ರಾಗ ಸುರುಟಿ ಏಕತಾಳ

ಏನೈ ಹನುಮಂತ | ಪೇಳು ನಿ | ಧಾನಿಸಿ ಗುಣವಂತ ||
ಈ ನಕ್ತಂಚರ ಶ್ವಾನನನಿಂದಿಗೆ |
ಹಾನಿಯ ಮಾಡಲೊ ಪ್ರಾಣವನುಳುಹಲೊ || ಏನೈ ||235||

ಹಲಬರೊಡನೆ ಕಾದಿ | ಕಾಯದಿ | ಬಳಲಿಹನಿವ ರಣದಿ ||
ಕೊಲುವದಿದೇನಗ್ಗಳಿಕೆಯೊ ರಘುಕುಲ |
ತಿಲಕಗೆನುತ ಜನಚಯವೆನದಿರ್ಪುದೆ || ಏನೈ ||236||

ಆಯುಧ ಹೀನನನು | ಕೊಲುವುದು | ನ್ಯಾಯವಿದಲ್ಲಿ ದನು ||
ಆಯತದಲಿ ತಿಳಿದೀತನ ಬಿಡುವೆನು |
ನೀಯೆಂಬುವುದೇನೆನಲವನೆಂದನು || ಏನೈ ||237||

ರಾಗ ಕಂಭೋಜಿ ಅಷ್ಟತಾಳ

ಲಾಲಿಸು ದೇವರ ದೇವ | ಜಗ |
ತ್ಪಾಲಕ ಶರಣಸಂಜೀವ ||
ಪೇಳುವುದೇನು ನಮ್ಮಭಿಮತ ಬೇರುಂಟೆ |
ಪಾಲಿಪುದುಚಿತವೀ ಸಾರಿಗೆ ಖಳನನು ||238||

ಎಂದು ಕೈ ಮುಗಿದು ಮಾರುತಿಯು | ಪೇಳ |
ಲಂದು ಕೇಳುತ ದಾಶರಥಿಯು ||
ಮಂದ ಹಾಸದೊಳರ್ಧಚಂದ್ರ ಬಾಣದಲಿ ಸಂ |
ಕ್ರಂದ ನಾದ್ಯಮರರ ವಂದವು ನಗುವಂತೆ ||239||

ಖಳರಾಯ ನಿಂಗೊಪ್ಪುತಿರುವ | ಹೊಳೆ |
ಹೊಳೆವ ಕಿರೀಟ ಕುಂಡಲವ ||
ತಳುವದೆ ಕಡಿದದರಿಳೆಯೊಳಗಿಳುಹುತ |
ಬಳಿಕವನೊಳು ರಘುಕುಲಜನಿಂತೆಂದನು ||240||

ರಾಗ ಸವಾಯ್‌ಜಂಗಲ್ ಏಕತಾಳ

ಎಲ ಎಲ ಛೀ ರಕ್ಕಸಕುನ್ನಿ | ನಿಲದಿರು ನೀನೆನ್ನಿದಿರಿನಲಿ ||
ತ್ರಿಲೋಕ ಕಂಟಕ ನಿನ್ನ ಪ್ರಾಣವ | ನುಳುಹಿದೆನಿಂದಿಗೆ ಫಡ ಫಡ ನಡೆ ನಡೆ || ಎಲ ಎಲ   ||241||

ಒಡಹುಟ್ಟಿರುವ ವಿಭೀಷಣನೆಂಬವ | ನೊಡಲುರಿದಪುದೇನೆಂದೆನುತ ||
ದಡಿಗನೆ ನಿನ್ನನು ಬಿಟ್ಟಹೆನಿಂದಿನ | ಕಡುಹನು ನಾಳಿನ ದಿನದಲಿ ತೋರ್ಪೆನು || ಎಲ ಎಲ  ||242||

ತರಣಿಯು ಪಡುವಣ ಶರಧಿಯೊಳಿಳಿದನು | ತರುಬಿತು ಕತ್ತಲೆಯೂರ್ವಿಯನು ||
ಶರಹತಿಯಲಿ ಕಡು ನೊಂದಿಹೆ ನೀಕೇಳ್ | ತೆರಳೊ ಲಂಕೆಗೆ ನಾಚಿಕೆಗೆಡುಕನೆ || ಎಲ ಎಲ ||243||

ವಾರ್ಧಕ

ಇಂತೆಂದು ರಾಘವಂ ಬೈದು ಕಳುಹಲ್ಕೆ ಖಳ |
ನಂತರಂಗದಿ ನೊಂದು ಕಡು ನಾಚುತಂ ಬಂದು |
ಚಿಂತಾಗ್ನಿಯಿಂದ ಕುದಿ ಕುದಿಯುತಂ ಕೈದುಗಳ ಘಾತದಿಂದುರೆ ನೋವುತ ||
ಪಂಥವಳಿದುಂ ಬೇಗ ಮುರಿದ ದುಮ್ಮಾನದಿಂ |
ದಂತರಿಸಿ ನಿಳಯಕಯ್ದಿದ ಬೀಳುತೇಳುತಂ |
ಸಂತಾಪದಿಂದಲಯ್ತಂದು ಪೊಕ್ಕನು ಬಿಲವ ಗೂಢಾಂಘ್ರಿ ಪೊಗುವಂದದಿ  ||244||

ಭಾಮಿನಿ

ವನಜಮುಖಿ ಕೇಳಿತ್ತ ಶೋಕಾ |
ವನದೊಳಾ ದಿನದಿರುಳಿನೊಳುವರ
ಜನಕ ನಂದನೆಗಾಯ್ತು ಬಹು ದುಃಸ್ವಪ್ನ ಸೂಚನೆಯು ||
ಘನತರದ ಚಿಂತೆಯಲಿದೇನೆಂ |
ದೆನುತ ಮನದಲಿ ಬೆದರಿ ಬಳಿಕಾ |
ವನಿತೆ ದುಮ್ಮಾನದಲಿ ತ್ರಿಜಟೆಯೊಳೆಂದಳೀತೆರದಿ ||245||

ರಾಗ ತೋಡಿ ಏಕತಾಳ

ಗಜರಾಜ ಸನ್ನಿಭಯಾನೆ |
ತ್ರಿಜಿಟೆ ನೀ ಕೇಳಿದೆಯೇನೆ |
ನಿಜವನರಿತಿದನು ಪೇಳೆ |
ಭುಜಗವೇಣಿ ಚಾರುಶೀಲೆ || ಗಜ ||246||

ಬಲದ ಕಣ್ಣಿನ ಹೊಡೆಯು |
ಅಲುಗುತಿದೆ ದಕ್ಷಿಣ ತೊಡೆಯು |
ಬಲು ಕಂಪಿಸುತಿಹುದುಕಾಣೆ |
ನೆಲೆಯನರಿಯದಾದೆ ಜಾಣೆ || ಗಜ ||247||

ರಾಮಗೇನೊ ಲಕ್ಷ್ಮಣಂಗೆ |
ಕ್ಷೇಮವಿಹುದೊ ಕಪಿಗಳಿಂಗೆ |
ಪ್ರೇಮವೆಂತೊ ತಿಳಿಯದೆಂದು |
ಭೂಮಿಜೇ ದುಃಖಿಸಿದಳಂದು || ಗಜ ||248||

ಈ ತೆರದಿ ಚಿಂತೆಗೊಂಡು |
ಸೀತೆಯಿರಲು ತ್ರಿಜಟೆಕಂಡು |
ಕಾತರಿಸದಿರೆಂದು ಬೇಗ |
ಪ್ರೀತಿಯಿಂದ ನುಡಿದಳಾಗ || ಗಜ ||249||

ರಾಗ ನವರೋಜು ಏಕತಾಳ

ಚಿಂತಿಸಬೇಡೌ ತಾಯೆ | ಗುಣ |
ವಂತೆ ಕೋಮಲಕಾಯೆ ||
ಕಾಂತಾಮಣಿ ತವ | ಕಾಂತನಿಗಪಜಯ |
ವೆಂತಹುದೈ ಹನು | ಮಂತನಿರುತ್ತಿರೆ || ಚಿಂತಿಸ ||250||

ಜಗದಾಜೀವನನವನು | ಕೇಳ್ |
ರಘುವೀರಾನೆಂಬವನು ||
ಬಗೆವೆನೆ ಈ ಬಣ | ಗುಗಳನು ಸುಮ್ಮನೆ |
ಮುಗುಧತನವ ಬಿಡು | ಮಗಮದಗಂಧಿ || ಚಿಂತಿಸ ||251||

ಕನಸ ಕಂಡೆನು ನಾನು | ಲ |
ಕ್ಷ್ಮಣಗೆ ಬಂದೆಡರ್ಗಳನು ||
ಹನುಮನು ಪರಿಹರ | ವನು ಮಾಡಿದನೆಂ |
ಬಿನಿತು ಹದನಗಳ | ವನಜದಳಾಂಬಕಿ || ಚಿಂತಿಸ ||252||

ಭಾಮಿನಿ

ದಂತಿಸನ್ನಿಭಗಾಮಿನಿಯೆ ಕೇ |
ಳಿಂತು ಸ್ವಪ್ನದ ಪರಿಯ ತಿಳುಹಿಸಿ |
ಸಂತವಿಸಲಾ ತ್ರಿಜಟೆ ಶಾಂತೋಕ್ತಿಯಲಿಮಿಗೆ ಮನದ ||
ಚಿಂತೆಯನು ಬಡಲರಿಯದಾ ನಿಜ |
ಕಾಂತನನು ಹಂಬಲಿಸುತಂದು ಮ |
ಹಾಂತ ಶೋಕದೊಳಿರ್ದಳತ್ತಲು ಹಲುಬುತಾ ಸೀತೆ ||253||

ರಾಗ ಬಿಲಹರಿ ಏಕತಾಳ

ಇತ್ತರಾಘವಗೆ ಕೋಪದ ಮಬ್ಬು ಮುರಿದುದು |
ಚಿತ್ತದಿ ಶೋಕವು ತಲೆದೋರಿತೊಡನೆ ||
ಕತ್ತಲೆಯೊಳು ತಡವರಿಸುತ್ತ ತಮ್ಮ ನೀ |
ನೆತ್ತ ಪೊದೆಯೊ ಮೊಗದೋರೆಂದನಳುತ ||254||

ಅಯ್ಯಯ್ಯ ಹನುಮಂತ ಬಾರೆನ್ನ ಗುಣವಂತ |
ಮೆಯ್ಯಳು ತಾಪವು ಹೆಚ್ಚಿತಿಂದೆನಗೆ ||
ಒಯ್ಯನೆ ನೀನೆನ್ನ ತಮ್ಮನೆಡೆಗೆ ಕರೆ |
ದೊಯ್ಯಕಾಣದೆ ಜೀವಿಸಲಾರೆನಿನ್ನು ||255||

ಎಂದು ಮಾರುತಿ ಕಯ್ವಿಡಿದು ರಾಘವನ ಕರೆ |
ತಂದನು ಶೀಘ್ರದಿ ತಮ್ಮನಿದ್ದೆಡೆಗೆ ||
ಕಂದಿದಾನನದೊಳು ಸಹಜಾತನರಸುತ್ತಾ |
ಬಂದನು ಬಳಲುತ್ತ ರಣಭೂಮಿಗವನು ||256||

ಎಳೆಲತೆಯುದ್ಯಾವನದಿ ಬಿರುಬಿಸಿಲಿಗೆ |
ಝಳಹೊಡೆದಿಳೆಯೊಳು ಬಾಡಿಬಿದ್ಧಂತೆ ||
ಖಳನಶಕ್ತಿಯ ಹತಿಯಿಂದ ಮೂರ್ಛಿತನಾಗಿ |
ಮಲಗಿರುವನುಜನ ಕಂಡನಾ ರಾಮ ||257||

ಶಾರ್ದೂಲವಿಕ್ರೀಡಿತಂ

ವರ ಸೌಮಿತ್ರಿಯ ನೀಕ್ಷಿಸುತ್ತಲಿಳೆಯೊಳ್ ಕಂಗೆಟ್ಟು ಮೈಚಾಚುತಾ |
ಭರದಿಂ ತಮ್ಮನೆ ಹಾಯೆನುತ್ತ ಕರದೊಳ್ ತಕ್ಕೈಸಿ ಮುದ್ದಾಡುತಾ ||
ಮರೆದುಂ ತಾ ಪರಮಾತ್ಮನೆಂಬ ಬಗೆಯಂ ಕಣ್ಣೀರಿನೊಳ್ ತೊನವುತಾ |
ನರರಂತಾ ರಘುವೀರನೈದೆ ಮರುಗುತ್ತಿರ್ದ ತಾ ಬೆಂಡಾಗುತಾ ||258||

ರಾಗ ನೀಲಾಂಬರಿ ರೂಪಕತಾಳ

ಅಯ್ಯೋ ತಮ್ಮನೆ ನೆಲದೊಳು | ಮೆಯ್ಯನು ಚಾಚಿದೆಯಾ ದ |
ಮ್ಮಯ್ಯ ನಿದಾನಿಸುತೆನ್ನೊಡ | ನೊಯ್ಯನೆ ಮಾತಾಡು || ಅಯ್ಯೋ || ಪಲ್ಲವಿ ||

ಅಡವಿಯು ಸಲ್ಲದು ನಿನಗೆಂ | ದೊಡಬಡಿಸಲು ಕೇಳದೆ ನ |
ಮ್ಮೊಡನಯ್ದಿದೆ ಹಳುವಕೆ ಬಳಿ | ಕೊಡಲಿತ್ತೆಯೊ ಧರೆಗೆ ||
ಪಡೆದಿಹ ತಾಯನು ಮಿಗೆ ಕೈ | ವಿಡಿದಿಹ ಸತಿಯನು ಮರೆದವ |
ಘಡಿಸಿ ದಶಾಸ್ಯನ ರಣದಲಿ | ಮಡಿದೆಯೋ ನೀ ಕಡೆಗೆ || ಅಯ್ಯೋ ||259||

ಜರೆದೆನು ಮಾಯಾಮಗವನು |  ತರುವಾಗಲು ಬೇಡೆಂದರೆ |
ಧರಣಿಜೆಯನು ಬಳಿಕಾ ದಶ |  ಶಿರ ತಾ ಕೊಂಡೊಯ್ಯೆ |
ವಿರಹದಿ ನಿನ್ನಲಿ ಕಡು ನಿ |  ಷ್ಠುರದಲಿ ಕೋಪಿಸಲದರನು |
ಮರೆದಿರ್ದಾ ಸಮಯದೊಳೀ |  ಪರಿಯಲಿ ಮುನಿದಪರೆ || ಅಯ್ಯೋ ||260||

ತರುಣಿಯ ಕಾರಣ ನಿನ್ನನು |  ಧರಕಿಕ್ಕಿದೆನೆಂದೆನಲೋ |
ದುರುಳನ ಶಕ್ತಿಯ ಹತಿಯಿಂ | ದೊರಗಿದೆನೆಂದೆನಲೋ ||
ಎರಡನೆಯವ್ವೆಯೊಳೇನೆಂ |  ದೊರೆಯಲಿ ಪಣೆಯೊಳಗೀಪರಿ |
ಬರೆದನೆ ವಿಧಿ ಹಾ ಹಾ ಎಂ |  ದೊರಲಿದನೀ ತೆರದಿ || ಅಯ್ಯೋ ||261||

ಭಾಮಿನಿ

ಮಂದಗಾಮಿನಿ ಲಾಲಿಸಾ ರಘು |
ನಂದನನು ಲಕ್ಷ್ಮಣನ ಗುಣಗಳ |
ನಂದು ಯೋಚಿಸಿ ಮರುಗುತಿರ್ದನು ಬಿಗಿದ ಬೆರಗಿನಲಿ ||
ಕುಂದಿ ನಾನಾ ತೆರದಿ ಶೋಕಿಸು |
ವಂದವನು ಕಾಣುತ್ತ ಪರಮಾ |
ನಂದದಲಿ ಕೈಮುಗಿದು ಜಾಂಬವನೆಂದನವನಿಪಗೆ ||262||

ರಾಗ ಮಧ್ಯಮಾವತಿ ಏಕತಾಳ

ಕೇಳೆನ್ನ ಮಾತನು ಶ್ರೀ ರಾಮಚಂದ್ರ |
ಪೇಳುವೆ ಮನ್ಮನದಿರವ ಭೂಮಿಂದ್ರ || ಕೇಳೆನ್ನ || ಪ ||

ಜೀಯ ಚಿಂತಿಪುದೇಕೆ ಬಿಡುಬಿಡು ಮನಸಿನ |
ಮಾಯೆಯ ಶೋಕವ ಲೋಕಪಾಲಕನೆ ||
ವಾಯುಸಂಭವನ ಸಂಜೀವನಕೋಸುಗ |
ಪ್ರೀಯದಿ ಕಳುಹಯ್ಯ ದ್ರೋಣಪರ್ವತಕೆ || ಕೇಳೆನ್ನ ||263||

ಅಂಜುವ ಕಾರಣವೇನಯ್ಯ ಪಗಲೊಳು |
ಮಂಜು ಮಾರ್ತಾಂಡನ ಮುಸುಕುವುದುಂಟೆ ||
ಜಂಜಡವನು ಬಿಟ್ಟು ಹನುಮನ ಕಳುಹೆಂದು ||
ಕಂಜ ಸಂಭವ ಪೇಳ್ದ ಕೈಮುಗಿದು || ಕೇಳೆನ್ನ ||264||

ಕಂದ

ದ್ರುಹಿಣಾತ್ಮಜ ನೆಂದುದನುಂ |
ಮಿಹಿರಕುಲಾರ್ಣವಸುಧಾಂಶು ಲಾಲಿಸುತಾಗಂ ||
ವಿಹಿತವಿದೆಂದುಂ ಚಿತ್ತದಿ |
ಗ್ರಹಿಸುತಲಿಂತು ಹನುಮಂತ ನೊಡನಿಂತೆಂದಂ ||265||

ರಾಗ ನೀಲಾಂಬರಿ ಏಕತಾಳ

ಹೀಗೆ ಬಾರೋ ಏ ಹನುಮ | ಕಂಡೆಯ ತಮ್ಮ |
ನಾಗಮವನು ಸುಪ್ರೇಮ ||
ಹೇಗೆ ಸೈರಿಸಿಕೊಂಬೆನೈ | ಈತಗೆ ಬಂದ |
ಯೋಗವನೆಂತು ಕಾಂಬೆನೈ ||266||

ಮೊದಲು ಕೀಶಾಘವನು | ಜೀವಿಸಿದ ಗುಣ |
ನಿಧಿಯೈಸೆ ಹನುಮ ನೀನು ||
ಒದಗಿದ ಹರಿಬವನು | ಕಾದು ತಮ್ಮನ |
ಬದುಕಿಸಿಂದಿನೊಳೆಂದನು | ||267||

ರಾಗ ಘಂಟಾರವ ರೂಪಕತಾಳ

ವನಜಲೋಚನ ಅಘವಿಮೋಚನ |
ಧನುಜ ಮರ್ದನ ಕೀರ್ತಿ ವರ್ದನ ||
ಇನಿತು ಕೆಲಸಕೆ ಎನ್ನನೇತಕೆ |
ಘನವ ಮಾಡುವೆ ಪಿರಿದು ಪೊಗಳುವೆ ||268||

ಪನ್ನತಿಕೆಯಲಿ ಸುರರು ತಡೆಯಲಿ |
ವಹ್ನಿನೇತ್ರನೇ ಮುನಿದು ಪೋಗಲಿ ||
ನಿನ್ನ ಕರುಣ ಒಂದಿರಲಿ ತರುವೆನು |
ಮುನ್ನಿ ನಂದದಿ ಸಂಜೀವನವನು ||269||

ಎಂದು ರಾಮನ ಚರಣಕಾಕ್ಷಣ |
ವಂದನೆಯನು ಗೆಯ್ದು ಹನುಮನು ||
ಅಂದು ನೇಮವ ಕೊಂಡು ವಾಯುವ |
ನಿಂದು ಸ್ಮರಿಸುತ ಪೊರಟನುಬ್ಬುತ ||270||

ವಾರ್ಧಕ

ಕೋಮಲತರಾಂಗಿ ಕೇಳಿತ್ತಂಜನಾತ್ಮಜಂ |
ರಾಮಚಂದ್ರನೊಳೈದೆ ನೇಮವಂ ಕೊಂಡು ಸು |
ಪ್ರೇಮದಿಂ ಪೊರಟನಿಲವೇಗದಿಂದೌಷಧಿಗೆನುತ್ತ ಪೋಗಲ್ಕಿತ್ತಲು ||
ಅ ಮಹಾ ಲಂಕಾಪುರಾಧಿಪತಿಯಾಗಿರ್ಪ |
ಭೀಮಬಲ ದಶಕಂಠನಡೆಗೆ ಬೇವಿನ ಚರರ್ |
ವೈಮನಸ್ಸಿನೊಳಾಗ ನಡೆತಂದು ಪೇಳ್ದರೀ ವತ್ತಾಂತಮಂ ಭರದೊಳು ||271||

ರಾಗ ಸಾವೇರಿ ಅಷ್ಟತಾಳ

ದನುಜೇಂದ್ರ ಲಾಲಿಸಯ್ಯ | ನಾವೆಂಬುದ |
ಮನಸಿನೊಳಿಟ್ಟು ಜೀಯ   || ಪಲ್ಲವಿ ||
ತವ ಶಕ್ತಿಯಲಿ ಮಡಿದ | ಲಕ್ಷ್ಮಣನ ರಾ |
ಘವ ಪರಿಪರಿ ನೋಡಿದ ||
ವಿವರಿಸಿ ತಮ್ಮನ ಗುಣಗಳ ಮರುಗೆ ಜಾಂ |
ಬವನೊಡಬಡಿಸಿದನು ||  ಮತ್ತವನು  ||272||

ಈಗಲಾ ಸೌಮಿತ್ರಿಯ | ಜೀವಿಸುವುದ
ಕಾಗಿ ಮಾರುತ ತನಯ |
ಸಾಗಿದನಮಳ ಸಂಜೀವನವಿರುತಿರು |
ವಾ ಗಿರಿಗೆಂದೆನುತ || ಪೆರ್ಮೆಯೊಳಾತ ||273||

ಭಾಮಿನಿ

ಚಾರಕರ ನುಡಿಕೇಳ್ದು ಚಿಂತಾ |
ಭಾರದಲಿ ಕುದಿಕುದಿದು ದಶಶಿರ |
ನೇರಿದಾಸನವಿಳಿದು ಬಳಿಕೇಕಾಂತಮಂದಿರಕೆ ||
ಆರು ತಿಳಿಯದ ತೆರದೊಳೆಯ್ಯನೆ |
ಸಾರಿ ತನ್ನೊಳು ತಾನೆ ಹರ ಹರ |
ದಾರಿ ಮುಂದೇನೆನುತ ಬೇರೊಂದೆಣಿಸುತಿಂತೆಂದ ||274||

ರಾಗ ಕಾಂಭೋಜ ಜಂಪೆತಾಳ

ಕಲಿ ಹನುಮನೆಂಬುವನು ಪೋದ ಕಾರ್ಯವ ಮಾಡಿ |
ಕೊಳದೆ ಬಾರನು ಬಲ್ಲೆನವನು ||
ತಿಳಿಯಲೊಂದುಂಟುಪಾಯವು ಕಾಲನೇಮಿಯನು |
ಕಳುಹಿ ಮಾರ್ಗದಲಿ ವಿಘ್ನವನು ||275||

ಬಹುಪ್ರಕಾರದಿ ಗೆಯ್ಸಲದನು ಕಳೆದಾ ಮೇಲೆ |
ತಹನೈಸೆ ಹನುಮ ನೌಷಧಿಯ ||
ಬೃಹದರೊಳಗಿಲ್ಲಿ ಮತ್ತೊಬ್ಬರನು ನಾನು ನಿ |
ರ್ವಹಿಸದಿರ್ದಪೆನೊ ನಾಳಿನಲಿ ||276||

ಎಂದೆಣಿಸಿ ಮುಂಗೆಲಸಕಾ ಕಾಲನೇಮಿಯಿಹ |
ಮಂದಿರಕೆ ಪೋಗಬೇಕೆನುತ ||
ಮಂದಮತಿ ರಾವಣನು ಮತ್ತೋರ್ವರಿದನರಿಯ |
ದಂದದಲಿ ಪೊರಟು ನಡೆತಂದ ||277||

ಏಕಾಂಗಿಯಾಗಿ ಕಾಲ್ನಡೆಯಿಂದಲಯ್ತರುವ |
ಲೋಕೈಕ ವೀರನನು ಕಂಡು ||
ಅ ಕಾಲನೇಮಿಯರಿದಿದಿರಾಗಿ ಬಂದು ಕೂ |
ಡೇಕಾಂತ ಭವನಕಯ್ತಂದ ||278||

ರಾಗ ಸಾಂಗತ್ಯ ರೂಪಕತಾಳ

ಏನಯ್ಯ ದಶಕಂಠ ಮಧ್ಯರಾತ್ರೆಯಲಿ ದು |
ಮ್ಮಾನದೊಳಯ್ತಂದ ಕೆಲಸ ||
ಮಾನವಂತನೆ ಕರುಣಿಸು ತನಗೆಂದು ಸ |
ನ್ಮಾನದೊಳವನೊಡ ನೆಂದ ||279||

ಪೇಳಲು ತುದಿ ಬೀಳದೆಮ್ಮಯ ಪರಿಭವ |
ಪೇಳುವೆ ಸ್ವಲ್ಪ ಮಾತ್ರದಲಿ ||
ಕೇಳು ಹಾಗಾದಡೆ ಮಯನಿತ್ತ ಶಕ್ತಿಯಿಂ |
ದಾ ಲಕ್ಷ್ಮಣನ ಕೆಡಹಿದೆನೊ ||280||

ಅವನ ಜೀವಿಸಲು ಸಂಜೀವನ ತರುವರೆ |
ಪವನ ಸಂಭವ ದ್ರೋಣಗಿರಿಗೆ ||
ಹವಣಿಸಿ ಪೋಗಿಹನಂತೆ ನೀನಲ್ಲಿಗೆ |
ತವಕದಿ ತೆರಳಿ ಮುಂದಾಗಿ ||281||

ತಡೆದು ಮಾಯಾಮುನಿವೇಷದೊಳಗೆ ಪೋಗು |
ವೆಡೆಯ ಮಾರ್ಗದಲಿ ವಿಘ್ನವನು ||
ಬಿಡದೆಸಗುತ್ತ ಲೌಷಧಿಯನು ತಾರದಂ |
ತಡವರಿಸಯ್ಯ ಯತ್ನವನು ||282||

ಎನಲು ಪೇಳ್ದನು ಕಾಲನೇಮಿಯು ಕೇಳಯ್ಯ |
ಧನುಜೇಂದ್ರ ನೀನೇಕೆ ಬರಿದೆ ||
ಘನಮೂರ್ಖತನವನು ಗೆಯ್ವೆ ರಾಘವನಾರೆಂ |
ದೆನುತರಿಯದೆ ದ್ವೇಷದಿಂದ ||283||

ಆದಿ ನಾರಾಯಣನವನು ಕೇಳ್ ನಿನ್ನಯ |
ಭೇದವು ಕೊಳ್ಳದಾತನಲಿ ||
ಮೇದಿನಿ ಸುತೆಯನಿತ್ತಾ ರಾಮಚಂದ್ರನ |
ಪಾದವ ಮರೆಪೋಗು ಬೇಗ ||284||

ಅನುಜನ ಕರೆತಂದು ಪಟ್ಟವ ಕಟ್ಟಿಸಿ |
ವನವನ್ನು ಪೊಕ್ಕೊಂದೆ ಮನದಿ ||
ಚಿನುಮಯನನು ನೆನೆವುತ್ತ ಮುಂದಿನ ಗತಿ |
ಯನು ಕಾಣಬಾರದೇನಯ್ಯ ||285||

ಭಾಮಿನಿ

ಇಂದು ನಾನಯ್ದ ಸಮಾರನ |
ನಂದನನ ಕಪಟದೊಳು ತಡೆದರೆ |
ಹೊಂದುವುದು ಮಾರೀಚಗಾಗಿಹ ಗತಿಯು ತನಗೆನುತ ||
ಹಿಂದುಗಳೆ ವೈರವನು ರಾಮನೊ |
ಳೆಂದು ಪೇಳಲ್ಕವನ ನುಡಿಕೇ |
ಳ್ದಂದು ರೋಷಾವೇಶದಲಿ ದಶವದನನಿಂತೆಂದ ||286||

ರಾಗ ಶಂಕರಾಭರಣ ಏಕತಾಳ

ಎಲವೊ ಕಾಲನೇಮಿ ನಿನಗೆ |
ಸಲುಗೆ ಕೊಟ್ಟುದರಿಂದೆನಗೆ |
ಹಲವು ಮಾತು ಸಾಕು ನಡೆಯೊ | ತಳುವದೆ ಬೇಗ ||287||

ಒಳ್ಳೆಮಾತಿನಿಂದ ಪೋದ |
ರೊಳ್ಳಿತಾಯ್ತು ಮತ್ತೆ ನಿನ್ನ |
ಪಳ್ಳುತನವ ತೋರಲೀಗ | ಕೊಲ್ಲುವೆನೆಂದ ||288||

ಆಗಲಾಗಲದಕೇನು |
ಹೋಗಬೇಕೆಂದುದಾದರೆ |
ಬೇಗಲಪ್ಪಣೆಯ ನೀಡು | ಪೋಗುವೆ ನಾನು ||289||

ವಾರ್ಧಕ

ಎಂದೆನುತಲಾ ಕಾಲನೇಮಿ ತಾ ದಶಶಿರನ |
ನಂದು ಬೀಳ್ಗೊಟ್ಟಧಿಕ ವೇಗದಿಂದಾ ಲವಣ |
ಸಿಂಧುವಂ ದಾಟಿ ಹಿಮವದ್ಗಿರಿಯ ಪಾರ್ಶ್ವಮಂ ಸಾರ್ದು ಬಳಿಕಂ ಮಾಯದಿ ||
ಚಂದದಿಂದಲಿ ತಪವ ರಚಿಸುತ್ತಲವ ಶಿಷ್ಯ |
ವಂದಮಂ ಕೂಡಿ ಢಾಂಭಿಕವೆತ್ತಿ ಮುನಿವೇಷ |
ದಿಂದಾ ಸಮೀರಜಂ ಬೃಹದರೊಳ್ ನಾಸಿಕದಿ ಬೆರಳಿಟ್ಟು ಕುಳ್ಳಿರ್ದನು ||290||

ದ್ವಿಪದಿ

ಪುಂಡರೀಕಾಕ್ಷಿ ಕೇಳಿತ್ತ ಪವನಭವ |
ಕಂಡನಯ್ತರುವಾಗಳೀ ತಪೋವನವ ||291||

ಅಮಮ ಕಪಿ ಕರಡಿಗಳು ಝೆಂಕರಿಸುತಿರುವ |
ಭ್ರಮರಗಳು ನಲಿದಿರ್ದ ಬರ್ಹಿಗಳ ಸ್ವರವ ||292||

ಬಾಗಿರ್ಪ ಕದಳಿ ಖರ್ಜೂರ ದ್ರಾಕ್ಷಿಗಳ |
ಪೂಗ ಪುನ್ನಾಗ ಮೊದಲಾದ ವೃಕ್ಷಗಳ ||293||

ವೈರವಿಲ್ಲದೆ ಕುಣಿವ ವಿವಿಧ ಮಗಕುಲವ |
ಊರ್ವಿಗತಿ ಚೋದ್ಯವಿಹ ಪಕ್ಷಿಸಂಕುಲವ ||294||

ಕಾಣುತತಿ ವೈಭವವನಂಜನಾಸುತನು |
ಮಾಣದಾಗಲೆ ಮುಂದೆ ಬಂದ ಮತ್ತವನು ||295||