ರಾಗ ಬೇಗಡೆ ಏಕತಾಳ
ಮರುತಸಂಭವ ಕೇಳು ಪೇಳುವೆನು | ಧುರಧೀರರನು ಕಂ |
ಡರಿವೆನಿಳೆಯೊಳಗಾನು ಹಲಬರನು ||
ಧರೆಯೊಳಗೆ ಮೈಮರೆದಿಹರ ತಾ | ವಿರಿವರಲ್ಲದೆನೊಂದರೆನುತಲಿ |
ಪೊರೆವವರ ನಾ ಕಾಣೆ ತ್ರಿಜಗದಿ | ಕರುಣಿಯಹ ವೃಷಕೇತನಲ್ಲದೆ                        ||೧೬೨||

ವರಚುತರ್ದಶಭುವನವನು ಪೊರೆವ | ಗರ್ವಾತ್ಮ ಲಕ್ಷ್ಮೀ |
ವರನು ನಿಮ್ಮಯ ಸೇವೆಯನು ಗೈವ ||
ಚರನು ಗಡ ಯಿನಿ | ತಿರಲು ನಾನೇ || ಸರ ಪರಾಕ್ರಮಿಯೆನುತ ಸಮರವ
ವಿರಚಿಸುತ ವಾಜಿಯನು ಪಿಡಿದಿರಿ || ಬರಿದೆ ದಾರಿಯ ತಪ್ಪಿದಿರಿ ಸರಿ       ||೧೬೩||

ಶ್ರೀವರನ ಭಕುತರಿಗೆ ಕೊಡದಿಹೆನೆ | ನಾನದರೊಳೆನ್ನಯ |
ಜೀವವುಳಿಸಿದನೀ ವೃಷಧ್ವಜನೆ ||
ಕಾವುದಲ್ಲದೆ ಕಾಯದೊಡೆ ಹಾ | ಹಾ ವೃಥಕೃತಮಾಗಿ ಜನ್ಮವ |
ದೀ ವಿಧದಿ ಪೋಗುತ್ತಲಿರ್ದುದು | ಪಾವನನ ಕಾಣದೆ ಸುಯೋಗವು         ||೧೬೪||

ಭಾಮಿನಿ
ಎಲೆ ವೃಕೋದರ ಕೇಳು ನಿಮ್ಮೊಳ |
ಗೊಲಿದು ನರಲೀಲೆಯನು ನಟಿಪ ಶ್ರೀ |
ಲಲನೆಯರಸನ ಕಂಡಪೆನಲಾನಿನ್ನು ನೀವೆನಗೆ ||
ತಿಳಿದೆಸಗಿದುಪಕಾರವಿದು ಯೆನ |
ಗೊಳಿತು ಬಹೆ ನಿಮ್ಮೊಡನೆ ಸರ್ವವ |
ಬಳಿಕ ಗಂಗಾಪಿತನ ಪದಕರ್ಪಿಸುವೆ ನಾನೆಂದ                       ||೧೬೫||

ರಾಗ ಸಾವೇರಿ ಅಷ್ಟತಾಳ
ಎನೆ ವೃಕೋದರನೆಂದನವಗೆ | ಕೇಳು |
ಜನಪಯೀವರೆಗೆಮ್ಮಗ್ರಜಗೆ ||
ಅನುಜರು ನಾಲ್ವರಾ | ವೆನುತಿರ್ದೆವಿನ್ನು ನಿ |
ನ್ನನು ಸಹಿತೈವರೆಂ | ದೆನುತ ಭಾವಿಸುವೆವು              ||೧೬೬||

ಹರಿಯದರ್ಶನವಿದರಿಂದ | ಸಾಧ್ಯ |
ವಿರದೆ ಧರ್ಮಜ ಗೈವಮಖದ |
ವರ ಕರ್ತೃವಸುರಾರಿ | ವಿರಚಿಸುವನು ನಿಂದು |
ಸಿರಿಮುಕುಂದನ ಕಾಂಬಾ | ತುರವಿರೆ ಬಹುದಯ್ಯಾ                 ||೧೬೭||

ವಾರ್ಧಕ
ಮರುತಸುತ ಕೇಳು ಮಮಪುರಕೆ ಚಿತ್ತೈಸು ನಾ |
ವಿರಚಿಸುವ ಸೇವೆಯಂ ಕೈಗೊಂಡಬಳಿಕ ಪರಿ |
ಪರಿವಸ್ತುಬಲಸಹಿತ ಬಹೆನು ನಿನ್ನೊಡನೆನಲ್ಕೊಪ್ಪಿದಂ ಕಲಿಭೀಮನು ||
ಅರಸನವದಿರರಥದಿ ಕರೆದೊಯ್ದುತ್ತೈದಿನಂ |
ಪುರವರದಿ ನಿಲಿಸುತುಪಚರಿಸಿ ರಾಜ್ಯದ ಭಾರ |
ಪೊರಿಸಿ ಮಂತ್ರಿಯೊಳಿತ್ತು ತೆಗೆಸಿ ಭಂಡಾರದಿಂದ
ಖಿಳಧನಕನಕಗಳನು        ||೧೬೮||

ಭಾಮಿನಿ
ಸತಿಪ್ರಭಾವತಿಯೊಡನೆ ಬಾಂಧವ |
ತತಿ ಸಹೋದರಸುತ ಸಹಿತಲಗ |
ಣಿತ ವಧೂಜಾಲವನು ಕರೆಸುತ ಜನನಿಯಂ ಕೂಡಿ ||
ಕ್ಷಿತಿಪ ಪೊರಮಡುತಿರಲು ಪವನನ |
ಸುತನವರ ಪಿಂದಿಕ್ಕಿಬಂದತಿ |
ಹಿತದೊಳಣ್ಣಗೆ ಮಣಿಯಲವ ಬಿಗಿದಪ್ಪುತಿಂತೆಂದ                     ||೧೬೯||

ರಾಗ ಸಾರಂಗ ಅಷ್ಟತಾಳ
ಬಂದೆಯ ಭೀಮ ನೀನು | ಪೋಗಿಹ ಕಾರ್ಯ |
ದಂದವನರುಹಿಸಿನ್ನು ||
ತಂದೆಯ ಹಯವದ | ನಿಂದು ಸಾಹಸದಿಂದ |
ಬಂದರೆ ಹೈಡಿಂಬಿ | ಕಂದ ಕರ್ಣಜ ಸಹ                    ||೧೭೦||

ರಾಗ ಕಾಂಭೋಜಿ ಝಂಪೆತಾಳ
ಲಾಲಿಸೆನ್ನಯ ಬಿನ್ನಪವನಣ್ಣದೇವ ||
ಭೂಲೋಲರನ್ನ ನಡೆದಿಹ ಕಥನದಿರವ                      || ಪಲ್ಲವಿ ||

ಒಡೆಯ ನಿನ್ನಾಜ್ಞೆಯಿಂ | ನಡೆದು ಭದ್ರಾವತಿಯೊ |
ಳೊಡನೆ ಹೈಡಿಂಬಿ ತಡೆ | ಗಡಿದು ರಿಪುಭಟರ ||
ಪಿಡಿದೆನ್ನ ವಶಕಿತ್ತ | ಕಡುಚೆಲ್ವ ಹಯವನದ |
ನುಡಿಯಲೇನರಿಗಳನು | ಬಡಿದೆನಾಹವದಿ                 ||೧೭೧||

ಅರಿತು ಮತ್ತಾಪುರದ | ಧರಣಿಪತಿ ಕರ್ಣಜನ |
ಧುರದಿ ಕೈಸೋತನಂ | ತರದಿ ಸಂಧಿಯನು ||
ವಿರಚಿಸಿದನೆಮ್ಮೊಡನೆ | ತುರಗ ಕಪ್ಪವು ಸಹಿತ |
ಬರುವನಾತನು ನಮ್ಮ | ತರಳನೊಡನೆಂದ               ||೧೭೨||

ರಾಗ ಭೈರವಿ ತ್ರಿವುಡೆತಾಳ
ಮಾರುತಿಯು ತಾನಲ್ಲಿ ನಡೆದಿಹ |
ವಾರತೆಯ ಪೇಳುತಿರೆ ಬಂದಾ |
ಚಾರನೋರ್ವನು ನುಡಿದ ಪುರದೆಡೆ |
ಭೂರಮಣನವನೈದಿ ಬಂದಿಹ ||
ಭೂರಿವಸ್ತುಗಳೊಡನೆ ನಿಜಪರಿ |
ವಾರವಿಹುದೆನಲವನಿಗುಚಿತವ |
ನಾರಿ ಸುತ ತೆಗೆದಿತ್ತು ಬಳಿಕ ಮ |
ಹೀರಮಣನಿದಿರ್ಗೊಳುವ ಮನದೊಳು ||
ದಾರಗುಣನು | ಪೊರಟ ಶೃಂ | ಗಾರಯುತನು                       ||೧೭೩||

ಪುರವ ಶೃಂಗರಿಸಲ್ಕರುಹಿ ಸೋ |
ದರರು ಮಂತ್ರಿಚಮೂಪ ಸಾಮಂ |
ತರು ಪುರೋಹಿತ ಭಟರ ಗಡಣದಿ |
ಸರಸಿಜಾಕ್ಷನ ಸಹಿತ ಘೋಷದಿ ||
ಮೆರೆವ ಕನ್ನಡಿ ಕಲಶವಿಡಿದಿಹ |
ತರುಣಿಯರಕೂಡುತ್ತ ರಾಜಿಪ |
ಕರಿಯಮೇಲಡರುತ್ತ ಸರಸದೊ |
ಳರಸಿ ದ್ರುಪದಜೆಯೊಡನೆ ಬಂದನು ||
ಧರ್ಮರಾಯ | ವರ್ಣಿಸ | ಲರಿದು ಪರಿಯ                  ||೧೭೪||

ಅರಸನಂ ವರ ಯೌವನಾಶ್ವನು |
ಪರಿಕಿಸುತಲಡಿಗೆರಗಿ ತಂದಿಹ ||
ತುರಗ ಕಪ್ಪವ ಸಹಿತ ಕಾಣಿಕೆ |
ಯಿರಿಸ ಲಾತನನಪ್ಪಿ ಧರ್ಮಜ ||
ಪಿರಿದು ಮನ್ನಿಸುತೆನ್ನ ತಮ್ಮಂ |
ದ್ಯರಿಗೆ ನೀಸರಿಯಪ್ಪೆಯದರಿಂ |
ಸಿರಿಯರಸನಹ ಯಾದವೇಂದ್ರನ |
ಚರಣಕಭಿನಮಿಸೆನುತ ತೋರಿಸೆ ||
ಹರಿಯನಂದು | ಸದ್ಗುಣ | ಭರಿತನೊಲಿದು                 ||೧೭೫||

ವಾರ್ಧಕ
ಭೂವಧೂರಮಣನಹ ಯೌವನಾಶ್ವಕನು ಮ |
ತ್ತಾವನ ಸುಲೀಲಾ ವಿನೋದ ಮಾತ್ರದೊಳು ಭುವ |
ನಾವಳಿಗಳಾಗಿ ಬಾಳ್ದಳಿವಾ ಸುವಿಶ್ವಂಭರನ ನೀರದಶ್ಯಾಮನ ||
ಶ್ರೀವರನನವ ಮನೋಹರ ಮೂರ್ತಿಯಂ ಕಂಡು |
ಭಾವಪುಳಕಿತನಾಗಿ ಹರುಷರಸವೊಸರೆ ಸ |
ದ್ಭಾವದಿಂದಚ್ಯುತನ ಪದಕೆ ನೊಸಲಂಚಾಚಿ ಜಯವೆನುತ ನುತಿಗೈದನು  ||೧೭೬||

ರಾಗ ಧನ್ಯಾಸಿ ಅಷ್ಟತಾಳ
ಜಯ ಜಯ ಜಯಕರುಣಾಕರ | ಜಗ | ನ್ಮಯ ಭವಭಯಹರ ಶ್ರೀಕರ ||
ಜಯ ಸಚ್ಚಿದಾನಂದ | ಜಯತು ಮುಕುಂದ                ||೧೭೭||

ಆದಿಪುರುಷ ಶ್ರೀನಾರಾಯಣ | ಮಧು | ಸೂದನಕ್ಷೀರ ಸಾಗರ ಶಯನ ||
ವೇದೋದ್ಧರಣನೆ ರ | ಮಾಧವ ಮಹದೇವ                ||೧೭೮||

ವಾರ್ಧಕ
ಪಾದಕಮಲದಿ ಶಿರವ ಚಾಚಿದರಸನ ನೆಗಹು |
ತಾ ದಯಾಂಬುಧಿ ಮನ್ನಿಸಲ್ಕಖಿಳರಂ ಕೂಡಿ |
ಮೇದಿನಿಪ ಧರ್ಮಜಂ ಪುರಕೆ ಬಂದೆಲ್ಲರೊಡನಿರಲು ಪಕ್ಷದ್ವಯದೊಳು ||
ಪೋದುದೀ ಚೈತ್ರಮಾಸಂ ಮುಂದೆ ಕರೆಸಿದೊಡೆ ||
ಯಾದವರ ಕಟಕ ಸಹ ಬಹೆನು ಮಖ ಹಯವ ಕೈ |
ಗಾದುಕೊಂಬುದೆನುತ್ತಲರುಹಿ ಹರಿ ಗಮಿಸಿದಂ ದ್ವಾರಕೆಗೆ ವಹಿಲದಿಂದ     ||೧೭೯||

ರಾಗ ಸವಾಯ್ ಏಕತಾಳ
ವಸುಮತೀಶ ತಾ | ಬಿಸಜಾಕ್ಷನ ಕಳು |
ಹಿಸಿದ ಚಿಂತೆ ಮನದೊಳು ಹೆಚ್ಚಿ ||
ಬಸವಳಿದಿರಲಾ | ಋಷಿವ್ಯಾಸನು ಬರ |
ಲೆಸೆವ ಗಜಪುರಕೆ ಮುದನಚ್ಚಿ                     ||೧೮೦||

ಮುನಿಕುಲದೀಪನ | ಜನಪತಿ ಮನ್ನಿಸ |
ಲನಿತರೊಳಗೆ ಶೋಕದ ಪರಿಯ ||
ಘನವಹ ನುಡಿಯಿಂ | ದಿನಿತೇನಾಯ್ತೆಂ |
ದೆಣಿಸುತಲೆಂದನು ಬಹು ಧೈರ್ಯ               ||೧೮೧||

ರಾಗ ಬೇಗಡೆ ಏಕತಾಳ
ಏನಿದೇನಿದು ಚೋದ್ಯವೈ ರಾಯ | ನೀನೀತೆರ ದು |
ಮ್ಮಾನ ತಾಳಿಹುದ್ಯಾಕೆ ಪೇಳಯ್ಯ ||
ವಾಣಿವರಸೃಷ್ಟಿಯೊಳು ನಿನ್ನ ಸ | ಮಾನದವನೀಪಾಲರನು ನಾ |
ಕಾಣೆನೈದಿಟ ನಿನಗೆ ಬಂದೆಡ | ರೇನದಿನ್ನನು ಮಾನಿಸದೆ ನುಡಿ              ||೧೮೨||

ಧೀರ ವಾಯುಕುಮಾರಕನ ನುಡಿಗೆ | ಕುಂದಾದುದೇ ಮೈ |
ದೋರಲಿಲ್ಲವೆ ಮಾರಮಣ ನಿನಗೆ |
ಮೂರು ಲೋಕದ | ವೀರನರ ತ್ರಿಪು | ರಾರಿ ಸಮಬಲ | ಮಾರುತಜರಿರೆ |
ವಾರುಹವನದ | ತಾರರೇ ಮನ | ವಾರೆ ನೆನೆದಡೆ | ಬಾರನೇ ಹರಿ         ||೨||

ಸಾಕು ಬಿಡು ಮನೋವ್ಯಾಕುಲವನಿನ್ನು | ಸದ್ಧೈರ್ಯನಾಗಿರು |
ಸೋಕದೆಡರಿಸಿತೈ ಕೆಲಸಕಿನ್ನು ||
ಲೋಕನಾಥನ ಕರುಣದಿಂ ಮೂ | ಲೋಕದೊಳು ನೀ ಗೈವಕಾರ್ಯಕೆ |
ಬೇಕು ಬೇಡೆಂಬವರದಿಲ್ಲ ಗು | ಣಾಕರನೆ ತವ ಸತ್ಯ ಕಾಯ್ವುದು             ||೧೮೩||

ರಾಗ ಬೇಗಡೆ ಅಷ್ಟತಾಳ
ಭಾವಿಸು ಋಷಿವರ ತವಪಾದ ದಯದಿ |
ಪಾವನವಾಯ್ತೆನ್ನ ಜನ್ಮವೀ ಭವದಿ ||
ಪಾವಮಾನಿಯು ಪೋಗಿ ಹಯವತಂದಿಹನು |
ಮಾವರ ಕರುಣದಿ ತಾ ಮೈದೋರಿಹನು                   ||೧೮೪||

ಆ ಮಹಿಮನ ದಯೆಯಿಂದ ಕುಂದಿಲ್ಲ |
ಆ ಮಹಾಧನತೋರೆ ನೀವ್ ಬರಲಿಲ್ಲ ||
ಕಾಮಜನಕ ತಾನೈದಿರುವನಿಲ್ಲಿಲ್ಲ |
ನಾ ಮನ ಬೇಸರಿಸಿದೆನಿದಕೆಲ್ಲ                    ||೧೮೫||

ವಾರ್ಧಕ
ಕರುಣಿಸೈ ಧನವ ಮತ್ತಾ ಮರುತ ನೃಪನ ಕಥೆ |
ಯರುಹೆನಲು ಸಾಂಗದಿಂದುಸುರಿ ಮಖಶಾಲೆಯಂ |
ವಿರಚಿಸುತ ಹಯವ ರಕ್ಷಿಸುವುದೆನೆ ಮುನಿಯಮತದಿಂ ಭೂಪ ನೆರಹಿಸುತಲಿ ||
ಭರದಿ ಸೋದರರು ಋಷಿಸಹಿತ ಚತುರಂಗಬಲ |
ವೆರಸಿ ಹಿಮಗಿರಿಗೈದುತರ್ಚಿಸುತ ಧನದನಂ |
ಮೆರೆವ ಧನ ಕನಕಗಳ ಹೊರಿಸಿ ನಗರಕೆ ಬರಲು ಮುನಿಪನಾಶ್ರಮಕೆ ಸರಿದಂ       ||೧೮೬||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಧರಣಿಪತಿ ತಾಬಳಿಕ ಭೀಮನ |
ಕರೆದುಸುರಿದನು ದ್ವಾರಕೆಗೆ ನೀ |
ತರೆಳಿ ಲಕ್ಷ್ಮೀವರನ ಬೇಗದಿ | ಕರೆದುತಹುದು             ||೧೮೭||

ಎನೆ ಹಸಾದವೆನುತ್ತ ಮಾರುತ |
ತನಯನಣ್ಣನಿಗೆರಗಿ ಪೊರಟೈ |
ತರಲಿದಿರುಗೋಚರಿಸಲಕ್ಷಿಗೆ | ವನಧಿಯಂದು             ||೧೮೮||

ವಾರ್ಧಕ
ಭರಿತಮಾಗಿರ್ಪ ಬೆಳ್ನೊರೆಗಳಿಂ ತೆರೆಗಳಿಂ |
ತಿರುತಿರುಗುತೇಳ್ವ ಬೊಬ್ಬುಳಿಗಳಿಂ ಸುಳಿಗಳಿಂ |
ಭರದೊಳೆಳಕೊಂಬ ನಾನಾಪ್ರವಾಹಂಗಳಿಂ ಚರಿಪ ಜಲಚರಗಳಿಂದ ||
ಮಿರುಪಶಂಖದ ವಿಮಲಸರಿಗಳಿಂ ಪರಿಪರಿಯ |
ಮೆರೆವರತ್ನಂಗಳಿಂ ವಿವಿಧವಹಧ್ವನಿಗಳಿಂ |
ದಿರದೆ ತುಂತುರಿನ ನೀರ್ವನಿಗಳಿಂ ಗಂಭೀರತನಗಳಿಂ ಕಡಲೆಸೆದುದು     ||೧೮೯||

ರಾಗ ಕೇತಾರಗೌಳ ಅಷ್ಟತಾಳ
ಇನಿತೆಸೆವಬ್ಧಿಯಕಾಣುತ್ತ ಮಾರುತಿ | ಘನತರತೋಷದಲಿ ||
ವನಜನಾಭನ ರಾಜಭವನವನೊಳಪೊಕ್ಕು | ವಿನಯದಿ ಬಹ ವೇಳ್ಯದಿ      ||೧೯೦||

ನಿತ್ಯ ಸಂತೃಪ್ತ ಸರ್ವೋತ್ತಮನಾಗಿಹ | ಚಿತ್ತಜಪಿತನು ತಾನು ||
ಮರ್ತ್ಯಲೀಲೆಯನಾಂತು ಮಿತ್ರರೊಡನೆ ಮುದ | ವೆತ್ತು ಭುಂಜಿಸುತಿರ್ದನು           ||೧೯೧||

ಜನನಿ ದೇವಕಿ ಯಶೋದೆಯರಿಕ್ಕಲದನನ | ಲನ ಹವಿಫಲವಕೊಂಡು ||
ಘನ ಸುಧೆಯನು ಸಹಿತಮರರಿಗುಣಿಸಿದಾ | ತನು ಭೋಜನವಗೈದನು    ||೧೯೨||

ಭಾಮಿನಿ
ಕದ್ದುಪಾಲ್ಬೆಣ್ಣೆಗಳನೆಲ್ಲವ |
ಮೆದ್ದು ತುರುಗಾಯ್ವುದನು ತ್ಯಜಿಸುತ |
ಹೊದ್ದುತಾ ಪಾಂಡವರೊಳೆರಕದೊಳೆರಡೆಣಿಸದಿರುತ ||
ಇದ್ದುದಾದುದು ಭಾಗ್ಯಪಡೆದರು |
ಮುದ್ದುಗೈದಪರೂಟದೆಡೆಯಲಿ |
ಚೋದ್ಯಮೆಂದಳು ಸತ್ಯಭಾಮಾದೇವಿ ದೇವಕಿಗೆ                     ||೧೯೩||

ರಾಗ ತೋಡಿ ಆದಿತಾಳ
ಬರಿದೆ ಪೇಳಲೇಕೆ ನೀನೇ | ನರಿವೆಯೆಮ್ಮ ಬಂಧನವನು |
ಹರಿಸಿದಾತನೀತ ಜಗ | ದ್ಗುರುವಾಗಿರುವನು ||
ಸುರರ ಪಾಲಿಸುವನು ಕೃಷ್ಣ | ನರನೆನುತ್ತ ಛೀಗಳೆವುದು |
ಸರಿಯೆ ನಿನಗೆ ಪೋಗೆನುತ್ತ | ಲರುಹೆ ದೇವಕಿ             ||೧೯೪||

ನಿಮ್ಮ ಬಂಧನವನು ಬಿಡಿಸಿ | ನೆಮ್ಮದಿಯನಿತ್ತವಗೆ ಬಂಧ |
ನಂ ಮಗುಳದೇಕಾಯ್ತು ಸುರರ | ನೆಮ್ಮಿ ಸಲಹುವ ||
ನಿಮ್ಮ ಗುರುವಿಗಾಯ್ತು ನರನ | ಚಮ್ಮಟಿಗೆಯ ಕೆಲಸವೇಕೆ |
ನಮ್ಮ ನಗಿಸದಿಹುದೆನುತ್ತ | ಭಾಮೆ ನುಡಿದಳು                        ||೧೯೫||

ಭಾಮಿನಿ
ಇಂತು ಭಾಮಾದೇವಕಿಯರಿರೆ |
ಕಂತು ಪಿತನುತ್ತರವಗೊಡುವೆಡೆ |
ಕುಂತಿಕುವರನು ಬಂದಿಹುದ ತಾನರಿದು ಮನದಲ್ಲಿ |
ನಿಂತು ದ್ವಾರದಿ ಹಾಸ್ಯಕನಿಲಜ |
ನಂ ತಡೆವುದೊಳ ಬಿಡದೆ ನೀನೆನು |
ತಂತರಾತ್ಮನು ಪೇಳಿದನು ಸೈರಂಧ್ರಿಯೊಳು ನಗುತ               ||೧೯೬||

ರಾಗ ಕೇತಾರಗೌಳ ಅಷ್ಟತಾಳ
ಬಂದಳು ಭರದಿ ಸೈ | ರಂಧ್ರಿ ಬಾಗಿಲೊಳು ತಾ |
ನಿಂದನಿಲಜಗೆಂದಳು ||
ಮುಂದೆ ಬಾರದಿರು ಗೋ | ವಿಂದನಾರೋಗಣೆ |
ಯಿಂದಿಹನೆನುತಲವಳು                 ||೧೯೭||