(ಕ್ರಿ. ಶ. ೭ನೇ ಶತಮಾನ) (ಗಣಿತ ಶಾಸ್ತ್ರದ ಸಂಶೋಧನೆಗಳು)

ಆರನೆ-ಏಳನೇ ಶತಮಾನಗಳಲ್ಲಿ ಭಾರತದ ಸಮಾಜದಲ್ಲಿನ ಪರಿಸ್ಥಿತಿ ಸಂಕೀರ್ಣ ಸ್ವರೂಪವನ್ನು ಪಡೆದಿತ್ತು. ತೆರಿಗೆ, ಸಾಲ, ಬಡ್ಡಿ, ಸಹಭಾಗಿತ್ವದ ಸಮಸ್ಯೆಗಳಂಥ ಅನೇಕ ಗೋಜಲುಗಳನ್ನು ಬಿಡಿಸಲು ಗಣಿತ ಶಾಸ್ತ್ರಜ್ಞರುಗಳು ಆಗ ಶ್ರಮಿಸಬೇಕಾಯಿತು. ಹೊಸ ಹೊಸ ಲೆಕ್ಕಾಚಾರ ಪದ್ಧತಿಗಳನ್ನು ಕಂಡುಹಿಡಿಯುವುದು ಅವಶ್ಯಕವಾಗಿತ್ತು. ಅಂಥ ಪರಿಸ್ಥಿತಿಯಲ್ಲಿ ಲೆಕ್ಕಾಚಾರಗಳ ಹೊಸ ಪದ್ಧತಿಗಳನ್ನು ಕಂಡುಹಿಡಿದು ಗಣಿತ ಶಾಸ್ತ್ರವನ್ನು ಶ್ರೀಮಂತಗೊಳಿಸಿದವರಲ್ಲಿ ಮೊದಲನೆಯ ಭಾಸ್ಕರ ಒಬ್ಬರು.

ಮೊದಲನೆಯ ಭಾಸ್ಕರ ಏಳನೆಯ ಶತಮಾನದಲ್ಲಿ ಇದ್ದರು. ಎಂಟನೆಯ ಶತಮಾನದಲ್ಲಿ ಅನೇಕ ಭಾರತೀಯ ಪಂಡಿತರು ಆಗ ವ್ಯಾಸಂಗದ ಪ್ರಮುಖ ಕೇಂದ್ರವಾಗಿದ್ದ ಬಾಗ್ದಾದಿಗೆ ಹೋಗುತ್ತಿದ್ದರು. ಹೋಗುವಾಗ ತಮ್ಮ ಜತೆ ಭಾರತದ ಗಣಿತಶಾಸ್ತ್ರದ ಮತ್ತು ಖಗೋಳವಿಜ್ಞಾನದ ಕೃತಿಗಳನ್ನೂ ಕೊಂಡೊಯ್ಯುತ್ತಿದ್ದರು. ಆಗ ಅವರು ಕೊಂಡೊಯ್ದಿದ್ದ ಕೃತಿಗಳಲ್ಲಿ ಮೊದಲನೆಯ ಭಾಸ್ಕರ ರಚಿಸಿದ ಗಣಿತಶಾಸ್ತ್ರೀಯ ಕೃತಿಗಳೂ ಇದ್ದುವು. ಈ ಕೃತಿಗಳು ಅಲ್ಲಿನ ಗಣಿತಶಾಸ್ತ್ರಾಧ್ಯಯನದ ಮೇಲೆ ತುಂಬ ಪ್ರಭಾವ ಬೀರಿದ್ದವು.

ಭಾರತ ತನ್ನ ಎರಡನೆಯ ಕೃತಕ ಭೂ ಉಪಗೃಹಕ್ಕೆ “ಭಾಸ್ಕರ” ಎಂಬ ಹೆಸರನ್ನಿತ್ತು ಏಳನೆಯ ಶತಮಾನದ ಈ ಗಣಿತಶಾಸ್ತ್ರಜ್ಞನಿಗೆ ತನ್ನ ಗೌರವವನ್ನು ಸೂಚಿಸಿತು.