ಮ್ಯಾಂಗೋಸ್ಟಿನ್ನ ಇತಿಹಾಸ

ಮ್ಯಾಂಗೋಸ್ಟಿನ್‌ ಉಷ್ಣವಲಯದ ಹಣ್ಣುಗಳಲ್ಲಿ ಅತ್ಯುತ್ತಮವಾದುದೆಂದು ಪರಿಗಣಿಸಲ್ಪಟ್ಟಿದೆ. ಇದನ್ನು ಹಣ್ಣುಗಳ ‘ರಾಣಿ’ ಎಂದು ಕರೆಯಲಾಗುತ್ತಿದೆ.  ಮ್ಯಾಂಗೋಸ್ಟಿನ್‌ನ ಮೂಲ ಎಲ್ಲಿ ಎಂಬುದು ಇನ್ನೂ ಖಚಿತವಾಗಿಲ್ಲ, ಹೀಗಿದ್ದರೂ ಇದು ‘ಸುಂದ’ ದ್ವೀಪಗಳು ಮತ್ತು ಮೊಲ್ಯೂಕಾಸ್‌ಗಳಲ್ಲಿ ಹುಟ್ಟಿ ಬೆಳೆದಿರಬೇಕೆಂದು ಅಂದಾಜಿಸಲಾಗಿದೆ. ಮಲೇಷ್ಯಾದ ಕೆಮ್ಮಾಮನ್‌ ದಟ್ಟಾರಣ್ಯಗಳಲ್ಲಿ ಈಗಲೂ ಇದರ ಮರಗಳು ಕಾಣಸಿಗುತ್ತಿದ್ದು, ಇದು ಇದರ ಮೂಲವನ್ನು ದೃಢಪಡಿಸುತ್ತದೆ. ಇನ್ನೊಂದು ಮೂಲದ ಪ್ರಕಾರ ಇದು ಥೈಲಾಂಡ್‌ ಅಥವಾ ಬರ್ಮಾದಲ್ಲಿ ಮೊತ್ತಮೊದಲು ಕಂಡು ಬಂದಿತ್ತೆಂಬುದು. ಥೈಲಾಂಡ್‌ನಲ್ಲಿ ೧೯೬೫ರಲ್ಲೆ ಇದರ ಕೃಷಿಯನ್ನು ಸುಮಾರು ೪,೦೦೦ ಹೆಕ್ಟೇರ್ ಪ್ರದೇಶದಲ್ಲಿ ಕೈಗೊಳ್ಳಲಾಗುತ್ತಿತ್ತು ಎಂಬುದಾಗಿ ಇತಿಹಾಸ ತಿಳಿಸುತ್ತದೆ. ಅದೇ ಸಮಯದಲ್ಲಿ ಇದನ್ನು ಕಾಂಪೂಚಿಯ, ದಕ್ಷಿಣ ವಿಯೆಟ್ನಾಂ, ಬರ್ಮಾ, ಮಲೇಷಿಯಾ ಮತ್ತು ಸಿಂಗಾಪುರಗಳಲ್ಲೂ ಬೆಳೆಸಲಾಗುತ್ತಿತ್ತು.

ಶ್ರೀಲಂಕಾಕ್ಕೆ ಈ ಸಸ್ಯ ಸುಮಾರು ೧೮೦೦ ರಲ್ಲಿ ಮತ್ತು ಭಾರತಕ್ಕೆ ೧೮೮೧ ರಲ್ಲಿ ಕಾಲಿಟ್ಟಿತ್ತು. ಭಾರತಕ್ಕೆ ಕಾಲಿಟ್ಟ ಬಳಿಕ ಇದರ ವಿಸ್ತರಣೆ ನೀಲಗಿರಿ ಬೆಟ್ಟ, ತಮಿಳುನಾಡಿನ ತೆನ್ನೆವಳ್ಳಿ ಮತ್ತು ಕನ್ಯಾಕುಮಾರಿ, ಕೇರಳ ಅಲ್ಲದೆ ದಕ್ಷಿಣ ಪೂರ್ವ ಭಾರತಕ್ಕೆ ಆಯಿತು. ಇಂಗ್ಲೆಂಡಿನ ಹಸಿರು ಮನೆಯಲ್ಲಿ ೧೮೫೫ ರಲ್ಲಿ ಇದರ ಹಣ್ಣು ಮೊದಲು ಬಿಟ್ಟಿತ್ತು ಎಂಬುದಾಗಿ ಇತಿಹಾಸ ತಿಳಿಸುತ್ತದೆ. ಪನಾಮ ಕಾಲುವೆ ಪ್ರದೇಶ ಮತ್ತು ಪ್ಯೂರೆಟೋ ರಿಕೋಗೆ ೧೯೦೩ ಮತ್ತು ಅಮೇರಿಕಾಕಕ್ಕೆ ೧೯೦೬ ರಲ್ಲಿ ಈ ರೀತಿಯಾಗಿ ಇದು ವಿಸ್ತರಿಸಲ್ಪಟ್ಟಿತು.

ಮ್ಯಾಂಗೋಸ್ಟಿನ್‌ನ ಹಣ್ಣು ರಾಣಿ ವಿಕ್ಟೋರಿಯಾಗೆ ಅತ್ಯಂತ ಪ್ರಿಯದ್ದಾಗಿತ್ತು. ಇದಕ್ಕೆ ಮುಖ್ಯ ಕಾರಣ ಈ ಹಣ್ಣುಗಳ ಬೀಜದ ಮೇಲಿರುವ ರಸಭರಿತ ತಿರುಳು ಮತ್ತು ಅದರ ಮಧುರ ರುಚಿ. ಇದರ ಸಿಹಿ ಹುಳಿಗಳ ಸಮ್ಮಿಶ್ರ ರುಚಿ ಮತ್ತು ಹಿತವಾದ ಪರಿಮಳ ಎಲ್ಲರನ್ನು ಆಕರ್ಷಿಸುವಂತಿದೆ. 

ವಿಶ್ವದಲ್ಲಿ ಮ್ಯಾಂಗೋಸ್ಟಿನ್‌ ಕೃಷಿ

ಮ್ಯಾಂಗೋಸ್ಟಿನ್‌ನ ವ್ಯವಸಾಯವನ್ನಿಂದು ಉತ್ತರ ಆಸ್ಟ್ರೇಲಿಯಾ, ಬ್ರೆಜಿಲ್‌, ಬರ್ಮಾ, ಮಧ್ಯ ಅಮೇರಿಕಾ, ಹವಾಯಿ, ದಕ್ಷಿಣ ಭಾರತ, ಇಂಡೋನೇಷಿಯಾ, ಮಲೇಷ್ಯಾ, ಶ್ರೀಲಂಕಾ, ಥೈಲಾಂಡ್‌, ವಿಯೆಟ್ನಾಂ ಮತ್ತಿತರ ಉಷ್ಣವಲಯದ ರಾಷ್ಟ್ರಗಳಲ್ಲಿ ಕೈಗೊಳ್ಳಲಾಗುತ್ತಿದೆ. ಮಲೇಷ್ಯಾ ರಾಷ್ಟ್ರವೊಂದರಲ್ಲೆ ಇದರ ಉತ್ಪಾದನೆ ಸುಮಾರು ೩೦ ಸಾವಿರ ಟನ್‌ಗಳಿಗಿಂತಲೂ ಹೆಚ್ಚಾಗಿದೆ. ಮ್ಯಾಂಗೋಸ್ಟಿನ್‌ ಹಣ್ಣಿನ ಬಣ್ಣ, ಆಕಾರ ಮತ್ತು ಪರಿಮಳದಿಂದಾಗಿ ಇದಕ್ಕೆಂದು ವಿಶ್ವದಾದ್ಯಂತ ಅಧಿಕ ಬೇಡಿಕೆಯಿದ್ದು, ಈಗಿನ ಉತ್ಪಾದನೆ ಬೇಡಿಕೆಗನುಗುಣವಾಗಿಲ್ಲ. ಭಾರತದಲ್ಲಿ ಇದರ ಕೃಷಿ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಕರಾವಳಿ ಪ್ರದೇಶ, ಗೋವಾ, ಮಹಾರಾಷ್ಟ್ರ, ಮತ್ತು ಪಶ್ಚಿಮ ಬಂಗಾಳಗಳಲ್ಲಿವೆ. 

ಸಸ್ಯ ಪರಿಚಯ

“ಗಾರ್ ಸೀನಿಯಾ ಮ್ಯಾಂಗೊಸ್ಟಿನ್‌ ಲಿನ್‌” ಎಂಬ ಸಸ್ಯನಾಮವುಳ್ಳ ಮ್ಯಾಂಗೋಸ್ಟಿನ್‌ “ಗುಟ್ಟಿಫೇರಿ” ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ನಿಧಾನವಾಗಿ ಬೆಳೆಯುವ ಇದು, ನೇರವಾದ ಬಹುಭುಜವನ್ನು ಹೊಂದಿರುವ ೬ ರಿಂದ ೨೫ ಮೀ. ಎತ್ತರಕ್ಕೆ ಏರುವ ಸಸ್ಯವಾಗಿದೆ. ದಟ್ಟ ಕಂದು ಇಲ್ಲವೆ ಕಪ್ಪಗಿನ ಈ ಮರದ ತೊಗಟೆ ಪದರಗಳಿಂದ ಕೂಡಿದ್ದು, ಇದರ ಒಳತೊಗಟೆ ಹಳದಿ ಬಣ್ಣದ್ದಾಗಿದ್ದು, ಅಂಟಿನಿಂದ ಕೂಡಿದ ಕಡು ಹಾಲನ್ನು ಹೊಂದಿರುತ್ತದೆ. ಇದರ ಎಲೆಗಳು ಅಂಡಾಕಾರ ರೂಪದಲ್ಲಿದ್ದು ಸದಾ ಹಸಿರಾಗಿರುತ್ತವೆ. ಎಲೆಗಳ ಉದ್ದ ೯ ರಿಂದ ೨೫ ಸೆ.ಮೀ. ಮತ್ತು ಅಗಲ ೪.೫ ರಿಂದ ೧೦ ಸೆ.ಮೀ. ಗಳಾಗಿದೆ. ಎಳತು ಎಲೆಗಳು ಗುಲಾಬಿ ಬಣ್ಣದ್ದಾಗಿವೆ. ಈ ಸಸ್ಯದ ಹೂವು ಅಗಲವಾಗಿ ತಿರುಳಿನಿಂದ ಕೂಡಿದ್ದು, ಇವು ಗಂಡು ಅಥವಾ ದ್ವಲಿಂಗಿಗಳಾಗಿವೆ. ಗಂಡು ಹೂಗಳು ರೆಂಬೆಯ ತುದಿಯಲ್ಲಿ ೩ ರಿಂದ ೯ ಸಂಖ್ಯೆಯಲ್ಲಿ ಗುಂಪಾಗಿರುತ್ತವೆ. ದ್ವಿಲಿಂಗಿ ಹೂವುಗಳು ಎಳತು ಭುಜಗಳ ತುದಿಯಲ್ಲಿ ಒಂದಾಗಿ ಇಲ್ಲವೆ ಜೊತೆಯಾಗಿ ಹುಟ್ಟುತ್ತವೆ. ಈ ಹೂವಿನ ಎಸಳುಗಳು ಹಳದಿಯಿಂದ ಕೂಡಿದ ಹಸಿರು ತುದಿಯನ್ನು ಹೊಂದಿ ಕೆಂಪು ಬಣ್ಣಕ್ಕೆ ಪರಿವರ್ತಿತವಾಗುತ್ತವೆ.

ಮ್ಯಾಂಗೋಸ್ಟಿನ್‌ ಹಣ್ಣು, ಪುಷ್ಪ ಪಾತ್ರ ಸಮೂಹದ ಕಾಂಡದಿಂದ ಬರುವುದು. ಇದರ ಕಂಡದ ತುದಿಯಲ್ಲಿ ೪ ರಿಂದ ೮ ತ್ರಿಕೋನಾಕೃತಿಗಳಿರುವುದು. ಇದರ ಹಣ್ಣಿನಲ್ಲಿ ಕೆಲವೊಮ್ಮೆ ಬೀಜಗಳಿರುವುದಿಲ್ಲ. ಇಲ್ಲವೆ ೧ ರಿಂದ ೫ ಬಲಿತ ಬೀಜಗಳನ್ನು ಹೊಂದಿರುತ್ತದೆ. ಸಿಪ್ಪೆಯ ಒಳಗಡೆ ಹಿಮದಂತಿರುವ ಬಿಳಿಯ ಮೆತ್ತಗಿನ ತಿರುಳಿದ್ದು, ಇದು ಸ್ವಾದದಿಂದ ಕೂಡಿದ್ದಾಗಿದೆ. ಇದರ ಹಣ್ಣು ೬ ರಿಂದ ೭ ಸೆ.ಮೀ. ಸುತ್ತಳತೆಯದ್ದಾಗಿದೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ

ಈ ಹಣ್ಣಿನ ಕೃಷಿಗೆ ಫಲವತ್ತಾದ ಮಣ್ಣು ಬೇಕು. ನೀರು ಬಸಿದು ಹೋಗುವ ಸದಾ ಹಸಿಯಾಗಿರುವ ಮಣ್ಣು ಇದಕ್ಕೆ ಸೂಕ್ತ. ಗೋಡು ಮಣ್ಣು, ತೇವಾಂಶ ಹಿಡಿದಿಡಬಲ್ಲ ಜೇಡಿಮಣ್ಣು, ಕೆಂಪು ಜಂಬಿಟ್ಟಿಗೆ ಮಣ್ಣು ಇವಲ್ಲೆಲ್ಲ ಮ್ಯಾಂಗೋಸ್ಟಿನ್‌ ವ್ಯವಸಾಯ ಕೈಗೊಳ್ಳಬಹುದು. ಸಾವಯವದಿಂದ ಕೂಡಿದ ಅದರಲ್ಲೂ ಮುಖ್ಯವಾಗಿ ಮರಳು ಮಿಶ್ರಿತ ಮಣ್ಣು ಇದರ ಕೃಷಿಗೆ ಸೂಕ್ತವಾಗಿದೆ. ಇದರ ಗಿಡಗಳಿಗೆ ಬಲವಾಗ ಗಾಳಿ ಬೀಸದಂತೆ ವ್ಯವಸ್ಥೆಯಿರಬೇಕಲ್ಲದೆ, ಉಪ್ಪಿನಂಶ ಗಾಳಿ ಮೂಲಕ ಬರುವಂತಿರಬಾರದು.

ಇದರ ಕೃಷಿಗೆ ಸಮುದ್ರ ಮಟ್ಟದಿಂದ ೪೦೦-೧೦೦೦ ಮೀ. ಎತ್ತರವರೆಗಿನ ಪ್ರದೇಶ ಪೂರಕವಾಗಬಲ್ಲದು. ಆದರೆ ಹೆಚ್ಚಿನ ಚಳಿಯನ್ನು ಇದು ಬಯಸಲಾರದು. ಉಷ್ಣತೆಯಿಂದ ಕೂಡಿದ ಆರ್ದ್ರ ಹವೆ ಈ ಕೃಷಿಗೆ ಒಪ್ಪುವಂತದ್ದಾಗಿದೆ. ಇದರ ವ್ಯವಸಾಯ ಮಾಡುವಲ್ಲಿ ವಾರ್ಷಿಕ ಮಳೆ ೧೨೭ ಸೆ.ಮೀ. ಗಳಷ್ಟಾದರೂ ಇರಲೇ ಬೇಕು. ನೆರಳಿನಿಂದ ಕೂಡಿದ, ತಂಪಾದ ಹಾಗೂ ತೇವಾಂಶವಿರುವ ಇಳಿಜಾರು ಪ್ರದೇಶಗಳಲ್ಲಿ ಇದು ಚೆನ್ನಾಗಿ ಬೆಳೆಯಬಲ್ಲದು. ಆದರೆ ಬರಗಾಲವನ್ನಿದು ಸಹಿಸದು.

ತಳಿಗಳು

ಇದರಲ್ಲಿ ನಿರ್ಧಿಷ್ಟ ತಳಿಗಳಿಲ್ಲ. ಪ್ರಕೃತ ಕೃಷಿಯಾಗುತ್ತಿರುವ ಎಲ್ಲಾ ಮರಗಳು ಒಂದೇ ಮೂಲದವುಗಳಾಗಿವೆ. ಸುಲು ದ್ವೀಪದಲ್ಲಿರುವ ಒಂದು ತಳಿ ಮಾತ್ರ ಉತ್ತಮ ರುಚಿಯುಳ್ಳ ದೊಡ್ಡ ಗಾತ್ರದ ಹಣ್ಣನ್ನು  ಬಿಡುತ್ತವೆಯೆಂಬ ಮಾಹಿತಿಯಿದೆ. ಜಾವಾದಲ್ಲಿ ಪೈರಿ ಫಾರ್ಮಿಸ್‌ ಎಂಬ ಸುಧಾರಿತ ತಳಿಯಿದೆ. ಭಾರತದಲ್ಲಿ ಕೆಲವೊಂದು ಕಡೆ ಸಣ್ಣದಾದ ಹುಳಿಯಿಂದ ಕೂಡಿದ ಹಣ್ಣುಗಳನ್ನು ಬಿಡುವ ತಳಿಗಳು ಕಾಣ ಸಿಗುತ್ತವೆ.

ಸಸ್ಯಾಭಿವೃದ್ಧಿ

ಇದರ ಸಸ್ಯವನ್ನು ಬೀಜ ಹಾಗೂ ನಿರ್ಲಿಂಗ ಪದ್ಧತಿಗಳಿಂದ ಪಡೆಯಬಹುದು. ಸಾಮಾನ್ಯವಗಿ ಬೀಜ ಪದ್ಧತಿ ಹೆಚ್ಚು ಚಾಲ್ತಿಯಲ್ಲಿದೆ. ನಿರ್ಲಿಂಗ ಪದ್ಧತಿಯಲ್ಲಿ ಕಸಿ ವಿಧಾನ ಪ್ರಮುಖವಾದುದಾಗಿದೆ.

ಬೀಜ ಪದ್ದತಿಯಲ್ಲಿ ಬೀಜೋತ್ಪಾದನೆಗಾಗಿ ದೊಡ್ಡ ಗಾತ್ರದ ಬೇಗ ಹಣ್ಣನ್ನು ಬಿಡುವ ಮರಗಳಲ್ಲಿನ ಹಣ್ಣಿನ ಬೀಜವನ್ನು ಬಳಸುವುದು ಸೂಕ್ತ. ಬೀಜ ದೊಡ್ಡದಾದಷ್ಟು ಶೀಘ್ರ ಮೊಳಕೆಯೊಡೆಯುವದು ಮತ್ತು ಹೆಚ್ಚಿನ ಸಂಖ್ಯೆಯ ಮೊಳಕೆಯಿರುವುದು. ಬೀಜವನ್ನು ಆಯ್ದುಕೊಳ್ಳುವಾಗ ಅದರ ಮೇಲಿರುವ ಪೊರೆ ಹಾಳಾಗದಂತೆ ನೋಡಿಕೊಳ್ಳಬೇಕು. ಹಣ್ಣುಗಳಿಂದ ಬೇರ್ಪಡಿಸಿದ ಬೀಜಗಳು ೩ ರಿಂದ ೫ ವಾರಗಳ ತನಕ ಜೀವಂತವಾಗಿರುತ್ತವೆ. ಹಣ್ಣಿನಿಂದ ಆಯ್ದ ಬೀಜಗಳ ಮೇಲಿನ ಲೋಳೆ ಪದಾರ್ಥವನ್ನು ಉಜ್ಜಿ ತೊಳೆದು ಬಿತ್ತನೆ ಮಾಡಿದಾಗ ೫ ದಿನಗಳಲ್ಲಿ ಅದು ಮೊಳಕೆಯೊಡೆಯುವುದು. ಸಾಮಾನ್ಯವಾಗಿ ಬೀಜವೊಂದರಿಂದ ೩ ಸಸಿಗಳು ಉತ್ಪತ್ತಿಯಾಗುವುದು. ಜಾಗರೂಕತೆಯಿಂದ ಅವನ್ನು ಬೇರ್ಪಡಿಸಿ ನಾಟಿ ಮಾಡಿದಲ್ಲಿ ಅವು ಬೆಳೆಯಬಲ್ಲವು. ಹೆಚ್ಚಿನ ಮೊಳಕೆಗಾಗಿ ಏಪ್ರಿಲ್‌ -ಮೇ ತಿಂಗಳುಗಳ ಬೀಜ ಯೋಗ್ಯವೆಂಬುದು ಸಾಬೀತಾಗಿದೆ.

ಬೀಜವನ್ನು ದಿಣ್ಣೆಗಳಲ್ಲಿ ಬಿತ್ತುವುದು ಉತ್ತಮ. ಈ ದಿಣ್ಣೆಗಳ ಸಾಲಿಗೆ ಕೊಳೆತ ಎರೆಗೊಬ್ಬರ, ಮರಳು ಮತ್ತು ಮೇಲ್ಮಣ್ಣುಗಳ ಮಿಶ್ರಣ ಹಾಕಿ ಅದರಲ್ಲಿ ಬೀಜ ಊರಬೇಕು. ಈ ಮಿಶ್ರಣಕ್ಕೆ ಇದ್ದಿಲಿನ ಪುಡಿ ಬೆರೆಸುವುದು ಉತ್ತಮ. ಇದರೊಂದಿಗೆ ಬೀಜವನ್ನು ರಂಧ್ರಗಳಿರುವ ಪ್ಲಾಸ್ಟಿಕ್‌ ಚೀಲದಲ್ಲೂ ಬಿತ್ತಲು ಸಾಧ್ಯ. ಇಲ್ಲಿ ಬೀಜ ಮೊಳಕೆಯೊಡೆದು ಎರಡು ವರ್ಷಗಳ ಸಸಿಯಾದ ಬಳಿಕ ಜಾಗರುಕತೆಯಿಂದ ತಳ ಭಾಗದ ಮಣ್ಣು ಸಹಿತ ಗುಂಡಿಗೆ ವರ್ಗಾಯಿಸಬೇಕು. ಎಳೆಯ ಸಸಿಗಳಿಗೆ ದ್ರಾವಣ ಗೊಬ್ಬರ ಕೊಟ್ಟಲ್ಲಿ ಬೆಳವಣಿಗೆ ಅಧಿಕ.

ನಿರ್ಲಿಂಗ ಪದ್ಧತಿಯಡಿಯಲ್ಲಿ ಕಸಿ ವಿಧಾನ ಮುಖ್ಯವಾದುದು. ಇಲ್ಲಿ ಅದರ ಬೀಜದ ಸಸಿ, ದೂಪದ ಮರ, ದೇವಂಗಿ, ಮುಂತಾದ ಬೀಜ ಸಸಿಗಳನ್ನು ಬೇರು ಸಸಿಗಳನ್ನಾಗಿ ಬಳಸುತ್ತಾರೆ. ಈ ಕೆಲಸ ಜೂನ್‌ನಿಂದ ಅಕ್ಟೋಬರ್ ನೊಳಗೆ ಆದಲ್ಲಿ ಅದನ್ನು ನಾಟಿ ಮಾಡಿದಾಗ ೪ ವರ್ಷಗಳಲ್ಲಿ ಫಸಲು ದೊರಕಲು ಸಾಧ್ಯ. ಈ ವಿಧಾನದೊಂದಿಗೆ ಪಾರ್ಶ್ವಕಸಿ, ಕಣ್ಣು ಕೂಡಿಸಿ ಕಸಿ, ಗೂಟಿ ಪದ್ಧತಿ, ಕಾಂಡದ ತುಂಡುಗಳನ್ನು ನಾಟಿ ಮಾಡಿ ಸಸಿಗಳನ್ನು ಪಡೆಯಲಾಗುವುದು.

ನಾಟಿ ವಿಧಾನ

ಆರಂಭದಲ್ಲಿ ಕೃಷಿ ಭೂಮಿಯನ್ನು ಆಳವಾಗಿ ಉಳುಮೆ ಮಾಡಿ ಸಮ ಮಾಡಬೇಕು. ನಾಟಿ ಪ್ರದೇಶ ಇಳಿಜಾರಾಗಿದ್ದಲ್ಲಿ ಸೂಕ್ತ ಅಂತರದಲ್ಲಿ ಅಡ್ಡಗಟ್ಟಿಗಳನ್ನು ಹಾಕಿ ಗುಂಡಿಗಳನ್ನು ತೆಗೆಯಬೇಕು. ಸಾಲು ಮತ್ತು ಸಸಿಗಳ ನಡುವಿನ ಅಂತರ ತಲಾ ೧೦ ಮೀ. ಇದ್ದು, ೧ x ೧ x ೧ ಮೀ. ಗಾತ್ರದ ಗುಂಡಿ ರಚನೆಯಾಗಬೇಕು. ಈ ಗುಂಡಿಗಳಿಗೆ ಸಮಪ್ರಮಾಣದ ಗೊಬ್ಬರ ಮತ್ತು ಮೇಲ್ಮಣ್ಣು ಮಿಶ್ರಣವನ್ನು ಏಪ್ರಿಲ್‌-ಮೇ ನಲ್ಲಿ ತುಂಬಿಸಿಡಬೇಕು. ಮಳೆಗಾಲ ಆರಂಭವಾದ ಬಳಿಕ ಸಾಮಾನ್ಯವಾಗಿ ಜೂನ್‌-ಜುಲೈನಲ್ಲಿ ಸಸಿಗಳನ್ನು ನಾಟಿ ಮಾಡಬೇಕು. ನಾಟಿಗೆ ಸಂಜೆಯ ಹೊತ್ತು ಸೂಕ್ತ. ನಾಟಿ ಮಾಡುವ ಸಸಿ ೧ ರಿಂದ ೨ ವರ್ಷಗಳದ್ದಾಗಿರಬೇಕು. ಗಿಡಗಳು ಗಾಳಿಗೆ ಅಲುಗಾಡದಂತೆ ಊರುಗೋಲು ಅಗತ್ಯ. ನಾಟಿ ಬಳಿಕ ಅಗತ್ಯಕ್ಕನುಗುಣವಾಗಿ ನೀರುಣಿಸಬೇಕು. ಆರಂಭಿಕ ಹಂತದಲ್ಲಿ ಸಸ್ಯಕ್ಕೆ ಬಿಸಿಲು ತಾಗದಂತೆ ನೆರಳನ್ನೊದಗಿಸಬೇಕು.

ನೀರಾವರಿ ಮತ್ತು ಗೊಬ್ಬರ

ಮ್ಯಾಂಗೋಸ್ಟಿನ್‌ ಸಸ್ಯದ ತಳ ಭಾಗ ಸದಾ ಹಸಿಯಾಗಿರಬೇಕು. ಇದಕ್ಕಾಗಿ ಮಳೆಯಿಲ್ಲದಾಗ ಆಗಾಗ ನೀರುಣಿಸಬೇಕು. ಸಾವಯವ ಗೊಬ್ಬರ, ಹಸಿರೆಲೆ ಇತ್ಯಾದಿಗಳನ್ನು ತಳಕ್ಕೆ ಹಾಕಿದಲ್ಲಿ ತೇವಾಂಶ ಸದಾ ಉಳಿಯುವುದು. ಗಿಡದ ಬೆಳವಣಿಗೆಗೆ ವಾರ್ಷಿಕವಾಗಿ ಸುಮಾರು ೧೦೦ ಕಿ.ಗ್ರಾಂ ಗಳಷ್ಟು ಹಟ್ಟಿ ಗೊಬ್ಬರ ಅಗತ್ಯ. ಗಿಡದ ತಳದ ಮಣ್ಣನ್ನು ಆಗಾಗ ಸಡಿಲಿಸುತ್ತಿದ್ದಲ್ಲಿ ಕಳೆ ನಿಯಂತ್ರಣ ಸಾಧ್ಯ.

ಅಂತರ ಬೆಳೆಯಾಗಿ

ಮ್ಯಾಂಗೋಸ್ಟಿನ್‌ನನ್ನು ಅಡಿಕೆ, ತೆಂಗು ಮುಂತಾದ ತೋಟಗಳ ಅಂಚುಗಳಲ್ಲಿ ಬೆಳೆಸಲು ಸಾಧ್ಯ. ಪ್ರತ್ಯೇಕ ಬೆಳೆಯಾಗಿ ಇದನ್ನು ಮಾಡುವುದಿದ್ದಲ್ಲಿ, ಇದು ಹಣ್ಣು ನೀಡುವ ತನಕ ಸಾಲುಗಳ ನಡುವಿನ ಜಾಗದಲ್ಲಿ ತರಕಾರಿ, ಪಪ್ಪಾಯಿ, ಬಾಳೆ ಇತ್ಯಾದಿ ಬೆಳೆಗಳನ್ನು ಕೈಗೊಳ್ಳಬಹುದು.

ಸವರುವಿಕೆ

ಸಹಜವಾಗಿ ಆಕಾರವನ್ನು ಹೊಂದಿರುವ ಈ ಮರದ ನೆತ್ತಿ ದುಂಡಗಾಗಿ ಪೊದೆಯಿಂದ ತುಂಬಿರುವುದು. ಇದು ನೆಲಮಟ್ಟದಿಂದ ಕನಿಷ್ಟ ೧ ಮೀ. ಎತ್ತರದ ತನಕ ನೆಟ್ಟಗಿರುವಂತೆ ಮಾಡಿ ಕವಲುಗಳು ಬಾರದಂತೆ ನೋಡಿಕೊಳ್ಳಬೇಕು. ಸವರುವಿಕೆ ಇದಕ್ಕೆ ಅಗತ್ಯವಿಲ್ಲ.

ಕೀಟಬಾಧೆ ಮತ್ತು ರೋಗಗಳು

ಮ್ಯಾಂಗೋಸ್ಟಿನ್‌ ಮರಕ್ಕೆ ಮುಖ್ಯವಾಗಿ ಎಲೆ ತಿನ್ನುವ ಕಂಬಳಿ ಹುಳದ ಬಾಧೆಯಿದೆ. ಇದರೊಂದಿಗೆ ಸಣ್ಣ ಇರುವೆ ರೆಂಬೆಗಳಿಗೆ ಪೀಡೆಕೊಡುವುವು.

ಹಣ್ಣುಗಳ ಮೇಲೆ ನುಸಿಪೀಡೆ ಕೆಲವೊಮ್ಮೆ ಕಂಡುಬರುವುದು. ಕೋತಿ, ಇಲಿ ಇತ್ಯಾದಿಗಳು ಹಣ್ಣನ್ನು ಹಾಳು ಮಾಡುವುವು.

ರೋಗಗಳಲ್ಲಿ ಅತ್ಯಂತ ಮುಖ್ಯವಾದುದು “ಗ್ಯಾಂಬೋಗೆ”. ಪರಿಣಾಮವಾಗಿ ಹಣ್ಣು ಬಿರಿದು ಕೊಳೆಯುವುದು. ಅಧಿಕ ಮಳೆ ಯಾ ನಿರಂತರ ಮಳೆಯಿಂದಾಗಿ ಈ ರೋಗ ಬುರುವುದು. ಈ ರೋಗದ ಲಕ್ಷಣ ರೆಂಬೆ ಮತ್ತು ಹಣ್ಣುಗಳಿಂದ ಹಳದಿ ಬಣ್ಣದ ದ್ರವ ಸುರಿಯುವುದಾಗಿದೆ. ನಿರಂತರ ಮಳೆಯಾದಾಗ ಹಣ್ಣಿನ ಮೇಲೆ ನೀರು ಬಿದ್ದು, ಅದು ಒಣಗಲು ಅವಕಾಶವಿಲ್ಲದೆ ಈ ರೋಗ ಬರುವುದು. ಇದೇ ರೀತಿ ಹಣ್ಣಿನ ಮೇಲೆ ಸೂರ್ಯನ ಅಧಿಕ ಶಾಖ ಬಿದ್ದರೂ ಈ ದ್ರವ ಕಂಡು ಬರಲು ಸಾಧ್ಯ.

ಹೂವು ಮತ್ತು ಕಾಯಿ

ಸಾಮಾನ್ಯವಾಗಿ ಈ ಗಿಡ ನಾಟಿ ಮಾಡಿದ ೮ ರಿಂದ ೧೦ ವರ್ಷಗಳಲ್ಲಿ ಹೂವು ಬಿಡುವುದು. ಈ ಹೂವು ಹಸಿರಿನಿಂದ ಕೂಡಿದ ಹಳದಿ ಬಣ್ಣದ್ದಾಗಿದೆ ಈ ಹೂ ಗೊಂಚಲು ಗೆಣ್ಣುಗಳ ತುದಿ ಮತ್ತು ಬೆಳೆದ ರೆಂಬೆಗಳಲ್ಲಿ ಒಂದಾಗಿ ಇಲ್ಲವೆ ಜೊತೆಯಾಗಿ ಮೂಡುವುವು. ಮ್ಯಾಂಗೋಸ್ಟಿನ್‌ನ ಹೂವು ಸಾಮಾನ್ಯವಾಗಿ ವರ್ಷದಲ್ಲೊಂದು ಬಾರಿ ಬಿಡುವುದು ವಾಡಿಕೆ,  ಆದರೆ, ಒಣ ಅವಧಿ ಹೆಚ್ಚಿದ್ದಾಗ ಎರಡು ಬಾರಿ ಹೂವು ಬಿಟ್ಟು ಕಾಯಿ ಕಟ್ಟುತ್ತವೆ. ನಮ್ಮಲ್ಲಿ ಏಪ್ರಿಲ್‌ – ಮೇ ಮತ್ತು ಅಕ್ಟೋಬರ್ – ನವಂಬರ್ ಗಳಲ್ಲಿ ಹೂವು ಬಿಡುವುದು. ತೀರ ಪ್ರದೇಶಗಳಲ್ಲಿ ಫೆಬ್ರವರಿ-ಮಾರ್ಚ್‌ ಮತ್ತು ಜೂನ್‌ -ಆಗಸ್ಟ್‌ಗಳಲ್ಲಿ ಹೂವು ಬಿಡುತ್ತದೆ. ವರ್ಷ ಬಿಟ್ಟು ವರ್ಷ ಹೂವು ಬಿಡುವ ಪ್ರವೃತ್ತಿ ಹೆಚ್ಚಿನ ಉತ್ಪಾದನಾ ಪ್ರದೇಶಗಳಲ್ಲಿ ಕಂಡು ಬರುತ್ತಿರುವುದು ಇದರ ವಿಶೇಷ ಗುಣವಾಗಿದೆ. 

ಕೊಯ್ಲು ಮತ್ತು ಉತ್ಪಾದಕತೆ

ಶ್ರೀಲಂಕಾದಲ್ಲಿ ಇದರ ಹಣ್ಣು ಮೇ ನಿಮದ ಜುಲಾಯಿಯೊಳಗೆ ಮಾಗುವುದು. ಭಾರತದಲ್ಲಿ ಮಳೆಗಾಲದಲ್ಲಿ (ಜುಲೈ-ಅಕ್ಟೋಬರ್) ಮತ್ತು ಎರಡನೆ ಫಸಲು ಏಪ್ರಿಲ್‌ನಿಂದ ಜೂನ್‌ನೊಳಗೆ ದೊರಕುವುದು. ಪ್ಯುರೆಟೋರಿಕನ್‌ನಲ್ಲಿ ಸೂರ್ಯನ ಕಿರಣಕ್ಕೆ ಮುಕ್ತವಾಗಿರುವ ಮರ ಜುಲಾಯಿನಿಂದ ಅಗೋಸ್ಟುನಲ್ಲಿ ನೆರಳಲ್ಲಿರುವ ಮರ ನವಂಬರಿನಿಂದ ದಶಂಬರದೊಳಗೆ ಹಣ್ಣನ್ನು ಕೊಡುವುವು.

ಈ ಹಣ್ಣಿನ ಫಸಲು ಯಾ ಉತ್ಪಾದಕತೆ ಮರದಿಂದ ಮರಕ್ಕೆ, ಹವೆಯಿಂದ ಹವೆಗೆ ವ್ಯತ್ಯಾಸವಾಗುವುದು. ಆರಂಭದ ಫಸಲು ಮರವೊಂದರ ೨೦೦ ರಿಂದ ೩೦೦ ಹಣ್ಣುಗಳಾಗಬಹುದು. ಇಳುವರಿಯನ್ನು ಕೊಡಲಾರಂಭಿಸಿದ ಬಳಿಕದ ೩೦ ವರ್ಷಗಳಲ್ಲಿ ಅತ್ಯಧಿಕ ಪ್ರಮಾಣವಾದ ೧ ರಿಂದ ೨ ಸಾವಿರ ಹಣ್ಣುಗಳು ಮರವೊಂದರಲ್ಲಿ ದೊರಕಲು ಸಾಧ್ಯ. ತಮಿಳುನಾಡಿನಲ್ಲಿ ೨೦ ರಿಂದ ೪೫ ವರ್ಷ ಪ್ರಾಯದ ಮರಗಳು ೨ ರಿಂದ ೩ ಸಾವಿರ ಹಣ್ನುಗಳನ್ನು ಕೊಟ್ಟ ನಿದರ್ಶನಗಳಿವೆ. ಆದರೆ ಇಳುವರಿಯು ಆ ಬಳಿಕ ನಿಧಾನವಾಗಿ ಕುಸಿಯುತ್ತಾ ಹೋಗುವುದು. ಈ ಮರಗಳು ಸುಮಾರು ನೂರು ವರ್ಷಗಳ ತನಕ ಫಸಲು ಕೊಡಲು ಸಾಧ್ಯ. ಹಣ್ಣುಗಳನ್ನು ಕೈಯಿಂದಲೇ ಕೊಯ್ಯಬೇಕು. ಕಾಯಿಯ ಬಣ್ಣ ಬದಲಾಗಲು ಆರಂಭಿಸಿದಾಗ, ಸ್ವಲ್ಪ ಮೆತ್ತನೆಯಾದಾಗ ಮತ್ತು ಮಾಗಿದಾಗ ಕೊಯ್ಲು ಮಾಡಬೇಕು.

ಮ್ಯಾಂಗೋಸ್ಟಿನ್‌ ಹಣ್ಣುಗಳು ಸಾಮಾನ್ಯ ವಾತಾವರಣದಲ್ಲಿ ಒಂದು ವಾರದವರೆಗೆ ಕೆಡದಿರುವುದು . ಈ ಹಣ್ಣುಗಳನ್ನು ೬ ರಿಂದ ೧೦ ಸೆ. ಉಷ್ಣತೆಯಲ್ಲಿ ಮೂರು ವಾರಗಳವರೆಗೆ ಮತ್ತು ೧೧ ರಿಂದ ೧೩ ಸೆ. ಉಷ್ಣತೆಯಲ್ಲಲಿ ೩ ರಿಂದ ೪ ವಾರಗಳ  ಕಾಲ ಸಂಗ್ರಹಿಸಿಡಬಹುದು. ಸಂಗ್ರಹಣಾ ದಿನಗಳು ಹೆಚ್ಚಾದಂತೆ ಅದರ ಸಿಪ್ಪೆ ಗಡಸಾಗಿ ಬಿಡಿಸಲು ಕಷ್ಟವಾಗುವುದಲ್ಲದೆ ತಿರುಳು ಒಣಗುವುದು. 

ಉಪಯೋಗಗಳು

ಮ್ಯಾಂಗೋಸ್ಟಿನ್

  • ಆರೋಗ್ಯ ಮತ್ತು ಆದಾಯ ಇವೆರಡರ ದೃಷ್ಟಿಯಿಂದ ಈ ಕೃಷಿ ಪೂರಕ
  • ಕೃಷಿಗೆ ಮುನ್ನ ಆಸಕ್ತಿ ಮುಖ್ಯ.
  • ಇದೊಂದು ದೀರ್ಘಕಾಲಿಕ ಬೆಳೆ.
  • ಉತ್ತಮ ಭವಿಷ್ಯ ಕಂಡುಕೊಳ್ಳಬಲ್ಲ ಬೆಳೆಯಿದು.
  • ಔಷಧೀಯ ಗುಣಗಳು ಇದರ ಸಿಪ್ಪೆ, ಎಲೆ ಮತ್ತು ತಿರುಳುಗಳಲ್ಲಿವೆ.
  • ಇದರ ಮರ ಬಹು ಉಪಯುಕ್ತ.
  • ಈ ಹಣ್ಣಿನ ಬಗ್ಗೆ ನಮ್ಮಲ್ಲಿನ್ನು ಪ್ರಚಾರವಾಗಿಲ್ಲ.
  • ಇದರ ಹಣ್ಣು ಕಾಣಲು ಪುನರ್ಪುಳಿ (ಮುರುಗಲು) ಯಂತೆ.
  • ದೊಡ್ಡ ಪ್ರಮಾಣದಲ್ಲಿ ಈ ಕೃಷಿಯನ್ನು ಉಡುಪಿಯ “ಖಜಾನೆ” ಫಾಮ್‌ನಲ್ಲಿ ಕೈಗೊಳ್ಳಲಾಗಿದೆ.
  • ಅಪೆಡಾ ರಫ್ತುಗೆ ಸಹಾಯವೊದಗಿಸುವುದು.

ಮ್ಯಾಂಗೋಸ್ಟಿನ್‌ ಬಹುರುಚಿಯ ಹಣ್ಣು. ಇದರ ತಿರುಳಿನ ರುಚಿ ಮಧುರವಾದುದು. ಈ ಹಣ್ಣಿನಿಂದ ಜಾಮ್‌, ಜೆಲ್ಲಿ ಮತ್ತು ಜ್ಯೂಸನ್ನು ಮಾಡಲಾಗುವುದು. ಇದರ ತಿರುಳಿನಿಂದ ರಸವನ್ನು ಹಿಂಡಿ ಶುದ್ಧೀಕರಿಸಿ ಶೇಖರಿಸಿಡುತ್ತಾರೆ. ಶೇಖರಿಸಿಡಲು ಹೆಚ್ಚಿನ ಹುಳಿಯಿರುವ ಹಣ್ಣುಗಳ ರಸ ಉಪಯುಕ್ತ. ಮಲೇಶಿಯಾದಲ್ಲಿ ಬೀಜವಿಲ್ಲದ ಹಣ್ಣಿನ ತಿರುಳನ್ನು ಅಷ್ಟೇ ಪ್ರಮ%E