ರಾಗ ಕೇದಾರಗೌಳ ಅಷ್ಟತಾಳ

ಇಂತು ಮುಂದಯ್ತರೆ ಕಪಟದ ಮುನಿಗಳ |
ತಿಂಥಿಣಿಯನು ಕಾಣುತ ||
ಅಂತರಂಗದಿ ಚೋದಿಗವ ಪಟ್ಟು ಹನುಮಂತ |
ನಿಂತು ಚಿಂತಿಸಿದನಾಗ ||296||

ಹಿಂದೆ ನಾನಿಲ್ಲಿಗೆ ಬರುವಾಗಳೀ ಮುನಿ |
ವಂದದಾಶ್ರಮವ ಕಾಣೆ ||
ಇಂದಿದು ಪೊಸತು ಮಾರ್ಗವ ತಪ್ಪಲಿಲ್ಲ ತಾ |
ನೆಂದು ಯೋಚಿಸುತಿರ್ದನು ||297||

ಆದಡೆನಾಯಿತು ತಷೆ ಬೃಹಳುದಕದ |
ವೇದನೆಯಿಂದೆನಗೆ ||
ಈ ದಿವ್ಯಮುನಿಗಳಾಶ್ರಮವ ತೋರಿಸಿದ ಮ |
ಹಾದೇವ ಕರುಣದಲಿ ||298||

ಯಮಿಗಳ ಕಂಡುದಕವನೀಂಟುತಲೆ ತನ್ನ |
ಶ್ರಮವನು ಕಳೆದುಕೊಂಡು ||
ಗಮಿಸುವೆನಾಮೇಲೆ ದ್ರೋಣ ಪರ್ವತಕೆಂದು |
ಕಮಲನಾಭನ ದೂತನು ||299||

ನಡೆತಂದು ಕಂಡನು ಮಾಯದ ಮುನಿಗಳ |
ಗಡಣದ ಮಧ್ಯದಲಿ ||
ಕಡು ಡಂಭದಲಿ ಕುಳಿತಿಹ ಕಾಲಿನೇಮಿಯ |
ದಢತರ ಭಕ್ತಿಯಲಿ ||300||

ವಾರ್ಧಕ

ಕೆಲಬರುತ್ತಮ ಶಿವಧ್ಯಾನದಿಂ ಮೌನದಿಂ |
ಕೆಲಬರಿಕೆ ದೇವತಾರ್ಚನೆಗಳಿಂ ಘನಗಳಿಂ |
ಕೆಲಬರತಿ ಡಂಭಕದ ಹೋಮದಿಂ ನೇಮದಿಂ ಕೇಲರು ದಢ ಯೋಗದಿಂದ ||
ಕೆಲರಯ್ದೆ ವೇದಾಂತ ಘೋಷದಿಂ ತೋಷದಿಂ |
ಕೆಲರೆಣೆಕೆಯಿಂ ಗೆಯ್ವ ಜಪಗಳಿಂ ತಪಗಳಿಂ |
ಕೆಲಬಲದಿ ಕಪಟ ಮುನಿನಿಕರಮಂ ಸಕಲಮಂ ಕಂಡ ಪವಮಾನಸೂನು   ||301||

ಭಾಮಿನಿ

ತರುಣಿ ಕೇಳಾ ಕತಕ ಶಿಷ್ಯರ |
ನೆರಹಿಕೊಂಡಿಹ ಮಾಯಕದ ಮುನಿ |
ವರನ ನೀಕ್ಷಿಸುತಾಕ್ಷಣವೆ ಪವಮಾನನಂದನನು ||
ಎರಗಿ ಸಾಷ್ಟಾಂಗದಲಿ ಭಕ್ತಿಯ |
ಹೊರಿಗೆಯಲಿ ಬಳಿಕೆದ್ದು ತನ್ನಯ |
ಕರವ ಜೋಡಿಸಿಕೊಂಡು ಮತ್ತಿಂತೆಂದನವನೊಡನೆ ||302||

ರಾಗ ಕೇದಾರಗೌಳ ಅಷ್ಟತಾ

ಪರಮಮುನೀಂದ್ರನೆ ಕರುಣದಿ ಲಾಲಿಸೆ |
ನ್ನರಿಕೆಯನತಿ ಮುದದಿ ||
ಸಿರಿರಾಮನೋಲೆಯ ಕಾರ ಹನುಮನೆಂದು |
ಕರೆವರೆನ್ನನು ಜಗದಿ ||303||

ರಾಯ ರಾಘವ ಕಳುಹಿದ ಸಂಜೀವನವನ್ನು |
ತಾಯೆಂದು ದ್ರೋಣಾದ್ರಿಗೆ ||
ಬಾಯಾರ ಲಿಲ್ಲಿಗೆ ಬಂದಿಹೆನೆನಗಿಷ್ಟು |
ತೋಯವ ನೀಡೆನಗೆ ||304||

ಎನಲು ಕಪಟಮುನಿ ಕಣ್ದೆರೆದೊಯ್ಯನೆ |
ಹನುಮನ ಮೊಗ ನೋಡುತ ||
ಘನಪರಿ ತೋಷ ತಾಳ್ದಂತೆ ಸನ್ಮಾನಿಸು |
ತಿನಿತೆಂದ ನಸುನಗುತ ||305||

ರಾಗ ಕಾಂಭೋಜಿ ಏಕತಾಳ

ಬಂದೆಯ ಹನುಮಂತ ಬೃಹಳ | ಚಂದವಾಯಿತಯ್ಯ |
ಕಂದು ಕುಂದೇಕೆ ಜಲವ | ತಂದೀವೆ ಕೊಳ್ಳಯ್ಯ ||
ಒಂದು ದಿವಸ ನೀನಿಲ್ಲಿದ್ದು | ಮುಂದಯ್ದಬಹುದಯ್ಯ |
ಇಂದು ನಿನ್ನ ಕಂಡು ಮನಕಾ | ನಂದವಾಯಿತಯ್ಯ ||306||

ಬಲ್ಲೆವು ಜ್ಞಾನ ದೃಷ್ಟಿಯೊ | ಳೆಲ್ಲವ ನಾವಯ್ಯ |
ಪುಲ್ಲ ನೇತ್ರ ರಾಮನ ಕರುಣ | ದಲ್ಲಿ ಕಂಡೆವಯ್ಯ ||
ಬಲ್ಲಿದ ಲಕ್ಷ್ಮಣನೆದ್ದ | ಸುಳ್ಳಲ್ಲ ಕೇಳಯ್ಯ |
ತಲ್ಲಣಿಸಬೇಡ ಜಯ ನಿ | ಮ್ಮಲ್ಲಿ ಸೇರ್ದುದಯ್ಯ ||307||

ಕಂದ

ಎಂದೊಡನೆ ಕಮಂಡಲಜಲ |
ಮಂ ದಯದಿಂ ಕಾಲನೇಮಿಯಾಯಲ್ಕಾಗಳ್ ||
ವಂದಿಸಿ ಮರುತಜನಿದರೊಳ್ |
ಗೆಂದಿಗು ತಷೆ ಮಾಣದೆನುತಲವನೊಳುಸಿರ್ದಂ ||308||

ರಾಗ : ಕೇದಾರಗೌಳ ಝಂಪೆತಾಳ

ಮುನಿವರನೆ ಲಾಲಿಸುವುದು | ಈ ಜಲದಿ |
ಘನವಾದ ತಷೆಮಾಣದು ||
ಎನಗೆ ನಿರ್ಮಲ ಸರಸಿಯ | ತೋರಿದರೆ |
ಮನದಣಿಯೆ ಕೊಂಬೆಜೀಯ ||309||

ಎನಲವನು ಕತಕಗಳನು | ಗೆಯ್ದ ಕೊಳ |
ವನು ತೋರಿಸಿದನಾತನು |
ಮನದಣಿಯಲಾ ಜಲವನು | ಕಂಗಳೆರ |
ಡನು ಮುಚ್ಚಿಕೊಂಡು ನೀನು ||310||

ಕುಡಿದು ಬಾರೆನ್ನ ಬಳಿಗೆ | ಉಪದೇಶ |
ಕೊಡುವೆನಾ ಮೇಲೆ ನಿನಗೆ ||
ಕಡು ಗುಪಿತ ಮಂತ್ರಗಳನು | ಪೋಗೆನಲು |
ತಡೆಯದಯ್ದಿದನಾತನು ||311||

ವಾರ್ಧಕ

ಬಡನಡುವ ಬಾಲೆಕೇಳ್ ಬಳಿಕಾ ಸಮಾರಜಂ |
ತಡೆಯದಯ್ತಂದು ಕಪಟದ ಸರೋವರವನಿಳಿ |
ದೊಡನಕ್ಷಿಗಳ ಮುಚ್ಚೆ ನೀರ್ಗುಡಿವ ಸಮಯದೊಳಗೊಂದು ಪೆಣ್ಮೊಸಳೆ ಬಂದು ||
ಪಿಡಿದೆಳೆವುತಿರಲಿದೇನೆಂದು ಕಣ್ದೆರೆದವಂ |
ಕಡುಕಿದಾ ಮಕರಿಯಂ ಕಂಡು ಕಡು ಕೋಪದಿಂ |
ದೆಡೆಗಾಲಿನಿಂಮೆಟ್ಟಿ ಸೀಳ್ದಾತತೂಕ್ಷಣದಿ ತಡಿಗೆ ಬಿಸುಟಂ ಭರದೊಳು ||312||

ಭಾಮಿನಿ

ಅರಸಿ ಕೇಳಾಶ್ಚರ್ಯ ಹನುಮನ |
ಚರಣ ಸೋಂಕಲ್ಕಾ ಶರೀರವು |
ತೊರೆದು ಗಗನದಿ ದಿವ್ಯನಾರಿಯ ರೂಪವನು ತಾಳ್ದು ||
ಮಿರುಪ ಸರ್ವಾಭರಣದಿಂ ಪೂ |
ಶರನ ಮುಂಗೈಗಿಣಿಯ ತೆರದಲಿ |
ಹರುಷದಿಂ ಕೈಮುಗಿದು ಪವನಜಗೆಂದಳಾ ಕಾಂತೆ ||313||

ರಾಗ ಆರಭಿ ರೂಪಕತಾಳ

ಜಯ ದಶಾಸ್ಯದರ್ಪಸಂಹರ | ಜಾನಕೀಂದ್ರ |
ಪ್ರಿಯ ಪದಾರವಿಂದ ಮಧುಕರ ||
ಭಯವಿನಾಶ ವಾನರೇಶ |
ನಯದೊಳಿದನು ಲಾಲಿಸಯ್ಯ || ಜಯ ||314||

ಹಿಂದೆ ಮೌನಿಶಾಪದಿಂದಲಿ | ಮಕರಿರೂಪ |
ದಿಂದ ಬಿದ್ದೆನೀ ಸರಸಿಯಲಿ ||
ತಂದೆ ನಿನ್ನ ಪಾದ ಸೋಂಕ |
ಲಿಂದು ನಾ ಕತಾರ್ಥಳಾದೆ || ಜಯ ||315||

ವನದಿ ನೀನು ನೋಡಿದಾತನು | ಮುನಿಪನಲ್ಲ |
ದನುಜ ಕಾಲನೇಮಿಯವನನು ||
ನಿನಗೆ ವಿಘ್ನವನ್ನು ಮಾಡ |
ಲೆನುತಲಟ್ಟಿದನು ಖಳೇಂದ್ರ || ಜಯ ||316||

ಬೇಗವಧಿಸು ದುರುಳ ದೈತ್ಯನ | ತಡವಮಾಡ |
ದೀಗಲಾ ಸುರಾಳಿಘಾತನ ||
ಪೋಗು ನೀನು ತ್ರಿದಶ ಲೋಕ |
ಕಾಗಿ ಪೋಪೆ ನಿನ್ನ ದಯದಿ || ಜಯ ||317||

ಭಾಮಿನಿ

ಎಂದು ಪೇಳ್ದಾ ನಾರಿಯಮರರ |
ಮಂದಿರವ ನಯ್ದಲ್ಕೆ ಹನುಮನು |
ಬಂದನಿತ್ತಲು ಬೊಬ್ಬಿಡುತ ಖಳನಿರ್ದ ಬಳಿಗಾಗಿ ||
ನಿಂದು ಭಯದಿಂದ ಸುರ ಮಾರುತ |
ನಂದನನ ಕಾಣುತ್ತುಳಿದೆನಿಂ |
ದೊಂದು ಹರಿಬದೊಳೆನುತ ಯೋಚಿಸುತೆಂದನೀ ತೆರದಿ ||318||

ರಾಗ ತೋಡಿ ಅಷ್ಟತಾಳ

ಏನಯ್ಯ | ಹನುಮ | ಏನಯ್ಯ || ಪ ||
ಏನಯ್ಯ ನಿನ್ನನುಮಾನವು ಹನುಮ |
ಸಾನುರಾಗದಿ ಪೇಳು ಸಂಗರಭೀಮ || ಎನಯ್ಯ || ಅ ||319||

ಯಾತಕೆ ಸುಮ್ಮನೆ ಚೇಷ್ಟೆಯ ಮಾಳ್ಪೆ |
ಮಾತಾಡದುಗ್ರ ಭಾವದಲಿ ನಿಂದಿರ್ಪೆ |
ಪ್ರೀತಿಯ ಶಿಷ್ಯನು ನೀನೆಮಗೈಸೆ |
ಈ ತೆರದಲಿ ನಮ್ಮ ಮೇಲಿಷ್ಟು ಮುನಿಸೆ || ಏನಯ್ಯ  ||320||

ಕೊಡುವೆನು ಮಂತ್ರೋಪದೇಶಂಗಳನ್ನು |
ಕೊಡು ಬೇಗ ಗುರುದಕ್ಷಿಣೆಯ ನಮಗಿನ್ನು ||
ತಡವ ಮಾಡುವುದೇಕೊ ವಿನಯದಿ ಕೊಳ್ಳೊ |
ಹುಡುಗಾಟಿಕೆಯ ಮಾಡಬೇಡಿತ್ತ ನಿಲ್ಲೊ || ಏನಯ್ಯ ||321||

ಭಾಮಿನಿ

ಹುಡುಗತನವಲ್ಲೆಲವೊ ಮೊದಲಲಿ |
ಕೊಡುವೆ ಗುರುದಕ್ಷಿಣೆಯ ಕಡೆಯೊಳು |
ಕೊಡಬಹುದು ಮಂತ್ರೋಪದೇಶವನೆನುತ ಮಾರುತಿಯು ||
ಮಿಡುಕಿ ಕೋಪದೊಳೌಡುಗಚ್ಚುತ |
ದಢತರದ ಮುಷ್ಟಿಯನು ಬಂಧಿಸಿ |
ಹಿಡಿಯೆನುತಲಾ ದುರುಳ ದಾನವನುರವನೆರಗಿದನು ||322||

ರಾಗ ಭೈರವಿ ಮಟ್ಟೆತಾಳ

ಭರಿತ ಕೋಪದಿಂದ ಹನುಮನೌಡುಗಚ್ಚುತ |
ಭರದ ಮುಷ್ಟಿಯಿಂದ ತಿವಿಯಲವನು ಕಾಣುತ ||323||

ಮರಳಿ ಹೊಯ್ದು ಭೋರುಗೆಯ್ದನೇನ ನೆಂಬೆನು |
ಮರುತಜಾತ ತಿವಿದನಾಗ ಜವದಿ ಖಳನನು ||324||

ತಡವ ಮಾಡಬಾರದೀಗ ತಾನೆನುತ್ತಲಿ |
ಒಡನೆ ವಾಯುಸುತನು ದಡದ ಮುಷ್ಟಿಯಿಂದಲಿ ||325||

ಮುಳಿದು ಶಿರವನೆರಗಿ ನೆತ್ತಿ ಬಿರಿಯೆ ದನುಜನು |
ಇಳೆಗೆ ಬೊಬ್ಬಿಡುತ್ತ ಬೀಳುತಸುವ ತೊರೆದನು ||326||

ಭಾಮಿನಿ

ಸರ್ವಮಂಗಳೆ ಕೇಳು ದನುಜನ |
ನುರ್ವಿಗೊರಗಿಸಿ ಬಳಿಕ ಹನುಮನು |
ಗರ್ವಗತಿಯಲಿ ಕ್ಷಿತಿಯ ಮಾರ್ಗವ ಪಿಡಿದು ತವಕದಲಿ ||
ಸರ್ವದೇಶವ ಕಳೆದು ಮಿಗಿಲಲಿ |
ತೋರ್ವ ಶರಧಿಯ ದಾಟಿ ಬಂದು ಸು |
ಪರ್ವಜನ ಹೊಗಳಲ್ಕೆ ಕಂಡನು ಕ್ಷೀರಸಾಗರವ ||327||

ರಾಗ ಸಾಂಗತ್ಯ ರೂಪಕತಾಳ

ಅಳಿಯನೆ ಹರಿಯು ಹೆಮ್ಮಗಳೆ ರಮಾದೇವಿ |
ಚೆಲುವ ಚಂದ್ರಮನೆನ್ನ ಮಗನು ||
ತಿಳಿಯಲಿಳೆಯೊಳೆಣೆ ಯಿಲ್ಲೆನುವಂತೆ ಕಂ |
ಗೊಳಿಸಿತು ಕ್ಷೀರಸಾಗರವು ||328||

ಅ ದುಗ್ಧಶರಧಿಯ ಕಂಡು ಚಿತ್ತದಿ ಕಡು |
ಮೋದದಿ ವಾಯುನಂದನನು ||
ಪಾದವನೂರಿದಲ್ಲಿಂದ ರಂಜಿಪ ಭದ್ರ |
ಭೂದರವನು ಸುತ್ತಿ ಸುಳಿದ ||329||

ಅರಸಿದಡಲ್ಲಿ ಜೀವೌಷಧಿ ಸಮಯಕ್ಕೆ |
ದೊರಕದಿರಲ್ಕೆ ಮಾರುತಿಯು ||
ಮುರಿದು ಕೊಂಡಾ ಗಿರಿ ಮಸ್ತಕವನು ಮತ್ತ |
ಲ್ಲಿರದೆ ಸೈವರಿದನಾಕ್ಷಣದಿ ||330||

ಕಂದ

ಹನುಮಂ ಜೀವೌಷಧಿಯಂ |
ಘನಬೇಗದೊಳಯ್ದಿ ತಿರುಗಲ್ಕಿತ್ತಂ ||
ಮನದೊಳ್ ಚಿಂತೆಯ ತಾಳುತ |
ವನಜಾಂಬಕನಾಗಳೆಂದನಾ ಜಾಂಬವನೊಳ್ ||331||

ರಾಗ ನೀಲಾಂಬರಿ ತ್ರಿವುಡೆತಾಳ

ಯಾಕಿನ್ನು ಬಂದುದ ಕಾಣೆನು | ಜಗ |
ದೇಕ ವೀರನು ನಮ್ಮ ಹನುಮನು ||
ಪೋಕತನದೊಳಾರು ತಡೆವರೊ | ಪೋಗು |
ವಡವಿ ಮಾರ್ಗದೊಳಾತಂಕಿಸಿದರೊ | ||332||

ಎನಲೆಂದನಾ ಜಾಂಬವಂತನು | ದೇವ |
ಮನದಿ ಚಿಂತಿಸದಿರು ಹನುಮನು ||
ಕ್ಷಣದಲ್ಲಿ ಬಂದನೆಂದೆಣಿಸಿಕೊ | ಲ |
ಕ್ಷ್ಮಣನೆದ್ದನೆಂದು ನೀ ಗ್ರಹಿಸಿಕೊ | ||333||

ವಾರ್ಧಕ

ಎನುತ ಮತ್ತವರೀರ್ವರಿಂತು ಮಾತಾಡುತಿರ |
ಲನಿತರೊಳು ಗಗನ ಪಥದೊಳಗಂಜನಾ ಸುತಂ |
ಘನ ಘೋಷಮಂ ಗೆಯ್ವತಿಳಿದನಸುರಾಂತಕನ ಮುಂದೆ ರೋಮಾಂಚನದೊಳು ||
ಮನದೊಳಾನಂದದಿಂದುರೆ ತಂದ ಮೊರಡಿಯಂ |
ಇನಕುಲಜನಿದಿರೊಳಿಳುಹಿದು ಭಕ್ತಿಯಿಂದ ವಂ |
ದನೆಗೆಯ್ದು ಜಯ ಜಯೆನ್ನುತ ಬಳಿಕ ಮುಕುಳಿತಕರಾಂಜಲಿಯೊಳಿಂತೆಂದನು  ||334||

ರಾಗ ಮಾರವಿ ಏಕತಾಳ

ಇಂದೀವರದಳಲೋಚನ ಸುರಮುನಿ |
ವಂದವಿನುತಚರಣ ||
ತಂದೆನು ಜೀವೌಷಧಿಯನು ನೋಡುವು |
ದೆಂದು ನಮಿಸಿ ನಿಂದ ||335||

ಏ ಸುಷೇಣ ಬಾರೆನ್ನಯ ತಮ್ಮನಿ |
ಗೌಷಧಿಯನು ರಚಿಸೈ ||
ಭೇಷಜವನು ನೀ ತಿಳಿದಿಹೆ ಎನುತಲಿ |
ದಾಶರಥಿಯು ನುಡಿದ ||336||

ಎಂದೆನಲಾಗ ಸುಷೇಣ ಮರುತ್ತಜ |
ತಂದಾ ಗಿರಿಶಿರವ |
ಚಂದದೊಳರಸಿ ಮಹೌಷಧಿಯನು ತೆಗೆ |
ದಂದು ಮಹೋತ್ಸವದಿ ||337||

ಕರದೊಳಗಾ ಮೂಲಿಕೆಯನು ಮರ್ದಿಸಿ |
ಭರವಸದಿಂದಾಗ ||
ವರ ಸೌಮಿತ್ರಿಯ ನಾಸಾಪುಟದೊಳ |
ಗೆರೆದನು ತವಕದಲಿ ||338||

ಧಾರಿಣಿಯಲಿ ಮಲಗಿದ ನೀಲಾಂಗದ |
ಸೂರ್ಯಜ ಮೊದಲಾದ ||
ವೀರ ಸುಭಟರೆಲ್ಲರಿಗೌಷಧಿಯನು |
ಬೇರೆ ಬೇರೆಗೆಯ್ದ ||339||

ಭಾಮಿನಿ

ತರುಣಿ ಕೇಳ್ ಮಿಗೆ ನಿದ್ರೆ ತಿಳಿದವ |
ರರಿದು ಮೈ ಮುರಿದೇಳುವಂದದಿ |
ಮರವೆ ಮಾಣ್ದು ಸಮಸ್ತ ಕಪಿಬಲವೆದ್ದುದಾಕ್ಷಣಕೆ ||
ಅರಿವು ತಲೆದೋರ್ದೊಡನೆ ಲಕ್ಷ್ಮಣ |
ನರರೆ ಫಡ ದಶಕಂಠ ಹಿಂದಕೆ |
ಸರಿಯದಿರು ನಿಲ್ಲೆನುತಲೆದ್ದನು ಕೊಂಡು ಧನುಶರವ ||340||

ರಾಗ ಮಧುಮಾಧವಿ ತ್ರಿವುಡೆತಾಳ

ಎದ್ದು ಲಕ್ಷ್ಮಣ ಧನುಶರಂಗಳ |
ತಿದ್ದುತಿರೆ ಸಂತೋಷ ಶರಧಿಯೊ |
ಳದ್ದಿ ತಮ್ಮನೆ ಬಾರೆನುತ್ತಲಿ |
ಮುದ್ದು ಗೆಯ್ದನು ಭರದಲಿ || ರಾಘವೇಂದ್ರ ||341||

ಎತ್ತಿ ತೊಡೆಯಲಿ ಕುಳ್ಳಿರಿಸಿ ಮಿಗೆ |
ನೆತ್ತಿಯನು ವಾಸನಿಸಿ ಸಂತಸ |
ವೆತ್ತು ಪವನಾತ್ಮಜನ ಮೊಗನೋ |
ಡುತ್ತ ಬಳಿಕಿಂತೆಂದನು || ನಮ್ರದಿಂದ ||342||

ಎಲೆ ಹನುಮ ನಿನ್ನಯ ಸಮರ್ಥದ |
ನೆಲೆಯ ಬಲ್ಲವರಾರು ತಮ್ಮನ |
ನುಳುಹಿ ಕೊಟ್ಟುಪಕಾರಿ ನೀನೈ |
ಸಲೆ ಎನುತಲಾನಂದದಿ || ಮನ್ನಿಸುತಲಿ ||343||

ಕೈದಣಿಯೆ ಬಿಗಿದಪ್ಪಿ ಹನುಮನ |
ಮೈದಡವಿ ಬಳಿಕಿನಸುತಾದ್ಯರ |
ನೈದೆ ಸುಸ್ನೇಹದಲಿ ಮನ್ನಣೆ |
ಗೆಯ್ದನಾ ರಘುವೀರನು || ಹರುಷದಿಂದ ||344||

ಸುರರು ಪೂಮಳೆಗರೆದರಭ್ರದಿ |
ಪರಮ ಸಂತಸದಿಂದಲಪ್ಸರ |
ತರುಣಿಯರು ಪಾಡುತ್ತಲೆತ್ತಿದ |
ರಿರದೆ ರತುನಾರತಿಯನು || ಸಂಭ್ರಮದೊಳು ||345||

ರಾಗ ಢವಳಾರ ತ್ರಿವುಡೆತಾಳ

ಕೊಂಕಿನ ಕೊರಳಿನ ಸವಿನೋಟದ |
ಕಿಂಕಿಣಿಕಲದುಬ್ಬಿದ ಜಘನದ |
ಪಂಕಜ ಲೋಚನದ ಕೆಳದಿಯರು ||
ಕೆಳದಿಯರೊಡಗೂಡಿ ವಿಲಾಸದಿ |
ಕುಂಕುಮದಾರತಿಯ ಬೆಳಗಿರೆ || ಶೋಭಾನೆ ||346||

ರಾಮಗೆ ರಘುವಂಶ ಸುಧಾರ್ಣವ |
ಸೋಮಗೆ ಸುರನುತ ಪದಪದ್ಮಗೆ |
ಕಾಮಿತಾರ್ಥಗಳನೊಲಿದೀವ ||
ಒಲಿದೀವಗೆ ಸದ್ಗುಣ ಧಾಮಗೆ |
ಹೇಮದಾರತಿಯ ಬೆಳಗಿರೆ || ಶೋಭಾನೆ ||347||

ವರ ಲಕ್ಷ್ಮಣ ದೇವಗೆ ಹನುಮಗೆ |
ಹರಿಭಕ್ತ ವಿಭೀಷಣ ಗಜಸುತ |
ತರಣಿಜ ಮೊದಲಾದ ಕಪಿಗಳಿಗೆ ||
ಕಪಿಗಳಿಗೆ ಪಾಡುತ ಪೊಗಳುತ |
ಕುರುಜಿನಾರತಿಯ ಬೆಳಗಿರೆ || ಶೋಭಾನೆ ||348||

ಭಾಮಿನಿ

ನಾರಿ ನೀ ಬೆಸಗೊಂಡ ಪ್ರಶ್ನೆಗೆ |
ಪೂರಣವದಾಯ್ತಿಲ್ಲಿಗಾ ರಘು |
ವೀರನತಿ ಮಂಗಳದೊಳೊಪ್ಪಿದನಧಿಕ ಹರುಷದಲಿ ||
ಬೇರೆಮನಗೊಡದಿದನು ಕೇಳ್ವರ |
ನಾ ರಘೂದ್ವಹ ನಿರತ ಪೊರೆವನು |
ಭೂರಿಕರುಣದೊಳೆಂದು ಪಾರ್ವತಿಗರುಹಿದನು ಶಿವನು ||349||

ರಾಗ ಭೈರವಿ ಝಂಪೆತಾಳ

ಇಂತು ಶಿವನೊಲಿದು ನಿಜ |
ಕಾಂತೆಗರುಹಿದ ಕಥೆಯ |
ಸಂತಸದಿ ಜನರು ತಿಳಿ | ವಂತೆ ಕನ್ನಡದಿ ||350||

ಪಾಕಾರಿಮುಖ ಸುರಾ |
ನೀಕ ಸನ್ನುತಚರಣ |
ಲೋಕನಾಥನೆ ಸಲಹೊ | ನೀ ಕಪೆಯೊಳೆನ್ನ ||351||

ವರಗೋಷ್ಠಪುರದ ಶಂ |
ಕರನ ಕರುಣಾರಸದಿ |
ಪರಮ ಮಂಗಳವೆನಿಸಿ | ವಿರಚಿಸಿದೆನಿದನು ||352||

ರಾಗ ಕಲ್ಯಾಣಿ ಏಕತಾಳ

ಮಂಗಲಂ | ಜಯ | ಮಂಗಲಂ || ಪ ||
ಸುಮನಸ ಸನ್ನುತ ಪಾತ್ರನಿಗೆ |
ಕಮಲದಳಾಂಬಕ ಮಿತ್ರನಿಗೆ ||
ಹಿಮಕರಚೂಡಗೆ ವಷಭಾರೂಢಗೆ |
ಯಮಿಜನ ಪೂಜಿತ ಚರಣನಿಗೆ || ಮಂಗಲಂ ||353||

ಶೂರ್ಪಶ್ರೋತ್ರನ ಜನಕನಿಗೆ |
ದರ್ಪಕನಾಶಗೆ ಪುರಹರಗೆ ||
ಕರ್ಪುರಗೌರಗೆ ಕಲುಷವಿದೂರಗೆ |
ಸರ್ಪಾಭರಣ ಪುರಾಂತಕಗೆ || ಮಂಗಲಂ ||354||

ತರುಣಾರುಣ ಶಶಿಭಾಸನಿಗೆ |
ಶರಣಾಗತ ಪರಿತೋಷನಿಗೆ ||
ವರಗೋಷ್ಠಾಪುರಧಾಮಗೆ ಭೀಮಗೆ |
ಪರತರ ರೂಪ ಉಮಾಧವಗೆ ||
ಮಂಗಲಂ | ಜಯ || ಮಂಗಲಂ ||355||

ಯಕ್ಷಗಾನ ಅತಿಕಾಯಕಾಳಗ ಸಂಪೂರ್ಣ