ಮಾಗಿಯ ನೀರವ ನಿಟ್ಟುಸಿರಿನ ಬನ
ತರಗೆಲೆಗಳ ಆಕ್ರಂದನ
ಚದುರಿದ ಮಂದೆಯ ಮುಗಿಲ ಬಯಲಿನಲಿ
ಸಂಜೆ ಬೆಳಕುಗಳ ಕರುಣ ಸ್ವನ !

ಬೋಳು ಬೋಳು ಮರ, ಸುತ್ತಲು ಹಬ್ಬಿದೆ
ಘೋರ ತಪಸ್ಸಿನ ಆವರಣ
ನಡುವೆ ಏನಿದೀ ಒಂದೇ ಮರದೊಳು
ವಸಂತ ಸಂಭ್ರಮದವತರಣ !

ಟೊಂಗೆ ಟೊಂಗೆಯಲಿ ಹಳದಿಯ ಹೂವಿನ
ಹೊರೆ ಹೊರೆ ಗಾಳಿಗೆ ತೂಗುತಿದೆ.
ಎಲೆಯೊಂದಾದರು ಇಲ್ಲದ ಕೊಂಬೆಗೆ
ವಿಚಿತ್ರ ಸಂಭ್ರಮ ತುಂಬುತಿದೆ !

ಅಕಾಲ ವಸಂತ ಬಂದು ಹೂಡಿತೋ
ತನ್ನ ಬಿಡಾರವನಿದರೊಳಗೆ |
ಯಾರ ತಪಸ್ಸಿಗೆ ಕೆರಳಿದನಿಂದ್ರನು,
ಬರುವಳೆ ಅಪ್ಸರೆ ನಾಟ್ಯಕ್ಕೆ ?

ನಗರದ ನಡುವಣ ಈ ಉಪವನದೊಳು
ಯಾವ ಪುರಾಣದ ಒಂದು ಪುಟ,
ಪುನರಭಿನಯದಲಿ ತೊಡಗಿಹುದೀ ತೆರ ?
ವಿಸ್ಮಯಕಾರಕವೀ ಮಾಟ !

ದಿಟವಿರಲಾರದು ಹೂ ತುಂಬಿದ ಮರ,
ಯಾರದೊ ಮೋಡಿಯ ರೂಪವಿದು,
ನಾಟಕ ಮುಗಿಯಲು ಮತ್ತೆ ಸಲ್ಲುವುದೊ
ಲೋಕದ ವಾಸ್ತವ ಮಣ್ಣಿಗಿದು ?