“ಮಾನಸಿಕ ಕಾಯಿಲೆಗಳ ಪರಿಚಯ ನಿಮಗಿರಲಿ” ಪುಸ್ತಕ ನಿಮ್ಹಾನ್ಸ್ ಸಂಸ್ಥೆಯಿಂದ ಹೊರಬರುತ್ತಿರುವ ಡಾ.ಸಿ.ಆರ್. ಚಂದ್ರಶೇಖರ್ ಅವರು ಬರೆದ 3ನೆಯ ಪುಸ್ತಕ. ಈ ಹಿಂದೆ ಪ್ರಕಟಿಸಲಾದ ಎರಡು ಪುಸ್ತಕಗಳೂ ಎರಡು, ಮುದ್ರಣಗಳನ್ನು ಕಂಡು ಜನಪ್ರಿಯವಾಗಿವೆ.

ಮಾನಸಿಕ ಕಾಯಿಲೆಗಳ ಬಗ್ಗೆ ನಮ್ಮ ಸಮಾಜದಲ್ಲಿ ಇಂದಿಗೂ, ಸರಿಯಾದ ತಿಳಿವಳಿಕೆ ಬಹಳ ಜನರಿಗೆ ಇಲ್ಲದೆ, ಮೂಢನಂಬಿಕೆಯಿಂದ ಪ್ರಚಲಿತವಾದ, ಮಾಟ-ಮಂತ್ರ, ದೆವ್ವ-ಭೂತಗಳ ಕಾಟ, ಮದ್ದು ಹಾಕುವುದು ಮುಂತಾದ ನಂಬಿಕೆಗಳೇ ಬಲವಾಗಿ ಬೇರೂರಿರುವ ಉದಾಹರಣೆಗಳು ಇವೆ. ಇದರ ಪರಿಣಾಮ ಎಂದರೆ ಸಣ್ಣದಾಗಿ ಪ್ರಾರಂಭವಾದ ಮಾನಸಿಕ ಕಾಯಿಲೆಗಳು ಕಾಲಾನುಕ್ರಮದಲ್ಲಿ ಗಂಭೀರ ಸ್ವರೂಪ ಹೊಂದುವುದು. ಸೂಕ್ತ ಸಮಯದಲ್ಲಿ ರೋಗ ಪತ್ತೆ ಮಾಡಿ, ವೈದ್ಯರ ಸಹಾಯ, ಚಿಕಿತ್ಸೆ ದೊರೆತರೆ ಹಲವು ಬಗೆಯ ಮಾನಸಿಕ ರೋಗಿಗಳು ಸಂಪೂರ್ಣವಾಗಿ ಗುಣಹೊಂದಬಲ್ಲರು. ಇದಕ್ಕಾಗಿ ಸಾರ್ವಜನಿಕರಿಗೆ, ರೋಗಿಗಳ ಬಂಧುಗಳಿಗೆ ಮುಂತಾದವರಿಗೆ ಮಾನಸಿಕ ಕಾಯಿಲೆಗಳ ಬಗ್ಗೆ ವಿವರವಾದ ಮಾಹಿತಿ ದೊರೆಯಬೇಕು. ಈ ಕಾಯಿಲೆಗಳು ಏಕೆ ಉಂಟಾಗುತ್ತವೆ. ಅವುಗಳಿಗೆ ಏನು ಚಿಕಿತ್ಸೆ ಎಂಬುದೆಲ್ಲ ತಿಳಿದಿದ್ದರೆ, ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಅನುಕೂಲವಾಗುತ್ತದೆ.

ಅಲ್ಲದೆ, ಸಾಮಾನ್ಯವಾಗಿ ಮಾನಸಿಕ ರೋಗ ಎನ್ನುತ್ತಿದ್ದಂತೆ ಅಷ್ಟು ಸುಲಭವಾಗಿ ಗುಣವಾಗುವ ಕಾಯಿಲೆಯಲ್ಲ ಎಂಬ ನಂಬಿಕೆ ಅನೇಕರಲ್ಲಿದೆ. ಈಚಿನ ದಿನಗಳಲ್ಲಿ ಅನೇಕ ಬಗೆಯ ಮಾನಸಿಕ ರೋಗಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ಇದೆ ಎಂಬುದೂ ಜನರಿಗೆ ಮನವರಿಕೆಯಾಗಬೇಕು.

ಇತ್ತೀಚಿನ ಒತ್ತಡದ ಬದುಕಿನಲ್ಲಿ ಅನೇಕ ಜನ ಒಂದಲ್ಲ ಒಂದು ರೀತಿಯ ಸಮಸ್ಯೆ, ಆತಂಕಗಳಿಗೆ ಸಿಲುಕಿ ಪರಿತಾಪ ಪಡುತ್ತಾ, ಕೊನೆಗೆ ಮಾನಸಿಕವಾಗಿ ಜರ್ಝರಿತರಾಗುವ ಸಂದರ್ಭಗಳಿವೆ. ಅಲ್ಲದೆ, ಮಾನಸಿಕ ರೋಗ ಬಡವ, ಬಲ್ಲಿದರೆನ್ನದೆ, ನಗರವಾಸಿಗಳು, ಗ್ರಾಮೀಣ ಪ್ರದೇಶದವರೆನ್ನದೆ, ಸ್ತ್ರೀ ಪುರುಷರೆನ್ನದೆ ಎಲ್ಲರನ್ನೂ ಕಾಡುತ್ತಿರುವ ಸಂದರ್ಭದಲ್ಲಿ ಸೂಕ್ತ ಮಾಹಿತಿಯನ್ನು ಒದಗಿಸಬೇಕಾದುದು ನಿಮ್ಹಾನ್ಸ್‌ನಂಥ ಸಂಸ್ಥೆಗಳ ಕರ್ತವ್ಯವೂ ಆಗುತ್ತದೆ.

ಈ ದಿಸೆಯಲ್ಲಿ ಹಲವಾರು ರೂಪಗಳ ಮೂಲಕ ಮಾನಸಿಕ ಆರೋಗ್ಯ ಮಾಹಿತಿ ಜನರಿಗೆ ದೊರಕುತ್ತಿರುವುದು ಸಮಾಧಾನದ ಸಂಗತಿ. ಪುಸ್ತಕ ಕಿರಿಹೊತ್ತಿಗೆಯ ಮೂಲಕ ಲೇಖಕರು ಈ ಎಲ್ಲ ಮಾಹಿತಿಗಳನ್ನು ಒದಗಿಸುವ ಪ್ರಯತ್ನ ಮಾಡಿದ್ದಾರೆ.

ಓದುಗರಿಗೆ ಇಲ್ಲಿನ ಮಾಹಿತಿಗಳು ಉಪಯುಕ್ತವಾಗುತ್ತವೆಂದು ನಾನು ಭಾವಿಸುತ್ತೇನೆ.

ಡಾ|| ಡಿ.ನಾಗರಾಜ
ನಿರ್ದೇಶಕರು/ಕುಲಪತಿಗಳು
ನಿಮ್ಹಾನ್ಸ್, ಬೆಂಗಳೂರು.