ಹ್ಯಾರಿ ಪಾಟರ್ ಚಿತ್ರಗಳನ್ನು ನೋಡಿದ್ದೀರಲ್ಲ! ಅದ್ಭುತ ಮಾಯಾತಂತ್ರಗಳ ಕಥೆಗಳು. ಒಂದು ಚಿತ್ರದಲ್ಲಿ ಪಾಟರ್ಗೆ ಟೆಡ್ ಆಡ್ಲರ್ ಎನ್ನುವವನ ದಿನಚರಿ ಸಿಗುತ್ತದೆ. ದಿನಚರಿಯ ಪೂರ್ತಿ ಖಾಲಿ ಹಾಳೆಗಳು. ಆಶ್ಚರ್ಯದಿಂದ ಪಾಟರ್ ಅದರಲ್ಲಿ ಕನನ್ನ ಹೆಸರು ಹ್ಯಾರಿ ಪಾಟರ್ಕಿ ಎಂದು ಬರೆಯುತ್ತಾನೆ. ಬರೆಯುತ್ತಿದ್ದಂತೆ ಅಕ್ಷರಗಳು ಮಾಯವಾಗುತ್ತವೆ. ಕೆಲವು ಕ್ಷಣಗಳ ಅನಂತರ ಉತ್ತರ ಕಾಣಿಸಿಕೊಳ್ಳುತ್ತದೆ. ಖನಾನು ಟೆಡ್ ಆಡ್ಲರ್ಖ.  ಪಾಟರ್ ಪ್ರಶ್ನೆಗಳನ್ನು ಬರೆದಂತೆಲ್ಲ, ಶಾಯಿ ಮಾಯವಾಗಿ, ಉತ್ತರಗಳು ಕಾಣಿಸಿಕೊಳ್ಳುತ್ತವೆ.

ಇಂತಹ ಮಾಯಾಪೇಪರ್ ಇದ್ದಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಎಂದು ಕಾಪಿ ಹೊಡೆಯಲು ತೊಡೆ, ಕೈ, ಎದೆಯ ಮೇಲೆಲ್ಲ ಚೀಟಿಗಳನ್ನು ಅಂಟಿಸಿಕೊಂಡು ಹೋಗುವ ವಿದ್ಯಾಗಳು ಕನಸು ಕಾಣುತ್ತಿರಬಹುದು. ಅವರ ಕನಸು ನಿಜವಾಗುವ ದಿನಗಳು ಹತ್ತಿರ ಬಂದಿವೆ. ಬೇಕೆಂದಾಗ ಚಿತ್ರಗಳು, ಅಕ್ಷರಗಳನ್ನು ಪ್ರದರ್ಶಿಸಬಲ್ಲ ಮ್ಯಾಜಿಕ್ ಪೇಪರ್ ತಯಾರಿಸುವ ಸರಳ ವಿಧಾನವನ್ನುಅಮೆರಿಕೆಯ ಕೇಂಬ್ರಿಜ್ನಲ್ಲಿರುವ ಹಾರ್ವರ್ಡ್ ವಿಶ್ವವಿದ್ಯಾನಿಲಯದ ರಸಾಯನ ವಿಜ್ಞಾನಿಗಳು ಪ್ರಕಟಿಸಿದ್ದಾರೆ.  ತುಸು ಬಿಸಿಯಾದರೆ ಸಾಕು. ಚಿತ್ರಗಳು, ಪಾಠ ಇತ್ಯಾದಿಯನ್ನು ಪ್ರದರ್ಶಿಸುವ ತೆಳ್ಳಗಿನ, ಹಗುರವಾದ ಹಾಗೂ ಹೇಗೆಂದ ಹಾಗೆ ಮಡಿಚಬಹುದಾದ ಕಾಗದದ ತೆರೆಗಳನ್ನು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಜಾರ್ಜ್ ವೈಟ್ಸೈಡ್ ಮತ್ತು ಸಂಗಡಿಗರು ನಿರ್ಮಿಸಿರುವ ಸುದ್ದಿ ಇತ್ತೀಚೆಗೆ ಲ್ಯಾಬ್ ಆನ್ ಚಿಪ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವೈಟ್ಸೈಡ್ ತಂಡದವರು ನಿರ್ಮಿಸಿರುವ ಕಾಗದ ಇಲೆಕ್ಟ್ರಾನಿಕ್ ತೆರೆಗಳಿಗೆ ಹೊಸದೊಂದು ಸ್ವರೂಪ ನೀಡಲಿದೆ. ಈ ಹಿಂದೆ ಕಂಪ್ಯೂಟರ್ ಅಥವಾ ಟೆಲಿವಿಷನ್ನಂತಹ ಇಲೆಕ್ಟ್ರಾನಿಕ್ ಸಾಧನಗಳ ಮೂಲಕ ಚಿತ್ರಗಳು ಅಥವಾ ಪಾಠಗಳನ್ನು ನೋಡಬೇಕಾದರೆ ದೊಡ್ಡ, ದೊಡ್ಡ ಪೆಟ್ಟಿಗೆಯಂತಹ ಮಾನಿಟರ್ ಅಥವಾ ತೆರೆಗಳನ್ನು ಬಳಸಬೇಕಾಗುತ್ತಿತ್ತು. ಇತ್ತೀಚೆಗೆ ಎಲ್ಇಡಿ, ಎಲ್ಸಿಡಿ ಹಾಗೂ ಪ್ಲಾಸ್ಮ ತೆರೆಗಳು ಈ ಕೆಲಸ ಮಾಡುತ್ತಿವೆ. ಇವುಗಳ ಶೋಧದಿಂದಾಗಿ ಪುಟ್ಟ ಮೊಬೈಲ್ ತೆರೆಯಲ್ಲಿಯೂ ಬಣ್ಣದ ಚಿತ್ರಗಳನ್ನು ಪ್ರದರ್ಶಿಸುವುದು ಸಾಧ್ಯವಾಗಿದೆ. ಆದರೆ ಈ ಎಲ್ಲ ಕಡಿಸ್ಪ್ಲೇಕಿ ಸಾಧನಗಳೂ ಚಪ್ಪಟೆಯಾಗಿಯೇ ಇರಬೇಕು ಎನ್ನುವುದು ಒಂದು ಅನಿವಾರ್ಯತೆ. ಜೊತೆಗೆ ಇವುಗಳನ್ನು ಚಾಲಿಸಲು ಬೇಕಾಗುವ ವಿದ್ಯುತ್ ಕೂಡ ಹೆಚ್ಚು. ಮೊಬೈಲ್ ತೆರೆ ಚಿತ್ರಮಯವಾಗಿರಬೇಕಾದರೆ ಅದರ ಬ್ಯಾಟರಿ ಸಾಮಥ್ರ್ಯವೂ ಹೆಚ್ಚಿರಬೇಕು. ಹೀಗಾಗಿ ಇವುಗಳ ಬಳಕೆಗೂ ಮಿತಿಯಿದೆ.

ಉದಾಹರಣೆಗೆ, ಇಂತಹ ಡಿಸ್ಪ್ಲೇಗಳನ್ನು ಕಾಫಿ ಕಪ್ ಅಥವಾ ಪೌಡರ್ ಡಬ್ಬದಂತಹ ಸಿಲಿಂಡರುಗಳ ಮೇಲೆ ಅಂಟಿಸಲಾಗದು.  ಹೀಗಾಗಿ ಮಡಿಚಿದರೂ ಮಾಹಿತಿ ಪ್ರದರ್ಶಿಸಬಲ್ಲ ಇಲೆಕ್ಟ್ರಾನಿಕ್ ಡಿಸ್ಪ್ಲೇಗಳ ಶೋಧ ನಡೆಯುತ್ತಿದೆ. ಪಾಲಿಮರ್ ವಾಹಕ ವಸ್ತುಗಳನ್ನು ಬಳಸಿ ಮಡಿಚಬಲ್ಲ ಡಿಸ್ಪ್ಲೇಗಳನ್ನು ಮಾಡಲಾಗಿದೆಯಾದೆ. ಆದರೆ ಇಂತಹ ಡಿಸ್ಪ್ಲೇಗಳೂ ದಪ್ಪ ರಟ್ಟಿನಂತೆ ಇರುತ್ತವೆ. ಅಲ್ಲದೆ ಅವು ಅಗ್ಗವೂ ಅಲ್ಲ. ಹೀಗಿರುವಾಗ ವೈಟ್ಸೈಡ್ರವರ ತಂಡ ಸಾಧಾರಣ ಮುದ್ರಣ ಕಾಗದ, ಶಾಯಿ ಹಾಗೂ ಸರಳ ತಂತ್ರಗಳನ್ನು ಬಳಸಿ ಮುದ್ರಣ ಕಾಗದವನ್ನೇ ಡಿಸ್ಪ್ಲೇಯನ್ನಾಗಿ ಪರಿವರ್ತಿಸಿರುವುದು ಸಾಧನೆಯೇ ಸರಿ.  ಈಗ ಕಾಫಿ ಕಪ್ನ ಮೈ ಕೂಡ ತೆರೆಯಾಗಬಹುದು.

ಮಡಿಚಬಹುದಾದ, ಅಗ್ಗದ ಡಿಸ್ಪ್ಲೇ ಕಾಗದ ತಯಾರಿಸಲು ವೈಟ್ಸೈಡ್ ತಂಡ ಬಳಸಿರುವ ಉಪಾಯವೂ ಸರಳ. ಸಾಮಾನ್ಯವಾಗಿ ನಾವು ಬಳಸುವ ಕಾಗದದ ಒಂದು ಬದಿಯಲ್ಲಿ ಇಲೆಕ್ಟ್ರಾನಿಕ್ ಸರ್ಕೀಟು ರಚಿಸಿ, ಮತ್ತೊಂದು ಬದಿಯಲ್ಲಿ ಬೇಕಾದ ಚಿತ್ರ-ಪಾಠಗಳನ್ನು ಮುದ್ರಿಸುತ್ತಾರೆ. ಮುದ್ರಿಸಿದ ಚಿತ್ರ-ಪಾಠವನ್ನು ಮತ್ತೊಂದು ವಿಶೇಷ ಲೇಪನದಿಂದ ಮರೆಮಾಡುತ್ತಾರೆ. ಇಲೆಕ್ಟ್ರಾನಿಕ್ ಸರ್ಕೀಟಿನಲ್ಲಿ ವಿದ್ಯುತ್ ಹರಿದಾಗ ಕಾಗದ ಬಿಸಿಯಾಗುತ್ತದೆ. ಉಷ್ಣತೆ ಹೆಚ್ಚಿದಾಗ ವಿಶೇಷ ಲೇಪ ಪಾರದರ್ಶಕವಾಗುತ್ತದೆ. ಅದರ ಅಡಿಯಲ್ಲಿರುವ ಚಿತ್ರ-ಪಾಠ ಸ್ಪಷ್ಟವಾಗಿ ಗೋಚರಿಸುತ್ತದೆ. ವಿದ್ಯುತ್ ಹರಿಯುವುದು ನಿಂತ ಕೂಡಲೆ ವಿಶೇಷ ಲೇಪ ಅಪಾರದರ್ಶಕವಾಗಿ ಅದರಡಿಯಲ್ಲಿರುವ ಚಿತ್ರ-ಪಾಠವನ್ನು ಮರಳಿ ಮರೆಮಾಚುತ್ತದೆ. ಈ ತಂತ್ರದಲ್ಲಿಯೂ ಬ್ಯಾಟರಿ ಬಳಕೆ ಅವಶ್ಯಕ. ಆದರೆ ಕೈಗಡಿಯಾರದಲ್ಲಿ ಬಳಸುವಂತಹ ಪುಟ್ಟ ಬ್ಯಾಟರಿಯನ್ನು ಬಳಸಿದರೆ ನೂರಾರು ಬಾರಿ ಡಿಸ್ಪ್ಲೇಯನ್ನು ಹಚ್ಚಿ, ಆರಿಸಿ ಮಾಡಬಹುದು.

ಇಷ್ಟು ಸುಲಭವೇ ಎಂದಿರಾ? ನಿಜ. ಈ ಮಾಯಾಕಾಗದದ ಹಿಂದಿನ ಐಡಿಯಾ ಬಹಳ ಸರಳವೇ ಸರಿ. ಆದರೆ ಅದನ್ನು ನನಸಾಗಿಸುವ ಹಾದಿ ಮಾತ್ರ ಸುಲಭವಲ್ಲ. ಮೊದಲಿಗೆ ಕಾಗದದ ಮೇಲೆ ಅಗ್ಗದ ಸರ್ಕೀಟು ರಚಿಸಬೇಕು. ಇದಕ್ಕಾಗಿ ವೈಟ್ಸೈಡ್ ತಂಡದವರು, ಪೋಸ್ಟರ್ ಬರೆಯುವವರು ಬಳಸುವ ಸ್ಟೆನ್ಸಿಲ್ಗಳಂತೆ, ಸೂಕ್ಷ್ಮ ಸರ್ಕೀಟುಗಳನ್ನು ಕೊರೆದ ಪಾಲಿಮರ್ ಹಾಳೆಗಳನ್ನು ಬಳಸಿದ್ದಾರೆ. ಈ ಹಾಳೆಗಳಲ್ಲಿ ಕೊರೆದ ರಂಧ್ರಗಳೊಳಗೆ ನಿಕಲ್ ಅಥವಾ ಸೀಸದ ಆವಿಯನ್ನು ನೀಕರಿಸತ್ತಾರೆ. ಅನಂತರ ಪಾಲಿಮರ್ ಹಾಳೆಯನ್ನು ತೆಗೆದುಬಿಟ್ಟರೆ, ನಿಕಲ್ ಅಥವಾ ಸೀಸದ ಸೂಕ್ಷ್ಮತಂತುಗಳ ಸರ್ಕೀಟು ಚಿತ್ರಣ ಅಲ್ಲಿ ಕಾಣುತ್ತದೆ. ಹೀಗೆ 2 ನಾನೋಮೀಟರು ( ಒಂದು ಮಿಲಿಮೀಟರಿನ ಐದು ಲಕ್ಷದಲ್ಲೊಂದಂಶ) ತೆಳುವಾದ ತಂತಿಗಳ ಸರ್ಕೀಟು ರಚಿಸಿದರು. ವಿದ್ಯುತ್ ಹರಿದಾಗ ವಿದ್ಯುತ್ ಇಸ್ತ್ರಿಪೆಟ್ಟಿಗೆ ಬಿಸಿಯಾಗುವಂತೆ ಈ ತಂತಿಗಳೂ ಬಿಸಿಯಾಗುತ್ತವೆ. ತಂತಿಗಳ ಹಿಂದಿರುವ ಕಾಗದವೂ ಬಿಸಿಯಾಗುತ್ತದೆ.

ಕಾಗದದ ಮತ್ತೊಂದು ಬದಿಯಲ್ಲಿ ಲೇಸರ್ ಪ್ರಿಂಟರ್ ಬಳಸಿ ಚಿತ್ರಗಳನ್ನು ಮುದ್ರಿಸಲಾಯಿತು. ಈ ಚಿತ್ರಗಳ ಮೇಲೆ ಲ್ಯೂಕೋ ವರ್ಣಕಗಳೆನ್ನುವ ವಿಶೇಷ ಬಣ್ಣಗಳನ್ನು ಲೇಪಿಸಲಾಯಿತು. ಸಾಮಾನ್ಯವಾಗಿ ಲ್ಯೂಕೊ ವರ್ಣಕಗಳು ನಿರ್ದಿಷ್ಟ ಆಮ್ಲ ಗುಣವಿರುವ ಮತ್ತೊಂದು ರಾಸಾಯನಿಕದ ಜೊತೆಗೂಡಿದಾಗಷ್ಟೆ ಬಣ್ಣ ತೋರುತ್ತವೆ.  ಆಮ್ಲೀಯತೆಯಲ್ಲಿ ತುಸು ಬದಲಾವಣೆಯಾದರೂ ಬಣ್ಣ ಕಳೆದುಕೊಳ್ಳುತ್ತವೆ. ಲ್ಯೂಕೊ ವರ್ಣಕಗಳ ಈ ಗುಣವನ್ನು ವೈಟ್ಸೈಡ್ರವರ ತಂಡ ಬಹಳ ಜಾಣತನದಿಂದ ಬಳಸಿಕೊಂಡಿದೆ. ಲ್ಯೂಕೊ ವರ್ಣಕಗಳ ಜೊತೆಗೆ ವರ್ತಿಸುವ ರಾಸಾಯನಿಕವನ್ನು ಸೂಕ್ಷ್ಮಗುಂಡುಗಳೊಳಗೆ ಹುದುಗಿಸಿ ಕಾಗದದ ಮೇಲೆ ಬಳಿಯಲಾಯಿತು. ಬಿಸಿಯಾದಾಗ ಈ ಗುಂಡುಗಳು ಕರಗಿ, ರಾಸಾಯನಿಕ ಬಿಡುಗಡೆಯಾಗುತ್ತದೆ. ಆಮ್ಲೀಯತೆ ಬದಲಾಗುತ್ತದೆ. ಲ್ಯೂಕೊ ವರ್ಣಕದ ಬಣ್ಣವೂ ಬದಲಾಗುತ್ತದೆ. ವೈಟ್ಸೈಡ್ರವರು ಬಳಸಿರುವ ಲ್ಯೂಕೊ ವರ್ಣಕಗಳು ಬಣ್ಣ ಬದಲಾವಣೆಯಾಗುವುದರ ಜೊತೆಗೆ ತೆಳುವೂ ಆಗುತ್ತದೆಯಾದ್ದರಿಂದ, ಇದರ ಹಿಂದಿರುವ ಚಿತ್ರ-ಪಾಠಗಳು ಗೋಚರಿಸುವುವು. ಹೀಗೆ ಸ್ವಿಚ್ ಒತ್ತಿದ ಒಡನೆ, ಅದುವರೆವಿಗೂ ಮರೆಯಾಗಿದ್ದ ಚಿತ್ರ-ಪಾಠ ಮ್ಯಾಜಿಕ್ಕೋ ಎಂಬಂತೆ ಕಾಣತೊಡಗುತ್ತವೆ.

ಸ್ವಿಚ್ನ ಅಗತ್ಯವಿಲ್ಲದೆಯೇ ತನ್ನಂತಾನೇ ಸರ್ಕೀಟು ಬಿಸಿಯಾಗುವ ಉಪಾಯ ಕಂಡುಕೊಂಡರೆ, ಕಾಗದದ ಮೇಲೆ ಮುದ್ರಿಸಿದ ಚಿತ್ರ-ಪಾಠಗಳು ಕಾಣುವಂತೆ ಮಾಡಬಹುದು. ಉಷ್ಣತೆ, ರಾಸಾಯನಿಕ ಕ್ರಿಯೆಗಳು, ಸೂಕ್ಷ್ಮಜೀವಿಗಳ ಸುರಿಕೆ ಇತ್ಯಾದಿಗಳನ್ನು ಪತ್ತೆ ಹಚ್ಚುವ ಸಂವೇದಕಗಳಿವೆ. ಇವುಗಳ ಜೊತೆಗೆ ಈ ಮಾಯಾಕಾಗದವನ್ನೂ ತಳುಕಿಸಿದಲ್ಲಿ ಬಿಸಿ ಹೆಚ್ಚಾದಾಗ ಅಥವಾ ನಿಗದಿ ಪಡಿಸಿದ್ದಕ್ಕಿಂತಲೂ ಹೆಚ್ಚು ಸೂಕ್ಷ್ಮಾಣುಗಳು ಇದ್ದಾಗ ಕಾಗದದ ಮೇಲೆ ಮಾಯಾ ಅಕ್ಷರಗಳು ಮೂಡುವಂತೆ ಮಾಡಬಹುದು. ಹಾಗಾದಾಗ ವಿವಿಧ ರೋಗಗಳ ಸೋಂಕು, ಹಳಸಿದ ಆಹಾರ ಪದಾರ್ಥಗಳ ಸ್ಥಿತಿಯನ್ನು ವಿವರಿಸುವ ಪ್ಯಾಕೇಜುಗಳು ದೊರೆತಾವು. ಬಾಯಿ ಸುಡುವಷ್ಟು ಬಿಸಿಯಾದ ಕಾಫಿ ಇದ್ದಲ್ಲಿ, ಕಬಿಸಿ ಕಾಫಿ ಎಚ್ಚರಕಿ ಎಂದೂ, ಅದೇ ಕಾಫಿ ತಣ್ಣಗಾದಲ್ಲಿ ಕಕಾಫಿ ತಣ್ಣಗಿದೆ ಕೂಡಲೆ ಸೇವಿಸಿಕಿ ಎಂದೂ ಎಚ್ಚರಿಸುವ ಕಾಫಿ ಕಪ್ಗಳ ತಯಾರಿಕೆಯೂ ಸಾಧ್ಯ.

 

Adam C Siegel etal., Thin, lightweight, foldable thermochromic displays on paper, Lab on a Chip, (DOI:10.1039/b905832) first published 23.7.2009; 2009