. ಪ್ರಸ್ತಾವನೆ

ವಿಷಯ ಪ್ರವೇಶ

ಆಹಾರ್ಯವು ಯಕ್ಷಗಾನದಲ್ಲಿ ಅಸ್ತಿತ್ವವನ್ನು ಪರಂಪರಾಗತವಾಗಿ ಉಳಿಸಿಕೊಂಡು ಬಂದಿದೆ. ಯಾವುದೇ ಕಲಾ ರೂಪವಿರಲಿ ಅದರ ಅಸ್ತಿತ್ವವನ್ನು ಗುರುತಿಸುವ ಮುಖ್ಯ ಲಕ್ಷಣವೇ ಆಹಾರ್ಯ. ಯಾವುದೇ ‘ಆಹಾರ್ಯ’ವನ್ನು ನೋಡಿದಾಗ ಅಲ್ಲಿನ ಅರ್ಥ ಸಂಕೇತವು ಆ ಕಲಾರೂಪದ ನಿರ್ದಿಷ್ಟ ಸ್ವರೂಪವನ್ನು ಸಾರುವಂತಿರುತ್ತದೆ. ವ್ಯಾವಹಾರಿಕ ಜಗತ್ತಿನಲ್ಲಿ ಮಾನವರ ಉಡುಗೆ ತೊಡುಗೆಗಳು ಸಾಮಾಜಿಕವಾದ ಸ್ಥಾನಮಾನಗಳನ್ನು ಪ್ರತಿಬಿಂಬಿಸುತ್ತವೆ. ಕಲಾ ಚೌಕಟ್ಟಿನ ಸಂದರ್ಭದಲ್ಲಿಯೂ ಉಡುಗೆ ತೊಡುಗೆಗಳು ಪಾತ್ರಗಳ ಗುಣ ಸ್ವಭಾವಗಳನ್ನು ಸಂಕೇತಿಸುತ್ತಿರುತ್ತವೆ. ಪಾತ್ರಗಳು ಪ್ರತಿನಿಧಿಸುವ ಕಲಾ ಮಾಧ್ಯಮಗಳ ಒಳಗಡೆಯೇ ನಿರ್ದಿಷ್ಟವಾದ ಪಾತ್ರಗಳ ಚೌಕಟ್ಟನ್ನು ಮಾನವರು ರೂಪಿಸಿಕೊಂಡಿದ್ದಾರೆ. ಇದು ಕೇವಲ ಪಾತ್ರದ ಉಡುಗೆಯಾಗಿ ಅಲ್ಲ. ಬದಲಾಗಿ ಕಲಾತ್ಮಕ ಕಾಲ್ಪನಿಕ ಸೃಷ್ಟಿಯಾಗಿ ಆಹಾರ್ಯ ಮುಖ್ಯವಾಗುತ್ತದೆ. ಯಕ್ಷಗಾನದ ಆಹಾರ್ಯವು ಕಲಾತ್ಮಕ ಸೃಷ್ಟಿಯಾಗಿ ಮಾನವರ ಸೌಂದರ್ಯದ ಪ್ರತೀಕವಾಗಿ ಇಂದಿಗೂ ಉಳಿದುಕೊಂಡು ಬಂದಿದೆ. ಯಾವುದೇ ಕಾಲಘಟ್ಟದ ಮಾನವರ ಕಲ್ಪನಾ ವಿಲಾಸವು ಒಂದು ಕಲಾತ್ಮಕ ಚೌಕಟ್ಟಿನಲ್ಲಿ ಸಿದ್ಧಗೊಂಡಾಗ ಅದಕ್ಕೆ ಸೌಂದರ್ಯದ ನೆಲೆಯೊಂದು ಪ್ರಾಪ್ತವಾಗುತ್ತದೆ. ಕಲೆ ಹುಟ್ಟಿ ಜೀವಂತವಾಗುಳಿಯಲು ಅದಕ್ಕೆ ಸೌಂದರ್ಯದ ಪೋಷಕ ನೆಲೆ ಬೇಕಾಗುತ್ತದೆ. ಸೌಂದರ್ಯ ಎಂದರೆ ಕೇವಲ ಮನಸ್ಸಿಗೆ, ಕಣ್ಣುಗಳಿಗೆ ಆನಂದವನ್ನು ನೀಡುವ ಸಂಗತಿಯಲ್ಲ. ಬದಲಾಗಿ ಅದು ಮಾನವ ಸಮುದಾಯಕ್ಕೆ ಒಂದು ನಿರ್ದಿಷ್ಟ ಸಂದೇಶವನ್ನು ನೀಡುತ್ತಿರುತ್ತದೆ. ಆಗ ಮಾತ್ರ ಕಲೆ ಸೌಂದರ್ಯಾತ್ಮಕವಾಗುತ್ತದೆ. ಸಮಾಜದ ಒಳಿತನ್ನು ಬಯಸುವ, ಸಮುದಾಯಕ್ಕೆ ನೈತಿಕ ಸಂದೇಶವನ್ನು ಸಾರುವ ಸ್ವಭಾವಗಳು ಕಲೆಗಳಲ್ಲಿ ಇದ್ದರೆ ಕಲೆ ಸೌಂದರ್ಯಾತ್ಮಕವಾಗಿರುತ್ತದೆ. ಯಾವುದೇ ಅವು ಸಮುದಾಯದ ಮುಂದೆ ಪ್ರಯೋಗವಾಗುವುದರ ಮೂಲಕವೇ ಜೀವಂತ ವಾಗುಳಿಯುತ್ತವೆ. ಹೀಗೆ ಪ್ರಯೋಗಕ್ಕೆ ಅಳವಡುವ ಕಲಾರೂಪಗಳು ಸಮುದಾಯದ ನಿರ್ದಿಷ್ಟ ಉದ್ದೇಶವನ್ನು ಈಡೇರಿಸುತ್ತಲೇ ಸೌಂದರ್ಯಾತ್ಮಕವಾಗುತ್ತಾ ಮುಂದುವರಿಯುತ್ತಿರುತ್ತದೆ.

ಇದೇ ನೆಲೆಯಲ್ಲಿ ಪ್ರಸ್ತುತ ಅಧ್ಯಯನವು ಯಕ್ಷಗಾನದ ಅದರಲ್ಲೂ ಕೇರಳಕ್ಕೆ ಸೇರಿದ ಕಾಸರಗೋಡು, ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವೆಡೆ ಪ್ರಚಲಿತವಿರುವ ತೆಂಕುತಿಟ್ಟು ಯಕ್ಷಗಾನ ಎಂಬ ಪ್ರಭೇದವೊಂದರ ಆಹಾರ್ಯವನ್ನು ಕೇಂದ್ರೀಕರಿಸಿದೆ. ಯಕ್ಷಗಾನದ ಆಹಾರ್ಯವನ್ನು ಸೌಂದಯಾತ್ಮಕ ನೆಲೆಯಿಂದ ನೋಡುವುದರ ಜೊತೆಗೆ ಸಮಕಾಲೀನ ಸಾಂಸ್ಕೃತಿಕ ಸಂಗತಿಗಳೊಡನೆ ಸಾದೃಶ್ಯವನ್ನು ಗುರುತಿಸುವ ಪ್ರಯತ್ನವನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತೆಂಕುತಿಟ್ಟು ಯಕ್ಷಗಾನದ ಆಹಾರ್ಯದ ಸಮಗ್ರ ಅಧ್ಯಯನವನ್ನು ಮಾಡಲೆತ್ನಿಸಿದೆ. ತೆಂಕುತಿಟ್ಟು ಯಕ್ಷಗಾನದಲ್ಲಿ ಅತ್ಯಂತ ವೈಭವ ಹಾಗೂ ವರ್ಣಾತ್ಮಕವಾಗಿ  ಕಾಣಿಸುವುದು ಮುಖವರ್ಣಿಕೆ ಹಾಗೂ ವೇಷಭೂಷಣಗಳೇ. ಇವುಗಳ ಸಂಕೇತಗಳು ಹಾಗೂ ಅರ್ಥಗಳು ಸಮಕಾಲೀನ ದಿನಗಳಲ್ಲಿ ಬಹುತೇಕ ಮರೆಯಾಗಿವೆ. ಆದರೆ ಯಾವುದೋ ಕಾಲಘಟ್ಟದ ಅನೇಕ ಸೃಜನಶೀಲ ಮನಸ್ಸುಗಳ ಸೃಷ್ಟಿಯಾಗಿ ರೂಪು ಪಡೆದ ‘ಆಹಾರ್ಯ’ ಎಂಬ ಅಭಿನಯಾಂಗಕ್ಕೆ ರಂಗಭೂಮಿಯ ಚೌಕಟ್ಟಿನಲ್ಲಿಯೂ ಧಾರ್ಮಿಕ ವಲಯದಲ್ಲಿಯೂ ವಿಶಿಷ್ಟ ಅರ್ಥ ಸಾಧ್ಯತೆ ಗಳಿವೆ. ಈ ಅರ್ಥ ಸಾಧ್ಯತೆಗಳನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡುವುದರ ಮೂಲಕ ಮಾನವರು ತಾವು ಕಲ್ಪಿಸಿದ ಪಾತ್ರಗಳಿಗೆ ತೊಡಿಸಿದ ಕಲ್ಪನಾ ವೇಷವನ್ನು ಮತ್ತು ಮಾನವರ ಸೌಂದರ್ಯ ಪ್ರಜ್ಞೆಯ ಅಗಾಧತೆಯನ್ನು ಅರಿತುಕೊಳ್ಳಬಹುದು.

ಸಮಕಾಲೀನ ದಿನಗಳಲ್ಲಿಯೂ ವೈಭವಪೂರ್ಣವಾದ ವೇಷಭೂಷಣಗಳನ್ನು ಧರಿಸಿ ರಂಗಭೂಮಿಯಲ್ಲಿ ಕಲಾವಿದರು ಕುಣಿಯುವುದು ಸೌಂದರ್ಯದ ಹಾಗೂ ಪ್ರತಿಭೆಯ ಭಾಗವೇ ಆಗಿದೆ. ಜೊತೆಗೆ ಪರಂಪರಾಗತ ಸಂಗತಿಯಾಗಿ ಧಾರ್ಮಿಕವಾಗಿಯೂ ಕಲೆಯ ಬಗೆಗೊಂದು ಶ್ರದ್ಧೆ ಕೇಂದ್ರಿಕರಿಸಿದೆ. ಈ ನೆಲೆಯಲ್ಲಿ ಕಲೆ ಸಮುದಾಯದ ಸಂಪತ್ತಾಗಿ ಸಮಕಾಲೀನ ಸಮಾಜದಲ್ಲಿ ವೈಭವಪೂರ್ಣ ಸಾಂಸ್ಕೃತಿಕ ಸೌಂದರ್ಯದ ಪ್ರತೀಕವಾಗಿ ಪಡೆದಿರುವ ವಿಶಿಷ್ಟ ಆಯಾಮವನ್ನು ಅರ್ಥಮಾಡಿಕೊಳ್ಳಲು ಪ್ರಸ್ತುತ ಅಧ್ಯಯನದಲ್ಲಿ ಮುಖ್ಯ ಗಮನವನ್ನು ಹರಿಸಲಾಗಿದೆ. ಯಕ್ಷಗಾನದ ಆಹಾರ್ಯ ಎಂದರೆ ನಾಲ್ಕು ಅಭಿಯಾಂಗಗಳಲ್ಲಿ ಒಂದೆನಿಸುವ ವೇಷಭೂಷಣ ಹಾಗೂ ಬಣ್ಣಗಾರಿಕೆ ಒಳಗೊಳ್ಳುತ್ತದೆ. ಇದನ್ನು ರಂಗಭೂಮಿಯ ಪರಿಭಾಷೆಯಲ್ಲಿ ‘ಆಹಾರ್ಯ’ ಎಂದು ಕರೆಯಲಾಗುತ್ತದೆ. ಪ್ರಸ್ತುತ ಅಧ್ಯಯನದಲ್ಲಿ ಆಹಾರ್ಯ ಎಂಬ ಅಭಿನಯಾಂಗದ ವಿವಿಧ ಆಯಾಮಗಳನ್ನು ಮುಖ್ಯ ನೆಲೆಯಲ್ಲಿರಿಸಿ ಚರ್ಚಿಸಲಾಗಿದೆ.

ಕಲೆಗಳು ಮತ್ತು ಆಹಾರ್ಯ

ಮನಸ್ಸಿಗೆ ಸಂತೋಷವಾದಾಗ ಅಥವಾ ಭಕ್ತಿಭಾವನೆಯಿಂದ ಆವೇಶಗೊಂಡಾಗ ಮನುಷ್ಯರು ಕುಣಿದು ಕುಪ್ಪಳಿಸುವುದು ಸಹಜವಾದ ಪ್ರಕ್ರಿಯೆ. ಕುಣಿಯುತ್ತಿರುವ ವ್ಯಕ್ತಿಗಳು ಕುಣಿಯದೆ ಇರುವವರಿಗಿಂತ ತಾವು ಪ್ರತ್ಯೇಕವಾಗಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು ಅನೇಕ ದೈಹಿಕ ಹಾಗೂ ಆಂಗಿಕ ಚರ್ಯೆಗಳನ್ನು ಪ್ರಕಟಪಡಿಸುತ್ತಾರೆ. ಜೊತೆಗೆ ಮುಖಕ್ಕೆ ಮುಖವಾಡಗಳನ್ನೋ ಅಂಗಗಳಿಗೆ ಬಣ್ಣಗಳನ್ನೋ ಹಚ್ಚಿಕೊಂಡರೆ ಕುಣಿಯುವವರಿಗೆ ಇನ್ನಿಲ್ಲದ ಆವೇಶವೇ ಬಂದು ಬಿಡುತ್ತದೆ. ತಾನು ವಾಸ್ತವ ಪ್ರಪಂಚಕ್ಕೆ ವಾಸ್ತವ ವ್ಯಕ್ತಿಯಾಗಿ ಪ್ರಕಟವಾಗುತ್ತಿಲ್ಲ ಎಂಬ ಅನ್ನಿಸಿಕೆಯೇ ವ್ಯಕ್ತಿಗೆ ಕುಣಿತದಲ್ಲಿ ಹೊಸ ತೆರನ ಶಕ್ತಿಯನ್ನು ಆವಾಹಿಸಿಕೊಡುತ್ತದೆ. ಅನಾದಿ ಕಾಲದಿಂದಲೇ ಮಾನವನ ಆಸಕ್ತಿಗಳು ಹಾಗೂ ಸಾಮರ್ಥ್ಯ ಗಳು ಸಮುದಾಯದ ನಡುವೆ ಪ್ರಕಟವಾದ ಬಗೆಯಿದು. ತಮ್ಮಲ್ಲಿ ಹುದುಗಿದ ಸಾಮರ್ಥ್ಯ ಹಾಗೂ ಆಸಕ್ತಿಗಳನ್ನು ಪ್ರಕಟಪಡಿಸುತ್ತಿರುವಾಗ ನೋಡುಗರಿದ್ದಾರೆ ಎಂದು ತಿಳಿದಾಗ ಕುಣಿತಕ್ಕಾಗಲೀ ಇನ್ನಿತರ ಚಟುವಟಿಕೆಗಳಿಗಾಗಲೀ ಹುಮ್ಮಸ್ಸು ಬಂದು ಬಿಡುತ್ತದೆ. ಮನುಷ್ಯ ಮನಸ್ಸಿನ ಅಂತರಾಳದಲ್ಲಿ ಹುದುಗಿರುವ ಅನೇಕ ಭಾವನೆಗಳಿಗೆ ಅಭಿವ್ಯಕ್ತಿ ಹೊಂದುವ ಅವಕಾಶ ದೊರೆತಾಗ ವ್ಯಕ್ತಿ ಅದನ್ನು ಹೊರಹೊಮ್ಮಿಸಲೇ ಬೇಕಾಗುತ್ತದೆ. ಹಾಡು, ಚೆಂಡೆ, ವಾದ್ಯಗಳ ಗದ್ದಲಗಳು ಪೂರಕವಾಗಿ ಒದಗಿ ಬಂದರಂತೂ ಕುಣಿತದ ಸ್ಥಿತಿ ಪರಾಕಾಷ್ಠೆಯನ್ನು ತಲುಪಿಬಿಡುತ್ತದೆ. ಆದರೆ ಅವುಗಳಿಗೆ ಸಂದರ್ಭಗಳು ಮಾತ್ರ ಒದಗಿ ಬರಬೇಕು.

ಆದಿವಾಸಿ ಜನರು ತಾವು ಬೇಟೆಯಾಡಿ ತಂದ ವಸ್ತುವನ್ನು ಬೆಂಕಿಯಲ್ಲಿ ಬೇಯಿಸುತ್ತಾ ಉರಿಯುವ ಬೆಂಕಿಯ ಮುಂದೆ ಕುಣಿಯುತ್ತಿದ್ದುದು ಇತಿಹಾಸದ ಪುಟಗಳಿಂದ ತಿಳಿಯುತ್ತದೆ. ಸಂತೋಷದ ಪ್ರಕಟಣೆಯ ಕಾರಣಕ್ಕಾಗಿಯೇ, ತಾನು ನಂಬಿದ ಶಕ್ತಿಯ ತೃಪ್ತಿಗಾಗಿಯೂ ಮಾನವರು ಮುಖವಾಡಗಳನ್ನು ಧರಿಸಿ ಕುಣಿಯುತ್ತಿದ್ದ ಬಗೆಗೂ ವಿವರಗಳು ದೊರೆಯುತ್ತವೆ. ಪರಸ್ಪರ ಮುಖಕ್ಕೆ ಬಣ್ಣ ಬಳಿದುಕೊಂಡೋ, ಪ್ರಕೃತಿಯಲ್ಲಿ ದೊರೆಯುವ ಮರಗಿಡಗಳ ಸೊಪ್ಪುಸದೆಗಳನ್ನು ದೇಹಕ್ಕೆ ತೊಟ್ಟುಕೊಂಡೋ ಕುಣಿಯುವುದು ಮನುಷ್ಯನ ಮೂಲಭೂತ ಪ್ರವೃತ್ತಿಗಳ ಭಾಗವೇ ಆಗಿದೆ. ಮನುಷ್ಯ ಸಹಜ ಆಸಕ್ತಿ ಹಾಗೂ ಕುತೂಹಲಗಳ ಪ್ರಕಟಣೆಗೆ ಆದಿಮಾನವರೇ ನಿರ್ದಿಷ್ಟ ಸಂದರ್ಭಗಳನ್ನು ರೂಪಿಸಿಕೊಂಡು ಬಂದಿರುವುದನ್ನು ಕಾಣ ಬಹುದು. ಮಾನವನ ಕುತೂಹಲವೇ ನೃತ್ಯ, ಗಾನ, ಕುಣಿತಗಳಿಗೆ ಮುಖ್ಯ ನೆಲೆಯಾಗಿದೆ. ಮನುಷ್ಯರ ಭಾವನೆಗಳ ಪ್ರಕಟಣೆಗೆ ಒಂದು ಮಾಧ್ಯಮ ಬೇಕು ಅಷ್ಟೆ. ಆಯಾ ಮಾಧ್ಯಮಗಳ ಆಯ್ಕೆ ಕೂಡಾ ಮಾನವರ ವೈಯಕ್ತಿಕ ಆಸಕ್ತಿ ಹಾಗೂ ಸಾಮರ್ಥ್ಯಗಳನ್ನೇ ಅವಲಂಬಿಸಿದೆ. ಕುಣಿತವಾದರೆ ಕುಣಿತ, ಹಾಡಾದರೆ ಹಾಡು, ಈಜಾದರೆ ಈಜು ಎಲ್ಲವೂ ಮಾನವರ ಆಸಕ್ತಿಯ ಸಹಜ ಅಭಿವ್ಯಕ್ತಿಗಳೇ ಹೌದು.

ಕಲೆಗಳ ಸೃಷ್ಟಿ

ಒಬ್ಬರ ಆಸಕ್ತಿ ಹಲವರ ಸಂತೋಷಕ್ಕೆ ಕಾರಣವಾದರೆ ಸಾಕು. ಅದಕ್ಕೊಂದು ನಿರ್ದಿಷ್ಟ ಮುದ್ರೆ ಲಭ್ಯವಾಗುತ್ತದೆ. ಒಬ್ಬರ ಆಸಕ್ತಿ ಅನುಕರಣೆಯ ಮೂಲಕವೋ, ಅನುಸರಣೆಯ ಮೂಲಕವೋ ಹಲವರ ಆಸಕ್ತಿಯಾಗಿ ಹೊರಹೊಮ್ಮುತ್ತವೆ. ಇಂತಹ ಪ್ರಯತ್ನಗಳು ಮಾನವ ಸಮುದಾಯದಲ್ಲಿ ನಿರಂತರ ನಡೆಯುತ್ತಿರುತ್ತವೆ. ಆಗ ಮಾನವರ ಆಸಕ್ತಿಯ ಅಭಿವ್ಯಕ್ತಿಗೆ ನಿರ್ದಿಷ್ಟ ಸಂಕೇತಗಳು ಹಾಗೂ ನಿರ್ದಿಷ್ಟ ಚೌಕಟ್ಟು ಸಿದ್ಧವಾಗುತ್ತದೆ. ನಿರ್ದಿಷ್ಟ ಸಂದರ್ಭಗಳು ಸಾಮುದಾಯಿಕವಾಗಿಯೂ ಸೃಷ್ಟಿಯಾಗುತ್ತಿರುತ್ತವೆ. ಆಗೆಲ್ಲ ಆಸಕ್ತಿಯ ಪ್ರಕಟಣೆಗೊಂದು ಕಲಾತ್ಮಕತೆ ಲಭ್ಯವಾಗುತ್ತದೆ. ಮನುಷ್ಯರ ಆಸಕ್ತಿಯು ಕಲಾತ್ಮಕ ನೆಲೆಯಲ್ಲಿ ಅಭಿವ್ಯಕ್ತಿ ಗೊಂಡಾಗಲೇ ಅನೇಕ ಕಲಾರೂಪಗಳು ಹುಟ್ಟಿಕೊಳ್ಳುತ್ತವೆ. ಆದಿಮಾನವರ ಈ ತೆರನ ಕಲಾಸೃಷ್ಟಿಗಳು ಮಾನವರ ನಾಗರಿಕತೆ, ಸಂಸ್ಕೃತಿ ಇತಿಹಾಸದ ಭಾಗವಾಗಿ ವಿಕಾಸ ಗೊಳ್ಳುತ್ತಿ ರುತ್ತವೆ. ಕಾಲದ ಅಗತ್ಯಕ್ಕೆ ಅನುಗುಣವಾಗಿ ಮಾನವರ ಆಸಕ್ತಿ, ಕುತೂಹಲಗಳು ಹಲವು ರೂಪಗಳಲ್ಲಿ, ಹಲವು ನೆಲೆಗಳಲ್ಲಿ ಪ್ರಕಟವಾದ ಕಾರಣಕ್ಕಾಗಿಯೇ ಹಲವು ಕಲೆಗಳ ಸೃಷ್ಟಿ ಮಾನವ ಸಂಸ್ಕೃತಿಯಲ್ಲಿ ಆಗಿದೆ.

ಯಾವುದೇ ಕಲೆ ಯಾವ ಉದ್ದೇಶಕ್ಕಾಗಿ ಹುಟ್ಟಿದೆಯೋ ಅದೇ ಉದ್ದೇಶಕ್ಕಾಗಿ ಸಾರ್ವಕಾಲಿಕವಾಗಿ ಪ್ರಯೋಗಗೊಳ್ಳಲಾರದು. ಹಾಗೆಯೇ ಕಲೆಯು ಹುಟ್ಟಿನ ಸಂದರ್ಭದ ಸ್ವರೂಪದಲ್ಲಿಯೇ ಎಲ್ಲ ಕಾಲದಲ್ಲೂ ಉಳಿಯಲಾರದು. ಅದು ಮನುಷ್ಯರ ಸೃಜನಶೀಲ ಪ್ರವೃತ್ತಿಗಳ ನಡುವೆ ಸಿಲುಕಿ ಬದಲಾವಣೆಗಳಿಗೆ ತುತ್ತಾಗುತ್ತಲೇ ಇರುತ್ತದೆ. ಇಂತಹ ಬದಲಾವಣೆಗಳು ಕಲೆಗಳ ಸಂದರ್ಭದಲ್ಲಿ ಯಾವತ್ತೂ ಗುಣಾತ್ಮಕವಾಗಿಯೇ ಇರಬೇಕಾಗಿಲ್ಲ. ಅವು ಕಾಲದ ಅಗತ್ಯವನ್ನು ಪೋಷಿಸುವ ರೀತಿಯಲ್ಲಿ ಸ್ವರೂಪದಲ್ಲೂ ಬದಲಾವಣೆಗಳನ್ನು ರೂಢಿಸಿಕೊಂಡಿರುತ್ತವೆ. ಮಾನವರ ನಡುವೆ ಬದುಕಿ ಬಾಳುವ ಅನೇಕ ಕಲೆಗಳು ನಿಂತ ನೀರಾಗದೆ ಪ್ರವಹಿಸುವ ಪ್ರವಾಹವಾಗಿ ಕಾಲಗತಿಯಲ್ಲಿ ವಿವಿಧಾಕಾರಗಳನ್ನು ತಾಳಿಕೊಳ್ಳುತ್ತವೆ. ತಲೆಮಾರಿನಿಂದ ತಲೆಮಾರಿಗೆ ಶತಮಾನಗಳಿಂದ ಶತಮಾನಗಳಿಗೆ ಪ್ರವಹಿಸುತ್ತಾ ಬಂದಾಗಲೆಲ್ಲ ಕಲೆ ತನ್ನ ಕಾಲದ ಅನೇಕ ವಿದ್ಯಮಾನಗಳಿಗೆ ಸ್ಪಂದಿಸುತ್ತಿರುತ್ತದೆ. ಹಾಗೆಯೇ ಸಮಕಾಲೀನ ಗೊಳ್ಳುತ್ತಲೂ ಇರುತ್ತದೆ. ಮನುಷ್ಯರ ನೆನಪಿನ ಶಕ್ತಿಗಳ ಮೇಲೆ ನಿರ್ದಿಷ್ಟ ಪರಂಪರೆಯ ಚಿತ್ರಣವಾಗಿ ಮುಂದುವರಿಯುತ್ತಿರುತ್ತದೆ. ಹೀಗೆ ಕಲೆಗಳು ಮಾನವರ ಆಸಕ್ತಿಯ ಕೇಂದ್ರವಾಗಿ ಜನಸಮುದಾಯದ ಸೃಷ್ಟಿಶೀಲತೆಗೆ ಪೂರಕವಾಗಿ ಜೀವಂತವಾಗುಳಿಯುತ್ತವೆ. ಈ ಹಿನ್ನೆಲೆಯಲ್ಲಿ ಕಲೆ ಅಂದರೆ ಮನುಷ್ಯರ ಬೌದ್ದಿಕ ಸೃಷ್ಟಿಯಾಗಿದೆ. ಕಲೆ ಎಂಬ ಎರಡಕ್ಷರದ ಪದದಲ್ಲಿ ಅನೇಕ ತಲೆಮಾರುಗಳ ಮನುಷ್ಯರ ಸೃಜನಶೀಲ ಆಲೋಚನೆಗಳು ವಿಭಿನ್ನ ರೂಪಗಳಲ್ಲಿ ನೆಲೆಗೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ಕಲೆ ಎಂಬ ಪದಕ್ಕೆ ಸೃಷ್ಟಿ ಎಂಬ ಅರ್ಥವನ್ನೂ ಆರೋಪಿಸಬಹುದು.

ವಿಶೇಷ ಜ್ಞಾನವಿರುವ ಮನುಷ್ಯರು ಸಂತೋಷವನ್ನು ಹೆಚ್ಚಿಸಿ, ದುಃಖವನ್ನು ದೂರ ಮಾಡಲು ಯಾವುದಾದರೂ ಒಂದು ಪ್ರವೃತ್ತಿಯನ್ನು ರೂಪಿಸಿಕೊಂಡಿದ್ದರು. ಅವುಗಳಲ್ಲಿ ಬುದ್ದಿಪೂರ್ವಕವಾಗಿ ಮಾಡುವ ಎಲ್ಲ ಪ್ರವೃತ್ತಿಗಳು ಕಲೆಗಳಾಗಿವೆ. ಪ್ರಕೃತಿಯಲ್ಲಿ ತನ್ನಷ್ಟಕ್ಕೆ ತಾನು ಸೃಷ್ಟಿಯಾಗಿರುವುದು ಕಲೆಯಲ್ಲ. ಮನುಷ್ಯನಿಂದ ಸೃಷ್ಟಿಯಾಗುವ ಅಪೂರ್ವ ವಸ್ತುಗಳು ಮಾತ್ರ ಕಲೆಗಳೆಂದು ಹೇಳಬಹುದು. ಜಗತ್ತಿನ ಸೌಂದರ್ಯ ಕೇಂದ್ರವಾಗಿರುವ ಹಿಮಾಲಯ ಜಲಪಾತ ಕಲೆಯಲ್ಲ. ಜೋಗ ಜಲಪಾತದ ಸುಂದರವಾದ ಚಿತ್ರವನ್ನು ಬರೆದರೆ ಅದು ಕಲೆಯಾಗುತ್ತದೆ. ಅರಳುವ, ಮುದುಡುವ ಹೂಗಳು ಕಲೆಯಲ್ಲ. ಅದುವೇ ಕವಿಯ ವರ್ಣನೆಗೆ ವಿಷಯವಾದಾಗ ಕಲೆಯಾಗುತ್ತದೆ. ನಮ್ಮ ಸುತ್ತಮುತ್ತ ನಡೆಯುವ ಜಗಳ, ಗಲಾಟೆಗಳು ಕಲೆಗಳಲ್ಲ. ಆದರೆ ಅವುಗಳು ವೇದಿಕೆಯಲ್ಲಿ ತಜ್ಞರಾದ ಕಲಾವಿದರ ಮೂಲಕ ಅಭಿವ್ಯಕ್ತ ಗೊಂಡರೆ ಕಲೆಯಾಗುತ್ತದೆ.

ಕಣ್ಣು ಹಾಗೂ ಹೃದಯವನ್ನು ಆಕರ್ಷಿಸುವ ಈ ಪ್ರಪಂಚದ ದೃಶ್ಯಗಳೆಲ್ಲ ಒಬ್ಬ ವಿಶ್ವಶಿಲ್ಪಿಯ ಕಲಾಸೃಷ್ಟಿಗಳಾಗಿವೆ. ಆದಿ ಕಲಾವಿದನ ಈ ಅದ್ಭುತ ಕೃತಿಗಳನ್ನು ಆಸ್ವಾದಿಸಿ, ತೃಪ್ತಿ ಪಡೆಯಲು ಮನುಷ್ಯರಿಗೆ ಸಾಧ್ಯವಾಗಲಿಲ್ಲ. ಆದುದರಿಂದಲೇ ಅನೇಕ ಕಲೆಗಳನ್ನು ಅವರು ಸೃಷ್ಟಿಸಿ ಸಂತೋಷವನ್ನು ಅನುಭವಿಸಿದರು. ಮಕ್ಕಳು ಹಿರಿಯರನ್ನು ಅನುಕರಿಸುವಂತೆ ಮನುಷ್ಯರು ವಿಶ್ವಶಿಲ್ಪಿಯ ಸೃಷ್ಟಿಯನ್ನು ಬೇರೆ ಬೇರೆ ಮಾಧ್ಯಮಗಳಲ್ಲಿ ಅನುಕರಿಸಲು ಆರಂಭಿಸಿದರು. ಇದರಿಂದ ಸಂತೋಷವನ್ನು ಅನುಭವಿಸಿದರು. ಹೀಗೆ ಕಲೆಗಳು ಹುಟ್ಟಿ ಕೊಂಡುವು.

ಅಪೂರ್ವವಾದ ಕೃತಿಗಳನ್ನು ರಚಿಸುವವರು, ಪ್ರದರ್ಶಿಸುವವರು ಕಲಾವಿದರಾಗುತ್ತಾರೆ. ಅವರ ಕಲ್ಪನಾಲೋಕ ಭಿನ್ನವಾಗಿದೆ. ಅಲ್ಲಿ ನಮ್ಮ ಜಗತ್ತಿನಲ್ಲಿ ಇರುವುದೂ, ಇಲ್ಲದಿರುವುದೂ ಕಾಣಿಸುತ್ತದೆ. ಪ್ರಕೃತಿಯ ಸಾಮಾನ್ಯ ನಿಯಮಗಳು ಅಲ್ಲಿ ಬಾಧಕವಾಗುವುದಿಲ್ಲ. ಕವಿ ಅಥವಾ ಕಲಾವಿದನ ಕಲ್ಪನೆಯಲ್ಲಿ ಸಮುದ್ರವನ್ನು ಕಡೆದು ಅಮೃತವನ್ನು ಪಡೆಯಬಹುದು. ಸಮುದ್ರವನ್ನು ಹಾರಿ ದಾಟಬಹುದು, ಗಿರಿಯನ್ನು ಕೊಡೆಯಂತೆ ಎತ್ತಿ ಹಿಡಿಯಬಹುದು. ದೇವರು ಅನೇಕ ಅವತಾರಗಳನ್ನು ತಾಳಿ ಭೂಮಿಗೆ ಬರಬಹುದು. ವಾಸ್ತವದಲ್ಲಿ ನಡೆಯ ಲಾರದ ಅನೇಕ ಸಂಗತಿಗಳನ್ನು ಕಲೆಗಳಲ್ಲಿ ಚಿತ್ರಿಸಲು ಸಾಧ್ಯವಿದೆ.

ವಿಶ್ವಶಿಲ್ಪಿಗೆ ಜಗತ್ತನ್ನು ಸೃಷ್ಟಿಸಲು ನೀರು, ಗಾಳಿ, ಮಣ್ಣು, ಬೆಂಕಿ ಮೊದಲಾದ ಮೂಲ ದ್ರವ್ಯಗಳಿದ್ದವು. ಹಾಗೆಯೇ ಕವಿ ಅಥವಾ ಕಲಾವಿದನಿಗೆ ಭಾಷೆ, ಬಣ್ಣ ಮೊದಲಾದ ಪರಿಕರಗಳು ಬೇಕು. ಕವಿ ಭಾಷೆಯ ಮೂಲಕ ಸುಂದರ ಕೃತಿಯನ್ನು ಕಟ್ಟಿಕೊಡಬಲ್ಲ. ಚಿತ್ರ ಕಲಾವಿದ ಬಣ್ಣದ ಮೂಲಕ ಚಿತ್ರ ರಚಿಸಿ ತನ್ನ ವಿಚಾರವನ್ನು ಅಭಿವ್ಯಕ್ತಪಡಿಸುವನು. ನಾಟಕ ಮೊದಲಾದ ದೃಶ್ಯಕಲೆಗಳಿಗೆ ಸಾತ್ವಿಕ, ಆಂಗಿಕ, ವಾಚಿಕ ಮತ್ತು ಆಹಾರ್ಯ ಅಭಿನಯಗಳು ಸೂಕ್ತ ಪರಿಕರಗಳಾದುವು. ಹೀಗೆ ಬೇರೆ ಬೇರೆ ಕಲಾವಿದರು ಒಂದೇ ಮೂಲದ್ರವ್ಯವನ್ನು ಉಪಯೋಗಿಸಿ ವಿಭಿನ್ನ ಕೃತಿಗಳನ್ನು ರಚಿಸುವರು.

ಸಂತೋಷವನ್ನು ಅನುಭವಿಸುವುದು ಮನುಷ್ಯನ ಮೂಲಭೂತ ಗುಣವಾಗಿದೆ. ಕಲೆಯ ಸಾಮ್ರಾಜ್ಯದಲ್ಲಿ ಆನಂದವೇ ಮುಖ್ಯವಾಗುತ್ತದೆ. ಸಿಟ್ಟು, ದುಃಖ, ಕಷ್ಟ ಯಾವುದೇ ಸನ್ನಿವೇಶಗಳಿದ್ದರೂ ಕಲೆಯ ಉದ್ದೇಶ ಆನಂದವಾಗಿರುತ್ತದೆ. ಅದನ್ನೇ ಅಲಂಕಾರಿಕರು ರಸಾನುಭವ ಎಂದು ಕರೆದಿರುವುದು. ಇಲ್ಲದಿರುವುದನ್ನು ಸೃಷ್ಟಿಸುವುದು, ಇರುವುದನ್ನು ಅಭಿವೃದ್ದಿಪಡಿಸುವುದು, ಒಳ್ಳೆಯದನ್ನು ಒಟ್ಟುಗೂಡಿಸುವುದು ಇದು ಕವಿ/ಕಲಾವಿದನ ಕೆಲಸಗಳಾಗಿವೆ. ಆದುದರಿಂದ ಸಂಕಲಿಸುವುದು, ಪರಿಷ್ಕರಿಸುವುದು, ನೂತನವಾಗಿ ಸೃಷ್ಟಿ ಸುವುದು ಇತ್ಯಾದಿ ಅರ್ಥಗಳನ್ನೂ ಕಲೆ ಎಂಬ ಪದಕ್ಕೆ ಆರೋಪಿಸಬಹುದು.

ಕಲಾ ಪ್ರತಿಭೆ ಎಂಬುದು ಮನುಷ್ಯನ ವಿಶಿಷ್ಟ ಗುಣವಾಗಿದೆ. ಕಲೆಗಳಿಂದ, ಕಲೆಗಳಿಗಾಗಿ, ಕಲೆಗಳಿಗೋಸ್ಕರ ಬದುಕುವ ಮನುಷ್ಯರು ಕಲಾ ವಾಸನೆಯನ್ನು ಅಳವಡಿಸಿಕೊಂಡಿರುತ್ತಾರೆ. ಕಲೆಗಳ ಮೂಲಕ ಮನುಷ್ಯರಿಗೆ ಉಳಿದವರ ಜತೆಯಲ್ಲಿ ಸಂವಹನ ನಡೆಸಲು ಸಾಧ್ಯ ವಾಗುತ್ತದೆ.

ಯಾವುದು ಕಲೆ? ಚಿತ್ರ ಬರೆಯುವ ಕ್ರಿಯೆ ಕಲೆಯಲ್ಲ. ಬರೆದ ಚಿತ್ರ ಕಲೆಯಾಗುತ್ತದೆ. ಕವಿತೆ ಬರೆಯುವ ಕ್ರಿಯೆ ಕಲೆಯಲ್ಲ, ಬರೆದ ಕವಿತೆ ಕಲೆಯಾಗುತ್ತದೆ. ಆದುದರಿಂದ ಸೃಷ್ಟಿ ಕ್ರಿಯೆ ಕಲೆಗೆ ಕಾರಣವಾಗುತ್ತದೆ. ಸೃಷ್ಟಿಯಾದ ಕೃತಿ ಮಾತ್ರ ಕಲೆಯಾಗುತ್ತದೆ.

ಕಲೆಗಳಲ್ಲಿ ಅನೇಕ ಹೊಸ ಪ್ರಕಾರಗಳನ್ನು ಸೃಷ್ಟಿಸುವ ಪ್ರತಿಭಾವಂತರು ಕೆಲವೊಮ್ಮೆ ಹುಟ್ಟಿಕೊಳ್ಳುತ್ತಾರೆ. ಕಲಾಪ್ರತಿಭೆಯು ಹುಟ್ಟಿನಿಂದಲೇ ಬಂದಿರುವ ವ್ಯಕ್ತಿಗಳಿಂದ ಹೊಸ ಪ್ರಕಾರದ ಸೃಷ್ಟಿ ಸಾಧ್ಯ. ಜನರ ಪ್ರೋಮತ್ತು ಬೆಂಬಲದಿಂದ ಆ ಕಲೆಯ ಬೆಳವಣಿಗೆ ಉಂಟಾಗುತ್ತದೆ. ಇಂತಹ ಕಲಾವಿದರ, ಪ್ರತಿಭೆಗಳ ಸೃಷ್ಟಿಗೆ ದೇವಸ್ಥಾನಗಳು ಕಾರಣವಾಗಿವೆ. ದೇವಸ್ಥಾನಗಳಲ್ಲಿ ನಡೆಯುವ ಜಾತ್ರೆ, ಆಚರಣೆಗಳು, ಪೂಜಾದಿ ಕ್ರಿಯೆಗಳು ಅನೇಕ ಕಲೆಗಳ ಉಗಮಕ್ಕೆ ಕಾರಣವಾಗಿವೆ. ಚೆಂಡೆ, ಮದ್ದಳೆ, ಸಂಗೀತ ಉಪಕರಣಗಳು ದೇವಸ್ಥಾನಗಳಲ್ಲಿ ಬಳಕೆಯಾಗುತ್ತಿದ್ದು, ಇಂದು ಅನೇಕ ದೃಶ್ಯಕಲೆಗಳಿಗೆ ಬಳಕೆಯಾಗುತ್ತಿವೆ. ಯಕ್ಷಗಾನ, ಕೂಡಿಯಾಟ್ಟಂ, ಕಥಕಳಿ, ಚಾಕ್ಯಾರ್‌ಕೂತ್ ಮೊದಲಾದ ಕಲೆಗಳು ದೇವಾಲಯ ಮೂಲದವೇ ಆಗಿವೆ.

ಉತ್ತಮ ಕಲೆಗಳ ಸೃಷ್ಟಿಗೆ ಮೂರು ಪ್ರಧಾನ ಅಂಶಗಳಿರಬೇಕಾಗಿದೆ – ಪ್ರತಿಭೆ, ಪ್ರಯತ್ನ ಮತ್ತು ಪಾಂಡಿತ್ಯ. ಪ್ರತಿಭಾಶಾಲಿಗಳು ಪ್ರಯತ್ನ ಮತ್ತು ಅಧ್ಯಯನಗಳಿಂದ ಕಲೆಗಳನ್ನು ಸೃಷ್ಟಿಸಿರುವುದನ್ನೂ ಕಾಣಬಹುದು.

ಕಲೆಗಳನ್ನು ಸಾಮಾನ್ಯ ಕಲೆಗಳೆಂದೂ, ವಿಶೇಷ ಕಲೆಗಳೆಂದೂ ಎರಡಾಗಿ ವಿಭಾಗಿಸ ಬಹುದು. ಅದರಲ್ಲಿ ಸಾಮಾನ್ಯ ಕಲೆಗಳು ಬಾಹ್ಯವೂ, ವಿಶೇಷ ಕಲೆಗಳು ಅಂತರಂಗಕ್ಕೂ ಸೇರಿವೆ. ಮೊದಲನೆಯದು ಮನುಷ್ಯನ ನಿತ್ಯ ಬದುಕಿಗೆ ಸಂಬಂಧಿಸಿದ್ದು. ಆಹಾರ, ವಸ್ತ್ರ, ವಸತಿಗಳಲ್ಲಿ ಕಾಣುವ ಅಭಿರುಚಿ ಸಾಮಾನ್ಯ ಕಲೆಗಳಾಗಿವೆ. ನೋಡುವ ಮೂಲಕ, ಕೇಳುವ ಮೂಲಕ, ಸಂತೋಷವನ್ನು ಅನುಭವಿಸುವ, ಚಿಂತನೆಗೆ ಹಚ್ಚುವವೇ ವಿಶೇಷ ಕಲೆಗಳು. ಸಂಗೀತ, ಸಾಹಿತ್ಯ, ನೃತ್ಯಾದಿಗಳೆಲ್ಲ ವಿಶೇಷ ಕಲೆಗಳಾಗಿವೆ.

ರಸಾನುಭವದ ಹಿನ್ನೆಲೆಯಲ್ಲಿ ಲಲಿತಕಲೆಗಳನ್ನು ನಾಲ್ಕು ರೀತಿಯಲ್ಲಿ ವಿಂಗಡಿಸಬಹುದು. ಭಕ್ತಿ ಕಲೆಗಳು, ಅದ್ಭುತ ಕಲೆಗಳು, ಶಿಲ್ಪಕಲೆಗಳು, ಪೂರ್ಣಕಲೆಗಳು. ಭಕ್ತಿಯ ಪ್ರಚಾರವೇ ಉದ್ದೇಶವಾಗಿರುವ ಕಲೆಗಳು ದೇವಸ್ಥಾನಗಳಲ್ಲಿ ಹುಟ್ಟಿಕೊಂಡು ಪ್ರಚಾರಕ್ಕೆ ಬಂದುವು. ಆಶ್ಚರ್ಯ ಹುಟ್ಟಿಸುವ ಅನೇಕ ಅಂಶಗಳಿರುವ ಕೇರಳದ ಅಮ್ಮಾನಾಟಂ, ಉಯ್ಯಾಲೆಯಾಟ ಮೊದಲಾದವುಗಳು ಅದ್ಭುತ ಕಲೆಗಳಾಗಿವೆ. ಎಲ್ಲ ರಸಗಳನ್ನೂ, ಭಾವಗಳನ್ನೂ ಪ್ರಕಟಿಸಲು ಸಾಮರ್ಥ್ಯವಿರುವ ಸಂಗೀತ, ಸಾಹಿತ್ಯ ನೃತ್ಯಾದಿಗಳು ಪೂರ್ಣ ಕಲೆಗಳು. ಶಿಲ್ಪಕಲೆಯು ತನ್ನ ಆಕಾರ ವೈಶಿಷ್ಟ್ಯದಿಂದ ಗಮನ ಸೆಳೆಯುತ್ತದೆ. ಯಕ್ಷಗಾನವು ಭಕ್ತಿ ಪ್ರಧಾನವಾದ ಕಲೆಯಾಗಿದೆ. ಸಂಗೀತ, ಸಾಹಿತ್ಯ, ನೃತ್ಯ ಶಿಲ್ಪಕಲೆ ಇವೆಲ್ಲವನ್ನೂ ಒಳಗೊಂಡಿರುವ ಯಕ್ಷಗಾನವು ಪೂರ್ಣ ಕಲೆಗಳಲ್ಲೂ ಪರಿಪೂರ್ಣವಾದ ಕಲೆ.

ಹಲವು ದೇಶ, ಹಲವು ಜಾತಿ, ಹಲವು ಪ್ರಾಯದವರನ್ನು ಆಕರ್ಷಿಸಿ ಸಂತೋಷಪಡಿಸಲು ಕಲೆಗಳಿಗೆ ಸಾಧ್ಯವಿದೆ. ಜನರಲ್ಲಿ ವಿವೇಕವನ್ನೂ, ಸಂಸ್ಕೃತಿಯನ್ನೂ ಬೆಳೆಸಲು ಕಲೆಗಳು ಕಾರಣವಾಗಿವೆ. ಕಲೆಗಳಿಗಿರುವ ಈ ಶಕ್ತಿ ಅದ್ಭುತವಾದುದು.

ಕಲೆಗಳು ಅದರಲ್ಲಿಯೂ ಮುಖ್ಯವಾಗಿ ದೃಶ್ಯಕಲೆಗಳು ಗಮನ ಸೆಳೆಯುವುದು ಅವುಗಳ ಆಕಾರದ ಮೂಲಕ, ಆಕಾರಗಳು ನಿರ್ಣಯವಾಗುವುದು ಅವುಗಳ ಭಾವ, ಭಂಗಿಗಳಿಂದ. ಭಾವ ಭಂಗಿಗಳ ಪ್ರಕಟಣೆಗೆ ಅತ್ಯಂತ ಅಗತ್ಯವಾದದ್ದು ಅವುಗಳ ಉಡುಗೆ ತೊಡುಗೆಗಳು ಅಥವಾ ವೇಷ ವಿಧಾನ. ಇದನ್ನು ನಾಟ್ಯಶಾಸ್ತ್ರದಲ್ಲಿ ಆಹಾರ್ಯ ಎಂದು ಹೆಸರಿಸಲಾಗಿದೆ.

ಆಹಾರ್ಯ ಎಂದರೇನು?

ಭರತನು ನಾಟ್ಯಶಾಸ್ತ್ರದಲ್ಲಿ ಹೇಳಿದ ಅಭಿನಯಾಂಗಗಳು ನಾಲ್ಕು. ಅವುಗಳು ಆಂಗಿಕ, ಆಹಾರ್ಯ, ಸಾತ್ವಿಕ ಮತ್ತು ವಾಚಿಕ. ಆಂಗಿಕ, ಸಾತ್ವಿಕ ಮತ್ತು ವಾಚಿಕಾದಿ ಅಭಿನಯಗಳು ರಂಗಭೂಮಿಯಲ್ಲಿ ಪಾತ್ರಗಳು ತೋರಿಸುವ ಅಭಿನಯಗಳು. ಆದರೆ ನಾಲ್ಕನೆಯದಾದ ಆಹಾರ್ಯಾಭಿನಯ ಬಹುತೇಕ ನೇಪಥ್ಯಕ್ಕೆ ಸಂಬಂಧಿಸಿದ್ದು. ಇವುಗಳಲ್ಲಿ ಬಣ್ಣ, ವೇಷಭೂಷಣ, ರಂಗಸಜ್ಜಿಕೆ ಮೊದಲಾದವುಗಳು ಸೇರುತ್ತವೆ. ಇವು ಹೊರಗಿನವು. ಆಹಾರ್ಯ ಎಂದರೆ ಹೊರಗಿನಿಂದ ಬಂದವು ಎಂದು ಅರ್ಥ. ಭಾರತದ ಪ್ರಾಚೀನ ರಂಗಭೂಮಿಯಲ್ಲಿ ರಂಗಸಜ್ಜಿಕೆಗಳ ಬಳಕೆ ಇದ್ದಿರಲಿಲ್ಲ. ಪಾತ್ರಗಳಿಗೆ ಅನುಗುಣವಾದ ವೇಷಭೂಷಣ ಹಾಗೂ ಬಣ್ಣಗಾರಿಕೆಗಳು ಬರುತ್ತಿದ್ದವು. ಆದರೆ ನಾಟ್ಯಶಾಸ್ತ್ರದಲ್ಲಿ ಆಹಾರ್ಯಾಭಿನಯ ಎಂದೇ ಗುರುತಿಸಿ ಅದನ್ನು ಅಭಿನಯದ ಒಂದು ಪ್ರಮುಖ ಅಂಗವಾಗಿಯೇ ಹೇಳಲಾಗಿದೆ.

ಆಹಾರ್ಯಾಭಿನಯ

ಮಿಕ್ಕ ಅಭಿನಯಗಳಿಂದ ಆಹಾರ್ಯ ಅಭಿನಯವು ಒಂದು ವೈಶಷ್ಟ್ಯದಿಂದ ಬೇರೆಯಾಗಿದೆ. ವಾಚಿಕ, ಸಾತ್ವಿಕ, ಆಂಗಿಕ ಈ ಮೂರೂ ಅಭಿನಯಗಳು ನೇರವಾಗಿ ನಟರ ಅಧೀನದಲ್ಲಿ ಇರುತ್ತವೆ. ಭಾಷೆ, ಮನಸ್ಸಿನೊಳಗಿನ ಭಾವನೆ, ಅಂಗಾಂಗಗಳ ಚಲನವಲನ ಇವುಗಳ ಬಗೆಗೆ ನಟರು ಕಲಿಯಬೇಕಾದರೂ, ಇವುಗಳನ್ನು ಕಾರ್ಯಗತ ಮಾಡುವುದು ಪೂರ್ತಿ ಅವರ ಸ್ವಾಧೀನದಲ್ಲಿದೆ. ಆದರೆ ಬಣ್ಣ, ಬಟ್ಟೆ, ಉಪಕರಣ ಇವೆಲ್ಲ ಹೊರಗಿನವು. ಇವುಗಳ ಗುಣಾವಗುಣ ಅವರ ಕೈಯಲ್ಲಿಲ್ಲ. ಆದುದರಿಂದ ಇವು ಆ-ಹಾರ್ಯ ಎಂದರೆ ಹೊರಗಿನಿಂದ ತಂದುದು ಎಂದು ಕರೆಯಲಾಗಿದೆ. ಈ ದೃಷ್ಟಿಯಿಂದ ಈಗಿನ ಕಾಲದ ಪ್ರಕಾಶಿಕ (Lighting) ಮತ್ತು ರಂಗಸಜ್ಜಿಕೆ (Stage Setting) ಇವೂ ಆಹಾರ್ಯಾಭಿನಯವೆನಿಸುವುದು (ನಾಟ್ಯಶಾಸ್ತ್ರ, ಪು. ೧೮೭).

ರಂಗಭೂಮಿಯ ಎಲ್ಲಾ ಪ್ರಯೋಗಗಳು ಹಾಗೂ ಅದರ ಯಶಸ್ಸು ಆಹಾರ್ಯಾಭಿ ನಯವನ್ನು ಅವಲಂಬಿಸಿದೆ. ವಾಸ್ತವ ಪ್ರಪಂಚದ ಜನರು ಅಥವಾ ಕಲಾವಿದರು ಪಾತ್ರವಾಗಿ ಪ್ರತ್ಯಕ್ಷವಾಗಲು ಆಹಾರ್ಯಗಳು ಬೇಕೇ ಬೇಕು. ಮನುಷ್ಯ ದೇಹವು ಪಾತ್ರಗಳ ದೇಹವಾಗಿ ಅವಸ್ಥಾಂತರಗೊಳ್ಳುವುದೇ ಆಹಾರ್ಯದಿಂದ. ಆಹಾರ್ಯದಲ್ಲಿ ಬಹಳ ಮುಖ್ಯವಾಗಿರುವುದು ವೇಷಭೂಷಣ ಮತ್ತು ಬಣ್ಣಗಾರಿಕೆ. ಇವುಗಳಿಗೆ ಪೂರಕವಾಗಿ ಒದಗುವುದು ಪಾತ್ರಗಳು ಹಿಡಿದುಕೊಳ್ಳುವ ಆಯುಧಗಳು, ರಂಗಭೂಮಿಯ ಇತರೆ ರಂಗಪರಿಕರಗಳು. ಈ ಹಿನ್ನೆಲೆಯಲ್ಲಿ ಭರತನು ಆಹಾರ್ಯಾಭಿನಯದಲ್ಲಿ ಪ್ರಮುಖವಾಗಿ ನಾಲ್ಕು ವಿಭಾಗಗಳನ್ನು ಗುರುತಿಸಿದ್ದಾನೆ. ಪುಸ್ತ (ಲೇಪನ), ಅಲಂಕಾರ, ಅಂಗರಚನಾ ಮತ್ತು ಸಂಜೀವ (ಹೊಂದಾಣಿಕೆ) ಎಂಬೀ ನೇಪಥ್ಯದ ನಾಲ್ಕು ಪ್ರಕಾರಗಳೇ ಆಹಾರ್ಯಾಭಿನಯದ ಪೋಷಕ ಸಂಗತಿಗಳು.

ನಾಟಕಗಳಾಗಲಿ, ನೃತ್ಯಗಳಾಗಲಿ ಅಥವಾ ಇನ್ನಿತರ ಯಾವುದೇ ರಂಗ ಚಟುವಟಿಕೆಯ ಸಂದರ್ಭದಲ್ಲಿ ಪಾತ್ರಗಳಿಗೆ ವೇಷ ವಿಧಾನಗಳು ಅತ್ಯಂತ ಅಗತ್ಯವಾಗಿವೆ. ಇದನ್ನೇ ಆಹಾರ್ಯ ಎಂದು ಕರೆಯಲಾಗುತ್ತದೆ. ಒಂದು ಪಾತ್ರದ ಪ್ರಕೃತಿಗೆ ತಕ್ಕಂತೆ ವೇಷವಿರಬೇಕಾಗುತ್ತದೆ. ಪ್ರಕೃತಿ ಎಂದರೆ ದೇಹ ಪ್ರಕೃತಿ, ಸ್ವಭಾವ ಪ್ರಕೃತಿ, ಜೀವನ ಪ್ರಕೃತಿ, ಪರಂಪರೆಯ ಪ್ರಕೃತಿ ಸಹಿತವಾದ ಕಥಾಪಾತ್ರದ ತಕ್ಷಣದ ಪ್ರಕೃತಿಯವರೆಗೆ ಎಲ್ಲವೂ ಒಳಗೊಳ್ಳುತ್ತದೆ. ಒಂದು ಪಾತ್ರದ ನೆಲೆಯಿಂದ ನೋಡಿದರೆ ನಿರ್ದಿಷ್ಟ ಸನ್ನಿವೇಶದಲ್ಲಿ ಪಾತ್ರ ಪ್ರಕಟವಾಗುವ ಬಗೆಯನ್ನು ಇವು ಸೂಚಿಸುತ್ತವೆ. ಆದರೆ ಕಲಾ ಮಾಧ್ಯಮದ ದೃಷ್ಟಿಯಿಂದ ನೋಡಿದರೆ ಆಯಾ ಮಾಧ್ಯಮದ ನೃತ್ಯಾದಿ ಅಭಿನಯಗಳ ಸ್ವರೂಪಕ್ಕೆ ಅನುಗುಣವಾಗಿ ವೇಷ ವಿಧಾನಗಳಿರ ಬೇಕಾದುದೂ ಅಷ್ಟೇ ಮುಖ್ಯ. ಒಂದು ಪಾತ್ರ ರಂಗಭೂಮಿಯ ಆಯಾ ಕಲಾ ಮಾಧ್ಯಮ ಗಳಲ್ಲಿ ಬೇರೆ ಬೇರೆ ಸ್ವರೂಪಗಳಲ್ಲಿ ಪ್ರಕಟವಾಗುತ್ತಿರುತ್ತವೆ. ದುಷ್ಯಂತ ಎಂಬ ಕಥಾ ಪಾತ್ರವು ನಾಟಕ, ಯಕ್ಷಗಾನ ಮೊದಲಾದ, ಕಲಾ ಮಾಧ್ಯಮಗಳಲ್ಲೆಲ್ಲ ಮಾಧ್ಯಮದ ಪ್ರಕೃತಿಗನುಗುಣವಾದ ವೇಷ ವಿಧಾನದಲ್ಲಿಯೇ ಪ್ರತ್ಯಕ್ಷವಾಗುತ್ತದೆ. ಇಂತಹ ವೇಷ ವಿಧಾನಗಳನ್ನು ರೂಪಿಸುವಲ್ಲಿ ಆಯಾ ಕಲಾ ಮಾಧ್ಯಮಗಳು ಪ್ರಚಲಿತದಲ್ಲಿರುವ ದೇಶದ ಸಂಸ್ಕೃತಿ ಹಾಗೂ ಸ್ವಭಾವಗಳೂ ಪ್ರಮುಖ ಪಾತ್ರವಹಿಸುತ್ತವೆ.

ವೇಷ ವಿಧಾನವೆಂದರೆ ಮುಖ ಹಾಗೂ ಶರೀರದಲ್ಲಿ ಬಳಸುವ ಬಣ್ಣಗಳು ಹಾಗೂ ಅವುಗಳನ್ನು ಉಪಯೋಗಿಸಿ ಮಾಡುವ ಬಣ್ಣಗಾರಿಕೆ, ವಸ್ತ್ರ, ಆಭರಣ ಹಾಗೂ ಕೇಶಾಲಂಕಾರಗಳು, ಆಯುಧಗಳು ಎಲ್ಲವೂ ಸೇರುತ್ತವೆ. ರಂಗಸಜ್ಜಿಕೆಯೂ ಇದರಲ್ಲಿಯೇ ಒಳಗೊಳ್ಳುತ್ತದೆ. ಆಸನಗಳು, ಚಾಮರ, ಸೀಗುರಿ ಬೆಳ್ಗೊಡೆ, ಧ್ವಜ ಮೊದಲಾದ ಅಲಂಕಾರ ಗಳು, ದೀಪ, ದೊಂದಿ, ರಾಳದ ಹುಡಿ ಮೊದಲಾದ ಪರಿಕರಗಳು, ಪಾತ್ರಗಳ ವಾಹನಗಳು ಇವುಗಳೆಲ್ಲ ಒಂದು ಕಥಾ ಪಾತ್ರದ ತಕ್ಷಣದ ಸ್ವಭಾವವನ್ನು ಪ್ರಕಟಿಸಲು ಬಳಸುವ ಆಹಾರ್ಯಗಳು.

ಭರತಮುನಿಯು ನಾಟ್ಯಶಾಸ್ತ್ರದ ಆರನೆಯ ಅಧ್ಯಾಯದಲ್ಲಿ ಹೀಗೆ ಹೇಳಿದ್ದಾನೆ –

ರಸಾಭಾವಾಹ್ಯಭಿನಯಾ
ಧವಿ ವೃತ್ತಿಃ ಪ್ರವೃತ್ತಯಃ
ಸಿದ್ದಿಃ ಸ್ವರಾಸ್ಥೋತೊದ್ಯಂ
ಗಾನಂ ಪ್ರಕೃತಿ ರೇವ
ಉಪಚಾರಸ್ಥಾ ವಿತ್ರಾ
ಮಂಟಪೋಶ್ಚೇತಿ ಸರ್ವಶಃ
ತ್ರಯೋದಶವಿಧೋ ಹ್ಯೇಷ
ಹ್ಯಾದಿಷ್ಟೋ ನಾಟ್ಯ ಸಂಗ್ರಹಃ

ರಸ, ಭಾವ, ಅಭಿನಯ, ಧರ್ಮಿ, ವೃತ್ತಿ, ಪ್ರವೃತ್ತಿ, ಸಿದ್ದಿ, ಸ್ವರ, ಆತೋದ್ಯಂ, ಹಾಡು, ಪ್ರಕೃತಿ, ಉಪಚಾರ, ಮಂಟಪ ಹೀಗೆ ಹದಿಮೂರು ಅಂಶಗಳಿಂದ ನಾಟ್ಯ ಉಂಟಾಗುತ್ತದೆ. ಇವುಗಳಲ್ಲಿ ರಸ ಬಹಳ ಮುಖ್ಯವಾದ ಅಂಶವಾಗಿದೆ. ಉಳಿದ ಹನ್ನೆರಡು ಅಂಶಗಳು ರಸನಿಷ್ಪತ್ತಿಯ ಘಟಕಗಳಾಗಿವೆ. ಇದರಲ್ಲಿ ಅಭಿನಯ ಎಂಬ ವಿಭಾಗಕ್ಕೆ ಸೇರಿದ ಆಹಾರ್ಯವೂ ಕೂಡಾ ರಸನಿಷ್ಪತ್ತಿಗಿರುವ ಪ್ರಮುಖ ಘಟಕವೇ ಆಗಿದೆ. ಪಾತ್ರಗಳ ಹಲವು ಅವಸ್ಥೆಗಳ ಪ್ರಕೃತಿಗಳನ್ನು ವೇಷ ವಿಧಾನಗಳಿಂದ ಸಿದ್ಧಪಡಿಸಿಕೊಂಡರೆ ರಂಗದಲ್ಲಿ ಅಭಿನಯದ ಬಹು ಅಂಶ ಸಾಧಿತವಾದಂತಾಗುತ್ತದೆ.

ನಾಟ್ಯಶಾಸ್ತ್ರದಲ್ಲಿ ಭಾರತೀಯ ರಂಗ ಸಂಪ್ರದಾಯಗಳಿಗೆ ಅನ್ವಯವಾಗುವ ನಿಯಮಗಳನ್ನು ಹಾಗೂ ವೇಷ ವಿಧಾನಗಳನ್ನು ಹೇಳಲಾಗಿದೆ. ಆಯಾಪಾತ್ರಗಳು ಧರಿಸ ಬೇಕಾದ ವೇಷಗಳ ಬಣ್ಣಗಳನ್ನು ಹೇಳಿದೆ. ನಾಟ್ಯಶಾಸ್ತ್ರದಲ್ಲಿ ಹೇಳಿದ ಆಹಾರ್ಯಾಭಿನಯದ ಅನೇಕ ಅಂಶಗಳು ಇಂದಿಗೂ ಭಾರತೀಯ ರಂಗಭೂಮಿಯ ಕಲಾ ಪ್ರಕಾರಗಳಲ್ಲಿ ಕಾಣಬಹುದು. ಆದರೆ ನಾಟ್ಯಶಾಸ್ತ್ರದಲ್ಲಿ ಹೇಳಿಲ್ಲದ ಅನೇಕ ಸಂಗತಿಗಳೂ ಭಾರತೀಯ ರಂಗಭೂಮಿಯ ಪರಂಪರೆಯಲ್ಲಿ ಇದೆ ಎಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶ. ಯಕ್ಷಗಾನ, ಕೇರಳದ ಕಥಕಳಿ ಮೊದಲಾದ ಕಲಾ ಪ್ರಕಾರಗಳಲ್ಲಿ ಇರುವ ಒಟ್ಟು ಸಂಪ್ರದಾಯವನ್ನು ಮುಖ್ಯವಾಗಿ ಹೆಸರಿಸಬಹುದು.

ಬಣ್ಣಗಳನ್ನು ಉಪಯೋಗಿಸಿ ಮುಖ ಹಾಗೂ ಶರೀರಗಳಲ್ಲಿ ಕೃತಕವಾದ ಪರಿವರ್ತನೆ ತರುವುದನ್ನು ನಾಟ್ಯಶಾಸ್ತ್ರದಲ್ಲಿ ಬಣ್ಣಗಾರಿಕೆ ಎಂದು ಹೇಳಲಾಗಿದೆ. ಇದಕ್ಕೆ ಬೇಕಾದ ಬಣ್ಣಗಳನ್ನು ಆಯಾ ಕಾಲದಲ್ಲಿ ನೇಪಥ್ಯದಲ್ಲಿ ಸಿದ್ಧಪಡಿಸುವುದು ಕ್ರಮ. ಪ್ರಾಚೀನ ದೃಶ್ಯಕಲೆಗಳಲ್ಲಿ ಮುಖವರ್ಣಿಕೆಗೆ ಬಣ್ಣಗಳ ಬಳಕೆಯಾಗುತ್ತಿತ್ತು. ಶರೀರದ ಬಣ್ಣ ಬದಲಾವಣೆಯೂ ಒಂದು ಅಪೂರ್ವವಾದ ಪ್ರಕ್ರಿಯೆಯಾಗಿತ್ತು. ಯಕ್ಷಗಾನದಲ್ಲೂ ಕೆಲವೊಂದು ಪಾತ್ರಗಳ ಮೈಗೆ ಬಣ್ಣ ಬಳಿಯುವ ಸಂಪ್ರದಾಯವಿದೆ. ಮುಖದ ಬಣ್ಣವನ್ನು ಅನುಸರಿಸಿ ಅಂಗಿ ಹಾಗೂ ವಸ್ತ್ರಗಳನ್ನು ಧರಿಸುವುದು ಪದ್ಧತಿ. ‘ಶುದ್ಧೋ ವಿಚಿತ್ರೋ ಮಲಿನಃ ಸ್ತ್ರೀ ವಿಧೋ ವೇಷ ಉಚ್ಯತೇ’ ನಾಟ್ಯಶಾಸ್ತ್ರವು ವೇಷಗಳನ್ನು ಶುದ್ಧ, ವಿಚಿತ್ರ, ಮಲಿನ ಎಂದು ಮೂರಾಗಿ ವಿಭಾಗಿಸಿದೆ. ದೇವ ವಂದನೆ, ಮಂಗಳ ಕರ್ಮ, ವ್ರತಾಚರಣೆ, ವಿಶೇಷ ದಿವಸಗಳು, ವಿವಾಹ ವಿಧಿ, ಪುಣ್ಯಕರ್ಮಗಳೇ ಮೊದಲಾದ ಸಂದರ್ಭಗಳಲ್ಲಿ ಸ್ತ್ರೀ ಪುರುಷರು ಭೇದವಿಲ್ಲದೆ ಎಲ್ಲವೂ ಶುದ್ಧವೇಷಗಳೆನಿಸುತ್ತವೆ. ಯಕ್ಷಗಾನದಲ್ಲಿ ಆಯಾ ಪಾತ್ರಗಳ ಗುಣಧರ್ಮವನ್ನು ನೋಡಿಕೊಂಡು ಅವುಗಳನ್ನು ನಿಷ್ಕರ್ಷಿಸಲಾಗುತ್ತದೆ. ಪೌರಾಣಿಕ ಕತೆಗಳೇ ಯಕ್ಷಗಾನದ ಕತೆಗಳಾದ್ದರಿಂದ ಅವುಗಳ ನೆಲೆಯಲ್ಲಿಯೇ ಪಾತ್ರಗಳ ಗುಣಧರ್ಮ ಗಳನ್ನು ನಿರ್ಧರಿಸಲಾಗುತ್ತದೆ. ಈ ನೆಲೆಯಲ್ಲಿ ದೇವೇಂದ್ರ, ರಾಮಲಕ್ಷ್ಮಣರು, ಅರ್ಜುನ ಮೊದಲಾದ ಪಾತ್ರಗಳನ್ನು ಶುದ್ಧ ವೇಷಗಳ ಸಾಲಿಗೆ ಸೇರಿಸಬಹುದು. ಕೂಡಿಯಾಟ್ಟಂ, ಕಥಕಳಿ ಮೊದಲಾದ ಕಲೆಗಳಲ್ಲಿ ‘ಮಿನುಕ್ಕು ವೇಷಗಳು’ (ಇವುಗಳ ಬಗೆಗೆ ಮುಂದೆ ಅಧ್ಯಾಯ ೧೦ರಲ್ಲಿ ವಿವರಿಸಲಾಗಿದೆ) ಎಂದು ಕರೆಯುವ ಪಾತ್ರ ವರ್ಗಗಳೆಲ್ಲ ಈ ಸಾಲಿನಲ್ಲಿ ಸೇರಿಸಬಹುದು. ಸ್ತ್ರೀ ವೇಷಗಳು, ಬ್ರಾಹ್ಮಣರು, ಮಹರ್ಷಿಗಳು ಮುಖ್ಯವಾಗಿ ಈ ವರ್ಗದಲ್ಲಿ ಒಳಗೊಳ್ಳುತ್ತಾರೆ. ವಿನಯ ಗುಣವುಳ್ಳವುಗಳೇ ಶುದ್ಧ ವೇಷಗಳೆಂದು ಹೇಳಬಹುದು.

ದೇವದಾನವರು, ಯಕ್ಷರು, ಗಂಧರ್ವರು, ಅರಸರು, ಪ್ರೇಮಿಗಳು ವಿಚಿತ್ರ ವೇಷದವರಾಗುತ್ತಾರೆ. ಕೂಡಿಯಾಟ್ಟಂ, ಕಥಕಳಿಗಳ ಪಚ್ಚೆ, ಕತ್ತಿ ಕೆಂಪು ತಾಡಿ ವೇಷಗಳು ಈ ವಿಭಾಗಕ್ಕೆ ಸೇರುತ್ತವೆ. ಯಕ್ಷಗಾನದ ರಾಜಸ ಪ್ರವೃತ್ತಿಯ ವೇಷಗಳನ್ನು ಈ ಸಾಲಿನಲ್ಲಿ ಗುರುತಿಸಬಹುದು. ಹುಚ್ಚರು, ಮದ್ಯಪಾನಿಗಳು, ದಾರಿ ಹೋಕರು, ಕಿರಾತರು ಇವೆಲ್ಲ ಮಲಿನ ವೇಷಗಳು. ಯಕ್ಷಗಾನದ ಕಾಟು ಬಣ್ಣ, ಕಿರಾತ ಮೊದಲಾದವುಗಳನ್ನು ಈ ವರ್ಗಕ್ಕೆ ಸೇರಿಸಬಹುದು. ಕೂಡಿಯಾಟ್ಟಂ, ಕಥಕಳಿಗಳಲ್ಲಿ ಕಾಟುಬಣ್ಣ, ಕರಿವೇಷಗಳನ್ನು ಈ ಗುಂಪಿನಲ್ಲಿ ಗುರುತಿಸಲಾಗುತ್ತದೆ. ನಾಟ್ಯಶಾಸ್ತ್ರ ಪ್ರಣೀತ ಕಲೆಗಳಲ್ಲಿ ಶುದ್ಧ ವೇಷಗಳಿಗೆ ಶುಭ್ರವಸ್ತ್ರ ಹಾಗೂ ಮಲಿನ ವೇಷಗಳಿಗೆ ಕಪ್ಪು ಬಟ್ಟೆಯನ್ನು ಧರಿಸುವುದು ಸಂಪ್ರದಾಯ.

ಯಕ್ಷಗಾನ, ತೆಯ್ಯಂ, ಬೂತೊ, ಕೂಡಿಯಾಟಂ, ಕಥಕಳಿ ಮೊದಲಾದ ರಂಗಪ್ರಕಾರ ಗಳಲ್ಲೆಲ್ಲ ಮುಖ ವರ್ಣಿಕೆಗಳಿಗೆ ಬಳಸುವ ಬಣ್ಣಗಳಲ್ಲಿ ಸಾಮ್ಯವಿದೆ. ಬಣ್ಣಗಾರಿಕೆಗೆ ಬಳಸುವ ವಸ್ತುಗಳೂ ಸಾಮಾನ್ಯವಾಗಿ ಒಂದೇ ಆಗಿವೆ. ನಾಟ್ಯಶಾಸ್ತ್ರದಲ್ಲಿ ಮೂಲ ಬಣ್ಣಗಳು, ಸಂಯುಕ್ತ ಬಣ್ಣಗಳು ಮತ್ತು ಉಪಬಣ್ಣಗಳೆಂದು ಬಣ್ಣಗಳನ್ನು ವಿಭಾಗಿಸಲಾಗಿದೆ. ನಾಟ್ಯಶಾಸ್ತ್ರದಲ್ಲಿ ಹೇಳಿದಂತೆ ಬಿಳಿ, ನೀಲಿ, ಹಳದಿ ಮತ್ತು ಕೆಂಪು ಇವು ನಾಲ್ಕು ಮೂಲ ಬಣ್ಣಗಳು. ಕಪ್ಪು ಶೂನ್ಯದ ಬಣ್ಣವಾಗಿದೆ. ಆದುದರಿಂದ ಅದು ಮೂಲ ಬಣ್ಣದ ಗುಂಪಿಗೆ ಸೇರಿಲ್ಲ. ‘ಬಿಳಿ’ಯನ್ನು ಮೂಲ ಬಣ್ಣವೆಂದು ನಾಟ್ಯಶಾಸ್ತ್ರದಲ್ಲಿ ಗುರುತಿಸಿದ್ದರೂ ಅದು ಏಳು ಬಣ್ಣಗಳು ಸೇರಿದ ಮಿಶ್ರ ಬಣ್ಣವಾಗಿದೆ. ಎರಡು ಬಣ್ಣಗಳು ಸೇರಿದ್ದರೆ ಅದು ಸಂಯುಕ್ತ ಬಣ್ಣವೆಂದೂ ಮೂರು ಅಥವಾ ನಾಲ್ಕು ಬಣ್ಣಗಳು ಸೇರಿದರೆ ಅದು ಬಸವರ್ಣವೆಂದೂ ಕರೆಯಲಾಗುತ್ತದೆ.

ಅಂಗಗಳ ಬಣ್ಣ ಬದಲಿಸಲು ಬಿಳಿ, ನೀಲಿ, ಹಳದಿ, ಕೆಂಪು ಬಣ್ಣಗಳನ್ನೇ ಬಳಸಬೇಕು. ರೇಖಾವಿನ್ಯಾಸಗಳಿಗೆ ಮಿಶ್ರ ಹಾಗೂ ಸಂಯುಕ್ತ ಬಣ್ಣಗಳನ್ನು ಬಳಸುತ್ತಾರೆ. ಬಿಳಿ ಹಾಗೂ ಕೆಂಪು ಮಿಶ್ರಣದಿಂದ ತಾವರೆಯ ನಸುಗೆಂಪು ಮತ್ತು ಹಳದಿ ಹಾಗೂ ನೀಲಿಯ ಮಿಶ್ರಣದಿಂದ ಹಸಿರು ಬಣ್ಣ ಉಂಟಾಗುತ್ತದೆ.

ಬಿಳಿ ಮತ್ತು ನೀಲಿಗಳನ್ನು ಬೆರೆಸಿದರೆ ಕಾರಂಡವ, ಬಿಳಿ ಮತ್ತು ಹಳದಿಗಳನ್ನು ಬೆರೆಸಿದರೆ ಪಾಂಡುರ ಬಣ್ಣ, ನೀಲಿ ಕೆಂಪು ಬೆರೆಸಿದರೆ ಕಾಷಾಯಬಣ್ಣ, ಕೆಂಪು ಹಳದಿ ಮಿಶ್ರಣದಿಂದ ಗೌರಬಣ್ಣ. ಇವಲ್ಲದೆ ಮೂರು ನಾಲ್ಕು ಬಣ್ಣಗಳ ಮಿಶ್ರಣದಿಂದ ಅನೇಕ ಬಸವರ್ಣಗಳನ್ನು ತಯಾರಿಸಬಹುದು.

ಬಣ್ಣಗಳ ಮಿಶ್ರಣದ ಸಂದರ್ಭದಲ್ಲಿ ಕಡುಬಣ್ಣದ ಒಂದು ಅಂಶಕ್ಕೆ ತಿಳಿ ಬಣ್ಣದ ಎರಡು ಅಂಶ ಎಂಬುದು ನಿಯಮ. ಆದರೆ ನೀಲಿ ಬಣ್ಣದ ನಿಯಮ ಮಾತ್ರ ವ್ಯತ್ಯಸ್ಥವಾಗಿದೆ. ನೀಲಿ ಬಣ್ಣದ ಒಂದು ಅಂಶಕ್ಕೆ ಉಳಿದ ಬಣ್ಣಗಳ ನಾಲ್ಕು ಅಂಶ ಸೇರಿಸಬೇಕು. ನೀಲಿ ಬಣ್ಣವು ಉಳಿದ ಎಲ್ಲ ಬಣ್ಣಗಳಿಗಿಂತ ಕಡುವಾಗಿದೆ. ಈ ಬಣ್ಣಗಳ ಲೇಪನದಿಂದ ಕಲಾವಿದ ಸ್ವಂತ ಮೈಬಣ್ಣದ ಬದಲು ಇನ್ನೊಂದು ಮೈಬಣ್ಣವನ್ನು ಪಡೆದು ನಾಟ್ಯಧರ್ಮೀ ಪ್ರಯೋಗದ ಪಾತ್ರವಾಗುತ್ತಾನೆ. ಸ್ವಂತದ ಬಣ್ಣವನ್ನು ಕಳೆದುಕೊಂಡ ಮೇಲೆ ಕಲಾವಿದ ತಾನು ಯಾವ ಪಾತ್ರವನ್ನು ವಹಿಸುತ್ತಾನೋ ಆ ಪಾತ್ರದ ಗುಣಕ್ಕೆ ಪೂರಕವಾದ ಬಣ್ಣಗಳ ವೇಷಗಳನ್ನು ಮಾಡಬೇಕು. ಇದ್ದ ದೇಹದ ಸ್ಥಿತಿಯನ್ನು ಬಿಟ್ಟು ಪರಭಾವವನ್ನು ತಾಳುವಂತೆ ಕಲಾವಿದ ತನ್ನ ವಾಸ್ತವದ ಬಣ್ಣ ಬಟ್ಟೆಗಳನ್ನು ಬಿಟ್ಟು ಪಾತ್ರದ ಬಣ್ಣ ಬಟ್ಟೆಗಳನ್ನು ಪಡೆಯುತ್ತಾನೆ. ಆಗ ಕಲಾವಿದ ಸ್ವಂತದ ವ್ಯಕ್ತಿತ್ವವನ್ನು ಮರೆತು ಪಾತ್ರದ ವ್ಯಕ್ತಿತ್ವವನ್ನು ತಾಳಿಕೊಳ್ಳುತ್ತಾನೆ. ಬಣ್ಣಗಳನ್ನಾಗಲಿ, ವೇಷಗಳನ್ನಾಗಲಿ ತೊಡುವಾಗ ಪಾತ್ರದ ದೇಶ, ಜಾತಿ, ವಯಸ್ಸು ಇತ್ಯಾದಿ ಗಳನ್ನು ತಿಳಿದುಕೊಂಡು ಅದಕ್ಕೆ ಅನುಗುಣವಾದ ಅಂಗರಚನೆಯನ್ನು ಮಾಡಬೇಕು. ಈ ತೆರನ ನಿಯಮಗಳನ್ನು ಉಲ್ಲೇಖಿಸಿದ ನಾಟ್ಯಶಾಸ್ತ್ರವು ಬೇರೆ ಬೇರೆ ಪಾತ್ರಗಳ ಬಣ್ಣಗಳನ್ನು ಸಹ ವಿವರಿಸುತ್ತದೆ.

ನಾಟ್ಯಲೋಚನದಲ್ಲಿ ಮಾತೃಗುಪ್ತನು ಬಣ್ಣ ಹಾಗೂ ವೇಷ ವಿಧಾನದ ವಿವರಗಳನ್ನು ಹೇಳಿದ್ದಾನೆ. ಭರತ ಹೇಳುವ ಮೂಲ ಬಣ್ಣಗಳನ್ನೆ ಮಾತೃಗುಪ್ತನೂ ಹೇಳಿದ್ದಾನೆ. ಈ ಮೂಲ ಬಣ್ಣಗಳ ಮಿಶ್ರಣದಿಂದ ಉಂಟಾಗುವ ಮಿಶ್ರಬಣ್ಣವನ್ನು ವಿವರಿಸಿದ್ದಾನೆ. ಹಳದಿ ಮತ್ತು ನೀಲಿ ಬಣ್ಣಗಳ ಬೆರಕೆಯು ಕಪೋತ ವರ್ಣವಾಗುತ್ತದೆ. ಬೇರೆ ಬೇರೆ ಪಾತ್ರಗಳ ಬೇರೆ ಬೇರೆ ಬಣ್ಣಗಳನ್ನು ವಿವರಿಸುವಲ್ಲಿ ರಾಜವೇಷಗಳಿಗೆ, ಸುಖವಂತರಿಗೆ ಮೊದಲಾದ ವೇಷಗಳು ಬಿಳಿ ಬಣ್ಣದಿಂದ ಕೂಡಿರಬೇಕು ಎಂದು ಹೇಳುತ್ತಾನೆ. ನಾಟ್ಯಶಾಸ್ತ್ರದಲ್ಲಿ ಹೇಳುವಂತೆ ರಾಜರದು ಛದ್ಮವರ್ಣ ಇಲ್ಲವೆ ಶ್ಯಾಮ ಅಥವಾ ಗೌರವರ್ಣ. ಸುಖಿಗಳಾದವರಿಗೆ ಗೌರ ಬಣ್ಣ. ಕೆಟ್ಟ ಕೆಲಸ ಮಾಡುವವರು ಗ್ರಹ-ವ್ಯಾಧಿ ಪೀಡಿತರು, ತಪಸ್ಸಿನಲ್ಲಿರುವವರು, ಶ್ರಮಜೀವಿಗಳು, ಕೀಳು ಜಾತಿಯಲ್ಲಿ ಹುಟ್ಟಿದವರದು ಕಪ್ಪು ಬಣ್ಣ. ಸಾಮಾನ್ಯವಾಗಿ ತಪಸ್ಸಿನಲ್ಲಿದ್ದವರನ್ನು ಹೊರತುಪಡಿಸಿ ಋಷಿಗಳಿಗೆ ಬೋರೆ ಹಣ್ಣಿನ ಬಣ್ಣವನ್ನು ಭರತಮುನಿ ನಿರ್ದೇಶಿಸಿದ್ದಾನೆ.

ಭಾರತೀಯ ರಂಗ ಪರಂಪರೆಯಲ್ಲಿ ವಿವಿಧ ಬಣ್ಣಗಳಿಗೆ ವಿವಿಧ ಅರ್ಥಗಳನ್ನು ಲಾಕ್ಷಣಿಕರು ಕಲ್ಪಿಸಿದ್ದಾರೆ. ಒಂದು ಪಾತ್ರದ ಗುಣ ಸ್ವಭಾವಗಳಿಗೆ ಅನುಗುಣವಾಗಿ ಹಾಗೂ  ಆಯಾ ಪಾತ್ರ ಪ್ರಯೋಗದ ಸಂದರ್ಭದಲ್ಲಿ ಪ್ರಕಟಿಸಬೇಕಾದ ಭಾವವನ್ನು ಲಕ್ಷಿಸಿ ಅವುಗಳ ಬಣ್ಣಗಳನ್ನು ನಿರ್ಣಯಿಸಲಾಗುತ್ತದೆ. ಅನೇಕ ಕಲಾವಿದರು ಲಾಕ್ಷಣಿಕರ ನಿರ್ದೇಶನಗಳನ್ನು ಓದಿಯೋ, ಪಾರಂಪರಿಕ ಅನುಭವದಿಂದ ತಿಳಿದೋ ಕಲಾ ಪ್ರಯೋಗದ ವೇಳೆ ಬಳಸುತ್ತಾ ಬಂದಿದ್ದಾರೆ. ಆದರೆ ಇವು ಕಲೆಯಿಂದ ಕಲೆಗೆ ಭಿನ್ನವಾಗುವುದನ್ನು ಕೂಡಾ ಗಮನಿಸಬಹು ದಾಗಿದೆ. ಸಾಳ್ವ ಕವಿ ರಸರತ್ನಾಕರದಲ್ಲಿ ವಿವಿಧ ರಸಗಳಿಗೆ ವಿವಿಧ ಬಣ್ಣಗಳನ್ನೇ ನಿರ್ದೇಶಿ ಸಿದ್ದಾನೆ. ಅವನ ಪ್ರಕಾರ ಶೃಂಗಾರಕ್ಕೆ ಹಸಿರು, ಹಾಸ್ಯಕ್ಕೆ ಬಿಳಿ, ರೌದ್ರಕ್ಕೆ ಕೆಂಪು, ಕರುಣಕ್ಕೆ ಕಪ್ಪು, ವೀರಕ್ಕೆ ಅತಿ ಬಿಳುಪು, ಭಯಕ್ಕೆ ಹೊಗೆ ಕಪ್ಪು, ಅದ್ಭುತಕ್ಕೆ ಹಳದಿ, ಬೀಭತ್ಸಕ್ಕೆ ಹೊಳೆಯುವ ಕಪ್ಪು, ಶಾಂತಕ್ಕೆ ಸ್ಫಟಿಕದಂತಹ ಬಿಳಿ (ನೋಡಿ ತಾಳ್ತಜೆ ಕೃಷ್ಣಭಟ್ಟ: ೧೯೭೪).

ಕೂಡಿಯಾಟಂ, ಕಥಕಳಿಗಳು ಲಾಕ್ಷಣಿಕರ ಈ ನಿರ್ದೇಶವನ್ನು ಒಪ್ಪಿಕೊಂಡೇ ಪ್ರಯೋಗಗೊಳ್ಳುವುದನ್ನು ಕಾಣಬಹುದು. ಬಿಳಿ ಮನಯೋಲ, ನೀಲಿ ಮನಯೋಲ, ಚಾಯಿಲ್ಯ (ಕೆಂಪು), ಕಾಡಿಗೆ (ಮಸಿ) ಎಂಬೀ ಸಾಂಕೇತಿಕ ಹೆಸರುಗಳಿಂದ ಈ ಮೂಲ ಬಣ್ಣಗಳನ್ನು ಗುರುತಿಸಲಾಗುತ್ತದೆ. ಮನಯೋಲ ತೆಂಗಿನೆಣ್ಣೆ ಬೆರೆಸಿ ಅರೆದ ಮಿಶ್ರಣವೇ ಬಿಳಿ ಬಣ್ಣ. ಇದಕ್ಕೆ ನೀಲಿ ಸೇರಿಸಿದರೆ ನೀಲಿ ಬಣ್ಣವಾಗುತ್ತದೆ. ಚಾಯಿಲ್ಯ ಹಾಗೂ ಚುಟ್ಟಿ ಅಕ್ಕಿಯನ್ನು ಬೆರೆಸಿ ಕೆಂಪು ಬಣ್ಣವನ್ನು ಮಾಡುತ್ತಾರೆ. ಚಾಯಿಲ್ಯ ಅಪೂರ್ವ ಹಾಗೂ ಬೆಲೆ ಬಾಳುವುದರಿಂದ ಈಗ Zinc Oxide ನಂತಹ ಆಧುನಿಕ ಬಣ್ಣಗಳು ಬಳಕೆಯಾಗುತ್ತಿವೆ. ಎಳ್ಳೆಣ್ಣೆ ದೀಪದ ಮಸಿಯನ್ನು ಕಪ್ಪು ಬಣ್ಣವಾಗಿ ಬಳಸಲಾಗುತ್ತಿದೆ. ಒಟ್ಟಿನಲ್ಲಿ ನಾಟ್ಯಶಾಸ್ತ್ರ ದಲ್ಲಿ ಹೇಳಿರುವ ಮೂಲ ಬಣ್ಣಗಳು ಹಾಗೂ ಕಪ್ಪುಬಣ್ಣವನ್ನು ಸೇರಿಸಿ ಮಾಡುವ ಸಂಯುಕ್ತ ವರ್ಣಗಳನ್ನು ಕೂಡಿಯಾಟಂ, ಕಥಕಳಿ, ಕೃಷ್ಣನಾಟಂ, ತುಳ್ಳಲ್ ಮೊದಲಾದ ದೃಶ್ಯಕಲೆಗಳಲ್ಲಿ ಮುಖ ವರ್ಣಿಕೆಗಾಗಿ ಬಳಸಲಾಗುತ್ತಿದೆ.

ಕಾಲ, ದೇಶ, ಪ್ರಾಯ, ವರ್ಗಗಳ ಹಿನ್ನೆಲೆಯಲ್ಲಿ ಯಾವ ಬಣ್ಣಗಳನ್ನು ಹೇಗೆ ಬಳಸಬೇಕೆಂದು ನಾಟ್ಯಶಾಸ್ತ್ರ ವಿವರಿಸುತ್ತದೆ. ದೇವತೆಗಳು, ಯಕ್ಷರು, ಅಪ್ಸರೆಯರ ಬಣ್ಣ ಗೌರ ವರ್ಣ. ಅಂದರೆ ಕೆಂಪು ಮಿಶ್ರಿತ ಹಳದಿ. ನಕ್ಷತ್ರಗಳು, ಸಮುದ್ರ, ಹಿಮವಾನ್, ಗಂಗೆ ಮೊದಲಾದ ಪಾತ್ರಗಳಿಗೆ ಬಿಳಿಬಣ್ಣ, ರಾಜರಿಗೆ ನಸುಗೆಂಪು ಅಥವಾ ಗೌರವರ್ಣ (ಅಥವಾ ನೀಲವರ್ಣವನ್ನು ಬಳಸಬಹುದು). ಸಂತುಷ್ಟ ಜನರು ಗೌರವರ್ಣ. ನೀಚ ಪ್ರವೃತ್ತಿಯವರು, ಭೂತ ಬಾಧೆಗೊಳಗಾದವರು, ರೋಗಿಗಳು, ಕೀಳು ಜಾತಿಗೆ ಸೇರಿದವರು ಕಪ್ಪು ಬಣ್ಣದವರು. ಮಹರ್ಷಿಗಳಿಗೆ ಬೋರೆ ಹಣ್ಣಿನ ಬಣ್ಣ. ಆದರೆ ಅವರು ತಪಸ್ಸು ಮಾಡುವವರಾಗಿದ್ದರೆ ಕಪ್ಪು ಬಣ್ಣವನ್ನು ಬಳಸಬೇಕು.

ಕಿರಾತರು, ದ್ರಾವಿಡರು ಕಪ್ಪು ವರ್ಗದವರಾಗಿದ್ದಾರೆ. ಉತ್ತರದೇಶಿಕರು, ಯವನರು, ಗೌರವರ್ಣದವರು. ಬ್ರಾಹ್ಮಣರಿಗೂ, ಕ್ಷತ್ರಿಯರಿಗೂ ಇದೇ ಬಣ್ಣ. ಕೆಂಪು ಬಣ್ಣವನ್ನು ನಾಟ್ಯಶಾಸ್ತ್ರದಲ್ಲಿ ಪ್ರತ್ಯೇಕವಾಗಿ ಹೇಳಲಿಲ್ಲ. ಆದರೆ ಯಕ್ಷಗಾನ, ಕೂಡಿಯಾಟಂ, ಕಥಕಳಿ, ತೆಯ್ಯಂ, ಸಂದರ್ಭಗಳಲ್ಲೆಲ್ಲ ಕೆಂಪು ಬಣ್ಣವನ್ನೇ ಹೆಚ್ಚಾಗಿ ಬಳಸುತ್ತಾರೆ. ಇದು ಚಿತ್ರಕಲೆಯ ಪ್ರಭಾವವೂ ಇರಬಹುದು. ಮೇಲೆ ಉಲ್ಲೇಖಿಸಿದ ದೃಶ್ಯಕಲೆಗಳ ವೇಷ ವಿಧಾನಗಳಿಗೆ ಚಿತ್ರಕಲೆಯೊಂದಿಗಿರುವ ಸಂಬಂಧವನ್ನು ತಿರಸ್ಕರಿಸುವಂತಿಲ್ಲ. ಅರಮನೆ ಹಾಗೂ ದೇವಾಲಯ ಗಳ ಗೋಡೆಗಳಲ್ಲಿ ಭಿತ್ತಿಚಿತ್ರಗಳನ್ನು ರಚಿಸುವ ಸಂಪ್ರದಾಯ ಎರಡು ಸಾವಿರ ವರ್ಷಗಳ ಹಿಂದೆಯೇ ರೂಢಿಯಲ್ಲಿತ್ತು ಎಂದು ವಿದ್ವಾಂಸರು ಅಭಿಪ್ರಾಯಪಡಿಸಿದ್ದಾರೆ.  ಅದಕ್ಕಿಂತಲೂ ಹಿಂದೆ ಈ ಸಂಪ್ರದಾಯ ಇತ್ತು ಎನ್ನುವುದಕ್ಕೆ ಪುರಾಣಗಳು ಸಾಕ್ಷಿಗಳಾಗಿವೆ. ವಾಲ್ಮೀಕಿ ರಾಮಾಯಣ ಹಾಗೂ ನಾಟ್ಯಶಾಸ್ತ್ರದಲ್ಲಿ ಭಿತ್ತಿಚಿತ್ರಗಳ ಉಲ್ಲೇಖಗಳಿವೆ. ರಾಜರ ಚಿತ್ರಗಳನ್ನು ಪ್ರತ್ಯಕ್ಷವಾಗಿ ಬರೆಯುತ್ತಿದ್ದರು. ಆದರೆ ದೇವತೆಗಳ ಚಿತ್ರಗಳು ಪುರಾಣಗಳ ಶ್ಲೋಕ ಗಳಿಂದಾಗಿ ಕಲಾವಿದನ ಕಲ್ಪನೆಯಲ್ಲಿ ಮೂಡಿರಬೇಕು. ಈ ಚಿತ್ರಗಳು ದೃಶ್ಯಕಲೆಗಳ ಕಥಾಪಾತ್ರಗಳ ಸೃಷ್ಟಿಗೆ ಪ್ರೇರಣೆಯಾದುವು. ಇಂತಹ ಚಿತ್ರಗಳ ಬಣ್ಣಗಾರಿಕೆ ಹಾಗೂ ವೇಷಭೂಷಣಗಳನ್ನು ಹಾಗೆಯೇ ಸ್ವೀಕರಿಸಿರಬೇಕು. ಕೆಲವೊಂದು ಹಂತಗಳಲ್ಲಿ ಪುನರ್‌ಸೃಷ್ಟಿಸಿಕೊಂಡಿರಬಹುದು. ಏಳನೆಯ ಶತಮಾನದ ವಿಷ್ಣು ಧರ್ಮೋತ್ತರ ಪುರಾಣದಲ್ಲಿಯೂ ರಸಗಳಿಗೆ ಬಣ್ಣಗಳನ್ನು ನಿರ್ದೇಶಿಸಲಾಗಿದೆ. ಶೃಂಗಾರಕ್ಕೆ ಶ್ಯಾಮ, ಹಾಸ್ಯಕ್ಕೆ ಬಿಳಿ, ರೌದ್ರಕ್ಕೆ ಕೆಂಪು ಹೀಗೆ ಅಲ್ಲಿ ವಿವರಣೆ ಇದೆ. ಆದರೆ ಈ ಕೆಂಪು ಬಣ್ಣವು ಚಿತ್ರಕಲೆಯಿಂದ ದೃಶ್ಯ ಕಲೆಗಳಿಗೆ ಬಂದಿರಬೇಕು.

ಯಕ್ಷಗಾನದ ಸಾತ್ವಿಕ ಪಾತ್ರಗಳಲ್ಲಿ ಕೆಂಪು ಬಣ್ಣದ ಬಳಕೆಯಿದೆ. ಈ ಪಾತ್ರಗಳ ವೇಷಭೂಷಣಗಳಲ್ಲೂ ಕೆಂಪು ಬಣ್ಣವೇ ಇರುತ್ತದೆ. ಇವು ಸೌಮ್ಯ ಸ್ವಭಾವದ ಪಾತ್ರಗಳು. ಶೃಂಗಾರ ಸ್ವಭಾವದ ಪಾತ್ರಗಳಿಗೆ ಹಸಿರು ಬಣ್ಣವನ್ನು ಬಳಸಲಾಗುತ್ತದೆ. ರಾಜಸ ಪ್ರವೃತ್ತಿಯ ಪಾತ್ರಗಳಿಗೆ ಕೆಂಪು ಹಾಗೂ ಹಸಿರು ಬಣ್ಣಗಳ ವೇಷಭೂಷಣಗಳನ್ನು ಉಪಯೋಗಿಸ ಲಾಗುತ್ತಿದೆ. ತಾಮಸ ಸ್ವಭಾವದ ಪಾತ್ರಗಳಿಗೆ ಕಪ್ಪು ಬಣ್ಣವೇ ಮುಖ್ಯವಾಗಿ ಇರುತ್ತದೆ. ಶೃಂಗಾರದ ನಸುಹಸಿರು (ಶ್ಯಾಮ) ಕಥಕಳಿಯ ಪಚ್ಚೆವೇಷಗಳಲ್ಲಿ ಕಾಣಬಹುದು. ಕತ್ತಿ ವೇಷಗಳಿಗೆ (ಅಧ್ಯಾಯ ೧೦ನ್ನು ನೋಡಬಹುದು) ಹಸಿರು ಹಾಗೂ ಕೆಂಪು ಬೆರೆತ ಮುಖ ವರ್ಣಿಕೆ. ಕೆಂಪು ತಾಡಿ ವೇಷಗಳಿಗೆ ಕೆಂಪು, ಕಪ್ಪು ಮಿಶ್ರಿತ ಮುಖ ವರ್ಣಿಕೆ. ಹೀಗೆ ಬಣ್ಣಗಳನ್ನು ಸ್ವೀಕರಿಸುವ ಆಯಾ ಪಾತ್ರಗಳ ಸ್ವಭಾವವೇ ಮುಖ್ಯ ಕಾರಣವಾಗಿರಬಹುದು.

ಶಿಲ್ಪ, ಚಿತ್ರ, ಎರಕ-ಕೆತ್ತನೆ ಮೊದಲಾದ ದೃಶ್ಯ ಕಲೆಗಳಲ್ಲೆಲ್ಲ ಕಲಾವಂತಿಕೆಯನ್ನು ಮೆರೆಯುವ ಕಲಾವಿದರಿಗೂ ನಿರ್ದಿಷ್ಟವಾದ ಶಾಸ್ತ್ರ ವಿಧಾನಗಳಿವೆ. ಇವುಗಳಿಗೆಲ್ಲ ಮಾತೃ ಸ್ಥಾನದಲ್ಲಿ ಚಿತ್ರಕಲೆ ಇದೆ. ದೃಶ್ಯ ಕಲೆಗಳಲ್ಲಿ ಎಲ್ಲವುಗಳನ್ನು ಮೊದಲು ಚಿತ್ರದ ರೂಪದಲ್ಲಿ ಮೂಲ ಆಕೃತಿಯನ್ನು ನಿರ್ಮಿಸಿಕೊಳ್ಳಬೇಕು. ಹಾಗಾಗಿ ಶಿಲ್ಪಿಗಳು, ಸ್ಥಪತಿಗಳು ಹಾಗೂ ಇತರ ಕುಶಲ ಕಲೆಗಾರರು ಚಿತ್ರಕಲೆಯನ್ನು ಮೊದಲು ಅಭ್ಯಾಸ ಮಾಡಬೇಕಾಗುತ್ತದೆ. ಪ್ರಪಂಚದಲ್ಲಿ ತೋರುವ ವಿವಿಧ ರೂಪಗಳು ಮಾನವನ ಭಾವನಾತ್ಮಕ ನೆಲೆಯಲ್ಲಿ ರೂಪು ಪಡೆಯುತ್ತವೆ. ಅವು ಶಿಲ್ಪಿಯ ಕೈಯಲ್ಲಿ ಮೂರ್ತರೂಪವನ್ನು ಪಡೆದು ವಿವಿಧ ಭಾವ ಭಂಗಿಗಳ ಕಲಾ ವಸ್ತುಗಳಾಗುತ್ತವೆ. ತನ್ನ ಮನಸ್ಸಿಗೆ ಒಪ್ಪುವ ದೃಶ್ಯವನ್ನು ಕಂಡರೆ ಮನಸ್ಸಿ ಗಾಗುವ ಸಂತೋಷ, ಅಹಿತವಾದುದನ್ನು ಕಂಡರೆ ಆಗುವ ಕ್ರೋಧ, ಅಪಾಯವನ್ನು ಊಹಿಸಿ ಆಗುವ ಭಯ, ತುಚ್ಛ ಸಂಗತಿಗಳಿಂದಾಗಿ ತೋರುವ ಹೇಸಿಕೆ ಹೀಗೆ ಅನೇಕ ಮನೋಧರ್ಮ ಗಳಿಗೆ ಅನುಗುಣವಾದ ಚಲನವಲನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ಭಾವ ಪ್ರಕಟಣೆಗೆ ಮಾಡುವ ಯೋಗ್ಯವಾದ ಶರೀರ ಚೇಷ್ಟೆಯೇ ಮುದ್ರೆಯೆನಿಸುತ್ತದೆ. ಈ ವಿವಿಧ ಮನೋಧರ್ಮಗಳಿಂದಾಗಿ ಶರೀರದಲ್ಲಿ ತೋರಬಹುದಾದ ಅವಸ್ಥಾಂತರಗಳನ್ನು ತೋರಿ ಸುವುದೇ ನಾಟ್ಯವೆನಿಸುತ್ತದೆ. ಈ ಆಂಗಿಕಾಭಿನಯದ ಎಲ್ಲಾ ಆಯಾಮಗಳು ಚಿತ್ರ ಕಲಾವಿದನಿಗೆ ತಿಳಿದಿರಬೇಕು. ಹಾಗಾಗಿ ಚಿತ್ರ ಕಲೆಗೆ ಆಂಗಿಕಾಭಿನಯವೇ ಆಧಾರ ಎನ್ನಬಹುದು.

ಯಕ್ಷಗಾನದ ಬಣ್ಣ ಹಾಕುವುದು ಪಾತ್ರಕ್ಕೆ ತಕ್ಕ ವೇಷ ಧರಿಸುವುದು ಇತ್ಯಾದಿಗಳೆಲ್ಲ ಚಿತ್ರಕಲೆಯ ವಿಕಾಸದ ಹಂತಗಳೇ ಆಗಿವೆ. ಚಿತ್ರಕಲೆಯಂತೆಯೇ ಮುಖವರ್ಣಿಕೆಯಲ್ಲಿಯೂ ರೇಖೆಗಳಿಗೆ ಬಹಳ ಪ್ರಾಧಾನ್ಯವಿದೆ. ಸಪೂರವಾದ ಗೆರೆಗಳು ಹಾಗೂ ದಪ್ಪಗೆರೆಗಳು ಚಿತ್ರಗಳಲ್ಲಿ ನಿಷಿದ್ಧವಾಗಿದ್ದರೂ ಮುಖವರ್ಣಿಕೆಯಲ್ಲಿ ಬಳಕೆಯಲ್ಲಿದೆ. ವಕ್ರರೇಖೆಗಳು ಹಾಗೂ ಪರಸ್ಪರ ಹೆಣೆದುಕೊಂಡಿರುವ ಗೆರೆಗಳು ಚಿತ್ರಕಲೆಯಂತೆ ಮುಖವರ್ಣಿಕೆಯಲ್ಲಿ ಕಂಡು ಬರುವುದಿಲ್ಲ. ಚಿತ್ರಗಳ ಬಣ್ಣಗಳ ಮಿಶ್ರಣಕ್ಕೆ ಪ್ರಾಮುಖ್ಯ ನೀಡುತ್ತವೆ. ಆದರೆ ಮುಖವರ್ಣಿಕೆ ಬಣ್ಣಗಳ ವೈರುಧ್ಯಕ್ಕೆ ಪ್ರಾಧಾನ್ಯ ನೀಡಿದಂತಿದೆ.

ಚಿತ್ರಕಲೆಯಲ್ಲಿ ಆರು ಅಂಗಗಳನ್ನು ವಿದ್ವಾಂಸರು ಹೆಸರಿಸಿದ್ದಾರೆ. ರೂಪಭೇದ, ಪ್ರಮಾಣ, ಭಾವ, ಲಾವಣ್ಯ ಯೋಜನೆ, ಸಾದೃಶ್ಯ, ವರ್ಣಿಕಾ ಭಂಗ ಎಂಬೀ ಷಡಂಗಗಳು ಚಿತ್ರಕಲೆಯಂತೆ ಮುಖವರ್ಣಿಕೆಯಲ್ಲಿಯೂ ಇವೆ. ಇವುಗಳಲ್ಲಿ ರೂಪಭೇದಕ್ಕೆ ಪ್ರಾಮುಖ್ಯವನ್ನು ನೀಡಲಾಗಿದೆ.

ರೂಪಭೇದ : ರೂಪಗಳ ವೈವಿಧ್ಯವನ್ನು ರೂಪಭೇದ ಎನ್ನುತ್ತಾರೆ. ಪುರುಷ ವೇಷಗಳಲ್ಲಿ ರಾಜ, ಮಂತ್ರಿ, ರಾಕ್ಷಸ, ವಟು, ಕಿರಾತ ಇವೆಲ್ಲವೂ ತಮ್ಮ ಉಡುಗೆ, ತೊಡುಗೆಗಳ ಮೂಲಕವೇ ರೂಪಭೇದವನ್ನು ಪ್ರಕಟಿಸುತ್ತಾರೆ. ಸ್ತ್ರೀ ವೇಷಗಳಾದರೂ ಎಲ್ಲವೂ ಒಂದೇ ತೆರನಾಗಿರಲಾರವು. ಅವುಗಳಲ್ಲಿ ರಾಣಿ, ದಾಸಿ, ತಾಯಿ, ಮಗಳು, ಗರತಿ ಎಂಬಿತ್ಯಾದಿ ಪಾತ್ರಗಳಲ್ಲಿ ರೂಪಭೇದವನ್ನು ಗುರುತಿಸಲೇ ಬೇಕಾಗುತ್ತದೆ. ಈ ರೂಪಭೇದಗಳನ್ನು ಪ್ರಕಟಿಸುವಾಗ ಕಲಾವಿದರು ಪಾತ್ರಗಳ ಪ್ರಾಯ, ಸ್ವಭಾವ, ಮನೋಧರ್ಮ ಇತ್ಯಾದಿಗಳನ್ನು ಅರಿತಿರಬೇಕಾಗುತ್ತದೆ. ಹದಿನಾರರ ತರುಣಿಯ ಪಾತ್ರವನ್ನು ನಿರ್ವಹಿಸುವಾಗ ಕಲಾವಿದನಿಗೆ ವಾಸ್ತವದಲ್ಲಿ ಮೂವತ್ತರ ಹರೆಯವಾದರೂ ವೇಷಭೂಷಣ ಬಣ್ಣಗಾರಿಕೆಯ ಮೂಲಕ ಪಾತ್ರದ ಚಿತ್ರಣವನ್ನು ಮಾಡಬೇಕಾಗುತ್ತದೆ. ಎಂದರೆ ಕಲಾವಿದರು ಚಿತ್ರಕಲೆಯ ಎಲ್ಲಾ ಸೂಕ್ಷ್ಮಗಳನ್ನು ಅರಿತಿರುವಂತೆಯೇ ಪಾತ್ರಗಳ ಪರಿಸರ ಹಾಗೂ ಪ್ರಕೃತಿಯನ್ನು ತಿಳಿದಿರಬೇಕಾ ಗುತ್ತದೆ. ರೂಪಭೇದದ ಸಂದರ್ಭದಲ್ಲಿ ಕಲಾವಿದರು ಪ್ರಕಟ ಮಾಡುವ ಪಾತ್ರಗಳ ಕಾಲ ದೇಶಗಳಿಗೆ ಬದ್ಧವಾಗಿರಬೇಕಾದುದೂ ಅನಿವಾರ್ಯ.  ತೀರಾ ಅಪರಿಚಿತ ವೇಷ ಚಿತ್ರಣ ಕೂಡಾ ಪ್ರೇಕ್ಷಕರನ್ನು ತಲುಪಲಾರದು. ಪುರಾಣ ಕಾಲದ ಪಾತ್ರಗಳ ಉಡುಗೆ ತೊಡುಗೆಗಳು ಹೇಗಿದ್ದುವೆಂದು ತಿಳಿದಿಲ್ಲ. ಅವುಗಳನ್ನು ಅಲಂಕರಿಸಬೇಕೆಂದು ಆಧುನಿಕ ಪರಿಕರಗಳನ್ನು ಬಳಸಿದರೆ ಪಾತ್ರೋಚಿತವೂ ಆಗಲಾರದು. “ಸ್ವಾಭಾವಿಕವೂ ಇರಬೇಕೆಂದು, ಅಪ್ರಚಲಿತ ಮತ್ತು ತೀರಾ ಅಪರಿಚಿತವಾದ ಕ್ರಮದಿಂದ ವೇಷವು ಅಳವಟ್ಟರೆ ಮೆಚ್ಚುಗೆಯಾಗಲಾರದು. ಜನಾಂಗದ ವಿಕಸಿತ ನಿಜ ಜೀವನವನ್ನು ಪ್ರತಿಬಿಂಬಿಸುವುದೇ ಕಲೆಯ ಒಂದು ಗುರಿಯಾಗಿದೆ. ಜನರ ಅಂತರ್ನಿಹಿತ ಸಮಸ್ತ ಭಾವಗಳನ್ನು ಸಂದರ್ಭೋಚಿತವಾಗಿ ಕೆರಳಿಸಿ ರಸಾನಂದ ವನ್ನುಂಟು ಮಾಡುವುದೇ ಕಲೆಯು ನೀಡುವ ಫಲ. ಆದ್ದರಿಂದ ಕಲೆಯಲ್ಲಿ ಸೌಂದರ್ಯವು ಮುಖ್ಯ. ಸ್ವಾಭಾವಿಕತೆಗೆಂದು ಆ ಸೌಂದರ್ಯವು ಕೆಡಬಾರದು. ಸೌಂದರ್ಯ ಪ್ರತಿಪಾದನೆಗಾಗಿ ಅಸ್ವಾಭಾವಿಕವೂ ತೋರಕೂಡದು. ಸಮಾಜದ ನಿಜಸ್ವರೂಪವು ಅಲಂಕಾರಯುತವಾಗಿ ಅಳವಟ್ಟಿದ್ದರೆ ಆಗ ಅದು ಸಾರ್ಥಕ” (ತಾಳ್ತಜೆ ಕೃಷ್ಣಭಟ್ಟ, ೧೯೭೪ : ೭೩). ಚಿತ್ರಕಲೆಗೆ ಹೇಗೋ ಈ ವಿಷಯಗಳು ವೇಷ ವಿಧಾನಕ್ಕೂ ಅನ್ವಯಿಸುತ್ತದೆ.

ಪ್ರಮಾಣ : ಪ್ರಮಾಣ ಎಂದರೆ ಚಿತ್ರಕಲೆಯಲ್ಲಿ ಪಾಲ ಪ್ರಮಾಣ. ಮುಖವರ್ಣಿಕೆಯಲ್ಲಿ ಶರೀರ ಹಾಗೂ ವೇಷಧಾರಣೆಯ ಗಾತ್ರಕ್ಕೆ ಹೊಂದಿಕೊಂಡು ವಿಸ್ತಾರವನ್ನು ಅಳವಡಿಸಿ ಕೊಳ್ಳಬೇಕು.  ಪ್ರಮಾಣದ ಬಗೆಗಿನ ಅನೇಕ ವಿಚಾರಗಳು ವೇಷಗಾರಿಕೆಯ ಸಂದರ್ಭಕ್ಕೂ ಅನ್ವಯವಾಗುತ್ತದೆ. ಪ್ರಮಾಣ ಎನ್ನುವುದು ವೇಷದ ಗಾತ್ರಕ್ಕೆ ಸಂಬಂಧಿಸಿದುದು. ರಂಗದಲ್ಲಿ ಬರುವ ಪಾತ್ರಗಳು ಪರಸ್ಪರ ಸಂಬಂಧಗಳಲ್ಲಿ ಗಾತ್ರದ ಮೂಲಕ ತಮ್ಮ ಹೊಂದಾಣಿಕೆಯನ್ನು ಕಾಯ್ದುಕೊಳ್ಳಬೇಕಾದುದು ಅತ್ಯಂತ ಅಗತ್ಯ. ಗಂಡ-ಹೆಂಡತಿ, ತಂದೆ-ಮಗ, ಅಣ್ಣ-ತಮ್ಮ ಹೀಗೆ ಪಾತ್ರಗಳ ವಯಸ್ಸನ್ನು ಪ್ರಕಟಮಾಡುವಂತೆ ವೇಷ ತೊಡಬೇಕಾದುದು ಬಹಳ ಮುಖ್ಯ. ವಾಸ್ತವದಲ್ಲಿ ಗಂಡನ ಪಾತ್ರವಹಿಸುವ ಕಲಾವಿದ ಹೆಂಡತಿಯ ಪಾತ್ರ ಧರಿಸುವವನಿಗಿಂತ ವಯಸ್ಸಿನಲ್ಲಿ ಕಿರಿಯನಿರಬಹುದು. ಆದರೆ ರಂಗದಲ್ಲಿ ಪಾತ್ರೋಚಿತವಾದ ವಯಸ್ಸನ್ನು ಪ್ರಕಟಪಡಿಸುವ ಪ್ರಮಾಣದಲ್ಲಿ ವೇಷಧಾರಣೆಯನ್ನು ಮಾಡಿಕೊಳ್ಳಲೇಬೇಕಾಗುತ್ತದೆ.

ಭಾವ : ಭಾವ ಎಂದರೆ ಭಾವ ಪ್ರಕಟಣೆ. ಕಥಾಪಾತ್ರದ ಭಾವಕ್ಕೆ ಹೊಂದಿಕೊಂಡು ಮುಖವರ್ಣಿಕೆ ಇರಬೇಕು. ಮುಖದಲ್ಲಿ ರೋಷವನ್ನು ಪ್ರಕಟಪಡಿಸುವ ಪಾತ್ರಗಳು, ಭೀಕರತೆಯನ್ನು ಪ್ರಕಟಪಡಿಸುವ ಪಾತ್ರಗಳು ಇವುಗಳಿಗೆ ಅನುಗುಣವಾದ ಮುಖವರ್ಣಿಕೆಯ ಮೂಲಕ ಪಾತ್ರವನ್ನು ಸಿದ್ಧಪಡಿಸಬೇಕಾದುದು ಮುಖ್ಯ.

ಲಾವಣ್ಯ : ಸೌಂದರ್ಯವನ್ನು ಸ್ಫುಟಗೊಳಿಸುವ ಪ್ರವೃತ್ತಿಯೇ ಲಾವಣ್ಯ ಯೋಜನೆ. ರೌದ್ರವೇಷಗಳೇ ಆದರೂ ಅವುಗಳ ಸೌಂದರ್ಯ ಮುಖವರ್ಣಿಕೆಯಲ್ಲಿ ವ್ಯಕ್ತವಾಗಬೇಕು. ಪಾತ್ರಗಳ ಭಾವ, ಸ್ವಭಾವಗಳೇನೇ ಇರಲಿ ಅವುಗಳೆಲ್ಲ ರಂಗದಲ್ಲಿ ಪ್ರತ್ಯಕ್ಷವಾಗುವುದು ಸೌಂದರ್ಯದ ನೆಲೆಯಿಂದ. ಸೌಂದರ್ಯವನ್ನು ಕುರೂಪಿಯಾದ ಪಾತ್ರಗಳ ಚಿತ್ರಣಗಳಲ್ಲೂ ಸಾಧಿಸಬೇಕು ಇದುವೇ ಲಾವಣ್ಯ. ಅಂದರೆ ಮುಖವರ್ಣಿಕೆಯಲ್ಲಿ ಸ್ಪಚ್ಛತೆ ಇರಬೇಕು.

ಸಾದೃಶ : ಸಾದೃಶ್ಯ ಎಂದರೆ ಚಿತ್ರ ರಚನೆಯಲ್ಲಿ ವಿಷಯದ ಆವಿಷ್ಕಾರ. ಮುಖವರ್ಣಿಕೆಯ ಸಂದರ್ಭದಲ್ಲಿ ಕಥಾ ಪಾತ್ರದ ರೂಪದೊಂದಿಗೆ ಸಾದೃಶ್ಯ ಉಂಟಾಗುವಂತೆ ಮಾಡುವುದೇ ಸಾದೃಶ. ಪಾತ್ರಗಳ ಅಮೂರ್ತ ರೂಪಗಳು ಪ್ರೇಕ್ಷಕರಿಗೆ ಪರಿಚಿತವೇ ಆಗಿರುತ್ತದೆ. ಕಲಾವಿದರು ಪಾತ್ರದ ಬಣ್ಣಗಾರಿಕೆಯ ಮೂಲಕ ರೂಪ ಸಾದೃಶ್ಯವನ್ನು ಸಾಧಿಸಬೇಕಾದ್ದು ಅತ್ಯಂತ ಅಗತ್ಯವಾಗಿದೆ.

ವರ್ಣಿಕಾ ಭಂಗ : ಹಲವಾರು ಬಣ್ಣಗಳನ್ನೇ ಗರಿಷ್ಠ ಸಂಯೋಜಿಸುವ ರೀತಿಯಲ್ಲಿ ಬಳಸುವುದು ಮುಖ ವರ್ಣಿಕೆಯಲ್ಲಿಯೂ ಪ್ರಧಾನವಾಗಿದೆ. ಇದುವೇ ವರ್ಣಿಕಾ ಭಂಗ.

ಈ ವಿವರಗಳಿಂದ ರಂಗಕಲೆಗಳು ನಾಟ್ಯಶಾಸ್ತ್ರ ಹಾಗೂ ಚಿತ್ರಕಲೆಯಿಂದ ಆಹಾರ್ಯದ ವಿಷಯದಲ್ಲಿ ಬಹಳಷ್ಟನ್ನೇ ಸ್ವೀಕರಿಸಿವೆ ಎಂಬುದು ಗೊತ್ತಾಗುತ್ತದೆ. ಆಯಾ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಧಾರ್ಮಿಕ ಕಲೆಗಳು ಹಾಗೂ ಜಾನಪದ ಕಲೆಗಳು ಇತರ ರಂಗಕಲೆಗಳ ಮೇಲೆ ಬೀರಿದ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಆಹಾರ್ಯ ಎಂದರೆ ಅಮೂರ್ತವಾದ ಪಾತ್ರವೊಂದು ರಂಗದಲ್ಲಿ ಮೂರ್ತಗೊಳ್ಳುವ ಬಗೆ ಎಂಬುದಂತೂ ಸ್ಪಷ್ಟ. ಪಾತ್ರದ ಅಸ್ತಿತ್ವವನ್ನು ಸಾರುವಲ್ಲಿ ಆಹಾರ್ಯದ ಪಾತ್ರವೂ ಪ್ರಾಧಾನವಾಗಿದೆ. ಪಾತ್ರಕ್ಕೊಂದು ಅಸ್ತಿತ್ವ ಸಿದ್ಧವಾಗುವುದು ಆಹಾರ್ಯದ ಮೂಲಕ. ಹಾಗಾಗಿ ಆಹಾರ್ಯ ಎಂಬುದು ಸಂಸ್ಕೃತಿ ಜನ್ಯವಾಗಿರುತ್ತದೆ.