ನಾನು ಬಂದು ಎಂಟು ದಿನಗಳಾದರೂ, ನಾನು ಎಲ್ಲಿ ಯಾವಾಗ ಉಪನ್ಯಾಸಗಳನ್ನು ಕೊಡಬೇಕೆಂಬ ಬಗ್ಗೆ ನಿಗದಿಯಾಗಲಿಲ್ಲ. ನನ್ನ ಭಾಷಾ ಸಹಾಯಕನನ್ನು ಕೇಳಿದರೆ, ‘ಇನ್‌ಸ್ಟಿಟ್ಯೂಟ್‌ನವರು, ಈ ಬಗ್ಗೆ ತಕ್ಕ ವ್ಯವಸ್ಥೆ ಮಾಡಿ ತಿಳಿಸುತ್ತಾರೆ. ಅಲ್ಲಿನ ತನಕ ಉಳಿದ ಕಾರ್ಯಕ್ರಮಗಳಿವೆಯಲ್ಲ ; ನೀವು ಈ ಮಹಾನಗರದ ಐತಿಹಾಸಿಕ-ಸಾಂಸ್ಕೃತಿಕ ಸ್ಥಳಗಳನ್ನು ಸಂದರ್ಶಿಸುವುದು ಕೂಡ ನಿಮ್ಮ ಕಾರ್ಯಕ್ರಮದ ಒಂದು ಭಾಗ ; ಬಹು ಮುಖ್ಯವಾದ ಭಾಗ ತಾನೆ’ – ಎಂದ.

ಈ ದಿನ, ಮಾಸ್ಕೋದಲ್ಲಿರುವಷ್ಟು ದಿನಗಳಲ್ಲಿ ನಾನು ನೋಡಬೇಕೆಂದುಕೊಂಡ ಕೆಲವು ಸಾಂಸ್ಕೃತಿಕ ಕಾರ‍್ಯಕ್ರಮಗಳಿಗೆ ಮುಂಗಡ ಟಿಕೆಟ್ಟನ್ನು ತೆಗೆಯಿಸಿದ್ದಾಯಿತು. ಇದನ್ನು ಹೋಟೆಲಿನ ‘ಸರ್ವಿಸ್ ಬ್ಯೂರೋ’ದವರು ಮಾಡಿಕೊಡುತ್ತಾರೆ. ನನ್ನ ನೆಪದಲ್ಲಿ ವೊಲೋಜನಿಗೂ ಟಿಕೆಟ್ ಸಿಗುವಂತಾಯಿತು. ಯಾಕೆಂದರೆ ಇಲ್ಲಿನ ಸುಪ್ರಸಿದ್ಧವಾದ ನಾಟಕ ಶಾಲೆಗೆ, ಬ್ಯಾಲೆಗಳಿಗೆ, ಇಲ್ಲಿನ ಜನಕ್ಕೆ ಟಿಕೇಟು ಅಷ್ಟು ಸುಲಭವಾಗಿ ಸಿಕ್ಕುವುದಿಲ್ಲ; ತಿಂಗಳುಗಟ್ಟಲೆ ಕಾಯಬೇಕು. ಆದರೆ ವಿದೇಶೀಯರಾದ ನಮ್ಮಂಥವರಿಗೆ ಈ ಕಾರ‍್ಯಕ್ರಮಗಳಿಗೆ ಆದ್ಯತೆ. ನಾವು ಉಳಿದುಕೊಂಡ ಹೋಟೆಲಿನವರೆ, ಆಯಾ ಸಂಸ್ಥೆಗಳಿಂದ ಟಿಕೆಟ್ ತರಿಸಿ ಕೊಡುತ್ತಾರೆ. ಇರುವ ಕೆಲವೇ ದಿನಗಳಲ್ಲಿ ವಿದೇಶದಿಂದ ಬಂದ ಈ ಅತಿಥಿಗಳು, ತಮ್ಮ ನಾಡಿನ ಕಲಾಪ್ರದರ್ಶನಗಳನ್ನು ನೋಡಲಿ, ಉತ್ತಮವಾದದ್ದರ ನೆನಪನ್ನು ಕೊಂಡೊಯ್ಯಲಿ ಎಂಬುದು ಈ ವ್ಯವಸ್ಥೆಯ ಉದ್ದೇಶವೆಂದು ತೋರುತ್ತದೆ.

ಈ ದಿನ ಲೆನಿನ್ ಮ್ಯೂಸಿಯಂ ಹಾಗೂ ಕ್ರಾಂತಿ ಮ್ಯೂಸಿಯಂ ನೋಡುವ ಕಾರ‍್ಯಕ್ರಮ. ಲೆನಿನ್‌ನ ಜೀವನ ಹಾಗೂ ಸಾಧನೆಗಳನ್ನು ಪರಿಚಯ ಮಾಡಿ ಕೊಡುವ ಲೆನಿನ್ ಮ್ಯೂಸಿಯಂ ೧೯೩೬ರಲ್ಲಿ ಆರಂಭವಾಯಿತು. ಮೂವತ್ತು ದೊಡ್ಡ ಕೋಣೆಗಳಲ್ಲಿ, ಲೆನಿನ್ ಬದುಕಿಗೆ ಸಂಬಂಧಿಸಿದ್ದೆಲ್ಲವನ್ನೂ ಸಂಗ್ರಹಿಸಿಡಲಾಗಿದೆ. ನೂರಾರು ಭಾವಚಿತ್ರಗಳು; ಅವನ ಸಂಸಾರದ, ಅವನ ಕ್ರಾಂತಿದಳಗಳ ಮುಖ್ಯಸ್ಥರ, ಅವನ ಸ್ನೇಹಿತರ ಚಿತ್ರಗಳು; ಅಂದಿನ ವೃತ್ತಪತ್ರಿಕೆಯ ತುಣುಕುಗಳು; ಲೆನಿನ್ ಬರೆದ ಪತ್ರಗಳು; ಅವನ ಹಸ್ತಾಕ್ಷರದ ಹಾಳೆಗಳು; ಲೆನಿನ್‌ನ ಕೃತಿಗಳು; ಅವನು ಬಳಸಿದ ಪುಸ್ತಕಗಳು; ಅವನು ಕ್ರಾಂತಿಕಾಲದ ಸಂಘಟನೆಗಾಗಿ ಸಂಚರಿಸಿದ ಸ್ಥಳಗಳ ಭೂಪಟಗಳು; ಈ ದಿನ ಜಗತ್ತಿನ ಯಾವ ಯಾವ ಭಾಗದಲ್ಲಿ ಲೆನಿನ್‌ನ ಪ್ರಭಾವವಾಗಿದೆ ಎಂಬ ವಿವರಗಳು; ಸೋವಿಯೆತ್ ಚಿತ್ರಕಾರರು ಕ್ರಾಂತಿಯ ಇತಿಹಾಸದ ಅನೇಕ ಘಟನೆಗಳನ್ನು ಬಣ್ಣದಲ್ಲಿ ಸೆರೆಹಿಡಿದ ದೊಡ್ಡ ದೊಡ್ಡ ಚಿತ್ರಪಟಗಳು.

ಇದನ್ನು ನೋಡಿದ ನಂತರ ‘ಕ್ರಾಂತಿ ಮ್ಯೂಸಿಯಂ’ಗೆ ಹೋದೆವು. ಇದು ಸಂಪೂರ್ಣವಾಗಿ ಲೆನಿನ್‌ನ ನಾಯಕತ್ವದಲ್ಲಿ ನಡೆದ ರಷ್ಯಾದ ಮಹಾವಿಪ್ಲವದ ಇತಿಹಾಸವನ್ನು ಪರಿಚಯ ಮಾಡಿಕೊಡುತ್ತದೆ. ಅನೇಕ ಕೋಣೆಗಳ ತುಂಬ ಹರಹಿರುವ ಸಚಿತ್ರವಾದ ಈ ಮ್ಯೂಸಿಯಂ ಅನ್ನು ಒಮ್ಮೆ ನೋಡಿದರೆ ಸಾಕು, ಇಡೀ ರಷ್ಯದ ರಾಜ್ಯಕ್ರಾಂತಿಯ ಇತಿಹಾಸ ಮನದಟ್ಟಾಗುತ್ತದೆ. ಕ್ರಾಂತಿ ಕಾಲದಲ್ಲಿ, ಯಾವ ಯಾವ ರೀತಿಯಲ್ಲಿ ಸಾಮಾನ್ಯ ಜನ ಹೋರಾಡಿದರು, ಅವರ ಸಾಹಸದ ಕತೆಗಳನ್ನು ಹೇಳುವ ಅನೇಕ ವಾಸ್ತವವಾದ ಭಾವಚಿತ್ರಗಳೂ, ಚಿತ್ರಶಿಲ್ಪಿಗಳಿಂದ ರಚಿತವಾದ ಪಟಗಳೂ ಇವೆ. ಅವರು ಬಳಸಿದ ಆಯುಧಗಳು; ಅವರು  ಹೊರಡಿಸಿದ ಕರಪತ್ರಗಳು; ವೇಷಾಂತರದಲ್ಲಿ ಗುಪ್ತ ಚಟುವಟಿಕೆಗಳಲ್ಲಿದ್ದಾಗ ಅವರು ತೊಟ್ಟ ಉಡುಗೆಗಳು- ಎಲ್ಲವನ್ನೂ ಕಾಣಬಹುದು. ಒಂದೆಡೆ ಲೆನಿನ್‌ಗ್ರಾಡಿನಲ್ಲಿ ಕ್ರಾಂತಿ ಕಾಲದ ಒಂದು ದಿನದ ಘರ್ಷಣೆಯನ್ನು ಸಾಕ್ಷಾತ್ತಾಗಿ ಪರಿಚಯ ಮಾಡಿಕೊಡುವ ಒಂದು ಪ್ರದರ್ಶನವೂ ಅಲ್ಲಿದೆ.

ಈ ಎರಡು ಮ್ಯೂಸಿಯಂಗಳನ್ನೂ ನೋಡಿದಾಗ, ಈ ಐತಿಹಾಸಿಕ ದಾಖಲೆಗಳ ಬಗ್ಗೆ ರಷ್ಯದ ಜನ ತಾಳುವ ಕಾಳಜಿಯನ್ನು ನೋಡಿ ಮೆಚ್ಚುಗೆಯಾಯಿತು. ಅಲ್ಲಲ್ಲಿ ವಿದ್ಯಾರ್ಥಿಗಳು, ವಿದ್ವಾಂಸರು ಕೂತು ಹಳೆಯ ದಾಖಲೆಗಳಿಂದ ಟಿಪ್ಪಣಿ ಮಾಡಿಕೊಳ್ಳುತ್ತಾರೆ. ಗುಂಪು-ಗುಂಪಾಗಿ ಜನಗಳು, ವಿದ್ಯಾರ್ಥಿಗಳ ತಂಡಗಳೂ ನಿಂತು, ಒಂದೊಂದು ಚಿತ್ರ ಹಾಗೂ ವಸ್ತುಗಳ ಎದುರಿಗೆ ಅಧಿಕೃತ ನಿರ್ದೇಶಕರ ವಿವರಣೆಯನ್ನು ಕೇಳುತ್ತಾರೆ. ನಿರ್ದೇಶಕರೆಲ್ಲ ಬಹುಮಟ್ಟಿಗೆ ಹೆಂಗಸರೆ. ಕೈಯಲ್ಲಿ ಕರಿಯ ಬೆತ್ತವೊಂದನ್ನು ಹಿಡಿದು, ಎಲ್ಲಾ ಮ್ಯೂಸಿಯಂಗಳಲ್ಲಿ, ಕಲಾಶಾಲೆಗಳಲ್ಲಿ, ಐತಿಹಾಸಿಕ ಸ್ಥಳಗಳಲ್ಲಿ, ಪಟಪಟನೆ ಅಂಕಿ-ಅಂಶಗಳೊಂದಿಗೆ ವಿವರಣೆಗಳನ್ನು ನೀಡುತ್ತಾರೆ. ಈ ನಿರ್ದೇಶಕರಿಗೆ ಸರ್ಕಾರ  ಸರಿಯಾದ ತರಬೇತಿ ನೀಡಿ, ಸಂಬಳದ ಮೇಲೆ ನಿಯಮಿಸಿದ್ದಾರೆ. ಇವರಿಗೆ ತಾವು ಯಾವುದನ್ನು ವಿವರಿಸುತ್ತಿದ್ದಾರೊ ಅದರ ಸಮಗ್ರವಾದ ಅಭ್ಯಾಸದ ಹಿನ್ನೆಲೆ ಇರುತ್ತದೆ.  ಈ ಜನಕ್ಕೆ ಈ ನಿರ್ದೇಶಕರ ನೆರವಿನಿಂದ, ತಮ್ಮ ನಾಡಿನ ಇತಿಹಾಸದ, ಸಂಸ್ಕೃತಿಯ ಪರಿಚಯ ಮಾಡಿಕೊಳ್ಳಬೇಕೆಂಬ ಆಸೆ ಉತ್ಕಟವಾಗಿದೆ. ರಾಷ್ಟ್ರಜೀವನದಲ್ಲಿ ಕ್ರಾಂತಿಯಾಗಿದೆ, ಹೊಸ ಜೀವನ ನಮಗೆ ಮುಖ್ಯ, ಹಿಂದಿನ ಕಂತೆಪುರಾಣಗಳಿಂದ ನಮಗೇನು ಪ್ರಯೋಜನ ಎಂಬ ತಾಟಸ್ಥ್ಯ ಇಲ್ಲಿಲ್ಲ. ಕ್ರಾಂತಿ ಎಂದರೆ ಇದ್ದುದರ ನಾಶವಲ್ಲ; ಹಳೆಯದರಲ್ಲಿ ಏನೇನು ಒಳ್ಳೆಯದುಂಟೋ ಅದನ್ನುಳಿಸಿಕೊಂಡು, ಹೊಸರೀತಿಯ ಬದುಕನ್ನು ಕಟ್ಟಿಕೊಳ್ಳುವುದು. ಈ ಒಂದು ಹೊಸ ವ್ಯವಸ್ಥೆಯನ್ನು ಕಟ್ಟಬೇಕಾದರೆ, ತಮ್ಮ ಹಿಂದಿನ ಜನ ಯಾವ ಅಗ್ನಿಕುಂಡಗಳನ್ನು ಹಾಯಬೇಕಾಯಿತು, ಯಾರ ವಿರುದ್ಧ ಹೋರಾಡಬೇಕಾಯಿತು, ಅದರ ಸ್ವರೂಪವೆಂಥದು ಎಂಬ ಐತಿಹಾಸಿಕ ಪ್ರಜ್ಞೆಯಿಲ್ಲದೆ, ಇಂದಿನ ಜನ ತಮ್ಮ ವರ್ತಮಾನವನ್ನು ಸರಿಯಾದ ರೂಪದಲ್ಲಿ ನಿರ್ಮಿಸಿಕೊಳ್ಳಲಾರರು ಎಂಬ ಉದ್ದೇಶ ಅತ್ಯಂತ ಸ್ಪಷ್ಟವಾಗಿದೆ.

ಇದನ್ನೆಲ್ಲ ನೋಡುತ್ತಿದ್ದರೆ ನಮ್ಮ ದೇಶದ ಮನೋಧರ‍್ಮವನ್ನು ನೆನೆದು ವ್ಯಥೆಯಾಗುತ್ತಿತ್ತು. ನಮ್ಮ ಇಂದಿನ ತರುಣರಿಗೆ ನಮ್ಮ ನಾಡಿನ ಇತಿಹಾಸ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡಲು ನಾವೇನು ಮಾಡಿದ್ದೇವೆ ? ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸಮಗ್ರ ಕರ್ನಾಟಕದ ಕಲೆ – ಸಂಸ್ಕೃತಿಗಳನ್ನು ಜನಕ್ಕೆ  ಪರಿಚಯ ಮಾಡಿಕೊಡುವ ಮ್ಯೂಸಿಯಂ ಇಲ್ಲವಲ್ಲ ! ದೆಹಲಿಯಂಥ ರಾಜಧಾನಿಯಲ್ಲಿ  ಇಡೀ ಭರತ ಖಂಡದ ವಿವಿಧ ಪ್ರಾದೇಶಿಕತೆಗಳನ್ನು ಪ್ರತಿನಿಧಿಸುವ ಕಲೆ ಹಾಗೂ ಸಂಸ್ಕೃತಿಗಳ ಪರಿಚಯ  ಮಾಡಿಕೊಡುವ  ಬೃಹತ್ತಾದ ಒಂದು ಪ್ರದರ್ಶನಾಲಯವನ್ನು ಕಟ್ಟುವುದು ಯಾವಾಗ ? ಮಹಾತ್ಮಾಗಾಂಧಿಯವರ ನಾಯಕತ್ವದಲ್ಲಿ ಸುಮಾರು ಅರ್ಧ ಶತಮಾನ  ನಡೆದ ಸ್ವಾತಂತ್ರ್ಯ ಚಳುವಳಿಯನ್ನು ಕುರಿತ ಒಂದು ಮ್ಯೂಸಿಯಂ ಅನ್ನು ಇನ್ನೂ ನಾವೇಕೆ ಮಾಡಿಲ್ಲ ? ನಮ್ಮ ಇಂದಿನ ತರುಣರಿಗೆ, ಭಾರತೀಯ ಸ್ವಾತಂತ್ರ್ಯದ ಸಂಗ್ರಾಮ ಬರೀ ಒಂದು ಕತೆ ಮಾತ್ರ ; ಮುಖ್ಯವಾಗಿ ಈ ತರುಣರಿಗೆ, ಈ ಸ್ವಾತಂತ್ರ್ಯ  ಸಂಪಾದನೆಯ ಹೋರಾಟದ ಪುಟಗಳ ಪರಿಚಯ ಆಗುವುದು ಯಾವಾಗ ? ಅದಕ್ಕೆ ನಾವೇನು ವ್ಯವಸ್ಥೆ ಮಾಡಿದ್ದೇವೆ ? ಇನ್ನೂ ಬರೀ ಮಾತು, ಮಾತು, ಮಾತು. ಮಾತುಗಳ ಕೊಟ್ಟಣ ಕುಟ್ಟುತ್ತಿದ್ದೇವೆ. ಹೋಗಲಿ, ಇರುವಂಥ ಐತಿಹಾಸಿಕ ಸ್ಥಳಗಳಲ್ಲಾದರೂ ಸರಿಯಾದ ನಿರ್ದೇಶಕರಿದ್ದಾರೆಯೇ ? ಏನೋ ಕೂಲಿಗೆ  ನೇಮಿಸಿದಂಥ ‘ಗೈಡ್’ಗಳಿದ್ದಾರೆ. ಅವರಿಗೆ ಆಯಾ ಸ್ಥಳದ ರಾಜಕೀಯ ಇತಿಹಾಸ ಗೊತ್ತಿಲ್ಲ, ಸಾಂಸ್ಕೃತಿಕ ಮಹತ್ವ ಗೊತ್ತಿಲ್ಲ ; ಆ ಶಿಲ್ಪ ಕಲೆ ಯಾವ ಮಾದರಿಯದೆಂದು ಗೊತ್ತಿಲ್ಲ, ಬಂದ ಪ್ರವಾಸಿಗರಿಗೆ ದಂತಕತೆಗಳನ್ನೋ, ಅಜ್ಜಿಪುರಾಣಗಳನ್ನೋ, ಶಿಲ್ಪದಲ್ಲಿರುವ ಕ್ಷುಲ್ಲಕ ಚಮತ್ಕಾರಗಳನ್ನೋ ಹೇಳುತ್ತಾರೆ. ಇದರಿಂದ ಜನಕ್ಕೆ ಏನು ಶಿಕ್ಷಣ ದೊರೆತೀತು ? ಉತ್ತಮವಾದ ನಿರ್ದೇಶಕರಿಗೆ ಸರಿಯಾದ ಶಿಕ್ಷಣ ಕೊಟ್ಟು, ಅವರ ಬದುಕಿಗೆ ನೆಮ್ಮದಿಯ ಸಂಬಳದ ವ್ಯವಸ್ಥೆ ಮಾಡಿ, ನಮ್ಮ ಜನಕ್ಕೆ ಈ ದೇಶದ ಇತಿಹಾಸದ – ಸಂಸ್ಕೃತಿಯ ಪರಿಚಯ ಮಾಡಿಕೊಡುವ ಕಾಲ ಯಾವಾಗ ಬರುತ್ತದೋ ?

ನಮ್ಮ ದೇಶದ ಚಿತ್ರಕಲಾವಿದರೊ ! ಕಣ್ಣಿಗೆ ಕಾಣುವ ನಿಸರ್ಗದ ಹಾಗೂ ಬದುಕಿನ ವರ್ಣಚಿತ್ರಗಳನ್ನು ಬರೆದರೆ ಸಾಲದು. ಭಾರತೀಯ ಸ್ವಾತಂತ್ರ್ಯದ ಇತಿಹಾಸ ಅವರಿಗೇನೂ ಸ್ಫೂರ್ತಿಕೊಟ್ಟಿಲ್ಲವೆ ? ಸ್ವಾತಂತ್ರ್ಯ ಸಂಗ್ರಾಮದ ಯಾವುದೇ ಒಂದು ಪುಟವನ್ನು ಯಾಕೆ ಯಾರೂ ಚಿತ್ರ್ರಿಸಿದಂತೆ ಕಾಣುವುದಿಲ್ಲವಲ್ಲ ? ಜಾನಪದ ಕತೆಗಳಿಂದ, ಕನ್ನಡ ಸಾಹಿತ್ಯದಿಂದ ಇವರೇನು ಸ್ಫೂರ್ತಿ ಪಡೆದಿದ್ದಾರೆ ? ಈ ದೇಶದ ಕವಿ ಕೃತಿಗಳ ಅಧ್ಯಯನದಿಂದ, ಆಯಾ ಕಾವ್ಯದ  ಯಾವ ಒಂದು ಸಂದರ್ಭವನ್ನಾದರೂ ಬಣ್ಣದಲ್ಲಿ ಮೂಡಿಸುವ ಪ್ರಯತ್ನ ಮಾಡಿದ್ದಾರೆಯೆ ನಮ್ಮ ಚಿತ್ರಕಾರರು ? ಯಾರಿಗೂ ಸಾಹಿತ್ಯದ ಪರಿಚಯವಿಲ್ಲ ; ಇತಿಹಾಸದ ಪರಿಚಯವಿಲ್ಲ; ತಮ್ಮದೇ ಆದ ಸಂಸ್ಕೃತಿಯ ಗಂಧವಿಲ್ಲ. ಹೀಗೆ ಬದುಕುತ್ತಿದ್ದೇವೆ ನಾವು !

ಈ ತಳಮಳವನ್ನು ತುಂಬಿಕೊಂಡು ಮ್ಯೂಸಿಯಂನಿಂದ ಹೊರಬಿದ್ದೆ. ಇಕ್ಕೆಲದಲ್ಲೂ ಎತ್ತರವಾದ, ಸುಂದರವಾದ ಕಟ್ಟಡಗಳನ್ನು ನೋಡುತ್ತ ಬರುವಾಗ ವೊಲೋಜ ಒಂದು ಕ್ಷಣ ನನ್ನನ್ನು ನಿಲ್ಲಿಸಿ ಪಕ್ಕದಲ್ಲಿದ್ದ ಟೆಲಿಫೋನ್ ಬೂತಿನೊಳಗೆ  ಹೋದ. ಪ್ರತಿಯೊಂದು ಬೀದಿ ಬೀದಿಯ ಪಕ್ಕದಲ್ಲಿ ಸಣ್ಣದೊಂದು ಗಾಜಿನ ಕೋಣೆಯಲ್ಲಿ ಟೆಲಿಫೋನ್ ಸೌಲಭ್ಯಗಳಿವೆ. ಎರಡು ಕೊಪೆಕ್ ನಾಣ್ಯವನ್ನು ತೂರಿಸಿ ಎಲ್ಲಿಗೆ ಬೇಕಾದರೂ ಫೋನ್ ಮಾಡಬಹುದು. ವೊಲೋಜ ದೂರವಾಣಿಯ ಮೂಲಕ ಸಂಭಾಷಣೆ ನಡೆಸುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಸಾಕಷ್ಟು ಸಿಗರೇಟು ತುಂಡುಗಳೂ, ಕಾಗದದ ಚೂರುಗಳೂ ಬಿದ್ದಿದ್ದನ್ನು ಕಂಡೆ. ಅದರಿಂದ ನಾನೇನೂ ಸಂತೋಷ ಪಡಬೇಕಾದ್ದಿರಲಿಲ್ಲ ; ಮನುಷ್ಯ ಸ್ವಭಾವದ ಒಂದು ಅಂಶವನ್ನು , ಅವು ನನಗೆ ತೋರಿಸಿದುವು. ಆದೆ ಈ ಜನ ತಮ್ಮ ಪರಿಸರವನ್ನು ಸಾಧ್ಯವಾದಷ್ಟು ಚೊಕ್ಕಟವಾಗಿಡುತ್ತಾರೆಂಬುದೇನೋ ನಾನು ಕಂಡ ವಿಚಾರ. ಎರಡೇ ನಿಮಿಷಗಳಲ್ಲಿ ವೊಲೋಜ ಬಂದ. ‘ಇನ್‌ಸ್ಟಿಟ್ಯೂಟ್‌ಗೆ ಫೋನ್ ಮಾಡಿದೆ. ನಾಳೆ ಸಂಜೆ ಐದು ಗಂಟೆಗೆ ನಿಮ್ಮ ಮೊದಲ ಉಪನ್ಯಾಸ ಏರ್ಪಾಡಾಗಿದೆ’ ಎಂದ. ದೊಡ್ಡ ರಸ್ತೆಯನ್ನು ದಾಟುವ ನೆಲದೊಳಗಿನ ಸುರಂಗ ಮಾರ್ಗದ ಜಗಜಗ ದೀಪದ ಬೆಳಕಿನಲ್ಲಿ, ಕಿಕ್ಕಿರಿದ ಜನಸಂದಣಿಯಲ್ಲಿ ನುಗ್ಗಿದೆವು. ಒಂದೆಡೆ ಪೆಟ್ಟಿಗೆಯಂಥ ಯಂತ್ರವಿತ್ತು ; ಅದರೊಳಗೆ ನಾಣ್ಯವನ್ನು ತೂರಿಸಿದರೆ ಅಂದಿನ ದಿನಪತ್ರಿಕೆ ಹೊರಬರುತ್ತಿತ್ತು. ಜನ, ಪತ್ರಿಕೆಗಳನ್ನು ಒಬ್ಬೊಬ್ಬರಾಗಿ ಅಂಥ ಯಂತ್ರದೊಳಗಿನಿಂದ ತೆಗೆದುಕೊಂಡು ಓದುತ್ತಿದ್ದರು. ಒಂದು ಪ್ರಮುಖ ದಿನಪತ್ರಿಕೆಯ ಬೆಲೆ ಕೇವಲ ಎರಡು ಕೊಪೆಕ್. ಬೀದಿಯ ಬದಿಯಲ್ಲಿ ಅಲ್ಲಲ್ಲಿ ಗಾಜಿನ ಕಪಾಟಿನಂಥ ಹಲಗೆಗಳೊಳಗೆ  ಅಂದಂದಿನ ದಿನಪತ್ರಿಕೆಯನ್ನು ಕಾಣುವಂತೆ ಜೋಡಿಸಿರುತ್ತಾರೆ. ಜನ ಅಲ್ಲಲ್ಲೆ ನಿಂತು ಓದುತ್ತಾರೆ. ನನಗೆ ಎಲ್ಲೂ ಇಂಗ್ಲಿಷ್ ಪತ್ರಿಕೆ ಕಾಣಲಿಲ್ಲ. ನಮ್ಮ ದೇಶದ ಯಾವ ಸುದ್ದಿಯೂ ತಿಳಿಯದಂಥ ಸ್ಥಿತಿಯಲ್ಲಿ ನಾನಿರಬೇಕಾಯಿತು.

ಇಲ್ಲಿನ ಪತ್ರಿಕೆಗಳು ಹೇಗೆ ಎಂದು ಕೇಳಿದರೆ ನನ್ನ ಮಾರ್ಗದರ್ಶಿ ವೊಲೋಜನಿಂದ ಸರಿಯಾದ ವಿಷಯ ತಿಳಿಯುವಂತಿರಲಿಲ್ಲ. ನನ್ನ ಇಲ್ಲಿನ ಭಾರತೀಯ ಸ್ನೇಹಿತರ ಪ್ರಕಾರ, ಇಲ್ಲಿನ ವೃತ್ತ ಪತ್ರಿಕೆಗಳಲ್ಲಿ ಜನಕ್ಕೆ ದೊರೆಯುವ ಸುದ್ದಿ ಎಲ್ಲವೂ ಜರಡಿ ಹಿಡಿದದ್ದು. ಪತ್ರಿಕೆಗಳೆಲ್ಲ ಸರ್ಕಾರದ್ದೆ ಆದ್ದರಿಂದ, ಈ ಜನತೆಯನ್ನು ತಾವು ಮಾತ್ರ ಸುಖವಾಗಿರಿಸಿದ್ದೇವೆ, ಉಳಿದ ದೇಶದ ಜನ ಇಷ್ಟು ಚೆನ್ನಾಗಿರಿಸಿಲ್ಲ ಎಂದು ನಂಬಿಸುವುದೇ ಈ ಪತ್ರಿಕೆಗಳ ಕೆಲಸವಾಗಿದೆ. ಸಾಮಾನ್ಯವಾಗಿ ಇಲ್ಲಿನ ಜನಸಾಮಾನ್ಯಕ್ಕೂ ರಾಜಕೀಯಕ್ಕೂ ದೂರ. ‘ಯೋಗಕ್ಷೇಮಂ ವಹಾಮ್ಯಹಂ’  ಎಂಬ ಸರ್ಕಾರವಿರುವಾಗ, ಈ ಜನ ಬೇರೆ ಯಾವ ವಿಚಾರಗಳಿಂದಲೂ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಚೆನ್ನಾಗಿ ತಿನ್ನುತ್ತಾರೆ; ಚೆನ್ನಾಗಿ ಕೆಲಸ ಮಾಡುತ್ತಾರೆ. ನಾಳಿನ ಯೋಚನೆ ಇಲ್ಲ ; ತನ್ನ ಹಣೆಯ ಬರಹ ಇಷ್ಟೇ ಎಂಬುದು ಗೊತ್ತಿದೆ. ಇದ್ದುದರಲ್ಲಿ ಸುಖವಾಗಿದ್ದರಾಯಿತು – ಇದು ಬಹುಶಃ ಇವರು ಬದುಕುವ ರೀತಿ.

ಹೋಟೆಲಿನ ಕೊಠಡಿಗೆ ಹಿಂದಿರುಗುವ ವೇಳೆಗೆ ಐದೂವರೆಯಾಗಿತ್ತು. ಈ ದಿನ ಏಳು ಗಂಟೆಯ ಸರ್ಕಸ್‌ಗೆ ಟಿಕೆಟ್ಟು ದೊರೆತಿತ್ತು. ಬಟ್ಟೆ ಬದಲಿಸಿ, ಮತ್ತು ಮೇಲಂಗಿ ತೊಟ್ಟು ಲಿಫ್ಟ್‌ನಲ್ಲಿಳಿದು ಕೆಳ ಕೆಫೆಗೆ ಬಂದೆ. ಆದರೆ ಅಲ್ಲೇನೂ ಇರಲಿಲ್ಲ; ಹಾಲಿಲ್ಲದ ಕರೀ ಕಾಫಿಯನ್ನು ಕುಡಿದು, ಆರೂವರೆಯ ವೇಳೆಗೆ, ಮಾಸ್ಕೋ ವಿಶ್ವವಿದ್ಯಾಲಯದ ಹತ್ತಿರದ ಸರ್ಕಸ್ ಕಟ್ಟಡದ ಬಳಿ ಬಂದು, ಮಹಾದೇವಯ್ಯ ಮತ್ತು ಅವರ ಮನೆಯವರಿಗಾಗಿ ಕಾದು ನಿಂತೆ, ಮಾಸ್ಕೋ ಸರ್ಕಸ್, ನಮ್ಮ ಸರ್ಕಸ್‌ಗಳ ಹಾಗೆ ಊರಿಂದೂರಿಗೆ ಕಿತ್ತು ಹೊತ್ತು ಸಾಗಿಸುವ ಡೇರೆಯಲ್ಲ ; ಅದೊಂದು ಸ್ಥಾಯಿಯಾದ ಕಟ್ಟಡ. ಆರೂ ಮುಕ್ಕಾಲಿಗೆ ಬಂದ ಸ್ನೇಹಿತರೊಂದಿಗೆ ಈ ಕಟ್ಟಡವನ್ನು ಪ್ರವೇಶಿಸಿದಾಗಲೇ ಅದರ ಸೊಗಸು, ವಿಸ್ತಾರ ಗೋಚರವಾದದ್ದು. ಮೂರು ಸಾವಿರದ ನಾಲ್ಕುನೂರು ಜನ ಕೂರುವ ವ್ಯವಸ್ಥೆಯನ್ನುಳ್ಳ ಈ ಸರ್ಕಸ್ ಪ್ರತಿದಿನವೂ ಭರ್ತಿಯಾಗಿರುತ್ತದೆ. ಒಳಗೆ ನೂರಾರು ದೀಪಗಳ ಮಂದ ಪ್ರಕಾಶದ ಆವರಣ; ನಟ್ಟ ನಡುವೆ ಕೆಳಗೆ ಮಧ್ಯರಂಗದ ಮೇಲೆ ಕಮಲಪುಷ್ಪದ ವರ್ತುಲದಲ್ಲಿ ಬಿಟ್ಟ ಬಣ್ಣದ ಬೆಳಕು.

ಏಳು ಗಂಟೆಗೆ ದೀಪಗಳಾರಿದವು. ಮಧ್ಯರಂಗದ ಮೇಲೆ ಬೆಳಕು. ಕೇಂದ್ರೀಕೃತವಾಯಿತು. ವಾದ್ಯವೃಂದಗಳು ಮೊರೆಯ ತೊಡಗಿದವು. ಚೆಲುವೆಯೊಬ್ಬಳು ಸರ್ಕಸ್ಸಿನ ವೃತ್ತಾಕಾರವಾದ ಮೇಲು ಗೋಡೆಗಳತ್ತ ಕೈತೋರಿಸುತ್ತ ಹಾಡತೊಡಗಿದಳು. ಅಲ್ಲಿ ನಾಲ್ಕೂ ಕಡೆ ನಾಲ್ಕಾರು ಚಿತ್ರಗಳನ್ನು ಚಲನಚಿತ್ರದ ರೀತಿಯಲ್ಲಿ ಬಿಟ್ಟಿದ್ದರು. ರಷ್ಯಾದೇಶ ಕೃಷಿಯಲ್ಲಿ, ವಿಜ್ಞಾನದಲ್ಲಿ, ಕೈಗಾರಿಕೆಗಳಲ್ಲಿ ಏನೇನು ಸಾಧಿಸಿದೆ ಎಂಬ ಸಾಕ್ಷ್ಯಚಿತ್ರ ಒಂದೆರಡು ನಿಮಿಷ ಪ್ರದರ್ಶಿತವಾಯಿತು. ಅನಂತರ ಸರ್ಕಸ್ಸಿನ ಆರಂಭ.

ಸರ್ಕಸ್ ಎಂದರೆ ಮೈ ನವಿರೇಳಿಸುವ, ಗಾಬರಿಯ ಅಂಚಿನಲ್ಲಿ ಮನಸ್ಸನ್ನು ತೂಗಾಡಿಸುವ ಸಾಹಸಗಳ, ಅನೇಕ ವನ್ಯಪ್ರಾಣಿಗಳನ್ನು ಕಬ್ಬಿಣದ ಪಂಜರದೊಳಗೆ ನಿಲ್ಲಿಸಿ ಚಾಟಿಯಿಂದ ಹೊಡೆಯತ್ತಾ ಅವುಗಳ ಘರ್ಜನೆಯನ್ನು ಕೇಳಿಸುವ ಒಂದು ವ್ಯವಸ್ಥೆ ಎಂಬ ಭಾವನೆಗಳನ್ನು ತಲೆಕೆಳಗು ಮಾಡಿ, ಇದೂ ಒಂದು ಉಲ್ಲಾಸಕರವಾದ ಮನರಂಜನೆಯ ವಿಧಾನವೆಂಬಂತೆ, ಸರ್ಕಸ್ಸಿನ ಕಲ್ಪನೆಯನ್ನೇ ಮಾರ್ಪಡಿಸಿದ್ದಾರೆ. ಸರ್ಕಸ್ ಎಂಬುದು ಬೇರೆಯ ಕಲಾ ಪ್ರಕಾರಗಳಿಂದ ಅನೇಕ ಒಳ್ಳೆಯ ಅಂಶಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳುವ ನೂತನ ಪ್ರಯೋಗವಾಗಿದೆ. ಸಂಗೀತ, ನರ್ತನ, ಹಾಸ್ಯ, ಮೋಡಿ, ಸಾಹಸ ಈ ಎಲ್ಲದರ ಹದವಾದ ಮಿಶ್ರಣವಾಗಿತ್ತು ಸರ್ಕಸ್. ಕುದುರೆಯೊಂದನ್ನು ಸರ್ಕಸ್‌ನಲ್ಲಿ ತರುವಾಗ, ನಮ್ಮಲ್ಲಿ ಹತ್ತು ಹನ್ನೆರಡು ಕುದುರೆಗಳನ್ನು ನೇರವಾಗಿ ಪ್ರವೇಶಗೊಳಿಸಿ ಅವುಗಳ ಸವಾರಿಯಲ್ಲಿ ಅನೇಕ ಸಾಹಸಗಳನ್ನು ತೋರಿಸುತ್ತಾರೆ. ಆದರೆ ಇಲ್ಲಿ ಮೊದಲು ಒಂದು ಉದ್ಯಾನವನ್ನು ತೋರಿಸುತ್ತಾರೆ ; ಅಲ್ಲಿ ಹಲವು ಚೆಲುವೆಯರು ಗಾಯನ ನರ್ತನದಲ್ಲಿ ತೊಡಗಿದ್ದಾರೆ; ಅಲ್ಲಿಗೆ ಥಟ್ಟನೆ ಬಿಳಿಯ ಕುದುರೆಯ ಮೇಲೆ ರಾಜಕುಮಾರನೊಬ್ಬ ಧಾವಿಸುತ್ತಾನೆ. ಸುಂದರಿಯರು ಗಾಬರಿಗೊಂಡು ಅಂಚಿಗೆ ಸರಿದು ನಿಲ್ಲುತ್ತಾರೆ. ರಾಜಕುಮಾರನ ಕುದುರೆ ಸಂಗೀತದ ತಾಳಕ್ಕನುಸಾರವಾಗಿ ನರ್ತಿಸುತ್ತದೆ ; ವಿವಿಧ ಚಮತ್ಕಾರಗಳನ್ನು ಪ್ರದರ್ಶಿಸುತ್ತದೆ ;  ಇನ್ನೊಂದು ದೃಶ್ಯ : ಮೊದಲು ಕತ್ತಲು ಕವಿಯುತ್ತದೆ. ನಕ್ಷತ್ರ ಖಚಿತ ನಭೋಮಂಡಲ ನಿರ್ಮಿತವಾಗುತ್ತದೆ. ಈ ಆಕಾಶದಂಚಿನಿಂದ ನಿಧಾನವಾಗಿ ಒಬ್ಬ ಕಿನ್ನರಕನ್ಯೆ ಕಂದು ಬಣ್ಣದ ಕರಡಿಯೊಂದಿಗೆ, ಮೇಲಿಂದ ಕೆಳಕ್ಕೆ ಜಾರಿ ಬರುತ್ತಾಳೆ. ಹೀಗೆ ಒಂದೊಂದು ಪ್ರವೇಶವನ್ನೂ ನಾಟ್ಯೀಕರಿಸುವ ಈ ಕಲೆಗಾರಿಕೆ ಈ ಜನದ ಅಭಿರುಚಿಯನ್ನೂ ಕಲಾತ್ಮಕತೆಯನ್ನೂ ತೋರುತ್ತದೆ. ಜತೆಗೆ ಸಾಹಸಗಳ ಪ್ರದರ್ಶನಕ್ಕೂ ಅಭಾವವಿರಲಿಲ್ಲ.

ಸರ್ಕಸ್ ಮುಗಿದಾಗ ಹತ್ತು ಗಂಟೆ. ಹೊರಕ್ಕೆ ಕಾಲಿರಿಸಿದಾಗ ಛಳಿ. ಸರ್ಕಸ್‌ನಿಂದ ಹೊರಬೀಳುವ ಜನಜಂಗುಳಿಯ ನಡುವೆ ವಿಲಕ್ಷಣವಾದ ವ್ಯಕ್ತಿಯೊಬ್ಬ ಕಾಣಿಸಿದ. ಲುಂಗಿ ಪಂಚೆ ; ಕಾಲಿಗೆ ಕಾಲುಚೀಲ ಬೂಡ್ಸು ; ಅರ್ಧ ತೋಳಿನ ಬುಷ್‌ಷರಟು ; ತಲೆಗೆ ಮಫ್ಲರ್ ; ಕಣ್ಣಿಗೆ ಆ ರಾತ್ರಿಯಲ್ಲೂ ಕಪ್ಪು ಕನ್ನಡಕ ; ಬಾಯಲ್ಲಿ ಬೀಡಿ ! ಸರ್ಕಸ್ ನೋಡಿ ಹೊರಬಂದ ನನಗೆ ಈ ವ್ಯಕ್ತಿ ಎಲ್ಲಿಂದ ತಪ್ಪಿಸಿಕೊಂಡು ಬಂದಿರಬಹುದು ಎಂದು ಅನುಮಾನವಾಗತೊಡಗಿತು. ಆದರೆ ತೀರಾ ಸಮೀಪದಲ್ಲಿ ಹಾದು ಹೋದಾಗ ಈತ ನಮ್ಮ ತಮಿಳು ಬಾಂಧವ ಎನ್ನುವುದು ಸ್ಪಷ್ಟವಾಯಿತು. ಎಲ್ಲಿ ಹೋದರೂ ವಿಶಿಷ್ಟವಾದ ರೀತಿಯಲ್ಲಿ ತಮ್ಮತನವನ್ನುಳಿಸಿಕೊಳ್ಳಬೇಕೆಂಬ ಹಠ ತಮಿಳರಿಗಲ್ಲದೆ ಇನ್ನಾರಿಗೆ ಬಂದೀತು !

ಹೋಟೆಲಿಗೆ ಬಂದು ಮೇಲೇರಿ, ಒಂಬತ್ತನೆ ಹಂತಕ್ಕೆ ಬಂದಾಗ ಒಳಾಂಗಣದಲ್ಲಿ ಅನೇಕ ಜನ ಕೂತು – ನಿಂತು ಟೆಲಿವಿಜನ್‌ನಲ್ಲಿ ತೋರಿಸಲಾಗುತ್ತಿದ್ದ ಮ್ಯೂನಿಚ್‌ನಲ್ಲಿ ನಡೆದ ಒಲಂಪಿಕ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದರು.