ಮಳೆ ನಿಲ್ಲಿಸುವ ಆಚರಣೆಗಳು:

 ಮಳೆ ಬರಿಸುವ ಆಚರಣೆಗಳಿಗೆ ಹೋಲಿಸಿದಾಗ ಮಳೆ ನಿಲ್ಲಿಸುವ ಆಚರಣೆಗಳು ತೀರಾ ವಿರಳವೆಂದೇ ಹೇಳಬಹುದು. ’ಮಳೆ ಬಂದರೆ ಕೇಡೇ ಮಗ ಉಂಡರೆ ಕೇಡೇ’ ಎಂಬ ಗಾದೆಯಂತೆ ಮಳೆ ಹೆಚ್ಚಾಗಿ ಸುರಿದರೂ ಅಷ್ಟೇನೂ ನಷ್ಟವಿಲ್ಲ. ಆದರೂ ಅದು ತೀರಾ ಬಿರುಸಾಗಿ ಪ್ರವಾಹದೊಪಾದಿಯಲ್ಲಿದ್ದರೆ ಅದು ನಿಲ್ಲಲಿ ಎಂಬ ಆಶಯದಿಂದ ಕೆಲವು ಆಚರಣೆಗಳು ರೂಢಿಯಲ್ಲಿವೆ. ಮಳೆಯ ಸಂರಕ್ಷಕ ಎಂದು ಭಾವಿಸಲಾಗುವ ಬೆಣಚುಕಲ್ಲು, ಕಪ್ಪೆ ಮುಂತಾದುವನ್ನು ಅತಿ ವೃಷ್ಟಿಯ ಸಂದರ್ಭದಲ್ಲಿ ಬೆಂಕಿಯ ಬಳಿ ಇಡುವುದು ಒಂದು ರೀತಿ. ಹರಕು ಮೆಟ್ಟಿಗೆ ಬೆಂಕಿ ಹಚ್ಚಿ ಮಲೆಯಲ್ಲಿಡುವ ಸಂಪ್ರದಾಯ ಬೆಳಗಾಗಿ ನಿಲ್ಲುತ್ತದೆ ಎಂಬ ಭಾವನೆ ಲಂಬಾಣಿಗಳಲ್ಲಿದೆ. ಮಳೆ ಬರಿಸುವ ಅಥವಾ ನಿಲ್ಲಿಸುವ ಎರಡೂ ಆಚರಣೆಗಳಲ್ಲಿ ನಗ್ನತೆ ಬಹು ಮುಖ್ಯ ಅಂಶವಾಗುವುದುಂಟು. ಗುರ್ಚಿ, ಮಳೆಮಲ್ಲಪ್ಪ, ಮೊದಲಾದ ಆಚರಣೆಗಳಲ್ಲಿ ಮಳೆರಾಯನ ಪ್ರತೀಕವನ್ನು ಹೊರುವ ಹುಡುಗ ನಗ್ನನಾಗಿರುತ್ತಾನೆ ಎಂಬುದನ್ನು ಗಮನಿಸಬಹುದು. ಇಲ್ಲಿ ಮಳೆ ಫಲವಂತಿಕೆಯ ಸಂಕೇತವಾಗಿದ್ದು ಇದನ್ನು ಪ್ರೇರೇಪಿಸುವುದಕ್ಕೆ ನಗ್ನತೆ ಅಗತ್ಯವಾಗುತ್ತದೆ. ಅತಿವೃಷ್ಟಿಯ ಸಂದರ್ಭದಲ್ಲಿ ಚಿಕ್ಕಮಕ್ಕಳನ್ನು ಬೆತ್ತಲೆಮಾಡಿ ಅವರ ಕೈಯಿಂದ ಒಲೆಯೊಳಗಿನ ಕೊಳ್ಳಿಯನ್ನು ಹೊರಗೆಸೆಯುವಂತೆ ಮಾಡಿದರೆ ಮಳೆ ಬಿಡುತ್ತದೆ ಎಂಬ ನಂಬಿಕೆ ಇದೆ. ಎಳೆ ಮಕ್ಕಳು ಚಡ್ಡಿ ಬಿಚ್ಚಿ ತಮ್ಮ ಹಿಂಭಾಗವನ್ನು ತೋರಿಸಿದರೆ ಮಳೆ ನಿಲ್ಲುವುದು ಎಂಬ ನಂಬಿಕೆಯೂ ಇದೆ. ಮಳೆ ನಿಲ್ಲಿಸಬೇಕಾಧರೆ ಬಯಲಲ್ಲಿ ಕಕ್ಕಸಿಗೆ ಕೂರಬೇಕು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ’ಸ್ವಾತಿ ನಾ ಹತ್ಯಾತಿ ಅಂದ್ರೂ ಬಿಡದು’ ಎಂಬ ಗಾದೆ ಹುಟ್ಟಿರಬಹುದು ಎಂದು ಕೆಲವು ವಿದ್ವಾಂಸರು ವಿಶ್ಲೇಷಿಸಿದ್ದಾರೆ. ಕೆಲವು ಕಡೆ ಮಳೆರಾಯನನ್ನು ಬೈಯ್ದು ಮಳೆಯನ್ನು ಹೋಗಲಾಡಿಸುವ, ಪೊರಕೆಯನ್ನು ತಲೆಕೆಳಗಾಗಿ ಇಡುವ ವಿಧಾನಗಳೂ  ರೂಢಿಯಲ್ಲಿವೆ.

ಮಳೆಯನ್ನು ನಿಲ್ಲಿಸುವ ಸಲುವಾಗಿ ಎಲ್ಲರೂ ಉಪವಾಸವಿದ್ದೂ ಪೂಜೆ ಪುನಸ್ಕಾರಗಳಲ್ಲಿ ತೊಡಗುವ, ಜಲದೇವಿಗೆ ನೈವೇದ್ಯ ಅರ್ಪಿಸುವ ಕೆಲವು ಉಪಾಸನಾ ವಿಧಿಗಳು ಉತ್ತರಭಾರತದಲ್ಲಿವೆ.

ಮಳೆಗೆ ಸಂಬಂಧಿಸಿದಂತೆ ಇರುವ ಇಂತಹ ಆಚರಣೆಗಳನ್ನು ಆಚರಿಸಿದಾಗ ಖಂಡಿತ ಮಳೆಯಾಗುತ್ತಿತ್ತು. ಆದರೆ ಇಂದು ಮನುಷ್ಯ ಧರ್ಮದ ದಾರಿಬಿಟ್ಟಿರುವುದರಿಂದ ಈ ಆಚರಣೆಗಳ ಬಲಕುಂದಿದೆ ಎಂದು ನಮ್ಮ ಹಿರಿಯರು ಹೇಳುವುದನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಇಂದಿನವರ ದೃಷ್ಟಿಯಲ್ಲಂತೂ ಈ ಎಲ್ಲ ಆಚರಣೆಗಳು ಅರ್ಥಹೀನವಾಗಿ, ತಮಾಷೆಯವಾಗಿ, ಅವೈಜ್ಞಾನಿಕವಾಗಿ ಕಾಣುತ್ತವೆ. ಮಳೆಯಾಗುತ್ತದೊ ಇಲ್ಲವೋ ಎಂಬ ಬಗ್ಗೆ ಅಷ್ಟೊಂದು ಕರಾರುವಕ್ಕಗಿ ಭವಿಷ್ಯ ನುಡಿಯ ಬಲ್ಲ ಜನಪದರು ಇಂಥ ಆಚರಣೆಗಳ ಮೊರೆ ಹೋಗುವುದು, ಇಂಥ ಮೂಢ ನಂಬಿಕೆಗಳಿಗೆ ಶರಣಾಗಿರುವುದು ಒಂದು ರೀತಿಯ ವಿಪರ್ಯಾಸ ಎನಿಸುತ್ತದೆ. ಅನಿರ್ಬಂಧಿತವಾದ ಮಳೆಯನ್ನು ನಿಯಂತ್ರಣಕ್ಕೊಳಪಡಿಸುವ ಶಕ್ತಿ ಇಂತಹ ಆಚರಣೆಗಳಿಗಿಲ್ಲ ಎಂಬ ಅಭಿಪ್ರಾಯವೂ ಮೂಡುತ್ತದೆ. ಆದರೆ ಈ ಯಾವ ಆಚರಣೆಗಳೂ ಮೂಲರೂಪದಲ್ಲಿದ್ದಂತೆಯೇ ಇಂದು ಉಳಿದು ಬಂದಿಲ್ಲ ಎಂಬ ಸಂಗತಿಯನ್ನು ಗಮನದಲ್ಲಿಡಬೇಕಾದುದು ಬಹಳ ಮುಖ್ಯ. ಇವೆಲ್ಲವೂ ಇಂದು ಕೇವಲ ಸಾಂಕೇತಿಕವಾಗಿ ಮಾತ್ರ ಉಳಿದು ಬಂದಿವೆ. ಆದ್ದರಿಂದ ಈ ಆಚರಣೆಗಳ ಮೂಲ ಸ್ವರೂಪವನ್ನು ತಿಳಿಯದೆ ಅವುಗಳ ಬಗ್ಗೆ ನಿರ್ಣಯವನ್ನೂ ತೆಗೆದುಕೊಳ್ಳುವುದು ಅಷ್ಟು ಸಾಧ್ಯವಲ್ಲ.

ಮಳೆಗೆ ಸಂಬಂಧಿಸಿದ ಇತರ ವಿದ್ಯಮಾನಗಳು: ಮಳೆ ಹಾಗೂ ಅದರ ಸಂಬಂಧವಾಗಿ ಕಾಣಿಸಿಕೊಳ್ಳುವ ಗುಡುಗು, ಸಿಡಿಲು, ಮಿಂಚು, ಕಾಮನಬಿಲ್ಲು ಇತ್ಯಾದಿಗಳ ಬಗ್ಗೆ ಜಗತ್ತಿನ ಎಲ್ಲ ಸುಸಂಸ್ಕೃತಿಗಳಲ್ಲೂ ಬಹು ವರ್ಣರಂಜಿತ ಕಲ್ಪನೆಗಳಿವೆ. ಪ್ರತಿಯೊಂದು ಸಂಸ್ಕೃತಿಯಲ್ಲೂ ಸಿಡಿಲನ್ನು ದೇವತೆಯ ಕೋಪದ ಪ್ರಕಟಣೆ ಅಥವಾ ದೇವರು ಕೊಡುವ ಶಿಕ್ಷೆಯ ರೂಪ ಎಂದು ಭಾವಿಸಲಾಗಿದೆ. ಸಿಡಿಲಿನ ಉಗ್ರರೂಪ ಹಾಗೂ ವಿನಾಶಕಾರಿ ಗುಣವೇ ಈ ರೀತಿಯ ಭಾವನೆಗೆ ಕಾರಣ ಎಂಬುದು ಸ್ಪಷ್ಟ. ಮಿಂಚು ಹಾಗೂ ಸಿಡಿಲನ್ನು ದೇವತೆಯ ಆಯುಧ ಎಂಬಂತೆಯೇ ಜಗತ್ತಿನ ಬಹುತೇಕ ಪುರಾಣಗಳಲ್ಲಿ ಚಿತ್ರಿಸಲಾಗಿದೆ. ಸಿಡಿಲು ಬಿದ್ದರೆ ಊರಿಗೆ ಒಳ್ಳೆಯದಲ್ಲ ಎಂದು ಸಿಡಿಲು ಬಿದ್ದ ಜಾಗಾಕ್ಕೆ ತಂಬಿಟ್ಟಿನಾರತಿ ತೆಗೆದುಕೊಂಡು ಹೋಗಿ ಟಗರಿನ ಬಲಿಕೊಡುವ ರೂಢಿ ಕೋಲಾರ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿದೆ. ಊರಿಗೊದಗಿದ ಕೇಡನ್ನು ನಿವಾರಿಸುವುದಕ್ಕಾಗಿ ಇಲ್ಲಿ ಇದೇ ಊರಿನ ಜನರು ಭಾಗಿಯಾಗುತ್ತಾರೆ. ಸಿಡಿಲು ಬಿದ್ದು ಸತ್ತ ಕುರಿಮೇಕೆಗಳನ್ನು ಸಹ ತಿನ್ನುವುದಿಲ್ಲ. ಸಿಡಿಲಿನ ಬಗ್ಗೆ ಇದೇ ರೀತಿಯ ಭಾವನೆ ಇರುವುದನ್ನು ಪಶ್ಚಿಮ ಆಫ್ರಿಕಾದ ದಾಹೊವಿಯಲ್ಲಿ ಕಾಣಬಹುದು. ಆದರೆ ಗ್ರೀಸಿನಲ್ಲಿ ಗುಡುಗು ಹಾಗೂ ಸಿಡಿಲುಗಳನ್ನು ಜೂ ದೇವನ ಪ್ರಕಟನಾ ರೀತಿ ಎಂದು ಭಾವಿಸುವುದರಿಂದ ಸಿಡಿಲು ಬಿದ್ದ ಜಾಗವನ್ನು ಪವಿತ್ರವೆಮದು ಪರಿಗಣಿಸುತ್ತಾರೆ. ನಮ್ಮಲ್ಲಿ ಸಿಡಿಲನ್ನು ಅರ್ಜುನ ಬಿಡುವ ಚಿನ್ನದ ಬಾಣ ಎಂದೂ ಕಲ್ಪಿಸಿದ್ದಾರೆ. ಸಿಡಿಲು ಬಿದ್ದ ಜಾಗದಲ್ಲಿ ಸಗಣಿಯ ತೊಟ್ಟಿಯನ್ನು ಹಾಕಿದರೆ ಅದು ಚಿನ್ನವಾಗುತ್ತದೆ. ಸಿಡಿಲು ನಾಗರಹಾವಿಗೆ ಮತ್ತು ಹಿರಿಯ ಮಗನಿಗೆ ಹೊಡೆಯುತ್ತದೆ. ಕಬ್ಬಿಣದ ಚೂರೊಂದನ್ನು ಹಿಡಿದು ಕೊಂಡರೆ ಸಿಡಿಲು ಹೊಡೆಯುವುದಿಲ್ಲ. ಅರ್ಜುನನ ಹತ್ತು ಹೆಸರುಗಳನ್ನು ಹೇಳಿಕೊಂಡರೆ (ಅರ್ಜುನ : ಪಾಲ್ಗುಣ ಪಾರ್ಥ ಕಿರೀಟ ಶ್ವೇತವಾಹನ:| ಭೀಭತ್ಸುರ್ವಿ ಜಯೀ ಕೃಷ್ಣ ಸವ್ಯಸಾಚೀ ಧನಂಜಯ:) ಸಿಡಿಲು ಹೊಡೆಯುವುದಿಲ್ಲ ಎಂಬ ನಂಬಿಕೆಗಳಿವೆ.

ಕಾಲು ಮುಂದಾಗಿ ಹುಟ್ಟಿದ ಮಕ್ಕಳಿಗೆ ಸಿಡಿಲು ಬಡಿಯುತ್ತದೆ. ಸಿಡಿಲು ಹೊಡೆಯುವಾಗ ಬಾಳೆ ಕಡಿದರೆ ಚಿನ್ನ ಸಿಗುತ್ತದೆ. ಮಳೆ ಬರುವಾಗ ತೆಂಗಿನ ಮರದ ಕೆಳಗೆ ನಿಂತರೆ ಸಿಡಿಲು ಬಡಿಯುತ್ತದೆ.

ಕಂಚಿನ ಗಣಿಕೆಯನ್ನು ಹೊರಗೆ ತೆಗೆದುಕೊಂಡು ಹೋದರೆ ಸಿಡಿಲು ಬಡಿಯುತ್ತದೆ.

ಮನೆಯ ಪಕ್ಕದಲ್ಲಿ ಆಮೆ ಚಿಪ್ಪು, ಕೋಳಿ ಮೊಟ್ಟೆ ಸಿಪ್ಪೆ ಹಾಕಿದರೆ ಸಿಡಿಲು ಬಡಿಯುತ್ತದೆ.

ಈ ರೀತಿಯ ಬಹಳಷ್ಟು ನಂಬಿಕೆಗಳು, ಹೇಳಿಕೆಗಳು ಸಿಡಿಲನ್ನು ಕುರಿತಂತೆ ಪ್ರಚಾರದಲ್ಲಿವೆ. ಮನೆಗೆ ಸಿಡಿಲು ಬಡಿಯದಿರಲಿ ಎಂದು ಮನೆಯೊಳಗಿನಿಂದ ಕಬ್ಬಿದ ತುಣುಕುಗಳನ್ನು ಹೊರಗೆಸೆಯುವುದು, ಹೊಸ್ತಿಲ ಹಾಗೂ ತಲೆಬಾಗಿಲುಗಳಿಗೆ ಲಾಳ ಬಡಿಯುವುದು, ಮರಗಳಿಗೆ ಮೊಳೆ ಹೊಡೆಯುವುದು ಮುಂತಾದ ರೂಢಿಗಳು ನಮ್ಮಲ್ಲಿವೆ. ಆದಿ ಮಾನವ ಕಾಲದಿಂದ ಇಂದಿನವರೆಗೆ ಜನಸಾಮಾನ್ಯರು ಈ ರೀತಿ ಸಿಡಿಲಿನ ಬಗ್ಗೆ ಅನುಭವ ಪಡೆದುಕೊಂಡಿದ್ದಾರೆ, ಈ ಅನುಭವದಿಂದ ಪಡೆದ ಜ್ಞಾನವೇ ಸಿಡಿಲು ಬಡೆಯುವಾಗ ಮರದ ಕೆಳಗೆ ನಿಲ್ಲಬಾರದು, ಕಬ್ಬಿಣದ ವಸ್ತುಗಳಿಗೇ ಸಿಡಿಲು ಬಡಿಯುತ್ತದೆ ಮುಂತಾದ ನಂಬಿಕೆಗಳ ರೂಪದಲ್ಲಿ ಮಡುಗಟ್ಟಿದೆ. ಇಷ್ಟಾದರೂ ಸಿಡಿಲು ಎಂಬುದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಸೂತ್ರರೂಪದಲ್ಲಿಡುವ ಶಕ್ತಿ ಆದಿಮಾನವನಿಗಿರಲಿಲ್ಲ. ಆದ್ದರಿಂದ ಸಿಡಿಲಿನ ಬಗ್ಗೆ ಚಿತ್ರವಿಚಿತ್ರ ಕಲ್ಪನೆಗಳೂ ಹುಟ್ಟಿಕೊಂಡವು. ಮಾನವ ಇಂತಹುದೇ ಕಾಲ್ಪನಿಕ ವಿವರಗಳನ್ನು ಕೊಟ್ಟು ತನ್ನ ಕುತೂಹಲವನ್ನು ತಣಿಸಿಕೊಳ್ಳುತ್ತಿದ್ದ. ಮೋಡಗಳ ಘರ್ಷಣೆಯಾದಾಗ ಉತ್ಪತ್ತಿಯಾಗುವ ವಿದ್ಯುಚ್ಛಕ್ತಿ ಇದು ಎಂದು ವಿಜ್ಞಾನ ಇದರ ಖಚಿತವಾದ ವಿವರಣೆ ನೀಡಿದೆ. ಇದರ ಹಿನ್ನೆಲೆಯಲ್ಲಿ ಜನಪದರು ಅನುಸರಿಸುತ್ತಿರುವ ಎಷ್ಟೋ ರೂಢಿಗಳು ಹಾಗೂ ಅವರ ನಂಬಿಕೆಗಳು ವೈಜ್ಞಾನಿಕವಾಗಿದ್ದವು ಎಂದು ವಿಶ್ಲೇಷಿಸಬಹುದಾಗಿದೆ.

ಗುಡುಗನ್ನೂ ಸಹ ದೇವತೆಯ ಮಟ್ಟಕ್ಕೆ ಏರಿಸಿರುವುದನ್ನು ಅನೇಕ ಬುಡಕಟ್ಟುಗಳಲ್ಲಿ ಕಾಣಬಹುದು. ಅರ್ಜುನನ ರಥ ಆಕಾಶದಲ್ಲಿ ಸಂಚರಿಸುವಾಗ ಉಂಟಾಗು ಶಬ್ದವೇ ಗುಡುಗು ಎಂದು ನಮ್ಮ ಜನಪದರು ಕಲ್ಪಿಸಿದ್ದಾರೆ. ಗುಡುಗು ಅತ್ಯಂತ ಶಕ್ತಿಯುತ ದೇವತೆ ಎಂದು ಪ್ರಾಚೀನ ಪೇರುವಿಯನ್ನರು ಭಾವಿಸುತ್ತಿದ್ದರು. ಪ್ಯೂಬ್ಲೊಗಳು ಕಿವಾ ಸಮಾರಂಭಗಳಲ್ಲಿ ಗುಡುಗು ಹಾಗೂ ಮಿಂಚನ್ನು ಕರೆಯುತ್ತಾರೆ. ಅಥವಾ ಅವುಗಳನ್ನು ಪುನರುತ್ಪತ್ತಿ ಮಾಡುತ್ತಾರೆ. ನೂರಾರು ಬಾರಿ ಗುಡುಗಿದರೆ ಆ ವರ್ಷ ಒಳ್ಳೆಯ ಮಳೆಯಿರುತ್ತದೆ ಎಂದು ಭಾವಿಸುತ್ತಾರೆ.

ಗುಂಡಪ್ಪರಾಯ ಗುಂಡಾಡಿ ಬಾರೊ
ಹನುಮಪ್ಪರಾಯ ಹಾರ್ಯಾಡಿ ಬಾರೊ

ಎಂಬ ಶಿಶುಪ್ರಾಸ ನಮ್ಮಲ್ಲಿ ಪ್ರಚಲಿತವಿದೆ. ’ಮುಂಗಾರು ಗುಡುಗಿನ ಸದ್ದು ಕೇಳಿದರೆ ಮೊಟ್ಟೆಗಳು ಲೋಳಿಯಾಗುತ್ತವೆ. (ಅಂದರೆ ಆ ಮೊಟ್ಟೆಗಳಿಂದ ಮರಿಯಾಗುವುದಿಲ್ಲ) ಎಂಬ ನಂಬಿಕೆ ಇದೆ.

ಅನೇಕ ಜನರ ಪುರಾಣಗಳಲ್ಲಿ ನಿರೂಪಿಸಿರುವಂತೆ ಕಾಮನಬಿಲ್ಲು ಆಕಾಶ ಮತ್ತು ಭೂಮಿಯ ನಡುವಣ ಸೇತುವೆ. ಇಂದ್ರ ತನ್ನ ಇರುವಿಕೆಯನ್ನು ಸೂಚಿಸುವುದಕ್ಕಾಗಿ ಕಾಮನ ಬಿಲ್ಲನ್ನು ಆಕಾಶದಲ್ಲಿರಿಸಿದ್ದಾನೆ ಎಂದು ನಮ್ಮ ಪುರಾಣಗಳು ಹೇಳುತ್ತವೆ ಮಳೆಗೆ ಸಂಬಂಧಿಸಿದಂತೆ ಕಾಮನಬಿಲ್ಲಿನಿಂದ ಜನಪದರು ಅನೇಕ ಸೂಚನೆಗಳನ್ನು ಕಂಡುಕೊಳ್ಳುತ್ತಾರೆ ಎಂಬ ಅಂಶವನ್ನು ಹಿಂದಿನ ಪುಟಗಳಲ್ಲಿ ನಿರೂಪಿಸಲಾಗಿದೆ.

ನಮ್ಮ ಜನಪದರ ಜೀವನದಲ್ಲಿ ಮಳೆ ಹಾಗೂ ಅದರ ಸಂಬಂಧಿಂತ ವಿದ್ಯಮಾನಗಳು ಬಹಳ ಮುಖ್ಯ ಸ್ಥಾನ ಪಡೆದಿವೆ. ಮಳೆ ತನ್ನ ಸರ್ವತಂತ್ರ ಸ್ವತಂತ್ರ ಸ್ವಭಾವದಿಂದಾಗಿ ಹಾಗೂ ಅನುಗ್ರಹಶಾಲೀ ಗುಣದಿಂದಾಗಿ ಆರಾಧ್ಯದೈವದ ಸ್ಥಾನ ಗಳಿಸಿದರೆ ತೈರ ಮನೋ ವ್ಯಾಪಾರಗಳೆಲ್ಲದರ ಚಿಂತನೆಯ ಮುಖ್ಯ ವಸ್ತು ಮಳೆಯೇ. ಅಪರೂಪಕ್ಕೆ ಭೇಟಿಯಾದವರು ನಮ್ಮಲ್ಲಿ ಮೊದಲು ಕೇಳುವ ಪ್ರಶ್ನೆ ’ನಿಮ್ಮಲ್ಲಿ ಮಳೆಬೆಳೆ ಹೇಗೆ, ಎಂಬುದೇ ಆಗಿದೆ. ಧರ್ಮ ಮಾರ್ಗದಲ್ಲಿ ನಡೆದರೆ ಮಾತ್ರ ಕಾಲಕ್ಕೆ ಸರಿಯಾಗಿ ಮಳೆಯಾಗುತ್ತದೆ ಎಂಬುದೇ ನಮ್ಮ ಹಳ್ಳಿಯ ಜನಗಳ ವೇದಾಂತ. ಕರ್ನಾಕಟದಲ್ಲಿ ಮಲೆನಾಡಿಗಿಂತ ಬಯಲು ಸೀಮೆಯ ಕಡೆ ಮಳೆಗೆ ಸಂಬಂಧಿಸಿದ ಜಾನಪದ ವಿಫುಲವಾಗಿದೆ. ನಮ್ಮಲ್ಲಿ ಯಾವುದಕ್ಕೆ ಕೊರತೆಯಿದೆಯೋ ಅದಕ್ಕೆ ಹೆಚ್ಚು ಮಹತ್ವವನ್ನು ಕೊಡಲಾಗುತ್ತದೆ ಎಂಬ ಅಂಶದ ಹಿನ್ನೆಲೆಯಲ್ಲಿ ಈ ವಿಷಯವನ್ನು ನೋಡಬಹುದು. ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಸಹ ಮಳೆಯ ವಿಷಯದಲ್ಲಿ ಮಾನವ ಅಸಹಾಯಕನಾಗಿಯೇ ಇದ್ದಾನೆ. ಈಗಲೂ ದೀರ್ಘಕಾಲದವರೆಗೆ ಮಳೆ ಬಾರದಿದ್ದರೆ ಈ ಜಾನಪದವೆಲ್ಲ ಪುನಃ ಗರಿಗೆದರುತ್ತದೆ. ಕಪ್ಪೆಯನ್ನೂ/ಕತ್ತೆಯನ್ನೋ ಮಳೆರಾಯ ಎಂದು ಭಾವಿಸಿ ಪೂಜಿಸುವುದರಿಂದ ಹಿಡಿದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಯಜ್ಞಯಾಗಾದಿಗಳ ಮೂಲಕ ಮಳೆತುಂಬಿದ ಮೋಡಗಳನ್ನು ಭೂಮಿಗಿಳಿಸುವ ದುಬಾರಿ ಆಚರಣೆಗಳೂ ಇತ್ತೀಚೆಗೆ ನಡೆಯುತ್ತಿವೆ. ಅನಾವೃಷ್ಟಿಯ ಸಂದರ್ಭದಲ್ಲಿ ಸರ್ಕಾರವೂ ಸಹ ವಿಶೇಷ ಪೂಜೆ ಪುನಸ್ಕಾರಗಳನ್ನು ಏರ್ಪಡಿಸುವುದು ಮಳೆಯ ವಿಷಯದಲ್ಲಿ ನಮ್ಮ ಅಸಹಾಯಕತೆ, ಅಜ್ಞಾನಗಳೆರಡನ್ನೂ ಸೂಚಿಸುತ್ತಿರಬಹುದು. ಮಳೆಯ ಬಗ್ಗೆ ಜನಪದರಲ್ಲಿ  ಪ್ರಚಲಿತವಿರುವ ಅಪಾರ ಜ್ಞಾನಸಂಪತ್ತನ್ನು ವಿಜ್ಞಾನಿಗಳು ಖಂಡಿತವಾಗಿಯೂ ಬಳಸಿಕೊಳ್ಳಬಹುದು. ಹವಾಮಾನ, ಪರಿಸರಗಳ ಅಧ್ಯಯನಕ್ಕೆ ಈ ಜಾನಪದ ಬಹು ಮಹತ್ವದ ಕೊಡುಗೆಯನ್ನು ಕೊಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

 ಗ್ರಂಥ ಋಣ

 

ಜಾನಪದ ಅಧ್ಯಯನ- ದೇಜಗೌ.

ಜಾನಪದ ವಿಹಾರ – ಕ್ಯಾತನಹಳ್ಳಿ ರಾಮಣ್ಣ

ಮಲೆನಾಡು ಜಾನಪದ – ಪ್ರಧಾನ ಸಂಪಾದಕರು:

ವಿಶಿಷ್ಟ ಜಾನಪದ ಡಾ. ಎಚ್. ತಿಪ್ಪೇರುದ್ರಸ್ವಾಮಿ; ಸಂಪಾದಕರು: ಎಚ್.ಜೆ. ಲಕ್ಕಪ್ಪಗೌಡ

ಜನಪದದಲ್ಲಿ ಮಳೆರಾಯನ ಮುನಿಸು- ಬಸವರಾಜ ಆಕಳವಾಡಿ

ಕರ್ನಾಟಕ ಜನಪದ ಕಲೆಗಳು-ಸಂ. ಗೊ.ರು. ಚನ್ನಬಸಪ್ಪ

ನಮ್ಮ ಸಂಸ್ಕೃತಿ ಪರಂಪರೆ- ಬೆಟಗೇರಿ ಕೃಷ್ಣಶರ್ಮ

ಜಾನಪದ  ಸಂಯೋಜನೆ- ಜೇನಹಳ್ಳಿ ಸಿದ್ಧಲಿಂಗಪ್ಪ

ನಮ್ಮ ಜನಪದ ನಂಬಿಕೆಗಳು- ಜಿ.ವಿ.ದಾಸೇಗೌಡ

ನಮ್ಮ ಗಾದೆಗಳು – ರಾ.ಗೌ.

ಗ್ರಾಮೀಣ ಗಾದೆಗಳು – ಬಿ. ಕೃಷ್ಣಪ್ಪ ರೆಡ್ಡಿ

ತುಮಕೂರು ಜಿಲ್ಲೆಯ ಜನಪದ ನಂಬಿಕೆಗಳು- ಎನ್. ಎಸ್. ತಿಮ್ಮೇಗೌಡ

ಬೆಳ್ದಿಂಗಳಪ್ಪನ ಪೂಜೆ – ಅಗ್ರಹಾರ ಕೃಷ್ಣಮೂರ್ತಿ

ಗ್ರಾಮೀಣ – ಡಾ. ಎಂ. ಚಿದಾನಂದ ಮೂರ್ತಿ

ಪುರಾಣನಾಮ ಚೂಡಾಮಣಿ- ಲೇಖಕರು : ಬೆನಗಲ್ ರಾಮರಾವ್; ದಾನ್ನಂ ಸುಂದರ ಶಾಸ್ತ್ರಿ

Standard dictionary of Folklore Mythology & legend – Maria Leach (Ed)