ಕಥಕ್ ನೃತ್ಯ ಪರಿಣತರೂ ೧೯೩೮ರಿಂದ ೧೯೭೧ರವರೆಗೆ ಭಟ್ಕಂಡೆ ಸಂಗೀತ ಮಹಾ ವಿದ್ಯಾಲಯದ ನಾಟ್ಯ ಶಾಖೆಯ ಮುಖ್ಯಸ್ಥರೂ ಆಗಿದ್ದ ಮೋಹನ ಕಲ್ಯಾಣ ಪೂರ್‌ಕರ್‌ರವರು ೧೯೧೩ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.

ಮುಂಬಯಿಯ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಗಿಸಿ, ಧಾರವಾಡದ ಕರ್ನಾಟಕ ಕಾಲೇಜಿಗೆ ಬಂದ ನಂತರ ಶ್ರೀಯುತರ ಆಸಕ್ತಿ ನೃತ್ಯದ ಕಡೆ ತಿರುಗಿತು. ಈ ಆಸಕ್ತಿ ಇವರನ್ನು ಜಯಪುರ ಘರಾಣಾದ ಗುರು ಸುಂದರ ಪ್ರಸಾದ್ ಮತ್ತು ಲಕ್ನೋ ಘರಾಣೆಯ ಆಚನ್ ಮಹಾರಾಜ್ ಮತ್ತು ಶಂಭು ಮಹಾರಾಜರಲ್ಲಿಗೆ ಕೊಂಡೊಯ್ಯಿತು.

ಈ ನೃತ್ಯ ಶಿಕ್ಷಣದ ನಂತರ ಅವರು ಆಗ ಮಾರಿಸನ್ ಸಂಗೀತ ಮಹಾ ವಿದ್ಯಾಲಯ ಎಂದು ಕರೆಯಲ್ಪಡುತ್ತಿದ್ದ ಭಟ್ಕಂಡೆ ಸಂಗೀತ ಮಹಾ ವಿದ್ಯಾಲಯದಲ್ಲಿ ಕಥಕ್ ಶೈಲಿಯ ಪ್ರಾಧ್ಯಾಪಕರಾಗಿ ೩೩ ವರ್ಷಗಳ ಕಾಲ ಕೆಲಸ ಮಾಡಿ ಅನೇಕ ಶಿಷ್ಯರನ್ನು ತಯಾರಿಸಿ ೧೯೭೧ರಲ್ಲಿ ನಿವೃತ್ತರಾದರು.

ಕೇಂದ್ರ ಸಂಗೀತ-ನಾಟಕ ಅಕಾಡೆಮಿ ಶ್ರೀಯುತರನ್ನು ೧೯೬೨ರಲ್ಲಿ ತನ್ನ ಪ್ರಶಸ್ತಿ ನೀಡಿ ಗೌರವಿಸಿತು. ಕಥಕ್ ನೃತ್ಯ ಶೈಲಿಯಲ್ಲಿ ಶ್ರೀಯುತರಿಗೆ ಚಿರಸ್ಥಾಯಿ ಸ್ಥಾನವಿರುವ ಶ್ರೀಯುತರಿಗೆ ರಾಜ್ಯ ಸಂಗೀತ-ನಾಟಕ ಅಕಾಡೆಮಿಯ ೧೯೭೧-೭೨ನೇ ಸಾಲಿನ ಪ್ರಶಸ್ತಿಯನ್ನಿತ್ತು ಗೌರವಿಸಿದೆ.