Categories
ಚಿತ್ರಕಲೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಮೋಹನ್ ಸಿತನೂ‌ರ್‌

ಕರ್ನಾಟಕದ ಚಿತ್ರಕಲಾ ವಲಯದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದವರು ಮೋಹನ್ ಹೆಚ್.ಸಿತನೂ‌. ಗ್ರಾಫಿಕ್ ಕಲೆಯ ನಿಷ್ಣಾತ ಕಲಾವಿದರು. ಕುಂಚದ ಸಖ್ಯದಿಂದ ಅರಳಿ ನಳನಳಿಸಿದ ಪ್ರತಿಭಾಶಾಲಿಗಳು.
ಗುಲ್ಬರ್ಗ ಜಿಲ್ಲೆಯಲ್ಲಿ ೧೯೫೫ರ ನವೆಂಬರ್ ೧೯ರಂದು ಜನಿಸಿದ ಮೋಹನ್ ಹೆಚ್.ಸಿತನೂ‌ ಕಲಾಶಿಕ್ಷಕರು. ಗುಲ್ಬರ್ಗಾದ ಐಡಿಯಲ್ ಫೈನ್ ಆರ್ಟ್ ಸೊಸೈಟಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ದಶಕಕ್ಕೂ ಹೆಚ್ಚು ಕಾಲ ಹೊಸ ತಲೆಮಾರಿಗೆ ಕುಂಚ ಕಲೆಯ ಕಲಿಸಿದವರು. ಗ್ರಾಫಿಕ್ ಕಲೆಯಲ್ಲಿ ವಿಶೇಷ ಅಧ್ಯಯನ ಮೋಹನ್ ಅವರ ಹೆಗ್ಗಳಿಕೆ. ರಾಜ್ಯ- ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಕಲಾಶಿಬಿರಗಳಲ್ಲಿ ಕಲಾಕೃತಿಗಳ ಪ್ರದರ್ಶನ, ಅಪಾರ ಮೆಚ್ಚುಗೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾಗಿಯೂ ಅನುಪಮ ಸೇವೆ ಸಲ್ಲಿಸಿದವರು. ಬೆಂಗಳೂರು, ಮುಂಬಯಿ, ದೆಹಲಿ, ಚೆನ್ನೈ, ಭೂಪಾಲ್, ಜೈಪುರ ಹಾಗೂ ವಿದೇಶಿಯ ಕಲಾಗ್ಯಾಲರಿಯಲ್ಲಿ ಮೋಹನ್ ಅವರ ಕಲಾಕೃತಿಗಳು ಸಂಗ್ರಹವಾಗಿರುವುದು ವಿಶೇಷ ಸಾಧನೆ. ಕಲಾರಚನೆಯಲ್ಲಿ ಅನವರತ ನಿರತರು, ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಕಲಾಧ್ಯಾನಿ.