೧೧೩. ಶರಣರು ಹೊಳಿಗೆ ಹೊಂಟಾಗ

 

ಹತ್ತು ಮಂದಿ ಹಿರಿಯರು ಕೂಡಿ ಚಂದ್ರನ ನೋಡಿದರಾ
ಚಂದ್ರನ ನೋಡಿದರ ದೀನೆಂದು ಗುದ್ದಲಿ ಹಾಕಿದರಾ
ಗಂಧರಾತ್ರಿ ದಿನ ದೇವರ ಮೂರ್ತಿ ಸಿಂಗಾರಾಗ್ಯಾರಾ
ಸಿಂಗಾರಾಗ್ಯಾರ ಅವರು ಗಂಧ ಏರ‍್ಯಾರ
ಕತ್ತಲರಾತ್ರಿ ದಿನ ಶರಣರ ಮೇಲೆ ಕತ್ತಲಗವಿದಾವ
ಕತ್ತಲಗವಿದಾವ ಅವರಿಗೆ ದುಃಖ ತುಂಬ್ಯಾವ
ದುಃಖ ತುಂಬಿಕೊಂಡು ಶರಣರು ಹೊಳಿಗೆ ಹೊಂಟಾರ
ಹೊಳಿಗೆ ಹೋಗಿ ಹೊಳ್ಳಿಬರುವಾಗ ಕಲಮಾ ಓದ್ಯಾರ

೧೧೪. ಮಂಟಪ ಕಟ್ಯಾರ
ಮೊಹರಂದೊಳ ಮಂಟಪ ಕಟ್ಯಾರ ಕನ್ನಡಿ ಹಳ್ಳಿಂದ
ಕನ್ನಡಿ ಹಳ್ಳಿಂದ ದೇವರಿಗೆ ಹೋಗೂದು ದುಂದ
ಊದುಬತ್ತಿ ಊದಿನಕಡ್ಡಿ ಹಚ್ಯಾರೋ ಮಕರಂದ
ಹಚ್ಯಾರೋ ಮಕರಂದ ದೇವರಿಗೆ ಹೊಂಟಾರೋ ಚಂದ
ದೇವರಿಗಂತ ಮಕನಾ ಕಟ್ಟಸ್ಯಾರೋ ಮಲ್ಲಿಗೆ ಹೂವಿಂದ
ಮಲ್ಲಿಗೆ ಹೂವಿಂದ ದೇವರಿಗೆ ಹಾಕ್ಯಾರೋ ಚಂದ
ದೇವರಿಗಂತ ಸಕ್ಕರಿ ಲಾಡಿ ತಂದಾರೋ ಚಂದ
ತಂದಾರೋ ಚಂದ ಓದಕಿ ಮಾಡಸ್ಯಾರೋ ದುಂದ

೧೧೫. ಚುಟುಕು ಪದಗಳು
ದೇವರಿಗೆ ಹೋಗೂಣು ಬಾ ಈ ಡೋಲಿಯೊಳಗ
ಹೂವ ಸೂರ‍್ಯಾಡುಣು ಬಾ
* * *
ವರ್ಷದಲ್ಲಿ  ಹುಟ್ಟಿ ಬರುವರು ಹಸೇನ ಹುಸೇನರಾ
ಹಸೇನ ಹುಸೇನರಾ ಅವರು ಸತ್ತುಳ್ಳ ಶರಣರಾ
* * *
ಕೈಯಾಗ ಹೂವಿನ ಚಡಿ
ದೇವರಿಗೆ ಹೋಗೂನು ನಡಿ
* * *
ಶರಣರು ಹೊಂಟಾರ ಸವಾರಿನಾ
ಹಿಡದಾರ ಕರ್ಬಲಾ ದಾರಿನಾ
ಪ್ರಥಮ ಕೇಳರಿ ನೀವು ಕುಂತಜನಾ
ಹುಟ್ಟಿ ಬಂದಾರೋ ಹಸೇನ ಹುಸೇನಾ
ಅಂತಾರ ಧೀನ್ ಧೀನಾ ||

೧೧೬. ಮೊಹರಂ ಅಸಲಾ

ಕುಂತ ಕೇಳರಿ ನೀವು ಮೊಹರಂ ಅಸಲಾ
ಹುಸೇನ್ಹುಸೇನೆಂಬ ಸತ್ತುಳ್ಳ ಶರಣರಾ
ಸತ್ತುಳ ಶರಣರಾ ವರ್ಷಕ್ಕೊಮ್ಮೆ ಬರುವರಾ
ಲಾಲಶ್ಯಾವಲಿ ಹುಸೇನ್ಹುಸೇನಿ ಬೀಬಿ ಫಾತಿಮಾರಾ
ಐದು ಮಂದಿವರಾ ಒಂದೇ ಸ್ಥಳದಲ್ಲಿ ಕೂಡುವರಾ
ಬೀಬಿ ಫಾತಿಮಾರು ಶರಬತ ಮಾಡ್ಯಾರ
ಹಸೇನ್ಹುಸೇನರಿಗೆ ಕುಡಿ ಕುಡಿ ಅಂತಾರ
ಕುಡಿ ಕುಡಿ ಅಂತಾರ ಮೌಲಾಲಿ ನಿಂತ ನಗತಾರ
ಶಾರ ಬೆಟಗೇರಿ ಕನ್ಯಾಳ ಅಗಸಿ ಹೀಂಗ ಹೇಳ್ಯಾರ
ಹೆಜ್ಜಿ ಮ್ಯಾಳಕೊಪ್ಪುವರಾ ಗುಂಡಪ್ಪಣ್ಣನ ಶಿಷ್ಯರಾ

೧೧೭. ನಾಚಿತೋ ಮೊಹರಂ

ನಾಚಿತೋ ಮೊಹರಂ ಐಸೂರಕಿದು ನಾಚಿತೋ ಮೊಹರಂ
ಊಚ ಅಲಾವಿಗೆ ಚಾಚಿದ ಬೆಂಕಿಗೆ

ಬೂಚರ ಕೇಚರ ತಾಚಾರ ತಿಳಿಯದೆ ||
ಮೇಳೈಸಿ ಬಳ್ಳಿ ಹಿಡಿದಾಡುವ ಸಮಯದೊಳು
ಸುಳ್ಳು ಸವಾಲ್ ಜವಾಬು ಹೇಳುವುದ ಕಂಡು ||
ಹಾಳು ಮಣ್ಣಿಲೆ ಮುಚ್ಚಿ ದಾಳಿಂಬರ ಗೊನಿ ಚುಚ್ಚಿ
ಬಹಳ ವಿಲಾಸದಿ ಹೇಳುವುದನ ಕಂಡು ||
ಕತ್ತಲ ಶಹಾದತ್ ಮಥನದೊಳು ಇಹರೆಂದು
ಹಿತವರಿಯದ ತಾನು ಗತಿ ಇಲ್ಲದದನು ಕಂಡು ||
ಚೂರ ಚೊಂಗೇದ ಎಡಿ ಸಾರಿ ದೈವಕ ನೀಡಿ
ನೀರಿನ ಬದಿಯಲ್ಲಿ ಮಾತಿ ತಗ್ಗಿಸಿ ನಿಂತು ||
ಸಾಲ ತುರಕರು ಜತ್ತು ಮ್ಯಾಲೆ ಡೋಲಿಯ ಹೊತ್ತು
ಅಲ್ವಿದಾ ಹೇಳುವಾಗ ಜೊಲ್ಲು ಬಿತ್ತು ನೆಲದ ಮ್ಯಾಗ ||
ಅಲ್ಲಮ ಶಿಶುನಾಳ ಬಲ್ಲಿದ ಗುರುವಿಗೆ
ನಾಚಿತೋ ಮೊಹರಂ ಐಸೂರಕಿದು ನಾಚಿತೋ ಮೊಹರಂ

೧೧೮. ಅಲಾವಿಗೆ ಐಸೂರ‍್ಯಾತಕೋ

ಅಲಾವಿಗೆ ಐಸೂರ‍್ಯಾತಕೋ | ಅಲಾವಿಗೆ ಐಸೂರ‍್ಯಾತಕೋ
ಐಸೂರ‍್ಯಾತಕೋ ಹೇಸಿ ಮೊಹರಂ ಸಾಕೋ ||
ಕಾಲ ಕೆಸರಿನೊಳು ತುಳಿದು ತುಳಿದು ಜನ
ಸಾಲ ಬಳ್ಳಿ ಹಿಡಿದಾಡು ಅಲಾವಿಗೆ ||
ಬಣ್ಣದ ಲಾಡಿಯು ಹಾಕಿ ಮೆರೆವ ಜನ
ಪುಣ್ಯ ಪಾಪ ಎರಡಿಲ್ಲದ ಅಲಾವಿಗೆ ||
ಮುಲ್ಲಾ ಮಸೀದ್ಯಾಗ ಬೆಲ್ಲ ಓದಿಕೆಮಾಡಿ
ಸಲ್ಲು ಸಲ್ಲಿಗೆ ಧೀನೆಂಬ ಅಲಾವಿಗೆ ||
ಕಡಿದು ಕರ್ಬಲ ಕತ್ತಲ ಶಹಾದತ್
ಉತ್ತಮ ಶಿಶುನಾಳದೀಶನಲಾವಿಗೆ ||