ಭಾಮಿನಿ
ಶ್ರೀಯರಸನನು ಭಜಿಸಿ ಗೌರೀ |
ಪ್ರೀಯನಂಘ್ರಿಯ ಧ್ಯಾನಿಸುತ ಗಣ |
ನಾಯಕಂಗಭಿನಮಿಸಿ ವಾಗೀಶ್ವರಿಯ ಬಲಗೊಂಡು ||
ತೋಯಜೋದ್ಭವ ಮುಖ್ಯಸುರಸಮು |
ದಾಯಕಾನತನಾಗಿ ಯದುಕುಲ |
ರಾಯ ಕೃಷ್ಣನ ದಯದಿ ಪೇಳುವೆನೀ ಕಥಾಮೃತವ                  ||೧||

ದ್ವಿಪದಿ
ಶ್ರೀಲಲನೆಯನು ಸ್ತುತಿಸಿ ಸುಜನರಿಗೆ ನಮಿಸಿ ||
ಬಾಲದುರ್ಗಾಂಬಿಕೆಯ ಮನದಿ ನೆಲೆಗೊಳಿಸೀ             ||೨||

ಶೀಲನಿಧಿಮದ್ಗುರು ಕೃಪಾಪ್ರಸರವೆರಸೀ ||
ಮೂಲೋಕಭರಿತ ಚಿದ್ರೂಪನನು ಸ್ಮರಿಸೀ                 ||೩||

ವರಮಹಾಭಾರತ ಪುರಾಣಕಥನದಲಿ ||
ಅರಸ ಧರ್ಮಜನಶ್ವಮೇಧ ತೊಡಗುತಲಿ                  ||೪||

ಧರಣಿಪತಿ ಯೌವನಾಶ್ವನ ಹಯವ ತರಿಸೀ ||
ದುರುಳನನುಸಾಲ್ವನನು ಹರಿಪದಕೆಮಣಿಸೀ               ||೫||

ನೀಲಧ್ವಜನ ಜೈಸಿ ಪಾರ್ಥ ಕಪ್ಪವನೂ ||
ಭೂಲೋಲಧರ್ಮಜಂಗಿತ್ತ ಚರಿತೆಯನೂ                   ||೬||

ಪೇಳುವೆನು ತಿಳಿದಂತೆ ಯಕ್ಷಗಾನದಲೀ ||
ಶೀಲರಿದತಿದ್ದಿ ಮೆರೆಸುವುದು ಮೋದದಲೀ                 ||೭||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಭಾಗವತ ಜನಮೌಳಿವರಗುಣ |
ಸಾಗರಗೆ ಜನಮೇಜಯಗೆ ಮಹ |
ಯೋಗಿ ಜೈಮಿನಿ ಪೇಳುತಿರೆ ಸೊಗ | ಸಾಗಿ ಕಥನ                  ||೮||

ಯತಿ ಕುಲೋತ್ತಮಗೆಂದ ಪೃಥ್ವೀ |
ಪತಿ ಯಮಜ ತಾನಶ್ವಮೇಧವ |
ನತಿ ಮುದದಿ ಕೈಗೊಂಡು ಲಕ್ಷ್ಮೀ | ಪತಿಯ ದಯದಿ                 ||೯||

ಖೂಳನನು ಸಾಲ್ವಕನ ಧುರದಲಿ |
ಸೋಲಿಸುತ ರವಿಮೊಮ್ಮಮತ್ತಾ |
ಶ್ರೀ ಲಲಾಮನ ಪದದಿ ಕೆಡಹಿದ | ಮೇಲೆ ಭರದಿ                      ||೧೦||

ನೀಲಕೇತಾದ್ಯವನಿಪಾಲರ |
ಕಾಳಗದಿ ನರ ಜೈಸಿದಂದವ |
ಪೇಳಬೇಹುದೆನಲ್ಕೆ ವರ ಮುನಿ | ಪಾಲನುಡಿದ                       ||೧೧||

ರಾಗ ಕಾಂಭೋಜಿ ಝಂಪೆತಾಳ
ಇಂದು ವಂಶಜಧರ್ಮ | ನಂದನನು ಹರಿಯ ದಯ |
ದಿಂದ ರಾಜ್ಯವನಾಳುತಿರಲು ||
ಬಂಧುಬಾಂಧವರು ತ | ಮ್ಮಂದಿರೊಡಗೂಡಿ ಸುಖ |
ದಿಂದ ಹಸ್ತಿನಪುರದೆ ಮುದದಿ                      ||೧೨||

ಅತಿ ಮನೋಹರಮಾಗಿ | ಕ್ಷಿತಿಯ ಪಾಲಿಸುತಿರಲು |
ಶತಮಖಾದ್ಯರು ಮೆಚ್ಚುವಂತೆ ||
ಮತಿಯುತನು ಜಾನಕಿಯ | ಪತಿಯವೊಲು ಸಂತಸದಿ |
ಕ್ಷಿತಿಪ ನಳನಹುಷರಿಂ ಮಿಗಿಲು                    ||೧೩||

ಗುರು ಭೀಷ್ಮ ಕರ್ಣ ಕೌರವ ಮುಖ್ಯ ಬಾಂಧವರ |
ಧುರದೊಳೆಚ್ಚಾಡಿ ಸಂಹರಿಸಿ ||
ದೊರಕಿದಘಮಂ ನೆನೆದು | ಧರಣಿಪತಿಯೊಂದುದಿನ |
ಮರುಗಿದನು ತನ್ನ ಮನದೊಳಗೆ                 ||೧೪||

ಭಾಮಿನಿ
ಅಕಟಕಟ ಬಾಂಧವರ ಕೊಂದೀ |
ಸಕಲ ವೈಭವವೇಕೆ ಕುಲಕಂ |
ಟಕನು ತಾನಾದೆನಲ ಪಿರಿದಪಕೀರ್ತಿಯಾಯಿತಲಾ ||
ಸುಖವದೆಲ್ಲಿಹುದೆನಗೆ ಮಹ ಪಾ |
ತಕವ ಪೊತ್ತಿಹ ಮೇಲೆ ಸಂತತ |
ಮುಕುತಿಯಾಗದೆನುತ್ತ ಚಿಂತಿಸುತಿರ್ದನವನೀಶ                     ||೧೫||

ರಾಗ ಮಧ್ಯಮಾವತಿ ತ್ರಿವುಡೆತಾಳ
ಅರಸನೀಪರಿ ಚಿಂತಿಸುತ್ತಿರ | ಲರಿತುವೇದವ್ಯಾಸ ಹಸ್ತಿನ |
ಪುರಕೆ ಬರಲಿದಿರ್ಗೊಂಡು ಮನ್ನಿಸೆ | ಹರುಷದಿಂ ಕುಳ್ಳೀರ್ದನೂ || ವರಮುನೀಂದ್ರ  ||೧೬||
ಧರೆಯಧಿಪನನುತಾಪದಲಿ ನಿಜ | ಶಿರವತಗ್ಗಿಸಿ ಮೌನದಲಿ ತಾ |
ನಿರಲುಕಂಡವನಿಪನ ಭಾವವ | ಪರಮಋಷಿ ಬೆಸಗೊಂಡನೂ || ನರಪತಿಯನೂ   ||೧೭||

ರಾಗ ತೋಡಿ ತ್ರಿವುಡೆತಾಳ
ಎಲೆಮಹೀಪತಿ ಚಿಂತೆಯೇಕೈ |
ಜಲಜನಾಭನಕರುಣದಿಂದಲಿ |
ಕಲಹಕಾನುವರಿಲ್ಲ ನಿನ್ನಲ್ಲಿ ||
ಇಳೆಯ ಪಾಲಿಪ ಹರುಷದೇಳ್ಗೆಗೆ |
ಕಳೆಯು ಗುಂದಿದೆ ತವ ಮುಖಾಂಬುಜ |
ತಿಳುಹುನಿಜ ಮರೆ ಮಾಚದೆನ್ನಲ್ಲಿ                 ||೧೮||

ವರ ಯಮಿಪನೀಕೇಳು ಲಕ್ಷ್ಮೀ |
ವರನ ಕರುಣದಿ ಭಾಗ್ಯವಿದೆ ಮ |
ತ್ತರಿಗಳುಪಹತಿಯಿಲ್ಲ ಚಿತ್ತವನೂ ||
ಸೆರೆವಿಡಿದುದನವರತ ಶೋಕದೊ |
ಳುರಿದುದೆನ್ನೊಡಲಿನ್ನು ಸೈರಿಸ |
ಲರಿಯೆನೆನೆ ಮುನಿನಾಥನಿಂತೆಂದ               ||೧೯||

ವಾರಿನಿಧಿರವಿಕಿರಣದುರಿಯಿಂ |
ದಾರಿಪೋದರೆ ಬಳಿಕಲದಕೇ |
ನೀರನಿತ್ತಪರಾರು ತ್ರೈಜಗದಿ ||
ಧಾರಿಣಿಪನೀ ಚಿಂತಿಸಿದಡಿ |
ನ್ನಾರು ಪರಿಹರಿಸುವರು ಪೇಳೆನೆ |
ಭೂರಮಣ ತಾಪಸನೊಳಿಂತೆಂದ                ||೨೦||

ಭಾಮಿನಿ
ತಂದೆಮುನಿಚಿತ್ತೈಸು ಶಿಶುತನ |
ದಿಂದ ನಮ್ಮನುಕಾಯ್ದ ಗಂಗಾ |
ನಂದನಂಗನುಚಿತವನೆನೆದೆವು ಕರ್ಣನನುರಣದಿ ||
ಕೊಂದೆವಗ್ರಜನೆಂದರಿಯದೆ ಮ |
ದಾಂಧರಂದದೊಳಖಿಳರನು ಸ |
ದ್ಭಾಂಧವರನುಳಿದಿಹುದರಿಂ ವನವಾಸ ಲೇಸೆಂದ                   ||೨೧||

ರಾಗ ಸಾಂಗತ್ಯ ರೂಪಕತಾಳ
ಅರಸನಿಂತೆನೆ ಮೌನಿ | ವರನೆಂದನೆಲೆಯುಧಿ |
ಷ್ಟಿರ ಶಾಸ್ತ್ರಾಗಮ ಪುರಾಣಗಳ ||
ಅರಿಯದ ಪ್ರೌಢನೇ | ಧರೆ ನಿನ್ನ ವಶವಾಯ್ತು |
ಹರುಷದಿ ಪಾಲಿಸಿನ್ನಿಳೆಯ              ||೨೨||

ದುರಿತವ ಪೊತ್ತಿಹೆ | ಧರೆವಶವಾಯ್ತೆಂಬ |
ಹರುಷವದೆನಗಿಲ್ಲವಿನ್ನು ||
ಮರುತಗಿತ್ತೊಡೆತನವನ್ನು ಕಾಂತಾರಕ್ಕೆ |
ತೆರಳಿ ಶ್ರೀ ಹರಿಯಧ್ಯಾನಿಪೆನೂ                  ||೨೩||

ಧಾತ್ರೀಶ ಲಾಲಿಸು | ಕ್ಷಾತ್ರಧರ್ಮವನೋಡೆ |
ಗೋತ್ರನಾಶನದಿಂದದುರಿತ ||
ಪಾರ್ಥಿವರಿಗೆ ಬಪ್ಪ | ವಾರ್ತೆಯೆಳ್ಳನಿತನಾ |
ನೀ ತ್ರಿಜಗದಲಿ ಕೇಳ್ದರಿಯೇ                        ||೨೪||

ಧರೆಯನೀ ಪಾಲಿಸ | ದಿರಲುನಿರ್ದೋಷಿಯೆ |
ಹರಹರಾ ಭೂಪನೀ ಬನಕೇ ||
ತೆರಳಲಪ್ಪುದೆ ಲೇಸು | ತೆರಳಯ್ಯ ಪಟ್ಟವ |
ಮರುತಜಗೀವೆವಾವಿನ್ನು                ||೨೫||

ಭಾಮಿನಿ
ಧರಣಿಪತಿ ಮರುಳಹೆಯ ಶಶಿಕುಲ |
ದರಸುಗಳು ಸತ್ಕ್ರತುವ ವಿರಚಿಸ |
ದಿರಲು ಸಲರದರಿಂ ಮಹಾಯeದಿ ಕರ್ಮಗಳ ||
ಭರದಿ ನೀನೆಸಗಿದರೆ ಕುಲಸಂ |
ಹರಣಕಿಲ್ಬಿಷಪೋಗಿ ಶುಚಿಯಹೆ |
ತ್ವರಿತದಿಂ ನೀ ತುರಗಮೇಧವ ಗೈವುದೆನಲೆಂದ                     ||೨೬||

ರಾಗ ಶಂಕರಾಭರಣ ಏಕತಾಳ
ಪರಮ ತಾಪಸೇಂದ್ರಕೇಳು | ಮೆರೆವವಾಜಿಮೇಧಪಿಂತೆ |
ವಿರಚಿಸಿದರ‍್ಯಾರೆಂಬುದ | ನರುಹೆನಲೆಂದ                  ||೨೭||

ಧರಣಿಪಕೇಳ್ಪಿಂತೆ ರಾಮ | ಧುರದಿ ದಶಶಿರನ ಕೊಂದ |
ದುರಿತಹರಣಕಾಗಿ ಗೈದ | ತುರಗಮೇಧವ                 ||೨೮||

ವಾರ್ಧಕ
ಹೇ ದಯಾನಿಧಿಯೆ ಕಲುಷೋದಧಿಯಪೀರ್ವಹಯ |
ಮೇಧವಡಬನ ಸೃಜಿಪ ವಿಧಿಯ ಪೇಳೆನೆ ಭೋಜ |
ನಾದಿ ದ್ರವ್ಯಗಳದ್ವಿಜರಿಂಗಿತ್ತು ಮಖಹಯದ ಪಣೆಗೆ ಲಿಖಿತವ ಬಂಧಿಸಿ ||
ಮೇದಿನಿಯ ಚರಿಸಿ ನೃಪರಂಗೆಲ್ದು ಕಪ್ಪಸಹಿ |
ತೈದಿ ಬಹುದೊಂದು ವರುಷದೊಳನಿತು ದಿವಸ ನೀ |
ಸಾಧಿಪುದು ಸತಿಯೊತ್ತಿನಿಂದೀರ್ದು ಕಾಮೇಚ್ಛೆಮರೆಯುತಸಿಪತ್ರವ್ರತವ    ||೨೯||

ಭೂರಮಣ ಲಾಲಿಸೈ ಗೌರಾಂಗಮಸಿತ ಪ್ರ |
ಭಾರಾಜಿತೈಕ ಶ್ರವಣೋರು ಪೀತಸುಪುಚ್ಛ |
ಭೂರಿಗಮನ ವಿದಿನಿತುವಾರುಹದ ಲಕ್ಷಣವಿದೆಂದು ಮುನಿನುಡಿಯೆ ಕೇಳ್ದು ||
ಈ ರೀತಿಯಿಂದ ಮುಖವೆಸಗುವಡೆ ಧನವಿಲ್ಲ |
ಧಾರಿಣಿಯೊಳರಸುವಡೆ ಕುರುನೃಪತಿಯಿಂದ ಮಿತಿ |
ಮೀರಿ ದಣಿದಿಹುದಿಳೆಯದೇಗೈವೆ ಶ್ರೀವರಂ ಸಹಿತಿಲ್ಲವೆಂದನೃಪನೂ        ||೩೦||

ರಾಗ ಕಾಂಭೋಜಿ ಝಂಪೆತಾಳ
ಋಷಿವರನೆ ಕೇಳು ನೀ | ನುಸುರಿದಂದದ ಹಯವು |
ವಸುಧೆಯೊಳಗೆಲ್ಲಿಹುದೊಕಾಣೇ ||
ಬಸವಳಿದರೆನ್ನನುಜ | ರಸಮಸಂಗರದೊಳೆನ |
ಲುಸುರಿದನು ಬಾದರಾಯಣನು                   ||೩೧||

ಧರಣೀಶ ಕೇಳ್ಪಿಂತೆ | ಮರುತ ನೃಪ ಹಯಮೇಧ |
ವಿರಚಿಸಿ ದ್ವಿಜರ್ಗೀಯೆಧನವ ||
ಪೊರಲಾರದವರಂದು | ತೊರೆದ ಧನವಿಹುದು ಹಿಮ |
ಗಿರಿಯೊಳದ ತರಿಸುನೀನರಸ                     ||೩೨||

ಅಹಹ ಯತಿಪಾಲ ಮರ್ಕಟಗೆ ಮದ್ಯವನಿತ್ತ |
ಡಹುದೆ ಕುಲಹತ್ಯ ಭವವನವ ||
ದಹಿಸಲೆಸಗುವ ಮಖವ ದ್ವಿಜರೊಡವೆಯಿಂ ಗೈದ |
ರಹುದೆ ಸದ್ಗತಿ ಕೀರ್ತಿಯೆನಗೇ                    ||೩೩||

ಪರಶುಧರ ಪೂರ್ವದೊಳು | ತರಿದು ನೃಪರನುಧರೆಯ |
ವರವಿಪ್ರರಿಂಗಿತ್ತುದಲ್ಲೈ ||
ಭರಿತ ಬಲರಹರು ಧರೆ | ಗರಸರದರಿಂ ಧನವ |
ತರಿಸಯ್ಯ ಗಿರಿಯ ತಟದಿಂದ                     ||೩೪||

ವಾರ್ಧಕ
ಧರೆಯಧಿಪಲಾಲಿಸೈ ಭದ್ರಾವತೀ ನಗರ |
ದರಸನಾಯೌವನಾಶ್ವನೊಳಿಹುದು ತುರಗವದ |
ತರಿಸುವುದು ಕಳುಹುನಿನ್ನನುಜನಹಭೀಮನಂ ಘನಪರಾಕ್ರಮಿಯಲ್ಲವೇ ||
ವರಕರ್ಣಸೂನು ವೃಷಕೇತುತಾಂ ಕಿರಿಬಲನೆ |
ಭರಿತಬಲನಾ ಘಟೋತ್ಕಚತನಯನಿಲ್ಲವೇ |
ಹರಿನೆನಸಿದರೆ ಬಾರನೇಕೈಕೊಳಧ್ವರವನೆನೆ ಭೀಮನಿಂತೆಂದನೂ                       ||೩೫||

ರಾಗ ಭೈರವಿ ಏಕತಾಳ
ಜನಪತಿ ತೊಡಗಧ್ವರವ | ಬಿಡು |
ಮನಸಿನೊಳಿಹ ಸಂಶಯವ ||
ಘನವಲ್ಲಿದು ವರಹಯವ | ತಹ |
ರೆನಗೀವುದು ವೀಳಯವ                ||೩೬||

ಕ್ಷಣದಲಿ  ಭದ್ರಾವತಿಯ | ಭೂ |
ಪನಗೆಲಿದಾತನ ಪಡೆಯ ||
ರಣದಲಿ ತರಿದಾಡುವೆನು | ತರು |
ವೆನು ತುರಗವ ನೋಡಿನ್ನು                        ||೩೭||

ತಂದೀಯದಡಶ್ವವನು | ಖತಿ |
ಯಿಂದಲಿಧರೆಯಮರರನು ||
ಕೊಂದ ದುರಿತ ಬರಲೆನಗೇ | ಸುರ |
ವೃಂದವೆ ಸಾಕ್ಷಿಯೀನುಡಿಗೇ                       ||೩೮||

ವಾರ್ಧಕ
ಅಗ್ರಭವ ಲಾಲಿಸಿನ್ನೇತರದು ಸಂದೇಹ |
ಶೀಘ್ರದಿಂ ಕಾರ್ಯಕುಜ್ಜುಗಿಸು ಸಾಹಾಯವ ಸ |
ಮಗ್ರಧನ ಮಖಹಯವ ಸಹತೋರಿದಂ ಬಾದರಾಯಣಂ ನಮಗೆನ್ನಲು |
ತಾ ಗ್ರಹಿಸುತಿನಿತ ವೃಷಕೇತು ತಾನಿದಿರೆದ್ದು |
ವಿಗ್ರಹಂ ತನಗೊದಗಿತಿನ್ನೆನುತಲುಬ್ಬಿವಾ |
ಜಿ ಗ್ರಹಣಕನುವಾಗಿ ನಿಂದು ಧರ್ಮಜಗೆರಗಿ ಪೌರುಷದೊಳಿಂತೆಂದನೂ   ||೩೯||

ರಾಗ ಮಾರವಿ ಏಕತಾಳ
ಬಿಡುಬಿಡುಯೋಚನೆ | ಕೊಡುತನಗಪ್ಪಣೆ |
ಪೊಡವಿಪತಿಗಳೊಡೆಯ ||
ನಡೆವೆ ಮರುತಸುತ | ನೊಡನೆ ಮೆರೆವ ಹಯ |
ಪಿಡಿದೈತಹೆನಯ್ಯ                        ||೪೦||

ಗಂಧವಹಾತ್ಮಜ | ನೆಂದ ನುಡಿಗೆಡರು |
ಬಂದರೆ ರವಿಸುತಗೇ ||
ಕಂದನ ಕೇಳರಿ | ವೃಂದವರಿದು ಬಹೆ |
ನಿಂದಾಂ ನಿನ್ನೆಡೆಗೇ                      ||೪೧||

ರಾಗ ಶಂಕರಾಭರಣ ಏಕತಾಳ
ನಂದನ ಕೇಳ್ನೀನಿನ್ನೆಮಗೆ | ಮುಂದೆ ಸೋಮಕುಲದೇಳಿಗೆಗೆ ||
ಕಂದ ನಿನ್ನ ಕಳುಹಲಾರೆ | ನಿಂದು ಸಮರಕೆ ||
ಹಿಂದೆ ಕೇಳ್ನಿನ್ನಯ್ಯ ಜ್ಯೇಷ್ಟ | ನಂದರಿಯದೆ ತರಿದೆವವನ |
ನೆಂದರೇ ವೃಷಧ್ವಜತಾ | ನಂದು ನುಡಿದನೂ              ||೪೨||

ವಾರ್ಧಕ
ತಂದೆಕೇಳನುಜರಾಗಿರ್ಪ ನಿಮ್ಮೈವರಂ |
ಪೊಂದಿರದೆ ಮಜ್ಜನಕ ಕಡುದ್ರೋಹಗೈದನದ |
ರಿಂದಾತನೆಸಗಿದಪರಾಧಮಂ ಪರಿಹರಿಸದಿರಲು ಧಾರಿಣಿಯೊಳವನ ||
ಕಂದನಾನಿರ್ದೇನುಫಲವೆನ್ನ ಕಳುಹು ಧುರ |
ಕಿಂದು ಪವನಜಗೆ ಬೆಂಬಲವಾಗಿ ರಿಪುಗಳಂ |
ಕೊಂದುನಿಜ ಶೌರ‍್ಯಮಂ ತೋರ್ಪೆಕೊಡು ವೀಳಯವನೆಂದುಮಣಿದಂ ಪದದೊಳು ||೪೩||

ಕಂದ
ಪರಿಕಿಸುತವರೀರ್ವರ ಮನ |
ದಿರವಂ ವರಮೇಘನಾದನಾಕ್ಷಣ ಬರುತಂ ||
ಶಿರವಂ ಚಾಚುತ ಧರ್ಮಜ |
ಗಿರದೊಯ್ಯನೆ ತಾನಿಂತೆಂದಂ ಭರದಿಂದಂ               ||೪೪||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಅರಸ ಕೇಳ್ಸಂಗರದಿ ರಿಪುಗಳ | ತರಿವೆನಾನೆಂಬಾಳುತನವೆನ |
ಗಿರದು ಮದ್ಬಿನ್ನಪವ ಲಾಲಿಸು | ಕರುಣದಿಂದ             ||೪೫||

ಆವಪರಿಯಿಂದಾದರಿನ್ನೀ | ಪಾವಮಾನಿಗೆ ವಾರುಹವನೀ |
ಭೂವಳಯದೊಳಗೆಲ್ಲಿರಲು ತಂ | ದೀವೆ ಜವದಿ                       ||೪೬||

ಈ ನುಡಿಗೆ ತಪ್ಪಿದರೆ ತವಪದ | ದಾಣೆಸರಿದಪೆನುಗ್ರನರಕಕೆ |
ನೀನೆನಗೆ ವೀಳಯವನೀಯೈ | ಮಾನವೇಂದ್ರ                        ||೪೭||

ಭಾಮಿನಿ
ಮರುತಸಂಭವ ಮೊಮ್ಮನೆಂದುದ |
ಕರಸ ಹರುಷಿಸಲೆಂದ ಪವನಜ |
ಹರಿಯ ದಯವಿರೆ ಗೆಲ್ವೆನೆನಲಿಂತೆಂದ ಮುನಿವರನು ||
ಧರಣಿಪತಿ ತವ ಭಾಗ್ಯಕೆಣೆಯಹ |
ರಿರುವರೇಕೈ ಸೇರಿತಿನ್ನಾ |
ತುರಗವೀ ಮಾರುತಿಯು ಪೇಳಿದ ಮೇಲೆ ಬಿಡುಭಯವ                        ||೪೮||

ರಾಗ ಕೇತಾರಗೌಳ ಅಷ್ಟತಾಳ
ಮೇದಿನೀಪತಿ ಕೇಳು | ಮಾಧವನನು ನೀವಿ |
ನೋದದಿ ಬರಿಸಿಕೊಂಡು ||
ಆ ದಯಾಬ್ಧಿಯನುಜ್ಞೆ | ಯಾದಂತೆ ಮುಂದಿನ್ನು |
ಸಾಧಿಸುಕಾರ‍್ಯವನು                      ||೪೯||

ತುರಗವ ತಂದನಂ | ತರದಿ ಧನವತೋರ್ಪೆ |
ಬರುವೆ ನಿಶ್ಚಯನಿಮ್ಮನು ||
ಹರಿಯೆಪಾಲಿಸಲೆಂದು | ತೆರಳಲು ಮುನಿಯತ್ತ |
ಧರಣಿಪನಿರ್ದನಿತ್ತ                        ||೫೦||

ಶತಮಖನುತ ಲಕ್ಷ್ಮೀ | ಪತಿಯಿಲ್ಲದಧ್ವರ |
ಹಿತಮಾಹುದೇ ಮನಕೆ ||
ಅತಿಜವದಿಂ ಕಿರೀಟಿಯ ಕಳುಹುವೆನೆಂಬ |
ಮತದಿ ಧ್ಯಾನಿಸುತಿರ್ದನು             ||೫೧||

ಶ್ರೀರಮಾಧವ ಭಕ್ತೋ | ದ್ಧಾರಪಾಲಿಪುದೆನೆ |
ದ್ವಾರಕೆಯೊಳಗರಿತು ||
ಭೂರಿಸಂಭ್ರಮದಿಂದ | ಗಾರುಡಧ್ವಜನಾಗಿ |
ಸಾರಸಾಂಬಕ ಬಂದನೂ               ||೫೨||