ರಾಗ ಪಂಚಾಗತಿ ಮಟ್ಟೆತಾಳ

ತರಣಿಸುತನ ನುಡಿಯ ಕೇಳ್ದು | ಧುರಸಮರ್ಥ ಜಾಂಬವಂತ |
ಸುರಪಜಾತನಣುಗ ನೀಲ | ಶರಭ ಮುಖ್ಯರು ||
ಕರದೊಳಾಂತು ಕಲ್ಲು ಬೆಟ್ಟ | ಮರಗಳಿಂದ ಸಿಂಹನಾದ |
ವೆರೆಸಿ ಖತಿಯ ತಾಳಿ ಕದನ | ಕಿರದೆ ನಡೆದರು ||63||

ಕಾಣುತಿವರ ಪೌರುಷವನು | ಕೌಣಪರ ಬಲೌಘವಂದು |
ಬಾಣಪರಶು ಚಕ್ರವಸಿ ಕ್ರ | ಪಾಣ ಕುಂತದಿ ||
ಮಾಣದೆಚ್ಚು ಕೊಚ್ಚಿ ಘಾಯ | ಕಾಣಿಸಲ್ಕೆ ಕಪಿಸಮೂಹ |
ಚೂಣಿಯಲ್ಲಿ ಬೆರೆಸಿ ಹೊಯ್ದ | ರೇನನೆಂಬೆನು ||64||

ಬಣಗುಕಪಿಗಳೆಯ್ದಲಾಗಿ | ಹೆಣಗಿ ಮುಂದೆ ಬರುವದೈತ್ಯ |
ಗಣವನೀಕ್ಷಿಸುತ್ತ ವಾಲಿ | ಯಣುಗ ಮುಖ್ಯರು ||
ಸೆಣೆಸು ವಧಟರನ್ನು ತಡೆದ | ರಣಕವೆಮ್ಮೊಳೊಪ್ಪದೀಗ |
ಲೆಣಿಸಬಹುದೆನುತ್ತ ಬಲು ಭಾ | ರಣೆಯ ಸುಭಟರು ||65||

ಸೀಳಿಬಿಸುಟರಾನೆಗಳನು | ಕಾಲಿನಿಂದಲಶ್ವಗಳ ನಿ |
ವಾಳಿಸುತ್ತ ಸಂಹರಿಸುತ | ಕಾಲುಬಲವನು ||
ತೊಳುವತಿರಥಂಗಳನ್ನು | ಹೊಳು ಗೆಯ್ದರೊಂದು ಕ್ಷಣದಿ |
ಪೇಳಲೇನು ವೈರಿಬಲವ | ಧಾಳಿಗೊಂಡರು ||66||

ಏನನೆಂಬೆ ದಾನವೇಂದ್ರ | ಸೂನು ಖತಿಯೊಳಂಗದಾದಿ |
ವಾನರರೊಳು ಸಂಗರಕ್ಕೆ | ತಾನೆ ನಿಂದನು ||
ಆನುವವರದಾರು ಮಿಗೆ ನ | ವೀನ ಶರಗಳಿಂದಲವರ |
ಮಾನಗುಂದಿಸಿದನು ಹವದೊ | ಳಾ ನಿಶಾಟನು ||67||

ಅವರ ಗೆಲಿದು ಮುಂದೆ ನೂಕು | ವವರ ಕಂಡು ಮತ್ತೆ ಕಲಿ ಜಾಂ |
ಬವ ಸುಷೇಣ ಶರಭ ಮೈಂದ | ದ್ವಿವಿಧ ಸುಭಟರು ||
ಕವಿಯಲಾಗ ಕಂಡು ಬಾಣ | ನಿವಹದಿಂದ ಲವರ ಗೆಲಿದು |
ಜವನ ತೆರದಿ ಮುಂದುವರಿದ | ನಿವನು ತವಕದಿ ||68||

ಎಕ್ಕತುಳದಿ ಮುಂದೆ ಬರುವ | ರಕ್ಕಸನನು ನೋಡಿ ಕೋಪ |
ವುಕ್ಕಿ ಕಪಿಬಲೌ ಘವಯ್ದೆ | ಮುಕ್ಕುರಿಕಿಸಿತು ||
ನಕ್ಕು ಮನದಿ ಕೆಡದಿರೆನುತ | ದಿಕ್ಕರಿಸುತಲವರ ಶರದೊ |
ಳೊಕ್ಕಲಿಕ್ಕಿ ಶೌರ್ಯದಿಂದ | ಮಿಕ್ಕು ನಡೆದನು ||69||

ವಾರ್ಧಕ

ಉಡಿದು ಬಿದ್ದಿರ್ದ ಕೈಕಾಲ್ಗಳಿಂ ತೋಳ್ಗಳಿಂ |
ಮಿಡುಕುತಿಹ ಕಪಿಗಣದ ರುಂಡದಿಂ ಮುಂಡದಿಂ |
ದೊಡನೆ ಪರಿವರುಣ ಜಲಪೂರದಿಂ ಸಾರದಿಂ ಕುಣಿವ ಭೂತಂಗಳಿಂದ ||
ಕೆಡೆದಿರ್ದ ಹೆಣಗಳಟ್ಟಲೆಗಳಿಂದೆಲುಗಳಿಂ |
ದಿಡಿದಾಗಿ ಚೆಲ್ಲಿರ್ದ ಕರುಳ್ಗಳಿಂ ಮರುಳ್ಗಳಿಂ |
ಕಡು ಭಯಂಕರಮಾಗಿ ಸಂಗರಂ ಸಿಂಗರಂ ಮೆರೆದುದಾ ಕಣನೊಳಂದು ||70||

ಭಾಮಿನಿ

ಅರರೆ ಯಮನುಬ್ಬಟೆಯೊ ಮತ್ಯುವಿ |
ನುರವಣೆಯೊ ಸಂಹಾರ ಭೈರವ |
ನುರುಬೆಯೋ ನಾನರಿಯೆನತಿಕಾಯನ ರಣೋತ್ಸಹವೋ ||
ಧುರದಿ ಕಪಿಗಳನೊರಸಿ ಮುಂದ |
ಯ್ತರುವ ಸುಭಟನ ಕಾಣುತಿತ್ತಲು |
ವರ ವಿಭೀಷಣನೆಂದ ನಿನಕುಲ ಸಾರ್ವಭೌಮನೊಳು ||71||

ರಾಗ ಪೂರ್ವಿ ಏಕತಾಳ

ಇದಕೊ ದೇವ ಬಂದನತಿಕಾಯ ನೋಡ | ಈತ |
ನಿದಿರು ನಿಲುವ ವೀರರನ್ನು ತೋರು ಗಾಢ ||
ಮೊದಲೆ ಸೋತ ರಂಗದಾದಿ ಸುಭಟರೆಲ್ಲ | ರಣದಿ |
ಚದುರನಿವನು ಬಣಗು ಜನಕೆ ಮಣಿವನಲ್ಲ ||72||

ಇನಿತು ಮಾತಾಡುವದ ಲಕ್ಷ್ಮಣಾಂಕನಾಗ | ಕೇಳ್ದು |
ಧನುಶರಗಳ ಕೊಂಡು ರಾಮಗೆರಗಿ ಬೇಗ ||
ಜನೃಪ ತನ್ನ ಸಾಹಸವನು ಪರಿಕಿಸೆಂದು | ಸಮರ |
ಕನುವಾದನು ದಶಶಿರನ್ನ ಸುತನೊಳಂದು ||73||

ರಾಗ ಕೇದಾರಗೌಳ ಅಷ್ಟತಾಳ

ಎಂದು ಸಂಗರಕೆ ಸನ್ನಹವಾದ ಸೌಮಿತ್ರಿ |
ಯಂದವೀಕ್ಷಿಸಿ ರಾಮನು ||
ಚಂದದಿಂದೆತ್ತಿ ತಕೈಸಿ ಮುದ್ದಿಸುತಲಾ |
ನಂದದೊಳಿಂತೆಂದನು ||74||

ಎಲ್ಲವರಂತಲ್ಲ ಭೂರಿಪರಾಕ್ರಮ |
ವುಳ್ಳವನತಿಕಾಯನು |
ಬಿಲ್ಲ ಹಿಡಿದು ಮರ್ಮವರಿತು ಕಾದೆಂದು ಭೂ |
ವಲ್ಲಭನರುಹಿದನು ||75||

ಅಣ್ಣ ನೀವೇಕಿನಿತೆಂಬಿರಿ ರಣದೊಳು |
ಗಣ್ಯವೆ ತನಗಾತನು |
ಮಣ್ಣಕೂಡಿಸುತ ಶಾಕಿನಿಯರಿಗೌತಣ |
ವುಣ್ಣಲು ಬಡಿಸುವೆನು ||76||

ರಾಗ ಪಂತುವರಾಳಿ ಮಟ್ಟೆತಾಳ

ಬಂದನಾ ಸುಮಿತ್ರೆಯಣುಗ |
ಮುಂದುವರಿವ ರಾಕ್ಷಸೇಂದ್ರ |
ನಂದನನೊಳು ಸಮರಕೆನುತ |
ಲಂದು ಬಿಲ್ಲ ಪಿಡಿದು ಕರದಿ ||77||

ದೇವ ತತಿಯು ಪೊಗಳೆ ಧನುವ |
ಝೇವಡೆಯನು ಗೆಯ್ವುತುಗ್ರ |
ಭಾವದಿಂದಲುಬ್ಬಿ ಸಿಂಹ |
ರಾವವನ್ನು ಗೆಯ್ವುತೊಡನೆ ||78||

ಕಂದ

ಬರುವ ಸುಮಿತ್ರೆಯ ಸುತನಂ |
ಹರಿವಂಶಜನೆಂಬ ಬಗೆಯನರಿತತಿಕಾಯಂ ||
ಭರದಿಂ ತನ್ನಯ ರಥವಂ |
ಹರಿಸುತಲಾಕ್ಷಣದಿ ಬಳಿಕ ವೀರನೊಳೆಂದಂ ||79||

ರಾಗ ಸೌರಾಷ್ಟ್ರ  ತ್ರಿವುಡೆತಾಳ

ಭಳಿರೆ ಬಲು ಭಟನೆಂಬುದರಿತೆನು |
ತಳುವದೆನ್ನೊಳು ಪೇಳು ರಘುಕುಲ |
ತಿಲಕನೋ ಲಕ್ಷ್ಮಣನೊ ನೀನಾ | ರಲಸದೀಗ ||80||

ಎನಲು ಲಕ್ಷ್ಮಣನೆಂದ ನಿನ್ನಯ |
ಮನಸಿನೊಳಗೇನೆಂದು ತೋರಿದು |
ದನಿತುಬಗೆಯಲು ಬಹುದು ನೀ ಕೇ | ಳೆನುತಲವಗೆ ||81||

ರಣಕೆ ದಾವವನಾದರೇನದ |
ರೆಣಿಕೆ ನಮಗಿಲ್ಲೆಲವೊ ಸಮರಾಂ |
ಗಣದೊಳಾತ್ಮನಿವೇದಕರು ನಾವ್ | ಚಿನುಮಯಂಗೆೆ ||82||

ತೋರುವೆನು ಸುರನಿಕರ ನೋಡಲು |
ಭೂರಿ ರಣಕೌಶಲಗಳನು ನೀ |
ವೀರನಾದಡೆ ನಿಲ್ಲೆನುತ ಖಳ | ನಾರುಭಟಿಸೆ ||83||

ಒದರಿತೊಡನೇಣ್ದೆಸೆಯು ಭೂತಳ |
ವದುರಿತಾ ಕಪಿಕಟಕವೆಲ್ಲವು |
ಕೆದರಿದುದು ಗಗನದಲಿ ಸುರತತಿ | ಬೆದರಿತಾಗ ||84||

ರಾಗ ಶಂಕರಾಭರಣ ಮಟ್ಟೆತಾಳ

ಬಳಿಕಲೇನನೆಂಬೆ ಲಂಕೆಯಾಳ್ದನಣುಗನು |
ಬಲು ಶರಾಳಿಯನ್ನು ಬಿಡಲು ರಾಮನನುಜನು ||
ತಳುವದದನು ಕೊಚ್ಚಿ ಮಗುಳೆ ರಾತ್ರಿಚರನನು |
ಹೊಳೆವ ಕಣೆಗಳಿಂದಲೆಚ್ಚು ಹೂಂಕರಿಸಿದನು ||85||

ಎಸೆದ ಬಾಣಗಳನು ತರಿದು ಯಾತುಧಾನನು |
ಉಸಿರಲೇನದಕ್ಷಯಾಸ್ತ್ರದಿಂದಲವನನು ||
ದೆಸೆಗಳೆಲ್ಲ ತೋರಬಾರದೆಂಬ ತೆರದಲಿ |
ಮುಸುಕಿ ಸಿಂಹನಾದವನ್ನು ಗೆಯ್ದನಿದಿರಲಿ ||86||

ಗಣಿಸದದನು ವೀರ ಶತ್ರುಘ್ನನಣ್ಣನು |
ಕ್ಷಣದಿ ಪ್ರತಿಶರೌಘದಿಂದ ಕೊಚ್ಚಲಾತನು ||
ತಣಿಯದಿದರೊಳಿವನ ಸತ್ತ್ವವೆನುತ ತೆಗೆದನು |
ಕ್ಷಣದಿ ಸುರರು ಬೆದರೆ ಘೋರ ವಹ್ನಿಶರವನು ||87||

ರಾಗ ಮಾರವಿ ಏಕತಾಳ

ಅಗಸುತೆ ಕೇಳಾ | ಶುಗಸಖ ಶರವನು |
ತೆಗೆದು ಬಿಡಲು ಧಗ | ಧಗಿಸುತ ಕಿಡಿಗಳ |
ನುಗುಳುತ ಬಂದುದು | ರಘುಪತಿಯನುಜನ |
ಹೊಗೆಯಲಿ ಮುಸುಕಿತು | ಭುಗಿಭುಗಿಲೆನುತ | ಏನನೆಂಬೆ ||88||

ಉರಿಗೆದರುತಲ | ಯ್ತರುವ ಮಹಾಸ್ತ್ರವ |
ತರಣಿಕುಲೇಂದ್ರಾ | ವರಜನು ಕಾಣುತ |
ತ್ವರಿತದಿ ವಾರುಣ | ಶರವನು ಬಿಡಲೊಂ |
ದರೆ ನಿಮಿಷದೊಳದ | ಪರಿಹರಿಸಿದನು | ಏನನೆಂಬೆ ||89||

ತಿರುಗಿ ನಿಶಾಚರ | ನುರಗಾಸ್ತ್ರವ ಬಿಡೆ |
ಗರುಡಕಳಂಬದಿ | ತರಿವುತಲದ ಬಳಿ |
ಕುರು ತಿಮಿರಾಸ್ತ್ರವ | ನಿರದೆ ತುಡುಕಲಿನ |
ಶರದಲಿ ಗೆಲಿದನು | ವರ ಲಕ್ಷ್ಮಣನು || ಏನನೆಂಬೆ ||90||

ಭಾಮಿನಿ

ಇಂತು ಬಹುವಿಧ ಶಸ್ತ್ರಚಯವಾ |
ನಂತನಂಶಜನಿರದೆ ಖಂಡಿಸ |
ಲಂತರಂಗದೊಳೆಂದ ಗಹಗಹಿಸುತ್ತಲತಿಕಾಯ ||
ಎಂತು ನಮ್ಮಸ್ತ್ರಗಳು ಹರಿದಸು |
ರಾಂತಕಾತ್ಮನೊಳಕಟ ಬರಿದೇ |
ಭ್ರಾಂತ ತಾನೆಂದರಿತು ಮತ್ತಿಂತೆಂದನವನೊಡನೆ ||91||

ನೀವು ಜಗದದಿದೈವವೆಂಬುದ |
ನಾವು ಬಲ್ಲೆವು ನಮ್ಮ ಕುಲದ ಸ್ವ |
ಭಾವವನು ನಾವ್‌ಬಿಡಲು ಬಹುದೇ ಪೂರ್ವಪದ್ಧತಿಯ ||
ನಾವು ಮಾಡುವ ಸಮರಮುಖ ಸಂ |
ಭಾವನೋಚಿತ ಸರಳ ಭಕ್ತಿಯ |
ನೀವು ಕೈಗೊಳಬೇಕೆನುತ ತೆಗೆದೆಚ್ಚನತಿಕಾಯ ||92||

ರಾಗ ಭೈರವಿ ಏಕತಾಳ

ಇದೆಯಾವಾಹನ ನೋಡು | ಮ | ತ್ತಿದೆಯಾಸನ ದಯೆಮಾಡು ||
ಇದೆ ಪಾದ್ಯಾರ್ಘ್ಯಾದಿಗಳು | ಕೊಳ್ಳಿದೆ ನಿನಗುಪಚಾರಗಳು ||93||

ಎನುತೀರೆಂಟು ಶರವನು | ರಾ | ಮನ ತಮ್ಮನ ಮೇಲವನು ||
ಘನತರ ಭಕ್ತಿಯೊಳಾಗ | ಎ | ಚ್ಚನು ಕೊಳ್ಳೆನುತತಿಬೇಗ ||94||

ನಿಚ್ಚಟ ಭಕ್ತಿಯೊಳವನು | ತೆಗೆ | ದೆಚ್ಚ ಶರವ ಲಕ್ಷ್ಮಣನು ||
ಕೊಚ್ಚದೆ ಮೈಯಲಿಧರಿಸಿ | ಮನ | ಮೆಚ್ಚಿ ನುಡಿದನಂತರಿಸಿ ||95||

ಅಸಮ ಭಕುತ ನೀನಹುದೈ | ರಣ | ಕುಶಲಯುಕುತಿ ನಿನಗಹುದೈ ||
ಅಸುರಾರಿಯ ಪದದಾಣೆ | ರಾ | ಕ್ಷಸರೊಳು ನಿನಗೆಣೆಗಾಣೆ ||96||

ಎಂದಾ ದಶರಥ ಸುತನು | ಶರ | ವಂದದಿ ಮುಸುಕಲಸುರನು ||
ಒಂದು ನಿಮಿಷ ಮೂರ್ಛೆಯೊಳು | ಮೈ | ನೊಂದೊರಗಿದನಾಚೆಯೊಳು ||97||

ಕಂದ

ಬಳಿಕಂ ಮೈಮುರಿದೆದ್ದಾ |
ಖಳಕುಲ ಚಂದಿರನ ಕುವರ ದಡಚಿತ್ತದೊಳಂ ||
ಜಲರುಹನಾಭನ ಪದಯುಗ |
ನಳಿನವ ನೆನೆವುತ್ತಲೊಯ್ಯನೆಂದನು ತನ್ನೊಳ್ ||98||

ರಾಗ ಕಾಂಭೋಜ ಝಂಪೆತಾಳ

ನರರಿಗೀ ಬಲುಹೆಲ್ಲಿಯದು ವಿಪಿನ ಚರರಿಗೀ |
ಪರಿಯ ಕಡುಹೆಲ್ಲಿ ಬಂದಪುದು ||
ಹರಿಯ ಮಾಯಾವಿಲಾಸವಿದಲ್ಲದೊಂದಿಲ್ಲ |
ಮರೆಯ ಮಾತೇನು ದಿಟವೈಸೆ ||99||

ಆಯಿತಕಟಾ ತಂದೆಯಾಯುಷಕೆ ಕಡೆಯಿನ್ನು |
ಬಾಯಾರಲೇಕೆ ನಾವಿದಕೆ ||
ಕಾಯವಿದ್ದಾಗ ನಾರಾಯಣನ ಪಾದವನು |
ಪ್ರೀಯದಿಂ ಸ್ಮರಿಸಬೇಕೆಂದ ||100||

ಎಂದು ಹತ್ಕಮಲಕರ್ಣಿಕೆಯ ಮಧ್ಯದಲಿ ರಘು |
ನಂದನನ ಚಾರುಮೂರ್ತಿಯನು ||
ಚಂದದಿಂದಿರಿಸಿ ನಾಲಿಗೆ ಕೊನೆಯೊಳಾಗ ಜಯ |
ವೆಂದು ಸ್ತುತಿಗೆಯ್ದನಚ್ಯುತನ ||101||

ವಾರ್ಧಕ

ಜಯ ಜನಕಜಾರಮಣ ವಂದಿತಜನೋದ್ಧರಣ |
ಜಯ ಜಯ ಘನಶ್ಯಾಮ ರಘುಕುಲಾರ್ಣವ ಸೋಮ |
ಜಯ ಸಿತಾಂಬುಜನೇತ್ರ ಸುರನಿಕರ ನುತಿಪಾತ್ರಜಯ ಜಯ ಗಿರೀಶಮಿತ್ರ ||
ಜಯ ಮುನಿಮನೋಹಂಸ ದಾನವ ಕುಲಧ್ವಂಸ |
ಜಯ ಜಯ ಚಿದಾನಂದ ಸಕಲ ಸದ್ಗುಣವಂದ |
ಜಯ ದುರಿತವನದಾವ ದೇವಾದಿದೇವ ಜಯ ಜಯ ನಮೋ ಜಯತೆಂದನು ||102||

ಕಂದ

ಇಂತತಿಕಾಯಂ ರಾಘವ |
ನಂ ತನ್ನಯ ಜಿಹ್ವೆಯೊಳಗೆ ಸಂಸ್ತುತಿಸುತ್ತಂ ||
ಮುಂತಿಹ ಲಕ್ಷ್ಮಣದೇವನೊ |
ಳಂ ತವೆ ಸಂತಸದೊಳೊರೆದನತಿ ಘರ್ಜಿಸುತಂ ||103||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತಡೆವುದೇತಕೊ ವೀರ ಬೇಗದಿ |
ತೊಡು ಮಹಾ ಬ್ರಹ್ಮಾಸ್ತ್ರವನು ಜಗ |
ದೊಡೆಯ ರಾಮನ ಪದವ ಕೂಡುವೆ | ದಢದೊಳೀಗ ||104||

ಎಂದು ಬೊಬ್ಬಿರಿದಾ ದಶಾಸ್ಯನ |
ನಂದನನು ತೆಗೆದೆಚ್ಚನಮರರ ||
ವಂದ ಕಂಪಿಸಲಾ ಸುಮಿತ್ರೆಯ | ಕಂದಗಂದು ||105||

ಎಚ್ಚ ಶರವನು ಕೊಚ್ಚಿ ಸುರತತಿ |
ಮೆಚ್ಚಲಾ ಲಕ್ಷ್ಮಣನು ತೆಗೆದನು |
ನಿಶ್ಚಟದಿ ಚತುರಾಸ್ಯ ಬಾಣವ | ಚಚ್ಚರದೊಳು ||106||

ಮನದಿ ರಾಮನ ನೆನೆದು ಭಾರಿಯ |
ಧನುವಿಗಾ ಬಾಣವನು ಹವಣಿಸಿ |
ತೊನೆದು ಕಿವಿವರೆಗೆಳೆದು ಬಿಟ್ಟನು | ಕನಲುತಂದು ||107||

ಕಿಡಿಯ ನುಗುಳುತಲಾ ಮಹಾಸ್ತ್ರವು |
ತಡೆಯದಯ್ತಂದಾ ನಿಶಾಟನ |
ತುಡುಕಿ ಕೊರಳನು ಕಚ್ಚಿಬಾಂದಳ | ಕಡರಿತೊಡನೆ ||108||

ರಾಗ ಸಾಂಗತ್ಯ ರೂಪಕತಾಳ

ಹರಿ ನಾರಾಯಣ ಕೃಷ್ಣ ಗೋವಿಂದ ರಾಮ ಪಂ |
ಕರುಹಲೋಚನ ಶರಣೆನುತ |
ಶರಮುಖದಲಿ ಕಡಿವಡೆದಡರಿದುದಾಗ |
ಶಿರವು ಬಾಂದಳದಿ ರಾಕ್ಷಸನ ||109||

ಅಡಗಿದುದೊಡನಾತ್ಮ ಜ್ಯೋತಿಯು ರವಿಬಿಂಬ |
ದೆಡೆಯೊಳು ಕಳಕಳಿಸುತಲೆ ||
ಜಡಜ ಸಂಭವ ಪುರುಹೂತಾದಿ ಸುರತತಿ |
ಕಡು ಬೆರಗಾಗಲಾಕ್ಷಣದಿ ||110||

ಅರಳಿದ ಕಮಲವ ಕಂಡು ಸನ್ಮೋಹದೊ |
ಳೆರಗುವ ಭ್ರಮರದಂದದಲಿ ||
ಸಿರಿ ರಾಮನಂಘ್ರಿಯ ಮೇಲೆ ಬಿದ್ದುದು ಶಿರ |
ವಿರದೆ ಬಾಂದಳದಿಂದ ಬಳಿಕ  ||111||

ಹೊಳೆವ ಕುಂಡಲದ ಝಾಳಿಪ ಕದಪಿನ ಥಳ |
ಥಳಿಸುವ ನೊಸಲ ಕಸ್ತುರಿಯ ||
ಸಲೆವೀರರಸಗೂಡಿ ನಗುಮೊಗದಿಂದಿಹ |
ತಲೆಯೆಸೆದುದು ಕಣನೊಳಗೆ ||112||

ಉಡಿದ ರಾಕ್ಷಸರು ಲಕ್ಷ್ಮಣದೇವನೊಳು ಕಾದಿ |
ತಳುವದೆ ದಿವವನಯ್ದಿದರು ||
ಬಳಿಕಮರರು ಕರೆದರು ಪುಷ್ಪವಷ್ಟಿಯ |
ನೊಲಿದು ಸೌಮಿತ್ರಿಯ ಮೇಲೆ ||113||

ಭಾಮಿನಿ

ಅರಸಿ ಕೇಳ್ ಬಳಿಕಾ ನಿಶಾಟನ |
ಶಿರವು ಧರೆಯಲಿ ಬೀಳೆ ಕಂಡದ |
ನೆರಡು ಕಯ್ಯಿಂದೆತ್ತಿ ಮುದ್ದಿಸುತಲೆ ವಿಭೀಷಣನು ||
ತರಳ ಹಾ ಸುಕುಮಾರ ಸದ್ಗುಣ |
ಶರಧಿ ಹಾ ಹಾಯೆನುತ ಕಂಬನಿ |
ಗರೆದು ಮಮ್ಮಲ ಮರುಗಿದನು ಘನತರದ ದುಃಖದಲಿ ||114||

ರಾಗ ನೀಲಾಂಬರಿ ಝಂಪೆತಾಳ

ಹಾ ಕುಮಾರಕ ಸಮರ ಶೂರ | ಸಚ್ಚರಿತ |
ಶ್ರೀ ಕಾಂತಭಕ್ತ ಶರನಿಧಿ ಸಮಗಂಭೀರ ||
ಲೋಕ ಮೂರರೊಳು ನಿನಗೆಣೆಯೆ | ರಾಕ್ಷಸ |
ನೀಕದೊಳಗೆನ್ನ ಸನ್ಮೋಹದ ಕಣಿಯೆ || ಹಾ ||115||

ಪರ ನಾರಿಯರಿಗಾಗಿ ನಿನ್ನ | ಕೊಲಿಸಿದನು |
ದುರುಳ ದಶಕಂಠನೆಲೆ ಸುಗುಣ ಸಂಪನ್ನ ||
ಬರದೇಕೆ ಬುದ್ಧಿಯವಗಿನ್ನು | ಸೀತೆಯನು |
ಸಿರಿರಾಮಗಿತ್ತು ಸುಖವಿರಲು ಕುಂದೇನು || ಹಾ ||116||

ಚಾರು ಚಂದಿರನಿರದ ಬಳಿಕಾ | ಬಾಂದಳದಿ |
ತಾರಕೆಯ ಬೆಳಕಿಂದ ಬೆಳಗುವುದೆ ಲೋಕ ||
ಯಾರು ಬದುಕಿರ್ದು ಫಲವೇನು | ನೀನಳಿಯೆ |
ತೀರಿತೆಮ್ಮಾಯುಷ್ಯ ರಿಪುತಿಮಿರಭಾನು || ಹಾ ||117||

ಭಾಮಿನಿ

ಇಂತು ದುಃಖಿಸುವಾ ವಿಭೀಷಣ |
ನಂತರಂಗವ ತಿಳಿದು ಬರಿದೇ |
ಭ್ರಾಂತಿಯೇಕೈ ಹುಟ್ಟಿದವರಿಗೆ ಮರಣ ತಪ್ಪುವುದೆ ||
ಚಿಂತಿಸಿದಡೇನಹುದು ಜಗದಾ |
ದ್ಯಂತವೆಲ್ಲವು ಕಾಲವಶವದ |
ನೆಂತು ಮಾರಲು ಬಹುದೆನುತ್ತೊಡಬಡಿಸಿದನು ರಾಮ ||118||

ರಾಗ ಬಿಲಹರಿ ಏಕತಾಳ

ಅತಿಕಾಯನಳಿದುದ ಕಂಡು ಮತ್ತವನ ಸಾ |
ರಥಿಯು ದುಃಖದಿ ಹೊರಳುತ್ತ ಚಿಂತೆಯಲಿ ||
ರಥವನು ತಿರುಹಿಸಿಕೊಂಡು ಲಂಕೆಗೆ ಪೋಪ |
ಪಥವ ಮೆಟ್ಟಿದನೆಡಬಲವ ನೋಡುತಲೆ ||119||

ಕುವರನೇನಾದನೆನ್ನುತ ಧಾನ್ಯಾಲಿನಿ |
ತವಕಿಸಿ ಕೇಳಿದರೇನ ಪೇಳುವೆನು ||
ಅವಳ ಮಾತಿರಲಿ ದಶಾನನಗೇನೆಂದು |
ವಿವರಿಸಲೆನುತ ತನ್ನಲಿ ಮರುಗಿದನು ||120||

ತೊಳಲುತ ಬಳಲುತ ರಥವನು ನಡೆಸುತ |
ಲೊಳಪೊಕ್ಕನಾ ಪುರವರದ ದುರ್ಗವನು |
ಇಳಿವ ಕಂಬನಿಯಿಂದ ಬಂದನೊಯ್ಯನೆ ರಾಜ |
ನಿಳಯದೆಡೆಗೆ ತಲೆಮುಸುಕಿ ನೊಳವನು ||121||