ಕರ್ನಾಟಕದಲ್ಲಿ ಜನಿಸಿ, ದೇಶದೆಲ್ಲೆಡೆ ಸಂಗೀತ ವಿಮರ್ಶಕರಾಗಿ ಖ್ಯಾತಿ ಗಳಿಸಿ ಮುಂಬೈಯಲ್ಲಿ ನೆಲೆಸಿರುವ ಪಂ. ಮೋಹನ ದತ್ತಾತ್ರೇಯ ನಾಡಕರ್ಣಿಯವರು ಸಂಗೀತ ಕಲಾ ವಿಮರ್ಶಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಕೇಳಿ ಬರುವ ಎತ್ತರದ ಹೆಸರು.

ಮೋಹನ ನಾಡಕರ್ಣಿಯವರು ಜನಿಸಿದ್ದು ೧೯೨೨ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಡಲ ತೀರದ ಕಾರವಾರದಲ್ಲಿ ಸಂಸ್ಕೃತ, ಸಾಹಿತ್ಯ ಹಾಗೂ ಪ್ರಾಚೀನ ಭಾರತೀಯ ಸನಾತನ ಸಂಸ್ಕೃತಿ ಕುರಿತು ಆಳವಾದ ಅಧ್ಯಯನ ನಡೆಸಿ ಉನ್ನತ ಪದವಿ ಪಡೆದಿರುವ ಅವರು ರಾಷ್ಟ್ರದಲ್ಲಿ ನಡೆದ ಅನೇಕ ಪ್ರತಿಷ್ಠಿತ ಸಂಗೀತಗಾರರ ಸಂಗೀತ ಹಾಗೂ ಸಂಗೀತ ಸಮ್ಮೇಳನ ಕುರಿತು ವಿಮರ್ಶಾ ಲೇಖನ ಬರೆದಿದ್ದಾರೆ. ಅವರು ಬರೆದ ಸಂಗೀತ ವಿಮರ್ಶಾ ಲೇಖನಗಳು ಸುಮಾರು ೧೫೦೦ ಅಧಿಕ.

Bombay Chronicle’, `Free press journal’, `Times of india’, `Indian Express, Illustred weekly of India’, Economic Times of India’ – ಮುಂತಾದ ರಾಷ್ಟ್ರದ ಪ್ರತಿಷ್ಠಿತ ಪತ್ರಿಕೆಗಳಿಗೆ ಅವರು ನಿರಂತರವಾಗಿ ಸಂಗೀತ ವಿಮರ್ಶಾ ಲೇಖನ ಬರೆದು ಸಂಗೀತ ಕ್ಷೇತ್ರದ ಪ್ರಸಾರದಲ್ಲಿ ಅಪಾರ ಶ್ರಮ ವಹಿಸಿದ್ದಾರೆ. ‘ಗುರುದೇವ ಶರಣ’ ಎಂಬ ಅಂಕಿತನಾಮದಿಂದ ಅವರು ಅನೇಕ ಆಧ್ಯಾತ್ಮಿಕ ಲೇಖನ ಬರೆದಿದ್ದಾರೆ. ದೇಶದ ಸುಮಾರು ೩೦ ಜನ ಪ್ರತಿಷ್ಠಿತ ಸಂಗೀತಗಾರರ ನೇರ ಸಂದರ್ಶನ ಪಡೆದು ಸಾಕ್ಷ್ಯಚಿತ್ರಕ್ಕೆ ಘನತೆ ತಂದಿದ್ದಾರೆ. ಭೋಪಾಲ, ಔರಂಗಾಬಾದ, ಕೋಲ್ಕತ್ತಾ, ದೆಹಲಿ, ಸೋಮನಾಥಪುರ ಮುಂತಾದ ರಾಷ್ಟ್ರೀಯ ಸಂಗೀತ ನೃತ್ಯೋತ್ಸವದ ವಿಶೇಷ ಸಂಗೀತ ಸಮೀಕ್ಷಕರಾಗಿ ಅವುಗಳನ್ನು ಲೇಖನಿ ಮೂಲಕ ಪತ್ರಿಕಾ ಮಾಧ್ಯಮದ ಪರವಾಗಿ ಜನಪ್ರಿಯತೆ ಗಳಿಸಿದ್ದಾರೆ.

ಖ್ಯಾತ ಹಿಂದೂಸ್ಥಾನಿ ಗಾಯಕ ಪಂ. ಭೀಮಸೇನ ಜೋಶಿ ಹಾಗೂ ಪಂ.. ಬಾಲ ಗಂಧರ್ವರ ಕುರಿತ ಜೀವನ ಚರಿತ್ರೆ ಪುಸ್ತಕ ರಚಿಸಿದ್ದಾರೆ. ಮಧ್ಯಪ್ರದೇಶದ ೧೫ ಜನ ಸಂಗೀತಗಾರರ ಜೀವನ ಚರಿತ್ರೆ ಕುರಿತು ‘ಮಧ್ಯವರ್ತಿ’ ಎಂಬ ಪುಸ್ತಕ ಹಿಂದಿಯಲ್ಲಿ `The great masters of india’ ಎಂಬ ೫೦೦ ಸಂಗೀತಗಾರರ ಜೀವನ ಚರಿತ್ರೆ ಕುರಿತು ಇಂಗ್ಲೀಷ್‌ ಗ್ರಂಥ ರಚಿಸಿದ್ದಾರೆ. ಅನೇಕ ಆಕಾಶವಾಣಿ ಧ್ವನಿ ಪರೀಕ್ಷಾ ಆಯ್ಕೆ ಸಮಿತಿ, ‘ಕಾಳಿದಾಸ ಸಮ್ಮಾನ’, ‘ತಾನಸೇನ್‌ ಸನ್ಮಾನ’, ‘ಲತಾ ಮಂಗೇಶ್ಕರ್ ಪುರಸ್ಕಾರ’ ಮುಂತಾದ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯರಾಗಿ, ಅನೇಕ ವಿಶ್ವವಿದ್ಯಾಲಯಗಳ ಸಂದರ್ಶಕ ವ್ಯಾಖ್ಯಾನಕಾರರಾಗಿ, ೧೯೯೫ರಲ್ಲಿ ನೆದರ್‍ಲ್ಯಾಂಡ್‌ನಲ್ಲಿ ನಡೆದ ವಿಶ್ವಸಂಗೀತ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಲಂಡನ್ನಿನ ಬಿ.ಬಿ.ಸಿ.ಯು ಇವರ ವಿಶೇಷ ಸಂದರ್ಶನ ಬಿತ್ತರಿಸಿದೆ. ಇವರ‍ ಸಂಗೀತ ಕ್ಷೇತ್ರದ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೭-೯೮ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.