ನಾಟಿವೈದ್ಯೆಮತ್ತುಪ್ರಸೂತಿತಜ್ಞೆಶ್ರೀಮತಿಬಾಗಿ, ಬದಿಯಡ್ಕ

ಸರಳತೆ, ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿರುವ ಬಾಗಿ ಇವರು ಮಿತಭಾಷಿಗಳು. ಈಗ ಸುಮಾರು ೬೫ ವರ್ಷ. ಉತ್ಸಾಹದ ಚಿಲುಮೆಯ ಹಾಗೆ ಇರುವ ಇವರು ನೋಡಲು ತೆಳ್ಳನೆಯ ಮೈಕಟ್ಟು ಹೊಂದಿದ್ದಾರೆ. ನಾಟಿ ಔಷಧಿ ಮತ್ತು ಪ್ರಸೂತಿ ಕಲೆ ಈ ಎರಡರಲ್ಲಿಯೂ ಪಳಗಿದ ಇವರು, ಮುಗ್ಧತೆಯ ಮುಖಭಾವ ಹೊಂದಿದ್ದಾರೆ. ಜನಪದ ನಾಟಿ ಔಷಧಿಗಳ ಕುರಿತು ಅಪಾರ ಜ್ಞಾನ ಹೊಂದಿರುವ ಇವರು ಪಾಡ್ದನ ಹಾಗೂ ಕಬಿತಗಳನ್ನು ಹಾಡುವುದರಲ್ಲಿಯೂ ಎತ್ತಿದ ಕೈ. ಜೊತೆಗೆ ಪ್ರಸೂತಿ ಕಲೆಯಲ್ಲಿ ತಮ್ಮ ಊರಿನ ಡಾಕ್ಟರುಗಳು ಕೂಡ ಇವರನ್ನು ಹೆರಿಗೆ ಮಾಡಿಸಲು ಆಸ್ಪತ್ರೆಗೆ ಕರೆಸುವಷ್ಟರ ಮಟ್ಟಿಗೆ ನಿಪುಣರು ಹಾಗೂ ಪ್ರಸಿದ್ದರು. ತಮ್ಮಲ್ಲಿಗೆ ಬರುವ ರೋಗಿಗಳಿಗೆ ಯಾವುದೇ ರೀತಿಯ ಪ್ರತಿಫಲದ ಅಪೇಕ್ಷೆ ಇಲ್ಲದೆ ಉಚಿತವಾಗಿ ಔಷಧಿಗಳನ್ನು ಕೊಡುತ್ತಾರೆ.

 • ನಿಮ್ಮ ತವರಿನ ಕುರಿತು ಹೇಳಿ..

ನನ್ನ ತಾಯಿಯ ಮನೆ ಕಾಸರಗೋಡು ತಾಲ್ಲೂಕಿನ ಪೆರ್ಲದ ಹತ್ತಿರದ ಬಜಕೊಡ್ಲು. ನಾವು ಮೂರು ಗಂಡು ೨ ಹೆಣ್ಣು ಮಕ್ಕಳು. ನನ್ನ ತಂದೆಯ ಹೆಸರು ಕೊರಗಪ್ಪ, ತಾಯಿ ಚೋಮು. ನನಗೆ ಎಲ್ಲಾ ಪಾಡ್ದನ, ಕಬಿತ ಗೊತ್ತಿದೆ. ಇವುಗಳನ್ನು ನನ್ನ ತಾಯಿಯಿಂದ ಕಲಿತದ್ದು.

 • ನಾಟಿ ಔಷಧಿ ಯಾರಿಂದ ಕಲಿತದ್ದು?

ನನ್ನ ತಾಯಿಯ ಮನೆಯ ಹತ್ತಿರದ (ಬಜಕೊಡ್ಲು) ಅಪ್ಪು ಎಂಬ ಬಿಲ್ಲವ ಹೆಂಗಸಿನಿಂದ ಕಲಿತದ್ದು. ಅವರ ಮುಟ್ಟಿನ ದಿನಗಳಲ್ಲಿ ನನ್ನಲ್ಲಿ ಮದ್ದು ಕೊಡಲು ಹೇಳುತ್ತಿದ್ದರು.

 • ಯಾವ ಯಾವ ರೋಗಕ್ಕೆ ಮದ್ದು ಕೊಡುತ್ತೀರಿ?

ಗರ್ಭಿಣಿ ಆದವರಿಗೆ ಗರ್ಭ ನಿಲ್ಲಲು, ಹೊಟ್ಟೆನೋವು, ಬಿಳಿಸೆರಗು, ಸೊಂಟನೋವು ಇತ್ಯಾದಿಗಳಿಗೆ ಮಹಿಳೆಯರಿಗೆ ಸಂಬಂಧಪಟ್ಟ ರೋಗಗಳಿಗೆ ಮದ್ದು ಕೊಡುತ್ತೇನೆ. ಗರ್ಭ ನಿಲ್ಲದವರಿಗೆ ಗರ್ಭ ನಿಲ್ಲಲು ಮೊದಲು ಮೂರು ದಿನ ಈಂದ್‌ಬೊಂಡು (ಬೂನೆಮರದ ತಿರುಳು) ಗೆ ಅಕ್ಕಿ ಹಾಕಿ ಅನ್ನ ಮಾಡಿ ಮುಂಜಾನೆ ಐದು ಗಂಟೆಗೆ ಊಟ ಮಾಡಿ ಮಲಗಬೇಕು. ನಂತರ ಒಂಭತ್ತು ದಿನಗಳಿಗೆ ಚೇರೆ ಕೆತ್ತೆ, ಕಷಾಯ ಮಾಡಿ ಕುಡಿಯಲು ಕೊಡಬೇಕು. ಪುರುಸರತ್ನ ಹಾಲಲ್ಲಿ ಅರೆದು ಮೂರು ದಿನ ಕುಡಿಯಬೇಕು. ನಂತರ ಮೂರು ದಿವಸ ಕೆಂದಾಳೆ ತೆಂಗಿನ ಕೊಂಬನ್ನು ಹಾಲಲ್ಲಿ ಅರೆದು ಕೊಡಬೇಕು. ತಿಂಗಳ ಮುಟ್ಟಿನ ಹೊಟ್ಟೆನೋವಿಗೆ, ಚಬಿ ರೋಗದ ಹೊಟ್ಟೆನೋವಿಗೆ ಚಬಿ ಚೊಪ್ಪನ್ನು ಮೂರು ದಿವಸ ಮುಂಜಾನೆ ಐದು ಗಂಟೆಗೆ ಕಿವುಚಿ ಕುಡಿಯಲು ಕೊಡಬೇಕು.

 • ಯಾವ  ಯಾವ ಸ್ಥಳಗಳಲ್ಲಿ ಹೆರಿಗೆ ಮಾಡಿಸಿದ್ದೀರಿ?

ಬದಿಯಡ್ಕದ ಶಾಸ್ತ್ರಿ ಆಸ್ಪತ್ರೆಯ ವೈದ್ಯರು ಹೆರಿಗೆ ಮಾಡಿಸಲು ಕರೆಸುತ್ತಿದ್ದರು. ಕಾಸರಗೋಡು ಜಿಲ್ಲೆಯ ಪೆರಡಾಲ, ಕೆಡೆಂಜಿ, ಬದಿಯಡ್ಕ, ಬರೆಲ್, ಒಳಮಲೆ, ಕಾಸರಗೋಡು ಮುಂತಾದ ಕಡೆ ಹೆರಿಗೆ ಮಾಡಿಸಲು ಹೋಗಿದ್ದೇನೆ. ನೋವು ಬರದವರಿಗೆ ಮಾತ್ರ ಡಾಕ್ಟ್ರ ಹತ್ತಿರ ಹೋಗ್ಲಿಕ್ಕೆ ಹೇಳುತ್ತೇನೆ. ನಾನು ಮದ್ದು ಕೊಟ್ಟು ಇಬ್ಬರು ಮಹಿಳೆಯರು ಮಾತ್ರ ಹೆರಲಿಲ್ಲ. ಉಳಿದ ಎಲ್ಲರೂ ಹೆತ್ತಿದ್ದಾರೆ.

 • ವರೆಗೆ ಎಷ್ಟು ಹೆರಿಗೆ ಮಾಡಿಸಿದ್ದೀರಿ?

ಲೆಕ್ಕ ಇಟ್ಟಿಲ್ಲ. ಸುಮಾರು ೩೦ ಕ್ಕೂ ಹೆಚ್ಚು.

 • ಹೆರಿಗೆ ಮಾಡಿಸುವಾಗಿನ ಕೆಲವು ವಿಶಿಷ್ಟ ಅನುಭಗಳು?

೭ ತಿಂಗಳಲ್ಲಿ ಹೊಟ್ಟೆಯಲ್ಲಿ ತೀರಿಕೊಂಡ ಮಗುವನ್ನು ತೆಗೆದದ್ದು ಯಾವಾಗಲೂ ನೆನಪಾಗುತ್ತದೆ. ಮೊದಲು ಮಗುವಿನ ಕಾಲು ಬಂದರೆ ಹೆರಿಗೆ ಮಾಡಿಸಲು ಕಷ್ಟ.

 • ಬಾಣಂತಿಗೆ ಕೊಡುವ ಮದ್ದು ಯಾವುದು?

ಬಾಣಂತಿಗೆ ೩ ದಿನ ಕಾಲ್ಜೀರಿಗೆ, ಕರಿಮೆಣಸು, ಶುಂಠಿ ಹಾಕಿದ ಕಷಾಯ ಕೊಡಬೇಕು. ಓಮದ ಪೊಲದ್ಯ ಒಂದು ತಿಂಗಳ ಕಾಲ ಕೊಡಬೇಕು. ಓಮ, ಓಲೆಬೆಲ್ಲ, ಬೆಂಗಿನಕಾಯಿ, ಎಣ್ಣೆ, ಶುಂಠಿ ಇಷ್ಟನ್ನು ಬೇಯಿಸಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಊಟದ ಜೊತೆಗೆ ೪೦ ದಿನಗಳ ಕಾಲ ಕೊಡಬೇಕು. ಕೊನೆಗೆ ಸಾಸಿವೆಯ ಅನ್ನ, ಮೆಂತೆಯ ಗಂಜಿ ಕೊಡಬೇಕು.

 • ಬೇರೆ ಯಾವ ರೋಗಗಳಿಗೆ ಮದ್ದು ಕೊಡುತ್ತೀರಿ?

ಸರ್ಪಸುತ್ತು: ಏಕನಾಯಕನ ಬೇಕು, ಈಶ್ವರ ಬೇರು, ಚೆಂಬೊಲ್ಲ್‌, ನೀಲ ಸೊಪ್ಪನ್ನು ಅರೆದು ಹಚ್ಚಬೇಕು.

ಕುರಿ: ಸೋರಿ ಹೋಗಲ ಪರಂಟೊಲು ಸೊಪ್ಪನ್ನು ಗುದ್ದಿ ರಸ ತೆಗೆದು ಕೊಡಬೇಕು.

ಡೆಂಜಿ ಬಾಪು: ತೋಡಿನ ಬದಿಯ ಏಡಿ ಹೊರಗೆಸ ಹಾಕಿದ ಮಣ್ಣು ಮತ್ತು ಕೊಳಿಯ ಕಪ್ಪಗಿನ ಹಿಕ್ಕೆಯನ್ನು ಬೆರೆಸಿ ಹಚ್ಚಬೇಕು.

ಕೆಪ್ಪಟೆರಾಯ: ಹಲಸಿನ ಅಣಬೆ, ಉಯಿಲಂಗಟ್ಟೆ ಮುಳ್ಳು ಬೆರೆಸಿ ಹಚ್ಚಬೇಕು.

ನಾಲಗೆ ಹುಣ್ಣು: ಕೊಟ್ಟೆ ಮುಳ್ಳು ಕೆತ್ತೆಯನ್ನು ಅನ್ನದೊಂದಿಗೆ ಬೇಯಿಸಿ ತಿನ್ನಬೇಕು.

ಕೋರಅಮ್ಮ ಬಿದ್ದಾಗ: ಸೀಯಾಳ ಕೊಡಬೇಕು, ಬಾಳೆಹಣ್ಣು, ಹೆಸರು ಇತ್ಯಾದಿ ಕೊಡಬೇಕು. ಕಣ್ಣಿಗೆ ಚೂರಿಮುಳ್ಳಿನ ಎಲೆಯನ್ನು ಜಜ್ಜಿ ಅದರ ರಸ ಹಾಕಬೇಕು. ಇಲ್ಲದಿದ್ದರೆ ಕೊತ್ತಂಬರಿಯನ್ನು ನೀರಿನಲ್ಲಿ ನೆನೆಹಾಕಿ, ಶುದ್ಧ ಬಟ್ಟೆಯಲ್ಲಿ ಕಣ್ಣಿಗೆ ಅದರ ನೀಡು ಬಿಡಬೇಕು. ಹಸಿ ಅರಿಶಿನ ಮತ್ತು ಪಲ್ಲಿ ಸೊಪ್ಪನ್ನು ತೇದು ಮೈಗೆ ಹಚ್ಚಿ ಸಂಜೆ ಬೇವಿನ ಸೊಪ್ಪು ಬೇಯಿಸಿ ಆ ನೀರಿನಲ್ಲಿ ಸ್ನಾನ ಮಾಡಿಸಬೇಕು.

ಹೊಟ್ಟೆ ನೋವು: ಪಾಂಡಿಲ್ ಸೊಪ್ಪಿಗೆ ಚಿಟಿಕೆ ಉಪ್ಪು ಹಾಕಿ ಅರೆದು ಕೊಡಬೇಕು. ಇಲ್ಲದಿದ್ದರೆ ನೊರೆಕಾಯಿಯನ್ನು ಕಿವುಚಿ ಕುಡಿಯಲು ಕೊಡಬೇಕು.

ಕಟ್ರೆ (ಜೀರ್ಣ ಆಗರಿದುವುದಕ್ಕೆ): ಮೊದಲು ಸಂದು ಸಂದು ತಿಕ್ಕಬೇಕು. ಕಬ್ಬಿಣ ಕಾಯಲಿಕ್ಕೆ ಇಟ್ಟು, ನುಗ್ಗೆ ಕೆತ್ತೆಯನ್ನು ಕಾದ ಕಬ್ಬಿಣದ ಮೇಲೆ ಇಟ್ಟು ಬಿಸಿಯಾದ ಎರಡು ಹನಿ ತಲೆಗೆ ಹಾಕಬೇಕು. ನಂತರ ಜೀರ್ಣ ಆಗುತ್ತದೆ.

ವಿಷ ತಾಗಿದಾಗ: ಬೇರೆ ಬೇರೆ ವಿಷಕ್ಕೆ ಬೇರೆ ಬೇರೆ ಮದ್ದುಗಳಿವೆ. ಎದುರೊಳಿ ತಪ್ಪು ಹಿಚುಕಿ ರಸ ಕುಡಿಯಲು ಕೊಡಬೇಕು. ಬರಿಕ್ಕೆ ಹಲಸಿನ ಕಾಯಿಯ ಸೊಪ್ಪನ್ನು ತಲೆಗೆ ನೋವಾಗುವವರೆಗೆ ಹೊಡೆಯಬೇಕು.

 • ನೀವು ಕೊಡುವ ಮದ್ದಿಗೆ ಪ್ರತಿಯಾಗಿ ಏನು ಪಡೆಯುತ್ತೀರಿ?

ನಾನು ಕೊಡುವ ಮದ್ದಿಗೆ ಹಣ ತೆಗೆದುಕೊಳ್ಳುವುದಿಲ್ಲ. ಬದಲಿಗೆ ನಾನು ಕಲ್ಲುರ್ಟಿ ದೈವಕ್ಕೆ ಒಂದು ಅಗೆಲು ನೆನೆದು ಮದ್ದು ಕೊಡುವುದು. ಈ ಅಗೆಲಿನ ಖರ್ಚನ್ನು ೨೫ ರೂಪಾಯಿ ಕೊಟ್ಟರೆ ಸಾಕು.

 • ನಿಮ್ಮಲ್ಲಿಗೆ ಯಾವ ಯಾವ ಊರುಗಳಿಂದ ಮದ್ದಿಗೆ ಬಂದಿದ್ದಾರೆ?

ಕಾಸರಗೋಡು, ಮಂಗಳೂರು, ನಾಯ್ಕಾಪು ಹಾಗೂ ಇಲ್ಲಿನ ಸುತ್ತಮುತ್ತಲ ಊರುಗಳಿಂದ ಬಂದಿದ್ದಾರೆ.

 • ಈಗಲೂ ಮದ್ದು ಕೊಡುತ್ತೀರಾ?

ಬಂದರೆ ಈಗಲೂ ಮದ್ದು ಕೊಡುತ್ತೇನೆ. ಈಗ ನಾಟಿ ಮದ್ದು ಸಿಗುತ್ತಿಲ್ಲ. ಕಾಡುಗಳು ಕಡಿಮೆಯಾಗಿ ಔಷಧೀಯ ಸಸ್ಯಗಳು ಕಣ್ಮರೆಯಾಗಿವೆ.

 • ನಿಮಗೆ ಪ್ರಶಸ್ತಿಗಳು ಯಾವುದಾದರೂ ಬಂದಿದೆಯಾ?

ಇಲ್ಲ.

 

ಸಮಾರೋಪ

ಮೊಗೇರ ಜನಾಂಗದ ಮಹಿಳೆಯರು ಕೂಡಾ ತಮ್ಮಲ್ಲಿ ಸ್ವಾಯತ್ತವಾದ ಅನೇಕ ಜ್ಞಾನಗಳನ್ನು ಹೊಂದಿದ್ದಾರೆ. ಗಂಡ ಹೆಂಡಿರಲ್ಲಿ ಸಮಾನವಾದ ಸಹಭಾಗಿತ್ವದ ಜೊತೆಗೆ ಕೌಟುಂಬಿಕಸ ಜವಾಬ್ದಾರಿಯು ಸಮಾನವಾಗಿ ಹಂಚಿಕೊಳ್ಳುತ್ತಿದ್ದ ಸಾಮಾಜಿಕ ಹಿನ್ನೆಲೆಯನ್ನು ಇವರಲ್ಲಿ ಕಾಣಬಹುದು. ಜನಪದ ವೈದ್ಯ, ಜನಪದ ಸಾಹಿತ್ಯ, ಅಪಾರ ಸಂಖ್ಯೆಯ ಗಾದೆ, ಒಗಟು ಇಂತಹ ಜ್ಞಾನಗಳು ಮೊಗೇರ ಪುರುಷನ ಹಾಗೆಯೇ ಮಹಿಳೆಯರಿಗೂ ಕೂಡಾ ಪಾರಂಪರಿಕವಾಗಿ ಬಂದಿವೆ. ಇದಕ್ಕೆ ಮುಖ್ಯ ಕಾರಣ ಅವರು ಬದುಕುತ್ತಿದ್ದ ಜಾನಪದೀಯ ಪರಿಸರವೇ ಕಾರಣ. ಅಪಾರವಾದ ಜನಪದ ಸಾಹಿತ್ಯವನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡ ಮೊಗೇರ ಮಹಿಳೆಯರ ಸಂಖ್ಯೆ ಅಪಾರ. ಇದಕ್ಕೆ ಮುಖ್ಯ ಕಾರಣ ಕೃಷಿಕೆಲಸಗಳನ್ನು ಭಾಗಿಯಾಗುವುದು. ತನ್ನ ಕೆಲಸದ ಶ್ರಮವನ್ನು ಕಡಿಮೆಗೊಳಿಸಿಕೊಳ್ಳಲು ಇಂತಹ ಅನೇಕ ರಚನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸ್ವಾಭಾವಿಕ. ಮುಂದಿನ ತಲೆಮಾರಿನವರಿಗೆ ದಾಟಿಸುವ ಪ್ರಕ್ರಿಯೆ ಮಾತ್ರ ಕಡಿಮೆ ಪ್ರಮಾಣದಲ್ಲಿ ನಡೆದಿದೆ. ಈಗಿನ ತಲೆಮಾರಿನ ಮಕ್ಕಳಿಗೆ ತಂತಹ ಪಾರಂಪರಿಕ ವಿಷಯಗಳಲ್ಲಿ ಆಸಕ್ತಿ ಕ್ಷೀಣಿಸಿದೆ.

ಆಚರಣೆಯಲ್ಲಿ ಮಹಿಳೆಯ ಭಾಗವಹಿಸುವಿಕೆ ಹಾಗೂ ಆರಾಧನೆ ಪಡೆದುಕೊಳ್ಳುವ ಮೊಗೇರ ಮಹಿಳೆಯ ಹಿನ್ನೆಲೆಯನ್ನು ಗಮನಿಸಿದಾಗ ಚೆನ್ನುವಿನ ಪಾತ್ರವು ಶೋಷಣೆಗೊಳಗಾದ ಮೊಗೇರ ಮಹಿಳೆಯರ ಪ್ರತಿನಿಧಿಯಂತೆ ಆಕೆ ಕಂಡು ಬರುತ್ತಾಳೆ. ದನಿ ಒಕ್ಕಲುಗಳಲ್ಲಿ ದುಡಿದು ಬದುಕುತ್ತಿದ್ದ ಮೊಗೇರ ಮಹಿಳೆಯರು ತಮ್ಮ ಒಡೆಯರಿಂದ ದೈಹಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು. ಈ ಶೋಷಣೆಯ ವಿರುದ್ಧ ಧ್ವನಿ ಎತ್ತುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ತಮ್ಮ ಬಿಡುವಿನ ವೇಳೆಯಲ್ಲಿ ಮನರಂಜನೆಯಲ್ಲಿಯೂ ಕೂಡಾ ಮಹಿಳೆಯರ ಭಾಗವಹಿಸುವಿಕೆಯು ಪುರುಷನೊಂದಿಗೆ ಸಮಾನವಾಗಿತ್ತು. ದುಡಿಕುಣಿತಗಳಲ್ಲಿ ಮಹಿಳೆಯು ಪಾಡ್ದನ ಹಾಡುವುದರಲ್ಲಿ ಹಾಗೂ ಕುಣಿಯುವುದರಲ್ಲಿ ಪುರುಷರಿಗೆ ಜೊತೆಗಾಗಿ ನಿಲ್ಲುತ್ತಿದ್ದಳು.

ಆಧುನಿಕ ಸಂದರ್ಭದಲ್ಲಿ ಮೊಗೇರ ಮಹಿಳೆಯರು ಕೃಷಿ, ಹೈನುಗಾರಿಕೆ, ಬೀಡಿ ಉದ್ಯಮ, ಗೇರು ಬೀಜ ಕಾರ್ಖಾನೆ, ರಬ್ಬರ್ ಟ್ಯಾಪಿಂಗ್‌ ಮುಂತಾದ ಉದ್ದಿಮೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಕುಟುಂಬಶ್ರೀ, ಸ್ವಸಹಾಯ ಗುಂಪುಗಳ ಸಕ್ತಿಯ ಸದಸ್ಯತನವನ್ನು ಹೊಂದಿದ್ದು ವಿವಿಧ ಗೃಹೋದ್ಯಮಗಳನ್ನು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ರಾಜಕೀಯದಲ್ಲಿ ಮೊಗೇರ ಮಹಿಳೆಯರ ಭಾಗವಹಿಸುವಿಕೆ ಮತದಾನಕ್ಕಷ್ಟೇ ಸೀಮಿತ. ಬೆರಳೆಣಿಕೆಯಷ್ಟು ಮಹಿಳೆಯರು ರಾಜಕೀಯ ರಂಗದಲ್ಲಿ ಪಂಚಾಯತ್ ಸದಸ್ಯತನವನ್ನು ಪಡೆಯುವಲ್ಲಿ ಮಾತ್ರ ಸಫಲರಾಗಿದ್ದಾರೆ.

ಸರ್ಕಾರಿ ಉದ್ಯೋಗದಲ್ಲಿ ಮೊಗೇರ ಮಹಿಳೆಯರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅಂಗನವಾಡಿ ಶಿಕ್ಷಕಿಯರಾಗಿ ಸೀಮಿತ ಸಂಖ್ಯೆಯ ಮಹಿಳೆಯರನ್ನು ಕಾಣಬಹುದು.

ಮೊಗೇರ ಸಂಸ್ಕೃತಿಯು ಹೊಂದಿದ್ದ ಜೀವನಾರ್ತನದ ಅನೇಕ ಆಚರಣೆಗಳಲ್ಲಿ ತಮ್ಮದೇ ಆದ ಅನನ್ಯತೆಗಳನ್ನು ಹೊಂದಿದ್ದಾರೆ. ಹಳ್ಳಿಗಳಲ್ಲಿ ವಾಸಿಸುತ್ತಿರುವ ಮೊಗೇರರು ತಮ್ಮ ಸಂಸ್ಕೃತಿಯ ಅನೇಕ ಆಚರಣೆಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ವಿದ್ಯಾಭ್ಯಾಸ ಪಡೆದು ಸರ್ಕಾರಿ ಉದ್ಯೋಗಗಳಲ್ಲಿರುವ ಮೊಗೇರರು ಇದೀಗ ತಮ್ಮ ಸಂಸ್ಕೃತಿಯ ಆಚರಣೆಗಳನ್ನು ಒಂದೊಂದಾಗಿ ಬಿಡುತ್ತಾ ಬಂದಿದ್ದಾರೆ.

ಮೊಗೇರರ ಸಂಸ್ಕೃತಿಯಲ್ಲಿ ಮಹಿಳೆಗೆ ಇದ್ದಂತಹ ಸ್ವಾತಂತ್ಯ್ರ, ಸಮಾನತೆಗಳು ಇಂದಿನ ಆಧುನಿಕ ಸಂದರ್ಭದಲ್ಲಿ ಇಲ್ಲವೆಂದೇ ಹೇಳಬಹುದು. ಇದಕ್ಕೆ ಪ್ರಮುಖ ಕಾರಣ ವೈದಿನ ಧರ್ಮದ ಪ್ರಭಾವ ಹಾಗೂ ಬಾಹ್ಯ ಪ್ರಪಂಚಕ್ಕೆ ಹಾಗೂ ಆಧುನಿಕ ವಿದ್ಯಾಭ್ಯಾಸಕ್ಕೆ ತಮ್ಮನ್ನು ತೆರೆದುಕೊಂಡ ವಿದ್ಯಾವಂತ ಮೊಗೇರರು ತಮ್ಮ ಸಂಸ್ಕೃತಿಯ ಗಟ್ಟಿಸತ್ವವನ್ನು ತಿರಸ್ಕರಿಸಿ ವೈದಿನ ಸಂಸ್ಕೃತಿಯನ್ನು ಅನುಸರಿಸುತ್ತಿರುವುದು ಜೀವಂತ ಸಂಸ್ಕೃತಿಯೊಂದರ ವಿನಾಶಕ್ಕೆ ಕಾರಣವಾಗಿದೆ. ಈಗಿನ ಸಂದರ್ಭದಲ್ಲಿ ಹಿಂದಿನ ಕಾಲದಲ್ಲಿ ಸಿಗುತ್ತಿದ್ದ ಸಮಾನ ಸ್ಥಾನಮಾನಗಳು ಸಿಗುತ್ತಿಲ್ಲ. ಬದಲಾಗಿ ಪುರುಷ ಪ್ರಧಾನವಾದ ಕೌಟುಂಬಿಕ ವ್ಯವಸ್ಥೆಯು ತಲೆ ಎತ್ತಿರುವುದನ್ನು ಗಮನಿಸಬಹುದು. ವಿದ್ಯಾಭ್ಯಾಸ ಪಡೆದ ಮೊಗೇರ ಪುರುಷರು ಅಂತರ್ಜಾತಿಯ ವಿವಾಹವಾಗುತ್ತಿರುವುದು ಇತ್ತೀಚೆಗಿನ ಬೆಳವಣಿಗೆ. ಅಂತರ್ಜಾತೀಯ ವಿವಾಹದಲ್ಲಿ ಮಹಿಳೆಯರ ಸಂಖ್ಯೆ ಇಲ್ಲವೆಂದೇ ಹೇಳಬಹುದು.

ಒಟ್ಟಿನಲ್ಲಿ ಮೊಗೇರ ಸಂಸ್ಕೃತಿಯಲ್ಲಿ ಮಹಿಳೆಗೆ ಒಂದು ಕಾಲದಲ್ಲಿ ಇದ್ದಂತಹ ಸ್ವಾತಂತ್ಯ್ರ, ಅಭಿವ್ಯಕ್ತಿ ಸ್ವಾತಂತ್ಯ್ರ ಇಂದಿನ ಮೊಗೇರ ಮಹಿಳೆಯರಿಗೆ ಇಲ್ಲವೆಂದೇ ಹೇಳಬಹುದು. ಕೌಟುಂಬಿಕ ಜವಾಬ್ದಾರಿ, ದೈಹಿಕ ಶ್ರಮ, ಮನರಂಜನೆ ಇತ್ಯಾದಿಗಳಲ್ಲಿ ಪುರುಷನ ಹಾಗೆಯೇ ಇಂದಿನ ಮಹಿಳೆಯೂ ಕೂಡಾ ಭಾಗವಹಿಸುತ್ತಾಳೆ. ಶ್ರಮ ವಿಭಜನೆಯು ಕೃಷಿ ಕೆಲಸಗಳಲ್ಲಿ ಇಂದಿನ ತಲೆಮಾರು ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ. ಪರ್ಯಾಯವಾಗಿ ಬೇರೆ ಬೇರೆ ಗೃಹ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಕಾಣಬಹುದು. ಜೀವಂತ ಸಂಸ್ಕೃತಿಯೊಂದು ಕಾಲಕ್ಕೆ ತಕ್ಕ ಹಾಗೆ ಬದಲಾವಣೆಯನ್ನು ಪಡೆದುಕೊಂಡು ತನ್ನ ಅನನ್ಯತೆಯನ್ನು ಕಳೆದುಕೊಂಡಿರುವುದಕ್ಕೆ ಮೊಗೇರ ಸಂಸ್ಕೃತಿಯು ಉತ್ತಮ ಉದಾಹರಣೆ.