ಇಂದು ಮೊಹರಂ ಹಬ್ಬ ನಮ್ಮೂರಿನೊಳಗೆ
ಅದಕೆಯೇ ಇನಿತೊಂದು ಬೀದಿ ಮೆರವಣಿಗೆ !
ಅದೊ ಬಂತು ಮೆರವಣಿಗೆ, ಎದ್ದು ಬಾ ಹೊರಗೆ
ನಿನ್ನ ಕೊಳಲು ಪಿಟೀಲು ಇರಲಿ ಮನೆಯೊಳಗೆ !
ಓಹೊ ಜನಸಂದಣಿ – ತಮಟೆ ಮದ್ದಳೆ ಭೇರಿ
ಜನದ ಕೇಕೆಯ ಜೊತೆಗೆ ಕಹಳೆ ತುತ್ತೂರಿ !
ಹುಲಿವೇಷಗಳ ಸಂತೆ – ಬಣ್ಣಗಳ ಮೆರೆತ
ಮನವ ಬೆರಗಾಗಿಸಿದೆ ಈ ಕುಣಿತ ಮಣಿತ !
ಒಂದಲ್ಲ ಎರಡಲ್ಲ, ಬಗೆಬಗೆಯ ವೇಷ
ಊರೆಲ್ಲ ಬೆರಗಾಯ್ತು ಹೊಗಳಿಕೆಯ ವರುಷ !
ನಿಂತು ಸುಮ್ಮನೆ ನೋಡು ಬರಿಯ ಮೆರವಣಿಗೆ,
ವೇಷಗಳ ತೊಟ್ಟವರು ನಮ್ಮ ನಮ್ಮವರೆ !
ಸಂಜೆವರೆಗೂ ಕುಣಿದು ಆಮೇಲೆ ದಣಿದು
ಕೆರೆಗೊ ಬಾವಿಗೊ ಹೋಗಿ ಮೈ ಬಣ್ಣ ತೊಳೆದು
ಮತ್ತೆ ಮೊದಲಂತಹರು ಎಲ್ಲರೊಡವೆರೆದು !
Leave A Comment