ಮೊಳಹಳ್ಳಿ ಶಿವರಾವ್ — ಸರಳತೆ, ಸೌಜನ್ಯತೆಗಳ ಮೂರ್ತಿ. ದೀನರು ದಲಿತರು ಇವರ ಶೋಷಣೆಯನ್ನು ತಪ್ಪಿಸಲು ದುಡಿದ ಮಹನೀಯರು. ಭಾರತದಲ್ಲಿ ಸಹಕಾರ ಚಳವಳಿ ಇನ್ನೂ ಶೈಶವದಲ್ಲಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ಥಕ ಸಹಕಾರಿ ಸಂಸ್ಥೆಗಳನ್ನು ಕಟ್ಟಿದರು.

ಮೊಳಹಳ್ಳಿ ಶಿವರಾವ್

ಎಪ್ಪತ್ತು ವರ್ಷಗಳ ಹಿಂದಿನ ಕತೆ. ಮಾಂಕು ಒಬ್ಬ ಹರಿಜನ ರೈತ. ಅವನಿಗೆ ಸರಕಾರದಿಂದ ಅಂಗೈಯಗಲವಿರುವ ಭೂಮಿ ಮಾತ್ರ ದರಖಾಸ್ತಿಗೆ ಸಿಕ್ಕಿತ್ತು. ಅದರಲ್ಲಿ ಆತ ಶ್ರಮವಹಿಸಿ ದುಡಿದಿದ್ದ; ಹೊಲಗದ್ದೆ ಕಡಿದಿದ್ದ. ಗಿಡಮರಗಳನ್ನೂ ನೆಟ್ಟಿದ್ದ.

ಆದರೆ ಮಾಂಕುವಿನ ಬಳಿ ಉಳಲು ಎತ್ತುಗಳಿರಲಿಲ್ಲ. ಬಿತ್ತಲು ಬೀಜವೂ ಇರಲಿಲ್ಲ. ಮುಖ್ಯವಾಗಿ ಅದನ್ನೆಲ್ಲ ಕೊಳ್ಳಲು ಅವನ ಬಳಿ ಹಣವೂ ಇರಲಿಲ್ಲ. ಅಪಾರ ಉತ್ಸಾಹ ಅವನಲ್ಲಿತ್ತು.

ಬಡಬಗ್ಗರಿಗೆ ಬೆಳಕು

ಬಳೆಗಾರ ರಾಮಯ್ಯ ಹೆಗ್ಗಡೆ ಆ ಊರಿಗೇ ದೊಡ್ಡ ಕುಳ. ಹಲವರಿಗೆ ಸಾಲಕೊಟ್ಟು ಆತ ಸಾಹುಕಾರ ಎನಿಸಿಕೊಂಡಿದ್ದ. ಹೇರಳ ಆಸ್ತಿಪಾಸ್ತಿ ಸಂಪಾದಿಸಿದ್ದ. ಬಡಬಗ್ಗರಿಗೆ ಸಾಲಕೊಟ್ಟು ಊರು ಸುಲಿಯುವುದರಲ್ಲಿ ಅವನು ನಿಸ್ಸೀಮ. ಅನೇಕರು ಅವನ ಬಳಿ ಒಡವೆಗಳನ್ನು ಒತ್ತೆಯಿಟ್ಟು ಹಣ ಸಾಲ ಪಡೆದಿದ್ದರು. ರಾಮಯ್ಯ ಹೆಗ್ಗಡೆಯ ತಿಜೋರಿಯೊಳಗೆ ಒಮ್ಮೆ ಹೊಕ್ಕ ಒಡವೆಗಳು, ನಗ ಹಿಂತಿರುಗಿ ಬರುವುದೆಂಬುದೇ ಇರಲಿಲ್ಲ.

ಸಾಲ ಕೊಡಲು ರಾಮಯ್ಯ ಯಾವಾಗಲೂ ತಯಾರಾಗಿಯೇ ಇರುತ್ತಿದ್ದ. ಆತ ಕೊಟ್ಟ ಹಣ ನೂರು ರೂಪಾಯಿ; ಆದರೆ ಸಾಲ ತೆಗೆದುಕೊಂಡಾತ ಇನ್ನೂರು ರೂಪಾಯಿ ಪಡೆದಿರುವುದಾಗಿ ರೆದ ಸಾಲದ ಪತ್ರಕ್ಕೆ ರುಜು ಹಾಕಬೇಕಿತ್ತು. ಅದನ್ನು ಹಾಗೆಯೇ ಪಾವತಿ ಮಾಡಬೇಕು. ಊರಲ್ಲಿ ದಿನಗೂಲಿ ಎರಡಾಣೆ (ಬಿಪೈಸೆ) ಇದ್ದರೆ, ಒಂದಾಣೆ ಕೂಲಿಗೆ ರಾಮಯ್ಯನ ತೋಟದಲ್ಲಿ ಬೆವರು ಹರಿಸಿ ದುಡಿಯಬೇಕು. ಆ ಒಂದಾಣೆ ಕೂಲಿಯೂ ದುಡಿದವನಿಗೆ ದಕ್ಕುತ್ತಿರಲಿಲ್ಲ. ಅದು ತೆಗೆದುಕೊಂಡ ಸಾಲಕ್ಕೆ ಬಡ್ಡಿ ಎಂದು ವಜಾ ಆಗುತ್ತಿತ್ತು. ಇದು ಹಲವು ಕಾಲದಿಂದ ಸಾಗಿ ಬಂದಿತ್ತು.

ತೆಗೆದುಕೊಂಡ ಸಾಲ ಸಂದಾಯವೂ ಆಗುತ್ತಿರಲಿಲ್ಲ. ಸಾಲ ತೆಗೆದುಕೊಂಡವನ ಜೀತದ ನೊಗ ಹರಿಯುತ್ತಿರಲಿಲ್ಲ. ಊರಿನಲ್ಲಿ ರಾಮಯ್ಯನಂಥ ಜಿಗಣೆಗಳೇ ತುಂಬಿದ್ದರು. ಆದರೆ ಬಡವರಿಗೆ ಸಾಲ ಸಿಕ್ಕಲು ಬೇರೆ ಮಾರ್ಗೋಪಾಯಗಳೇ ಇರಲಿಲ್ಲ. ಒಟ್ಟಾರೆ ಹತಾಶೆ ಪರಿಸ್ಥಿತಿ ಅವರದು.

ರಾಮಯ್ಯನ ಬಳಿಗೆ ಹಣ ಸಾಲ ಕೇಳಲು ಮಾಂಕು ಹೋದ. ತನ್ನ ಅಹವಾಲನ್ನು ಹೇಳಿಕೊಂಡ. ಆದರೆ ಆಭರಣಗಳನ್ನು ಒತ್ತೆಯಿಡದೆ ರಾಮಯ್ಯ ಹಣ ಬಿಚ್ಚುವವನಲ್ಲ. ಮಾಂಕುವಿನಲ್ಲಿ ಚಿನ್ನಾಭರಣಗಳು ಇಲ್ಲವೆಂದು ಗೊತ್ತಾದಾಗ ರಾಮಯ್ಯ ಸಾಲ ಕೊಡಲು ಹಣ ಇಲ್ಲವೆಂದು ಮುಖಕ್ಕೆ ರಾಚಿದಂತೆ ಅಬ್ಬರಿಸಿ ಅಟ್ಟಿದ.

ಮಾಂಕಿವೀಗ ಅಸಹಾಯಕ. ಇಂತಹ ಸ್ಥಿತಿಯಲ್ಲಿದ್ದಾಗ ಅವನ ನೆರವಿಗೆ ವಕೀಲರೊಬ್ಬರು ಬಂದರು. ಅವರು ರಾಮಯ್ಯನಂಥ ಸಮಾಜ ಶೋಷಕರ ಕಪಿಮುಷ್ಟಿಯಿಂದ ಮಾಂಕುವಿನಂಥ ದೀನದಲಿತ ಬಿಡುಗಡೆಗೆ ಹೋರಾಡು ತ್ತಿದ್ದರು. ಅವರು ತಮ್ಮ ಮುಂದಾಳತ್ವದಲ್ಲಿ ಸ್ಥಾಪಿತವಾದ ಸಹಕಾರಿ ಸಂಘಕ್ಕೆ ಮಾಂಕುವನ್ನು ಕರೆದೊಯ್ದರು.

ಮಾಂಕುವಿಗೆ ಸಹಕಾರಿ ಸಂಘದ ಹೆಸರು, ಅದರ ಸಹಾಯ ಇದಾವುದರ ಬಗೆಗೂ ಏನೂ ಗೊತ್ತಿರಲಿಲ್ಲ.

ಆದರೆ ಸಂಘ ಅವನಿಗೆ ಅಲ್ಪಬಡ್ಡಿಗೆ ಹಣ ಸಾಲವಾಗಿ ಕೊಟ್ಟಿತು. ಅದರಿಂದ ಅವನು ಒಂದು ಜೋಡಿ ಎತ್ತುಗಳನ್ನು ಕೊಂಡುಕೊಂಡ. ಬಿತ್ತನೆಗೆ ಬೀಜವನ್ನೂ ತಂದ. ತನ್ನ ಹೊಲದಲ್ಲಿ ಹುಲುಸಾದ ಬೆಳೆ ಬೆಳೆದ. ಒಳ್ಳೆಯ ಫಸಲೂ ಬಂದಿತು.

ಬೆಳೆದ ಬೆಳೆಯಲ್ಲಿ ಸ್ವಲ್ಪವನ್ನು ಮಾರಾಟ ಮಾಡಿ ಮಾಂಕು ಸಾಲದ ಹೊರೆಯಿಂದ ಬಿಡುಗಡೆ ಹೊಂದಿದ. ಮತ್ತೆ ತಪ್ಪಿಯೂ ರಾಮಯ್ಯನ ಬಳಿಗೆ ಆತ ಹೋಗಲಿಲ್ಲ.

ಹೀಗೆ ಸಹಕಾರಿ ಸಂಘ ಅಂಧಕಾರಮಯವಾಗಿದ್ದ ಮಾಂಕುವಿನಂತಹ ಹಲವು ಮಂದಿ ಬಡಬಗ್ಗರಿಗೆ ಬೆಳಕು ಕಾಣಿಸಿತು. ಸಾಲಕ್ಕಾಗಿ ಮನೆಮಾರು ಕಳೆದುಕೊಳ್ಳುವುದು ತಪ್ಪಿತು.  ದೀನದಲಿತರ ಮಟ್ಟಿಗೆ ಒಂದು ಕಲ್ಪ ವೃಕ್ಷವೆನಿಸಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರದ ಬೀಜವನ್ನು ಬಿತ್ತಿ, ನೀರೆರೆದು ಬೆಳೆಸಿ, ಅದು ಫಲ ಕೊಡುವವರೆಗೂ ಆಧಾರವಾಗಿ ನಿಂತ ಆ ವಕೀಲರೇ ಮೊಳಹಳ್ಳಿ ಶಿವರಾವ್. ಅವರೊಂದು ವ್ಯಕ್ತಿಯಾಗಿ ಅಲ್ಲ, ಸಂಸ್ಥೆಯಾಗಿ ಶ್ರಮಿಸಿದರು.

ಸಹಕಾರ ಮೊಳಹಳ್ಳಿ ಶಿವರಾವ್ ಅವರ ಬಾಳಿನ ಉಸಿರಾಗಿತ್ತು. ಇಂದು ನಾಡಿನ ಪ್ರಗತಿಗೆ ಜೀವಾಳವೆಂದು ಜನತೆ ಮತ್ತು ಸರಕಾರ ನಂಬಿರುವ ಸಹಕಾರ ಚಳವಳಿಗಾಗಿ ಅವರು ಐದು ದಶಕಗಳ ಕಾಲ ತನ್ನ ಸುಖವನ್ನು ಬದಿಗೊತ್ತಿ ಶ್ರಮಿಸಿದರು.

ಬಾಲ್ಯ, ವಿದ್ಯಾಭ್ಯಾಸ

ಸಹಕಾರಿ ಚಳವಳಿಗೆ ಇನ್ನೊಂದು ಹೆಸರಾಗಿದ್ದ ಮೊಳಹಳ್ಳಿ ಶಿವರಾವ್ ಅವರು ಜನಿಸಿದ್ದು ಪುತ್ತೂರಲ್ಲಿ-೧೮೮೦ನೆಯ ಇಸವಿ ಜೂನ್ ತಿಂಗಳ ಮೂರರಂದು.

ಶಿವರಾವ್ ತಂದೆ ರಂಗಪ್ಪಯ್ಯ, ಪೊಲೀಸ್ ಇನ್‌ಸ್ಪೆಕ್ಟರರಾಗಿದ್ದರು.

ತನ್ನ ಐದನೆಯ ವಯಸ್ಸಿನಲ್ಲಿ ಶಿವರಾವ್ ಅವರು ಪುತ್ತೂರಿನ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಶಿಕ್ಷಣ ಆರಂಭಿಸಿದರು. ೧೮೯೨ರಲ್ಲಿ ಲೋವರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ೧೮೯೭ರಲ್ಲಿ ಮದರಾಸ್ ವಿಶ್ವವಿದ್ಯಾನಿಲಯದ ಎಫ್. ಎ. ಪರೀಕ್ಷೆಯಲ್ಲಿ ಪಾಸಾದರು.

ಆದರೆ ಹಲವಾರು ಅಡ್ಡಿ ಆತಂಕಗಳಿಂದಾಗಿ ಅವರಿಗೆ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಮುಂದೆ ಕಲಿಯಲು ಸರಿಯಾದ ಅನುಕೂಲ ಒದಗಲಿಲ್ಲ, ಸರಿಯಾದ ನೌಕರಿಯೂ ಸಿಗಲಿಲ್ಲ. ಇನ್ನು ಏನು ಮಾಡಬೇಕೆಂದು ಅವರು ಯೋಚನೆ ಗೊಳಗಾದರು.

ಸ್ವಲ್ಪ ಕಾಲ ಒಬ್ಬ ಪ್ಲಾಂಟರರ ಮಕ್ಕಳಿಗೆ ಪಾಠ ಹೇಳುತ್ತಿದ್ದರು.

ಆಗ ಶಿವರಾವ್‌ರಿಗೆ ವಕೀಲಿ ಪರೀಕ್ಷೆಯಲ್ಲಿ ತೇರ್ಗಡೆ ಯಾಗಿ ಆ ವೃತ್ತಿಯನ್ನು ಕೈಗೊಳ್ಳಬೇಕೆಂಬ ಯೋಚನೆ ಬಂತು. ಆದುದರಿಂದ ಅವರು ವಕೀಲಿ ಪರೀಕ್ಷೆಯ ವಿದ್ಯಾಭ್ಯಾಸಕ್ಕಾಗಿ ೧೯೦೦ ರಲ್ಲಿ ಪುತ್ತೂರಿಗೆ ಹಿಂತಿರುಗಿದರು. ಅಭ್ಯಾಸ ಆರಂಭಿಸಿದರು.

ಜೀವನೋಪಾಯಕ್ಕಾಗಿ ಒಂದು ವೃತ್ತಿ ಕೈಗೊಂಡಿದ್ದರೂ ಹತ್ತು ಜನರ ಸುಖಕ್ಕಾಗಿ ಶಿವರಾವ್‌ರ ಹೃದಯ ಸದಾ ಕಾಲವೂ ಪರಿತಪಿಸುತ್ತಿತ್ತು. ಪುತ್ತೂರಿಗೆ ಬಂದ ವರ್ಷವೇ ಅವರ ಮುಂದಾಳತ್ವದಲ್ಲಿ ‘ಯೂನಿಯನ್ ಕ್ಲಬ್’ ಸ್ಥಾಪನೆ ಯಾಯಿತು.

ಈ ಕ್ಲಬ್ಬಿನ ಕಾರ್ಯದರ್ಶಿಯಾಗಿ ಶಿವರಾವ್‌ರು ಹಲವು ವಗಳ ಕಾಲ ದುಡಿದರು. ಅದರ ಫಲವಾಗಿ ಕ್ಲಬ್ಬು ಸಾಮಾಜಿಕ. ಸಾಂಸ್ಕೃತಿಕ ಹಾಗೂ ಪ್ರಗತಿಪರ ಚಟುವಟಿಕೆಗಳ ಕೇಂದ್ರವಾಯಿತು. ಪುತ್ತೂರಿನ ಹೆಸರೂ ಪ್ರಸಿದ್ಧಿಗೆ ಬಂತು.

ವಕೀಲರಾಗಿ

ಶಿವರಾವ್‌ರು ವಕೀಲಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ೧೯೦೨ರಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು.

ವೃತ್ತಿಯನ್ನು ಕೈಗೊಂಡ ಅಲ್ಪಾವಧಿಯಲ್ಲಿಯೇ ಶಿವರಾವ್‌ರು ಸಿವಿಲ್ ಮತ್ತು ಕ್ರಿಮಿನಲ್ ವಿಭಾಗದ ಹಲವು ದಾವೆಗಳಲ್ಲೂ ಯಶಸ್ವಿಯಾದರು. ಶಕ್ತಿಶಾಲಿ ನ್ಯಾಯವಾದಿ ಎಂಬ ಗಣನೀಯ ಹೊಗಳಿಕೆಗೆ ಪಾತ್ರರಾದರು.

ಒಂದು ಕ್ರಿಮಿನಲ್ ದಾವೆಯಲ್ಲಿ ಶಿವರಾವ್‌ರ ಒಬ್ಬ ಕಕ್ಷಿಗಾರರಿಗೆ ಪುತ್ತೂರಿನ ಮ್ಯಾಜಿಸ್ಟ್ರೇಟರು ಆರು ತಿಂಗಳ ಶಿಕ್ಷೆ ವಿಧಿಸಿದರು. ಅದರ ವಿರುದ್ಧ ಶಿವರಾವ್ ಅಪೀಲು ಸಲ್ಲಿಸಲು ನಿಶ್ಚಯಿಸಿದರು. ಜಾಮೀನಿನ ಮೇಲೆ ತನ್ನ ಕಕ್ಷಿಗಾರರನ್ನು ಬಿಡುಗಡೆ ಮಾಡಲು ಕೋರಿದರು.

ಆದರೆ ಜಾಮೀನಿನ ಮೇಲೆ ಕಕ್ಷಿಗಾರನನ್ನು ಬಿಡಲು ಮ್ಯಾಜಿಸ್ಟ್ರೇಟರು ಒಪ್ಪಲಿಲ್ಲ. ಕಟಕಟೆಯಲ್ಲಿ ನಿಂತಿದ್ದ ಆ ಕಕ್ಷಿಗಾರನ ಎರಡೂ ಕೈಗಳಿಗೆ ಪೊಲೀಸರು ಬೇಡಿ ತೊಡಿಸಿದರು.

ತನಗೆ ಒದಗಿದ ದುಸ್ಥಿತಿಯಿಂದ ಆ ಬಡ ಕಕ್ಷಿಗಾರನ ಕಣ್ಣುಗಳಿಂದ ದಳ ದಳ ನೀರು ಸುರಿಯಲಾರಂಭಿಸಿತು.

ತನ್ನ ಅಭಿಮಾನಿಗಳೆಂದರೆ ಜೀವಕ್ಕೆ ಜೀವ ಕೊಟ್ಟು ಹೋರಾಡುತ್ತಿದ್ದ ಶಿವರಾವ್ ಅದನ್ನು ನೋಡಿದರು. ಅವರ ಸ್ವಾಭಿಮಾನ ಕುದಿಯಿತು. ಕಕ್ಷಿಗಾರನ ವ್ಯಥೆ ಕಂಡು ಕರುಳು ಚುರ್ರೆಂದಿತು. ಕೂಡಲೇ ಹೆಗಲಿನಲ್ಲಿದ್ದ ಬೆಲೆಬಾಳುವ ಶಾಲನ್ನು ತೆಗೆದು ಕಕ್ಷಿಗಾರನ ಕಣ್ಣೀರನ್ನು ತೊಡೆದರು. “ಹೆದರಬೇಡ, ನಾನು ನ್ಯಾಯವಾದಿ ನಿಜವೆಂದಾದರೆ ನಿನಗೆ ಬಿಡುಗಡೆ ಮಾಡಿಸುತ್ತೇನೆ. ಇಲ್ಲವಾದರೆ ಈ ದಾವೆಯಲ್ಲೇ ನನ್ನ ವೃತ್ತಿಯನ್ನು ಬಿಟ್ಟೆನೆಂದು ತಿಳಿದುಕೋ” ಎಂದು ಸಮಾಧಾನಮಾಡಿದರು.

ಅನಂತರ ಶಿವರಾವ್‌ರು ಸುಮ್ಮನೆ ಕೂಡಲಿಲ್ಲ. ಕಾರ್ಯಪ್ರವೃತ್ತರಾದರು.

ಆಗ ಜಿಲ್ಲಾಧಿಕಾರಿಗಳು ಸುಬ್ರಹ್ಮಣ್ಯದಲ್ಲಿ ಮೊಕ್ಕಾಂ ಹಾಕಿದ್ದರು.

ರಾತ್ರೋರಾತ್ರಿ ಎತ್ತಿನ ಗಾಡಿ ಕಟ್ಟಿಸಿಕೊಂಡು ಶಿವರಾವ್‌ರು ನಲವತ್ತು ಮೈಲಿ ದೂರದಲ್ಲಿದ್ದ ಸುಬ್ರಹ್ಮಣ್ಯಕ್ಕೆ ಹೋದರು. ಜಿಲ್ಲಾಧಿಕಾರಿಗಳಿಂದ ತಮ್ಮ ಕಕ್ಷಿಗಾರನನ್ನು ಬಿಡುಗಡೆ ಮಾಡಲು ಆದೇಶ ದೊರಕಿಸಿ ಕೊಳ್ಳುವುದರಲ್ಲೂ ಸಫಲರಾದರು. ಶಿವರಾವ್‌ರ ವಾದ ವೈಖರಿಗೆ ಮೆಚ್ಚಿ ಜಿಲ್ಲಾಧಿಕಾರಿಗಳು ಅಂಥ ಆದೇಶ ಬರೆದುಕೊಟ್ಟರು.

ಮೊಳಹಳ್ಳಿ ಶಿವರಾವ್‌ರ ವರ್ಚಸ್ಸಿನೆದರು ಎಲ್ಲರೂ ಮಂತ್ರಮುಗ್ಧರಾಗುತ್ತಿದ್ದರು. ಅವರ ಪ್ರಭಾವಕ್ಕೊಳಗಾಗುತ್ತಿದ್ದರು.

ಒಂದು ಕೇಸಿನಲ್ಲಿ ಶಿವರಾವ್‌ರಿಗೆ ಬೇರೇನೋ ಕೆಲಸದ ನಿಮಿತ್ತ ನ್ಯಾಯಾಲಯದಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ. ತಮ್ಮ ಕಕ್ಷಿಗಾರರಿಗೆ ವಾಯಿದೆ ಪ್ರಾರ್ಥಿಸಿಕೊಳ್ಳಲು ಹೇಳಿದ್ದರು. ಆದರೆ ಮುನಿಸೀಫರು ವಾಯಿದೆ ಕೊಡದೆ ದಾವೆಯನ್ನು ತಳ್ಳಿಹಾಕಿದರು. ಕಕ್ಷಿಗಾರರಿಗೆ ದಿಕ್ಕು ತೋಚದಾಯಿತು.

ಶಿವರಾವ್‌ರು ಅನಂತರ ದಾವೆಯನ್ನು ಪುನ: ಪರಿಶೀಲಿಸಲು ಕೇಳಿಕೊಂಡಾಗಲೂ ಮುನಸೀಫರು ಒಪ್ಪಲಿಲ್ಲ ಕರ್ತವ್ಯ ನಾನು ಮಾಡಿದ್ದಾಗಿದೆ ಮತ್ತೆ ಪರಿಶೀಲನೆ ಅಸಾಧ್ಯ’ ಎಂದರು. ಕೇವಲ ಕಾನೂನಿನ ಚಲಾವಣೆಯೊಂದೇ ತನ್ನ ಹೊಣೆ ಎಂಬಂತಿತ್ತು ಅವರ ಮಾತು. ಆದರೆ ಮರುದಿನ ಮುನಸೀಫರು ವಿಚಿತ್ರ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಯಾವ ನ್ಯಾಯವಾದಿಯೂ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಮರುದಿನವೂ ಅದೇ ನಿಶ್ಯಬ್ದ-ನೀರವ-ನ್ಯಾಯವಾದಿಗಳ ಗುಜು ಗುಜು ಸದ್ದು ಇಲ್ಲವೇ ಇಲ್ಲ.

ಯಥಾಪ್ರಕಾರ ನ್ಯಾಯವಾದಿಗಳು ಹಾಜರಾಗಿ, ಮತ್ತೆ ನ್ಯಾಯಾಲಯದ ಕೆಲಸ ಕಾಂiiಗಳು ನಡೆಯಬೇಕಾದರೆ ಮುನಸೀಫರು ಸ್ವತ: ಶಿವರಾವ್‌ರ ಮನೆಗೆ ಹೋಗ ಬೇಕಾಯಿತು. ಮಾತ್ರವಲ್ಲ, ತನ್ನಿಂದಾದ ಅಚಾತುರ್ಯವನ್ನು ಸರಿಪಡಿಸಿಕೊಡಬೇಕಾಯಿತು. ಶಿವರಾವ್‌ರ ಪ್ರಭಾವ ಎಷ್ಟೆಂಬುದು ಅವರಿಗೆ ಗೊತ್ತಾಗಿತ್ತು.

ಜನರ ನಂಬಿಕೆ, ಪ್ರೋತ್ಸಾಹ ಶಿವರಾವ್‌ರಿಗೆ ಧಾರಾಳವಾಗಿತ್ತು. ಆದರೆ ಹಣಸಂಪಾದನೆಯ ದಾರಿಯನ್ನು ಕಡೆಗಣಿಸಿದರು. ತನ್ನಲ್ಲಿಗೆ ಬಂದ ಪ್ರತಿಯೊಬ್ಬ ಕಕ್ಷಿಗಾರನಿಗೂ ಸಾಧ್ಯವಾದಮಟ್ಟಿಗೂ ನ್ಯಾಯಾಲಯದಿಂದ ಹೊರಗೆಯೇ ವಾದ ವಿವಾದಗಳನ್ನು ಪರಿಹರಿಸಿಕೊಳ್ಳುವುದು ಯೋಗ್ಯವೆಂದು ಸಲಹೆ ಕೊಡುತ್ತಿದ್ದರು.

ಭೂಮಾಲೀಕರ ಸಂಘ

ಮೊಳವಳ್ಳಿಯವರು ಜನಪ್ರಿಯ ವಕೀಲರೇನೋ ಆದರು. ಆದರೆ ಇದರಿಂದ ಅವರಿಗೆ ತೃಪ್ತಿಯಾಗಲಿಲ್ಲ. ಅಂತರಂಗದಲ್ಲಿ ಸಾರ್ವಜನಿಕ ಸೇವಾಕಾಂಕ್ಷೆ ಕುದಿಯುತ್ತಿತ್ತು. ನೂರು ಮಾತಿಗಿಂತ ಒಂದು ಕೃತಿ ಮೇಲೆನ್ನುತ್ತಿದ್ದರು ಅವರು. ಅವರ ದೂರದರ್ಶಿತ್ವ, ಮೇಧಾವಿತನಗಳ ಫಲವಾಗಿ ೧೯೦೭ರಲ್ಲಿ ಪುತ್ತೂರಿನಲ್ಲಿ ಭೂಮಾಲೀಕರ ಸಂಘವೊಂದು ಸ್ಥಾಪನೆ ಗೊಂಡಿತು. ಅವರೇ ಅದರ ಮುಖಂಡರಾದರು.

ತಾಲೂಕಿನಲ್ಲಿ ಅಡಕೆ ಬೆಳೆಗಾರರ ಸಂಖ್ಯೆಯೇ ಹೆಚ್ಚು. ಅವರಿಗೆ ಬೇಕಾದ ಸಾಲ ಸೌಲಭ್ಯಗಳನ್ನೊದಗಿಸುವುದೂ ಮಳೆಗಾಲದಲ್ಲಿ ಅಡಕೆ ಬೆಳೆಗೆ ಭಯಂಕರವಾದ ಕೊಳೆ ರೋಗ ಬಂದಾಗ ಪರಿಹಾರವನ್ನು ಒದಗಿಸುವುದೂ ಈ ಸಂಘದ ಗುರಿಯಾಗಿತ್ತು.

ಈ ಬಗೆಯ ಸಹಾಯ ಸಹಕಾರ ಅದುವರೆಗೆ ಜಿಲ್ಲೆಯಲ್ಲಿ ಯಾರೂ ಕಂಡು ಕೇಳಿ ಅರಿಯದ ವಿಷಯವಾಗಿತ್ತು. ಶಿಸ್ತುಬದ್ಧವಾದ ಬದುಕಿಗೆ ಶಿವರಾವ್‌ರು ಇನ್ನೊಂದು ಹೆಸರಾಗಿದ್ದರು. ತನ್ನಿಂದ ಸ್ಥಾಪಿತವಾದ ಸಂಘ ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ದುಡಿಯಬೇಕೆಂಬುದೇ ಅವರ ಬಾಳುವೆಯ ಧ್ಯೇಯವಾಗಿತ್ತು. ಹತ್ತು ಜನ ಒಟ್ಟಾಗಿ ಸಹಕರಿಸಿದರೆ ಹೇಗೆ ಊರು ಅಭಿವೃದ್ಧಿಯಾಗುತ್ತದೆಂದು ತೋರಿಸಿಕೊಟ್ಟರು.

ಸಹಕಾರಿ ಚಳವಳಿ

ಇದೇ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಆಗ ತಾನೇ ಸಹಕಾರಿ ಚಳವಳಿ ಉದಯಿಸಲಾರಂಭಿಸಿತ್ತು. ಅದು ಶಿವರಾವ್‌ರನ್ನು ತನ್ನತ್ತ ಸೆಳೆದುಕೊಂಡಿತು. ನಿತ್ಯ ಬಡತನದಿಂದ ಬಳಲುತ್ತಿರುವ ಜನರ ಸೌಕರ್ಯ ಸೌಲಭ್ಯಗಳು ವೃದ್ಧಿಸಬೇಕೆಂಬ ವಿಶಾಲದೃಷ್ಟಿ ಅವರ ಹೃದಯದಲ್ಲಿ ಮೂಡಿತು. ಅದಕ್ಕೆ ಸಹಕಾರವೇ ಪ್ರಧಾನ ಉಪಾಯವೆಂದು ಮನಗಂಡರು. ಸಹಕಾರ ಅವರ ಜೀವನ ಮಾರ್ಗದ ದೃಷ್ಟಿಯನ್ನೇ ಬದಲಿಸಿತು. ಅದಕ್ಕೆ ತಕ್ಕ ಸೂಕ್ಷ್ಮಬುದ್ಧಿ, ಶ್ರದ್ಧೆ, ಸಾಹಸಗುಣಗಳು ಅವರಲ್ಲಿದ್ದವು. ಸಹಕಾರದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ನಂಬಿದರು. ಆ ಮಾರ್ಗದಲ್ಲಿ ಸೇವೆ ಸಲ್ಲಿಸುವುದೇ ತಮ್ಮ ಮುಖ್ಯ ಕರ್ತವ್ಯವೆಂದು ಅವರು ಕಾರ‍್ಯೋನ್ಮುಖರಾದರು.

ಸಹಕಾರಿ ಬ್ಯಾಂಕು ಎಂದರೆ ಏನೆಂದೇ ಜನರಿಗೆ ಆಗ ಗೊತ್ತಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಸಹಕಾರಿ ಬ್ಯಾಂಕನ್ನು ೧೯೦೯ರಲ್ಲಿ ಶಿವರಾವ್‌ರು ಪುತ್ತೂರಿನಲ್ಲಿ ಆರಂಭಿಸಿದರು. ಲಾಭಕೋರರ ಬಿಗಿಮುಷ್ಠಿ ಯಿಂದ ದೀನದಲಿತರನ್ನು ಪಾರು ಮಾಡಿದ್ದು ಇದೇ ಬ್ಯಾಂಕು.

ಎಲ್ಲರೂ ಅಲ್ಪ ಸಂಖ್ಯೆಯಲ್ಲಿ ಹಣದ ಪಾಲನ್ನು ತೊಡಗಿಸಿ, ದೊಡ್ಡ ಮೊತ್ತದ ಸಾಲ ಪಡೆದು ಕೃಷಿ ಅಭಿವೃದ್ಧಿ ಮಾಡಲು ಈ ಬ್ಯಾಂಕೊಂದು ಕಾಮಧೇನುವಾಗಿತ್ತು. ದೀನದಲಿತರಿಗೆ ಕೂಡ ಗಿರಿವಿಯ ಅಗತ್ಯವಿಲ್ಲದೆ ಸಾಲ ಸಿಕ್ಕಿತು.

ಮುಂದೆ ಈ ಬ್ಯಾಂಕಿನ ಶಾಖೋಪಶಾಖೆಗಳು ಹಳ್ಳಿ, ಪಟ್ಟಣಗಳಲ್ಲೆಲ್ಲಾ ಹರಡಿದವು. ಅದರ ತತ್ವವನ್ನು ಬಿತ್ತಿ ಬೆಳೆಸುವುದಕ್ಕಾಗಿ ಶಿವರಾವ್‌ರು ಹಳ್ಳಿಹಳ್ಳಿಗಳನ್ನು ಸುತ್ತಿದರು. ಹಗಲು ರಾತ್ರಿ ಎನ್ನದೆ ತಿರುಗಾಡಿದರೂ ಅವರಿಗೆ ಶ್ರಮವೆನಿಸಲಿಲ್ಲ- ಬದಲಾಗಿ ಉಲ್ಲಾಸ ಬರುತ್ತಿತ್ತು. ಉತ್ಸಾಹದ ಚಿಲುಮೆಯಾಗುತ್ತಿದ್ದರು.

ಜನರಿಂದ ಜನರಿಗಾಗಿ ಈ ಸಹಕಾರಿ ಸಂಘಗಳ ಸ್ಥಾಪನೆಗೆ ಶಿವರಾವ್‌ರು ಎಲ್ಲರ ಬೆಂಬಲವನ್ನು ಸಂಪಾದಿಸಿದರು. ಮಾತ್ರವಲ್ಲ, ಒಂದು ಸಂಸ್ಥೆ ಹೇಗೆ ರೂಪುಗೊಳ್ಳಬೇಕೆಂಬ ಬಗ್ಗೆ ಜನರ ಆಶೋತ್ತರಗಳನ್ನು ಸಂಗ್ರಹಿಸಿದರು.

ಹೀಗೆ ಹಳ್ಳಿ ಹಳ್ಳಿಗಳಲ್ಲಿ ಸಹಕಾರಿ ಸಂಘಗಳು ತಲೆಯೆತ್ತಿದಾಗ ಅವೆಲ್ಲಕ್ಕೂ ಹಣ ಒದಗಿಸಲು ಒಂದು ಪ್ರಮುಖ ಬ್ಯಾಂಕು ಬೇಕೆಂದು ಶಿವರಾವ್‌ರಿಗೆ ಅನಿಸಿತು.

ಅವರ ಪ್ರಯತ್ನದಿಂದ ಪುತ್ತೂರಿನಲ್ಲಿ ‘ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕು’ ೧೯೧೩ರಲ್ಲಿ ಸ್ಥಾಪನೆಯಾಯಿತು. ಶಿವರಾವ್‌ರ ಖ್ಯಾತಿ ದಕ್ಷಿಣ ಭಾರತದಲ್ಲೆಲ್ಲ ಹಬ್ಬಿತು. ಅಷ್ಟೇ ಅಲ್ಲ, ಸಹಕಾರ ತತ್ವದ ಪರಮ ಪವಿತ್ರ ಕ್ಷೇತ್ರವೆಂದು ಈ ಜಿಲ್ಲೆ ಪ್ರಖ್ಯಾತಿ ಹೊಂದಿತು.

೧೯೧೬ರಲ್ಲಿ ಇಂಗ್ಲೆಂಡಿನಲ್ಲಿ ಅಂತರರಾಷ್ಟ್ರೀಯ ಸಹಕಾರಿ ಸಮ್ಮೇಳನ ಜರುಗಲಿತ್ತು ಅದಕ್ಕೆ ಭಾರತದ ಸಹಕಾರಿ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಯಾರನ್ನಾದರೂ ಕಳುಹಿಸ ಬೇಕೆಂದು ಸರಕಾರ ಇಚ್ಛಿಸಿತು. ಅಂದಿನ ಮದರಾಸ್ ಪ್ರಾಂತದ ರಾಜ್ಯಪಾಲರಾಗಿದ್ದ ಸರ್ ಅಲೆಗ್ಸಾಂಡರ ಕಾರ್ಡ್ಯೂ ಅವರಿಗೆ ಯೋಗ್ಯ ಪ್ರತಿನಿಧಿಯೆಂದು ಸ್ಪಷ್ಟವಾಗಿ ಅನಿಸಿದ ಏಕೈಕ ವ್ಯಕ್ತಿ ಶಿವರಾವ್‌ರು.

ಹರಿಜನರಿಗೆ ಸಹಾಯ

೧೯೨೩ರಲ್ಲಿ ಸಹಕಾರಿ ಬ್ಯಾಂಕನ್ನು ಶಿವರಾವ್‌ರು ಮಂಗಳೂರಿಗೆ ವರ್ಗಾಯಿಸಿದರು. ಇದರಿಂದಾಗಿ ಇನ್ನಷ್ಟು ವಿಶಾಲಕ್ಷೇತ್ರಕ್ಕೆ, ವಿಶಾಲ ವಿಧಾನದಲ್ಲಿ ಅದರ ಸಹಾಯ ಪಸರಿಸಲು ಸಾಧ್ಯವಾಯಿತು. ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ನೂರಕ್ಕೂ ಹೆಚ್ಚು ಸಹಕಾರಿ ಸಂಘಗಳೂ ಹಾಗೂ ಅವುಗಳ ಅಂಗಸಂಸ್ಥೆಗಳು ಹರಡಿವೆ. ಜನರಿಗೆ ವಿವಿಧ ರೀತಿಯಲ್ಲಿ ಸಹಾಯಕವಾಗಿವೆ. ಅದಕ್ಕೆ ಶಿವರಾವ್‌ರ ಮಾರ್ಗದರ್ಶನ ದೂರದರ್ಶಿತ್ವಗಳೇ ಕಾರಣ.

ಸಾರ್ವಜನಿಕ ಹಿತಸಾಧನೆಯ ಕಾರ್ಯಗಳ ಶಿಸ್ತು, ನಿಯಮಗಳನ್ನು ಶಿವರಾವ್‌ರು ಜಿಲ್ಲೆಯವರಿಗೆ ಹೇಳಿಕೊಟ್ಟರು, ಅವರು ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ರಾಗಿಯೂ ದುಡಿದರು. ಅವರ ಮುಂದಾಳತ್ವವೇ ಅದರ ತಾಯಿಬೇರಾಗಿತ್ತು.

ಹರಿಜನರಿಗೆ ಆಗ ಸಾಲ ಕೊಡುವ ಉದಾರಿಗಳೇ ಇರಲಿಲ್ಲ. ಮೊದಲೇ ಅತ್ಯಂತ ದಾರುಣ ಸ್ಥಿತಿಯಲ್ಲಿ ಜೀವಿಸುತ್ತಿದ್ದ ಅವರನ್ನು ಶೋಷಿಸುತ್ತಿದ್ದರೇ ಹೊರತು ಪೋಷಿಸುವವರಿರಲಿಲ್ಲ. ಸಾಲ ಕೊಟ್ಟರೂ ಗುಲಾಮರಂತೆ ದುಡಿಸಿಕೊಳ್ಳುತ್ತಿದ್ದರು. ಈ ಪರಿಸ್ಥಿತಿಯನ್ನು ಮನಗಂಡು ಹರಿಜನರಿಗೆ ಸಾಲಸೌಲಭ್ಯ ಕಲ್ಪಿಸಿಕೊಡಲು ಶಿವರಾವ್‌ರು ಸಹಕಾರಿ ಸಂಘವೊಂದನ್ನು ಸ್ಥಾಪಿಸಿದರು.

ಅವರ ಪ್ರಯತ್ನದಿಂದ ಮಹಿಳೆಯರ ಕೈಗಾರಿಕಾ ಸಂಘವೊಂದು ತಲೆಯೆತ್ತಿತ್ತು. ಗ್ರಾಮೀಣ ಮಹಿಳೆಯರಿಗೆ ಅದು ಸಾಲ ಸವಲತ್ತು ನೀಡುತ್ತಿತ್ತು.

ಏಷ್ಯ ಖಂಡದಲ್ಲೇ ಸರ್ವ ಪ್ರಥಮ ಎನ್ನಲಾದ ಸಹಕಾರಿ ಮುದ್ರಣಾಲಯವೊಂದನ್ನು ಶಿವರಾವ್‌ರು ಮಂಗಳೂರಿನಲ್ಲಿ ತೆರೆದರು. ಅಷ್ಟೇ ಅಲ್ಲ ಜಿಲ್ಲೆಯ ಕೃಷಿಕರು ಬೆಳೆದ ಸಾಮಾಗ್ರಿಗಳ ಮಾರಾಟಕ್ಕಾಗಿ ಸಂಘವೊಂದನ್ನು ಸ್ಥಾಪಿಸಿದರು.

ಮನೆ ಕಟ್ಟಡಗಳಿಗೆ ನೆರವು ನೀಡುವ ಸಂಘವೊಂದರ ಉದಯವೂ ಅವರ ಬಡಜನರ ನಿಷ್ಪಪಕ್ಷಪಾತ ಗುಣದ ಫಲ. ಇದರಿಂದ ಹಲವರಿಗೆ ಸ್ವಂತ ಮನೆ ಕಟ್ಟಲು ಸಹಾಯ ಸಿಕ್ಕಿತು.

ಶಿವರಾವ್‌ರ ಸಹಕಾರ ಚಳವಳಿ ಎಷ್ಟೊಂದು ವ್ಯಾಪಾಕವಾಯಿತೆಂದರೆ ಸಹಕಾರ ತತ್ವದ ಅಭಿವೃದ್ಧಿಗಾಗಿಯೇ ಜಿಲ್ಲಾಮಟ್ಟದ ಸಂಘವೊಂದನ್ನು ಅವರು ರೂಪಿಸಿದರು.

ಸಹಕಾರ ತತ್ವದ ಪ್ರಚಾರಕ್ಕಾಗಿ ‘ಸಹಕಾರಿ’ ಮಾಸ ಪತ್ರಿಕೆ, ‘ಸಹಕಾರಿ ಗ್ರಂಥ ಭಂಡಾರ’ ಗಳೂ ಆರಂಭವಾದವು.

ಸುವ್ಯವಸ್ಥೆಯ ಕ್ರಮ

ಸಹಕಾರಿ ಸಂಘ ಸಂಸ್ಥೆಗಳ ಹಣಕಾಸಿನ ಸುವ್ಯವಸ್ಥೆ, ವ್ಯವಹಾರಗಳು ಸಮರ್ಪಕವಾಗಿ ನಡೆಯಬೇಕಿತ್ತು. ಅದಕ್ಕಾಗಿ ಶಿವರಾವ್‌ರು ಸೂಪರ್‌ವೈಸರುಗಳ ಸಂಘವೊಂದನ್ನು ರಚಿಸಿದರು. ಸಹಕಾರ ಮಂತ್ರದಲ್ಲಿ ಅವರಿಗೆ ಆಸಕ್ತಿ ಎಷ್ಟು ಆಳವಾಗಿತ್ತೆಂದರೆ ಯಾವುದಾದರೊಂದು ಸಂಘದಲ್ಲಿ ಅವ್ಯವಸ್ಥೆಯಿದೆಯೆಂದು ಅವರಿಗೆ ತಿಳಿದು ಬಂದರೆ ಅಲ್ಲಿಗೆ ಧಾವಿಸುತ್ತಿದ್ದರು, ಅದನ್ನು ಸರಿಪಡಿಸುತ್ತಿದ್ದರು.

ಒಮ್ಮೆ ಅಡಕೆ ಬೆಳೆಗಾರರು ಸಹಕಾರಿ ಸಂಘದಿಂದ ಸಾಲ ಪಡೆದರು. ಆದರೆ ಆ ವರ್ಷ ತಲೆದೋರಿದ ಕೊಳೆ ರೋಗದಿಂದಾಗಿ ಸಕಾಲಕ್ಕೆ ಹಣ ಪಾವತಿ ಮಾಡಲು ಯಾರಿಗೂ ಸಾಧ್ಯವಾಗಲಿಲ್ಲ. ಪ್ರತಿಯೊಬ್ಬರೂ ಒಂದಕ್ಕೆ ಒಂದೂವರೆ ಪಾಲು ಅಧಿಕ ಹಣ ಸಲ್ಲಿಸಬೇಕಾಗಿ ಬಂತು. ಬೆಳೆಗಾರರು ಕಂಗಾಲಾದರು.

ಬೆಳೆಗಾರರೆಲ್ಲ ತಮಗೆ ಏನಾದರೂ ರಿಯಾಯಿತಿ ತೋರಿಸಬೇಕೆಂದು ಸಹಕಾರಿ ಸಂಘಗಳ ರಿಜಿಸ್ಟ್ರಾರರಾಗಿದ್ದ ಮಾಧವರಾವ್ ಎಂಬವರಲ್ಲಿ ಕೋರಿಕೊಂಡರು. ಆದರೆ ರಿಯಾಯಿತಿ ತೋರಿಸಲು ಮಾಧವರಾವ್ ಖಡಾಖಂಡಿತ ವಾಗಿ ನಿರಾಕರಿಸಿದರು.

ಆಗ ಶಿವರಾವ್‌ರು ಬೆಳೆಗಾರರ ಸಂಕಷ್ಟದ ಸುದ್ದಿ ಕೇಳಿ ಪುತ್ತೂರಿಗೆ ಧಾವಿಸಿದರು. ಬೆಳೆಗಾರರಿಗೆ ಅರ್ಧಕ್ಕರ್ಧ ಮೊತ್ತದಷ್ಟು ರಿಯಾಯಿತಿಯನ್ನು ಕಲ್ಪಿಸಿಕೊಟ್ಟರು.

ಕ್ಷಾಮ ಪರಿಹಾರ

ಶಿವರಾವ್‌ರು ನಡೆಸಿಕೊಂಡಬಂದ ಕಾರ‍್ಯಗಳಲ್ಲಿ ಎಲ್ಲರ ನೆನಪಿನಲ್ಲಿ ಶಾಶ್ವತವಾಗಿ ಉಳಿದಿರುವ ಇನ್ನೊಂದು ಕಾರ್ಯ ಇದೆ.

ಎರಡನೆಯ ಮಹಾಯುದ್ಧದ ಧಗೆ ಎಲ್ಲೆಡೆಯೂ ಆಹಾರ ಧಾನ್ಯದ ಅಭಾವ ತಲೆದೋರಿತ್ತು. ಅಕ್ಕಿ ಮುಡಿಗೆ ಹತ್ತು ರೂಪಾಯಿ ಬೆಲೆ! ಎಲ್ಲೆಲ್ಲೂ ಹಾಹಾಕಾರ. ತತ್ತರಿಸಿದ ಜನರು ಕಾಡಿನಲ್ಲಿ ಕಂದಮೂಲಗಳನ್ನು ಅಗೆದು ತಿನ್ನಬೇಕಾದಂಥ ಭೀಕರ ಪರಿಸ್ಥಿತಿ. ಸರಕಾರ ಈ ಬಗ್ಗೆ ಉದಾಸೀನವಾಗಿತ್ತು. ಆಹಾರ ಧಾನ್ಯ ಸಂಗ್ರಹಣೆಯ ಬಗ್ಗೆ ಶಾಸನ ಯಾವುದೂ ಇರಲಿಲ್ಲ.  ನೊಂದ ಜನತೆಗೆ ಸಹಾಯಬೇಕಿತ್ತು.

ಆಗ ಶಿವರಾವ್‌ರು ಮುಂದೆ ಬಂದು, ದಕ್ಷಿಣ ಕನ್ನಡ ಜಿಲ್ಲಾ ಹೋಲ್ ಸೇಲ್ ಸ್ಟೋರ್ಸನ್ನು ಸ್ಥಾಪಿಸಿದರು. ಅದರ ಕೆಲಸ ಕಾರ್ಯಗಳನ್ನು ಸಹಕಾರಿ ಸಂಘಗಳ ಮೂಲಕವೂ ಸಮಾಜದ ಧುರೀಣರ ಮೂಲಕವೂ ಹಬ್ಬಿಸಿದರು. ಆಹಾರ ಧಾನ್ಯ ಇದ್ದವರು ಸಹಾನುಭೂತಿಯಿಂದ ಸಹಾಯ ನೀಡಬೇಕೆಂದು ಕರೆಯಿತ್ತರು. ಅವರ ಮಾತನ್ನು ಎಲ್ಲರೂ ಮನ್ನಿಸಿದರು.

ಹೀಗೆ ಸಂಗ್ರಹಿಸಿದ ಆಹಾರ ಧಾನ್ಯಗಳನ್ನು ಬಡಬಗ್ಗರಿಗೆ ಶಿವರಾವ್‌ರು ಹಂಚಿದರು. ಅದರಲ್ಲಿ ದುರ್ವ್ಯಯ, ಕಳ್ಳತನ ನಡೆಯದಂತೆಯೂ ಮುನ್ನೆಚ್ಚರಿಕೆ ವಹಿಸಿದರು.  ಎಲ್ಲಿಯೂ ಅಕ್ಕಿ ಸಿಗದೆ ಒದ್ದಾಡುತ್ತಿದ್ದವರಿಗೆ ಇದೊಂದು ಮಹಾದಾನ ವೆಂದೇ ಅನ್ನಿಸಿತು.

ಮುಂದೆ ರಂಗೂನಿನಿಂದ ಅಕ್ಕಿಯನ್ನು ಅಮದು ಮಾಡಿಕೊಂಡು ಕ್ಷಾಮದಿಂದ ಜನತೆಯನ್ನು ಉಳಿಸಲು ಶಿವರಾವ್‌ರು ಕಾರಣರಾದರು. ಸುಲಭ ಬೆಲೆಗೆ ಅಕ್ಕಿಯನ್ನು ಒದಗಿಸಿದರು.

ಸ್ಥಳೀಯ ಸರಕಾರ

ಗ್ರಾಮ ಪಂಚಾಯಿತಿ ಎಂದರೆ ಸ್ಥಳೀಯ ಸರಕಾರ ಎನ್ನುತ್ತಿದ್ದರು ಶಿವರಾವ್‌ರು.

ಅವರ ನೇತೃತ್ವದಲ್ಲಿ ರಚನೆಯಾದ ಗ್ರಾಮ ಪಂಚಾಯಿತಿಗಳು ಕೈಗೊಂಡ ಅಭ್ಯುದಯ ಕಾರ್ಯಗಳು ಅನೇಕ. ಕಾಡಾಗಿದ್ದ ನಾಡಿಗೆ ನೂರಾರು ಹೊಸ ರಸ್ತೆಗಳು, ವಿದ್ಯಾಭ್ಯಾಸದ ಗಂಧವಿಲ್ಲದ ಊರುಗಳಲ್ಲಿ ಶಾಲೆಗಳು ಅಮಿತ ಸಂಖ್ಯೆಯಲ್ಲಿ ಕಾಣಿಸಿದುವು.

ಚಿಕ್ಕ ಬಾಲಕರ ವಿನೋದಕೂಟ, ಪ್ರವಾಸ, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನಗಳನ್ನಾರಂಭಿಸಿದ ಕೀರ್ತಿ ಶಿವರಾವ್‌ರಿಗೆ ಸಲ್ಲಬೇಕು. ಗ್ರಾಮಾಂತರ ನಿವಾಸಿಗಳಿಗಾಗಿ ’ಸಂಚಾರಿ ಪುಸ್ತಕ ಭಂಡಾರ’ವನ್ನು ಶಿವರಾವ್‌ರು ಸ್ಥಾಪಿಸಿದರು. ಬಿಡುವಿನಲ್ಲಿ ಓದಲು ಅಲ್ಲಿ ಶೈಕ್ಷಣಿಕ ಗ್ರಂಥಗಳನ್ನು ಒದಗಿಸುತ್ತಿದ್ದರು. ಸಮಯವಿದ್ದಾಗ ದುಡಿಯಲೆಂದು ಅವರಿಗೆ ಚರಕಗಳನ್ನು ಒದಗಿಸಿದರು.

ವಿದ್ಯಾಭಿವೃದ್ಧಿ ಸಂಸ್ಥೆ

೧೯೧೬ರಲ್ಲಿ ಮೊಳಹಳ್ಳಿ ಶಿವರಾವ್‌ರು ಗೆಳೆಯರೊಂದಿಗೆ ಪುತ್ತೂರಿನಲ್ಲಿ ವಿದ್ಯಾಭಿವೃದ್ಧಿ ಸಂಘವನ್ನು ಸ್ಥಾಪಿಸಿದರು. ಬಡ ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷ ದೀಪಾವಳಿಯಂದು ಶ್ರೀಮಂತರಿಂದ ನಿಧಿ ಸಂಗ್ರಹ ಕಾರ್ಯವನ್ನೂ ಆರಂಭಿಸಿದರು.

ಆಗ ಪುತ್ತೂರು ವಿದ್ಯಾ ಸೌಕರ್ಯಗಳಲ್ಲಿ ಅತಿ ಹಿಂದುಳಿದಿತ್ತು. ಎಂಟನೆಯ ತರಗತಿಯವರೆಗಿದ್ದ ಮೂರು ಶಾಲೆಗಳು ಮಾತ್ರ ಇದ್ದುವು. ಮೆಟ್ರಿಕ್ ಮಾಡಬೇಕೆಂದವರು ದೂರದ ಮಂಗಳೂರಿಗೆ ನಡೆದು ಹೋಗಬೇಕಿತ್ತು. ಆಗ ನಾಲ್ಕು ತಾಲೂಕುಗಳ ವಿದ್ಯಾರ್ಥಿಗಳಿಗೆ ಮಂಗಳೂರೆ ಗತಿ. ಸರಕಾರಕ್ಕೆ ಎಷ್ಟು ಮನವಿ ಮಾಡಿದರೂ ಯಶ ಸಿಕ್ಕಿರಲಿಲ್ಲ. ಆಗ ಶಿವರಾವ್‌ರು ಸಾರ್ವಜನಿಕರನ್ನು ಒಂದುಗೂಡಿಸಿದರು.

೧೯೧೬ರಲ್ಲಿ ಪುತ್ತೂರಿನಲ್ಲಿ ಬೋರ್ಡ್ ಹೈಸ್ಕೂಲು ಒಂದು ತಲೆಯೆತ್ತಿ, ವಿದ್ಯಾರ್ಥಿಗಳ ಪಾಲಿಗೆ ಹೊಸ ಬೆಳಕು ಮೂಡಿಸಿತು. ಮುಂದೆ ಈ ಶಾಲೆಯನ್ನು ಜಿಲ್ಲಾ ಬೋರ್ಡ್ ವಹಿಸಿಕೊಂಡಿತು. ಆ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದ ನಿಷ್ಕಾಮ ಕರ್ಮಯೋಗಿ ಶಿವರಾವ್‌ರು ಪಟ್ಟಪಾಡು ಅಸಾಧಾರಣವಾದುದು. ಅವರ ಸಲಹೆ ಸಹಕಾರಗಳಿಂದ ಮುಂದೆ ಬೇರೆ ಬೇರೆ ಪಂಗಡದವರ ವಿದ್ಯಾವರ್ಧಕ ಸಂಘಗಳೂ ಸ್ಥಾಪಿತವಾದವು. ಶಾಲೆಗೆ ಆಧುನಿಕ ಕಟ್ಟಡ, ಮತ್ತಿತ್ತರ ಸೌಕರ್ಯಗಳೂ ಶಿವರಾವ್‌ರಿಂದಾಗಿ ಲಭಿಸಿದವು.

ದೂರದ ಊರುಗಳಿಂದ ಪುತ್ತೂರಿನ ಶಾಲೆಗಳಿಗೆ ಬರುತ್ತಿದ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಲು ಶಿವರಾವ್‌ರು ಶ್ರಮಿಸಿದರು. ಅನಾಥ ಹೆಣ್ಣು ಮಕ್ಕಳಿಗಾಗಿ ಶಾರದಾಮಣಿ ಅನಾಥಾಲಯವೂ ಅವರಿಂದಾಗಿಯೇ ತಲೆಯೆತ್ತಿತ್ತು.

ದಸರಾ ಮಹೋತ್ಸವ

ಮುಂದೆ ಶಿವರಾವ್‌ರು ತಾಲೂಕು ಬೋರ್ಡ್ ಅಧ್ಯಕ್ಷರಾಗಿ ಪುತ್ತೂರು ತಾಲೂಕನ್ನು ಅಭಿವೃದ್ಧಿಗೆ ತಂದರು. ಅವರ ಆತ್ಮೀಯಭಾವದಿಂದ ಪುತ್ತೂರಿಗೆ ಹೊಸ ಕಳೆ ಬಂದಿತು. ಅತಿ ಹಿಂದುಳಿದಿದ್ದ ಊರು ಪ್ರಗತಿ ಪಥದಲ್ಲಿ ನಡೆಯತೊಡಗಿತು.

೧೯೩೨ರಿಂದ ೧೦ ವರ್ಷಗಳ ಕಾಲ ಪುತ್ತೂರಿನಲ್ಲಿ ಸಾಮಾಜಿಕ ಮತ್ತು ಸಾಹಿತ್ಯಪರ ಸಮಾರಂಭಗಳು ಜರುಗುತ್ತಿದ್ದವು. ಅವುಗಳಲ್ಲಿ ವಿಜೃಂಭಣೆಯ ನಾಡಹಬ್ಬ ‘ದಸರಾ ಮಹೋತ್ಸವ’ ಪ್ರಮುಖವಾದುದು. ಇದರಲ್ಲಿ ಜಿಲ್ಲೆಯ ಬೇರೆ ಬೇರೆ ಶಾಲೆಗಳ ಅಧ್ಯಾಪಕರೂ ವಿದ್ಯಾರ್ಥಿ ಗಳೂ ಭಾಗವಹಿಸುತ್ತಿದ್ದರು.

ಆಗಿನ ದಸರಾ ಮಹೋತ್ಸವಗಳಲ್ಲಿ ಖ್ಯಾತ ಸಾಹಿತಿಗಳಾದ ಕೈಲಾಸಂ. ಡಿ. ವಿ. ಗುಂಡಪ್ಪ, ಬಿ. ಎಂ. ಶ್ರೀಕಂಠಯ್ಯ, ಜಿ. ಪಿ. ರಾಜರತ್ನಂ, ಹೊಯಿಸಳ ಮೊದಲಾದವರು ಪಾಲ್ಗೊಳ್ಳುತ್ತಿ ದ್ದರು. ಅವರನ್ನು ನೋಡುವಂತಹ, ಅವರ ಭಾಷಣಗಳನ್ನು ಕೇಳುವಂತಹ ಸದವಕಾಶ ಜನರಿಗೆ ಲಭಿಸಲು ಶಿವರಾವ್‌ರೇ ಕಾರಣ.

ಅವರ ಕ್ರಮ ದೇಶಕ್ಕೆ ರಚನಾತ್ಮಕ ಆದರ್ಶವಾಗಿತ್ತು. ಸ್ವತ: ಸಾಹಿತಿಗಳಾಗಿದ್ದ ಶಿವರಾವ್‌ರು ನೀಲಕಂಠಶಾಸ್ತ್ರಿಗಳ ‘ನೀಲಾಂಜನ’ ಮತ್ತು ‘ಸದ್ರಿ ಸುಬ್ಬ’ ಎಂಬ ಎರಡು ಕನ್ನಡ ನಾಟಕಗಳನ್ನೂ ‘ಗುತ್ತಿಲ್ಲಾಡೆ’ ಎಂಬ ತುಳು ನಾಟಕವನ್ನೂ ರಚಿಸಿದ್ದರು. ಸಹಕಾರಿ ತತ್ವಗಳ ಬಗೆಗೆ ಹಲವು ಪ್ರೌಢ ಲೇಖನಗಳನ್ನೂ ಬರೆದಿದ್ದಾರೆ.

ಸರಳತೆ, ನಿಯಮ, ನಿಷ್ಠೆ

ಗೋಖಲೆಯವರ ‘ಸವೆಂಟ್ಸ್ ಆಫ್ ಇಂಡಿಯ ಸೊಸೈಟಿ’ಯ ತತ್ವಾದರ್ಶಗಳನ್ನು ಶಿವರಾವ್‌ರು ತಮ್ಮ ಜೀವನದ ಆರಂಭದಲ್ಲೇ ಮನನ ಮಾಡಿ ಅನುಷ್ಠಾನಕ್ಕೆ ತರಲಾಂಭಿಸಿದರು.

ಹಿಡಿದ ಕೆಲಸದಲ್ಲಿ ಯಾವ ಅಧಿಕಾರಿಯು ಅಡ್ಡಿ ಬಂದರೂ ಅವರನ್ನು ನಿರ್ಲಕ್ಷಿಸಿ, ಎದೆಗೆಡದೆ ಮುಂದುವರಿ ಯುತ್ತಿದ್ದರು.

ಜೀವನದಲ್ಲಿ ನಿಯಮ, ನಿಷ್ಠೆ ಅತ್ಯಗತ್ಯವೆಂದು ಮನಗಂಡಿದ್ದ ಶಿವರಾವ್‌ರು ಸಾಮಾಜಿಕ ಕಾರ್ಯಗಳಲ್ಲಿ ಅದನ್ನು ಚೆನ್ನಾಗಿ ಬಳಸಿಕೊಂಡರು. ಗ್ರಾಮನಿವಾಸಿಗಳ ಸರಳ ನಿರಾಡಂಬರ ಸ್ವಭಾವ ಅವರಿಗೆ ಪ್ರಿಯವಾಗಿತ್ತು. ಆಹಾರದ ವಿಷಯದಲ್ಲೂ ಆಡಂಬರವೆಂದರೆ ಅವರಿಗೆ ಆಗುತ್ತಿರಲಿಲ್ಲ.

ಶಿವರಾವ್‌ರು ಸದಾ ಸರಳ ಉಡುಪನ್ನು ಧರಿಸುತ್ತಿದ್ದರು. ಒಂದು ಖಾದಿ ಷರ್ಟು, ಒಂದು ಪಂಚೆ ಅವರಿಗೆ ಸಾಕಾಗುತ್ತಿತ್ತು. ದೂರ ಪ್ರಯಾಣ ಹೋಗುವಾಗ ಅಂಥದೇ ಉಡುಪಿನ ಒಂದು ಜೊತೆಯನ್ನು ಕೈ ಚೀಲದಲ್ಲಿ ತುಂಬಿಸಿ ಒಯ್ಯುತ್ತಿದ್ದರು. ಹಿರಿಯ ಸಾಹಿತಿಗಳಾದ ವಿ. ಸೀತಾರಾಮಯ್ಯನವರು ಶಿವರಾವ್‌ರನ್ನು ಸ್ಮರಿಸಿಕೊಂಡು ಹೀಗೆ ಹೇಳುತ್ತಾರೆ, ತಾಲೂಕಿನ ಯಾವ ಶಾಲೆಯಲ್ಲಿ ಯಾವುದೇ ಉತ್ಸವವಿರಲಿ, ಶಿವರಾವ್‌ರು ಅಲ್ಲಿಗೆ ಹೋಗುವರು.  ಒಂದು ತುಂಡಿನ ತೋಳಿನ ಖಾದಿ ಬನಿಯನ್, ಒಂದು ತುಂಡಿನ ಪಂಚೆ, ಒಂದು ಟವಲ್ ಇಷ್ಟು ಅವರ ಉಡುಪು. ಕರೆದುಕೊಂಡು ಹೋಗಲು ಗಾಡಿ ಬರದಿದ್ದರೆ ನಡೆದುಕೋಂಡೇ ಹೋಗುವರು. ಸಭೆಗಳಲ್ಲಿ ಹೆಚ್ಚು ಮಾತನಾಡುವರಲ್ಲ. ಆದರೆ ಊರಿನ ಮುಂದಾಳುಗಳಲ್ಲಿ ಹುರುಪು ತುಂಬುವುದು, ಸಲಹೆ ಕೊಡುವುದು, ಹಣ ಮುಂತಾದವು ಬೇಕಾದರೆ ಕೂಡಿಸಿ ಕೊಡುವುದು ಅವರ ಕೆಲಸ.

ಸಹಕಾರಿ ತತ್ವ ಪ್ರಸಾರಕ್ಕಾಗಿ ಇರುಳು ಹಗಲೆನ್ನದೆ ಸುತ್ತುತ್ತಿದ್ದರು. ಆ ದಿನಗಳಲ್ಲಿ ವಾಹನ ಸೌಕರ್ಯವೂ ಇರಲಿಲ್ಲ. ರಾತ್ರಿ ಚಾಪೆ ಕೂಡ ಇಲ್ಲದೆ ತಲೆಯಡಿಗೆ ಕೈಯಿಟ್ಟು ಬರೇ ನೆಲದಲ್ಲಿ ಮಲಗಿರಬೇಕಾಗಿತ್ತು. ಹಲವು ಸಂದರ್ಭಗಳಲ್ಲಿ ಆಹಾರ ಕೂಡ ಇರುತ್ತಿರಲಿಲ್ಲ.

ಆದರೆ ತಾನು ಮಾಡಬೇಕಾಗಿರುವ ಕಾರ್ಯ ಸಹಕಾರಿ ಚಳವಳಿ ಅಥವಾ ಶಾಲೆಗೆ ಸಂಬಂಧಿಸಿದುದಾದರೆ ಶಿವರಾವ್‌ರು ಉತ್ಸಾಹದಿಂದ ಧಾವಿಸುತ್ತಿದ್ದರು. ತನ್ನ ವೃತ್ತಿಗೆ ಸಂಬಂಧಿಸದ ಬೇರೆ ಕೆಲಸಗಳಿದ್ದರೂ ಶಿವರಾವ್‌ರು ಅದನ್ನು ಕಡೆಗಣಿಸುತ್ತಿದ್ದರು.

ಸಾಮಾಜಿಕ ಹಿತದ ಕಾರ್ಯಕ್ಕಾಗಿ ಕಾಲ್ನಡಿಗೆಯಿಂದ ಹತ್ತಾರು ಮೈಲಿ ದೂರಾದರೂ ನಡೆದು ಹೋಗುತ್ತಿದ್ದರೂ ಶಿವರಾವ್‌ರಿಗೆ ಶ್ರಮವೆನಿಸುತ್ತಿರಲಿಲ್ಲ. ಅವರು ಮಾತಿನ ಮಲ್ಲರಲ್ಲ, ಕೃತಿ ಶೂರರಾಗಿದ್ದರು.

ಶಿಕ್ಷಣದ ಕುಂದುಕೊರತೆಗಳನ್ನು ಚರ್ಚಿಸಿ, ಸೂಕ್ತ ರೀತಿಯಲ್ಲಿ ವಿದ್ಯಾದಾನ ಮಾಡಲು ಶಿಕ್ಷಕರಿಗೆ ಸಾಧ್ಯವಾಗಬೇಕು. ಈ ದೃಷ್ಟಿಯನ್ನಿರಿಸಿಕೊಂಡು ಶಿವರಾವ್‌ರ ನೇತೃತ್ವದಲ್ಲಿ ಆಗಾಗ ಶಿಕ್ಷಕರ ಸಮ್ಮೇಳನಗಳೇರ್ಪಡುತ್ತಿದ್ದವು.

ಹಾಲು ಮಾರುವವನಿಗೂ ಸಾಲ ಸಿಕ್ಕಬೇಕು, ಅವನ ಉತ್ಪಾದನೆಯನ್ನು ಯೋಗ್ಯಬೆಲೆಗೆ ಕೊಂಡುಕೊಂಡು ಗ್ರಾಹಕರಿಗೆ ವಿತರಣೆ ಮಾಡಬೇಕೆಂದು ಶಿವರಾವ್‌ರು ಯೋಚಿಸಿ ಹಾಲಿನ ಸೊಸೈಟಿಯೊಂದನ್ನು ರೂಪಿಸಿದರು.

ಒಗ್ಗದ ಪ್ರತಿಷ್ಠೆ

ಶಿವರಾವ್‌ರು ಮನಸ್ಸು ಮಾಡಿದ್ದರೆ ಲೋಕಸಭೆಗೋ ವಿಧಾನಸಭೆಗೋ ಸದಸ್ಯರಾಗಿ ಅಧಿಕಾರ ಹೊಂದಿ ಇರಬಹುದಿತ್ತು. ಸಿರಿವಂತಿಕೆಯಿಂದ ಮೆರೆಯಬಹುದಿತ್ತು. ಆದರೆ ಶಿವರಾವ್‌ರು ಪರಹಿತಕಾರ್ಯಕ್ಕಾಗಿ ತನ್ನಪೂರ್ತಿ ಜೀವಮಾನವನ್ನು ಸಮರ್ಪಿಸಿದ್ದರು. ಕೀರ್ತಿ ಪ್ರತಿಷ್ಠೆಗಳಿಂದ ಅವರು ದೂರ ಇರುತ್ತಿದ್ದರು. ನಿಜವಾದ ಅಂತ:ಕರಣದಿಂದ ಅವರು ಜಿಲ್ಲೆಯ ಪ್ರಗತಿಗಾಗಿ ದುಡಿದರು.

ಒಮ್ಮೆ ಶಿವರಾವ್‌ರು ಪುತ್ತೂರಿನಲ್ಲಿದ್ದ ತನ್ನ ಮನೆ ಮಾರಾಟಮಾಡಿ ಊರು ಬಿಡಲು ನಿಶ್ಚಯಿಸಿದರು.

ಈ ಸುದ್ದಿ ತಿಳಿದು ಕೆಲವು ಪ್ರಮುಖರು ಶಿವರಾವ್‌ರ ಮನೆಗೆ ಧಾವಿಸಿದರು. ಶಿವರಾವ್‌ರ ಮನೆ ಮತ್ತು ಹಿತ್ತಲನ್ನು ತಾವು ಕೊಂಡುಕೊಂಡು ಅವರ ಗೌರವಕ್ಕಾಗಿ ಏನನ್ನಾದರೂ ಅಲ್ಲೇ ನಿರ್ಮಿಸುವ ತಮ್ಮ ಆಸೆಯನ್ನು ಪ್ರಸ್ತಾಪಿಸಿದರು. ಅವರನ್ನು ಒಪ್ಪಿಸಲು ಪ್ರಯತ್ನಿಸಿದರು.

ಆಗ ಶಿವರಾವ್‌ರು ಅವರ ಕಾರ್ಯವನ್ನು ವಿರೋಧಿಸಿದರು. ಬದುಕಿರುವ ವ್ಯಕ್ತಿಗೆ ಸ್ಮಾರಕ ನಿರ್ಮಿಸುವ ಕ್ರಮ ಮಾರಕವಾಗಬಹುದೆಂದು ಹೇಳಿದರು.

ರಾಷ್ಟ್ರೀಯ ಮನೋವೃತ್ತಿಯ ಶಿವರಾವ್‌ರು ಸಾಧಿಸಿದ ರಚನಾತ್ಮಕ ಕಾರ್ಯಗಳಂತೆ ಜನರಲ್ಲಿ ಬಿತ್ತಿದ ಚೈತನ್ಯವೂ ಅಲ್ಪವಲ್ಲ. ಜನಜಾಗೃತಿಗಾಗಿ ಪಟ್ಟ ಶ್ರಮ, ಸಾಧನೆಯೂ ಕಡಮೆ ಏನಲ್ಲ.

ಯಾವ ಕೆಲಸ ಹಿಡಿದರೂ ತನ್ನನ್ನೇ ಅದಕ್ಕೆ ಅವರು ಸಮರ್ಪಿಸಿಕೊಳ್ಳುತ್ತಿದ್ದರು. ಯಾವುದೇ ಕೆಲಸ ಆರಂಭಿಸುವ ಮೊದಲು ಡಂಭಾಚಾರ, ಕೊಚ್ಚಿಕೊಳ್ಳುವುದು ಅವರಿಗೆ ಸೇರುತ್ತಿರಲಿಲ್ಲ. ಅವರ ಕೆಲಸ ಕಾರ್ಯಗಳಲ್ಲಿ ಉತ್ಸಾಹ ವಿದ್ಯುತ್‌ಶಕ್ತಿಯಂತೆ ಹರಿಯುತ್ತಿತ್ತು.

ರಾಜಕೀಯರಂಗದಲ್ಲಿ ಮೊಳಹಳ್ಳಿ ಶಿವರಾವ್ ಅವರು  ಗಾಂಧೀಜಿಯವರ ಪರಮಭಕ್ತರು. ಅವರ ತತ್ವಗಳನ್ನು ಅಕ್ಷರಶ: ಪರಿಪಾಲಿಸಿಕೊಂಡಿದ್ದರು, ಅದರಿಂದಾಗಿ ರಾಜಕೀಯದ ಸ್ಥಾನಮಾನಗಳನ್ನು ಅಧಿಕಾರದ ಅವಕಾಶಗಳನ್ನೂ ಅವರು ದೂರವಿಟ್ಟರು. ಅದೆಲ್ಲವೂ ಶಿವರಾವ್‌ರ ದೃಷ್ಟಿಯಲ್ಲಿ ಕೀಳೆನಿಸಿತ್ತು.

‘ದೇಶದ ಪ್ರತಿಯೊಂದು ಅಭಿವೃದ್ಧಿಗೂ ತಳಹದಿ ಎನ್ನಬಹುದಾದ ಗ್ರಾಮ ನನ್ನ ಸಮೀಪವೇ ಇದೆ. ಕೆಲಸ ಮಾಡಬೇಕೆನ್ನುವ ಹಂಬಲ ಉಳ್ಳವನಿಗೆ ಬೇಕು; ಬೇಕಾದಷ್ಟು ಅತ್ಯಗತ್ಯದ ಕೆಲಸಗಳು ಹಳ್ಳಿಯಲ್ಲೇ ಇರುವಾಗ ದಿಲ್ಲಿಯ ಅಧಿಕಾರ ಬೇಡ’ ಎಂಬ ನಿಲುವನ್ನು ಅವರು ತಳೆದಿದ್ದರು. ಗಾಮೋದ್ಧಾರವೇ ದೇಶೋದ್ಧಾರ ಎಂದರು.

ಯಾರಿಗೆ ದೇಹದಲ್ಲಿ ಕಸುವಿದೆಯೋ ಅವನು ನಾಲ್ಕು ಊರು ತಿರುಗಿ ವಂತಿಗೆ ಎತ್ತಬೇಕು. ಅದರಿಂದ ಒಂದು ಶಾಲೆ ಕಟ್ಟಿಸಿ ಊರ ಮಕ್ಕಳಿಗೆ ಉಪಯುಕ್ತವಾದರೆ ಅದಕ್ಕಿಂತ ಹಿರಿಮೆಯ ಕೆಲಸ ಬೇರೊಂದಿಲ್ಲ ಎನ್ನುತ್ತಿದ್ದರು ಅವರು.

ಶಿವರಾವ್‌ರ ನೇತೃತ್ವದಲ್ಲಿದ್ದ ಶಾಲೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಏನಾದರೂ ತೊಂದರೆವುಂಟಾದರೆ ಅವರು ಸಹಿಸುತ್ತಿರಲಿಲ್ಲ. ಕೂಡಲೇ ಅದನ್ನು ಸರಿಪಡಿಸುತ್ತಿದ್ದರು.

ಸಂಘ-ಸಂಸ್ಥೆಗಳಲ್ಲಿ ನೌಕರರು ಅಕ್ರಮ ಕೈಗೊಂಡಿರು ವುದು ಕಂಡು ಬಂದರೆ ಶಿವರಾವ್‌ರು ಮಿಂಚಿನಂತೆ ಅತ್ತ ಧಾವಿಸುತ್ತಿದ್ದರು. ಗೌರವದಿಂದ, ವಾತ್ಸಲ್ಯದಿಂದ ಅವರು ಆ ನೌಕರರಿಗೆ ಎಷ್ಟು ಚೆನ್ನಾಗಿ ಅವರ ಕರ್ತವ್ಯದ ಹೊಣೆಯನ್ನು ತಿಳಿಸುತ್ತಿದ್ದರೆಂದರೆ ಮುಂದೆಂದೂ ಆ ನೌಕರರು ಅವ್ಯವಹಾರ ಮಾಡುತ್ತಿರಲಿಲ್ಲ.

ಶಿವರಾವ್‌ರಿಗೆ ಮದುವೆಯಾಗಿತ್ತು. ಅವರಿಗೆ ಇಬ್ಬರು ಗಂಡುಮಕ್ಕಳು ಮತ್ತು ಒಬ್ಬ ಮಗಳು ಇದ್ದರು. ಶ್ರೀಮಂತಿಕೆ, ಪದವಿ, ಪ್ರಶಸ್ತಿಗಳನ್ನು ಬಹು ಸುಲಭವಾಗಿ ಪಡೆಯಬಲ್ಲ ಅವಕಾಶ ಅವರಿಗಿತ್ತು. ಆದರೆ ಮನೆಯಲ್ಲಿ ಬಡತನದ ಜೀವನವನ್ನೇ ಅವರು ಸಾಗಿಸುತ್ತಿದ್ದರು.

ಡಾಕ್ಟರ್ ವಿ. ಸೀತಾರಾಮಯ್ಯನವರು ಶಿವರಾವ್‌ರ ಜೀವನದ ಒಂದು ಪ್ರಸಂಗವನ್ನು ವರ್ಣಿಸಿದ್ದಾರೆ-

ಶಿವರಾವ್‌ರ ಒಬ್ಬ ಮಗಳ ಮದುವೆ ಗೊತ್ತಾಯಿತು. ರಾಯರು ಆ ಕಾಲದಲ್ಲಿ ಸಾರ್ವಜನಿಕ ಕೆಲಸಗಳಲ್ಲಿ ಮುಳುಗಿದ್ದವರು. ವಕೀಲಿ ಕೆಲಸಕ್ಕೆ ಹೆಚ್ಚು ಗಮನ ಕೊಟ್ಟಿರಲಿಲ್ಲ, ಹೀಗಾಗಿ ಕೈಯಲ್ಲಿ ಹೆಚ್ಚು ಹಣವಿರಲಿಲ್ಲ. ಗಂಡಿನ ಕಡೆಯವರೂ ಒಳ್ಳೆಯವರು, ಮದುವೆಯನ್ನು ಹೀಗೆ ಮಾಡಬೇಕು ಹಾಗೆ ನಡೆಸಬೇಕು ಎಂದು ಷರತ್ತುಗಳನ್ನು ಹಾಕಿದವರಲ್ಲ. ಶಿವರಾವ್‌ರು ಮದುವೆಯನ್ನು ತುಂಬ ಸರಳವಾಗಿ ನಡೆಸಲು ತೀರ್ಮಾನಿಸಿದರು. ಅವರ ಸ್ನೇಹಿತರಿಗೆ, ಕಕ್ಷಿದಾರರಿಗೆ ಇದು ಒಪ್ಪಿಗೆಯಾಗಲಿಲ್ಲ. ಅವರೇ ಹಣ ಸೇರಿಸಿ ಮದುವೆ ಚೆನ್ನಾಗಿ ನಡೆಯಲು ಸಾಮಾನುಗಳನ್ನು ತಂದು ಹಾಕಿದರು. ಓಲಗದವರು ತಾವೇ ಬರುವುದೆಂದು ಗೊತ್ತುಮಾಡಿಕೊಂಡರು. ಮದುವೆ ವಿಜೃಂಭಣೆಯಿಂದ ನಡೆಯಿತು. ಮದುವೆ ಮುಗಿದನಂತರವೂ ಸ್ನೇಹಿತರು, ಅಭಿಮಾನಿಗಳು ತಂದು ಹಾಕಿದ್ದ ಅಕ್ಕಿ, ಬೆಲ್ಲ, ತರಕಾರಿ ಎಲ್ಲ ರಾಶಿರಾಶಿಯಾಗಿ ಉಳಿದಿತ್ತು. ಶಿವರಾವ್‌ರು ಯಾರು ಯಾರಿಗೊ ಹೇಳಿ ಕಳುಹಿಸಿ ಹಂಚಿಬಿಟ್ಟರು, ದಾರಿಯಲ್ಲಿ ಹೋಗುತ್ತಿದ್ದವರಲ್ಲಿ ಗುರುತಿದ್ದವರನ್ನು ಕರೆದು ಕೊಟ್ಟುಬಿಟ್ಟರು. ಮದುವೆಗಾಗಿ ಬಂದ ಸಾಮಾನುಗಳಲ್ಲಿ ಏನನ್ನೂ ಉಳಿಸಿಕೊಳ್ಳಲಿಲ್ಲ.

ಮೋಸದ ಬಲೆ

ಹೀಗೆ ಸಾರ್ವಜನಿಕ ಸೇವಾಕಾಂಕ್ಷೆಯಿಂದ ಅವರು ಹೋರಾಡುತ್ತಿದ್ದಾಗ ಅನೇಕ ವಕೀಲಿ ಕೇಸುಗಳನ್ನು ಕೈಬಿಟ್ಟರು. ಆದರೆ ಇನ್ನೊಬ್ಬರಿಗೆ ಅನ್ಯಾಯವಾಗಿರುವುದು ಅವರ ಗಮನಕ್ಕೆ ಬಂದಾಗ ನ್ಯಾಯಲಯಕ್ಕೆ ಹಾಜರಾಗಿ ಅದನ್ನು ತಪ್ಪಿಸಲು ಶ್ರಮಿಸುತ್ತಿದ್ದರು. ಮೋಸವನ್ನು ಅವರು ಸಹಿಸುತ್ತಿರಲಿಲ್ಲ.

ಬಡವರನ್ನು ಹಣವಂತರು ಸುಲಿಯುವುದನ್ನು ಅವರು ಹೇಗೆ ತಪ್ಪಿಸುತ್ತಿದ್ದರು ಎನ್ನುವುದಕ್ಕೆ ಈ ಪುಸ್ತಕದ ಪ್ರಾರಂಭದಲ್ಲಿ ಮಾಂಕುವಿನ ಪ್ರಸಂಗವನ್ನು ಓದಿದೆವಲ್ಲ?

ಶಿವರಾವ್‌ರಿಂದ ಹೀಗೆ ಉಪಕಾರವ ಹೊಂದಿದವರು ಎಷ್ಟೋ ಮಂದಿ.

ಸಹಕಾರಿ ಸಂಘಗಳು ಜನರಿಗೆ ಅವಶ್ಯವಾದ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದ್ದವು. ಆದರೂ ಹಣ ಸಾಲ ಕೊಟ್ಟು ಒಂದಕ್ಕೆ ಹತ್ತು ಸಂಪಾದಿಸಿಕೊಳ್ಳುವ ಸಾಹುಕಾರರು ಬಹು ಮಂದಿ ಊರಿನಲ್ಲಿ ಬೇರು ಬಿಟ್ಟಿದ್ದರು.

ಒಬ್ಬ ಬಡವ ತನ್ನ ಆಸ್ತಿಯನ್ನು ಅಡವು ಇಟ್ಟು ಒಬ್ಬರಿಂದ ಸಾಲ ಪಡೆದ. ಅದು ಅವನ ಮಗಳ ಮದುವೆಗಾಗಿ.

ಅಡವಿನ ದಾಖಲೆ ಪತ್ರ ಬರೆಯಲ್ಪಟ್ಟಿತು. ಸಾಲ ಪಡೆದವ ಅದನ್ನು ಓದಿ ನೋಡಿ ಎಲ್ಲವೂ ಸರಿಯಾಗಿದೆ ಎಂದು ರುಜು ಹಾಕಿದ. ಆದರೆ ಆತ ಮೋಸದ ಬಲೆಗೆ ಬಿದ್ದ.

ಸಾಲ ಕೊಟ್ಟವ ಮಹಾ ಖದೀವ. ದಾಖಲೆ ಪತ್ರದ ಬರವಣಿಗೆದಾರನಿಗೆ ಲಂಚ ಕೊಟ್ಟ. ಒಂದು ವರ್ಷ ಬಡ್ಡಿ ಬಾಕಿ ಮಾಡಿದರೆ ಆಸ್ತಿಯನ್ನು ಹಿಂತಿರುಗಿ ಕೇಳುವ ಹಕ್ಕು ನನಗಿಲ್ಲ ಎಂದು ದಾಖಲೆ ಪತ್ರದಲ್ಲಿ ಸೇರಿಸಲು ಸೂಚಿಸಿದ. ಹೀಗೆ ಎಷ್ಟೋ ಜನರನ್ನು ವಂಚಿಸಿ ಆತನಿಗೆ ಅಭ್ಯಾಸವಾಗಿತ್ತು.

ಪತ್ರ ರಿಜಿಸ್ಟರ್ ಆಗಿ, ನಕಲು ಕೈಸೇರಿದಾಗ ಬಡವ ಕಂಗಾಲಾದ. ಅವನಿಗೆ ಸಿಡಿಲೆರಗಿದಂತಾಯಿತು. ಅದೊಂದು ವಾಕ್ಯ ಆತ ರುಜು ಮಾಡುವ ಮೊದಲು ಆ ಪತ್ರದಲ್ಲಿರಲಿಲ್ಲ. ಆ ಷರತ್ತಿಗೆ ಆತ ಒಪ್ಪಿರಲೇ ಇಲ್ಲ.

ತನಗಾದ ಅನ್ಯಾಯವನ್ನು ಬಡವ ಶಿವರಾವ್‌ರ ಬಳಿ ದೂರಿಕೊಂಡಾಗ ಅವರು ಕುಪಿತರಾದರು. ಆ ಮೋಸಗಾರರ ಮೇಲೆ ದಾವೆ ಹೂಡಿಸಿದರು. ಅವನ ಪರವಾಗಿ ವಾದಿಸಿದರು.

ಮೋಸಗಾರರು ಮಾಡಿದ ಅನ್ಯಾಯ ರುಜುವಾತಾಗ ಬೇಕಾದರೆ ಶಿವರಾವ್‌ರ ಅಪಾರ ಬುದ್ಧಿವಂತಿಕೆ, ವಾದ ವೈಖರಿಗಳೇ ಕಾರಣವಾದವು. ಆರೋಪಿಗಳಿಗೆ ಶಿಕ್ಷೆ ಯಾಯಿತು.

ಆ ಮೇಲೆ ಶಿವರಾವ್‌ರು ಇನ್ನಷ್ಟು ಜಾಗರೂಕತೆಯಿಂದ ಎಲ್ಲೆಡೆಯೂ ಸಹಕಾರಿ ಚಳವಳಿಯ ತತ್ವ ಪ್ರಚಾರಕ್ಕೆ ವ್ಯವಸ್ಥೆ ಮಾಡಿದರು.

ಲೆವಿ ಪದ್ದತಿ

ಈಗ ಎಲ್ಲಡೆಯೂ ಸಹಕಾರಿ ಸಂಘಗಳು, ಆಹಾರ ಧಾನ್ಯ ಬೆಳೆಗಾರರಿಂದ ಲೆವಿ ಪದ್ಧತಿಯ ಮೂಲಕ ಧಾನ್ಯಗಳನ್ನು ಸಂಗ್ರಹಿಸುತ್ತಿವೆ. ಅದನ್ನು ಪಟ್ಟಣಗಳಲ್ಲಿರುವ ಗ್ರಾಹಕರಿಗೆ ವಿತರಣೆ ಮಾಡುತ್ತಿವೆ.  ಜನೋಪಕಾರಿಯಾಗಿವೆ.

ಈ ಪದ್ಧತಿಯ ಆದ್ಯ ಪ್ರವರ್ತಕರು ಮೊಳಹಳ್ಳಿ ಶಿವರಾವ್ ಅವರು. ಇದರಿಂದ ಒಂದು ಕಡೆ ಆಹಾರ ಧಾನ್ಯದ ಅಭಾವ ನೀಗುತ್ತದೆ. ಮತ್ತೊಂದು ಕಡೆ ಬೆಳೆದವರಿಗೆ ಒಳ್ಳೆಯ ಬೆಲೆ ಸಿಕ್ಕುತ್ತದೆ. ಹೀಗೆ ಬೆಳೆಯುವವರಿಗೆ, ಬಳಸುವವರಿಗೆ ಇದರಿಂದ ಉಪಕಾರ. ಮುಂದೆ ಸರಕಾರ ಇದಕ್ಕೆ ಶಾಸನದ ಸ್ವರೂಪ ನೀಡಿತು.

ಬೆಳೆಗಾರರು ಬೆಳೆದ ಅಡಕೆ, ಬಾಳೇಕಾಯಿ, ಕಾಳು ಮೆಣಸು ಇತ್ಯಾದಿಗಳನ್ನು ಲಾಭಬಡುಕ ವ್ಯಾಪಾರಿಗಳು ಅರ್ಧಂರ್ಧ ಬೆಲೆಗೆ ಕೊಳ್ಳುತ್ತಿದ್ದರು. ಅಲ್ಪ ಸ್ವಲ್ಪ ದಳ್ಳಾಳಿಗಳ ಕೈ ಸೇರುತ್ತಿತ್ತು. ಬೆಳೆದವನಿಗೆ ದುಡಿಮೆಯ ಕಾಲಾಂಶವೂ ದಕ್ಕುತ್ತಿರಲಿಲ್ಲ.  ಶ್ರಮವಷ್ಟೇ ಅವನಿಗೆ ಪೂರ್ಣ ಸಿಕ್ಕುತ್ತಿತ್ತು.

ಇದರಿಂದ ಬೆಳೆಗಾರರನ್ನು ಪಾರು ಮಾಡಲು ಶಿವರಾವ್‌ರು ಸ್ಥಾಪಿಸಿದ ಮಾರಾಟ ಕೇಂದ್ರ ಇಂದು ಮಂಗಳೂರಿನಲ್ಲಿ ಅಗಾಧ ಪ್ರಮಾಣದಲ್ಲಿ ಹಬ್ಬಿದೆ. ವಿದೇಶ ವಹಿವಾಟುಗಳನ್ನು ನಡೆಸಿ ಸಾಕಷ್ಟು ವಿದೇಶಿ ವಿನಿಮಯ ವನ್ನೂ ತಂದುಕೊಡುತ್ತಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಅದರ ಕೇಂದ್ರಗಳು ಮಂಗಳೂರಿನ ಬೆಲೆಗೇ ಬೆಳೆಗಾರರ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತವೆ.

ಕೊಡಗಿನಲ್ಲಿ ಬೆಳೆಯುವ ಏಲಕ್ಕಿಗೆ ಮಂಗಳೂರು ಒಂದು ಮಾರಾಟ ಕೇಂದ್ರವಾಗಲೂ ಕಾರಣರು ಶಿವರಾವ್ ಅವರೇ.

ಹೆಚ್ಚಿನ ಖರ್ಚು ವೆಚ್ಚವಿಲ್ಲದೆ ತಮ್ಮ ಉತ್ಪಾದನೆಗಳಿಗೆ ತಕ್ಕ ಬೆಲೆಯನ್ನು ಪಡೆಯುತ್ತಿರುವ ರೈತರಿಗೆ ಶಿವರಾವ್‌ರ ಸಾಧನೆ, ಶ್ರಮಗಳಿಂದ ಲಭಿಸಿದ ಫಲ ಅಪಾರ.

ನಿಧಿ ಸಂಗ್ರಹ

ಪುತ್ತೂರು ಬೋರ್ಡ್ ಹೈಸ್ಕೂಲನ್ನು ಆರಂಭಿಸಿದ ದಿನಗಳಲ್ಲಿ ಶಿವರಾವ್‌ರಿಗೆ ಸಾರ್ವಜನಿಕ ಸಹಾಯ ಎಷ್ಟು ಒದಗಿದರೂ ಸಾಲದೆನಿಸಿತು. ಅದಕ್ಕಾಗಿ ಅವರು ಹಂಚಿಕೆ ಹೂಡಿದರು.

ಮಕ್ಕಳಿಗೆ ಶಾಲಾ ಫೀಸು ಮತ್ತು ಪುಸ್ತಕಗಳನ್ನು ಒದಗಿಸಬೇಕೆಂದು ಅವರು ಯೋಚಿಸಿದರು. ದೀಪಾವಳಿ ಕಾಲದಲ್ಲಿ ನಾಲ್ಕಾರು ಪಂಗಡಗಳ ವಿದ್ಯಾರ್ಥಿಗಳನ್ನು ಒಗ್ಗೂಡಿಸಿದರು. ಬಡವ ಬಲ್ಲಿದರೆಂಬ ಭೇದವಿಲ್ಲದೆ ಸಮಾನ ಬುದ್ಧಿಯುಳ್ಳ ವಿದ್ಯಾರ್ಥಿಗಳು ತಾಲೂಕಿನ ಎಲ್ಲ ಹಳ್ಳಿಗಳಿಗೂ ಹೋಗಿ ನಿಧಿ ಸಂಗ್ರಹ ಮಾಡುವಂತೆ ಹೇಳಿದರು. ಈ ಯೋಜನೆ ಫಲಪ್ರದವಾಯಿತು.

ಅದರಿಂದ ಧನ ಸಂಗ್ರಹವೂ ಆಯಿತು. ಜೊತೆಗೆ ವಿದ್ಯಾರ್ಥಿಗಳಿಗೆ ಜನಜೀವನದ ಪರಿಚಯವೂ ಆಯಿತು. ಶಿವರಾವ್‌ರಿಗೆ ಸರಳತೆ ಪ್ರಿಯ. ಪಟ್ಟಣದ ಜೀವನದ ಥಳಕನ್ನೂ ಆಡಂಬರವನ್ನೂ ಕಂಡರೆ ಅವರಿಗೆ ಆಗುತ್ತಿರಲಿಲ್ಲ. ಶ್ರಮ ಮತ್ತು ಸರಳತೆ ಬೆರೆತ ಗ್ರಾಮಜೀವನವನ್ನು ಅವರು ಮೆಚ್ಚಿಕೊಂಡಿದ್ದರು.

ಖರ್ಚಿಗೆ ಕಾಸಿಲ್ಲವೆಂಬ ಚಿಂತೆ ಶಿವರಾವ್‌ರನ್ನು ಕಾಡುತ್ತಿರಲಿಲ್ಲ. ಕಿಸೆಯಲ್ಲಿ ಬಿಡಿಗಾಸು ಇಲ್ಲದಿದ್ದರೂ ಶಿವರಾವ್‌ರು ಎಲ್ಲಿಗಾದರೂ ಸರಿ, ನಡೆದು ಬಿಡುತ್ತಿದ್ದರು. ಹಿಡಿದ ಕಾರ್ಯ ಯೋಗ್ಯವಾಗಿದ್ದರೆ ಅದರ ಸಾಧನೆಗಾಗಿ ಯಾವ ಮುಳ್ಳುಹಾದಿಯಾದರೂ ಸರಿ ನಡೆಯುವೆನೆಂಬ ಎದೆಗಾರಿಕೆ ಅವರಿಗಿತ್ತು.

ಕಡೆಯ ವರ್ಷಗಳು

ಶಿವರಾವ್‌ರು ೧೯೧೩ ರಿಂದ ೧೯೨೩ರ ವರೆಗೆ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷರಾಗಿದ್ದರು. ೧೯೩೧ರಿಂದ ೧೯೫೨ರ ವರೆಗೂ ಅಧ್ಯಕ್ಷರಾಗಿದ್ದರು. ಅನಂತರ ೧೯೫೪ ರಿಂದ ೬ ವರ್ಷಕಾಲ ಮತ್ತೆ ಅಧ್ಯಕ್ಷರಾಗಿದ್ದರು.

ಹೀಗೆ ಸಾರ್ವಜನಿಕ ಸೇವೆಗಾಗಿ ಶ್ರಮಿಸಿದ ಅವರಿಗೆ ಆರೋಗ್ಯ ಕೆಡುತ್ತಾ ಬಂದುದರಿಂದ ಅವರು ಸೇವಾರಂಗ ದಿಂದ ನಿವೃತ್ತರಾಗುವುದು ಅನಿವಾರ್ಯವಾಯಿತು. ಆಗ ಅವರ ವಯಸ್ಸು ಎಂಬತ್ತು ವರುಷ.

ಶಿವರಾವ್ ಅವರು ಪುತ್ತೂರನ್ನು ತೊರೆದು ಮದ್ರಾಸಿನಲ್ಲಿದ್ದ ತಮ್ಮ ಎರಡನೆಯ ಮಗನ ಮನೆಗೆ ತೆರಳಿದರು.

ದೂರದ ಊರಿನಲ್ಲಿದ್ದರೂ ತನ್ನ ಊರು, ತನ್ನ ಜನ ಎಂಬ ಮಮತೆ ಶಿವರಾವ್‌ರಿಂದ ದೂರವಾಗಲಿಲ್ಲ. ಆಗಾಗ್ಗೆ ಹುಟ್ಟೂರಿಗೆ ಪತ್ರ ಬರೆದು ಎಲ್ಲರ ಬಗೆಗೆ ವಿವರಗಳನ್ನು ಕೇಳಿ ತಿಳಿಯುತ್ತಿದ್ದರು. ತಮ್ಮ ಸಲಹೆ, ಮಾರ್ಗದರ್ಶನಗಳನ್ನು ನೀಡುತ್ತಿದ್ದರು.

ಆದರೆ ಕೊನೆಗಾಲದಲ್ಲಿ ಅವರನ್ನು ಒಂದೇ ಒಂದು ದು:ಖ ಬಹುವಾಗಿ ಬಾಧಿಸುತ್ತಿತ್ತು. ಎಲ್ಲರಿಗೂ ಅವಶ್ಯವಾದ ಸಹಕಾರಿ ತತ್ವದ ಆಚರಣೆಯಲ್ಲಿ ಸಮಾಜವು ಸಹಕರಿಸುತ್ತಿಲ್ಲ, ಬದಲಾಗಿ ಹೊಲಸು ರಾಜಕೀಯ ಸಹಕಾರಿ ಕ್ಷೇತ್ರವನ್ನು ಕಲುಷಿತಗೊಳಿಸುತ್ತಿದೆಯೆಂಬ ನೋವು ಶಿವರಾವ್‌ರನ್ನು ಕಾಡತ್ತಿತ್ತು.

೧೯೬೭ರ ಜುಲೈ ಏಳರಂದು ಶಿವರಾವ್‌ರು ಸ್ವರ್ಗಸ್ಥರಾದರು. ಆಗ ಅವರಿಗೆ ೮೭ ವರ್ಷ ವಯಸ್ಸಾಗಿತ್ತು.

ಅವರ ಅಪಾರ ಮೇಧಾಶಕ್ತಿಯಿಂದ ಜನಿಸಿದ ಸಂಘಸಂಸ್ಥೆಗಳು ಅವರ ಮಾರ್ಗದರ್ಶನದ ಹಾಲುಂಡು ಬೆಳೆದಿವೆ. ಬೆಳೆದು ಹೆಮ್ಮರವಾಗಿ ಜಿಲ್ಲೆಯ ಜನರಿಗೆ ಹತ್ತು ಹಲವು ಬಗೆಯಿಂದ ನೆರಳು ನೀಡುತ್ತಿವೆ. ಅವರು ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದಾಗ ಅವರ ಪ್ರಯತ್ನದಿಂದ ಆರಂಭವಾದ ಅನೇಕ ಪ್ರಾಥಮಿಕ ಶಾಲೆಗಳು ಈಗ ಹೈಸ್ಕೂಲುಗಳಾಗಿ ಅಭಿವೃದ್ಧಿಗೊಂಡಿವೆ. ಸಹಸ್ರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿವೆ.

ನಿರ್ಜೀವ ಸ್ಥಿತಿಯಲ್ಲಿ ಮಲಗಿದ್ದ ಜನರನ್ನು ಎಚ್ಚರಿಸಿ ಹುರಿದುಂಬಿಸಿ ಸತ್ಕಾರ್ಯಗಳಲ್ಲಿ ಅವರನ್ನು ಪ್ರವೃತ್ತ ಗೊಳಿಸಿದರು. ಶಕ್ತಿಪೂರ್ಣ, ಕ್ರಿಯಾವಂತ, ಪ್ರಭಾವಶಾಲಿ ಚೇತನವಾದರು. ನಿಸ್ವಾರ್ಥ ಸೇವೆ ಸಲ್ಲಿಸಿದರು. ಆ ಮಹಾವ್ಯಕ್ತಿಯ ಆದರ್ಶ ಜೀವನದ ಪ್ರಭೆ ಮುಂದಿನ ಪೀಳಿಗೆಗೊಂದು ದಿವ್ಯ ಬೆಳಕು.