ರಾಗ ಆರಭಿ ಏಕತಾಳ
ಬಂದ | ಗೋವಿಂದನು ನಿತ್ಯಾ | ನಂದ                      || ಪಲ್ಲವಿ ||

ಬಂದನು ಭರದಿ ಮು | ಕುಂದತಾನಾಗಿ ಖ |
ಗೇಂದ್ರನನೇರಿ ಭಕ್ತ | ವೃಂದವ ಪೊರೆವರೆ                  || ಅ. ಪಲ್ಲವಿ ||

ಶ್ರೀಶಂ | ಮನಮೋಹನ | ವೇಷಂ | ಶತಭಾಸ್ಕರ ಸಂ | ಕಾಶಂ |
ಮನ್ಮಥ ಪಿತಸುವಿ | ಲಾಸಂ | ನಗೆಮೊಗದ ಸ | ರ್ವೇಶಂ ||
ವಾಸವಾರ್ಚಿತನು ಕೈ | ವೀಸುತಭಯಹಸ್ತ |
ಲೇಸ ಪಾಲಿಸಲು ಮ | ಹೀಶನೆಡೆಗೆ ಹರಿ                   ||೫೩||

ಕಂದ
ಭೂಮಿಪ ಕೇಳಾ ಮುರಹರ |
ಸಾಮಜಪುರದೆಡೆಗೈತರೆ ಕಂಡೋರ್ವ ಚರಂ ||
ತಾ ಮುದದಿಂದಲಿ ನಡೆತಂ |
ದಾಮಹಿಪತಿಗೆರಗುತ ಪೇಳಿದನೀ ತೆರನಂ                ||೫೪||

ರಾಗ ಮುಖಾರಿ ಏಕತಾಳ
ಇಳೆಯಪಾಲಕ ಲಾಲಿಸಯ್ಯಾ | ನಾನೆಂಬ ನುಡಿಯ |
ನೊಲಿದು ಸಂತಸದಿಂದ ಜೀಯ ||
ನೆಲನೊಡೆಯರ ಕುಲ | ತಿಲಕ ನಿನ್ನಯ ಮೇ |
ಲಿರಿಸಿ ದಯವನಾ | ಜಲಜಾಂಬಕ ಯದು |
ಕುಲದೆರೆಯನು ಯೀ | ಪೊಳಲ ಪೊರೆಗೆ ನಿಜ |
ಲಲನೆಯರೆಲ್ಲರ | ನುಳಿದೈತಂದಿಹ              ||೫೫||

ಸಿರಿಯರಸನನಿದಿರ್ಗೊಳಲು | ಬೇಗ ನೀನೇಳು |
ಬರಿದೆ ತಡವ್ಯಾಕೆ ಕೃಪಾಳು ||
ಪರಿ ಪರಿತೊಳಲು | ತ್ತರಸುವ ಬಳ್ಳಿ ಕಾ |
ಲ್ಗಿರದೆ ತೊಡಕಿದಂ | ತೊರೆವದೇನು ಶ್ರೀ |
ಹರಿ ತಾ ಬಂದಿಹ | ಕರುಣಾಕರ ಶರ |
ಣರ ಧೊರೆ ಕೇಳೆಂ | ದೆರಗಿದ ಚರಣಕೆ                      ||೫೬||

ಭಾಮಿನಿ
ಚರರ ನುಡಿಯನು ಕೇಳಿ ಧರ್ಮಜ |
ಭರಿತ ಸಂತಸದಿಂದಲಾತಗೆ |
ಹಿರಿದುಚಿತವಿತ್ತವನ ಕಳುಹಿಸಿ ಬಳಿಕ ಶ್ರೀವರಗೆ ||
ಶರಣಜನರಾವಳಿಯ ಸಲಹುವ |
ಕರುಣವೆಂತುಟೊಯೆನುತ ತನ್ನನು |
ಜರುಸಹಿತಲೈತಂದ ಹರಿಯನು ಕಾಂಬ ತವಕದಲಿ                 ||೫೭||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಬಂದರಸ ಭಕ್ತಿಯಲಿ ಶ್ರೀ ಗೋ | ವಿಂದನಡಿಗಭಿನಮಿಸೆ ಕರುಣಾ |
ಸಿಂಧು ತೆಗೆದಪ್ಪಿದನು ಸಂತಸ | ದಿಂದ ನೃಪನ                      ||೫೮||

ಚರಣಕಾನತರಾದ ಮರುತಜ | ನರ ನಕುಲಸಹದೇವರನು ಮೃದು |
ಕರದಿ ಪಿಡಿದೆತ್ತಿದನು ಲಕ್ಷ್ಮೀ | ವರನು ದಯದಿ                        ||೫೯||

ಫಣಿಶಯನ ಗೋವರ್ಧನೋದ್ಧರ | ಣನೆ ಚಿನುಮಯನೆ ಪಾಲಿಸೆಂದಾ |
ವನಜಮುಖಿ ದ್ರೌಪದಿ ಮಣಿಯೆ ಶಿರ | ವನು ನೆಗಹಿದ               ||೬೦||

ಬಳಿಕ ನೃಪತಿಗೆ ಕರವಗೊಟ್ಟಾ | ಬಲಿಮಥನ ನಡೆತಂದ ಹರಿಯೊಳು |
ಸಲುಗೆಯೆಂತುಟೊ ಪಾಂಡುಸುತರಿಗೆ | ತಿಳಿವರಾರೈ               ||೬೧||

ಸಿರಿಯರಸನಾಸ್ಥಾನಕೈತರ | ಲಿರುಳು ನೃಪನೋಲಗವನಿತ್ತನು |
ಧರಣಿಪತಿ ಕೇಳೇನನೆಂಬೆನು | ಮೆರೆವ ಸಭೆಯ                      ||೬೨||

ವಾರ್ಧಕ
ಹರಿಯಂತೆ ಶ್ರೀಯುತಂ ನಭದಂತೆ ಕವಿಯುತಂ |
ಸರಸಿರುಹ ಸಖನಂತಮಿತಸುತೇಜಾನ್ವಿತಂ |
ವರಸರಿತ್ಪತಿಯಂತೆ ಹರಿದರುಶನೋತ್ಸಾಹದೀ ಘೋಷಭರಿತಮಾಗಿ ||
ಸುರಲೋಕದಂತೆ ಸುಮನಸಯುತಂ ಕೈಲಾಸ |
ಗಿರಿಯಂತೆ ಶಿವಯುತಂ ತಾನಾಗಿ ಸೊಬಗಿನಿಂ |
ಮೆರೆವ ನೃಪನಾಸ್ಥಾನಮಂಟಪಂ ಕಂಡು ಹರಿ ನಗುತ ಭೂಮಿಪಗೆಂದನು ||೬೩||

ರಾಗ ಕೇತಾರಗೌಳ ಅಷ್ಟತಾಳ
ಧರಣೀಶ ಕೇಳ್ನಿನ್ನ | ಸಿರಿಗೆಣೆಯುಂಟೆ ಯಿ |
ನ್ನರಸು ಧರ್ಮ ಕ್ರಿಯೆಗೇ ||
ಕುರು ಪುರೂರವರೈದೆ ಸೋಲುವರಾವಿನಿ |
ತರೊಳಿನ್ನು ಧನ್ಯರೆಂದ                  ||೬೪||

ಅಹುದುನಿಜಾಶ್ರಿತನಿವಹದ ಘನತೆಯೊ |
ಳಹಿತಲ್ಪ ಧನ್ಯರಿನ್ನು |
ವಿಹಿತವೀನುಡಿ ಭಕ್ತವತ್ಸಲನೆಂಬುದ |
ಕಿಹುದೆ ಸಂದೇಹ ಮೇಣು               ||೬೫||

ಧರೆಯೊಳು ಪಾಂಡವಸ್ಥಾಪನಾಚಾರ್ಯರೆಂ |
ದೊರೆಯದಿರ್ಪರೆ ನಿನ್ನನು ||
ಮುರಹರ ನಿನ್ನಯ ಮಹಿಮೆಯು ಘನವೆನು |
ತರುಹಲು ಮಗುಳೆಂದನು              ||೬೬||

ರಾಗ ಸಾಂಗತ್ಯ ರೂಪಕತಾಳ
ಅರಸ ಲಾಲಿಪುದೆನ್ನ | ಬರಿಸಿದೆಯೇಕೆ ಕೇ |
ಳರಿಗಳ ಸುಳಿವಿನಿಸಿಲ್ಲ |
ಧರೆಗೆ ಮತ್ಸರಿಪ ದಾಯಾದ್ಯರಿನ್ನಿಲ್ಲವ |
ಸರದ ದಿಗ್ವಿಜಯ ಮುನ್ನಿಲ್ಲ             ||೬೭||

ನರವೃಕೋದರ ಮಾದ್ರಿ | ತರಳರೊಳೆರವಿಲ್ಲ |
ಧರಣಿಪಾಲಕ ನಿನಗಿನ್ನು ||
ವಿರಚಿಪ ರಾಜಕಾರಿಯವೇನದರುಹೆನೆ |
ಸಿರಯರಸನೊಳೆಂದ ನೃಪನು                    ||೬೮||

ಹರಿಯೆ ಕೇಳೀ ಚರಾ | ಚರದೊಳಗಿಹ ನಿನ |
ಗರಿಯದೆ ಮನ್ಮನದಿರವು ||
ನರನಾಟಕದ ನುಡಿ ಸಾಕದಂತಿರಲದ |
ನೊರೆವೆ ಕಾರುಣ್ಯಾಬ್ಧಿ ಕೆಲವು                      ||೬೯||

ಬಾದರಾಯಣನಿಲ್ಲಿ ನಡೆತಂದೆನಗೆ ಹಯ |
ಮೇಧಾಧ್ವರದ ವಿಧಿಗಳನು ||
ಬೋಧಿಸಲದಕಶ್ವ ತಹೆನಿಂದು ನುಡಿದ ವೃ |
ಕೋದರನೆನೆ ಹರಿನುಡಿದ               ||೭೦||

ವಾರ್ಧಕ
ಯೆಲೆ ಮಹೀಪಾಲ ಮರುಳಹೆಯ ಮುನಿವರನಿಟ್ಟ |
ಬಲೆಗಿಂತು ಸಿಲುಕುವರೆ ಯೌವನಾಶ್ವಾದ್ಯರತಿ |
ಬಲರು ಹಿಂದಣ ದೊರೆಗಳಂತಲ್ಲ ಕೈಯಿಕ್ಕಲರಿದು ಭೂಮಂಡಲದೊಳು ||
ಹುಲುಮೃಗಾಳಿಯ ತರಿದ ಮದವನಿಭ ಮೃಗರಾಜ |
ನೊಳು ತೋರ್ದಡಹುದೆ ಪೇಳಿದ ಕುಮತಿ ಭೀಮನೇಂ |
ತಿಳಿವನೀತನ ಮತದೊಳುದ್ಯೋಗಿಪರೆ ಮಖಕೆಯೆನುತ ಮತ್ತಿಂತೆಂದನು ||೭೧||

ರಾಗ ತೋಡಿ ಏಕತಾಳ
ಧಾತ್ರಿಪಾಲ ಕೇಳು ಪವನ | ಪುತ್ರಗಿನಿತು ಮತಿಯದಿರಲು |
ಧೂರ್ತಬಕನಿಗಿಟ್ಟ ಕೂಳ | ತುತ್ತುಗೊಂಬನೆ                ||೭೨||

ಯೆಂದ ಮಾತ ಕೇಳಿ ವಾಯು | ಕಂದನೆಂದ ಗೋವಳರ |
ಮಂದಿರದಿ ಕದ್ದು ಕೂಳ | ತಿಂದಾತನ್ಯಾರೈ                ||೭೩||

ತೋಚದೇ ನೀತಿಯದೆಲಾ ನಿ | ಶಾಚರಿಯನೊಲಿಸುತಾಳ್ವ |
ನೀಚಕೃತ್ಯವಾರದೆಂದು | ನಾಚದರುಹಯ್ಯ                ||೭೪||

ನರಕದೈತ್ಯನೆಡೆಯೊಳಿರ್ದ | ತರಳೆಯರುದುರುಳೆಯರೆಂ |
ದರಿಯೆಯ ನೀ ಕರಡಿಸುತೆಯ | ವರಿಸೆ ನೀತಿಯೈ                  ||೭೫||

ಭಾಮಿನಿ
ಸಾಕುಸಾಕಚ್ಯುತನೆ ಬಲ್ಲೆನು |
ಕಾಕುನುಡಿಗಳ ಬರಿದೆಯೆನ್ನೊಡ |
ನೇಕೆ ಪೇಳುವೆ ನಿನ್ನೊಳವನಾನರಿಯದಿರ್ಪವನೆ ||
ಪಾಕಶಾಸನ ಮುಖ್ಯ ಸುರರು ಪಿ |
ನಾಕಿಸಹಿತಡ್ಡೈಸಿದರು ತಹೆ |
ನಾ ಕುದುರೆಯಂ ನುಡಿಗೆ ತಪ್ಪೆನೆನಲ್ಕೆ ಹರಿ ನುಡಿದ                ||೭೬||

ರಾಗ ಕಾಂಭೋಜಿ ಝಂಪೆತಾಳ
ನುಡಿದ ಭಾಷೆಯ ತಪ್ಪಿ | ನಡೆವನಲ್ಲದ ಬಲ್ಲೆ |
ಮಡಿದ ದುಃಶ್ಶಾಸನನು ಬಗಿದು ||
ಬಿಡದೆ ಪೈಶಾಚರಂ | ತೊಡಲರಕ್ತವ ಕುಡಿದ |
ಕಡು ಪರಾಕ್ರಮಿಯೈಸೆ ಬಿರಿದು                   ||೭೭||

ಚಿನ್ಮಯಾತ್ಮಕನೆ ಕೇಳ್ | ಸ್ತನ್ಯಗೊಟ್ಟಾಕೆಯಸು |
ವನ್ನೀಂಟಿ ಬಿಡದೆ ರಕ್ಕಸಿಯ ||
ನಿರ್ನಾಮಗೈದ ಸಂ | ಪನ್ನ ಶೌರ್ಯಾಧಿಕರು |
ನಿನ್ನಂತೆ ಜಗದೊಳ್ಯಾರಯ್ಯ                       ||೭೮||

ಭಂಡತನದಿಂದ ತಿರಿ | ದುಂಡು ಬಾಣಸವ ಕೈ |
ಕೊಂಡು ದೂಷಣೆಗಂಜದಿರುವ ||
ಚಂಡವಿಕ್ರಮಿ ನಿನ್ನ | ಗಂಡುತನ ಸುಡುಸುಡೆನೆ |
ಪುಂಡರೀಕಾಕ್ಷಗಿಂತೆಂದ                 ||೭೯||

ರಾಗ ಕೇತಾರಗೌಳ ಅಷ್ಟತಾಳ
ಹರಹರ ದೂಷಣಕಂಜಿ ಜಾರತ್ವವ | ವಿರಚಿಸಿದೆಯ ಹೆಣ್ಣಾಗಿ ||
ಅರಿದುದಿಲ್ಲವೆ ಬಾಣಸದ ಪರಿದ್ವಿಜನಾಗಿ | ತಿರಿದು ನೀನುಣಲಿಲ್ಲವೆ           ||೧||

ಧರಣಿಪಾಲರ ಕೂಡೆ ಗೋವಳರಿಂಗೆಲ್ಲಿ | ಸರಿಯಪ್ಪಕಾಲವುಂಟೆ ||
ಅರುಹಲಂಜುವೆನಶ್ವವನು ತಹೆನೆಮ್ಮನು | ಪೊರೆಯೊ ಯಜ್ಞವ ನಡೆಸಿ     ||೮೦||

ಮುರಹರ ನಗುತೆಂದ | ತುರಗವ ತಹ ಸತ್ವ | ವಿರುವದಾದರೆ ತಹುದು ||
ಬರಿದೆ ಗಳಹಬೇಡ | ಕೊರತೆಯಪ್ಪುದೆನಲ್ಕೆ | ವರಧರ್ಮಸುತನೆಂದನು   ||೮೧||

ಭಾಮಿನಿ
ಪರಮಪಾವನ ಮೂರ್ತಿತವಪದ |
ಸರಸಿಜಕೆ ತಲೆವಾಗುವೆನು ನಾ |
ಶರಣವತ್ಸಲ ನಿನ್ನ ಭಕ್ತರಿಗುಂಟೆ ಅಪಜಯವು ||
ಕರುಣಿ ನೀ ದಯವಾದರೆಮಗಹ |
ಸರಿಯದಾರೈ ಪೇಳೆನುತ ಭೂ |
ವರನೆರಗೆ ಶಿರನೆಗಹಿ ಮತ್ತಿಂತೆಂದನಸುರಾರಿ             ||೮೨||

ರಾಗ ಸುರುಟಿ ಏಕತಾಳ
ಕೇಳೆಲೆ ಯಮಜಾತ | ಧಾತ್ರೀ | ಪಾಲಕ ವಿಖ್ಯಾತ ||
ಪಾಲಿಪೆ ಶಶಿಕುಲ | ಮೂಲ ಶಿರೋಮಣಿ |
ಜಾಲವಲ್ಲಿದು ಚಿಂ | ತಾ ಲಲನೆಯ ಬಿಡು                   ||೮೩||

ಅರುಹುವದೇನಿನ್ನು | ನಿಮ್ಮೀ | ರ್ವರ ಮನದಿರವನ್ನು ||
ಪರಿಕಿಸಲೀಪರಿ | ಯೊರೆದಿಹೆನಲ್ಲದೆ |
ಪರಮಾಪ್ತರು ನಿಮ | ಗೆರಡೆಣಿಸುವೆನೇ                     ||೮೪||

ಘನವೇನೈ ನಿನಗೇ | ಯೀ ಮಖ | ತೃಣವಿದು ನೀ ಹರಿಗೇ ||
ಅನಿಲಜನನು ಕಳು | ಹೆನುತುಸುರುತ ಶ್ರೀ |
ಚಿನುಮಯನಿರ್ದನು | ಜನಪತಿ ಸಹಿತ                      ||೮೫||

ವಾರ್ಧಕ
ಜನಮೇಜಯಾಖ್ಯ ನೃಪ ಲಾಲಿಸೈ ಪಾಂಡವರ |
ದೆನಿತು ಪುಣ್ಯೋದಯವೊ ಜಲರುಹಭವಾಮರರು |
ಮುನಿಗಣಂ ಸಹಿತ ನಿರಶನದಿಂದ ತಪವಿರ್ದಡಂ ನಿರುತ ಬಳಿಕವರ್ಗೆ ||
ಚಿನುಮಯಾತ್ಮಕ ಹರಿಯ ಕಾಂಬಡಸದಳ ಪಾಂಡು |
ತನಯರೆಡೆಯೊಳಗನಿಶ ವಾಸವಾಗಿರ್ಪನಾ |
ವನಜನಾಭನ ಮಹಿಮೆಯಂ ಬಲ್ಲರಾರು ಮುಂಗಥೆಯ ಕೇಳೆಂದ ಮುನಿಪ            ||೮೬||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಮರುದಿವಸದುದಯದಲಿ ಧರಣಿಪ |
ಹರಿ ಮುಕುಂದನೆ ರಕ್ಷಿಸೆನುತಲಿ |
ಭರದಿ ಬಂದೋಲಗವನಿತ್ತ ಶ್ರೀ | ವರನು ಸಹಿತ                      ||೮೭||

ಅನಿತರೊಳಗನಿಲಜನು ಭೂಪಗೆ |
ಚಿನುಮಯಗೆ ಸಹ ಮಣಿದು ವೀಳ್ಯವ |
ನೆನಗೆ ಕೊಡುವುದು ತಹೆನು ಹಯವನು | ಕ್ಷಣದೊಳೆಂದ                      ||೮೮||

ಮತ್ತೆ ಕರ್ಣಜ ಮೇಘನಾದ ಭ |
ಟೋತ್ತಮರು ಹರಿ ಧರ್ಮಜರಿಗೆರ |
ಗುತ್ತ ನಿಂದಿರೆ ವೀಳ್ಯವನು ನೃಪ | ನಿತ್ತನಂದು             ||೮೯||

ಅರಸುಗಾವಲ ನರನೊಳಿರಿಸುತ |
ತರಿಸಿ ರಥಗಳನೇರಿ ಘೋಷದಿ |
ಪೊರಟು ಬರೆ ಹೈಡಿಂಬಿ ಕರ್ಣಜ | ಮರುತಸುತರು                 ||೯೦||

ವಾರ್ಧಕ
ಬರೆಮುಂದೆ ನಿರತ ಸದ್ಭುಜಗಧರನಾಗಿ ಶಶಿ |
ಧರನಾಗಿ ಹರಿಗತಿ ಪ್ರಿಯನಾಗಿ ದಕ್ಷಜಾ |
ವರನಂತಿರುವೆನೆಂಬ ಪೆಂಪಿನಿಂದೆಸೆವ ಭದ್ರಾವತಿಗೆ ನಡೆತಂದರು ||
ಸರಸದಿಂದುಲಿವುತಿರ್ಪಳಿಗಳಿಂ ಗಿಳಿಗಳಿಂ |
ಮಿರುಪ ನವಶಶಿಕಾಂತ ಶಿಲೆಗಳಿಂ ಕೊಳಗಳಿಂ |
ಪರಿವನಿರ್ಮಲ ಸರೋವರಗಳಿಂ ತೊರೆಗಳಿಂದಾಸೀಮೆ ಚೆಲ್ವಾಂತುದು    ||೯೧||

ಭಾಮಿನಿ
ಇಂತೆಸೆವ ಭದ್ರಾವತಿಯ ಪುರ |
ದಂತರದ ಗಿರಿಶಿಖರದೆಡೆಗಾ |
ಕುಂತಿಸುತ ನಡೆತಂದು ನಗರದ ಸಿರಿಗೆ ಮನಮೆಚ್ಚಿ ||
ನಿಂತು ಕರ್ಣಜಗಿರದೆ ತೋರಿದ |
ಸಂತಸದಿ ವಿಸ್ತಾರದಿಂ ಚೆ |
ಲ್ವಾಂತು ಕಾಣುವ ಪರಿಯನೆಲ್ಲವ ಪೂರ್ವಭಾಗದಲಿ                 ||೯೨||

ರಾಗ ಕಾಂಭೋಜಿ ಝಂಪೆತಾಳ
ಕಂದ ವೃಷಕೇತು ಕೇ | ಳಿಂದೆಮ್ಮ ಕಣ್ಗೆಮುದ |
ವಂದೋರ್ವ ಪರಿಯೊಳಿಹ ನಗರ ||
ಮುಂದೆಸೆವುದಹಹ ವರ | ನಂದನೋದ್ಯಾನ ಸೊಬ |
ಗಿಂದ ನೋಟವನು ಚಲಿಸತ್ತ                       ||೯೩||

ಬಕುಳ ಮಂದಾರ ಪಾ | ದರಿ ಕರ್ಣಿಕಾರ ಚಂ |
ಪಕ ಕೋವಿದಾರ ಪ್ರಿಯಂಗು ||
ಸಕಲ ತರುನಿಚಯಂಗಳಂಗಜನ ವಿವಿಧ ಸಾ |
ಯಕದ ಮೂಡಿಗೆಯ ಮುಗುಳುಗಳ              ||೯೪||

ಅಂಬರವ ಚುಂಬಿಸುವ ನಗರದಾಸೌಧಗಳ |
ಅಂಬುಜಾಕ್ಷಿಯರ ತಂಡಗಳ ||
ಸಂಭ್ರಮದೊಳಿಕ್ಕೆಲದಿ ಮೆರೆವ ವೀಧಿಯ ನೋಡು |
ತುಂಬಿಹುದು ಸಕಲ ಸೌಭಾಗ್ಯ                    ||೯೫||

ಮದಗಜಂಗಳ ಸಾಲತೇಜಿಗಳ ಬಳಗಗಳ |
ವಿಧ ವಿಧದ ಜನರ ತಿಂಥಿಣಿಯ ||
ಕದನಗಲಿಗಳ ನಿವಹ | ವದನೆಲ್ಲ ತೋರಿಸುತ |
ಹದನಗಳ ಯೋಚಿಸುತಲಿರ್ದ                     ||೯೬||

ವಾರ್ಧಕ
ಜನಪಕೇಳಾವೇಳೆಯೊಳು ದಿವಸಪತಿಯಾತ್ಮ |
ಜನಸುತಂಗೈವ ಮಖಕಶ್ವಮಂ ಕೊಂಡೊಯ್ಯ |
ಲೆನುತೆನ್ನ ಮೊಮ್ಮನೈತಂದೀರ್ಪನಮಲ ಹಯಮಂ ತೋರದಿಹ ನೃಪಾಲ ||
ಯೆನುತ ಕಡುಗೋಪದಿಂದುರಿಯುಗುಳ್ದಪನೊ ತಾ |
ನೆನಲಾತಪಂ ಪೆರ್ಚುತಿರಲನಿಲ ಸಂಭವಂ |
ಮನದಿ ಬಹು ಚಿಂತೆಯಂ ತಳೆದು ಕರ್ಣಜನ ಮೊಗಮಂ ನೋಡುತಿಂತೆಂದನು     ||೯೭||

ರಾಗ ಸಾಂಗತ್ಯ ರೂಪಕತಾಳ
ತರಳಕೇಳಾದಿತ್ಯ | ಸರಿದ ಮಧ್ಯಾಹ್ನಕೀ |
ಪುರದಿಂದ ಸರಸಿಗೈತರುವ ||
ತುರಗನಿಕಾಯವ | ಪರಿಕಿಸುಮುನಿಯೆಂದ |
ಗುರುತಿನ ಹಯವ ನಾಕಾಣೆ                       ||೯೮||

ನಗರದೊಳಿಲ್ಲವೊ | ಮಿಗೆ ಪೊರಮಡಿಸರೋ |
ಬಗೆಯದೇನೆನಗೆ ಕಾಣಿಸದೆ ||
ಜಗತಿಪಾಲಕಗೆಂತು | ಮೊಗದೋರ್ವೆನಮರರು |
ನಗುವರಶ್ವವವನೊಯ್ಯದಿರಲು                   ||೯೯||

ಋಷಿ ಪುಸಿನುಡಿವನೆ | ಪುಸಿದೊಡೆಹರಿತಾ ಸೈ |
ರಿಸುವನೆಸಹಿಸಲಭಾಗ್ಯ ||
ವಸುಧೆಯಾಣ್ಮನ ಭಾಗ್ಯನಾಗಲೀ ಶಶಿಕುಲ |
ಜಸವದು ಕಳೆಗುಂದಲುಂಟೆ                       ||೧೦೦||

ಶಶಿವಂಶ ಕಳೆಗುಂದಿದರುನಾನಾಡಿದ ನುಡಿ |
ಪುಸಿಯಪ್ಪಡಾನಾವಭವದಿ ||
ಯೆಸಗಿದ ಕಲುಷವೊ ಮರೆತನೊ ಕೃಷ್ಣ ಕಾ |
ಣಿಸದೇಕೆ ಹಯವಕಟಕಟ               ||೧೦೧||

ವಾರ್ಧಕ
ಪರಮ ಋಷಿವರ ರಮಾಧವ ಭೂಮಿಪತಿಗಳಿದಿ |
ರಿರದೆ ಗರ್ವದಿ ಶಪಥಮಂ ಗೈದುತಪ್ಪಿದರೆ |
ಗುರು, ದೈವ, ಸ್ವಾಮಿ, ಧರ್ಮದ್ರೋಹಮಿಂತೀ ಚತುರ್ವಿಧಂ ತಿಳಿಯಲಾನು ||
ವಿರಚಿಸಿದ ವೀರಪ್ರತಿಜ್ಞೆಯಂ ಪೂರೈಸ |
ಲರಿಯದಾತ್ಮದ್ರೋಹಮಿಂತೈದು ದ್ರೋಹವೈ |
ತರದೆಯೆನಗಿನ್ನು ತುರಗವನು ಕೊಂಡೊಯ್ಯದಡೆ ಕಾಂಬೆನೆಂತವರನೆಂದ            ||೧೦೨||