ಪರಕೀಯರಾದ ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಭಾರತ ಬಿಡುಗಡೆ ಆಗಲು ಒಂದು ದೀರ್ಘ ಹೋರಾಟವೆ ನಡೆಯಿತು. ಆ ಸ್ವಾತಂತ್ಯ್ರ ಸಮರದಲ್ಲಿ ಮೋತೀಲಾಲರು ತಮ್ಮದೇ ಆದ ವಿಶಿಷ್ಟ ಪಾತ್ರವಹಿಸಿದರು.

ಸಮಾಜವು ಸುವ್ಯವಸ್ಥಿತ, ಹಾಗೂ ದೃಢ ಆಗಿ ಇರಬೇಕಾದರೆ, ಅನೇಕ ರೀತಿಯ ನೆರವು ಬೇಕು. ಸಮಾಚಾರ ಪತ್ರಿಕೆ ಎನ್ನುವುದು ಸಮಾಜಕ್ಕೆ ಕನ್ನಡಿ ಇದ್ದ ಹಾಗೆ. ಅದರಲ್ಲಿ ಪ್ರಪಂಚದ, ರಾಷ್ಟ್ರದ, ಸಮಾಜದ ಎಲ್ಲ ಆಗುಹೋಗುಗಳೂ ತಿಳಿಯಬರುತ್ತವೆ. ಬ್ರಿಟಿಷರ ವಿರುದ್ಧ ಹೂಡಿದ ಭಾರತ ಸ್ವಾತಂತ್ಯ್ರ ಸಂಗ್ರಾಮದಲ್ಲಿ ಪತ್ರಿಕೆಗಳು ವಹಿಸಿದ್ದ ಪಾತ್ರ ಹಿರಿದಾದದ್ದು. ಅಂಥ ಪತ್ರಿಕೆಗಳಲ್ಲಿ ಒಂದು “ಅಮೃತ ಬಜಾರ್ ಪತ್ರಿಕಾ.” ಅದರ ಸಂಪಾದಕರೇ ಬಾಬು ಮೋತಿಲಾಲ್‌ಘೋಷ್‌. ಸದಾ ರೋಗ ಪೀಡಿತ. ಬಡಕಲು ಆಸಾಮಿ, ಮನಸ್ಸು ಮಾತ್ರ ಉಕ್ಕು ! ಭಾರತ ತನ್ನದು. ಅದೇ ತನ್ನ ಬದುಕು, ಉಸಿರು ಎಲ್ಲ. ಇದೇ ಅವರ ಬಾಳಿನ ಧ್ಯೇಯ. ನಿರ್ಭೀತ ಪತ್ರಿಕೋದ್ಯಮಿ. ನೀತಿವಂತ ರಾಜಕೀಯ ಅವರದು. ಯಾರಿಗೂ ಅಂಜಲಿಲ್ಲ. ಆಸೆಬುರುಕರೂ ಆಗಲಿಲ್ಲ. ಅಂತೆಯೆ ಇಂಗ್ಲಿಷರಿಗೆ ಬಗ್ಗಲೂ ಇಲ್ಲ.

ಮನೆತನ

ಮೋತಿಲಾಲರು ಹುಟ್ಟಿದ್ದು ೧೮೪೭ ನೆ ಇಸವಿ ಅಕ್ಟೋಬರ್ ೨೮ ರಂದು. ಸ್ಥಳ ಈಗಿನ ಬಂಗ್ಲಾದೇಶದ ಜೆಸ್ಸೂರ್ ಜಿಲ್ಲೆಗೆ ಸೇರಿದ ಪೊಲುವ ಮಾಹುರ ಎಂಬ ಒಂದು ಗ್ರಾಮ. ತಂದೆಯ ಹೆಸರು ಹರಿನಾರಾಯಣ ಘೋಷ್‌. ತಾಯಿ ಅಮೃತಮಾಯಿ. ಮುಂದೆ ಈ ಹಳ್ಳಿಗೆ ಅಮೃತಬಜಾರ್ ಎಂದೇ ಹೆಸರಾಯಿತು. ಮೋತಿಲಾಲರ ಕುಟುಂಬದವರು ಕಾಯಸ್ಥ ಮನೆತನಕ್ಕೆ ಸೇರಿದವರು. ಆರ್ಥಿಕ ಪರಿಸ್ಥಿತಿ ಅಷ್ಟಕ್ಕಷ್ಟೆ. ತಂದೆ ಜೆಸ್ಸೂರ್ನಲ್ಲಿ ವಕೀಲ. ಸುಮಾರಾದ ಸಂಪಾದನೆ.

ಹರಿನಾರಾಯಣ ಘೋಷರಿಗೆ ಎಂಟು ಜನ ಗಂಡು ಮಕ್ಕಳು. ಮೋತಿಲಾಲ್‌ನಾಲ್ಕನೆಯವ. ಹಿರಿಯವನು ಬಸಂತಕುಮಾರ; ಹೇಮಂತ, ಶಿಶಿರರು ಇತರ ಅಣ್ಣಂದಿರು. ತಮ್ಮಂದಿರು ಹೀರಾಲಾಲ್‌, ರಾಮಲಾಲ್‌, ಬಿನೊದ ಲಾಲ್‌, ಗೋಳಪಲಾಲ್‌. ಕುಟುಂಬ ದೊಡ್ಡದು, ವರಮಾನ ಕಡಿಮೆ. ತಾಯಿ ಅಮೃತಮಾಯಿಯನ್ನು ಕಂಡರೆ ಮಕ್ಕಳಿಗೆ ತುಂಬ ಪ್ರೀತಿ, ಗೌರವ.

ಬಸಂತಕುಮಾರ ಜಾಣ. ಅನೇಕ ವಿಚಾರಗಳನ್ನು ತಿಳಿದುಕೊಂಡು, ತಮ್ಮಂದಿರಿಗೂ ತಿಳಿಸುತ್ತಿದ್ದ. ಅವರಿಗೆ ಅವನೇ ಸ್ಫೂರ್ತಿದಾತ. ಮುಂದೆ, ಶಿಶಿರ, ಮೋತಿಲಾಲರು ಪತ್ರಿಕೋದ್ಯಮದಲ್ಲಿ ಯಶಸ್ಸುಗಳಿಸಲು ಬಸಂತನೇ ಮೂಲ ಕಾರಣ. ೧೮೬೨ರ ಡಿಸೆಂಬರ್ನಲ್ಲಿ ಆತ ಒಂದು ಸುದ್ದಿ ಪತ್ರಿಕೆ ಆರಂಭಿಸಿದ. ಹದಿನೈದು ದಿನಕ್ಕೊಮ್ಮೆ ಅದರ ಸಂಚಿಕೆ. ಹೆಸರು “ಅಮೃತ ಪ್ರವಾಹಿನಿ.” ಜೆಸ್ಸೂರ್ ನಿಂದ ಪ್ರಕಟಗೊಳ್ಳುತ್ತಿತ್ತು. ವಿಜ್ಞಾನ, ಸಾಹಿತ್ಯ, ಕೃಷಿ, ಕೈಗಾರಿಕೆ ಮುಂತಾದ್ದೆಲ್ಲದರ ಕುರಿತು ಹೆಚ್ಚಿಗೆ ತಿಳಿವಳಿಕೆ ನೀಡುವುದೆ ಪತ್ರಿಕೆಯ ಧ್ಯೇಯ. ಹೇಮಂತ ಕಲ್ಕತ್ತೆಯ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ. ೧೮೬೩ರಲ್ಲಿ ತಂದೆ ಹಠಾತ್ತಾಗಿ ತೀರಿಕೊಂಡದ್ದರಿಂದ ಪದವೀಧರ ಆಗುವ ಮೊದಲೇ ಆತ ತನ್ನ ಓದು ನಿಲ್ಲಿಸಬೇಕಾದ ಕಷ್ಟಸ್ಥಿತಿ ಬಂತು. ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿತು. ಹೀರಾಲಾಲ್‌, ರಾಮಲಾಲ್‌, ಬಿನೋದಲಾಲರು ಚಿಕ್ಕಂದಿನಲ್ಲೆ ಕಾಲವಶರಾದರು. ಕಿರಿಯನಾದ ಗೋಳಪಲಾಲ,ಅಣ್ಣ ಮೋತಿಲಾಲನನ್ನೆ ಅನುಸರಿಸಿದ. ಅಣ್ಣನ ಅನಂತರವೂ ಪತ್ರಿಕೆಯನ್ನು ತಾನೇ ನಡೆಸಿದ.

ಶಿಕ್ಷಣ

ಪ್ರಾಥಮಿಕ ಶಾಲೆಯ ಓದನ್ನು ಮೋತಿಲಾಲ ಹಳ್ಳಿಯ ಶಾಲೆಯಲ್ಲೆ ಮುಗಿಸಿದ. ಕೃಷ್ಣಾಗರ ಎಂಬ ಊರು, ಹಳ್ಳಿಗೆ ಸ್ವಲ್ಪ ದೂರದಲ್ಲಿತ್ತು. ನಾದಿಯ ಜಿಲ್ಲೆಗೆ ಅದೇ ಕೇಂದ್ರ. ನೀಲಿ ಬಣ್ಣದ ವ್ಯಾಪಾರಕ್ಕೆ ಹೆಸರುವಾಸಿ. ಇಡೀ ಊರೇ ಕ್ರಿಶ್ಚಿಯನ್‌ಮಿಷನರಿಗಳ ಹಿಡಿತದಲ್ಲಿತ್ತು. ಇದಲ್ಲದೆ ಸಂಸ್ಕೃತ ಕಲಿಸುವ ವಿದ್ಯಾಕೇಂದ್ರ ಕೂಡ. ಮೋತಿಲಾಲ ಹೈಸ್ಕೂಲಿಗೆ ಕೃಷ್ಣಾಗರಕ್ಕೆ ಹೋಗಬೇಕಾಯಿತು. ಪಾದ್ರಿಗಳ ಪ್ರಭಾವ ಹೆಚ್ಚಾದುದು ಸ್ಥಳೀಯರಿಗೆ ಸಹಿಸಲಿಲ್ಲ. ಆ ಸಂದರ್ಭದಲ್ಲಿ ಬ್ರಹ್ಮ ಸಮಾಜದ ಮುಖಂಡರಾದ ಮಹರ್ಷಿ ದೇವೇಂದ್ರ ನಾಥ ಠಾಕೂರ್, ಬ್ರಹ್ಮಾನಂದ ಕೇಶವ ಚಂದ್ರ ಸೇನ್‌ಮೊದಲಾದವರು ೧೮೬೦ ರಲ್ಲಿ ಕೃಷ್ಣಾಗರಕ್ಕೆ ಬಂದು, ಹಿಂದೂಧರ್ಮದ ಬಗ್ಗೆ ಹೆಚ್ಚಿನ ಅರಿವು, ಜಾಗೃತಿ ಮೂಡಿಸಲೆತ್ನಿಸಿದರು. ಒಂದು ಹೊಸ ಗಾಳಿ ಬೀಸಿದಂತಾಯಿತು. ಬ್ರಹ್ಮಸಮಾಜದ ಸಮಾಜ ಸುಧಾರಣಾ ಕಾರ್ಯಕ್ರಮ ಮೋತಿಲಾಲರಿಗೂ ಇಷ್ಟ ಆಯಿತು. ಅದರಿಂದ ಸನಾತನ ಹಿಂದೂ ಸಂಪ್ರದಾಯದಲ್ಲಿ ಆತ ಇರಿಸಿಕೊಂಡಿದ್ದ ವಿಶ್ವಾಸ ಏನೂ ಕಡಿಮೆ ಆಗಲಿಲ್ಲ.

ಕೃಷ್ಣಾಗರದಲ್ಲೆ ಮೋತಿಲಾಲ್‌ಮೆಟ್ಟಿಕ್‌, ಎಂಟ್ರೆನ್ಸ್ ಪರೀಕ್ಷೆಗಳನ್ನು ಪಾಸು ಮಾಡಿದರು. ಸ್ಥಳೀಯ ಕಾಲೇಜಿನಲ್ಲಿ ಮೊದಲ ಬಿ.ಎ. ತರಗತಿಗೆ ಸೇರಿದರು. ಆರ್ಥಿಕ ಮುಗ್ಗಟ್ಟಿನಿಂದಾಗಿ, ಅವರ ವಿದ್ಯಾಭ್ಯಾಸ ಮುಂದವರೆಯುವುದು ದುಸ್ತರವೆ ಆಯಿತು. ರಜಾದಿನಗಳು ಬಂದರೆ, ತನ್ನೂರಿಗೆ, ಸುಮಾರು ಐವತ್ತು ಮೈಲು ನಡೆದೇ ಹೋಗಿ ಬರುತ್ತಿದ್ದದ್ದು! ಆಗ್ಗೆ ರೈಲಿರಲಿಲ್ಲ. ಕುದುರೆಗಾಡಿಯಲ್ಲಿ ಹೋಗಲು ಹಣವಿರಲಿಲ್ಲ. ತಂದೆಯ ಮರಣದಿಂದಾಗಿ ಕೊನೆಯ ವರ್ಷದ ಬಿ.ಎ. ಪರೀಕ್ಷೆಗೆ ಆತ ಕುಳಿತುಕೊಳ್ಳಲಾಗಲಿಲ್ಲ. ಅಲ್ಲಿಗೇ ಅವರ ವಿದ್ಯಾಭ್ಯಾಸ ಕೊನೆಗೊಂಡಿತು.

ಸಹೋದರರ ಶಾಲೆ

ಈ ವೇಳೆಗೆ ಪಿಲ್ಜಂಗ ಎಂಬ ಊರಿನಲ್ಲಿ ಒಂದು ಹೈಸ್ಕೂಲು ಆರಂಭವಾಯಿತು. ಅದರ ಹೆಡ್‌ಮಾಸ್ತರ ಹುದ್ದೆ ಮೋತಿಲಾಲರಿಗೆ ದೊರೆಯಿತು. ಅಲ್ಲಿಯೂ ಆತ ಹೆಚ್ಚು ಕಾಲವಿರಲಾಗಲಿಲ್ಲ. ಮೊದಲಿನಿಂದಲೂ ಅವರಿಗೆ ದೇಹಾರೋಗ್ಯ ಕಡಿಮೆ. ನಿತ್ರಾಣವೆ ಹೆಚ್ಚು. ಅಣ್ಣ ಶಿಶಿರಕುಮಾರ, ಹೇಮಂತ ಹಾಗೂ ಇತರ ಗೆಳೆಯರನ್ನು ಸೇರಿಸಿಕೊಂಡು ತಮ್ಮೂರಲ್ಲೆ ಒಂದು ಹೈಸ್ಕೂಲು, ಹೆಣ್ಣು ಮಕ್ಕಳ ಶಾಲೆ, ವಯಸ್ಕ ಮಹಿಳೆಯರಿಗೋಸ್ಕರ ರಾತ್ರಿ ನಡೆಸುವ ಶಾಲೆಗಳನ್ನು ಆರಂಭಿಸಿದ್ದರು. ಮೋತಿಲಾಲ್‌, ತನ್ನ ಹುದ್ದೆಗೆ ರಾಜೀನಾಮೆ ಕೊಟ್ಟು ಊರಿಗೆ ಹಿಂತಿರುಗಿದರು. ಇದರ ಮಧ್ಯೆ ಹಳ್ಳಿಯ ರಾಜಕೀಯ ಬೇರೆ. ‘ಘೋಷ್‌ಸಹೋದರರು ಕೀಳು ಜಾತಿಯವರೆಂದು’ ಹಲವರು ಬಹಿಷ್ಕಾರ ಹಾಕಿದ್ದರು! ಸ್ಕೂಲಿಗೆ ವಿರುದ್ಧವಾಗಿ ‘ಹರಿಸಭಾ’, ‘ಬ್ರಹ್ಮಸಭಾ’ ಎಂಬ ಎರಡು ಸಮಾಜಕಲ್ಯಾಣ ಕೇಂದ್ರಗಳನ್ನು ಆರಂಭ ಮಾಡಿದರು. ಈ ಮತೀಯ ಗಲಾಟೆ ಸ್ಕೂಲಿಗೆ ಯಾವ ಎಡರನ್ನೊಡ್ಡಲಿಲ್ಲ. ‘ವಿದ್ಯೆ ಮುಖ್ಯ. ಅದಕ್ಕೆ ಜಾತಿಕುಲದ ಸೋಂಕೇಕೆ? ವಿದ್ಯೆ, ಮನಸ್ಸಿನ ಅಜ್ಞಾನ ಹೋಗಲಾಡಿಸುತ್ತದೆ. ಶಿಕ್ಷಣ, ಸಮಾಜಕ್ಕೂ ರಾಷ್ಟ್ರಕ್ಕೂ ಒಳಿತುಂಟುಮಾಡುತ್ತದೆ’ ಎಂಬುದು ಘೋಷ್‌ಸಹೋದರರ ಅಭಿಮತ. ಅಲ್ಲದೆ, ಅವರು ವೈಷ್ಣವ ಧರ್ಮದೀಕ್ಷೆ ಬೇರೆ ಸ್ವೀಕರಿಸಿದ್ದರು. ಶ್ರೀಕೃಷ್ಣಚೈತನ್ಯರ ಧರ್ಮಮಾರ್ಗದಲ್ಲಿ ಅವರಿಗೆ ಒಲವು ಹೆಚ್ಚು. ಏಕೆಂದರೆ ಅಲ್ಲಿ ಭಕ್ತಿ, ದೈವಪ್ರೇಮಕ್ಕೆ ಪ್ರಾಮುಖ್ಯತೆಯ ವಿನಾ, ಜಾತಿಗಲ್ಲ.

ಬಸಂತಕುಮಾರನ ಅಕಾಲಿಕ ಮರಣ ಕುಟುಂಬಕ್ಕೆ ಬಿದ್ದ ದೊಡ್ಡ ಪೆಟ್ಟು. ಆಗ ಹೇಮಂತ, ಶಿಶಿರರು ಸರ್ಕಾರಿ ವರಮಳಾನ ತೆರಿಗೆಯ ಕಲೆಕ್ಟರರಾಗಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸುವ ಮಟ್ಟಕ್ಕೆ ಬಂದಿತ್ತು. ಅದರೇನು? ಪತ್ರಿಕೆ ನಡೆಸುವುದು, ಬರವಣಿಗೆ, ಸಾರ್ವಜನಿಕ ಸೇವೆ, ಘೋಷ್‌ಸೋದರರ ರಕ್ತದಲ್ಲಿ ಹರಿದು ಬಂದದ್ದು. ಇಬ್ಬರೂ ಕೆಲಸಕ್ಕೆ ರಾಜೀನಾಮೆಯಿತ್ತರು. ಬಂಗಾಳಿಯಲ್ಲೆ ಒಂದು ಸಮಾಚಾರ ಪತ್ರಿಕೆ ಹೊರಡಿಸಲು ಯೋಜನೆಹಾಕಿದರು.

ಅಮೃತ ಬಜಾರ್ ಪತ್ರಿಕಾ

೧೮೬೮ರ ಫೆಬ್ರವರಿ ೨೦. ‘ಅಮೃತ ಬಜಾರ್ ಪತ್ರಿಕೆ’ಯ ಮೊದಲ ಸಂಚಿಕೆ ಬೆಳಕು ಕಂಡಿತು. ಹೇಮಂತ, ಶಿಶಿರ, ಮೋತಿಲಾಲರ ಪ್ರಯತ್ನದ ಫಲವಿದು. ಸಾರಿಗೆ ಸೌಲಭ್ಯ ಇರದ, ಇತರ ಯಾವುದೆ ಸೌಕರ್ಯವಿರದ ಕುಗ್ರಾಮದಿಂದ ಪತ್ರಿಕೆಯೊಂದನ್ನು ಹೊರಡಿಸಬೇಕೆಂದರೆ ಎಂಟೆದೆ ಇರಬೇಕು. ಅಣ್ಣತಮ್ಮಂದಿರು ಸಾಮಾನ್ಯ ಕುಟುಂಬದವರು. ಕಲ್ಕತ್ತೆಯಲ್ಲಿ ಒಬ್ಬಾತನಿಂದ ಮುದ್ರಣ ಯಂತ್ರಕೊಂಡುಕೊಂಡರು. ‘ಬಾಲೆಯಿನ್‌ಪ್ರೆಸ್‌’ ಅವರ ಮುದ್ರಣ ಯಂತ್ರದ ಹೆಸರು. ಅದರ ಬೆಲೆ ೩೨ ರೂಪಾಯಿ. ಊರಿನ ಬಡಗಿ ಯಂತ್ರವನ್ನು ಜೋಡಿಸಿಕೊಟ್ಟ. ಅಳಿದುಳಿದ ಅಚ್ಚುಗಳನ್ನು ಅವುಗಳ ಸ್ಟ್ಯಾಂಡ್‌ಮೇಲೆಯೇ ಇರಿಸಿದರು.

ಮೋತಿಲಾಲ್‌ಹಾಗೂ ಅವರ ಸೋದರರಿಗೆ ಮುದ್ರಣದ ಕಲೆಯ ಯಾವ ಅನುಭವವೂ ಇರಲಿಲ್ಲ. ಕಲ್ಕತ್ತೆಗೆ ಹೋಗಿ ಕಲಿತು ಬರಬೇಕಾಯಿತು. ಕರಡು ಪ್ರತಿ ತೆಗೆದುಕೊಂಡು ಸಂಬಂಧಿಸಿದ ಅಚ್ಚುಮೊಳೆ ಜೋಡಿಸುವುದು, ಮುದ್ರಣದ ಕೆಲಸ, ಸಂಪಾದಕ ಕಾರ್ಯ ಎಲ್ಲ ಅವರದ್ದೆ.

ತಾಯ್ನುಡಿಯಾದ ಬಂಗಾಳಿಯಲ್ಲಿ ಪತ್ರಿಕೆ ಹೊರಟಿದ್ದು. ವಾರಕ್ಕೊಮ್ಮೆ ಬಿಡುಗಡೆ. ಎರಡು ಪುಟಗಳಷ್ಟು ಮಾತ್ರ. ಪತ್ರಿಕೆಯ ಹೆಸರು “ಅಮೃತ ಬಜಾರ್ ಪತ್ರಿಕಾ”. ಅದರ ಅರ್ಥವನ್ನು ಮೋತಿಲಾಲರು ಕೊಟ್ಟಿದ್ದು: “ಅಮೃತ ಎಂದರೆ ಮಧು, ಬಜಾರ್ ಅಂದರೆ ಮಾರಾಟದ ಸ್ಥಳ. ಪತ್ರಿಕೆಯ ಧ್ಯೇಯ ಮಧುವಿನಂಥ ಸುದ್ದಿಯನ್ನು ಜನತೆಗೀಯುವುದು, ಅಂದರೆ, ಇಷ್ಟು: ಸರಿಯಾಗಿ ಪರ್ಯಾಲೋಚಿಸುವವರಿಗೆ ಪತ್ರಿಕೆ ಅಮೃತ, ಮಧು ಇದ್ದಹಾಗೆ. ಪೂರ್ವಾಗ್ರಹ ಪೀಡಿತರಾದ ದುರಾಲೋಚಕರಿಗೆ ವಿಷವಿದ್ದಂತೆ.” ಬೇರೆಯವರ ಸಹಾಯವಿಲ್ಲದೆ ಪತ್ರಿಕೆ ಮುಂದುವರೆಸಲು ತುಂಬ ಕಷ್ಟ ಆಯಿತು. ಪತ್ರಿಕಾದ ಬಹುಪಾಲು ಲೇಖಕರು, ಘೋಷ್‌ಕುಟುಂಬದವರೆ. ಆರಂಭ ಆದ ಕೆಲವು ತಿಂಗಳಲ್ಲೆ ಪತ್ರಿಕೆಯ ಸಂಚಿಕೆಗಳ ಹಂಚಿಕೆ ಐದು ನೂರಕ್ಕೇರಿತು. ಇಷ್ಟೇ ಅಲ್ಲ, ಸರ್ಕಾರವು ಇದರೊಳಗೆ ಕಣ್ಣು ಹಾಯಿಸುವಂತೆ ಮಾಡಿತು. ಅದರಲ್ಲಿ ಪ್ರಕಟ ಆಗುತ್ತಿದ್ದ ಸಮಾಚಾರಗಳು ಸರ್ಕಾರದ ಕಣ್ಣಿಗೆ ಮುಳ್ಳಾಗಲು ಕಾರಣ, ಸತ್ಯನಿಷ್ಠ ಸಮಾಚಾರಗಳನ್ನು ಪತ್ರಿಕೆ ನೇರವಾಗಿ ಬಿತ್ತರಿಸುತ್ತಿದ್ದುದು. ಪತ್ರಿಕೆ ಪ್ರಸಿದ್ಧ ಆಗಲು ಇನ್ನೊಂದು ಕಾರಣ. ಜನಸಾಮಾನ್ಯರಿಗೆ ಆಳುವ ಸರ್ಕಾರದಿಂದ ಆಗುತ್ತಿದ್ದ ಅನ್ಯಾಯಗಳನ್ನು ಪ್ರಕಟಿಸಿ, ಮನವರಿಕೆ ಮಾಡಿಕೊಟ್ಟಿದ್ದು. ಮೋತಿಲಾಲರಿಗೆ ಸರಿಯಾದ ಪಾಠ ಕಲಿಸಬೇಕೆಂದುಕೊಂಡರು ಬ್ರಿಟಿಷರು. ಈ ವೇಳೆಗಾಗಲೇ ಪತ್ರಿಕೆ ವಕೀಲರ, ಅಧ್ಯಾಪಕರ, ಭಾರತೀಯ ಅಧಿಕಾರಿಗಳ, ಜನತೆಯ ಪ್ರೀತಿ ಗಳಿಸಿತ್ತು.

ಮೋತಿಲಾ‌ಲ್‌ನ್ಯಾಯಾಲಯದಲ್ಲಿ

“ಅಮೃತ ಬಜಾರ್ ಪತ್ರಿಕಾ” ಆರಂಭ ಆಗಿ ನಾಲ್ಕು ತಿಂಗಳು ಕಳೆದಿರಲಿಲ್ಲ. ಒಂದು ಕ್ರಿಮಿನಲ್‌ದಾವೆ ಎದುರಿಸಬೇಕಾಗಿ ಬಂದಿತು. ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನವೊಂದರಲ್ಲಿ ಬ್ರಿಟಿಷರ ಬಗ್ಗೆ ಟೀಕೆಯಿದ್ದುದರಿಂದ ಯುರೋಪಿಯನ್‌ಅಧಿಕಾರಿಯೊಬ್ಬ ಪತ್ರಿಕೆಯ ವಿರುದ್ಧ ದಾವೆ ಹೂಡಿದ. ಆಗ್ಗೆ ಪತ್ರಿಕೆಯಲ್ಲಿ ಸಂಪಾದಕರ ಹೆಸರನ್ನು ಪ್ರಕಟಿಸಬೇಕೆಂಬ ನಿಯಮ ಜಾರಿಯಲ್ಲಿರಲಿಲ್ಲ. ಸಾಕ್ಷ್ಯ, ಆಧಾರಗಳನ್ನು ಒದಗಿಸಿ, ಶಿಶಿರಕುಮಾರನೆ ಸಂಪಾದಕನೆಂದು ರುಜುವಾತುಪಡಿಸಲು ಆ ಇಂಗ್ಲಿಷ್‌ಅಧಿಕಾರಿ ಬಹಳ ಯತ್ನಿಸಿದ. ಮೋತಿಲಾಲರಿಗೂ ನ್ಯಾಯಾಲಯದ ಕರೆ ಬಂತು. ಏನೇ ಪರೀಕ್ಷೆ ನಡೆಸಿದರೂ, ನ್ಯಾಯಾಧೀಶರಿಗೆ ಮೋತಿಲಾಲರನ್ನು ತಪ್ಪಿಗೆ ಸಿಲುಕಿಸಲು ಸಾಧ್ಯ ಆಗಲಿಲ್ಲ. ಪ್ರಶ್ನೆ, ಉತ್ತರ ಎರಡೂ ಸ್ವಾರಸ್ಯವೆ.

ನ್ಯಾಯಾಧೀಶರು: ಪತ್ರಿಕೆಯ ಸಂಪಾದಕ ಯಾರು?

ಮೋತಿಲಾಲ್‌: ಈಗ ಆರಂಭ ಆಗಿದೆ. ಯಾರೆಂಬುದು ಇನ್ನೂ ನಿರ್ಧಾರ ಆಗಿಲ್ಲ.

ನ್ಯಾಯಾಧೀಶರು: ಶಿಶಿರಕುಮಾರ ಸಂಪಾದಕ ಎಂದು ಜನರಿಗೆ ತಿಳಿಯುತ್ತಿಲ್ಲವೆ?

ಮೋತಿಲಾಲ್‌: ಇದ್ದರೂ ಇದ್ದೀತು. ಆತ ಚೆನ್ನಾಗಿ ಬರೆಯಬಲ್ಲ. ಆದ್ದರಿಂದ.

ನ್ಯಾಯಾಧೀಶರು: ಶಿಶಿರಕುಮಾರ್ ಇಂಗ್ಲಿಷ್‌ಚೆನ್ನಾಗಿ ಬರೆಯುವನೆಂದು ನಿನ್ನ ಅಭಿಪ್ರಾಯವೊ?

ಮೋತಿಲಾಲ್‌: ಖಂಡಿತವಾಗಿ. ಭಾರಿ ಸಂಬಳ ತಗೊಳ್ಳೊ ಬ್ರಿಟಿಷ್‌ಅಧಿಕಾರಿಗಳಿಗಿಂತ ಅಣ್ಣ ಉತ್ತಮವಾಗಿ ಇಂಗ್ಲಿಷ್‌ಬರೆಯಬಲ್ಲ.

ಮೋತಿಲಾಲರ ಮಾತು ನ್ಯಾಯಾಧೀಶರನ್ನು ಮೂಕವಾಗಿಸಿತಷ್ಟೆ.

ಕೇಸು ಎಂಟು ತಿಂಗಳು ನಡೆಯಿತು. ಘೋಷರಿಗೆ ಬಿಡುಗಡೆ ಆಯಿತು. ಆದರೆ ‘ಪತ್ರಿಕೆ’ಯನ್ನು ಮುದ್ರಿಸಿದವರಿಗೆ, ಲೇಖಕರಿಗೆ ತಲಾ ಆರು ತಿಂಗಳು ಹಾಗೂ ಒಂದು ವರ್ಷ ಜೈಲು! ಪತ್ರಿಕೆಯ ಖ್ಯಾತಿ ಇನ್ನೂ ಹೆಚ್ಚಿತು.

೧೮೬೯ ರಿಂದ ‘ಅಮೃತ ಬಜಾರ್ ಪತ್ರಿಕಾ’ ದ್ವಿಭಾಷಾ ಪತ್ರಿಕೆ ಆಯಿತು. ಕೆಲವು ಭಾಗಗಳು ಇಂಗ್ಲಿಷಿನಲ್ಲಿ, ಉಳಿದವು ಬಂಗಾಳಿಯಲ್ಲಿ ಪ್ರಕಟ ಆದುವು. ಬಂಗಾಳಿ ತಿಳಿಯದವರು ಇಂಗ್ಲಿಷ್‌ವಿಭಾಗ ಓದಲು ಅನುಕೂಲ ಆಗಲೆಂದು ಈ ಬದಲಾವಣೆ ಮಾಡಿದ್ದು.

೧೮೬೯ ರಲ್ಲಿ ಮೋತಿಲಾಲ್‌ರ ಮದುವೆ ನಡೆಯಿತು. ಪತ್ನಿಯ ಹೆಸರು ನಿಸ್ತರಿಣೀದೇವಿ. ನಿಸ್ತರಿಣೀದೇವಿ ಮೋತಿಲಾಲರಿಗೆ ತಕ್ಕ ಮಡದಿ ಎನಿಸಿಕೊಂಡಳು. ಗಂಡ ಹೆಂಡಿರ ಮನಸ್ಸೊಂದೇ. ೧೮೭೧ ರಲ್ಲಿ ನಿಸ್ತರಿಣಿಗೆ ಒಂದು ಹೆಣ್ಣು ಮಗ ಹುಟ್ಟಿತು. ಸಜಲನಯನ ಎಂದು ಹೆಸರಿಸಿದರು. ಅವರಿಗೆ ಅದೊಂದೇ ಮಗು.

ಕಲ್ಕತ್ತೆಗೆ

೧೮೭೧ರಲ್ಲಿ ಇಡೀ ಬಂಗಾಳ ಇತಿಹಾಸದಲ್ಲೆ ಕಂಡರಿಯದ ಭೀಕರ ಮಲೇರಿಯ ರೋಗದ ಹಾವಳಿಗೆ ತುತ್ತಾಯಿತು. ಅದರಲ್ಲೂ ಜೆಸ್ಸೂರ್ ಜಿಲ್ಲೆ ಹೆಚ್ಚು ತೊಂದರೆ ಗೀಡಾಯಿತು. ಅಮೃತ ಬಜಾರಿನ ಪ್ರತಿಮನೆಯವರೂ ರೋಗ ಪೀಡಿತರೆ! ಆಗ್ಗೆ ಇನ್ನೂ ಕ್ವಿನೈನ್‌ಔಷಧಿ ಬಳಕೆಗೆ ಬಂದಿರಲಿಲ್ಲ. ಹಳ್ಳಿಯ ನಾಟಿ ವೈದ್ಯ. ಸೊಪ್ಪು, ಮೂಲಿಕೆ! ಒಮ್ಮೆ ಗುಣ ಆಗಿ, ಮತ್ತೆ, ಸೊಳ್ಳೆ ಕಡಿಯಿತೊ, ರೋಗ ದಾಳಿಯಿಟ್ಟಿತೆಂದೆ! ತುಂಬ ಜನ ಸತ್ತರು, ಅಶಕ್ತರಾದರು. ಅಂಗವಿಕಲರಾದರು. ಇದರ ಬೆಂಬತ್ತಿ ಪ್ರವಾಹದ ಹಾವಳಿ! ಬೆಳೆದು ನಿಂತ ಭತ್ತದ ತೆನೆ ನೆರೆಯ ಪಾಲಾಯಿತು. ಅಸಂಖ್ಯಾತ ದನಕರು ಸತ್ತವು. ನೀರು ನಿಂತರೆ, ಸೊಳ್ಳೆ ಕಾಟ ಹೇಳಬೇಕೆ? ಇದೆಲ್ಲ ತೊಂದರೆಗಳಿಗೆ ‘ಪತ್ರಿಕಾ’ ಈಡಾಗದಿರಲಿಲ್ಲ. ಅನೇಕ ಕಾರ್ಯಕರ್ತರು ರೋಗದಿಂದ ನರಳಿದರು. ಹಣದ ಮುಗ್ಗಟ್ಟು ಬೇರೆ? ಪ್ರಕಟಣೆಯು ದುಸ್ತರವೆನಿಸಿತು.

ಕಟ್ಟಕಡೆಗೆ, ಪತ್ರಿಕೆ ಹಾಗೂ ಕುಟುಂಬವನ್ನು ಕಲ್ಕತ್ತೆಗೆ ಸ್ಥಳಾಂತರಿಸೋಣ ಅಂತ ಘೋಷ್‌ಸೋದರರು ನಿರ್ಧರಿಸಿದರು. ಖರ್ಚಿಗೆ ಬೇಕಾದ ದುಡ್ಡಿಗೋಸ್ಕರ ಇದ್ದ ಮುದ್ರಣಯಂತ್ರವನ್ನೆ ಮಾರಿದರು. ಸ್ವಲ್ಪ ಸಾಲ ತೀರಿಸಿದರು. ಒಬ್ಬ ಸೇಟನ ಹತ್ತಿರ ಒಂದುನೂರು ರೂಪಾಯಿ ಸಾಲಲ ಪಡೆದರು. ಹೈಸ್ಕೂಲಲ್ಲಿ ಮೇಷ್ಟರಾಗಿದ್ದಾಗ ಮೋತಿಲಾಲ್‌೨೦೦ ರೂಪಾಯಿ ಕೂಡಿಟ್ಟಿದ್ದರು. ಕಾಣದೂರು. ಘೋಷ್‌ಕುಟುಂಬ ಕಲ್ಕತ್ತೆಗೆ ಆಗಮಿಸಿದರು. ಅಲ್ಲೇ ಬೋಬಜಾರ್ ಎಂಬಲ್ಲಿ ಬಾಡಿಗೆಗೆ ಮನೆ ದೊರೆಯಿತು. ಮುದ್ರಣಯಂತ್ರವೂ ದೊರೆಯಿತು. ಅದರ ಬೆಲೆ ೬೦೦ ರೂಪಾಯಿ. ಹಾಗೂ ಹೀಗೂ ಯಾರೋ ಶ್ರೀಮಂತರ ಗೆಳೆಯರ ಮೂಲಕ ಸಾಲ ಸಿಕ್ಕಿತು. ಅಂತೂ ಪತ್ರಿಕೆ ಮತ್ತೆ ಬೆಳಕು ಕಂಡಿದ್ದು ೧೮೭೧ರ ಡಿಸೆಂಬರ್ ೧೨ರಂದೇ !

ಸಂಪಾದಕ ತರುಣ ಮೋತಿಲಾಲ್

ಮೂರು ವರ್ಷ ಕಳೆಯಿತು. ಕಲ್ಕತ್ತೆಯ ಉತ್ತರ ಭಾಗದ ಬಾಗ್‌ಬಜಾರ್ ಎಂಬಲ್ಲಿಗೆ ಮನೆ ಬದಲಾಯಿಸಿದರು ಮೋತಿಲಾಲರು. ಈ ಮನೆ, ಮುಂದೆ ಭಾರತೀಯ ಪತ್ರಿಕೋದ್ಯಮದಲ್ಲೆ ಹೆಸರಾಯಿತು. ಅದೆಷ್ಟು ಜನ ಸ್ವಾತಂತ್ಯ್ರ ವೀರರು, ಕ್ರಾಂತಿಕಾರಿಗಳು, ಈ ಮನೆಗೆ ಬಂದು ಹೋದರೊ! “ಮನೆ ಶತಮಾನದಲ್ಲೆ ರಿಪೇರಿ ಕಂಡಿರಲಾರದು” ಎಂದಿದ್ದಾರೆ ಮೋತಿಲಾಲರ ಮಿತ್ರ ಹಾಗೂ ಬಂಗಾಳಿ ಕವಿ ಆದ ನವೀನ್‌ಚಂದ್ರಸೇನ್‌. ಮೋತಿಲಾಲರೆ ತಮ್ಮ ಆತ್ಮವೃತ್ತದಲ್ಲಿ ತಿಳಿಸಿರುವುದಿದು: “ಕೆಳಗೆ, ಅಟ್ಟದ ಮೇಲೆ ಪತ್ರಿಕೆಯ, ಪ್ರೆಸ್ಸಿನ ಸಲಕರಣೆಗಳು. ಧೂಳು, ಕೊಳೆ, ಕಾಗದದ ಚೂರುಮಯ. ಮಹಡಿಹತ್ತಲು ಮರದ ಮೆಟ್ಟಿಲು. ಅಲ್ಲಲ್ಲಿ ಮುರಿದು, ಅಲ್ಲಾಡುವ ಸ್ಥಿತಿಗೆ ಬಂದಿವೆ. ಯಾವ ಕೊಠಡಿಯೂ ಕಸಪೊರಕೆ ಕಂಡಿಲ್ಲ ಎಂದು ಆಣೆ ಮಾಡಿ ಹೇಳುತ್ತೇನೆ. ಮಹಡಿಯಲ್ಲೊಂದು ವರಾಂಡ. ಅಲ್ಲೆ ಮೂಲೆಯಲ್ಲಿ ಒಂದು ಸಣ್ಣ ಮರದಮೇಜು. ಅದಕ್ಕೆ ಎದುರಾಗಿ ಮರದ ಮುರುಕಲು ಕುರ್ಚಿ. ಅದರಲ್ಲಿ ಕುಳಿತು ಮೋತಿಲಾಲ ಬರೆಯುತ್ತಿದ್ದಾನೆ. ತಿಗಣೆ ಧಾರಾಳವಾಗಿ ಇದೆ. ಹಾಸಿಗೆ, ದುಪ್ಪಟ ಅಗಸರನ್ನು ಕಂಡಿಲ್ಲ. ಆದರೂ ಅದೆಷ್ಟೋ ಜನರಿಗೆ ಆಶ್ರಯ ನೀಡಿದೆ. ಮನೆಯ ಸ್ಥಿತಿ ಹೀಗಿದ್ದರೂ ಮೋತಿಲಾಲ ಬೇರೆಯವರನ್ನು ಬೇಡಿಲ್ಲ. ಪತ್ರಿಕಾದ ಮೂಲಕ ತನ್ನ ಧ್ಯೇಯ ಆದ ಸ್ವಾತಂತ್ಯ್ರ ಹೋರಾಟ ನಡೆಸುವುದನ್ನು ಬಿಡುವುದೂ ಇಲ್ಲ.”

ಕಲ್ಕತ್ತೆಯ ಎಲ್ಲ ಇಲಾಖೆಯಲ್ಲೂ ಇಂಗ್ಲಿಷರೆ! ಅಲ್ಲಲ್ಲಿಯ ಉನ್ನತ ಸ್ಥಾನ ಅವರಿಗೇ ಮೀಸಲು! ಕೂಲಿ ಮಾಡಿ ಜೀವಿಸುತ್ತಿದ್ದವರು ಬಹುಪಾಲು ಬಿಹಾರ, ಉತ್ತರ ಪ್ರದೇಶ, ಒರಿಸ್ಸದವರು. ಬಂಗಾಳಿಗಳಲ್ಲಿ ಗುಮಾಸ್ತರು, ಮೇಷ್ಟರು, ವಕೀಲರು ಹೆಚ್ಚು. ಇಂಗ್ಲಿಷ್‌ಕಲಿತವನಿಗೆ ಗೌರವ. ಇಷ್ಟೆಲ್ಲ  ಆದರೂ ೧೮೭೨ರಲ್ಲೆ ರಾಷ್ಟ್ರೀಯ ಭಾವನೆಗಳನ್ನು ಹರಡುವ ವಿಚಾರವಂತರ ಗುಂಪೊಂದು ನಿರ್ಮಾಣ ಆಗಿದ್ದಿತು.

ಆಗಲೆ ಇಂಗ್ಲಿಷಿನಲ್ಲಿ ಮತ್ತು ಬಂಗಾಳಿಯಲ್ಲಿ ಹಲವು ಪತ್ರಿಕೆಗಳು ಜನಪ್ರಿಯವಾಗಿದ್ದವು. ಇಷ್ಟು ಸ್ಪರ್ಧೆ ಇರುವಾಗ ಬಡವರಾದ ಮೋತಿಲಾಲ ಸಹೋದರರಿಗೆ ಇನ್ನೂ ಬಡತನ ಹೆಚ್ಚಿತಷ್ಟೆ. ಆದರೆ ಛಲ? ಅದರಿಂದ ಅವರು ವಿಚಲಿತರಾಗಲಿಲ್ಲ.

ಒಬ್ಬ ಗವರ್ನರನ ತಂತ್ರ

‘ಅಮೃತ್‌ಬಜಾರ್ ಪತ್ರಿಕಾ’ದಲ್ಲಿ ಬ್ರಿಟಿಷ್‌ಸರ್ಕಾರದ ಆಡಳಿತ ಕ್ರಮ, ಭಾರತೀಯರಲ್ಲಿ ಒಡಕು ಹುಟ್ಟಿಸಿ ಆ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿದ್ದ ಇಂಗ್ಲಿಷ್‌ನರಿಬುದ್ಧಿ, ಪಕ್ಷಪಾತ ಎಲ್ಲವೂ ಹಂತಹಂತವಾಗಿ ಪ್ರಕಟಗೊಳ್ಳಲು ಆರಂಭ ಆಯಿತು! ಭಾರತದ ಸಂಪತ್ತನ್ನು ಕೊಳ್ಳೆಹೊಡೆದು, ಅದನ್ನು, ಬ್ರಿಟನ್ನಿಗೆ ಸಾಗಿಸುವುದು, ಭಾರತವನ್ನು ಬಡತನ, ದಾಸ್ಯಗಳ ಕತ್ತಲಲ್ಲಿ ಅದುಮಿಡುವುದೆ ಬ್ರಿಟಿಷರ ಮುಖ್ಯೋದ್ದೇಶ. ಯಾರು ಅವರ ವಿರುದ್ಧ ಸಿಡಿದೆದ್ದರೂ ಅವರ ಕತೆ ಮುಗಿಯಿತು! ತೆರಿಗೆ ಹೇರುವುದಂತೂ ಹೇಳುವಂತೆಯೆ ಇಲ್ಲ. ಭಾರತೀಯರನ್ನು ಪಶುಗಳಂತೆ ಕಾಣುವುದು ಬ್ರಿಟಿಷರ ರಕ್ತದಲ್ಲಿ ಹರಿದು ಬಂದ ಸ್ವಭಾವ. ಅದಕ್ಕೆಲ್ಲ ಮಾರಕ ಆಗಬಹುದಾದ ಮಾಧ್ಯಮ, ಹಿಂದುಸ್ಥಾನದ ಸುದ್ದಿಪತ್ರಿಕೆಗಳು. ಜನತೆಗೆ ಇವುಗಳಿರದಂತೆ ಮಾಡಿದರೆ? ಇದು ಸರ್ಕಾರದ ಆಲೋಚನೆ. ಅದಕ್ಕೆಂದೆ ಹಂತಹಂತವಾಗಿ ನಿರ್ಬಂಧಗಳನ್ನೂ ನಿಯಮಗಳ ರೂಪದಲ್ಲಿ ತಂದಿತು. ಬ್ರಿಟಿಷ್‌ಸರ್ಕಾರ. ೧೮೭೭ರಲ್ಲಿ ಬಂದ ಗವರ್ನರ್ ಯಾಷ್‌ಲಿ ಎಂಬಾತ ಅನೇಕ ಪತ್ರಿಕೆಗಳವರಿಗೆ ಲಂಚಕೊಟ್ಟು ಬುಟ್ಟಿಗೆ ಹಾಕಿಕೊಂಡ.

ಯಾಷ್‌ಲಿ ಹೇಳಿದ್ದನ್ನು ಆ ಪತ್ರಿಕೆಗಳು ಪಾಲಿಸಬೇಕು. ಆ ಪತ್ರಿಕೆಗಳವರೆಲ್ಲ ಸರ್ಕಾರದ ಎಂಜಲು ತಿಂದು ತೆಪ್ಪಗಾದರು. ಶಿಶಿರಕುಮಾರನಿಗೂ ಗವರ್ನರನ ಕರೆ ಬಂದಿತು. ಯಾಷ್‌ಲಿ ನುಡಿದ: “ನೀವು ನಾನು ಹೇಳಿದಂತೆ ಕೇಳಿದರೆ ಸರ್ಕಾರದ ಕಡೆಯಿಂದ ನಿಮಗೆ ಬೇಕಾದಷ್ಟು ಹಣ ಸಿಗುವ ಮಾರ್ಗ ಮಾಡಿಕೊಡುತ್ತೇನೆ.” ಆತ ಹೇಳಿದ ಪ್ರಕಾರ, ಸರ್ಕಾರವನ್ನು ಟೀಕಿಸುವ ಯಾವ ಲೇಖನ ಬಂದರೂ ಅವನಿಗೆ ಕಳುಹಿಸಬೇಕು, ಅವನು ತಿದ್ದಿದಂತೆ ಪ್ರಕಟಿಸಬೇಕು. ಘೋಷ್‌ಕುಟುಂಬದ ಪರಿಸ್ಥಿತಿ ಆಗ ಹೇಳುವಂತಿರಲಿಲ್ಲ. ಅಂತ ಬಡತನ. ಬೇಡಿಕೆ ಬಂದಿರುವುದು, ಗವರ್ನರನಿಂದ! ಶಿಶಿರ ಅಂಜದೆ, ದೃಢಸ್ವರದಲ್ಲಿ ಉತ್ತರಿಸಿದ: “ನಾನು ನಿಮ್ಮ ವಿಶ್ವಾಸಕ್ಕೆ ಏನೂ ಹೇಳಲರಿಯೆ. ಆದರೆ ಒಂದು, ಈ ರಾಜ್ಯದಲ್ಲಿ ಒಬ್ಬನಾದರೂ ಪ್ರಾಮಾಣಿಕ ಪತ್ರಿಕೋದ್ಯಮಿ ಇರಲೇಬೇಕಲ್ಲವೆ?” ಯಾಷ್‌ಲಿ ಕೋಪದಿಂದ ಹಲ್ಲು ಕಡಿದ. “ನೀನು ಯಾರೊಂದಿಗೆ ಮಾತಾಡುತ್ತಿದ್ದೀಯೆ ತಿಳಿದಿದ್ದೀ ತಾನೆ? ಯಾವಾಗ ಬೇಕಾದರೂ ನಿನ್ನನ್ನು, ಮೋತಿಲಾಲನನ್ನು, ಜೈಲಿಗೆ ನೂಕಿ, ಪತ್ರಿಕೆ ಪಾತಾಳಕ್ಕಿಳಿಸಬಲ್ಲೆ. ನಿನ್ನ ಮನೆಯವರನ್ನು ಜೆಸ್ಸೂರ್ ಕಾಣಿಸಬಲ್ಲೆ” ಎಂದೆಲ್ಲ ಕಿರುಚಿದ. ಶಿಶಿರ ಮೌನವಾಗಿಯೇ ಎದ್ದು ಬಂದ.

ಧಿರ ಸಂಪಾದಕ ವೀರ ಸ್ವಾತಂತ್ರ್ಯ ಯೋಧ

ಮರುದಿನವೆ ‘ಪ್ರಾಂತೀಯ ಭಾಷಾ ಕಾಯಿದೆ’ ಜಾರಿಗೆ ಬಂದಿತು. ಯಾವ ಪತ್ರಿಕೆ ಸರ್ಕಾರದ ವಿರುದ್ಧ ಬರೆಯುವುದೋ, ಅದರ ಪ್ರಕಾಶಕನನ್ನು, ಜಿಲ್ಲಾ ಮ್ಯಾಜಿಸ್ಟ್ರೇಟ್‌ಆಗಲಿ, ಪೊಲೀಸ್‌ಕಮೀಷನರ್ ಆಗಲಿ ಕರೆಯಿಸಿ, ಛಾಪಾ ಕಾಗದದಲ್ಲಿ ಒಂದು ಹೇಳಿಕೆ ಬರೆಯಿಸಿಕೊಳ್ಳಬೇಕು. ಯಾವುದೆ ರೀತಿಯ ಸರ್ಕಾರಿ ವಿರೋಧಿ ಬರವಣಿಗೆ,ಜಾತಿ ಕೋಮು ವಿರುದ್ಧ ಲೇಖನ, ಜನತೆಯನ್ನು ರೋಚ್ಚಿಗೆಬ್ಬಿಸುವಂಥ ಲೇಖನ ಪ್ರಕಟಿಸುವುದಿಲ್ಲ ಅಂತ ಹೇಳಿಕೆ. ಇದಕ್ಕೆ ಆಧಾರವಾಗಿ ಸರ್ಕಾರ ಕೇಳುವಷ್ಟು ಹಣ ಠೇವಣಿ ಒಪ್ಪಿಸಬೇಕು. ಸರ್ಕಾರಕ್ಕೆ ಆ ಲೇಖನಗಳು ಪ್ರಕಟಿಸಲು ಅನರ್ಹವೆನಿಸಿದರೆ, ಮುಂಗಡ ಹಣ ಹಿಂತಿರುಗಿಸುವುದಿಲ್ಲ. ಈ ಬಗ್ಗೆ ಯಾವ ಕೋರ್ಟಿನಲ್ಲೂ ಕ್ರಮಕೈಗೊಳ್ಳುವ ಹಕ್ಕಿಲ್ಲ. ಸರ್ಕಾರದ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ಮತ್ತು ಜನರಲ್ಲಿ ಅಸಮಾಧಾನ, ಬ್ರಿಟಿಷರ ಬಗ್ಗೆ ರೋಷ ಬರಿಸುವಂಥ ಲೇಖನಗಳನ್ನು ಯಾವ ಪತ್ರಿಕೆಯೂ ಮುದ್ರಿಸಕೂಡದು.

ಈ ಕಾಯಿದೆ ಮುಖ್ಯವಾಗಿ ‘ಅಮೃತ ಬಜಾರ್ ಪತ್ರಿಕಾ’ವನ್ನು ಗಮನದಲ್ಲಿರಿಸಿಕೊಂಡು ತಂದದ್ದು. ಆದರೆ, ಮೋತಿಲಾಲ್‌, ಶಿಶಿರರು, ಆಯಾಷ್‌ಲಿಗಿಂತ ಜಾಣರು. ‘ಇಂಗ್ಲಿಷಿನಲ್ಲಿ ಪ್ರಕಟಿಸುವ ಪತ್ರಿಕೆಗೆ ಪ್ರಾಂತೀಯ ಭಾಷಾ ಕಾಯಿದೆ ಅನ್ವಯಿಸೊಲ್ಲ’ ಎಂದು ಬರೆದರು. ೧೮೭೮ರ ಮಾರ್ಚ್ ೨೧ ರಿಂದ ‘ಅಮೃತ್‌ಬಜಾರ್ ಪತ್ರಿಕಾ’ ಪೂರ್ತಿ ಇಂಗ್ಲಿಷಿನಲ್ಲೆ ಪ್ರಕಟ ಆಗಲು ಆರಂಭ ಆಯಿತು.

ಕೆಲವು ವರ್ಷಗಳಲ್ಲಿ ಶಿಶಿರ ಅಧ್ಯಾತ್ಮದತ್ತ ತಿರುಗಿ ಪತ್ರಿಕಾದಿಂದ ದೂರ ಆದ. ಮೋತಿಲಾಲರೆ ಪತ್ರಿಕಾದ ಸಂಪಾದಕ, ನಿರ್ವಾಹಕ ಎಲ್ಲ. ಇಂಗ್ಲಿಷರ ಪ್ರತಿ ಕಾರ್ಯಕ್ರಮ, ಅದರ ಹಿನ್ನಲೆಯರಿತು, ಖಂಡಿಸುವುದೆ ಆತನ ಮುಖ್ಯೋದ್ದೇಶ. ೧೮೮೦ ರಲ್ಲಿ ಲಾರ್ಡ್ ರಿಪ್ಪನ್‌ವೈಸ್‌ರಾಯ್‌ಆಗಿ ಭಾರತಕ್ಕೆ ಬಂದ. ಆತನ ಕಾಲದಲ್ಲಿ ಆತನ ಕೈಕೆಳಗೆ ಗ್ರಿಫಿನ್‌ಎಂಬಾತ ಭೋಪಾಲ್‌ನಲ್ಲಿ ನಡೆಸುತ್ತಿದ್ದ ಅಕ್ರಮ, ದುರ್ವ್ಯವಹಾರಗಳನ್ನು “ಪತ್ರಿಕಾ”ಆಧಾರ ಸಹಿತ ಬಯಲಿಗೆಳೆಯಿತು. ಗ್ರಿಫಿನ್‌ಗೆ ಆದ ಶಿಕ್ಷೆ ಕಡ್ಡಾಯ ನಿವೃತ್ತಿ ಮಾತ್ರ.

ಈ ವೇಳೆಗೆ ಭಾರತೀಯತೆಯನ್ನು ಜನತೆಯಲ್ಲಿ ಬಿತ್ತಿ ಬೆಳೆಯಿಸಲು ಇನ್ನೂ ಅನೇಕ ಸಮಾಚಾರ ಪತ್ರಿಕೆಗಳು ಹುಟ್ಟಿಕೊಂಡಿದ್ದವು. ಇದರ ಜತೆ ಘೋಷ್‌ಸೋದರರು ೧೮೭೮ರಲ್ಲಿ ‘ಆನಂದ ಬಜಾರ್ ಪತ್ರಿಕಾ’ ಎಂಬ ಬಂಗಾಳಿ ವಾರಪತ್ರಿಕೆಯನ್ನು ಆರಂಭಿಸಿದ್ದರು. ಬರಿಯ ಧಾರ್ಮಿಕ ವಿಚಾರಗಳಿಗೆ ಅದು ಮೀಸಲು. ಮುಂದೆ ೧೯೨೨ರಲ್ಲಿ ಸುರೇಶಚಂದ್ರ ಮಜುಮದಾರರೆಂಬುವರ ನೇತೃತ್ವದಲ್ಲಿ ಅದು ರಾಷ್ಟ್ರೀಯ ಭಾವನೆಗಳನ್ನು ನಿರೂಪಿಸುವ ಪತ್ರಿಕೆಯಾಯಿತು.

ಕಾಂಗ್ರೆಸ್ಸಿನ ಸಂಬಂಧ

೧೮೮೫ರಲ್ಲಿ ‘ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌’ ಆರಂಭ ಆಯಿತು. ಮೋತಿಲಾಲ್‌ ಆಗಲೇ ಸೂಚಿಸಿದರು: “ಕಾಂಗ್ರೆಸ್‌ ಪಕ್ಷ, ರಾಜಕೀಯ ಅಭಿಪ್ರಾಯಗಳಿಗೆ ಮಾಧ್ಯಮ ಆಗಬಲ್ಲದು. ಬ್ರಿಟಿಷ್‌ಸರ್ಕಾರದ ವಿರುದ್ಧ ಹೋರಾಡಲು ಇದೇ ಸರಿಯಾದ ಸಾಧನ”. “ಒರಟಾದ, ಮಾಸಲುಚದ್ದರ್ ಹೊದ್ದುಕೊಂಡ, ಪಂಚೆಯುಟ್ಟು ಬಡಕಲು ಶರೀರದ ಮೋತಿಲಾಲರನ್ನು ೧೮೮೮ರ ಅಲಹಾಬಾದ್‌ಅಧಿವೇಶನದಲ್ಲೆ ಎಲ್ಲರೂ ಕಂಡದ್ದು! ಆದರೆ, ಅಧಿವೇಶನದ ಕಾರ್ಯಕಲಾಪಗಳು ಅವರಿಗೆ ತೃಪ್ತಿಕರ ಎನಿಸಲಿಲ್ಲ. ಅದಕ್ಕೆ ಮೂಲಕಾರಣಗಳು ಎರಡು. ‘ಕಾಂಗ್ರೆಸ್ಸಿನ ಆಗಿನ ಧ್ಯೇಯ ಸ್ವಂತ ಸರ್ಕಾರದ ರಚನೆ ಆಗದೆ ಬರಿಯ ಇಂಗ್ಲೆಂಡ್‌- ಭಾರತ ಒಕ್ಕೂಟದಂತಿತ್ತು. ಕಾಂಗ್ರೆಸ್ಸಿನ ಮೊದಮೊದಲ ನಾಯಕರು ಬ್ರಿಟಿಷ್‌ರೀತಿಗಳು, ಅವರ ಬದುಕು ಭಾವೆನಗಳಲ್ಲಿಯೆ ವಿಶೇಷ ಆಸಕ್ತಿಯುಳ್ಳವರಾಗಿದ್ದರು.”

ಮೋತಿಲಾಲರ ಮನಸ್ಸೆ ಬೇರೆ ತೆರ. ದಲಿತರು, ಹಿಂದುಳಿದ ವರ್ಗದವರು, ಸಾಮಾನ್ಯ ಜನತೆಯಲ್ಲಿ ರಾಷ್ಟ್ರ ಸ್ವಾತಂತ್ಯ್ರದ, ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿದರೆ ಆಗ ರಾಷ್ಟ್ರ ನಾಯಕರೆನಿಸಿಕೊಂಡವರು ತಾವು ಓದು ಬರಹ ಕಲಿತದ್ದಕ್ಕೆ ಸಾರ್ಥಕ ಆಗುತ್ತದೆ. ಇದು ಅವರ ಅಭಿಪ್ರಾಯ.

ಚುನಾವಣೆಯ ಅನುಭವ

ಬಂಗಾಳ ವಿಧಾನ ಪರಿಷತ್ತಿನ ಕಾಯಿದೆ ಪ್ರಕಾರ ಕಲ್ಕತ್ತೆಯ ಪುರಸಭೆಯ ಮೂಲಕ ಒಬ್ಬ ಸದಸ್ಯನನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಬಹುದಾಗಿತ್ತು. ೧೮೯೨ ರಲ್ಲಿ ಮೋತಿಲಾಲ್‌ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಅನೇಕರ ಬೆಂಬಲವೇನೋ ಇತ್ತು. ಆದರೆ ಮೋತಿಲಾಲ್‌ನಿಂತ ಕ್ಷೇತ್ರದಲ್ಲಿ ಇನ್ನೂ ಇಬ್ಬರು ಪ್ರತಿಸ್ಪರ್ಧಿಗಳಿದ್ದರು. ಇಬ್ಬರೂ ಭಾರಿ ಶ್ರೀಮಂತರೆ. ದುಡ್ಡು, ಬಟ್ಟೆ, ಕೆಲಸ, ಏನು ಬೇಕಾದರೂ ಕೊಡಲು ಸಿದ್ಧರಾದಾಗ, ಬಡ ಮೋತಿ ಲಾಲ್‌ಏನು ಮಾಡಲಾದೀತು? ಮೋತಿಲಾಲ್‌ಸೋತರು. ಚುನಾವಣೆಯ ಕಣಕ್ಕೆ ಮತ್ತೆ ಇಳಿಯಲಿಲ್ಲ.

ತೀವ್ರಗಾಮಿಗಳಕ್ರಾಂತಿಕಾರಿಗಳ ಬೆಂಬಲಿಗ

ಆಗ್ಗೆ ಕಾಂಗ್ರೆಸ್‌ನಲ್ಲಿ ಎರಡು ಬಣಗಳು ಏರ್ಪಟ್ಟಿದ್ದುವು. ಒಂದು ಮಂದಗಾಮಿ, ಇನ್ನೊಂದು ತೀವ್ರಗಾಮಿ. ಮೊದಲನೆಯವರಿಗೆ ಬ್ರಿಟಿಷ್‌ರಾಜನೀತಿ, ರಾಜ್ಯಾಂಗ, ಮಸೂದೆ, ಆಡಳಿತ ಕ್ರಮದಲ್ಲಿ ವಿಶ್ವಾಸ, ಸುರೇಂದ್ರನಾಥ ಬ್ಯಾನರ್ಜಿ ಆ ಗುಂಪಿನವರು. ಗೋಪಾಲಕೃಷ್ಣ ಗೋಖಲೆ ಅವರು ಈ ಗುಂಪಿನ ನಾಯಕರು. ಎರಡನೆಯದಕ್ಕೆ ತಿಲಕರ ಬೆಂಬಲ. ಯಾವುದೇ ರೀತಿಯ ಮೃದುತ್ವಕ್ಕೆ ಕುತಂತ್ರಿಗಳಾದ ಬ್ರಿಟಿಷರು ಬಗ್ಗರು ಎಂಬುದು ಮೋತಿ-ತಿಲಕರ ನಿಲುವು.

ಮೋತಿಲಾಲರಿಗೆ ಕ್ರಾಂತಿಕಾರಿಗಳ ಪರಿಚಯ ಇತ್ತು. ಅಷ್ಟೇ ಅಲ್ಲ, ಸ್ವಾತಂತ್ಯ್ರ ಹೋರಾಟಕ್ಕೆ ಅವರ ಅಗತ್ಯ ಬಹಳ ಇದೆ ಎಂದು ಅರಿತಿದ್ದರು. ಅವರದ್ದು ಅದೇ ಮನೋಧರ್ಮವೇ. ೧೮೯೯ರಲ್ಲಿ ಲಾರ್ಡ್‌ಕರ್ಜನ್‌ವೈಸ್‌ರಾಯ್‌ಆಗಿ ಬಂದ. ಅವನಿಗೆ ಅಧಿಕಾರಲಾಲಸೆ ಹೆಚ್ಚು. ಭಾರತವನ್ನು ಗುಲಾಮ ರಾಷ್ಟ್ರವಾಗಿರಿಸುವ ಆಸೆ, ಯಾವ ಭಾರತೀಯನು ಎಲ್ಲೇ ಕೆಲಸದಲ್ಲಿರಲಿ, ಅವನನ್ನು ತೆಗೆದುಹಾಕಿದ್ದೆ ಹಾಕಿದ್ದು. ಕಲ್ಕತ್ತೆಯ ವಿಶ್ವವಿದ್ಯಾನಿಲಯ ಸ್ವಾತಂತ್ಯ್ರ ಭಾವನೆಗಳನ್ನು ಹರಡುವ ಗರಡಿಮನೆ ಆಗುತ್ತಿದೆ ಎಂದವನು ಬಲ್ಲ. ಅಂತೆಯೆ ಶಿಕ್ಷಣಕ್ಷೇತ್ರವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಆತ ಆಲೋಚಿಸಿದ. ಮೋತಿಲಾಲ್‌, ಕರ್ಜನ್ನನ ಎಲ್ಲ ದುರಾಲೋಚನೆಗಳನ್ನೂ ಪತ್ರಿಕಾ ಮೂಲಕ ಬಯಲಿಗೆಳೆದರು. ಈ ಬಂಗಾಲಿ ತನಗೆ ಅವಮಾನ ಮಾಡಿದ ಎನಿಸಿತು ವೈಸ್‌ರಾಯ್‌ಗೆ. ಮೋತಿಲಾಲರು ಇದಕ್ಕೆ ಸೊಪ್ಪುಹಾಕಲಿಲ್ಲ. ಕರ್ಜನ್‌ಭೇಟಿ ಮಾಡಿದುದೂ ವಿಚಿತ್ರವಾಗಿಯೆ. ಮೋತಿಲಾಲ್‌ಒಂದು ರೂಮು, ವೈಸ್‌ರಾಯ್‌ಬೇರೊಂದರಲ್ಲಿ, ಚೀಟಿ ಮೂಲಕ ಸಂಭಾಷಣೆ. ಕರ್ಜನ್‌ವಿಶ್ವವಿದ್ಯಾನಿಲಯದಲ್ಲಿ ಮಾಡಿದ ಭಾಷಣದಲ್ಲಿ “ವಿದ್ಯಾರ್ಥಿಗಳು ಸಮಾಚಾರ ಪತ್ರಿಕೆಗಳನ್ನು ನಂಬಬಾರದೆಂದು” ತಿಳಿಸಿದ್ದು ಮೋತಿಲಾಲರಿಗೆ ತಿಳಿಯಿತು. ಅವರು “ಕಾಮಾಲೆ ರೋಗದವನಿಗೆ ಸುತ್ತೆಲ್ಲ ಕಾಣುವುದು ಹಳದಿಯೆ! ಅದನ್ನಾತ ನಿವಾರಿಸಿಕೊಳ್ಳಬೇಕು. ಕರ್ಜನ್‌ಸಾಹೇಬರು ಸುಳ್ಳು ತನ್ನ ಹುಟ್ಟುಗುಣ ಅಂತ ತೋರ್ಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಅವರ ಆತ್ಮಕಥೆಯೂ ಸಾಕ್ಷಿ” ಎಂದು ಆಧಾರಸಹಿತ ಟೀಕಿಸಿದರು.

ಗಾಂಧೀಜಿಯವರು ಭಾರತದ ನಾಯಕರುಗಳಲ್ಲಿ ಒಬ್ಬರಾದ ಕಾಲದಲ್ಲಿ ಮೋತಿಲಾಲರಿಗೆ ಅವರು ಮಂದಗಾಮಿಗಳು, ಹೋರಾಟವಿಲ್ಲದೆ ಬ್ರಿಟಿಷ್‌ರಿಂದಕ ನ್ಯಾಯ ದೊರಕುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದಾರೆ ಎನ್ನಿಸಿತು. ೧೯೨೦ ರಲ್ಲಿ ಗಾಂಧೀಜಿ ಅಸಹಕಾರ ಚಳವಳಿಯನ್ನು ಪ್ರಾರಂಭಿಸಿದಾಗ ಇಬ್ಬರ ಮನಸ್ಸುಗಳು ಒಂದಾದವು.

ರಾಷ್ಟ್ರೀಯ ಭಾವನೆಗಳು ರಾಷ್ಟ್ರನಿಷ್ಠೆ ಜನತೆಯಲ್ಲಿ ಜಾಗೃತಗೊಳಿಸುವ ಚಳವಳಿ ಭಾರತವಿಡೀ ಆರಂಭ ಆಯಿತು. ವಿದೇಶೀ ವಸ್ತು ಬಹಿಷ್ಕಾರ ಚಳವಳಿ ಬಿರುಸಾಗಿ ನಡೆಯಿತು. ಭಾರತೀಯ ಸಂಸ್ಕೃತಿಯನ್ನು ಕಾಪಾಡಬೇಕು. ಸ್ವದೇಶಿ ವಸ್ತುಗಳನ್ನು ಬಳಸಬೇಕು. ಸರ್ಕಾರದ ವಿರುದ್ಧ ಸತತ ಹೋರಾಟ ಮೋತಿಲಾಲ್‌, ಅರವಿಂದರು, ಅಶ್ವಿನಿ ಕುಮಾರದತ್ತ, ನೀಲಕಂಠ ಬ್ರಹ್ಮಚಾರಿ, ಬಿಪಿನ್‌ಚಂದ್ರಪಾಲ್‌, ಚಿದಂಬರಂಪಿಳ್ಳೆ, ಸುಬ್ರಹ್ಮಣ್ಯ ಭಾರತಿ ಇವರೆಲ್ಲ ಆಗ ಮಹತ್ವದ ಪಾತ್ರವಹಿಸಿದರು.

ಹೋರಾಟದ ನಡುವೆ

ಬ್ರಿಟಿಷರು ಬಂಗಾಳವನ್ನು ಎರಡು ಭಾಗ ಮಾಡಿದ್ದು ತೀವ್ರ ಚಳವಳಿಗೆ ಅವಕಾಶ ಮಾಡಿಕೊಟ್ಟಿತು. ಬಂಗಾಳಿ ಕಾದಂಬರಿಕಾರ ಬಂಕಿಮಚಂದ್ರರು ಬರೆದ “ಆನಂದ ಮಠ” ಕಾದಂಬರಿ, ರಾಷ್ಟ್ರ ನಿಷ್ಠೆ ಪ್ರತಿಪಾದಿಸುವ ಸಾಹಿತ್ಯ ಎಂದು ಬ್ರಿಟಿಷ್‌ ಸರ್ಕಾರ ಅದಕ್ಕೆ ಬಹಿಷ್ಕಾರ ಹಾಕಿತು. ಆದರೇನು? ಕಾದಂಬರಿಯ ‘ವಂದೇ ಮಾತರಂ’ ಭಾರತೀಯರ ತಾರಕಮಂತ್ರವಾಯಿತು. ತಿಲಕ್‌, ಮೋತೀಲಾಲರು ಸೇರಿ ಅನೇಕ ಕಡೆ ಹರತಾಳ, ವಿದೇಶೀ ಬಹಿಷ್ಕಾರ ಮೆರವಣಿಗೆ ನಡೆಸಿದರು. ಸರ್ಕಾರಕ್ಕೆ ಕಂದಾಯ ಕೊಡಬೇಡಿ, ಯಾವ ರೀತಿಯಲ್ಲೂ ಸಹಕರಿಸಬೇಡಿ ಎಂದು ಜನರಿಗೆ ಮನವಿ ಮಾಡಿದರು.

ಬಂಗಾಳದ ಯುವಜನರು ಸ್ವದೇಶೀ ಚಳವಳಿಯ ಸಂಘಟನೆಯಲ್ಲಿ ವಹಿಸಿದ್ದ ಮಹತ್ವದ ಪಾತ್ರಕ್ಕೆ ಮೋತಿಲಾಲರ ಸಂಪೂರ್ಣ ಸಹಕಾರವಿತ್ತು. ಅನುಶೀಲನ್‌ಸಮಿತಿ, ಆತ್ಮೋನ್ನತಿ ಸಮಿತಿ, ಸ್ವದೇಶ ಬಾಂಧವ್‌ಸಮಿತಿ ಮೊದಲಾದ ಅನೇಕ ಕಾರ್ಯಶೀಲ ಸಮಿತಿಗಳು ಇದ್ದುವು. ಇವೆಲ್ಲ ಹೊರನೋಟಕ್ಕೆ ಸಾಂಸ್ಕೃತಿಕ ಸಂಘಗಳು ಆದರೂ ಒಳಗೆ ನಡೆಯುತ್ತಿದ್ದುದು ಕ್ರಾಂತಿಕಾರಿ ಚಟುವಟಿಕೆಯೆ. ಕ್ರಾಂತಿಯಿಂದ ಸ್ವಾತಂತ್ಯ್ರ ಸಾಧ್ಯ ಎಂದು ಬೆಂಬಲಿಸಲೆಂದೇ ಅನೇಕ ಪತ್ರಿಕೆಗಳು ಹುಟ್ಟಿಕೊಂಡವು.

ಪಂಜಾಬಿನಲ್ಲಿ ಎಲ್ಲೆಲ್ಲೂ ರೈತರ ಅಶಾಂತಿ! ಭೂಹಿಡುವಳಿ ಕಾಯಿದೆಗೆ ತೀವ್ರ ವಿರೋಧ. ಲಾಲಾ ಲಜಪತರಾಯ್‌ಚಳವಳಿಯ ಅಗ್ರನಾಯಕರು. ಸರ್ಕಾರಕ್ಕೆ ತಳಮಳ! ಬಾರಿಸಾಲ್‌, ಬಂಗಾಳಗಳಲ್ಲಿ ನಿಷೇಧಾಜ್ಞೆ,ಮೆರವಣಿಗೆ, ಸಭೆ, ಜನಗುಂಪು ಸೇರುವಿಕೆ, ವಿದೇಶಿಬಟ್ಟೆ ಮಾರುವ ಅಂಗಡಿಗಳ ಮುಂದೆ ಧರಣಿ ನಡೆಸಕೂಡದು. ಚಳವಳಿಯಿಂದಾಗಿ ಹಳ್ಳಿಹಳ್ಳಿಗಳಲ್ಲೂ ಜನತಾ ಕೋರ್ಟುಗಳು. ಅಲ್ಲೇ ವಿವಾದ ಪರಿಹಾರ. ಇಷ್ಟಾದರೂ ೧೯೦೬ರ ಏಪ್ರಿಲ್‌೧೪, ೧೫ ರಂದು ಬಾರಿಸಾಲ್‌ನಲ್ಲಿ ಅಧಿವೇಶನದಲ್ಲೆ ಪೊಲೀಸರ ಲಾಠಿ ರಕ್ತ ಹರಿಸಿತು. ಮೋತಿಲಾಲ್‌, ಸುರೇಂದ್ರರು ಬಂಗಾಳದಿಂದ ಧಾವಿಸಿದರು. “ವಂದೇ ಮಾತರಂ” ಕೂಗುವಂತಿಲ್ಲ. ಮೋತಿಲಾಲರು ಕೆರಳಿ ಗರ್ಜಿಸಿದರು. “ಬೀದಿ ಬೀದಿಯಲ್ಲೂ ವಂದೇಮಾತರಂ ಘೋಷಿಸುತ್ತೇವೆ. ನನ್ನ ತಲೆ ಹೋದರೂ ಸರಿಯೆ. ರಾಷ್ಟ್ರ ಅಮೂಲ್ಯ ಆದದ್ದೆ ವಿನಾ ನಾನೊಬ್ಬ ಅಲ್ಲ. ಶಾಂತಿಯಿಂದಿರಿ. ಪೊಲೀಸರ ಪ್ರಚೋದನೆಗೆ ಒಳಗಾಗಬೇಡಿರಿ. ವಂದೇಮಾತರಂ” ಎಂದರು.

ಅಧಿವೇಶನ ಮುಗಿದು ಶಿಬಿರದಿಂದ ಹೊರಬರುತ್ತಿದ್ದಂತೆ ಕೆಂಪ್‌ಎಂಬ ಬ್ರಿಟಿಷ್‌ಪೊಲೀಸ್‌ಸೂಪರಿಂಟೆಂಡೆಂಟ್‌, ಲಾಠಿ ಪ್ರಹಾರಕ್ಕೆ ಆಜ್ಞೆಮಾಡಿದ. ಚಳವಳಿಕಾರರು ಹೆದರಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗುವಷ್ಟರಲ್ಲಿ ಬಂದ ಮೋತಿಲಾಲ್‌, ಸುರೇಂದ್ರರು ತಾವಾಗಿ ದಸ್ತಗಿರಿ ಆಗಲು ಮುಂದೆ ಬಂದರು. ಸುರೇಂದ್ರರನ್ನು ಜಿಲ್ಲಾ ಕೋರ್ಟಿಗೆ ಕರೆದೊಯ್ದು ನಾನ್ನೂರು ರೂಪಾಯಿ ದಂಡ ವಿಧಿಸಲಾಯಿತು.

೧೯೧೧ರಲ್ಲಿ ಶಿಶಿರಕುಮಾರ ತೀರಿಕೊಂಡದ್ದು ಮೋತಿಲಾಲರಿಗೆ ಅತೀವ ಪೆಟ್ಟು. ತಾನು ಒಂಟಿ ಆದೆ ಎನ್ನಿಸಿತು. ಇದೇ ವೇಳೆಗೆ ಸರ್ಕಾರ ಸಮಾಚಾರ ಪತ್ರಿಕೆಗಳ ಚಟುವಟಿಕೆಗಳನ್ನು ನಿರ್ಬಂಧಿಸಲು ಅನೇಕ ರೀತಿಯ ಪ್ರತಿಬಂಧಕ ಕಾಯಿದೆಗಳನ್ನು ಜಾರಿಗೆ ತಂದಿತು. ಮೋತಿ ಲಾಲರಿಗೆ ಇದೊಂದು ಸವಾಲೇ ಆಯಿತು.

ಆದರೆ, ಆಗ ಹೊಸತಾಗಿ ಬಂದ ಲಾರ್ಡ್ ಕಾರ್ ಮಿಛೇಲ್‌ಎಂಬ ಅಧಿಕಾರಿ ಮೋತಿಲಾಲರ ಆಪ್ತ ಮಿತ್ರನಾದ. ಜನರೊಂದಿಗೆ ಬೆರೆತು ಅವರನ್ನು ಅರಿಯಲೆತ್ನಿಸಿದ. “ಪತ್ರಿಕಾ” ಪ್ರಕಟಿಸುತ್ತಿದ್ದ ಲೇಖನ, ಅಭಿಪ್ರಾಯ ಆತನಿಗೆ ಮೆಚ್ಚುಗೆಯಾಯಿತು. ೧೯೧೨ರ ಮೇ ೧೮ರಂದು ಮೋತಿಲಾಲರಿಗೆ ಕಾರ್ ಮಿಛೇಲ್‌ಬರೆದ ಪತ್ರದ ಕೆಲವು ಸಾಲು ಹೀಗಿವೆ: “ನಾನೇನು ಮಾಡಬೇಕು ಎಂಬುದನ್ನು ಇಲ್ಲಿಯವರೆ ಆದ ನೀವು ತಿಳಿಸಿ ಕೊಡಬೇಕಷ್ಟೆ. ಬಂಗಾಳ ನೆಮ್ಮದಿಯ ನಾಡು ಆಗಲು ಯಾರು ಯಾವುದೇ ರೀತಿ ಶ್ರಮಿಸಲಿ, ಅವರಿಗೆ ನನ್ನ ನೆರವು ಇದೆ. “ಆದರೆ ಸರ್ಕಾರ ಕಾರ್ ಮಿಛೇಲನ ವಿರೋಧಿ ಆಯಿತು; ಕ್ರಾಂತಿಕಾರಿ ಚಟುವಟಿಕೆ ಅದಕ್ಕೆ ಮುಳ್ಳಾಗಿತ್ತು.

ದಯಾನಂದ ಎಂಬ ವೈಷ್ಣವ ಸಂನ್ಯಾಸಿ ಆಶ್ರಮ ಕಟ್ಟಿಕೊಂಡಿದ್ದ. ಪ್ರತಿಸಂಜೆ ಭಜನೆ ನಡೆಯುತ್ತಿತ್ತು. ಸುತ್ತಣವರು ತುಂಬ ಜನ ಸೇರುತ್ತಿದ್ದರು. ಕೆಲವರು ಮಾತ್ರ ನಿದ್ರಾಭಂಗ ಆಗುತ್ತಿದೆ ಅಂತ ಪೊಲೀಸರಿಗೆ ದೂರಿತ್ತರು. ಹಿಂದುಮುಂದು ನೋಡದೆ ಸರ್ಕಾರ ಆಶ್ರಮ ಮುತ್ತಲು ಆಜ್ಞೆ ನೀಡಿತು! ಕ್ರಾಂತಿಕಾರಿ ಚಟುವಟಿಕೆ ಕೇಂದ್ರ ಅದು ಎಂಬ ಅನುಮಾನ ಸರ್ಕಾರಕ್ಕೆ. ಪೊಲೀಸರು ನುಗ್ಗಿ ಬಡಿದರು, ಗುಂಡೂ ಹಾರಿಸಿದರು. ಅಮೃತ ಬಜಾರ್ ಪತ್ರಿಕೆ ಇದನ್ನೆಲ್ಲ ಖಂಡಿಸಿ, ಸರ್ಕಾರದ ಅಮಾನುಷ ವರ್ತನೆಯನ್ನು ಉಗ್ರವಾಗಿ ಟೀಕಿಸಿತು. ಅಸ್ಸಾಂ ಸರ್ಕಾರ ಪತ್ರಿಕೆಯ ವಿರುದ್ಧ ಸುಪ್ರೀಂ ಕೋರ್ಟ್‌‌ನಲ್ಲಿ ದಾವೆ ಹೂಡಿತು. ಕಾಯಿದೆ ಪ್ರಕಾರ ೫೦೦ ರೂಪಾಯಿಗಳನ್ನು ಮೋತಿಲಾಲ್‌ದಂಡ ತೆರಬೇಕಾಯಿತು.

ಈ ಸಂದರ್ಭದಲ್ಲಿ ಕೆಲವು ವಿದೇಶೀ ಪತ್ರಿಕೆಗಳೇ ಮೋತಿಲಾಲರನ್ನು ಪ್ರಶಂಸೆಮಾಡಿದವು. ಇಂಗ್ಲೆಂಡಿನ ಮ್ಯಾಂಚೆಸ್ಟರ್ ಗಾರ್ಡಿಯನ್‌ಎಂಬ ಪತ್ರಿಕೆ ಮೋತಿಲಾಲರ ನಿರ್ಭೀತ ಬರವಣಿಗೆಗೆ ಮೆಚ್ಚುಗೆ ಸೂಚಿಸಿತು. ಪಾಲ್‌ಮಾಲ್‌ಗೆಜೆಟ್‌ಎಂಬ ಪತ್ರಿಕೆ “ಮುದುಕ ತುಂಬ ಸಾತ್ವಿಕ ಸ್ವಭಾವದವನು. ಸದಾ ಮುಗುಳ್ನಗೆ. ಅವರ ಲೇಖನಿ ಚೂಪಾದರೂ, ಆತ ಕ್ರಾಂತಿಕಾರಿ ಅಲ್ಲ. ಒಳ್ಳೆಯ ಸ್ನೇಹಿತ” ಎಂದಿತು. ೧೯೧೨-೧೩ರಲ್ಲಿ ಪತ್ರಿಕಾ ಸರ್ಕಾರ ಕ್ರಾಂತಿಕಾರಿಗಳಿಗೆ ಮಾಡಿದ ಅನ್ಯಾಯದ ಕುರಿತು ಟೀಕಿಸಿದಾಗ, ಸರ್ಕಾರಕ್ಕೆ ಕಣ್ಣು ಕೆಂಪಾಯಿತು. ಪತ್ರಿಕೆ ಮುಚ್ಚಲು ಸರ್ವ ಪ್ರಯತ್ನ ನಡೆಸಿತು. “ದೇಶದ್ರೋಹಿ” ಎಂಬ ಆಪಾದನೆ ಹೊರಿಸಿತು. ಆದರೂ ಯಾವುದರಲ್ಲೂ ‘ಪತ್ರಿಕಾ’ ಸಿಕ್ಕಿಹಾಕಿಕೊಳ್ಳಲಿಲ್ಲ. ಸಂಪಾದಕ ಯಾರೆಂದು ರುಜುವಾತಾಗಲಿಲ್ಲ. ಆದ್ದರಿಂದ ನ್ಯಾಯಾಲಯ ಸರ್ಕಾರದ ಮೊಕದ್ದಮೆ ಆಧಾರರಹಿತ ಆದದ್ದು ಎಂದಿತು. ಮುದ್ರಕ, ಪ್ರಕಾಶಕರು ಖುಲಾಸೆ ಹೊಂದಿದರು. ಸರ್ಕಾರ ವಿಶ್ವವಿದ್ಯಾನಿಲಯವನ್ನು ತನ್ನ ಸ್ವಾಧೀನಪಡಿಸಿಕೊಳ್ಳಲು ಆಲೋಚಿಸಿದಾಗ ಅಮೃತ ಬಜಾರ್ ಪತ್ರಿಕಾ, “ಇದು ನಮ್ಮ ಮಕ್ಕಳಿಗೆ ಶಾಪ ಆದೀತು” ಎಂದು ಟೀಕಿಸಿತು. ಮೋತಿಲಾಲ್‌ಸಭೆಗಳಲ್ಲಿ ಕೂಡ ಉಗ್ರವಾಗಿ ಖಂಡಿಸಿದರು. ಸರ್ಕಾರ ಬರೀ ಹಲ್ಲು ಕಡಿಯಬೇಕಾಯಿತಷ್ಟೆ. ಅದೇ ವರುಷ ದಾಮೋದರ್ ಎಂಬ ನದಿ ಉಕ್ಕೇರಿ, ಬರ್ದ್ವಾನ್‌, ಹೂಗ್ಲಿ, ಮಿಡ್ನಾಪುರ್ ಜಿಲ್ಲೆಯೆಲ್ಲ ಆವರಿಸಿತು. ಮೋತಿಲಾಲರು ತಮ್ಮ ವೃದ್ಧಾಪ್ಯವನ್ನೂ ಲೆಕ್ಕಿಸದೆ ಸುತ್ತಿದರು. ನಿಧಿ, ಬಟ್ಟೆ, ಆಹಾರ ಸಂಗ್ರಹಿಸಿ ಸ್ವಯಂಸೇವಕರ ಮೂಲಕ ಪ್ರವಾಹಪೀಡಿತರಿಗೆ ವಿತರಣೆ ಮಾಡಿದರು.

ಮುಪ್ಪಿನಲ್ಲೂ ಸಿಂಹ ಸಿಂಹವೆ

೧೯೧೭ರಲ್ಲಿ ಮೋತಿಲಾಲರಿಗೆ “ಡುಮ್ರಾನ್‌” ಎಂಬಾತನ ವಿಚಾರಣೆಯಲ್ಲಿ ಅದಕ್ಕೆ ಸಂಬಂಧಿಸಿದ ಆಯೋಗದ ಮುಂದೆ ಸಾಕ್ಷ್ಯ ಹೇಳಬೇಕಾಗಿ ಬಂತು. ೩೦ ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಬಗ್ಗೆ ಸರ್ಕಾರ ಹೂಡಿದ್ದ ಸಿವಿಲ್‌ಮೊಕದ್ದಮೆ. ತಿಂಗಳು ಪೂರ್ತಿ ಅಲೆದಾಟದಿಂದ ಶರೀರ ಬಳಲಿತು. ವಿಶ್ರಾಂತಿಗೆಂದು ಮೋತಿ ಲಾಲ್‌ಕೋಯಿಲ್‌ವಾರ್ ಎಂಬಲ್ಲಿಗೆ ತೆರಳಿದರು. ಆದರೇನು, ಹೆಸರಿಗೆ ವಿಶ್ರಾಂತಿ ಅಷ್ಟೆ. ಪತ್ರಿಕೆಯ ಸಂಪರ್ಕ, ಸಲಹೆ ನೀಡುವುದು, ಬರಹ, ರಾಜಕೀಯ ಚಟುವಟಿಕೆಗಳನ್ನು ಅವರು ಬಿಡಲಾಗಲಿಲ್ಲ. ೧೯೧೮ರಲ್ಲಿ ವಾರಣಾಸಿಗೆ ಬಂದರು. ಹಠಾತ್ತನೆ ಎಡತೋಳಿಗೆ ಪಾರ್ಶ್ವವಾಯು ಬಡಿಯಿತು. ಅದು ಕ್ರಮೇಣ ಶರೀರದ ಎಡಭಾಗವನ್ನೇ ಆವರಿಸಿತು.

ಕಲ್ಕತ್ತೆಗೆ ವಾಪಸ್ಸಾದ ಅವರು ಪುನಃ ಆಘಾತಕ್ಕೆ ಈಡಾದರು. ಆಗಿನ ಕಾಂಗ್ರೆಸ್‌ಅಧಿವೇಶನಕ್ಕೆ ಅವರು ಹೋಗಲಾಗಲಿಲ್ಲ. ಮರು ವರ್ಷವೆ ಮೋತಿಲಾಲರ ಒಬ್ಬನೆ ಅಳಿಯ ನೃತ್ಯಗೋಪಾಲದತ್ತ ಇದ್ದಕ್ಕಿದ್ದಂತೆ ತೀರಿಕೊಂಡರು.

“ಬೇಜವಾಬ್ದಾರಿ ಪೊಲೀಸರಿಗೆ ಸರ್ಕಾರ ಅಧಿಕಾರ ನೀಡಿದೆ"

೧೯೧೮ರಲ್ಲಿ ಪ್ರಪಂಚದ ಮೊದಲ ಮಹಾಯುದ್ಧ ಕೊನೆಗೊಂಡಿತು. ಬ್ರಿಟನ್ನಿಗೆ ಜಯವಾಯಿತು. ಬ್ರಿಟಿಷ್‌ಸರ್ಕಾರಕ್ಕೆ ಕ್ರಾಂತಿಕಾರಿಗಳ ಭೀತಿ! ಎರಡು ಮಸೂದೆಗಳನ್ನು ಸರ್ಕಾರ ಜಾರಿಗೆ ತಂದಿತು. ಸರ್ಕಾರ ವಿರೋಧಿ ಚಳವಳಿ, ಸಂಚಿನ ವಿಚಾರಣೆ ಪೊಲೀಸರು ನಡೆಸತಕ್ಕದ್ದು. ಅಪರಾಧಿಗೆ ಯಾವ ಅಪೀಲು ಹೋಗುವ ಹಕ್ಕೂ ಇಲ್ಲ. ಬೇರೆ ಕೋರ್ಟಿಗೆ ಹೋಗಿ ನ್ಯಾಯ ಕೇಳುವಂತಿಲ್ಲ. ಮಸೂದೆ ಜಾರಿಗೆ ಬರುವ ಮುನ್ನ ಕಲ್ಕತ್ತೆಯಲ್ಲಿ ಭಾರಿ ಸಭೆ ನಡೆಯಿತು. ಪುರಭವನದಲ್ಲಿ ನಡೆದ ಆ ಸಭೆಗೆ ಮೋತಿಲಾಲರೂ ಕಷ್ಟಪಟ್ಟುಕೊಂಡೇ ಬಂದರು. ಅವರ ಅಭಿಮಾನಿಗಳು ಬಾಬುವನ್ನು ಪುರಭವನದೊಳಗೆ ಕೊಂಡೊಯ್ದರು. “ಬೇಜವಾಬ್ದಾರಿ ಪೊಲೀಸರ ಕೈಲಿ ಸರ್ಕಾರ ಅಧಿಕಾರ ನೀಡಿದೆ. ಭಾರತೀಯರೇ ಸರ್ಕಾರ ರಚಿಸುವಾಗ, ಬ್ರಿಟಿಷ್‌ಸರ್ಕಾರ ಇಂಥ ಕಾರ್ಯಗಳನ್ನು ನಮ್ಮ ನೆಲದಲ್ಲಿ ನಿರ್ವಹಿಸುವ ಅಗತ್ಯ ಇಲ್ಲ” ಎಂದು ಗುಡುಗಿದರು ಮೋತಿಲಾಲ್‌. ಗಾಂಧೀಜಿಯವರುದ ಮಸೂದೆ ಗಳನ್ನು ಸವಾಲಾಗಿ ಸ್ವೀಕರಿಸಿದರು. ಭಾರತಾದ್ಯಂತ ಶಾಂತಿಯುತ ಹರತಾಳಕ್ಕೆ ಕರೆಯಿತ್ತರು.

೧೯೧೯ರ ಏಪ್ರಿಲ್‌೧೩ ಭಾರತ ಮರೆಯಲಾಗದ ದಾರುಣ ದಿನ. ಪಂಜಾಬಿನ ಅಮೃತಸರದಲ್ಲಿ ನಿಷೇಧಾಜ್ಞೆ ಇದ್ದರೂ ಸ್ವಾತಂತ್ಯ್ರ ಚಳವಳಿಗಾರರು ಅದನ್ನು ಉಲ್ಲಂಘಿಸಿ, ಜಲಿಯನ್‌ವಾಲಾ ಬಾಗ್‌’ ಎಂಬಲ್ಲಿ ಸಭೆ ಸೇರಿದರು.  ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಹೊರ ಹೋಗಲು ಒಂದೇ ಬಾಗಿಲು! ಆ ವೇಳೆಗೆ ಅಲ್ಲಿಗೆ ಆಗಮಿಸಿದ ಜನರಲ್‌ಡಯರ್ ಎಂಬ ಬ್ರಿಟಿಷ್‌ಅಧಿಕಾರಿ ಹಿಂದು ಮುಂದು ನೋಡದೆ ತನ್ನವರಿಗೆ ಗುಂಡು ಹಾರಿಸಲು ಅಪ್ಪಣೆ ಮಾಡಿದ. ಗುಂಡಿನ ಮಳೆಯೆ ಕರೆಯಿತು. ಐನೂರಕ್ಕೂ ಹೆಚ್ಚು ಜನ ನಿರಪರಾಧಿಗಳು ಪ್ರಾಣ ತೆತ್ತರು! ಬ್ರಿಟಿಷ್‌ಸರ್ಕಾರದ ಈ ಹೇಯಕೃತ್ಯವನ್ನು “ಪತ್ರಿಕಾ” ಉಗ್ರವಾಗಿ ಟೀಕಿಸಿತು. ಈ ಬಗ್ಗೆ ಯಾವ ವಿಚಾರಣೆಯೂ ಸಮರ್ಪಕವಾಗಿ ನಡೆಯಲಿಲ್ಲ.

ಈ ಬಗ್ಗೆ ಕಲ್ಕತ್ತೆಯಲ್ಲಿ ನಡೆದ ಸಭೆಯಲ್ಲಿ ತೀರ ನಿಶ್ಶಕ್ತರಾಗಿದ್ದ ಮೋತಿಲಾಲರಿಗೆ ಮಾತನಾಡಲು ಆಗಲಿಲ್ಲ. ಅವರ ಭಾಷಣವನ್ನು ಪ್ರೊಫೆಸರ್ ಜಿ. ಎಲ್‌. ಬ್ಯಾನರ್ಜಿಯವರೇ ಓದಿದರು. “ಮೊದಲು ತಾವು ಸರಿಯಾಗಿ ನಡೆದುಕೊಂಡಿದ್ದಾರೆಯೆ ಅಂತ ಬ್ರಿಟಿಷರು ಆಲೋಚಿಸಲಿ. ಮನೆ ಸುಟ್ಟ ಮೇಲೆ ನೀರೆರಚಿದಂತೆ ಇಂಗ್ಲಿಷ್‌ಸರ್ಕಾರ ವಿಚಾರಣೆ ನಡೆಸಿದ್ದು ಅಷ್ಟೆ” ಎಂದು ಬರೆದಿದ್ದರು ಮೋತಿಲಾಲ್‌.

ಇದೀಗ ಅಮೃತ ಬಜಾರ್ ಪತ್ರಿಕಾ ಸರ್ಕಾರದ ಕೋಪಕ್ಕೆ ತುತ್ತಾಯಿತು. ಒಂದು ಸಾವಿರ ರೂಪಾಯಿ ಠೇವಣಿ ಕೊಡಲು ಸರ್ಕಾರ ಪತ್ರಿಕಾ ಸಂಪಾದಕರಿಗೆ ಆಜ್ಞೆ ಮಾಡಿತು. ಪತ್ರಿಕಾ ಮುಚ್ಚಲೆಂದು ಸರ್ಕಾರದ ಉದ್ದೇಶ. ಆದರೆ ಅದು ಈಡೇರಲಿಲ್ಲ. ಅಭಿಮಾನಿಗಳು, ವಿದೇಶಿಮಿತ್ರರೇ ಸೇರಿ ಮೋತಿಬಾಬುವಿಗೆ ಹಣವನ್ನು ಕೊಡಿಸಿ ಕೊಟ್ಟರು. “ನನ್ನ ಪ್ರಾಣವಿರುವವರೆಗೂ ನಾನು ಪ್ರಾಮಾಣಿಕನಾಗಿ ಬದುಕುತ್ತೇನೆ. ಸತ್ಯವನ್ನೆ ಬರೆಯುತ್ತೇನೆ” ಎಂದು ನುಡಿದರು ಮೋತಿಲಾಲರು.

೧೯೨೦ರ ವೇಳೆಗೆ ಮೋತಿಲಾಲರ ಆರೋಗ್ಯ ತೀವ್ರವಾಗಿ ಕ್ಷೀಣಿಸಿತು. ಗಾಂಧೀಜಿ, ಜವಹರಲಾಲ್‌ನೆಹರು ಗಿರಿಧರಲಾಲ್‌, ಸರಳಾದೇವಿ ಚೌಧುರಾಣಿ ಮುಂತಾದ ಗಣ್ಯರು ಪತ್ರಿಕಾರಂಗಕ್ಕೆ ಹಿರಿಯರಾದ ಮೋತಿಲಾಳರನ್ನು ಸಂದರ್ಶಿಸಿದಾಗ, ಅವರು ನುಡಿದಿದ್ದಿಷ್ಟೆ: “ನಾನು ೫೦ ವರುಷಗಳಿಂದಲೂ ಸರ್ಕಾರದಿಂದ ಅಸಹಕಾರಿ ಅಂತಲೆ ಅನ್ನಿಸಿಕೊಂಡಿದ್ದೇನೆ. ನನಗೆ ಯಾವ ಪದವಿಯ ಆಸೆಯೂ ಇಲ್ಲ. ಜನ ಸಾಮಾನ್ಯರ ಸಂಘಟನೆ ನಿಮ್ಮ ಹೊಣೆಯಷ್ಟೆ.” ಮೋತಿಲಾಲರು ಗಾಂಧೀಜಿಯ ಎಲ್ಲ ಕಾರ್ಯಕ್ರಮಗಳಿಗೂ ಸಂಪೂರ್ಣ ಬೆಂಬಲ ನೀಡಿದರು. “ಪತ್ರಿಕೆ”ಯ ಮೂಲಕ ಬಂಗಾಳದ ಎಲ್ಲ ಕಡೆಗೂ ಸ್ವಾತಂತ್ಯ್ರ ಚಳವಳಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರು.

ಕಡೆಯ ದಿನಗಳು

೧೯೨೧ರ ವೇಳೆಗೆ ಮೋತಿಲಾಲರ ಆರೋಗ್ಯ ಇನ್ನೂ ಕ್ಷೀಣಿಸಿತು. ಮೊದಲಿಂದ ಅವರಿಗೆ ಇದ್ದ ಅನ್ನನಾಳದ ತೊಂದರೆ ಇನ್ನೂ ಹೆಚ್ಚಿತು. ಅಸ್ಸಾಂಗೆ ಹೊರಟಿದ್ದ ಗಾಂಧೀಜಿ, ಮೋತಿಲಾಲರನ್ನು ಕಾಣಬಂದರು. ಅವರನ್ನು ಮನಸಾರೆ ಹರಸಿದ ಮೋತಿಲಾಲ್‌, ಸಂತಸದಿಂದ ಹೇಳಿದ್ದು: “ಸ್ವರಾಜ್ಯದ ಹಸಿರುತೋರಣ ಹಾರುವ ಮೊದಲೇ ನಾನು ಸಾಯುವೆನೋ ಏನೋ? ಆದರೆ ನಾನು ಸತ್ತರೂ ಸರಿಯೆ, ಸ್ವರಾಜ್ಯ ದೇಶಕ್ಕೆ ಬರಲಿ. ಅಲ್ಲಿಗೆ ನನ್ನ ಆತ್ಮಶಾಂತಿ.”

ಮೋತಿಲಾಲರ ಮೊಮ್ಮಗ ಪಿ. ದತ್ತ ಎಂಬುವರು. ಇಳಿವಯಸ್ಸಿನಲ್ಲಿ ತಾತನಿಗೆ ಅವರೇ ಆಧಾರ. ಒಮ್ಮೆ ಕೇಳಿದರಂತೆ: “ನೀವು ಯಾಕೆ ಪ್ರತಿ ಹೆಜ್ಜೆಗೂ ಬ್ರಿಟಿಷರನ್ನು ವಿರೋಧಿಸುವಿರಲ್ಲ? ಅವರು ನಮಗೆ ಏನೂ ಒಳ್ಳೆಯದು ಮಾಡುವುದಿಲ್ಲವೆ?”

ಮೋತಿ: ಈಗಿನ ಸಂದರ್ಭ ನೋಡಿದರೆ ಅವರು ಮಾಡುವುದಿಲ್ಲ. ಆದ್ದರಿಂದಲೇ ನಾನು ಆ ಸರ್ಕಾರದ ನೀತಿ ಧೋರಣೆಗಳನ್ನು ಟೀಕಿಸುವುದು.

ದತ್ತ: ಜನತೆಗೆ ಯೋಗ್ಯ ಅಲ್ಲದಿದ್ದರೆ ಟೀಕಿಸಿ, ಒಳ್ಳೆಯ ಕಾರ್ಯವನ್ನೂ ಏಕೆ ಟೀಕಿಸುತ್ತೀರಿ? ಆಸ್ಪತ್ರೆ ತೆರೆಯುವುದು, ಸೇತುವೆ ನಿರ್ಮಿಸುವುದು, ರೈಲ್ವೆಹಾದಿ ಇವು ಒಳ್ಳೆಯ ಕಾರ್ಯಗಳಲ್ಲವೆ?

ಮೋತಿ: ನೀನು ಕಲಿಯಬೇಕಾದ್ದಿನ್ನೂ ತುಂಬಾ ಇದೆ. ಬ್ರಿಟಿಷ್‌ಸರ್ಕಾರ ಆಸ್ಪತ್ರೆ ತೆರೆದರೆ, ನಾವು ಎಚ್ಚರಿಕೆಯಿಂದ ವೀಕ್ಷಿಸಬೇಕು. ಬರೀ ಬ್ರಿಟಿಷ್‌ಡಾಕ್ಟರು, ಆಂಗ್ಲೊ ಇಂಡಿಯನ್‌ನರ್ಸುಗಳಿಗಾಗಿ ಅಥವಾ ಬ್ರಿಟನ್‌ನಲ್ಲಿ ತಯಾರಾದ ಔಷಧಿಗಳನ್ನು ಭಾರತದಲ್ಲಿ ಮಾರಲಿಕ್ಕೆ ಇವರು ಆಸ್ಪತ್ರೆ ತೆರೆದರೇ ಅಂತ ಗಮನಿಸಬೇಕು. ಹೊಸ ಸೇತುವೆ ಕಟ್ಟಿಸಬಹುದು. ರೈಲು ಹಾದಿ ಹಾಕಿಸಬಹುದು, ನಾನು ಪ್ರಮಾಣ ಮಾಡಿ ಹೇಳುತ್ತೇನೆ, ಬ್ರಿಟಿಷ್‌ಉದ್ಯಮಿಗಳಲ್ಲೆ ಅವರು ಸಾಮಗ್ರಿ ಕೊಳ್ಳುವುದು, ಬ್ರಿಟಿಷ್‌ಇಂಜಿನಿಯರು, ಕಂಟ್ರಾಕ್ಟರುಗಳನ್ನೆ ಕೆಲಸಕ್ಕೆ ಸೇರಿಸಿಕೊಂಡು, ಕೂಲಿ ಕೆಲಸ ಮಾತ್ರ ಭಾರತೀಯರೆ ನಿರ್ವಹಿಸಬೇಕು.

ದಿನಕಳೆದಂತೆ ಮೋತಿಲಾಲರ ಆರೋಗ್ಯ ಇಳಿಮುಖವಾಗುತ್ತ ಹೋಯಿತು. ಶರೀರದ ಅನಾರೋಗ್ಯ ಲೆಕ್ಕಿಸದೆ ಸತತ ಓಡಾಟ, ದುಡಿಮೆ, ಮಾನಸಿಕಶ್ರಮ ಅವರನ್ನು ಹಣ್ಣು ಮಾಡಿತು. “ಸಾವು ಬಂದರೂ ಸ್ನೇಹಿತನಂತೆ ಅದನ್ನು ಶಾಂತಿಯಿಂದ ಸ್ವಾಗತಿಸುತ್ತೇನೆ” ಎಂದರವರು. “ಸಾವು, ಶರೀರಕ್ಕೊದಗುವ ಒಂದು ಸಹಜ ಕ್ರಿಯೆ. ಆತ್ಮಕ್ಕೆಲ್ಲಿಯ ಸಾವು? ಬೇರೇ ಶರೀರವನ್ನು ಅದು ಆರಿಸುತ್ತದಷ್ಟೇ. ಆದರೆ ಬದುಕಿನ ಕೊನೆ ಕ್ಷಣದವರೆಗೂ ನಾನು ಕರ್ತವ್ಯಶೀಲನಾಗಿದ್ದರೆ ಸಾಕು” ಎಂದು ನೋಡಬಂದವರಿಗೆ ಹೇಳಿದರಂತೆ. ಮೋತಿಲಾಲ್‌ಘೋಷರು ೧೯೨೨ರ ಸೆಪ್ಟೆಂಬರ್ ೫ನೇ ತಾರೀಖು ಕೊನೆಯುಸಿರೆಳೆದರು.

ಮೋತಿಲಾಲರು ಬಡತನದ ಬೇಗೆಯಲ್ಲೆ ಬದುಕನ್ನು ನಡೆಸಿದರೂ, ಬ್ರಿಟಿಷರಿಗೂ ಮಾತ್ರ ಬಗ್ಗಲಿಲ್ಲ! ಅವರಿಗಿದ್ದ ಏಕೈಕ ಧ್ಯೇಯ, ತಾಯಿ ಭಾರತಿಯ ಸ್ವಾತಂತ್ಯ್ರ! ಅದಕ್ಕೇ  ಅವರು ತಮ್ಮದೇ ಆದ ಹೋರಾಟ ನಡೆಸಿದ್ದು. ನಿರ್ಭೀತ ಪತ್ರಿಕೋದ್ಯಮ, ನೀತಿವಂತ ರಾಜಕೀಯಕ್ಕೆ ಅಚ್ಚಳಿಯದ ಒಂದು ಹೆಸರು ಮೋತಿಲಾಲರೆಂದರೆ ಉತ್ಪ್ರೇಕ್ಷೆಯಲ್ಲ.