ಎಂಟಲ್ಲ, ನೂರೆಂಟುಗ್ರಹಗಳೊಗ್ಗೂಡಿರಲು
ಒಳಗಿನಾಕಾಶದಲಿ, ಯಾವ ಜೋಯಿಸ ಬಲ್ಲ?
ನಿಂತ ನೆಲೆಯೆಲ್ಲ ತಲೆಕೆಳಗಾಗಿ, ದಾರಿ
ತಪ್ಪಿದ ಬೆಂಕಿಗೂಳಿಗಳ ಢಕ್ಕಾಢಿಕ್ಕಿಯಲಿ
ನೀಲಿಯ ತುಂಬ ಹೊಗೆ-ಕೆಸರು! ಕೆಳಗೆ ಭೂ-
ಭಾಗವಸ್ತವ್ಯಸ್ತ, ಸುಪ್ತ ಜ್ವಾಲಾಮುಖಿಯ
ಹುತ್ತದಿಂದೆದ್ದು ಕರ್ಬೊಗೆಯ ಕಾಳಿಂಗ
ಕಿಡಿಕಾರಿ ಭುಸುಗುಟ್ಟುತಿವೆ; ಇದ್ದ ದ್ವೀಪ-
ಗಳೆಲ್ಲವೂ ತಳಕಂಡು, ಹೊಸ ಭೂಖಂಡ-
ವೆದ್ದು ಕುಳಿತಿವೆ ಪೆಡಂಭೂತಗಳಂತೆ !
ಗರಿಗೆದರಿ ನಿಂತ ತೆಂಗಿನ ತೀರ ರೆಕ್ಕೆಮುರಿ-
ದರಚುತಿದೆ ಅಲೆಯ ಹೆಡೆ ಬಡಿತಕ್ಕೆ. ಯಾವ
ಟೆಲಿಸ್ಕೋಪಿಗೂ ಕಾಣಿಸದು ಈ ಕ್ರಾಂತಿ,
ಮಾಡಲಾರರೆ ಯಾರೂ ಇದಕ್ಕೆ ಹೋಮಶಾಂತಿ ?