ಮೋಡಗಳೇ ಮೋಡಗಳೇ
ಋತು ಋತುವಿಗು ಬಹುರೂಪದಿ ಚಲಿಸುವ
ನೆಲಮುಗಿಲಿನ ಸಂತಾನಗಳೇ.

ಬೆಂದ ನೆಲಕೆ ತಂಪೆರೆಯುವ ಮನಸಿನ
ಉದಾರ ಕರುಣೆಯ ಕನಸುಗಳೇ
ಆಷಾಢದ ಆಕಾಶದ ಪಾತ್ರದಿ
ಹರಿವ ಕಲ್ಪನೆಯ ಹೊನಲುಗಳೇ.

ಶಾರದ ನೀರದ ಶಿಲ್ಪಾಕೃತಿಗಳ
ಬಾನೊಳು ರಚಿಸುವ ಪ್ರತಿಭೆಗಳೇ
ಗುಡುಗು-ಮಿಂಚುಗಳ ಸೃಜಿಸಿ ಲೋಕವನು
ತಲ್ಲಣಗೊಳಿಸುವ ಸಂಚುಗಳೇ.

ದಡ ಮೀರದೆ ಹೊಯ್ದಾಡುವ ಕಡಲಿನ
ಬಿಡುಗಡೆಯಾಸೆಯ ರೂಪಗಳೇ
ಎಂದಿನಿಂದಲೋ ಬೆರಗು ಹುಟ್ಟಿಸುತ
ತೇಲುವ ನೀರಿನ ತೇರುಗಳೇ !