ಜಯ ಶ್ರೀ ಕೃಷ್ಣ ಭಗವನ್

ಕನ್ನಡ ಜೈಮಿನಿ ಭಾರತ

ವಾರ್ಧಕ ಷಟ್ಪದಿ

ಶ್ರೀವಧುವಿನಂಬಕ ಚಕೋರಕಂ ಪೊರೆಯೆ ಭ |
ಕ್ತಾವಳಿಯ ಹೃತ್ಕುಮುದ ಕೋರಕಂ ಬಿರಿಯೆ ಜಗ |
ತೀ ವಲಯದಮಲ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆವರಿಯೆ ||
ಅವಗಂ ಸರಸ ಕರುಣಾಮೃತದ ಕಲೆಗಳಿಂ |
ತೀವಿದೆಳನಗೆಯ ಬೆಳುದಿಂಗಳಂ ಪಸರಿಸುವ |
ದೇವಪುರ ಲಕ್ಷ್ಮೀರಮಣನಾಸ್ಯ ಚಂದ್ರನಾನಂಮಂ ನಮಗೀಯಲಿ ||೧||

ಪಾವನತುಲಾಭರಣಮಂ ಮಾಡಿಕೊಂಡೆಸೆವ |
ಪಾವನತರಸ್ವರೂಪಂ ನಾರದಾದಿ ಮುನಿ |
ಪಾವನತ ಪಾದ ಪಂಕೇರುಹದ್ವಂದ್ವನಿಂದು ಕಲಾವತಂಸನುಮೆಯ ||
ಭಾವನೆಯುನೊಡಗೂಡಿಸುವ ಸಕಲ ಸುರರ ಸಂ |
ಭಾವನೆಯ ಕೈಕೊಳ್ವ ಲೋಕವಿಸ್ತರಣ ಪ್ರ |
ಭಾವ ನಯನತ್ರಯಂ ದೇವ ಗಂಗಾಧರಂ ಬಿಡದೆ ಸಲುಹುಗೆ ನಮ್ಮನು ||೨||

ಪ್ರಸ್ತುತದೊಳೆಗೆದ ಮುಂಬೆಳಗಮಲದಂತದ ಗ |
ಭಸ್ತಿ ನವ ಪೂರ್ವ ಸಂಧಾರುಣಂ ಭಾಳವಿ |
ನ್ಯಸ ಸಿಂಧೂರಮಂಕುರಿಪ ಪೊಂಬಿಸಿಲೊಡನೆ ಮೂಡುವೆಳನೇಸರೆಸೆವ |
ಮಸ್ತಕದ ಮಣಿಮಕುಟಮಾಗಲುದಯಾಚಲದ |
ವಿಸ್ತಾರದಂತೆ ಭದ್ರಾಕೃತಿಯೊಳೊಪ್ಪುವ ಸ |
ಮಸ್ತಸಿದ್ಧಿ ಪ್ರದಾಯಕ ವಿನಾಯಕ ಮಾಳ್ಪುದೆಮಗೆ ನಿರ‍್ವಘ್ನತೆಯನು ||೩||

ಭೂವ್ಯೋಮ ಪಾತಾಳ ಲೋಕಂಗಳಲ್ಲಿ ಸಂ |
ಭಾವ್ಯರೆಂದೆನಿಸಿಕೊಳ್ವಖಿಳದೇವರ್ಕಳಿಂ !
ಸೇವ್ಯನಾದಜನ ಪಟ್ಟದ ರಾಣಿ ವರದೆ ಕಲ್ಯಾಣಿ ಫಣಿವೇಣಿ ವಾಣಿ ||
ಕಾವ್ಯಮಿದು ಭುವನದೊಳ್ ಸಕಲ ಜನರಿಂದೆ ಸು |
ಶ್ರಾವ್ಯಮಪ್ಪಂತೆನ್ನ ವದನಾಬ್ಜದಲ್ಲಿ ನೀ
ನೇ ವ್ಯಾಪಿಸಿರ‍್ದಮಲಸುಮತಿಯಂ ತಾಯೆನಗೆ ತಾಯಿ ನಗೆಗೂಡಿ ನೋಡಿ ||೪||

ಪಾರದೆ ಪರಾರ್ಥಮಂ ವರಯತಿಗೆ ಭಂಗಮಂ |
ತಾರದೆ ನಿಜಾನ್ವಪಕ್ರಿಯೆಗಳ್ಗೆ ದೂಷಣಂ |
ಬಾರದೆ ವಿಶೇಷಗುಣ ಕಲಾ ಗೌರವಂ ತೀರದೆ ದುರುಕ್ತಿಗಳ್ಗೆ ||
ಸೇರದೆ ಸುಮಾರ್ಗದೊಳ್ ನಡೆವ ಸತ್ಪಾರುಷನ ಗ |
ಭೀರದಶೆಯಂ ಪೋಲ್ವ ಕಾವ್ಯಪ್ರಬಂಧಮಂ |
ಶಾರದೆಯ ಕರುಣದಿಂ ಪೇಳ್ವೆನಾಂ ದೋಷಮಂ ತೊರೆದೆಲ್ಲರುಂ ಕೇಳ್ಪುದು ||೫||

ಛಂದಸ್ಸು ಲಕ್ಷಣಮಲಂಕಾರ ಭಾವರಸ |
ಮೊಂದಿ ಕಲೆವೆತ್ತ ಸತ್ಕೃತಿ ಚಮತ್ಕೃತಿ ಯುಕ್ತಿ |
ಯೊಂದುಮಿಲ್ಲದ ಕಾವ್ಯಮಶ್ರಾಮಹುದೆಂದರಿಯದೆ ಕವಿತೆಯನು ಬರಿದೆ ||
ದಂದುಗಕ್ಕೊಳಗಾಗಿ ಪೇಳ್ದೆನೆಂದೆನ್ನ ನಗು |
ವಂದಮಂ ಮಾಡದೆನಗೊಲಿದಿತ್ತನಮಲಮತಿ |
ಯಂ ದೇವಪುರದ ಲಕ್ಷ್ಮೀರಮಣನೆಂದರಿದು ಕೇಳ್ವುದೆಲ್ಲಾ ಸುಜನರು ||೬||

ಕೆನೆವಾಲ ಕಡೆದು ನವನೀತಮಂ ತೆಗೆದು ಬಾ |
ಯ್ಗಿ ನಿದಾಗಿ ಸವಿಯದದರೊಳಗೆ ಪುಳಿವಿಳಿದು ರಸ |
ವನೆ ಕೆಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ ಕಾವ್ಯಮಂ ಕೇಳ್ದು ಮಥಿಸಿ ||
ಜನಿಸಿದ ಪದಾರ್ಥವಂ ತಿಳಿದು ನೋಡದೆ ವಿನೂ |
ತನಕವಿತೆಯೆಂದು ಕುಂದಿಟ್ಟು ಜರೆದೊಡೆ ಪೇಳ್ದ |
ವನೊಳಾವುದೂಣೆಯಂ ಜಾಣರಿದನರಿದು ಮತ್ಸರವ ಮರೆದಾಲಿಸುವುದು ||೭||

ಜಾಣರಂ ತಲೆದೂಗಿಸದೆ ನುಡಿದೊಡಾಪದ |
ಕ್ಕೂಣೆಯಂ ಬಹುದೆಂದು ಸರಸೋಕ್ತಿಯಿಂದೆ ಗೀ |
ರ‍್ವಾಣ ಪುರನಿಲಯ ಲಕ್ಷ್ಮೀವರಂ ತಾನೆ ಸಂಗೀತ ಸುಕಲಾ ನಿಪುಣನು ||
ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ |
ವಾಣಿಯಿಂ ಕವಿತೆಯಂ ಪೇಳಿಸಿದನೆಂದರಿದು |
ಕೇಣಮಂ ತೊರೆದು ಪುರುಡಿಸುವರಂ ಜರೆದು ಕಿವಿದೆರೆದು ಕೇಳ್ಪುದು ಸುಜನರು ||೮||

ದುಷ್ಟಾಹಿ ಘೋರತರ ವಿಷವದನದಿಂದೆ ಸಂ |
ದಷ್ಟಮಾಗಿರುತಿರ್ದೊಡಂ ದೋಷಮಿರ್ದೊಡಂ |
ನಷ್ಟಕಲೆಯಾದೊಡಂ ಚಂದ್ರನಂತೆನ್ನ ಕಾವ್ಯದ ರಸಂ ಸುಮನಸರ್ಗೆ ||
ಇಷ್ಟಮಾಗದೆ ಮಾಣದಿನ್ನಾವನಾದೊಡಂ |
ಕಷ್ಟಮಂ ಬಗೆವವಂ ಚೋರಂಗೆ ವಿರಹಿಗಂ |
ದೃಷ್ಟಾಂತಮಾಗಿ ಸಲ್ವಂ ಧರಾವಲಯದೊಳ್ ಸಂದೇಹಮೇನಿದರೊಳು ||೯||

ಮೊಗಮಾವ ಲೀಲೆಯಿಂದೆಸೆವುದಾ ಭಾವಮಂ |
ಮಗುಳೆ ತೋರುವುದಲ್ಲದನ್ಯ ಪ್ರಕಾರದಿಂ |
ಸೊಗಯಿಪುದೆ ರನ್ನಗನ್ನಡಿ ಧರೆಯೊಳಾರಾಜಿಸುವ ಕನ್ನಡದ ನುಡಿಗಳ ||
ಬಗೆಯರಿದರಾವಲಕ್ಷಣದಿಂದೆ ಮುನ್ನ ಕ |
ಬ್ಬಗಳನುಸರಿದರದೇ ಲಕ್ಷ್ಮಯಮಲ್ಲದೆ ಪೆರತೆ |
ನಗೆ ಸಲ್ಲದದರಿಂದೆ ಪೂರ್ವ ಸತ್ಕವಿಗಳ್ಗೆ ನಮಿಸಿ ನಾಂ ಕೃತಿವೇಳ್ವೆನು ||೧೦||

ವಿದ್ವತ್ಸಭಾವಲಯಮರಿಯೆ ವಿರಚಿಸಿದಂ ಭ |
ರದ್ವಾಜ ಗ್ರೋತ್ರಭವನಣ್ಣಮಾಂಕನ ಸುತಂ |
ಸದ್ವಿನುತ ಕರ್ಣಾಟ ಕವಿ ಚೂತವನ ಚೈತ್ರ ಲಕ್ಷ್ಮೀಶನೆಂಬೊರ್ವನು ||
ಹೃದ್ವನಜದೊಳ್ ದೇವಪುರದ ಲಕ್ಷ್ಮೀಶನ ಪ |
ದದ್ವಯವನಾವಗಂ ಧ್ಯಾನಿಸುವರಡಿಗಳಂ |
ಸದ್ವಿನಯದಿಂ ಭಜಿಪ ಬಲ್ಪಿಂದೆ ವಿಮಲ ಜೈಮಿನಿ ಭಾರತದ ಕಥೆಯನು ||೧೧||

ವರ ವರ್ಣದಿಂದೆ ಶೋಭಿತಮಾಗಿ ರೂಪ ವಿ |
ಸ್ತರದಿಂದೆ ಚೆಲ್ವಾಗಿ ಮಧುರತರ ನವರಸೋ |
ದರ ಭರಿತದಿಂದೆ ವಿಲಸಿತಮಾಗಿ ಸುಮನೋನುರಾಗದಿಂ ಪ್ರಚುರಮಾಗಿ ||
ನಿರುತ ಮಂಜುಳ ಶಬ್ದದಿಂದೆ ಕಿವಿಗಿಂಪಾಗಿ |
ಚರಿಸುವ ಸುಲಲಿತ ಷಟ್ಪದಿಗಳೆಡೆಬಿಡದೆ ಝೇಂ ||
ಕರಿಸದಿರ್ಪುವೆ ಬಂದು ನೆರೆದ ವಿದ್ವತ್ಸಭಾನೀರೇರುಹಾಕರದೊಳು ||೧೨||