ಅನೇಕ ಪೋಷಕರಿಗೆ ಅವರ ಮಗು, ಸುಮಾರು ಒಂದು ವರ್ಷ ವಯಸ್ಸಿನ ಆಸುಪಾಸಿನಲ್ಲಿ ಉಚ್ಚರಿಸುವ ತೊದಲು ನುಡಿಗಳು ಭಾಷಾ ಬೆಳವಣಿಗೆಯ ಚಿಹ್ನೆಯಂತೆ ಗೋಚರಿಸುತ್ತವೆ. ಮಗು ಮಾತನಾಡಲು ಪ್ರಾರಂಭಿಸಿದೆ ಎಂದು ಹರ್ಷಿಸುತ್ತಾರೆ. ಇಲ್ಲಿಂದಲೇ ಭಾಷೆಯ ಕಲಿಕೆ ಮೊದಲಾಯಿತೆಂದು ತಿಳಿಯುತ್ತದೆ. ಇದರಿಂದ ಒಂದು ವರ್ಷದವರೆವಿಗೂ ಮಗುವಿನಲ್ಲಿ ಆಗುವ ಅನೇಕ ಬೆಳವಣಿಗೆಗಳನ್ನು ನಿರ್ಲಕ್ಷಿಸಿದಂತಾಗುತ್ತದೆ.

ಮಕ್ಕಳು, ತಮ್ಮ ಮೊದಲ ತಿಂಗಳುಗಳಲ್ಲೆ, ಮೊದಲ ಪದವನ್ನು ಉಚ್ಚರಿಸುವುದಕ್ಕೆ ಮೊದಲೆ, ಭಾಷೆಯ ಜ್ಞಾನವನ್ನು ಹೊಂದಿರುತ್ತವೆ. ದೊಡ್ಡವರ ಮುಖ ಚರ್ಯೆಯನ್ನು ಅವು ಗಮನಿಸುತ್ತವೆ. ದೊಡ್ಡವರ ಮಾತುಗಳಿಗೆ ಪ್ರತಿಕ್ರಿಯಿಸುತ್ತವೆ. ಈ ಹಂತದಲ್ಲಿ ಮಕ್ಕಳಲ್ಲಿ, ಹಿರಿಯರ ಭಾಷೆಯ ವಿವಿಧ ಧ್ವನಿಗಳನ್ನು ಗುರುತಿಸುವ ಸಾಮರ್ಥ್ಯ ಬೆಳೆಯುತ್ತಿರುತ್ತದೆ. ಮಗು, ತೊದಲು ಮಾತನಾಡಲಾರಂಭಿಸುವುದಕ್ಕೆ ಮುಂಚಿನ  ಈ ಬೆಳವಣಿಗೆ ಯನ್ನು ಮೂರು ಹಂತಗಳಲ್ಲಿ ಗುರುತಿಸಬಹುದು.

1. ಮಾತಿನ ಉತ್ಪತ್ತಿ

2. ಮಾತಿನ ಗ್ರಹಿಕೆ

3. ಮಾತಿನ ಪರಸ್ಪರ ಸಂವಹನ ಕ್ರಿಯೆ

ಮಾತಿನ ಉತ್ಪತ್ತಿ

ಮಗುವಿನ ಭಾಷಾ ಬೆಳವಣಿಗೆಯಲ್ಲಿ, ಅದು ಹುಟ್ಟಿದ ತಕ್ಷಣ ಅಳುವ ‘ಅಳುವಿಗೆ’ ತುಂಬಾ ಮಹತ್ವವಿದೆ. ಮಗು ಮೊದಲಬಾರಿಗೆ ಅಳಲು ಉಸಿರಾಡಲು ಇರುವ ಅಂಗಗಳನ್ನು ಉಪಯೋಗಿಸುತ್ತದೆ. ಮುಂದೆ ಮಾತನಾಡಲು ಅದೇ ಅಂಗಗಳನ್ನು ಉಪಯೋಗಿಸಬೇಕಾಗುತ್ತದೆ. ದೇಹ ರಚನೆಯಲ್ಲಿ ಈ ಅಂಗಗಳ ಮುಖ್ಯ ಕೆಲಸ ಉಸಿರಾಟ ಮತ್ತು ರಕ್ತಕ್ಕೆ ಆಮ್ಲಜನಕವನ್ನು ಸೇರಿಸುವುದು. ಅಳುವುದರಿಂದ ಮಗು, ಮೊದಲ ಬಾರಿಗೆ ತನ್ನ ದನಿಯನ್ನು ಆಲಿಸುತ್ತದೆ. ಇದಕ್ಕೆ ಭಾಷಾ ಬೆಳವಣಿಗೆಯಲ್ಲಿ ತುಂಬಾ ಮಹತ್ವವಿದೆ. ಮಗು ಹುಟ್ಟಿದಂದಿನಿಂದ ಹನ್ನರಡನೆಯ ತಿಂಗಳಿನವರೆಗೆ, ಅದರ ಮಾತಿನ ಉತ್ಪಾದನಾ ಸಾಮರ್ಥ್ಯದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ. ಆ ಬದಲಾವಣೆಗಳನ್ನು ಕೆಳಗಿನಂತೆ ಗುರುತಿಸಬಹುದು.

1. ಜೈವಿಕ ಶಬ್ದಗಳು (1 ರಿಂದ 8 ನೇ ವಾರದವರೆಗೆ)

ಮಗು ಹುಟ್ಟಿದ ಕೆಲವೇ ದಿನಗಳಲ್ಲಿ, ಅದು ಉಚ್ಚರಿಸುವ ಶಬ್ದಗಳು, ಅದರ ಜೈವಿಕ ಸ್ಥಿತಿ ಮತ್ತು ಕ್ರಿಯೆಯನ್ನು ಪ್ರತಿಬಿಂಬಿಸುತ್ತವೆ. ಹಸಿವು, ನೋವು, ಅಸಮಾಧಾನ ಮುಂತಾದ ಸ್ಥಿತಿಗಳಿಂದ, ಅಳುವುದು ಮತ್ತು ಚಡಪಡಿಸುವುದನ್ನು ಪ್ರತಿವರ್ತಿತ ಶಬ್ದಗಳೆಂದು ಕರೆಯಬಹುದು. ಉಸಿರಾಟ, ಆಹಾರ ಸೇವನೆ, ಮಲಮೂತ್ರ ವಿಸರ್ಜನೆ ಮುಂತಾದ ದೈಹಿಕ ಕ್ರಿಯೆಗಳು, ದೇಹದ ಒಳಕ್ಕೆ ಎಳೆದುಕೊಳ್ಳುವಾಗ ಉಂಟಾಗುವ ಶಬ್ದ, ನುಂಗುವಾಗ ಆಗುವ ಶಬ್ದ, ಕೆಮ್ಮು, ಹೂಂಕರಿಸುವುದು ಮುಂತಾದ ಅನೇಕ ರೀತಿಯ ಶಬ್ದಗಳನ್ನು ಉಂಟುಮಾಡುತ್ತದೆ.

ಮಗುವಿನ ಪ್ರತಿವರ್ತಿತ ಶಬ್ದಗಳನ್ನು ವಿವರವಾಗಿ ಅಧ್ಯಯನ ಮಾಡಿದ್ದಾರೆ. ಸಾಮಾನ್ಯವಾಗಿ ಅಳುವಾಗ ಧ್ವನಿ ಪಟಲಗಳು ತೀವ್ರವಾಗಿ ಕಂಪಿಸುತ್ತವೆ. ಧ್ವನಿಯ ತೀವ್ರತೆ ಚುರುಕಾಗಿ ಪ್ರತಿ ನಾಡಿಮಿಡಿತದೊಂದಿಗೆ ಕಡಿಮೆಯಾಗುತ್ತದೆ. ಅಳುವಿನ ಶಬ್ದವನ್ನು ‘ಅ’ ಸ್ವರಕ್ಕೆ ಹೋಲಿಸಬಹುದು.

ಈ ಶಬ್ದಗಳಿಗೂ ಭಾಷೆಗೂ ಖಚಿತವಾದ ಸಂಬಂಧವಿಲ್ಲ. ಆದರೂ, ಅವು ಮಾತಿನ ಕೆಲವು ಲಕ್ಷಣಗಳನ್ನು ಹೊಂದಿವೆ. ಉದಾ : ಮಗು ಈ ಶಬ್ದಗಳನ್ನು ಉತ್ಪಾದಿಸಲು ವಾಯು ಪ್ರವಾಹ ಕಾರ್ಯ ವಿಧಾನವನ್ನು ಅನುಸರಿಸುವುದು ಮತ್ತು ಸ್ವರಗಳ ಉಚ್ಚಾರಣೆ ಲಯಬದ್ಧವಾಗಿರುವುದು.

2. ಗೂ ಶಬ್ದ ಮತ್ತು ನಗುವುದು (8 ರಿಂದ 20 ವಾರಗಳವರೆಗೆ)

ಮಗು ಹುಟ್ಟಿದ ಮೇಲೆ ಹೊರ ಪರಿಸರಕ್ಕೆ ಹೊಂದಿಕೊಳ್ಳಲು ಸ್ಪಲ್ಪ ಸಮಯ ಬೇಕಾಗುವುದು. 6 ರಿಂದ 8 ವಾರಗಳ ಮಧ್ಯದಲ್ಲಿ ಸಾಮಾನ್ಯವಾಗಿ ಮಗು ಒಂದು ಕಡೆ ನೆಲೆಯಾದ ಸ್ಥಿತಿಯಲ್ಲಿರುವಾಗ ಮೊದಲ ‘ಗೂ’ ಶಬ್ದಗಳು ಉತ್ಪತ್ತಿಯಾಗುವವು. ಈ ಶಬ್ದಗಳು ಅಳುವಿನ ಜೊತೆ ಜೊತೆಯಲ್ಲೇ ಬೆಳೆಯುವವು. ನಿಧಾನವಾಗಿ ಮಗು, ತಾಯಿಯ ನಗು ಮತ್ತು ಮಾತಿಗೆ ಪ್ರತಿಕ್ರಿಯಿಸಿದಂತೆ, ಹೆಚ್ಚು ವೈವಿಧ್ಯಮಯವಾಗಿ ಬೆಳೆಯುವುವು. ಅಳುವಿನ ಶಬ್ದಕ್ಕೆ ಹೋಲಿಸಿದಾಗ, ಸಣ್ಣ ದನಿಗಳಿಂದ ಕೂಡಿದ್ದು ಹೆಚ್ಚು ಸಂಗೀತಮಯವಾಗಿರುವುವು. ಹೆಚ್ಚಿನವು ಅನುನಾಸಿಕ ಧ್ವನಿಗಳ ಲಕ್ಷಣಗಳನ್ನು ಹೊಂದಿರುತ್ತವೆ.

ಮುಂದೆ ಈ ಅವಧಿಯಲ್ಲಿ, ‘ಗೂ’ ಶಬ್ದಗಳು ಒಂದಕ್ಕೊಂದು ಸೇರಿಕೊಳ್ಳುತ್ತವೆ. ಸೇರಿಕೊಂಡ ಶಬ್ದಗಳು ಲಯಬದ್ಧವಾಗಿ ಉಚ್ಚಾರ ವಾಗುವುದಿಲ್ಲ. ಅವುಗಳ ಉಚ್ಚಾರಣಾ ವಿಧಾನದಲ್ಲಿ ಸ್ಪಷ್ಟವಾದ ಛಾಯೆ ಗಳಿರುವುದಿಲ್ಲ. ಆದರೂ ಕೆಲವು ಅನುಕ್ರಮಗಳು (‘ಗ’ ಮತ್ತು ‘ಗೂ’ ರೀತಿಯವು) ಮುಂದಿನ ಮಾತಿನ ಕೆಲವು ಶಬ್ದಗಳನ್ನು ಹೋಲುತ್ತದೆ. ಮುಂದೆ ಸುಮಾರು 4ನೇ ತಿಂಗಳ ಅವಧಿಯಲ್ಲಿ ಮಗುವಿನ ನಗು ಹೊರಹೊಮ್ಮುವುದು.

‘ಗೂ’ ಶಬ್ದದ ಅವಧಿಯಲ್ಲಿ, ಮಗು, ಧ್ವನಿ ಉತ್ಪಾದನೆಗೆ ಬೇಕಾಗುವ ಕ್ರಿಯೆಯನ್ನು ಅಭಿನಯಿಸುವಂತೆ ತೋರುತ್ತದೆ. ನಾಲಗೆ ಲಂಬವಾಗಿ ಮತ್ತು ಅಡ್ಡವಾಗಿ ಚಲಿಸಲು ಪ್ರಾರಂಭಿಸುತ್ತದೆ. ನಾಲಗೆಯ ಜೊತೆಯಲ್ಲಿ ಧ್ವನಿ ಪಟಲಗಳನ್ನು ಉಪಯೋಗಿಸಿಕೊಳ್ಳುತ್ತದೆ. ಅನುಕರಣೆಯಿಂದ ದೊಡ್ಡ ಪ್ರಮಾಣ ದಲ್ಲಿ ತುಟಿಗಳ ಚಲನೆ ಶುರುವಾಗುತ್ತದೆ.

3. ಧ್ವನ್ಯಂಗಗಳ ಆಟ: (20 ರಿಂದ 30 ವಾರಗಳವರೆಗೆ)

ಧ್ವನ್ಯಂಗಗಳ ಆಟದ ಶಬ್ದಗಳು, ‘ಗೂ’ ಶಬ್ದಗಳಿಗಿಂತ ಹೆಚ್ಚು ಸ್ಥಿರವಾಗಿ ಮತ್ತು ಉದ್ದವಾಗಿರುತ್ತವೆ. ಹೆಚ್ಚಿನ ಶಬ್ದಗಳು ಒಂದು ವ್ಯಂಜನ ಮತ್ತು ಸ್ಥರಗಳಿಂದ ಕೂಡಿದ್ದು, ಒಂದು ಸೆಕೆಂಡಿನವರೆವಿಗೂ ಉಚ್ಚರಿಸಲ್ಪಡು ತ್ತವೆ. ಈ ಶಬ್ದಗಳು ಪದೇ ಪದೇ ಉಚ್ಚರಿಸಲ್ಪಡುತ್ತವೆ. ಸಾಮಾನ್ಯವಾಗಿ ಈ ಶಬ್ದಗಳು ದೊಡ್ಡ ದನಿಯಲ್ಲಿ ಉಚ್ಚರಿಸಲ್ಪಟ್ಟು, ತಾರಕದಿಂದ ಕೆಳದನಿಗೆ ಹರಿಯುತ್ತದೆ. ಈ ಶಬ್ದಗಳ ಹೊರಹೊಮ್ಮುವಿಕೆಯಲ್ಲಿ ಅನೇಕ ವೈಯಕ್ತಿಕ ವ್ಯತ್ಯಾಸಗಳಿರುತ್ತವೆ. ಮತ್ತು ಈ ಅವಧಿಯ, ಶಬ್ದಗಳ ಉತ್ಪತ್ತಿಯ ಕ್ರಿಯೆ ಯಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ. ಕೆಲವು ದಿನಗಳು, ಕಿರುನಾಲಿಗೆಯಿಂದ ಉಚ್ಚರಿಸಲ್ಪಡುವ ಧ್ವನಿಗಳು ಪ್ರಧಾನವಾಗಿದ್ದರೆ, ಮತ್ತೆ ಕೆಲವು ದಿನಗಳು ತುಟಿಯಿಂದ ಉಚ್ಚರಿಸಲ್ಪಡುವ ಧ್ವನಿಗಳು ಪ್ರಧಾನವಾಗಿರು ತ್ತವೆ. ಮುಂದೆ ತಕ್ಕ ಸಮಯದಲ್ಲಿ, ಮಗು ತೊದಲು ನುಡಿಯಲ್ಲಿ ಮಾತನಾಡಲು ಈ ಶಬ್ದಗಳು ಕೂಡಿಕೊಳ್ಳುತ್ತವೆ. ಈ ಅವಧಿಯ ಉಚ್ಚಾರಣಾ ಕ್ರಿಯೆಯು, ಮಗು ಶಬ್ದಗಳನ್ನು ಉಚ್ಚರಿಸುವ ಅಭ್ಯಾಸವನ್ನು ಮಾಡುತ್ತಿರುವಂತೆ ತೋರುತ್ತದೆ.

4. ತೊದಲು ನುಡಿ: (25 ರಿಂದ 50 ವಾರಗಳವರೆಗೆ)

ಈ ಅವಧಿಯ ಮೊದಲ ಭಾಗದಲ್ಲಿ, ತೊದಲು ನುಡಿಯು, ಧ್ವನ್ಯಂಗಗಳ ಆಟದ ಶಬ್ದಗಳಿಗಿಂತ, ತುಂಬ ಕಡಮೆ ವೈವಿಧ್ಯಮಯವಾಗಿರುತ್ತವೆ. ಮಗು

[ಬಾಬಾ] ಮತ್ತು ಇತರ ಪುನರುಕ್ತ ಶಬ್ದಗಳನ್ನು ಉತ್ಪತ್ತಿ ಮಾಡಲು ಕೆಲವೇ ಶಬ್ದಗಳನ್ನು ಹೆಚ್ಚು ನಿಯಮಿತವಾಗಿ ಮತ್ತು ದೃಢವಾಗಿ ಉಪಯೋಗಿಸುತ್ತದೆ. ಈ ಅವಧಿಯ ಮಧ್ಯಭಾಗದಲ್ಲಿ ಈ ಶಬ್ದಗಳು ಚಿತ್ರವಿಚಿತ್ರವಾಗಿ ಮಾರ್ಪಡುತ್ತವೆ. ಒಂದು ಧ್ವನಿಯಿಂದ ಮತ್ತೊಂದು ಧ್ವನಿಗೆ ಸ್ವರ ಮತ್ತು ವ್ಯಂಜನಗಳು ಬದಲಾಗುತ್ತವೆ. ಈ ಸಂದರ್ಭದಲ್ಲಿ ಮಗುವಿನ ಮಾತಿನ ಲಯ ಮತ್ತು ಧ್ವನಿಯ ಉದ್ದ ದೊಡ್ಡವರ ಮಾತಿಗೆ ಹತ್ತಿರವಾಗಿರುತ್ತದೆ. ಕೆಲವು ತೊದಲು ನುಡಿಗಳು, ಮಗು ಮುಂದೆ ಆಡುವ ಮಾತನ್ನು ಹೋಲುತ್ತ ವಾದರೂ ಅವಕ್ಕೆ ಯಾವುದೇ ಅರ್ಥ ಇರುವುದಿಲ್ಲ.

ಮೊದಲು ಮಗು ಮಾತನಾಡುವ ಭಾಷೆಗೂ, ತೊದಲು ನುಡಿಗೂ ಯಾವುದೇ ಸಂಬಂಧವಿಲ್ಲವೆಂದು ತಿಳಿದಿದ್ದರು. ತೊದಲು ನುಡಿಯಲ್ಲಿ, ಮಗು, ಗೊತ್ತು ಗುರಿಯಿಲ್ಲದಂತೆ, ತನಗೆ ಸಾಧ್ಯವಾಗುವ ಎಲ್ಲ ಶಬ್ದಗಳನ್ನು ಉಚ್ಚರಿಸಲು ಪ್ರಯತ್ನಿಸುತ್ತದೆ ಮತ್ತು ಅದು ಮಾತನಾಡಲು ಶುರು ಮಾಡುವುದಕ್ಕೆ ಮುಂಚೆ ತೊದಲು ನುಡಿ ನಿಂತು ಹೋಗುತ್ತದೆ ಎಂದು ತಿಳಿದಿದ್ದರು. ಆದರೆ ಇತ್ತೀಚಿನ ಅಧ್ಯಯನಗಳು ಈ ಅಭಿಪ್ರಾಯ ತಪ್ಪೆಂದು ತೋರಿಸಿವೆ. ಕೆಲವು ಮಕ್ಕಳು, ಅವು ಮಾತನಾಡಲು ಪ್ರಾರಂಭಿಸಿದ ನಂತರವೂ ಕೂಡ ತೊದಲು ನುಡಿಯನ್ನು ಆಡುತ್ತಿರುತ್ತವೆ. ತೊದಲು ನುಡಿಯಲ್ಲಿ ಉಪಯೋಗಿಸುವ ಅನೇಕ ಶಬ್ದಗಳು, ಮಗು ಮಾತನಾಡುವ ಮೊದಲ ಭಾಷೆಯಲ್ಲಿ ಉಪಯೋಗಿಸುವ ಶಬ್ದಗಳಿಗೆ ಹತ್ತಿರವಾಗುತ್ತವೆ. ಮಿದುಳು, ಮಗುವಿನ ತೊದಲು ನುಡಿಯನ್ನು ಮತ್ತು ಮೊದಲ ಭಾಷೆಯನ್ನು ಒಂದೇ ರೀತಿಯಲ್ಲಿ ನಿಯಂತ್ರಿಸುವಂತೆ ಕಾಣುತ್ತದೆ. ಅದರಿಂದ ಮಗುವಿಗೆ ಅದು ಬೌದ್ದಿಕವಾಗಿ ಅರ್ಥಗಳನ್ನು ತಿಳಿಸಲು ಸಾಧ್ಯವಾದಾಗ ಉಪಯೋಗಿಸಲು ಚೆನ್ನಾಗಿ ಉಚ್ಚರಿಸಲು ಅಭ್ಯಾಸವಾದ ಶಬ್ದಗಳ ಗುಚ್ಛ ದೊರೆತಂತಾಗುತ್ತದೆ.

ವಿವಿಧ ಭಾಷಾ ಪರಿಸರದಲ್ಲಿ ತೊದಲು ನುಡಿ

ಮಕ್ಕಳ ಭಾಷಾ ಪರಿಸರ ಯಾವುದೇ ಆದರೂ, ಅವುಗಳ ತೊದಲು ನುಡಿಯಲ್ಲಿ ಸಾಕಷ್ಟು ಸಾಮ್ಯತೆ ಇರುತ್ತದೆ. ಕೆಳಗಿನ ಪಟ್ಟಿ ಹದಿನೈದು ವಿವಿಧ ಭಾಷಾ ಪರಿಸರದ ಮಕ್ಕಳ ತೊದಲು ನುಡಿಯಲ್ಲಿ ಬರುವ ವ್ಯಂಜನಗಳ ಅಂಶಗಳನ್ನು ತೋರಿಸುತ್ತದೆ. ವ್ಯಂಜನಗಳನ್ನು, ಇಂಗ್ಲಿಶ್ ಭಾಷೆಯಲ್ಲಿ ಹೆಚ್ಚಾಗಿ ಬರುವ ವ್ಯಂಜನಗಳು ಮತ್ತು ಇಂಗ್ಲಿಶ್ ಭಾಷೆಯಲ್ಲಿ ಅಷ್ಟು ಹೆಚ್ಚಾಗಿ ಕಾಣದ ವ್ಯಂಜನಗಳು ಎಂದು ವಿಭಾಗಿಸಲಾಗಿದೆ. ವಿವಿಧ ಭಾಷೆಗಳ ನಡುವೆ ತಾದಾತ್ಮ್ಯ ಇಲ್ಲದಿದ್ದರೂ ಕೂಡ ಅವುಗಳ ನಡುವೆ ಒಂದು ರೀತಿಯ ಹೋಲಿಕೆ ಇರುವುದನ್ನು ಈ ಪಟ್ಟಿಯಲ್ಲಿ ಗಮನಿಸಬಹುದು. [m] ಮತ್ತು [p] ವ್ಯಂಜನಗಳು ಎಲ್ಲ ಭಾಷೆಗಳ ಪರಿಸರದಲ್ಲೂ ಹೆಚ್ಚಾಗಿ ಕಂಡು ಬರುತ್ತವೆ.

5. ಇಂಪಾದ ಮಾತು (9 ರಿಂದ 18 ನೇ ತಿಂಗಳವರೆಗೆ)

ಒಂಭತ್ತನೇ ತಿಂಗಳಿನಿಂದ, ಮಗು, ಯಾವುದಾದರೂ ಪದ ಅಥವಾ ವಾಕ್ಯವನ್ನು ಹಲವು ಬಾರಿ ಕೇಳಿದಾಗ ಅದರ ಉಚ್ಚಾರಣಾ ದನಿಯ ಏರಿಳಿತವನ್ನು ತುಂಬ ಸ್ಪಷ್ಟವಾಗಿ ಅನುಕರಿಸುತ್ತದೆ. ಮಗುವಿನ ಮಾತಿನ ತಾಳಬದ್ಧತೆ, ಸಂಗೀತ ಮತ್ತು ಧ್ವನಿಯಲ್ಲಿ ಬದಲಾವಣೆಯಾಗುವುದು ಈ ಅವಧಿಯ ಪ್ರಮುಖ ಲಕ್ಷಣಗಳು. ಪೋಷಕರು, ತುಂಬ ಸ್ಪಷ್ಟವಾದ ಆಕಾರವುಳ್ಳ ಈ ಮಾತುಗಳಿಗೆ ಉದ್ದೇಶವಿರುವುದೆಂದು ಗ್ರಹಿಸುತ್ತಾರೆ. ಅನೇಕ ಸಾರಿ ಅವುಗಳಿಗೆ ಅರ್ಥಗಳನ್ನು ಆರೋಪಿಸುತ್ತಾರೆ. ಅವುಗಳಿಗೆ, ಮಗು ಪ್ರಶ್ನಿಸುತ್ತಿರುವ, ಕರೆಯುತ್ತಿರುವ, ವಂದಿಸುತ್ತಿರುವ ಏನನ್ನಾದರೂ ಕೇಳುತ್ತಿರುವ ಅರ್ಥಗಳನ್ನು ಆರೋಪಿಸುತ್ತಾರೆ. ಈ ಸಂದರ್ಭದಲ್ಲಿ ಮಗುವಿನ ಆಟಗಳು ಮತ್ತು ಆಚರಣೆಗಳು ಅವುಗಳದೇ ಆದ ಸುಂದರವಾದ ರೂಪಗಳನ್ನು ಪಡೆದುಕೊಳ್ಳುತ್ತವೆ. ಶಬ್ದಗಳು ಸ್ಪಷ್ಟವಾಗಿರುವೆಡೆಯಲ್ಲಿ ಮೂಲಪದಗಳು ಉತ್ಪತ್ತಿಯಾಗುತ್ತವೆ. ಆದರೆ ಮಗು ಏನನ್ನು ಹೇಳುತ್ತಿದೆ ಎಂದು ಸ್ಪಷ್ಟವಾದ ಅರ್ಥವನ್ನು ಕಲ್ಪಿಸಲು ಸಾಧ್ಯವಿಲ್ಲ. ಇವು ಭಾಷಾ ಬೆಳವಣಿಗೆಯ ಸ್ಪಷ್ಟವಾದ ಚಿಹ್ನೆಗಳು. ಬೇರೆ ಬೇರೆ ಭಾಷಾ ಪರಿಸರದಲ್ಲಿ ಬೆಳೆಯುತ್ತಿರುವ ಮಕ್ಕಳು ಬೇರೆ ಬೇರೆ ಶಬ್ದಗಳನ್ನು ಉಚ್ಚರಿಸಲು ಪ್ರಾರಂಭಿಸುತ್ತವೆ.

ಎರಡನೆಯ ಹಂತ : ಮಾತನ್ನು ಗ್ರಹಿಸುವ ಕ್ರಿಯೆ

ತುಂಬಾ ಚಿಕ್ಕ ಮಕ್ಕಳು ಕೂಡ ಅಸಾಧಾರಣವಾದ ಶ್ರವಣ ಸಾಮರ್ಥ್ಯವನ್ನು ತೋರಿಸುತ್ತವೆ. ಮಕ್ಕಳಿಗೆ ಅನೇಕ ಶಬ್ದಗಳನ್ನು ಕೇಳಿಸಿ ಅವುಗಳ ಪ್ರತಿಕ್ರಿಯೆ ಯನ್ನು ದಾಖಲಿಸುವ ಅನೇಕ ಪ್ರಯೋಗಗಳು ನಡೆದಿವೆ, ಉದಾಹರಣೆಗೆ, ಒಂದು ಪ್ರಯೋಗದಲ್ಲಿ ಒಂದು ದಿನದ ಮಕ್ಕಳಿಗೆ ಅವುಗಳ ತಾಯಿಯ ವಿವಿಧ ರೀತಿಯ  ದನಿಯನ್ನು – ತಾಯಿಯ ಸಹಜವಾದ ದನಿ, ಅಸಹಜವಾದ ದನಿ, ಆಗಂತುಕರಂತೆ ಮಾತನಾಡುವ ದನಿ, – ಕೇಳಿಸಲಾಗಿದೆ. ತಾಯಿಯ ಸಹಜವಾದ ದನಿ ಮಾತ್ರ ಮಕ್ಕಳ ಗಮನವನ್ನು ಸೆಳೆದಿವೆ. ಇದರೊಂದಿಗೆ ಬೇರೆ ಅಧ್ಯಯನಗಳು ಹುಟ್ಟಿದ ಕೆಲವೇ ದಿನಗಳಲ್ಲಿ ಮಕ್ಕಳು ಹೇಗೆ ಶಬ್ದ ಬರುವ ಕಡೆಗೆ ತಮ್ಮ ಕತ್ತನ್ನು ತಿರುಗಿಸುತ್ತವೆ ಎಂಬುದನ್ನು ತೋರಿಸಿವೆ. ಹುಟ್ಟಿದ ಎರಡು ವಾರಗಳ ಒಳಗೆ ಮಕ್ಕಳು ಮನುಷ್ಯೇತರ ದನಿಗಿಂತ ಮನುಷ್ಯರ ದನಿಯನ್ನು ಹೆಚ್ಚು ಇಷ್ಟಪಡುತ್ತವೆ. ಈ ರೀತಿಯ ಸಾಮರ್ಥ್ಯ ಎಷ್ಟು ಸ್ಪಷ್ಟವಾಗಿದೆ ಎಂದರೆ, ಕೆಲವು ಸಂಶೋಧಕರು ಈ ಶ್ರವಣ ತರಬೇತಿ ತಾಯಿಯ ಗರ್ಭದಲ್ಲೆ ಆರಂಭವಾಗಿರಬಹುದೆಂದು ಅಭಿಪ್ರಾಯಪಟ್ಟಿರುತ್ತಾರೆ.

ಮಕ್ಕಳು ಯಾವಾಗ ಶಬ್ದಗಳನ್ನು ವಿಂಗಡಿಸುವುದನ್ನು ಕಲಿಯುತ್ತವೆ ಎಂಬ ಪ್ರಶ್ನೆ ಚರ್ಚಾಸ್ಪದವಾದುದು. ಆದರೆ ಕೆಲವು ವ್ಯಂಜನಗಳ ಮತ್ತು ಸ್ವರಗಳ ಗುಚ್ಛವನ್ನು ವಿಂಗಡಿಸುವ ಶ್ರವಣ ಸಾಮರ್ಥ್ಯ, ಸರಿಸುಮಾರು ನಾಲ್ಕು ವಾರಗಳ ಅವಧಿಯಲ್ಲೇ ಇರುತ್ತದೆ. ಈ ವಿಂಗಡಿಸುವ ಸಾಮರ್ಥ್ಯ. ಮುಂದಿನ ದಿನಗಳಲ್ಲಿ ಮಗು ಬೆಳೆದಂತೆಲ್ಲ ಹೆಚ್ಚು ಸೂಕ್ಷ್ಮವಾಗುತ್ತದೆ.

ಕೆಲವೊಂದು ಸಂಶೋಧನೆಗಳಲ್ಲಿ, ಮಕ್ಕಳು, ಈ ವ್ಯತ್ಯಾಸಗಳನ್ನು ದೊಡ್ಡ ವರು ಗ್ರಹಿಸಿದಂತೆಯೇ ಗ್ರಹಿಸುತ್ತವೆ ಎಂದು ತಿಳಿದು ಬಂದಿದೆ. ಗ್ರಹಿಕೆಯ ಪ್ರಯೋಗಗಳಲ್ಲಿ, ದೊಡ್ಡವರು (ಪ) ಮತ್ತು (ಬ) ಶಬ್ದಗಳ ನಡುವಿನ ವ್ಯತ್ಯಾಸವನ್ನು ತುಂಬ ಸ್ಪಷ್ಟವಾಗಿ ಗುರುತಿಸಿದ್ದಾರೆ. ಒಂದು ತಿಂಗಳ ವಯಸ್ಸಿನ ಮಕ್ಕಳಿಗೆ, ವ್ಯಂಜನಗಳ ದನಿಯಲ್ಲಿ ಸ್ವಲ್ಪ ಮಾತ್ರ ವ್ಯತ್ಯಾಸವಿರುವ ಶಬ್ದಗಳ ಗುಚ್ಛವನ್ನು ಕೇಳಿಸಿದಾಗ ಅವೂ ಕೂಡ ಸ್ಪಷ್ಟವಾದ ವ್ಯತ್ಯಾಸವನ್ನು ಗುರುತಿಸಿದವು. ಮಕ್ಕಳ ಪ್ರತಿಕ್ರಿಯೆಯನ್ನು ತುಂಬ ಎಚ್ಚರಿಕೆಯಿಂದ ಗಮನಿಸಿದಾಗ, ಅವು ಎರಡು ರೀತಿಯ (ಪ) ಶಬ್ದವನ್ನು ಅಥವಾ ಎರಡೂ ರೀತಿಯ (ಬ) ಶಬ್ದವನ್ನು ಕೇಳಿಸಿದಾಗ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲಿಲ್ಲ. ಆದರೆ ಒಂದೇ ಬಾರಿ (ಪ) ಮತ್ತು (ಬ) ಶಬ್ದಗಳನ್ನು ಕೇಳಿಸಿದಾಗ ಅವು ಪ್ರತಿಕ್ರಿಯೆ ಯನ್ನು ವ್ಯಕ್ತಪಡಿಸಿವೆ.

ಈ ಸಂಶೋಧನೆಗಳ ಆಧಾರದ ಮೇಲೆ, ಸಂಶೋಧಕರು, ಮಕ್ಕಳ ಧ್ವನಿಗ್ರಹಿಕೆಯ ಉಪಕರಣಗಳು, ವಿವಿಧ ಶಬ್ದಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಂತೆ ಪೂರ್ವನಿಯೋಜಿತವಾಗಿವೆ ಎಂದು ಊಹಿಸಿದ್ದಾರೆ. ಮಕ್ಕಳು, ಭಾಷೆಯ ಶ್ರವಣ ಸಂಬಂಧ ಗುಣಗಳಿಗೆ ಪ್ರತಿಕ್ರಿಯಿಸುವ (ವಿಶೇಷವಾದ ಲಕ್ಷಣಗಳನ್ನು ಗುರುತಿಸುವ ವ್ಯವಸ್ಥೆಯನ್ನು) ಹುಟ್ಟಿನಿಂದಲೇ ಅತಿಚಿಕ್ಕ ವಯಸ್ಸಿನಲ್ಲೆ. ಮಕ್ಕಳು ಹೇಗೆ ವಿವಿಧ ಧ್ವನಿಗಳನ್ನು ಗುರುತಿಸುತ್ತವೆ ಎಂಬುದನ್ನು ಒಪ್ಪಿಕೊಳ್ಳಲಾಗಿದೆ. ಆದರೆ ಈ ಮೂಲಭೂತ ಗ್ರಹಿಕಾ ಸಾಮರ್ಥ್ಯ. ಮಕ್ಕಳ, ಭಾಷೆಯೊಂದಿಗಿನ ಅನುಭವ ಹೆಚ್ಚಾದಂತೆ ಹೇಗೆ ಬದಲಾಗುತ್ತದೆ ಅಥವಾ ಬೆಳೆಯುತ್ತದೆ ಎಂಬ ಪ್ರಶ್ನೆಗೆ ಇನ್ನೂ ಸೂಕ್ತ ಉತ್ತರ ದೊರೆತಿಲ್ಲ.

ಮಾತನ್ನು ತಿಳಿದುಕೊಳ್ಳುವ ಬಗೆ

ಎರಡು ಮತ್ತು ನಾಲ್ಕು ತಿಂಗಳುಗಳ ಮಧ್ಯಭಾಗದಲ್ಲಿ, ಮಕ್ಕಳು, ಕೋಪ, ಸಂತೈಸುವಿಕೆ, ಆಟ, ಮುಂತಾದ ವಿವಿಧ ಅರ್ಥಗಳಿರುವ ಧ್ವನಿಗಳಿಗೆ ಪ್ರತಿಕ್ರಿಯಿಸಲು ಆರಂಭಿಸುತ್ತವೆ. ಸುಮಾರು ಆರು ತಿಂಗಳ ಹೊತ್ತಿಗೆ, ವಿವಿಧ ಮಾತುಗಳಿಗೆ ಅವುಗಳ ಸಂದರ್ಭವನ್ನು ಅರ್ಥೈಸಲು ಪ್ರಾರಂಭಿಸುತ್ತವೆ. ಉದಾಹರಣೆಗೆ, ಟಾಟಾ ಮಾಡುವುದು, ಚಪ್ಪಾಳೆ ತಟ್ಟುವುದು. ಮಗುವನ್ನು ಪ್ರಶ್ನಿಸಿದಾಗ ಯಾವುದಾದರೂ ಒಂದು ವಸ್ತು ಅಥವಾ ಜಾಗದ ಕಡೆಗೆ ಬೆರಳು ಮಾಡಿ ತೋರಿಸುವುದು. ಇವುಗಳೊಂದಿಗೆ ಕೆಲವು ಪದಗಳನ್ನು ಗುರುತಿಸುತ್ತವೆ. ಉದಾಹರಣೆಗೆ, ಮನೆಯ ಸದಸ್ಯರ ಹೆಸರು, ಹೌದು ಅಥವ  ಅಲ್ಲ.

ಹೆಚ್ಚಿನ ಮಕ್ಕಳು, ಮೊದಲನೆಯ ವರ್ಷದ ಕೊನೆಯ ಹೊತ್ತಿಗೆ ಅನೇಕ ಪದಗಳನ್ನು ಅರ್ಥಮಾಡಿಕೊಳ್ಳುತ್ತವೆ. ಎಂಟು ಮಕ್ಕಳಿರುವ ಒಂದು ಅಧ್ಯಯನ ದಲ್ಲಿ, ಆರು ಮಕ್ಕಳು ಇಪ್ಪತ್ತು ಪದಗಳವರೆವಿಗೂ ಅರ್ಥಮಾಡಿ ಕೊಳ್ಳುವ ಕುರುಹನ್ನು ತೋರಿಸಿದರೆ ಒಂದು ಮಗು ಅರವತ್ತು ಪದಗಳ ವರೆವಿಗೂ ಅರ್ಥಮಾಡಿಕೊಂಡಿದೆ. ಈ ಎಲ್ಲ ವಿದ್ಯಮಾನಗಳಲ್ಲಿ ಮಾತುಗಳನ್ನು ಗ್ರಹಿಸುವ ಈ ಸಾಮರ್ಥ್ಯವನ್ನು ಮಕ್ಕಳು ತೊದಲು ನುಡಿಯಾಡಲು ಪ್ರಾರಂಭಿಸುವ ಒಂದು ತಿಂಗಳ ಮುಂಚೆ ಗುರುತಿಸಲಾಗಿದೆ.

ಮೂರನೆಯ ಹಂತ : ಮಾತಿನ ಪರಸ್ಪರ ಸಂವಹನ ಕ್ರಿಯೆ

ಮಗು ಹುಟ್ಟಿದ ಕ್ಷಣದಿಂದ, ತಾಯಿಯು ಅದನ್ನು ತನ್ನ ಮುಂದೆ ಅಂಗೈಯಲ್ಲಿ ಇಟ್ಟುಕೊಂಡು, ಮಗುವಿಗೆ ಯಾವುದೇ ಭಾಷೆಯನ್ನು ಅರ್ಥೈಸಿ ಕೊಳ್ಳುವ ಸಾಮರ್ಥ್ಯವಿಲ್ಲವೆಂಬ ಸತ್ಯ ಗೊತ್ತಿದ್ದರೂ, ಅದರೊಂದಿಗೆ ಮಾತನಾಡು ತ್ತಾಳೆ. ತಾಯಂದಿರಿಗೆ, ಮಕ್ಕಳ ಮೊಟ್ಟಮೊದಲ ಜೈವಿಕ ಶಬ್ದಗಳನ್ನು ಪ್ರಚೋದನೆಯಾಗಿ ಬಳಸಿಕೊಂಡು, ಆದಷ್ಟು ಬೇಗ ಅವು ಗಳೊಂದಿಗೆ ಸಂವಹನ ಕ್ರಿಯೆಯನ್ನು ಉತ್ತೇಜಿಸುವ ಸಹಜ ಪ್ರವೃತ್ತಿಯಿದೆ ಯೆಂದು ಕಾಣುತ್ತದೆ. ಮಗುವಿನ ತೊದಲುಗಳಿಗೆ, ಉದ್ದೇಶವನ್ನು ಆರೋಪಿಸಲು ತಾಯಿ ಯಾವಾಗಲೂ ಸಿದ್ಧವಾಗಿರುತ್ತಾಳೆ ಮತ್ತು ಅದರೊಂದಿಗೆ ತನ್ನ ಸಲ್ಲಾಪವನ್ನು ರೂಪಿಸುತ್ತಾಳೆ.

ಮಕ್ಕಳು ಭಾಷೆಯನ್ನು ಕಲಿಯುವ ವಿಧಾನವನ್ನು, ತಿಳಿಯಲು ವ್ಯವಸ್ಥಿತ ಪ್ರಯತ್ನ ಮಾಡಿದ ದಾಖಲೆ ಅಕ್ಬರ್ ನಾಮಾದಲ್ಲಿ ದೊರಕುತ್ತದೆ. ಮೊಗಲ್ ಚಕ್ರವರ್ತಿ ಅಕ್ಬರ್ (15421605) ಒಂದು ಪ್ರಮೇಯವನ್ನು ರೂಪಿಸಿಕೊಂಡ. ಜನರು, ಮಕ್ಕಳು ಭಾಷೆಯನ್ನು ಕೇಳುತ್ತಾ ಕೇಳುತ್ತಾ ಕಲಿಯುತ್ತಾರೆಂಬುದು ಪ್ರಮೇಯ. ಇದನ್ನು ಪರೀಕ್ಷಿಸಲು, ನಿಜವೇ ಎಂದು ತಿಳಿಯಲು ಒಂದು ಪ್ರಯೋಗವನ್ನು ಮಾಡಿದ.

ಒಂದು ಅರಮನೆಯಂಥ ಕಟ್ಟಡ. ಅದರೊಳಕ್ಕೆ ಯಾವ ಸದ್ದೂ ಕಿಂಚಿತ್ತೂ ನುಸುಳಲಾರದಂತೆ ಮಾಡಿದ್ದರು. ಅಲ್ಲಿ ಅದೇ ಹುಟ್ಟಿದ ಮಗುವನ್ನು ಇರಿಸಿದರು. ಅಲ್ಲಿ ಎಲ್ಲಾ ಸೌಲಭ್ಯಗಳು ಇದ್ದವು. ಅತಿ ನಂಬಿಕಸ್ಥರಾದ ಜನರೇ ಮಗುವನ್ನು ಬೆಳೆಸುವ ಉಸ್ತುವಾರಿ ನಡೆಸುವಂತೆ ಏರ್ಪಾಟು ನಡೆದಿತ್ತು. ಎಲ್ಲರಿಗೂ ವಿಧಿಸಿದ್ದ ಕಟ್ಟಾಜ್ಞೆಯಂತೆ ಯಾರೂ ಅಲ್ಲಿ ಮಾತಾಡಬಾರದು. ಮಾತಿನ ದನಿ ಎಂಬುದು ಮಗುವಿಗೆ ಕೇಳಿಸಬಾರದು.

ವರ್ಷಗಳು ಕಳೆದವು. ಯಾರೂ ರಾಜಾಜ್ಞೆಯನ್ನು ಉಲ್ಲಂಘಿಸಲಿಲ್ಲ. ತನ್ನ ಪ್ರಯೋಗದ ಫಲಿತಾಂಶವನ್ನು ತಿಳಿಯಲು ಅಕ್ಬರ್ ಮಗುವನ್ನು ನೋಡಲು ಬಂದ. ಎಲ್ಲ ಭಾಷೆಗಳಿಗೂ ಮೂಲವಾದ ಭಾಷೆಯೊಂದನ್ನು ಮಗು ಆಡುತ್ತಿರಬಹುದೆಂದು ಆಸೆಪಟ್ಟಿದ್ದ ರಾಜನಿಗೆ ನಿರಾಶೆ ಕಾದಿತ್ತು. ಮಗುವಿಗೆ ಪ್ರಾಣಿಗಳಿಗೆ ಸಹಜವಾದ ಕೆಲವು ಉದ್ಗಾರಗಳಲ್ಲದೆ ಬೇರೇನೂ ತಿಳಿದಿರಲಿಲ್ಲ.

ತಾಯಿ ಮತ್ತು ಮಗುವಿನ ನಡುವಿನ ಮಾತುಕತೆಗೆ ಈ ಒಡನಾಟ ಅಡಿಗಲ್ಲಾಗುತ್ತದೆ. ಮಗು ನಿದ್ರೆಯಿಂದ ಎಚ್ಚರವಾದಾಗ, ಅದಕ್ಕೆ ಹಸಿವಾದಾಗ ಅದರ ಬಟ್ಟೆ ಒದ್ದೆಯಾದಾಗ, ಅದನ್ನು ಪ್ರಶ್ನಿಸುವಂತೆ ಅದರೊಂದಿಗೆ ಮಾತನಾಡುತ್ತಾಳೆ. ಪ್ರಶ್ನೆಗಳ ಮಧ್ಯೆ, ಮಗು ಅದಕ್ಕೆ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತಾಳೆ. ಆದರೆ ಮಗು ಹಾಲು ಕುಡಿಯುವಂತಹ ಸಂದರ್ಭದಲ್ಲಿ ಮೌನವಾಗಿದ್ದು, ಅದಕ್ಕೆ ತೊಂದರೆಯಾಗದಂತೆ ಎಚ್ಚರವಹಿಸುತ್ತಾಳೆ. ಈ ಒಡನಾಟ ಮಗುವಿನ ಮುಂದಿನ ಸಂಭಾಷಣೆಯ ಮೂಲ ರಚನೆಗಳನ್ನು ರೂಪಿಸುತ್ತದೆ.

ಮೊದಲ ವರ್ಷದ ಅವಧಿಯಲ್ಲಿ, ಮಗುವಿನ ಸಂಭಾಷಣಾ ಶೈಲಿಯಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಐದನೇ ವಾರದಲ್ಲಿ, ಮಗುವಿನ ನಗು ಅರಳುತ್ತದೆ. ಎರಡನೇ ತಿಂಗಳ ಕೊನೆಯಲ್ಲಿ ಮಗುವಿನ ‘ಗೂ’ ಶಬ್ದದಿಂದ ಮುಖ್ಯವಾದ ಸ್ವರ ಹೊರಹೊಮ್ಮುತ್ತದೆ. ಕೆಲದಿನಗಳ ನಂತರ ಮಗು ನಗಲು ಪ್ರಾರಂಭಿಸುತ್ತದೆ. ಮಗು, ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚು ಆಸಕ್ತಿ ಹೊಂದಿದಂತೆ, ತನ್ನ ಸುತ್ತಲೂ ನೋಡಿಕೊಳ್ಳಲು ಪ್ರಾರಂಭಿಸು ತ್ತದೆ. ಆಗ ಸುತ್ತಮುತ್ತಲಿನ ವಸ್ತುಗಳ ಬಗ್ಗೆ ಮಗುವಿನ ಗಮನ ಸೆಳೆಯಲು ತಾಯಿಯು ಗಟ್ಟಿದನಿಯಲ್ಲಿ ಮಾತನಾಡುತ್ತಾಳೆ. ಆಕೆಯ ದನಿಯ ಏರಿಳಿತ ಹೆಚ್ಚಾಗುತ್ತದೆ. ತನ್ನ ಮಾತುಗಳನ್ನು ಪುನರುಚ್ಚರಿಸುತ್ತಾಳೆ. ಸಣ್ಣಪುಟ್ಟ ಎದುರುಬದುರಿನ ಆಟಗಳನ್ನು ಆಡುತ್ತಾಳೆ. ಈ ಎಲ್ಲ ಚಟುವಟಿಕೆಗಳು, ತಾಯಿ ಮತ್ತು ಮಗುವಿನ ನಡುವಿನ ಸಂವಹನವನ್ನು ಉತ್ತೇಜಿಸುತ್ತವೆ.

ಆರು ತಿಂಗಳ ತರುವಾಯ, ಮಗುವಿನ ಉದ್ದೇಶಪೂರಿತ ಚಲನೆ ಮತ್ತು ಹುಡುಕಾಟಕ್ಕೆ, ತಾಯಿ ವಿಸ್ತಾರವಾದ ವ್ಯಾಖ್ಯೆಯನ್ನು ನೀಡುತ್ತಾಳೆ. ಅವಳು ಮಗುವಿನ ಎಲ್ಲ ಉಚ್ಚಾರಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಮಗುವಿನ ತೊದಲುನುಡಿ ಮುಂತಾದ ಹೆಚ್ಚು ರಚನಾತ್ಮಕವಾದ ಉಚ್ಚಾರಣೆಗಳಿಗೆ ತನ್ನ ಗಮನವನ್ನು ಹರಿಸುತ್ತಾಳೆ. ಎಂಟನೇ ಮತ್ತು ಹತ್ತನೇ ತಿಂಗಳ ಮಧ್ಯಭಾಗದಲ್ಲಿ ಮಕ್ಕಳು ಬೆರಳು ಮಾಡಿ ತೋರಿಸುವುದರ ಮೂಲಕ ಬೇರೆಯವರ ಗಮನವನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತವೆ. ಇದರೊಂದಿಗೆ ಅವು ದೊಡ್ಡವರನ್ನು ಗಮನಿಸುವುದರ ಮೂಲಕ ಅವರ ಮಾತುಗಳನ್ನು ಅನುಕರಿಸಲು ಪ್ರಯತ್ನಿಸುತ್ತವೆ. ಮಕ್ಕಳಲ್ಲಿ ತೊದಲು ನುಡಿಗಳು ಕಾಣಿಸಿ ಕೊಳ್ಳುವುದರ ಹೊತ್ತಿಗೆ ದೊಡ್ಡವರ ಸಂಭಾಷಣೆಯನ್ನು ಗಮನಿಸುವುದರ ಮೂಲಕ ಮತ್ತು ಅಭ್ಯಾಸ ಮಾಡುವುದರ ಮೂಲಕ, ಸಂಭಾಷಣೆಯ ಬಗ್ಗೆ, ಅದರಲ್ಲಿ ಪಾಲ್ಗೊಳ್ಳುವ ಬಗ್ಗೆ ಅವು ಸಾಕಷ್ಟು ಕಲಿತಿರುತ್ತವೆ.