ಶಾರ್ದೂಲವಿಕ್ರೀಡಿತಂ

ಶ್ರೀಮದ್ವಾಯುಕುಮಾರಸೇವಿತಪದಂ ಸೀತಾಮನೋಸೌಖ್ಯದಂ
ಸೋಮಾದಿತ್ಯಸಹಸ್ರದೀಪ್ತ ಮನಘಂ ಸಾಕೇತವಾಸಂ ವಿಭುಮ್ |
ಶ್ಯಾಮಾಂಗಂ ಗಿರಿಜಾಪತಿಪ್ರಿಯಕರಂ ಶಾಂತಂ ಕಪಾಸಾಗರಂ
ರಾಮಂ ಸದ್ವರಪುಣ್ಯನಾಮನೆಮಗೀಗಾನಂದ ಸಂದೋಹಮಮ್ ||1||

ರಾಗ ಮಧ್ಯಮಾವತಿ ತ್ರಿವುಡೆತಾಳ

ಶ್ರೀ ಗಣಪ ಗಿರಿಜಾತೆಯಾತ್ಮಜ |
ಯೋಗಿನುತ ಪದ ಪಂಕಜ |
ಭೋಗಿ ಭೂಷಣ ಸುತ ಗುಹಾಗ್ರಜ |
ನಾಗವದನ ಚತುರ್ಭುಜ || ಶರಣು ಶರಣು ||2||

ಏಕದಂತ ಸುಧಾಂಶುಶೇಖರ |
ಕೋಕನದ ಸಮಭಾಸುರ ||
ಶೋಕ ಭವಭಯದೂರ ಭಜಕಾ |
ನೀಕ ನೆರೆಪರಿಪಾಲಕ || ಶರಣು ಶರಣು ||3||

ಕಲುಷಹರ ವಿಘ್ನೌಘನಾಶನ |
ಲಲಿತ ಮೂಷಿಕವಾಹನ ||
ಅಲಘು ಮಿಕ್ರಮ ಗೋಷ್ಟಪಟ್ಟಣ |
ನಿಲಯ ಭುಜಗವಿಭೂಷಣ || ಶರಣು ಶರಣು ||4||

ವಾರ್ಧಕ

ಗಿರಿವರಸುತಾಲೋಲನಂ ಭಜಕಪಾಲನಂ |
ಕರುಣರಸ ಪರಿಪೂರ್ಣನಂ ಸ್ಫಟಿಕವರ್ಣನಂ |
ದುರಿತ ತಿಮಿರಾದಿತ್ಯನಂ ಸುರಸ್ತುತ್ಯನಂ ಸೋಮನಂ ಜಿತಕಾಮನಂ ||
ವರಪುಣ್ಯಚಾರಿತ್ರನಂ ಫಾಲನೇತ್ರನಂ |
ಸರಸಿಜಾಹಿತ ಚೂಡನಂ ವಷಾರೂಢನಂ |
ಕರಿವದನಗುಹತಾತನಂ ಲೋಕನಾಥನಂ ನುತಿಸುವೆನು ಮನ್ಮನದೊಳು ||5||

ಕಮಲದಳನೇತ್ರೆಯಂ ಕಮನೀಯ ಗಾತ್ರೆಯಂ |
ಹಿಮಶೈಲ ಜಾತೆಯಂ ಗಜಮುಖನ ಮಾತೆಯಂ |
ದ್ಯುಮಣಿ ಶತಭಾಸೆಯಂ ತಿಲಕುಸುಮನಾಸೆಯಂನತ ಮಗಮದೋಲ್ಲಾಸೆಯಂ ||
ನಮಿತ ಜನಪಾಲೆಯಂ ಸಂಗೀತಲೋಲೆಯಂ |
ವಿಮಲಗುಣ ಭರಿತೆಯಂ ವರಪುಣ್ಯ ಚರಿತೆಯಂ |
ಯಮಿಕುಲೋದ್ಧಾರೆಯಂ ಶರಧಿಗಂಭೀರೆಯಂ ಸೆರಗೊಡ್ಡಿ ಪ್ರಾರ್ಥಿಸುವೆನು ||6||

ಭಾಮಿನಿ

ಸಿರಿಸರಸ್ವತಿಯರಿಗೆರಗಿ ಪಂ |
ಕರುಹಭವನನು ನುತಿಸಿ ರಾಮನ |
ಪರಮ ಭಕ್ತನೆನಿಪ್ಪ ಪವನಾತ್ಮಜನ ಬಲಗೊಂಡು ||
ಸುರಪ ಮುಖ್ಯಾಮರರ ಪ್ರಾರ್ಥಿಸಿ |
ಧರೆಯೊಳುಳ್ಳ ಸಮಸ್ತ ಕವಿಗಳ |
ಕರುಣವನು ಕೈಗೊಂಡು ಪೇಳುವೆನೀ ಕಥಾಮತವ ||7||

ದ್ವಿಪದಿ

ಆದಿಕವಿ ವಾಲ್ಮೀಕಿಮುನಿರಾಯಗೆರಗಿ |
ಸಾದರದಿ ಗುರುವರನ ಪದಕೆ ತಲೆಬಾಗಿ ||8||

ಅಧ್ಯಾತ್ಮ ರಾಮ ಚರಿತೆಯಲಿ ಲಕ್ಷ್ಮಣನು |
ಚೋದ್ಯವೆನೆ ದಶಕಂಠನಿಂದ ಮೂರ್ಛೆಯನು ||9||

ತಳೆದಿರಲು ರಾಘವನ ನೇಮದೊಳಗಂದು |
ಕಲಿಹನುಮನಮಲಸಂಜೀವನವ ತಂದು ||10||

ಜೀವಿಸಿದ ಕಥನವನು ಯಕ್ಷಗಾನದಲಿ |
ನಾ ವಿರಚಿಸುವೆ ಲೋಕನಾಥನೊಲುಮೆಯಲಿ ||11||

ನೇಮಗುಣಲಕ್ಷಣಾದಿಗಳೊಂದನರಿಯೆ |
ಪ್ರೇಮದಿಂದಲಿ ರಕ್ಷಿಸೆನ್ನ ರಘುಪತಿಯೆ ||12||

ರಾಗ ಸೌರಾಷ್ಟ್ರ ತ್ರಿವುಡೆತಾಳ

ವರ ಮಹಾ ಕೈಲಾಸ ಗಿರಿಯಲಿ |
ತರುಣಿ ಪಾರ್ವತಿಗತುಳ ಹರುಷದಿ |
ಪುರಹರನು ಶ್ರೀರಾಮಚರಿತವ | ನೊರೆವುತಿರಲು ||13||

ನಮಿಸಿ ಪುನರಪಿ ಕೇಳ್ದಳಂದಾ |
ಕಮಲದಳ ಲೋಚನೆಯು ಕಾಂತನ |
ವಿಮಲ ಪದಪಂಕಜಕೆ ಘನತರ | ಮಮತೆಯಿಂದ ||14||

ಪತಿಯೆ ಕೇಳೇತಕೆ ಸುಮಿತ್ರಾ |
ಸುತನು ರಾವಣನಿಟ್ಟ ಶಕ್ತಿಯ |
ಹತಿಗೆ ಮೂರ್ಚಿತನಾಗಿ ಮಲಗಿದ | ನತುಳಬಲನು ||15||

ಎಂತು ಸಂಜೀವನವನಾ ಹನು |
ಮಂತ ತಾ ತಂದೆಬ್ಬಿಸಿದ ನೆಂ |
ಬರಿತರಂಗವ ಪೇಳೆನಲ್ಕ | ತ್ಯಂತ ಮುದದಿ ||16||

ಕರಿಗೊರಳನಾ ನಿಜ ಸತಿಯನತಿ |
ಕರುಣದಿಂ ಪಿಡಿದೆತ್ತಿ ತಳ್ಕಿಸಿ |
ಪರಮಪುಣ್ಯ ಚರಿತ್ರವನು ಸಾ | ದರದೊಳುಸಿರ್ದ ||17||

ವಾರ್ಧಕ

ಗಿರಿಜೆ ಕೇಳ್ ಧರೆಯ ದೂರಂ ಕೇಳ್ದು ಶ್ರೀವಿಷ್ಣು |
ನರನಾಥ ದಶರಥಂಗುದಿಸಿ ರಾಮಾಖ್ಯೆಯೊಳು |
ವರಕೌಶಿಕನ ಯಜ್ಞಮಂ ಕಾಯ್ದು ಸೀತೆಯಂ ವರಿಸಿ ಭಾರ್ಗವನಧಟನು ||
ಮುರಿದು ಪಿತನಾಜ್ಞೆಯಂ ಪಾಲಿಸಲ್ಕಾಗಿ ತ |
ನ್ನರಸಿ ಲಕ್ಷ್ಮಣರನೊಡಗೊಂಡು ಕಾನನಕಯ್ದಿ |
ವರ ಪಂಚವಟಿಯೊಳತಿ ಬಲವಂತ ಖರದೂಷಣಾದಿಗಳ ಖಂಡಿಸಿದನು ||18||

ಖಳರಾವಣಂ ಸೀತೆಯನು ಕದ್ದು ಕೊಂಡೊಯ್ಯ |
ಲಳಲುತ್ತ ಮುಂದಯ್ತರಲ್ ಪಥದಿ ಬಿದ್ದಿರ್ದ |
ಕಲಿಗಧ್ರರಾಜನಂ ಕಂಡರಿದು ಪವಮಾನಸುತನಿಂದ ಸುಗ್ರೀವನ ||
ಸಲೆಸಖ್ಯವನ್ನೆಸಗಿ ವಾಲಿಯಂ ಸಂಹರಿಸು |
ತೆಲರಣುಗ ತಂದ ಚೂಡಾಮಣಿಯ ನೀಕ್ಷಿಸುತ |
ಬಲುಮರ್ಕಟರ ಕೂಡಿಕೊಂಡು ಲಂಕಾಪುರವ ಮುತ್ತಿದಂ ರಘುನಾಥನು ||19||

ಭಾಮಿನಿ

ವರ ವಿಭೀಷಣನಿಂದ ಕೆಲಬರು |
ತರಣಿನಂದನ ಹನುಮರಿಂ ಕೆಲ |
ರಿರದೆ ಜಾಂಬವ ವೀರ ನಳ ನೀಲಾದ್ಯರೊಳು ಕೆಲರು ||
ಸುರಪ ಸುತನ ಕುಮಾರನಲಿ ಸಂ |
ಗರದಿ ಖತಿಯಲಿ ಕಾದಿ ಮಡಿದರು |
ದುರುಳ ದೈತ್ಯರು ಪೇಳಲೇನದ್ಭುತದ ರಣರಭಸ ||20||

ರಾಗ ಭೈರವಿ ಝಂಪೆತಾಳ

ಕಾಮಿನೀಮಣಿ ಕೇಳು | ರಾಮಚಂದಿರನು ಬಳಿ |
ಕಾ ಮಹಾ ಕಪಿಗಳು | ದ್ದಾಮ ಸಾಹಸವ ||21||

ಕಂಡು ತೋಷವನು ಕೈ | ಗೊಂಡು ಮತ್ತವರನುರೆ |
ಕೊಂಡಾಡಿದನು ಪ್ರಬಲ | ಪಿಂಡರಿವರೆಂದು ||22||

ಮೂಗಿನಲಿ ಬೆರಳಿಟ್ಟು | ತೂಗಿ ನಿಜಮುಕುಟವನು |
ರಾಘವನು ರವಿತನಯ | ಗಾಗನಗುತೆಂದ ||23||

ಬಲುದಣಿದುದೈ ನಮ್ಮ | ಬಲವೆಲ್ಲವಿಂದಿನಲಿ |
ಬಲವಂತ ರಾಕ್ಷಸರ | ಗೆಲುವಬಗೆಗಾಗಿ ||24||

ಎಂಬನಿತರೊಳು ತರಣಿ | ಯಂಬರವನಿಳಿದನೃಪ |
ರಾಂಬುಧಿಗೆ ಮುಗಿದವಂ | ದಂಭೋಜನಿಕರ ||25||

ಭಾಮಿನಿ

ಬಳಿಕ ಮರುದಿನವಿತ್ತ ರಾವಣ |
ನಲಘುತರ ವರಸಿಂಹಪೀಠದಿ |
ಕುಳಿತ ನೊಡ್ಡೋಲಗದಿ ದಿತಿಜರ ಸಭೆಯ ಮಧ್ಯದಲಿ ||
ಕಲಹದಲಿ ದೇವಾಂತಕಾದಿಗ |
ಳಳಿದ ವತ್ತಾಂತವನು ಬಂದಾ |
ಖಳ ತಿಲಕಗರುಹಿದರು ಚಾರಕರಧಿಕ ಭೀತಿಯಲಿ ||26||

ರಾಗ ಮುಖಾರಿ ಏಕತಾಳ

ಖಳ ರಾಯ ಲಾಲಿಸೈ ಬಿನ್ನಪವ | ಮಹಾನುಭಾವ |
ಖಳರಾಯ ಲಾಲಿಸೈ ಬಿನ್ನಪವ || ಪ ||

ಮೊದಲು ಕಳುಹಿದ ಭಟರನೆಲ್ಲ | ಸಂಗ್ರಾಮದಲ್ಲಿ |
ಸದೆದು ಸಾಹಸವ ತೋರ್ದರೆಲ್ಲ ||
ಕದನಕಲಿಗಳನು | ಸದೆದಾವಾನರ | ರೆದೆಗೆಡಿಸಿದರೆಂ | ಬುದು ಹರಿದುದು ಲೋ |
ಕದ ಜನರಿದಿರಲಿ | ಸುದಯನೆ ಮುಂದ | ಭ್ಯುದಯವ ಕಾಣೆನು | ಬೆದರಿದರೆಲ್ಲ || ಖಳ ||27||

ಎತ್ತ ನೋಡಿದಡತ್ತ ಬಂದು | ಕಪಿಗಳ ಸೇನೆ |
ಮುತ್ತಿದೆ ನಗರವ ಮತ್ತಿಂದು ||
ಚಿತ್ತವಿಸೈ ಬಲು | ಮತ್ತ ಗಜಂಗಳ | ಮೊತ್ತವನುರೆ ಮುಂ |
ದೊತ್ತುತ ಬರುತಿರ | ಲುತ್ತಮ ಹಯಗಳ | ಪತ್ತಿ ಸಮೂಹವ |
ನೊತ್ತರಿಸುತ ಸದೆವುತ್ತ ಗೆಲಿದರು || ಖಳ ||28||

ಭಾಮಿನಿ

ಪೊಡವಿಧರಸುತೆ ಕೇಳುಚಾರರ |
ನುಡಿಯ ಕೇಳುತ ರಾವಣನು ಕೆಂ |
ಗಿಡಿಗಳನು ಕಂಗಳಲಿ ಸೂಸುತ್ತ್‌ಡನುರೆಕಚ್ಚಿ ||
ಝಡಿದು ಖಡುಗವ ಹೂಂಕರಿಸುತಡಿ |
ಗಡಿಗೆ ವೀರಾವೇಶದಿಂದಲಿ |
ಕಡೆಯ ಬೈರವನಂತೆ ಖತಿಯನು ತಾಳುತಿಂತೆಂದ ||29||

ರಾಗ ಸೌರಾಷ್ಟ್ರ  ತ್ರಿವುಡೆತಾಳ

ಕುರಿಗೆ ಹೆಬ್ಬುಲಿಯಂಜುವುದೆ ಫಡ |
ನರರು ವಾನರರಾರ್ಭಟೆಗೆ ತಾ |
ನರರೆ ಹಿಮ್ಮೆಟ್ಟುವೆನೆ ಸಾಹಸ | ದಿರವನೀಗ ||30||

ತೋರುವೆನು ಕಪಿಕಟಕದಸುಗಳ |
ಹೀರುವೆನು ಖರವೈರಿ ಲಕ್ಷ್ಮಣ |
ರಾರುಭಟೆಗಳ ನಿಲಿಸುವೆನು ರಣ | ಧಾರಿಣಿಯೊಳು ||31||

ಇಂದು ರಾಮನ ರಣದಿ ಕೆಡಹದೆ |
ಹಿಂದು ಮುಂದಾನಾದೆನಾದಡೆ |
ತಂದೆ ತಾಯಿಗಳಿಂಗೆ ಜನಿಸಿದ | ಕಂದನಲ್ಲ ||32||

ಎನುತ ಕೊನೆಮೀಸೆಗಳ ತಿರುಹುತ |
ಧನುಜಪತಿ ನಿಂದಿರಲು ಕಾಣು |
ತ್ತನಘಮತಿಯತಿಕಾಯ ನಗುತೆಂ | ದನು ಪಿತಂಗೆ ||33||

ರಾಗ ಕಾಪಿ ಅಷ್ಟತಾಳ

ಏತಕೆ ಮರುಳಾದೆ ತಾತ | ರಘು |
ನಾಥನೊಳ್ ಕಲಹವೆ ಲೋಕ ವಿಖ್ಯಾತ || ಏತಕೆ ||   || ಪ ||

ಸಕಲ ಲೋಕೈಕ ನಾಯಕನು | ಸರ್ವಾ |
ತ್ಮಕನು ಸರ್ವರ ರಕ್ಷಿಸುವ ದೈವನವನು ||
ಮುಕುತಿದಾಯಕನು ಶಾಶ್ವತನು | ನಿನ್ನ |
ಯುಕುತಿನಡೆಯದಾದಿವಸ್ತು ರಾಘವನು || ಏತಕೆ ||34||

ಇರಿತಕಂಬರವಳುಕುವುದೆ | ನೊರ |
ಜುರುಬಿದಡಗ್ನಿಗೆ ನೋವು ತಾಗುವುದೆ ||
ಇರುವೆ ಕಚ್ಚಿದರೆ ಬೆಚ್ಚುವುದೆ | ಸುರ |
ಗಿರಿಯು ನಿನ್ನಧಟು ರಾಘವನೊಳೊಪ್ಪುವುದೆ || ಏತಕೆ ||35||

ಕಡುಗಲಿ ಖರನೆಲ್ಲಿ ಪೋದ | ಹಿಂದೆ |
ಅಡವಿಯೊಳ್ ವೀರಾಧಿವೀರನೇನಾದ |
ಬಿಡದೆ ಯೋಚಿಸಿ ನೀನೇ ನೋಡು | ಜಗ |
ದೊಡೆಯ ರಾಮನ ಕೆಣಕಲು ಬಂತು ಕೇಡು || ಏತಕೆ ||36||

ಭಾಮಿನಿ

ಸೀತೆಯನು ರಘುವರನಿಗಿತ್ತನು |
ಜಾತನಾದ ವಿಭೀಷಣನ ಸಂ |
ಪ್ರೀತಿಯಲಿ ಕರೆತಂದು ರಾಜ್ಯವನಾಳುವುದು ಸುಖದಿ ||
ನೀತಿಯೆಂದತಿ ಕಾಯನುಸಿರಿದ |
ರೀತಿಯನು ಕೇಳುತ್ತ ಕೈಕಸೆ |
ಜಾತನತಿಖತಿಗೊಂಡು ನುಡಿದನು ಮಗನಿಗುತ್ತರವ ||37||

ರಾಗ ಭೈರವಿ ಏಕತಾಳ

ಅತಿಕಾಯನೆ ನೀ ಕೇಳು | ರಿಪು |
ಮಥನಕೆ ಪೋಪಡೆ ಪೇಳು ||
ಕಥನದ ಮಾತಂತಿರಲಿ | ಪಶು |
ಪತಿಯಾಹವಕಯ್ತರಲಿ ||38||

ಕೊಡೆ ರಾಮಗೆ ಸೀತೆಯನು | ನಿಲು |
ಗಡೆಯಿದು ತೊಟ್ಟ ಛಲವನು ||
ಬಿಡುವವನೇ ತಾನೆಂದು | ನೆಲ |
ನೊಡೆಯಲು ಕೂಗಿದನಂದು ||39||

ರಾಗ ಕಾಂಭೊಜಿ ಝಂಪೆತಾಳ

ಅಹುದು ಮತ್ತೇನಾರ ಚಿತ್ತದಲಿ ಗ್ರಹಿಸಿಕೊಂ |
ಡಿಹುದನವರೇ ಬಲ್ಲರೆನುತ ||
ಸಹಜ ವೈಷ್ಣವರೆರೆಯನತಿಕಾಯ ನುಬ್ಬಿ ಸ |
ನ್ನಿಹಿತನಾದನು ಸಮರಕಂದು ||40||

ಜೀಯ ತಾ ಸಂಗರಕೆ ವೀಳೆಯವನೆನುತಲತಿ |
ಕಾಯನುಸಿರಲ್ಕೆ ರಾಕ್ಷಸರ ||
ರಾಯನಾತನಿಗೆ ಪೊಂಬಟ್ಟಲಲಿ ವೀಳ್ಯವನು |
ಪ್ರೀಯದಲಿ ಕೊಟ್ಟು ಕಳುಹಿದನು ||41||

ತರಿಸಿ ತುಲಸಿಯ ದಂಡೆಗಳ ಕೊರಳೊಳಾಂತೂರ್ಧ್ವ |
ವರ ತ್ರಿಪುಂಡ್ರವ ಪಣಗೆ ರಚಿಸಿ ||
ಸರಸದಿಂ ಮಾತೆಯಡಿಗೆರಗಿ ಮಣಿರಥವೇರಿ |
ಪೊರಟನತಿಕಾಯನಾಹವಕೆ ||42||

ಬನ್ನಿರೈ ಸಂಸಾರಶರಧಿಯನು ದಾಟುವರು |
ಬನ್ನಿರೈ ಮೋಕ್ಷಕಾಂಕ್ಷಿಗಳು ||
ಬನ್ನಿರೈ ಬಹಳ ಪದವಿಯನು ಬಯಸುವ ಸುಭಟ |
ರೆನ್ನೊಡನೆ ನೀವೆನುತ ಕರೆದ || 43||

ಈಶನಾಗುವಡೆ ಕಮಲಾಸನನ ಪದವನಾ |
ಯಾಸವಿಲ್ಲದೆ ಸುಲಭದಿಂದ ||
ಕೇಶವನ ಕೂಡುವಡೆ ಬನ್ನಿರೆನ್ನೊಡನೆಂದು |
ಹೊಯ್ಸಿದನು ಡಂಗುರವನವನು ||44||

ಬಳಿಕ ತತ್ವವ ತಿಳಿದು ರಾಮನೇ ಪರದೈವ |
ವಳಿಯದಚಲ ಬ್ರಹ್ಮವೆಂದು ||
ತಿಳಿದಿರ್ದ ದೈತ್ಯತತಿ ಗಜರಥಹಯಂಗಳಲಿ |
ಬಳಿಸಿತತಿಕಾಯನನು ಬಂದು ||45||

ಭಾಮಿನಿ

ದಕ್ಷನಂದನೆ ಕೇಳು ದನುಜಾ |
ಧ್ಯಕ್ಷಸುತನೀ ಪರಿಯೊಳೆಲ್ಲರ |
ನಾಕ್ಷಣದೊಳೊಡಗೊಂಡು ರಣಕಯ್ತರುವ ಸಂಭ್ರಮವ ||
ಈಕ್ಷಿಸುತ ಪೌರಾಂಗನಾಜನ |
ಲಕ್ಷಮೊಡನೊಡನಯ್ದೆ ತಮ್ಮೊಳ |
ಗಕ್ಷಿಯಲಿ ನೀರೇರಿ ನುಡಿವುತ್ತಿರ್ದರಲ್ಲಲ್ಲಿ ||46||

ರಾಗ ಶಂಕರಾಭರಣ ಏಕತಾಳ

ಇತ್ತ ನೋಡೆ ತಂಗಿ ರಾವ | ಣಾತ್ಮಜನತಿಕಾಯನು ದಂ |
ಡೆತ್ತಿ ರಣಕಯ್ತರುವ ಬಹಳ | ವಿಸ್ತಾರವನ್ನು ||
ಕತ್ತಿವಾಸಗರಿದು ರಾಮ | ನುತ್ತಮ ಮೋಹರವ ಪೊಗಲು |
ಮತ್ತ ಹಂಸಗಮನೆ ಇವನ | ಸತ್ತ್ವವೆಂತುಟೊ ||47||

ಆದರೇನೆಂಬೆನಕ್ಕ ಪು | ಣ್ಯೋದಯವ ರಾಕ್ಷಸರೊಳಿವನು |
ಶ್ರೀಧರನ್ನ ಚರಣ ಕಮಲಾ | ರಾಧಕ ಕಾಣೆ ||
ವಾದಗುಟ್ಟಿ ಫಲವೇನಿನ್ನು | ಪೋದುದು ಲಂಕೆಯೈಶ್ವರ್ಯ |
ಈ ದಿವ್ಯ ಪುರುಷನ ಕೂಡೆ | ನಾದಿನಿ ಕೇಳೆ ||48||

ಪರರ ಹೆಣ್ಣಿಗಾಗಿ ತನ್ನ | ತರಳರನ್ನು ರಣಕೆ ನೂಕಿ |
ಮೆರೆವನಲ್ಲೆ ದಶಕಂಠನು | ಹರ ಮಹಾದೇವ ||
ಮರುಳಾದಳೇನಕ್ಕ ಮತಿ | ಪರಮ ವೈಷ್ಣವನ ತಾಯಿ |
ವರ ಧಾನ್ಯಮಾಲಿನಿ ಮಗನ | ಧುರಕೆ ಕಳುಹಲ್ಕೆ ||49||

ವಾರ್ಧಕ

ಇಂತೆಂದು ತತ್ಪುರದ ಪ್ರಮದೆಯರ್ ಸುಮದೆಯರ್ |
ತಂತಮ್ಮೊಳಿರದೆ ಮಾತಾಡುತಂ ನೋಡುತಂ |
ಸಂತಾಪಮಂ ತಾಳ್ದು ಸುಯ್ವುತಂ ಬೈವುತಂ ದಶಶಿರನನಿರಲಿತ್ತಲು ||
ಸಂತಸದೊಳತಿಕಾಯನುಬ್ಬುತಂ ಹಬ್ಬುತಂ |
ಮುಂತಳೆದು ಬರುವಂತೆ ರಥದೊಳಂ ಪಥದೊಳಂ |
ಕಂತುಪಿತನಂ ಮನದಿ ನೆನೆವುತಂ ತೊನವುತಂ ಬರುತಿರ್ದನಾಚೆಗಂದು ||50||

ಕೆಲಸಾರು ಭಕ್ತಿಯ ಮಹಮ್ಮೇರು ಬರುತಲಿದೆ |
ಕೆಲಸಾರು ಸದ್ಧರ್ಮ ಕಲ್ಪತರು ಬರುತಲಿದೆ |
ಕೆಲಸಾರು ಶ್ರೀರಾಮಚರಣಾರವಿಂದಮಧುಕರ ತಾನೆ ಬರುತಲಿದಕೊ ||
ಕೆಲಸಾರು ಭಾಗವತ ಮೌಳಿಮಣಿ ಬರುತಲಿದೆ |
ಕೆಲಸಾರು ದಾನವರ ಕುಲದೀಪ ಬರುತಲಿದೆ |
ಕೆಲಸಾರು ಪಾಪಹುತ ವಾಹನತಿಕಾಯ ಬೃಹನೆಂದು ಕಹಳೆಗಳುಲಿದವು ||51||

ರಾಗ ಭೈರವಿ ತ್ರಿವುಡೆತಾಳ

ವೀರವೈಷ್ಣವ ರೆರೆಯನತಿ ಮುದ |
ವೇರಿ ನಾನಾ ವಾದ್ಯಘೋಷದಿ |
ಘೋರ ದಾನವರೊಡನೆ ಲಂಕೆಯ |
ದ್ವಾರವನು ಪೊರಮಟ್ಟು ಸಂಗರ |
ಧಾರಿಣಿಗೆ ನಡೆತರೆ ಸನಂದನ |
ನಾರದಾದಿ ಮುನೀಂದ್ರ ರಭ್ರದಿ |
ಭೂರಿ ಶೌರ್ಯವ ಕಂಡು ಪೊಗಳಿದ |
ರಾ ರಣದಿ ಮಝ ಭಾಪೆನುತ್ತದ |
ನೇನನೆಂಬೆ | ಸಾಹಸ | ವೇನನೆಂಬೆ ||52||

ಹೊಳೆಹೊಳೆವ ಕಯ್ದುಗಳ ಕಿರಣಂ |
ಗಳ ಪತಾಕಾವಳಿಯ ಮುಸುಕುವ |
ಬೆಳುಗೊಡೆಯ ಚಾಮರ ಸಮೂಹದಿ |
ನಿಲದೆ ಪೊಗಳುವ ಪಾಠಿಕರ ಕಳ |
ಕಳದ ರಭಸದಿ ಘೋರ ರೂಪಿನ |
ನೆಲನನಳೆದ ತ್ರಿವಿಕ್ರಮನ ಮೈ |
ಯಳತೆಯಲಿ ಮೈದೋರ್ದನಾ ಕಪಿ |
ಬಲಕೆ ರಾವಣಸೂನು ತವಕದೊ |
ಳೇನನೆಂಬೆ | ಸಾಹಸ | ವೇನನೆಂಬೆ ||53||

ಭೀಮಬಲನತಿಕಾಯನಯ್ತರು |
ವಾ ಮಹಾಸಂಭ್ರಮವ ಪ್ಲವಗ |
ಸ್ತೋಮವಿದ ನೋಡುತ್ತ ಮನದಲಿ |
ಭ್ರಾಮಕಂವಡೆವುತ್ತಲಿವನಾ |
ರೋ ಮಹಾದೇವೆಂದು ಬೆದರಿದ |
ತಾಮಸಿಕೆಯಲಿ ಹರಿದುದಗಲಕೆ |
ರಾಮಭಕ್ತ ಪ್ರೇಮ ನೃಪತಿ ಲ |
ಲಾಮ ರಕ್ಷಿಸು ರಕ್ಷಿಸೆನುತಲಿ |
ಏನನೆಂಬೆ | ಸಾಹಸ | ಏನನೆಂಬೆ ||54||

ಕಂದ

ಬೆಟ್ಟವೆ ಹರಿತಹುದೆನಲೆ |
ಬ್ಬಟ್ಟುತ ಕಪಿಬಲವನಯ್ದೆ ಬೃಹ ಪಟುಭಟರಂ ||
ನಿಟ್ಟಿಸಿ ಮನದೊಳು ಬೆರಗಂ |
ಬಟ್ಟು ವಿಭೀಷಣನೊಳೆಂದ ನವನಿಪತಿಲಕಂ ||55||

ರಾಗ ತೋಡಿ ಏಕತಾಳ

ಈತನಾರು ಪೇಳಯ್ಯ ವಿಭೀಷಣಾಂಕ ನೀನು |
ಭೂತಳದೊಳಿವನ ಪೋಲ್ಪರನ್ನು ಕಾಣೆ ನಾನು ||
ಈ ತೆರದ ರಕ್ಕಸರು ನಿಮ್ಮ ಬಲದೊಳಿನಿಬರೆಂದು |
ಸೀತಾರಮಣ ಕೇಳಲಾಗ ಪೇಳ್ದನಾತನಂದು ||56||

ರಾಗ ಸೌರಾಷ್ಟ್ರ ಅಷ್ಟತಾಳ

ಜೀಯ ಲಾಲಿಸು ವೀರನತಿಕಾಯನೆಂಬಾತ | ನೀತಕಾಣೈ | ದೈತ್ಯ |
ರಾಯ ರಾವಣನೆರಡನೆಯ ಕುಮಾರಕ | ನೀತಕಾಣೈ ||57||

ವಾಯು ಜಾತನನಂದು ಕಟ್ಟಿದಾತನ ತಮ್ಮ | ನೀತಕಾಣೈ | ಖೂಳ |
ನಾಯಿಯೆಂದೆನ ಬೇಡ ಭಕ್ತರೊಳ್ ವೆಗ್ಗಳ | ನೀತಕಾಣೈ ||58||

ಪಾತಕನಾ ಮೇಘನಾದ ಪುಣ್ಯಾತುಮ | ನೀತಕಾಣೈ | ಬಲು |
ಘಾತಕನವನತಿ ನಿಷ್ಕಪಟಾಂಗನು | ಈತ ಕಾಣೈ | ||59||

ಆತನ ಸರಿ ಮಿಗಿಲೆನಿಸುವ ರಣದೊಳ್ | ಈತ ಕಾಣೈ | ಹೆಚ್ಚು |
ಮಾತೇನು ಮಿಕ್ಕಿನ ಗುಣದೊಳು ವೆಗ್ಗಳ | ನೀತಕಾಣೈ ||60||

ಕಂದ

ಎಂಬೀ ನುಡಿಯಂ ಸುಗ್ರೀ |
ವಂ ಬೆರಗಿನೊಳಾಲಿಸುತ್ತಲತಿ ಸಂಭ್ರಮದಿಂ ||
ಜಾಂಬವ ವಾಲಿಸುತಾದ್ಯರ |
ನುಂ ಬೇಗದಿ ಕರೆದುಸಿರ್ದನವರೊಡನಾಗಂ ||61||

ರಾಗ ಮಧ್ಯಮಾವತಿ ಏಕತಾಳ

ಕೇಳಿ ವಾನರರೆಲ್ಲ ನೀವೀಗ |
ಏಳಿರಣಕೆ ಬಂದವನೊಳತಿ ಬೇಗ ||    || ಪ ||

ಇದುವೆ ವೇಳೆಯು ರಾಘವನ ಚಿತ್ತ ಮೆಚ್ಚಿಸು |
ವುದಕೆ ಮಿಕ್ಕಿನ ಮಾತಿನಿಂದಾಹುದೇನು ||
ಬೆದರದೆ ಬೆಚ್ಚದೆ ಕಡು ಖೂಳ ದೈತ್ಯರ |
ನೊದಗಿ ಕಾಳಗದೊಳೆದೆಗೆಡಿಸುವದೆಲ್ಲ || ಕೇಳಿ ||62||