ಕಂದ
ಮುರಹರನಾಡಿದ ನುಡಿಯಂ |
ಮರುತಜಕುವರಂ ಲಾಲಿಸುತಲಿ ಚಿತ್ತದೊಳುಂ |
ದೊರಕಿದುದಾಹವವೆನಗೀ |
ಹರಿಕರುಣದೊಳೆನುತುಬ್ಬೇರುತಲಿಂತೆಂದಂ               ||೨೫೩||

ರಾಗ ಮಾರವಿ ಏಕತಾಳ
ಬಿಡುಮನದೆಣಿಕೆಯ | ಜಡರುಹ ಲೋಚನ | ಕೆಡುಕನವನ ಶಿರವ ||
ಕಡಿದೀಕ್ಷಣ ಯಮ | ಬಿಡದಿಗೆ ಕಳುಹಿಸಿ | ಬಿಡಿಸಿ ತಹೆನು ಹಯವ           ||೨೫೪||

ದುರುಳನವನು ನ | ಮ್ಮಿರವರಿಯದೆ ಸಂ | ಗರ ತೊಡಗಿದನಹನು ||
ಶರಜಜಭವ ನಿ | ರ್ಜರಪಾಲಾದ್ಯರ | ಮರೆಹೊಕ್ಕರುಬಿಡೆನು                  ||೨೫೫||

ಎನುತನಿಲಾತ್ಮಜ | ಕನಲುತ ಕಾಳಗ | ಕನುವಾಗುತಲಂದೂ ||
ದಿನಪಾತ್ಮಜಸುತ | ವಿನಯದಿ ಮಾರುತ | ತನಯನೊಳಿಂತೆಂದ                       ||೨೫೬||

ರಾಗ ಕೇತಾರಗೌಳ ಅಷ್ಟತಾಳ
ಜನಪಕೇಳ್ಪೊಸತು ಮೇದಿನಿಗಿದು ಬಾಲರು ||
ಮನವಿಟ್ಟ ಫಲಕಾಶಯ ||
ಎಣಿಪರೆ ಪಿತರು ಮ | ತ್ತೆನಗೆ ಮೀಸಲ ಮಾಡಿ |
ದನುವರಕೈದುವದೂ                    ||೨೫೭||

ಯೆನಲೆಂದ ತರಳಕೇ | ಳಣುಗಗೆ ಫಲವನು |
ಜನಕತಾ ಸವಿಸದೆಡೇ ||
ತನಯ ತಾನೇ ಭುಂಜಿ | ಪನೆ ಧುರದಂದವ |
ನಿನಗೆ ತೋರಲು ಬಂದೆನು                        ||೨೫೮||

ಕಿರುನಗೆ ಸೂಸಿ ಸಂ | ಗರಕೆ ಕಾರ್ಮುಕವನು |
ಧರಿಸಿ ವೃಷಧ್ವಜನೂ ||
ಮರುತಜಗೆರಗಿ ಮುಂ | ದ್ವರಿಸಿ ತಾಗಿದ ನಿಶಿ |
ಚರನ ಬಲವನಾತನು                   ||೨೫೯||

ವಾರ್ಧಕ
ತರಣಿಮೊಮ್ಮನು ಬಳಿಕರಿಪು ನಿವಹಮಂ ಪೊಕ್ಕು |
ಹರಿಸಿ ಮಾರ್ಗಣ ಗಣವಖಿಳ ಬಲವ ಸವರುತಿರ |
ಲುರಿಯುಗುಳುತನುಸಾಲ್ವ ದೂರದಿಂ ಪರಿಕಿಸುತಲೀತ ಝಷಕೇತನಲ್ಲ ||
ಮೆರೆವ ವೃಷಭಾಂಕಿತ ಧ್ವಜದೊಳಿಹನಾರಿವನ |
ನರಿಯದಿಹೆ ಗೋಪಾಲನಲ್ಲೆನುತ ಶರಗಳಂ |
ಸುರಿಸಿದಂ ಕರ್ಣಸಂಭವನ ಮೇಲತಿ ವಹಿಲದಿಂದ ಮತ್ತಿಂತೆಂದನೂ       ||೨೬೦||

ರಾಗ ಭೈರವಿ ಅಷ್ಟತಾಳ
ಭಳಿರೆ ಬಾಲಕನೆ ಕೇಳು | ನೀನಾರೆಂದು |
ತಿಳಿಯೆನೆನ್ನೊಡನೆ ಪೇಳು ||
ಬಲುಬಾಹುಬಲರವೋ | ಲೆಳಸಿದೆ ಕದನವಿ |
ದೊಳಿತಲ್ಲವೈ ನಿನಗೆ                     ||೨೬೧||

ಧರೆಯವ್ಯಾಪಿಪ ತಮವ | ಹರಿಪ ದಿನ |
ಕರಸುತನಾತ್ಮಭವ ||
ಅರಿಭಟರಸುವೆಂಬ | ಗರಳವನೀಂಟುವ |
ವರವೃಷಧ್ವಜನಹೆನೂ                    ||೨೬೨||

ತರಳ ಕೇಳಾದಡಿನ್ನು | ಸಾಲ್ವನ ಸಹೋ |
ದರನನುಸಾಲ್ವ ತಾನು ||
ಭರದಿ ನೀ ಕೆಲಸಾರು | ಧುರದೊಳಣ್ಣನ ಕೊಂದ |
ದುರುಳ ಗೋವಳನ ತೋರು                      ||೨೬೩||

ಹರಿವೈರಿಯನುಜ ಕೇಳು | ಗಣ್ಯವೆ ನರ |
ಹರಿಗೆ ನೀ ಮರುಳೆ ಪೇಳು ||
ಹರಿಗಿಭವೀಡೆ ಶ್ರೀ | ಹರಿ ಹಗೆ ಬೇಡೆಮ್ಮ |
ಹರಿಯ ನೀಡುವುದು ಲೇಸು                        ||೨೬೪||

ಪೂತುರೆ ತರಳ ನೀನು | ಬಾಯೊಳು ಬಲ್ಲಿ |
ದಾತನಾಗಿಹೆ ಸಾಕಿನ್ನು ||
ನೂತನವಹ ಶರ | ವ್ರಾತದ ಮುಖದಿ ನಿ |
ಮ್ಮಾತುರವನು ಬಿಡುವೆ                 ||೨೬೫||

ಭಾಮಿನಿ
ದುರುಳನಿಂತೆನುತಧಿಕ ರೋಷದಿ |
ಭರದಿ ದಿವ್ಯಾಸ್ತ್ರದಲಿ ಕರ್ಣಜ |
ನುರವನಿರಿಯಲು ತಾಪದಿಂ ಮೈಮರೆಯುತಾಕ್ಷಣದೀ ||
ವರ ಗದಾದಂಡವನು ತಿರುಹುತ |
ಉರಿಮಸಗಿ ನಯನಂಗಳಲಿ ಸಂ |
ಗರ ಭಯಂಕರ ಭೀಮ ನಿದಿರಾಗುತ್ತಲಿಂತೆಂದ                        ||೨೬೬||

ರಾಗ ಭೈರವಿ ಏಕತಾಳ
ಖಳಕುಲದಧಮನೆ ಕೇಳು | ತವ |
ತಲೆಯ ತರಿದು ಸಮರದೊಳು ||
ಸುಲಭದಿ ತೋರುವೆ ನಿನಗೇ | ಯಮ |
ನಿಳಯವ ನೋಡೀ ಗಳಿಗೇ                        ||೨೬೭||

ನರಗುರಿ ಕೇಳ್ಪಂಚಶರ | ದಿನ |
ಕರನಂದನಾತ್ಮಜರ ||
ತೆರನೀಕ್ಷಿಸುತೆನ್ನೊಡನೇ | ನೀ |
ಧುರಗೊಡುವುದು ದುರ್ಬಲನೇ                    ||೨೬೮||

ಹುಲುದಾನವ ಕೇಳಿನ್ನು | ಕಡು |
ಗಲಿ ಕರ್ಣಜ ಮಾರರನೂ ||
ಗೆಲಿದಿಹ ಗರ್ವದ ಗಿರಿಯ | ಪುಡಿ |
ಗಳೆವೆನು ತೋರಾ ಪರಿಯ                        ||೨೬೯||

ಎಲೆಮರುತಾತ್ಮಜ ನೀನು | ಬಾ |
ಯೊಳು ಶೌರ್ಯವ ನುಡಿದೇನು ||
ಫಲವಿಹುದೇ ತವ ಬಲುಹ | ದೋ |
ರಳವಿಯೊಳೀಕ್ಷಿಪೆ ಕಡುಹ              ||೨೭೦||

ಬೆಡಗಿನ ಮಾತಂತಿರಲಿ | ನೀ |
ಬಿಡುತುರಗವ ಲೇಸಿನಲಿ |
ನುಡಿವೆನು ಸಾಮದೊಳೊಡನೆ | ಫಲ |
ವಿಡಿದಳಿಯದಿರೆನ್ನೊಡನೆ                ||೨೭೧||

ಸೊಕ್ಕಿನ ನುಡಿಯಾಡದಿರು | ರಣ |
ದಕ್ಕರವಿರ್ದಡೆ ಹೋರು ||
ಠಕ್ಕಿಗೆ ತುರಗವ ಬಿಡೆನೊ | ಎನು
ತುಕ್ಕುವರೋಷದಿ ಖಳನು              ||೨೭೨||

ಭಾಮಿನಿ
ಮರುತಜನ ಸರ್ವಾಂಗವನು ಶರ |
ವರುಷದಲಿ ತೋಯಿಸೆ ವೃಕೋದರ |
ನೊರಗೆ ಕುಂಜರ ಪಡೆಯೊಳೆಸೆವ ಮೃಗೇಂದ್ರನಂದದಲಿ ||
ದುರುಳನಿರೆ ಕಂಡಸುರಹರ ಬಿ |
ಲ್ದಿರುವನೊದರಿಸಿ ಸಮರಕೈತರೆ |
ಭರದೊಳನುಸಾಲ್ವೇಶ ತಡೆದಿಂತೆಂದ ಗರ್ಜಿಸುತ                   ||೨೭೩||

ರಾಗ ಸೌರಾಷ್ಟ್ರ ತ್ರಿವುಡೆತಾಳ
ನಿಲ್ಲೆಲವೊ ಗೋವಳನೆ ಪೋಗುವೆ | ಯೆಲ್ಲಿ ಸಿಕ್ಕಿದೆ ನಿನ್ನೊಡಲ ಬಗೆ |
ದಿಲ್ಲಿ ಶಾಕಿನಿ ಬಳಗಕುಣಿಸುವೆ | ಬಲ್ಲೆಯೇನೈ              ||೨೭೪||

ಬಲ್ಲೆನೈ ನಿನ್ನಣ್ಣ ಪೂರ್ವದಿ | ಬಲ್ಲಿದನು ತಾನೆಂದು ಕೊಳುಗುಳ |
ದಲ್ಲಿ ಮಡಿದಿಹನೆನ್ನೊಳದ ತಿಳಿ | ದಿಲ್ಲಿ ಸೆಣಸೂ                       ||೨೭೫||

ಅಗ್ರಜನ ತರಿದಧಮ ನಿನ್ನನು | ನಿಗ್ರಹಿಸದಿರೆನೆಲವೊ ಕೇಳಿ |
ನ್ನುಗ್ರನೊಲುಮೆಯೊಳಿಂದು ಸಮರದಿ || ಶೀಘ್ರದಿಂದ               ||೨೭೬||

ದುರುಳ ಕೇಳ್ನಿನ್ನಂತ ಹಲಬರು | ಗರುವದಿಂ ಬಂದೆನ್ನೊಳಳಿದಿಹ |
ಪರಿಯನರಿಯೆಯ ಬರಿಯ ಪೌರುಷ | ಮರೆಸಲಹುದೇ             ||೨೭೭||

ದಿತಿಜನನಿಬರ ತರಿದಿರುವ ಹಂ | ಕೃತಿಯದೆನ್ನೊಳು ಸಲ್ಲದೈ ನಿಲು |
ಹತಿಯ ಸಹಿಸುವುದೆನುತ ಬಿಡೆ ಶರ | ತತಿಯನಂದು               ||೨೭೮||

ಭಾಮಿನಿ
ದನುಜನಿಂತತ್ಯಧಿಕ ರೋಷದಿ |
ಧನುವಿನಿಂದುಗುಳಿಸಿದ ಕೂರ್ಗಣೆ |
ಗಣವು ಮತ್ತಾವರ ಮುಕುಂದನ ಹಯವಸಹ ಮುಸುಕೇ ||
ಘನಶರಾಸ್ತ್ರದ ಹತಿಗೆ ಹಾಯ್ದುವು |
ರಣವನುಳಿದೊಂದೆಸೆಗೆ ಸೂತನ |
ಗಣಿಸದಚ್ಯುತನಿರವ ಕಾಣದೆ ಮರುಗಿ ಖಳನುಡಿದ                   ||೨೭೯||

ರಾಗ ಕಾಂಭೋಜಿ ಝಂಪೆತಾಳ
ಏನಿದಚ್ಚರಿ ಕಲಹ | ಕಾನುವಡೆ ಬಂದರಿಪು |
ತಾನೆತ್ತ ಸರಿದನಕಟಕಟಾ |
ಈ ನಿಧಾನವನೊಂದ | ನಾನರಿಯೆ ಬರಿದಾದು |
ದೇನೆಂಬೆ ಸಾಧಿಸಿದಡಿನಿತು                        ||೨೮೦||

ತನ್ನವನಿಯ ವಿಚಾರ | ದಿಂ ನಡೆವುದೋ ಅದರಿ |
ನಿಂ ನಡೆದಪರೊ ನೀತಿ ತೊರೆದು ||
ಕನ್ನೆಯರು ಪರಪುರುಷ | ರನ್ನು ಕೂಡುವರೋ ಯೆನ |
ಗಿನ್ನಾವ ಕಲುಷವೆಂದರಿಯೇ                       ||೨೮೧||

ಹರನ ಸೇರಿದರು ನಾ | ತರಿವೆ ಹಗೆಯನೆನುತ್ತ |
ಗರುವತನವಾಡಿದುದಕೆನಗೇ ||
ಹರಿ ಭೂಪಮುನಿದನೋ | ಹರಿಯೆನಗೆ ಕಾಣದಿಹ |
ತೆರನಾವುದೆನುತ್ತ ಚಿಂತಿಸಿದ                      ||೨೮೨||

ಭಾಮಿನಿ
ಕ್ಷಿತಿಪ ಕೇಳಾಸಮಯದಲಿ ಮುರ |
ಮಥನ ಹಯಗಳನುಪಚರಿಸಿ ಕಡು |
ಖತಿಯನಾಂತತಿ ಭರದೊಳೈತಂದಸುರಗಿದಿರಾಗಿ ||
ಪ್ರತಿರಹಿತ ಮುಸುಕಿದ ಮಹಾಶರ |
ತತಿಯೊಳದ ತರಿದಿಕ್ಕಿದಾನವ |
ನತಿಶಯದ ರೋಷದಲಿ ಕಂಸಾರಿಯನು ಜರೆದೆಂದ                 ||೨೮೩||

ರಾಗ ಭೈರವಿ ಅಷ್ಟತಾಳ
ಭಳಿರೆ ಗೋವಳ ನಿನಗೇ | ಮೆಚ್ಚಿದೆನೆನ್ನೊ | ಳಳವಿಗೈತಂದು ಹೀಗೆ ||
ಬಲು ಹೇಡಿಗಳ ಪರಿ | ಯಲಿವೋಡಿ ಫಲವೇನು | ಕಲಹದಿ ಬಲುಹ ತೋರು          ||೨೮೪||

ಅಸುರಾರಿಯಾದಡಾನು | ಅಂಜುವೆನೆ ನಿ | ನ್ನಸಮಸಾಹಸಕೆ ಯಿನ್ನು ||
ಪೊಸ ಮಸೆವಿಶಿಖವ | ನೆಸೆವೆನು ಸೈರಿಸೆಂ | ದುಸುರತೆಚ್ಚನು ಶರವ      ||೨೮೫||

ಹಿಂದಣ ಶೌರ್ಯವನೂ | ನೀನಾಡಿದ | ರಿಂದೆಮ್ಮೊಳಾಹುದೇನು ||
ಕುಂದದೆ ಸಮರದೊ | ಳಿಂದು ತೋರಾ ಸತ್ವ | ದಂದವ ಕಂಡಪೆನೊ      ||೨೮೬||

ಸಾಕು ಸಾಕೆಲೊ ಖಳನೇ | ಗರ್ವದನುಡಿ | ಯಾಕೆ ಪೇಳುವೆ ಸುಮ್ಮನೇ ||
ಭೂಕಾಂತನಶ್ವವ | ನೀ ಕೊಡು ಕೊಡದಿರೆ | ತೋಕುವೆ ತನಿರಕ್ತವ                       ||೨೮೭||

ಧುರದಿ ನಿನ್ನಯ ತಲೆಯಾ | ಚೆಂಡಾಡದೆ | ತುರಗ ಬಿಡೆನು ನಿಶ್ಚಯಾ ||
ಸರಿಭಟನಾದರೆ | ಸುರಿಸು ಬಾಣಾವಳಿ | ಬರಿದೆನಿಸುವೇನೀಕ್ಷಣ              ||೨೮೮||

ವಾರ್ಧಕ
ಅಸುರನಿಂತೆನುತ ಪೊಸಮಸೆಯ ಶರದಿಂದ ಲಾ |
ಬಿಸರುಹೇಕ್ಷಣನ ರಂಜಿಸುವ ವಕ್ಷವನು ಕೀ |
ಲಿಸಲು ಹರಿಮೈಮರೆಯೆ ಸೂತನದನೀಕ್ಷಿಸುತ ತಿರುಗಿಸುತ ನಿಜರಥವನೂ ||
ವ್ಯಸನದಿಂ ನಗರಕೈದಿಸಲು ಕಾಣುತ್ತಲಾ |
ಶಶಿಮುಖಿಯರಧಿಕ ಶೋಕಿಸುತ ಬಳಸಿದರು ಮಿಗೆ |
ಕುಸುಮಶರನಯ್ಯನಂ ಬಳಿಕದೋಳಿಂತೆಂದಳಾ ಸತ್ಯಭಾಮೆ ನಗುತ      ||೨೮೯||

ರಾಗ ಮಧ್ಯಮಾವತಿ ಏಕತಾಳ
ಪ್ರಾಣನಾಯಕ ನೀನು | ದಾನವಗಿದಿರಾಗಿ |
ಪ್ರಾಣದಾನವ ಪಡೆದೇನು ಮರಳಿದೇ ||
ಯೀ ನಿಧಾನವ ತಿಳಿದ ಹಿತರೇಗಯ್ಯರು |
ಕ್ಷೋಣಿಯೊಳತಿ ಬಲನಹುದು ಮೆಚ್ಚಿದೆನು                   ||೨೯೦||

ರಣಪರಾಕ್ರಮಿಯೆಂಬ | ಘನಶೌರ್ಯದೊಳು ಪ್ರದ್ಯು
ಮ್ನನ ಭಂಗಿಸಿದೆ ಮಾನ | ವನುಗಳೆದಿಲ್ಲಿ ||
ಚಿನುಮಯಾತ್ಮಕನೆಂದಾ | ವನು ಬಣ್ಣಿಸುವನು ಮೇ |
ದಿನಿಯೊಳೆಣೆಯಗಾಣೆ | ನೆನಗರುಹದನೂ                 ||೨೯೧||

ವಾರ್ಧಕ
ವನಿತೆ ಭಾಮಾದೇವಿಯಿಂತು ನಸುನಗುತ ತ ||
ನ್ನಿನಿಯನಂ ಜರೆದು ನುಡಿಯುತ್ತಿರಲು ಕಣ್ದೆರೆದು |
ಮನದಿ ಲಜ್ಜಿಸಿ ವಲ್ಲಭೆಯ ನುಡಿಗೆ ಮನ್ಮಥನಪಿತ ಬಳಿಕ ತಕ್ಷಣದೊಳು ||
ಕನಲಿ ಕಣ್ಣಾಲಿಗಳ್ಕೆಂಪಡರಲಿರದೆದ್ದು |
ಸನಿಹದೆಡಬಲಗಳಂ ಪರಿಕಿಸುತ ಮತ್ತೆ ರಣ |
ಕನುವಾಗಿ ತನ್ನ ನಿಜಕಾಂತೆಯೊಳಗಿಂತೆಂದ ಸತ್ವಾತಿಶಯವನಂದೂ      ||೨೯೨||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಮಡದಿ ಕೇಳ್ನೀನಧಿಕ ಗರ್ವದಿ | ನುಡಿವೆ ಬೆಡಗಿನ ಮಾತುಗಳನೆ |
ನ್ನೊಡನೆ ಸಲ್ಲದು ಸಾಕುಸುಮ್ಮನೆ | ನಡೆಯೆ ಕೆಲಕೇ                ||೨೯೩||

ವರಚತುರ್ದಶ ಜಗವನಣುವೆಂ | ದರಿಯೆನುರುಹುವೆ ಕ್ಷಣದೊಳೀ ಹುಲು |
ದುರುಳ ನನಗೇಂ ಸರಿಯೆ ಕಲಹದಿ | ತರಿವೆನವನ                  ||೨೯೪||

ಮರುಳು ಸಾರಥಿ ತಿರುಹುರಥವನು | ಭರದಿದಾನವನೆಡೆಗೆನುತ ಮುರ |
ಹರನರುಹಿ ಸಂಗರಕೆ ಪೊರಟನು | ತ್ವರಿತದಿಂದ                     ||೨೯೫||

ಭಾಮಿನಿ
ಪೃಥ್ವಿಪತಿ ನೀ ಲಾಲಿಸನಿತರೊ |
ಳಿತ್ತ ಮೂರ್ಛೆಯೊಳಿರ್ದ ಕರ್ಣನ |
ಪುತ್ರನೆಚ್ಚರಿತೆದ್ದು ತನ್ನಯ ಸೋಲವನು ನೆನೆದೂ ||
ಚಿತ್ತದಲಿ ಕೋಪಾಗ್ನಿ ಭುಗುಭುಗಿ |
ಸುತ್ತ ಬರೆ ಕಿಡಿಯಿಡುತಲಿದಿರಿಹ |
ದೈತ್ಯಗೆಂದನು ಬಡಿದ ಪೆರ್ಬುಲಿಯಂತೆ ಗರ್ಜಿಸುತ                 ||೨೯೬||

ರಾಗ ಭೈರವಿ ಏಕತಾಳ
ನಿಲ್ಲೆಲೊ ದನುಜಾಧಮನೇ | ಬಲು | ಬಲ್ಲಿದ ಧುರಕೆನ್ನೊಡನೇ ||
ಕೊಲ್ಲದೆಬಿಡೆ ನಿನ್ನುವನೂ | ಕ್ಷಣ | ದಲ್ಲಿ ಹಯವನೊಯ್ದಪೆನೂ                 ||೨೯೭||

ಹೋ ಹೋ ಮೆಚ್ಚಿದೆ ನಿನಗೇ | ನೀ | ನೀ ಹುಡಿಗೊರಗಿದುದ್ಯಾಕೆ ||
ಸಾಹಸಿಯೆನುತಲಿ ಬಂದೂ | ಮ | ತ್ತಾಹರಿ ಮರಳಿದನಿಂದೂ                ||೨೯೮||

ಹರಿಯನು ಗೆಲಿದಿಹ  ವೀರ | ನಿ | ನ್ನುರವ ಬಗಿವೆ ಹರಿ ಚೋರ ||
ಧರೆಗೆ ಕೆಡಹದಿರೆ ನಿನ್ನ | ದಿನ | ಕರನಾತ್ಮಜ ಸುತನೇ ನಾ                    ||೨೯೯||

ರಾಗ ಶಂಕರಾಭರಣ ಮಟ್ಟೆತಾಳ
ಯೆಲವೊ ತರಳ ಕೇಳು ಹರಿಯ | ಬಲುಹ ಬಲ್ಲೆನೂ |
ಲಲನೆಯೋರ್ವಳನ್ನು ತರಿದು | ತುಳಿದು ಫಣಿಯನೂ ||
ಗೆಲುತ ಯೆತ್ತು ಕತ್ತೆಗಳ ಗೋ | ವಳನದೆನ್ನೊಳೂ |
ನಿಲಲು ನಡೆವುದೇನೊ ಪೇಳಿ | ನ್ನಳವಿನಿನ್ನೊಳೂ                    ||೩೦೦||

ಖಳಕುಲಾಗ್ರಗಣ್ಯ ಕೇಳು | ಮುಳಿದು ದುಷ್ಟರ |
ಕೊಳುಗುಳದಲಿ ತರಿದು ಮತ್ತೆ | ಸಲಹಿ ಶಿಷ್ಟರ ||
ಒಲಿದು ಸತತ ಕಾಯ್ದ ನಿನಗಿ | ನ್ನಳುಕಿ ಪೋಪನೇ |
ತಿಳಿಯೆಯಾ ಗೋಪಾಲನನಚ್ಯುತನು ನಿಜವನೇ                     ||೩೦೧||

ಎನುತ ಕನಲಿ ಸುರಿಸೆ ಕರ್ಣ | ತನಯನಂಬನೂ |
ಗಣಿಸದದನು ಮಧ್ಯಪಥದಿ | ತಣಿಸಿದನುಜನೂ ||
ಕಿನಿಸಿನಿಂದ ತೆಗೆದು ಕೂರ್ಗಣೆಗಳೆಚ್ಚನೂ |
ಕ್ಷಣದಿ ಹರಿಸುತದನು ಬಳಿಕ | ದಿನಪ ಮೊಮ್ಮನೂ                   ||೩೦೨||

ವಾರ್ಧಕ
ತರಣಿನಂದನ ಕರ್ಣ ಕುವರ ವೃಷಕೇತ ಶರ |
ವರುಷಮಂಗರೆಯೆ ರಿಪುವ್ರಾತಮಂ ಯೂಥಮಂ |
ತರಿದು ಮತ್ತನುಸಾಲ್ವ ದುರಳನಂ ಧರೆಗೆ ಕೆಡಹಲ್ಕೆ ಕಂಡಾಕ್ಷಣದೊಳುಂ|
ಸೆರೆವಿಡಿದು ಬಂಧಿಸುತ ಮಣಿರಥದೊಳೇರಿಸುತ |
ಹರಿತಂದು ಹರಿಪದಕೆ ಕೆಡಹಲತಿತೋಷದಿಂ |
ಹರಿ ತಾನೆ ತಕ್ಕೈಸಿ ಕೊಂಡಾಡಿ ಮುಂಡಾಡಿ ಮನ್ನಿಸಿದ ಕರ್ಣಜನನು       ||೩೦೩||

ಕಂದ
ಧರಣಿಪ ಕೇಳಾ ಸಮಯದಿ |
ದುರುಳಗೆ ಧುರಶ್ರಮವಡಗಲ್ಕಣ್ದೆರೆದಾಗಂ ||
ಪರಿಕಿಸಿ ಚಿನ್ಮಯ ಮನಮೋ |
ಹನ ಮೂರ್ತಿಯನವನಡಿಗೆರಗುತಲಿಂತೆಂದಂ                        ||೩೦೪||

ರಾಗ ಕಲ್ಯಾಣಿ ಅಷ್ಟತಾಳ
ಪಾಲಿಸು ದಯದಿ ದೇವ | ಭಕ್ತರ ಕಾವ |
ಶೀಲ ನಿನ್ನದು ಕೇಶವ ||
ಪಾಲಿಸೊಲಿದು ವಿ | ಶಾಲ ತ್ರಿಜಗ |
ತ್ಪಾಲ ಶ್ರೀ ಗೋ | ಪಾಲ ಯೆನ್ನನು             || ಪಲ್ಲವಿ ||

ಕರುಣ ಸಾಗರನೆ ಮುನ್ನ | ನೀನಾರನೆಂ |
ದರಿಯದೆ ಧುರದಿ ನಿನ್ನ ||
ಜರೆದೆ ಗರ್ವದೊಳಿರದೆ ನಿನಗದು | ಕೊರತೆಯಲ್ಲವಪಾರ ಮಹಿಮಗೆ |
ತರ ತರದ ಮಮ ದುರ್ನುಡಿಯ ನೀ | ಪರಮ ನುಡಿಯೆಂದೆಣಿಸಿ ರಕ್ಷಿಸು   ||೩೦೫||

ಕರದಿ ಖಂಡೆಯವನಿತ್ತು | ಮೇಣ್ ಫಲವಿತ್ತ |
ತೆರದಿ ನಿನ್ನಡಿಗೀಹೊತ್ತು ||
ಶಿರವ ಚಾಚಿಹೆ ಕೊಲುವ ಕಾಯುವ | ಮೆರೆವ ಭಾರವು ನಿನ್ನದೇ ಸಲೆ |
ಮರೆದು ತನ್ನಪರಾಧ ಸರ್ವವ | ಪೊರೆಯೆನುತ ಪೊರಳುತಿರೆ ಪಾದದಿ      ||೩೦೬||

ಕಂದ
ದಾನವನಿಂತುಸುರುತಲಿರೆ |
ಬಾನುಕುಮಾರಜ ಲಾಲಿಸಿ ಚಿತ್ತದೊಳಾಗಂ ||
ತಾನತಿ ರೋಷದೊಳಾ ಸಾ |
ಲ್ವಾನುಜನನುಸಾಲ್ವನ ಜರೆದವನಿಂತೆಂದಂ               ||೩೦೭||