ಸೌಂದರ್ಯವನ್ನು ಕುರಿತ ವಿಚಾರ ಅತ್ಯಂತ ಸಮ್ಮೋಹಕವಾದುದು ಎಂದು ಎಲ್ಲರಿಗೂ ಅನ್ನಿಸಿದರೂ ಅದನ್ನು ಬುದ್ಧಿಪೂರ್ವಕವಾಗಿ ಪರಿಶೀಲಿಸಿ, ವಿಶ್ಲೇಷಿಸಿ, ವಿವೇಚಿಸುವುದು ಅತ್ಯಂತ ತೊಡಕಾದ ಸಾಹಸವೇ. ಈ ಒಂದು ಸಾಹಸದ ಸೋಲು-ಗೆಲುವುಗಳನ್ನು ಈ ಪ್ರಬಂಧದ ತರಂಗ ತರಂಗಗಳಲ್ಲಿ ಯಾರಾದರೂ ಕಾಣಬಹುದು. ಇಂದಿಗೆ ಹತ್ತು ವರ್ಷಗಳ ಹಿಂದೆ ಈ ಒಂದು ವಿಷಯವನ್ನು ನಾನು ಪ್ರಬಂಧಕ್ಕೆಂದು ಎತ್ತಿಕೊಂಡಾಗ ಅನೇಕರು ‘ಇದೊಂದು ಥೀಸೀಸ್ ಬರೆಯಬಹುದಾದ ವಿಷಯವೇ’ – ಎಂದು ವಿಸ್ಮಯವನ್ನು ವ್ಯಕ್ತಪಡಿಸಿದ್ದುಂಟು. ಆದರೆ ಶ್ರೀಗುರು ಕುವೆಂಪು ಅವರ ಕಣ್‌ಬೆಳಕಿನ ನಿರ್ದೇಶನದಲ್ಲಿ ನಾನೂ ಆ ವಿಸ್ಮಯವನ್ನು ಹೊಕ್ಕು ಎರಡು ವರ್ಷಗಳನಂತರ ಹೊರಗೆ ಬಂದಾಗ, ಬಂದು ನೋಡಿದಾಗ ಮೈದಾಳಿದ್ದು ‘ಸೌಂದರ್ಯ ಸಮೀಕ್ಷ್ಷೆ’ ಎಂಬ ಈ ಒಂದು ಕೃತಿ.

ಮೊದಲು ಹೊರಟದ್ದು ಕನ್ನಡ ಕಾವ್ಯದಲ್ಲಿ ಸೌಂದರ್ಯ ಸಮೀಕ್ಷ್ಷೆಗಾಗಿ. ನಮ್ಮ ಕನ್ನಡ ಕವಿಗಳ ಸೌಂದರ್ಯ ಪ್ರಜ್ಞೆಯ ವಿವಿಧ ಅಭಿವ್ಯಕ್ತಿಗಳೇನು ಎನ್ನುವುದನ್ನು ವಿವೇಚಿಸುವ ಉದ್ದೇಶದಿಂದ ಹೊರಟ ನನ್ನನ್ನು ಈ ಸಂಗತಿ, ನಾನು ಅದ್ಯತನಕ್ಕೆ ಸೇರಿದವನಾದುದರಿಂದ ಪಾಶ್ಚಾತ್ಯ ಸೌಂದರ್ಯ ವಿಚಾರದ ಕಡೆಗೆ, ಭಾರತೀಯನಾಗಿರುವುದರಿಂದ ನಮ್ಮ ಕನ್ನಡ ಕವಿಗಳ ಪರಂಪರೆಯಾದ ಇಡೀ ಭಾರತೀಯ ಸೌಂದರ್ಯ ವಿಚಾರಗಳ ಕಡೆಗೆ ಎಳೆದುಕೊಂಡು ಹೋಯಿತು. ಹೀಗಾಗಿ ಇಲ್ಲಿನ ವಿಚಾರದಲ್ಲಿ ಪೂರ್ವ – ಪಶ್ಚಿಮ, ಪ್ರಾಚೀನ-ನವೀನ ಆಲೋಚನಾಪರಂಪರೆಯನ್ನು ಕಾಣಬಹುದು.

ಸೌಂದರ‍್ಯ, ಸೌಂದರ‍್ಯಾನುಭವ ಎನ್ನುವುದು ತುಂಬ ದುರವಗಾಹ್ಯ (abstract) ವಾದ ಸಂಗತಿ. ಆದುದರಿಂದ ಇದನ್ನು ಮೂಲಮಾನವನ್ನಾಗಿ ಮಾಡಿಕೊಂಡು ಕವಿಗಳನ್ನು ಕಾವ್ಯಗಳನ್ನು ಪರಿಶೀಲಿಸಲು ಹೊರಟಿರುವುದರಿಂದ ಇದು ಎಷ್ಟರ ಮಟ್ಟಿಗೆ ಆಧುನಿಕ ವಿಮರ್ಶೆಯ ವಿಧಾನವಾಗಲು ಸಾಧ್ಯ – ಎನ್ನುವ ಪ್ರಶ್ನೆಗೆ ಇಲ್ಲಿ ಅವಕಾಶವಿದೆ. ಆದರೆ ಈ ಬರವಣಿಗೆ ಕಾವ್ಯಗಳ ಗುಣ-ದೋಷ ಮೌಲ್ಯ ನಿರ್ಣಯ ವಿಚಾರವನ್ನು ಕುರಿತ ವಿಮರ್ಶೆ ಅಲ್ಲ; ಅದು ಪ್ರಕೃತ ಪ್ರಬಂಧದ ಉದ್ದೇಶವೂ ಅಲ್ಲ. ವಿಮರ್ಶೆಗೆ ಮೂಲವಾದ ಕಾವ್ಯದ, ಕಾವ್ಯ ಸೌಂದರ‍್ಯದ ಅಥವಾ ಕಾವ್ಯಾನುಭವದ ವಿವಿಧ ಅಭಿವ್ಯಕ್ತಿಯ ಮುಖಗಳನ್ನು ಕುರಿತ ಪರಿಶೀಲನೆ ಇದು. ಏಕೆಂದರೆ ಕಾವ್ಯ ಮೂಲತಃ ಸೌಂದರ‍್ಯಾನುಭವದ ಅಭಿವ್ಯಕ್ತಿ. ಕಾವ್ಯವಿಮರ್ಶೆಗೆ ಹೊರಡತಕ್ಕವರಿಗೆ ಮೊದಲು ಈ ಸೌಂದರ‍್ಯಾನುಭವದ ಅಭಿವ್ಯಕ್ತಿಯ ವೈಖರಿ ವೈವಿಧ್ಯಗಳ ಪರಿಚಯ ಹಾಗೂ ಪ್ರಜ್ಞೆ ಅತ್ಯಂತ ಅಗತ್ಯ. ಇನ್ನೂ ಆರೋಗ್ಯಕರವಾದ ವಿಮರ್ಶೆ ಸಮರ್ಪಕವಾಗಿ ಸಿದ್ಧವಾಗಬೇಕಾಗಿರುವ ಈ ಪರಿಸರದಲ್ಲಿ, ಸಹೃದಯರಿಗೆ ನಮ್ಮ ಕವಿಗಳ ದೃಷ್ಟಿ, ಸಾಧನೆ ಇತ್ಯಾದಿಗಳನ್ನು ಪರಿಚಯಮಾಡಿಕೊಡುವ ಕೆಲಸ ಆಗಬೇಕಾಗಿದೆ. ನನ್ನ ಈ ಕೃತಿ ಆ ಒಂದು ಪ್ರಯತ್ನದ ಹೆಜ್ಜೆ ಮಾತ್ರ.

ಈ ಕೃತಿಯಲ್ಲಿ ನಾನು ನಿದರ್ಶನಕ್ಕೆಂದು ಬಳಸಿರುವ ಕವಿಕೃತಿಗಳನ್ನು ಕುರಿತು ಒಂದು ಮಾತನ್ನು ಹೇಳುವುದು ಅಗತ್ಯ : ನಾನು ಕನ್ನಡದ ಎಲ್ಲ ಕವಿಗಳ ಕೃತಿಗಳನ್ನೂ ಇಲ್ಲಿ ಬಳಸಿಕೊಳ್ಳಲಿಲ್ಲ; ನನ್ನ ಉದ್ದೇಶಕ್ಕೆ ಉಚಿತವಾದ, ಅನುಕೂಲವಾದ ಕೆಲವೇ ಕವಿಕೃತಿಗಳನ್ನು ಬಳಸಿಕೊಂಡಿದ್ದೇನೆ. ಹಾಗೆ ಬಳಸಿಕೊಂಡ ಕೃತಿಗಳೆಲ್ಲವೂ ಅತ್ಯುತ್ತಮವಾದ ಕವಿತೆಗಳೆಂದು ನಾನು ತಿಳಿದಿಲ್ಲ; ನನ್ನ ವಿಷಯ ನಿರ್ದೇಶನಕ್ಕೆ ಅತ್ಯುತ್ತಮ ನಿದರ್ಶನಗಳೆಂದು ಮಾತ್ರ ಗ್ರಹಿಸಿದ್ದೇನೆ.

ಈ ಪ್ರಬಂಧವನ್ನು ಬರೆಯುವ ಕಾಲದಲ್ಲಿ ಎಷ್ಟೋ ವಿಷಯಗಳ ತೊಡಕನ್ನು ಬಿಡಿಸಿ, ಹೊಸಬೆಳಕನ್ನು ಹಾಯಿಸಿ ನನ್ನ ವಿಚಾರದ ಹಾದಿಯನ್ನು ತೆರೆದು ತೋರಿದ ಕವಿವರ‍್ಯ ಪು.ತಿ. ನರಸಿಂಹಾಚಾರ‍್ಯರಿಗೂ ಮತ್ತು ಪ್ರೊ|| ಗೋಕಾಕ್ ಅವರಿಗೂ ನಾನು ಋಣಿಯಾಗಿದ್ದೇನೆ.

ಈ ಒಂದು ಪ್ರಬಂಧವನ್ನು ಬರೆಯಲು ಭಾರತ ಸರ್ಕಾರದವರು ೧೯೫೫ನೇ ನವಂಬರ್ ತಿಂಗಳಿನಿಂದ ೧೯೫೭ನೇ ನವೆಂಬರ್ ತಿಂಗಳವರೆಗೆ ಎರಡು ವರ್ಷಗಳ ಕಾಲ ನನಗೆ ವಿದ್ಯಾರ್ಥಿವೇತನವನ್ನು ನೀಡಿ ಪ್ರೋತ್ಸಾಹಿಸಿದ್ದಾರೆ; ಮೈಸೂರು ವಿಶ್ವವಿದ್ಯಾನಿಲಯದವರು ದಯೆಯಿಟ್ಟು ಆ ಎರಡು ವರ್ಷಗಳ ಕಾಲ ನನಗೆ ಅಧ್ಯಾಪಕತನದಿಂದ ಬಿಡುಗಡೆಯನ್ನು ನೀಡಿ ನನ್ನ ಅಭ್ಯಾಸಕ್ಕೆ ಅನುಕೂಲಮಾಡಿಕೊಟ್ಟಿದ್ದಾರೆ; ಮೈಸೂರು ಯೂನಿವರ್ಸಿಟಿ ಲೈಬ್ರರಿಯ ಮುಖ್ಯಾಧಿಕಾರಿಗಳಾಗಿದ್ದ ಶ್ರೀಕೆ. ಎಸ್.ಮೂರ್ತಿಯವರು ನನ್ನ ಅಧ್ಯಯನಕ್ಕೆ ಅಗತ್ಯವಾದ ಸಮಸ್ತ ಸೌಲಭ್ಯಗಳನ್ನೂ ಒದಗಿಸಿ ಉಪಕಾರ ಮಾಡಿದ್ದಾರೆ; ಸನ್ಮಿತ್ರರನೇಕರು ಹಾಗೂ ಹಿರಿಯರು ತಮ್ಮ ಅಮೂಲ್ಯವಾದ ಸಲಹೆ, ಸಹಕಾರಗಳಿಂದ ಬೆಂಬಲ ನೀಡಿದ್ದಾರೆ, ನನ್ನ ವಿದ್ಯಾರ್ಥಿ ಮಿತ್ರರಾದ ಆರ್.ಎಲ್. ಅನಂತರಾಮಯ್ಯ, ಕೆ.ಎಲ್. ಗೋಪಾಲಕೃಷ್ಣಯ್ಯ, ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ, ಕೆ.ಜಿ. ನಾಗರಾಜಪ್ಪ ಇವರು ಈ ಸುದೀರ್ಘ ಪ್ರಬಂಧದ ಸುಂದರವಾದ ಹಸ್ತಪ್ರತಿಗಳನ್ನು ಅತ್ಯಂತ ಶ್ರಮವಹಿಸಿ ತಯಾರಿಸುವುದರಲ್ಲಿ ಹಗಲಿರುಳೂ ಶ್ರಮಿಸಿ ಉಪಕಾರ ಮಾಡಿದ್ದಾರೆ. ಈ ಎಲ್ಲರಿಗೂ ನಾನು ತುಂಬ ಕೃತಜ್ಞನಾಗಿದ್ದೇನೆ.

ಎಲ್ಲಕ್ಕೂ ಮಿಗಿಲಾಗಿ, ಅಂದು ಉಪಕುಲಪತಿಗಳ ಭಾರವನ್ನು ಹೊತ್ತ, ಪೂಜ್ಯ ಗುರು ಕುವೆಂಪು ಅವರು ಈ ಪ್ರಬಂಧದ ನಿರ್ದೇಶಕರಾಗಲು ಕೃಪೆಯಿಟ್ಟು ಒಪ್ಪಿಕೊಂಡು,ಅವಿರಾಮದ ನಡುವೆಯೂ ವಿರಾಮ ಮಾಡಿಕೊಂಡು, ಆಗಾಗ ಇದನ್ನು ತಿದ್ದಿ, ತೀಡಿ, ಸ್ಫೂರ್ತಿಯನ್ನು ನೀಡಿ, ಕೈಹಿಡಿದು ನಡೆಯಿಸುವ ವಾತ್ಸಲ್ಯದಿಂದ ಆಶೀರ್ವದಿಸಿದ್ದಾರೆ. ನಾನು ಅವರಿಗೆ ಅತ್ಯಂತ ಋಣಿಯಾಗಿದ್ದೇನೆ.

ಈ ಒಂದು ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದವರು ನನಗೆ ಪಿಹೆಚ್.ಡಿ. ಪದವಿಯನ್ನು ನೀಡಿದ್ದು ೧೯೬೦ರಲ್ಲಿ. ಅಲ್ಲಿಂದ ಈಚೆಗೆ ಇದನ್ನು ಅಚ್ಚು ಹಾಕಬೇಕೆಂಬ ಕನಸು ನನಸಾದದ್ದು ಈಗ – ಅದು ನನ್ನ ಪೂಜ್ಯ ಗುರುಗಳಾದ ಶ್ರೀ ತ.ಸು.ಶಾಮರಾಯರಿಂದ. ನನ್ನ ಅಸ್ತವ್ಯಸ್ತವಾದ ಬದುಕಿನಲ್ಲಿ ಅವರಿಂದ ನನಗೆ ಆಗಿರುವ ಉಪಕಾರವನ್ನು ನಾನು ಈ ಜನ್ಮದಲ್ಲಿ ಎಣಿಸಿ ಮುಗಿಸುವುದು ಸಾಧ್ಯವಿಲ್ಲ.

ಈ ಒಂದು ಪ್ರಬಂಧವನ್ನು ಇಷ್ಟು ಅಚ್ಚುಕಟ್ಟಾಗಿ, ಸೊಗಸಾಗಿ, ಅಚ್ಚುಮಾಡಿ ಕೊಟ್ಟ ಮಯೂರ ಪ್ರಿಂಟರ‍್ಸ್ ಮಾಲೀಕರೂ, ನನ್ನ ಆಪ್ತಮಿತ್ರರೂ ಆದ ಶ್ರೀ ಪ. ಮಲ್ಲೇಶ್ ಹಾಗೂ ಎಸ್. ಪಟ್ಟಾಭಿರಾಮನ್ ಅವರ ಶ್ರಮವನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ; ನನ್ನ ಪ್ರಿಯ ಮಿತ್ರ ಪ್ರಭುಶಂಕರ್ ಅವರು ಇದರ ಪ್ರಕಟನ ಕಾಲದಲ್ಲಿ ತಮ್ಮ ಕಾರ‍್ಯಭಾರದ ನಡುವೆ ‘ಪ್ರೂಫ್’ ನೋಡುವ ಶ್ರಮವಹಿಸಿಕೊಂಡು ಮೈಸೂರಿನಿಂದ ಐನೂರು ಮೈಲಿ ದೂರದಲ್ಲಿರುವ ನನ್ನ ಈ ಕೆಲಸವನ್ನು ಹಗುರ ಮಾಡಿಕೊಟ್ಟಿದ್ದಾರೆ.

ಇವರೆಲ್ಲರಿಗೂ ತುಂಬ ಕೃತಜ್ಞನಾಗಿದ್ದೇನೆ ಎಂದು ಹೇಳಿದ ಮಾತ್ರಕ್ಕೆ ಎಲ್ಲವನ್ನೂ ಹೇಳಿದಂತಾಯಿತೆ ? –

ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದಿದು
ಋಣದ ರತ್ನಗಣಿಯೊ!


ಆರನೆಯ ಮುದ್ರಣದ ಸಂದರ್ಭದಲ್ಲಿ

‘ಸೌಂದರ್ಯ ಸಮೀಕ್ಷ್ಷೆ’ ಎಂಬ ಈ ಕೃತಿ ಮೊದಲು ಪ್ರಕಟವಾದದ್ದು ೧೯೬೫ರಲ್ಲಿ. ಕಳೆದ ಈ ನಾಲ್ಕು ದಶಕಗಳ ಕಾಲಮಾನದಲ್ಲಿ ಈ ಕೃತಿ ಆರು ಮುದ್ರಣಗಳನ್ನು ಕಾಣುವಂತಾದದ್ದು ನನಗೆ ತುಂಬ ಸಂತೋಷದ ಸಂಗತಿಯಾಗಿದೆ. ಮೊದಲ ಮೂರು ಮುದ್ರಣಗಳು ಹೊರಬಂದದ್ದು ಮೈಸೂರಿನ ‘ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ಯ ಮೂಲಕ; ನಾಲ್ಕನೆಯದು ಬೆಂಗಳೂರಿನ ‘ಶಾರದಾ ಪ್ರಕಾಶನ’ದವರಿಂದ. ಇದೀಗ ಐದನೆಯ ಮತ್ತು ಆರನೆಯ ಮುದ್ರಣ ಬೆಂಗಳೂರಿನ ‘ಕಾಮಧೇನು’ ಪ್ರಕಾಶನದವರಿಂದ. ಪಿ.ಎಚ್‌ಡಿ. ಮಹಾಪ್ರಬಂಧವೊಂದು ಹೀಗೆ ಆರು ಮುದ್ರಣಗಳನ್ನು ಕಾಣುವಂತಾದದ್ದು ಕನ್ನಡದ ಸಂದರ್ಭದಲ್ಲಿ ಬಹುಶಃ ಇದೇ ಮೊದಲೆಂದು ತೋರುತ್ತದೆ.

ಈ ಒಂದು ಕೃತಿಯನ್ನು ಕಾಮಧೇನು ಪ್ರಕಾಶನದ ನನ್ನ ಗೆಳೆಯರಾದ ಶ್ರೀ ಡಿ.ಕೆ. ಶ್ಯಾಮಸುಂದರರಾವ್ ಅವರು ಅಭಿಮಾನದಿಂದ ಪ್ರಕಟಣೆಗೆ ಎತ್ತಿಕೊಂಡಿದ್ದಾರೆ. ಬೆಂಗಳೂರಿನ ಸತ್ಯಶ್ರೀ ಪ್ರಿಂಟರ್ಸ್‌ನ ಶ್ರೀ ಲಿಂಗರಾಜು ಅವರು ಮತ್ತು ಡಿ.ಟಿ.ಪಿ  ಮಾಡಿದ ಕುಮಾರಿ ಸುಶೀಲ ಕೆ. ಅವರು ಇದರ ಮುದ್ರಣ ಕಾರ‍್ಯವನ್ನು ಸೊಗಸಾಗಿ ನಿರ್ವಹಿಸಿದ್ದಾರೆ. ಪ್ರಕಾಶಕರು ಹಾಗೂ ಮುದ್ರಕರು, ಇಬ್ಬರಿಗೂ ನನ್ನ ಕೃತಜ್ಞತೆಯ ವಂದನೆಗಳು.

 

ಏಳನೆಯ ಮುದ್ರಣಕ್ಕೆ ಎರಡು ಮಾತು

ಕರ್ನಾಟಕ ಸರ್ಕಾರವು ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ, ನನ್ನ ಸಮಗ್ರ ಕೃತಿಗಳನ್ನು ಒಂಬತ್ತು ಸಂಪುಟಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಕಟಿಸುತ್ತಿರುವುದು ನನಗೆ ತುಂಬ ಸಂತೋಷವನ್ನು ತಂದಿದೆ.

ಈ ಅಭಿನಂದನೀಯವಾದ ಕಾರ್ಯವನ್ನು ಕೈಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರಿಗೆ, ಜಂಟಿ ನಿರ್ದೇಶಕರಾದ ಶ್ರೀ ಶಂಕರಪ್ಪ ಅವರಿಗೆ, ಪ್ರಕಟಣಾ ಶಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ವೈ.ಎಸ್. ವಿಜಯಲಕ್ಷ್ಮಿ ಅವರಿಗೆ ಮತ್ತು ಈ ಸಂಪುಟಗಳನ್ನು ಅಂದವಾಗಿ ಮುದ್ರಿಸಿರುವ ಲಕ್ಷ್ಮಿ ಮುದ್ರಣಾಲಯದ ಶ್ರೀ ಅಶೋಕ್‌ಕುಮಾರ್ ಅವರಿಗೆ ಹಾಗೂ ಸಂಪುಟಗಳ ಕರಡು ತಿದ್ದುವುದರಲ್ಲಿ ನೆರವಾದ ಶ್ರೀ ಕೆ.ಆರ್. ಗಣೇಶ್‌ಅವರಿಗೆ ನನ್ನ ಕೃತಜ್ಞತೆಯ ವಂದನೆಗಳನ್ನು ಸಲ್ಲಿಸುತ್ತೇನೆ.

-ಜಿ.ಎಸ್. ಶಿವರುದ್ರಪ್ಪ
ಫೆಬ್ರವರಿ ೨೦೦೯