ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಭರತನಾಟ್ಯ ಕಥಕ್ಕಳಿ, ಕೂಚುಪುಡಿ, ಒಡಿಸ್ಸಿ, ಮಣಿಪುರಿ, ಕಥಕ್ ಹಾಗೂ ಮೋಹಿನಿಯಾಟ್ಟಂ ಪ್ರಮುಖವಾಗಿದೆ. ಮೋಹಿನಿ ಆಟ್ಟಂ ಈ ನೃತ್ಯ ಪ್ರಕಾರವು ಕೇರಳದಲ್ಲಿ ಸ್ತ್ರೀಯರಿಗಾಗಿ ಹುಟ್ಟಿಕೊಂಡ ನೃತ್ಯಶೈಲಿ. ಈ ನೃತ್ಯ ಪ್ರಕಾರವು 16ನೇ ಶತಮಾನದ ನಂತರ ಮೋಹಿನಿಯಾಟ್ಟಂ ಎಂದು ಗುರುತಿಸಲಾಯಿತು.

ಇಲ್ಲಿ ಸ್ತ್ರೀಯು ತನ್ನ ಕೋಮಲವಾದ ಅಂಗ ಸೌಷ್ಟವ ಹಾಗೂ ಅಭಿನಯದಿಂದ ಮೋಹಕವಾಗಿ ನರ್ತಿಸುವುದರಿಂದ ಈ ನೃತ್ಯಕ್ಕೆ ಮೋಹಿನಿಯಾಟ್ಟಂ ಎಂದು ಕರೆಯಲಾಯಿತು ಎಂದು ಬಲ್ಲವರು ಹೇಳುತ್ತಾರೆ. ಇನ್ನು ಕೆಲವರು ಈ ನೃತ್ಯಕ್ಕೆ ವೈಷ್ಣಸಂಪ್ರದಾಯದಿಂದ ಮೋಹಿನಿಯಾಟ್ಟಂ ಎಂಬ ಹೆಸರು ಬಂದಿರಬೇಕೆಂದು ಭಸ್ಮಾಸುರ ಹಾಗೂ ಅಮೃತ ಮಂಥನದ ಕಥೆಯನ್ನು ಉದಾಹರಣೆಯಾಗಿ ಕೊಡುತ್ತಾರೆ. ಅಲ್ಲದೆ ಇದಕ್ಕೆ ಮತ್ತೊಂದು ಪುರಾಣ ಕಥೆಯು ಇದೆ.

ಒಮ್ಮೆ ಅಯೋಧ್ಯೆಯ ರಾಜನಾಗಿದ್ದ ರುಕ್ಮಾಂದನು ಬೇಟೆಗೆಂದು ಕಾಡಿಗೆ ಹೋಗಿದ್ದಾಗ ರಾಕ್ಷಸಿಯೊಬ್ಬಳು ಮೋಹಿನಿಯ ರೂಪ ತಾಳಿ ರುಕ್ಮಾಂದನನ್ನು ಎದುರಿಸಿದಳು. ಅವಳ ರೂಪಕ್ಕೆ ಮನಸೋತ ರಾಜನು ಅವಳನ್ನು ಪಡೆಯಲು ತಾನು ಯಾವುದೇ ತ್ಯಾಗಕ್ಕೂ ಸಿದ್ದನಾದನು. ಆಗ ಮೋಹಿನಿಯು ರುಕ್ಮಾಂದನು ಅವನ ಶಿರಚ್ಛೇದನ ಮಾಡಲು ಕೋರಿದಳು. ರಾಜನು ಅದಕ್ಕೂ ಸಿದ್ಧನಾದಾಗ ಮಹಾವಿಷ್ಣುವು ಅವನನ್ನು ತಡೆದು ನಿಲ್ಲಿಸಿದನು. ಹೀಗೆ ಮೋಹಿನಿಯ ರೂಪ ಲಾವಣ್ಯಕ್ಕೆ ಮತ್ತು ಆಕೆ ಬೀರಿದ ಮೋಹನಾಸ್ತ್ರಗಳಿಗೆ ಗುರಿಯಾದನೆಂದು ಉದಾಹರಣೆಯಾಗಿ ಅನೇಕ ಕಥೆಗಳುಂಟು.

16ನೇ ಶತಮಾನದಲ್ಲಿ ಮಳಮಂಬಲತ್ತು ನಾರಾಯಣನ ನಂಬೂದರಿಯವರಿಂದ ಬರೆಯಲ್ಪಟ್ಟವೆಂದು ಹೇಳಲಾದ “ವ್ಯವಹಾರ ಮಾಲಿಕಾ” ಎಂಬ ಗ್ರಂಥದಲ್ಲಿ “ಮೋಹಿನಿಯಾಟ್ಟಂ” ಎಂಬ ಶಬ್ದವನ್ನು ಉಲ್ಲೇಖಿಸಲಾಗಿದೆಯಾದರೂ ಇದರ ಪ್ರಾರಂಭಿಕ ಸ್ವರೂಪ ಹೀಗೆ ಇದ್ದಿರಬೇಕೆಂದು ಹೇಳುವುದು ಕಷ್ಟ. ಆದರೂ “ನಂಗಿಯಾರ್ ಕೂತ್ತು” ಎಂಬ ನೃತ್ಯ ಶೈಲಿಯೇ ಇದಕ್ಕೆ ಬುನಾದಿಯಾಗಿರಬೇಕೆಂದು ಕೆಲವರು ಹೇಳುತ್ತಾರೆ. ಕೇರಳದ ಕೆಲವು ಪ್ರಮುಖ ದೇವಾಲಯಗಳಲ್ಲಿ ಹಿಂದೆ ಹಾಗೂ ಇಂದಿಗೂ ಸ್ತ್ರೀಯರೇ ಅಭಿನಯಿಸುವ ನೃತ್ಯ ಸಂಪ್ರದಾಯ ನಂಗಿಯಾರ್ ಕೂತ್ತು. ಆಗ ಈ ನೃತ್ಯ ಸಂಪ್ರದಾಯ ಯಾವ ರೂಪದಲ್ಲಿತ್ತು ಎಂಬುದು ಯಾರಿಗೂ ಗೊತ್ತಿಲ್ಲ. ಕೇರಳದ ಮತ್ತೊಂದು ನೃತ್ಯ ಪದ್ದತಿಯಾದ ಕೂಡಿಯಾಟ್ಟಂನೃತ್ಯ ನಾಟಕದಲ್ಲಿ ಈ ನಂಗಿಯಾರ್ ಗಳು ಹಿನ್ನೆಲೆ ಸಂಗೀತ ನಿರ್ವಹಿಸುತ್ತಿದ್ದರು. ನಂಬಿಯಾರ್ ಕುಲದಿಂದ ಬಂದ ಸ್ತ್ರೀಯರನ್ನು ನಂಗಿಯಾರ್ ಎಂದು ಕರೆಯುತ್ತಾರೆ. ಈ ನಂಗಿಯಾರ್ ಕೂತುವಿನ ಅಭಿನಯ ಶೈಲಿಯೇ ಮೋಹಿನಿಯಾಟ್ಟಂನ ಅಭಿನಯವೆಂದು ಹೇಳಬಹುದು. ಅಲ್ಲದೆ ಕೂಡಿಯಾಟ್ಟಂ ಹಾಗೂ ನಂಗಿಯಾರ್ ಕೂತ್ತುವಿನ ಹಲಕೆಲವು ಹಸ್ತಗಳು ಮೋಹಿನಿಯಾಟ್ಟಂನಲ್ಲಿ ಸೇರಿಕೊಂಡಿದೆ.

ನಂತರ 19ನೇ ಶತಮಾನದಲ್ಲಿ ಬಂದಂತಹ ಸ್ವಾತೀತಿರುನಾಳ್ ಮಹಾರಾಜರು, ಮೋಹಿನಿಯಾಟ್ಟಂ ನೃತ್ಯ ಪ್ರಕಾರವನ್ನು ಬೆಳೆಸಿ ಉಳಿಸಲು ತುಂಬು ಶ್ರಮ ವಹಿಸಿದರು. ಇದರ ಪರಿಣಾಮ ಮಹಾರಾಜರು ಅನೇಕ ಪದವರ್ಣಗಳನ್ನು, ಪದಗಳನ್ನು ತಿಲ್ಲಾನಗಳನ್ನು ರಚಿಸಿದರು. ಅಲ್ಲದೇ ಮಹಾರಾಜರ ಆಸ್ಥಾನದಲ್ಲಿದ್ದಂತಹ ಮತ್ತೋರ್ವ ಕವಿ ಮತ್ತು ಸಂಗೀತಗಾರನೂ ಆದಂತಹ “ಇರಯಿಮ್ಮನ್ ತಂಬಿ”ಯವರಿಂದ ಮೋಹಿನಿಯಾಟ್ಟಂಗೆ ರಚಿಸುವಂತೆ ಪ್ರೇರಣೆ ಮಾಡಿದ ಫಲ ಇಂದು ಅನೇಕ ಸಾಹಿತ್ಯಗಳು ಮೋಹಿನಿಯಾಟ್ಟಂ ನೃತ್ಯಕ್ಕೆ ದೊರೆಯುವಂತಾಯಿತು. ಅಲ್ಲದೆ ಮಹಾರಾಜರ ಆಸ್ಥಾನದಲ್ಲಿದ್ದಂತಹ ಮತ್ತೋರ್ವರಾದ ಸಹೋದರರಲ್ಲಿ ಒಬ್ಬರಾದ ವಡೀವೇಲು ಮೋಹಿನಿಯಾಟ್ಟಂನಲ್ಲಿ ಹಲ ಕೆಲವು ಬದಲಾವಣೆಗಳನ್ನು ಮಾಡುವಂತೆ ಪ್ರೇರಣೆ ಮಾಡಿದರೆಂದು ಬಲ್ಲವರು ಹೇಳುತ್ತಾರೆ.

ಸ್ವಾತೀತಿರುನಾಳ್ ಮಹಾರಾಜರನಂತರ ಬಂದಂತಹ ಉತ್ತಂ ತಿರುನಾಳ್ ಮಹಾರಾಜರಿಗೆ ಕಥಕ್ಕಳಿ ನೃತ್ಯದ ಕಡೆಗೆ ಒಲವು ಹೆಚ್ಚಾಗಿದುದ್ದರ ಫಲದಿಂದ ಮೋಹಿನಿಯಾಟ್ಟಂ ನೃತ್ಯ ಶೈಲಿಯನ್ನು ಬೆಳೆಸಲು ಪ್ರೋತ್ಸಾಹಿಸದ ಕಾರಣ ಮೋಹಿನಿಯಾಟ್ಟಂ ನೃತ್ಯಕಲೆಯ ಅಧಃಪತನವಾಗತೊಡಗಿತು. ಇದರ ಫಲ ದೇವಾಲಯದಲ್ಲಿ ಮತ್ತು ರಾಜಾಶ್ರಯದಲ್ಲಿ ಪ್ರದರ್ಶಿಸುತ್ತಿದ್ದ ಮೋಹಿನಿಯಾಟ್ಟಂ ನರ್ತಕಿಯರು ಆಲಯದ ಹೊರಗೆ ಬಂದ ತಮ್ಮ ಉದರ ಪೋಷಣೆಗಾಗಿ ನೃತ್ಯದ ಪ್ರಯೋಗವನ್ನು ಬದಲಾಯಿಸಿ ಸಾರ್ವಜನಿಕರ ರಂಜನೆಗೆಂದು ಮೋಹಿನಿಯಾಟ್ಟಂ ಪ್ರದರ್ಶನ ಮಾಡತೊಡಗಿದ ಫಲ. 1. ಪೊಲಿಕಳ್ಳಿ, 2. ಎಶಲ್, 3. ಮೂಕುತ್ತಿ, 4. ಚಂದನಂ ಎಂಬ ನೃತ್ಯಗಳ ಪ್ರದರ್ಶನ ಮಾಡತೊಡಗಿದರು. ಹೀಗೆ ಮೋಹಿನಿಯಾಟ್ಟಂ ಜನರಂಜನೆಯಾಗಿ ಮಾರ್ಪಟ್ಟಾಗಿ 1930ರಲ್ಲಿ ಮಹಾಕವಿ ವಳ್ಳತ್ತೋಳ್ ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪಣತೊ‌ಟ್ಟರು. ಇದರ ಫಲ ಮೋಹಿನಿಯಾಟ್ಟಂ ನರ್ತಕಿಯರಿದ್ದಂತಹ ತಳ್ಳುವನಾಡು, ತಲಪಿಳ್ಳಿ ಕೊಟ್ಟಾರಕರ, ಪಾಲಕ್ಕಾಡು ಮುಂತಾದ ಕಡೆಯಿಂದ ಮೋಹಿನಿಯಾಟ್ಟಂ ನರ್ತಕಿಯರನ್ನು (ದೇವದಾಸಿಯರನ್ನು) ಕರೆಸಿದರಲ್ಲದೆ ಕಲಾಮಂಡಲದಲ್ಲಿ ಮೋಹಿನಿಯಾಟ್ಟಂ ಗುರುವಾಗಿ ಬಂದವರು ಶ್ರೀಮತಿ ಕಲ್ಯಾಣಿ ಅಮ್ಮ. ಇವರು 1933 ರಿಂದ ಮೂರು ವರ್ಷಗಳ ಕಾಲ ಮೋಹಿನಿಯಾಟ್ಟಂ ಗುರುವಾಗಿ ಕಲಾವಿದರಿಗೆ ಮೋಹಿನಿಯಾಟ್ಟಂ ನೃತ್ಯಾಭ್ಯಾಸ ಮಾಡಿಸಿದರು. ನಂತರ ಮಹಾಕವಿ ರವೀಂದ್ರನಾಥ ಟಾಗೋರ್ ಅವರ ಆಹ್ವಾನದ ಮೇರೆಗೆ ಕೋಲ್ಕಾತ್ತಾದ ಶಾಂತಿನಿಕೇತನಕ್ಕೆ ಮೋಹಿನಿಯಾಟ್ಟಂ ಗುರುವಾಗಿ ಬಂದವರು ಶ್ರೀ ಕೃಷ್ಣಪ್ಪಣಿಕರ್ ನಟ್ಟುವನ್ನಾರ್, ಕೃಷ್ಣಪ್ರಣಿಕ್ಕರ್ ಮೋಹಿನಿಯಾಟ್ಟಂ ನೃತ್ಯದಲ್ಲಿ ಶಾಸ್ತ್ರೀಯತೆಯನ್ನು ಅಳವಡಿಸುವಲ್ಲಿ ಗಮನ ಹರಿಸಿದ ನಂತರ ಮೋಹಿನಿಯಾಟ್ಟಂನಲ್ಲಿ ಚೊಲ್ಲುಕಟ್ಟು ಪಾದ್ರಾಭಿನಯ, ತಿಲ್ಲಾನ, ಜತಿಸ್ವರ, ವರ್ಣ ಮುಂತಾದ ನೃತ್ಯ ಬಂಧಗಳನ್ನು ಪರಿಚಯಿಸಿದರು.

ಮೋಹಿನಿಯಾಟ್ಟಂನಲ್ಲಿ ಹಸ್ತಗಳನ್ನು ಹಸ್ತ ಲಕ್ಷಣ ದೀಪಿಕವನ್ನು ಅನುಸರಿಸಿ ಅಳವಡಿಸಲಾಗಿದೆ. ಹಾಗೂ ಪಾದಗಳ ಚಲನೆ (ಅಡವು) ಹಿಂದೆ ಹೇಳಿದ ಹಾಗೆ ನಂಗಿಯಾರ ಕೂತ್ತು ಮತ್ತು ಕೇರಳದ ಪ್ರಸಿದ್ದ ಜನಪದ ನೃತ್ಯ ಕೈಕೊಟ್ಟಿಕೇಳಿ ಹಾಗೂ ಕುಮ್ಮಿಯಿಂದ ಆಯ್ದುಕೊಂಡಿದೆ. ಕಣ್ಣು, ಹುಬ್ಬು, ಗ್ರೀವ ಹಾಗೂ ಅಂಗ ಚಲನೆಗಳನ್ನು ಕಥಕ್ಕಳಿ ನೃತ್ಯ ಶೈಲಿಯಿಂದ ಆಯ್ದುಕೊಂಡಿದೆ. ಹಸ್ತ ಮುದ್ರೆಗಳನ್ನು ಬಲರಾಮಭಾರತ ಮತ್ತು ಹಸ್ತಲಕ್ಷಣ ದೀಪಿಕ ಎಂಬ ಪುಸ್ತಕದಿಂದ (ಗ್ರಂಥದಿಂದ) ಉಪಯೋಗಿಸಲಾಗಿದೆ. ಇನ್ನು ವೇಷಭೂಷಣಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.

ಮೋಹಿನಿಯಾಟ್ಟಂ ನೃತ್ಯಕ್ಕೆ ಉಡಿಗೆ, ತೊಡಿಗೆ ಶೈಲಿಯೆ ವಿಭಿನ್ನ. ಕಾರಣ ಅಲ್ಲಿಯ ಹವಾಗುಣಕ್ಕೆ ತಕ್ಕಂತೆ ಆಹಾರ್ಯದ ರಚನೆಯಾಗಿರಬೇಕು. ಬಿಳಿಯ ಬಣ್ಣದ ಜರಿತಾರಿ ಸೀರೆ ಹಾಗು ಕುಪ್ಪಸ ಹಾಗೂ ದಾವಣಿ. ಈ ಬಿಳಿಯ ನೂಲಿನ ಸೀರೆಯನ್ನು ಅನ್ನದ ಗಂಜಿ ಅಥವಾ ಮೈದಾ ಹಿಟ್ಟಿನಿಂದ ತಯಾರಿಸಿದ ಗಂಜಿಯಲ್ಲಿ ಅದ್ದಿ ಒಣಗಿಸಿ ನಂತರ ನರಿಗೆಗಳು ಬರುವ ಹಾಗೆ ಮಾಡಿ ಸುತ್ತಿ ಒಂದು ಹಗ್ಗದಿಂದ ಕಟ್ಟಿ ಕಾರ್ಯಕ್ರಮಕ್ಕೆ 1 ಗಂಟೆ ಮುಂಚಿತವಾಗಿ ಕಟ್ಟನ್ನು ಬಿಚ್ಚಿ ನರ್ತಕಿಯು ಉಡುವುದು ವಾಡಿಕೆಯಾಗಿತ್ತು. ಈಗ ಮೋಹಿನಿಯಾಟ್ಟಂ ಉಡುಗೆಯನ್ನು ಹೊಲಿದು ಇಡುವ ಪದ್ದತಿ ಇರುವುದರಿಂದ ಅದರ ಉಪಯೋಗವೇ ಹೆಚ್ಚು. ಇನ್ನು ತಲೆ ಕೂದಲನ್ನು ಎಡಭಾಗದಲ್ಲಿ ಪಕ್ಕಕ್ಕೆ ಕೊಂಡೆಯಂತೆ ಕಟ್ಟಿ ಅದಕ್ಕೆ ಮಲ್ಲಿಗೆಯ ಹೂಗಳಿಂದ ಅಲಂಕರಿಸುತ್ತಾರೆ. ಕೈಗೆ ತೊಡ, ಕುತ್ತಿಗೆಗೆ ನಾಗಪಡತಾಳಿ, ಇಳಕ್ಕತ್ತಾಲಿ (ಇಳಕ್ಕತ್ತಾಲಿ) ಮತ್ತು ಕಾಸಿನ ಸರ, ಸೊಂಟಕ್ಕೆ ಡಾಬು, ಮೂಗಿಗೆ ಬುಲ್ಲಾಕು, ಕೈಗೆ ಕಾಪು, ಈಗಿನ ಕಾಲದಲ್ಲಿ ತಲೆಗೆ ನೆತ್ತಿ ಚುಟ್ಟು ಸೂರ್ಯಚಂದ್ರ. ಹೀಗೆ ನರ್ತಕಿಯರನ್ನು ಮನಸ್ಸಿನ ಇಚ್ಚೆಯಂತೆ ಒಡೆವೆಗಳ ಬದಲಾವಣೆ ಕಾಲು ಮತ್ತು ಕೈಗೆ ಗೊರಂಟಿಸೊಪ್ಪಿನ ರಸದಿಂದ ಚಿತ್ರಗಳನ್ನು ಬಿಡಿಸುತ್ತಿದ್ದರು. ಆದರೆ ಈಗ ಅದಕ್ಕೆಂದೇ ಬಣ್ಣಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಇನ್ನು ಮುಖಕ್ಕೆ ಬಣ್ಣ ಲೇಪನ, ಕಾಡಿಗೆ ಮುಂತಾದವು.

ಪ್ರದರ್ಶನ: ಕಾರ್ಯಕ್ರಮದ ಪ್ರಾರಂಭದಲ್ಲಿ ಭಾಗವತಿಯನ್ನು ಕುರಿತು ಚೊಲ್ಲುಕಟ್ಟು, ಮಧ್ಯಾಭಾಗದ ರಾಮ ಮತ್ತು ಈಶ್ವರನ ಪರಾಕ್ರಮಗಳನ್ನು ಕುರಿತು ವರ್ಣನೆ. ಜತಿಗಳು ಹಾಡಿನ ರೂಪದಲ್ಲೇ ಇರುತ್ತದೆ. ಇದು ಮೋಹಿನಿಯಾಟ್ಟಂನ ನೃತ್ಯ ಭಾಗವಾದರೆ ಅಂಗಚಲನೆಗಳು ಬಹು ಸುಂದರವಾಗಿರುತ್ತದೆ. ನಂತರ ಜತ್ತಿಸ್ವರ, ಪದವರ್ಣ, ಪದ ಪದವರ್ಣದಲ್ಲಿ ಭರತನಾಟ್ಯದ ವರ್ಣದಲ್ಲಿ ಬರುವಂತೆ ಜತಿಗಳು ಇರುವುದಿಲ್ಲ. ನಂತರ ಪದಂ ಮೋಹಿನಿ ಯಾಟ್ಟಂ ಪ್ರದರ್ಶನದಲ್ಲಿ ಭರತನಾಟ್ಯದ ಹಾಗೆ ಒಂದು ಚೌಕಟ್ಟಿನಲ್ಲೇ ನರ್ತಿಸುವುದಿಲ್ಲ.

ಒಂದು ವಾಕ್ಯದ ಅರ್ಥ ಬರಲು ಸಂಗೀತಗಾರರು ಒಂದೇ ಸಾಲನ್ನು ಅನೇಕ ಭಾರಿ ಹಾಡಬೇಕಾಗುತ್ತದೆ. ಇಲ್ಲಿ ನರ್ತಕಿಯು ತನ್ನ ಮನೋಧರ್ಮಕ್ಕೆ ತಕ್ಕಂತೆ ವಾರಧರ್ಮಕ್ಕೆ ಕಣ್ಣು, ಹುಬ್ಬು, ಅಂಗಗಳ ಬಾಗುವಿಕೆ ಹಾಗೂ ಹಸ್ತ ಮುದ್ರೆಗಳ ಉಪಯೋಗದಿಂದ ಆ ಪದದ ಅರ್ಥವನ್ನು ತನ್ನ ಮನೋಧರ್ಮಕ್ಕೆ ತಕ್ಕಂತೆ ಅಭಿನಯಿಸುತ್ತಾಳೆ. ಇದಕ್ಕೆ ಮನೋಧರ್ಮ ಅಭಿನಯ ಎಂದು ಕರೆಯಬಹುದು. ಅಂಗಾಂಗಗಳ ಬಾಗುವಿಕೆ ಹಾಗು ಪಾದಚಲನೆಗಳ ಅನುಕೂಲಗಳಿಗೆ ಅನುವು ಆಗುವಂತೆ ಕಾಲ ಪ್ರಮಾಣವನ್ನು ವಿಳಂಬ ಮತ್ತು ಮಧ್ಯಮಕಾಲದಲ್ಲಿ ಮಾತ್ರ ಪ್ರದರ್ಶನವಾಗುತ್ತದೆ. ಇದರಿಂದ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನವೂ ತನ್ನ ಲಾಲಿತ್ಯವನ್ನು ಹೆಚ್ಚಿಸುತ್ತದೆ. ಇದಕ್ಕೆ ಉಪಯೋಗಿಸುತ್ತಿದ್ದ ವಾದ್ಯಗಳೆಂದರೆ ತೊಪ್ಪಿಮದ್ದಳು (ಇದನ್ನು ಈಗ ಕೃಷ್ಣನಾಟಂನಲ್ಲಿ ಉಪಯೋಗಿಸುತ್ತಿದ್ದಾರೆ) ಮುಖವೀಣಾ, ತಿತ್ತಿ ಎಂಬ ವಾದ್ಯ ಕುಳಿತ್ತಾಳಂ. ಆದರೆ ಕೇರಳ ಕಲಾಮಂಡಲಂನಲ್ಲಿ ಮೋಹಿನಿಯಾಟ್ಟಂ ನೃತ್ಯ ಪ್ರಕಾರವನ್ನು ಪರಿಷ್ಕಾರ ಮಾಡಿದಾಗ ಮೃದಂಗ, ಪಿಟೀಲು, ಮದ್ದಳಂ, ಇದಕ್ಕೆ ವೇಣು, ಕುಳಿತ್ತಾಳಂ, ಹೀಗೆ ವಾದ್ಯಗಳಲ್ಲೂ ಬದಲಾವಣೆಯಾಗಿದೆ. ಹಿಂದೆ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನದಲ್ಲಿ ವಾದ್ಯವೃಂದದವರು ನರ್ತಕಿಯ ಹಿಂಭಾಗದಲ್ಲಿ ನಿಂತು ನರ್ತಕಿಯೊಂದಿಗೆ ಚಲಿಸುತ್ತಾ ವಾದ್ಯಗಳನ್ನು ನುಡಿಸುತ್ತಿದ್ದರು. ಆದರೆ ಇಂದು ನಾವು ನೋಡುತ್ತಿರುವ ನೃತ್ಯ ಪ್ರದರ್ಶನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿದೆ. ಪ್ರದರ್ಶನದ ಕಾಲಪ್ರಮಾಣ ಹಾಗೂ ನೃತ್ಯ ಬಂಧಗಳಲ್ಲಿ ಭರತನಾಟ್ಯದ ಹಾಗೆ ತಟ್ಟುಮೆಟ್ಟುಗಳನ್ನು ಅಳವಡಿಸಿರುವುದರಿಂದ ಪ್ರದರ್ಶನ ಅಂದು ಕುಗ್ಗುತ್ತಿದೆ. ಹಾಗೆ ಭರತನಾಟ್ಯದಲ್ಲಿರುವಂತೆ ಶಬ್ದಂನ ಪ್ರಯೋಗ ಕೂಡ ಮೋಹಿನಿಯಾಟ್ಟಂನಲ್ಲಿ ಪ್ರದರ್ಶನವಾಗುತ್ತಿದೆ. ಮತ್ತು ಕೆಲವು ನರ್ತಕಿಯರು ಮೋಹಿನಿಯಾಟ್ಟಂ ನೃತ್ಯದಲ್ಲಿ ನೃತ್ಯ ನಾಟಕವನ್ನು ರಚಿಸಿ ವೇದಿಕೆಯ ಮೇಲೆ ಪ್ರದರ್ಶನ ಮಾಡಿದ್ದಾರೆ. ಇದು ಕೂಡ ಒಂದು ವಿಪರ್ಯಾಸವೆ. ಕೇರಳದಲ್ಲಿ ಸ್ತ್ರೀಯರಿಗೆ ಕಥಕ್ಕಳಿಯ ಕಲಿಕೆ ಕಷ್ಟವೆಂದರಿತ ಕಲಾ ಪಂಡಿತರು ಸ್ತ್ರೀಯರಿಗೆಂದೇ ರಚಿಸಿದ ಒಂದು ನೃತ್ಯ ಪದ್ಧತಿ ಮೋಹಿನಿಯಾಟ್ಟಂ. ಈ ನೃತ್ಯ ಪ್ರಕಾರದಲ್ಲಿ ಕುಮ್ಮಿ ಪಂದಾಟ್ಟಂ, ಚೊಲ್ಲುಕಟ್ಟು, ಪದಂ ವರ್ಣಂ, ತಿಲ್ಲಾನ, ಜತಿಸ್ಪರ ಇವುಗಳ ಪ್ರದರ್ಶನವೇ ಉತ್ತಮವಾಗಿ ಕಾಣುವವು. ಕಾರಣ ಮೋಹಿನಿಯಾಟ್ಟಂ ನೃತ್ಯವು ಹೆಚ್ಚು ಲಾಸ್ಯಮಯವಾದ ನೃತ್ಯ ಪ್ರಕಾರವಾಗಿರುವುದರಿಂದ ನೃತ್ಯ ನಾಟಕ ಪ್ರದರ್ಶನಕ್ಕೆ ಅಷ್ಟು ಸಮಂಜಸವಲ್ಲ. ಅದಕ್ಕೆಂದೇ ಬೇರೆ ಕಥಕ್ಕಳಿ ಕಲಾಪ್ರಕಾರವಿದೆ. ಅದುದರಿಂದ ಕಲಾವಿದೆಯರು ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನ ಸೀಮಿತವನ್ನು ಅರಿತು ಅದರ ಶಾಸ್ತ್ರೀಯತೆಯನ್ನು ಉಳಿಸುವಲ್ಲಿ ಪ್ರಯತ್ನ ಪಡುವುದು ಒಳಿತೆಂದು ನನ್ನ ಭಾವನೆ.