರಗಳನ್ನು ಕೊಡುತ್ತಾರೆ. ಇವರದೇ ಜನಪದ ಕುಣಿತಗಳು (೧೯೯೨) ಕೃತಿಯಲ್ಲಿ ಚೆನ್ನು, ಪಿಲಿಪಂಜಿ, ಆಟಿಕಳಂಜ ಮಂತಾದ ಕುಣಿತಗಳ ಕುರಿತಾದ ಮಾಹಿತಿಗಳಿವೆ. ಮುಗೇರರ ಚೆನ್ನು ಕುಣಿತ-ವಿಚಾರ ಸಂಕಿರಣದ ಪ್ರಬಂಧದಲ್ಲಿ ಚೆನ್ನು ಕುಣಿತದ ವಿವರಗಳು ಸಿಗುತ್ತವೆ.

ಈ ಎಲ್ಲಾ ಲೇಖನಗಳಲ್ಲಿಯೂ ಮೊಗೇರ ಮಹಿಳೆಯರ ಕುರಿತಾಗಿಯೇ ನಿರ್ದಿಷ್ಟವಾದ ಲೇಖನಗಳು ಬಂದಿಲ್ಲ. ಮೊಗೇರ ಸಂಸ್ಕೃತಿಯ ಕುರಿತಾಗಿ ಮೊಗೇರರು ಜನಾಂಗ ಜಾನಪದೀಯ ಅಧ್ಯಯನ (೧೯೯೭) ಸಂಶೋಧನಾ ಮಹಾಪ್ರಬಂಧದಲ್ಲಿ ಮೊಗೇರರ ಸಾಂಸ್ಕೃತಿಕ ವಿವರಗಳನ್ನು ಪ್ರೊ. ಅಭಯ್‌ಕುಮಾರ್ ವಿಶದವಾಗಿ ವಿಮರ್ಶಿಸಿದ್ದಾರೆ. ಈ ಕೃತಿಯು ಮೊಗೇರರ ಸಂಸ್ಕೃತಿಯ ಕುರಿತಾಗಿ ಬಂದಿರುವ ಬರವಣಿಗೆಯಲ್ಲಿ ವಿವರವಾಗಿ ಹಾಗೂ ವಿಶ್ಲೇಷಣಾತ್ಮಕವಾಗಿ ಬಂದಿರುವ ಮೌಲಿಕ ಕೃತಿಯಾಗಿದೆ.

ಈ ಕೃತಿಯಲ್ಲಿ “ಮೊಗೇರ” ಎಂಬ ಜಾತಿ ಸೂಚಕ ಪದ ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿ ಬಂದಿದೆಯಾದರೂ ಅದಕ್ಕೆ ಪರ್ಯಾಯ ಪದವಾದ ಮೇರ ಎಂಬುದೇ ಸಾರ್ವತ್ರಿಕ ಬಳೆಕೆಯ ಪದವಾಗಿ. ಮುಗೇರರನ್ನು ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯ ಪ್ರದೇಶಗಳಲ್ಲಿ ಮೇರರು ಎಂದು ಕರೆದರೆ ತುಳುನಾಡಿನ ಇತರ ಪ್ರದೇಶಗಳಲ್ಲಿ ಮುಗೇರ, ಮುಗ್ಗೇರ ಇತ್ಯಾದಿಯಾಗಿ ಕರೆಯುತ್ತಾರೆ. ಸಂವಿಧಾನದಲ್ಲಿ ಮುಗೇರ ಪದವೇ ಮೋಗೇರ್ ಎಂಬುದಾಗಿ ಬಳಕೆಯಾಗಿದೆ. ಈ ಜಾತಿ ಸೂಚಕ ಪದದ ನಿಷ್ಪತ್ತಿ ಕೂಡಾ ಮೇರ ಎಂಬ ಪದವನ್ನೇ ಆಧರಿಸಿಕೊಂಡಿದೆ. ಮೊಲಕ್ಕೆ ತುಳುವಿನಲ್ಲಿ ಮೇರ್, ಮುಯ್ಯೆರ್ ಎಂಬುದು ಸಂವಾದಿ ಪದವಾಗಿದೆ. ಚಾಣಾಕ್ಷ ಓಟಕ್ಕೆ ಪ್ರಸಿದ್ಧಿಯಾದ ಮೊಲವನ್ನು ಅಟ್ಟಿಸಿ ಬೇಟೆಯಾಡುವುದರಲ್ಲಿ ಪ್ರಸಿದ್ಧರಾದುದರಿಂದ  ಮುಗೇರರು, ಮೇರರು ಎಂಬ ಹೆಸರು ಬಂತು ಎಂದು ಚರ್ಚಿಸಲಾಗಿದೆ. ಮುಗೇರರನ್ನು ಜಾತಿ ಸೂಚಕವಾಗಿ ಮೇರರು ಎಂದು ಕರೆಯುತ್ತಿದ್ದರೂ, ಅವರ ಸಾಂಸ್ಕೃತಿಕ ಹಿನ್ನೆಲೆಯಾಗಿ ಗುರುತಿಸಿದಾಗ ಮೇರ ಎಂಬ ಪದದ ಬಳಕೆ ಕಂಡು ಬರುವುದಿಲ್ಲ. ಅಲ್ಲಿ ಮುಗೇರ ಎಂದೇ ಉಲ್ಲೇಖಗೊಂಡಿದೆ. ಮುಗೇರರ ಆರಾಧನೆಯಲ್ಲಿ ಬಿಲ್ಲು ಬಾಣಗಳಿಗೆ ಪ್ರಾಮುಖ್ಯತೆ ಇದೆ. (ಕೆ. ಅಭಯ್‌ಕುಮಾರ್).

ಕರ್ನಾಟಕ ಪರಿಶಿಷ್ಟ ಜಾತಿ ಜನಸಂಖ್ಯೆ: ೨೦೦೧ ಜನಗಣತಿ (ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ)

ಜಿಲ್ಲೆಗಳು ಪ್ರದೇಶ ಜನಸಂಖ್ಯೆ ಪುರುಷರು ಮಹಿಳೆಯರು ಲಿಂಗ ಪರಿಮಾಣ
ಕರ್ನಾಟಕ ರಾಜ್ಯ ಒಟ್ಟುಗ್ರಾಮೀಣ

ನಗರ

೮,೫೬೩,೯೩೦೬,೪೧೭,೨೪೩

೨,೧೪೬,೬೮೭

೪,೩೩೯,೭೪೫೩,೨೪೫,೩೧೫

೧,೦೯೪,೪೩೦

೪,೨೨೪,೧೮೫೩,೧೭೧,೯೨೮

೧,೦೫೨,೨೫೭

೯೭೩೯೭೭

೯೬೧

ಉಡುಪಿ ಒಟ್ಟುಗ್ರಾಮೀಣ

ನಗರ

೬೭,೬೮೯೫೬,೪೧೦

೧೧,೨೭೯

೩೩,೩೪೫೨೭,೭೫೯

೫,೫೮೬

೩೪,೩೪೪೨೮,೬೫೧

೫,೬೯೩

೧೦೩೦೧೦೩೨

೧೦೧೯

ದಕ್ಷಿಣ ಕನ್ನಡ ಒಟ್ಟುಗ್ರಾಮೀಣ

ನಗರ

೧,೩೧,೧೬೦೯೯,೦೩೫

೩೨,೧೩೫

೬೫,೮೧೮೪೯,೮೧೬

೧೬,೦೦೨

೬೫,೩೪೨೪೯,೨೧೯

೧೬,೧೨೩

೯೯೩೯೮೮

೧೦೦೮

ಕಾಸರಗೋಡು ಒಟ್ಟು ೬೧,೮೩೮

ಕರ್ನಾಟಕದಲ್ಲಿ ಉಡುಪಿ ಜಿಲ್ಲೆ ಮತ್ತು .. ಜಿಲ್ಲೆಗಳ ಸಾಕ್ಷರತೆ: ಪರಿಶಿಷ್ಟ ಜಾತಿ : ೨೦೦೧

ಜಿಲ್ಲೆಗಳು ಪ್ರದೇಶ ಜನಸಂಖ್ಯೆ ಪುರುಷರು ಮಹಿಳೆಯರು
ಕರ್ನಾಟಕ ರಾಜ್ಯ ಒಟ್ಟುಗ್ರಾಮೀಣ

ನಗರ

೫೨.೯೪೭.೩

೬೯.೩

೬೩.೮೫೮.೭

೭೮.೩

೪೧.೭೩೫.೬

೫೯.೯

ಉಡುಪಿ ಒಟ್ಟುಗ್ರಾಮೀಣ

ನಗರ

೭೦.೧೬೮.೩

೭೯.೧

೭೭.೭೭೫.೯

೮೬.೩

೬೨.೮೬೧.೦

೭೧.೯

ದಕ್ಷಿಣ ಕನ್ನಡ ಒಟ್ಟುಗ್ರಾಮೀಣ

ನಗರ

೬೬.೧೬೧.೯

೭೮.೮

೭೩.೯೭೦.೦

೮೫.೯

೫೮.೪೫೩.೯

೭೧.೮

ಕರ್ನಾಟಕದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಗಣತಿ ವಿವರಗಳು ಎಂಬ ಲೇಖನದಲ್ಲಿ ಅಭಿವೃದ್ಧಿ ಅಧ್ಯಯನ-ಸಂಪುಟ ೩, ಸಂಚಿಕೆ ೩-೨೦೦೫ ಟಿ. ಆರ್. ಚಂದ್ರಶೇಖರ್ ಇವರು ಕರ್ನಾಟಕದಲ್ಲಿ ೨೦೦೧ ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ ೮,೫೬೩,೯೩೦ ಹೊಂದಿದೆ. ಈ ಕೋಷ್ಟಕದಲ್ಲಿ ದ.ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆಗೆ ಸಂಬಂಧಪಟ್ಟಂತೆ ಪರಿಶಿಷ್ಟ ಜಾತಿಯ ಜನಸಂಖ್ಯೆ ಹಾಗೂ ಸಾಕ್ಷರತೆಯ ಶೇಕಡಾವಾರು ಅಂಕಿ ಅಂಶವನ್ನು ಮಾತ್ರ ಇಲ್ಲಿ ಬಳಸಿಕೊಳ್ಳಲಾಗಿದೆ. ೨೦೦೧ರ census india ವರದಿಯ ಪ್ರಕಾರ ಕಾಸರಗೋಡು, ಉಡುಪಿ ಹಾಗೂ ದ.ಕ. ಜಿಲ್ಲೆಗಳಲ್ಲಿ ಒಟ್ಟು ಮೊಗೇರರ ಜನಸಂಖ್ಯೆ ೭೦,೫೪೭ ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ೪೧,೧೪೦ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ೨೩,೨೪೬, ಉಡುಪಿ ಜಿಲ್ಲೆಯಲ್ಲಿ ೬,೧೭೧ ರಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ. ೨೦೦೧ರ  ಈ ವರದಿಯ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ ೧೨,೮೯೨ ಪುರುಷರು ಹಾಗೂ ೧೨,೬೮೮ ರಷ್ಟು ಮಹಿಳೆಯರಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೊಗೇರರು ಸಾಕ್ಷರತಾ ಪ್ರಮಾಣ ಸಂಖ್ಯೆಗಳಲ್ಲಿ ೪೧,೬೫೪ ಇದರಲ್ಲಿ ಪುರುಷರು ೨೩,೬೬೬ ಹಾಗೂ ಮಹಿಳೆಯರು ೧೭,೯೮೮ ರಷ್ಟು ಮಂದಿ ಸಾಕ್ಷರರಾಗಿದ್ದಾರೆ. ಕಾಸರಗೋಡು ಜಿಲ್ಲೆಯ ಮೊಗೇರರ ಸಾಕ್ಷರತಾ ಪ್ರಮಾಣ ಒಟ್ಟು ೧೬,೨೫೧ ಇದರಲ್ಲಿ ಪುರುಷರ ಸಾಕ್ಷರತಾ ಪ್ರಮಾಣ ಸುಮಾರು ೮,೯೮೬ ಹಾಗೂ ಮಹಿಳೆಯರ ಸಂಖ್ಯೆ ೭,೩೦೫.

ಮೊಗೇರ ಸಂಸ್ಕೃತಿಯಲ್ಲಿ ಕೌಟುಂಬಕ ನೆಲೆಯಲ್ಲಿ ಮಹಿಳೆ

ಮೊಗೇರ ಸಂಸ್ಕೃತಿಯು ಮಾತೃಮಾಲೀಯ ಪದ್ಧತಿಯನ್ನು ಹೊಂದಿರುವ ಕುಟುಂಬ ಪದ್ಧತಿಯನ್ನು ಹೊಂದಿದೆ. ಇಲ್ಲಿ ಕೌಟುಂಬಿಕ ನೆಲೆಯಲ್ಲಿ ಮಹಿಳೆಗೆ ಪ್ರಧಾನವಾದ ಸ್ಥಾನವಿದೆ. ಅಳಿಯ ಸಂತಾನದ ಕಟ್ಟಳೆಯನ್ನು ಅನುಸರಿಸುವ ಇವರಲ್ಲಿ ಮಾತೃಪ್ರಧಾನ ಪರಿಕಲ್ಪನೆಯು ಬಳಕೆಯಲ್ಲಿದೆ. ಬಂಧುತ್ವದ ಸಂದರ್ಭದಲ್ಲಿ ಮುಖ್ಯವಾಗಿ ತಾಯಿಯ ಬಳಿಯು (ಗೋತ್ರ) ಗಂಡು-ಹೆಣ್ಣು ಮಕ್ಕಳಿಬ್ಬರಿಗೂ ಬರುತ್ತದೆ. ತಂದೆಯ ಬಳಿಯು ಇಲ್ಲಿ ಅಷ್ಟು ಮುಖ್ಯವಾಗಿಲ್ಲ. ಮದುವೆಯ ಸಂದರ್ಭದಲ್ಲಿ ತಂದೆಯ ಬಳಿಯ ಹುಡುಗನನ್ನು, ಹುಡುಗಿ ಮದುವೆ ಆಗಬಹುದು ಆದರೆ ತಾಯಿಯ ಬಳಿಯ ಹೆಣ್ಣು ಅದೇ ಬಳಿಯ ಗಂಡನ್ನು ಮದುವೆಯಾಗಲು ಮೊಗೇರರಲ್ಲಿ ಬಲವಾದ ನಿಷೇಧವಿದೆ. ತಾಯಿಯ ಬಳಿಯ ಹೆಣ್ಣು / ಗಂಡು ಒಂದೇ ರಕ್ತದವರು, ರಕ್ತ ಸಂಬಂಧಿಗಳು ಎಂದು ಪರಿಗಣಿಸಲ್ಪಡುತ್ತಾರೆ.

ಈ ಸಂಸ್ಕೃತಿಯಲ್ಲಿ ಮಹಿಳೆಯು ಕೂಡಾ ಪುರುಷನ ಹಾಗೆಯೇ ಉದ್ಯೋಗಕ್ಕೆ ಹೋಗುತ್ತಾಳೆ. ಮುಗೇರ ಪುರುಷರ ಹಾಗೆಯೇ ಮುಗೇರ ಮಹಿಳೆಯರು ಕೂಡಾ ಕೃಷಿ ಕೆಲಸಗಳನ್ನು ಮಾಡುತ್ತಿದ್ದರು. ಅಲ್ಲದೆ ಗೊರಬು ಹೆಣೆಯುವುದು, ಚಾಪೆ ತಯಾರಿ, ಬುಟ್ಟಿ ಹೆಣೆಯುವುದು ಮುಂತಾದ ಕರಕುಶಲ ಕಲೆಗಳಲ್ಲಿ ಪರಿಣತರು. ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳು ನಿಂತಾಗ ಇಂತಹ ಕುಶಲ ಕಲೆಗಳನ್ನು ಮನೆಯಲ್ಲಿಯೇ ತಯಾರಿಸುತ್ತಾರೆ. ಜನಪದ ಮೌಖಿಕ ಸಾಹಿತ್ಯದಲ್ಲಿ ತುಂಬಾ ಶ್ರೀಮಂತರಾಗಿರುವ ಇವರು ಹಲವಾರು ಪಾಡ್ದನ, ಕಬಿತ, ಉರಲ್, ಗಾದೆ, ಕಥೆಗಳನ್ನು ಹೇಳುವುದರಲ್ಲಿ ನಿಪುಣರು. ಈಗಿನ ತಲೆಮಾರಿನ ಮುಗೇರ ಮಹಿಳೆಯರು ಬೀಡಿ ಉದ್ಯಮ, ಗೇರು ಬೀಜದ ಕಾರ್ಖಾನೆ ಮುಂತಾದ ಕಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರತಿಯೊಂದು ಸಂಸ್ಕೃತಿಯೂ ಹುಟ್ಟಿನಿಂದ ತೊಡಗಿ ಸಾವಿನವರೆಗಿನ ಹಲವಾರು ಆಚರಣೆಗಳನ್ನು ರೂಢಿಸಿಕೊಂಡಿರುತ್ತವೆ. ಇವರಲ್ಲಿ ಜನನ ಸಂದರ್ಭದಲ್ಲಿ ಹಲವಾರು ಆಚರಣೆಗಳು ಬಳಕೆಯಲ್ಲಿವೆ. ಜನನ ಎನ್ನುವುದು ಮೊಗೇರ ಸಂಸ್ಕೃತಿಯಲ್ಲಿ ಹೊಸದೊಂದು ಜೀವವನ್ನು ಬರಮಾಡಿಕೊಳ್ಳುವ ಸಂಕ್ರಮಣದ ಕಾಲವಸ್ಥೆ. ಈ ಸಂದರ್ಭದಲ್ಲಿ ಗರ್ಭಿಣಿ ಹೆಂಗಸಿಗೆ ಹಲವಾರು ಆಹಾರದ ಉಪಚಾರಗಳನ್ನು ಮಾಡುತ್ತಾರೆ. ಹೆಣ್ಣು ಅಥವಾ ಗಂಡು ಮಗು, ಯಾವುದಾದರೂ ದೇವರ ಸೃಷ್ಟಿ ಎಂಬ ನಂಬಿಕೆ ಇವರದು. ಹೆತ್ತು ೧೬ ದಿವಸಗಳ ಕಾಲ ಮೈಲಿಗೆ ಅಥವಾ ಸೂತಕವನ್ನು ಆಚರಿಸುತ್ತಾರೆ. ಈ ದಿನಗಳಲ್ಲಿ ಬಾಣಂತಿ ಮತ್ತು ಮಗುವನ್ನು ಕುಟುಂಬದ ಇತರ ಸದಸ್ಯರಿಂದ ಪ್ರತ್ಯೇಕವಾಗಿಸುತ್ತಾರೆ. ಅಲ್ಲಿಗೆ ಎಲ್ಲರಿಗೂ ಪ್ರವೇಶವಿರುವುದಿಲ್ಲ. ೧೬ ದಿನಗಳ ಕಾಲ ಬಾಣಂತಿ ಹೊರಗೆ ಬರುವಂತಿಲ್ಲ. ನಂತರ ಅಮೆ (ಹೆಚ್ಚ ಬಳಿಕ ೧೬ನೇ ದಿವಸದಲ್ಲಿ ಬಾಣಂತಿ ಮಗುವಿಗೆ ನಡೆಸುವ ಕಾರ್ಯಕ್ರಮ) ಆದ ನಂತರ ಆಕೆ ಹೊರಗೆ ಬರಬಹುದು. ಬಾಣಂತಿಗೆ ಅವಶ್ಯವಾಗಿ ಸಿಗಬೇಕಾದ ವಿಶ್ರಾಂತಿಯು ಈ ಮೂಲಕ ಆಕೆಗೆ ದೊರೆಯುತ್ತದೆ.

ಮೊಗೇರ ಮಹಿಳೆ ಹೆತ್ತಾಗ ಮೊದಲ ೩ನೇ ದಿವಸ ಅಥವಾ ೫ನೇ ದಿನ ಅಥವಾ ಹಾಗೂ ೧೬ನೇ ದಿನದಂದು ಅಮೆ ಮಾಡುತ್ತಾರೆ. ಹೆತ್ತಾಗ ನಂಜಿ (ತಾಯಿಮಾಸನ್ನು) ಯನ್ನು ಒಂದು ಗುಂಡಿಯಲ್ಲಿ ಹಾಕುತ್ತಾರೆ. ಹೆತ್ತ ದಿವಸ ಮನೆಯ ಮಾಡಿಗೆ ಕಾಸರಕನ ಮರದ ಎಳೆಯ ಗೆಲ್ಲನ್ನು ಇಡುತ್ತಾರೆ. ಬಾಣಂತಿಯ ಪಕ್ಕವೂ ಇದನ್ನು ಇಡುತ್ತಾರೆ. ಕಾಸರಕನ ಗೆಲ್ಲು ದುಷ್ಟ ಶಕ್ತಿಗಳು ಬಾಣಂತಿಯ ಹತ್ತಿರ ಸುಳಿಯಲು ಬಿಡುವುದಿಲ್ಲ ಎಂಬ ನಂಬಿಕೆ ಇವರದು. ತಾಯಿ ಮಾಸನ್ನು ಹೂತ ಸ್ಥಳಕ್ಕೆ ಒಂದು ಕಾಸರಕನ ಗೆಲ್ಲಿನಿಂದ ಗುರುತನ್ನು ಇಡುತ್ತಾರೆ. ೧೬ನೇ ಆಮೆಯ ದಿವಸ ಅನ್ನ-ಪೆದ್ದೊಲ್ದಿ ಮರ್ದ್‌(ಬಾಣಂತಿಯ ಮದ್ದು)ನ್ನು ದೀಪ ಹೊತ್ತಿಸಿಕೊಂಡು ಅಲ್ಲಿ ಇಡಬೇಕು. ಬಾಣಂತಿಗೆ ಮಾಡಿದ ಅಡುಗೆಯನ್ನು ಒಂದು ಗೆರಟೆಯಲ್ಲಿ ಹಾಕಿ ತಾಯಿಮಾಸನ್ನು ಹೂತ ಸ್ಥಳದಲ್ಲಿ ಇಟ್ಟು “ಎನ್ನ ಬಂಜಿ ದಿಂಜಿಲೆಕ್ಕನೇ ನಿನ್ನಲ ಬಂಜಿ ದಿಂಜಡ್‌” (ನನ್ನ ಹೊಟ್ಟೆ ತುಂಬಿದ ರೀತಿಯಲ್ಲೇ ನಿನ್ನ ಹೊಟ್ಟೆಯೂ ತುಂಬಲಿ) ಎಂದು ಬಾಣಂತಿ ಹೇಳಿ ಬರಬೇಕು. ಹೊಟ್ಟೆಯಲ್ಲಿರುವಾಗ ಮಗುವಿನ ಪೋಷಣೆಯನ್ನು ನೋಡಿಕೊಂಡ ಹಾಗೂ ಮಗು ಸುರಕ್ಷಿತವಾಗಿ ಭೂಮಿಗೆ ಬರಲು ಕಾರಣವಾದ ತಾಯಿಮಾಸುವನ್ನು ಕೂಡ ಗೌರವಿಸುವ ಪರಿಕಲ್ಪನೆ ಇದಾಗಿದೆ. ಮಗುವಿನ ಜನನ ಸಂದರ್ಭದಲ್ಲಿ ಬರುವ ತ್ಯಾಜ್ಯ ವಸ್ತುವಾದ ಇದಕ್ಕೆ ಜೀವಂತಿಕೆಯನ್ನು ಕಲ್ಪಿಸಿ ಅದನ್ನು ೧೬ನೇ ದಿನ ನೆನೆಯುವ ಕ್ರಿಯೆ ಮೊಗೇರರಲ್ಲಿ ವಿಶಿಷ್ಟವಾಗಿದೆ. ಆಮೆಯ ದಿವಸ ಸಂಬಂಧಿಕರೆಲ್ಲರಿಗೂ ಆಮಂತ್ರಣವಿರುತ್ತದೆ. ಬಾಣಂತಿಯ ಮನೆಗೆ ಬರುವಾಗ ಒಂದು ಕುಡ್ತೆ ಎಣ್ಣೆಯನ್ನು ಎಲ್ಲರೂ ತರಬೇಕು. ಈ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮಹಿಳೆಯರೇ ಭಾಗವಹಿಸುತ್ತಾರೆ. ಗುರಿಕಾರನ ಹೆಂಡತಿ ಗುರಿಕಾರ್ತಿಯು ಇಲ್ಲಿ ಪ್ರಧಾನ ಪಾತ್ರ ವಹಿಸುತ್ತಾಳೆ. ಗುರಿಕಾರ್ತಿಯು ಈ ದಿನ ಬಾಣಂತಿಯನ್ನು ಮೀಯಿಸುತ್ತಾಳೆ. ಈ ದಿನ ಕೋಳಿ, ಕಡ್ಲೆ, ತೊರಕೆ, ಮೀನು, ಸೌತೆ ಇತ್ಯಾದಿಗಳಿಂದ ಪದಾರ್ಥಗಳನ್ನು ತಯಾರಿಸುತ್ತಾಳೆ. ಬಾಣಂತಿಗೆಂದೇ ತಯಾರಿಸಲಾಗುವ ಪೊಲದ್ಯ್ದೆ (ಬಾಣಂತಿ ಮದ್ದು)ಯನ್ನು ಹೆಚ್ಚಿನ ಪ್ರಮಾಣದಲ್ಲಿ ಈ ದಿನ ತಯಾರಿಸುತ್ತಾರೆ. ಈ ದಿನ ಬಂದ ಮಹಿಳೆಯರು ವಿಶೇಷವಾಗಿ ಇಷ್ಟಪಟ್ಟು ಈ ಮದ್ದನ್ನು ತಿನ್ನುತ್ತಾರೆ. ಹೆತ್ತು ೧೬ನೇ ದಿವಸದವರೆಗೆ ಮೀನು ಮಾಂಸದ ಅಡುಗೆ ಮಾಡುವುದಿಲ್ಲ. ೧೬ನೇ ದಿವಸ ಮೀನು, ಕೋಳಿ ಪದಾರ್ಥ ಮಾಡಲಾಗುತ್ತದೆ. ಊಟ ಆದ ನಂತರ ವೀಳ್ಯ ತಿನ್ನುತ್ತಾರೆ. ನಂತರ ಬಾಣಂತಿ ಎಲ್ಲರ ತಲೆಗೂ ಎಣ್ಣೆ ಹಾಕುತ್ತಾಳೆ. ನಂತರ ಬಾಣಂತಿ ಗುರಿಕಾರ್ತಿಯ ಕೈಯಲ್ಲಿ ಮಗುವನ್ನು ಕೊಡುತ್ತಾಳೆ. ತಂದೆ ತಾಯಿ ಹೇಳಿದ ಹೆಸರನ್ನು ಮಗುವಿಗೆ ಗುರಿಕಾರ್ತಿಯು ಇಡುತ್ತಾಳೆ. ನಂತರ ಮಗುವಿನ ಸೊಂಟಕ್ಕೆ ಕಪ್ಪು ನೂಲನ್ನು ಕಟ್ಟುತ್ತಾಳೆ. ಹೆಣ್ಣಿನ ತವರಿನ ಕಡೆಯಿಂದ ಮಗುವಿಗೆ ಸೊಂಟಕ್ಕೆ ಬೆಳ್ಳಿಯ ನೂಲನ್ನು ಕಟ್ಟುತ್ತಾರೆ. ನಂತರ ಗುರಿಕಾರ್ತಿ ೧ ಸೇರು ಅಕ್ಕಿ, ತೆಂಗಿನಕಾಯಿ, ವೀಳ್ಯ ಅಡಿಕೆ ಇಷ್ಟನ್ನು ಒಂದು ಗೆರಸೆಯಲ್ಲಿ ಇರಿಸಿ ನಂತರ ಸಿಂಬಿಯಲ್ಲಿ ಮಣ್ಣಿನ ಮಡಿಕೆಯನ್ನು ಇಟ್ಟು ಗೆರಸೆಯಿಂದ ಮೂರು ಹಿಡಿ ಅಕ್ಕಿ ತೆಗೆದು ಮಡಿಕೆಗೆ ಹಾಕಬೇಕು. ಇದನ್ನು ಬಾಣಂತಿಯ ಕೈ ಹಿಡಿಸಿ ಮೂರು ಸಲ ಒಲೆಯ ಮೇಲಿರಿಸಿ ಮೂರು ಸಲ ಕೆಳಗೆ ಇಡಬೇಕು.

ಅಮೆಯ ದಿವಸ ನಡೆಯುವ ಇನ್ನೊಂದು ವಿಶಿಷ್ಟ ಆಚರಣೆಯೆಂದರೆ ಆಮೆಯಂದು ಗಂಡನ ಕಡೆಯವರು ಬರುವಾ “ಪೇತ್‌” (ಹೆತ್ತ ಖರ್ಚು) ತರುತ್ತಾರೆ. ಇದು ಹೆಣ್ಣಿನ ತಾಯಿಗೆ ಸಲ್ಲುತ್ತದೆ. ಬಾಣಂತಿಯನ್ನು ನೋಡಿಕೊಂಡ ಅತ್ತೆಗೆ ಹಣದ ರೂಪದಲ್ಲಿ ಗೌರವವನ್ನು ಸಲ್ಲಿಸಲಾಗುತ್ತದೆ. ಹೆಣ್ಣಿನ ಮೊದಲ ಹೆರಿಗೆಯನ್ನು ತಾಯಿಯ ಮನೆಯವರೇ ನೋಡಿಕೊಳ್ಳುತ್ತಾರೆ. ಬಾಣಂತಿಗೆ ಈ ಸಮಯದಲ್ಲಿ ವಿಶೇಷವಾದ ಆಹಾರವನ್ನು ನೀಡುತ್ತಾರೆ. ಬಾಣಂತಿಗೆ ಕೊಡುವ ವಿಶೇಷ ಆಹಾರವಾದ ಪೆದ್ದೊಲ್ದಿ ಮರ್ದ್‌(ಬಾಣಂತಿಯ ಮದ್ದು) ಎದೆಹಾಲಿನ ಉತ್ಪತ್ತಿಹೆಚ್ಚಾಗಲು ಸಹಾಯಕಾರಿಯಾಗಿದೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎನ್ನುವ ಗಾದೆಯು ಇಲ್ಲಿ ನಿಜಾರ್ಥವನ್ನು ಕಳೆದುಕೊಳ್ಳುತ್ತದೆ. ಮನೆಮಗಳ ಮೊದಲ ಹೆರಿಗೆಯನ್ನು ತಾಯಿಯ ಮನೆಯವರೇ ನೋಡಿಕೊಳ್ಳುವುದರ ಉದ್ದೇಶ ತಮ್ಮ ಮುಂದಿನ ಸಂತತಿಯನ್ನು ಆದರದಿಂದ ಬರಮಾಡಿಕೊಳ್ಳುವ ಆಶಯವನ್ನು ಇಲ್ಲಿ ಕಾಣಬಹುದು. ನಂತರ ೩ ಅಥವಾ ೫ ನೇ ತಿಂಗಳಲ್ಲಿ ಆಕೆಯನ್ನು ಗಂಡನ ಮನೆಗೆ ಕಳಿಸಲಾಗುತ್ತದೆ. ತಾಯಿಯ ಮನೆಯಿಂದ ಹೋಗುವಾಗ ತೊಟ್ಟಿಲು, ಒಂದು ತೆಂಗಿನಕಾಯಿ, ಅಡಿಕೆ, ವಿಳ್ಯವನ್ನು ಅದರಲ್ಲಿ ಇಟ್ಟುಕೊಂಡು ಹೋಗುತ್ತಾರೆ. ಜನಪದರ ಪ್ರತಿಯೊಂದು ಆಚರಣೆಯ ಸಂದರ್ಭದಲ್ಲಿಯೂ ಕೂಡಾ ಅಡಿಕೆ-ವಿಳ್ಯ, ತೆಂಗಿನಕಾಯಿ, ಅಕ್ಕಿ ಪಾವಿತ್ಯ್ರವನ್ನು ಪಡೆದುಕೊಂಡಿದೆ. ಫಲವಂತಿಕೆಯ ಪರಿಕಲ್ಪನೆ ಇಲ್ಲಿ ಮುಖ್ಯ ಉದ್ದೇಶ.

ಬಾಣಂತಿ ಮದ್ದು

ಬಾಣಂತಿಗೆ ಈ ಸಮಯದಲ್ಲಿ ವಿಶೇಷವಾಗಿ ತಯಾರಿಸಿದ ಆಹಾರಗಳನ್ನೇ ಕೊಡುತ್ತಾರೆ. ಸಾಮಾನ್ಯವಾಗಿ ಕೊಡುವ ಆಹಾರವನ್ನು ಈ ಸಮಯದಲ್ಲಿ ಬಾಣಂತಿಗೆ ಕೊಡುವಂತಿಲ್ಲ. ಬಾಣಂತಿಗೆ ಕೊಡುವ ವಿಶೇಷ ಆಹಾರಕ್ಕೆ “ಪೆದ್ದೊಲ್ದಿ ಮರ್ದ್‌” (ಬಾಣಂತಿ ಮದ್ದು) ಎನ್ನುತ್ತಾರೆ. ಓಮ, ಕರಿಮೆಣಸು, ಶುಂಠಿ, ಬೆಳ್ಳುಳ್ಳಿಯನ್ನು ಚೆನ್ನಾಗಿ ಹುಡಿ ಮಾಡಿ ಮುದ್ದೆ ಮಾಡಿ ಊಟದ ಜೊತೆ ಕೊಡಬೇಕು. ಹೆತ್ತು ಮೊದಲ ಮೂರು ದಿವಸ ಕಾಲ್ಜೀರಿಗೆ ಕಷಾಯ ಕೊಡುತ್ತಾರೆ. ಪಜಿಮರ್ದ್‌(ನಾಟಿ ಮದ್ದು) ಈಚಲ ಸೊಪ್ಪು (ಬೈನೆ ಸೊಪ್ಪು) ಮೂರು ಕವಲು ಜಜ್ಜಿ ರಸ ತೆಗೆದು ಓಲೆಬೆಲ್ಲ ಹಾಕಿ ಬೆಳಿಗ್ಗೆ ಕೊಡುತ್ತಾರೆ. ನಂತರದ ಮೂರು ದಿವಸ ಪಳ್ಳಿಸೊಪ್ಪು, ಶುಂಠಿ, ಕರಿಮೆಣಸು, ಒಂದು ಮೆಣಸು, ಅರಿಶಿಣ, ಎರಡು ಬೆಳ್ಳುಳ್ಳಿ, ಇಷ್ಟನ್ನು ಅರೆದು ರಸ ತೆಗೆದು ತೆಂಗಿನಕಾಯಿಯ ಹಾಲು ತೆಗೆದು ಕಾಲು ಕುಡ್ತೆ ರಸಕ್ಕೆ ೧ ಕುಡ್ತೆ ತೆಂಗಿನ ಹಾಲು ಸೇರಿಸಿ ಮೂರು ದಿವಸ ಬೆಳಿಗ್ಗೆ ಕೊಡಬೇಕು. ಓಮ, ಒಂದು ಕಟ್ಟು, ಓಲೆಬೆಲ್ಲ, ಕರಿಮೆಣಸು ೫ ಅಥವಾ ೯ ತೆಂಗಿನ ಹಾಲಿನಲ್ಲಿ, ಶುಂಠಿ ಇಷ್ಟನ್ನು ಚೆನ್ನಾಗಿ ಅರೆದು ಶುದ್ಧ ತೆಂದಿನ ಎಣ್ಣೆಯಲ್ಲಿ ಬೇಯಿಸಿ ೪೦ ದಿನ ಕೊಡಬೇಕು. ಇದಕ್ಕೆ ಮರ್ದ್‌ ಎನ್ನುತ್ತಾರೆ. ಇದು ಕೆಡೆ ತುಂಬಾ ಸಮಯ ಬರುತ್ತದೆ.

ಮಗುವಿನ ಆರೈಕೆಯ ಸಂದರ್ಭದಲ್ಲಿ ಬಳಕೆಯಾಗುವ ಲಾಲಿ ಹಾಡು ಈ ರೀತಿಯಾಗಿದೆ.

ಜೋ..ಜೋ..ಬಾಲೆ..ಬಾಲೆಲ ಬಂಗಾರ್‌ಮಗ.. ಪೊಲಪಿಂಗಾರಾ..
ಆನೆಂಡು ಮಗ.. ಆಯೆರೆಡ್‌.. ಬಾಲೆ ಜೋ.. ಜೋ..
ಕುದುರೆ ಉಂಡು ಮಗಾ ಈಯರೆಡ್..
ಆನೆ ಕುದುರೆ ಬಲ್ಲಾಳೆಗ್ ಮಗ .. || ಜೋ.. ಜೋ..||
ಆನೆ ಕುದುರೆ ಬಲ್ಲಾಳೆಗ್‌..
ಕತ್ತಿ ಮುಟ್ಟಾಳೆ ನಿನ್ನ ಅಮ್ಮಗ್ ಮಗ ಬಾಲೆ || ಜೋ.. ಜೋ..||
ಬಾಲೆ ಬಂಗಾರ್ .. ಮಗ ಪೂಲ ಪಿಂಗಾರ ..
ಬುಲಿಪ್ಪಡ ಬಾಲೇ  ಜೋ.. ಜೋ..

ಜೋ.. ಜೋ.. ಕಂಡ.. ಕಂಡ ಅಂದರೆ ಬಂಗಾರ.. ಹೂ ಅಂದರೆ ಹಿಂಗಾರ
ಆನೆ ಇದೆ ಕಂದ ಆಚೆ ಕಡೆಯಲ್ಲಿ ಮಗು ಜೋ.. ಜೋ..
ಕುದುರೆಯಿದೆ ಮಗು ಈ ಕಡೆಯಲ್ಲಿ
ಆನೆ ಕುದುರೆ ಬಲ್ಲಾಳರಿಗೆ ಮಗ .. || ಜೋ.. ಜೋ..||
ಆನೆ ಕುದುರೆ ಬಲ್ಲಾಳರಿಗೆ ..
ಕತ್ತಿ ಮುಟ್ಟಾಳೆ ನಿನ್ನ ಅಪ್ಪನಿಗೆ ಮಗು || ಜೋ.. ಜೋ..||
ಕಂದ ಅಂದರೆ ಬಂಗಾರ ಹೂ ಅಂದರೆ ಹಿಂಗಾರ ..
ಅಳಬೇಡ ಕಂದ ಜೋ.. ಜೋ..

ಈ ಶಿಶುಪ್ರಾಸದಲ್ಲಿ ಮೊಗೇರರ ಕೆಲಸದ ವಿವರಗಳು ದೊರೆಯುತ್ತವೆ. ಆನೆ, ಕುದುರೆ ಮುಂತಾದ ಸಾಕು ಪ್ರಾಣಿಗಳ ಒಡೆಯರು ಬಲ್ಲಾಳರಾದರೆ ಅವರ ಗದ್ದೆ, ಮನೆಯಲ್ಲಿ ಕೆಲಸ ಮಾಡುವ ಆಳುಗಳಾಗಿ ದುಡಿಯುತ್ತಿರುವವರು ಮೊಗೇರರು. ಇವರು ಕತ್ತಿ, ಮುಟ್ಟಾಳೆಯನ್ನು ಇಡುವ ಸಾಮಾನ್ಯ ಜನರು. ಮೂಲಕ ಆಳುಗಳಾಗಿ ದುಡಿಯುವ ವರ್ಗದವರು. ಈ ಶಿಶುಪ್ರಾಸದಲ್ಲಿ ಅವರ ವೇಷಭೂಷಣ ಹಾಗೂ ಕೆಲಸದ ವಿವರಗಳು ಸಿಗುತ್ತದೆ.

ಇನ್ನೊಂದು ಗಮನಿಸಬಹುದಾದ ಶಿಶು ಪ್ರಾಸವೆಂದರೆ

ಓ.. ಪಂಚೊನ್ಯೆಣ್ಣ ಎಂಕೊಂಜಿ ಕುಕ್ಕು ಪಾಡ್‌..
ನಿಕ್ಕೇನ್ ಕುಕ್ಕು ಪಾಡ್ಬೆ ಓ.. ತುಳು ಪೊಣ್ಣೇ..
ಎಂಕ್ ಈ ಕಂಡನಿಲೊಪ್ಪನ..
ಓ ಪಂಚೊನಿಯಣ್ಣ ಎಂಕೊಂಜಿ ಕುಕ್ಕು ಪಾಡ್‌..
ಕೊಯಿ ಕೊಯಿ ಕುಕ್ಕು ಪಾಡೈ ಪಂಚೊನ್ನಣ್ಣೆ..
ಪೆಜ್ಜಿ ಪೆಜ್ಜಿ ತಿನ್ಪಲಾಲ್ ತುಳುಪೊಣ್ಣು..
ಬಂಜಿಗ್ ಬಂಜರ ತಿಂದೊಂಡಾಲ್ ತುಳುಪೊಣ್ಣು..
ಕೊಡೆಂಜಿಡ್ ದಿಂಜ ದಿಂಜವೊಂಡಲ್ ತುಳು ಪೊಣ್ಣು ..
ನಿಕ್ಕ್ ಏನ್ ಕಂಡನಿಲೊಪ್ಪಯೆ ಪಂಡಲ್ ತುಳು ಪೊಣ್ಣು..
ಟ್ರಿಕ್ ಟ್ರಿಕ್ ಪಂಡಲ್ ಗೆಲ್ಲ್‌ಡ್ದ್‌ಗೆಲ್ಲ್ ಲಾಗಿಯಲ್‌..
ಚಿಕ್ ಚಿಕ್ ಪಂಡೆನಾಯೆ ಪಂಚೊನ್ಯಣ್ಣೆ..
ಗೆಲ್ಲ್ ಗೆಲ್ಲ್ ಪಾರ್ಬೆ ಪಂಚೊನ್ಯಣ್ಣೆ..
ಗೆಲ್ಲ್‌ಪಜಿದ್ ಬರ್ಯಳಾಲ್‌ತುಳುಪೊಣ್ಣು
ಐನ ಮೇಲ್ಗ್ ಬೂರ್ಯೆ ಆಯೆ ಕುಂಡಚ್ಚೆ..
ಕೋತು ಪತ್ತ್ ಪರಂಕ್ಕೆ ಆಯೆ ಕುಂಡಚ್ಚೆ..

ಓ ಪಂಚೊನಿ ಅಣ್ಣ ನನಗೊಂದು ಮಾವು ಹಾಕು..
ನಿಂಗೆ ನಾನು ಮಾವು ಹಾಕುವೆ ಓ ತುಳು ಹೆಣ್ಣೇ..
ನನ್ನನ್ನು ನೀನು ಗಂಡ ಅಂತ ಒಪ್ಪುತ್ತೀಯಾ..
ಓ ಪಂಚೊನಿ ಅಣ್ಣ ನನಗೊಂದು ಮಾವು ಹಾಕು..
ಕೊಯಿ ಕೊಯಿದು ಮಾವು ಹಾಕುತ್ತಾನೆ ಪಂಚೊನಣ್ಣ
ಹೆಕ್ಕಿ ಹೆಕ್ಕಿ ತಿನ್ನುತ್ತಾಳೆ ಅವಳು ತುಳು ಹೆಣ್ಣು..
ಹೊಟ್ಟೆ ತುಂಬ ತಿಂದಳು ತುಳು ಹೆಣ್ಣು..
ದವಡೆಯಲ್ಲಿ ತುಂಬಿಸಿಕೊಂಡಳು ತುಳು ಹೆಣ್ಣು
ನಿನ್ನ ನಾನು ಗಂಡ ಅಂತ ಒಪ್ಪೋದಿಲ್ಲ ಎಂದಳು ತುಳು ಹೆಣ್ಣು..
ಟ್ರಿಕ್ ಟ್ರಿಕ್  ಹೇಳಿದಳು ಗೆಲ್ಲಿಂದ ಗೆಲ್ಲಿಗೆ ಹಾರಿದಳು
ಟ್ರಿಕ್ ಟ್ರಿಕ್ ಹೇಳಿದನವನು ಪಂಚೊನ್ಯಣ್ಣ
ಗೆಲ್ಲು ಗೆಲ್ಲು ಹಾರುತ್ತಾನೆ ಪಂಚೊನ್ಯಣ್ಣ..
ಗೆಲ್ಲು ತುಂಡಾಗಿ ಬಿದ್ದಳವಳು ತುಳು ಹೆಣ್ಣು..
ಅವಳ ಮೇಲೆ ಬಿದ್ದನವನು ಅಳಿಲಣ್ಣ..
ಅಪ್ಪಿ ಹಿಡಿದು ಪರಚಿದ ಅವನು ಅಳಿಲಣ್ಣ..

ಮಾವಿನಕಾಯಿ ಹೆಕ್ಕಲು ಹೋಗಿ ಮರದಡಿಯಲ್ಲಿ ಮಕ್ಕಳು ಹಾಡುವ ಹಾಡು ಇದು. ಗಾಳಿ ಬಂದು ಮಾವಿನಕಾಯಿ ಬಿದ್ದರೂಕೂಡಾ ಅಳಿಲಣ್ಣ ಮಾವಿನ ಕಾಯಿ ಕೊಯ್ದು ಹಾಕಿದನೆಂದು ಮಕ್ಕಳು ಅಂದುಕೊಳ್ಳುತ್ತಾರೆ. ಮಕ್ಕಳು ಈ ಶಿಶುಪ್ರಾಸವನ್ನು ಬಹಳ ಖುಷಿಯಿಂದ ಹಾಡುತ್ತಾರೆ.

ಮುಳ್ಳು ಮುಟ್ಟುನೆ (ಮೈನೆರೆಯುವುದು)

ಹುಡುಗಿ ಮೈನೆರೆಯುವುದಕ್ಕೆ “ಮುಳ್ಳು ಮುಟ್ಟುನೆ” ಎಂದು ಕರೆಯುತ್ತಾರೆ. ಮೈನೆರೆದ ಹುಡುಗಿಯನ್ನು ಮನೆಯಿಂದ ಪ್ರತ್ಯೇಕಿಸುತ್ತಾರೆ. ಮೂರು ದಿನಗಳವರೆಗೆ ಆಕೆ ಪಕ್ಕದ (ಕೊಟ್ಯದಲ್ಲಿ) ಗುಡಿಸಲಿನಲ್ಲಿ ಇರಬೇಕು. ಆಕೆ ಮನೆಯ ಯಾವುದೇ ಕೆಲಸ ಮಾಡುವಂತಿಲ್ಲ. ಆಕೆಗೆ ಆಹಾರಗಳನ್ನು ಅಲ್ಲಿಗೆ ಕೊಂಡುಹೋಗಿ ಕೊಡಲಾಗುವುದು. ಮನೆಯ ಒಳಗೆಯೂ ಆಕೆ ಬರುವಂತಿಲ್ಲ. ಮುಟ್ಟಾದ ಮಹಿಳೆಯು ಮನೆಯ ಇತರ ಸದಸ್ಯರನ್ನು ಮುಟ್ಟುವಂತಿಲ್ಲ. ಮೂರನೇ ದಿನ ಮುಂಜಾನೆ ಆಕೆ “ಮೂಜಿ ನೀರ್ ಮೀದ್” (ಮೂರನೇ ದಿವಸದ ಸ್ನಾನ ಮಾಡಿ) ಮನೆಯ ಒಳಗೆ ಪ್ರವೇಶಿಸುತ್ತಾಳೆ. ಮುಟ್ಟಿನ ಸಮಯದಲ್ಲಿ ಆಕೆಗೆ ವಿಶ್ರಾಂತಿಯ ಅವಶ್ಯಕತೆಯಿರುತ್ತದೆ. ಕೃಷಿ ಕಾರ್ಮಿಕಳಾದ ಆಕೆ ದಿನವಿಡೀ ದುಡಿದು ಸಂಜೆ ಮನೆ ಸೇರುತ್ತಾಳೆ. ಈ ಮೂರುದಿನಗಳು ಆಕೆಗೆ ದೈಹಿಕವಾಗಿ ವಿಶ್ರಾಂತಿಯ ಅವಶ್ಯವಿರುತ್ತದೆ. ಮುಟ್ಟಿನ ಪರಿಕಲ್ಪನೆ ಅಶುದ್ಧ (ಮೈಲಿಗೆ) ಎನ್ನುವ ಹಿನ್ನೆಲೆಯಲ್ಲಿ ರಚಿತವಾಗಿದ್ದರೂ ಆಕೆಗೆ ಈ ದಿನಗಳಲ್ಲಿ ನಿಜವಾಗಿ ಸಿಗುವ ವಿಶ್ರಾಂತಿಯು ಮಹತ್ವದ್ದಾಗಿದೆ. ಹುಡುಗಿ ಮೈನೆರೆದಾಗ ಮಾಡುವ ಆಚರಣೆಗಳು ವಿಶಿಷ್ಟವಾಗಿದೆ. ಹುಡುಗಿ ಮೈನೆರೆದ ದಿನ ಊರಿನವರಿಗೆ ಹೇಳಿ ತಲೆಗೆ ಎಣ್ಣೆ ಹಾಲಿ ಮೀಯಿಸುವ ಆಚರಣೆಯಿದೆ. ಇಲ್ಲಿಯೂ ಗುರಿಕಾರ್ತಿ ಮುಖ್ಯವಾಗಿ ಇರಬೇಕು. ಐದು ಬಳಿಯ ಹೆಂಗಸರು ಇರಬೇಕು. ಐದು ವೀಳ್ಯ, ಅಡಿಕೆ, ತೆಂಗಿನಕಾಯಿ ತಂದು ಮಂಡಲ ಹಾಕಿ ೩ ತೆಂಗಿನಕಾಯಿಯನ್ನು ಜೊತೆಗೆ ಕಟ್ಟಿ ಅದರ ಮೇಲೆ ಹುಡುಗಿ ಕಾಲು ಇಡಬೇಕು. ಮೊದಲು ಐದು ಬಳಿ ಹೆಂಗಸರು ಐದು ಕಳಸ ನೀರು, ಎಣ್ಣೆ ಇಟ್ಟು ಮೊದಲು ಗುರಿಕಾರ್ತಿ ಕುರ್ಮೆರ ಬಳಿಯ ಹೆಂಗಸಿಗೆ ನೀರು ಕೊಡಬೇಕು. ಕೊರ್ಮೆರೆ ಬಳಿಯ ಹೆಂಗಸು ಮೊದಲು ಹುಡುಗಿಯ ತಲೆಗೆ ಗರಿಕೆಯನ್ನು ಕಳಸದ ಎಣ್ಣೆ ಮತ್ತು ನೀರಿಗೆ  ಮುಳುಗಿಸಿ ಮೂರು ಬಾರಿ ನೇವರಿಸಬೇಕು. ನಂತರ ಉಳಿದ ಬಳಿಯ ಹೆಂಗಸರು ಇದೇ ರೀತಿ ಮಾಡುತ್ತಾರೆ. ನಂತರ ಆಕೆಯನ್ನು ಸ್ನಾನಕ್ಕೆ ಕರೆದುಕೊಂಡು ಹೋಗುತ್ತಾರೆ. ಸ್ನಾನಕ್ಕೆ ಹೋದಲ್ಲಿ ತುದಿ ಬಾಳೆ ಎಲೆಯಲ್ಲಿ ೫ ವೀಳ್ಯ, ೧ ಅಡಿಕೆ, ತುಂಬೆ ಹೂ, ಬೆಳ್ತಿಗೆ ಅಕ್ಕಿ, ಕೇಪುಳ ಹೂ, ೨೫ ಪೈಸೆ ಇಷ್ಟನ್ನು  ಗುರಿಕಾರ್ತಿಯ ಜೊತೆಗೆ ಮೈನೆರೆದ ಹುಡುಗಿ ಹೋಗಿ ಹರಿಯುವ ನೀರಿನಲ್ಲಿ ಬಿಡಬೇಕು. ಬಿಡುವಾಗ “ಉಂದು ಗಂಗಮ್ಮನಾಡೆ ಪೋದು ಸೇರೋಡು” (ಇದು ಗಂಗಾ ಮಾತೆಯಲ್ಲಿಗೆ ಹೋಗಿ ಸೇರಲಿ) ಎಂದು ಹೇಳಬೇಕು. ಆ ದಿನ ಬಂದವರಿಗೆ ತೆಂಗಿನಕಾಯಿ, ಬೆಲ್ಲ ಸೇರಿಸಿ ಮಾಡಿದ ಅವಲಕ್ಕಿಯ ಜೊತೆಗೆ ಚಹವನ್ನು ಎಲ್ಲರಿಗೂ ಕೊಡಬೇಕು. ನಂತರ ಒಂದು ತಿಂಗಳಿನ ಒಳಗೆ ಮದಿಮಾಲ್ ಮದಿಮೆ (ಮದುಮಗಳ ಮದುವೆ)ಯನ್ನು ಮಾಡಬೇಕು. ಮದಿಮಾಲ್ ಮದಿಮೆಗೆ ನೆಂಟರಿಷ್ಟರ ಜೊತೆಗೆ ಗ್ರಾಮದ ಸ್ವಜಾತಿ ಬಾಂಧವರನ್ನು ಕರೆಯಬೇಕು.

ಮೈನೆರೆದಾಗ ಮಾಡುವ ಆಚರಣೆಯ ಮುಖ್ಯ ಆಶಯ ಆಕೆ ಮುಂದೆ ಫಲ ನೀಡುವ ಹಂತಕ್ಕೆ ತಿರುಗುವ ಸ್ಥಿತ್ಯಂತರದ ಕಾಲ. ಆ ಸಮಯದಲ್ಲಿ ಆಕೆಯನ್ನು ಫಲ ನೀಡುವ ಮರಗಳಾದ ಹಲಸು, ಮಾವು ತೆಂಗು ಇತ್ಯಾದಿಗೆ ಹಾಗೂ ಜೀವಸೆಲೆಗೆ ಮೂಲವಾದ ಬಾವಿಯನ್ನು, ಮೈನೆರೆದ ಆಚರಣೆಯ ದಿನದಂದು ಗುರಿಕಾರ್ತಿ ಮೂರು ಸರ ಪ್ರದಕ್ಷಿಣೆ ಬರಿಸಿ ನಂತರ ಅದನ್ನು ಸ್ಪರ್ಶಿಸಬೇಕು ಮತ್ತು ಹುಡುಗಿ ಇದಕ್ಕೆ ನಮಸ್ಕರಿಸಬೇಕು. ಇಲ್ಲಿ ಹಾಲು ಬರುವಂತಹ ಮರಗಳಿಗೆ ಹೆಚ್ಚು ಪ್ರಾಶಸ್ತ್ಯ. ಉದಾ: ಅತ್ತಿ, ಪಾಲೆ (ಹಾಲೆಮರ), ಹಲಸು ಇತ್ಯಾದಿ ಜೀವ ಸೆಲೆಗೆ ಮೂಲಾಧಾರವಾಗಿರುವ ನೀರಿನ ಬಾವಿಯನ್ನು ಕೂಡಾ ಈ ಸಂದರ್ಭದಲ್ಲಿ ಆಕೆ ಸ್ಪರ್ಶಿಸಬೇಕು. ನಂತರ ಆಕೆ ಮನೆ ಕೆಲಸ ಮಾಡಲು ಸಮರ್ಥಳು ಎನ್ನುವುದಕ್ಕೆ ಒಲೆಯ ಮೇಲೆ ಇರಿಸಿದ ಮಡಕೆಯನ್ನು ಮೂರು ಸಲ ಸಾಂಕೇತಿಕವಾಗಿ ಒಲೆಯ ಮೇಲಿಟ್ಟು ಕೆಳಗಿರಿಸಲಾಗುತ್ತದೆ. ನಂತರ ಆಕೆಯಿಂದ ಮನೆಯ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಸಲಾಗುತ್ತದೆ. ಹೆಣ್ಣನ್ನು ಜನಪದರು ಫಲವಸ್ತುಗಳಿಗೆ ಸಮಾನವಾಗಿ ಸಮೀಕರಿಸಿದ್ದಾರೆ. ಆಕೆ ಬಾಲ್ಯಾವಸ್ಥೆ ಕಳೆದು ಪ್ರೌಢಾವಸ್ಥೆಗೆ ಕಾಲಿಟ್ಟ ಸಂದರ್ಭದಲ್ಲಿ ಒಂದು ತಿಂಗಳ ಕಾಲ ವಿಶೇಷವಾದ ಆಹಾರಗಳನ್ನು ಆಕೆಗೆ ನೀಡಲಾಗುತ್ತದೆ. ಅವಲಕ್ಕಿಗೆ ಬೆಲ್ಲ, ತೆಂಗಿನಕಾಯಿ ಸೇರಿಸಿ ಕೊಡಲಾಗುತ್ತದೆ. ಮೆಂತೆ ಗಂಜಿಯೊಂದಿಗೆ ಅಕ್ಕಿ ಹುರಿದು ಪುಡಿ ಮಾಡಿ ಅದಕ್ಕೆ ತೆಂಗಿನ ತುರಿ, ಬೆಲ್ಲ ಹಾಕಿ ಒಂದು ತಿಂಗಳ ಕಾಲ ಕೊಡಲಾಗುತ್ತದೆ. ಮೆಂತೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ತಂಪು ಪ್ರಕೃತಿ ಎಂದು ಇವರ ನಂಬಿಕೆ. ಇದರಿಂದ ಮೈನೆರೆದ ಹುಡುಗಿ ಮೈ ಕೈ ತುಂಬಿಕೊಂಡು ಶೀಘ್ರ ಬೆಳವಣಿಗೆ ಹೊಂದುತ್ತಾಳೆ. ಸಾಮಾನ್ಯವಾಗಿ ಸಿಗುವ ಆಹಾರಗಳನ್ನೇ ಕಡಿಮೆ ಖರ್ಚಿನಲ್ಲಿ ಉತ್ತಮ ಪೌಷ್ಟಿಕಾಂಶ ದೊರಕುವಂತೆ ಆಹಾರಗಳನ್ನು ಬಳಸಲಾಗುತ್ತದೆ. ಒಂದು ತಿಂಗಳ ನಂತರ ಬಂಧು ಬಾಂಧವರನ್ನು ಕರೆದು ಮದುಮಗಳ ಮದುವೆ (ಮದಿಮಾಲ ಮದಿಮೆ)ಯನ್ನು ಮಾಡುತ್ತಾರೆ. ಇಲ್ಲಿ ಹೆಚ್ಚಾಗಿ ಮಹಿಳೆಯರೇ ಭಾಗವಹಿಸುತ್ತಾರೆ. ಒಂದು ಕೂಡು ಕಟ್ಟಿನಲ್ಲಿ ವಯಸ್ಸಿಗೆ ಬಂದ ಮದುವೆಗೆ ತಯಾರಾದ ಹುಡುಗಿ ಇದ್ದಾಳೆ ಎಂಬುದನ್ನು ತಿಳಿಸಲು ಕೂಡಾ ಈ ಆಚರಣೆಯು ಸಹಕಾರಿಯಾಗುತ್ತದೆ. ಬಂಧುಗಳು ಹುಡುಗಿಗೆ ಉಡುಗೊರೆಗಳನ್ನು ಈ ದಿನ ನೀಡುತ್ತಾರೆ. ಅದೇ ದಿನ ಸೋದರ ಮಾವನ ಮನೆಗೆ ಆಕೆಯನ್ನು ಕರೆದುಕೊಂಡು ಹೋಗುತ್ತಾರೆ.

ಮೊಗೇರ ಸಂಸ್ಕೃತಿಯಲ್ಲಿ ಇನ್ನೊಂದು ಆಚರಣೆಯಿದೆ. ಇದಕ್ಕೆ “ಪುದ್ವಾರ್ ಉನ್ಪುನೆ” (ಹೊಸ ಅಕ್ಕಿ ಊಟ) ಎನ್ನುತ್ತಾರೆ. ಹೊಸ ಅಕ್ಕಿ ಊಟವನ್ನು ಕುಟುಂಬದ ಜೊತೆಯಲ್ಲಿ ಮಾಡುವುದಕ್ಕೆ ಪುದ್ವಾರ್ ಎನ್ನುತ್ತಾರೆ. ಹೊಸ ಅಕ್ಕಿಯ ಊಟ ಮಾಡಲು ಮನೆಯ ಯಜಮಾನ-ಯಜಮಾಂತಿಯರು ಚರ್ಚಿಸಿ ದಿನ ನಿಗದಿ ಮಾಡುತ್ತಾರೆ. ನಂತರ ಮದುವೆ ಮಾಡಿಕೊಟ್ಟ ಹೆಣ್ಣು ಮಕ್ಕಳನ್ನು ಆಮಂತ್ರಿಸಲಾಗುತ್ತದೆ. ಆ ದಿನ “ಎಣೆಲ್” ಬೆಳೆಯ ಹೊಸ ಅಕ್ಕಿಯಿಂದ ಅಡುಗೆ ತಯಾರಿಸಬೇಕು. ಈ ಎಲ್ಲಾ ಅಡುಗೆಯನ್ನು ಒಂದು ಕೂಡಿ ಬಾಳೆ ಎಲೆಯಲ್ಲಿ ಹಾಕಿ ಮನೆಯ ಯಜಮಾನ್ತಿ “ಅಗ್ಗಿ ದಿಂಜಾವುನೆ” (ಅಗ್ನಿಗೆ ಅರ್ಪಿಸುವ) ಕ್ರಿಯೆಯನ್ನು ಮಾಡಬೇಕು. ಮನೆಯ ಹಿರಿಯಾಕೆ ಎಲ್ಲರಿಗೂ ಒಂದೊಂದು ಹಿಡಿ ಅನ್ನವನ್ನು ನೀಡಬೇಕು. ಆಗ ಹಿರಿಯರು ಕಿರಿಯರು ಸೇರಿ ಎಂಕುಲು ಪುದ್ವಾರ ಉಣ್ವ ಎಂದು ಪರಸ್ಪರ ಅನುಮತಿಯನ್ನು ಪಡೆದುಕೊಂಡು ಒಟ್ಟಿಗೆ ಊಟ ಮಾಡುತ್ತಾರೆ. ಗತಿಸಿದ ಹಿರಿಯರಿಕೆ ಒಂದು ಎಡೆಯನ್ನು ಈ ಸಂದರ್ಭದಲ್ಲಿ ಇಡಬೇಕು. ಮದುವೆಯಾಗಿ ಹೋದ ಹೆಣ್ಣು ಮಕ್ಕಳು ವಿಶೇಷವಾಗಿ ಈ ದಿನ ಭಾಗವಹಿಸಲೇಬೇಕು.

ಮೊಗೇರರ ಸಂಸ್ಕೃತಿಯಲ್ಲಿ ಮದುವೆ

ಮದುವೆಯ ಹಿಂದಿನ ದಿನ ರಾತ್ರಿ “ದೊಂಪದ ಮದ್ಮೆ” (ಚಪ್ಪರದ ಮದುವೆ) ಮೊಗೇರರಲ್ಲಿ ಇದೆ. ಈ ಕ್ರಮ ಹೆಣ್ಣು ಗಂಡು ಎರಡು ಕಡೆಯಲ್ಲೂ ನಡೆಯುತ್ತದೆ. ದೊಂಪದ ಮದ್ಮೆ ಅಂದರೆ ಅಂಗಳದ ಮಧ್ಯದಲ್ಲಿ ಗುರಿಕಾರ ಹಾಲೆ ಮರದ ಒಂದು ಕಂಬ ನೆಡಬೇಕು. ಇದಕ್ಕೆ ಮೂರ್ತ ಕಂಬ ಎನ್ನುತ್ತಾರೆ. ಈ ಕಂಬಕ್ಕೆ ಹಾಲೆ ಮರದ ಸೊಪ್ಪು, ತರೊಳಿ ಸೊಪ್ಪು (ಸರೊಳಿ ಸೊಪ್ಪು), ಈಚಲ ಸೊಪ್ಪು (ಬೈನೆ ಮರದ ಸೊಪ್ಪು) ಇಷ್ಟನ್ನು ಕಟ್ಟಬೇಕು. ನಂತರ ಐದು ವೀಳ್ಯ, ೧ ಅಡಿಕೆ, ೧ ಪಣವು ಮಣ್ಣಿನ ಉಂಡೆ ಇಷ್ಟನ್ನು ಮದುಮಕ್ಕಳಿಗೆ ಭಾವ ಆಗುವವರು ಕೂಡಿ ಬಾಳೆ ಎಲೆಯಲ್ಲಿ ತಂದು ಇಡಬೇಕು. ನಂತರ “ಎಂಕುಲ ದೊಂಪ ಪಾಡುವ” (ನಾವು ಚಪ್ಪರ ಹಾಕುತ್ತೇವೆ) ಎಂದು ಮೂರು ಸಲ ಗುರಿಕಾರ ಹೇಳಿದ ನಂತರ ಚಪ್ಪರ ಹಾಕಬೇಕು. ಸೌತೆ ಕಾಯಿಯನ್ನು ಭಾಗ ಮಾಡಿ ಅದರಲ್ಲಿ ದೀಪ ಉರಿಸಿ ಅದನ್ನು ಮೂರ್ತ ಕಂಬದ ಬುಡದ ಕತ್ತಿರ ಇಡಬೇಕು. ನಂತರ ಗುರಿಕಾರ ಎರಡು ಕರಿಮಣಿಯನ್ನು ಈ ಮಹೂರ್ತ ಕಂಬಕ್ಕೆ ಕಟ್ಟುತ್ತಾನೆ. ಇದರಿಂದ ಒಂದನ್ನು ತೆಗೆದು ಮದುವೆ ಗಂಡಿನ ಕೊರಳಿಗೆ ಗುರಿಕಾರ ಕಟ್ಟುತ್ತಾನೆ. ಹುಡುಗಿಗೆ ಕಟ್ಟುವ ಕರಿಮಣಿಯು ಮಹೂರ್ತ ಕಂಬದಲ್ಲಿಯೇ ಮರುದಿನ ದಿಬ್ಬಣ ಹೊರಡುವವರೆಗೆ ಇರುತ್ತದೆ. ನಂತರ ದುಡಿ ಬಡಿದು ಹೆಂಗಸರು, ಗಂಡಸರು, ದಾರಿಲೆ ಪಾಡ್ದನ, ಮಲ್ಲಕ್ಕ ಪಾಡ್ದನ, ಚೊಮಕ್ಕ ಪಾಡ್ದನ, ತಾಲಿ ಪಾಡ್ದನ ಮುಂತಾದ ಪಾಡ್ದನಗಳನ್ನು ಹಾಡಿ ಕುಣಿಯುತ್ತಾರೆ.

ಉದಾಹರಣೆಗೆ ಈ ಸಂದರ್ಭದಲ್ಲಿ ಹೇಳುವ ತಮಾಷೆಯ ರಚನೆಯೊಂದು ಈ ರೀತಿಯಿದೆ.

ಮದುವೆ ಮನೆಯಲ್ಲಿ ತನ್ನ ಗಮನ ನೆಳೆಯಲು ಪ್ರೇತ ಹಿಡಿದ ಹಾಗೆ ನಾಟಕವಾಡಿದ ಮಹಿಳೆಯೊಬ್ಬಳ್ಳನ್ನು ಪಾಡ್ದನದ ಮೂಲಕ ಹಾಡುತ್ತಾ ದುಡಿ ಬಡಿದು ಹೆಣ್ಣು-ಗಂಡು ಭೇದವಿಲ್ಲದೆ ಹೆಂಗಸರು, ಗಂಡಸರು ಮಕ್ಕಳಾದಿಯಾಗಿ ಸ್ವಜಾತಿ ಬಾಂಧವರೆಲ್ಲರೂ ಕುಣಿಯುತ್ತಾರೆ.

ತುಲ್ಲೇಲ್‌ದ ದಟ್ಟಿಗೆಡ್ ಕುಲೆ ಪತ್ತ್ ಕುಂಬರುಂಡು
ದಗ್ಗ್‌ದ  ಮಂಞಣೆಗ್
ಓ ಲೇಲೇ.. ಲೇ.. ಲಾ… ಲೇ.. ಲೇ.. ಲಾ…
ಓ ಕುಲೆ ಪತ್ತ್ ಕುಂಬರುಂಡು…
ದಗ್ಗ್‌ದ  ಮಂಞಣೆಗ್
ಓ ಪಾಡಿ ದೊಂಪ ಬಿರಿ ..
ಓ ಪಾಡಿದೊಂಪ ಬಾಡೊಡಾಂಡ..
ಓ ಕುಲೆ ಪತ್ತ್ ಕುಂಬರುಂಡು…
ದಗ್ಗ್‌ದ  ಮಂಞಣೆಗ್
ಓ ಲೇಲೇ.. ಲೇ.. ಲಾ… ಲೇ.. ಲೇ.. ಲಾ…

ಮದುವೆಯ ಮನೆಯಲ್ಲಿ ಪ್ರೇತ ಹಿಡಿದು ನಡುಗುತ್ತಿದೆ

ದಗ್ಗ್‌ನ  ಮಂಞಣೆಗೆ
ಓ ಲೇಲೇ.. ಲೇ.. ಲಾ… ಲೇ.. ಲೇ.. ಲಾ…
ಓ ಪ್ರೇತ ಹಿಡಿದು ನಡುಗುತ್ತಾಳೆ
ದಗ್ಗ್‌ನ  ಮಂಞಣೆಗೆ
ಓ ಹಾಕಿದ ಚಪ್ಪರ ಬೀಳೆ.. ಮೊದಲು
ಓ ಹಾಕಿದ ಚಪ್ಪರ ಬಾಡಿಗೆ ಹೋಗೊ ಮೊದಲು..
ಓ ಪ್ರೇತ ಹಿಡಿದು ನಡುಗುತ್ತಾಳೆ
ದಗ್ಗ್‌ನ  ಮಂಞಣೆಗೆ
ಓ ಲೇಲೇ.. ಲೇ.. ಲಾ… ಲೇ.. ಲೇ.. ಲಾ…

ಮೊಗೇರ ಸಂಸ್ಕೃತಿಯಲ್ಲಿ ಮದುವೆಯು ಕೆಲವು ವಿಶಿಷ್ಟ ಅಂಶಗಳನ್ನು ಒಳಗೊಂಡಿದೆ. ಮೊಗೇರರ ಮದುವೆಯನ್ನು “ತುಲ್ಲೇಲ್‌” ಎಂದು ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ಮದುವೆಯು ಹುಡುಗಿಯ ಮನೆಯಲ್ಲಿ ನಡೆಯುತ್ತಿದ್ದುದರಿಂದ ಗಂಡಿನ ದಿಬ್ಬಣ ನಡೆದುಕೊಂಡೇ ಹುಡುಗಿಯ ಮನೆಗೆ ಬರಬೇಕಿತ್ತು. ಆಗ ಮೊಗೇರರ ಸಾಂಸ್ಕೃತಿಕ ಚರ್ಮವಾದ್ಯವಾದ ದುಡಿಯನ್ನು ಬಡಿಯುತ್ತಾ ಪಾಡ್ದನಗಳನ್ನು ಹಾಡುತ್ತಾ ಮದುವೆ ದಿಬ್ಬಣ ಬರುತ್ತಿತ್ತು. ಇದರಿಂದ ದಾರಿಯ ಆಯಾಸ ಪರಿಹಾರ ಸುಲಭವಾಗುತ್ತಿತ್ತು. ತುಲ್ಲೇಲ್ ಎಂದರೆ ಕುಣಿಯುವುದು ಎಂದೇ ಅರ್ಥವಿದೆ. ಇವರ ಮದುವೆಯಲ್ಲಿ ಕುಣಿತವು ಪ್ರಧಾನವಾಗಿರುವುದರಿಂದ ಈ ಹೆಸರು ಬಂದಿರಬಹುದು. ಹಿಂದೆ ೭ ದಿನಗಳ ಕಾಲ ಮದುವೆಯು ನಡೆಯುತ್ತಿತ್ತು. ಮದುವೆಯ ಸಮಭ್ರಮ ಕುಣಿತ, ಪಾಡ್ದನಗಳೊಂದಿಗೆ ಮೇಳೈಸಿತ್ತು. ಮದುವೆಗೆ ತಯಾರಾದ ಹುಡುಗಿಯಿದ್ದರೆ ಹುಡುಗನ ಕಡೆಯವರೇ ಹೆಣ್ಣು ನೋಡಲು ಬರಬೇಕು. ಹುಡುಗಿ ಒಪ್ಪಿಗೆಯಾದರೆ ಮುಂದಿನ ಮಾತುಕತೆಯಾಗಿ ಹುಡುಗ-ಹುಡುಗಿಯ ಬಳಿಯನ್ನು ವಿಚಾರಿಸಲಾಗುತ್ತದೆ. ಬಳಿ ಅನ್ನುವುದು ರಕ್ತಸಂಬಂಧಿಗಳನ್ನು ಗುರುತಿಸಿಕೊಳ್ಳಲು ಮಾಡಿದ ಮಾತೃಮಾಲೀಯ ವ್ಯವಸ್ಥೆ. ಮೊಗೇರರಲ್ಲಿ ಬಳಿಯು ತಾಯಿಯಿಂದ ಹೆಣ್ಣು ಗಂಡು ಮಕ್ಕಳಿಬ್ಬರಿಗೂ ಬರುತ್ತದೆ. ಕೊರ್ಮೆರ್, ಸಾಲಿಯಾನ್, ಬಂಗೇರ, ಮದ್ಮೆರ್ದನ, ಕುಂಡಚ್ಚೆರ್, ಅರ್ತೆರ್, ಕಿನ್ಯದನ್ನ, ಏರೈದ್ನ, ಮಂಜದನ್ನ, ಪೊಂಗರದನ್ನ, ಪೊನ್ನೆದನ್ನ, ಇಡೆರ್ದನ್ನ, ಬಾಗ್ಯಟನ್ನ, ಕುಂದರನ್ನ, ಬದ್ರದನ್ನ, ಪುಲ್ಯೆಟಿನ್ನ, ಉಪ್ಪ್ಯನ್ನ, ಕುಕ್ಕದನ್ನ, ಬೀಮರ್ದನ್ನ ಮುಂತಾದ ಬಳಿಗಳು ಇವರಲ್ಲಿ ಬಳಕೆಯಲ್ಲಿದೆ. ಈ ಬಳಿಗಳಲ್ಲಿ ಕೊರ್ಮೆರ್ ಬಳಿಯವರೇ ಶ್ರೇಷ್ಠರು. ಕೂಡುಕಟ್ಟಿನ ಯಾವುದೇ ಶುಭ ಸಂದರ್ಭಗಳಲ್ಲಿಯೂ ಇವರಿಗೆ ಮೊದಲ ಆದ್ಯತೆ ಇರುತ್ತದೆ. ಮದುವೆಯ ಮಾತುಕತೆಯ ಸಂದರ್ಭದಲ್ಲಿಯೂ ಕೊರ್ಮೆರ ಬಳಿಯ ಹೆಣ್ಣಿಗೆ ಮೊದಲ ಆದ್ಯತೆ ಇರುತ್ತದೆ. ಇವರಲ್ಲಿ ಮಾತೃಮೂಲಿಯ ಪದ್ಧತಿಯನ್ನು ಗಮನಿಸಬಹುದು. ಮದುವೆ ಆದ ನಂತರವೂ ಆಕೆಗೆ ತಾಯಿಯ ಮನೆಯಲ್ಲಿ ಸ್ಥಾನಮಾನಗಳಿವೆ. ನಂತರ “ಊರು ತೊಯೆರೆ ಪೋಪುನೆ” (ಊರು ನೋಡಲು ಹೋಗುವುದು) ಎನ್ನುವ ಪದ್ಧತಿಯಿದೆ. ಹುಡುಗಿಯ ಕಡೆಯ ಬಂಧುಗಳು ಹುಡುಗನ ಮನೆ ನೋಡಲು ಹೋಗುವ ವಿಧಿಯಿದೆ. ಎರಡು ಬಳಿಗಳು ಭಿನ್ನ ಭಿನ್ನವಾಗಿದ್ದರೆ ಮಾತ್ರ ಮದುವೆಗೆ ದಿನ ನಿಶ್ಚಯ ಮಾಡುತ್ತಾರೆ. ತಂದೆಯ ಬಳಿಗೆ ಇಲ್ಲಿ ಯಾವುದೇ ಮಹತ್ವ ಇಲ್ಲ. ತಾಯಿಯ ಬಳಿ ಒಂದೇ ಆದರೆ ಇವರು ರಕ್ತ ಸಂಬಂಧದ “ತಗೆ ತಂಗಡಿ” (ಅಣ್ಣ-ತಂಗಿ)ಯರಾಗುತ್ತಾರೆ ಎನ್ನುವ ನಂಬಿಕೆ ಇದೆ. ಒಂದೇ ಬಳಿಯಾದರೆ ಹುಡುಗ-ಹುಡುಗಿಗೆ ಪರಸ್ಪರ ಒಪ್ಪಿಗೆಯಾದರೂ ಮದುವೆ ನಡೆಯುವುದಿಲ್ಲ. ಆದರೆ ತಂದೆಯ ಬಳಿಯಲ್ಲಿ ಮದುವೆ ನಡೆಯುತ್ತದೆ. ಇಲ್ಲಿ ತಾಯಿಯು ಮಹತ್ವದ ಸ್ಥಾನ ಪಡೆಯುತ್ತಾಳೆ.

ಮದುವೆ ನಿಶ್ಚಯದ ದಿನ “ಉಂಗಿಲ ಪಾಡುನೆ” ಎಂಬ ವಿಧಿ ಪ್ರಧಾನವಾಗಿದೆ. ಮೊದಲು ಮದುವೆ ನಿಶ್ಚಯ ಹುಡುಗಿಯ ಮನೆಯಲ್ಲಿ ನಡೆಯುತ್ತದೆ. ಹುಡುಗ ಹುಡುಗಿಗೆ ಹಾಕಲು ಉಂಗುರ ತರಬೇಕು. ಈ ಉಂಗುರವನ್ನು ಗುರಿಕಾರ್ತಿ ಅಥವಾ ಹುಡುಗನ ಅಕ್ಕ ಅಥವಾ ತಂಗಿಯು ಹುಡುಗನ ಪರವಾಗಿ ಹುಡುಗಿಗೆ ತೊಡಿಸಬೇಕು. ಇಲ್ಲಿಯೂ ಗುರಿಕಾರ್ತಿ ಮಹತ್ವದ ಸ್ಥಾನ ಪಡೆಯುತ್ತಾಳೆ. ನಿಶ್ಚಯದ ದಿನ ಹುಡುಗನ ಕಡೆಯವರು ಅಡಿಕೆ, ವೀಳ್ಯ ತರಬೇಕು. ಮಾತುಕತೆಗೆ ಕುಳಿತ ಹಿರಿಯರು ಮತ್ತು ಗುರಿಕಾರರು ಅದನ್ನು ಅಲ್ಲಿಯೇ ತಿನ್ನಬೇಕು. ನಂತರ ಹುಡುಗನ ಮನೆಯಲ್ಲಿ ಮದುವೆ ನಿಶ್ಚಯಕ್ಕೆ ದಿನ ನಿಗದಿಮಾಡುತ್ತಾರೆ. ನಂತರ ಹುಡುಗನ ಮನೆಯಲ್ಲಿ ಮದುವೆ ನಿಶ್ಚಯವೂ ಕೂಡಾ ಇದೇ ರೀತಿ ಆಗುತ್ತದೆ.

ಮೊಗೇರರ ಮದುವೆಯ ಸಂದರ್ಭವನ್ನು ಪ್ರೊ. ಅಭಯ್‌ಕುಮಾರ್ ತಮ್ಮ “ಮೊಗೇರರು ಜನಾಂಗ ಜಾನಪದ ಅಧ್ಯಯನ” ಸಂಶೋಧನಾ ಮಹಾಪ್ರಬಂಧದಲ್ಲಿ ಈ ರೀತಿ ವಿವರಿಸುತ್ತಾರೆ. “ಮೊಗೇರರ ಮದುವೆ ಪದ್ಧತಿ ವಿಶೇಷವಾದುದು ಪ್ರಾಚೀನ ಪದ್ಧತಿಯಲ್ಲಿ ಮದುವೆ ಏಳು ದಿನಗಳವರೆಗೆ ನಡೆಯುತ್ತಿತ್ತು. ಈಗ ಒಂದು ದಿನದಲ್ಲಿ ಮದುವೆ ಮುಗಿದು ಹೋಗುತ್ತದೆ. ಹುಡುಗನ ಕಡೆಯವರು ಖಚಿತ ಮಾಹಿತಿಯೊಂದಿಗೆ ಹೆಣ್ಣಿನ ಮನೆಗೆ ತೆರಳುತ್ತಾರೆ. ಅದರಲ್ಲಿ ಜಾತಿಯ ಗುರಿಕ್ಕಾರ, ಸೋದರ ಮಾವ, ಹುಡುಗನ ಅಪ್ಪ, ಅಮ್ಮ ಅಥವಾ ಅಕ್ಕ, ಅತ್ತಿಗೆ ಸೇರಿಕೊಂಡು ಹೆಣ್ಣು ನೋಡಲು ಹೋಗುತ್ತಾರೆ. ಹೆಣ್ಣು ಇಷ್ಟವಾದರೆ ಅವರ ಬಳಿಯನ್ನು ವಿಚಾರಿಸಿ, ಅಲ್ಲಿ ಊಟ ಮಾಡಿ ಬರುತ್ತಾರೆ. ಬಳಿ ಸರಿ ಹೊಂದದೆ ಇದ್ದರೆ ಅಥವಾ ಸಮಾನ ಬಳಿಗಳಾದರೆ ಮದುವೆಯಾಗುವುದಿಲ್ಲ. ಹುಡುಗಿ ಇಷ್ಟವಾದರೆ ಹೆಣ್ಣು ಕೇಳಿ ಅವರನ್ನು ಗಂಡಿನ ಮನೆಗೆ ಆಮಂತ್ರಿಸುತ್ತಾರೆ. ಹಾಗೆ ಹೆಣ್ಣಿನ ಮನೆಯವರು ಗಂಡಿನ ಮನೆಗೆ ಬರುವುದನ್ನು “ಇಲ್ಲ್‌ತೊವೆರೆ ಬರ್ಪುನು” (ಮನೆ ನೋಡಲು ಬರುವುದು) ಎಂದು ಕರೆಯುತ್ತಾರೆ. ಹುಡುಗನ ಮನೆಗೆ ಬಂದು ಅವರ ಮನೆಯ ಸ್ಥಿತಿಗತಿಗಳನ್ನು ವಿಚಾರಿಸಿ, ಇಷ್ಟವಾದರೆ ಮಾತ್ರ ಆ ಮನೆಗೆ ಹೆಣ್ಣು ಕೊಡುವ ಪದ್ದತಿಯಿದೆ. ಇಷ್ಟವಾದರೆ ಅವರು ಅಲ್ಲಿ ಊಟ ಮಾಡಿ ತೆರಳುತ್ತಾರೆ. ನಂತರ ಎರಡೂ ಕಡೆಯವರು ಒಂದು ದಿನ ನಿರ್ಧರಿಸಿ “ಉಂಗಿಲೊ ಬಚ್ಚಿರೆಜ್ಜೆಯಿ” (ಉಂಗುರ ವೀಳ್ಯ, ಅಡಿಕೆ) ತೆಗೆದುಕೊಂಡು ಹುಡುಗ ಮತ್ತು ಹುಡುಗನ ಕಡೆಯವರು ಹುಡುಗಿಯ ಮನೆಗೆ ಬರುತ್ತಾರೆ. ಹುಡುಗಿಯ ಕೈಗೆ ಹುಡುಗನ ಅಕ್ಕ, ಅತ್ತಿಗೆ ಅಥವಾ ಗುರಿಕಾರ್ತಿ ಉಂಗುರ ಹಾಕುತ್ತಾರೆ. ನಂತರ ಗುರಿಕಾರನಿಗೆ ವೀಳ್ಯ ಕೊಟ್ಟು ಮದುವೆಯ ದಿನವನ್ನು ನಿರ್ಧರಿಸುತ್ತಾರೆ. ಈ ಮದುವೆಗಳೆಲ್ಲ ಸಾಮಾನ್ಯವಾಗಿ ಶನಿವಾರದಂದು ನಡೆಯುತ್ತವೆ. ಉಂಗುರ ಮದುವೆಯಂದೇ ತೆರ ಕೂಡಾ ನಿರ್ಧಾರವಾಗುತ್ತಿತ್ತು. ಹಿಂದೆ ಎರಡು ಮುಡಿ ಅಕ್ಕಿ ಅಥವಾ ಐದು ಮುಡಿ ಭತ್ತ ಕಡ್ಡಾಯವಾಗಿ ತೆರದ ರೂಪದಲ್ಲಿ ಕೊಡಬೇಕಾಗಿತ್ತು. ಈಗಲೂ ಮುಗೇರರ ಪದ್ಧತಿಯಲ್ಲಿ ತೆರ ಪದ್ಧತಿಯಿದೆಯೇ ಹೊರತು ವರದಕ್ಷಿಣೆಯಿಲ್ಲ. ವರದಕ್ಷಿಣೆ ಕೊಟ್ಟು ಮದುವೆ ಮಾಡುವುದು ಹೆಣ್ಣಿನ ಕಡೆಯವರಿಗೆ ಅಗೌರವದ ಪ್ರಶ್ನೆ ಅಥವಾ ಹೆಣ್ಣಿನಲ್ಲಿ ಯಾವುದಾದರೂ ಕುಂದು ಕೊರತೆಯಿದೆ ಎಂದು ತಿಳಿಯಲಾಗುತ್ತದೆ. ಈ ತೆರ ಪದ್ಧತಿ ಈಗ ಸಾಮಾನ್ಯವಾಗಿ ೧೦೧/- ರೂಪಾಯಿಗಳಿಗೆ ನಿಗದಿಯಾಗಿದೆ.  ಹಿಂದೆ ತೆರದ ರೂಪದಲ್ಲಿ ಕೊಡುತ್ತಿದ್ದ ಅಕ್ಕಿ, ಭತ್ತಗಳನ್ನು ದಿಬ್ಬಣದೊಂದಿಗೆ ಹೆಣ್ಣಿನ ಮನೆಗೆ ಸಾಗಿಸಿಕೊಡಬೇಕಾಗಿತ್ತು. ಇದಲ್ಲದೇ ಮದುವೆಯಂದು ಹುಡುಗಿಗೆ ಸೀರೆ ಕರಿಮಣಿಯಿಂದ ಹಿಡಿದು ಮದುಮಗಳ ಅಲಂಕಾರ ಸಾಮಗ್ರಿ ಮತ್ತು ಬಟ್ಟೆ ಬರೆಗಳನ್ನೆಲ್ಲ ಗಂಡಿನ ಕಡೆಯವರೇ ಕೊಡಬೇಕು. ಮದುವೆ ಹುಡುಗಿಯ ಮನೆಯಲ್ಲಿಯೇ ನಡೆಯುತ್ತದೆ. ಹುಡುಗಿಗೆ ತೆರದ ರೂಪದಲ್ಲಿ ಬಂದ ಅಕ್ಕಿಯ ಮುಡಿಯ ಮೇಲೆ ಮದುಮಕ್ಕಳನ್ನು ಕುಳ್ಳರಿಸಿ ಹುಡುಗಿಯ ಸೋದರಮಾವ ಗುರಿಕಾರನ ಸಮ್ಮುಖದಲ್ಲಿ ಸೀಯಾಳದ ನೀರಿನಲ್ಲಿ ಧಾರೆ ಎರೆದುಕೊಡುತ್ತಿದ್ದ.

ಈ ಮದುವೆಯ ಸಂದರ್ಭದಲ್ಲಿ ಉಲ್ಲೇಖಿಸಲೇಬೇಕಾದ ಎರಡು ಅಂಶಗಳು ಕರಿಮಣಿ ಮತ್ತು ಕುಂಕುಮ. ಹಿಂದೂ ಸಂಪ್ರದಾಯದಂತೆ ಮದುಮಗಳಿಗೆ ತಾಳಿಯನ್ನು ಕಟ್ಟಿಯೇ ಮದುವೆಯಾಗಬೇಕು. ತಾಳಿಗೆ ಅಷ್ಟೊಂದು ಪ್ರಾಮುಖ್ಯತೆ ಅಲ್ಲಿದೆ. ಆದರೆ ಮುಗೇರರಲ್ಲಿ ತಾಳಿಕಟ್ಟುವ ಪದ್ಧತಿಯೇ ಇಲ್ಲ. ಕರಿಮಣಿಯನ್ನು ದಪ್ಪಗೆ ಪೋಣಿಸಿ ಕಟ್ಟಬೇಕು. ಹುಡುಗಿಗೆ ಎರಡು ಕರಿಮಣಿಯಿರುತ್ತದೆ. ಒಂದು ತಾಯಿಯ ಕಡೆಯದು ಮತ್ತೊಂದು ಗಂಡಿನ ಕಡೆಯದು. ಕರಿಮಣಿಯನ್ನು ಮದುವೆಯ ಗಂಡಿನ ಕುತ್ತಿಗೆಗೂ ಮದುವೆಯ ಒಂದು ವಾರ ಮುಂಚೆ ಅಥವಾ ಮದುವೆಯ ಹಿಂದಿನ ರಾತ್ರಿ ಜಾತಿಯ ಗುರ್ಕಾರ ಕಟ್ಟಿರುತ್ತಾನೆ. ಆ ಕರಿಮಣಿಯನ್ನು ತೆಗೆದು ಗುರ್ಕಾರ ಮದುಮಗಳಿಗೆ ಕಟ್ಟುತ್ತಿದ್ದ. ಆದರೆ ಇತ್ತೀಚೆಗೆ ಮದುಮಗನೇ ಕರಿಮಣಿ ಕಟ್ಟುವ ಪದ್ಧತಿ ರೂಢಿಯಲ್ಲಿ ಬಂದಿದೆ. ಹಿಂದೂ ಧರ್ಮದಲ್ಲಿ ಪಾವಿತ್ರ್ಯತೆಯ ಸಂಕೇತವಾದ ತಾಳಿ ಮುಗೇರರಲ್ಲಿ ಕಂಡು ಬರುವುದೇ ಇಲ್ಲ. ಬದಲಾಗಿ ಕರಿಮಣಿ ಆ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಅಲ್ಲದೆ ಕರಿಮಣಿಯನ್ನು ಗಂಡಿಗೂ ಕಟ್ಟಿರುತ್ತಾರೆ. ಸಮೂಹ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ಮುಗೇರರಲ್ಲಿ ಹಿಂದೆ ಜಾತಿಯ ಗುರಿಕಾರನೇ ಪ್ರಮುಖ ಮತ್ತು ಅಂತಿಮ ನಿರ್ಣಾಯಕನಾಗುತ್ತಿದ್ದ. ಹಾಗಾಗಿ ಸಮೂಹವನ್ನು ಪ್ರತಿನಿಧಿಸುವ ಗುರಿಕಾರ ಹುಡುಗನ ಕುತ್ತಿಗೆಯ ಕರಿಮಣಿಯನ್ನು ತೆಗೆದು ಹುಡುಗಿಗೆ ಕಟ್ಟಿ, ಮದುವೆಯನ್ನು ನಡೆಸುತ್ತಿದ್ದ. ಈಗ ನಮಗೆ ಈ ಪದ್ಧತಿ ಅಸಮಂಜಸವಾಗಿ ಕಂಡರೂ, ಸಮೂಹನಿಷ್ಠರಾಗಿ ಬದುಕುತ್ತಿದ್ದ ಆ ಕಾಲದಲ್ಲಿ ಅದು ಅನಿವಾರ್ಯವಾಗಿತ್ತು. ಯಾವುದೇ ಕೌಟುಂಬಿಕ ವ್ಯಾಜ್ಯಗಳಿದ್ದರೂ, ಗುರಿಕಾರನೇ ನಿಂತು ಅವುಗಳನ್ನು ಬಗೆಹರಿಸುತ್ತಿದ್ದು. ಮುಗೇರರಲ್ಲಿ ಕುಂಕುಮ ಧಾರಣೆ ಒಂದು ಅಲಂಕಾರ ಸಾಮಗ್ರಿಯಾಗಿ ಬಳಕೆಯಾಗುತ್ತಿತ್ತೇ ಹೊರತು ಮುತ್ತೈದೆಯ ಸಂಕೇತವಾಗಿ ಬಳಕೆಯಾಗುವುದಿಲ್ಲ. ಏಕೆಂದರೆ ಒಬ್ಬಳು ವಿಧವೆಗೆ ಕೂಡಾ ಮುತ್ತೈದೆಯಷ್ಟೇ ಗೌರವ ಮನ್ನಣೆ ಇವರಲ್ಲಿ ಸಿಗುತ್ತದೆ. ಅಲ್ಲದೆ ವಿಧವೆಯರು ಮುಗೇರರಲ್ಲಿ ಯಾವುದೇ ಸಮಸ್ಯೆಗೆ ಕಾರಣರಾಗಿಲ್ಲ. ಅಲ್ಲಿ ವಿಧವೆ ಯುವತಿಯಾಗಿದ್ದರೆ, ಅವಳು ಇಷ್ಟಪಟ್ಟರೆ ಮತ್ತೆ ಮದುವೆಯಾಗುವ ಅವಕಾಶವಿರುತ್ತದೆ ಮತ್ತು ಗಂಡನೊಡನೆ ಬದುಕಲು ಇಷ್ಟವಿಲ್ಲದಿದ್ದರೆ, ಬಿಟ್ಟು ಬಿಡುವ ಅವಕಾಶವೂ ಅವಳಿಗೆ ಇದೆ. ವಿಧವೆಯರ ಸಮಸ್ಯೆಗಳೇ ಇಲ್ಲದ ಕಾರಣ ಮುಗೇರರಲ್ಲಿ ಕುಂಕುಮ ಮುತ್ತೈದೆಯರ ಸಂಕೇತವಾಗಿ ಬಳಕೆಯಾಗುತ್ತಿಲ್ಲ”.