(ಕ್ರಿ. ಶ. ೧೭೯೧-೧೮೭೨) (ತಂತಿ ಸಂದೇಶ ವ್ಯವಸ್ಥೆ)

ಊರಿನಿಂದ ಊರಿಗೆ ಸಂದೇಶಗಳನ್ನು ರವಾನಿಸಲು ದೀರ್ಘಕಾಲ ಹಿಡಿಯುತ್ತಿದ್ದಂಥ ಕಾಲದಲ್ಲಿ ಕ್ಷಿಪ್ರ ತಂತಿ ಸಂದೇಶ ರವಾನಿಸುವ ಪದ್ಧತಿಯನ್ನು ಕಂಡು ಹಿಡಿದ ಖ್ಯಾತ ವಿಜ್ಞಾನಿ, ಸಾಮ್ಯುಯೆಲ್ ಮೋರ್ಸ್. ತನ್ನ ಸಂಶೋಧನೆಯ ಮೂಲಕ ಊರುಗಳು, ಪಟ್ಟಣಗಳು ಅಷ್ಟೇ ಏಕೆ, ದೇಶಗಳ ನಡುವಣ ಅಂತರವನ್ನು ಸಂಪರ್ಕ ವ್ಯವಸ್ಥೆಯ ಮೂಲಕ ನಿವಾರಿಸಿ ಪರಸ್ಪರ ಹತ್ತಿರಕ್ಕೆ ತಂದ ಮಹಾನುಭಾವ ಈತ. ಸಾಮ್ಯುಯೆಲ್ ಮೋರ್ಸ್ ೧೭೯೧ರಲ್ಲಿ ಜನಿಸಿದರು. ವರ್ಣಚಿತ್ರಕಲೆ ಈತನ ಆಸಕ್ತಿಯ ವಿಷಯವಾಗಿತ್ತು. ಅಂತಲೇ ಅದೇ ವಿಷಯದಲ್ಲಿ ವಿಶೇಷ ಶಿಕ್ಷಣ ಪಡೆದು ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ವಿನ್ಯಾಸ ವಿಷಯಕ ಪ್ರಾಧ್ಯಾಪಕನಾಗಿ ಕೆಲಸಕ್ಕೆ ಸೇರಿದರು. ಆದರೆ ತನ್ನ ಆಸಕ್ತಿಯನ್ನು ವರ್ಣ ಚಿತ್ರ ಕಲೆ, ವಿನ್ಯಾಸಗಳಿಗೇ ಸೀಮಿತಗೊಳಿಸದೆ ಸಂಶೋಧನಾ ಕ್ಷೇತ್ರದಲ್ಲೂ ತೊಡಗಿಸಿದರು. ಅದಕ್ಕೆ ಆತನ ಆರ್ಥಿಕ ಪರಿಸ್ಥಿತಿಯೂ ಒಂದು ರೀತಿಯಲ್ಲಿ ಕಾರಣವಾಗಿತ್ತು. ತನ್ನ ಕಷ್ಟದ ದಿನಗಳಲ್ಲಿ ಒಂದಿಷ್ಟು ಹೆಚ್ಚು ಹಣಗಳಿಸಲು ಆತ ಅಗ್ನಿಯಂತ್ರ (ಫೈರ್ ಎಂಜಿನ್) ಒಂದನ್ನು ವಿನ್ಯಾಸ ಮಾಡಿದರು.

ಅಧಿಕೃತ ವರ್ಣಚಿತ್ರ ಕಲಾಕರನೆಂದು ತನ್ನನ್ನು ಸೇರಿಸಿಕೊಳ್ಳಬೇಕೆಂದು ಈತ ಅಮೆರಿಕ ಸರಕಾರಕ್ಕೆ ಮನವಿ ಮಾಡಿಕೊಂಡ. ಆದರೆ ಸರಕಾರ ಆತನ ಮನವಿಯನ್ನು ತಿರಸ್ಕರಿಸಿತು. ಆಗ ತುಂಬ ಬೇಸರಗೊಂಡ ಮೋರ್ಸ್ ತನ್ನ ಗಮನವನ್ನೆಲ್ಲ ಸಂಶೋಧನಾ ಕಾರ್ಯಗಳ ಮೇಲೇ ಕೇಂದ್ರೀಕರಿಸತೊಡಗಿದರು.

“ಇಲೆಕ್ಟ್ರಿಕ್ ಟೆಲಿಗ್ರಾಫ್” ಅನ್ನು ಕಂಡುಹಿಡಿಯುವ ವಿಚಾರ ಈತನಿಗೆ ಹೊಳೆದದ್ದು ೧೮೩೨ರಲ್ಲಿ, ಯುರೋಪಿನಿಂದ ನೌಕೆಯೊಂದರಲ್ಲಿ ವಾಪಸಾಗುತ್ತಿದ್ದಾಗ. ಅಮೆರಿಕ ಸರಕಾರ ಈತನಿಗೆ ಅಧಿಕೃತವರ್ಣಚಿತ್ರಕಾರನ ಉದ್ಯೋಗ ನೀಡದಿದ್ದುದು ಪರೋಕ್ಷವಾಗಿ ಮೋರ್ಸ್‌ಗೆ ಒಂದು ವರದಾನವೇ ಆಯಿತು. ತನ್ನ ಸಂಪೂರ್ಣ ಗಮನವನ್ನಲ್ಲ ಇಲೆಕ್ಟ್ರಿಕ್ ಟೆಲಿಗ್ರಾಫ್ ವ್ಯವಸ್ಥೆಯನ್ನು ಕಂಡು ಹಿಡಿಯುವುದರಲ್ಲಿ ತೊಡಗಿಸಲು ಆತನಿಗೆ ಸಾಧ್ಯವಾಯಿತು. ಕೊನೆಗೂ ತನ್ನ ಛಲವನ್ನು ಸಾಧಿಸಿದ ಆತ ೧೮೪೨ರಲ್ಲಿ ವಾಷಿಂಗ್ಟನ್-ಬಾಲ್ಟಿಮೋರ್ ನಡುವೆ ಟೆಲಿಗ್ರಾಫ್ ಲೈನ್ (ತಂತಿ ಸಂದೇಶ ರವಾನಿಸುವ ವ್ಯವಸ್ಥೆ) ಅನ್ನು ಸ್ಥಾಪಿಸುವಂತೆ ಮಾಡಿದರು. ಒಡನೆಯೇ ಅನೇಕ ದೇಶಗಳು ಟೆಲಿಗ್ರಾಫ್ ವ್ಯವಸ್ಥೆಗಳನ್ನು ಸ್ಥಾಪಿಸಲು ಮುಂದಾದವು. ಮೋರ್ಸ್ ಅವರ ಅದೃಷ್ಟ ಖುಲಾಯಿಸಿತು. ಅವರಿಗೆ ಸಂಪತ್ತಿನ ಸಮೇತ ಜಗತ್ತಿನಾದ್ಯಂತ ಒಳ್ಳೆಯ ಹೆಸರೂ ಪ್ರಾಪ್ತವಾಯಿತು. ತಂತಿ ಸಂಪರ್ಕ ವ್ಯವಸ್ಥೆಯನ್ನು ಸುಲಭಗೊಳಿಸಲು ಆತ “ಮೋರ್ಸ್ ಸಂಕೇತ”ಗಳನ್ನೂ ಕಂಡುಹಿಡಿದರು.

ಸಾಮ್ಯುಯೆಲ್ ಮೋರ್ಸ್ ೧೮೭೨ರಲ್ಲಿ ನಿಧನ ಹೊಂದಿದರು.