ಮೋತಿಲಾಲ್ ನೆಹರುಬಡತನದಲ್ಲಿ ಬಾಲ್ಯ, ವಿದ್ಯಾರ್ಥಿಜೀವನ. ಅನಂತರ ರಾಜಮಹಾ ರಾಜರುಗಳು ಸರಿಗಟ್ಟಲಾರದ ಸಂಪತ್ತು, ವೈಭವ. ಬ್ರಿಟಿಷ್ ಚಕ್ರವರ್ತಿಯ ಅತಿಥಿ. ಅನಂತರ ಭಾರತದ ಸ್ವಾತಂತ್ರ್ಯದ ಹೋರಾಟದ ದಿಟ್ಟ ಸೇನಾನಿ. ಸೆರೆಮನೆ ಯನ್ನೂ ಕಂಡರು. ಇವರ ಮಗ ಜವಾಹರಲಾಲರು, ಮೊಮ್ಮಗಳು ಇಂದಿರಾ ಗಾಂಧಿ.

ಮೋತೀಲಾಲ್ ನೆಹರೂ

ಜವಾಹರಲಾಲ್ ನೆಹರೂ ಅವರ ಹೆಸರು ಕೇಳದವರು ಅತಿ ವಿರಳ ಈ ದೇಶದಲ್ಲಿ. ಇವರ ತಂದೆಯೇ ಮೋತೀಲಾಲ್ ನೆಹರೂ. ತಾಯಿ ಸ್ವರೂಪರಾಣಿ. ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ ವಿಜಯಲಕ್ಷ್ಮಿ ಪಂಡಿತ್ ಮತ್ತು ಪ್ರಸಿದ್ಧ ಲೇಖಕಿ ಕೃಷ್ಣಾ ಹತೀಸಿಂಗ್ ಮೋತೀಲಾಲರ ಇಬ್ಬರು ಹೆಣ್ಣುಮಕ್ಕಳು. ಜವಾಹರಲಾಲರ ಮಗಳು ಭಾರತದ ಪ್ರಧಾನಿ ಇಂದಿರಾ ಗಾಂಧಿ. ಈ ರೀತಿ ಕುಟುಂಬದ ಎಲ್ಲ ವ್ಯಕ್ತಿಗಳೂ ಖ್ಯಾತಿ ಪಡೆದವರು.

ಕಷ್ಟದ ಬಾಲ್ಯ

ಮೋತೀಲಾಲರು ೧೮೬೧ರ ಮೇ ೬ ರಂದು ಜನಿಸಿದರು. ಇದೇ ದಿನಾಂಕವೇ ವಿಶ್ವಕವಿ ರವೀಂದ್ರನಾಥ ಠಾಕೂರರೂ ಹುಟ್ಟಿದ್ದು. ಮೋತಿಲಾಲರಿಗೆ ತಂದೆಯನ್ನು ನೋಡುವ ಸೌಭಾಗ್ಯವೂ ಇರಲಿಲ್ಲ. ಮೋತೀಲಾಲರ ತಂದೆ ಗಂಗಾಧರರು, ತಾಯಿ ಜೀವರಾಣಿ. ೧೮೫೭ ರಲ್ಲಿ ಭಾರತದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಾಗ ಗಂಗಾಧರರು ದೆಹಲಿಯಲ್ಲಿ ಪೊಲೀಸ್ ಅಧಿಕಾರಿ. ಕಷ್ಟಪಟ್ಟು ದೆಹಲಿಯಿಂದ ತಪ್ಪಿಸಿಕೊಂಡು ಆಗ್ರಾಕ್ಕೆ ಬಂದರು. ೧೮೬೧ ರ ಪ್ರಾರಂಭದಲ್ಲಿ ಆತ ತೀರಿಕೊಂಡರು. ಅನಂತರ ಕೆಲವು ತಿಂಗಳಿಗೆ ಮೋತೀಲಾಲರು ಹುಟ್ಟಿದರು. ಇವರ ಅಣ್ಣ ನಂದಲಾಲರ ಪೋಷಣೆಯಲ್ಲೇ ಇವರು ಬೆಳೆದರು. ನಂದಲಾಲರು ಅಲಹಾಬಾದಿನಲ್ಲಿ ಸಣ್ಣ ವಕೀಲರಾಗಿದ್ದರು.

ಸಣ್ಣ ವಯಸ್ಸಿನಲ್ಲೇ ಮೋತೀಲಾಲರು ಪರ್ಷಿಯನ್ ಮತ್ತು ಅರಬ್ಬಿ ಭಾಷೆಗಳನ್ನು ಕಲಿತರು. ಅಲಹಾಬಾದಿನಲ್ಲಿ ಕಾಲೇಜಿಗೆ ಸೇರಿ ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯ ಪಡೆದರು. ಇವರಿಗೆ ಓದುಬರಹಕ್ಕಿಂತ ಆಟದಲ್ಲಿಯೇ ಹೆಚ್ಚು ಆಸಕ್ತಿ. ಒಳ್ಳೆಯ ಸ್ಫುರದ್ರೂಪಿ. ಲವಲವಿಕೆಯಿಂದ ಕೂಡಿದ ಬಾಲಕ. ಆದ್ದರಿಂದ ಎಲ್ಲರಿಗೂ ಇವನಲ್ಲಿ ಅಕ್ಕರೆ. ಬಿ.ಎ. ಪರೀಕ್ಷೆಯ ಮೊದಲ ದಿನದ ಪ್ರಶ್ನಪತ್ರಿಕೆಗೆ ತೃಪ್ತಿಕರವಾಗಿ ಉತ್ತರ ಬರೆಯಲಿಲ್ಲವೆಂದು ಭಾವಿಸಿ ಮುಂದಿನ ಪರೀಕ್ಷೆಗಳಿಗೆ ಕೂಡಲೇ ಇಲ್ಲ. ಕಡೆಗೂ ಬಿ.ಎ. ಡಿಗ್ರಿ ತೆಗೆದುಕೊಳ್ಳಲಿಲ್ಲ.

ಲಕ್ಷ್ಮೀಪುತ್ರ ವಕೀಲ

ಮೋತೀಲಾಲರಿಗೆ ಆಸ್ತಿಪಾಸ್ತಿ ಇರಲಿಲ್ಲ. ಬಿ.ಎ. ಡಿಗ್ರಿಯನ್ನೂ ಪಡೆಯಲಿಲ್ಲ. ಮುಂದೇನು? ತಾವೂ ವಕೀಲರಾಗಲು ನಿರ್ಧರಿಸಿ, ವಕೀಲರ ಪರೀಕ್ಷೆಗೆ ಕುಳಿತರು. ಕಷ್ಟಪಟ್ಟು ಓದಿದರು. ಪರೀಕ್ಷೆಯಲ್ಲಿ ಮೊದಲನೆಯ ಸ್ಥಾನ ಅವರದೇ. ೧೮೮೨ರಲ್ಲಿ ಕಾನ್‌ಪುರದಲ್ಲಿ, ಅವರ ಮನೆತನದ ಗೆಳೆಯರೂ ಹಿರಿಯ ವಕೀಲರೂ ಆಗಿದ್ದ ಪಂಡಿತ ಪ್ರೀತಿನಾಥರೊಡನೆ ವಕೀಲಿ ವೃತ್ತಿ ಪ್ರಾರಂಭಿಸಿದರು.

ಮುಂದೆ ಮೋತೀಲಾಲರು ಅಸಾಧಾರಣ ವಕೀಲರಾದರು. ಇದಕ್ಕೆ ಮುಖ್ಯ ಕಾರಣ ಅವರ ನಿಷ್ಠೆ, ಕಾರ್ಯಶ್ರದ್ಧೆ, ವಿಚಾರಪರತೆ ಮತ್ತು ಇವೆಲ್ಲಕ್ಕೂ ಪುಷ್ಟಿ ಕೊಡುವ ಅವರ ಮೋಹಕ ವ್ಯಕ್ತಿತ್ವ. ಈ ಗುಣಗಳಿಂದ ಮೋತೀಲಾಲರು ಬಹುಬೇಗ ಶ್ರೇಷ್ಠ ವಕೀಲರೆಂದು ಹೆಸರು ಗಳಿಸಿದರು. ಕಕ್ಷಿಗಾರರು ಇವರನ್ನೇ ಹುಡುಕಿಕೊಂಡು ಬರುತ್ತಿದ್ದರು. ಹಣದ ಚೀಲ ಹಿಡಿದು, ‘ನಮ್ಮ ಮೊಕದ್ದಮೆ ದಯಮಾಡಿ ತೆಗೆದುಕೊಳ್ಳಿ. ಎಷ್ಟು ಹಣ ಬೇಕಾದರೂ ನಾವು ಕೊಡುತ್ತೇವೆ’ ಎಂದು ಅಂಗಲಾಚಿ ಬೇಡುತ್ತಿದ್ದರು. ರಾಮಿ ಕಿಶೋರಿ ಎಂಬಾಕೆಗೆ ಸಂಬಂಧಿಸಿದ ದೊಡ್ಡ ಮೊಕದ್ದಮೆ ಇವರಿಗೆ ತಿಂಗಳಿಗೆ ೨೫,೦೦೦ ರೂಪಾಯಿ ತರುತ್ತಿತ್ತು. ಈ ಮೊಕದ್ದಮೆ ಮುಗಿಯಲು ಮೂವತ್ತು ವರ್ಷಗಳ ಕಾಲ ತೆಗೆದುಕೊಂಡಿತು. ಈ ಮೊಕದ್ದಮೆ ಮುಕ್ತಾಯವಾದ ಕೊನೆಯ ಹಂತದಲ್ಲಿ ಒಂದೇ ಕಂತಿನಲ್ಲಿ ಇವರಿಗೆ ೧,೫೨,೦೦೦ ರೂಪಾಯಿ ಬಂದಿತು. ‘‘ಪ್ರಪಂಚದ ಯಾವ ವಕೀಲನೂ ಮೋತೀಲಾಲರಿಗಿಂತ ಹೆಚ್ಚು ಸಾಮರ್ಥ್ಯದಿಂದ ಕಷ್ಟತಮವಾದ ಈ ಕೆಲಸ ನಿರ್ವಹಿಸುತ್ತಿರಲಿಲ್ಲ’’ ಎಂದು ಸರ್ವೋಚ್ಚ ನ್ಯಾಯಾಲಯದ ಸರ್ ಗ್ರಿಮ್‌ವುಡ್ ಮಿಯರ‍್ಸ್ ನುಡಿದಿರುತ್ತಾರೆ. ಇದು ಮೋತೀಲಾಲರ ದಕ್ಷತೆ, ಸಾಮರ್ಥ್ಯಗಳಿಗೆ ನಿದರ್ಶನ. ತಮ್ಮ ಅರವತ್ತೆರಡನೆಯ ಮುಪ್ಪಿನಲ್ಲಿ ಅವರು ದಿನಕ್ಕೆ ಎರಡು ಸಾವಿರ ರೂಪಾಯಿ ‘ಫೀಸ್’ ಪಡೆಯುತ್ತಿದ್ದರು.

ಮೋತೀಲಾಲರಿಗೆ ಇಪ್ಪತ್ತು ವರ್ಷವಾಗುವುದರೊಳಗೆ ಮದುವೆಯಾಯಿತು. ಹೆಂಡತಿ ಮಗುವನ್ನು ಹಡೆದರು; ತಾಯಿ ಮಗು ತೀರಿಕೊಂಡರು. ಸ್ವಲ್ಪ ಕಾಲದ ಅನಂತರ ಮೋತೀಲಾಲರು ಮತ್ತೆ ಮದುವೆಯಾದರು. ಹೆಂಡತಿ ಸ್ವರೂಪರಾಣಿ ಕಾಶ್ಮೀರದಿಂದ ಬಂದ ಒಂದು ಕುಟುಂಬದವರು. ಬಹು ಚೆಲುವೆ. ಮೋತೀಲಾಲರ ಮನೆಯ ಜೀವನ ತುಂಬಾ ಸಂತೋಷದಿಂದ ಸಾಗಿತು.

ಅವರ ಚೊಚ್ಚಲ ಮಗು- ಗಂಡುಮಗು-ಹೆಚ್ಚು ದಿನ ಬದುಕಲಿಲ್ಲ. ಎರಡನೆಯ ಮಗ ೧೮೮೯ ರ ನವೆಂಬರ್ ೧೪ ರಂದು ಹುಟ್ಟಿದ. ಈತನೇ ಜವಾಹರಲಾಲ್ ನೆಹರೂ. ೧೯೦೦ ರಲ್ಲಿ ವಿಜಯಲಕ್ಷ್ಮೀ, ೧೯೦೭ರಲ್ಲಿ ಕೃಷ್ಣಾ ಹುಟ್ಟಿದರು.

ವೈಭವದ ಮಡಿಲಲ್ಲಿ

ಮೋತೀಲಾಲರು ಉದಾರ ಹೃದಯಿಗಳು. ಉದಾರ ಚರಿತರು. ಸಣ್ಣತನ ಅವರ ಹತ್ತಿರವೇ ಸುಳಿಯುತ್ತಿರಲಿಲ್ಲ. ಒಂದು ಬಾಗಿಲಿನಿಂದ ಲಕ್ಷ್ಮಿ ಪ್ರವೇಶಿಸುತ್ತಿದ್ದಂತೆ, ಮತ್ತೊಂದು ಬಾಗಿಲಿನಿಂದ ಬಂದ ಹಣವೆಲ್ಲವೂ ಗಂಗಾ ಪ್ರವಾಹದಂತೆ ಹರಿದುಹೋಗುತ್ತಿತ್ತು. ಗಳಿಕೆ ಹೆಚ್ಚಿದಂತೆ ಅವರ ಜೀವನ ಕ್ರಮವೂ ಬದಲಾವಣೆ ಆಗುತ್ತ ಬಂತು. ೧೯೦೦ ರಲ್ಲಿ ಅಲಹಾಬಾದಿನ ಹೊರವಲಯದಲ್ಲಿ ದೊಡ್ಡ ಬಂಗಲೆ ಕೊಂಡರು. ಅದಕ್ಕೆ ‘‘ಆನಂದ ಭವನ’’ ಎಂದು ಹೆಸರಿಟ್ಟರು. ಈಜು ಕೊಳಗಳಿಂದಲೂ ಹೂದೋಟಗಳಿಂದಲೂ ಅದರ ಭವ್ಯತೆಯನ್ನು ಹೆಚ್ಚಿಸಿದರು. ಈಜು ಕೊಳವನ್ನು ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಬೆಳಗಿಸುತ್ತಿದ್ದರು. ಈ ಬೆಡಗು ನೋಡುವುದಕ್ಕಾಗಿ ಜನ ತಂಡ ತಂಡವಾಗಿ ಬರುತ್ತಿದ್ದರು. ಎಲ್ಲ ಮಕ್ಕಳೂ ಈಜು ಕಲಿತರು. ಲಂಡನ್ ಮತ್ತು ಪ್ಯಾರಿಸ್ ನಗರಗಳಿಗೆ ಹೋಗಿ ಆನಂದ ಭವನಕ್ಕೆ ಅಗತ್ಯವೆನಿಸಿದ ಕುರ್ಚಿ, ಮಂಚ, ಮೇಜು, ಪಿಂಗಾಣಿ ಮತ್ತು ಗಾಜಿನ ಸಾಮಾನು ಎಲ್ಲವನ್ನೂ ಕೊಂಡು ತಂದರು. ಒಂದು ಮೋಟಾರ್ ಕಾರ್ ಸಹ ಮನೆ ಸೇರಿತು. ಈ ಜಿಲ್ಲೆಯಲ್ಲಿ ಬಳಕೆಗೆ ಬಂದ ಮೋಟಾರ್ ವಾಹನಗಳಲ್ಲಿ ಇದೇ ಮೊದಲನೆಯದು. ಮೋತೀಲಾಲರೇ ಇದನ್ನು ನಡೆಸುತ್ತಿದ್ದರು. ಮನೆಯಲ್ಲಿ ನೂರಾರು ನೌಕರರು ಹಿಂದು-ಮುಸ್ಲಿಂ-ಕೆಸ್ತ ಎಲ್ಲರೂ ಇರುತ್ತಿದ್ದರು.

ಮೋತೀಲಾಲರಿಗೆ ಕುದುರೆಯ ಮೇಲೆ ತುಂಬ ಪ್ರೀತಿ. ದೃಷ್ಟಿಗೆ ಬಿದ್ದ ಉತ್ತಮ ಕುದುರೆ ಅವರ ಮನೆ ಸೇರುತ್ತಿತ್ತು. ಮನೆಯಲ್ಲಿ ಐದಾರು ಅರಬ್ಬಿ ಕುದುರೆಗಳು, ಕುದುರೆ ಗಾಡಿಗಳು. ನಡೆಯುವ ಮೊದಲೇ ಮಕ್ಕಳೆಲ್ಲರೂ ಕುದುರೆ ಸವಾರಿ ಮಾಡುತ್ತಿದ್ದರು. ಮನೆಯಲ್ಲಿ ಬೇಟೆನಾಯಿಗಳು ಅನೇಕ. ಬೇಸರಿಕೆ ಆದಾಗ ಕುದುರೆ ಹತ್ತಿ, ಹೆಗಲಿಗೆ ಬಂದೂಕು ಏರಿಸಿ, ಸಮೀಪದ ಗುಡ್ಡಗಾಡುಗಳಿಗೆ ಬೇಟೆಯಾಡಲು ಹೋಗುವುದುಂಟು. ಮನೆ ದೊಡ್ಡ ಅನ್ನಛತ್ರ. ಮೂರು ಪಾಕಶಾಲೆಗಳು. ಪ್ರತಿದಿನ ಸಂಜೆ ಭೋಜನ ಕೂಟ. ಈ ಕೂಟಕ್ಕೆ ಲೆಫ್ಟಿನೆಂಟ್ ಗವರ್ನರ್ ಮೊದಲಾಗಿ ಉನ್ನತ ಇಂಗ್ಲಿಷ್ ಮತ್ತು ಭಾರತೀಯ ಅಧಿಕಾರಿಗಳು, ಸ್ನೇಹಿತರು ಬರುತ್ತಿದ್ದರು. ಮುಸ್ಲಿಂ, ಹಿಂದು, ಕೆಸ್ತರು ಎಲ್ಲರೂ ಬರುವರು. ಅವರವರ ಮತಧರ್ಮ ಪದ್ಧತಿಗಳಿಗೆ ಅನುಗುಣವಾಗಿ ಅಡುಗೆ, ಊಟ. ಮೋತೀಲಾಲರು ಸಸ್ಯಾಹಾರಿಗಳಾಗಿರ ಲಿಲ್ಲ. ಪಾಶ್ಚಾತ್ಯ ಮದ್ಯಪಾನೀಯಗಳು ಧಾರಾಳವಾಗಿ ಹರಿಯುತ್ತಿದ್ದವು. ಇವರ ಮನೆಗೆ ಆಹ್ವಾನಿಸಲ್ಪಡುವುದೇ ಒಂದು ಗೌರವ ಎಂದು ಜನ ಭಾವಿಸುತ್ತಿದ್ದರು. ಊಟದ ಜೊತೆಗೆ ಮಾತಿನ ರಸದೌತಣ. ತಮ್ಮ ಮಾತಿನಿಂದ, ಹಾಸ್ಯದ ಚಟಾಕಿಗಳಿಂದ ಅತಿಥಿಗಳ ಮನಸ್ಸನ್ನು ಮೋತೀಲಾಲರು ಸೂರೆಗೊಳ್ಳುತ್ತಿದ್ದರು.

ಪಾಶ್ಚಾತ್ಯ ಪ್ರಭಾವ

ಮೋತೀಲಾಲರು ಆರು ಸಾರಿ ಯೂರೋಪಿಗೆ ಹೋಗಿ ಬಂದರು. ಹಲವು ಬಾರಿ ಸಂಸಾರ ಸಮೇತರಾಗಿ ಹೋಗಿದ್ದರು. ಒಮ್ಮೆ ರಷ್ಯಾಕ್ಕೂ ಕುಟುಂಬ ಸಹಿತ ಹೋಗಿದ್ದರು. ಒಮ್ಮೊಮ್ಮೆ ಹೋಗಿಬಂದಾಗಲೂ ಪಾಶ್ಚಾತ್ಯರ ಅನುಕರಣೆ ಅಧಿಕವಾಗುತ್ತಿತ್ತು. ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸಿಕೊಡಲು ಹೂವರ್ ಎಂಬ ಇಂಗ್ಲಿಷ್ ಉಪಾಧ್ಯಾಯಿನಿಯನ್ನು ಇಂಗ್ಲೆಂಡಿನಿಂದ ಕರೆತಂದರು. ಮನೆಯಲ್ಲಿ ಮಕ್ಕಳ ಜೊತೆಯಲ್ಲೇ ಈಕೆ ಇರುತ್ತಿದ್ದಳು. ಮನೆಯವರೆಲ್ಲರೂ ಇಂಗ್ಲಿಷಿನಲ್ಲೇ ಮಾತನಾಡಲು ಪ್ರೋತ್ಸಾಹ ಕೊಡುತ್ತಿದ್ದರು. ಮೋತೀಲಾಲರ ಉಡುಗೆ ತೊಡಿಗೆಗಾಗಿಯೇ ಮೂರು ಪ್ರತ್ಯೇಕ ಕೊಠಡಿಗಳು. ಲಂಡನ್ ಮತ್ತು ಪ್ಯಾರಿಸ್ ನಗರಗಳಿಗೆ ಹೋದಾಗಲೆಲ್ಲ ನವೀನ ಉಡುಪು, ಹ್ಯಾಟ್, ಪಾದರಕ್ಷೆ ತರುತ್ತಿದ್ದರು. ಪ್ರಸಿದ್ಧ ತಯಾರಕರು ಇವನ್ನು ಸಿದ್ಧಪಡಿಸುತ್ತಿದ್ದರು.

ಪಾಶ್ಚಾತ್ಯರ ಅನುಕರಣೆ ಇಷ್ಟು ಅತಿಯಾಗಿ ಇದ್ದರೂ ಎಂದೂ ಅವರು ಪಾಶ್ಚಾತ್ಯರಿಗೆ ತಲೆಬಾಗಿ ನಡೆಯುತ್ತಿರಲಿಲ್ಲ. ಆತ್ಮಗೌರವ ಉಳಿಸಿಕೊಂಡು ಸರಿಸಮಾನರಾಗಿ ನಡೆದುಕೊಳ್ಳುತ್ತಿದ್ದರು. ಪಾಶ್ಚಾತ್ಯರೂ ಸಹ ಇವರನ್ನು ಅತ್ಯಂತ ಆದರ, ಗೌರವಗಳಿಂದ ಪುರಸ್ಕರಿಸುತ್ತಿದ್ದರು.

ಮಗಳ ಹುಟ್ಟಿದ ಹಬ್ಬ

ಒಮ್ಮೆ ಹೆಂಡತಿ ಮತ್ತು ಮಗಳು ವಿಜಯಲಕ್ಷ್ಮಿ ಇವರೊಡನೆ ಜರ್ಮನಿಗೆ ಹೋಗಿದ್ದರು. ಮಗಳನ್ನು ಅಕ್ಕರೆಯಿಂದ ‘ನನ್ನಿ’ ಎಂದು ಕರೆಯುತ್ತಿದ್ದರು. ಆಗ ಅವಳಿಗೆ ಐದು ವರ್ಷ. ಬೆಡೆಂಸ್ ಎಂಬ ಸಣ್ಣ ಊರಿನ ಹೋಟೆಲಿನಲ್ಲಿ   ತಂಗಿದ್ದರು. ಮಗಳ ಹುಟ್ಟುಹಬ್ಬ ವೈಭವದಿಂದ ಆಚರಿಸಬೇಕೆಂಬ ಆಸೆ ಹುಟ್ಟಿತು. ಆ ಊರಿನ ೪೦೦ ಮಕ್ಕಳಿಗೂ ಹೋಟೆಲಿನಲ್ಲಿ ತಿಂಡಿ ವ್ಯವಸ್ಥೆ ಮಾಡಿಸಿದರು. ನನ್ನಿ ಭಾರತದ ರಾಣಿ ಎಂದು ಎಲ್ಲ ಮಕ್ಕಳೂ ಅವಳ ಕೈ ಕುಲುಕಿದರು, ಹಾಡಿದರು, ಕುಣಿದು ಕುಪ್ಪಳಿಸಿದರು. ಊರಿಗೆ ಊರೇ ಈ ತಮಾಷೆ ನೋಡಲು ಬಂತು. ಹೋಟೆಲಿನ ಆವರಣವೆಲ್ಲ ತುಂಬಿ ಹೋಯಿತು. ಹೋಟೆಲಿನ ಮಾಲಿಕ ಮತ್ತು ಅಲ್ಲಿ ತಂಗಿದ್ದ ಅತಿಥಿಗಳು ನನ್ನಿಯ ಮೇಲೆ ಹೂವಿನ ಮಳೆ ಕರೆದರು. ನನ್ನಿ ರಾಣಿಯ ಠೀವಿಯಲ್ಲೇ ನಡೆದುಕೊಂಡಳು. ಸಂಭ್ರಮವೇ ಸಂಭ್ರಮ. ಮೋತೀಲಾಲರು ಸಂತೋಷದಿಂದ ಹಿಗ್ಗಿದರು.

ಪತ್ನಿ ಸ್ವರೂಪರಾಣಿಗೆ ಪಾಶ್ಚಾತ್ಯ ಸಂಸ್ಕೃತಿ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಹಿಂದು ಪದ್ಧತಿಗೆ ಅನುಗುಣವಾಗಿ ಆಕೆ ನಡೆದುಕೊಳ್ಳುತ್ತಿದ್ದರು. ಹಬ್ಬ ಹರಿದಿನಗಳನ್ನು ತಪ್ಪದೆ ಆಚರಿಸುತ್ತಿದ್ದರು. ಮೋತೀಲಾಲರೂ ಇದರಲ್ಲಿ ಭಾಗವಹಿಸುತ್ತಿದ್ದರು.

ಬ್ರಿಟಿಷ್ ಚಕ್ರವರ್ತಿಯ ಅತಿಥಿ

೧೯೧೧ ರಲ್ಲಿ ದಿಲ್ಲಿಯಲ್ಲಿ ಐದನೇ ಜಾರ್ಜ್ ಚಕ್ರವರ್ತಿಗಳ ಕಿರೀಟಧಾರಣೆ ಮಹೋತ್ಸವ ಅತಿ ಸಂಭ್ರಮದಿಂದ ನಡೆಯಿತು. ದರ್ಬಾರಿಗೆ ರಾಜಮಹಾರಾಜರು, ಬಿರುದಾಂಕಿತರು, ಉನ್ನತ ಅಧಿಕಾರಿಗಳು ಆಹ್ವಾನಿತರಾಗಿದ್ದರು. ದಿಲ್ಲಿಯ ಬಳಿ ೨೫ಚದರ ಮೈಲಿಗಳ ವಿಸ್ತೀರ್ಣದಲ್ಲಿ ಅತಿಥಿಗಳಿಗಾಗಿ ಡೇರೆಗಳ ನಗರವೇ ನಿರ್ಮಾಣವಾಗಿತ್ತು. ಸಕಲ ಆಧುನಿಕ ಸೌಲಭ್ಯಗಳನ್ನೂ ಒದಗಿಸಲಾಗಿತ್ತು. ಕುಟುಂಬ ಸಹಿತ ಬರುವಂತೆ ಮೋತೀಲಾಲರಿಗೆ ಚಕ್ರವರ್ತಿಗಳಿಂದ ಕರೆ ಬಂದಿತ್ತು.

ಮೋತೀಲಾಲರು ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಡನೆ ವಿಶೇಷ ರೈಲಿನಲ್ಲಿ ದಿಲ್ಲಿಗೆ ಹೋದರು. ಪ್ರಾಂತದ ಲೆಫ್ಟಿನಂಟ್ ಗವರ್ನರ್ ಡೇರೆಯ ಪಕ್ಕದಲ್ಲೇ ಇವರ ಡೇರೆ. ಅವರೇ ಇವರ ಸೌಲಭ್ಯದ ವಿಚಾರಕರಾಗಿದ್ದರು. ದರ್ಬಾರಿಗೆ ಇಂಥ ಉಡುಪಿನಲ್ಲೇ ಬರಬೇಕು ಎಂದು ಮೊದಲೇ ತಿಳಿಸಲಾಗಿತ್ತು. ಈಗ ಜವಾಹರಲಾಲ ಇಂಗ್ಲೆಂಡಿನಲ್ಲಿ ಓದುತ್ತಿದ್ದರು. ತಂದೆಗೆ ಲಂಡನ್ನಿನಲ್ಲಿ ತಯಾರಿಸಿದ ಉಡುಪು, ಕೈಚೀಲ, ಕಾಲುಚೀಲ, ಬೂಟ್ಸು, ಹ್ಯಾಟು ಎಲ್ಲವನ್ನೂ ಕಳುಹಿಸಿಕೊಟ್ಟರು. ಪ್ರತಿಯೊಂದೂ ಸುಪ್ರಸಿದ್ಧ ತಯಾರಕರಿಂದಲೇ ಸಿದ್ಧಪಡಿಸಲ್ಪಟ್ಟವು.

ಶೀಘ್ರ ಕೋಪ

ಮೋತೀಲಾಲರದು ಜ್ವಾಲಾಮುಖಿಯಂತಹ ವ್ಯಕ್ತಿತ್ವ. ಅಂತಹ ಶಕ್ತಿ-ಅಂತಹ ಕೋಪ. ಒಮ್ಮೆ ಮೋತೀಲಾಲರ ಮನೆಯಲ್ಲಿ ಔತಣ. ಆಗ ಒಬ್ಬ ನೌಕರ ತನ್ನ ಷರಟಿನ ತೋಳಿನಿಂದ ತಟ್ಟೆ ಒರೆಸಿದ. ಮೋತೀಲಾಲರು ಇದನ್ನು ಗಮನಿಸಿದರು. ಕೋಪ ಬಂತು. ಎದ್ದು ದಬದಬನೆ ಅವನ ಬೆನ್ನಿನ ಮೇಲೆ ಗುದ್ದಿದರು. ವಸ್ತ್ರದಿಂದ ಒರೆಸದೆ ಷರಟಿನಿಂದ ಒರೆಸಿದ್ದೇ ಅವನ ಅಪರಾಧ. ನೌಕರ ಕ್ಷಮೆ ಬೇಡಿದ ಮೇಲೆ ಅವರ ಕೋಪ ಇಳಿಯಿತು.

ಮುದ್ದಿನ ಮಗ

ಮೋತೀಲಾಲರಿಗೆ ಜವಾಹರಲಾಲ್ ಒಬ್ಬನೇ ಮಗ. ಸಹಜವಾಗಿಯೇ ತಂದೆತಾಯಿ ಇಬ್ಬರಿಗೂ ಅವನ ಮೇಲೆ ಅಪಾರ ಪ್ರೇಮ. ತನ್ನ ಮಗ ಅತ್ಯಂತ ಶ್ರೇಷ್ಠ ವ್ಯಕ್ತಿ ಆಗಬೇಕು ಎಂಬ ಆಸೆ ತಂದೆಗೆ. ಇತರ ಹುಡುಗರೊಡನೆ ಸೇರಿದರೆ ಮಗ ಕೆಟ್ಟುಹೋದಾನು ಎಂಬ ಶಂಕೆ. ಆದ್ದರಿಂದ ಮಕ್ಕಳಿಗೆ ಮನೆಯಲ್ಲೇ ಶಾಲೆ. ಇಂಗ್ಲಿಷ್ ಉಪಾಧ್ಯಾಯರಿಂದ ಇಂಗ್ಲಿಷ್, ಮುಸ್ಲಿಂ ಗುರುಗಳಿಂದ ಅರಬ್ಬಿ ಮತ್ತು ಪರ್ಷಿಯನ್ ಪಾಠ. ಕುದುರೆ ಸವಾರಿ, ಈಜುವುದು, ಸೈಕಲ್ ನಡೆಸುವುದು ಎಲ್ಲದರಲ್ಲೂ ಪ್ರಾವೀಣ್ಯ.

ಅತಿ ಮುದ್ದಿನಿಂದ ಮಗ ಕೆಟ್ಟುಹೋದಾನು ಎಂಬ ಭೀತಿ ಮೋತೀಲಾಲರಿಗಿತ್ತು. ಒಮ್ಮೆ ಮೋತೀಲಾಲರು ಮೇಜಿನಮೇಲೆ ಎರಡು ಪೆನ್‌ಗಳನ್ನು ಇಟ್ಟಿದ್ದರು. ಅಪ್ಪನಿಗೆ ಎರಡೇಕೆ ಎಂದು ಮುಗ್ಧ ಮಗು ಜವಾಹರ ಒಂದನ್ನು ತನ್ನ ಕಿಸೆಗೆ ಸೇರಿಸಿದ. ಒಂದು ಪೆನ್ ಯಾರು ತೆಗೆದುಕೊಂಡರು ಎಂದು ತಂದೆ ಕಿಡಿಕಿಡಿ ಆದರು. ನಿಜ ಹೇಳಲು ಜವಾಹರ ಅಂಜಿದ. ತಾಯಿಯ ಹಿಂದೆ ಹೋಗಿ ಅವಿತುಕೊಂಡ. ಮಗನನ್ನು ಎಳೆದು ತಂದು ನಾಲ್ಕು ಬಾರಿಸಿದರು. ಬಾಸುಂಡೆ ಬಂತು. ಹೀಗೆ ಹೊಡೆದೆನಲ್ಲ ಎಂದು ದುಃಖ ಪಟ್ಟರು. ಗಾಯಕ್ಕೆ ತಾವೇ ಮುಲಾಮು ಲೇಪಿಸಿದರು.

ಮಗ ಇಂಗ್ಲೆಂಡಿನಲ್ಲಿ

ಇಂಗ್ಲೆಂಡಿನ ಶ್ರೀಮಂತರು ತಮ್ಮ ಮಕ್ಕಳನ್ನು ಹ್ಯಾರೋ ಶಾಲೆಗೆ ಸೇರಿಸುವುದು ವಾಡಿಕೆ. ಜವಾಹರನನ್ನೂ ಇದೇ ಶಾಲೆಗೆ ಸೇರಿಸಲು ತಂದೆ ನಿಶ್ಚಯಿಸಿದರು. ಆಗ ಜವಾಹರನ ವಯಸ್ಸು ಹದಿನೈದು. ಮೋತೀಲಾಲರು ಇಂಗ್ಲೆಂಡಿಗೆ ಕುಟುಂಬ ಸಮೇತ ಹೋಗಿ ಮಗನನ್ನು ಹ್ಯಾರೋ ಶಾಲೆಗೆ ಸೇರಿಸಿದರು.

ಇಲ್ಲಿನ ಓದು ಮುಗಿದ ತರುವಾಯ ಜವಾಹರ ಕೇಂಬ್ರಿಜ್ ವಿಶ್ವವಿದ್ಯಾಲಯ ಸೇರಿದ. ಎರಡನೆಯ ಶ್ರೇಣಿಯಲ್ಲಿ ಉತ್ತೀರ್ಣನಾದ. ಅನಂತರ ಲಾ ಕಾಲೇಜು ಸೇರಿ ಡಿಗ್ರಿ ಪಡೆದುಕೊಂಡ. ಮಗನನ್ನು ಸಿವಿಲ್ ಸರ್ವಿಸ್ ಹುದ್ದೆಯ ಪರೀಕ್ಷೆಗೆ ಓದಿಸಲು ತಂದೆ ಯೋಚಿಸಿದರು. ಇದಕ್ಕಾಗಿ ಜವಾಹರ ಇಂಗ್ಲೆಂಡಿನಲ್ಲಿ ಇನ್ನೂ ಎರಡು ವರ್ಷಕಾಲ ಇರಬೇಕಾಗುತ್ತಿತ್ತು. ಇಷ್ಟು ದೀರ್ಘಕಾಲ ಮಗನಿಂದ ಅಗಲಿರುವುದು ತಂದೆತಾಯಿ ಇಬ್ಬರಿಗೂ ಬೇಡವೆನಿಸಿತು. ಅಲ್ಲದೆ ಈ ಪರೀಕ್ಷೆಯಲ್ಲಿ ಭಾರತೀಯರನ್ನು ಕಡೆಗಣಿಸುವುದು ವಾಡಿಕೆಯಾಗಿತ್ತು. ಬಿಳಿಯ-ಕರಿಯ ಈ ವ್ಯತ್ಯಾಸ. ಈ ಕಾರಣಗಳಿಂದ ಮಗನನ್ನು ಭಾರತಕ್ಕೆ ಬರಮಾಡಿಕೊಂಡರು.

ಮಗನ ಓದಿಗಾಗಿ ತಿಂಗಳಿಗೆ ಸಾವಿರಾರು ರೂಪಾಯಿಗಳ ವೆಚ್ಚ. ಅಷ್ಟನ್ನೂ ಜವಾಹರ ವೆಚ್ಚಮಾಡಿಬಿಡುತ್ತಿದ್ದ. ಒಮ್ಮೆ ತನಗೆ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ಕಷ್ಟದಲ್ಲಿದ್ದ ಒಬ್ಬ ಭಾರತೀಯ ವಿದ್ಯಾರ್ಥಿಗೆ ಸಾಲವಾಗಿ ಕೊಟ್ಟ. ಕೊಟ್ಟ ಹಣ ಹಿಂದಕ್ಕೆ ಬರಲಿಲ್ಲ. ಇದರಿಂದ ಹಣದ ಕೊರತೆ ಆಯಿತು. ತಂದೆಗೆ ನಿಜ ವಿಷಯ ತಿಳಿಸಿ ಇನ್ನಷ್ಟು ಹಣ ಕಳುಹಿಸುವಂತೆ ಕಾಗದ ಬರೆದ. ತಂದೆಗೆ ಕೋಪ ಬಂತು. ‘ಇಷ್ಟು ಹಣ ಹೇಗೆ ವೆಚ್ಚ ಮಾಡಿದೆ? ಆರು ತಿಂಗಳ ಲೆಕ್ಕ ಕಳುಹಿಸಿಕೊಡು’ ಎಂದು ಮಗನಿಗೆ ಬರೆದರು. ಮಗನಿಗೂ ಅರಳಿತು ಕೋಪ. ‘ಬಸ್ಸಿಗೆ, ರೈಲಿಗೆ, ತಿಂಡಿಗೆ, ಪುಸ್ತಕಕ್ಕೆ ಹೇಗೆ ವೆಚ್ಚಮಾಡಿದೆ ಎಂದು ಕಾಸುಕಾಸಿಗೂ ಲೆಕ್ಕ ಕಳುಹಿಸಬೇಕೇ? ಇದು ನನ್ನಿಂದ ಸಾಧ್ಯವಿಲ್ಲ. ನನ್ನಲ್ಲಿ ನಿಮಗೆ ನಂಬಿಕೆ ಇದ್ದರೆ ಹಣ ಕಳುಹಿಸಿ.  ಇಲ್ಲವಾದರೆ ಕಳುಹಿಸಬೇಡಿ. ಎಲ್ಲಿಯಾದರೂ ಕೂಲಿ ಮಾಡಿ ಶಿಕ್ಷಣ ಮುಗಿಸುತ್ತೇನೆ’ ಎಂದು ನಿಷ್ಠುರವಾಗಿಯೇ ಉತ್ತರ ಬರೆದ.

‘ಅಯ್ಯೋ, ನನ್ನ ಮುದ್ದು ಮಗನಿಗೆ ನೋವಾಗುವ ಇಂಥ ಕಾಗದ ಏಕೆ ಬರೆದೆ?’’ ಎಂದು ಮೋತೀಲಾಲರು ಮರುಗಿದರು. ರಾತ್ರಿಯೆಲ್ಲ ನಿದ್ದೆಯಿಲ್ಲದೆ ಪರಿತಪಿಸಿದರು. ‘ನಿನಗೆ ಅಪಾರ ನಿಧಿ ಬಿಟ್ಟು ಹೋಗಬೇಕೆಂಬುದು ನನ್ನ ಬಯಕೆ ಅಲ್ಲ. ಪ್ರೀತಿ ಮತ್ತು ಹಣ ಈ ಎರಡರಲ್ಲೂ ನನ್ನಿಂದ ನಿನಗೆ ಯಾವ ಕೊರತೆಯೂ ಆಗದು. ಈ ಪ್ರಪಂಚದಲ್ಲಿ ನೀನೇ ನಮಗೆ ಅತ್ಯಂತ ಅಮೂಲ್ಯ ನಿಧಿ. ನೀನು ವರ್ಷವೆಲ್ಲ ದುಡಿದು ಸಂಪಾದಿಸಬಹುದಾದ ಹಣವನ್ನು ನಾನು ಒಂದೇ ದಿವಸದಲ್ಲಿ ಗಳಿಸುತ್ತೇನೆ. ಯಾರಿಗಾಗಿ ಗಳಿಸಬೇಕು? ಚಿಂತಿಸಬೇಡ. ಬಯಸಿದಷ್ಟು ಕಳುಹಿಸಿಕೊಡುತ್ತೇನೆ’ ಎಂದು ಪತ್ರ ಬರೆದರು. ಕಳುಹಿಸಿಕೊಟ್ಟರು. ಮಗ ಎಂದರೆ ಅವರಿಗೆ ಪಂಚಪ್ರಾಣ.

ಕೇಂಬ್ರಿಜಿನಲ್ಲಿ ಓದುತ್ತಿದ್ದಾಗ ಮೋಟಾರ್ ತೆಗೆಸಿಕೊಡು ಎಂದು ತಂದೆಗೆ ಜವಾಹರ ಪತ್ರ ಬರೆದ. ಮೋಟಾರು ಕೊಡಿಸಲು ಅವರಿಗೆ ಕೊರತೆ ಏನೂ ಇರಲಿಲ್ಲ. ಆದರೆ ಪತ್ರಿಕೆಗಳಲ್ಲಿ ಮೋಟಾರು ಅಪಘಾತದ ಸುದ್ದಿ ಅವರು ಓದಿದ್ದರು. ನಿನಗೆ ಮೋಟಾರು ತೆಗೆಸಿಕೊಡಬಹುದು. ಆದರೆ ನೀನು ಎಲ್ಲಿ ಅಪಘಾತಕ್ಕೆ ಒಳಗಾಗುವಿಯೋ ಎಂಬ ಚಿಂತೆ ನಮ್ಮನ್ನು ಕಾಡದೆ ಇರಲಾರದು. ಆದ್ದರಿಂದ ವಾಹನ ಈಗ ಬೇಡ’ ಹೀಗೆ ಉತ್ತರ ಬರೆದರು.

ರಾಜಕೀಯದ ಜಗತ್ತಿನಲ್ಲಿ

ಜವಾಹರ ಇಂಗ್ಲೆಂಡಿನಲ್ಲಿ ಓದುತ್ತಿದ್ದಾಗ ತಂದೆ-ಮಕ್ಕಳಿಬ್ಬರಲ್ಲೂ ದೀರ್ಘ ಪತ್ರ ವ್ಯವಹಾರ ನಡೆಯುತ್ತಲೇ ಇತ್ತು. ಮನೆಯ ವಿಚಾರ ಅಲ್ಲದೆ ದೇಶದ ಆಗುಹೋಗುಗಳ ಪ್ರಸ್ತಾಪವೂ ನಡೆಯುತ್ತಿತ್ತು. ಅಲ್ಲದೆ ಇಲ್ಲಿನ ವಾರ್ತಾ ಪತ್ರಿಕೆಗಳನ್ನೂ ಮಗನಿಗೆ ಕಳುಹಿಸಿಕೊಡುತ್ತಿದ್ದರು. ಮೋತೀಲಾಲರಿಗೆ ರಾಜಕೀಯದಲ್ಲಿ ಆಸಕ್ತಿ ಕಡಮೆ. ಮಗನಿಗೆ ಅತಿ ಆಸಕ್ತಿ. ಮಗ ತೀವ್ರಗಾಮಿ; ಬೇಗಬೇಗನೆ ಬದಲಾವಣೆಗಳಾಗಬೇಕೆಂಬ ತವಕ. ತಂದೆ ಮಂದ ಪಕ್ಷಕ್ಕೆ ಸೇರಿದವರು; ನಿಧಾನವಾಗಿ ಮುನ್ನಡೆಯುವವರು.

ಕ್ರಮೇಣ ಮೋತೀಲಾಲರನ್ನೂ ರಾಜಕೀಯ ಎಳೆದು ಕೊಂಡಿತು. ೧೯೦೭ ರಲ್ಲಿ ಗೋಖಲೆಯವರು ಅಲಹಾಬಾದಿಗೆ ಬಂದಾಗ ಮೋತೀಲಾಲರ ಅತಿಥಿಯಾದರು. ಅವರ ಭಾಷಣಕ್ಕೆ ಮೋತೀಲಾಲರೇ ಅಧ್ಯಕ್ಷರು. ಮಿತವಾದಿ ರಾಜಕಾರಣಿಗಳ ಪ್ರಾಂತೀಯ ಸಭೆ ನಡೆಯಬೇಕೆಂದು ತೀರ್ಮಾನವಾದಾಗ ಮೋತೀಲಾಲರು ಅಧ್ಯಕ್ಷತೆ ವಹಿಸಬೇಕಾಯಿತು. ತಂದೆಯ ಭಾಷಣದಲ್ಲಿ ಸರ್ಕಾರವನ್ನು ಟೀಕಿಸಿದ್ದು ಸಾಲದು ಎನಿಸಿತು ಇಂಗ್ಲೆಂಡಿನಲ್ಲಿದ್ದ ಮಗನಿಗೆ.

ಲಾಲಾ ಲಜಪತರಾಯರು ‘ಪಂಜಾಬಿನ ಕೇಸರಿ’ ಎಂದು ಖ್ಯಾತಿ ಗಳಿಸಿದ ದೇಶಭಕ್ತರು. ೧೯೦೭ ರಲ್ಲಿ ಸರ್ಕಾರ ಇವರನ್ನು ಬಂಧಿಸಿ ಸಮುದ್ರದ ಆಚೆಯ ಮಾಂಡಲೆಗೆ ಕಳುಹಿಸಿತು. ತಂದೆ-ಮಕ್ಕಳಿಬ್ಬರನ್ನೂ ಇದು ಉದ್ರೇಕಗೊಳಿಸಿತು. ಇಂಥ ಸರ್ಕಾರದೊಡನೆ ನಾವು ಸಹಕರಿಸಬಹುದೇ ಎಂದ ಮಗ.

ತಂದೆ-ಮಗನ ನಡುವೆ ಪತ್ರಗಳಲ್ಲಿ ಭಾರತದ ರಾಜಕೀಯದ ವಿಷಯ ಪ್ರಧಾನವಾಗುತ್ತಿತ್ತು. ಹದಿನೆಂಟು ವರ್ಷದ ಮಗ-ನಲವತ್ತೆಂಟರ ತಂದೆ-ಇವರ ನಡುವೆ ಭಿನ್ನಾಭಿಪ್ರಾಯ ಹರಿತವಾಗುತ್ತಿತ್ತು. ಒಮ್ಮೆ ಮೋತೀಲಾಲರ ಒಂದು ಲೇಖನವನ್ನು ನೋಡಿ ಮಗ, ‘ನಿಮ್ಮ ವಿಷಯ ನನಗೆ ಚೆನ್ನಾಗಿ ಗೊತ್ತಿರದಿದ್ದರೆ ಈ ಲೇಖನ ಬರೆದವರು ಯಾರೋ ಒಬ್ಬ ವಿಶೇಷ ರಾಜಭಕ್ತರೇ ಇರಬೇಕು ಎನ್ನುತ್ತಿದ್ದೆ’ ಎಂದು ಬರೆದ. ‘ಹುಡುಗರು ಹುಡುಗರ ಹಾಗೆ ಇರಬೇಕು’ ಎಂದು ಉತ್ತರಿಸಿದರು ತಂದೆ.

೧೯೧೦ ರಲ್ಲಿ ಮೋತೀಲಾಲರು ಆಗಿನ ಸಂಯುಕ್ತ ಪ್ರಾಂತದ ಶಾಸನ ಸಭೆಯ ಸ್ಥಾನದ ಚುನಾವಣೆಗೆ ನಿಂತರು;ಗೆದ್ದರು. ಸಭೆಗೆ ಹೋದ ದಿನದಿಂದ ಸರ್ಕಾರದ ರೀತಿ ನೀತಿಗಳನ್ನು ಪ್ರಶ್ನಿಸಲು ಪ್ರಾರಂಭಿಸಿದರು. ‘ರಾಜಕೀಯ ಸಭೆಗಳಿಗೆ ಸರ್ಕಾರ ಕಳುಹಿಸುವ ಪೊಲೀಸು ವರದಿಗಾರರಲ್ಲಿ ಎಷ್ಟು ಮಂದಿಗೆ ಶೀಘ್ರಲಿಪಿ ಗೊತ್ತಿದೆ?’ ಇಂತಹ ಪ್ರಶ್ನೆಗಳನ್ನು ಕೇಳಿ ಸರ್ಕಾರವನ್ನು ಪೇಚಿಗೆ ಸಿಕ್ಕಿಸುತ್ತಿದ್ದರು. ಭಾಷಣಗಳಲ್ಲಿ  ಸರ್ಕಾರವನ್ನು ನಿರ್ಭಯವಾಗಿ ಟೀಕಿಸುತ್ತಿದ್ದರು.

ಜನರಿಗೆ ವಿಷಯವನ್ನು ಸರಿಯಾಗಿ ತಿಳಿಸಬೇಕು ಎಂಬ ಉದ್ದೇಶದಿಂದ ಕೆಲವರು ‘ಲೀಡರ್’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಅದರ ಸಂಪಾದಕರು ಮದನ ಮೋಹನ ಮಾಳವೀಯ. ಡೈರೆಕ್ಟರುಗಳ ಮಂಡಲಿಯ ಮೊದಲನೆಯ ಅಧ್ಯಕ್ಷರು ಮೋತೀಲಾಲರು.

೧೯೧೨ ರ ಜುಲೈ ತಿಂಗಳಿನಲ್ಲಿ ಜವಾಹರಲಾಲ್ ಭಾರತಕ್ಕೆ ಹಿಂದಿರುಗಿದರು.

ಸಂಭ್ರಮ ತುಂಬಿ

ತುಳುಕುವ ಮನೆ

ಜವಾಹರಲಾಲರು ಇಂಗ್ಲೆಂಡಿನಿಂದ ಹಿಂತಿರುಗಿ ಬಂದು ತಂದೆಗೆ ಸಹಾಯಕ ವಕೀಲರಾದರು. ೧೯೧೬ ರ ಫೆಬ್ರವರಿ ೮ ರಂದು ಜವಾಹರಮಲ್ ಕೌಲ್ ಎಂಬವರ ಮಗಳು ಕಮಲಾ ಅವರೊಂದಿಗೆ ಜವಾಹರಲಾಲ್ ನೆಹರೂರವರ ಮದುವೆಯಾಯಿತು. ಹತ್ತು ದಿನಗಳ ಸಂಭ್ರಮದ ವಿವಾಹ ನಡೆಯಿತು. ಅಲಹಾಬಾದಿಗೆ ಹಿಂತಿರುಗಿ ಬಂದಮೇಲೆ ಹತ್ತಾರು ದಿನಗಳ ಕಾಲ ಭೋಜನಕೂಟಗಳು ನಡೆದವು.

ತಂದೆಮಗನಲ್ಲಿ ಭಿನ್ನತೆ

ಜವಾಹರಲಾಲ್ ವಿದೇಶದಿಂದ ಬಂದ, ಜೊತೆಗೆ ರಾಜಕೀಯದ ಗಾಳಿಯನ್ನೂ ತಂದ. ತಂದೆ ಮಗನಲ್ಲಿ ವಿಚಾರ ವಿನಿಮಯ ನಡೆಯುತ್ತಿತ್ತು. ಮಗ ಉಗ್ರವಾದಿ, ತಂದೆ ಸೌಮ್ಯವಾದಿ. ಒಂದು ದೇಶ ಮತ್ತೊಂದು ದೇಶದ ಅಡಿಯಾಳಾಗಿ ಇರಲಾಗದು. ಪ್ರಪಂಚದಲ್ಲಿ ದಾಸ್ಯ ಎಲ್ಲೂ ಇರಕೂಡದು. ಎಲ್ಲ ದೇಶಗಳೂ ಸ್ವತಂತ್ರವಾಗಿ ಇರಬೇಕು-ಎಂದು ಜವಾಹರನ ವಾದ. ಬ್ರಿಟಿಷರ ಆಶ್ರಯದಲ್ಲಿ ಭಾರತ ಸ್ವತಂತ್ರವಾಗಿ ಉಳಿಯಲಿ – ಇದು ಮೋತೀಲಾಲರ ವಾದ. ಇಬ್ಬರ ನಡುವೆ ವಾದವಿವಾದ ನಡೆಯುವುದು. ಕೆಲವೊಮ್ಮೆ ಕಾವು ಏರುವುದು, ಮತ್ತೆ ಇಳಿಯುವುದು. ಮಗ ಎಲ್ಲಿ ಹಿಂಸಾವಾದಿ ಆದಾನೋ ಎಂಬ ಭಯ ತಂದೆಗೆ. ಮಗನನ್ನು ಮನೆಯಿಂದ ಎಲ್ಲಿ ಹೊರದೂಡುವರೋ ಎಂಬ ಭಯ ಸ್ವರೂಪರಾಣಿಗೆ. ಕಮಲೆಗೆ ಸಹಜ ಕಳವಳ. ಮಕ್ಕಳಿಗೆ ಅಂಜಿಕೆ. ಕೆಲಕಾಲ ಇದು ಆನಂದ ಭವನದ ಆನಂದವನ್ನು ಕದಡಿದ ವಾತಾವರಣವಾಗಿತ್ತು.

ಗಾಂಧೀಜಿ ಬಂದರು

೧೯೧೫ರಲ್ಲಿ ಗಾಂಧೀಜಿ ದಕ್ಷಿಣ ಆಫ್ರೀಕದಿಂದ ಭಾರತಕ್ಕೆ ಹಿಂದಿರುಗಿದರು. ದಕ್ಷಿಣ ಆಫ್ರಿಕದಲ್ಲಿ ಬಿಳಿಯರೂ ಅವರ ಸರ್ಕಾರವೂ ಬಿಳಿಯರಲ್ಲದವರಿಗೆ ಮಾಡುತ್ತಿದ್ದ ಅನ್ಯಾಯಕ್ಕೆ ಧೀರ ಪ್ರತಿಭಟನೆ ತೋರಿದ ಮಹಾನಾಯಕ ಎಂದು ಅವರು ಜನಪ್ರಿಯರಾಗಿದ್ದರು. ಮೋತೀಲಾಲರಿಗೂ ಜವಾಹರಲಾಲ ರಿಗೂ ಅವರ ಪರಿಚಯ ಆಯಿತು. ಈ ಪರಿಚಯ ನೆಹರೂ ಮನೆತನದ ಚರಿತ್ರೆಯನ್ನೇ ಬದಲಾಯಿಸಿಬಿಟ್ಟಿತು.

೧೯೧೯ ರಲ್ಲಿ ಗಾಂಧೀಜಿ ಅಖಿಲ ಭಾರತದ ಚಳವಳಿಯ ನಾಯಕರಾದರು. ಬ್ರಿಟಿಷ್ ಸರ್ಕಾರ ಮಾಡಿದ ರೌಲತ್ ಶಾಸನ ಎಂಬ ಕರಾಳ ಶಾಸನದ ವಿರುದ್ಧ ಪ್ರತಿಭಟನೆಗೆ ರೂಪ ಕೊಟ್ಟರು. ಸತ್ಯಾಗ್ರಹ ಮಾಡಿ ಸೆರೆಮನೆಗೆ ಹೋಗುವ ಯೋಜನೆ ಜವಾಹರಲಾಲರಿಗೆ ತುಂಬ ಹಿಡಿಸಿತು. ಆದರೆ ಅವರ ತಂದೆಯ ಪ್ರತಿಕ್ರಿಯೆಯೇ ಬೇರೆ; ಸತ್ಯಾಗ್ರಹ ಮಾಡಿ ಜೈಲಿಗೆ ಹೋಗಿ ಸರ್ಕಾರವನ್ನು ಅಲ್ಲಾಡಿಸಲು ಸಾಧ್ಯವೆ? ಎಂದು ಅವರ ಅನುಮಾನ.

ಜೊತೆಗೆ ಮೋತೀಲಾಲರಿಗೆ ಒಂದು ಚಿಂತೆ: ಮಗನೂ ಸತ್ಯಾಗ್ರಹ ಮಾಡಿ ಸೆರೆಮನೆಗೆ ಹೋದರೆ? ಅಲ್ಲಿ ಕೊಡುವ ಅನಾರೋಗ್ಯಕರ ಆಹಾರ ತಿನ್ನಬೇಕು, ನೆಲದ ಮೇಲೆ ಮಲಗಬೇಕು. ರಾಜಕುಮಾರರನ್ನೂ ಮೀರಿಸುವಂತೆ ಸುಖ, ವೈಭವಗಳಲ್ಲಿ ಬೆಳೆದ ಮಗನಿಗೆ ಈ ಗತಿಯೇ?

ಮೋತೀಲಾಲರೇ ಬರಿಯ ನೆಲದ ಮೇಲೆ ಮಲಗಿಕೊಂಡು ಕಂಡುಕೊಂಡರು ಅದರ ಕಷ್ಟವನ್ನು. ಮಗನೂ ಹೀಗೆ ಮಲಗಬೇಕೇ ಎಂದು ಕೊರಗಿದರು.

ಮಹಾತ್ಮರ ಹಿಂಬಾಲಕ ಆಗಬೇಕೆಂದು ಅಲ್ಲವೇ ಮಗ ಆಶಿಸುತ್ತಿರುವುದು, ಆದ್ದರಿಂದ ಗಾಂಧಿಯವರಲ್ಲೇ ತನ್ನ ಸಂಕಟ ತೋಡಿಕೊಳ್ಳೋಣ ಎಂದು ನಿಶ್ಚಯಿಸಿದರು. ರಾಜಕೀಯದಲ್ಲಿ ಇಬ್ಬರ ದೃಷ್ಟಿಯೂ ಭಿನ್ನ. ಆದರೂ ಇಬ್ಬರಲ್ಲಿ ಮಧುರ ಬಾಂಧವ್ಯ ಬೆಳೆದಿತ್ತು. ಮೋತೀಲಾಲರು ವಯಸ್ಸಿನಲ್ಲಿ ಎಂಟು ವರ್ಷ ಹಿರಿಯರು. ‘ನನ್ನ ಮಗನಿಗೆ ಬುದ್ಧಿವಾದ ಹೇಳಿ. ಸತ್ಯಾಗ್ರಹಿ ಆಗಿ ಸೇರಿಸಿಕೊಳ್ಳಬೇಡಿ. ಮಗನನ್ನು ಅಗಲಿ ನಾನು ಬದುಕಲಾರೆ. ಅನೇಕ ವರ್ಷಗಳ ಅನಂತರ ಈಗ ಮಗ, ಸೊಸೆ ಮನೆಗೆ ಬಂದಿದ್ದಾರೆ’ ಹೀಗೆ ತಮ್ಮ ದುಗುಡವನ್ನು ಮಹಾತ್ಮರಲ್ಲಿ ತೋಡಿಕೊಂಡರು.

ಮೋತೀಲಾಲರಿಗೆ ತಮ್ಮ ಮಗನ ಮೇಲಿದ್ದ ಅಪಾರ ಪ್ರೇಮವನ್ನು ಗಾಂಧೀಜಿ ಅರಿತಿದ್ದರು. ಜವಾಹರನನ್ನು ಕಂಡು ಹೇಳಿದರು. ‘‘ನಿನ್ನ ಮಾತಾಪಿತೃಗಳಿಗೆ ನಿನ್ನ ಮೇಲೆ ಅಪಾರ ಪ್ರೇಮ. ಅವರಿಗೆ ನೀನು ದುಃಖ ಕೊಡಬಾರದು. ಈಗಲೇ ನೀನು ಭಾರತಕ್ಕೆ ಮರಳಿ ಬಂದಿರುವೆ. ಇಲ್ಲಿನ ಪರಿಸ್ಥಿತಿ ಅಭ್ಯಾಸಮಾಡು. ದುಡುಕಬೇಡ. ದೇಶ ಸೇವೆಗೆ ಸಾಕಷ್ಟು ಅವಕಾಶವಿದೆ. ಸ್ವಲ್ಪ ನಿಧಾನಿಸು’’.  ಮಹಾತ್ಮರ ಮಾತನ್ನು ಒಪ್ಪಿ, ಜವಾಹರರು ಕೂಡಲೇ ಸತ್ಯಾಗ್ರಹಕ್ಕೆ ಧುಮುಕಲಿಲ್ಲ.

ಬ್ರಿಟಿಷ್ ಸರ್ಕಾರದ

ರಾಕ್ಷಸೀ ಕೃತ್ಯ

ಏಪ್ರಿಲ್ ೧೩, ೧೯೧೯ ರಂದು ಪಂಜಾಬಿನ ಜಲಿಯನ್ ವಾಲಾಬಾಗಿನಲ್ಲಿ ಮಹಾ ದುರಂತ ನಡೆಯಿತು. ಅಂದು ಸಂಜೆ ಸಾರ್ವಜನಿಕ ಸಭೆ ಕರೆಯಲಾಗಿತ್ತು. ಸರ್ಕಾರ ಸಭೆ ನಡೆಯಕೂಡದೆಂದು ಆಜ್ಞೆ ಹೊರಡಿಸಿತು. ಆದರೂ ಜನ ಸೇರಿದರು. ಜನರಲ್ ಡೈಯರ್ ಎಂಬ ಬ್ರಿಟಿಷ್ ಸೇನಾಧಿಕಾರಿಗೆ ಈ ಸುದ್ದಿ ತಿಳಿಯಿತು. ಸರ್ಕಾರದ ಆಜ್ಞೆ ಉಲ್ಲಂಘಿಸಿದವರಿಗೆ ತಕ್ಕ ಪಾಠ ಕಲಿಸಲು ಅವನು ನಿಶ್ಚಯಿಸಿದ. ಸಶಸ್ತ್ರ ಸೇನಾ ಪಡೆಯೊಡನೆ ಸಭಾಸ್ಥಳಕ್ಕೆ ಬಂದ. ಸುತ್ತಲೂ ಗೋಡೆ. ನಡುವೆ ಸಣ್ಣ ಮೈದಾನ. ಇಲ್ಲಿ ಸಾವಿರಾರು ಜನ ನೆರೆದಿದ್ದರು. ಹಠಾತ್ತನೆ ಗುಂಪಿನ ಮೇಲೆ ಗುಂಡು ಹಾರಿಸಲು ಆಜ್ಞಾಪಿಸಿದ. ಗುಂಡಿನ ಸುರಿಮಳೆ ಆಯಿತು. ಜನ ಓಡಿಹೋಗಲೂ ಸಾಧ್ಯವಾಗಲಿಲ್ಲ. ರಾಶಿರಾಶಿಯಾಗಿ ಹೆಣಗಳು ಉರುಳಿದವು. ಅನಂತರ ‘ಮಾರ್ಷಲ್ ಲಾ’ ಎಂದರೆ ಲಷ್ಕರೀ ಶಾಸನ ಜಾರಿ ಮಾಡಲಾಯಿತು. ಜನ ಚಿತ್ರ ವಿಚಿತ್ರ ಹಿಂಸೆ ಮತ್ತು ಅಪಮಾನಗಳಿಗೆ ಗುರಿಯಾದರು.

ಮೋತೀಲಾಲರ

ಕಣ್ಣ ತೆರೆಯಿತು

ಈ ದುರಂತದ ಬಗ್ಗೆ ವಿಚಾರಣೆ ನಡೆಸಲು ಸರ್ಕಾರ ಒಂದು ಸಮಿತಿ ನೇಮಿಸಿತು. ಕಾಂಗ್ರೆಸ್ ಇದನ್ನು ಬಹಿಷ್ಕರಿಸಿ ಮತ್ತೊಂದು ಸಮಿತಿ ನೇಮಿಸಿತು. ಮಹಾತ್ಮಾಗಾಂಧಿ, ಮೋತೀಲಾಲ್ ನೆಹರೂ, ಚಿತ್ತರಂಜನ್ ದಾಸ್ ಮೊದಲಾದ ಮಹಾ ನಾಯಕರು ಈ ಸಮಿತಿಯ ಸದಸ್ಯರು. ವಿಚಾರಣೆ ನಡೆಸಿ ಈ ಸಮಿತಿ ಎರಡು ದೊಡ್ಡ ಸಂಪುಟಗಳ ವರದಿ ಪ್ರಕಟಸಿತು. ಸರ್ಕಾರದ ದುರ್ನಡತೆಯನ್ನು ತೀವ್ರವಾಗಿ ಖಂಡಿಸಿತು. ಈ ಮಹಾ ದುರಂತದಿಂದ ಮೋತೀಲಾಲರಿಗೆ ಬ್ರಿಟಿಷ್ ಸರ್ಕಾರದಲ್ಲಿದ್ದ ವಿಶ್ವಾಸ ನಾಶವಾಯಿತು.

ಇದೇ ವರ್ಷ ಅಮೃತಸರದಲ್ಲಿ ಕಾಂಗ್ರೆಸ್ ಮಹಾಧಿವೇಶನ ನಡೆಯಿತು. ಮೋತೀಲಾಲರು ಈ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದರು. ಜಾಲಿಯನ್‌ವಾಲಾಬಾಗಿನ ದುರಂತ ಹಾಗೂ ಸರ್ಕಾರದ ರೀತಿನೀತಿಯನ್ನು ಕಟುವಾಗಿ ಖಂಡಿಸಿದರು. ಮರಣದಂಡನೆಗೆ ಗುರಿಯಾದ ಇಬ್ಬರು ನಿರಪರಾಧಿಗಳ ಪರ ವಾದಿಸಲು ಅವರಿಗೆ ಅವಕಾಶ ದೊರೆಯಲಿಲ್ಲ. ಮೋತೀಲಾಲರಿಗೆ ಸರ್ಕಾರದಲ್ಲಿ ಇದ್ದ ವಿಶ್ವಾಸ ನುಚ್ಚುನೂರಾಯಿತು.

ಕಲ್ಕತ್ತ ಕಾಂಗ್ರೆಸ್ ಅಧಿವೇಶನ ಅಸಹಕಾರ ಚಳವಳಿಯ ನಿರ್ಣಯ ಅಂಗೀಕರಿಸಿತು. ಕೋರ್ಟು, ಸರ್ಕಾರಿ ಶಾಲೆಗಳು, ಶಾಸನ ಸಭೆಗಳು ಇವುಗಳನ್ನು ಬಹಿಷ್ಕರಿಸಬೇಕು. ವಕೀಲರು ತಮ್ಮ ವೃತ್ತಿ ಬಿಡಬೇಕು. ಸರ್ಕಾರದೊಡನೆ ಸಹಕರಿಸಬಾರದು-ಇದು ಗೊತ್ತುವಳಿಯ ತಿರುಳು. ವಿದೇಶಿ ವಸ್ತು ಬಹಿಷ್ಕಾರ, ಸ್ವದೇಶಿಗೆ ಪ್ರೋತ್ಸಾಹ, ಖಾದಿ ಧಾರಣೆ ಇವೂ ಈ ನಿರ್ಣಯದಲ್ಲಿ ಅಡಕವಾಗಿದ್ದವು.

ಶ್ರೀಮಂತಿಕೆಗೆ ಬೀಳ್ಕೊಡುಗೆ

ಮೋತೀಲಾಲರಿಗೆ ವಕೀಲರಾಗಿ ತಿಂಗಳಿಗೆ ಸಾವಿರಾರು ರೂಪಾಯಿಗಳ ವರಮಾನವಿತ್ತು. ಅವರು ತಮ್ಮ ಕೇಸನ್ನು ಒಪ್ಪಿಕೊಂಡರೆ ಸಾಕು ಎಂದು ಅತಿ ಶ್ರೀಮಂತ ಕಕ್ಷಿಗಾರರು ಕಾಯುತ್ತಿರುತ್ತಿದ್ದರು. ಆದರೂ ಈ ತೀರ್ಮಾನದಂತೆ ಮೋತೀಲಾಲರು ವಕೀಲಿ ವೃತ್ತಿ ಬಿಟ್ಟರು. ಶಾಸನ ಸಭೆಯಿಂದ ಹೊರಬಂದರು. ಮಗಳನ್ನು ಶಾಲೆಯಿಂದ ಬಿಡಿಸಿದರು. ಅತಿ ಬೆಲೆಬಾಳುವ ವಿದೇಶಿ ಉಡುಪು, ಪಾತ್ರೆ, ಪದಾರ್ಥ, ಕುರ್ಚಿ, ಮೇಜು ಇವನ್ನು ಹೊರಹಾಕಿದರು. ಕೆಲವನ್ನು ಮಾರಿದರು. ಕೆಲವನ್ನು ದಾನವಾಗಿ ಕೊಟ್ಟರು. ಕೆಲವನ್ನು ಅಗ್ನಿಗೆ ಅರ್ಪಿಸಿದರು. ಮನೆಯವರೆಲ್ಲರೂ ಒರಟು ಖಾದಿ ಬಟ್ಟೆ ಧರಿಸತೊಡಗಿದರು. ಕುದುರೆಗಳನ್ನು ಮಾರಿದರು. ಸೇವಕರ ಸಂಖ್ಯೆಯನ್ನು ಇಳಿಸಿದರು. ಭೋಗ ಜೀವನ ಸರಳ ಜೀವನಕ್ಕೆ ಇಳಿಯಿತು. ಇಲ್ಲ, ಏರಿತು ಎನ್ನುತ್ತಾರೆ ಮೋತೀಲಾಲರು. ರಾಜಮಹಾರಾಜರುಗಳು ಸರಿಗಟ್ಟಲಾರದ ಸಂಪತ್ತು ಮೋತೀಲಾಲರದು. ತ್ಯಾಗದಲ್ಲಿ, ಸರಳ ಜೀವನದಲ್ಲಿ ಎಂದೂ ಇಲ್ಲದ ಸುಖ ಅವರು ಕಂಡರು. ದೃಢಸಂಕಲ್ಪ, ದೇಶಭಕ್ತಿ, ಪುತ್ರವಾತ್ಸಲ್ಯ ಇದಕ್ಕೆ ಪೋಷಕವಾದವು.

ಜವಾಹರಲಾಲರು ರಾಜಕೀಯದಲ್ಲಿ ಹೆಚ್ಚು ಆಸಕ್ತಿ ವಹಿಸತೊಡಗಿದರು. ರೈಲು ಪ್ರಯಾಣ ಮೂರನೇ ದರ್ಜೆಯಲ್ಲಿ. ಮಗ ಮೂರನೆಯ ತರಗತಿಯಲ್ಲಿ ಪ್ರಯಾಣ ಮಾಡುವುದೂ ತಂದೆಗೆ ಸಹಿಸಲಾಗಲಿಲ್ಲ.

ಪರಿಣಾಮ

ವೆಚ್ಚ ಎಷ್ಟು ಕಡಮೆ ಮಾಡಿಕೊಂಡರೇನು? ಸಂಸಾರ ಸಾಗಿಸಲು ಹಣ ಬೇಕಲ್ಲ? ಕೂಡಿಟ್ಟ ಹಣ ವೆಚ್ಚವಾಗುತ್ತಾ ಬಂತು. ವೃತ್ತಿ ಬಿಟ್ಟರು. ಇದರಿಂದ ವರಮಾನ ಇಲ್ಲದಂತಾಯಿತು. ಸಾಲ ಮಾಡತೊಡಗಿದರು. ಇವರ ಕಷ್ಟ ಅರಿತ ಒಬ್ಬ ಧನಿಕ ಸಹಾಯ ಮಾಡಲು ಬಂದ. ಆತ್ಮಗೌರವ ಇದನ್ನು ತಿರಸ್ಕರಿಸಿತು. ಹುಲಿ ಹುಲ್ಲು ಮೇದೀತೆ?

ಒಬ್ಬ ಕಕ್ಷಿಗಾರ ಒಂದು ಲಕ್ಷ ರೂಪಾಯಿ ತಂದು ನನ್ನ ಮೊಕದ್ದಮೆ ನಡೆಸಿಕೊಡಿ ಎಂದು ಕೇಳಿಕೊಂಡ. ಕೋರ್ಟಿಗೆ ಹೋಗುವುದು ಅಸಹಕಾರ ತತ್ವಕ್ಕೆ ವಿರುದ್ಧ. ಪಕ್ಕದಲ್ಲಿ ಪುಟ್ಟ ಮಗಳಿದ್ದಳು. ‘‘ಏನಮ್ಮ, ಈ ಹಣ ತೆಗೆದುಕೊಳ್ಳಲೇ?’’ ಎಂದು ಕೇಳಿದರು. ‘‘ಬೇಡ, ಬಾಪು’’ ಎಂದಳು ಮಗಳು. ಅದೇ ಆಣತಿ ಆಯಿತು. ಜವಾಹರರೂ ಸಂಪಾದಿಸುತ್ತಿರಲಿಲ್ಲ. ಅವರು ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದರು. ಆ ಕೆಲಸಕ್ಕೆಂದು ಸಂಭಾವನೆ ಪಡೆಯಬಹುದಾಗಿತ್ತು. ಸಂಭಾವನೆ ತೆಗೆದುಕೋ ಎಂದರು ಗಾಂಧೀಜಿ ಸಹ. ಆದರೆ ಮೋತೀಲಾಲರು ಇದಕ್ಕೆ ಸಮ್ಮತಿಸಲಿಲ್ಲ.

ಸೆರೆಮನೆಗೆ

ಈ ವೇಳೆಗೆ ಬ್ರಿಟಿಷ್ ಚಕ್ರವರ್ತಿಯ ಕುಮಾರ ಭಾರತಕ್ಕೆ ಬರಲಿದ್ದ. ಅವನಿಗೆ ಭವ್ಯ ಸ್ವಾಗತ ಕೊಡಬೇಕು ಎಂದು ಸರ್ಕಾರ. ಬಹಿಷ್ಕರಿಸಬೇಕು ಎಂದು ಕಾಂಗ್ರೆಸ್. ತಂದೆ-ಮಕ್ಕಳಿಬ್ಬರೂ ಕಾಂಗ್ರೆಸ್ ಪರ ಪ್ರಚಾರ ನಡೆಸಿದರು. ಪ್ರಚಾರ ತುಂಬ ಯಶಸ್ವಿ ಆಯಿತು. ಒಂದು ಕಾಲದಲ್ಲಿ ಬ್ರಿಟನ್ನಿನ ಚಕ್ರವರ್ತಿಯಿಂದ ‘ಬನ್ನಿ’ ಎಂದು ಆಹ್ವಾನ ಪಡೆದ ಮೋತೀಲಾಲರನ್ನು ಕಂಡು ಈಗ ಆ ಚಕ್ರವರ್ತಿಯ ಸರ್ಕಾರ ಕೆಂಡ ಕಾರಿತು. ತಂದೆ-ಮಗ ಇಬ್ಬರನ್ನೂ ಸರ್ಕಾರ ಅನೇಕ ಅಪಾದನೆಗಳಿಗೆ ಗುರಿ ಮಾಡಿತು. ಗೃಹ ಬಂಧನದಲ್ಲಿ ಇರಿಸಲು ಪ್ರಯತ್ನಿಸಿತು. ಇಬ್ಬರೂ ಯಾವುದಕ್ಕೂ ಜಗ್ಗಲಿಲ್ಲ, ಮಣಿಯಲಿಲ್ಲ. ಕಡೆಗೆ ಇಬ್ಬರನ್ನೂ ಸರ್ಕಾರ ಬಂಧಿಸಿತು. ಬಂಧಿಸಲು ಬಂದ ಅಧಿಕಾರಿಗೇ ಮೈ ನಡುಕ, ಮಾತು ತೊದಲು! ನ್ಯಾಯಾಸ್ಥಾನದಲ್ಲಿ ವಿಚಾರಣೆಯ ನಾಟಕ ನಡೆಯಿತು. ಇಬ್ಬರೂ ವಿಚಾರಣೆಯಲ್ಲಿ ಭಾಗವಹಿಸಲಿಲ್ಲ.

ವಿಚಾರಣೆ ನಡೆಯುತ್ತಿದ್ದಾಗ ಮೋತೀಲಾಲರು ಮೊಮ್ಮಗಳು ಇಂದಿರೆಯನ್ನು ಎತ್ತಿಕೊಂಡು ಮುದ್ದಿಸುತ್ತಿದ್ದರು. ಅಷ್ಟು ಉಪೇಕ್ಷೆ ತಮ್ಮ ವಿಚಾರಣೆಯಲ್ಲಿ. ತಂದೆ-ಮಗ ಇಬ್ಬರಿಗೂ ತಲಾ ಆರು ತಿಂಗಳ ಶಿಕ್ಷೆ, ಐದು ನೂರು ರೂಪಾಯಿ ದಂಡ ವಿಧಿಸಲ್ಪಟ್ಟಿತು. ದಂಡ ವಸೂಲಿಗಾಗಿ ಪೊಲೀಸರು ಸಾವಿರಾರು ರೂಪಾಯಿ ಬೆಲೆ ಬಾಳುವ ರತ್ನಗಂಬಳಿ ಮೊದಲಾದ ಪದಾರ್ಥಗಳನ್ನು ಒಯ್ದರು. ತಂದೆ-ಮಗ ಇಬ್ಬರನ್ನೂ ಲಕ್ನೊ ಜೈಲಿಗೆ ಸೇರಿಸಿದರು.

ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿ ಒಳ ಆಡಳಿತದಲ್ಲಿ ಸ್ವಾತಂತ್ರ್ಯ ಪಡೆಯಬೇಕು ಎಂದು ಒಂದು ಕಾಲದಲ್ಲಿ ವಾದಿಸಿದ್ದ ಮೋತೀಲಾಲರ ಸ್ವಾತಂತ್ರ್ಯವನ್ನು ಬ್ರಿಟಿಷ್ ಸರ್ಕಾರ ಕಸಿದುಕೊಂಡಿತು. ಇಂಗ್ಲೆಂಡಿನಿಂದ ಉಡುಪು, ಪಾದರಕ್ಷೆ ತರಿಸಿ ಬ್ರಿಟಿಷ್ ಚಕ್ರವರ್ತಿಯ ದೆಹಲಿ ದರ್ಬಾರಿಗೆ ಹೋದ ಮೋತೀಲಾಲರು ಮಗನೊಂದಿಗೆ ಸ್ವಾತಂತ್ರ್ಯ ಸಮರದ ಯೋಧನಾಗಿ ಸೆರೆಮನೆ ಕಂಡರು.

ಸೆರೆಯಿಂದ ಬಿಡುಗಡೆ

ನಾಯಕರನ್ನು ಹಿಂಬಾಲಿಸಿ ಸಾವಿರಾರು ಸತ್ಯಾಗ್ರಹಿಗಳು ಜೈಲು ಸೇರಿದರು. ಕರ ನಿರಾಕರಣೆ ಚಳವಳಿ ಪ್ರಾರಂಭಿಸಲು ಗಾಂಧೀಜಿ ತಾರೀಖು ಗೊತ್ತು ಮಾಡಿದರು. ಆದರೆ ಉತ್ತರ ಪ್ರದೇಶದ ಚೌರಿಚೌರದಲ್ಲಿ ನಡೆದ ಭಯಂಕರ ಕೃತ್ಯ ಅಡ್ಡಿಯಾಯಿತು. ಕೆಲವು ದುಷ್ಕರ್ಮಿಗಳು ಅಲ್ಲಿನ ಪೋಲೀಸು ಠಾಣೆಗೆ ಬೆಂಕಿ ಇಟ್ಟರು. ಒಳಗಿದ್ದ ೨೨ ಜನ ಬೆಂಕಿಗೆ ಅಹುತಿ ಆದರು. ಈ ಸುದ್ದಿ ಕೇಳಿ ಗಾಂಧೀಜಿ ತುಂಬ ಸಂಕಟಪಟ್ಟರು. ಜನ ಇನ್ನೂ ಹಿಂಸೆಯನ್ನು ತೊರೆದಿಲ್ಲ. ಅಹಿಂಸಾ ಮಾರ್ಗ ಅರಿತಿಲ್ಲ. ಹೀಗೆಂದು ಅಸಹಕಾರ ಚಳವಳಿಯನ್ನು ನಿಲ್ಲಿಸಿದರು.

ಇದನ್ನು ಕೇಳಿ ಜೈಲಿನಲ್ಲಿದ್ದ ಮೋತೀಲಾಲ್ ಮತ್ತು ಚಿತ್ತರಂಜನ್ ದಾಸ್ ಇಬ್ಬರಿಗೂ ತೀರ ಅಸಮಾಧಾನವಾಯಿತು. ಆದರೂ ಗಾಂಧಿಯವರ ಮಾರ್ಗದರ್ಶನ ದೇಶಕ್ಕೆ ಅತ್ಯಗತ್ಯ ಎಂದು ಮೋತೀಲಾಲರು ಅರಿತಿದ್ದರು. ಬಂಧನದಿಂದ ಬಿಡುಗಡೆ ಆಗಿ ಬಂದ ತರುವಾಯ ಗಾಂಧಿಯವರ ನಿಲುವನ್ನು ಮೋತೀಲಾಲರು ಸಮರ್ಥಿಸಿದರು.

ಅಸಹಕಾರ ಚಳವಳಿ ಎಷ್ಟರಮಟ್ಟಿಗೆ ಸಫಲವಾಗಿದೆ ಎಂದು ಅರಿಯಲು ವಿಶೇಷ ಸಮಿತಿಯನ್ನು ಕಾಂಗ್ರೆಸ್ ನೇಮಿಸಿತು. ಮೋತೀಲಾಲರು ಈ ಸಮಿತಿಯ ಅಧ್ಯಕ್ಷರಾದರು. ವಿಷಯ ಸಂಗ್ರಹಿಸಿಲು ದೇಶದಲ್ಲೆಲ್ಲ ಸುತ್ತಾಡಿದರು. ಅಸಹಕಾರ, ಕರ ನಿರಾಕರಣೆಗಳಿಗೆ ದೇಶ ಇನ್ನೂ ಸಿದ್ಧವಾಗಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಆದರೆ ಈ ವರದಿ ಸರ್ವಸಮ್ಮತವಾಗಿರಲಿಲ್ಲ. ಆದ್ದರಿಂದ ಕಾಂಗ್ರೆಸ್ಸಿನಲ್ಲಿ ಒಡಕು ತಲೆದೋರಿತು.

ಪ್ರತಿಪಕ್ಷದ ನಾಯಕ

ಶಾಸನ ಸಭೆಗಳಲ್ಲಿ ಸರ್ಕಾರವನ್ನು ವಿರೋಧಿಸುವ ಪ್ರಬಲ ವಿರೋಧ ಪಕ್ಷ ಇರಲಿಲ್ಲ. ಇದರಿಂದ ಜನರಿಗೆ ಅಪ್ರಿಯವಾದ ಶಾಸನಗಳನ್ನು ಮಂಜೂರು ಮಾಡಿಸಿಕೊಳ್ಳುವುದು ಸರ್ಕಾರಕ್ಕೆ ಸುಲಭವಾಗಿತ್ತು. ಇದಕ್ಕೆ ಅವಕಾಶ ಕೊಡಬಾರದು. ಸರ್ಕಾರವನ್ನು ವಿರೋಧಿಸಲು ಶಾಸನ ಸಭೆಗಳನ್ನು ಪ್ರವೇಶಿಸಬೇಕು-ಹೀಗೆಂದು ಮೋತೀಲಾಲ್, ದಾಸ್ ಮೊದಲಾದ ನಾಯಕರು ನಿಶ್ಚಯಿಸಿದರು. ಇದು ಸ್ವರಾಜ್ಯ ಪಕ್ಷದ ಉದಯಕ್ಕೆ ಕಾರಣವಾಯಿತು.

ಮೋತೀಲಾಲರು ಮೊದಲು ಸ್ವರಾಜ್ಯ ಪಕ್ಷದ ಕಾರ್ಯದರ್ಶಿ, ಅನಂತರ ಅಧ್ಯಕ್ಷರೂ ಆದರು. ಕೇಂದ್ರ ಶಾಸನ ಸಭೆಯ ವಿರೋಧ ಪಕ್ಷದ ನಾಯಕರಾದರು. ಇವರ ನಾಯಕತ್ವದಲ್ಲಿ ಸರ್ಕಾರ ಅನೇಕ ಸಾರಿ ಸೋಲು ಅನುಭವಿಸಿತು. ಆದರೆ ವೈಸರಾಯರು ತಿರಸ್ಕೃತವಾದ ಮಸೂದೆಗಳಿಗೆ ಪುರಸ್ಕಾರ ಕೊಡುವ ಅಧಿಕಾರ ಪಡೆದಿದ್ದರು. ಆದ್ದರಿಂದ ವಿರೋಧ ಪಕ್ಷದ ಜಯದಿಂದ ಪ್ರಯೋಜನ ಆಗಲಿಲ್ಲ. ಸ್ವಲ್ಪ ಕಾಲದಲ್ಲೇ ಮತ್ತೆ ಅಸಹಕಾರ ಚಳವಳಿ ಪ್ರಾರಂಭಿಸುವಂತೆ ಆಯಿತು.

ಮಗ ಸೆರೆಮನೆಯಲ್ಲಿ

ಈ ಸಮಯದಲ್ಲಿ ಒಂದು ವಿಚಿತ್ರ ಘಟನೆ ನಡೆಯಿತು. ನಭಾ ಒಂದು ಸಣ್ಣ ಸಂಸ್ಥಾನ. ಅಲ್ಲಿಯ ಅರಸನ ನಡತೆ ಚೆನ್ನಾಗಿರಲಿಲ್ಲ. ಇವನ ವಿರುದ್ಧ ಪ್ರಜೆಗಳು ಸತ್ಯಾಗ್ರಹ ಹೂಡಿದರು. ಈ ಚಳವಳಿ ನೋಡಲು ಜವಾಹರ್ ಗಿದ್ವಾನಿ ಮತ್ತು ಸಂತಾನಂ ಗೆಳೆಯರೊಂದಿಗೆ ನಭಾಗೆ ಹೋದರು. ಮೂವರನ್ನೂ ಪೋಲೀಸರು ಬಂಧಿಸಿದರು. ಜವಾಹರ್ ಮತ್ತು ಸಂತಾನಂ ಇವರ ಕೈಗಳನ್ನು ಕೂಡಿಸಿ ಬೇಡಿ ಹಾಕಿದರು. ಬೇಡಿಯ ಉದ್ದನೆ ಸರಪಣಿ ಹಿಡಿದು ನಾಯಿಗಳಂತೆ ಮೆರವಣಿಗೆ ಮಾಡಿದರು. ವಿಚಾರಣೆ ನಡೆಸಿ ತಲಾ ಎರಡೂವರೆ ವರ್ಷಗಳ ಶಿಕ್ಷೆ ವಿಧಿಸಿದರು.

ಮೋತೀಲಾಲರಿಗೆ ಸುದ್ದಿ ತಿಳಿಯಿತು. ಅವರಿಗೆ ಜ್ವರ ಬರುತ್ತಿತ್ತು. ಅತಿ ಪ್ರಯಾಸದಿಂದ ನಭಾ ಮುಟ್ಟಿದರು. ಭೇಟಿಗೆ ಅವಕಾಶವಾಗಲಿಲ್ಲ. ವೈಸರಾಯರಿಗೆ ತಂತಿ ಕಳುಹಿಸಿದರು. ಕೆಟ್ಟ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ್ದ ಮಗನನ್ನು ನೋಡಿದರು. ತುಂಬ ದುಃಖಪಟ್ಟರು. ಭಾರತ ಸರ್ಕಾರ ಮೂವರನ್ನೂ ಬಂಧನದಿಂದ ಬಿಡಿಸಿತು. ಜವಾಹರರ ಆರೋಗ್ಯ ಕೆಟ್ಟಿತು. ಆರೋಗ್ಯ ಸುಧಾರಿಸಿಕೊಳ್ಳಲು ಕುಟುಂಬಸಹಿತ ತಂದೆ-ಮಗ ಯೂರೋಪ್ ಮತ್ತು ರಷ್ಯ ದೇಶಗಳಿಗೆ ಹೋಗಿ ಬಂದರು.

ಅಧ್ಯಕ್ಷರ ಕಿರೀಟತಂದೆಯಿಂದ ಮಗನಿಗೆ

೧೯೨೮ರಲ್ಲಿ ಕಲ್ಕತ್ತದಲ್ಲಿ ಕಾಂಗ್ರೆಸ್ ಮಹಾಧಿವೇಶನ ನಡೆಯಿತು. ಮೋತೀಲಾಲರು ಅಧ್ಯಕ್ಷರು. ಮಾರನೆಯ ವರ್ಷ ಲಾಹೋರಿನಲ್ಲಿ ಅಧಿವೇಶನ. ಇದಕ್ಕೆ ಜವಾಹರಲಾಲ್ ಅಧ್ಯಕ್ಷರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗ ಅಧ್ಯಕ್ಷನಾದ ಎಂದು ಮೋತೀಲಾಲರಿಗೆ ಪರಮಾನಂದ. ಮಗನ ಮೆರವಣಿಗೆಯ ಮೇಲೆ ಹೂವಿನ ಮಳೆಗರೆದರು. ಈ ಅಧಿವೇಶನದಲ್ಲಿ ಸಂಪೂರ್ಣ ಸ್ವಾತಂತ್ರ್ಯದ ಕರೆ ಕೊಡಲಾಯಿತು. ಗುರಿ ಸಾಧಿಸಲು ಮತ್ತೆ ಅಸಹಕಾರ ಚಳವಳಿಗೆ ಕರೆ ಕೊಡಲಾಯಿತು. ಕಾಂಗ್ರೆಸ್ಸಿನ ಕಿರೀಟ ತಂದೆಯಿಂದ ಮಗನ ತಲೆಗೆ ಏರಿತು. ಎಂಥ ಭಾಗ್ಯ!

ನನ್ನನ್ನು ಬಿಡುಗಡೆ ಮಾಡಬೇಡಿ

ಶಾಸನ ಸಭೆಗೆ ರಾಜೀನಾಮೆ ಕೊಟ್ಟು ಮೋತೀಲಾಲರು ಮತ್ತೆ ಹೊರಬಂದರು. ಮಹಾತ್ಮ ಗಾಂಧಿ ಉಪ್ಪಿನ ಕಾಯಿದೆ ಮುರಿಯಲು ದಾಂಡಿ ಯಾತ್ರೆ ಪ್ರಾರಂಭಿಸಿದರು. ಈ ಪಾದಯಾತ್ರೆ ಲೋಕವನ್ನೇ ದಂಗುಬಡಿಸಿತು. ಯಾತ್ರೆ ನಡೆಯುತ್ತಿದ್ದಾಗ ತಂದೆ-ಮಗ ಇಬ್ಬರೂ ಮಹಾತ್ಮರನ್ನು ಜಂಬುಸಾರ ಹಳ್ಳಿಯಲ್ಲಿ ಭೇಟಿಯಾದರು. ಆನಂದ ಭವನವನ್ನು ಕಾಂಗ್ರೆಸ್ಸಿಗೆ ದಾನವಾಗಿ ಕೊಡಲು ಅವರು ಮನಸ್ಸು ಮಾಡಿದ್ದರು. ತಮಗಾಗಿ ಅದೇ ಆವರಣದಲ್ಲಿ ಬೇರೊಂದು ಸಣ್ಣ ಬಂಗಲೆ ಕಟ್ಟಿಸಿದ್ದರು. ಆನಂದ ಭವನ ಕಾಂಗ್ರೆಸ್ಸಿಗೆ ಸೇರಿತು. ಸ್ವರಾಜ್ಯ ಭವನ ಆಯಿತು.

ಮಹಾ ನಾಯಕ ಮಹಾತ್ಮ ಗಾಂಧಿಯವರನ್ನು ಸರ್ಕಾರ ಬಂಧಿಸಿತು. ತರುವಾಯ ಮೋತೀಲಾಲ್, ಜವಾಹರ ಲಾಲ್ ಮತ್ತು ಎಲ್ಲ ನಾಯಕರೂ ಬಂಧಿತರಾದರು. ತಂದೆ-ಮಕ್ಕಳಿಬ್ಬರನ್ನೂ ನೈನಿ ಜೈಲಿಗೆ ಸೇರಿಸಿದರು. ಮೋತೀಲಾಲರ ಆರೋಗ್ಯ ತುಂಬ ಕೆಟ್ಟಿತು. ಜವಾಹರರು ತಂದೆಯ ಸೇವೆ ಮಾಡುತ್ತಿದ್ದರು. ಆದರೂ ದೇಹಸ್ಥಿತಿ ಸುಧಾರಿಸಲಿಲ್ಲ. ಕಾಯಿಲೆ ಬಲವಾಯಿತು. ಮೋತೀಲಾಲರನ್ನು ಬಿಡುಗಡೆ ಮಾಡಿ ಎಂದು ವೈಸರಾಯರಿಗೆ ಅನೇಕರು ತಂತಿ ಕಳುಹಿಸಿದರು. ತಪ್ಪು ತಿಳಿವಳಿಕೆಗೆ ಎಡೆಯಾದೀತು ಎಂದು ಮೋತೀಲಾಲರು ‘ನನ್ನನ್ನು ಯಾವ ಕಾರಣದಿಂದಲೂ ಬಿಡುಗಡೆ ಮಾಡಬೇಡಿ’ ಎಂದು ವೈಸರಾಯರಿಗೆ ಜೈಲಿನಿಂದಲೇ ತಂತಿ ಕಳುಹಿಸಿದರು.

ದೀಪ ನಂದಿತು

ಮಹಾ ನಾಯಕರು ಬಂಧನದಲ್ಲಿ ಅಸು ನೀಗಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬಂದೀತು ಎಂದು ಸರ್ಕಾರ ಮೋತೀಲಾಲರನ್ನು ಬಿಡುಗಡೆ ಮಾಡಿತು. ಮೋತೀಲಾಲರು ಅಲಹಾಬಾದಿಗೆ ಬಂದರು. ಜವಾಹರ್ ಮತ್ತು ಕಮಲೆ ಇಬ್ಬರನ್ನೂ ಹಲವು ನಿಮಿಷ ಮಾತ್ರ ನೋಡಲು ಸಾಧ್ಯವಾಯಿತು. ಜವಾಹರರನ್ನು ಪೋಲೀಸರು ಬಂಧಿಸಿದರು. ಅವರನ್ನು ನೈನಿ ಜೈಲಿಗೆ ಸೇರಿಸಿದರು.

ಮೋತೀಲಾಲರು ಮಗನನ್ನು ನೋಡಲು ನೈನಿಗೆ ಹೋದರು. ತಂದೆಯ ದೇಹಸ್ಥಿತಿ ನೋಡಿ ಜವಾಹರರು ಹೆದರಿದರು. ದೇಹ ಇಳಿದಿತ್ತು. ಮುಖ ಊದಿತ್ತು.

ಇದೇ ವೇಳೆಗೆ ಸೊಸೆ ಕಮಲೆ, ಮಗಳು ಕೃಷ್ಣಾ, ಅಳಿಯ ರಣಜಿತ್ ಎಲ್ಲರೂ ಜೈಲು ಸೇರಿದರು. ಇಡೀ ಕುಟುಂಬ ಜೈಲು ಸೇರಿತು. ಮೋತೀಲಾಲರಿಗೆ ಒಂದು ಕಡೆ ಸಂತೋಷ-ಮನೆಯವರೆಲ್ಲ ದೇಶದ ಸ್ವಾತಂತ್ರ್ಯ ಯುದ್ಧದ ಸೈನ್ಯಕ್ಕೆ ಸೇರಿದರು ಎಂದು. ಆದರೆ ಸೆರೆಮನೆಯಲ್ಲಿ ಅವರು ಎಷ್ಟು ಕಷ್ಟ ಅನುಭವಿಸಬೇಕು ಎಂದು ಚಿಂತೆ. ಮೋತೀಲಾಲರ ಕಾಯಿಲೆ ತೀವ್ರವಾಯಿತು. ಜೀವ ಉಳಿಯದು ಎಂದು ವೈದ್ಯರು ಗ್ರಹಿಸಿದರು. ಸರ್ಕಾರ ಗಾಂಧೀಜಿ, ಜವಾಹರ್ ಮತ್ತು ಕುಟುಂಬದ ಎಲ್ಲರನ್ನೂ ಬಿಡುಗಡೆ ಮಾಡಿತು. ಸರ್ಕಾರ ಜವಾಹರರನ್ನು ಅಕ್ಟೋಬರ್ ೧೧ರಂದು ಬಿಡುಗಡೆ ಮಾಡಿತು- ತೀರ ಕಾಯಿಲೆಯಿದ್ದ ತಂದೆಯ ಬಳಿ ಇರಲು. ಅಕ್ಟೋಬರ್ ೧೮ರಂದು ಮತ್ತೆ ಅವರನ್ನು ಸೆರೆಮನೆಗೆ ಕಳಿಸಿತು! ಮಗ-ಸೊಸೆ ಒಂದು ಸಭೆಯಿಂದ ಹಿಂದಿರುಗುತ್ತಾರೆ ಎಂದು ಮೋತೀಲಾಲರು ಕಾಯುತ್ತಿದ್ದರು; ಸೊಸೆಯೊಬ್ಬಳೇ ಬಂದು, ಆನಂದ ಭವನದ ಬಾಗಿಲಲ್ಲಿ ಜವಾಹರರನ್ನು ದಸ್ತಗಿರಿ ಮಾಡಿದ ಸುದ್ದಿ ಹೇಳಿದಳು.

ಲಕ್ನೋಗೆ ಮೋತೀಲಾಲರನ್ನು ಮೋಟಾರಿನಲ್ಲಿ ಚಿಕಿತ್ಸೆಗಾಗಿ ಒಯ್ದರು. ಪ್ರಯಾಣದ ಆಯಾಸದಿಂದ ಕಾಯಿಲೆ ವಿಷಮಿಸಿತು. ಆದರೆ ಅವರು ಧೃತಿಗೆಡಲಿಲ್ಲ. ದೇಶದ ಚಿಂತೆ ಮಾಡುತ್ತಿದ್ದರು. ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ಮಕ್ಕಳನ್ನು ಸಮೀಪಕ್ಕೆ ಕರೆದು ಹರಸಿದರು.

ತಾವು ಈ ಜಗತ್ತನ್ನು ಬಿಡುವ ಕಾಲ ಹತ್ತಿರವಾಗಿದೆ ಎಂದು ಮೋತೀಲಾಲರಿಗೆ ಸ್ಪಷ್ಟವಾಯಿತು. ಮಹಾತ್ಮ ಗಾಂಧಿಯವರನ್ನು ಹಾಸಿಗೆ ಬಳಿಗೆ ಕರೆದರು. ‘‘ಸ್ವತಂತ್ರ ಭಾರತಿಯ ಚರಣಾವಿಂದದಲ್ಲಿ ಪ್ರಾಣ ಬಿಡುವ ಭಾಗ್ಯ ನನಗಿಲ್ಲವಾಗಿದೆ. ಆದರೆ ಆ ಸೌಭಾಗ್ಯ ನಿಮಗೆ ಲಭಿಸುವುದರಲ್ಲಿ ನನಗೆ ಸಂದೇಹವಿಲ್ಲ. ಪೂರ್ಣ ವಿಶ್ವಾಸವಿದೆ. ಇದು ಖಂಡಿತ.  ನನ್ನ ಕರ್ತವ್ಯ ಮಾಡಿದ್ದೇನೆ. ನನ್ನ ಸೇವೆ ದೇಶಕ್ಕೆ ಸಲ್ಲಿಸಿದ್ದೇನೆ. ಇದರಿಂದ ನನಗೆ ಸಂತಸವಾಗಿದೆ’’ ಎಂದರು.

೧೯೩೧ ರ ಫೆಬ್ರವರಿ ೬ ರಂದು ಮೋತೀಲಾಲರು ನಿಧನರಾದರು. ಆಗ ಅವರಿಗೆ ಎಪ್ಪತ್ತು ವರ್ಷ.

ಮುಪ್ಪಿನಲ್ಲಿ ರಣಕಹಳೆ  ಕೇಳುತ್ತಿದೆ.

೧೯೨೯ ರ ಡಿಸೆಂಬರ್ ೩೧ ರಂದು, ಕಾಂಗ್ರೆಸ್ ಭಾರತಕ್ಕೆ ಸಂಪೂರ್ಣ ಸ್ವರಾಜ್ಯವೇ ಬೇಕು ಎಂದು ಘೋಷಿಸಿತು; ಸ್ವಾತಂತ್ರ್ಯದ ಧ್ವಜವನ್ನು ಹಾರಿಸಿತು. ಮಹಾತ್ಮರ ದಾರಿ ಆರಿಸಿದವರಿಗೆ ಅದು ಸೆರೆಮನೆಗೆ, ಕಷ್ಟಕ್ಕೆ, ಬಡತನಕ್ಕೆ ದಾರಿ ಎಂದು ಎಲ್ಲರಿಗೂ ಸ್ಪಷ್ಟವಾಗಿತ್ತು. ಮೋತೀಲಾಲರಿಗೆ ಆಗ ೬೯ ವರ್ಷ. ಅವರು ಸ್ವಾತಂತ್ರ್ಯ ಹೋರಾಟದ ಅಗ್ನಿಪ್ರವೇಶ ಮಾಡಬಾರದು ಎಂದು ಹಲವರು ಸ್ನೇಹಿತರು ಹೇಳಿದರು. ಮೋತೀಲಾಲರು ಒಬ್ಬ ಸ್ನೇಹಿತರಿಗೆ ಹೀಗೆ ಬರೆದರು:

‘ನಾನೂ ನನ್ನವರೂ ಗಾಂಧೀಜಿಯ ಕಡೆ ಸೇರಿ, ಬರಲಿರುವ ಚಳವಳಿಯಲ್ಲಿ ಧುಮುಕುವುದರ ಪರಿಣಾಮ ಏನು ಎಂದು ನನಗೆ ಸಂಪೂರ್ಣವಾಗಿ ಅರ್ಥವಾಗಿದೆ ಎಂದು ನಂಬಿ. ಈ ವಯಸ್ಸಿನಲ್ಲಿ, ನನ್ನ ದೇಹದ ದೌರ್ಬಲ್ಯಗಳಿದ್ದೂ ಸಂಸಾರದ ಹೊಣೆಗಳಿದ್ದೂ ನಾನು ತೀರ ಅಪಾಯಕ್ಕೆ ಎದೆ ಒಡ್ಡುತ್ತಿದ್ದೇನೆ; ಇದಕ್ಕೆ ಒಂದೇ ಕಾರಣ-ಅತೀ ತೀವ್ರ ಪ್ರಯತ್ನ, ಅತ್ಯಂತ ಹೆಚ್ಚಿನ ತ್ಯಾಗ ಇವುಗಳಿಗೆ ಸಮಯ ಬಂದಿದೆ ಎನ್ನುವ ದೃಢ ನಂಬಿಕೆ. ನಾಡಿನ ರಣಕಹಳೆ ಕೇಳುತ್ತಿದೆ, ನಾನು ಓಗೊಡುತ್ತಿದ್ದೇನೆ.’