ಪ್ರಾಚೀನ ಕಾಲದ ಮನುಷ್ಯ ತಾನು ಬದುಕುತ್ತಿರುವ ಪ್ರಪಂಚಕ್ಕಿಂತ ದೂರವಿರುವ ಮತ್ತೊಂದು ಪ್ರಪಂಚದ ಬಗೆಗೆ ತನ್ನದೇ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾನೆ. ಪ್ರಕೃತಿಯಲ್ಲಿ ಕಾಣಿಸುವ ಶಕ್ತಿಗಳಾದ ಮಳೆ, ಗಾಳಿ, ಬೆಂಕಿ, ನೀರು, ಆಕಾಶ, ಭೂಮಿ ಇಂಥವುಗಳಿಂದ ಅವನು ಬಹಳಷ್ಟು ಉಪಕೃತನಾಗಿರುವಂತೆ ಕೆಲವೊಮ್ಮೆ ತೊಂದರೆಗೂ ಒಳಗಾಗಿದ್ದಾನೆ. ಆದರೆ ಇದಾವುದರ ನಿಯಂತ್ರಣವೂ ತನ್ನ ಕೈಯಲ್ಲಿಲ್ಲ ಎಂಬುದನ್ನು ಅರಿತ ನಂತರ ಅವುಗಳಿಗೆ ಒಂದು ಅತಿಮಾನುಷವಾದ ರೂಪ ಕೊಟ್ಟು ಅವುಗಳನ್ನು ಭಯ ಭಕ್ತಿಯಿಂದ ಕಂಡಿದ್ದಾನೆ. ಹೀಗೆ ಈ ಪ್ರಾಕೃತಿಕ ಶಕ್ತಿಗಳ ಹಿಂದೆ ಅವು ಕಾಣಿಸಿಕೊಳ್ಳುವುದಕ್ಕಿಂತ ಬೇರೆಯೇ ಆದ ರೂಪವಿದೆ ಎಂದು ಭಾವಿಸಿಸುವುದನ್ನು ಎಲ್ಲ ಆದಿಮಾನವ ಸಂಸ್ಕೃತಿಗಳಲ್ಲೂ ಕಾಣಬಹುದು. ಈ ಎಲ್ಲ ಸಂಸ್ಕೃತಿಗಳಲ್ಲೂ ಅವರವರ ಪರಿಸರ, ಅನುಭವಕ್ಕೆ ತಕ್ಕ ಹಾಗೆ ಇಂಥ ರೂಪಗಳನ್ನು ಕಲ್ಪಿಸಿಕೊಂಡಿದ್ದಾರೆ. ತಮಗೆ ತುಂಬ ಉಪಕಾರಿಯಾದ ಶಕ್ತಿಯ ಬಗ್ಗೆ ಅತೀವ ಕಾಳಜಿ ವಹಿಸಿದ್ದಾರೆ. ಈ ಶಕ್ತಿ ಪ್ರಸನ್ನವಾಗಿದ್ದರೆ ಮಾತ್ರ ತಮಗೆ ಅನುಕೂಲ ಎಂಬುದನ್ನು ಕಂಡುಕೊಂಡು ಅದನ್ನು ಯಾವಾಗಲೂ ಪ್ರಸನ್ನವಾಗಿಡುವ ಮತ್ತು ಅದರ ಭೀಕರ ಸ್ವರೂಪವನ್ನು ಕಂಡಾಗ ಅದನ್ನು ಶಾಂತಗೊಳಿಸುವ, ಸಂತೋಷಗೊಳಿಸುವ ವಿವಿಧ ಭೀಕರ ಆಚರಣೆಗಳನ್ನು ರೂಢಿಸಿಕೊಂಡಿದ್ದಾರೆ.

ಮಾನವನ ಜೀವನದ ಮೇಲೆ ಅದ್ಭುತ ಪ್ರಭಾವ ಬೀರುವ ಪ್ರಾಕೃತಿಕ ಶಕ್ತಿಗಳ ಪೈಕಿ ಮಳೆಯ ಸ್ಥಾನ ಬಹು ಮುಖ್ಯವಾದುದು. ಸಕಲ ಜೀವಿಗಳಿಗೂ ಜೀವನಾಧಾರವಾದ ಹಾಗೂ ಜೀವ ಪೋಷಕವಾದ ಮಳೆಯನ್ನು ಜಗತ್ತಿನ ಎಲ್ಲೆಡೆಯೂ ವರದಾಯಕ ಎಂದು ಭಾವಿಸಲಾಗಿದೆ. ಅದಕ್ಕೆ ದೈವತ್ವವನ್ನು ಆರೋಪಿಸಿ ಪೂಜಿಸಲಾಗುತ್ತದೆ. ಬಂಜರು ಭೂಮಿಗಳಲ್ಲಿ, ದೀರ್ಘ ಬರಗಾಲಕ್ಕೆ ತುತ್ತಾದ ಪ್ರದೇಶಗಳಲ್ಲಿ ಮಳೆಗೆ ಸಂಕೀರ್ಣವಾದ ಅನೇಕ ಮಾಂತ್ರಿಕ ಧಾರ್ಮಿಕ ಆಚರಣೆಗಳ ಸಂಬಂಧ ಕಲ್ಪಿಸಲಾಗಿದೆ. ಬೇಟೆಯನ್ನೇ ಜೀವನ ಮಾರ್ಗವಾಗಿ ಅವಲಂಬಿಸಿದ ಆದಿಮಾನವನ ಹಂತದಿಂದ ನೀರಿನ ಆಶ್ರಯದಲ್ಲಿ ಕೃಷಿ ಮಾಡುವ ಹಂತವನ್ನು ಮಾವನ ತಲುಪಿದ ಮೇಲೆ ಮಳೆಯ ಸ್ಥಾನ ಅವನ ಜೀವನದಲ್ಲಿ ಇನ್ನಷ್ಟು ಭದ್ರವಾಗಿ ನೆಲೆಯೂರಿದೆ ಎಂಬುದು ಗಮನಾರ್ಹ.

ಜಗತ್ತಿನ ಬಹುತೇಕ ಸಂಸ್ಕೃತಿಗಳಲ್ಲಿ ಮಳೆರಾಯ ವಿವಿಧ ರೂಪಗಳಲ್ಲಿ ಸಕಲ ದೇವತೆಗಳ ಅಧಿಪತಿಯಾಗಿದ್ದಾನೆ. ವೈದಿಕ ಸಂಸ್ಕೃತಿಯ ದೇವೇಂದ್ರ, ಗ್ರೀಕ್ ಹಾಗೂ ರೋಮನ್ನರ ಜ್ಯೂ ದೇವ ಮಳೆದೇವರೇ ಆಗಿದ್ದಾರೆ. ಹಿಂದೂ ವೇದ ಪುರಾಣಗಳಲ್ಲಿ ಅಂತರಿಕ್ಷ ದೇವತೆಗಳಲ್ಲೆಲ್ಲ ಬಲಿಷ್ಠನಾದ ಇಂದ್ರನೇ ಮಳೆಯ ಅಧಿಪತಿ. ಬಿರುಗಾಳಿ, ಸಿಡಿಲು, ಮಿಂಚು ಗುಡುಗುಗಳ ಕರ್ತನಾಗಿದ್ದಾನೆ ಎಂದು ಅವನಿಗೆ ಹೆದರಿದರೂ ಫಲವಂತಿಕೆ ಹಾಗೂ ಮಳೆಗೆ ಕಾರಣನಾದವನು ಎಂದು ಅವನನ್ನು ಆರಾಧಿಸಲಾಗುತ್ತದೆ. ಇಂದ್ರನು ತನ್ನ ಮೊರೆ ಬಂದವರನ್ನು ಮಳೆ ಸುರಿಸಿ ಕಾಪಾಡಿದ ಅನೇಕ ಘಟನೆಗಳು ಮಹಾಭಾರತದಲ್ಲಿವೆ. ತಕ್ಷಕನನ್ನು ಕಾಪಾಡಿದ ಘಟನೆ ಬಹುಶಃ ಎಲ್ಲರಿಗು ಗೊತ್ತಿರುವವಂಥದ್ದು. ಋಷ್ಯ ಶೃಂಗನಿಗೆ ತನ್ನ ಅತೀವ ಸಾತ್ವಿಕ ಗುಣದಿಂದ ಮಳೆ ಬರಿಸುವ ಶಕ್ತಿ ಇತ್ತು ಎಂಬ ವಿವರ ಮಹಾಭಾರತದಲ್ಲಿ ಸಿಗುತ್ತದೆ. ಅನಾವೃಷ್ಟಿ ಪೀಡಿತ ಪ್ರದೇಶಗಳಿಗೆ ಈತನನ್ನು ಕರೆದೊಯ್ದಾಗ ಮಳೆಯಾಗುತ್ತಿದ್ದ ಅನೇಕ ಘಟನೆಗಳನ್ನು ಇಲ್ಲಿ ಹೇಳಲಾಗಿದೆ. ಮಳೆಗೆ ಸಂಬಂಧಿಸಿದ ಪ್ರತಿಯೊಂದು ವಿದ್ಯಮಾನದ ಹಿನ್ನೆಲೆಯಲ್ಲಿ ಒಬ್ಬ ದೇವತೆಯಿದ್ದಾನೆ ಎಂಬ ಕಲ್ಪನೆ ವೇದಗಳಲ್ಲಿಯೂ ಕಂಡು ಬರುತ್ತದೆ. ಪರ್ಜನ್ಯ ದೇವತೆ ನೇರವಾಗಿ ಮಳೆಗೆ ಕಾರಣನಾದವನು. ಅನಾವೃಷ್ಟಿಯ ಸಂದರ್ಭದಲ್ಲಿ ಪರ್ಜನ್ಯ ದೇವತೆ ತನ್ನ ಜಲರಥದಲ್ಲಿ ಕುಳಿತು ಮೋಡದ ಮೇಲೆ ಸುತ್ತಿ ಮೇಘಕೋಳವನ್ನು ಕೆಳಮುಖವಾಗಿ ಬಗ್ಗಿಸಿ ಮಳೆ ಸುರಿಸುತ್ತಾನೆ ಎಂಬ ವಿವರವಿದೆ. ಅಪಮ್‌ನಪತ್ ಎಂಬ ದೇವತೆ ಮೋಡವನ್ನು ಪ್ರತಿನಿಧಿಸುತ್ತಾನೆ. ಮಿಂಚು ಈತನ ಉಡುಗೆ.

ನಮ್ಮ ವೇದ ಪುರಾಣಗಳಲ್ಲಿ ಮಳೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳ ಸುಂದರ ಕಲ್ಪನೆಯನ್ನಷ್ಟೆ ಕಾಣುತ್ತೇವೆ. ಆದರೆ ಜಾನಪದರಲ್ಲಿ ಮಾನವ ಜೀವನದೊಂದಿಗೆ ಮಳೆಯ ಅವಿನಾಸಂಬಂಧದ ಒಂದು ಸ್ಪಷ್ಟ ಚಿತ್ರ ದೊರೆಯುತ್ತದೆ. ಕೃಷಿಯೇ ಮುಖ್ಯ ಜೀವನಾಧಾರವಾದ ಹಾಗೂ ಕೃಷಿಗಾಗಿ ಮಳೆಯನ್ನೇ ಅವಲಂಬಿಸಿರುವ ಭಾರತದಂತಹ ದೇಶದಲ್ಲಿ ಜನಪದರು ಪ್ರಾಕೃತಿಕ ಶಕ್ತಿಗಳ ಪೈಕಿ ಮಳೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ತಮ್ಮ ಬದುಕಿನ ಸರ್ವ ಸುಖ ಸಂತೋಷಗಳಿಗೂ ಕಾರಣವಾದ ಮಳೆಯನ್ನು ಕುರಿತು ಅಪಾರವಾದ ಜಾನಪದ ಈ ಜನರಲ್ಲಿ ರೂಢಿಯಲ್ಲಿರುವುದು ಆಶ್ಚರ್ಯವೇನಲ್ಲ. ಭಾರತವೊಂದೇ ಅಲ್ಲ ಆಫ್ರಿಕಾದ ಬುಡಕಟ್ಟುಜನಂಗಗಳಲ್ಲಿ, ಪ್ಯೂಬ್ಲೊ ಇಂಡಿಯನ್, ಹೋಪಿ, ಜಿಕಾರಿತಾ ಅಪಾಟೆ, ಹೀಬ್ರೂ, ಕೆಲ್ಟಿಕ್, ಯೂಚಿ, ಶಾನಿ, ಚಾಕೊ ಇಂಡಿಯನ್, ಮೊದಲಾದ ಜನಸಮುದಾಯಗಳಲ್ಲಿ ಮಳೆ ಮತ್ತು ಅದಕ್ಕೆ ಸಂಬಂಧಿಸಿದ ವಿದ್ಯಮಾನಗಳ ಬಗ್ಗೆ ವೈವಿಧ್ಯಮಯ ಜಾನಪದ ಪ್ರಚಲಿತವಿದೆ. ಆದರೂ ಪ್ರಸ್ತುತ ಪ್ರಬಂಧದಲ್ಲಿ ಮಳೆ ಮತ್ತು ಮೋಡದ ಸಂಬಂಧವಾಗಿ ಕರ್ನಾಟಕದಲ್ಲಿ ಪ್ರಚಲಿತವಿರುವ ಜಾನಪದವನ್ನೇ ಪ್ರಧಾನವಾಗಿಟ್ಟುಕೊಂಡು ವಿಶ್ಲೇಷಿಸಲಾಗಿದೆ.

ಮಳೆಯ ಪ್ರಥಮ ಹಂತ ಮೋಡ. ಮೋಡಕ್ಕೆ ಸಂಬಂಧಿಸಿದ ಜಾನಪದದ ಸಂಗ್ರಹಕಾರ್ಯವಾಗಲೀ, ಅಧ್ಯಯನವಾಗಲೀ ನಡೆದಿರುವುದು ತೀರಾ ಸ್ವಲ್ಪವೆಂದೇ ಹೇಳಬೇಕು. ಇದಷ್ಟೇ ಅಲ್ಲ, ಮಳೆಯ ಬಗೆಗಿರುವಷ್ಟು ವಿಸ್ತೃತವಾದ ಜಾನಪದ ಮೋಡಗಳ ಬಗೆಗೆ ಇಲ್ಲ. ಮಳೆಯ ಪರಿಣಾಮ ನೇರವಾಗಿದ್ದು, ಮೋಡದ ಪರಿಣಾಮ ಪರೋಕ್ಷವಾಗಿರುವುದು ಇದಕ್ಕೆ ಕಾರಣವಿರಬಹುದು. ಆದರೂ ಕರ್ನಾಟಕದ ಜಾನಪದವನ್ನೇ ಗಮನಿಸಿದಾಗ ಮೋಡಗಳ ಬಗ್ಗೆಯೂ ಅಧ್ಯಯನ ನಡೆಸಲು ಸಾಕಷ್ಟು ಸಾಮಗ್ರಿ ದೊರೆಯಬಹುದೆಂದು ಎನಿಸುತ್ತದೆ.

ನಮ್ಮ ಜನಪದ ಸಾಹಿತ್ಯದಲ್ಲಿ ಮೋಡಗಳ ಅತ್ಯಂತ ಸುಂದರ ವರ್ಣನೆ ದೊರೆಯುತ್ತದೆ.

ಎಮ್ಮೆಯ ತೊರಕೆ ಕೆಮ್ಮುಗಿಲು ಎದ್ದವೆ
ದಮ್ಮಯ್ಯ ಹುಯ್ಯೊ ಮಳೆರಾಯ- ನಮ್ಮೂರ
ಮುಮ್ಮೂಳಿಗೇಲಿ ತಳುಗಯ್ಯ.
ಹಸುವಿನ ತೊರ ಸೊಸೆಮುಗಿಲು ಬಿದ್ದಿವ
ಬಾಣಂತಿ ಕಪ್ಪ ಬಳದಂಗೆ ಮಳೆರಾಯ
ಬೋರಾಡುತವನೆ ಮುಗಿಲಲ್ಲಿ.

ಇಲ್ಲಿ ದಟ್ಟವಾಗಿ ಕವಿದ ಮಳೆಯ ಮೋಡಗಳ ಅತ್ಯಂತ ಸಮರ್ಥ ವರ್ಣನೆ ಇರುವುದಷ್ಟೇ ಅಲ್ಲ ಈ ಮೋಡಗಳನ್ನೂ ಸಹ ಜನಪದರು ಎಷ್ಟು ಆತ್ಮೀಯವಾಗಿ ಕಾಣುತ್ತಾರೆಂಬ ಅಂಶವನ್ನು ಗಮನಿಸಬೇಕು. ಆಕಾಶದಲ್ಲಿ ಎದ್ದಿರುವ ಮೋಡವನ್ನು ಕುರಿತು ’ನಮ್ಮೂರ ಮುಮ್ಮಾಳಿಗೇಲಿ ತಳುಗಯ್ಯ’ ಎಂದು ಬೇಡುವಾಗ ಕಾಳಿದಾಸನ ಮೇಘದೂತದಲ್ಲಿ ಯಕ್ಷನು ತನ್ನ ಪ್ರೇಯಸಿಗೆ ಸಂದೇಶವನ್ನು ಕಳುಹಿಸುವುದಕ್ಕಾಗಿ ಮೋಡದ ಸಹಾಯವನ್ನು ಯಾಚಿಸಿದ ಧ್ವನಿ ಥಟ್ಟನೆ ನೆನಪಾಗುತ್ತದೆ. ಮೋಡದ ಸ್ವರೂಪವನ್ನು ಮಳೆಯ ಪ್ರಮಾಣ ಅವಲಂಬಿಸಿರುತ್ತದೆ. ಆದ್ದರಿಂದ ನಮ್ಮ ಜನಪದರು ಮೋಡಗಳನ್ನು ಬಹು ಸೂಕ್ಷ್ಮವಾಗಿ  ಗಮನಿಸಿದ್ದಾರೆ. ಇಂತಹ ಸೂಕ್ಷ್ಮ ಅವಲೋಕನದಿಂದ ಬಂದ ಅನುಭವ ಅವರಲ್ಲಿ ಒಂದು ವಿಶಿಷ್ಟ ಜ್ಞಾನ ಸಂಪತ್ತಾಗಿ ಪ್ರಚಲಿತವಾಗಿದೆ. ಈ ಆಧಾರದಿಂದ ಅವರು ಮಳೆಯ ಬಗೆಗೆ ಹೇಳುವ ಮಾತುಗಳು ಬಹು ನಿರ್ಣಾಯಕವಾಗಿರುತ್ತವೆ.

ಮೋಡಗಳು ಒಂದರ ಹಿಂದೆ ಒಂದರಂತೆ ಕೋಟೆಯಾಕಾರದಲ್ಲಿದ್ದಾಗ ಅದನ್ನು ಕೋಟ್ಮುಗಿಲು ಎನ್ನುತ್ತಾರೆ. ಮೋಡ ಹೀಗಿದ್ದರೆ ನಿರಂತರವಾಗಿ ಮಳೆ ಬರುತ್ತದೆ ಎಂದು ಹೇಳುತ್ತಾರೆ. ಎಲ್ಲಿಂದಲೋ ತೇಲಿ ಬಂದು ನಾಲ್ಕು ಹನಿಗಳನ್ನು ಮಾತ್ರ ಉದುರಿಸುವಂಥ ಮೋಡವನ್ನು ಮೇಲ್ಮೋಡ ಎನ್ನುತ್ತಾರೆ. ತಲೆಚಿಟ್ಟು ಹಿಡಿಸುವ, ಮನಸ್ಸಿಗೆ ಮಂಕು ಕವಿಸುವ ಜಡಿಮಳೆಯ ಮೋಡವನ್ನು ’ಗೂಬೆಮೋಡ’ ಎಂದು ಕರೆದಿದ್ದಾರೆ. ಬಿಳಿ ಮೋಡ ಜಾಸ್ತಿ ಇದ್ದು ಕಪ್ಪು ಮೋಡ ಕಡಿಮೆ ಇದ್ದರೆ ಅದನ್ನು ಗಂಜಿ ಮೋಡ ಎಂದಿದ್ದಾರೆ. ಯಾವ ಯಾವ ನಕ್ಷತ್ರದ ಮಳೆ ಎಂಥದ್ದು ಎಂಬುದನ್ನು ತಿಳಿದಿರುವಂತೆ ಯಾವ ಯಾವ ಮಳೆಯ ಮೋಡಗಳು ಎಂತೆಂತಹ ಆಕಾರ ತಳಿರುತ್ತವೆ ಎಂಬುದರ ಬಗ್ಗೆಯೂ ಅವರಲ್ಲಿ ಒಂದು ಸ್ಪಷ್ಟ ತಿಳುವಳಿಕೆ ಇರುತ್ತದೆ. ಉದಾಹರಣೆಗೆ- ’ಉಬ್ಬೆ ಮಳೇಲಿ ಮೋಡ ಉಬ್ಬುಬ್ಬಿ ಬರುತ್ತೆ’ ’ಪುಷ್ಯ ಪುನರ್ವಸುಗಳಲ್ಲಿ ಜಡಿಮಳೆಯ ಮೋಡವಿರುತ್ತೆ’ ’ಭರಣಿಯಲ್ಲಿ ದೊಡ್ಡ ಮೋಡವಿರುತ್ತೆ’ ಇತ್ಯಾದಿ.

ಮೋಡವಾಗಿದೆ ಎಂಬುದನ್ನು ಇತರ ಸೂಚನೆಗಳಿಂದ ಜನಪದರು ಕಂಡು ಕೊಳ್ಳುತ್ತಾರೆ. ಬಿಸಿಲು ಹೆಚ್ಚಾಗಿ ಧಗೆಯೂ ಇದ್ದರೆ ಮೋಡ ಕವಿಯುತ್ತದೆ ಎಂದಂತೆ, ಹೆಚ್ಚು ಇಬ್ಬನಿ ಬಿದ್ದರೆ ರಾತ್ರಿ ಮೋಡ ಕವಿಯಬಹುದು ಎಂದು ಹೇಳುತ್ತಾರೆ.

ಮೋಡದ ಪ್ರಮಾಣವನ್ನನುಸರಿಸಿ ಆಕಾಶದ ಬಣ್ಣ ಬದಲಾಗುತ್ತದೆ. ಆಗಸದಲ್ಲಿ ಹಳದಿ ಬಣ್ಣ ಹರಡಿದರೆ ತಡವಾಗಿ ಮಳೆ ಬರುತ್ತೆ, ಕೆಂಪು ಬಣ್ಣ ಹರಡಿದರೆ ಮಳೆ ಇಲ್ಲ ಎಂಬ ಜನಪದ ಹೇಳಿಕೆಯ ಹಿನ್ನೆಲೆಯಲ್ಲಿ ಇದೇ ತತ್ವವಿದೆ.

ಮೋಡಕ್ಕೂ ಕಾಮನಬಿಲ್ಲಿಗೂ ಇರುವ ಸಂಬಂಧವನ್ನು ಜನಪದರು ಗುರುತಿಸಿದ್ದಾರೆ. ಮಳೆಯ ಮೋಡವಿದ್ದಾಗ ಅದರಲ್ಲಿ ಸೂರ್ಯನ ಕಿರಣಗಳು ತೂರಿ ಬಂದರೆ ಕಾಮನಬಿಲ್ಲು ಮೂಡುವುದು ಎಂದು ಪ್ರಾಕೃತಿಕ ವಿದ್ಯಮಾನ. ಮೋಡ ಜಾಸ್ತಿ ಇದ್ದರೆ ಮಳೆಯೇ ಕಾಮನ ಬಿಲ್ಲನ್ನು ನುಂಗುತ್ತದೆ. ಕಡಿಮೆ ಮೋಡವಿದ್ದರೆ ಅದನ್ನು ಕಾಮನಬಿಲ್ಲು ನುಂಗಿ ಹಾಕುತ್ತದೆ. ಎಂಬುದು ಜನಪದ ನಂಬಿಕೆ. ಈ ನಂಬಿಕೆಯ ಸತ್ಯಾಂಶವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಬಹುದಾಗಿದೆ.

‘ನೀರೊಡ್ಡು ಅಥವಾ ಜತ್ರಿಕ್ಕೆ ಮೂಡಿದರೆ ಮಳೆಯಾಗುತ್ತದೆ’ ಎಂಬ ನಂಬಿಕೆಯೂ ಮೋಡಗಳ ಸ್ವರೂಪವನ್ನೇ ಆಧರಿಸಿದೆ. ಸೂರ್ಯನ ಕಿರಣಗಳಿಗೆ ತುಂಡು ಮೋಡಗಳು ಅಡ್ಡವಾದಾಗ ಮೋಡಗಳ ಮರೆಯಿಂದ ಮೂಡುವ ರೆಕ್ಕೆ ಆಕಾರದ ನೆರಳ ಗುರುತುಗಳು ಒಂದೆರಡು ದಿನಗಳಲ್ಲಿ ಮಳೆ ಸುರಿಯುವುದರ ಸೂಚನೆ ಕೊಡುತ್ತವೆ. ಹತ್ತಿರದಲ್ಲಿ ಮೋಡವಿದ್ದರೆ ಅಲ್ಲಿಗಿಂತ ಅದರ ಮುಂದಿನ ಸ್ಥಳದಲ್ಲಿ ಮಳೆಯಾಗುವ ಸಂಭವ ಹೆಚ್ಚು ಎಂದು ನಂಬುತ್ತಾರೆ. ಮಳೆ ಸುರಿಯಲು ಮೋಡಗಳ ಘರ್ಷಣೆ ಅಗತ್ಯ ಈ ಘರ್ಷಣೆಗೆ ಅಗತ್ಯವಾದ ಗಾಳಿ ಬೀಸಿದಾಗ ಮೋಡಗಳು ಸ್ವಲ್ಪ ದೂರ ಚಲಿಸಲೇ ಬೇಕಾಗುತ್ತದೆ ಎಂಬ ತತ್ವ ಈ ನಂಬಿಕೆಯ ಹಿನ್ನೆಲೆಯಲ್ಲಿರುವುದನ್ನು ಗಮನಿಸಬಹುದು.

ಮಳೆಗಾಗಿ ಮಳೆಯ ಮೂಲವಾದ ಮೋಡಗಳನ್ನು ಕರೆ ತರುವ ಕೆಲವು ಸ್ವಾರಸ್ಯಕರ ಆಚರಣೆಗಳೂ ರೂಢಿಯಲ್ಲಿವೆ. ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿರುವ ಕಂಬಳಿ ಬೀಸುವ ಆಚರಣೆಯಲ್ಲಿ ಹಾಲುಮತದ ವ್ಯಕ್ತಿಯೊಬ್ಬ ಕಂಬಳಿಯನ್ನು ಐದು ಸಲ ಬೀಸುತ್ತಾನೆ. ಹೀಗೆ ಮಾಡಿ ಮನೆಗೆ ಹಿಂತಿರುವಷ್ಟರಲ್ಲಿ ಮಳೆ ಬರುವುದೆಂದು ನಂಬಿಕೆ ಇದೆ. ಗುಡ್ಡದ ಮೇಲೆ ನಿಂತು ಕಂಬಳಿ ಬೀಸುವ ಆಚರಣೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿದೆ. ಇಲ್ಲಿ ಕಂಬಳಿ ಬೀಸುವುದು ಕಪ್ಪು ಮೋಡಗಳು ಅದರಂತೆಯೇ ಇತ್ತ ತೇಲಿ ಬರಲಿ ಎಂಬ ಆಶಯದಿಂದ ಇರಬಹುದು. ಇದೂ ಒಂದು ರೀತಿಯಲ್ಲಿ ಅನುಕರಣಾತ್ಮಕ ಮಾಟವೇ ಆಗಿದೆ. ಹೀಗೆ ಕಂಬಳಿ ಬೀಸಿ ಮಳೆ ತರಿಸಿದ ವ್ಯಕ್ತಿಗಳನ್ನು ಘಟನೆಗಳನ್ನು ಕುರಿತ ಅನೇಕ ಐತಿಹ್ಯಗಳು ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿವೆ. ಜೋಕುಮಾರನ ಹಾಡಿನಲ್ಲಿ ಬರುವಂತೆ ಜೋಕುಮಾರ ನೀಲಿ ಕುದುರೆ ಹತ್ತಿ ಸೆಲ್ಲೆಯವನ್ನು ಬೀಸಿ ಮಳೆಯನ್ನು ಕರೆದ ಎಂಬ ವರ್ಣನೆಯನ್ನು ಇದೇ ಸಂದರ್ಭದಲ್ಲಿ ಜ್ಞಾಪಿಸಿಕೊಳ್ಳಬಹುದು.

ಕಟ್ಟೇಯ ಹತ್ಯಾನೆ ಹೊತ್ತುಗಳ ನೊಡ್ಯಾನೆ
ಹತ್ಯಾನೆ ನೀಲ ಕುದುರೆಯ ನಮಕೋಮರ
ಕೈಬೀಸಿ ಮಳೆಯ ಕರೆದಾನೆ.
ಏರೀಯ ಹತ್ಯಾನೆ ಯೇಳ್ಯೇವ ನೋಡ್ಯಾನೆ
ಏರ್ಯಾನೆ ನೀಲಕುದುರೆಯ ನಮಕೋಮರ
ಶಲ್ಯೇವ ಬೀಸಿ ಕರೆದಾನೆ.

ದಕ್ಷಿಣ ಕರ್ನಾಟಕದ ಕೆಲವೆಡೆಗಳಲ್ಲಿ ಚಿತ್ತಿ ಮಳೆಯ ಮೋಡವನ್ನು ಮಾತ್ರ  ಕರೆತರುವ ಒಂದು ಆಚರಣೆಯಿದೆ. ಊರವರೆಲ್ಲ ದೇವಾಲಯದ ಬಳಿ ಸೇರಿ ಡೊಳ್ಳು, ತಮಟೆ, ಕಹಳೆ, ಕೊಂಬು ಬಾರಿಸಿ ಆ ಮೋಡವನ್ನು ಕರೆತರುತ್ತಾರೆ. ಇದಕ್ಕೆ ’ಮಳೆ ಕರೆಯುವುದು’* ಎಂದೇ ಹೆಸರು. ಚಿತ್ತಿ ಮಳೆ ಕುರಡು ಆದ್ದರಿಂದ ಈ ರೀತಿ ಸದ್ದು ಮಾಡಿ ಮೋಡವನ್ನು ತಮ್ಮ ಕಡೆಗೆ ಕರೆತರುತ್ತೇವೆ ಎಂದು ಜನಪದರು ಹೇಳುತ್ತಾರೆ. ಈ ಭಾವನೆಯ ಹಿಂದಿರುವ ಅಂಶ ವಿಶ್ಲೇಷಣೆಗೆ ಅರ್ಹವಾಗಿದೆ. ಚಿತ್ತಿಮಳೆಯ ಕಾಲದಲ್ಲಿ ಗಾಳಿ ಕಡಿಮೆ ಇರುವುದರಿಂದ ಮೋಡಗಳು ಚಲಿಸುವುದಿಲ್ಲ. ಈ ಧ್ವನಿ ವಾದ್ಯಗಳನ್ನು ಬಡಿದಾಗ ಉಂಟಾಗುವ ತೀವ್ರ ಧ್ವನಿ ತರಂಗಗಳು ವಾತಾವರಣವನ್ನು ತುಂಬಿಕೊಂಡಾಗ ವಾತಾವರಣ ಬರಿದಾಗಿ ಮೋಡಗಳು ಈ ನಿರ್ವಾತ ಸ್ಥಳಕ್ಕೆ ದೂಡಲ್ಪಡುತ್ತವೆ. ಹಿಂದೆ ಮುಂದೆ ಚಲಿಸುವುದಕ್ಕೆ ಹವೆ ಮಾಧ್ಯಮದ ಕೊರತೆಯುಂಟಾಗಿ ಮೋಡಗಳು ತಡೆಹಿಡಿಯಲ್ಪಟ್ಟು ಅಲ್ಲಿಯೇ ಮಳೆ ಸುರಿಯುವುದುಂಟು. ಹೀಗೆ ಮೋಡಗಳನ್ನು ಕರೆತರುವ ಒಂದು ರೀತಿಯ ಆಚರಣೆ ಆಫ್ರಿಕಾದಲ್ಲಿಯೂ ಇರುವುದನ್ನು ಉಲ್ಲೇಖಿಸಬಹುದು. ಆಫ್ರಿಕಾದ ನೈಲ್ ನದಿಯ ಮೇಲ್ಭಾಗದಲ್ಲಿ ಮಳೆ ಇಲ್ಲದ ಸಂದರ್ಭದಲ್ಲಿ ಮಾಂತ್ರಿಕರು ಮಳೆ ಕಲ್ಲುಗಳನ್ನು ಗಡಿಗೆಯ ನೀರೊಳಗೆ ಮುಳುಗಿಸಿ, ತುದಿ ಸೀಳಿದ ತೊಗಟಿ ಸುಲಿದ ಬೆತ್ತವೊಂದನ್ನು ಕೈಯಲ್ಲಿ ಹಿಡಿದುಕೊಂಡು ಮೋಡಗಳ ಕಡೆ ತೋರಿ ಮಂತ್ರ ಹೇಳಿ ಅವು ಯಾವ ಕಡೆಗೆಂದರೆ ಆ ಕಡೆ ಸುರಿಯ ಬೇಕೆಂದು ಸನ್ನೆ ಮಾಡುತ್ತಾರೆ.

ಮೋಡಗಳನ್ನು ಕುರಿತಂತೆ ಈ ರೀತಿಯ ಜಾನಪದ ಕರ್ನಾಟಕದಲ್ಲಿ ಸಾಕಷ್ಟಿದೆ. ಇದರ ವ್ಯಾಪಕ ಸಂಗ್ರಹ ಹಾಗೂ ಅಧ್ಯಯನ ನಡೆದರೆ ಜಾನಪದ ಕ್ಷೇತ್ರ‍್ಕೆಕ ಅದೊಂದು ಹೊಸದಾದ ಹಾಗೂ ವಿಶಿಷ್ಟವಾದ ಕೊಡುಗಡೆಯಾಗುವುದರಲ್ಲಿ ಸಂದೇಹವಿಲ್ಲ.

ಭಾರತದಲ್ಲಿ ಮಳೆಗೆ ಸಂಬಂಧಿಸಿದ ಜಾನಪದ ಉತ್ತರಕ್ಕಿಂತ ದಕ್ಷಿಣ ಭಾರತದಲ್ಲಿಯೇ ಹೆಚ್ಚು ವಿಫುಲವಾಗಿದೆ. ಇದಕ್ಕೆಮುಖ್ಯಕಾರಣ ದಕ್ಷಿಣ ಭಾರತದ ಕೃಷಿ ಬಹುತೇಕವಾಗಿ ಮಳೆಯನ್ನೇ ಆಧರಿಸುವಂಥದ್ದು. ಇಂಥ ಜಾನಪದ ಇಲ್ಲಿ ಇಂದಿಗೂ ತನ್ನೆಲ್ಲ ವೈವಿಧ್ಯದೊಡನೆ ಜೀವಂತವಾಗಿದೆ.

ಕನ್ನಡದ ಜನಪದ ಗೀತೆಗಳಲ್ಲಿ ಕಾಣುವಂತೆ ಮಳೆ ಒಂದು ಪ್ರಾಕೃತಿಕ ವಿದ್ಯಮಾನ ಮಾತ್ರವಾಗಿರದ ಮಳೆರಾಯ, ದೇವೇಂದ್ರ, ತಂದೆ ಹಾಗೂ ಪ್ರೀತಿಯ ಬಂಧುವಾಗಿ ವ್ಯಕ್ತಿರೂಪ ಧರಿಸಿ ಅವರ ಬದುಕಿನಲ್ಲಿ ಬೆರೆತಿದೆ. ’ಗೊಂಬೆ ಹಚ್ಚಡ ದವನೆ, ರಂಭೆ ತೊಡೆ ಮೇಲೆ ಮಲಗಿರುವ ಮಳೆದೇವ, ಎಂದು ಅವನನ್ನು ರಸಿಕನಾಗಿ ಕಲ್ಪಿಸಿದ್ದಾರೆ. ಅವರ ದೃಷ್ಟಿಯಲ್ಲಿ ಮಳೆರಾಯ ಅಪಾರ ಕರುಣೆಯಿಂದ ತುಂಬಿದವನು.

ಬಿತ್ತು ಬಂದಣ್ಣ ಮುತ್ತಿನ ಕಂಭ ಸೇರಿ
ಬಿತ್ತು ಬಂದೆ ಶಿವನೆ ಮಳೆಯಲ್ಲ ಅಂದಾಗ
ಮುತ್ತೀನ ಮಂಜು ಹರಿದಾವು.

ಎಂಬ ಗೀತೆ ಇದಕ್ಕೆ ಉದಾಹರಣೆ. ಜನಪದರ ಪಾಲಿಗೆ ಒಂದೊಂದು ಮಳೆ ಹನಿಯೂ ಮುತ್ತಾಗಿದೆ ಎಂಬ ಸತ್ಯಾಂಶವೂ ಇಲ್ಲಿ ಹೊಮ್ಮಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ

ಮಳಿ ಹೋಯ್ತು ಅಂತ ಮಳೆರಾಯ್ನ ಬೈಬೇಡ
ಒಕಾಳ ಹೊನ್ನ ಸೆರಗಲ್ಲಿ ಕಟ್ಕೊಂಡು
ಸಾಲಕ್ಹೋಗವ್ನೆ ಮಳೆರಾಯ

ಎಂಬ ತ್ರಿಪದಿ ಅತ್ಯಂತ ಧ್ವನಿಪೂರ್ಣವಾಗಿದೆ. ’ಸಾಲಕ್ಹೋಗವ್ನೆ ಮಳೆರಾಯ’ ಎಂಬ ಸಾಲು ಸಾಲ ಮಾಡಿಯಾದರೂ ಮಳೆರಾಯ ಮಳಿ ಕೊಡುತ್ತಾನೆ ಎಂಬುದಷ್ಟನ್ನೇ ಅಲ್ಲ, ವಾತಾವರಣದಲ್ಲಿ ತೇವ ಕಣಗಳಲ್ಲ ಒಟ್ಟುಗೂಡಿ, ಮೋಡದ ರೂಪ ತಳೆದು ಆ ಮೋಡ ದಟ್ಟವಾಗಿ ಆನಂತರ ಮಳೆ ಸುರಿಸುವ ಪ್ರಕ್ರಿಯೆಯನ್ನೂ ಧನಿಸುತ್ತಿರಬಹುದು.

‘ಬಾರೆಂದರೆ ಬಾರನು ಹೋಗೆಂದರೆ ಹೋಗನು ಯಾರಿಚ್ಛೆ ಹೇಳು ಮಳೆರಾಯ. ಎಂದು ಮಳೆಯರಾಯನ ಸರ್ವತಂತ್ರ ಸ್ವತಂತ್ರ ಸ್ವಭಾವವನ್ನು ಗೀತೆಗಳಲ್ಲಿ ಸೂಚಿಸಿದ್ದಾರೆ’

ಮಳೆಗಾಲದ ಸೊಬಗು, ವೈಭವಗಳನ್ನು ವರ್ಣಿಸುವ ಅನೇಕ ಗೀತೆಗಳಿವೆ ಮಳೆರಾಯ ಹೇಗೆ ಆಗಮಿಸುತ್ತಾನೆ ಎಂಬುದನ್ನು ಅತ್ಯಂತ ಸುಂದರವಾಗಿ ವರ್ಣಿಸುವ ಒಂದು ಗೀತೆ ಹೀಗಿದೆ:-

ಆಕಾಶದೊಳಗೆ  ಆರ್ಭಟವೇನಿರೆ
ದೇವೇಂದ್ರರಾಯ ಹೊರ ಪಯಣ ಹೋಗ್ವಾಗ
ಸಿಡಿಲು ಮಿಂಚಿನ ಐಭೋಗ
ಕೆಂಧೂಳು ಎದ್ದೂ ಮುಗಿಲ ಮೋಡ ಕವಿದೂ
ಹಗಲ್ ಇರುಳಾದೂ ಜಗಕೆಲ್ಲ-ಮಳೆರಾಯ
ಮುಗಿಲಿಳಿದು ಬರುವೊ ಸಡಗರ.

ಜೋಕುಮಾರನ ಆಚರಣೆಯ ಸಂಬಂಧವಾಗಿ ಹಾಡುವ ಜೋಕುಮಾರ ಹಾಡಿನಲ್ಲಿ ಭೋರೆಂದು ಬೀಳುವ ಮಳೆಯನ್ನು ಹಾಸ್ಹಾಸಿ ಮಳೆ ಬಡಿದು, ಬೀಸ್ಬೀಸಿ ಕೆರೆತುಂಬಿ, ಬಾಸಿಂಗದಂಥ ತೆನೆಬಾಗಿ ಎಂದು ಅತ್ಯಂತ ಪರಿಣಾಮಕಾರಿಯಾಗಿ ವರ್ಣಿಸಿದ್ದಾರೆ. ಮಳೆಯನ್ನು ಕುರಿತಾಗಿಯೇ ಹಾಡುವ ಗುರ್ಚಿಯ ಹಾಡು ಮತ್ತು ಅನೇಕ ಶಿಶು ಪ್ರಾಸಗಳಲ್ಲಿ ಮಳೆ ಬೀಳುವುದರ ಲಯವೇ ಬಹು ಸಮರ್ಥವಾಗಿ ವ್ಯಕ್ತವಾಗಿದೆ. ಟಪಟಪನೆ ಉದುರುವ ಮಳೆಯ ಹನಿಗಳಂತೆಯೇ ಇಲ್ಲಿನ ಪದಗಳ ಜೋಡಣೆಯಿದೆ. ಗುರ್ಚಿಯ ಹಾಡನ್ನೇ ಉದಾಹರಿಸುವುದಾದರೆ:

ಕಾರಮಳಿಯೇ ಕಪ್ಪತ ಮಳಿಯೇ
ಹಳ್ಳಾಕೊಳ್ಳಾ ತುಂಬಿಸು ಮಳೆಯೇ
ಸುಣ್ಣ ಕೊಡತಿನಿ ಸುರಿಯಲೆ ಮಳೆಯೇ
ಬಣ್ಣ ಕೊಡತೀನಿ ಬಾರಲೆ ಮಳೆಯೆ
ಸುರಿಮಳೆಯೆ ಸುರಿಮಳೆಯೆ

ಮಳೆ ಬೀಳುವಾಗ ಹುಡುಗರ ಮನಸ್ಸು ಅದೆಷ್ಟು ಮುದಗೊಳ್ಳುತ್ತದೆ, ಉತ್ಸಾಹದಿಂದ ಕುಣಿಯುತ್ತದೆ ಎಂಬುದಕ್ಕೂ ಈ ಗೀತೆ ಉದಾಹರಣೆಯಾಗಬಲ್ಲದು.

ಹುಯ್ಯೊ ಹುಯ್ಯೊ ಮಳೆರಾಯ
ಹೂವಿನ ತೋಟಕೆ ನೀರಿಲ್ಲ
ಬಾರೊ ಬಾರೊ ಮಳೆರಾಯ
ಬಾಳೆ ತೋಟಕೆ ನೀರಿಲ್ಲ
ಬಾರಪ್ಪೊ ಮಳೆರಾಯ
ನೀ ಬಂದುಯ್ಯೊ ದೇವೇಂದ್ರ

ಎಂದು ಮಳೆ ಬರುವಾಗ ಮಕ್ಕಳು ಹಾಡುತ್ತಾ ಕುಣಿಯುತ್ತಾರೆ. ಇದೂ ಸಹ ಅತ್ಯಂತ ಜನಪ್ರಿಯ ಶಿಶುಪ್ರಾಸ.

ಬರಗಾಲದ ದಾರುಣ ಬದುಕ್ನನು ಚಿತ್ರಿಸುವ ಗೀತೆಗಳು ಬಹು ಪರಿಣಾಮಕಾರಿಯಾಗಿವೆ. ಬರಗಾಲದ ಸಂದರ್ಭದಲ್ಲಿ ಜನರು ’ಬೆಂಕಿಯ ಮಳೆ ಸುರಿಸಯಾದರೂ ಕೊಲ್ಲಬಾರದೆ’ ಎಂಬು ಆರ್ತಧ್ವನಿಯಲ್ಲಿ ಮೊರೆಯಿಟ್ಟಿದ್ದಾರೆ. ಬರಗಾಲವನ್ನು ಚಿತ್ರಿಸುವ ಮಳೆರಾಜನ ಹಾಡಿನಲ್ಲಿ ಇಂಥ ಬವಣೆಗೆ ಸಿಕ್ಕ ಜನರು ಅನ್ನಕ್ಕಾಗಿ ಮಕ್ಕಳನ್ನೇ ಮಾರಿದಂಥ ಕರುಳು ಕತ್ತರಿಸುವ ವಿವರವಿದೆ.

ಶಿವನೇ ಮಳೆರಾಯ ಓ ತಂದೆ
ಯಾವ ದೇವರಿಲ್ಲ ನಿನ್ನ ಮುಂದೆ
ಹಬ್ಬ ಹುಣಿಮೆ ಮದುವೆ ಮುಂಜಿ
ಎಲ್ಲ ನೀನು ಬಂದಂದೇ

ಎಂದು ಮಳೆರಾಯನ ಹಿರಿಮೆಯನ್ನು ಕೊಂಡಾಡಿದ್ದಾರೆ.

ಜನಪದರು ಮಳೆಗಾಗಿ ಆಚರಿಸುವ ಬಹಳಷ್ಟು ಆಚರಣೆಗಳ ಜೊತೆಯಲ್ಲಿ ಮಳೆರಾಯನನ್ನು ಕರೆಯುವ ಹಾಡುಗಳನ್ನು ಹೇಳಲಾಗುತ್ತದೆ. ಇವೆಲ್ಲವೂ ಮಳೆ ಕರೆಯುವ ಹಾಡುಗಳು ಎಂದು ಕರೆಯಲ್ಪಡುತ್ತವೆ. ಮಳೆರಾಯನ ವ್ಯಕ್ತಿತ್ವ, ಕರುಣೆ, ಮಳೆರಾಯನಿಗಾಗಿ ಜನಪದರ ಬೇಡಿಕೆ, ಪ್ರಶಂಸೆ, ಸಂತೋಷ ಇವೆಲ್ಲವನ್ನೂ ವ್ಯಕ್ತಪಡಿಸುವ ಮಳೆರಾಯನನ್ನು ಕುರಿತಾದ ಗೀತೆಗಳು ಜನರ ಬದುಕಿನಲ್ಲಿ ಮಳೆರಾಯನ ಪಾತ್ರವೆಂಥದ್ದು ಎಂಬುದನ್ನು ತಿಳಿಯಲು ಸಹಾಯಕವಾಗಿವೆ.

ಜನಪದ ಸಾಹಿತ್ಯದ ಇನ್ನೊಂದು ಮುಖ್ಯ ಪ್ರಕಾರವಾದ ಗಾದೆಗಳಲ್ಲಿ ಮಳೆಯ ವಾಸ್ತವ ಸ್ವರೂಪ, ಪರಿಣಾಮ, ಮುನ್ಸೂಚನೆ, ಉಪಯುಕ್ತತೆಗಳ ಬಗ್ಗೆ ಜನಪದರು ಪಡೆದುಕೊಂಡ ಅನುಭವವೆಲ್ಲ ಮಡುಗಟ್ಟಿದೆ. ಅನುಭವದಿಂದ ಮೂಡಿಬಂದ ಇಂಥ ಗಾದೆಗಳು ಜನಪದರ ವ್ಯವಸಾಯ ವಿಜ್ಞಾನದ ಜೀವಂತ ದಾಖಲೆಗಳು. ಬಿತ್ತನೆಯ ಸಂದರ್ಭದಿಂದ ಹಿಡಿದು ಕುಯ್ಲು ಆಗುವವರೆಗೆ ಯಾವ ಯಾವ ಮಳೆಗಳು ಹೇಗೆ ಸುರಿಯುತ್ತವೆ, ಸುರಿಯುವುದರ ಪರಿಣಾಮವೇನು, ಯಾವ ಮಳೆಯಲ್ಲಿ ಯಾವ ಬೆಳೆ ಹೇಗೆ ಎಂಬ ಬಗ್ಗೆ ಗಾದೆಗಳು ಪ್ರಚಲಿತವಾಗಿದ್ದು ಇವು ನಮ್ಮ ರೈತರ ತುದಿ ನಾಲಿಗೆಯಲ್ಲಿ ಇರುತ್ತವೆ. ಈ ಗಾದೆಗಳನ್ನು ಕೇಳಿದಾಕ್ಷಣ ಯಾವುದೇ ಮಳೆಯ ಸ್ವರೂಪದ ಪರಿಚಯವಾಗಿ ಬಿಡುತ್ತದೆ. ರೈತರು ಪ್ರತಿಯೊಂದು ಮಳೆಯನ್ನೂ ಆಯಾ ನಕ್ಷತ್ರದ ಹೆಸರಿನಿಂದ, ಗುರುತಿಸುತ್ತಾರೆ. ಅಸಲೆ ಮಳೆಗೆ ನೆಲವೆಲ್ಲ ಹಸಲೆ’ ’ಅಸಲೆ ಮಳೆಗೆ ಹಂ‌ಚ್ಮೇಲೆಲ್ಲ ಹುಲ್ಲು’ ಎಂಬ ಗಾದೆಗಳು ಆಶ್ಲೇಷಾ ನಕ್ಷತ್ರದ ಮಳೆಗೆ ಭೂಮಿಯಲ್ಲ ಹಸಿರಾಗುವುದನ್ನು ಸೂಚಿಸಿದರೆ ’ಭರ‍್ಣಿ ಸುರಿದ್ರೆ ಬರಗಾಲ್ದ ಭಯಿಲ್ಲ’ ’ಭರಣಿ ಮಳೆ ಹುಯ್ದರೆ ಧರಣೆಲ್ಲ ಬೆಳೆ’ ಎಂಬ ಗಾದೆಗಳು ಭರಣಿ ಹಾಗೂ ರೋಹಿಣಿ ಮಳೆಗಳಿಂದ ಸಮೃದ್ಧವಾಗಿ ಬೆಳೆಯಾಗುವುದನ್ನು ಸೂಚಿಸುತ್ತವೆ. ಸಕಲ ಜೀವರಾಶಿಗಳಿಗೂ ಸ್ವಾತಿಯ ಮಳೆ ಚೇತನವನ್ನು ತಂದುಕೊಡುತ್ತದೆ ಎಂಬುದು ಅನುಭವದ ಮಾತು. ಆದ್ದರಿಂದಲೇ ’ಸ್ವಾತಿಯ ಮಳೆ ಹೋದ ಮ್ಯಾಗ ಐತೇನು?’ ಎಂಬ ಗಾದೆ ರೂಢಿಯಲ್ಲಿದೆ. ’ಚಿತ್ತಿ ಸ್ವಾತಿ ಆದ್ರೆ ಹಿಂಗಾರಿ ಬೆಳೆ ಬಂಗಾರ‍್ದಂಗೆ’ ’ಸ್ವಾತಿ ಮಳೆಯಾದ್ರೆ ಹುಲ್ಲೂ ಹೊಡೆ’ ’ಸ್ವಾತಿ ಮಳೆಯಾದರೆ ಚಾಪೆ ಕೆಳಗಿನದೂ ತೆನೆಯಾಗ್ತದೆ’ ಎಂಬ ಗಾದೆಗಳು ಸ್ವಾತಿ ಮಳೆ ಬೆಳೆಗಳಿಗೆ ಎಷ್ಟು ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಡುತ್ತವೆ. ಹಸ್ತಾ ಮಳೆ ಸಮೃದ್ಧವಾಗಿ ಬೀಳುವಂಥ ಮಳೆ, ಈ ಮಳೆ ತಪ್ಪಿದರೆ ಕಷ್ಟ ತಪ್ಪಿದ್ದಲ್ಲ “ಹಸ್ತ ಮಳೆ ಆಗದಿದ್ರೆ ಹಲ್ಲು ಕಿಸ್ತಾ’ ’ಅತ್ತದ ಮಳೆ ಹುಯ್ಯದಿದ್ರೆ ಹೆತ್ತತಾಯಿ ಹಿಟ್ಟುಕೊಡಲ್ಲ’ ಎಂಬ ಗಾದೆಗಳೂ ಸಹ ಉತ್ತಮ ಬೆಳೆಗೆ ಈ ಮಳೆ ಬೇಕೇ ಬೇಕು ಎಂಬುದನ್ನು ಸೂಚಿಸುತ್ತವೆ. ’ಉತ್ತರೆ ಮಳೆ ಬಂದ್ರೆ ಬಿತ್ತಿದ್ದೆಲ್ಲ ಫಲ’ ’ಉತ್ರೆ ಮಳೆಗೆ ಹುಟ್ಟ ಹುಲ್ಲೆಲ್ಲ ಹೊಡೆ’ ಎಂಬ ಗಾದೆಗಳು ಈ ಮಳೆ ಪೈರುಗಳಿಗೆ ಬಹು ಸಹಾಯಕ ಎಂಬ ಅಂಶವನ್ನೇ ಸೂಚಿಸುವಂಥವು.

ಇನ್ನೂ ಕೆಲವು ಮಳೆಗಳು ಅಕಾಲದಲ್ಲಿ ಸುರಿದು ಬೆಳೆಯನ್ನು ಹಾಳು ಮಾಡುತ್ತವೆ. ಇಂಥವುಗಳನ್ನು ಜನಪದರು ಗಾದೆಮಾತಿನಲ್ಲಿ ಬೈದಿದ್ದಾರೆ. ಪೈರು ಕಟಾವಾಗಿ ಹೊಲದಲ್ಲಿ ಹರಡಿದ್ದಾಗ ಅಥವಾ ಸುಗ್ಗಿಯ ಕಾಲದಲ್ಲಿ ಬಂದು ಧಾನ್ಯವನ್ನು ಕೆಡಿಸಿದ ಮಳೆಯನ್ನು ’ಮೆದೆಗೆಡುಕ ಕಣಗೆಡುಕ’ ಎಂದಿದ್ದಾರೆ.

‘ಮಿಗ್ಸಿರಿ ಮಳೆಗೆ ಮಿಕ್‌ಪಕ್ಕದ್ದೆಲ್ಲ ಚೆಲ್ಬೇಕು’ ಆದ್ರಿ ಮಳೇಲಿ ಹಚ್ಚಿದರೆ ಆರುಕಾಯಿ ಹೆಚ್ಚು’ ’ಅಶ್ವಿನಿ ಮಳೆಗೆ ಆರುಕಟ್ಟು ಭರಣಿ ಮಳೆಗೆ ಬೀಜ ಬಿತ್ತು’ ’ಕುಲ್ಡನ ಮಳೆಗೆ ಕಲ್ಲಂಗ್ಡಿ ಊರಿದ್ರೆ ಉಲ್ಡುಲ್ಡಿ ಕಾಯಿ ಬಿಡ್ತವೆ’ ಇಂತಹ ಗಾದೆಗಳು ಕೃಷಿ ಸಂಬಂಧವಾದ ಜ್ಞಾನವನ್ನು ಭೋದಿಸುವಂತಹವು.

ಗೌರಿ ಹೊತ್ತಿಗೆ ಗಡುಗೆ ಮುಳುಗೆ ಮಳೆ
ಮಗೆ ಮಳೆ ಹುಯ್ದರೆ ಮಗೆ ಗಾತ್ರತೆನೆ
ಸಾತಿ ಮಳೆ ಹೇತೇನು ಆಂಧ್ರೂ ಬಿಡದು
ರೋಣಿ ಮಳಿಗೆ ಓಣೆಲ್ಲ ಕೆಸರು
ಉಬ್ಬೆ ಮಳೆಗೆ ಗುಬ್ಬಚ್ಚಿ ಪುಚ್ಚತೋಯಲ್ಲ
ಉಬ್ಬೆ ಮಳೆ ಉಬ್ಬುಬ್ಬಿ ಬಾರಿಸ್ತು
ಉಬ್ಬೆ ಮಳೆಗೆ ಉಬ್ಬು ತಗ್ಗು ಸಮ

ಮುಂತಾದ ಗಾದೆಗಳು ಆಯಾ ಮಳೆಯ ಲಕ್ಷಣ, ಪರಿಣಾಮಗಳನ್ನು ತಿಳಿಸುತ್ತವೆ. ಇದೇ ಗಾದೆಗಳು ಅಲ್ಪಸ್ವಲ್ಪ ವ್ಯತ್ಯಾಸಗಳೊಡನೆ ಇಡೀ ಕರ್ನಾಟಕದಲ್ಲಿ ಕೇಳಿ ಬರುತ್ತವೆ. ಮಲೆನಾಡು, ಬಯಲುಸೀಮೆ ಕರಾವಳಿಗಳ ಬೇಸಾಯ ಪದ್ಧತಿಯಲ್ಲಿ ವ್ಯತ್ಯಾಸವಿರುವುದರಿಂದ ಮತ್ತು ಆಯಾ ಪ್ರದೇಶಗಳಲ್ಲಿ ಬೀಳುವ ಮಳೆಗಳ ಲಕ್ಷಣವೂ ಭಿನ್ನವಾಗುತ್ತಿದ್ದರಿಂದ ಗಾದೆಗಳಲ್ಲೂ ಆ ವ್ಯತ್ಯಾಸ ಒಡ ಮೂಡಿದೆ. ಪ್ರಾದೇಶಿಕ ಭಿನ್ನತೆಯ ಅಧ್ಯಯನಕ್ಕೆ ಮಳೆಗೆ ಸಂಬಂಧಿಸಿದ ಗಾದೆಗಳು ಉತ್ತಮ ಸಾಮಗ್ರಿ ಒದಗಿಸುತ್ತವೆ.

ಕೆಲವು ಮಳೆಗಳ ಸ್ವಭಾವದ ಸಂಬಂಧವಾಗಿ ಜನಪದರಲ್ಲಿ ಕೆಲವು ವಿಶಿಷ್ಟ ಹೇಳಿಕೆಗಳು ಪ್ರಚಲಿತವಾಗಿವೆ. ಇಂಥ-ಹೇಳಿಕೆಗಳಿಗೂ ನಿರಂತರ ಅನುಭವವೇ ಆಧಾರ. ಪುನರ್ವಸು. ಪುಷ್ಯ ನಕ್ಷತ್ರಗಳನ್ನು ಕುರಿತು ಇವು ಮಲೆನಾಡಿನ ರೈತರಿಗೆ ಭಾಷೆ ಕೊಟ್ಟ ಮಳೆಗಳು ಎಂಬ ಮಾತೂ ಉತ್ತರಾ, ಸ್ವಾತಿ, ಗಳನ್ನು ಕುರಿತು ಇವು ಬಯಲು ಸೀಮೆಯ ಒಕ್ಕಲಿಗನಿಗೆ ಭಾಷೆ ಕೊಟ್ಟ ಮಳೆಗಳು ಎಂಬ ಮಾತೂ ಪ್ರಚಾರದಲ್ಲಿದೆ. ಬೆಳೆಗಳಿಗೆ ಬಹು ಅಗತ್ಯವಾದ ಮಳೆಯನ್ನು ಇವು ತಪ್ಪದೇ ಸುರಿಸುತ್ತವೆ ಎಂಬ ಅನುಭವದಿಂದ ಇಂಥ ಮತು ಸೃಷ್ಟಿಯಾಗಿದೆ. ಹಸ್ತಾ ಮಳೆ ಸದಾ ನಾನು ಕಾಪಾಡುತ್ತೇನೆ ಎಂದು ರೈತರಿಗೆ ’ಕೈಭಾಷೆ’ ಕೊಟ್ಟಿದೆ ಎಂದು ರೈತರು ಹೇಳುತ್ತಾರೆ. ಚಿತ್ತಾ ಮಳೆ ಮನಸ್ಸಿಗೆ ಬಮದಾಗ ಮನಬಂದಲ್ಲಿ ಬೀಳುವಂಥ ಮಳೆಯಾದ್ದರಿಂದ ’ಕುರುಡು ಚಿತ್ತೆ’ ಎಂದಿದ್ದಾರೆ. ಚಿತ್ತೆ ’ಅಣ್ಣನ ಮನೇಲಿ ಬಿದ್ದರೆ ತಮ್ಮನ ಮನೇಲಿ ಬೀಳುವುದಿಲ್ಲ’ ಎಂಬ ಮಾತೂ ಅದರ ಮನಬಂದ ಪ್ರವೃತ್ತಿಯನ್ನು ಸೂಚಿಸುವುದಕ್ಕಾಗಿ ಹುಟ್ಟಿಕೊಂಡಿದೆ. ಹೀಗಾಗಿ ಚಿತ್ತೆ ಮಳೆ ನಂಬಿಕೆಗೆ ಅರ್ಹವಲ್ಲದ ಮಳೆ ಎಂಬುದು ರೈತರ ಅಭಿಪ್ರಾಯ.

‘ಮಳೆ ಇಲ್ಲದ ಪೈರೂ ಮಾತೆ ಇಲ್ಲದ ಕೂಸೂ ಸಮ’ ’ಮಳೆ ಬಂದರೆ ಕೇಡೇ ಮಗ ಉಂಡರೆ ಕೇಡೇ’ ಎಂಬ ಗಾದೆಗಳೂ ಮಳೆ ಎಷ್ಟು ಜೀವನಾವಶ್ಯಕ ಎಂಬ ವಿಷಯವನ್ನೇ ಸ್ಪಷ್ಟಪಡಿಸುವಂಥವು.

ಗಾದೆಗಳು ಜನಪದರ ಅನುಭವದ ಅಣಿಮುತ್ತುಗಳು ಎಂಬ ಮಾತನ್ನೇ ಈ ಗಾದೆಗಳು ಸ್ಪಷ್ಟ ಪಡಿಸುತ್ತವೆ.

ಮಳೆ ಹಾಗೂ ಮಳೆಯಾಗುವ ಪ್ರಕ್ರಿಯೆಯನ್ನು ಕುರಿತು ಕೆಲವು ಒಗಟುಗಳೂ ಇವೆ. ’ಬಾ ಅಂದ್ರೆ ಬತ್ತಿಲ್ಲೆ ಹೋಗು ಅಂದ್ರೆ ಹೋಗ್ತಿಲ್ಲೆ’ ಎಂಬ ಒಗಟು ಮಳೆಯ ಅನಿಯಂತ್ರಿತ ಸ್ವಭಾವವನ್ನು ಸೂಚಿಸುತ್ತದೆ.

ಅಂಬುದಿಯಲ್ಲಿ ಹುಟ್ಟುವ ಕುದುರೆ
ತಂಬೆಲರಲ್ಲಿ ಬೆದರುವ ಕುದುರೆ
ಕುಂಬಿನಿ ಗಳಿದು ಒರಗುವ ಕುದುರೆ

ಎಂಬ ಒಗಟು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಾಗಿದ್ದು ಇದು ಮೋಡವಾಗುವ, ಗುಡುಗುವ ಮತ್ತು ಮಳೆಯಾಗುವ ಪ್ರಕ್ರಿಯೆಯನ್ನು ಕುದುರೆಯ ರೂಪಕದ ಮೂಲಕ ಬಹಳ ಪರಿಣಾಮಕಾರಿಯಾಗಿ ಹೇಳುತ್ತದೆ.

ಕಲ್ಪನೆಗೆ ಪ್ರಥಮ ಸ್ಥಾನ ಕೊಡುವ ಜನಪದ ಕಥೆಗಳಲ್ಲಿ ಮುಂದೆ ರಾಜನಾಗುವ ಲಕ್ಷಣಗಳುಳ್ಳ ಮಗ ಹುಟ್ಟಿದಾಗ ಅದರ ಸೂಚನೆಯಾಗಿ ಬೆಳ್ಳಿ, ಬಂಗಾರ, ಮುತ್ತುಗಳ ಮಳೆಯಾಗುವುದುಂಟು. ಕಜ್ಜಾಯದ ಮಳೆ, ಕೆಂಡದ ಮಳೆಗಳ ಉಲ್ಲೇಖವೂ ಹಾಸ್ಯ ಕಥೆಗಳಲ್ಲಿ ಬರುತ್ತದೆ. ಕನ್ನಡದಲ್ಲಿ ಮಳೆರಾಯನನ್ನು ಕುರಿತು ಒಂದು ಕಥೆ ಬಹಳ ಜನಪ್ರಿಯವಾಗಿದ್ದು ಇದರಲ್ಲಿ ಮಳೆರಾಯ ಹಾಗೂ ದೇವೇಂದ್ರ ಒಂದೇ ಎಂಬಂತೆ ಸಮೀಕರಿಸಲಾಗಿದೆ. ಮಳೆರಾಯನ ಪ್ರೇಮ ಪ್ರಕರಣ ಹಾಗೂ ಮಳೆರಾಯ ಮುನಿದರೆ ಮನುಷ್ಯ ಎಷ್ಟೆಷ್ಟು ಕಷ್ಟಗಳಿಗೆ ಗುರಿಯಾಗುತ್ತಾನೆ ಎಂಬುದು ಇದರ ವಸ್ತು.

‘ಶಿವ ಪಾರ್ವತಿಯರ ಸೋಲು’ (ಉತ್ತರ ಕರ್ನಾಟಕದ ಜನಪದ ಕಥೆಗಳು ಸಂ-ಸಿಂಪಿ ಲಿಂಗಣ್ಣ) ಎಂಬ ಕಥೆಯಲ್ಲಿ ಹಳ್ಳದಲ್ಲಿ ಕುರಿಕಾಯಿಸುತ್ತಿದ್ದ ಕುರುಬನಿಗೆ ಮಳೆ ಬಂದರೆ ಹಳ್ಳ ತುಂಬಿ ಕುರಿಗಳು ಕೊಚ್ಚಿಕೊಂಡು ಹೋಗುವುದಿಲ್ಲವೇ ಎಂದು ಶಿವಪಾರ್ವತಿಯರು ಪ್ರಶ್ನಿಸುತ್ತಾರೆ, ಆದರೆ ಮಳೆ ಬರುವುದಿಲ್ಲ ಎಂದು ಕುರುಬನು ದೃಢವಾಗಿ ಹೇಳುತ್ತಾನೆ, ಇವನ ಮಾತನ್ನು ಸುಳ್ಳು ಮಾಡಲು ಅವರು ಮಳೆ ಸುರಿಸುವಂತೆ ವರಣನಿಗೆ ಹೇಳಿದಾಗ, ಆತ ಮಳೆರಾಯ ಬೇರೆ ಲೋಕಕ್ಕೆ ಹೋಗಿದ್ದಾನೆ ಆದ್ದರಿಂದ ಸಾಧ್ಯವಿಲ್ಲ ಎನ್ನುತ್ತಾನೆ. ಇದೇ ರೀತಿ ಮತ್ತೊಮ್ಮೆ ಕುರುಬ ದಂಡೆಯ ಮೇಲೆ ಕುರಿಕಾಯಿಸುತ್ತಾ ನಿಂತಿದ್ದು ಶಿವ ಪಾರ್ವತಿಯರು ಪ್ರಶ್ನಿಸಿದಾಗ ಈಗ ಮಳೆ ಬರುತ್ತೆ ಆದ್ದರಿಂದ ದಂಡೆಯ ಮೇಲೆ ಮೇಯಿಸುತ್ತಿದ್ದೇನೆ ಎನ್ನುತ್ತಾನೆ. ಅವನ ಮಾತನ್ನು ಸುಳ್ಳು ಮಾಡಲೇಬೇಕೆಂದು ಶಿವ ಪಾರ್ವತಿಯರು ಪುನಃ ವರುಣ ಲೋಕಕ್ಕೆ ಹೋಗಿ, ಮಳೆಯಾಗದಂತೆ ಮಾಡು ಎಂದು ವರುಣನಿಗೆ ತಿಳಿಸುತ್ತಾರೆ. ಮಳೆಯರಾ ಆಗಲೇ ತನ್ನಪರಿವಾರ ಸಮೇತ ಅಲ್ಲಿಗೆ ಹೋಗಿರುವುದರಿಂದ ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ವರುಣಾ ಉತ್ತರಿಸುತ್ತಾನೆ. ಈ ಕಥೆ ಮಳೆಯ ಬಗ್ಗೆ ಅನುಭವದಿಂದ ಮಾನವ ಎಷ್ಟು ಖಚಿತವಾಗಿ ಜ್ಞಾನ ಸಂಪಾದಿಸಿದ್ದಾನೆ ಎಂಬುದನ್ನೂ ತಿಳಿಸುತ್ತದೆ ಮತ್ತು ಮಳೆಯನ್ನು ನಿಯಂತ್ರಿಸುವುದು ದೇವತೆಗಳಿಗೂ ಅಸಾಧ್ಯ ಎಂಬುದನ್ನು ಸೂಚಿಸುತ್ತದೆ.

ಮಳೆಯ ಆಗಮನವನ್ನು ಸೂಚಿಸುವ ಅನೇಕ ಸುಳುಹುಗಳನ್ನು ಜನಪದರು ಅನುಭಾವದಿಂದ ಕಂಡುಕೊಂಡಿದ್ದಾರೆ. ಇವು ನಂಬಿಕೆಗಳ ರೂಪದಲ್ಲಿ, ಹೇಳಿಕೆಗಳ ರೂಪದಲ್ಲಿ ಪ್ರಚಲಿತವಾಗಿವೆ. ಇವು ಅನುಭವ ಜನ್ಯವಾಗಿರುವುದರಿಂದ ಬಹುತೇಕ ವಿಜ್ಞಾನಿಕವೂ ಆಗಿವೆ. ಮಳೆಯನ್ನೇ ಜೀವನಾಧಾರವಾಗಿ ನಂಬಿಕೊಂಡ ಜನಪದರು ಅದರ ಆಗಮನದ ಹಿನ್ನೆಲೆಯನ್ನು ಬಹು ಸೂಕ್ಷ್ಮವಾಗಿ ಗಮನಿಸುತ್ತಾರೆ. ಆಕಾಶ, ಆಕಾಶ-ಕಾಯಗಳು, ಗಾಳಿ, ಮೋಡ, ಬಿಸಿಲು, ಬೆಳಕು ಮುಂತಾದ ಪ್ರಾಕೃತಿಕ ವಿದ್ಯಮಾನಗಳು ಮತ್ತು ಪ್ರಾಣಿ ಸಸ್ಯಗಳ ನಡುವಳಿಕೆಗಳು ಮಳೆಯ ಸೂಚನೆ ಕೊಡುತ್ತವೆ. ಈ ಸೂಚನೆಗಳಿಂದ ಮಳೆಯಾವಾಗ ಬರುತ್ತೆ, ಅದು ಯಾವ ಪ್ರಮಾಣದ ಮಳೆ, ಎಷ್ಟು ಕಾಲವಿರುತ್ತೆ ಎಂಬ ವಿವರಗಳನ್ನು ಕರಾರುವಾಕ್ಕಾಗಿ ಹೇಳುತ್ತಾರೆ. ಇವು ಕೇವಲ ನಂಬಿಕೆಗಳಾಗಿರದೇ ಮಳೆಯ ನಿಖರ ಸೂಚನೆಗಳೇ ಆಗಿವೆ ಎಂಬುದನ್ನು ಗಮನಿಸಬಹುದು.

ಕೊಡತಿ ಹುಳ ಎದ್ದರೆ, ಕಾಗೆಗಳು ಊರಸುತ್ತ ಕೂಗುತ್ತ ಹಾರಾಡಿದರೆ, ಮೊಟ್ಟೆ ಇರುವೆ ಹೆಚ್ಚಾದರೆ, ಗುಬ್ಬಿ ಮಣ್ಣಿನ ಸ್ನಾನ ಮಾಡಿದರೆ, ಈಚಲ ಹುಳ ಭೂಮಿಯಿಂದೆದ್ದು ಆಗಲೇ ನೆಲ ಕಚ್ಚಿದರೆ ಮಳೆಯ ಸೂಚನೆ ಎಂದು ಹೇಳುತ್ತಾರೆ. ಎತ್ತುಗಳು ತಂಪು ಹೊತ್ತಿನಲ್ಲಿ ಕತ್ತನ್ನು ಮೇಲಕೆತ್ತಿ ಆಕಾಶ ಮೂಸಿದರೆ, ಮುಸ್ಸಂಜೆಯಲ್ಲಿ ಗೂಬೆಕೂಗಿದರೆ, ಬೆಕ್ಕು ಮುಖತೊಳಿದರೆ ಅದೂ ಮಳೆಯ ಸೂಚನೆ ಎನ್ನುತ್ತಾರೆ. ಕೋಳಿ ಪುಕ್ಕ ಕಾಯಿಸಿದರೆ, ಕಪ್ಪೆ ಎಡಬಿಡದೆ ವಟಗುಟ್ಟಿದರೆ ಮಳೆ ಕುರಿತೇಟು ಎಂದು ಹೇಳುವುದುಂಟು. ಜೇನು ಹುಳುಗಳು ತಮ್ಮ ಗೂಡಿನಿಂದೆದ್ದು ಯಾವ ದಿಕ್ಕಿಗೆ ಹೋಗುವುವೋ  ಆ ದಿಕ್ಕಿನಿಂದ ಮಳೆ ಬರುತ್ತದೆಂದು ನಂಬಿಕೆ.

ಮೋಡದ ತಾಕಲಾಟದಿಂದ ಮಿಂಚು ಗುಡುಗುಗಳು ಉತ್ಪತ್ತಿಯಾಗುತ್ತವೆ. ಮಿಂಚು, ಗುಡುಗುಗಳ ಪ್ರಮಾಣ ಹಾಗೂ ಅವುಗಳು ಕಾಣಿಸಿಕೊಳ್ಳುವ ದಿಕ್ಕು ಇವು ಮಳೆ ಎಷ್ಟು ಬರಬಹುದು ಅಥವಾ ಬರುತ್ತದೆಯೇ ಇಲ್ಲವೇ ಎಂಬುದನ್ನು ಸೂಚಿಸುತ್ತವೆ. ನಂದಿ ಮೂಲೆಯಲ್ಲಿ ಗುಡುಗಿದರೆ, ಮಿಂಚಿದರೆ ಮಳೆ ಖಂಡಿತ ಎಂಬ ನಂಬಿಕೆ ಇದೆ.

ಮಳೆ ಬರುವುದಿಲ್ಲ ಎಂಬುದನ್ನೂ ಇಂಥದಲ್ಲಿ ಸೂಚನೆಗಳಿಂದ ತಿಳಿಯುತ್ತಾರೆ. ಚಂದ್ರನ ಸುತ್ತ ಮಂಡಲ ಬಂದರೆ, ಇಬ್ಬನ್ನಿ ಹೆಚ್ಚಿಗೆ ಬಿದ್ದರೆ, ಮಳೆಗೆ ಮುಂಚೆ ಗುಡಿಗಿದರೆ, ಎರಡು ಕಾಮನಬಿಲ್ಲುಗಳು ಕಾಣಿಸಿದರೆ ಮಳೆಯಾಗುವುದಿಲ್ಲ ಎಂದು ತಿಳಿಯುತ್ತಾರೆ. ಸಂಜೆ ಬಂದ ಮಳೆ ಮತ್ತು ನೆಂಟ ಬೇಗನೇ ಹೋಗುವುದಿಲ್ಲ ಎಂಬುದೂ ಅನುಭವದಿಂದಲೇ ಮೂಡಿ ಬಂದ ಹೇಳಿಕೆ.

ಇವುಗಳ ಜೊತೆಗೆ ಹವಾಮಾನಕ್ಕೆ ಸ್ವಲ್ಪವೂ ಸಂಬಂಧಿಸಿರದ ಕೆಲವು ನಂಬಿಕೆಗಳೂ ಇವೆ. ಆಣೆಕಲ್ಲಾಟ ಆಡಿದರೆ, ಹಪ್ಪಳ ಹರವಿದರೆ, ತೊನ್ನಿದ್ದವರನ್ನು ಹೂಳಿದರೆ ಮಳೆ ಬರುವುದಿಲ್ಲ, ಇತ್ಯಾದಿ ನಂಬಿಕೆಗಳಿವೆ. ಇಂಥ ಕೆಲವು ನಂಬಿಕೆಗಳನ್ನು ಸಿಂಪಥೆಟಿಕ್ ಮಾಟದ ತತ್ವದ ಹಿನ್ನೆಲೆಯಲ್ಲಿ ವಿಶ್ಲೇಷಿಸಬಹುದು. ಅಕ್ಕಿ ತಿಂದರೆ, ತೆಂಗಿನಕಾಯಿ ಕದ್ದ ತಿಂದರೆ, ಸೌಟಿನಲ್ಲಿ ಕಾಳು ತಿಂದರೆ, ಮದುವೆ ದಿನ ಮಳೆ ಬರುತ್ತ ಎಂಬುದು ನಮ್ಮಲ್ಲಿರುವ ನಂಬಿಕೆಯೇ. ಬಹುಶಃ ಇಂಥ ನಡವಳಿಕೆಯನ್ನು ತಪ್ಪಿಸುವುದಕ್ಕಾಗಿ ಈ ರೀತಿ ಹೇಳುತ್ತಿದ್ದಿರಬೇಕು.

ಅತ್ತೆ ಚಿತ್ತೆ ಮಳೆಯಲ್ಲಿ ಹುಟ್ಟಿದ ಹೆಣ್ಣು ಹಾದರಗಿತ್ತಿಯಾಗುತ್ತಾಳೆ, ಅನುರಾಧಾ ಮಳೆಯಲ್ಲಿ ಕಾಲದಲ್ಲಿ ದುಡ್ಡು ಹಾಗೂ ಒಳ್ಳೆಯ ಬಟ್ಟೆಗಳನ್ನು ಬಿಸಿಲಿಗೆ ಹಾಕಿದರೆ, ಅವು ಸಮೃದ್ಧಿಯಾಗುತ್ತವೆ ಮುಂತಾದ ನಂಬಿಕೆಗಳ ಹಿನ್ನೆಲೆಯನ್ನು ವಿಶ್ಲೇಷಿಸಬೇಕಾಗಿದೆ.

ಜನಪದರಲ್ಲಿ ಪ್ರಚಲಿತವಿರುವ ಹವಾಮಾನ ಸೂಚಿಯಾದ ಇಂಥ ಕೆಲವು ನಂಬಿಕೆಗಳನ್ನು ವಿಶ್ಲೇಷಿಸಿ ವಿವರಣೆ ಕೊಡುವುದು ವಿಜ್ಞಾನಿಗಳ ಕೆಲಸ.

ಮಳೆ ಎಷ್ಟು ಆಗಿದೆ ಎಂಬುದರ ಲೆಕ್ಕಾಚಾರವನ್ನು ಜನಪದರು ತಿಳಿಸುವ ರೀತಿ ಬಹು ವಿಶಿಷ್ಟ. ಈ ಅಳತೆಗೂ ಅವರ ಅನುಭವವೇ ಆಧಾರ. ಶ್ರೀಕಂಠ ಕೂಡಿಗೆಯವರು ತಮ್ಮ ’ಭೂಮಿ ಹುಣ್ಣಿಮೆ’ ಗ್ರಂಥದಲ್ಲಿ ಶಿವಮೊಗ್ಗೆಯ ಕಡೆ ಈ ಮಳೆಯ ಪ್ರಮಣವನ್ನು ತಿಳಿಸುವ ಕೆಲವು ಪದಗಳನ್ನು ಪಟ್ಟಿಮಾಡಿಕೊಟ್ಟಿದ್ದಾರೆ. ಅವರು ತಿಳಿಸುವಂತೆ ಅಧುನಿಕರಾದ ನಾವು ಸೆಂಟಿಮೀಟರು ಅಥವಾ ಮಿಲಿಮೀಟರುಗಳಲ್ಲಿ ಮಳೆ ಮಾಪನ ಮಾಡಿದರೆ ಜನಪದರು ಸಾಮಾನ್ಯ ಮಳೆಯಿಂದ ಹಿಡಿದು ಭಾರಿ ಮಳೆಯವರೆಗಿನ ಪ್ರಮಾಣವನ್ನು ತಾವು ದಿನನಿತ್ಯ ಉಡುವ, ತೊಡುವ, ಬಳಸುವ ಸಾಮಗ್ರಿಗಳ ಆಧಾರದೊಂದಿಗೆ ನಮ್ಮ ಅನುಭವ ವೇದ್ಯವಾಗುವಂತೆ ಮಾಡುತ್ತಾರೆ. ಧೂಳಡಗೋಮಳೆ, ಹನಿಮಳೆ, ಹದ ಮಳೆ, ಜಡಿಮಳೆ, ಕ್ಯಾಣನ ಮಳೆ, ಸ್ಯಾನೆ ಮಳೆ, ಬಟ್ಟಿ ಹದ, ಬಟ್ಟಿದೇವ, ಕಂಬಳಿ ಮಳೆ, ದೋಣಿಹದ, ಉಕ್ಕೆ ಹದ, ಬಿತ್ತನೆ ಹದ, ಹರ್ತೆದೇವ, ಮಾರಿಮಳೆ, ದೆವ್ವ ಮಲೆ ಇತ್ಯಾದಿ. ಈ ರೀತಿಯ ಪದರೂಪಗಳು ಆಯಾ ಪ್ರದೇಶಕ್ಕೇ ವಿಶಿಷ್ಟವಾಗಿರಬಹುದು. ಕ್ಷೇತ್ರಕಾರ್ಯನಡೆಸಿ ಇಂತಹ ಪದರೂಪಗಳನ್ನು ಸಂಗ್ರಹಿಸುವುದು ಅಗತ್ಯ. ಈ ಪದಗಳೂ ಸಹ ಜನಪದ ಸಂಸ್ಕೃತಿಯ ಒಳನೋಟವನ್ನು ಕೊಡಬಲ್ಲವು.

ಮಳೆಗಾಗಿ ಹಂಬಲಿಸಿ, ಕಾತರಿಸಿ, ಕಡೆಗೂ ಮಳೆ ಬಾರದಿದ್ದರೆ, ಜನಪದರು ಕೈಕಟ್ಟಿಕೂರುವುದಿಲ್ಲ. ಮಳೆಯನ್ನು ಕರೆತರುವ ಕೃತ್ರಿಮ ವಿಧಾನಗಳಿಗೆ ಕೈ ಹಾಕುತ್ತಾರೆ. ಮಳೆಗೊಂದು ಆಚರಣೆ ಬೆಳೆಗೊಂದು ಗಾದೆ’ ಎಂಬ ಗಾದೆ ಮಾತು ಇಂತಹ ಆಚರಣೆಗಳು ಎಷ್ಟೊಂದು ಇವೆ ಎಂಬುದನ್ನು ಸೂಚಿಸುತ್ತದೆ. ಕೃಷಿಪ್ರಧಾನವಾದ ದೇಶಗಳಲ್ಲಿ ಇಂತಹ ಆಚರಣೆಗಳ ಸಂಖ್ಯೆ ಹೆಚ್ಚಾಗಿದೆ. ಇವುಗಳಲ್ಲಿ ಕೆಲವು ವೈಜ್ಞಾನಿಕವಾಗಿ ಕಂಡರೆ ಕೆಲವು ತಮಾಷೆಯಾಗಿ ಕಾಣುತ್ತವೆ.

ಕೃಷಿಯಿಂದ ಜೀವಿಸುವುದರ ಇಡೀ ವರ್ಷದ ಸುಖ ಸಂತೋಷಗಳು ಮಳೆಯನ್ನೇ ಅವಲಂಬಿಸಿರುವುದರಿಂದ ಮಳೆಗಾಲ ಶುಭವಾಗಿ ಆರಂಭವಾಗಲಿ ಎಂದೇ ಮಳೆಗಾಲಕ್ಕೆ ಮುನ್ನ ಕೆಲವು ಆಚರಣೆಗಳನ್ನು ನಡೆಸುತ್ತಾರೆ.  ಇದರಲ್ಲಿ ಬಹು ಮುಖ್ಯವಾದುದು ಜೋಕುಮಾರನ ಆಚರಣೆ. ಜೋಕುಮಾರ ಹುಟ್ಟಿದ ನಂತರವೇ ಮಳೆಯಾಗುವುದು ಎಂಬ ನಂಬಿಕೆ ಇರುವುದರಿಂದ ಉತ್ತರ ಕರ್ನಾಟಕ ಹಾಗೂ ಚಿತ್ರದುರ್ಗದ ಮೊದಲಾದ ಬಯಲು ಸೀಮೆಯ ಪ್ರದೇಶಗಳಲ್ಲಿ ಇದನ್ನು ತಪ್ಪದೆ ಆಚರಿಸುತ್ತಾರೆ. ಈ ಆಚರಣೆಗೆ ಸಂಬಂಧಿಸಿದ ಹಾಡಿನಲ್ಲಿ ಬರುವ ವಿವರಣೆಯ ಪ್ರಕಾರ ಜನರು ನೀರಿಲ್ಲದೆ ಬವಣೆ ಪಟ್ಟು, ಪೈರೆಲ್ಲ ಒಣಗಿ, ಮಳೆ ಕರುಣಿಸು ಎಂದು ಶಿವನನ್ನು ಬೇಡುವಾಗ ಜೋಕುಮಾರ ಕಾಸೆ ಹಾಕಿ, ಮೀಸೆ ತಿರುವಿ, ಹೂಮುಡಿದು, ನೀಲಿ ಕುದುರೆ ಹತ್ತಿ, ತನ್ನ ಸೆಲ್ಲೆಯವನ್ನು ಬೀಸಿ ಮಳೆ ಕರೆಯುತ್ತಾನೆ.

ಆದರೆ ರೂಢಿಯಲ್ಲಿರುವ ಬಹಳಷ್ಟು ಆಚರಣೆಗಳನ್ನು ಅನಾವೃಷ್ಟಿಯೊದಗಿದಾಗಲೇ ನಡೆಸಲಾಗುತ್ತದೆ. ಜಗತ್ತಿನಲ್ಲಿ ನ್ಯಾಯ, ನೀತಿ, ಧರ್ಮಗಳು ಕಡಿಮೆಯಾದಾಗ ದೇವರು ಮುನಿದು ಈ ರೀತಿಯ ಕಷ್ಟವನ್ನು ತಂದೊಡ್ಡುವನೆಂದು ಜನಪದರು ಭಾವಿಸುವುದರಿಂದ ಹಲವಾರು ಪುಣ್ಯ ಕಾರ್ಯ, ದೇವತಾಕಾರ್ಯಗಳಲ್ಲಿ ತೊಡಗಿ ದೇವರ ಮುನಿಸನ್ನು ತಿದ್ದಲು ಪ್ರಯತ್ನಿಸುತ್ತಾರೆ. ಇದರಲ್ಲಿ ಪ್ರಸ್ತ ಹಾಕಿಸುವ ಕ್ರಮವೂ ಒಂದು. ಮಾಡುವ ವಿಧಾನ ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ರೂಢಿಯಿಸುತ್ತಾರೆ. ವಿರಾಟ ಪರ್ವದಲ್ಲಿ ಧರ್ಮ ರಾಯನ ಕಥೆ ಬರುವುದರಿಂದ ಆ ಸತ್ಯವಂತನ ದೆಸೆಯಿಂದಲಾದರೂ ಮಳೆ ಬರಲಿ ಎಂಬ ಆಶಯ ಈ ವಿಧಾನದ ಹಿನ್ನೆಲೆಯಲ್ಲಿರುವಂತೆ ತೋರುತ್ತದೆ. ಇದು ವೈದಿಕ ಸಂಸ್ಕೃತಿಯ ಪ್ರಭಾವದಿಂದ ಬಂದಿರಬೇಕು. ಎಂದೂ ಊಹಿಸಬಹುದು. ಏಕೆಂದರೆ ಯಾವುದೋ ಒಂದು ಫಲೋದ್ದೇಶಕ್ಕಾಗಿ ಪುಣ್ಯಚರಿತೆಯನ್ನು ಓದಿಸುವ ರೂಢಿ ವೈದಿಕ ಸಂಸ್ಕೃತಿಯಲ್ಲಿದೆ.

ಮಳೆ ಬಾರದಿರುವುದಕ್ಕೆ ಏನೋ ಆಡಚಣೆ ಇ‌ದೆ, ಎಂದು ನಂಬಿ ಆ ರೀತಿಯ ಆಡಚಣೆಗಳನ್ನು ನಿವಾರಿಸುವುದು ಮತ್ತೊಂದು ರೀತಿ. ತೊನ್ನಿದ್ದವರನ್ನು ಹೂತಿದ್ದರೆ ಮಳೆಯಾಗುವುದಿಲ್ಲ ಎಂಬ ನಂಬಿಕೆ ಇರುವುದರಿಂದ ಅವರನ್ನು ಉಪ್ಪು ಹಾಕಿ ಹೂಳುತ್ತಾರೆ. ಉಪ್ಪು, ಹಾಕದಿದ್ದರೆ ಹೆಣ ಕರಗುವುದಿಲ್ಲ., ಹೆಣ ಕರಗುವವರೆಗೆ ಮಳೆಯಾಗುವುದಿಲ್ಲ ಎಂಬ ನಂಬಿಕೆ ಇದೆ. ಕೆಲವೊಮ್ಮೆ ದೇವರನ್ನು ಹೊರಡಿಸಿಕೊಂಡು ಸುಡುಗಾಡು ಗುಡ್ಡೆ ಸೋಸಿ ಅಂಥ ಹೆಣವನ್ನು ತೆಗೆದು ಸುಟ್ಟು ಹಿಂತಿರುಗುತ್ತಾರೆ. ಇದೇ ರೀತಿ ಬರಗಾಲ ಬಸಪ್ಪ ಇದ್ದಕಡೆ ಮಳೆ ಬರುವುದಿಲ್ಲ ಎಂದು ನಂಬಿ ಊರಿನವರು ಅದನ್ನು ರಾತ್ರಿಯಲ್ಲಿ ಯಾರಿಗೂ ತಿಳಿಯದಂತೆ ಸಾಗಿಸುತ್ತಾರೆ.

ಸಿಂಪಥೆಟಿಕ್ ಮಾಟದ ಹಿನ್ನೆಲೆಯಲ್ಲಿ ಬಹಳಷ್ಟು ಆಚರಣೆಗಳು ಹುಟ್ಟಿಕೊಂಡಿವೆ ದೇವರಿಗೆ ನೂರೊಂದು ಕೊಡದ ಅಭಿಷೇಕ ಮಾಡಿಸುವುದು. ವಾರ ಮಾಡುವುದು ಇವುಗಳಲ್ಲಿ ಒಂದು ಬಗೆ, ಈ ಆಚರಣೆಗಳ ಮುಖ್ಯಂಶವೆಂದರೆ ದೇವರ ವಿಗ್ರಹಗಳಿಗೆ ಕೊಡಗಟ್ಟಲೆ ನೀರಿನಿಂದ ಅಭಿಷೇಕ ಮಾಡಿಸುವುದು, ಕೆಲವೊಮ್ಮೆ ನೀರು ಹೊರ ಹೋಗುವ ನಾಳವನ್ನೂ ಮುಚ್ಚಿ ದೇವರ ವಿಗ್ರಹ ಒಂದು ರಾತ್ರಿಯಿಡೀ ನೀರಿನಲ್ಲಿರುವಂತೆ ಮಾಡುವುದು, ಓಣಿಗಳಲ್ಲೆಲ್ಲ ಹೀಗೆ ನೀರು ಹರಿಸುವರೂಢಿಯೂ ಇದೆ. ಹೀಗೆ ಮಾಡುವುದರಿಂದ ಉಷ್ಣತಾ ಮಟ್ಟ ಕೆಳಗಿಳಿದು ಮೋಡಕ್ಕೆ ತಂಪು ತಗುಲಿ ಮಳೆಯಾಗುವ ಸಾಧ್ಯತೆ ಇದೆ.

ನೇರವಾಗಿ ಮಳೆರಾಯನನ್ನೇ ಆರಾಧಿಸುವಂತಹ ವಿವಿಧ ಆಚರಣೆಗಳು ನಮ್ಮಲ್ಲಿವ್ನೆ ಇಲ್ಲಿ ಕಪ್ಪೆ, ಕತ್ತೆ, ಹಾವು ಮುಂತಾದ ಪ್ರಾಣಿಗಳನ್ನು, ಕಲ್ಲು ಅಥವಾ ಮಣ್ಣಿನ ಗುಪ್ಪೆಯನ್ನು ಮಳೆರಾಯನ ಪ್ರತೀಕವೆಂದು ಭಾವಿಸಲಾಗುತ್ತದೆ. ಮಳೆರಾಯನನ್ನು ಪೂಜಿಸಿ, ಅದರ ಮೇಲೆ ನೀರು ಸುರಿಯುವುದು, ಮಳೆಯನ್ನು ಕರೆಯುವ ಹಾಡುಗಳನ್ನು ಹಾಡುವುದು ಮತ್ತು ಬಹುತೇಕವಾಗಿ ಸಣ್ಣ ಹುಡುಗರೇ ಪಾಲ್ಗೊಳ್ಳುವುದು ಹಾಗೂ ಮಳೆರಾಯನನ್ನು ಹೊರುವ ಹುಡುರೇ ನಗ್ನವಾಗಿರುವುದು ಈ ಎಲ್ಲ ಆಚರಣೆಗಳಲ್ಲಿ ಕಂಡು ಬರುವ ಸಮಾನ ಅಂಶ. ಮಳೆ ಬರಿಸುವ ಯಾವುದೇ ಆಚರಣೆಯಲ್ಲಿ ನಗ್ನತೆ ಹಾಗೂ ನೀರು ಬಹು ಮುಖ್ಯ ಪ್ರೇರಕಗಳಾಗಿರುತ್ತವೆ ಎಂಬ ಅಂಶವನ್ನು ಜಗತ್ತಿನ ಇಂತಹ ಎಲ್ಲ ಆಚರಣೆಗಳ ಸಂದರ್ಭದಿಂದ ತಿಳಿಯಲಾಗಿದೆ.

ಜೀವಂತ ಕಪ್ಪೆಯನ್ನು ಬಟ್ಟೆಯಲ್ಲಿ ಸುತ್ತಿ, ಒನಕೆಯ ತುದಿಗೆ ಅದನ್ನು ಬಿಗಿದು ಅದರ ಮೇಲೆ ಒಂದು ಚರಿಗೆ ನೀರು ಸುರಿದು, ಹೆಗಲ ಮೇಲೆ ಹೊತ್ತು ಮನೆಮನೆಗೂ ಮೆರವಣಿಗೆಯಲ್ಲಿ ತೆರಳುವುದು, ಒಂದು ಕತ್ತೆಯನ್ನು ಪೂಜಿಸಿ, ಅದರ ಮೇಲೆ ನಾಲ್ಕು ಬಿಂದಿಗೆ ನೀರು ಸುರಿದು ಮೆರವಣಿಗೆಯಲ್ಲಿ ತೆರಳುವುದು ಕರ್ನಾಟಕದ ಹಾಸನ, ಬೆಂಗಳೂರು ಮೊದಲಾದ ಪ್ರದೇಶಗಳಲ್ಲಿ ಕಂಡುಬರುತ್ತದೆ. (ಮಳೆರಾಯನನ್ನು ಕರೆಯಲು ಕತ್ತೆಯನ್ನು ಬಳಸುವುದರ ಹಿನ್ನೆಲೆಯಲ್ಲಿ ಒಂದು ದಂತಕಥೆಯಿದೆ. ಒಮ್ಮೆ ಶಿವನ ಮೂರ್ತಿಯನ್ನು ಕತ್ತೆಯ ಮೇಲೆ ಹೊರಿಸಿ ಮೆರವಣಿಗೆ ಮಾಡುವಾಗ ಜನ ಭಯಭಕ್ತಿಯಿಂದ ನಮಸ್ಕರಿಸುತ್ತಿದ್ದರಂತೆ. ಈ ನಮಸ್ಕಾರ ತನಗೇ ಎಂದು ಭಾವಿಸಿದ ಕತ್ತೆ. ಗರ್ವದಿಂದ ಶಿವನ ಮೂರ್ತಿಯನ್ನು ಬೀಳಿಸಿ ಓಡಿದಾಗ ಶಿವನು ನೀನು ಹಾಳುಬೀಳಿನಲ್ಲಿ ವಾಸಮಾಡು, ಜನ ನಿನ್ನನ್ನು ಕತ್ತೆ ಎಂದು ಹೀಯಾಳಿಸಲಿ’, ಎಂದು ಶಾಪಕೊಟ್ಟನಂತೆ. ಕತ್ತೆ ನೊಂದುಕೊಂಡು ಶಿವನ ಮೊರೆ ಹೋದಾಗ ’ಮಳೆಬಾರದಾಗ ಜನ ನಿನ್ನನ್ನು ಪೂಜಿಸಲಿ ಆಗ ಮಳೆ ಆಗುತ್ತದೆ ಎಂದು ವರವಿತ್ತನಂತೆ, ’ಹೊತ್ತು ಬಂದಾಗ ಕತ್ತೆ ಕಾಲು ಹಿಡಿ’ ಎಂಬ ಗಾದೆ ಮೂಲತಃ ಈ ಹಿನ್ನೆಲೆಯಿಂದಲೇ ಬಂದಿರಬೇಕು).

ಮಳೆಮಲ್ಲಪ್ಪನ ಆಚರಣೆಯಲ್ಲಿ ಜೇಡಿ ಮಣ್ಣಿನಿಂದ ಮಳೆರಾಯನನ್ನು ಮಾಡುತ್ತಾರೆ. ಮಲೆನಾಡಿನ ಕಡೆ ಚಿಕ್ಕ ಹುಡುಗರು ‘ಮಳೆಮಲ್ಲಪ್ಪನನ್ನು ಮಾಡುತ್ತಾರೆ ಎಕ್ಕೆ ಎಲೆಗೆ ಎಣ್ಣೆ ಹಚ್ಚಿ ಬಿಸಿಗೆ ಹಿಡಿದು ನಂತರ ನೀರು ತುಂಬಿದ ಗಿಂಡಿಯ ಬಾಯಿಗೆ ಅಂಟಿಸಿ ತಲೆಕೆಳಗಾಗಿ ಹಿಡಿದುಕೊಳ್ಳುತ್ತಾರೆ. ಇದು ಮಳೆಮಲ್ಲಪ್ಪನ ಪ್ರತೀಕ. ಗುರ್ಚಿ ಆಚರಣೆಯಲ್ಲಿ ತೊಪ್ಪೆಯ ಉಂಡೆ ಮಾಡಿ ಅದಕ್ಕೆ ಗರುಕೆಯನ್ನು ಸಿಕ್ಕಿಸಿದಾಗ ಅದು ಮಳೆರಾಯನ ಪ್ರತೀಕವಾಗುತ್ತದೆ. ಈ ಎಲ್ಲ ಆಚರಣೆಗಳಲ್ಲೂ ಮಳೆರಾಯನ ಪ್ರತೀಕವನ್ನು ಹೊತ್ತುಕೊಂಡು ಹುಡುಗರು ಮನೆಮನೆಗೂ ಮೆರವಣಿಗೆಯಲ್ಲಿ ಹೋದಾಗ ಮನೆಯ ಹೆಂಗಸರು ಮಳೆರಾಯನನ್ನು ಹೊತ್ತಿರುವ ಹುಡುಗನ ಮೇಲೆ ನೀರು ಸುರಿದು, ದುಡ್ಡು, ಕಾಳು, ಮುಂತಾದ ಕಾಣಿಕೆಗಳನ್ನು ಕೊಡುತ್ತಾರೆ. ಗುರ್ಚಿಯ ಆಚರಣೆಯಲ್ಲಿ ಗುರ್ಚಿಯನ್ನು ಹೊತ್ತ ಹುಡುಗನ ಮೇಲೆ ನೀರು ಸುರಿದಾಗ ಅವನು ನಿಂತ ಸ್ಥಳದಲ್ಲಿಯೇ ತನ್ನ ಮೈಸುತ್ತ ತಿರುಗುತ್ತಾನೆ. ಗುರ್ಚಿಯಿಂದ ಧಾರೆಯಾಗಿ ಸುರಿದ ನೀರ. ಮಳೆಯಂತೇ ಕಾಣುತ್ತದೆ. ಈ ಆಚರಣೆಗಳ ಕೊನೆಯಲ್ಲಿ ಮಳೆರಾಯನ ಪ್ರತೀಕವನ್ನು ಕೆರೆ ಭಾವಿಗಳಲ್ಲಿ ಬಿಡುತ್ತಾರೆ. ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳೊಂದಿಗೆ ಈ ರೀತಿಯ ಆಚರಣೆಗಳು ಪ್ರಚಲಿತವಾಗಿವೆ.

ಮಂಡ್ಯ, ಹಾಸನ, ಅರಸೀಕೆರೆ, ಚಿಕ್ಕ ಮಗಳೂರು ಪ್ರದೇಶಗಳಲ್ಲಿ ತಿಂಗಳು ಮಾವನ ಪೂಜೆ ಅಥವಾ ಬೆಳ್ಳಂಗಳಪ್ಪನ ಪೂಜೆಯನ್ನು ಮಳೆಗಾಗಿ ನಡೆಸುತ್ತಾರೆ. ಬಣ್ಣ ಬಣ್ಣದ ರಂಗವಲ್ಲಿಯಲ್ಲಿ ತೇರು ಹಾಗೂ ತೇರಿನ ಕಳಸದ ಹತ್ತಿರ ಚಂದ್ರನನ್ನು ಬಿಡಿಸಿ, ಅಕ್ಕಿ ಅಥವಾ ರಾಗಿಯ ರೊಟ್ಟಿಯನ್ನಿಟ್ಟು ಪೂಜಿಸುವುದೂ ಒಬ್ಬ ಹುಡುಗ ರೊಟ್ಟಿಯನ್ನು ಕದ್ದು ಯಾರಿಗೂ ಸಿಗದಂತೆ ತಪ್ಪಿಸಿಕೊಂಡು ಓಡಿ ಮರದ ಮೇಲೆ ಕೂತು ರೊಟ್ಟಿ ತಿಂದು ಬರುವುದೂ, ರಂಗವಲ್ಲಿಯ ಸುತ್ತ ಕೋಲು ಹುಯ್ಯುವುದೂ, ತಿಂಗಳು ಮಾವನ ಪದ ಹಾಡುವುದೂ, ಚಿಕ್ಕ ಮಕ್ಕಳಲ್ಲಿ ಇಬ್ಬರಿಗೆ ಮದುವಣಿಗರಂತೆ ಅಲಂಕಾರ ಮಾಡಿ, ಮದುವೆ ಮಾಡಿ, ಸೋಬಾನೆ ಹಾಡುವುದೂ ಈ ಆಚರಣೆಯ ಮುಖ್ಯಾಂಶ. ಈ ಆಚರಣೆಯ ಅರ್ಥವಂತಿಕೆಯನ್ನು ವಿಶ್ಲೇಷಿಸಬೇಕಾಗಿದೆ. ಗಂಡು ಕಪ್ಪೆ ಮತ್ತು ಹೆಣ್ಣು ಕಪ್ಪೆಗಳು ವಿವಾಹವನ್ನು ವಿಜೃಂಭಣೆಯಿಂದ ಹಿಂದೂ ಪದ್ಧತಿಯಂತೆ ಮಾಡುವುದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿರುವ ಒಂದು ಆಚರಣೆ ವಿವಾಹ, ನಗ್ನತೆ, ಮಳೆ ಇವೆಲ್ಲವೂ ಫಲವಂತಿಕೆಗೆ ಸಂಬಂಧಿಸಿದ ಅಂಶಗಳು. ಈ ಹಿನ್ನೆಲೆಯಿಂದ ಇಂಥ ಆಚರಣೆಗಳ ವಿಶ್ಲೇಷಣೆ ಮಾಡಬಹುದು.

ಗುಡುಗಿದಾಗ ಮಳೆ ಬರುತ್ತದೆ ಆದ್ದರಿಂದ ಗುಡುಗಿನಂತಹ ಸದ್ದನ್ನು ಕೃತಕವಾಗಿ ಮಾಡುವ ರೂಢಿಗಳು ಕೆಲವು ಜನರಲ್ಲಿವೆ. ನಮ್ಮಲ್ಲಿ ಊರ ಗುಡಿಯ ಮುಂದೆ ಡೊಳ್ಳಿನ ವಾಲಗ ಏರ್ಪಡಿಸುವುದನ್ನು ಈ ದೃಷ್ಟಿಯಿಂದ ನೋಡಬಹುದು. ಛೋಟಾ ನಾಗ-ಪುರದ ಆದಿವಾಸಿಗಳು ಮಳೆಗೆ ಗುಡುಗೇ ಕಾರಣ ಎಂದು ಭಾವಿಸಿ ದೊಡ್ಡ ದೊಡ್ಡ ಬಂಡೆಗಳನ್ನು ಮೇಲಿನಿಂದ ಕೆಳಕ್ಕೆ ಉರುಳಿಸುವುದರ ಮೂಲಕ ಗುಡುಗಿನಂತಹ ಶಬ್ದವನ್ನುಂಟು ಮಾಡುತ್ತಿದ್ದರು.

ನಮ್ಮ ಗ್ರಾಮದಲ್ಲಿ ಅತೀವೃಷ್ಟಿ, ಅನಾವೃಷ್ಟಿಯ ಪರಿಹಾರಕ್ಕಾಗಿ ತೊಗಲು ಗೊಂಬೆ ಆಟ, ಪಂಡರೀ ಭಜನೆ, ಸುಗ್ಗಿ ಕುಣಿತ ಮೊದಲಾದ ಕಲೆಗಳ ಪ್ರದರ್ಶನವನ್ನು ಏರ್ಪಡುಸುವುದೂ ರೂಢಿಯಲ್ಲಿದೆ. ಲಂಬಾಣಿಗರು ಹಾಡುವ. ’ಮಳೆರಾಜನ ಕುಣಿತ’ದ ಹಾಡು ನೇರವಾಗಿ ಮೇಘರಾಜನ ಪ್ರಾರ್ಥನೆಯೇ ಆಗಿದೆ. ಮಳೆ ಇಲ್ಲದಾಗ ಇದನ್ನು ಹಾಡಿ ಕುಣಿದರೆ ಮಳೆಯಾಗುವುದೆಂದು ಈಗಲೂ ಹಳ್ಳಿಯ ಜನ ನಂಬುತ್ತಾರೆ. ಊರಿನ ಜನ ಲಂಬಾಣಿ ಹೆಣ್ಣು ಮಕ್ಕಳನ್ನು ಕರೆಯಿಸಿ ಮಳೆ ರಾಯನ ಹಾಡು ಹೇಳಿಸುತ್ತಾರೆ. ಇಲ್ಲೆಲ್ಲ ಕಲೆಯ ಮೂಲಕ ದೇವರ ಮನಸ್ಸನ್ನು ಸಂತೃಪ್ತಿಗೊಳಿಸುವ ಆಶಯವಿದೆ. ಉತ್ತರ, ಕನ್ನಡ ಜಿಲೆಯ ’ತಾರ್ಲೆಕುಣಿತ’ ಅಥವಾ ’ತಾರಲೆ’ ಮಳೆಗಾಗಿಯೇ ಮಾಡುವಂಥದ್ದು ಇದರ ಹಿನ್ನೆಲೆಯಲ್ಲಿ ಒಂದು ಕಥೆ ಇದೆ. ಗಂಗೆ ಗೌರಿಯರ ಜಗಳದಲ್ಲಿ ಗಂಗೆ ಕೋಪಿಸಿಕೊಂಡು ಕೈಲಾಸ ಬಿಟ್ಟು ಬಂದಾಗ ಸೂತಕವಾದ ಗೌರಿ, ಸೂತಕ ಕಳೆದುಕೊಳ್ಳಲು ನೀರಿಗಾಗಿ ಹುಡುಕಿಕೊಂಡು ಹೋದಳಂತೆ. ನೀರು ದೊರೆಯದಿದ್ದಾಗ ಗುರ್ಚಿಯನ್ನು ಹೊತ್ತು ಮನೆಮನೆಗೆ ತಿರುಗಿದಳಂತೆ. ಈ ನೃತ್ಯದಲ್ಲಿ ಹಾಲಕ್ಕಿ ಸ್ತ್ರೀಯರು ಭಾಗವಹಿಸುತ್ತಾರೆ. ಸುಮಾರು ೨೦-೨೫ ಜನ ಸ್ತ್ರೀಯರು ಮನೆಗಳ ಮುಂದೆ ವರ್ತುಲಾಕಾರವಾಗಿ ನಿಂತು ಪರಸ್ಪರರ ಕೈ ಹಿಡಿದುಕೊಂಡು ಕೈಗಳನ್ನು ಮೇಲಕ್ಕೆ ಎತ್ತುತ್ತ, ಇಳಿಸುತ್ತ ಮೈಯನ್ನು ವಿವಿಧ ರೀತಿಯಲ್ಲಿ ಬಾಗಿಸುತ್ತ ಉತ್ಸಾಹದಿಂದ ಮೈಮರೆತು ಕುಣಿಯುತ್ತಾರೆ.

ಮಳೆ ಬರಿಸಲು ಜನರು ನಡೆಸಿದ ಯಾವುದೇ ಆರಾಧನೆಗಳಿಗೂ ಮಳೆರಾಯ ಬಲಿಯದಿದ್ದಾಗ ಕೊನೆಯ ಪ್ರಯತ್ನ ಎಂಬಂತೆ ಅವನನ್ನು ಅವಮಾನಿಸುವ, ಬೈಯುವ, ಹಿಂಸಿಸುವ ಪದ್ದತಿಗಳನ್ನೂ ರೂಢಿಸಿಕೊಂಡಿದ್ದಾರೆ. ಇವುಗಳಿಗೆ ಹೆದರಿ ನಾಚಿಕೊಂಡಾದರೂ ಮಳೆರಾಯ ಒಲಿದಾನು ಎಂಬ ಆಶಯ ಈ ರೂಢಿಗಳ ಹಿನ್ನೆಲೆಯಲ್ಲಿದೆ.

ಮಳೆರಾಯನ ಪ್ರತೀಕವಾದ ಕಪ್ಪೆಯನ್ನು ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡುವುದುದರ ಹಿನ್ನೆಲೆಯಲ್ಲಿ ಇಂತಹ ಆಶಯವೇ ಇರಬಹುದು. ಕೆಲವೊಮ್ಮೆ ಮಳೆ ಮಲ್ಲಪ್ಪನ ಪ್ರತೀಕವಾದ ಮಣ್ಣಿನ ಗುಪ್ಪೆಯನ್ನು ನೀರಿಗೆ ಹಾಕದೆ ಬಿಸಿಲಿನ ತಾಪ ಅನುಭವಿಸಲಿ ಎಂದು ಬಿಸಿಲಲ್ಲೆ ಇಡುತ್ತಾರೆ. ಉತ್ತರ ಕರ್ನಾಟಕದಲ್ಲಿ ಮಳೆಗಾಗಿ  ಗುಳ್ಳವ್ವನ ಆಚರಣೆಯಲ್ಲಿ ಗುಳ್ಳವ್ವನ ಪ್ರತೀಕವನ್ನು ಮುಳ್ಳಲ್ಲಿ ಎಸೆಯುತ್ತಾರೆ. ದೇವರ ವಿಗ್ರಹಕ್ಕೆ ಕಾರ ಬಳಿಯುವ ರೂಢಿ ಕೆಲವು ಕಡೆಗಳಲ್ಲಿದೆ. ಕೆರೆಕಟ್ಟೆಯ ಮೇಲಿರುವ ದುಗ್ಗಮ್ಮನಿಗೆ ಕಲ್ಲು ಬೀರುವ ರೂಢಿ ಕೋಲಾರ ಜಿಲ್ಲೆಯಲ್ಲಿದೆ. ದೇವರ ಪೂಜೆಗೆ ನೀರಿಲ್ಲದಂತೆ ಮಾಡಲು ದೇವಸ್ಥಾನದ ಎದುರಿಗಿರುವ ಕೊಳದ ನೀರನ್ನು ಮೊಗೆದು ಚೆಲ್ಲುವುದು, ಮಳೆರಾಯನ ಪ್ರತೀಕವಾದ ಕಪ್ಪೆಯನ್ನು ಬಟ್ಟೆಯಲ್ಲಿ ಸುತ್ತಿ ಒನಕೆಯ ತುದಿಗೆ ಕಟ್ಟುವುದು ಇದೇ ಹಿಂಸಾತ್ಮಕ ಉದ್ದೇಶದಿಂದ ಜೋಕುಮಾರನ ವಿಗ್ರಹವನ್ನು ಕಲ್ಲಿನ ಕೆಳಗಿಡುವ ಮೊದಲು ತಿಗಣಿ, ಸೊಳ್ಳೆ, ಚಿಕ್ಕಾಡು, ಮೊದಲಾದ ಕೀಟಗಳನ್ನು ವಿಗ್ರಹದಲ್ಲಿ ಸೇರಿಸುವುದುಂಟು. ಇಲ್ಲಿಯೂ ಸಹ ಮಳೆದೇವತೆಯಾದ ಜೋಕುಮಾರನಿಗೆ ಹಿಂಸೆ ಕೊಡುವ ಉದ್ದೇಶವಿದೆ. ಮಳೆರಾಯನನ್ನು ಬೆದರಿಸುವ ಇಂತಹುದೇ ಒಂದು ಆಶಯ ಚೀನಾದ ಮಳೆ ಜಾನಪದದಲ್ಲಿದೆ.  ಚೀನೀಯರು ಮಳೆ ರಾಯನಿಗೆ ಪ್ರತೀಕವಾಗಿ ಕಾಗದ ಅಥವಾ ಮರದಿಂದ ಡೇಗನ್‌ನಂಥ ಪ್ರಾಣಿಯ ಬೊಂಬೆಯನ್ನು ರಚಿಸಿ ಬೀದಿಗಳ್ಲಿ ಮೆರವಣಗೆ ಮಾಡುತ್ತಾರೆ. ಆಗಲೂ ಮಳೆ ಬಾರದಿದ್ದರೆ ಅದನ್ನು ಚೂರು ಚೂರಾಗಿ ಹರಿದು ಹಾಕುತ್ತಾರೆ. ದೇವತೆಯ ಪಟ್ಟದಿಂದ ಕೆಳಗಿಳಿಸುವುದಾಗಿ ಹೆದರಿಸುತ್ತಾರೆ.

ಮಳೆಯಾಗುತ್ತದೊ ಇಲ್ಲವೊ ಎಂಬುದನ್ನು ಕಾಲಜ್ಞಾನ ಅಥವಾ ಶಕುನಗಳಿಂದ ತಿಳಿಯುವ ಕೆಲವು ಸಂಪ್ರದಾಯಗಳೂ ನಮ್ಮಲ್ಲಿ ಪ್ರಚಲಿತವಾಗಿವೆ. ಗಿಂಡಿಯಂತಹ ವಸ್ತುವನ್ನು ನೆಲದಲ್ಲಿ ಹುದುಗಿಸಿ ಹುಡುಕಿಸುವುದು, ನೀರಿಲ್ಲದ ತೆಂಗಿನಕಾಯಿಯನ್ನು ದೇವಾಲಯದ ಕಂಭಕ್ಕೆ ಕಟ್ಟುವುದು, ಈ ಗುಂಪಗೆ ಸೇರುತ್ತವೆ. ಕೆಲವೊಮ್ಮೆ ಪಂಡಿತ ವಿಧ್ವಾಂಸರಲ್ಲಿ ಮಳೆಯ ಭವಿಷ್ಯ ಕೇಳುತ್ತಾರೆ. ಬಾಯಿ ಮೇಲಾಗಿ ಹುಟ್ಟಿದವರ ಮುಂದೆ ಒಂದು ಕಬ್ಬಿಣದ ಕಡಾಯಿಯಲ್ಲಿ ನೀರಿಟ್ಟರೆ ಅವನಿಗೆ ಎಲ್ಲ ಮಲೆಗಳೂ ಹಾಯುವ ದೃಶ್ಯ ಕಾಣಿಸುತ್ತದಂತೆ. ಇನ್ನೂ ಕೆಲವು ಕಡೆ ಪ್ರಚಲಿತವಿರುವ ಪ್ರಕಾರ ಬಂದು ಹಿಡಿಮರಳನ್ನು ತೆಗೆದುಕೊಂಡು ಮೇಲಿನಿಂದ ಉದುರಿಸುತ್ತಾರೆ. ಗಾಳಿಯ ದಿಕ್ಕಿನಲ್ಲಿಯೇ ಮರಳು ಹಾರಿ ಬೀಳುವುದರಿಂದ ಈ ಆಧಾರದ ಮೇಲೆ ಮಳೆಯಾಗುತ್ತದೊ ಇಲ್ಲವೋ ಎಂಬುದನ್ನು ಹೇಳುತ್ತಾರೆ. ಒಂದು ಕಳಸ ನಿರ್ಮಿಸಿ ಐವರು ಮುತ್ತೈದೆಯರು ಪೂಜೆ ಆರತಿ ಮಾಡಿ ಒಬ್ಬೊಬ್ಬರಾಗಿ ಕೊಡವನ್ನು ಹಿಡಿದು ತಿರುಗುಸಿದಾಗ ಅದು ಸತತವಾಗಿ ಐದು ಸುತ್ತು ತಿರುಗಿದರೆ ೫ ದಿನದಲ್ಲಿ ಮಳೆಯಾಗುವುದು ಖಂಡಿತ ಎಂದೂ ನಂಬುತ್ತಾರೆ. ಉಗಾದಿ, ಕಾಮನಹಬ್ಬ ಮುಂತಾದ ಹಬ್ಬಗಳ ಹಿಂದಲ ಅಥವಾ ಮುಂದಲ ೩ ದಿನಗಳೊಳಗೆ ಮಳೆ ಆಗಿಯೇ ಆಗುತ್ತದೆ ಎಂಬ ಕೆಲವು ನಂಬಿಕೆಗಳು ಜನರಲ್ಲಿವೆ. ಕಾಮನನ್ನು ಸುಟ್ಟ ಮೇಲೆ ಅದರ ಬೂದಿಯನ್ನು ತೋಯಿಸುವಷ್ಟಾದರೂ ಮಳೆ ಆಗುತ್ತದೆ ಎಂಬ ನಂಬಿಕೆಯೂ ಇದೆ. ಇದು ಸಾಮಾನ್ಯವಾಗಿ ಹವಾಮಾನವನ್ನೇ ಆಧರಿಸಿರುವ ಪ್ರಕ್ರಿಯೆಯಾಗಿದ್ದು ಜನ ಅದನ್ನು ಅನುಭವದಿಂದ ಕಂಡುಕೊಂಡು ನಂಬಿಕೆಯ ರೂಪದಲ್ಲಿ ಉಳಿಸಿ ಕೊಂಡಿದ್ದಾರೆ.