ಕನ್ನಡ ನಾಡಿನ ಚರಿತ್ರೆಯಲ್ಲಿ ಹನ್ನೆರಡನೆ ಶತಮಾನವು ಹಲವು ದೃಷ್ಟಿಗಳಿಂದ ಮಹತ್ವಪೂರ್ಣವೆನಿಸಿದೆ. ಆಗ ಕಲ್ಯಾಣ ಪಟ್ಟಣದ ಬಿಜ್ಜಳರಾಜನ ಆಸ್ಥಾನದಲ್ಲಿ ಬಸವಣ್ಣನವರು ಮಹಾಮಂತ್ರಿಯಾಗಿದ್ದರು. “ಸಕಲ ಜೀವಾತ್ಮರಿಗೆ ಲೇಸನೇ ಬಯಸುವ” ಅಪೇಕ್ಷೆಯಿಂದ ಅವರು ಸಮಾಜ ಸುಧಾರಣೆಗೆ ಪ್ರಯತ್ನಿಸಿದರು.

ದಯವೇ ಧರ್ಮದ ಮೂಲವೆಂದು ಸಾರಿದರು. ಜಾತಿಯಲ್ಲಿ ಮೇಲು ಕೀಳೆಂಬ ಅಂತರವಿಲ್ಲ ಎಂದು ಬೋಧಿಸಿದರು. ಭಗವಂತನ ದೃಷ್ಟಿಯಲ್ಲಿ ಸ್ತ್ರೀ ಪುರುಷರು ಸಮಾನರು ಎಂದು ತಿಳಿಸಿದರು. ಸಮಾಜದಲ್ಲಿ ಕಂಡು ಬಂದ ಲೋಪ ದೋಷಗಳನ್ನು ಖಂಡಿಸಿದರು. ವಚನ ಸಾಹಿತ್ಯದ ಹಿರಿಯ ಪ್ರವರ್ತಕರಾದರು.

ಕಾಯಕ ತತ್ವ

ಅವರು ಪ್ರತಿಪಾದಿಸಿದ ತತ್ವಗಳಲ್ಲಿ ಕಾಯಕ ತತ್ವ ಅತ್ಯಂತ ಮಹತ್ವಪೂರ್ಣವಾದುದು. ಅವರು ರೂಪಿಸಿದ “ಕಾಯಕವೇ ಕೈಲಾಸ” ಎಂಬ ಮಹಾಮಂತ್ರ ಎಲ್ಲ ಕಾಲದ, ಎಲ್ಲ ದೇಶದ, ಎಲ್ಲ ಬಗೆಯ ಜನರ ಸುಖಶಾಂತಿಗೆ ಬುನಾದಿ. ಹೆಣ್ಣಾಗಲಿ ಗಂಡಾಗಲಿ ಜೀವನ ನಿರ್ವಹಣೆಗಾಗಿ ಏನಾದರೊಂದು ಸತ್ಯಶುದ್ಧ ಕಾಯಕ ಮಾಡಲೇಬೇಕು. ದುಡಿಯುವ ವ್ಯಕ್ತಿಗಳಿಗೆ ಉಣ್ಣುವ ಅಧಿಕಾರ ಇಲ್ಲ. ದುಡಿಯದೇ ದುಂಡಾಗುವವರು ಸಮಾಜ ಕಂಟಕರು ಎಂದರು. ಆದರೆ ಕಾಯಕದಲ್ಲಿ ಮೇಲುಕೀಳೆಂಬ ತಾರತಮ್ಯ ಇಲ್ಲವೆಂಬುದನ್ನು ಹೇಳಲು ಮರೆಯಲಿಲ್ಲ.

ಶಿವಶರಣರು ಅವರ ಕಾಯಕ ತತ್ವವನ್ನು ಮೆಚ್ಚಿಕೊಂಡರು. ಅನುಸರಿಸಿದರು. ಸ್ತ್ರೀಯರು-ಪುರುಷರು ಮೇಲ್ಜಾತಿ-ಕೀಳ್ಜಾತಿ ಅರಸ-ಆಳು ಎಂಬ ಭೇದವಿಲ್ಲದೆ ಎಲ್ಲರೂ ಕಾಯಕ ಜೀವಿಗಳಾದರು.

ಹೀಗೆ ಬಸವೇಶ್ವರರ ಕಾಯಕ ತತ್ವಕ್ಕೆ ಮನಸೋತು, ರಾಜಪದವಿಯನ್ನು ತ್ಯಜಿಸಿ, ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದು ಕಟ್ಟಿಗೆ ಕಡಿದು ಮಾರುವ ಕಾಯಕ ಕೈಕೊಂಡವನೇ ಮೋಳಿಗೆಯ ಮಾರಯ್ಯ. ಅರಸಾಗಿದ್ದವನು ಆಳಿನಂತಾಗಿ ಕಟ್ಟಿಗೆ ಮಾರಿದ ಮಾರಯ್ಯನ ಕಥೆ ಅಚ್ಚರಿಗೊಳಿಸುತ್ತದೆ.

ಅರಸ ಮಹಾದೇವ

“ಕಾಶ್ಮೀರ ದೇಶದಲ್ಲಿ ಮಾಂಡವ್ಯಪುರ ಎಂಬ ಪಟ್ಟಣವಿತ್ತು. ಅದು ಪ್ರಕೃತಿ ಸೌಂದರ್ಯದ ನೆಲೆವೀಡು.

ಮಾಂಡವ್ಯುರದ ಅರಸರು ಮಹಾದೇವ. ಮಹಾದೇವಿ ಆತನ ಮಡದಿ. ಪತಿ ಪತ್ನಿಯರಿಬ್ಬರೂ ಶಿವಭಕ್ತರು. ಅರಸನು ಪ್ರಜೆಗಳನ್ನು ತನ್ನ ಮಕ್ಕಳೆಂಬಂತೆ ತಿಳಿದು ಪರಿಪಾಲಿಸುತ್ತಿದ್ದನು. ಪ್ರಜೆಗಳಿಗೆ ರಾಜನಲ್ಲಿ ವಿಶೇಷವಾದ ಪ್ರೀತಿ ಗೌರವಗಳಿದ್ದವು. ಜನರು ಕೆಟ್ಟ ಕೆಲಸ ಮಾಡಲು ಹೆದರುತ್ತಿದ್ದರು. ರಾಜನ ಆಡಳಿತ ಅಷ್ಟು ಬಿಗಿಯಾಗಿತ್ತು. ಒಂದು ವೇಳೆ ಅಂಥ ದುಷ್ಕೃತ್ಯಗಳೇನಾದರೂ ಕಂಡು ಬಂದರೆ ಅವುಗಳನ್ನು ಎಸಗಿದವರು ರಾಜನಿಂದ ಉಗ್ರ ಶಿಕ್ಷೆಗೆ ಗುರಿಯಾಗುತ್ತಿದ್ದರು.

ಮಹಾದೇವನು ಶಿವಪೂಜಾ ಧುರಂಧರ. ತನುಮನ ಧನಗಳನ್ನು ಗುರುಲಿಂಗ ಜಂಗಮಕ್ಕೆ ಅರ್ಪಿಸುತ್ತ ಕೀರ್ತಿ ಪಡೆದಿದ್ದ. ಪ್ರತಿದಿನ ಶಿವಪೂಜೆ ಮುಗಿಸಿದಲ್ಲದೆ ಒಡ್ಡೋಲಗಕ್ಕೆ ಬರುತ್ತಿರಲಿಲ್ಲ.

ವಿರಕ್ತಳಾದ ಹುಡುಗಿ

ಮಹಾದೇವ ರಾಜನಿಗೆ ನಿಜದೇವಿ ಎಂಬ ತಂಗಿ ಇದ್ದಳು. ಪ್ರಜೆಗಳಲ್ಲಿ ಮತ್ತು ರಾಜ ರಾಣಿಯರಲ್ಲಿ ಕಂಡು ಬಂದ ಧರ್ಮಶ್ರದ್ಧೆ ಆಕೆಯ ಮನಸ್ಸಿನಲ್ಲಿ ತೀವ್ರ ಪರಿಣಾಮ ಉಂಟುಮಾಡಿತು. ಶೈವ ಧರ್ಮದ ನಿಷ್ಠೆ ಬಲಿಯಿತು. ಅರಮನೆಯ ಭೋಗಭಾಗ್ಯಗಳು ಬೇಡವಾದವು.

ಆಗ ಕಲ್ಯಾಣ ಪಟ್ಟಣದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕ್ರಾಂತಿ ನಿಜದೇವಿಯನ್ನು ಆಕರ್ಷಿಸಿತು. ಕಲ್ಯಾಣ ಕ್ರಾಂತಿಯ ಕಾರಣಪುರುಷ ಬಸವಣ್ಣನ ಕೀರ್ತಿ ಕಾಶ್ಮೀರದವರೆಗೂ ಹಬ್ಬಿತ್ತು. ಶಿವಶರಣರು ಕಲ್ಯಾಣದಿಂದ ಕಾಶ್ಮೀರಕ್ಕೂ, ಕಾಶ್ಮೀರದಿಂದ ಕಲ್ಯಾಣಕ್ಕೂ ಸಂಚರಿಸುತ್ತಿದ್ದರು. ಹೀಗಾಗಿ ಬಸವಣ್ಣನವರ ತತ್ವಗಳಿಗೆ ಕಾಶ್ಮೀರದಲ್ಲಿ ಮನ್ನಣೆ ದೊರೆಯಿತು.

ಬಸವಣ್ಣನವರ ಉಪದೇಶಗಳಿಗೂ ಅವರ ಜೀವನ ರೀತಿಯೂ ನಿಜದೇವಿಯ ಮನಸ್ಸನ್ನು ಗೆದ್ದವು. ಅವುಗಳಿಂದ ಪ್ರಭಾವಿತಳಾದ ನಿಜದೇವಿ ಅರಮನೆಯನ್ನು ತೊರೆಯಲು ನಿರ್ಧರಿಸಿದಳು. ತಾರುಣ್ಯದಲ್ಲಿಯೇ ಇಹಲೋಕದ ಸುಖ ಸೌಖ್ಯಗಳನ್ನು ಮರೆತಳು. ತಂಗಿಯ ನಿರ್ಧಾರವು ರಾಜನಿಗೆ ತಿಳಿಯಿತು. “ತಾರುಣ್ಯದಲ್ಲೇ ಇಂಥ ವೈರಾಗ್ಯವೆ? ಸಂಸಾರಿಯಾಗಿ ಸುಖವಾಗಿರು ಎಂದೆಲ್ಲಾ ಬೋಧಿಸಿದ. ಆತನ ಪ್ರಯತ್ನ ವ್ಯರ್ಥವಾಯಿತು.

ನಿಜದೇವಿ ಕಾಶ್ಮೀರವನ್ನು ಬಿಟ್ಟು ಕಲ್ಯಾಣಕ್ಕೆ ಬಂದಳು ಅಮೂಲ್ಯವಾದ ಅರಮನೆಯ ಉಡುಗೆ ತೊಡುಗೆಗಳನ್ನು ತೊರೆದಳು. ಬಹು ಸರಳವಾದ ಬಟ್ಟೆಯನ್ನು ಉಟ್ಟು ಬಸವಣ್ಣನ ಸನ್ನಿಧಿಗೆ ಬಂದಳು. ನಿಜದೇವಿಯೆಂಬ ಹೆಸರು ಅಳಿಸಿತು. ಬೊಂತೆಯನ್ನು ಉಟ್ಟು ಬಂದದ್ದರಿಂದ ಮುಂದೆ ಆಕೆಗೆ ಬೊಂತಾದೇವಿ ಎಂದೇ ಹೆಸರು ಬಂತು.

ಹೊನ್ನುಗಳು ನಿನ್ನವೆ?

ಕಲ್ಯಾಣ ಕಾಶ್ಮೀರಕ್ಕಿಂತ ಅಧಿಕವೆ? ಬಸವಣ್ಣ ತನಗಿಂತ ಅಧಿಕ ಶಿವಭಕ್ತನೆ? ನಿತ್ಯವೂ ಸಾವಿರಾರು ಜಂಗಮರಿಗೆ ನಾನು ದಾಸೋಹ ನಡೆಸುತ್ತಿದ್ದೇನೆ. ಕೇವಲ ಮಂತ್ರಿಯಾಗಿರುವ ಬಸವಣ್ಣನಿಂದ ಇದು ಸಾಧ್ಯವೆ? ಎಂದೆಲ್ಲಾ ಯೋಚಿಸತೊಡಗಿದ ಮಹಾದೇವ. ಬಸವಣ್ಣ ಆಚರಿಸುವ ಭಕ್ತಿಗಿಂತ ತನ್ನ ಶಿವಭಕ್ತಿಯೇ ಮಿಗಿಲು ಎಂಬುದು ಅವನ ಭಾವನೆಯಾಗಿತ್ತು.

ಅವನ ಈ ಭ್ರಮೆ ಕೊನೆಗಾಣುವ ಘಟನೆಯೊಂದು ನಡೆಯಿತು.

ಒಮ್ಮೆ ಕಲ್ಯಾಣದಿಂದ ಕಾಶ್ಮೀರಕ್ಕೆ ಕೆಲವು ಶಿವಶರಣರು ಬಂದರು. ಅವರು ಅರಮನೆಯಲ್ಲಿ ರಾಜನನ್ನು ಸಂದರ್ಶಿಸಿದರು. ಶರಣರ ದರ್ಶನ ಶಿವದರ್ಶನವೇ ಎಂದು ಸಂತಸಗೊಂಡ ರಾಜ ಅವರ ಶಿವಪೂಜೆಗೆ ಅಣಿಗೊಳಿಸುವ ವ್ಯವಸ್ಥೆ ಮಾಡಿದ. ಅನಂತರ ಜಂಗಮರಿಗೆ ಊಟವಾಯಿತು. ಅಷ್ಟು ಸಾಲದೆಂಬಂತೆ ಬಂದ ಶಿವಶರಣರಿಗೆಲ್ಲಾ ಕಾಣಿಕೆ ಕೊಡಲು ನಿರ್ಧರಿಸಿದ. ಬೊಕ್ಕಸದಿಂದ ಸಹಸ್ರಾರು ಹೊನ್ನುಗಳನ್ನು ತರಿಸಿದ. ಕಿಂಕರ ಭಾವದಿಂದ ಅವರ ಪಾದಗಳಿಗೆ ನಮಸ್ಕರಿಸಿ ಹೇಳಿದ:

“ಶರಣರೆ, ದಯಮಾಡಿ ಈ ಹೊನ್ನುಗಳನ್ನು ಒಪ್ಪಿಸಿಕೊಳ್ಳಿ. ನನ್ನನ್ನು ಕೃತಾರ್ಥನನ್ನಾಗಿ ಮಾಡಿ.”

“ಯಾರ ಹೊನ್ನುಗಳನ್ನು ಯಾರು ಒಪ್ಪಿಸಿಕೊಳ್ಳುವುದು?” ಶರಣರು ತಿರಸ್ಕಾರದಿಂದ ರಾಜನ ಕಡೆ ನೋಡಿದರು.

“ಯಾರ ಹೊನ್ನುಗಳೆಂದರೇನರ್ಥ ಶರಣರೇ? ಇವು ನನ್ನವೇ. ನನ್ನ ಬೊಕ್ಕಸದಿಂದಲೇ ತರಿಸಿದವು.”

“ಬೊಕ್ಕಸದಿಂದ ತರಿಸಿದ ಹೊನ್ನುಗಳು ನಿನ್ನವು ಹೇಗಾದೀತು ಮಹಾರಾಜ?”

“ನನ್ನವಲ್ಲದಿದ್ದರೆ ಮತ್ತಾರ ಹೊನ್ನುಗಳಾಗಲು ಸಾಧ್ಯ?”

“ಅವು ಪ್ರಜೆಗಳ ಹೊನ್ನುಗಳು. ಅವರ ಕಾಯಕದಿಂದ ತೆರಿಗೆಯ ರೂಪದಲ್ಲಿ ನಿನಗೆ ಬಂದ ಹೊನ್ನುಗಳು.”

“ಆಂ! ಇದೇನು ಹೇಳುತ್ತಿದ್ದೀರಿ?”

“ಯೋಚಿಸಿ ನೋಡು ಮಹಾರಾಜ. ಪ್ರಜೆಗಳ ಶ್ರಮದ ಕಾಯಕದ ಫಲ ಆ ಹೊನ್ನುಗಳು. ನಿನ್ನ ಕಾಯಕದಿಂದ ಗಳಿಸಿದ್ದೇನಾದರೆ ಇದ್ದರೆ ಕೊಡು, ಸ್ವೀಕರಿಸುತ್ತೇವೆ. ನಮ್ಮ ಗುರು ಬಸವಣ್ಣ ನಿತ್ಯ ಕಾಯಕ ಮಾಡಿ ಶಿವಭಕ್ತರ ಊಟವನ್ನು ಏರ್ಪಡಿಸುತ್ತಾರೆ. ಅವರೇ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಜಂಗಮರಿಗಾಗಿ ವಿನಿಯೋಗಿಸುತ್ತಾರೆ. ನೀವು ಪ್ರಜೆಗಳು ಗಳಿಸಿದ ಹೊನ್ನನ್ನು ನಿಮ್ಮದೆಂದು ಕೊಡ ಬಯಸುತ್ತೀರಿ. ಇಷ್ಟುವರ್ಷ ಶಿವಪೂಜೆ, ಶಿವನಾಮ ಸ್ಮರಣೆ ಮಾಡಿದರೆ ಬಂದ ಭಾಗ್ಯವೇನು? ಇನ್ನಾದರೂ ಕಾಯಕದ ಮಹತ್ವವನ್ನು ಅರಿತುಕೊಳ್ಳಿ.”

ಹೊನ್ನುಗಳನ್ನು ಮುಟ್ಟದೆ ಶರಣರು ಹೊರಟು ಹೋದರು.

ಆಗ ರಾಜನಿಗೆ ಜ್ಞಾನೋದಯವಾಯಿತು. ಪ್ರಜೆಗಳಿಂದ ತೆರಿಗೆಯ ರೂಪದಲ್ಲಿ ಬಂದ ಹಣ ತನ್ನ ಶರೀರ ಶ್ರಮದಿಂದ ಬಂದುದಲ್ಲ. ಆದ್ದರಿಂದಲೇ ಶರಣರು ತಾನು ಕೊಟ್ಟ ಹೊನ್ನನ್ನು ನಿರಾಕರಿಸಿದರು. ಇನ್ನು ಮುಂದೆ ಹೀಗಾಗಬಾರದು. ಬಸವಣ್ಣನಿಗಿಂತ ತಾನು ಮಿಗಿಲೆನಿಸಿಕೊಳ್ಳಬೇಕು. ಕಲ್ಯಾಣಕ್ಕಿಂತ ಕಾಶ್ಮೀರದಲ್ಲಿ ಹೆಚ್ಚು ಜನ ಶರಣರು ನೆಲೆಸಬೇಕು. ತನ್ನ ಕೀರ್ತಿಯನ್ನು ಹಾಡಿ ಹೊಗಳಬೇಕು ಎಂದೆಲ್ಲಾ ಯೋಚಿಸಿದ.

ಶರಣರು ಇಲ್ಲ

ರಾಜನಿಗೆ ದುಃಖ ಉಂಟುಮಾಡುವ ಘಟನೆಯೊಂದು ಅರಮನೆಯಲ್ಲಿ ನಡೆಯಿತು. ಪ್ರತಿದಿನವೂ ಭೋಜನ ಸಮಯಕ್ಕೆ ಸರಿಯಾಗಿ ಸಹಸ್ರಾರು ಶರಣರು ಅರಮನೆಗೆ ಬರುತ್ತಿದ್ದರು. ಅಂದು ಮಧ್ಯಾಹ್ನ ಮೀರಿದರೂ ಯಾರೊಬ್ಬರೂ ಅತ್ತ ಸುಳಿಯಲಿಲ್ಲ. ತನ್ನ ರಾಜ್ಯದಲ್ಲಿದ್ದ ಸಾವಿರಾರು ಶರಣರಲ್ಲಿ ಕೂಡಾ ಯಾರೂ ಬರಲಿಲ್ಲ. ಶರಣರಿಗೆ ಪ್ರಸಾದ ನೀಡದೆ ತಾನು ಭೋಜನ ಮಾಡುವಂತಿಲ್ಲ. ಈಗೇನು ಮಾಡುವುದು? ತನ್ನ ನಿಯಮ ಮುರಿಯಿತಲ್ಲ ಎಂದು ವ್ಯಥೆಗೊಂಡ.

ಶರಣರು ಎಲ್ಲಿದ್ದರೂ ಹುಡುಕಿ ಕರೆತರಬೇಕೆಂದು ಸೇವಕರನ್ನು ಕಳಿಸಿದ. ಅವರು ಪಟ್ಟಣದ ಬೀದಿ ಬೀದಿಗಳಲ್ಲಿ ಅರಸಿದರು. ಶರಣರ ಸುಳಿವಿಲ್ಲ. ಅಲ್ಲಲ್ಲಿ ಕಾಣಿಸಿಕೊಂಡ ಕೆಲವರು ಶರಣರನ್ನು ವಿಚಾರಿಸಿದರು. ಕಲ್ಯಾಣದಿಂದ ಬಸವಣ್ಣನವರ ಕಡೆಯ ಕೆಲವರು ಶರಣರು ಇಲ್ಲಿಗೆ ಬಂದಿದ್ದರು, ಇಲ್ಲಿನ ಬಹು ಮಂದಿ ಶರಣರೆಲ್ಲಾ ಅವರೊಂದಿಗೆ ಕಲ್ಯಾಣ ಪಟ್ಟಣಕ್ಕೆ ಹೊರಟು ಹೋದರು ಎಂಬ ಸತ್ಯಸಂಗತಿ ತಿಳಿಯಿತು.

ನಡೆದ ಸಂಗತಿಯನ್ನು ಸೇವಕರು ರಾಜನಿಗೆ ಬಿನ್ನವಿಸಿದರು.

ಕ್ಷಣಕಾಲ ದಿಕ್ಕೇ ತೋಚದಂತಾಯಿತು ರಾಜನಿಗೆ. ಬುದ್ಧಿಗೆ ಮಂಕು ಕವಿಯಿತು. ಶರಣರು ಅಷ್ಟುಮಂದಿ ತನ್ನ ರಾಜ್ಯ ಬಿಟ್ಟು ಹೋದ ಮೇಲೆ ತಾನು ರಾಜನಾಗಿದ್ದು ಫಲವೇನು? ಈ ರಾಜ್ಯ ಕೋಶಗಳೇಕೆ? ಭೋಗಭಾಗ್ಯಗಳೇಕೆ? ಎಲ್ಲವೂ ವ್ಯರ್ಥ. ಇದುವರೆಗೆ ತನ್ನ ಸೇವೆಯನ್ನು ಸ್ವೀಕರಿಸಿದ ಶರಣರು ಈಗ ಹೇಳದೇ ಕೇಳದೆ ಕಲ್ಯಾಣಕ್ಕೆ ಹೋಗಿಬಿಟ್ಟರಲ್ಲ! ತನ್ನ ಸೇವೆಯಲ್ಲೇನಾದರೂ ಲೋಪವಾಯಿತೆ? ಅಥವಾ ತಾನು ನೀಡುವುದು ಸ್ವಂತ ಕಾಯಕದ ಪ್ರಸಾದವಲ್ಲ ಎಂದು ಭಾವಿಸಿದರೋ ಏನೊ! ತನಗಿಂತ ಬಸವಣ್ಣನೇ ಅವರಿಗೆ ಹೆಚ್ಚಿನವನಾದಲ್ಲ!

ಹೀಗೆ ಯೋಚಿಸುತ್ತಿರುವಾಗಲೇ ರಾಜನ ಮನಸ್ಸು ಮತ್ತೊಂದು ಕಡೆಗೆ ಹರಿಯಿತು. ಇದೆಲ್ಲಾ ಆ ಬಸವಣ್ಣ ನಡೆಸಿರುವ ಸಂಚು. ತನ್ನ ಕೀರ್ತಿ ಪ್ರತಿಷ್ಠೆಗಳನ್ನು ವೃದ್ಧಿಸಿಕೊಳ್ಳಲು ಮಾಡಿರುವ ತಂತ್ರ. ಎಲ್ಲ ಶರಣರನ್ನೂ ಕಲ್ಯಾಣಕ್ಕೆ ಕರೆದುಕೊಳ್ಳಬೇಕು; ಕಾಶ್ಮೀರ ಬರಿದಾಗಬೇಕು. ಇದೇ ಅವನ ಇಚ್ಛೆ ಎಂದೆಲ್ಲ ರಾಜ ಯೋಚಿಸಿದ.

ದುಷ್ಟ ಆಲೋಚನೆ

ತನ್ನನ್ನು ಇಂಥ ದುಸ್ಥಿತಿಗೆ ತಂದ ಬಸವಣ್ಣನ ಬಗ್ಗೆ ರಾಜನಿಗೆ ಸಹಿಸಲಸಾಧ್ಯವಾದ ಕೋಪವುಂಟಾಯಿತು. ಬಸವಣ್ಣ ಮಾಡಿದ ಅನ್ಯಾಯಕ್ಕೆ ತಕ್ಕ ಪ್ರತೀಕಾರ ಮಾಡಬೇಕೆನಿಸಿತು. ರಹಸ್ಯವಾಗಿ ಬಸವಣ್ಣನನ್ನು ಕೊಲ್ಲಿಸಿಬಿಡಬೇಕು ಎಂದು ನಿಶ್ಚಯಿಸಿದ. ಕೂಡಲೆ ತನ್ನ ಪರಮ ಆಪ್ತ ಸೇವಕನನ್ನು ಕರೆದು, ಚಿಕ್ಕಯ್ಯ ಎಂಬಾತನನ್ನು ಗುಟ್ಟಾಗಿ ಕರೆತರಲು ಆಜ್ಞೆ ಮಾಡಿದ. ಚಿಕ್ಕಯ್ಯ ಕಳ್ಳತನ, ಕೊಲೆ ಇಂತಹವುಗಳನ್ನು ಮಾಡುತ್ತಿದ್ದವನು. ಮಹಾ ದೇವನು ದುಷ್ಟರಿಗೆ ಉಗ್ರ ಶಿಕ್ಷೆ ಕೊಡುತ್ತಿದ್ದುದರಿಂದ ಚಿಕ್ಕಯ್ಯನಂತಹವರಿಗೆ ಅವನೆಂದರೆ ಬಹು ಭಯ. ತನ್ನಿಂದ ಏನು ತಪ್ಪಾಯಿತು ಎಂದು ನಡುಗುತ್ತಲೆ ಬಂದ ಚಿಕ್ಕಯ್ಯ.

ಚಿಕ್ಕಯ್ಯನ ಮುಖದಲ್ಲಿ ಭಯ ಕಾಣಿಸುತ್ತಿತ್ತು. ನಯವಿನಯ ಭಯಭಕ್ತಿಗಳಿಂದ ರಾಜನಿಗೆ ನಮಸ್ಕರಿಸಿ ಕೈಕಟ್ಟಿ ನಿಂತ. ರಾಜ ಎಲ್ಲ ಸೇವಕರನ್ನೂ ಹೊರಗೆ ಕಳಿಸಿ ನೆಟ್ಟ ಕಣ್ಣುಗಳಿಂದ ಚಿಕ್ಕಯ್ಯನನ್ನು ನೋಡಿದ.

ದಷ್ಟ ಪುಷ್ಟವಾದ ಶರೀರ. ಗರಡಿಯಲ್ಲಿ ಪಳಗಿದ ಉಕ್ಕಿನಂತೆ ಬಲವಾದ ಕೈಕಾಲುಗಳು. ಹರವಾದ ಬಲಿಷ್ಠವಾದ ಎದೆ. ಮಿರಿ ಮಿರಿ ಮಿಂಚುವ ಕಪ್ಪು ಮೈ ಬಣ್ಣ. ನೋಟದಲ್ಲೇ ಹೆದರಿಕೆ ಹುಟ್ಟಿಸುವ ಕೆಂಡದುಂಡೆಯಂತಹ ಕಣ್ಣುಗಳು. ತುಟಿಯ ಮೇಲ್ಭಾಗದಲ್ಲಿ ಬೆಳೆದ ಪೊದೆಯಂತಹ ಮೀಸೆ. ಸಾಕ್ಷಾತ್ ಯಮನಂತಹ ರೂಪ.

ಈ ಕೆಲಸ ನಿನ್ನಿಂದಲೇ ಆಗಬೇಕು”

ಆ ಭಯಂಕರ ಆಕಾರಕ್ಕೆ ರಾಜನೇ ನಡುಗಿಹೋದ ಕ್ಷಣಕಾಲ. ಅನಂತರ ಮೆಲ್ಲನೆ ಹತ್ತಿರ ಸರಿದು,

“ಚಿಕ್ಕಯ್ಯ” ಎಂದ.

“ಅಡ್‌ಬಿದ್ದೆ ಬುದ್ದಿ.”

“ನಿನ್ನನ್ನು ಕರೆಸಿದ ಕಾರಣ ಗೊತ್ತೆ?”

“ನನ್ನಂಥವನ್ನ ಕರೆಸುವುದು ಇನ್ಯಾಕೆ ಬುದ್ದಿ? ನನ್ನ ಮೇಲೆ ಕಳ್ತನದ ಅಥವಾ ಕೊಲೆಯ ಏನಾದರೊಂದು ದೂರು ಇರಬಹುದು. ಅದ್ಕೇ ಕರ್ಸಿದಿರೀ. ಆದ್ರೆ ಹಿಂದಿನ ಸಲ ನೀವು ಶಿಕ್ಷೆಕೊಟ್ಟ ಮೇಲೆ ಅಂಥ ಕೆಲ್ಸ ಯಾವ್ದೂ ನಾನು ಮಾಡಿಲ್ಲ.”

“ಯಾವ್ದೂ ಮಾಡಿಲ್ವೆ? ಬಹಳ ಸಂತೋಷ. ಆದ್ರೆ ಈಗ ಅಂಥ ಕೆಲ್ಸ ಮತ್ತೆ ಮಾಡ್ಬೇಕಾಗಿದೆ.”

ಚಿಕ್ಕಯ್ಯನಿಗೆ ತನ್ನ ಕಿವಿಗಳನ್ನು ನಂಬಲು ಸಾಧ್ಯವಾಗಲಿಲ್ಲ.

“ಯಾಕ್ ಬುದ್ದಿ? ಹಿಂದಿನ ಸಲ ಮೈಚರ್ಮ ಸುಲ್ಸಿ ಶಿಕ್ಷೆ ಮಾಡಿದ್ರಲ್ಲಾ! ಹಾಗೆ ಈಗ್ಲೂ ಮಾಡಾಕ?” ಎಂದ.

“ಇಲ್ಲ. ಆಗ ಶಿಕ್ಷೆ ಮಾಡಿದ್ದೆ. ಈಗ ಬಹುಮಾನ ಕೊಡ್ತೇನೆ. ಸಾವಿರಾರು ಹೊನ್ನುಗಳನ್ನು ಕೊಡ್ತೇನೆ.”

ಚಿಕ್ಕಯ್ಯನಿಗೆ ನಂಬಿಕೆಯೇ ಇಲ್ಲ. “ಇಲ್ಲಾ. ಬುದ್ದಿ, ಬಿಲ್‌ಕುಲ್ ಆಗೋದಿಲ್ಲ. ಆಗ ಬೇಡ. ಅಂದೋರೂ ನೀವೇ. ಈಗ ಮಾಡು ಅನ್ನೋರೂ ನೀವೇ. ಇದೇನೋ ಒಂದೂ ತಿಳಿಯೋದಿಲ್ಲ ನನಗೆ. ನನ್ನ ಸುಮ್ಮನೆ ಬಿಟ್ಟುಬಿಡಿ ಬುದ್ದಿ.”

 

"ಈ ಕೆಲಸ ನಿನ್ನಿಂದ ಆಗಲೇಬೇಕು"

ಖಂಡಿತ ಸಾಧ್ಯವಿಲ್ಲ ಚಿಕ್ಕಯ್ಯ. ಈ ಕೆಲಸ ನಿನ್ನಿಂದ ಆಗಲೇಬೇಕು.

“ಸಾಧ್ಯವಿಲ್ಲ ಅಂದ್ರೆ?”

“ಆಗೋಲ್ಲ ಅಂದ್ರೆ, ನೀನಿಲ್ಲಿಂದ ಜೀವಸಹಿತ ಹೋಗಲಾರೆ.”

ಕಣ್ಣುಗಳಿಂದ ಇರಿಯುವಂತೆ ನೋಡಿದ ರಾಜ. ಆ ಕ್ರೂರ ನೊಟ ತಾಳಲಾರದ ಚಿಕ್ಕಯ್ಯ,

“ಅದೇನು ಕೆಲ್ಸ ಹೇಳ್ಬುಡಿ ಬುದ್ದಿ, ಮುಗಿಸಿಬಿಡ್ತೀನಿ” ಎಂದು ಕೈ ಮುಗಿದ.

ರಾಜ ಅವನ ಹತ್ತಿರ ಸರಿದು ಕಿವಿಯಲ್ಲಿ ಪಿಸುಗುಟ್ಟಿ ಅವನು ಮಾಡಬೇಕಾದ ಕೆಲಸವನ್ನು ವಿವರಿಸಿದ. ಅನಂತರ, “ವಿಷಯ ನಮ್ಮಿಬ್ಬರಲ್ಲೇ ಇರಬೇಕು. ಬೇರೆಯವರಿಗೆ ಬಾಯಿಬಿಟ್ಟರೆ ನೀನು ಜೀವ ಸಹಿತ ಉಳಿಯಲಾರೆ, ಎಚ್ಚರ” ಎಂದ.

“ಗುಟ್ಟಾಗಿಯೇ ಮುಗಿಸ್ತೀನಿ ಬುದ್ದಿ” ಎಂದವನೇ ಅಲ್ಲಿಂದ ಹೊರಡಲು ಸಿದ್ಧನಾದ ಚಿಕ್ಕಯ್ಯ. ವೆಚ್ಚಕ್ಕೆಂದು ಸ್ವಲ್ಪ ಹಣ ನೀಡಿದ ರಾಜ.

ರಾಜ ಚಿಕ್ಕಯ್ಯನಿಗೆ ಒಪ್ಪಿಸಿದ್ದು ಭಯಂಕರ ಕೆಲ. ಬಸವಣ್ಣನವರನ್ನು ತೀರಿಸಿಬಿಡುವುದು.

ಶರಣನ ವೇಷದಲ್ಲಿ

ಚೋರ ಚಿಕ್ಕಯ್ಯ ಕಲ್ಯಾಣವನ್ನು ಮುಟ್ಟಿದ. ಅನಂತರ ಬಸವಣ್ಣನನ್ನು ಮುಗಿಸುವ ಬಗೆ ಹೇಗೆ ಎಂದು ಚಿಂತಿಸಿದ. ಆತ ಕಲ್ಯಾಣ ಕಾವಲುಗಾರರ ರಕ್ಷಣೆಯಿದೆ. ಶರಣರ ಪ್ರೀತಿ ವಿಶ್ವಾಸಗಳಿವೆ. ಇಂತಹವನನ್ನು ಕೊಲ್ಲುವುದು ಸುಲಭವಲ್ಲ. ಒಂದು ವೇಳೆ ಸಿಕ್ಕಿಬಿದ್ದರೆ ತನ್ನ ಪ್ರಾಣಕ್ಕೆ ಸಂಚಕಾರ ಎಂಬ ಭಯವೂ ಉಂಟಾಯಿತು ಚೋರ ಚಿಕ್ಕಯ್ಯನಿಗೆ. ಶರಣರನ್ನು ಕಂಡು ಬಸವಣ್ಣನವರ ವಿಚಾರ ತಿಳಿದುಕೊಂಡ. ಆತ ಜೀವಿಯೇ ಶಿವನೆಂದು ತಿಳಿದ ಮಹಾತ್ಮ. ಕೊರಳಲ್ಲಿ ಶಿವಲಿಂಗವಿದ್ದವರನ್ನೆಲ್ಲ ಆರಾಧಿಸುತ್ತಾನೆ. ಅವನಿಗೆ ಅಪನಂಬಿಕೆ ಎಂಬುದಿಲ್ಲ ಎಂದು ತಿಳಿಯಿತು.

ಚಿಕ್ಕಯ್ಯ ಶಿವಲಿಂಗವನ್ನೆಂದೂ ಪೂಜಿಸಿದವನಲ್ಲ. ಕಾವಿ ಕರಡಿಗೆ ರುದ್ರಾಕ್ಷಿಗಳನ್ನು ಧರಿಸಿದವನಲ್ಲ. ಹಣೆಗೆ ವಿಭೂತಿ ಧರಿಸಿದವನಲ್ಲ. ಆದರೆ ಬಸವಣ್ಣನ ಮನೆಗೆ ಹೋಗಬೇಕಾದರೆ ತತ್ಕಾಲಕ್ಕಾದರೂ ಶರಣನಂತೆ ಕಾಣಬೇಕು. ಇದರಿಂದ ತನ್ನ ಬಗ್ಗೆ ಯಾರಿಗೂ ಅನುಮಾನ ಬರುವುದಿಲ್ಲ. ತಾನು ಮಾಡಬೇಕೆಂದಿರುವ ಕೆಲಸವೂ ಸುಲಭವಾಗುತ್ತದೆ.

ಹೀಗೆ ಯೋಚಿಸಿದ ಚಿಕ್ಕಯ್ಯ ಶುಚಿಯಾಗಿ ಸ್ನಾನ ಮಾಡಿ ಕಾವಿಯ ವಸ್ತ್ರಗಳನ್ನು ಧರಿಸಿದ. ಎದ್ದು ಕಾಣುವಂತೆ ಹಣೆಗೆ ವಿಭೂತಿ ಧರಿಸಿದ. ಔಡಲು ಕಾಯಿಗಳನ್ನು ಪೋಣಿಸಿ ರುದ್ರಾಕ್ಷಿ ಸರವೆಂಬಂತೆ ಕೊರಳಿಗೆ ಹಾಕಿಕೊಂಡ. ಕರಿಯ ಬದನೆಕಾಯಿಯನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಕೊರಳಲ್ಲಿ ಧರಿಸಿ ಮಾತಿಗೊಮ್ಮೆ ಶಿವಶಿವಾ ಸಂಗಮನಾಥ ಎಂದು ಸ್ಮರಿಸುತ್ತ ಶಿವಶರಣರ ಸಂಗದಲ್ಲಿ ಸೇರಿದ.

ಹರಿತವಾದ ಕಿರುಗತ್ತಿಯನ್ನು ರಹಸ್ಯವಾಗಿ ಸೊಂಟದಲ್ಲಿಟ್ಟುಕೊಂಡಿದ್ದ.

ಎಲ್ಲರೂ ಇವನನ್ನು ಶರಣನೆಂದೇ ನಂಬಿದ್ದರು. ಚಿಕ್ಕಯ್ಯ ಬಸವಣ್ಣನ ಚಲನವಲನಗಳನ್ನು ಗಮನಿಸತೊಡಗಿದ. ತನ್ನ ಕಾರ್ಯಕ್ಕೆ ಸರಿಯಾದ ಸ್ಥಳವಾವುದು, ಸಮಯ ಯಾವುದು ಎಂಬ ಬಗ್ಗೆ ಚಿಂತಿಸಿದ.

ಮಧ್ಯಾಹ್ನ ಮತ್ತು ರಾತ್ರಿಯ ವೇಳೆಗಳಲ್ಲಿ ಬಸವಣ್ಣನವರ ಮನೆಯಲ್ಲಿ ಜಂಗಮರ ಸೇವೆ ನಡೆಯುತ್ತಿತ್ತು. ಅಲ್ಲಿ ಎಲ್ಲ ಕಾಯಕದ ಸ್ತ್ರೀ ಪುರುಷರೂ ಸೇರುತ್ತಿದ್ದರು. ಮೊದಲು ಶಿವಪೂಜೆ. ಅನಂತರ ಪ್ರಸಾದ ವಿನಿಯೋಗ.

ಅಂದು ರಾತ್ರಿಯೇ ಕೆಲಸ ಮುಗಿಸಬೇಕೆಂದು ನಿರ್ಧರಿಸಿದ ಚಿಕ್ಕಯ್ಯ.

ಬಸವಣ್ಣನವರ ಸನ್ನಿಧಿ

ಆ ರಾತ್ರಿ ಎಲ್ಲೆಲ್ಲಿಯೂ ಕತ್ತಲೆ. ಕಲ್ಯಾಣ ನಗರ ಕತ್ತಲೆಯ ಸಮುದ್ರದಲ್ಲಿ ಮುಳುಗಿದಂತೆ ಕಾಣುತ್ತಿತ್ತು. ಬೀದಿಯಲ್ಲಿ ಬೆಳಗುತ್ತಿದ್ದ ಲಾಂದ್ರಗಳು ಮಿನುಗುವ ನಕ್ಷತ್ರಗಳಂತೆ ಕಾಣುತ್ತಿದ್ದವು.

ಚಿಕ್ಕಯ್ಯನ ಮನದೊಳಗು ಅಜ್ಞಾನದ ಕತ್ತಲು ಆವರಿಸಿತ್ತು. ಕೊಲೆಯ ಯೋಚನೆಯಲ್ಲಿ ಅವನ ಕಣ್ಣುಗಳು ಕುರುಡಾಗಿದ್ದವು. ಕತ್ತಲ ಸಮುದ್ರದಲ್ಲಿ ಈಜುವ ಇದ್ದಲು ಚೂರಿನಂತೆ ಬಸವಣ್ಣನ ಮಹಾಮನೆಯತ್ತ ಹೆಜ್ಜೆ ಹಾಕಿದ. ರಾತ್ರಿ ಮೂರನೆಯ ಜಾವ. ಕಲ್ಯಾಣ ಪಟ್ಟಣವೆಲ್ಲ ನಿದ್ರೆಯಲ್ಲಿ ಮೈಮರೆತಿದೆ. ಮಹಾಮನೆಯ ಮುಂದಿದ್ದ ಕಾವಲುಗಾರರಿಗು ಗಾಢ ನಿದ್ರೆ.

ಹಾರೆಯಿಂದ ಮೀಟಿ ಕಿಟಕಿಯ ಕಂಬಿಯನ್ನು ಹಿಗ್ಗಿಸಿದ ಚಿಕ್ಕಯ್ಯ ಬಸವಣ್ಣ ಮಲಗಿದ್ದ ಒಳ ಮನೆಯನ್ನು ಹೊಕ್ಕ. ದೀಪದ ಮಂದ ಪ್ರಕಾಶದಲ್ಲಿ ಅವರ ಮುಖವನ್ನೇ ದಿಟ್ಟಿಸಿದ. ಪ್ರಶಾಂತವಾದ ಸುಖ ನಿದ್ರೆಯಲ್ಲಿದ್ದರು ಬಸವಣ್ಣ. ಪತ್ನಿ ಗಂಗಾದೇವಿ, ನೀಲಾಂಬಿಕೆಯರು ಪಕ್ಕದಲ್ಲಿ ನಿದ್ರಿಸುತ್ತಿದ್ದರು.

ನಾನು ಕೊಲ್ಲಲಾರೆ”

ಚಿಕ್ಕಯ್ಯನಿಗೆ “ಕೊಲ್ಲಲು ಇವರು ಮಾಡಿದ ದ್ರೋಹವೇನು” ಎಂಬ ವಿಚಾರ ಕ್ಷಣಕಾಲ ಮಿಂಚಿತು. ಆದರೆ ಮರುಕ್ಷಣದಲ್ಲೇ ರಾಜ ಮಹಾದೇವನ ಆಜ್ಞೆ ನೆನಪಾಯಿತು. ಸರಿಯೋ ತಪ್ಪೋ ಯೋಚಿಸುವ ಸಮಯವೂ ಅದಲ್ಲ. ತಡಮಾಡದೆ ಸೊಂಟದಿಂದ ಕಿರುಗತ್ತಿಯನ್ನು ಹೊರ ತೆಗೆದ ಚಿಕ್ಕಯ್ಯ. ಮತ್ತೆ ಮನವಳುಕಿತು. “ಇಂಥ ದಯಾಮಯನನ್ನು ಕೊಲ್ಲುವುದೇ? ಯಾರಿಗೂ ಕೇಡು ಬಗೆದವರಲ್ಲ. ಮಹದೇವ ಭೂಪಾಲ ನನ್ನನ್ನು ಕೊಂದರೆ ಕೊಲ್ಲಲಿ. ನಾನು ಮಾತ್ರ ಬಸವಣ್ಣನನ್ನು ಕೊಲ್ಲಲಾರೆ” ಎಂದು ಕೊಂಡು ಕಿರುಗತ್ತಿಯನ್ನು ಮತ್ತೆ ಸೊಂಟದಲ್ಲಿ ಅಡಗಿಸಿದ ಚಿಕ್ಕಯ್ಯ.

"ಇನ್ನು ಈ ರಾಜ್ಯಕೋಶಗಳೇಕೆ?"

ಓ ವಜ್ರದ ಓಲೆಗಳು!”

ಪಕ್ಕಕ್ಕೆ ದೃಷ್ಟಿ ಹೊರಳಿಸಿದ. ನಿದ್ರಿಸುತ್ತಿರುವ ಗಂಗಾದೇವಿಯ ಕಿವಿಗಳಲ್ಲಿ ಹೊಳೆಯುತ್ತಿರುವ ವಜ್ರದ ಓಲೆಗಳು!

ಚಿಕ್ಕಯ್ಯನ ದುರಾಸೆಯ ಸರ್ಪ ಮತ್ತೆ ಹೆಡೆ ಬಿಚ್ಚಿತು. ವಜ್ರದ ಓಲೆಗಳಿಗೆ ಸಾವಿರಾರು ಹೊನ್ನುಗಳ ಬೆಲೆ! ಅವುಗಳನ್ನು ಕದ್ದೊಯ್ದು ಮಾರಿದರೆ ಜೀವನಪರ್ಯಂತ ಸುಖವಾಗಿರಬಹುದು. ಈಗ ಕದ್ದರೆ ಸಾಕು; ಮುಂದೆಂದೂ ಕದಿಯಬೇಕಾಗಿಲ್ಲ ಎಂದು ಯೋಚಿಸಿ ಮೆಲ್ಲನೆ ಬಾಗಿದ. ಕಿವಿಯ ವಜ್ರದೋಲೆಗಳಿಗೆ ಕೈಹಾಕಿದ. ತಿರುಪು ಬಿಚ್ಚಲು ಯತ್ನಿಸಿದ.

ಥಟ್ಟನೆ ಎಚ್ಚರವಾಯಿತು ಗಂಗಾದೇವಿಗೆ. ಎದುರಿಗೆ ಯಮನಂತೆ ನಿಂತಿದ್ದ ಚಿಕ್ಕಯ್ಯನನ್ನು ಕಂಡು ಕಿಟಾರನೆ ಚೀರಿಕೊಂಡಳು.

“ಸ್ವಾಮಿ, ಕಳ್ಳ ನುಗ್ಗಿದ್ದಾನೆ ಮನೆಗೆ, ಎಚ್ಚರಗೊಳ್ಳಿ”

ಪತ್ನಿಯ ಕೂಗಿಗೆ ಬಸವಣ್ಣ ಎಚ್ಚರಗೊಂಡ. ಕಣ್ಣು ತೆರೆದರೆ ಎದುರಲ್ಲೇ ನಿಂತಿದ್ದಾನೆ ಒಬ್ಬ ಮನುಷ್ಯ. ಹಣೆಯಲ್ಲಿ ತ್ರಿಪುಂಡ್ರ, ಕೊರಳಲ್ಲಿ ರುದ್ರಾಕ್ಷಿ. ಅಂಗದ ಮೇಲೆ ಶಿವಲಿಂಗ.

ಎದುರು ನಿಂತವನ ಒಂದು ಕೈ ಪತ್ನಿಯ ವಜ್ರದ ದೋಲೆಯ ಮೇಲೆ. ಕೊಡಲಾರೆನೆಂದು ಕೈಗಳಿಂದ ಭದ್ರವಾಗಿ ಓಲೆ ಹಿಡಿದುಕೊಂಡಿದ್ದಾಳೆ ಪತ್ನಿ.

ನಮ್ಮಯ್ಯನ ಕೈನೊಂದಿತು”

ಬಸವಣ್ಣನ ಮನ ನೊಂದಿತು. ಶಿವನೇ ಶರಣನಾಗಿ ಬಂದು ಬೇಡುತ್ತಿದ್ದಾನೆ. ಬೇಡುವ ಶರಣನಿಗೆ ತನುಮನ ಧನಗಳನ್ನು ನೀಡಬೇಕು. ಆದರೆ ಗಂಗಾದೇವಿ ಹಾಗೆ ಮಾಡುತ್ತಿಲ್ಲ. ವಜ್ರದೋಲೆಯ ಮೇಲೆ ಆಕೆಗೆ ಲೋಭ. ಪತ್ನಿಯ ವರ್ತನೆಯಿಂದ ಕುಪಿತನಾದ ಬಸವಣ್ಣ.

ಒಡನಿರ್ದ ಸತಿಯೆಂದು ನೆಚ್ಚಿರ್ದೆನಯ್ಯ
ಅಯ್ಯೋ! ನಮ್ಮಯ್ಯನ ಕೈ ನೊಂದಿತು
ತೆಗೆದು ಕೊಡಾ ಎಲೆ ಚಂಡಾಲಗಿತ್ತಿ
ಬಂದವನು ನಮ್ಮ ಕೂಡಲ ಸಂಗಯ್ಯನಲ್ಲದೆ  ಬೇರಾರು ಅಲ್ಲ”

ಎಂದು ಕಟುವಾಗಿ ನುಡಿದ ಬಸವಣ್ಣ.

ಶರಣರ ಕೈ ನೋಯುತ್ತದೆ. ಅದಕ್ಕೆ ಅವಕಾಶ ಕೊಡದೆ ತಾನಾಗಿಯೇ ಬೇಗ ಓಲೆ ಬಿಚ್ಚಿ ಕೊಡಲಿ ಎಂದವರ ಅಪೇಕ್ಷೆ.

ಪತಿಯ ಆಜ್ಞೆಗೆ ಪ್ರತಿಯುಂಟೆ? ಎರಡು ಕಿವಿಯೋಲೆಗಳನ್ನು ಬಿಚ್ಚಿ ಶರಣನಿಗೆ ಕೊಡಹೋದಳು.

ಕಳ್ಳ ಶಿವಭಕ್ತನಾದ

ಚಿಕ್ಕಯ್ಯನಿಗೆ ತಾ ನಿಂತ ನೆಲ ಬಿರಿದು ನುಂಗಿದಂತಾಯಿತು. ಸಿಕ್ಕಿಬಿದ್ದ ಕಳ್ಳನನ್ನು ಅವರು ಶಿಕ್ಷಿಸುತ್ತಾರೆ, ನಿಂದಿಸುತ್ತಾರೆ ಎಂದೆಲ್ಲಾ ಯೋಚಿಸುತ್ತಿದ್ದ. ಆದರೆ ಅಲ್ಲಿ ನಡೆದದ್ದೇ ಬೇರೆ. ಅವರಾಗಿಯೇ ಓಲೆಗಳನ್ನು ತೆಗೆಸಿಕೊಂಡು ಬಂದಿದ್ದಾರೆ. ತನ್ನ ಕೈ ನೊಂದಿತೆಂದು ಕರುಣೆ ತೋರುತ್ತಿದ್ದಾರೆ. ಕಳ್ಳನನ್ನು ಶರಣನೆಂದು ನಂಬಿ ಮೋಸಹೋಗಿದ್ದಾರೆ.

ಇಂಥ ದಯಾಮಯನನ್ನು ಕೊಲ್ಲಲು ಬಂದ ತಾನು ಪಾಪಿ ಎಂದು ಮಮ್ಮಲ ಮರುಗಿದ. ಜೋಡಿಸಿದ ಕೈಗಳು. ಕಣ್ಣುಗಳಲ್ಲಿ ನೀರು.

“ಮಾ ಮಾ ಮಂತ್ರಿಗಳೆ…….. ನಾ…….. ನಾನು”

ಎಂದು ತೊದಲಿದ.

“ಹೌದು. ನೀವು ಭಕ್ತನ ಪರೀಕ್ಷೆಗಾಗಿ ಬಂದ ಸಂಗಮದೇವ.”

“ಇಲ್ಲ ಇಲ್ಲಾ. ನಿಮ್ಮನ್ನು ಕೊಲೆ ಮಾಡಲು ಬಂದ ಚೋರ ಚಿಕ್ಕ.”

“ಛೇ ಛೇ ಖಂಡಿತ ಸಾಧ್ಯವಿಲ್ಲ. ಶರಣರೆಂದೂ ಕೊಲೆ ಗಡುಕರಲ್ಲ. ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ ಅಂಗದ ಮೇಲೆ ಶಿವಲಿಂಗ! ಸತ್ಯವಾಗಿಯೂ ನೀವು ಶರಣರೇ”

“ಇಲ್ಲ ಬಸವೇಶ. ನಾನು ಕಳ್ಳ, ಕೊಲೆಗಡುಕ, ನನ್ನ ಅಂಗದ ಮೇಲಿರೋದು ಶಿವಲಿಂಗವಲ್ಲ; ಕರಿಯ ಬದನೆಕಾಯಿ.”

“ಕರಿಯ ಬದನೆಕಾಯಿ! ಶಿವಲಿಂಗವನ್ನು ಕಟ್ಟಿಕೊಂಡು ಎಷ್ಟೋ ಜನ ಅದು ಕಲ್ಲೆಂದು ಭಾವಿಸುತ್ತಾರೆ. ನೀವು ಬದನೆಯಕಾಯಿಯನ್ನೇ ಶಿವಲಿಂಗವೆಂದು ನಂಬಿ ಕಟ್ಟಿಕೊಂಡಿದ್ದೀರಿ. ಆಹಾ! ನಿಜಕ್ಕೂ ನೀವು ಮಹಾನುಭಾವರು.”

“ಅದೆಲ್ಲಾ ಸುಳ್ಳು ಬಸವಣ್ಣನವರೇ. ನಾನು ಕೊರಳಲ್ಲಿ ಕಟ್ಟಿರೋದು ಔಡಲಕಾಯಿ ಸರ. ಹಣೆಗೆ ಬಳಿದಿರೋದು ಬೂದಿ. ನಾನು ಕಾಶ್ಮೀರದಿಂದ ಬಂದವನು. ಮಹಾದೇವ ರಾಜನ ಆಜ್ಞೆಯಂತೆ ಗುಟ್ಟಾಗಿ ನಿಮ್ಮ ಕೊಲೆ ಮಾಡಬಂದವನು. ಆದರೆ ನಿಮ್ಮಂತಹ ಪುಣ್ಯಾತ್ಮರನ್ನು ಕೊಲ್ಲೋದಕ್ಕೆ ಮನಸ್ಸು ಬರಲಿಲ್ಲ. ಆದ್ದರಿಂದ ಓಲೆ ಕದಿಯಲು ಪ್ರಯತ್ನ ಪಟ್ಟೆ.”

“ಕಳ್ಳತನ! ಇದರಲ್ಲಿ ನಿಮ್ಮ ತಪ್ಪೇನೂ ಇಲ್ಲ ಶರಣರೇ. ಅವಶ್ಯಕತೆಗಿಂತ ಹೆಚ್ಚು ಸಂಗ್ರಹ ಮಾಡಿದ್ದು -ನಮ್ಮದೇ ತಪ್ಪು. ನಿಮ್ಮಂಥ ಎಷ್ಟೋ ಜನರಿಗೆ ಅನ್ನಕ್ಕೇ ಗತಿಯಿಲ್ಲದಿರುವಾಗ ನಾವು ವಜ್ರದೋಲೆ ಇಟ್ಟುಕೊಳ್ಳುವುದು ನ್ಯಾಯವೆ? ಪಾಪ! ನಿಮ್ಮ ಹೆಂಡತಿ ಮಕ್ಕಳು ಎಷ್ಟು ಹಸಿದಿದ್ದಾರೋ? ಈ ಓಲೆಗಳನ್ನು ಮಾರಿಕೊಂಡು ಸುಖವಾಗಿ ಬಾಳಿ” ಎಂದು ಸಂತೈಸಿದರು ಬಸವಣ್ಣ.

ಆದರೆ ಚಿಕ್ಕಯ್ಯ ಓಲೆಗಳನ್ನು ತೆಗೆದುಕೊಳ್ಳಲಿಲ್ಲ. ಪಶ್ಚಾತ್ತಾಪದಿಂದ ಬೆಂದು ಅವನ ಹೃದಯ ಪರಿಶುದ್ಧವಾಗಿತ್ತು. “ನಾನು ಮಾಡಿದುದು ತಪ್ಪು, ಕ್ಷಮಿಸಿ. ನನ್ನನ್ನು ನಿಮ್ಮ ಭಕ್ತನಾಗಿ ಸ್ವೀಕರಿಸಿ” ಎಂದು ಬೇಡಿಕೊಂಡ.

ಬಸವೇಶ್ವರರು ಕರುಣಾಳು. ಅವನ ಪಶ್ಚಾತ್ತಾಪಕ್ಕೆ ಕರಗಿದರು. ಚಿಕ್ಕಯ್ಯ ಕೊಲೆ ಸುಲಿಗೆಗಳನ್ನೂ ಕಾಶ್ಮೀರವನ್ನೂ ಮರೆತ. ಬಸವಣ್ಣನ ಬಳಿ ಕಾಯಕ ನಿರತನಾಗಿ ಜೀವಿಸತೊಡಗಿದೆ.

ರಾಜ ಮಹಾದೇವನ ಅಜ್ಞಾನಕ್ಕೆ ವ್ಯಥೆಗೊಂಡ ಬಸವಣ್ಣ ಮನದಲ್ಲೇ ಅವನನ್ನು ಕ್ಷಮಿಸಿದ.

ಇನ್ನು ರಾಜ್ಯಕೋಶಗಳೇಕೆ?”

ಇತ್ತ ಕಾಶ್ಮೀರದ ಮಹಾದೇವ ಭೂಪಾಲನಿಗೆ ಚಿಂತೆ ಹೆಚ್ಚಿತು. ಎಷ್ಟುದಿನಗಳಾದರೂ ಚಿಕ್ಕಯ್ಯ ಹಿಂದಿರುಗಲಿಲ್ಲ. ಅವನೇನಾದರೂ ಸಿಕ್ಕಿ ಬಿದ್ದರೆ ತನ್ನ ದುಷ್ಕೃತ್ಯ ಬಯಲಾಗುವುದು ಖಂಡಿತ ಎಂಬ ಚಿಂತೆಯಲ್ಲಿರುವಾಗಲೇ ಕಲ್ಯಾಣದಿಂದ ತನ್ನರಮನೆಗೆ ಕೆಲವರು ಶರಣರು ಬಂದರು.

“ಮಹಾರಾಜರಾಗಿದ್ದುಕೊಂಡು ತಾವಿಂಥ ಹೇಯ ಕಾರ್ಯಕ್ಕೆ ಅಪೇಕ್ಷಿಸಬಹುದೇ ಪ್ರಭು? ಇದರಿಂದ ತಮಗೆ ಅಪಕೀರ್ತಿ ಬಂತು. ಬಸವಣ್ಣನ ಕೀರ್ತಿ ಹೆಚ್ಚಿತು. ಚಿಕ್ಕಯ್ಯ ಶಿವಶರಣನೆನಿಸಿದ. ಬಸವಣ್ಣನವರ ನಿಷ್ಠಾವಂತ ಅನುಯಾಯಿಯಾದ. ಆತ ಇನ್ನೆಂದೂ ಕಾಶ್ಮೀರಕ್ಕೆ ಬರುವುದಿಲ್ಲ.”

ರಾಜನಿಗೆ ಪರಮಾಶ್ಚರ್ಯ. ಕೊಲೆಗಡುಕನನ್ನು ಶರಣನನ್ನಾಗಿ ಪರಿವರ್ತಿಸಿದನೆ ಬಸವಣ್ಣ! ಪಾಷಾಣ ಹೃದಯದಲ್ಲಿ ಕರುಣೆಯ ಜಲ ಚಿಮ್ಮಿಸಿದನೆ! ಧನ್ಯ ಬಸವೇಶ. ನಿಜಕ್ಕೂ ನೀನೊಬ್ಬ ಮಹಾತ್ಮ. ನನ್ನ ಅಹಂಕಾರವನ್ನು ಕಳೆದೆ. ನಿನ್ನ ದರ್ಶನ ಪಾವನ. ಒಡನಾಟ ಪರಮಸುಖ. ಇನ್ನು ಈ ರಾಜ್ಯಕೋಶಗಳೇಕೆ? ಭೋಗ ಭಾಗ್ಯಗಳೇಕೆ ಎಂದು ಪಶ್ಚಾತಪಟ್ಟು ರಾಜಪದವಿಯನ್ನು ತೊರೆಯಲು ನಿಶ್ಚಯಿಸಿದ.

ಕಾಯಕವೇ ಮಹಾಮಂತ್ರ

ರಾಜ ತನ್ನ ಮಗ ಲಿಂಗಾರತಿಗೆ ರಾಜ್ಯವೊಪ್ಪಿಸಿದ. ತನ್ನಲ್ಲಿದ್ದ ಐಶ್ವರ್ಯವನ್ನೆಲ್ಲ ಭಕ್ತರಿಗೆ ದಾನ ಮಾಡಿದ. ಐಹಿಕ ಭೋಗಭಾಗ್ಯಗಳೆಲ್ಲವನ್ನು ತ್ಯಾಗಮಾಡಿ ಸಾಮಾನ್ಯ ಪ್ರಜೆಯಂತೆ ಕಲ್ಯಾಣ ಪಟ್ಟಣಕ್ಕೆ ಹೊರಟ ರಾಜ ಮಹಾದೇವ.

ರಾಜನಿಲ್ಲದ ರಾಜ್ಯದಲ್ಲಿ ರಾಣಿ ಇರುವುದೆಂತು? ಪತಿಯಿದ್ದೆಡೆಯಲ್ಲೇ ಪತ್ನಿಗೆ ಸಕಲ ಸೌಭಾಗ್ಯ. ರಾಣಿ ಪತಿಯೊಂದಿಗೇ ಹೊರಡುವ ನಿರ್ಧಾರ ತಿಳಿಸಿದಳು. ಆಕೆಯನ್ನು ತಡೆಯಲು ಮಹಾದೇವ ಎಷ್ಟೆಷ್ಟೋ ವಿಧದಲ್ಲಿ ಪ್ರಯತ್ನಿಸಿದ. “ಸಿರಿ ಸಂಪತ್ತನ್ನೆಲ್ಲ ಹೀಗೆ ಬಿಟ್ಟು ಬರುವುದೆ? ಮಗನೊಡನೆ ಸುಖವಾಗಿರು” ಎಂದು ಹೇಳಿದ. ಆದರೆ ಹೆಂಡತಿ ಒಪ್ಪಲಿಲ್ಲ.

ಬೇರೆ ಉಪಾಯ ಕಾಣದೆ ಮಹಾದೇವ ಪತ್ನಿಯೊಡಗೊಂಡು ಕಲ್ಯಾಣಕ್ಕೆ ಹೊರಟ. ಬೇಡವೆಂದ ಮಂತ್ರಿಗಳ ಮಾತು ಕೇಳಲಿಲ್ಲ. ಪ್ರಜೆಗಳ ಕಣ್ಣೀರು ಆತನನ್ನು ತಡೆದು ನಿಲ್ಲಿಸಲಿಲ್ಲ. ಸಾಮಾನ್ಯ ಪ್ರಜೆಯಂತೆ ಕಲ್ಯಾಣಕ್ಕೆ ಬಂದ. ಪಟ್ಟಣದ ಒಂದು ಭಾಗದಲ್ಲಿ ಸಣ್ಣ ಗುಡಿಸಲನ್ನು ಕಟ್ಟಿಕೊಂಡ. ಬಸವಣ್ಣ ರೂಪಿಸಿದ ಕಾಯಕ ತತ್ವ ಅವನ ಮನಸ್ಸನ್ನು ಸೆರೆ ಹಿಡಿದಿತ್ತು. ಸಕಲಜೀವಿಗಳ ಸುಖ ಸಾಧನೆಗೆ ಕಾಯಕವೇ ಮಹಾಮಂತ್ರ ಎಂಬ ತತ್ವದಲ್ಲಿ ಈಗ ನಂಬಿಕೆಯುಂಟಾಗಿತ್ತು. ಅದಕ್ಕಾಗಿ ಆತ ಮೋಳಿಗೆ ಕಾಯಕವನ್ನು ಕೈಗೊಂಡ.

ಶರಣರಿಂದ ಸ್ವಾಗತ

ಶಿವಸ್ಮರಣೆ ಮಾಡುತ್ತ ಅರುಣೋದಯಕ್ಕೆ ಮುನ್ನ ಏಳುವುದು, ಶಿವಪೂಜೆ ಮುಗಿಸಿ ಹೆಗಲಲ್ಲಿ ಕೊಡಲಿ ಹೊತ್ತು ಕಾಡಿಗೆ ಹೋಗುವುದು, ಮಧ್ಯಾಹ್ನದವರೆಗೂ ಕಟ್ಟಿಗೆ ಕಡಿದು ಹೊರೆ (ಮೋಳಿಗೆ) ಕಟ್ಟಿ ಹೊತ್ತುಕೊಂಡು ಕಲ್ಯಾಣ ಪಟ್ಟಣದ ಬೀದಿಗಳಲ್ಲಿ ಅಲೆದು ಮಾರುವುದು. ಇದು ಮಹಾದೇವನ ನಿತ್ಯಕರ್ಮವಾಯಿತು. ಶಿವಶರಣರ ಜ್ಞಾನದೇಗುಲ ಅನುಭವ ಮಂಟಪಕ್ಕೂ ಹೋಗಿಬರತೊಡಗಿದ. ಮೊದಲ ದಿನ ಅಲ್ಲಿಗೆ ಹೋದಾಗ ಅಮಿತಾನಂದದಿಂದ ಶಿವಶರಣರು ಸ್ವಾಗತಿಸಿದರು.

“ಕಾಶ್ಮೀರವೆತ್ತ ಕಲ್ಯಾಣವೆತ್ತ! ಸಕಲ ಸಂಪತ್ತಿನ ಸುಭೋಗವೆತ್ತ, ಕಷ್ಟದ ಕಟ್ಟಿಗೆಯ ಹೊರೆ ಎತ್ತ! ಎಂದು ಮನಸಾರೆ ಕೊಂಡಾಡಿದರು.

ಮಹಾದೇವನ ಪರಿವರ್ತನೆ ಬಸವಣ್ಣನವರನ್ನೂ ಕೂಡಾ ವಿಸ್ಮಯಗೊಳಿಸಿತು. ತನ್ನ ಕೊಲೆಗೆ ಸಂಚು ಹೂಡಿದ ಮಹಾದೇವ ಇವನೇ ಏನು? ಸಂಸಾರ, ಭೋಗ, ಅಜ್ಞಾನ, ಅಂಧ ಭಕ್ತಿಗಳಲ್ಲಿ ತೊಳಲುತ್ತಿದ್ದ ವ್ಯಕ್ತಿಯೆ ಈ ಮಹಾದೇವ ಎಂದು ಅಚ್ಚರಿಗೊಂಡರು.

ನಿನ್ನಲ್ಲಿ ಸೇರಿಸಿಕೊ”

ಶಿರಕರುಣೆಯೊಂದೇ ಬಾಳಿನ ಗುರಿ. ಶರಣರ ಸಖ್ಯವೇ ಪರಮಪದವೆಂದರಿತ ಮಹಾದೇವನಿಗೆ ಈಗ ಹೊಸ ಜನ್ಮ.

ಈಗಾಗಲೇ ಆತ ಮೋಳಿಗೆಯನ್ನು ಮಾರುವ ಪವಿತ್ರ ಕಾರ್ಯವನ್ನು ಕೈಕೊಂಡಿದ್ದಾನೆ. ಆದ್ದರಿಂದ ಶಿವಶರಣರು ಇನ್ನು ಮುಂದೆ ಆತನನ್ನು “ಮೋಳಿಗೆಯ ಮಾರಯ್ಯ”ನೆಂದೇ ಕರೆಯಬೇಕೆಂದು ಬಸವಣ್ಣ ಹೇಳಿದರು.

ಶಿವಶರಣರು ತಮ್ಮ ಭಕ್ತಿಯನ್ನು, ಭಾವನೆಗಳನ್ನು ಮಾತುಗಳಲ್ಲಿ ತೋಡಿಕೊಂಡಿದ್ದಾರೆ. ಇವಕ್ಕೆ “ವಚನಗಳು” ಎಂದು ಹೆಸರು.

ಕಾಯಸಹಿತವಾಗಿ ಜೀವಸಹಿತವಾಗಿ ಸಮಾಧಿ ಮಾಡಿಸಿಕೊಂಡ ಶಿವಭಕ್ತರು ಅನೇಕರುಂಟು. ಉಗ್ರಭಕ್ತಿಯನ್ನಾಚರಿಸಿ ಶಿವನೊಲುಮೆಗೆ ಪಾತ್ರರಾದವರುಂಟು. ಕೈಲಾಸ ಪದವಿಯನ್ನು ಪಡೆಯಲು ಹಲವಾರು ಬಗೆಯ ಭಕ್ತಿಯನ್ನು ಆಚರಿಸಿದವರುಂಟು. ಆದರೆ ಕಾಯಸಮಾಧಿ, ಕೈಲಾಸಪದವಿ ಏನೊಂದನ್ನೂ ಬಯಸದ ಮಾರಯ್ಯ ಹೀಗೆ ಹಾಡಿದರು:

ಕಾಯ ಸಮಾಧಿಯನೊಲ್ಲೆ ನೆನಹು ಸಮಾದಿಗೆ ನಿಲ್ಲೆ ಕೈಲಾಸವೆಂಬ ಭವಸಾಗರವನೊಲ್ಲೆ ಎನ್ನ ಅಲ್ಲಿಗೆ ಇಲ್ಲಿಗೆ ಎಂದೆಳೆಯದೆ ನಿನ್ನಲ್ಲಿ ಕೂಟಸ್ಥ ಮಾಡು ನಿಃಕಳಂಕ ಮಲ್ಲಿಕಾರ್ಜುನ”

ಎಂದು ಮಲ್ಲಿಕಾರ್ಜುನನಲ್ಲಿ ಬೇಡಿಕೊಂಡರು.

ರಾಜನಾಗಿದ್ದಾಗ ಇದ್ದಂತಹ ಯಾವುದೇ ಸುಖ ಸಂಪತ್ತುಗಳು ಇಂದಿಲ್ಲ. ಜಂಗಮರ ಸತ್ಕಾರಕ್ಕೆ ಅಗತ್ಯವಾದ ಧನಧಾನ್ಯಗಳೊಂದೂ ಇಲ್ಲ. ಕೈಕೊಂಡಿರುವುದು ಸಾಮಾನ್ಯವೆನಿಸುವ ಮೋಳಿಗೆಯ (ಕಟ್ಟಿಗೆ) ಕಾಯಕ. ಅಷ್ಟರಿಂದಲೇ ಗಂಡಹೆಂಡಿರ ಜೀವನ ಸಾಗಬೇಕು. ಇಂಥ ಪರಿಸ್ಥಿತಿಯಿದ್ದರೂ ಶಿವಶರಣರ ಸೇವೆಯನ್ನು ಬಿಡಲಿಲ್ಲ ಮಾರಯ್ಯ. ಗಂಡಹೆಂಡತಿಗೆ ಅರೆಕೊರೆಯಾದರೂ ಸರಿಯೇ; ಪ್ರತಿದಿನವೂ ಶಿವಶರಣ ಸಂತರ್ಪಣೆ ಆಗಲೇಬೇಕು. ಆಗಲೇ ಮಾರಯ್ಯನ ಮನಸ್ಸಿಗೆ ಸಮಾಧಾನ.

ಅಂತಹ ಭಕ್ತಿ ಉಂಟೆ?”

ಬಸವಣ್ಣನವರ ಮಹಾಮನೆಯಲ್ಲಿ ಜಂಗಮರಿಗೆ ನಿತ್ಯ ಸತ್ಕಾರ. ಬಗೆಬಗೆಯ ರುಚಿಕರ ಭಕ್ಷ್ಯಗಳ ಸಮಾರಾಧನೆ. ಆದರೆ ಮಾರಯ್ಯನ ಮನೆಯಲ್ಲಿ ರಾಗಿಯ ಅಂಬಲಿಯೇ ಮಹಾಪ್ರಸಾದ. ಸ್ವಂತ ಕಾಯಕದಿಂದ ಬಂದದ್ದು ಈ ಪ್ರಸಾದ. ಅದಕ್ಕೆ ಭಕ್ತಿಯೆಂಬ ಸಿಹಿಯ ಸೇಚನೆ. ಶಿವ ಶರಣರು ಅಧಿಕ ಸಂಖ್ಯೆಯಲ್ಲಿ ಮಾರಯ್ಯನ ಮನೆಗೆ ಬರತೊಡಗಿದರು. ಆ ರುಚಿಕರ ಅಂಬಳಕವನ್ನೇ ಸೇವಿಸಿದರು. ಕುಡಿದು ಸುಖಿಸಿದರು. ಅವರು ಬಸವಣ್ಣನವರ ಮನೆಯ ಪ್ರಸಾದವನ್ನೂ ಸ್ವೀಕರಿಸಿದರು. ಆದರೆ ಮಾರಯ್ಯನ ಮನೆಯ ಅಂಬಳಕದ ಮುಂದೆ ಬಸವಣ್ಣನವರ ಮನೆಯ ಭಕ್ಷ್ಯ ಭೋಜ್ಯಗಳು ಸಪ್ಪೆಯಾಗಿ ತೋರಿದವು. ಮಾರಯ್ಯನ ಮನೆಯಲ್ಲುಂಡ ಶಿವಶರಣರು ಬಸವಣ್ಣನವರಿಗೆ ಹೇಳಿದರು:

“ಬಸವರಸ! ಮಾರಯ್ಯನ ಮನೆಯ ಅಂಬಳಕ ಏನು ರುಚಿ! ಎಂಥ ಸಂತೃಪ್ತಿ! ಆತನ ಅಂಬಳಕಕ್ಕೆ ನಿಮ್ಮರಮನೆಯ ಷಡ್ರಸಾನ್ನ ಸರಿಯಾಗಬಲ್ಲುದೇ? ಅಂತಹ ಭಕ್ತ ಈ ಲೋಕದೊಳಗುಂಟೆ?”

ಅಂಬಳಕವನ್ನು ಹೊಗಳಿದ್ದಷ್ಟೇ ಅಲ್ಲ; ಅವನಂಥ ಭಕ್ತ ಈ ಲೋಕದೊಳಗಿಲ್ಲ ಎಂದರು.

ಬಸವಣ್ಣನವರು ಬಂದರು

ಮಾರಯ್ಯನನ್ನು ಹೀಗೆ ಹೊಗಳಿದ್ದರಿಂದ ಬಸವಣ್ಣ ಅಸೂಯೆಪಡಲಿಲ್ಲ. ಅವರ ಮಾತಿಗೆ ಮುಗುಳು ನಗೆ ಸೂಸಿದರು. ಮಾರಯ್ಯ ಎಂಥ ಬಡವನೆಂಬುದು ಎಲ್ಲರಿಗೂ ಗೊತ್ತು. ಆದರೆ ಶಿವಭಕ್ತಿಯ ನಿಧಿಯನ್ನು ದೊರಕಿಸಿಕೊಂಡವರಲ್ಲಿ ಆತ ಪ್ರಮುಖನೆಂಬುದು ಬಸವಣ್ಣನವರಿಗೆ ಗೊತ್ತು. ಬಹುಮಂದಿ ಜಂಗಮರ ಸತ್ಕಾರ ನಡೆಸಲು ಮಾರಯ್ಯನಿಗೆ ಅನುಕೂಲ ಒದಗಿಸಬೇಕು. ಇದೇ ನೆಪದಲ್ಲಿ ಅವನನ್ನು ಪರೀಕ್ಷಿಸಲೂ ಬೇಕು ಎಂದು ಯೋಚಿಸಿದರು ಬಸವಣ್ಣನವರು.

ಒಂದು ದಿನ ವೇಷ ಮರೆಸಿಕೊಂಡು ಮಾರಯ್ಯನಿಲ್ಲದ ಸಮಯ ನೋಡಿಕೊಂಡು ಅವನ ಮನೆಗೆ ಬಂದರು ಬಸವಣ್ಣ. ಜಂಗಮ ವೇಷದಲ್ಲಿ ಬಂದವರು ಬಸವಣ್ಣನೆಂಬುದು ಮಹಾದೇವಿಗೂ ತಿಳಿಯಲಿಲ್ಲ. ಆಕೆ ತನ್ನ ವ್ರತದಂತೆ ಬಸವಣ್ಣನನ್ನು ಸತ್ಕರಿಸಿದಳು. ಜಂಗಮನು ಶಿವಪೂಜೆ ಮುಗಿಸಿದ ನಂತರ ಪ್ರಸಾದವೆಂದು ಅಂಬಳಕವನ್ನು ಬಡಿಸಿದಳು. ಅದನ್ನು ಕುಡಿದ ಬಸವಣ್ಣನವರಿಗೆ ಆಗ ತಿಳಿಯಿತು: ತನ್ನ ಅರಮನೆಯ ಭಕ್ಷ್ಯ ಭೋಜ್ಯಗಳಿಗಿಂತಲೂ ಮಾರಯ್ಯನ ಮನೆಯ ಅಂಬಲಿಕ ರುಚಿಯೇ ಮಿಗಿಲೆಂದು; ಶಿವಶರಣರು ಹೊಗಳಿದುದರಲ್ಲಿ ಸತ್ಯವಿದೆಯೆಂದು.

ಹೊನ್ನು ಹೇಗೆ ಬಂತು?”

ಪ್ರಸಾದ ಸ್ವೀಕರಿಸಿದ ಬಸವಣ್ಣನವರು ಸುಮ್ಮನೆ ಬರಲಿಲ್ಲ. ಮಹಾದೇವಿಗೆ ತಿಳಿಯದಂತೆ ಶಿವಪೂಜೆಯ ಪೀಠದಲ್ಲಿ ಎರಡು ಚೀಲಗಳಲ್ಲಿ ಹೊನ್ನುಗಳನ್ನು ಇಟ್ಟು ಬಂದರು.

ಕಟ್ಟಿಗೆ ಮಾರಿ ಮನೆಗೆ ಬಂದ ಮಾರಯ್ಯ ಶಿವಪೂಜೆಗೆ ಕುಳಿತ. ಪೂಜಾ ಪೀಠದ ಬಳಿಯಿದ್ದ ಹೊನ್ನುಗಳನ್ನು ಕಂಡು ಚಕಿತನಾದ.

“ಈ ಹೊನ್ನುಗಳನ್ನು ಎಲ್ಲಿಂದ ತಂದೆ? ಯಾರು ಕೊಟ್ಟರು? ಏಕೆ ತೆಗೆದುಕೊಂಡೆ?” ಎಂದು ಅನೇಕ ಬಗೆಯಲ್ಲಿ ಪತ್ನಿಯನ್ನು ಪ್ರಶ್ನಿಸಿದ.

ಬಂಗಾರದ ನಾಣ್ಯಗಳನ್ನು ಕಂಡು ಮಹಾದೇವಿಗೂ ಆಶ್ಚರ್ಯ.

“ಹೊನ್ನುಗಳು ಹೇಗೆ ಬಂದವೋ ನಾನು ಕಾಣೆ; ನಾನು ತರಲಿಲ್ಲ, ತೆಗೆದುಕೊಳ್ಳಲಿಲ್ಲ” ಎಂದಳು.

ಮಹಾದೇವಿ ಜ್ಞಾಪಿಸಿಕೊಂಡು ಹೇಳಿದಳು; “ಜಂಗಮರೊಬ್ಬರು ಬಂದಿದ್ದರು. ಪ್ರಸಾದ ಸ್ವೀಕರಿಸಿ ಹೋದರು.”

ಬಂದವನು ಬಸವಣ್ಣನಲ್ಲದೆ ಬೇರಾರೂ ಅಲ್ಲವೆಂಬುದು ಮಾರಯ್ಯನಿಗೆ ಖಚಿತವಾಯಿತು. ತಾನು ತನ್ನ ವಿಷಯ ಯೋಚಿಸುವುದನ್ನು ಬಿಟ್ಟು ಮಲ್ಲಿಕಾರ್ಜುನನ ಸಹಜ ಭಕ್ತನಾಗಿದ್ದೇನೆ. ಬಸವಣ್ಣ ಇದನ್ನು ತಿಳಿದುಕೊಳ್ಳಲಿಲ್ಲ. ನಾನು ಬಡವನೆಂದು ಈ ಹಣವನ್ನು ಬಿಟ್ಟು ಹೋಗಿದ್ದಾನೆ. ಹೀಗೆಂದುಕೊಂಡ ಮಾರಯ್ಯ, ಕೊಡುವವನು ದೇವರು, ಇತರರೇಕೆ ತನಗೆ ಕೊಡುವ ಯೋಚನೆ ಮಾಡಬೇಡ ಎಂದುಕೊಂಡ.

ನಾನು ಬಡವನಾದರೆ ನನಗೆ ಕೊಡುವ ದೇವರು ಬಡವನೆ? ಇದು ಅನ್ಯರಿಂದ ಬಂದ ಹಣವೇ ಹೊರತು ತನ್ನ ಕಾಯಕದಿಂದ ದೊರೆತ ಫಲವಲ್ಲ. ಅನ್ಯರಿಂದ ಬಂದ ಹಣ ಜಂಗಮಾರ್ಚನೆಗೆ ನಿಷಿದ್ಧ ಎಂಬ ಸತ್ಯವನ್ನು ಕಾಶ್ಮೀರದಲ್ಲಿದ್ದಾಗಲೇ ತಿಳಿದುಕೊಂಡಾಗಿದೆ ಎಂದು ಯೋಚಿಸಿದ ಮಾರಯ್ಯ ಆ ಹೊನ್ನುಗಳನ್ನು ಜಂಗಮರಿಗೆ ಕೊಟ್ಟುಬಿಟ್ಟನು.

ನನ್ನ ದೇವರಿಗೆ ಬಡತನವೇ?”

ಅನಂತರ ಬಸವಣ್ಣನವರನ್ನು ಕಂಡು “ಹೀಗೆ ಮಾಡುವರೆ ಬಸವೇಶ?” ಎಂದು ಕೇಳಿದ. ಅದಕ್ಕೆ ಬಸವಣ್ಣ “ಹಣ ತಾನಾಗಿ ಬಂದರೆ ಬೇಡ ಎನ್ನಬೇಕೆ?” ಎಂದರು.

ಮಾರಯ್ಯನಿಗೆ ಸಹಿಸಲಾಗಲಿಲ್ಲ. “ಹಾಸ್ಯವೇಕೆ ಬಸವಣ್ಣ? ಹಣವುಳ್ಳಡೆ ಉಣಬೇಕು. ನನ್ನನ್ನು ಹಾಸ್ಯ ಮಾಡುವುದು ನಿಮಗೆ ಸರಿಯೇ? ಈ ಬಗೆಯ ಹಣದ ಚೀಲಗಳನ್ನು ನಾನು ಕಂಡೇ ಇರಲಿಲ್ಲ. ನಿಮ್ಮಿಂದ ನೋಡುವ ಹಾಗಾಯಿತು” ಎಂದನು. ಮಾರಯ್ಯ ರಾಜನಾಗಿರಲಿಲ್ಲವೇ? ಇಂತಹ ಹೊನ್ನಿನ ಚೀಲಗಳು ಎಷ್ಟನ್ನು ಕಂಡಿದ್ದನೋ! ಎಷ್ಟು ಐಶ್ವರ್ಯವಿತ್ತು ಅವನಿಗೆ! ತಾನೇ ಅವೆಲ್ಲ ಬೇಡ ಎಂದು ಬಿಟ್ಟು ಬಂದಿರಲಿಲ್ಲವೇ? ತಾನು ಬಡವ, ಹಣವನ್ನೇ ಕಂಡಿಲ್ಲ ಎಂದು ಭಾವಿಸಿ ಬಸವಣ್ಣ ಹೀಗೆ ಹಣವನ್ನು ತಂದಿಟ್ಟು ಹಾಸ್ಯ ಮಾಡಿದ್ದಾನೆ ಎಂದುಕೊಂಡು ಮಾರಯ್ಯ ನೊಂದುಕೊಂಡ.

ಈಗ ಬಸವಣ್ಣನಿಗೆ ತನ್ನ ತಪ್ಪಿನ ಅರಿವಾಯಿತು. ಭಕ್ತನ ಮನನೋಯಿಸಿದ್ದಕ್ಕೆ ಪಶ್ಚಾತ್ತಾಪವಾಯಿತು.

“ಮದ್ಗುರುರಾಯ ಮೋಳಿಗೆಯಯ್ಯ ಇನಿತು ಮೂದಲಿಸಲೇಕೆ? ನೀನೆನಗೆ ಗುರುಸಂಗಮೇಶ. ನಿಮ್ಮ ಮನವ ನಿಮಗೊಪ್ಪಿಸಿ ನಾನು ಶುದ್ಧ ಕಾಣಾ” ಎಂದು ತನ್ನ ತಪ್ಪನ್ನು ಒಪ್ಪಿಕೊಂಡರು. ಶರಣ ಸಮೂಹದಲ್ಲಿ ಮಾರಯ್ಯನ ಕಾಯಕ ನಿಷ್ಠೆ ಹಿರಿಮೆಯುಳ್ಳದ್ದೆಂದು ಕೊಂಡಾಡಿದರು. 

ನನ್ನನ್ನು ಹಾಸ್ಯ ಮಾಡುವುದು ನಿಮಗೆ ಸರಿಯೇ?

ಮಾರಯ್ಯನ ಕಾಯಕ ನಿಷ್ಠೆಯಿಂದ ಸಂತೋಷಗೊಂಡ ಚೆನ್ನಬಸವಣ್ಣನವರು ಮೋಳಿಗೆಯ ಕಾಯಕವನ್ನು ಆಧ್ಯಾತ್ಮಕ್ಕೆ ಹೋಲಿಸಿದ್ದಾರೆ:

ಜ್ಞಾನನಿಧಿ ಮಹಾದೇವಿ

ಪತಿಯು ಶಿವತತ್ವದ ಸತ್ಯವನ್ನರಿಯಲು ಮಹಾದೇವಮ್ಮ ನೀಡಿದ ಸಹಕಾರ ಮಹತ್ತರವಾದುದು. ಈ ಲೋಕದ ಗಂಡಿಗೆ ಹೆಂಡತಿಯಾಗಿದ್ದುಕೊಂಡು ವಿನಯದಿಂದ ಕಾಯಕಮಾಡುತ್ತಾ ಸಾಧನೆಯ ಶಿಖರಕ್ಕೇರಿದ ಸಾಧ್ವಿ ಮಹಾದೇವಮ್ಮ. ಇವರದು ಆದರ್ಶಪ್ರಾಯ ಆಧ್ಯಾತ್ಮಿಕ ದಾಂಪತ್ಯ. ಪತಿ ರಾಜಪಟ್ಟವನ್ನು ತ್ಯಜಿಸಿದರೆ ಮಹಾದೇವಮ್ಮ ರಾಣಿಯ ಪಟ್ಟನ್ನು ತೊರೆದಳು. ಪತಿಯನ್ನು ನೆರಳಿನಂತೆ ಆಶ್ರಯಿಸಿ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದವಳು. ಪತಿಯ ಕಾಯಕ ನಿಷ್ಠೆ ಜಂಗಮಾರ್ಚನೆಗಳಲ್ಲಿ ನಿಷ್ಠೆಯುಳ್ಳವಳು. ಆತ್ಮಜ್ಞಾನವನ್ನು ಅರಿತು ಆಚರಿಸುವುದರಲ್ಲಿ ಆಕೆ ಪತಿಗಿಂತ ಒಂದು ಹೆಜ್ಜೆ ಮುಂದೆ. ಮಾರಯ್ಯನ ಅಜ್ಞಾನವನ್ನು ಕಳೆದು ಆತ್ಮಜಾಗೃತಿ ಉಂಟು ಮಾಡಿದವಳು.

ಮಾರಯ್ಯನಿಗೆ ಒಮ್ಮೆ ಬೇಸರ ಕವಿಯಿತು. ತಾನು ರಾಜ್ಯತ್ಯಾಗಮಾಡಿ ಕಾಶ್ಮೀರದಿಂದ ಬಂದದ್ದಕ್ಕೆ ಕಲ್ಯಾಣದಲ್ಲಿ ಪಡೆದುದೇನು? “ಶಿವಭಕ್ತರ ಮನೆಗೆ ಕಟ್ಟಿಗೆಯನ್ನು ಹೊತ್ತು ನೀವು ಕೊಟ್ಟ ಕಾಯಕದ ಕೃತ್ಯವನ್ನು ಇನ್ನೆಷ್ಟು ದಿನ ನಿರ್ವಹಿಸಬೇಕು? ಇ ಕಾಯಕವಿನ್ನು ಸಾಕು. ನಿನ್ನ ಅರಿವಿನ ಗುಡಿಯ ಬಾಗಿಲು ತೆರೆದೊಮ್ಮೆ ತೋರಾ” ಎಂದು ಶಿವಲಿಂಗದಲ್ಲಿ ಐಕ್ಯವಾಗಲು ಹಂಬಲಿಸಿದ ಮಾರಯ್ಯ.

ಪತಿಯ ಪರಿತಾಪ ಕಂಡು ಮಹಾದೇವಮ್ಮನಿಗೆ ಮರುಕ ಉಂಟಾಯಿತು. ಇಷ್ಟು ದಿನ ಶಿವಶರಣರ ಸಂಗದಲ್ಲಿದ್ದರೂ ಶಿವಪಥದ ರಹಸ್ಯ ಪತಿಗೆ ತಿಳಿಯದೆ ಹೋಯಿತಲ್ಲಾ ಎಂದು ವ್ಯಥೆಪಟ್ಟಳು. ಪತಿಯನ್ನು ಕುರಿತು,

“ಇದೇಕೆ ಹೀಗೆ ಹಂಬಲಿಸುತ್ತೀರಿ? ಈಗ ನೀವು ಶಿವನಲ್ಲಿ ಐಕ್ಯವಾಗಬೇಕೆಂದು ಹಂಬಲಿಸುತ್ತಿದ್ದರೆ ಇದುವರೆಗೂ ಏನಾಗಿದ್ದೀರಿ? ಸಕಲ ದೇಶಕೋಶವಾಸವನ್ನೂ ಬಿಟ್ಟು ಬಂದುದಕ್ಕೆ ಕೈಕೂಲಿಯೇ ನಿಮ್ಮ ಭಕ್ತಿ? ಭಕ್ತಿ ಎಂಬುದು ಸರ್ವಾರ್ಪಣೆಯ ಸಾಧನೆಗೆ ಹೆಚ್ಚಿದ ನಂದಾದೀಪ. ಶಿವ ಬೇರೆ, ನೀವು ಬೇರೆ ಎಂಬ ಮಾತು ಸರಿಯೇ? ಶಿವನನ್ನು ಎದುರಿಟ್ಟುಕೊಂಡು ನೋಡುತ್ತೇನೆಂಬ ಭಿನ್ನ ಭಾವವನ್ನು ಬಿಡಿ. ಕಿಚ್ಚು ಹತ್ತಿದ ಕರ್ಪೂರದಂತೆ ಕ್ರಮೇಣ ಕರಗಿ ಬಯಲಾಗುವುದೇ ಜೀವ-ಶಿವ ಸಾಮರಸ್ಯದ ಸುಖ” ಎಂದು ಜೀವಿಯು ಶಿವನಲ್ಲಿ ಒಂದಾಗುವ ರೀತಿಯನ್ನು ವಿವರಿಸಿದಳು.

ಬರೆದಿರುವ ವಚನಗಳ ಒಟ್ಟು ಸಂಖ್ಯೆ ೮೧೦. ಮಾರಯ್ಯನ ವಚನಗಳ ಅಂಕಿತ “ನಿಃಕಳಂಕ ಮಲ್ಲಿಕಾರ್ಜುನ” ಎಂದಿದೆ. ಈತನು ಜೀವಿಸಿದ್ದ ಕಾಲ ಸುಮಾರು ೧೧೬೦.

ಮಾರಯ್ಯನ ಪತ್ನಿ ಮಹಾದೇವಮ್ಮ ಕೂಡಾ ವಚನ ಕಾರ್ತಿಯಾಗಿದ್ದು ಸುಮಾರು ೬೯ ವಚನಗಳು ಆಕೆಯ ಹೆಸರಿನಲ್ಲಿವೆ. ಮಹಾದೇವಮ್ಮ ಬರೆದಿರುವ ವಚನಗಳ ಅಂಕಿತ “ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನ” ಎಂದಿದೆ. “ಮೋಳಿಗೆಯ ಮಾರಯ್ಯ ಮತ್ತು ರಾಣಿ ಮಹಾದೇವಿಯವರ ವಚನಗಳು” ಎಂಬ ಗ್ರಂಥದಲ್ಲಿ ಇವರ ವಚನಗಳನ್ನು ನೋಡಬಹುದು.

ಕಲ್ಯಾಣದಲ್ಲಿ ಮೋಳಿಗೆಯ ಮಾರಯ್ಯನ ಕೊಪ್ಪಲಿದೆ ಎಂದು ಪ್ರತೀತಿ. ಕಲ್ಯಾಣದ ಪೂರ್ವದಿಕ್ಕಿಗೆ ಹನ್ನೆರಡು ಮೈಲಿಗಳ ದೂರದಲ್ಲಿ ಒಂದು ಗವಿ ಇದೆ. ಇದನ್ನು “ಮೋಳಿಗೆ ಮಾರಯ್ಯನ ಗವಿ” ಎಂದು ಕರೆಯುತ್ತಾರೆ. ಗವಿಯ ಮುಂಭಾಗದಲ್ಲಿ ಒಂದು ಮರವಿದೆ. ಈ ಸ್ಥಳದಲ್ಲಿ ಮಾರಯ್ಯ ಒಣಗಿದ ಕಟ್ಟಿಗೆಗಳನ್ನು ಸಂಗ್ರಹಿಸಿ ಇಡುತ್ತಿದ್ದನೆಂದೂ, ಒಂದು ಒಣಕಟ್ಟಿಗೆ ಮಾತ್ರ ಅಲ್ಲಿ ಉಳಿದು, ಚಿಗಿತು ಮರವಾಯಿತೆಂದೂ ಜನರು ಹೇಳುತ್ತಾರೆ.