ಕಂದ

ದುಗುಡದಿ ಬೃಹ ಸಾರಥಿಯಂ |
ಮಿಗೆ ಕಾಣುತ್ತೊಡನೆ ಧಾನ್ಯಮಾಲಿನಿಯಾಗಳ್ ||
ಮಗನಾವೆಡೆ ತೋರೆನುತಂ |
ದಗುಯುಗದೊಳ್ ಜಲವ ಸೂಸುತೊಯ್ಯನೆ ನುಡಿದಳ್ ||122||

ರಾಗ ರೇಗುಪ್ತಿ ಆದಿತಾಳ

ಬಾಲನೆಲ್ಲಿಗೆ ಪೋದನೈ | ಎನ್ನಯ ಚಾರು |
ಶೀಲ ತಾನೇನಾದನೈ ||
ತಾಳಲಾರೆನು ಕಾಣದೆಂತಾದನೆಂಬುದ |
ಪೇಳು ಸಾರಥಿಯೆ ನೀನು ||  ಕೈ ಮುಗಿವೆನು  ||123||

ರಥವೇಕೆ ಬರಿದಾದುದು | ನಿನ್ನನು ನೋಡ |
ಲತಿ ದುಃಖ ಪುಟ್ಟುವುದು ||
ಪಥದಲ್ಲಿ ಬಿಟ್ಟು ಬಂದೆಯೊ ಕರೆತಂದೆಯೊ |
ಕತಕ ಬೇರುಂಟೆ ಪೇಳು || ಶೀಘ್ರದೊಳು   ||124||

ಅಳಲಿಸಲೇಕೆನ್ನನು | ಸುಮ್ಮನೆ ಹೆಚ್ಚು |
ಬಳಲಿಪ ಕಾರ್ಯವೇನು ||
ಅಳಿದನೊ ಸಮರದೊಳುಳಿದನೊ ತಾನದ |
ನಳುಕದೆ ಕೇಳುವೆನು || ನಿನ್ನೊಳು ನಾನು  ||125||

ಭಾಮಿನಿ

ಎಂದು ಕೇಳಲು ಮರುನುಡಿಯೊಡ |
ದಂದು ಸಾರಥಿ ಮರುಗುತಲೆ ಕಂ |
ಡಿಂದುಮುಖಿ ತಿಳಿದಳು ಕುಮಾರಕನಳಿನೆಂಬುದನು ||
ನಿಂದವಳು ಸಿಡಿಲೆರಗಿದಂದದಿ |
ನೊಂದು ಧೂಪ್ಪನೆ ಕೆಡೆದು ಧರೆಯಲಿ |
ಕಂದ ಮಡಿದೈ ಹಾಯೆನುತ ಹಮ್ಮೈಸಿ ಮರುಗಿದಳು ||126||

ರಾಗ ನವರೋಜು ಆದಿತಾಳ

ಹಾ ಮಗನೇ ಗುಣವಂದ | ಅ | ಯ್ಯೋ ಮಗನೇ ಮನದಂದ ||
ಹೇ ಮಗನೆ ರಣಧೀರ | ಬಾ ಮಗನೇ ಮೊಗದೋರ ||127||

ನೋಡುವ ಕಣ್ಣಿಗೆ ಮಣ್ಣ | ಮಾಡಿದೆಯಲ್ಲವೆ ಚಿಣ್ಣ ||
ಆಡಿಸಿದೀ ಕೈಗಳಿಗೆ | ಕೇಡನು ಕೊಟ್ಟೆಯೊ ಹೀಗೆ ||128||

ಶೋಕಮಹಾಬ್ದಿಯೊಳೆನ್ನ | ನೂಕಿದೆಯಾ ಗುಣರನ್ನ ||
ಸಾಕಿದಕ್ಕುಪಕಾರ | ಸಾಕಯ್ಯ ಸುಕುಮಾರ ||129||

ರಾಗ ಆನಂದಭೈರವಿ ಏಕತಾಳ

ಇಂತೆಂದು ಕಾಮಿನಿಯು ಮ |
ಹಾಂತ ದುಃಖದಿಂದ ಮಿಡು | ಮಿಡುಕುತ್ತ | ನೆಲದಿ | ಹೊಡಕುತ್ತ ||130||

ಮರುಗಲೇತಕವ್ವ ಎಂದು |
ಸುರಿವ ಕಣ್ಣೀರನು ಬಂದು | ತೊಡೆಯದೆ | ಒಂದು | ನುಡಿಯದೆ ||131||

ಹೊಟ್ಟೆಯ ಮೇಲೆ ಕಲ್ಲಿಟ್ಟು |
ಬಿಟ್ಟು ಹೋದೆಯಲ್ಲ ಕಂದ | ಎಂದಳು | ಹಲುಬಿ | ನೊಂದಳು ||132||

ಭಾಮಿನಿ

ಮಾನಿನಿಯ ಹುಯ್ಯಲನು ಕೇಳ್ದು ದ |
ಶಾನನನು ನಡೆತಂದನಲ್ಲಿಗಿ |
ದೇನಿದೇನೆಂದೆನುತ ತವಕದಿ ಬಿಟ್ಟ ಮಂಡೆಯಲಿ ||
ದಾನವೇಂದ್ರನ ನೀಕ್ಷಿಸುತ ಬಳಿ |
ಕಾ ನಿತಂಬಿನಿ ಪುತ್ರ ಶೋಕವ |
ನಾನಲಾರದೆ ಹಲುಬಿದಳು ತತ್ಕಾಂತ ನಿದಿರಿನಲಿ ||133||

ರಾಗ ನೀಲಾಂಬರಿ ಏಕತಾಳ

ಚಿಣ್ಣನ ಕಳುಹಿದಿರೆ | ಹಬ್ಬವನೆನ್ನ | ಕಣ್ಣಿಗೆ ಮಾಡಿದಿರೆ ||
ಎಣ್ಣಿದ ಬಯಕೆ ತೀರ್ದುದೆ | ಹಾಲ ಕೊಂಡಂತೆ |
ತಣ್ಣಗೆ ಹೊಟ್ಟೆಗಾದುದೆ ||134||

ಪರರ ಹೆಂಗಸನು ತಂದು | ಎನ್ನಯ ಮಗನ |
ಹರಿಬವ ಕಂಡಿರಿಂದು ||
ಅರಿಗಳ ದೂರಲೇಕೆ | ಕಂದಗೆ ಮತ್ಯು |
ವರಿಯಲು ನೀವೆ ಪರಾಕೆ ||135||

ತರಳನು ಮಡಿದ ಮೇಲೆ | ಜೀವಿಸುವುದು |
ಸರಿಯಲ್ಲ ತನಗೀಗಲೆ ||
ಮರಣಕ್ಕೆ ನೇಮವನು | ಕೊಡಿಸಯ್ಯ ಬೇಗ |
ಇರಲಾರೆ ಬಾಳಿ ನಾನು ||136||

ಭಾಮಿನಿ

ಕೇಳು ಗಿರಿಸುತೆ ಸತಿಯ ನುಡಿ ಕೇ |
ಳ್ದಾಲಿಯಲಿ ಕಿಡಿಗಳನು ಸೂಸುತ |
ತಾಳಿ ಕೋಪವ ಸಿಡಿಲಿನಂದದಿ ಘರ್ಜಿಸುತ ಖಳನು ||
ಪೇಳು ಸಾರಥಿ ಮಗನ ಮಡುಹಿದ |
ಖೂಳನಾವವನವನನೀಗಳೆ |
ಬೀಳುಗಡಿವೆನು ರಣದೊಳೆನಲಿಂತೆಂದ ನಾ ಸೂತ ||137||

ರಾಗ ತುಜಾವಂತು ಝಂಪೆತಾಳ

ಲಾಲಿಸೈ ಪುಣ್ಯಜನ ಕುಲ ಸಾರ್ವಭೌಮ |
ಪೇಳಲಿನ್ನೇನದನು ಸಮರ ನಿಸ್ಸೀಮ    || ಪ ||

ಏನನೆಂಬೆನು ನಿನ್ನ ಸೂನುವಿನ ಸಾಹಸವ |
ವಾನರ ಮಹಾಬಲವ ಮೊದಲು ಪೊಕ್ಕು ||
ಆನೆಗಳ ಹಿಂಡ ಪಂಚಾನನನು ಪೊಗುವಂತೆ |
ಹಾನಿಗೈಯ್ದನು ಬಹಳ ಕರಡಿ ಕಪಿಗಳನು ||138||

ರವಿತನಯ ನೀಲ ಜಾಂಬವ ವಾಲಿಸುತ ಮೈಂದ |
ದ್ವಿವಿದ ಮೊದಲಾದ ಪಟುಭಟರನೆಲ್ಲ ||
ಬವರದೊಳು ಗೆಲಿದು ಲಕ್ಷ್ಮಣಗೆ ತಾನಿದಿರಾಗಿ |
ತವಕದಿಂ ಹಳಚಿದನು ಸುರರು ಭಾಪೆನಲು ||139||

ನಡ ನಡುಗುತಿದೆ ಮುಂದೆ ನಡೆದ ವತ್ತಾಂತವನು |
ನುಡಿವೆನೆಂದರೆ ಎನ್ನ ಕೈಕಾಲ್ಗಳು ||
ಮಡುಹಿದನು ಬಳಿಕ ನಿನ್ನೊಡಲಾಬ್ದಿ ಚಂದ್ರಮನ |
ಜಡಜ ಸಂಭವ ಬಾಣದಿಂದ ಲಕ್ಷ್ಮಣನು ||140||

ಕಂದ

ಎಂದಾ ಸೂತನ ನುಡಿ ಕೇ |
ಳ್ದಂದಾ ದಿತಿಜಾತರೆರೆಯ ಕೋಪವ ತಾಳ್ದುಂ ||
ಮುಂದಿಹ ಸತಿಯಂ ಕಂಡಿಂ |
ತೆಂದನು ಶೋಕವನು ತೊರೆವುದೆನುತೀ ತೆರದಿಂ ||141||

ರಾಗ ಮಾರವಿ ಏಕತಾಳ

ಬಿಡು ಬಿಡು ಶೋಕವ | ನುಡುರಾಜಾನನೆ |
ನುಡಿಯದಿರಿನ್ನಿದನು ||
ತಡೆಯದೆ ಕಂದನ | ಮಡುಹಿದವನ ರಣ |
ದೆಡೆಯೊಳು ಮಲಗಿಸುವೆ ||142||

ಮಂಗ ಕರಡಿ ಮುಸು | ಸಿಂಗಲಿಕಗಳಿಗೆ |
ಕಂಗೆಡುವೆನೆ ನಾನು ||
ಅಂಗನೆ ಕೇಳ್ ಸಮ | ರಾಂಗಣದೊಳಗೆ |
ನ್ನಂಘವಣೆಯ ತೋರ್ಪೆ ||143||

ಹುಲುಮಾನವರ | ಗ್ಗಳಿಕೆಯ ನಿಮಿಷದಿ |
ನಿಲಿಸುವೆ ಮಗನೇತ್ರೆ ||
ಕಲಕುವೆ ರಿಪುಬಲ | ಜಲಧಿಯನೆಂದೆನು |
ತಲೆ ಪೇಳ್ದನು ಸತಿಗೆ ||144||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂತು ದಶಶಿರನೈದೆ ತನ್ನಯ |
ಕಾಂತೆಯಳನೊಡಬಡಿಸಿ ರೌದ್ರವ |
ನಾಂತು ಸನ್ನಹವಾದ ಧುರಕಿ | ನ್ನೆಂತು ಪೊಗಳ್ವೆ ||145||

ಹತ್ತು ತಲೆಗೆ ಕಿರೀಟಗಳ ಧರಿ |
ಸುತ್ತ ಮಣಿಮಯ ಕುಂಡಲವನಿ |
ಪ್ಪತ್ತು ಕಿವಿಯಲಿ ಹಾಕಿದನು ಮುದ | ವೆತ್ತು ಖಳನು ||146||

ಲೇಸೆನಿಪ ಚಂದನವ ಮೈಯಲಿ |
ಪೂಸಿ ತಿಲಕವ ನಿಟ್ಟು ರಕ್ಕಸ |
ದೇಶಿಗನು ನೆರಿದುಟ್ಟನರುಣ ಸು | ವಾಸವನ್ನು ||147||

ನಾರಿಯರ ಜಯ ಸೇಸೆಯನು ರಣ |
ಧೀರ ಕೈಗೊಂಡೊಡನೆ ಮಿಸುನಿಯ |
ತೇರನೇರುತ ಪೊರಟನತಿ ಗಂ | ಭೀರತೆಯೊಳು ||148||

ರಾಗ ಆಹೇರಿ ಝಂಪೆತಾಳ

ಕೊಳಗುಳಕೆ ಭರದೊಳಯ್ತಂದ | ಚಾತು |
ರ್ಬಲವೆರಸಿ ದಶಕಂಠನಧಿಕ ಖತಿಯಿಂದ    || ಪ ||

ಎಡಬಲದಿ ಜಯ ಜಯ ನಿನಾದದಲಿ | ಮುದದೊಳಡಿ |
ಗಡಿಗೆ ಪೊಗಳುತ್ತಿರುವ ಪಾಠಕರ ಬೊಬ್ಬೆಯಲಿ ||
ಹೊಡೆವ ರಣಭೇರಿ ತಂಬಟೆ ಢಕ್ಕೆ ಹಲಗೆ ಗಡಿ |
ಬಿಡಿ ಎಂಬ ವಾದ್ಯಗಳ ರವದಿ || ಪೊಡವಿ |
ನಡುಗೆ ಕುಲಗಿರಿಗಳಲ್ಲಾಡೆ ಬಲು ಭಯದಿ ||149||

ಹರಿಗೆ ಪಟ್ಟಿಸ ಶೂಲ ಖಡ್ಗ ಶಲ್ಲೆಹ ಶಕ್ತಿ |
ಪರಶು ಚಕ್ರ ಮುಸುಂಡಿ ಪಿಂಡಿವಾಳ ಕಪಾಣ ||
ಸುರಗಿ ತೋಮರ ವಜ್ರ ಮೊದಲಾದ ಕೈದುಗಳ |
ಧರಿಸಿ ಚತುರಂಗ ಬಲ ಸಹಿತ | ರಕ್ಕ |
ಸರ ಪಡೆಯನೊಡಗೂಡು ತಂದು ಘರ್ಜಿಸುತ ||150||

ರಾಗ ಪಂಚಾಗತಿ ಮಟ್ಟೆತಾಳ

ತರುಣಿ ಕೇಳು ದೈತ್ಯಪತಿಯ |
ವರ ಚತುರ್ಬಲಂಗಳಾಗ |
ಮುರಿದು ರಾಮಸೈನಿಕವನು | ಭರದಿ ಪೊಕ್ಕುದು ||
ಮರಳಿ ಕಪಗಳುಬ್ಬಿ ಗುಂಡು |
ಪೊರಡಿ ಹೆಮ್ಮರಂಗಳಿಂದ |
ತೆರಳಿ ಕವಿವ ರಾಕ್ಷಸರನು | ಬೆರಸಿ ಹೊಯ್ದರು ||151||

ಎಲೆಲೆ ಕಪಿಯೆನುತ್ತ ಸರಳ |
ಮಳೆಗಳನ್ನು ಕರೆವುತಾಗ |
ಖಳರು ಖಾತಿವೆತ್ತು ವೈರಿ | ಬಲವ ಪೊಕ್ಕರು ||
ಕೆಲಕಿಲಾರವಂಗಳಿಂದ |
ಕಲುಮರಂಗಳಲ್ಲಿ ಬಡೆದು |
ನಿಲುಕಿ ಬಾಲದಿಂದ ಪೊಯ್ದ | ರಲಘು ಕಪಿಗಳು ||152||

ಒತ್ತಿ ಬರುವ ರಥವ ರಥದಿ |
ಮತ್ತಗಜವ ಗಜದಿ ಹಯವ |
ನೆತ್ತಿ ಹಯದಿ ಪತ್ತಿಯನ್ನು | ಪತ್ತಿಯಿಂದಲಿ ||
ಸುತ್ತಿ ಚೆಲ್ಲಬಡಿದರಸಮ |
ಸತ್ತ್ವದಿಂದ ಕಪಿಗಳೆಲ್ಲ |
ಬಿತ್ತರಿಸುವದೇನನದನು | ಮತ್ತಕಾಶಿನಿ ||153||

ಮಡಿದ ಚಾತುರಂಗ ಬಲವ |
ನೊಡನೆ ಕಾಣುತಸುರಪತಿಯು |
ಮಿಡುಕಿ ಕೋಪದಿಂದ ಹೊಯ್ದ | ತಡೆಯದೆಲ್ಲರ ||
ಫಡ ಫಡೆನುತಲಾಗ ಬಾಣ |
ಗಡಣದಿಂದ ಮುಸುಕುತವರ |
ಪೊಡವಿಗೊರಗಿಸಿದ ಸುರಾಳಿ | ನಡುಗದಿರದೆನೆ ||154||

ವಾರ್ಧಕ

ಅಸಮ ಸಾಹಸರನ್ನು ಮೆಟ್ಟಿದಂ ಕುಟ್ಟಿದಂ |
ವಿಶಿಖವರುಷವನೈದೆ ಮಾರಿದಂ ತೋರಿದಂ |
ಕುಶಲಗತಿಯಿಂ ಧರೆಗೆ ಕೆಡಹಿದಂ ಮಡುಹಿದಂ | ಪರಬಲದ ಪಟುಭಟರನು ||
ಮುಸುಕುತಿಹ ಕಪಿಗಳಂ ಚುಚ್ಚಿದಂ ಕೊಚ್ಚಿದಂ |
ಪೆಸರಾಂತ ಭಟರ ಸಂಹರಿಸಿದಂ ಕರಿಸಿದಂ |
ಪೊಸ ರಥವನುಂ ಮುಂದೆ ನೂಕಿದಂ ತೇಕಿದಂ ದಶಶಿರಂ ಸಂಗರದೊಳು   ||155||

ಕಂದ

ಮುಂದೆಸೆಯೊಳು ಬಪ್ಪಾ ದಶ |
ಕಂಧರನಂ ಪರಿಕಿಸುತ್ತಲಾ ಕಪಿಶ್ರೇಷ್ಠಂ ||
ಬಂದಾ ರಕ್ಕಸನಿದಿರೊಳ್ |
ನಿಂದುರುತರ ಸಿಂಹನಾದ ಗೆಯ್ದಿಂತೆಂದಂ ||156||