ರಾಗ ಭೈರವಿ ಏಕತಾಳ

ದಶಕಂಠನಹುದೊ ನೀನು | ನಿನ್ನಧಟನು |
ದೆಸೆಗೆಡಿಸಲು ಬಂದೆನು |
ಅಸಮ ಸತ್ತ್ವವ ತೋರು ತೋರೆಂದು ಕಲುಮರ |
ವಿಸರದಿ ಮುಸುಕಿದನು ||157||

ಬಿಡದಾ ಕಲ್ಮರಗಳನು | ಬಾಣದಿ ತರಿ |
ದೊಡನೆ ದಶಾನನು ||
ಕಡು ಕೋಪದಿಂದ ಚಾಪಕೆ ಶರವನು ಪೂಡಿ |
ನುಡಿದನಾತನೊಳವನು ||158||

ಎಂದು ಲಂಕೇಶ್ವರನು | ತೀವ್ರದಿ ಬಿಡ |
ಲಂದು ಭಾಸ್ಕರ ಸುತನು ||
ಒಂದರೆಘಳಿಗೆ ಮೂರ್ಛೆಯನಾಂತು ಬಳಿಕೆದ್ದು |
ನಿಂದು ಬೊಬ್ಬಿರಿದೆಂದನು ||159||

ಬಲು ಧೀರನಹೆಯೊ ನೀನು | ಅಂಗದನ ತೊ |
ಟ್ಟಿಲೊಳು ಕಟ್ಟೊಡದವನು ||
ಭಳಿರೆ ಬಲ್ಲೆನು ನಿನ್ನ ಸತ್ತ್ವವನೆನುತಲಿ |
ಕಲುಮರದಲಿ ಪೊಯ್ದನು ||160||

ಕ್ರೋಧದಿ ರಾವಣನು | ಮತ್ತದನೆಲ್ಲ |
ಛೇದಿಸಿ ರವಿಜನನು ||
ಆದರೀ ಬಾಣವನಾಂತುಕೊಳ್ಳೆನುತಲಿ |
ಮೂದಲಿಸುತಲೆಚ್ಚನು ||161||

ಭಾಮಿನಿ

ಬಾಣಹತಿಯಲಿ ಬಸವಳಿದು ಮಿಗೆ |
ತ್ರಾಣಗುಂದಿ ದಿನೇಶತನಯನು |
ಕ್ಷೋಣಿಯಲಿಮತಿಗೆಟ್ಟುಮಲಗಿದನಂದುಮೂರ್ಛೆಯಲಿ ||
ಕಾಣುತದನಂಗದನು ಖತಿಯಲಿ |
ಹೂಣಿಗರ ಹೊಯ್ದರಸಿ ದಿವಿಜ |
ಶ್ರೇಣಿಯನು ಬೆಚ್ಚಿಸುವೆನೆಂದಿದಿರಾದನಾ ಖಳಗೆ ||162||

ರಾಗ ದೇಶಿ ಅಷ್ಟತಾಳ

ಎಲ್ಲಿ ಪೋಪೆಯೊ ಫಡ ಫಡ ದಶಕಂಠ |
ನಿಲ್ಲು ನಿನ್ನಯ ಬಲ್ಲ ತನವೆ |
ನ್ನಲ್ಲಿ ತೋರ್ ತೋರೆಂದನು ||163||

ಕಲ್ಲು ಹೆಮ್ಮರಗಳಲಿ ರಾಕ್ಷಸ ಸೈನ್ಯ |
ವೆಲ್ಲವನು ಮಿಗೆ ಚೆಲ್ಲ ಬಡಿನು |
ಮಲ್ಲ ವಾಲಿಕುಮಾರನು ||164||

ಪಡೆಯನೆಲ್ಲವ ಮಡುಹಲಂಗದನನಂ |
ದೊಡನೆ ಖಳನುರೆಕಂಡು ನಯನದಿ |
ಕಿಡಿಯನುಗುಳುತ ನುಡಿದನು ||165||

ಫಡ ವನಚರ ಕೇಳೆಲೊ ನಿನ್ನಯ |
ಕಡುಹ ನಿಲಿಸದೆ ಬಿಡೆನು ತವ ಗಡ |
ಬಡೆಗಳೆನ್ನೊಳು ತೋರಿಸು ||166||

ಎಂದು ಬೊಬ್ಬಿರಿದೆದ್ದು ನಾಲ್ದೆಸೆಯನ್ನು |
ಮುಂದುವರಿದಮರೆಂದ್ರ ತನಯನ |
ನಂದನನ ತೆಗೆದೆಚ್ಚನು ||167||

ಬಂದು ಮುಕ್ಕುರಿಕಿದುದಂಬು ಮೈಯಲಿ |
ನೊಂದು ತನುಮನಗುಂದಿ ಮೂರ್ಛೆಯೊ |
ಳಂದು ಮಲಗಿದನಾತನು ||168||

ವಾರ್ಧಕ

ತರಣಿ ಸುತನಂ ಕೆಡಹಿ ಯುವರಾಜನಂ ಮುರಿಯ |
ಲುರು ಭಯಂಕರ ನೀಲನಿದಿರಾದಡಾತನಂ |
ಭರದಿ ಸಾಹಸವನೊಪ್ಪಂಗೆಡಿಸಿ ಜಾಂಬವ ನಳಾದಿ ಭಟರಂ ಸೋಲಿಸಿ ||
ಶರಭ ಮೈಂದ ದ್ವಿವಿದ ಗಂಧಮಾದನ ಗವಯ |
ರುರವಣೆಗಳಂ ನಿಲಿಸಿ ಕಾಲಭೈರವನಂತೆ |
ಕೆರಳಿ ಮುಂದಯ್ತರುವ ದುರುಳ ದಶಕಂಠಗಿದಿರಾದನಾ ಸೌಮಿತ್ರಿಯು ||169||

ರಾಗ ಶಂಕರಾಭರಣ ಏಕತಾಳ

ಕಳ್ಳ ರಕ್ಕಸನೆ ಮುಂದಾ | ವಲ್ಲಿ ಪೋಪುದೆನ್ನ ಸಮರ |
ದಲ್ಲಿ ಗೆಲ್ದ ಬಳಿಕಲಣ್ಣ | ನಲ್ಲಿಗೆ ಸಾರೊ ||170||

ಹುಡುಗ ನೀನು ನಿನ್ನೊಳೆಮ್ಮ | ಕಡುಹುಲೇಸಗೊಡದು ನಿನ್ನ |
ಒಡಹುಟ್ಟಿದವನೊಳೀಗ | ಬೆಡಗ ತೋರ್ಪೆನು ||171||

ಕೊಳಚೆ ನೀರ ದಾಟಲಾರ | ದೊಳವಿಗೇಕೊ ಕಡಲಮಾತು |
ಗೆಲಿದು ಮೊದಲೊಳೆನ್ನನಣ್ಣ | ನಳವಿಗೆ ಬಯಸೊ ||172||

ಮಕ್ಕಳಾಟಿಕೆಯೊಳು ತನಗೆ | ತಕ್ಕುದನಾಡದೆ ಬಹಳ |
ಸೊಕ್ಕಿನ ಮಾತಾಡಿ ಬರಿದೆ | ಘಕ್ಕನಳಿವೆಯೊ ||173||

ಬಾಯಿಗೆ ಬಂದಂತೆ ಕೆಟ್ಟ | ನಾಯಿಯಂತೆ ಬಗುಳಿ ಕಡೆಗೆ |
ಸಾಯಬೇಡ ತೋರಿಸು ನಿ | ನ್ನಾಯತಿಕೆಯನು ||174||

ರಾಗ ಘಂಟಾರವ  ಮಟ್ಟೆತಾಳ

ಎನಲು ಕೇಳುತ | ಮನದಿ | ಕಿನಿಸ ತಾಳುತ |
ಘನತರಾಸ್ತ್ರದಿಂದ ಲೆಚ್ಚ | ದನುಜ ಗಜರುತ ||175||

ಎಸೆದ ಸರಳನು | ಬೇಗ | ಕುಸುರಿ ತರಿದನು |
ಮುಸುಕಿದನು ಶರೌಘದಿಂದ | ಲಸುರಪತಿಯನು ||176||

ಬರುವ ಕೋಲನು | ನಡುವೆ | ತರಿದು ಬಿಸುಟನು ||
ಉರಿಯನುಗುಳುತಾಗ ಹೂಂ | ಕರಿಸುತೆಚ್ಚನು ||177||

ಎಸುಗೆಗೆಸೆವುತ | ಬಾಣ | ವಿಸರ ಧುಮುಕುತ |
ಪಸರಿಸಿದುದು ಮುಂದೆ ಪತ್ತು | ದೆಸೆಯನೌಕುತ ||178||

ಧರಣಿತಗ್ಗಿತು | ಸಪ್ತ | ಶರಧಿಯುಕ್ಕಿತು |
ಗಿರಿಗಳದುರಿ ತುರಗಪತಿಯ | ಕೊರಳು ಕುಗ್ಗಿತು ||179||

ರಾಗ ನಾದನಾಮಕ್ರಿಯೆ ಅಷ್ಟತಾಳ

ಹೀಗೆ ಕಾದುತಲೀರ್ವರಿರಲಂದು | ಕಾಣು |
ತಾಗ ವಿಭೀಷಣನುರೆ ನೊಂದು ||
ಹೇಗಾಗುವುದೊ ಲಕ್ಷ್ಮಣನಿಗೆಂದು | ಬಂದ |
ಬೇಗ ಗದೆಯ ಧರಿಸುತಲಂದು ||180||

ಗದೆಗೊಂಡು ಬೃಹ ವಿಭೀಷಣನನು | ಕಂಡು |
ಕದನ ಚೌಪಟ ದಶಕಂಠನು ||
ಅಧಿಕ ರೋಷದೊಳು ಪಲ್ಮೊರೆವುತ್ತ | ನೆಲ |
ನೊದೆದು ಪೇಳಿದನು ಹೂಂಕರಿಸುತ್ತ ||181||

ಸುಡು ಸುಡು ಛೀ ನಿನ್ನ ಮೋರೆಯ | ವೈರಿ |
ಯೊಡನೆ ಬಂದೆನಗಿದಿರಾದೆಯ ||
ಒಡಲಾಸೆ ತೀರಿತೆಂದೆಣಿಸಿಕೊ | ಬೇಗ |
ದಢವಾದ ದೇವರ ನೆನೆಸಿಕೊ ||182||

ಎನುತಲೆ ಮಯನಿತ್ತ ಶಕ್ತಿಯ | ಸುರ |
ಜನ ಬೆರಗಾಗೆ ರಾಕ್ಷಸರಾಯ ||
ಘನತರ ಕೋಪದಿ ತುಡುಕುತ್ತ | ಬೈದು |
ಪುನರಪಿ ಪೇಳ್ದನು ಕನಲುತ್ತ ||183||

ಭಾಮಿನಿ

ಎಲವೊ ದುರ್ಜನರೆರೆಯ ಭಂಡರ |
ತಿಲಕ ಹೇಡಿಗಳರಸ ಕೆಡುಕರ |
ಕುಲ ಶಿರೋಮಣಿ ಕೇಳು ನಿನ್ನನು ಕಾವರಾರೆಂದ ||
ತಳುವದಿದ ನೋಡೀಗ ಫಡ ಫಡ |
ತೊಲಗದಿರು ನಿಲ್ಲೆನುತ ಪರಮೋ |
ಜ್ಜ್ವಲಿತಶಕ್ತಿಯ ತೆಗೆದು ತಿರುಪಿಟ್ಟನು ದಶಾನನನು ||184||

ರಾಗ ಮಧ್ಯಮಾವತಿ ತ್ರಿವುಡೆತಾಳ

ಝಣ ಝಣತ್ಕೃತದಿಂದ ಬರುವಾ |
ಕುಣಪ ಭೋಜನನಿಟ್ಟ ಶಕ್ತಿಯ |
ಫಣಿಪನಂಶಜ ಲಕ್ಷ್ಮಣನು ಕಂ |
ಡೆಣಿಸುತಿರ್ದನು ಮನದಲಿ | ತನ್ನೊಳಿಂತು ||185||

ರಾಮನಭಯವನೀತಗಿತ್ತಿಹ |
ನೀ ಮಹಾರಾಕ್ಷಸನ ಕೊಂದೀ |
ಹೇಮಮಯ ಲಂಕಾಧಿಪತ್ಯವ |
ಪ್ರೇಮಿಸುವೆನೆಂದೆನುತಲಿ | ಮೊದಲೊಳಿವಗೆ ||186||

ಖಳನ ಶಕ್ತಿಗೆ ನಿಮಿಷಮಾತ್ರದೊ |
ಳಳಿವ ನಿಶ್ಚಯನೀ ವಿಭೀಷಣ |
ನುಳಿವ ತೆರನನು ಮಾಡದಿರ್ದಡೆ |
ಫಲಿಸದೆಮ್ಮಗ್ಗಳಿಕೆಯು | ಲೋಕದೊಳಗೆ ||187||

ರಾಗ ಶಂಕರಾಭರಣ ಮಟ್ಟೆತಾಳ

ಎಂದು ಬರುವ ಶಕ್ತಿಗಿದಿರು ನಿಂದು ಲಕ್ಷ್ಮಣ |
ಮುಂದುವರಿದು ಕಡಿವೆನೆಂಬನಿತರೊಳಾಕ್ಷಣ ||
ಬಂದು ಪೊಕ್ಕುದಾಗ ಮೆಯ್ಯಳಾಮಹಾಸ್ತ್ರವು |
ನಿಂದುದಾ ಸುಮಿತ್ರೆಯಾತ್ಮಭವನ ಸತ್ತ್ವವು ||188||

ಭಾಮಿನಿ

ಘೋರ ಶಕ್ತಿಯ ಹತಿಗೆ ರಘುಕುಲ |
ವೀರನನುಜನು ಮೈಮರೆದು ರಣ |
ಧಾರಿಣಿಯೊಳೊರಗಿದನು ಸುರತರು ಮಲಗಿತೆಂಬಂತೆ ||
ಮೂರು ಲೋಕದ ಜನಕೆ ಭಯವನು |
ಭಾರಿಸಿತು ಹೊಗೆ ಮುಸುಕಿ ಖಳನು |
ಬ್ಬೇರಿದನು ಕ್ಷಣಮಾತ್ರದೊಳಗೇನೆಂಬೆನದ್ಭುತವ ||189||

ರಾಗ ಕಾಂಭೋಜಿ ಝಂಪೆತಾಳ

ಸೀತೆಯನು ಕದ್ದೊಯ್ದ ರೀತಿಯಲಿ ಕೊಂಡೊಯ್ವೆ |
ನೀತನನು ಲಂಕೆಗೆಂದೆನುತ ||
ಆತನಾಕ್ಷಣ ನಿಜವರೂಥದಿಂದಿಳಿದು ರಘು |
ನಾಥನನುಜನ ಪೊರಗೆ ಬಂದು ||190||

ತ್ವರಿತದಲಿ ಬಂದೆರಡು ಕರದಿಂದ ಲಕ್ಷ್ಮಣನ |
ನಿರದೆ ನೆಗಹಲ್ಕೆ ದಶಶಿರನು ||
ಅರರೆ ಬಹು ಭಾರದಿಂದಾನಲಾರದೆ ಹೋಗಿ |
ಧರಣಿಯಲಿ ಮೊಳನೂರಿ ಬಿದ್ದ ||191||

ಆದಡೇನಾಯ್ತೆನುಲೆದ್ದು ಪುನರಪಿ ಖಳನು |
ಕ್ರೋಧದಲಿ ಜಡಿದು ಖಡುಗವನು ||
ಛೇದನವ ಗೆಯ್ದಿವನ ಶಿರವ ತನ್ನಯ ನಗರ |
ಕೊಯ್ದಪೆನೆನುತ್ತ ನಿಂದಿರ್ದ ||192||

ಭಾಮಿನಿ

ಮಂಜುಬೆಟ್ಟನ ಕುವರಿಕೇಳಾ |
ಕಂಜಸಖಕುಲತಿಲಕನನುಜನ |
ಭಂಜಿಸುವೆನೆಂದೆನುತ ರಾವಣನೆದ್ದು ನಿಂದಿರಲು ||
ಕುಂಜರನ ಪಡಿಮುಖಕೆ ಹರಿತಹ |
ರಂಜಕದ ಪಂಚಾಸ್ಯನಂದದೋ |
ಳಂಜನಾಸುತನಂದು ಮೆಯ್ದೋರಿದನು ದಶಶಿರಗೆ ||193||

ಕಂದ

ವಾಯು ಕುಮಾರಕನಂ ಖಳ |
ರಾಯನು ಕಾಣುತ್ತಲಧಿಕ ಭೀತಿಯೊಳಾಗಳ್ ||
ಕಾಯದ ಕಂಪನದೊಳ್ ಪಿಡಿ |
ದಾಯುಧಮಂ ಬಿಟ್ಟು ಬೆಚ್ಚಿ ಬೆರಗಿನೊಳಿರ್ದಂ ||194||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಭಳಿರೆ ದಶಶಿರ ಶಸ್ತ್ರವಿದ್ಯವ |
ಕಲಿತ ಬಗೆಯಿನಿತೇನೊ ಮೂರ್ಛೆಯ |
ತಳೆದು ರಣದಲಿ ಮಲಗಿದವರನು | ಕೊಲುವೆಯೇನೈ ||195||

ಇದಕೆ ಪ್ರಾಯಶ್ಚಿತ್ತವನು ಮಾ |
ಡದಡೆ ಲೇಸಲ್ಲೆನುತ ಮುಷ್ಟಿಯ |
ನೊದಗಿನಲಿ ಬಲಿವುತ್ತಲೆಂದನು | ಚದುರ ಹನುಮ ||196||

ಕರೆಸಿಕೋ ಬ್ರಹ್ಮನನು ಭಗು ಜನ |
ಬರಿಸು ಮತಸಂಜೀವಿನಿಯ ತೆಗೆ |
ದಿರಿಸು ಸಾಯದುಪಾಯವನು ಸ | ತ್ವರದಿ ರಚಿಸೊ ||197||

ನಿರತವಿದು ಕೇಳೆಲವೊ ನಾವಂ |
ತರಿಸುವವರಲ್ಲೆನುತ ಕ್ರೋಧದೊ |
ಳೆರಗಿದನು ಪವನಾತ್ಮಜನು ದಶ | ಶಿರನಿಗಂದು ||198||

ಹತ್ತು ಬಾಯೊಳಗೊಡನೆ ಬಿಸಿ ಬಿಸಿ |
ನೆತ್ತರನು ಕಾರುತಲಿ ಬಿದ್ದನು |
ಮತ್ಯುಬಡಿವಂದದಲಿ ಪ್ರಾಣವು | ನೆತ್ತಿಗೇರಿ ||199||

ಭಾಮಿನಿ

ಮುಷ್ಟಿಹತಿಯಲಿ ವಶವಳಿದು ಕಂ |
ಗೆಟ್ಟು ಹರಿವರುಣಾಂಬು ಪೂರದಿ |
ಥಟ್ಟು ಗೆಡೆದವನಿಯಲಿ ಮಿಡುಕುವ ರಾಕ್ಷಸೇಶ್ವರನ ||
ನಿಟ್ಟಿಸುತ ವಾಯುಜನು ರಘುಪತಿ |
ಸಿಟ್ಟು ಮಾಡದೆ ಇರನು ಬರಿದೇ |
ಕೆಟ್ಟುದಕಟಾ ರಾಜಕಾರ್ಯವೆನುತ್ತ ಚಿಂತಿಸಿದ ||200||

ರಾಗ ಸಾಂಗತ್ಯ ರೂಪಕತಾಳ

ಜ್ಞಾನವರ್ಜಿತನಾಗಿ ಮಾಡಿದೆ ಘಾತವ |
ನಾನಲಾರದೆ ಕೋಪವನ್ನು ||
ದಾನವೇಂದ್ರನ ಮೇಲೆ ಕೈಮಾರ್ದುದೆಮ್ಮದಿ |
ನ್ನೇನ ಮಾಡುವೆನಯ್ಯೋ ವಿಧಿಯೆ ||201||

ನ್ಯಾಯವಲ್ಲೆಂದಮರರು ಪೇಳದಿಹರೆ ರಾ |
ಮಾಯಣವೆಂದೆಂಬ ಪೆಸರು ||
ವಾಯವಾಯ್ತೆಂದು ಚಿತ್ತದಿ ರಘುನಾಥನು |
ನೋಯದಿರ್ದಪನೆ ತಾನಿಂದು ||202||

ಅಕಟಕಟಿನ್ನು ನಾ ಸ್ವಾಮಿ ದ್ರೋಹಿಕೆಯ ಪಾ |
ತರಕೆ ಭಾಜನನಾದೆನಲ್ಲ |
ಸಕಲ ಲೋಕಾಧೀಶ ರಾಮಚಂದ್ರನ ಭಾಷಿ |
ತಕೆ ನೆಳಲಾದೆನಯ್ಯಯ್ಯ ||203||

ಭಾಮಿನಿ

ಐಸೆ ಮತ್ತೇನೆಮ್ಮ ದುಷ್ಕೃತ |
ದೋಷವಿದಲಾ ಮಾರಲಾರಳ |
ವೇಸು ಮರುಗಿದಡೇನು ನೋಡುವೆನೊಮ್ಮೆಗೀ ಖಳನ ||
ವಾಸಿಯಂತರ್ಗತ ಖಳ ಪ್ರಾ |
ಣಾಸುಗತ ಸತ್ಪ್ರಾಣಗತಪರ |
ಮಾಶುಗನು ಹಿಂಗಿದಡೆ ಹೊಗುವೆನು ಹವ್ಯವಾಹನನ ||204||

ರಾಗ ಭೈರವಿ ಝಂಪೆತಾಳ

ಎಂದು ನಿಶ್ಚಯಿಸಿ ದಶ |
ಕಂಧರನ ಹತ್ತಿರಕೆ |
ಬಂದುಸಿರನಾರಯ್ದ | ನಂದು ಪವನಜನು ||205||

ಎದೆಯೊಳಗೆ ತುಸು ಮಿಡುಕ |
ವಿದೆ ಪ್ರಾಣವೆಂದೆನುತ |
ಕುದಿಗೊಳುತ ತತ್‌ಕ್ಷಣದೊ | ಳುದಕವನು ತಂದು ||206||

ಆದರದೊಳವಯವಕೆ |
ತೋದಿ ಮೆಲ್ಲನೆಪೂಸ |
ಲಾಧರಿಸಿಕೊಂಡೆದ್ದ | ನಾ ದಶಾನನನು ||207||

ಚೇತರಿಸಿ ಮೆಲ್ಲನೆ |
ದ್ಧಾತನನು ನೋಡುತ್ತ |
ಲಾ ತತುಕ್ಷಣ ಹನುಮ | ನೀ ತೆರದೊಳೆಂದ ||208||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಲವೊ ರಕ್ಕಸ ಗಾಯಕೌಷಧಿ |
ಗೊಳಿಸು ಬೆದರದಿರಿನ್ನು ಬರದೇ |
ಕೊಲುವವನು ನಾನಲ್ಲ ರಣದಲಿ | ಬಳಲಿದವರ ||209 |

ಬೇರೆ ಮಾತಿಲ್ಲಂಜದಿರು ಕೈ |
ಮಾರುವವರಲ್ಲಿನ್ನು ನೀ ರಘು |
ವೀರನನು ಕೆಣಕಿದರೆ ಶೌರ್ಯವ | ತೋರಿಸುವನು ||210||

ಎಂದು ರಣಭೂಮಿಯಲಿ ಮೂರ್ಛೆಗೆ |
ಸಂದು ಪವಡಿಸಿದೂರ್ಮಿಳಾಪತಿ |
ಯಂದವನು ಕಾಣುತ್ತ ಮನದಲಿ || ನೊಂದು ಕೊಳುತ ||211||

ರಾಗ ಕೇದಾರಗೌಳ ಅಷ್ಟತಾಳ

ಸುರಿವ ಕಂಬನಿಯನ್ನು ಸೆರಗಿಂದಲೊರಸುತ್ತ |
ಮರುತಕುಮಾರಕನು ||
ಹರಹರ ರವಿಕುಲಜರಿಗಿಂಥ ಭವಣೆಯು |
ದೊರಕಿತಿಂದಿನಲೆಂದನು ||212||

ಮರುಗಿ ಮಾಡುವುದೇನೆನುತ್ತ ಸೌಮಿತ್ರಿಯ |
ನೆರಡು ಕೈಯ್ಯಿಂದಲೆತ್ತಿ ||
ಧರಣಿಪನಿದಿರಲಿ ತಂದಿಳುಹಿದ ಕಳೇ |
ವರವನು ಹನುಮಂತನು ||213||

ಭಾಮಿನಿ

ಹನುಮನೀ ಪರಿಯಲಿ ಸುಮಿತ್ರಾ |
ತನಯನನು ತಂದಿಳುಹಲಲ್ಲಿಗೆ |
ಘನದ ಗರ್ಜನೆಯಿಂದ ನಡೆತಂದನು ದಶಾನನನು ||
ಮನದೊಳವ ಬಂದುದನು ಗಣಿಸದೆ |
ಜನಕಜಾ ವಲ್ಲಭನು ದುಃಖದೊ |
ಳನುಜನನು ಕಾಣುತ್ತಲಾ ವಾಯುಜನೊಳಿಂತೆಂದಾ ||214||

ರಾಗ ನೀಲಾಂಬರಿ ಆದಿತಾಳ

ಏನಯ್ಯ ವಾಯು ಸಂಜಾತ | ಮಾನವಂತ ಖ್ಯಾತ ||
ಭಾನುಕುಲದ ಕೋಳು ಹೋಯ್ತೆ | ನೀ ನಿಶ್ಚಯವ ಪೇಳೈ ||215||

ಹರಿದುದೊ ಋಣಾನುಬಂಧ | ಹರಚಿತ ಲಕ್ಷ್ಮಣಗೆ ||
ಇರುವುದೆ ಪ್ರಾಣಾಂಶವೆಂಬು | ದರುಹಯ್ಯ ಬೇಗದಲಿ ||216||

ಬಲದ ಭಾಗವೀತನೆಂದು | ಗೆಲವಿನಿಂದಲಿರ್ದೆ ||
ನೆಲೆಯ ಪೇಳೈ ತಮ್ಮನಿರವ | ತಳುವದೆನ್ನೊಳ್ ನಿಜವ ||217||

ರಾಗ ಬೇಗಡೆ ಏಕತಾಳ

ಲಾಲಿಸೈ ಭೂಪಾಲ ಕುಲವರ್ಯ | ಸದ್ಧೈರ್ಯನಾಗೈ |
ಕಾಲವಲ್ಲಿದು ಶೋಕಕೆಲೆ ಜೀಯ |
ಖೂಳ ದಶಶಿರ ಬಂದನಿದೆ ನೋ |
ಡೇಳು ರಣಕಲಿಯಾಗು ಸುಮ್ಮನೆ |
ತಾಳದಿರು ದುಮ್ಮಾನವನು ನಾ |
ಪೇಳುವೆನು ಮುಂದೆಲ್ಲ ಕಾರ್ಯವ || ಲಾಲಿಸೈ || ಪ ||218||

ಬಂದ ಹರಿಬಕೆ ಮೆಯ್ಗಡದೆ ನೀ | ನಿಂದು ಮರುಗತ್ತ | ಕುಳ್ಳಿರೆ |
ಚಂದವೇ ಜಗದಾತ್ಮ ದೇವ ಮು | ಕುಂದ ನೋಡಿತ್ತ | ಕಾಳಗ |
ಕೊಂದೆ ಮನವನು ಮಾಡು ಸುಮನಸ | ವಂದ ಬೆದರುತ್ತ || ಇರ್ದಪ |
ರೆಂದು ಮಾರುತ ನಂದನನು ನುಡಿ |
ದಂದವನು ಕೇ | ಳ್ದಂದು ರಾಘವ |
ಕುಂದದಾಗಳೆ | ಮುಂದೆ ಬೃಹ ದಶ | ಕಂಧರನ ಖತಿ | ಯಿಂದ ಕಂಡನು ||  ಲಾಲಿಸೈ ||219||

ಭಾಮಿನಿ

ಗಿರಿಜೆ ಕೇಳಾ ರಾಕ್ಷಸಾಧೀ |
ಶ್ವರನ ಕಾಣುತ ದಶರಥಾತ್ಮಜ |
ಗೆರಡು ಕಂಗಳು ಕೆಂಪಡರ್ದುದು ಮಾಸೆಯಲುಗಿದುದು ||
ವರ ಮಹಾ ಧನುಶರವ ಕೊಂಡ |
ಬ್ಬರದ ಗರ್ವದೊಳೌಡುಗಚ್ಚುತ |
ಸುರರು ಹಾರಯಿಸಲ್ಕೆ ಸಮರಕೆ ನಿಂದನಾಕ್ಷಣದಿ ||220||

ರಾಗ ಪಂಚಾಗತಿ ಮಟ್ಟೆತಾಳ

ವೀರರಾಮನಂದು ವರ ಸ |
ಮೀರಸುತನ ಹೆಗಲನೇರಿ |
ವೈರಿಯನ್ನು ಕಂಡು ತನ್ನ | ಭಾರಿ ಬಿಲ್ಲಿಗೆ ||
ನಾರಿಯನ್ನು ತೊಡಿಸಿ ಝೆಂ |
ಕಾರ ಧ್ವನಿಯ ಗೆಯ್ವುತಮರ |
ವಾರ ಪೊಗಳಲೆಂದನವನೊ | ಳಾರು ಭಟಿಸುತ ||221||

ಎಲವೊ ಖಳನೆ ಹಿಂದೆ ನಮಗೆ |
ತಿಳಿಯದಂತೆ ನಮ್ಮ ಸತಿಯ |
ಕಳವಿನಿಂದ ಲೊಯ್ದ ಕೆಟ್ಟ | ಹೊಲೆಯ ನೀನಹೆ ||
ಬಲುಹ ಮುರಿದು ದೇವತಲೆಯ |
ನೊಲಿದು ಸಂತವಿಡುವೆನೊಂದು |
ಘಳಿಗೆ ನಿಲ್ಲೆನುತ್ತಲತಿ ಮೂ | ದಲಿಸುತೆಚ್ಚನು ||222||

ಕಡುಹು ಗಾರನಹುದು ನಿನ್ನ |
ನುಡಿಯ ಕೇಳ್ದು ಮನಕೆ ಹರುಷ |
ಬಡುವದೀಗ ಕೇಳು ಮನುಜ | ದಢದ ಮಾತಿದು ||
ಮಡದಿಯನ್ನು ಕಳೆದುದಲ್ಲ |
ದೊಡನೆ ನಮ್ಮ ಕೆಣಕಿಬರಿದೆ |
ಕೆಡುವೆ ಫಡ ಫಡೆನುತಲಾಗ | ತಡೆಯ ದೆಚ್ಚನು ||223||

ಎಸುವಡೆಸೆದ ಶರಗಳನ್ನು |
ಕುಸುರಿದರಿದು ಬಳಿಕ ಬಾಣ |
ವಿಸರವನ್ನು ಮುಸುಕಿ ಹೂಂಕ | ರಿಸುತ ಲೆಚ್ಚನು ||
ಅಸಮ ಶರಧಿಯೊಡನೆ ಶರಧಿ |
ಮುಸುಕುವಂತೆ ಮುಂದ್ವರಿದು ರಾ |
ಕ್ಷಸಕುಲೇಂದ್ರನಂದು ಕದನ | ವೆಸಗುತಿರ್ದನು ||224||

ಮಲೆತು ಸಿಂಹನೊಡನೆ ಸಿಂಹ |
ಕುಲಿಶದೊಡನೆ ಕುಲಿಶ ಹುಲಿಯು |
ಹುಲಿಯೊಳಿದಿರು ನಿಂದು ಭರದಿ | ಹಳಚುವಂದದಿ ||
ಕಲಹಕಲಿಗಳೀರ್ವರುಬ್ಬಿ |
ಭಳಿರೆ ಭಾಪೆನುತ್ತ ಕದನ |
ತಳವು ತುಂಬಿದಂತೆ ಸರಳ | ಮಳೆಯ ಕರೆವುತ ||225||

ಅಗ್ಗದಾರುಭಟೆಗಳಿಂತು |
ಹಿಗ್ಗಿ ಕಾದುತಿರಲು ಧರಣಿ |
ತಗ್ಗಿತೊಡನೆ ಕಮಠನಳುಕಿ | ಮಗ್ಗುಲಾದನು ||
ದಿಗ್ಗಜಂಗಳೈದೆ ನೊಂದು |
ಬಗ್ಗಿಸಿದುದು ಕೊರಳನೀರ್ವ |
ರಗ್ಗಳಿಕೆಯ ನೇನನೆಂಬೆ | ಸದ್ಗುಣಾನ್ವಿತೆ ||226||

ಅಗಜೆ ಲಾಲಿಸಿತ್ತ ಬಳಿಕ |
ರಘು ಕುಲಾಗ್ರಣಿಯನು ಹನುಮ |
ಪೆಗಲೊಳಾಂತು ಬೀದಿವರಿದ | ನಗಡು ತನದಲಿ ||
ಬಗೆಯ ಕಂಡು ಮನದಿ ಕೋಪ |
ಭುಗಿಲೆನುತ್ತಲಸುರ ಪತಿಯು |
ಹೊಗರುಕಣೆಗಳಿಂದಲೆಚ್ಚ | ಧಿಗಿಲೆನುತ್ತಲಿ ||227||

ಕಂಡು ರಾಮನಾಗ ಖತಿಯ |
ಕೊಂಡು ಖಳನ ಕರದೊಳಿಹ ಕೋ |
ದಂಡವನ್ನು ಕಡಿದ ಸುಪ್ರ | ಚಂಡ ಸಾಹಸ ||
ದಿಂಡುದರಿದು ರಥವನೆರಡು |
ತುಂಡು ಗಡಿದು ಕ್ಷಣದೊಳವನ |
ಷಂಢನೆನಿಸಿ ಬಿಟ್ಟನಂದು | ದ್ದಂಡ ಸತ್ವದಿ  ||228||

ಕಂದ

ಕರದುರುತರ ಕಾರ್ಮುಕಮಂ |
ವರ ಸಾರಥಿ ರಥವನಯ್ದೆ ರಘು ಕುಲತಿಲಕಂ ||
ಧುರದೊಳು ತಡೆಗಡಿಯಲ್ಕಾ |
ದುರುಳ ದಶಾನನನು ಖತಿಯ ತಾಳ್ದಿಂತೆಂದಂ ||229||

ರಾಗ ಭೈರವಿ ಏಕತಾಳ

ಎಲವೊ ಮನುಜ ನೀ ಕೆಟ್ಟೆ | ಬೆಂ | ಬಲವಿಲ್ಲದೆ ರಣಗೊಟ್ಟೆ ||
ಬಿಲು ಖಂಡಿಸಲದಕೇನೊ | ಕಡು | ಗಲಿತನ ಹಿಂಗುವುದೇನೊ ||230||

ಎನುತ ಮಹಾಸಿಯ ಕೊಂಡು | ಖಳ | ನನುವಾಗುತ್ತಿರೆ ಕಂಡು ||
ಅನುವರದಲಿ ರಾಘವನು | ಸೆಳೆ | ದನು ನಗುತಾ ಖಡ್ಗವನು ||231||

ಖಡುಗವು ಪೋಗಲ್ಕಾಗ | ಕಂ | ಡೊಡನೆ ದುರುಳನತಿಬೇಗ ||
ಪಿಡಿಯೆ ಗದಾ ದಂಡವನು | ಕೈ | ದುಡುಕಿ ಸೆಳೆದ ರಘುವರನು ||232||

ಭಾಮಿನಿ

ಗದೆಯು ಪೋಗಲು ರಾಕ್ಷಸಾಧಿಪ |
ನಧಟು ತನದಲಿ ಶೂಲವನು ಕೊಂ |
ಡಿದಿರು ನಿಲ್ಲಲು ತತ್‌ಕ್ಷಣದಿ ಸೆಳೆದನು ರಘೋತ್ತಮನು ||
ವಿಧ ವಿಧ ದೊಳಿಪ್ಪಾಯುಧಂಗಳ |
ಕದನಚೌಪಟ ದಶಗಳನು ಕೊಂ |
ಡೊದಗಲದ ನೆಲ್ಲವನು ರಣದಲಿ ಗೆಲಿದನಾ ರಾಮ ||233||

ಕಂದ

ತೋಯಜಮುಖಿ ಕೇಳ್ ಬಳಿಕ ನಿ |
ರಾಯುಧನಾಗಿರುವ ಖಳನ ನೀಕ್ಷಿಸುತಾಗಳ್ ||
ವಾಯುಕುಮಾರನ ಮೊಗಮಂ |
ರಾಯ ರಘೂದ್ವಹನು ಕಂಡು ಬಳಿಕಿಂತೆಂದಂ ||234||