ರಾಗ ಕುರಂಜಿ ಅಷ್ಟತಾಳ
ಮೂಢನಹುದಹುದೋ | ರಾಕ್ಷಸ ಬಲು | ಮೂಢನಹುದಹುದೋ ||
ರೂಢಿಯೊಳಗೆ ಕಡು | ಹೇಡಿ ಖಳಾಧಮ                   || ಪಲ್ಲವಿ ||

ಹಲವು ನೀತಿಯನರುಹಿದರೆ | ಮದ |
ದೊಳು ಕುಣಿದಾಡಿದೆ ಭಳಿರೆ ||
ಉಳಿಯದೆಳ್ಳಿನಿತೆಡೆ ಹಲನಾಲ ವರ್ಷ ಸಂ |
ಕುಲ ಸುರಿಯಲು ಶಿಲೆಗೇ | ನೀರ್ಗೊಂಬುದೇ |
ನಿಳೆಯೊಳಾಪರಿ ನಿನಗೇ | ಪೇಳಿದುದಾಯ್ತು |
ಛಲವೇಕೆ ಬಲಹೀನಗೇ || ರಾಕ್ಷಸ ಬಲು | ಮೂಢನಹುದಹುದೋ            ||೩೦೮||

ಸದಮಲಧರ್ಮದಿರವನೂ || ತಿಳಿ |
ಯದ ಲೋಭಿಯೋಲಚ್ಯುತನನೂ ||
ಮದದಿಂದ ದೂಷಿಸಿ | ದಧಿಕ ಪೌರುಷವೇನಾ |
ಯ್ತದರ ತೋರಿಳೆಯೊಳಿನ್ನು | ಮೀಸೆಯ ಹೊತ್ತು |
ಬದುಕಿರ್ದ ಫಲಗಳೇನು | ದುರ್ಮತಿವಹಿ |
ಲದಿಸುಡುವಡಲ ನೀನು || ರಾಕ್ಷಸ ಬಲು | ಮೂಢನಹುದಹುದೋ          ||೩೦೯||

ರಾಗ ಮಾರವಿ ಅಷ್ಟತಾಳ
ಲಾಲಿಸು ರವಿಸುತ | ಬಾಲಸಂತಸದಿ ||
ಪೇಳುವನೈರೋಷ | ತಾಳದಿರ್ದಯದಿ                      || ಪಲ್ಲವಿ ||

ಬಿಡದೆ ಕಾದಾಡಿದು | ರ್ನುಡಿಯನಾಡಿದರು ಶ್ರೀ |
ಕಡಲಶಯನನು | ಧೃಡ ಮನದಿಂ ನುತಿ |
ಗೊಡುತ ಭಕ್ತಿಯೊಳಿರ್ದರು | ಸಂತತ ಜಗ |
ದೊಡೆಯನಾತನ ಪೆಸರು | ಉಚ್ಚರಿಸಿದ |
ರೊಡನೆ ಜೀವಾತ್ಮಕರೂ | ಹಲಜನ್ಮದವರು ||
ತಡೆಯದೆಸಗಿದ | ಕಡುದುರಿತವನ |
ಸುಡದಿಹುದೆ ಬಿರು | ನುಡಿಯಿದೇತಕೆ                        ||೩೧೦||

ಕಾಳಗವಹುದು ಶೌ | ರ‍್ಯಾಳುಗಳೊಳು ಭಟ |
ಜಾಲವನೆರಹಿ ಬಾ | ಣಾಳಿಯಿಂಬಿರಿಸಾಗಿ |
ಸೋಲು ಗೆಲವದೆಂಬುದೂ | ದೈವಾಧೀನ |
ಲೀಲಾ ವಿಚಿತ್ರವದೂ | ವಿಧಿಯಲಿಪಿ |
ಭಾಳದೊಳಿರ್ಪುದದೂ | ಶೃತಿಸನ್ಮತವಿದು ||
ಪೇಳಲೇನೀ | ರೇಳು ಜಗಶ್ರೀ |
ಲೋಲಮಾಯೆಗೆ | ಕೋಲುವೋಗದೇ                      ||೩೧೧||

ಧುರದಿ ವೀರಾವೇಶ | ವೆರಸಿ ಕಾದಿದೆನಿಂದು ||
ಜರೆದೆ ಶ್ರೀ ಹರಿಯನಾ | ದರು ಕೃಪಾನಿಧಿಯನ್ನು |
ಪೊರೆಯದಿಹನೆಯೆನ್ನನೂ | ಸರ್ವೇಶಗೆ ||
ಕೊರತೆಗಳಿದರಿಂದೇನು | ಸಾಕಿನ್ನದ |
ನರುಹಿಕಾರ್ಯಗಳೇನು | ಯೆಂದೆನುತ ಖಳನು ||
ಸಿರಿಯರಸನಡಿ | ಗೆರಗಿ ಪುನರಪಿ |
ಭರಿತ ಭಕ್ತಿಯೊ | ಳಿರದೆನುತಿಸಿದ                ||೩೧೨||

ಭಾಮಿನಿ
ಮಾರಪಿತಭವ ದೂರ ಕುಜನ ಕು |
ಠಾರ ಭಕ್ತೋದ್ಧಾರ ಭುವನಾ |
ಧಾರ ಕೌಸ್ತುಭಹಾರ ಪಾರಾವಾರ ಗಂಭೀರ ||
ವಾರಿಜಾಕ್ಷ ಬಲಾರಿನುತ ಕಂ |
ಸಾರಿ ನಾಟಕಧಾರಿ ತತ್ವವಿ |
ಚಾರಿ ವಿಶ್ವಶರೀರಿನೀ ದಯೆದೋರಿ ಸಲಹೆಂದ                        ||೩೧೩||

ಕಂದ
ಈ ಪರಿ ನುತಿಸುವ ಖಳನಂ |
ಶ್ರೀಪತಿ ಪಿಡಿದೆತ್ತುತಲತಿಕಾರುಣ್ಯದೊಳುಂ ||
ತಾಪವಿದೇಕೆನುತಂ ಬಳಿ |
ಕಾ ಪೂರ್ವಾಮರಗೆಂದಂ ಕಿರುನಗೆಯಿಂದಂ               ||೩೧೪||

ರಾಗ ಮಧುಮಾಧವಿ ಏಕತಾಳ
ಕೇಳಯ್ಯದಾನವಾನ್ವಯ ಶಿರೋರನ್ನ |
ತಾಳದಿರಯ್ಯ ಶೋಕವ ಬಿಡುಪೂರ್ಣ |
ಭಾಳನೇತ್ರನ ಪಾದಯುಗದಾಣೆ ನಿನ್ನ |
ಮೇಲೇನುಮನ ಮುನಿಸಿಲ್ಲ ಸಂಪನ್ನ                        ||೩೧೫||

ಹಿರಿದು ಮೆಚ್ಚಿದೆನಯ್ಯ ನಿನ್ನ ಸಾಹಸಕೆ |
ಸರಿಭಟರಿಹರೆ ನಿನ್ನೊಳು ಕೊಳುಗುಳಕೇ ||
ತರಳತನದಿ ಕರ್ಣಸುತಜರೆಂದುದನೂ |
ತರದಿರು ಮನದಿ ಮುಂದಕೆ ಭಕ್ತಿ ನೀನು                    ||೩೧೬||

ಆದರೆ ಕೇಳಿಂದು ಮೊದಲಾಗಿನೀನು ||
ಬಾಧಿಸದಮರರ ಯಮಜನೊಳಿನ್ನು ||
ಭೇದವಿಲ್ಲದೆ ನಿನ್ನಿಂದಹ ಸಹಾಯವನು |
ಸಾರದಿಂದೆಸಗೆಂದನಾ ಚಿನುಮಯನು                     ||೩೧೭||

ಕಂದ
ಧರಣಿಪಗನುಸಾಲ್ವರ್ಗಂ |
ಹರಿತಾಸಖ್ಯವಗೊಳಿಸುತ್ತಿರಲಾಮದನಂ ||
ದುರುಳರ ಹರಿಸುತ ಭರದಿಂ |
ತುರಗವ ತಂದಯ್ಯಂಗೊಪ್ಪಿಸೆ ಮುದವಾಂತಂ                       ||೩೧೮||

ವಾರ್ಧಕ
ಧರಣೀಂದ್ರ ಲಾಲಿಸೈ ಧರ್ಮಜಂ ಬಳಿಕ ಮುರ |
ಹರ ಮುಖ್ಯರೊಡನೆ ಪುರಕೈತಂದು ಸಂತಸದೊ |
ಳಿರಲು ಹರಿಯಾಜ್ಞೆಯಿಂ ಜಾಹ್ನವಿಯ ತಟದಿಸುಸ್ಥಳದೊಳಧ್ವರಶಾಲೆಯ ||
ವಿರಚಿಸಲು ಬಳಿಕಾವಸಂತಋತು ತಲೆದೋರಿ |
ತರುಗುಲ್ಮಲತೆಗಳವು ಚಿಗುರಿ ಸುಮ ಫಲವಣ್ಗ |
ಳಿರಲು ಪದುಮಗಳಜೇಂಗುಡಿದು ಮಧುಕರಮೆಸೆಯೆ ಖಗಕುಲಂ ನಲಿದಾಡಲು     ||೩೧೯||

ರಾಗ ಕಾಂಭೋಜಿ ಝಂಪೆತಾಳ
ಇಂದುಕುಲ ತಿಲಕ ಕೇ | ಳಿಂದೀವರಾಕ್ಷಯೋ |
ಗೀಂದ್ರರಭಿಮತದಿ ಧರ್ಮಜನೂ ||
ಬಂಧುಮಿತ್ರರ ಕೂಡು | ತಂದುಮಖ ಶಾಲೆಯೆಡೆ |
ಬಂದು ದೀಕ್ಷೆಯನು ಕೈಗೊಂಡ                    ||೩೨೦||

ಸುಕ್ಷೇಮಪ್ರದಕಾಗಿ | ತ್ರ್ಯಕ್ಷಸುತನಿಂಗೆರಗಿ |
ಲಕ್ಷಣದವಾಜಿಯನು ನಿಲಿಸಿ ||
ದಕ್ಷತೆಯೊಳರ್ಚಿಸುತ | ಲಕ್ಷತೆಯನಿಟ್ಟು ಮ |
ತ್ತಾಕ್ಷಣದಿ ಶೃಂಗಾರಗೈಸಿ               ||೩೨೧||

ಬಿರುದಾವಳಿಯ ಲಿಖಿತ | ಭರದಿ ಬಂಧಿಸಿ ಪಣೆಗೆ |
ನರನದರ ರಕ್ಷೆಗೆಂದೆನುತ ||
ವರುಷದೊಳುಬಹುದೆನು | ತ್ತರುಹುತಸಿಪತ್ರವ್ರತ |
ವಿರದೆ ತೊಡಗಿದನು ಧರಣಿಪನೂ                ||೩೨೨||

ನರನು ಹಯರಕ್ಷೆಗೊಂ | ಡಿರದಿಭ ಮಖಾರ್ಚನೆಯ |
ವರನವಗ್ರಹ ಪೂಜೆಗೈದು ||
ಸಿರಿವರನಿಗೆರಗಿ ಧರ್ಮಜ ಭೀಮ ಕುಂತಿ ಋಷಿ |
ವರರೊಳಾಶೀರ್ವಾದ ಪಡೆದು                     ||೩೨೩||

ವಾರ್ಧಕ
ಚೈತ್ರ ಸಿತಪೌರ್ಣಮಾಸಿಯ ದಿನದಿ ಶುಭಸುಮೂ |
ಹೂರ್ತದೊಳಗರಸಿಯರ ಸೇಸೆಯಂ ಕೈಗೊಂಡು
ಮತ್ತೆ ಪಾಠಕರ ಜಯಘೋಷ ದುಂದುಭಿ ಭೇರಿ ವಾದ್ಯಗಳ ರಭಸದಿಂದ ||
ಸತ್ವಯುತನರನು ಹರಿಯಾಜ್ಞೆಯಿಂ ಸೇನಾಧಿ |
ಪತ್ಯವಂ ಪ್ರದ್ಯುಮ್ನಗಿತ್ತು ವೃಷಕೇತು ಸಹ |
ಸಾತ್ಯಕಿಯು ಕೃತವರ್ಮನನುಸಾಲ್ವರೊಡಗೂಡಿ ಬಲವೆರಸಿ ಪೊರಮಟ್ಟನೂ         ||೩೨೪||

ರಾಗ ಪಂತುವರಾಳಿ ಮಟ್ಟೆತಾಳ
ಧರಣಿಪಾಲ ಕೇಳು ಮುದದೊಳು | ಪಾರ್ಥನಂದು |
ಪೊರಟು ಸೇನೆಯ ಭರದೊಳು ||
ಮೆರೆವತೆಂಕು ದೇಶದವನಿ | ಯರಸರಿಂದ ಕಪ್ಪಗೊಳುತ |
ಬರಲು ಮಾಹೀಷ್ಮತಿಯ ಪುರದಿ | ತುರಗ ಪೊಕ್ಕುದುಪವನವನು                        ||೩೨೫||

ಪರಿಕಿಸುತ್ತ ಶ್ವೇತವಾಹನ | ಬೀಡಿಗೆಯನಲ್ಲೆ |
ವಿರಚಿಸುತ್ತ ನಿಂದನಾಕ್ಷಣ ||
ನರನ ಪಡೆಯದೂರ್ಮಿ ಪೆರ್ಚಿ | ಮೊರೆವ ಮಹಾರ್ಣವ ತೆರದಿ ||
ಭರಿತ ಘೋಷದಿಂದಿರಲು | ಹರಿಯ ದಯದೊಳೇನನೆಂಬೆ                    ||೩೨೬||

ರಾಗ ಕಾಂಭೋಜಿ ಝಂಪೆತಾಳ
ಶಶಿಕುಲಲಾಮ  ಸಂ | ತಸದಿ ಕೇಳಾಪುರದೊ |
ಳೆಸೆವಮಲಸಿರಿಯ ವರ್ಣಿಸಲೂ ||
ದ್ವಿಸಹಸ್ರ ರಸನನಿಂ | ಗಸದಳವದಾದೊಡಿ |
ನ್ನುಸುರುವೆನು ಸಂಕ್ಷೇಪವಾಗಿ                     ||೩೨೭||

ಪುರದಹರ್ಮ್ಯಾಗ್ರಗಳೊ | ಳಿರುವ ಚಪಲಾಕ್ಷಿಯರು |
ಸರಸವಾಡುತಲಿ ನಸುನಗಲೂ ||
ವರದಂತ ಕಾಂತಿ ಮತ್ತಿರದೆ ಪರ್ಬಿದುದೆಂಬ
ತೆರದಿ ರಂಜಿಪುದು ಪ್ರಾಕಾರ                       ||೩೨೮||

ನಗರವಧು ಧರೆಯವಿಟ | ರುಗಳ ಚಿತ್ತವಸೂರೆ |
ದೆಗೆಯಲೆಂದೆನುತ ಶೃಂಗರಿಸಿ ||
ಮಿಗೆಶರದಿ ಮುಡಿದ ಸಂ | ಪಿಗೆಯ ಮುಕುಳಂಗಳೆನೆ |
ಸೊಗಯಿಪವುರನ್ನ ಕಲಶಗಳು                    ||೩೨೯||

ಧರೆಯಜನರೆನ್ನ ಸುಂ | ದರಕೆ ಸರಿಯಿಲ್ಲೆನುತ |
ಪುರವನಿತೆ ಸುರಪುರದ ವಿಟರ ||
ಕರೆದಪಳೊಯೆಂಬಂತೆ ಮೆರೆದಿಹುದು ಡೆಂಕಣಿಯ |
ಕರಗಳಚ್ಚರಿಯ ಕರಮಾಗಿ             ||೩೩೦||

ಕುಂದಾದುದಿಂಗಡಲಿ | ಗೊಂದು ಜಡಧಿಯೆನುತ್ತ |
ಲಿಂದಿರೆಯು ಪಾಲ್ಗಡಲ ಬಿಟ್ಟು ||
ಚಂದದಿಂದಾಪುರದಿ | ಬಂದು ನೆಲಸಿಹಳೊಯೆಂ
ಬಂದಂದಿಂ ಸಿರಿಯು ಪೆರ್ಚಿಹುದು                ||೩೩೧||

ಭಾಮಿನಿ
ವಸುಧೆ ಪತಿ ಕೇಳಬ್ಜ ಭವನಿ |
ರ್ಮಿಸಿದ ಸೃಷ್ಟಿಗೆ ಶಿರವಿದೆನಲೀ |
ಕ್ಷಿಸುವ ರಕ್ಷಿಗೆ ನಿರುತವತ್ಯಾಶ್ಚರ್ಯತರಮಾಗಿ ||
ಮಿಸುನಿಭಿತ್ತಿಗಳಿಂದ ಮಿಗೆ ಶೋ |
ಭಿಸುವ ನಗರದ ಸಿರಿಯ ಕಾಣುತ |
ಬಿಸಜಸಖನ ಕುಮಾರ ಸುತಗಿಂತೆಂದ ಫಲುಗುಣನು               ||೩೩೨||

ರಾಗ ಕೇದಾರಗೌಳ ಅಷ್ಟತಾಳ
ಕಂದ ಕೇಳತಿ ಸೊಗ | ಸಿಂದ ಮೆರೆವ ಪುರ | ದಂದದಿವಿಗೆ ಮಿಗಿಲು ||
ಇಂದಿದ ಪೊರೆವ ವ | ಸುಂಧರಾಧಿಪ ಶೌರ‍್ಯ | ದಿಂದ ಕೂಡಿಹನೆ ಪೇಳು   ||೩೩೩||

ಕಟ್ಟದಿಹನೆ ನಮ್ಮ | ಶ್ರೇಷ್ಟ ಹಯವನತಿ | ದಿಟ್ಟತೆಯಿಂದ ತಾನು ||
ಕೊಟ್ಟ ಕಾಳಗವೆಮ್ಮೊ | ಳೆಷ್ಟು ಕಾದುವನೊ ತ | ನ್ನೊಟ್ಟಿನ ಸೇನೆಗೂಡಿ    ||೩೩೪||

ಎಂತಾದಡೇನೆಮ್ಮ | ಸಂತತ ಸಲಹುವ | ಕಂತುಜನಕನೆನುತ ||
ಮುಂತೆಸೆಯುವ ಸೇನಾ | ತಿಂಥಿಣಿ ಸಹಿತಿರ್ದ | ಸಂತಸದಿಂ ಪಾರ್ಥನು  ||೩೩೫||

ವಾರ್ಧಕ
ಚಿತ್ತವಿಪುದೆಲೆ ಮಹೀಪಾಲ ಮಾಹೀಷ್ಮತಿಯ |
ಪತ್ತನವ ಮುದದೊಳಾಳುತ್ತ ನೀಲಧ್ವಜಂ |
ಪತ್ನಿಯಾಗಿಹ ಜ್ವಾಲೆಸುತ ಪ್ರವೀರಂ ಸಹಿತ ಸಕಲ ಸೌಭಾಗ್ಯದಿಂದ ||
ಪುತ್ರಿ ಸ್ವಾಹಾದೇವಿಯಂ ಬಳಿಕಲಾವೀತಿ |
ಹೋತ್ರಗೊಲಿದಿತ್ತಾತನಂ ಮನೆಯಳಿಯನೆನಿಸಿ |
ಮತ್ತೆ ತಾನಾತನ ಸಹಾಯದಿಂದಾರನುಂ ಬಗೆಗೊಳದೆ ಮೆರೆದಿರ್ದನೂ   ||೩೩೬||

ರಾಗ ಮಧುಮಾಧವಿ ತ್ರಿವುಡೆತಾಳ
ಪೃಥ್ವಿಪಾಲಕ ನೀ ಪರಿಯೊಳಿರೆ | ಪುತ್ರನಾದ ಪ್ರವೀರನೂ |
ಪತ್ನಿ ಸ್ಮರ ಮಂಜರಿಯೊಡನೆ ಸಖೀ |
ಮೊತ್ತದಿಂದುದ್ಯಾನಕೇ || ಬಂದನಾಗ                       ||೩೩೭||

ಬರುತ ದಿವ್ಯಾಂಬರಗಳನುತೆಗೆ | ದಿರಿಸಿಕೊಳನೊಳಗಿಳಿಯುತ ||
ವಿರಚಿಸುತಜಲ ಕೇಳಿಯನು ನೃಪ |
ತರಳನಿರ್ದನು ಗುಣಯುತ || ಸರಸದಿಂದ                ||೩೩೮||

ರಾಜಿಸುವಗೆಳತಿಯರು ಸಹ ಯುವ | ರಾಜನರಸಿಯು ಮುದದಲಿ ||
ರಾಜಿಸುವ ಪೂದೋಟದಲಿ ಸುಮ |
ರಾಜಿಯನು ಕೊಯ್ಯುತ್ತಲಿ || ನೋಡಿಹಯವ              ||೩೩೯||

ಭಾಮಿನಿ
ರಂಜಿಸುವ ತುರಗವನು ಮನ್ಮಥ |
ಮಂಜರಿಯು ಕಾಣುತ್ತ ಮನದೊಳ |
ಗಂಜದತಿ ಧೈರ್ಯದಲಿ ಸಖಿಯರ ಕೂಡುತಾಕ್ಷಣದಿ ||
ತಾಂ ಜವದಿ ಪಿಡಿದದರ ಪಣೆಯೊಳ್ |
ಮಂಜುಳಾಕ್ಷರವೆಸೆವ ಲಿಖಿತವ |
ಕಂಜಲೋಚನೆ ತೆಗೆದು ತಾನೋದಿದಳು ಸಂಭ್ರಮದಿ               ||೩೪೦||

ರಾಗ ಕಾಂಭೋಜಿ ಝಂಪೆತಾಳ
ಶ್ರೀಮತ್ಸುಧಾಂಶುಕುಲ | ಭೂಮೀಶರೆಂಬರ ಶಿ |
ಖಾಮಣಿ ಯುಧಿಷ್ಟಿರ ನೃಪಾಲ ||
ಪ್ರೇಮದಿಂದಶ್ವಮೇ | ಧ ಮಹಾಧ್ವರವಗೈವ |
ಶ್ರೀ ಮನೋಹರನ ನಿಜಭಕ್ತ                        ||೩೪೧||

ಧರೆಯ ಭೂಪರ ಗೆಲಿದು | ಕರವಗೊಳಲಾಗಿ ಶ್ರೀ |
ಹರಿಯನುಜ್ಞೆಯೊಳಗಶ್ವವನೂ ||
ತ್ವರಿತದಿಂ ಬಿಟ್ಟಿಹುದು ಕಟ್ಟಿಕಾದುವುದು ಸಂ |
ಗರವೀರರಾದಡಿದ ಭರದಿ               ||೩೪೨||

ಹರಿಯರಕ್ಷೆಗೆಪಾರ್ಥ | ನಿರುವನವನೊಳು ಕಾದ |
ಲರಿಯದವನಿಪರು ಶರಣಾಗಿ ||
ತೆರುತ ಕಪ್ಪವನುತಾ | ವಿರುವದೊಟ್ಟಿನೊಳೆಂದು |
ಬರೆದಿಹುದ ತಿಳಿದು ಚಪಲಾಕ್ಷಿ                     ||೩೪೩||

ಕಂದ
ನಸುನಗುತತಿಜವದಿಂ ಬಂ |
ದುಸುರಲ್ಕೀಹದನವನರಿತಾಗ ಪ್ರವೀರಂ ||
ಅಮಮ ಬಲಾನ್ವಿತ ತಾಝೇಂ |
ಕಿಸುತೆದ್ದಿಂತೆಂದಂ ಸತಿಯೋಳ್ಪೌರುಷಮಂ               ||೩೪೪||

ರಾಗ ಭೈರವಿ ಅಷ್ಟತಾಳ
ಭಳಿರೆ ಧರ್ಮಾತ್ಮಜಾತ | ತನ್ನಲಿಹರಿ |
ಯೊಲುಮೆ ಹೆಚ್ಚಿದುದೆನುತ ||
ಬಲುಗರ್ವದಿಂ ತನ್ನ | ಗ್ಗಳಿಕೆಯ ಬರೆದಿಹ |
ತಿಳಿಯದೆ ಮೂಢಾತ್ಮನು               ||೩೪೫||

ಮುನಿಸಿದರೆ ತ್ರಿಭುವನವ | ಲೆಕ್ಕಿಸದೊಂದು |
ಕ್ಷಣದಿಭಸ್ಮವನುಗೈವ ||
ಘನಪರಾಕ್ರಮಿ ವಹ್ನಿ | ಜನಕಗೆ ಜಾಮಾತ |
ನೆನಿಸಿರೆ ಬರೆವುದುಂಟೆ                  ||೩೪೬||

ಜನಿಸಿಕ್ಷತ್ರಿಯಕುಲದಿ | ಮೇಣೀವಾಜಿ ||
ಯನು ಕಟ್ಟದಿರೆಜಗದಿ ||
ತನುವಿರ್ದುಫಲವೇನು | ರಣಕಂಜಿ ಕಪ್ಪವ |
ನನಿತನು ಕೊಡುವುದುಂಟೆ             ||೩೪೭||

ಹರಿಹರರೊಳು ಧುರದಿ | ಕಾದಿದ ಪಾರ್ಥ |
ನುರುವಿಕ್ರಮವ ಯುದ್ಧದಿ ||
ಪರಿಕಿಸಿದಪೆನೆಂದು | ಪುರಕಟ್ಟಿದನು ಸತಿ |
ಯರ ಸಹಿತಶ್ವವನೂ                    ||೩೪೮||

ಭಾಮಿನಿ
ಧುರಪರಾಕ್ರಮಿಯಹ ಪ್ರವೀರನು |
ತುರಗವನು ತಾನಟ್ಟುತಲಿ ಧನು |
ಶರಗಳನು ಕೈಗೊಂಡು ರಣಕುದ್ಯುಕ್ತನಾಗಿರಲು ||
ಅರಸ ಕೇಳೀಚೆಯೊಳು ಹರಿವಿ |
ಷ್ಟರದಿ ಕುಳಿತಿಹ ನೀಲಕೇತನ |
ಚರಣಕಾನತರಾಗಿ ಬಿನ್ನೈಸಿದರು ನಾರಿಯರೂ                        ||೩೪೯||

ರಾಗ ಮಾರವಿ ಅಷ್ಟತಾಳ
ಧರಣೀಶ ಕೇಳೆಮ್ಮ ನುಡಿಯಾ | ತವ | ತರಳನಿಂದಾತನರಸಿಯಾ ||
ಬೆರೆದುದ್ಯಾನದೊಳಲ್ಲಿ | ಶರಕೇಳಿಯನುಗೈದು |
ಸರಸದಿ ಸುಮವಗೊ | ದಿರಲು ಬಂತೊಂದಶ್ವ                        ||೩೫೦||

ಮದನಮಂಜರಿ ಪರಿಕಿಸುತ | ನಲ್ಲ | ಗದನೀಯೆ ಲಿಖಿತ ವಾಚಿಸುತ |
ಕದನ ಸಿದ್ಧತೆಯಿಂದ | ಕುದುರೆಯಟ್ಟಿದನಿಲ್ಲಿ |
ಹದನವಿದಿನಿತು ನೀ | ನೊದಗಿ ಪೋಗೈ ಜೀಯಾ                    ||೩೫೧||

ಕಂದ
ದೂತಿಯರೆಂದುದನಾಲಿಸಿ |
ಭೂತಳದಧಿಪಂ ಭರದಿಂ ತಾ ಗರ್ಜಿಸುತಂ ||
ಖಾತಿಯ ತಾಳುತ ಮಂತ್ರಿಯೊ |
ಳೀತೆರನೆಂದಂ ಗದ್ದುಗೆಯಂ ಹೊಯ್ಯುತ್ತಂ                 ||೩೫೨||

ರಾಗ ಭೈರವಿ ಏಕತಾಳ
ಮಂತ್ರೀಶನೆ ಕೇಳಿತ್ತ | ಭೂ | ಕಾಂತನೆನಿಪ ಯಮಪುತ್ರ ||
ಎಂತೀ ಪತ್ರವ ಬರೆದ | ತ | ನ್ನಂತರವರಿಯದೆ ಬಿರಿದ              ||೩೫೩||

ಧರೆಯಧಿಪರ ಕುಲತಿಲಕ | ಶ್ರೀ | ವರನಾಥನ ನಿಜ ಭಕ್ತ ||
ಬಿರುದಾಂತಿಹೆ ತಾನೆಂಬ | ಅತಿ | ಗರುವದ ನುಡಿಕಾಂಬ                      ||೩೫೪||

ಪೃಥ್ವೀಶರು ಮತ್ತಿರರೇ | ಪುರು | ಷೋತ್ತಮನನು ಧ್ಯಾನಿಸರೇ ||
ಕ್ಷತ್ರಿಯ ಕುಲದೊಳು ಜನಿಸಿ | ಕರ | ತೆತ್ತು ಬಾಳುವುದೆ ಸಹಿಸಿ               ||೩೫೫||

ದುರಿತ ಹರನು ತಾನೆನಿಸಿ | ಶ್ರೀ | ವರನಿರಲೀಪರಿ ಬರೆಸಿ ||
ತುರಗವ ಬಿಟ್ಟಿಹರಲ್ಲ | ಸಂ | ಗರವನು ಕೈಕೊಂಬರಲಾ                        ||೩೫೬||

ಪರಿಕಿಪೆ ನರನಾಳ್ತನವ | ಹರಿ | ಹರರೊಳು ತೋರ್ದು ವಿಕ್ರಮವ ||
ಧುರಕಣದೊಳು ಕೇಳಿನ್ನು | ನೀ | ತ್ವರಿತದಿ ಹೊಸುಭೇರಿಯನು              ||೩೫೭||

ವಾರ್ಧಕ
ತರಿಸಿ ಮಖಹಯವನದ ಬಂಧಿಸುತ ಲಾಯದೋಳ್ |
ಭರದಿ ಸೇನಾವೃಂದಮಂ ಕೂಡಿ ಧನುಶರವ |
ಧರಿಸಿ ಮಣಿ ರಥವೇರಿ ನಡೆತಂದನತಿ ವಹಿಲದಿಂ ನೀಲಕೇತನಂದೂ ||
ಧರಣಿಪತಿ ಬರುತಿರಲ್ಕತ್ತಹಯ ಕಾಹಿನವ |
ರಿರದೆ ಬಂದರ್ಜುನಗೆ ಕರವ ಮುಗಿದಾಕ್ಷಣದಿ |
ಭರಿತ ಕಂಪನದಿಂದ ಪೇಳಿದರು ವಿಸ್ತಾರಮಾಗಿ ಪರಿಗಳನೆಲ್ಲವ              ||೩೫೮||

ರಾಗ ಮುಖಾರಿ ಏಕತಾಳ
ಪುರುಹೂತ ತನಯಲಾಲಿಸಯ್ಯ | ನಾವೆಂಬ ಪರಿಯ |
ಧುರಕನುವಾಗು ಬೇಗ ಜೀಯ ||
ತುರಗದೊಡನೆನಾ | ವಿರಲಾಯೆಡೆ ಬಹು |
ತರುಣಿಯರೆರಕದಿ | ಬರೆನೃಪ ಕುವರಾ                     ||೩೫೯||

ತ್ವರಿತದಿ ಹಯವ ಪರಿಕಿಸಿದನೂ | ಬಂಧಿಸಿ ಲಿಖಿತ |
ವರಿತು ರೋಷವಗೊಂಡು ತಾನೂ |
ಭರದಿಂದದ ನಿಜ | ತರಳೆಯರನು ಸಹ |
ಪುರಕಟ್ಟುತ ಸಂ | ಗರಕನುವಾಗಿಹ              ||೩೬೦||

ಕಂದ
ಈ ತೆರನೆಂದುದನಾ ಪುರು |
ಹೂತಸುತಂ ತಾನಾಲಿಸುತತಿ ತವಕದೊಳಂ |
ಖ್ಯಾತಮದನ ಸಾತ್ಯಕಿ ವೃಷ |
ಕೇತಸುವೇಗಾನುಸಾಲ್ವರಂಕರೆದೆಂದಂ |                   ||೩೬೧||

ರಾಗ ಶಂಕರಾಭರಣ ಮಟ್ಟೆತಾಳ
ವೀರಕರ್ಣಜಾನುಸಾಲ್ವ | ಮಾರ ಮುಖ್ಯರುಗಳು ಕೇಳಿ |
ಶೂರತನವದೋರ್ವ ಸಮಯ | ಸಾರಿಬಂದಿದೇ ||
ಧಾರಿಣೀಶನೀತನಮ್ಮ | ವಾರುಹವನು ಕಟ್ಟಿರಣಕೆ |
ಮೀರಿ ಬಂದನಂತೆ ಗರ್ವ | ವೇರಿನಮ್ಮೊಳು               ||೩೬೨||

ಕೊಳುಗುಳದೊಳವನ ಸತ್ವ | ವಿಳಿಸಿ ಹರಿಯ ತಹುದೆನುತ್ತ |
ತಿಳುಹೆ ನರನ ನುಡಿಯನರಿದು | ಚಳಕದಿಂದಲಿ ||
ಹೊಳೆವ ಕಣೆಯಗೊಂಡು ಬಿಲ್ಲ | ನೆಳೆದು ವೈರಿನಿವಹ ಮಧ್ಯೆ |
ಸುಳಿಯೆ ಕಾಣುತಾ ಪ್ರವೀರ | ಮುಳಿಯಲೆಂದನೂ                   ||೩೬೩||

ರಾಗ ಭೈರವಿ ಅಷ್ಟತಾಳ
ಫಡಫಡರಿಪು ಭಟನೇ | ನಮ್ಮಶ್ವವ | ಬಿಡು ಕೆಡದಿರು ಸುಮ್ಮನೇ ||
ತಡವೇಕೆ ನಿನ್ನನು | ಪಡೆದವನಾರೆಂದು | ನುಡಿವುದೆಂದನು ಸ್ಮರನೂ      ||೩೬೪||

ಮೂಢನೀ ಲಾಲಿಸಿತ್ತ | ಮಾಹೀಷ್ಮತಿ | ರೂಢಿಯಧಿಪನೈತಾತ |
ಗಾಢ ವಿಕ್ರಮಿಯಹ | ನೋಡು ನೀಲಧ್ವಜ | ನಾಡಲೇಂಬಿಡೆ ಹಯವ        ||೩೬೫||

ಯೆಲವೊ ನೃಪಾಲ ಸೂನು | ನೀನೆಮ್ಮಯ | ನೆಲೆಯರಿಯದೆ ಬಂದಿನ್ನು ||
ಕಲಹದಿ  ನಿನ್ನಯ | ತಲೆಯಗೊಡುವೆ ಯಾಕೆ | ಛಲ ಬೇಡ ಸಾರಿದೆನೂ   ||೩೬೬||

ಕದಳಿಯ ಮುರಿದೆನೆಂದೂ | ಗರ್ವದಿ ಕರಿ | ಯಧಟಹರಿಯೊಳು ತೋರ್ದು ||
ಬದುಕಿ ಪೋಪುದೆ ನಿನ್ನ | ಸದೆದು ಶಾಕಿನಿಗೀವೆ | ರುಧಿರವನೆನುತೆಚ್ಚನು  ||೩೬೭||