ಜಿ.ಎಸ್.ಎಸ್. ಕಳೆದ ನಾಲ್ಕು ದಶಕಗಳಲ್ಲಿ ಬರೆದ ಎಲ್ಲ ಕವನಗಳು, ಅನುವಾದಿಸಿದ ಕವಿತೆಗಳು ಇಗೋ ಇಲ್ಲಿ ಒಟ್ಟಾಗಿವೆ. ನಲವತ್ತು ವರುಷಗಳ ಕಾಲ ಹೀಗೆ ಕಾವ್ಯರಚನೆ ನಡೆಸಿದ ಸಂಗತಿಯೇ ಕವಿಗೆ ಕವಿತೆಯ ಕೃಷಿಯೆಂಬುದು ಪ್ರಿಯವಾದ ಹಾಗೂ ಹೊಣೆಯುಳ್ಳ ಕ್ರಿಯೆಯಾಗಿದೆ ಎಂಬ ಅಂಶವನ್ನು ಸಾಬೀತು ಮಾಡುವುದು. ಹೀಗೆ ಕವಿ ರಚಿಸಿದ ಕವನಗಳೆಲ್ಲವನ್ನೂ ಒಗ್ಗೂಡಿಸುವ ಮೂಲಕ ಕವಿಯ ಎಲ್ಲ ಕವಿತೆಗಳ ಸಂಬಂಧಗಳನ್ನು ತಿಳಿಯುವುದು ಸಾಧ್ಯವಾಗುವುದು; ಇದರೊಡನೆ ಈ ಕವಿತೆಗಳು ಮೈದಳೆಯುತ್ತಿದ್ದ ಹೊತ್ತಿನ ಕನ್ನಡ ಕಾವ್ಯ ಪರಂಪರೆಯ ಚಹರೆಗಳನ್ನು ಕಂಡುಕೊಳ್ಳಬಹುದು.

ಜಿ.ಎಸ್.ಎಸ್. ಅವರ ಹಲವು, ಜನಮೆಚ್ಚಿದ ಕವಿತೆಗಳಲ್ಲಿ ಎದ್ದು ಕಾಣುವುದು ಪ್ರಸಾದ ಗುಣ. ಇವರ ಕವನ ಸಮುದಾಯದ ಅಧಿಕತಮ ಕವಿತೆಗಳ ಸಾಧಾರಣ ಧರ್ಮವನ್ನು ಗಮನಿಸಿದರೆ ಕವಿ ಕಾವ್ಯಶರೀರವನ್ನು, ಪದ ಸಂಯೋಜನೆಯನ್ನು ಬಳಸುವುದು ಅರ್ಥವನ್ನು ಓದುಗನಿಗೆ ಸಂವಹನಗೊಳಿಸುವ ಪಾರದರ್ಶಕ ಮಾಧ್ಯಮವನ್ನಾಗಿ ಎಂಬುದು ಸ್ಪಷ್ಟವಾಗುತ್ತದೆ. ಕಾವ್ಯಶರೀರ ‘ಅರ್ಥ’ವನ್ನು ಮುಚ್ಚಿಡಲು ರೂಪುಗೊಂಡುದಲ್ಲ. ಹಾಗೆಯೇ ‘ಅರ್ಥ’ವನ್ನು ಗ್ರಹಿಸಿಕೊಳ್ಳಲೆಂದೇ ಕಾವ್ಯಶರೀರವನ್ನು ರೂಪಿಸುವ ನವ್ಯಕವಿಗಳಲ್ಲಿ ಕೆಲವರ ಬಗೆಯೂ ಇವರದ್ದಲ್ಲ. ಇದರಿಂದಾಗಿ ತಿಳಿಯುವುದಿಷ್ಟು : ಕವಿ ತನ್ನ ಅನುಭವಜನ್ಯ ಭಾವ ಇಲ್ಲವೇ ಅರ್ಥಗಳನ್ನು ಭಾಷಿಕವಾಗಿ ನಿರೂಪಿಸುತ್ತಾರೆ; ಆ ಮೂಲಕ ಅನುಭವದ ಗ್ರಹಿಕೆಯನ್ನು ಕವಿತೆಯ ರಚನೆಯ ಮೂಲಕ ದಾಖಲಿಸಿ ಬಿಡುಗಡೆ ಮಾಡುತ್ತಾರೆ. ಈ ಹಾದಿಯನ್ನು ಹಿಡಿದು ಕವಿ ನಿಡಿದಾದ ದೂರವನ್ನು ಕ್ರಮಿಸಿ ಬರೆದಿದ್ದಾರೆ.

ಈ ಬಗೆಯ ಕವಿತಾ ರಚನೆಗೆ ಪರ್ಯಾಯವಾದ ಒಂದು ಬಗೆಯನ್ನು ಕವಿ ಪರೀಕ್ಷಿಸಿದ್ದುಂಟು. ಶಬ್ದ ಕಟ್ಟೋಣದ ಮೂಲಕವೇ. ಕವಿತೆಯು ಶಾಬ್ದಿಕವಾಗುವ ಬಗೆಯಲ್ಲಿಯೇ ಅನುಭವದ ಸ್ವರೂಪ ಹಾಗೂ ಸಾರವನ್ನು ಗ್ರಹಿಸುವ ಮಾರ್ಗವಿದು. ‘ದೀಪದ ಹೆಜ್ಜೆ’ ಸಂಕಲನದ ಹಲವು ಕವಿತೆಗಳಲ್ಲಿ, ಕವಿ ಈ ಮಾರ್ಗದಲ್ಲಿ ಕೆಲವು ಯತ್ನಗಳನ್ನು ನಡೆಸಿದ್ದಾರೆ. ಈ ಕವಿತೆಗಳಲ್ಲಿ ಇಂಥ ಪ್ರಯೋಗದಿಂದಾಗಿ ಉಂಟಾದ ಬಂಧ ಹಾಗೂ ಆಕೃತಿಗಳ ಬದಲಾವಣೆ ಎದ್ದು ಕಾಣುತ್ತದೆ. ಈ ಹಾದಿಯನ್ನು ಹಿಡಿದ ರಚನೆಗಳು ಕವಿಯ ಇತರ ಸಫಲ ರಚನೆಗಳ ಸ್ಥಾಯೀಗುಣಗಳಾದ ಒಳಗಿನ ಗೇಯತೆ ಹಾಗೂ ಮೂರ್ತವಾದ ಬಂಧ ಇವುಗಳನ್ನು ಹೊಂದಿಲ್ಲ. ಇಂಥವು ಅಕಾರಣವಾಗಿ ಮೈಚಾಚಿ ಮುನ್ನಡೆಯುತ್ತವೆ. ಆದರೆ ಕವಿ ಆನಂತರದಲ್ಲಿ ತಮ್ಮ ಕವಿತೆಗಳ ಪ್ರಧಾನ ಹಾಗೂ ಪ್ರಮುಖ ನೆಲೆಗೆ ಹೊರಳುತ್ತಾರೆ. ಇದು ಕವಿತೆ ಪ್ರಿಯವಾದ ನೆಲೆಯೂ ಹೌದು.

ಕವಿ ಗ್ರಹಿಸಿದ ಅರ್ಥ ಸಂವಹನೆಗೆ ಕವಿತೆಯನ್ನು ಸನ್ನದ್ಧಗೊಳಿಸುವಾಗ ಪರಿಚಿತ ಲೋಕ, ಅದರ ಇಂದ್ರಿಯಗಮ್ಯ ಘಟಕಗಳು ಕವಿ ‘ಕಂಡ’, ಗ್ರಹಿಸಿದ ಅರ್ಥಕ್ಕೆ ಪ್ರತಿಯಾಗಿ, ಪ್ರತೀಕವಾಗಿ, ಸಂಕೇತಗಳಾಗಿ, ಉಪಮೆಗಳಾಗಿ, ರೂಪಕಗಳಾಗಿ ಕವನದ ಮೈಯಲ್ಲಿ ಸೇರುತ್ತವೆ. ಹೀಗೆ ಮೈದಳೆದ ‘ಅರ್ಥ’ ಕೆಲವೊಮ್ಮೆ ‘ಭಾವ’ವೂ ಆಗಿರಬಹುದು. ಈ ‘ಭಾವ’ ಲೋಕಾನುಭವಕ್ಕೆ ಕವಿಯ ಪ್ರತಿಕ್ರಿಯೆಯಾಗಿರುವಂತೆ ಕವಿಯ ದೃಷ್ಟಿಕೋನವೂ ಆಗಿರುತ್ತದೆ. ಇದೇನೇ ಇರಲಿ ಕವಿ ಹೀಗೆ ತಮ್ಮ ಗ್ರಹಿಕೆಯನ್ನು ಉಕ್ತಿರೂಪಕ್ಕೆ ತರುವಾಗ ಮಂಡಿಸುವ ಲೋಕವಿವರಗಳು ಮುಖ್ಯವಾಗಿ ಕಣ್ಣಿನ ಮೂಲಕ ಲಭಿಸಿದ ಲೋಕ; ಇದರಿಂದಾಗಿಯೇ ಮೂರ್ತ ಚಹರೆಗಳುಳ್ಳ ಲೋಕ. ಹೀಗಾಗಿ ಓದುಗನ ಎದುರು ಮೈದಳೆಯುವ ಲೋಕ ಅವನ ಕಣ್ಣುಗಳಿಗೆ ನಿಲುಕುವಂಥದಾಗಿರುತ್ತದೆ ಎಂಬುದನ್ನು ಗಮನಿಸಬೇಕು.

ಕಣ್ಣಿಗೆ ನಿಲುಕುವ ಲೋಕದ ಮಂಡನೆಯಲ್ಲಿ ಕಾಣುವ ಪುನಸ್ಸಂಯೋಜನೆ ಕವಿಯು ಗ್ರಹಿಸಿದ ಅಥಮಂಡನೆಗಾಗಿ ನಡೆದುದು ತಾನೇ. ಈ ಕ್ರಮ ಕವಿತೆಗಳ ಗುಣ ಹಾಗೂ ಮಿತಿಗಳೆರಡನ್ನೂ ಸೂಚಿಸುವಂತಿದೆ. ಗುಣ ಏಕೆಂದರೆ ಸಂವಹನದ ದೃಷ್ಟಿಯಿಂದ ಒದಗುವ ಸುಭಗತೆಗಾಗಿ; ಅರ್ಥದೀಪ್ತಿಗಾಗಿ. ಮಿತಿ ಏಕೆಂದರೆ ದೃಶ್ಯ ಜಗತ್ತು ಧ್ಯಾನಿತ ಅರ್ಥದ ಸಂವಹನೆಗಷ್ಟೇ ಸೀಮಿತಗೊಳ್ಳುವುದರಿಂದಾಗಿ. ಎಂದರೆ ಕವಿ ದೃಶ್ಯ ಜಗತ್ತನ್ನು ಭಗ್ನ ಗೊಳಿಸಿ ಮರಳಿ ಸಂಯೋಜಿಸುವ ಮೂಲಕವೇ ಅನುಭವದ ಸ್ವರೂಪವನ್ನು ಗ್ರಹಿಸಲು ಯತ್ನಿಸುವ ಪರ್ಯಾಯ ಮಾರ್ಗವನ್ನು ಹಿಡಿದಿಲ್ಲ. ಇವು ಕಾವ್ಯದಲ್ಲಿ ದೃಶ್ಯ ಜಗತ್ತು ಬಳಕೆಯಾಗಬಲ್ಲ ಸಾಧ್ಯತೆಗಳಲ್ಲಿ ಎರಡು. ಇವುಗಳಲ್ಲಿ ಒಂದನ್ನು ಕವಿ ಆಯ್ದಿದ್ದಾರೆ: ನೆಮ್ಮಿ ನಡೆದಿದ್ದಾರೆ.

‘ಸಾಮಗಾನ’ ಕವಿತೆಗಳಿಂದ ‘ದೀಪದ ಹೆಜ್ಜೆ’ಯ ಕವಿತೆಗಳವರೆಗೆ ಬರುವ ಹೊತ್ತಿಗೆ ಕವಿ ಎರಡು ಜಗತ್ತುಗಳಿಗೆ ಸ್ಪಂದಿಸುವ ಹೊಣೆ ಹೊರಲು ಸಿದ್ಧರಾಗುವುದು ಕಂಡುಬರುತ್ತದೆ. ಒಂದು ಜೀವಸಮೃದ್ಧ ಪ್ರಕೃತಿ; ಇನ್ನೊಂದು ಮಾನವ ಕೇಂದ್ರಿತ ಸಮಾಜ. ಇವುಗಳಲ್ಲಿ ಜೀವಸಮೃದ್ಧ ಪ್ರಕೃತಿ ಜಿ.ಎಸ್.ಎಸ್. ಕವಿತೆಗಳಲ್ಲಿ ಮೊದಲಿನಿಂದ ಈವರೆಗೆ ಜೀವನದ ಇತ್ಯಾತ್ಮಕತೆಯನ್ನು ಮಂಡಿಸಲು ಕಾಣಿಸಲು ನೆರವಿಗೆ ಬಂದಿದೆ. ವಿಸ್ಮಯ, ಉತ್ಸುಕತೆಗಳು ಈ ನೆಲೆಯ ಕವಿತೆಗಳ ಪ್ರಧಾನ ಭಾವಗಳಾಗುತ್ತವೆ. ಪ್ರಕೃತಿಯ ನಿಯತಲಯಗಳು ಕವಿಗೆ ಸದಾ ಆಕರ್ಷಣೀಯ ಅಂಶಗಳಾಗಿವೆ. ಮರಳಿಮರಳಿ ಅಂಥ ಸಂದರ್ಭಗಳನ್ನು ಕವಿ ಹಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾನವಕೇಂದ್ರಿತ ಸಮಾಜದಲ್ಲಿ ಕವಿತೆಗಳ ನಿರೂಪಕ ಕಾಣುವುದು ಸಮರಸವಿಲ್ಲದ ಜೀವನವನ್ನು, ನೇತ್ಯಾತ್ಮಕ ಶಕ್ತಿಗಳನ್ನು. ಪ್ರಕೃತಿ ಕೇಂದ್ರಿತ ಕವಿತೆಗಳಲ್ಲಿರುವ ವಿಸ್ಮಯ, ಉತ್ಸುಕತೆಗಳ ಬದಲಾಗಿ ಖಿನ್ನತೆ, ಸಾತ್ವಿಕ ಕ್ರೋಧ, ಹತಾಶೆಯ ಅಂಚಿನಲ್ಲಿ ಸುಳಿಯುವ ಅಸಹಾಯಕತೆ ಇವು ಈ ಕವಿತೆಗಳ ಪ್ರಧಾನ ಭಾವಗಳಾಗುತ್ತವೆ. ಈ ಎರಡೂ ಲೋಕಗಳೂ ಅವುಗಳಿಗೆ ಬದ್ಧವಾದ ಭಾವ ಸಮುದಾಯಗಳೂ ಆಗಾಗ ಸಂಕರಗೊಳ್ಳುವುದುಂಟು. ಆದರೆ ಅಂಥ ಸಂದರ್ಭಗಳು ಕಡಿಮೆ. ಹೀಗಾಗಿ ಈ ಎಲ್ಲ ಕವಿತೆಗಳ ನಿರೂಪಕನಿಗೆ ಎರಡು ಪಾತ್ರಗಳಿವೆ. ಒಂದು ಕಡೆ ಲೋಕದ ಪ್ರಧಾನ ಶ್ರುತಿಯನ್ನು ಲಯಗಳನ್ನು ಗ್ರಹಿಸಿ ಅದರೊಡನೆ ತನ್ನ ಕವಿತೆಯನ್ನು ಮೇಳನಗೊಳಿಸುವುದು. ಈ ಬಗೆಯ ಕವಿತೆಗಳ ಬಂಧ ನಿಯತ ಹಾಗೂ ಸಂವೃತ. ಅಂದರೆ ಅರ್ಥನಿಯತಿ ಹಾಗೂ ಭಾವಸಂವಹನದ ಕವಿತೆಯ ಮುಖ್ಯ ನೆಲೆಯಾಗುತ್ತದೆ. ಜಿ.ಎಸ್.ಎಸ್. ಅವರ ಬಹುಶ್ರುತ, ಖ್ಯಾತ ಕವಿತೆಗಳು ಈ ಗುಂಪಿನಲ್ಲಿವೆ ಎಂಬುದು ಗಮನಾರ್ಹ. ನಿರೂಪಕನ ಇನ್ನೊಂದು ಪಾತ್ರ ಸಾಮಾಜಿಕ ಹೊಣೆಗಾರಿಕೆಯಿಂದ ಮೈದಳೆದದ್ದು. ಆವರಣದ ಮಾನವ ಜಗತ್ತಿನ ವೈಸಾದೃಶ್ಯಗಳನ್ನು ಲಯರಾಹಿತ್ಯವನ್ನು ಅಪಶ್ರುತಿಗಳನ್ನು ಗ್ರಹಿಸಿ ಅವುಗಳನ್ನು ತನ್ನ ಕವಿತೆಗಳಲ್ಲಿ ಮಂಡಿಸುವುದು ಈ ನಿರೂಪಕನ ಹೊಣೆ. ಕವಿಯ ಈ ಸಾಮಾಜಿಕ ವ್ಯಾಖ್ಯೆಗಳು ಕೆಲವೊಮ್ಮೆ ವ್ಯಕ್ತಿ ವ್ಯಕ್ತಿ ಸಂಬಂಧದಿಂದ ಪ್ರೇರಣೆ ಪಡೆದಿದ್ದರೆ ಮತ್ತೆ ಕೆಲವೊಮ್ಮೆ ಸಾಮುದಾಯಿಕ ವೈಷಮ್ಯಗಳಿಂದ ಪ್ರಚೋದಿತವಾಗಿರುತ್ತವೆ. ವಿರಸ ಸ್ಥಾಯಿಯಾದ ಮಾನವ ಕೇಂದ್ರಿತ ಜಗತ್ತಿನ ಬಗ್ಗೆ ಕವಿತೆಗಳು ಹತಾಶವಾಗಿಲ್ಲ. ಆದರೆ ಈ ಕವಿತೆಗಳಲ್ಲಿ ಸಹಜವಾಗಿಯೇ ಇವರ ಪ್ರಕೃತಿಕೇಂದ್ರಿತ ಕವಿತೆಗಳಲ್ಲಿನ ಉತ್ಸುಕತೆಯ ಒಳಗೇಯತೆ ಅಸಾಧ್ಯವಾಗುತ್ತದೆ.

ಇಲ್ಲಿ ಒಗ್ಗೂಡಿಸಿದ ಕವಿತೆಗಳ ಓದಿನಿಂದ ಇನ್ನೊಂದು ಸಂಗತಿ ಗೋಚರಿಸುತ್ತದೆ. ಇಲ್ಲಿನ ಕವಿತೆಗಳು ಮುಖ್ಯವಾಗಿ ಪ್ರತಿಕ್ರಿಯಾರೂಪಿಯಾದವು; ಭಾವಸಂವಾದಿಯಾದವು. ಬಿಡಿಬಿಡಿಯಾಗಿ ಕವಿತೆಗಳು ತಮಗೆ ತಾವೇ ಸಂಪೂರ್ಣವಾಗಿವೆ. ಹೀಗೆ ಬಿಡಿಬಿಡಿಯಾದ ರಚನೆಗಳು ಮತ್ತೆ ಬೇರೊಂದು ಗಹನರಚನೆಗಾಗಿ ನಡೆಸಿದ ಪೂರ್ವಭಾವಿ ಸಿದ್ಧತೆಗಳಾಗಲೀ, ಕರಡು ರೂಪಗಳಾಗಲೀ ಅಲ್ಲ. ಹೀಗೆಂದು ಈ ಕವಿತೆಗಳು ಸದ್ಯತನಕ್ಕೆ ಬದ್ಧವಾಗಿಬಿಟ್ಟಿವೆ, ಅಂದಂದಿಗೆ ಸೀಮಿತವಾಗಿವೆ ಎಂದೂ ಹೇಳುವಂತಿಲ್ಲ. ಕವಿತೆಗಳು ಹೀಗೆ ದೈನಿಕ ಹಾಗೂ ನೈರಂತರ‍್ಯಗಳ ನಡುವೆ ನಿಲ್ಲುವ ಈ ಗುಣ ಕಾವ್ಯ ರಚನೆ ವ್ಯಕ್ತಿತ್ವದ ಒಂದು ಹೊರಚಾಚಾಗಿರುವ ಕವಿಗಳಲ್ಲಿ ಸಹಜವೇ ಸರಿ. ಸೃಜನಶೀಲ ಲೇಖಕರಾಗಿ ಜಿ.ಎಸ್.ಎಸ್. ತಮ್ಮನ್ನು ಕವಿತೆಯ ಪ್ರಕಾರಕ್ಕೆ ಬದ್ಧಗೊಳಿಸಿಕೊಂಡರಷ್ಟೆ. ಹೀಗಾಗಿ ಕವಿ ವ್ಯಕ್ತಿತ್ವದ ಸ್ಪಂದನಗಳು ಪೂರ್ವಧ್ಯಾನಿತ ಸ್ಥಿತಿಯಲ್ಲಿ ಉಕ್ತಿರೂಪ ಪಡೆದು ಕವಿತೆಗಳಾಗಿವೆ. ಹೀಗೆ ಬಹಿರಂಗಗೊಳ್ಳುವ ಬಗೆಯಿಂದಾಗಿ ಒಂದೆಡೆ ಕವಿಗೆ ರಚನೆಯ ಸಾಧ್ಯತೆಗಳು ಮಾತಿನ ವರಸೆಗಳಷ್ಟೇ ಸಹಜವಾಗುವಂತಾಯಿತು. ಇನ್ನೊಂದೆಡೆ ಬಹಿರಂಗಗೊಳ್ಳುವ ಮೊದಲಿನ ಕುದಿತಗಳು ಕ್ಷೋಭೆಗಳು ಕಳೆದು ಅನಂತರದ ಸ್ತಿಮಿತಕ್ಕೆ ಬದ ನೆಲೆಗಳು ಕವಿತೆಗಳಲ್ಲಿ ಮೈದಳೆದವು.

ಕವಿ ಕವನದ ಬಂಧದ ಮೂಲಕವೇ ಅರ್ಥವನ್ನು ಗ್ರಹಿಸುವ ಇನ್ನೊಂದು ಹಾದಿಯನ್ನು ಹಿಡಿಯುವುದಿಲ್ಲವಾದ್ದರಿಂದ ಅವರ ಕವಿತೆಗಳಲ್ಲಿ ಸಹಜವಾಗಿಯೇ ಬಂಧದ ನೆಲೆಯ ಪ್ರಯೋಗಗಳು ಅನವಶ್ಯಕವಾಗುತ್ತವೆ. ನಿಯತಛಂದ ಇಲ್ಲವೇ ಮುಕ್ತಛಂದದಲ್ಲಿ ಕವಿತೆಗಳ ಬಂಧ ನಿರ್ಧಾರಗೊಳ್ಳುತ್ತದೆ. ಮುಕ್ತಛಂದ ಮುಖ್ಯವಾಗಿ ಅರ್ಥಲಯಾನುಸಾರಿಯಾಗಿ ಮಾತಿನ ಧಾಟಿಗಳನ್ನು, ರೀತಿಗಳನ್ನು ಮೈಗೂಡಿಸಿಕೊಳ್ಳುವುದನ್ನು ನೋಡುತ್ತೇವೆ. ಬಂಧ ವಿವೃತವಾಗುವ, ಅನಿಯತ ಬಂಧದ ಕವಿತೆಗಳು ‘ದೀಪದ ಹೆಜ್ಜೆ’ಯಲ್ಲಿ ಕಾಣಿಸಿಕೊಂಡರೂ ಅದು ಜಿ.ಎಸ್.ಎಸ್. ಅವರ ಒಟ್ಟು ಕಾವ್ಯಮಾರ್ಗದ ಪ್ರಧಾನ ಲಕ್ಷಣವಾಗಲಿಲ್ಲವಷ್ಟೆ. ಉಳಿದಂತೆ ಎಲ್ಲ ಕವಿತೆಗಳಲ್ಲೂ ಭಾಷೆ ಮೈಗೂಡಿಸಿಕೊಂಡ ವಾಗ್ವೈಖರಿ ಕಂಡುಬರುತ್ತದೆ. ಇದೊಂದು ಬಗೆಯ ಸಂಮಿತಿ ಎಂದಾದರೂ ಕರೆಯೋಣ. ಕವಿ ತನ್ನ ಕವಿತೆಯನ್ನು ಯಾರಿಗೋ ಹೇಳುತ್ತಿರುವ ಧಾಟಿಯೇ ಬೆಳೆದ ಕಾವ್ಯಮಾರ್ಗದಲ್ಲಿ ದಟ್ಟವಾಗುವುದನ್ನು ಕಾಣುತ್ತೇವೆ. ಇದೇ ಕಾರಣವಾಗಿ ಬಳಕೆಯ ಭಾಷೆಯಲ್ಲಿ ಮಾತುಗಾರಿಕೆಯೊಡನೆ ಸೇರುವ ಎಲ್ಲ ಭಾಷೇತರ ಅಂಶಗಳೂ ಈ ಕವಿತೆಗಳ ಭಾಷೆಯಲ್ಲಿ ಮೈಗೂಡಿಕೊಂಡು ಬರುತ್ತವೆ.

ಮೊದಮೊದಲಿನ ಕವಿತೆಗಳಲ್ಲಿ ನಡುಗನ್ನಡದ ಹಲವು ರೂಪಗಳನ್ನು ಕವಿ ಬಳಸುವರಾದರೂ ಅನಂತರದಲ್ಲಿ ಶಿಷ್ಟ ಕನ್ನಡವನ್ನು ಮುಖ್ಯವಾಗಿ ಆಶ್ರಯಿಸಿದ್ದಾರೆ. ಶಿಷ್ಟ ಕನ್ನಡದ ಲಯವಿನ್ಯಾಸಗಳು ಈ ಕವಿತೆಗಳ ಭಾಷೆಯ ಮುಖ್ಯ ಆಸಕ್ತಿಯಾಗಿದೆ. ಶಿಷ್ಟ ಕನ್ನಡ ಆಧುನಿಕ ಕನ್ನಡ ಕವಿತೆಗಳಲ್ಲಿ ಎರಡು ನೆಲೆಗಳಲ್ಲಿ ಬಳಕೆಯಾಗಿದೆ. ಸಂಭಾಷಣೆಯ ನೆಲೆಯೊಂದು ನೆಲೆಯಾದರೆ ಶುದ್ಧ ಕಾವ್ಯದ ನೆಲೆ ಇನ್ನೊಂದು ನೆಲೆ. ಸಂಭಾಷಣೆಯ ನೆಲೆಯಲ್ಲಿ ವಾಚ್ಯ ಪ್ರಧಾನವಾದರೆ ಶುದ್ಧಕಾವ್ಯದ ನೆಲೆಯಲ್ಲಿ ಅಥ ಸುಭಗತೆಯೇ ಶೂನ್ಯವಾಗಿಬಿಡಬಹುದು. ಜಿ.ಎಸ್.ಎಸ್. ಕವಿತೆಗಳ ಭಾಷೆ ಈ ಎರಡೂ ನೆಲೆಗಳನ್ನು ಅತಿರೇಕಗಳೆಂದು ತಿಳಿದಂತಿದೆ; ಈ ಅನಪೇಕ್ಷಣೀಯ ಅತಿರೇಕಗಳನ್ನು ತೊರೆದು ಈ ಕವಿತೆಗಳ ಭಾಷೆ ರೂಪುಗೊಳ್ಳುತ್ತದೆ.

ಇನ್ನೂ ಒಂದು ನೆಲೆಯಲ್ಲಿ ಈ ಕವಿತೆಗಳ ಭಾಷಾ ಸ್ವರೂಪವನ್ನು ಗ್ರಹಿಸಬಹುದು: ಶಿಷ್ಟ ಭಾಷೆಗೂ ಕಾವ್ಯಭಾಷೆಗೂ ನಡುವೆ ಇರುವ ಹಾಗೂ ಇರಬೇಕಾದ ಅಂತರ ಕವಿತೆಗಳ ಅಂತರ್ಗತ ಕಾವ್ಯತತ್ವವನ್ನು ಅವಲಂಬಿಸಿರುತ್ತದೆಯಷ್ಟೆ. ಕವಿತೆ ಹಾಗೂ ಜೀವನವ್ಯಾಖ್ಯೆಗಳು ಸಮೀಪವಾದಾಗ, ಅನುಭವದ ಬಿಂಬನವನ್ನು ಕವಿತೆಯ ಶರೀರ ಗುರಿಯಾಗಿಸಿಕೊಂಡಾಗ, ಸಹಜವಾಗಿಯೇ ಶಿಷ್ಟ ಭಾಷೆಯ ಒತ್ತಾಸೆ ಕಾವ್ಯಭಾಷೆಗೆ ಅಧಿಕವಾಗುತ್ತದೆ. ಜಿ.ಎಸ್.ಎಸ್. ಕವಿತೆಗಳ ಭಾಷೆ ಈ ಮಾದರಿಗೆ ನಿದರ್ಶನಗಳನ್ನು ಒದಗಿಸಬಲ್ಲುದು.

ಕನ್ನಡ ನವೋದಯ ಕವಿಗಳ ಕಾವ್ಯಮಾರ್ಗ ಪ್ರೇರಿತರಾಗಿ ತಮ್ಮ ಕವಿತೆಗಳ ಹಾದಿಯನ್ನು ಕಾಣಲುಪಕ್ರಮಿಸಿದ ಜಿ.ಎಸ್.ಎಸ್. ಈ ನಲವತ್ತು ವರ್ಷಗಳಲ್ಲಿ ಕನ್ನಡ ಕವಿತೆ ಹಾದು ಬಂದ ನೆಲೆಗಳನ್ನು ಕಂಡಿದ್ದಾರೆ; ತಮ್ಮದೇ ಆದ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿಯೂ ಇದ್ದಾರೆ. ನವ್ಯ, ಬಂಡಾಯ ಮಾರ್ಗಗಳು ಜಿ.ಎಸ್.ಎಸ್. ಕವಿತೆಗಳ ಪರಿವಲಯದಲ್ಲಿ ನುಗ್ಗಿಬಂದಿರುವುದಕ್ಕೆ ಉದಾಹರಣೆಗಳನ್ನು ಆಯ್ದು ಕೊಡುವುದು ಸುಲಭ. ಆದರೆ ಅದು ನನಗೆ ಅಷ್ಟು ಮುಖ್ಯವಾದ ಅಂಶವೆಂದೇನೂ ತೋರುವುದಿಲ್ಲ. ಕನ್ನಡ ಕಾವ್ಯದ ಪ್ರಧಾನ ಸ್ರೋತವೆಂಬುದು ಹಲವು ಬಗೆಗಳಿಂದ ರಚಿತವಾದುದಾಗಿವೆ. ಈ ಬಹುಮುಖತ್ವವನ್ನು ನಾವಿನ್ನೂ ಗುರುತಿಸಬೇಕಾಗಿದೆ. ಅದಕ್ಕೆ ಅವಶ್ಯವಾದ ವಿಮರ್ಶಾ ಮಾನದಂಡಗಳೂ ಸದ್ಯ ನಮ್ಮಲ್ಲಿಲ್ಲವೆಂದೇ ನನ್ನ ಭಾವನೆ. ಕಾವ್ಯರಚನೆಯ ಉದ್ದೇಶ, ಪರಿಕ್ರಮಗಳ ಬಗೆಗೆ ಬಹಿರಂಗ ಘೋಷಿತವಲ್ಲದಿದ್ದರೂ ಆಂತರಿಕ ಒತ್ತಡಗಳಿಂದ ಖಚಿತವಾಗಿದ್ದ ಈ ಕವಿ ತಾವು ಹಿಡಿದ ಹಾದಿಯಲ್ಲಿ ನಂಬುಗೆಯಿಂದ ಮುನ್ನಡೆದಿದ್ದಾರೆ. ಜತೆಗೆ ಬೆಳೆದ ಕನ್ನಡ ಕವಿತೆಗಳ ಮಾರ್ಗವನ್ನು ತಮ್ಮ ನೆಲೆಗಳನ್ನು ಮುಖಾಮುಖಿ ಆಗಿಸಲು ಆಗಾಗ ಯತ್ನಿಸಿದಾರೆ. ಹೀಗಿದ್ದರೂ ಇವರದ್ದು ಮುಖ್ಯವಾಗಿ ನಂಬುಗೆಯ ಹಾದಿ. ಅದರಲ್ಲಿ ಒಂಟಿಯಾಗಿ ಮುಂದೆ ಸಾಗಿದ್ದಾರೆ. ಕವಿತೆಯ ಓದುಗರು ಅವರ ನಂಬುಗೆಯ ಬೇರಿಗೆ ನೀರಾಗಿದ್ದಾರೆ.

ಸಮಕಾಲೀನ ಕನ್ನಡ ಕಾವ್ಯವನ್ನು ಚರ್ಚಿಸುವ ಲೇಖನಗಳಲ್ಲಿ ಬಹುಮಟ್ಟಿಗೆ ಜಿ.ಎಸ್.ಎಸ್. ಅವರನ್ನು ‘ಸಮನ್ವಯ’ ಮಾರ್ಗದ ಕವಿ ಎನ್ನುವ ಪರಿಪಾಠ ತೀರಾ ಈಚಿನವರೆಗೂ ಬಳಕೆಯಲ್ಲಿತ್ತು. ಇದು ಎಷ್ಟರಮಟ್ಟಿಗೆ ರೂಢಿಗೆ ಬಂದುಬಿಟ್ಟಿದೆ ಎಂದರೆ ಯಾರು ಇದನ್ನು ಮೊದಲು ಮಾಡಿದರು? ಅವರ ಅಭಿಪ್ರಾಯವೇನಿತ್ತು ಎಂಬುದು ಈಗ ಮುಖ್ಯವಾಗಿಲ್ಲ. ಚಲಾವಣೆಯ ನಾಣ್ಯದಂತೆ ಕೈ ಬದಲಾಯಿಸುತ್ತಾ ನಡೆದಿದೆ. ನವೋದಯ ಹಾಗೂ ನವ್ಯ ಕಾವ್ಯಮಾರ್ಗಗಳ ಲಕ್ಷಣಗಳನ್ನು ಒಗ್ಗೂಡಿಸಲು ಯತ್ನಿಸಿದವರು ಎಂಬ ಸರಳ ಅರ್ಥದಲ್ಲಿ ‘ಸಮನ್ವಯ’ ಕವಿ ಎಂಬ ಮಾತು ಚಾಲ್ತಿ ಪಡೆದಿದೆಯಷ್ಟೇ. ಹೀಗೆ ಎರಡೂ ಕಾವ್ಯಮಾರ್ಗಗಳ ಲಕ್ಷಣಗಳನ್ನೂ ಒಟ್ಟಾಗಿಸುವುದು ಎಂದರೇನು? ಅದರ ಸಾಧ್ಯತೆಗಳೆಷ್ಟು? ಯಾವ ಕವಿತೆಗಳಲ್ಲಿ ಈ ಸಂಗತಿ ಗಾಢವಾಗಿ ಕಾಣಬಲ್ಲುದು? ಇಂಥ ಯತ್ನದ ಸಾಫಲ್ಯವೆಷ್ಟು? ಎಂಬಿವೇ ಪ್ರಶ್ನೆಗಳು ಇಂದಿನ ಕಾವ್ಯಾಭ್ಯಾಸಿಗಳ ಎದುರು ನಿಲ್ಲುತ್ತವೆ. ಪಾರಿಭಾಷಿಕ ಪದವಾಗಿ ‘ಸಮನ್ವಯ’ ಎನ್ನುವುದು ಹೇಗೂ ಅರ್ಥವಿಸಬಹುದಾದದ್ದು; ಅಲ್ಲಿ ಇಲ್ಲಿ ಎಲ್ಲೂ ಸಲ್ಲದವರು ಎಂದು ಮೊದಲಾಗಿ ಅಲ್ಲಷ್ಟು, ಇಲ್ಲಷ್ಟು ಎಂದು ಹೊಂದಾಣಿಕೆ ಮಾಡಿದವರು ಎಂದು ಕೂಡ ಹೇಳಲು ಸಾಧ್ಯವಿದೆ. ನವ್ಯಮಾರ್ಗವನ್ನು ವ್ಯಾಖ್ಯಾನಿಸಿದವರ ಚೌಕಟ್ಟಿಗೆ ಸಿಲುಕದ ಇತರ ಕವಿಗಳೆಲ್ಲ ‘ಸಮನ್ವಯ’ ಎನ್ನುವ ತಲೆಪಟ್ಟಿ ಪಡೆದರೆಂದು ತೋರುತ್ತದೆ. ಹೇಗೇ ಇರಲಿ, ಸದ್ಯಕ್ಕಂತೂ ಇದೊಂದು ನಿರುಪಯುಕ್ತ ಚೌಕಟ್ಟು ಎಂದೇ ನನ್ನ ಭಾವನೆ. ಕಾರಣವಿಷ್ಟೆ, ನವ್ಯ ಕಾವ್ಯಮಾರ್ಗದ ವೈವಿಧ್ಯಗಳನ್ನು ಗುರುತಿಸಲು ನವ್ಯ ವಿಮರ್ಶೆ ಹಿಂಜರಿಯಿತಾಗಿ ಆ ವಿಮರ್ಶಾಮಾರ್ಗದ ವರ್ಗೀಕರಣಗಳು ಕಾವ್ಯ ಸಂದರ್ಭವನ್ನು ಏಕಘನಾಕೃತಿಯಲ್ಲಿ ಕಂಡುದರ ಪರಿಣಾಮಕವಾಗಿ ಹುಟ್ಟಿದವು. ಇದು ವಸ್ತುಸ್ಥಿತಿಯ ಸರಿಯಾದ ಗ್ರಹಿಕೆಯಲ್ಲವೆಂಬುದಂತೂ ಖಚಿತ. ಹೀಗಾಗಿ ಜಿ.ಎಸ್.ಎಸ್. ಕವಿತೆಗಳನ್ನು ‘ಸಮನ್ವಯ’ ಮಾರ್ಗದ ಕವಿತೆಗಳು ಎಂದದ್ದು ಕೇವಲ ಚಮತ್ಕಾರದ ನೆಲೆಯ ಮಾತಾಗಿ ತೋರುವುದೇ ಹೊರತು ಮತ್ತೇನೂ ಅಲ್ಲ.

‘ಸಾಮಗಾನ’ದಿಂದ ‘ಪ್ರೀತಿಯಿಲ್ಲದ ಮೇಲೆ’ವರೆಗೆ ಜಿ.ಎಸ್.ಎಸ್. ಬರೆದ ಕವಿತೆಗಳು ಓದುಗ ಸಮುದಾಯದೊಡನೆ ಈಗಾಗಲೇ ಸಂವಾದವನ್ನು ಬೆಳೆಸಿವೆ. ಕಾವ್ಯಾಭ್ಯಾಸಿಗಳು ಅವರ ಕಾವ್ಯದ ಅಧ್ಯಯನವನ್ನು ಮಾಡುತ್ತಲೇ ಬಂದಿದ್ದಾರೆ. ಕವಿಯ ಕಾವ್ಯ ಸಮೃದ್ಧಿಯೊಡನೆ ಸಾಫಲ್ಯವನ್ನು ಕಾಣುತ್ತಿದೆ.

ಈಗ ಇಂಥ ಸಮಗ್ರ ಕವನಗಳ ಸಂಕಲನವೊಂದಕ್ಕೆ ಬರೆಯಬಹುದಾದ ಮುನ್ನುಡಿಗೆ ಹಲವು ಸ್ವರೂಪಗಳು ಸಾಧ್ಯ. ನಾನು ನನಗೆ ಸೂಕ್ತವೆನಿಸಿದ ಈ ಮಾರ್ಗವನ್ನು ಆಯ್ದುಕೊಂಡಿದ್ದೇನೆ. ಕವಿತೆಗಳ ಲೋಕವನ್ನು ಹಂತ ಹಂತವಾಗಿ ಪರಿಚಯಿಸುವ ವಿಧಾನವೂ ನನಗೆ ಪ್ರಿಯವಾದುದಾದರೂ, ಆ ಪಯಣದ ಅನಂತರದ ಕೆಲವು ಹೊಳಹುಗಳನ್ನು ದಾಖಲು ಮಾಡುವ ವಿಧಾನವನ್ನು ಅನುಸರಿಸಿದ್ದೇನೆ. ಇಲ್ಲಿ ಹೇಳಲಾದ ಮಾತುಗಳು ಚರ್ಚೆಗೆ ಒಳಗಾಗಬೇಕಾದಂಥವು ಎಂಬುದು ನನ್ನ ಗಮನದಲ್ಲಿದೆ. ಅಲ್ಲದೆ ಈ ಮಾತುಗಳು ಜಿ.ಎಸ್.ಎಸ್. ಅವರ ಕವಿತೆಗಳನ್ನು ಓದುವವರಿಗಿಂತ, ಅವರ ಕಾವ್ಯವನ್ನು ಕುರಿತು ಚರ್ಚಿಸುವವರನ್ನು ಉದ್ದೇಶಿಸಿವೆ ಎಂಬುದೂ ನನಗೆ ಗೊತ್ತು. ಈ ಸಮಗ್ರ ಸಂಕಲನ ಓದುಗ ಸಮುದಾಯವನ್ನು ಗಮನಿಸುತ್ತಿರುವಂತೆ ವಿಮರ್ಶಕರನ್ನು ಕುರಿತಿದೆಯಾಗಿ ನನ್ನ ಈ ಯತ್ನ ನಿರುಪಯುಕ್ತವಾಗಲಾರದೆಂದು ಭಾವಿಸುತ್ತೇನೆ.

ನಾನು ತುಂಬ ಗೌರವದಿಂದ ನೋಡುವ ನನ್ನ ಮೇಷ್ಟ್ರು ಜಿ.ಎಸ್.ಎಸ್. ಈ ಕೆಲವು ಮಾತುಗಳನ್ನು ಬರೆಯುವ ಹೊಣೆಯನ್ನು ನನಗೆ ನೀಡಿ, ತಮ್ಮ ಪ್ರೀತಿ ವಿಶ್ವಾಸಗಳನ್ನು ತೋರಿಸಿದ್ದಾರೆ. ಅನಿಸಿದ್ದನ್ನು ಹಿಂಜರಿಯದೆ ಪ್ರತಿಪಾದಿಸುವುದು ಅವರು ಕಲಿಸಿದ ಪಾಠಗಳಲ್ಲಿ ಒಂದು. ಈ ಅವಕಾಶ ಒದಗಿಸಿದ್ದಕ್ಕೆ ಅವರಿಗೆ ವಂದನೆಗಳು. ಬರೆಯಲು ಒಪ್ಪಿ ತಡಮಾಡಿದ ನನ್ನನ್ನು ಸಹಿಸಿದ ಡಾ. ಎಸ್. ವಿದ್ಯಾಶಂಕರ ಅವರಿಗೂ ನಮಸ್ಕಾರಗಳು.

– ಕೆ.ವಿ. ನಾರಾಯಣ
೧೯೮೭