ಮೊಟ್ಟೆಯಿಂದ ಮರಿ ಹೊರ ಬರಲು ಅದಕ್ಕೆ ಸಾಧಾರಣವಾಗಿ ತಾಯಿ ಹಕ್ಕಿ ಕಾವು ಕೊಡುತ್ತದೆ.  ಕೆಲವು ಹಕ್ಕಿಗಳಲ್ಲಿ ತಂದೆ ಹಕ್ಕಿಯೂ ಈ ಕೆಲಸ ಮಾಡುತ್ತದೆ.  ಈ ಕಾವಿಗಾಗಿ ಕೆಲವು ಹಕ್ಕಿಗಳಲ್ಲಿ ಕೆಳಭಾಗದ ತುಪ್ಪುಳ ಕಳಚಿಕೊಂಡು, ಚರ್ಮದ ಭಾಗ ನಗ್ನವಾಗುತ್ತದೆ. ಇದರಿಂದ ದೇಹದ ಕಾವು ಚೆನ್ನಾಗಿ ರವಾನೆಯಾಗುತ್ತದೆ. ಸಾಧಾರಣವಾಗಿ ಎರಡು ವಾರಗಳು ಹೀಗೆ ಕಾವುಕೊಡುವ ಅವಧಿ. ಹದ್ದುಗಳು 5 – 7 ವಾರಗಳ ಕಾಲ ಕಾವು ಕೊಡುತ್ತವೆ. ಅಲಬಾಟ್ರಸ್ ಎಂಬ ದೊಡ್ಡ ಕಡಲ ಹಕ್ಕಿ ಸುಮಾರು 11 ವಾರಗಳ ಕಾಲ ಕಾವು ಕೊಡುವುದು ತಿಳಿದಿದೆ.

ಹಕ್ಕಿಮರಿ ಮೊಟ್ಟೆಯೊಳಗಿನಿಂದಲೇ ತನ್ನ ಕೊಕ್ಕಿನ ತುದಿಯ ಚೂಪಾದ ಹಲ್ಲಿನಂತಹ ಭಾಗದಿಂದ ಮೊಟ್ಟೆಯ ಚಿಪ್ಪನ್ನು ಸೀಳಲು ಪ್ರಾರಂಭಿಸುತ್ತದೆ. ಇದನ್ನು ‘ಮೊಟ್ಟೆ ಹಲ್ಲು’ (Egg tooth) ಎನ್ನುತ್ತಾರೆ. ಮೊಟ್ಟೆಯೊಡೆದು ಹಕ್ಕಿ ಹೊರಬರಲು ಆರಂಭಿಸುತ್ತಿದ್ದಂತೆ ಈ ಮೊಟ್ಟೆಹಲ್ಲು ಮಾಯವಾಗುತ್ತದೆ. ಮೊಟ್ಟೆಯಿಂದ ಹೊರಬಂದ ಕೆಲವು ಹಕ್ಕಿಗಳ ಮರಿಗಳು ಇನ್ನೂ ಅಸಹಾಯಕವಾಗಿ ತಡಕಾಡುತ್ತಿರುತ್ತವೆ. ಕೌಜುಗ ಜಾತಿಯ ಕ್ವೇಲ್ ಹಕ್ಕಿ ಮರಿಯು ಮೊಟ್ಟೆಯಿಂದ ಹೊರಬಂದ ಕೂಡಲೇ ಚೆನ್ನಾಗಿ ನಡೆಯಲು ಆರಂಭಿಸುತ್ತದೆ.