ಹಿಪ್ಪೆಬೀಜಗಳಿಂದ ತೆಗೆದ ಎಣ್ಣೆ ಬೆಣ್ಣೆಯಂತಿರುತ್ತದೆ. ಅದಕ್ಕೆ ಹಿಪ್ಪೆಮರಕ್ಕೆ ಬೆಣ್ಣೆಮರ ಎನ್ನುತ್ತಾರೆ. ಸಂಸ್ಕರಿಸಿ ತುಪ್ಪದಂತೆ ಇದನ್ನು ಬಳಸಬಹುದು. ಅಡುಗೆಗೆ, ಸಿಹಿತಿಂಡಿ ತಯಾರಿಕೆಗಳಿಗೂ ಬಳಸಬಹುದು. ಹಿಂಡಿಯಲ್ಲಿ ಟಾನ್ಸಿಸ್ ಅಂಶವಿದೆ. ಗೊಬ್ಬರವಾಗಿ, ಮೀನು, ಪಶು ಆಹಾರವಾಗಿ ನೇರ ಬಳಕೆ ಸೂಕ್ತವಲ್ಲ. ಮಿಶ್ರ ಬಳಕೆ ಒಳ್ಳೆಯದು. ಹೂವು ಶೇಕಡಾ ೭೦ರಷ್ಟು ಸಕ್ಕರೆ ಅಂಶದಿಂದ ಕೂಡಿದೆ. ಹಣ್ಣು ಶೇಕಡಾ ೫೦ರಷ್ಟು ಸಕ್ಕರೆ ಅಂಶದಿಂದ ಕೂಡಿದೆ.

ಉತ್ತರ ರಾಜ್ಯಗಳಲ್ಲಿ ಇದು ಬಡವರ ಪಾಲಿಗೆ ಕಲ್ಪವೃಕ್ಷ, ಮೋಹ್ವಾಮರಗಳು ಪೂಜನೀಯ. ಈ ಮರಗಳನ್ನು ಯಾರೂ ಕಡಿಯುವುದಿಲ್ಲ.

ಭಾರತದ ಬೆಣ್ಣೆಮರ ಎನ್ನುವ ಅನ್ವರ್ಥ ನಾಮ ಹೊಂದಿದ ಹಿಪ್ಪೆ, ಮೋಹ್ವ-ಮಧು, ಇಳ್ಳುಪೈ ಮರ ಬಹೂಪಯೋಗಿ.

ಇಪ್ಪತ್ತು ಮೀಟರ್ ಎತ್ತರ ಬೆಳೆವ ದೊಡ್ಡಜಾತಿಯ ಮರ. ವಿಶಾಲವಾಗಿ ಹರಡಿಕೊಳ್ಳುತ್ತದೆ. ದೊಡ್ಡ ದೊಡ್ಡ ಹಲಗೆ ಬೇರುಗಳಿಗಿರುವ ದಪ್ಪ ಕಾಂಡ, ಕಂದು ತೊಗಟೆ, ಸೀಳು, ಬಿರುಕು, ಗೊಂಚಲು ಗೊಂಚಲಾದ ಅಂಡಾಕಾರದ ಎಲೆಗಳು. ಫೆಬ್ರವರಿಯಲ್ಲಿ ಎಲೆಗಳು ಉದುರುತ್ತವೆ. ಇದರಲ್ಲಿ ಅಧಿಕ ಸಾರಜನಕ ಇರುವ ಕಾರಣ ಉತ್ತಮ ಕಾಂಪೋಸ್ಟ್ ಗೊಬ್ಬರವಾಗಿದೆ.

ಉತ್ತರಪ್ರದೇಶ, ಒರಿಸ್ಸಾ, ಉತ್ತರಾಂಚಲ್, ಛತ್ತೀಸ್‌ಘಡ, ಮಧ್ಯಪ್ರದೇಶ, ಗುಜರಾತ್ ಮುಂತಾದ ಉತ್ತರದ ರಾಜ್ಯಗಳಲ್ಲಿ ಮೋಹ್ವಾಬನ, ಮಧುಬನಗಳು ಹಳ್ಳಿ ಹಳ್ಳಿಗಳಲ್ಲೂ ಇವೆ. ಉತ್ತರಪ್ರದೇಶದಲ್ಲಿ ಮೋಹ್ವಾ ಎನ್ನುವ ತಾಲ್ಲೂಕು ಕೇಂದ್ರವೂ ಇದೆ. ಈ ಮರ, ಹೂವು, ಹಣ್ಣು, ಕಾಯಿ, ಉತ್ಸವ ಎಲ್ಲವನ್ನೂ ಆಧರಿಸಿಯೇ ಮಧುಬನಿ ಕಲೆಯೂ ಜನ್ಮ ತಾಳಿತು ಎನ್ನುತ್ತಾರೆ ಜನಪದ ತಜ್ಞರು.

ಮೋಹ್ವಾಬನ-ಮಧುಬನಗಳಲ್ಲಿ ಉಗಾದಿಯ ಸಮಯಕ್ಕೆ, ವಸಂತ ಮಾಸದಲ್ಲಿ ವಸಂತೋತ್ಸವಗಳು ನಡೆಯುತ್ತದೆ. ಇದರ ಉಲ್ಲೇಖ ಜೈನ ಪುರಾಣಗಳಲ್ಲಿ, ರತ್ನಾವಳಿಗಳಲ್ಲಿಯೂ ಕಾಣಸಿಗುತ್ತದೆ.

ಬೆಳದಿಂಗಳ ರಾತ್ರಿಗಳಲ್ಲಿ ಪರಿಮಳಭರಿತ ಸಾವಿರಾರು ಹೂಗಳು ಅರಳುತ್ತವೆ. ಈ ಉತ್ಸವದ ಹಾಡು ನೃತ್ಯಗಳಿಗೆ ರಂಗಮಂಟಪ ನಿರ್ಮಿಸುತ್ತವೆ. ಹಿತವಾದ ನವಿರುಕಂಪು, ಆಗಾಗ ಪುಷ್ಪವೃಷ್ಟಿ, ದುಂಬಿಗಳ ಸಂಗೀತ.

ಒಂದು ವಾರ ನಡೆವ ಈ ಉತ್ಸವದಲ್ಲಿ ಪ್ರತಿ ಮರವನ್ನು ಪ್ರತಿಯೊಬ್ಬರೂ ಪೂಜಿಸುತ್ತಾರೆ. ಜೀವನದ ಅವಿಭಾಜ್ಯವೆಂಬಂತೆ ಪ್ರೀತಿಸುತ್ತಾರೆ.

ಗೊಂಚಲು ಗೊಂಚಲಾದ ಕೆನೆಬಣ್ಣದ ಹೂಗಳು, ಉದ್ದನೆಯ ಕೊಳವೆಯ ತುದಿಯಲ್ಲಿ ದಪ್ಪ ಎಸಳುಗಳು. ಗೊಂಚಲು ಗೊಂಚಲುಗಳು ಇಡೀ ಮರವನ್ನೆಲ್ಲಾ ತುಂಬಿ ಎಲೆಗಳೇ ಕಾಣಿಸುವುದಿಲ್ಲ. ವಿಪರೀತ ಮಕರಂದ. ತಿನ್ನಲು ಸಿಹಿ, ರುಚಿ. ಇದಕ್ಕಾಗಿ ಜನ ಹಾಗೂ ಜಾನುವಾರುಗಳು ಹೂಗಳು ಉದುರುವುದನ್ನೇ ಕಾಯುತ್ತಾರೆ. ಯಾರೂ ಮರ ಹತ್ತಿ ಕೊಯ್ಯುವುದಿಲ್ಲ. ಉದುರಿದ ಹೂಗಳನ್ನು ಶೇಖರಿಸಿ, ಒಣಗಿಸಿ ಇಡುತ್ತಾರೆ.

ಏಪ್ರಿಲ್-ಮೇ ತಿಂಗಳಲ್ಲಿ ಕೆಂಪನೆಯ ಚಿಗುರು ಇಡೀ ಮರವನ್ನು ವ್ಯಾಪಿಸುತ್ತದೆ. ಬೆಳಗಿನ ಬಿಸಿಲಿಗೆ ಇಡೀ ಮರವೇ ಬೆಂಕಿ ಹೊತ್ತಿದಂತೆ ಕಾಣುತ್ತದೆ. ಸ್ವಲ್ಪ ದಿನಗಳಲ್ಲೇ ಹಚ್ಚಹಸಿರಾಗುತ್ತದೆ.

ಮಾರ್ಚ್ ತಿಂಗಳಿನಲ್ಲಿ ಬಿಟ್ಟ ಹೂವೆಲ್ಲಾ ಫಲಿತಗೊಂಡು ಆಗಸ್ಟ್‌ನಲ್ಲಿ ಹಣ್ಣಾಗುತ್ತದೆ. ಹಣ್ಣು ಸಹ ಸಿಹಿ. ಹಸಿಯಾಗಿ ಹಾಗೂ ಬೇಯಿಸಿ ತಿನ್ನುತ್ತಾರೆ. ಅಡುಗೆಗೂ ಬಳಸುತ್ತಾರೆ. ಹಣ್ಣು ಒಣಗಿಸಿ ಹಿಟ್ಟು ತಯಾರಿಸುತ್ತಾರೆ.

ನವೆಂಬರ್‌ನಲ್ಲಿ ಬೀಜಗಳ ಸುಗ್ಗಿ, ಬೀಜಗಳಿಂದ ತೆಗೆದ ಎಣ್ಣೆಯನ್ನು ಸಂಸ್ಕರಿಸಿದರೆ ರುಚಿಯಾದ ತುಪ್ಪ ಸಿಗುತ್ತದೆ. ದೀಪಕ್ಕೆ, ಖಾದ್ಯ ತಯಾರಿಕೆ, ಔಷಧಿಗಳಿಗೆ, ಸೋಪು ತಯಾರಿಸಿದರೆ ಬಳಸುತ್ತಾರೆ.

ಒಣಗಿಸಿ, ಶೇಖರಿಸಿದ ಹೂಗಳನ್ನು ಬೇಯಿಸಿ ತಿನ್ನುತ್ತಾರೆ. ಅಡುಗೆಗೂ ಬಳಸುತ್ತಾರೆ. ಹುಳಿ ಬರಿಸಿ ಮದ್ಯ ತಯಾರಿಸುತ್ತಾರೆ. ಹಬ್ಬಗಳಲ್ಲಿ ವಿಶೇಷ ಪಾನೀಯವಾಗಿ ಬಳಸುತ್ತಾರೆ.

ಬರಗಾಲದಲ್ಲೂ ಹೂ, ಹಣ್ಣು ಬಿಡುವ ಮೋಹ್ವಾ ಬಡವರ ಪಾಲಿಗೆ ಜೀವದಾಯಿನಿ.

ಉತ್ತರದಲ್ಲಿ Madhuca latefolia ಜಾತಿಯ ಮರಗಳು. ದಕ್ಷಿಣದಲ್ಲಿ Madhuca longifolia ಜಾತಿ ಹಾಗೂ Bassia latefolia ಜಾತಿಯ ಮರಗಳನ್ನು ಗುರುತಿಸಲಾಗಿದೆ.

ಕೇವಲ ವನಗಳಲ್ಲೊಂದೇ ಅಲ್ಲ, ಸಾಲುಮರಗಳನ್ನಾಗಿಯೂ ನೆಡುತ್ತಾರೆ. ಚೆನ್ನೈನಲ್ಲಿ ಮೊಹ್ವಾ ಮರಗಳ ಬಗ್ಗೆ, ತಮಿಳುನಾಡು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಅರಣ್ಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರ [FC & RI]ದಲ್ಲಿ ವಿವಿಧ ರೀತಿಯ ಅಧ್ಯಯನ ನಡೆದಿದೆ.

ಅರಣ್ಯ ಕಾಲೇಜಿನ ಡೀನ್ ಕೆ.ಎಸ್. ನೀಲಕಂಠನ್‌ರವರು ಮೋಹ್ವಾ ಬೀಜದ ಎಣ್ಣೆ ಶೇಂಗಾ ಎಣ್ಣೆಯಂತೆಯೇ ಗುಣ, ರುಚಿಯನ್ನು ಹೊಂದಿದೆ ಎನ್ನುತ್ತಾರೆ. ಮೊಹ್ವಾ ಬೀಜಗಳಲ್ಲಿ ಶೇಕಡಾ ೩೦ರಿಂದ ೪೦ರಷ್ಟು ಎಣ್ಣೆ ಅಂಶವಿದೆ. ಉಳಿದ ಹಿಂಡಿಯನ್ನು ಜೈವಿಕ ಗೊಬ್ಬರ, ಸಾವಯವ ಗೊಬ್ಬರವಾಗಿ ಬಳಸಬಹುದು. ಮೀನು ಹಾಗೂ ಪಶುಗಳಿಗೆ ಆಹಾರವಾಗಿಯೂ ಬಳಸಬಹುದು. ಎಲೆಗಳನ್ನು ಹಸಿ ಮೇವಾಗಿ ಬಳಸಬಹುದು. ಹೂವಿನಲ್ಲಿ ಎಥೆನಾಲ್ ಹೆಚ್ಚಿರುವುದು ಕಂಡುಬಂದಿದೆ. ಇದೂ ಸಹ ಜೈವಿಕ ಇಂಧನ.

ಕರ್ನಾಟಕ ಹಾಗೂ ತಮಿಳುನಾಡಿನ ಕಾವೇರಿ ತೀರದಲ್ಲಿ ಈ ಮರಗಳು ನೈಸರ್ಗಿಕವಾಗಿ ಬೆಳೆಯುತ್ತವೆ. ಒಣಭೂಮಿ ಹಾಗೂ ಖುಷ್ಕಿಗಳಲ್ಲಿ ಇದನ್ನು ಬೆಳೆಸಬಹುದು. ಯಾವುದೇ ವಾತಾವರಣದಲ್ಲೂ ಬೆಳೆಯುತ್ತದೆ.

ಬೀಜಗಳನ್ನು ಎತ್ತರಿಸಿದ ಮಡಿ (ಪಾತಿ)ಗಳಲ್ಲಿ ೨.೫ ಸೆಂಟಿಮೀಟರ್ ಆಳದಲ್ಲಿ ಹುಗಿಯಬೇಕು. ಹತ್ತು ದಿನಗಳಲ್ಲಿ ಮೊಳಕೆಯೊಡೆಯುತ್ತದೆ. ನಂತರ ಪ್ಲಾಸ್ಟಿಕ್ ತೊಟ್ಟಿಗಳಲ್ಲಿ ಸಸಿ ಮಾಡಬೇಕು. ಒಂದು ವರ್ಷದೊಳಗೆ ನೆಡಬೇಕು. ಅಂತರ ಕನಿಷ್ಠ ಹತ್ತು ಮೀಟರ್ ಇದ್ದರೆ ಒಳ್ಳೆಯದು. ಪ್ರಾರಂಭದಲ್ಲಿ ಗೊಬ್ಬರ, ನೀರು ನೀಡಿ ಆರೈಕೆ ಮಾಡಬೇಕು. ಯಾವುದೇ ಕೀಟರೋಗಗಳ ಬಾಧೆ ಇಲ್ಲ. ಏಳನೇ ವರ್ಷಕ್ಕೆ ಫಸಲು ಪ್ರಾರಂಭ.

ಹತ್ತನೇ ವರ್ಷದಲ್ಲಿ ಒಂದು ಮರ ೨೦ರಿಂದ ೨೦೦ಕಿಲೋಗ್ರಾಂಗಳಷ್ಟು ಬೀಜ ನೀಡುತ್ತದೆ. ಜೊತೆಗೆ ಹೂವು, ಹಣ್ಣುಗಳು ಉಪಯುಕ್ತ.

ಅರಣ್ಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರವು ಅತ್ಯಂತ ಹೆಚ್ಚು ಎಣ್ಣೆ ನೀಡುವ (ಶೇಕಡಾ ೫೧) ತಳಿಗಳನ್ನು ಅಭಿವೃದ್ಧಿಪಡಿಸಿದೆ. ರಾಜ್ಯಾದಾದ್ಯಂತ ಆಯ್ದ ಮರಗಳ ಸಯಾನ್‌ಗಳನ್ನು ಸಂಗ್ರಹಿಸಿ ಉತ್ತಮ ಬೀಜಗಳ ಉತ್ಪ್ಪಾದನೆ ಮಾಡುತ್ತಿದೆ ಹಾಗೂ ಅಧ್ಯಯನ ಮುಂದುವರೆದಿದೆ ಎಂದು ಕೇಂದ್ರದ ಸಂಶೋಧಕ ಡಾ. ಕೆ.ಟಿ. ಪಾರ್ತಿಬನ್ ವಿವರಿಸುತ್ತಾರೆ.

ಕರ್ನಾಟದಲ್ಲಿ ಹಿಪ್ಪೆಮರಗಳ ಜಾಡು

ಕರ್ನಾಟಕದಲ್ಲಿ ಸುಮಾರು ೫೦ ಲಕ್ಷ ಹಿಪ್ಪೆಮರಗಳಿವೆ. ಆದರೆ ಎತ್ತರದ ಹಳ್ಳಿಗಳಂತೆ ರಕ್ಷಣೆಯಿಲ್ಲ. ಹೂಗಳನ್ನು ಜಾನುವಾರುಗಳು ಮಾತ್ರ ತಿನ್ನುತ್ತವೆ. ಹಿಪ್ಪೆಮರಗಳ ತೋಪಿನಲ್ಲಿ ಯಾವ ಉತ್ಸವಗಳೂ ನಡೆಯದು. ಇದರ ಬಹೂಪಯೋಗಿ ಮಹತ್ವ ತಿಳಿದೇ ಇಲ್ಲ. ಇವುಗಳಿಂದ ಸುಮಾರು ಐದು ಲಕ್ಷ ಟನ್ ಬೀಜ ಸಂಗ್ರಹಿಸಬಹುದು. ಎರಡು ಲಕ್ಷ ಟನ್ ತುಪ್ಪ ಎಣ್ಣೆ ಉತ್ಪಾದಿಸಬಹುದು.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಅರುವನಹಳ್ಳಿಯಲ್ಲಿ ಹಿಪ್ಪೆಮರಗಳ ತೋಪಿದೆ. ಬೀರಪ್ಪನ ದೇವಾಯದ ಸುತ್ತಲೂ ಹದಿನಾಲ್ಕೂವರೆ ಎಕರೆ ಜಾಗದಲ್ಲಿ ೬೪ ಮರಗಳಿವೆ. ಸುತ್ತಲಿನ ಪ್ರದೇಶಗಳಲ್ಲಿ ಹಾಗೂ ರಸ್ತೆಪಕ್ಕ ಸಾಲುಮರಗಳಾಗಿಯೂ ಹಿಪ್ಪೆ ಮರಗಳಿವೆ.

ತೋಪಿನಲ್ಲಿ ವಿಶಾಲವಾಗಿ ಹರಡಿಕೊಂಡ ದೊಡ್ಡ ದೊಡ್ಡ ಹಲಗೆ ಬೇರುಗಳುಳ್ಳ ಹಳೆಯ ಮರಗಳು. ಸುಮಾರು ಆರು ಮೀಟರ್ ಅಂತರದಲ್ಲಿ ಪಗಡೆ ಸಾಲಿನಲ್ಲಿ ಕ್ರಮವಾಗಿ ನೆಟ್ಟು ಬೆಳೆಸಿದ್ದಾರೆ. ಬೀಜ ಉದುರಿ ಹುಟ್ಟಿದ ಯವುದೇ ಮರಗಳಿಲ್ಲ. ದೊಡ್ಡ ಸಣ್ಣ ಮರಗಳಿದ್ದರೂ ಹೊಸದಾಗಿ ನೆಟ್ಟಿದ್ದಲ್ಲ. ಹತ್ತು ವರ್ಷಗಳ ಹಿಂದೆ ಇಡೀ ಊರತುಂಬಾ ಸಾವಿರಾರು ಮರಗಳಿತ್ತು ಎಂದು ಬೆಳ್ಳೂರಿನ ಶಿವು ಹೇಳುತ್ತಾರೆ. ಈಗ ತೋಪನ್ನು ಬಿಟ್ಟು ಉಳಿದವೆಲ್ಲಾ ಅಳಿವಿನಂಚಿನಲ್ಲಿವೆ. ಇದೊಂದು ರಕ್ಷಿತ ತೋಪು. ಇದರ ಸೊಪ್ಪು, ದರಕೆಲೆ, ಹೂವು, ಹಣ್ಣು, ಬೀಜಗಳನ್ನು ಜನರು ಬಳಸುವುದಿಲ್ಲ. ನೂರಾರು ವರ್ಷಗಳ ಈ ಮರಗಳನ್ನು ನೆಟ್ಟು ಬೆಳೆಸಿರುವವರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಯಾರೋ ಮಹನೀಯರು ದೇವರಗುಡಿಯಲ್ಲಿ ನಿತ್ಯ ದೀಪವಿರಲಿ ಎಂದು ಬೆಳೆಸಿದರೋ ಅದೀಗ ಇಡೀ ಊರನ್ನೇ ತಂಪಾಗಿಟ್ಟಿದೆ.

ಮಂಡ್ಯ ಜಿಲ್ಲೆಯ ಒಂದು ಭಾಗ ಕಾವೇರಿಯಿಂದ ಸಮೃದ್ಧ. ಮತ್ತೊಂದು ಭಾಗ ಬಡತನದ ಬೀಡು. ಅರುವನಹಳ್ಳಿಯೂ ಈ ಬೇಗೆಯ ಮಡಿಲಲ್ಲಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಮಳೆಯಿಲ್ಲ. ಕೆರೆಕುಂಟೆಗಳೆಲ್ಲಾ ಬತ್ತಿ ಒಣಗಿವೆ. ರಾಗಿ ಸಹ ಬೆಳೆಯಲಾಗದು. ಕೊರಲೆ, ಹಾರಕಗಳನ್ನು ಬೆಳೆದರೂ ಕೊಳ್ಳುವವರು ಇಲ್ಲ, ತಿನ್ನುವವರೂ ಇಲ್ಲ. ಕುಡಿವ ನೀರಿಗೂ ರೇಷನ್. ಆದರೆ ಬೀರಪ್ಪನ ತೋಪು ಹಸುರೋ ಹಸುರು. ಊರಿನ ಬಿಸಿಲೆಲ್ಲಾ ಮರಗಳ ಪಾಲು. ಹಸುರು ತಂಪು ಜನ ಜಾನುವಾರುಗಳಿಗೆ ಮೀಸಲು. ಹೊರಗಿನ ಬಿಸಿಲ ಉಷ್ಣಾಂಶಕ್ಕಿಂತ ತೋಪಿನೊಳಗೆ ಐದು ಡಿಗ್ರಿ ಉಷ್ಣಾಂಶ ಕಡಿಮೆ. ತೋಪಿನಂಚಿನ ಬೋರ್‌ವೆಲ್‌ನಲ್ಲಿ ತುಂಬಿ ತುಳುಕುವಷ್ಟು ನೀರು. ಊರಿನ ಜನರಿಗೆ ಜೀವದಾಯಿನಿ.

ಪ್ರತಿವರ್ಷ ಬೀರಪ್ಪನ ಪೂಜಾರಿಗಳು ಬೀಜಗಳನ್ನು ಆರಿಸಿ ಸುಮಾರು ೬೦ ಕಿಲೋಗ್ರಾಂ. ಎಣ್ಣೆ ಮಾಡಿಸುತ್ತಾರೆ. ಬೀಜ ಆರಿಸಿದ ಕೂಡಲೇ ಎಣ್ಣೆ ಮಾಡಿಸಬೇಕು. ಇಲ್ಲದಿದ್ದರೆ ಬೀಜಗಳು ಹಾಳಾಗುತ್ತವೆ. ಒಟ್ಟಾರೆ ಬೀರಪ್ಪನಿಗೆ ವರ್ಷಾವಧಿ ಹಿಪ್ಪೆ ಎಣ್ಣೆ ದೀಪ ಎನ್ನುತ್ತಾರೆ ಬೆಳ್ಳೂರಿನ ನಾಗೇಶ್.

ಅರುವನಹಳ್ಳಿಯವರಿಗೆ ಹಿಪ್ಪೆ ಬೀಜದ ಎಣ್ಣೆ ಸಂಸ್ಕರಿಸಿ, ಖಾದ್ಯಗಳಿಗೆ ತಿನ್ನಲು ಬಳಸಬಹುದೆಂಬುದು ಗೊತ್ತಿಲ್ಲ. ಹೂವು, ಹಣ್ಣುಗಳನ್ನು ತಿನ್ನಬಹುದು ಎಂದೂ ಗೊತ್ತಿಲ್ಲ. ಆದರೆ ಕಟ್ಟಿಗೆ, ಉರುವಲುಗಳಾಗಿ ಮರವನ್ನು ಬಳಸುತ್ತಾರೆ.

ಮೈಸೂರು ಪ್ರಾಂತ್ಯದಲ್ಲಿ ಕಾವೇರಿ ತೀರದಲ್ಲಿ ಹಿಪ್ಪೆಮರಗಳು ಹೆಚ್ಚಾಗಿವೆ. ಇಲ್ಲೆಲ್ಲಾ ಮಾಹಿತಿ, ಜಾಗೃತಿ ನೀಡಿ ಹಿಪ್ಪೆಮರಗಳನ್ನು ಉಳಿಸುವ, ಬೆಳೆಸುವ ಅಭಿಯಾನ ನಡೆಯಬೇಕು. ಬೀಜಗಳಿಂದ ಎಣ್ಣೆ ತೆಗೆದು ಸಂಸ್ಕರಿಸುವ ವಿಧಾನ ತಿಳಿಸಬೇಕು. ಎಣ್ಣೆಗಾಣಗಳಿಗೆ ಸಹಾಯಧನ ಒದಗಿಸಬೇಕು. ಸ್ವ-ಉದ್ಯೋಗ ನಿರ್ಮಾಣವಾಗಬೇಕು. ಇದನ್ನು ಮಹಿಳಾ ಸ್ವಸಹಾಯ ಗುಂಪುಗಳಿಂದ ಮಾಡಿಸಬಹುದು.

ಜೈವಿಕ ಇಂಧನ ವಿದೇಶಿ ಕಂಪೆನಿಗಳ ಲಗ್ಗೆ

ಯುನೈಟೆಡ್ ಕಿಂಗ್‌ಡಂನ ಡಿ-೧, ಬಾಬ್ಜಿ ಚಪರಾಲ, ಬೊರುಕಾ ಸಂಸ್ಥೆ ಇವುಗಳು ಪ್ರಮುಖ ವಿದೇಶಿ ಮೂಲದ ಕಂಪೆನಿಗಳು. ಜೈವಿಕ ಇಂಧನ ಕ್ಷೇತ್ರಕ್ಕೆ ಲಗ್ಗೆ ಇಟ್ಟಿವೆ.

ಡಿ-೧ ೩೦೦ ಮಿಲಿಯನ್ ಡಾಲರ್, ಬೋರುಕಾ ೩೦೦ ಮಿಲಿಯನ್ ಡಾಲರ್ ಹಾಗೂ ಚಪರಾಲ ಕಂಪೆನಿ ೩೦೦ ಮಿಲಿಯನ್ ಡಾಲರ್ ಹಣ ಹೂಡಿವೆ.

ತಮಿಳುನಾಡು, ಕರ್ನಾಟಕ, ಆಂಧ್ರ, ಮಧ್ಯಪ್ರದೇಶ, ರಾಜಾಸ್ಥಾನ, ಛತ್ತೀಸ್‌ಗಡ ಈ ರಾಜ್ಯಗಳು ಪ್ರಮುಖ ಗುರಿ. ಈಗಾಗಲೇ ಪ್ರತಿ ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಎಕರೆ ಪ್ರದೇಶಗಳಲ್ಲಿ ಜತ್ರೋಪಾ, ಹೊಂಗೆ, ಬೇವು ಮುಂತಾದ ಎಣ್ಣೆ ಸಸ್ಯಗಳ ನಾಟಿ ಕೆಲಸ ನಡೆಯುತ್ತಿದೆ.

ಗುಲ್ಬರ್ಗಾ, ಕೃಷ್ಣಾ ಜಿಲ್ಲೆ, ಕಾವೇರಿ ನದೀತೀರ (ಕರ್ನಾಟಕ ಹಾಗೂ ತಮಿಳುನಾಡು) ಅಹಮದಾಬಾದ್ ಮುಂತಾದ ಕಡೆಗಳಲ್ಲಿ ಕೇವಲ ಸಮೀಕ್ಷೆಗೋಸ್ಕರ ಒಂದು ಲಕ್ಷ ಡಾಲರನ್ನು ಅಮೇರಿಕಾದ ವಾಣಿಜ್ಯ ಮತ್ತು ಅಭಿವೃದ್ಧಿ ಮಂಡಳಿ ನೀಡಿದೆ.

ಬೋರುಕಾ ೨೦ ಲಕ್ಷ ಗ್ಯಾಲನ್, ಡಿ-೧ ೮೦ ಲಕ್ಷ ಗ್ಯಾಲನ್, ಚಪರಾಲ ೧೦ ಲಕ್ಷ ಗ್ಯಾಲನ್ ಜೈವಿಕ ಇಂಧನ ತಯಾರಿಸುವ ಗುರಿಯನ್ನು ಮುಂದಿನ ಐದು ವರ್ಷಗಳಲ್ಲಿ ಹಮ್ಮಿಕೊಂಡಿದೆ.

ಭಾರತ ಸರ್ಕಾರದ ತೈಲ ಮಂತ್ರಾಲಯ, ಭಾರತ ರೈಲ್ವೆ ನಿಗಮ, ಎಲ್ಲಾ ರಾಜ್ಯಗಳ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಸ್ಥೆಗಳು, ಹಾಲು ಉತ್ಪಾದಕರ ಸಂಘಗಳು, ಎಂಟು ರಾಜ್ಯ ಸರ್ಕಾರಗಳು, ಅನೇಕ ಎನ್‌ಜಿಓಗಳು ಜೈವಿಕ ಇಂಧನ ಬಳಕೆ-ತಿಳುವಳಿಕೆ-ಮಾಹಿತಿ-ಜಾಗೃತಿ ಬೆಳೆಯುವಿಕೆ ಹೀಗೆ ಏನೆಲ್ಲಾ ಕೆಲಸಗಳಲ್ಲಿ ನಿರತವಾಗಿವೆ.

ಕರ್ನಾಟಕದ ಪರಿಸ್ಥಿತಿ

ಕರ್ನಾಟಕದಲ್ಲಿ ತೆಂಗು, ಶೇಂಗಾ, ಜೋಳ, ಹರಳು, ಸೂರ್ಯಕಾಂತಿ, ಸೋಯಾ, ತಾಳೆ, ಎಳ್ಳು, ಅಕ್ಕಿತೌಡು ಹೀಗೆ ಏನೆಲ್ಲಾ ರೀತಿಯ ಎಣ್ಣೆಗಳು ಖಾದ್ಯಕ್ಕೋಸ್ಕರ ತಯಾರಾಗುತ್ತಿವೆ.

ಬೇವು, ಹೊಂಗೆ, ಹಿಪ್ಪೆ, ಮುರುಗಲು, ಸುರಹೊನ್ನೆ, ಧೂಪ, ರಬ್ಬರ್, ಹುಲುಗಲ, ಸಾಲ ಮುಂತಾದ ಬೀಜಗಳಿಂದ ಖಾದ್ಯವಲ್ಲದ ತೈಲಗಳೂ ಉತ್ಪಾದನೆಯಾಗುತ್ತಿದೆ.

ಆದರೆ ಯಾವುದೂ ಒಂದು ವ್ಯವಸ್ಥಿತ ರೂಪ ಹೊಂದಿಲ್ಲ. ಒಂದೇ ಸೂರನಡಿಯಲ್ಲಿ ಸಿಗುತ್ತಿಲ್ಲ. ಇದಕ್ಕೋಸ್ಕರ ಒಕ್ಕೂಟಗಳಿಲ್ಲ. ಮಾಹಿತಿ ಜಾಗೃತಿ ನೀಡುವವರಿಲ್ಲ.

ಹೀಗೆ ಜೈವಿಕ ಇಂಧನ ಗಣನೀಯ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದ್ದರೂ ಬಳಕೆ ಸೂಕ್ತವಾಗಿ ಆಗುತ್ತಿಲ್ಲ. ಇದೆಲ್ಲಾ ಬೇರುಮಟ್ಟದಲ್ಲೇ ಆಗಬೇಕಾದ ಕೆಲಸಗಳು. ಆದರೆ ಮಾಡುವ ಜವಾಬ್ದಾರಿ ಯಾರದ್ದು?