ಮ್ಯೂಸಿಯಂ ಮಾಡುತ್ತಿರುವ ಮರಿಪುಟ್ಟಣ್ಣ
ಮೊನ್ನೆ ದಿನ ಮನೆಗೆ ಬಂದ, ನಿಮ್ಮ ಹಸ್ತಪ್ರತಿ
ಕೊಡಿ ಅಂದ. ಸದ್ಯ, ಹಸ್ತವನ್ನೇ ಕೇಳಲಿಲ್ಲವಲ್ಲ,
ಸಮಾಧಾನವಾಯಿತು, ಸ್ವಲ್ಪ ಹೊತ್ತಿನ ಮೇಲೆ
ನಿಮ್ಮ ಪೆನ್ನೂ ಬೇಕಲ್ಲ ಕವಿಗಳೇ. ಓಹೋ
ಮುಂದಕ್ಕೆ ನಾ ಬರೆಯೋದಕ್ಕೆ ಬಂತು ಧಕ್ಕೆ
ಅಂತ ಬೆದರಿದೆ. ಇರುವುದೊಂದೇ ಪೆನ್ನು
ಮಹರಾಯ, ಯಾವುದೋ ಸನ್ಮಾನ ಸಭೇಲಿ
ಬಂದದ್ದು. ಸರಿ, ನಿಮ್ಮ ಕನ್ನಡಕ ಕೊಡಿ.
ಚೆನ್ನಾಯ್ತು ಮರಿಪುಟ್ಟಣ್ಣ, ನಾನಿನ್ನು ನಡೆ-
ದಾಡುವುದು ಹೇಗಣ್ಣ, ಕಣ್ಣನ್ನೆ ಕಿತ್ತುಕೊಂಡರೆ ?
ಮತ್ತೆ ಹಲ್ಲನ್ನೂ ಕೊಡಿ ಅಂದೀಯ ; ಹುಟ್ಟಿದ ಹಲ್ಲು
ಬಿಚ್ಚಲು ಬರುವುದಿಲ್ಲ ; ಕಟ್ಟಿಸಿಕೊಂಡಿದ್ದರೆ
ಖಂಡಿತ ಕೊಡುತ್ತಿದ್ದೆ. ನಕ್ಕ, ಮೂವತ್ತೆರಡು
ಹಲ್ಲೂ ಕಿರಿದು ಹೇಳಿದ : ಎಂತೆಂಥ ಮಹ ಮಹಾ
ಸಾಹಿತಿಗಳ ಏನೆಲ್ಲವನ್ನೂ ತಂದು ಇದುವರೆಗು
ಮ್ಯೂಸಿಯಂನಲ್ಲಿ ಮಡಗಿದ್ದೀನಿ ; ದೇಶ ದೇಶದ
ಜನ ಬಂದು ನೋಡಿ, ಮೆಚ್ಚಿ ಹೊಗಳಿದ್ದಾರೆ ;
ಈ ಸಮಾಚಾರವನ್ನೆಲ್ಲ ನೀವು ಪತ್ರಿಕೆಯಲ್ಲಿ
ಓದಿರಬೇಕು. ಅದಿರಲಿ ಮರಿಪುಟ್ಟಣ್ಣ, ನಾ
ಬರೆದದ್ದು ಏನೇನು ಓದಿದ್ದೀಯ? ಅಯ್ಯೋ, ನನಗೆ
ಅದಕ್ಕೆಲ್ಲ ಎಲ್ಲಿದೆಯಪ್ಪ ಪುರಸತ್ತು ; ನೀವೇ ನೋಡಿ
ನಿಮ್ಮಂಥವರ ಬಾಗಿಲಿಗೆ ಅಲೆಯುವುದರಲ್ಲೇ ಸುಸ್ತು.