ಭಾಮಿನಿ
ಗುಣವನಧಿಯಹ ಫಲುಗುಣನೆ ಕೇ |
ಳಿನಿತುಮನ ಮುನಿಸಿಲ್ಲ ನಿನ್ನೊಳು |
ನಿನಗೆ ನಾನೆರಡೆಣಿಸೆ ನುಡಿಸಟೆಯಲ್ಲ ಜಯವಹುದು ||
ಎನುತ ಮತ್ತಾವಹ್ನಿ ಕುಂತೀ |
ತನಯನನು ಬೀಳ್ಗೊಂಡು ಮಾವನ |
ಸನಿಹಕೈದುತಲೆಂದ ವಿನಯದೊಳತಿ ಹಿತದೊಳಿಂತು              ||೪೧೫||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಮಾವ ಲಾಲಿಸು ಬೇಡ ಬಿಡುಬಿಡು | ನೀ ವಿರೋಧವ ನರನೊಡನೆ ಸ |
ದ್ಭಾವದಿಂದಿಹುದೊಳಿತು ಮುಂದಕೆ | ಭೂವರೇಣ್ಯ                   ||೪೧೬||

ಸಂಗರವ ಕೊನೆಗೊಳಿಸಿ ಮರೆವ ತು | ರಂಗವನು ಕೊಂಡೊಪ್ಪಿಸಾತನ |
ಸಂಗಡವೆ ಪೋಪುದು ಸಹಾಯಕೆ | ಹಿಂಗದಿನ್ನು                      ||೪೧೭||

ನಿನ್ನ ಮಾತಿನೊಳೈದಿ ಪಾರ್ಥನು | ಸೈನ್ಯವನು ಪರಿಭವವಗೊಳಿಸಲು |
ಯೆನ್ನಮರೆಯನು ಹೊಕ್ಕಮೇಲೇ | ನಿನ್ನುಕದನ                       ||೪೧೮||

ತನ್ನ ಪಂಚಪ್ರಾಣ ಪಾಂಡವ | ರೆನ್ನುತಲಿ ಹರಿಪಾಲಿಸುವನವ |
ರನ್ನು ಸಂತತ ಬಾರದಪಜಯ | ವಿನ್ನವರ್ಗೆ                ||೪೧೯||

ವಾರ್ಧಕ
ಧರಣೀಶ ಲಾಲಿಸಿದರೊಳ್ ಸುರಪನಂದನಂ |
ಹರಿಹರಾದ್ಯರ ಕದನದೊಳು ಮೆಚ್ಚಿಸಿದ ಧೀರ |
ನಿರುವನವನಂ ಗೆಲ್ವರ‍್ಯಾರು ನೀನದರಿಂದ ಹಯವನಾತನಿಗೊಪ್ಪಿಸೀ ||
ಹರಿಯೊಲುಮೆಯಂ ಪಡೆಯೆನುತ್ತ ಸಂತೈಸುತ್ತ |
ಲರಸನಂ ಪುರಕೆ ಮರಳಿಸಲಿತ್ತಲಾ ಪಾರ್ಥ |
ಭರದಿ ನಾರಾಯಣಾಸ್ತ್ರವನೆಚ್ಚು ಶಮನಿಸಿದನುರಿಯಡಾವರಿಯನಂದು     ||೪೨೦||

ರಾಗ ಸವಾಯ್ ಏಕತಾಳ
ಧರಣಿಪ ತನ್ನಯ | ಪುರಕೈದುತಲಾ |
ನರಗೀವಡೆ ಬಹು ವಸ್ತುಗಳ |
ನೆರಹುತಲಿರಲವ | ನರಸಿ ಜ್ವಾಲೆ ಬಂ |
ದರಸನೊಳೆಂದಳೀ ಮಾತುಗಳ                  ||೪೨೧||

ರಾಗ ಸುರುಟಿ ಏಕತಾಳ
ಏನಿದೇನು ಪ್ರಿಯ | ಸಮರವಿ | ಧಾನ ಸುಗುಣರೆರೆಯ ||
ನೀನೀ ವಸ್ತುಗ | ಳಾ ನರಗೀವುದೆ |
ದೀನನಾಗಿ ಕ್ಷಾ | ತ್ರಾನ್ವಯನೆನಿಸಿ                ||೪೨೨||

ಸರಸಿಜ ಮುಖಿ ಕೇಳೆ | ಕಪ್ಪವ | ತೆರವೆನುನಾ ನಾಳೆ ||
ಭರದೊಳವನ ಬಲ | ಹರಿಸಲು ಪಾವಕ |
ಗೆರಗಿಹನದರಿಂ | ಧುರಬಿಡಲರುಹಿದ                        ||೪೨೩||

ಆತನ ನುಡಿಗಾಗಿ | ನೀನಿ | ನ್ನೇತಕೆ ಮರುಳಾಗಿ ||
ಸೋತೆನೆನುತ ಪುರು | ಹೂತಸುತಗೆ ನಾ |
ನಾತರ ವಸ್ತುವ | ನೇತಕೊಪ್ಪಿಪುದು             ||೪೨೪||

ರಾಗ ಕೇತಾರಗೌಳ ಝಂಪೆತಾಳ
ಮರುಳಲ್ಲ ಕಾಂತೆ ಕೇಳು | ತ್ರೈಲೋಕ್ಯ |
ಭರಿತ ಹರಿಯಾಣತಿಯೊಳು ||
ವಿರಚಿಸುವ ಯಮಜಾತನು | ಮಖವ ಸಹ |
ಕರಿಸದಿರಲುಚಿತವೇನು                 ||೪೨೫||

ವಾರುಹವ ಕೊಡದೆ ಮತ್ತಾ | ಪೌರುಷವ |
ದೋರುಕ್ಷಾತ್ರಿಯನೆನುತ್ತ ||
ಸೂರೆಗೊಂಬುದು ಜಯವನು | ಸಲ್ಲದಡೆ |
ಸೇರುವುದು ಸುರಪುರಿಯನು                      ||೪೨೬||

ಭಾಮಿನಿ
ಇಳೆಯಧಿಪನಹ ನೀಲಕೇತಗೆ |
ಹಲವು ಪರಿಯಿಂ ಜ್ವಾಲೆ ಬೋಧಿಸೆ |
ಕಲಹವನು ನಿರ್ಧರಿಸಿ ಸೂರ್ಯೋದಯವನೀಕ್ಷಿಸುತ ||
ಬಲಯುತನು ತಾನಿರ್ದ ಕೇಳೈ |
ಲಲನೆಯರ ಬಲುಹೆಂತೊ ಪೇಳುವ |
ಡಳವೆ ಕಾಂತೆಯ ಮತದಿ ಛಲವಿಡಿದಿರ್ದನಂದಿನೊಳು             ||೪೨೭||

ವಾರ್ಧಕ
ಅರಸ ಕೇಳನಿತರೋಳ್ ಪೂರ್ವಾದ್ರಿ ಭೂವರಂ |
ವಿರಹದುರಿಯಿಂ ಪೊರಳ್ದಳಲುತಿಹ ಕೋಕಗಳ |
ಮೊರೆಯನಾಲಿಸುತಲಳಿಕುಲದ ಬಂಧನವ ನೆನೆನೆನೆದು ಮನ್ಮಥ ಶಬರನ ||
ಮೆರೆವ ಜಯಸಿರಿಯೆಂಬ ತೆರದೊಳಿಹ ತಮನಿಶಾ |
ಚರಿಯ ತರಿದಪೆನೆಂದ ಕನಲಿ ಕೆಂಪಿಡಿದು ಕ |
ಣ್ದೆರೆಯೆ ಪೊರಮಡುವ ಕೆಂಗೆಂಡವೆನೆ ತರಣಿಯುದಿಸಿದ ಪೂರ್ವ ಪರ್ವತದೊಳು    ||೪೨೮||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಮಿತ್ರನುದಯದೊಳೆದ್ದು ಪಟುಭಟ | ಮೊತ್ತವನು ಶೇಖರಿಸಿ ವಹಿಲದಿ |
ಮತ್ತೆ ಮಾಹೀಷ್ಮತಿ ಪುರಾಧಿಪ | ನತ್ತ ಪೊರಟು                       ||೪೨೯||

ತುರಗವನು ಬಿಡೆ ಬವರಕನುವಾ | ಗಿರಲೆನುತ ಪಾರ್ಥಂಗೆ ಸೂಚಿಸ |
ಲರಿತು ನರನಾಕ್ಷಣದಿ ಸೈನ್ಯವ | ನೆರೆದ ಭರದಿ                       ||೪೩೦||

ಪುರವ ಮುತ್ತುವದೆನುತ ಮುಂದ್ವರಿ | ದಿರಲು ನೀಲಧ್ವಜನು ಕಾಣುತ |
ಧುರವೆಸಗುತಿರಲಾ ಪ್ರವೀರಗೆ | ನರನು ನುಡಿದ                     ||೪೩೧||

ರಾಗ ಭೈರವಿ ಅಷ್ಟತಾಳ
ಆರೆಲೊ ನೃಪಕುವರ | ಸಂಗ್ರಾಮದಿ | ವೀರ ನೀನಹೆಯ ಪೋರ ||
ಸಾರವಲ್ಲದು ಕೆಲ | ಸಾರುತ್ತ ನಮ್ಮಯ | ವಾರುಹವದನೊಪ್ಪಿಸು                        ||೪೩೨||

ವಾರುಹವನು ಬಂಧಿಸಿ | ಬಿಡುವುದುಂಟೆ | ಸಾರವಲ್ಲಿದು ಸಾಹಸಿ ||
ಧಾರಿಣಿಯಪತಿಯ ಕು | ಮಾರಕ ವೀರ ಪ್ರ | ವೀರ ನಾನಹೆನು ಕೇಳು      ||೪೩೩||

ಮರುಳೆಲಾ ತ್ರೈಜಗದಿ | ಪ್ರವೀರನಾ | ನಿರಲೀ ಮಹೀತಳದಿ ||
ವರಧನಂಜಯನೊಳು | ಬರಿದೆ ಪ್ರವೀರನೆಂ | ದರೆ ಪೆಸರಡಗಿಪೆನೊ       ||೪೩೪||

ಘನವೆ ನೀ ಕೇಳಾದರೆ | ಮಿಕ್ಕಹಿತಕಾ | ನನಧನಂಜಯ ನಾನಿರೆ ||
ನಿನಗೀ ಪೆಸರುಸಲ್ಲ | ದನುವರದಲಿ ತೆಗೆ | ವೆನು ಕೇಳೆಂದೆಚ್ಚನಾಗ         ||೪||

ರಾಗ ಮಾರವಿ ಏಕತಾಳ
ಸಣ್ಣವ ನೀನೆನು | ತೆಣ್ಣಿಸಿ ಬಿಟ್ಟರೆ | ಗಣ್ಯವಿಲ್ಲದಿಂತು ||
ನಿನ್ನಯ ಗರ್ವವ | ನೆನ್ನೊಳು ತೋರ್ಪುದೆ | ಯೆನ್ನುತ ಶರವೆಸೆದ           ||೪೩೫||

ತಡೆಗಡಿದೊಡನದ | ಬಿಡಲು ಶರೌಘವ | ಕಡಿದಾ ಫಲುಗುಣನೂ ||
ಬಿಡೆ ದಿವ್ಯಾಸ್ತ್ರವ | ದೊಡನೆ ಪ್ರವೀರನ | ತುಡುಕಿ ಕೆಡಹೆ ಶಿರವ              ||೪೩೬||

ಕಂದ
ತರಳ ಪ್ರವೀರನ ಶಿರ ಧರೆ |
ಗುರುಳಲು ಕಾಣುತಲಾ ನೀಲಧ್ವಜನಾಗಂ ||
ಹರ ಹರಯೆನುತೈತರುತಂ |
ಶಿರವಂ ಮುಂದಾಡುತಲೆಂದಂ ಶೋಕಿಸುತಂ                        ||೪೩೭||

ರಾಗ ಕಾಂಭೋಜಿ ಆದಿತಾಳ
ಮಗನೆ ನಿನ್ನ | ಅಗಲಿ ಪುರವ | ಪೊಗುವೆನೆಂತು ಚಿನ್ನ |
ಸುಗುಣರನ್ನ | ಜಗದೊಳನ್ಯ | ವಿಗಡರಿಹರೇನೆನ್ನ                     ||೪೩೮||

ಧುರದಿ ಶೌರ‍್ಯ | ದಿರವದೋರಿ | ನರನ ಹತಿಯೊಳಿಂದು ||
ಧರೆಗುರುಳಿದೆ ಬರೆದಪಣೆಯ | ಕ್ಕರದ ವಿಧಿಯದಿಂತು              ||೪೩೯||

ಕಂದನೀ ಬಾರೆಂದು ಮುದದಿ | ಮುಂದೆ ಕರೆವೆನಾನ್ಯಾರನು ||
ಇಂದ್ರಸುತನೊ | ಳಿಂದು ಜಯವು | ಹೊಂದದೆ ಹೋಯಿತೇನು?           ||೪೪೦||

ವೀತಿ ಹೋತ್ರ | ನೀತಿನುಡಿಯೆ | ಮಾತ ಕೊಳದೆ ಬಗೆಗೆ ||
ಘಾತಿಸಿದೊಲಾ | ಯ್ತೀತೆರದಿಮ | ನ್ನಾಥೆಯೆಂದ ನುಡಿಗೆ                       ||೪೪೧||

ಭಾಮಿನಿ
ಪರಿಪರಿಯೊಳಾ ನೃಪತಿ ಬಾಲನ |
ಶಿರವನೆಗಹುತ ಮುದ್ದಿಸುತ ಮಿಗೆ |
ಕರದೊಳಪ್ಪುತ ರೂಪಗುಣ ವಿಕ್ರಮವ ಬಣ್ಣಿಸುತ ||
ಮರುಗಿ ಮನದೊಳು ಬಳಿಕ ಕೋಪೋ |
ತ್ಕರುಪ ಶಿಖಿ ಮಸಗಲ್ಕೆರೌದ್ರದಿ |
ಧರಣಿಪತಿ ನೀಲಧ್ವಜನು ಫಲುಗುಣನಿಗಿದಿರಾದ                       ||೪೪೨||

ರಾಗ ಭೈರವಿ ಏಕತಾಳ
ಪೂತುರೆ ಪ್ರತಿಭಟ ನಿನ್ನ | ಶರ | ವ್ರಾತವ ಬಿಡು ಪರಿಕಿಪೆನ್ನಾ ||
ಘಾತಿಸಿದೆಯ ಮಮಸುತನ | ಬಿಡೆ | ನೈತೊಡಗಿದೆ ಬಲುಕದನ             ||೪೪೩||

ಸೊಕ್ಕಿನ ನುಡಿಯಾಡದಿರು | ಜಯ | ಸಿಕ್ಕದು ನೀ ಕೈದೋರು ||
ತಕ್ಕುದ ಶಿಖಿ ಪೇಳಿದರೆ | ಮನ | ಕಿಕ್ಕದೆ ಬಂದಿಹೆ ಭಳಿರೆ                       ||೪೪೪||

ಮಂತ್ರಿ ಸಹೋದರರುಗಳ | ಸುತ | ರಂ ತಡೆಗಡಿದಹ ಖೂಳ ||
ಯೆಂತಾದರು ಬಿಡೆ ನಿನ್ನ | ಶಿರ | ವಂ ತರಿವೆನು ನಿಮಿಷದಿ ನಾ              ||೪೪೫||

ಸಂಗರದೊಳಗಳಿದಿಹಪರ | ತಿಳಿ | ದಂಗವರಿಯದೀ ಸಮರ ||
ಹಿಂಗದೆ ತೊಡಗಿದೆ ಬರಿದೆ | ಜಯ | ವಂ ಗೊಳುವಾಸೆಯದಿಹುದೆ          ||೪೪೬||

ಖತಿಯಿಂ ನೀಲಧ್ವಜನೂ | ಶರ | ತತಿಯ ಸುರಿಸೆ ಫಲುಗುಣನೂ ||
ಪ್ರತಿ ಶರದಿಂ ಕಡಿದದನೂ | ಭೂ | ಪತಿಗಿಡೆ ದಿವ್ಯಾಸ್ತ್ರವನೂ                  ||೪೪೭||

ಭಾಮಿನಿ           
ಕಲಿಧನಂಜಯ ಕನಲಿತಾಮ |
ತ್ತೆಳೆದು ದಿವ್ಯಾಸ್ತ್ರವನೆಸೆಯೆ ಬಂ |
ದಿಳೆಯಧಿಪನನು ಕೆಡಹಿ ಮೂರ್ಛಿಸೆ ಕಾಣುತದನಂದೂ ||
ಅಳಲಿ ಮನದೊಳು ಸಾರಥಿಯು ಪುರ |
ವಳಯಕೈದಿಸೆ ರಥವನಾಕ್ಷಣ |
ಬಳಿಕ ನೃಪ ತಿಳಿದೆಚ್ಚರಿತು ತಾನೆಂದು ಮನಮರುಗಿ                ||೪೪೮||

ರಾಗ ನಾದನಾಮಕ್ರಿಯೆ ಅಷ್ಟತಾಳ
ಹರ ಹರ ಸವನಿಸಿತೀಪರಿ | ಕಷ್ಟ |
ವರುಹುವದೇನೆನ್ನ ಜಯಿಸಿರಿ ||
ಬರಿದಾಯ್ತು ನರನ ಸಂಗರದೊಳು | ಶೌರ‍್ಯ |
ಮೆರೆಯದಾಯಿತು ಧುರಗಲಿಯೊಳು             ||೪೪೯||

ವೀತಿ ಹೋತ್ರನ ನೀತಿ ಬೋಧೆಯ | ಮನ |
ಕೇತಾರದಿಂತಾಯ್ತು ನಿಶ್ಚಯ ||
ಸೋತೆನು ಸತಿಯಮಾತಿನೊಳಾನು | ಕಡು |
ಪಾತಕಿಯವಳಿಂದ ಕೆಟ್ಟೆನು                        ||೪೫೦||

ಸುತ ಸಹೋದರ ಬಂಧುವರ್ಗವ | ಚಮೂ |
ಪತಿ ಸಚಿವಾದಿ ನಿಕಾಯವ ||
ಪ್ರತಿಭಟ ನರನಸ್ತ್ರಕಿತ್ತೆನೂ | ಮುಂದೆ |
ಮತಿಗಾಣದಾದೆನು ಫಲವೇನು                   ||೪೫೧||

ದುಷ್ಟೆಘಾತಕಿ ಜ್ವಾಲೆಯಾದಳು | ಯಿಂಥಾ |
ಕಷ್ಟವನೆನಗೊದಗಿಸಿದಳು ||
ಭ್ರಷ್ಟೆ ಸಲ್ಲಳು ತನಗೆನುತ್ತ | ಬಹು |
ಸಿಟ್ಟಿನಿಂದೆದ್ದೊಳ ಸರಿಯುತ್ತ                       ||೪೫೨||

ರಾಗ ಕಾಂಭೋಜಿ ಝಂಪೆತಾಳ
ಎಲೆ ದುಷ್ಟೆ ಜ್ವಾಲೆ ನೀ | ನಿಲಬೇಡ ನಡೆಗಾಢ |
ಕಿಳುಹಿಕುಟಿರಿವನೆನಗೆ ನಿನ್ನೆ ||
ಫಲುಗುಣನ ಹಯವ ನವ | ಗೊಲಿದೀಯದಂತೆಸಗು |
ತಲೆ ಕೆಡಿಸಿದೆಯಲ ಕಡುಪಾಪಿ                    ||೪೫೩||

ಹರಿಯ ಮೈದುನನೊಡನೆ | ಧುರವೆಸಗಲರುಹಿ ಸೋ |
ದರ ಸುತರು ಸಚಿವಾಪ್ತರುಗಳ ||
ಬರಿದೆ ಕೊಲಿಸಿದೆಯೆಂದು | ಧರಣಿಪತಿ ಪುರದಿಂದ |
ಹೊರಡಿಸಿದನಾಕ್ಷಣದೊಳವಳ                    ||೪೫೪||

ಬಂಧಿಸಿದ ಮಖ ಹಯವ | ನಂದು ತರಿಸುತ ಘೋಷ |
ದಿಂದ ಕಪ್ಪವ ಹೊರಿಸಿ ಕೊಳುತ ||
ಇಂದ್ರನಂದನನೆಡೆಗೆ | ಬಂದು ಕೈಮುಗಿದನಿತ ||
ನಿಂದೊಪ್ಪಿಸಿದನು ಸಂತಸದಿ                      ||೪೫೫||

ಶ್ವೇತವಾಹನ ನೀಲ | ಕೇತಗುಚಿತವನಿತ್ತು |
ಪ್ರೀತಿಯಿಂ ಮನ್ನಿಸಲ್ಕಾಗ ||
ಗೀತ ನೃತ್ಯಾದಿ ವಿವಿ | ಧಾತಿಶಯ ಜಯರವದ |
ನೂತನೋತ್ಸಾಹವದು ಮೆರೆಯೆ                  ||೪೫೬||

ವಾರ್ಧಕ
ಧರಣಿಪತಿ ಕೇಳಿತ್ತ ಜ್ವಾಲೆ ತಾ ಪುರದಿಂದ |
ಪೊರಟಾಗ ಬಂದು ತನ್ನನುಜನುನ್ಮುಖಗರುಹೆ |
ಹರಿಯ ಹಗೆ ಸಲದೆಂದು ಧಿಕ್ಕರಿಸಲಲ್ಲಿಂದ ಕೃತ್ರಿಮವನೆಣಿಸಿ ಬಳಿಕ ||
ಸುರನದಿಯ ತಡಿಗೈದಿ ನೀ ದೋಷಿಯಹೆ ನಿನ್ನ |
ತರಳ ಭೀಷ್ಮನ ನರಂ ತರಿದನೆನೆ ಮಮ ಸುತನ |
ಹರಿಸಿದನ ತಲೆಯನಾತನಸುತಂ ತಿಂಗಳೊಳು ತರಿಯಲೆನ್ನುತ ಶಪಿಸಲು           ||೪೫೭||

ಭಾಮಿನಿ
ಕೃತ್ರಿಮದ ನುಡಿಯಿಂದ ಪಾರ್ಥಗೆ |
ಮತ್ತೆ ಗಂಗಾದೇವಿಯಿಂ ಕೊಡಿ |
ಸುತ್ತ ಶಾಪವ ಬಳಿಕ ತಾನಂಬಾಗಿ ಬಹೆನೆನುತ ||
ಚಿತ್ರಭಾನು ಪ್ರವೇಶಮಂ ಗೈ |
ಯುತ್ತ ಜ್ವಾಲೆಯು ಬಭ್ರುವಾಹನ |
ನುತ್ತಮದ ಮಾಡಿಗೆಯೊಳಿರ್ದಳು ವೈರತನದಿಂದ                   ||೪೫೮||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಕೇಳು ಧರಣಿಪ ಬಳಿಕಪಾರ್ಥನು |
ನೀಲಕೇತಾದ್ಯರನು ಕೂಡುತ |
ಪಾಳಯವು ಸಹಿತೈದೆ ಮುಂದಕೆ | ಸಾಲುವಿಡಿದೂ                  ||೪೫೯||

ಮತ್ತೆ ತೆಂಕಣದವನಿಪರ ಗೆಲಿ |
ಯುತ್ತ ಕಪ್ಪವಗೊಳುತ ತನ್ನಯ |
ಪತ್ತನಕೆ ಬಂದಣ್ಣಗೊಪ್ಪಿಸ | ಲರ್ಥಿಯಿಂದ                  ||೪೬೦||

ಸಿರಿವರನ ಕೃಪೆಯಿಂದ ಧರ್ಮಜ |
ತುರಗ ಮೇಧವ ರಚಿಸಿದುರಿತವ |
ಹರಿಸಲಂಬರದಿಂದ ಪೂಮಳೆ | ಗರೆಯೆ ಸುರರು                     ||೪೬೧||

ಕ್ಷೀರವಾರಿಧಿ ಶಯನನವ ಶೃಂ |
ಗಾರ ಪೀಠದೊಳೊಪ್ಪಿರಲ್ಕಾ |
ನಾರಿಯರು ತಂದೆತ್ತಿ ಬೆಳಗಿದ | ರಾರತಿಯನೂ                      ||೪೬೨||

ರಾಗ ಢವಳಾರ ಏಕತಾಳ
ಕ್ಷೀರಸಾಗರವಾಸ ಹರಿಗೇ | ಚಾರು ಪೀತಾಂಬರ ಧರಗೇ
ಮೂರು ಜಗವನುದರದಿ ಧರಿಸಿದಗೇ |
ಘೋರ ಕಲುಷ ಭಯಪರಿಹರಿಸುವಗೇ ||
ವಾರಿಜ ನೇತ್ರಗೆ | ಭೂರಿ ಕೃಪಾಬ್ಧಿಗೆ ||
ನೀರೆಯರಾರತಿಯ || ಬೆಳಗಿದರೂ || ಶೋಭಾನಂ                  ||೪೬೩||

ದೇವರ ದೇವನಾದವಗೇ | ಪಾವನ ಚರಿತ ಮಾಧವಗೇ ||
ಸಾವಿರ ನಾಮದನಂತ ಮಹಿಮನಿಗೆ |
ದೇವಕಿಸುತನೆನಿಸಿದ ಚಿನ್ಮಯಗೆ ||
ಭಾವಜನಯ್ಯಗೆ | ಭಾವಕಿಯರು ಹೊಸ |
ಹೂವಿನಾರತಿಯ || ಬೆಳಗಿದರೂ | ಶೋಭಾನಂ                      ||೪೬೪||

ವಾರ್ಧಕ
ಕ್ಷಿತಿನಾಥಲಾಲಿಸೀ ಪರಿಯೊಳಾರತಿಯೆತ್ತಿ |
ಸತಿಜನಂ ಮರಳಲ್ಕೆ ಕಂಸಾರಿಸಹ ಯಮಜ |
ನತಿಶಯಾನಂದದಿಂದಿರುತಿರ್ದನಿಭಪುರದೊಳರುಹಲೇನಚ್ಚರಿಯನೂ ||
ಶೃತಿಗಗೋಚರನಾದ ಶ್ರೀಕಾಂತನಂ ಪಾಂಡು |
ಸುತರೊಲಿಸಿಕೊಂಡೀರ್ದರೀ ಶುಭ ಚರಿತ್ರಮಂ |
ಹಿತದಿ ಕೇಳೆಂದ ವೈಶಂಪಾಯ ಜನಮೇಜಯಂಗೊರೆದ ಸತ್ಕಥೆಯನೂ   ||೪೬೫||

ಪೊಡವಿ ಜನರರಿವಂತೆ ವರ ಯಕ್ಷಗಾನ ಪರಿ |
ವಿಡಿದು ದಕ್ಷಿಣ ಕನ್ನಡದ ಜಿಲ್ಲೆಯುಪ್ಪಿನಂ |
ಗಡಿಯೆನಿಪ ತಾಲೂಕಿನಮರಮಾಗಣೆಯೊಳಿಹ ಪಡ್ನೂರೆನಿಪ ಗ್ರಾಮದಿ ||
ಬಿಡದೆ ಪರಿಶೋಭಿಪಜ್ಜನ ಗದ್ದೆಯಲ್ಲಿರ್ಪ |
ಪೊಡವಿಸುರಕುಲಜ ಸುಬ್ರಾಯಾಖ್ಯ ಭೂಸುರಂ |
ಪಡೆದ ಬಾಲಕ ಶಂಕ್ರನಾರಾಯಣಾಖ್ಯ ನಾಂ ಹರಿದಯದಿ ಗೈದೆನಿದನೂ  ||೪೬೬||

ಭಾಮಿನಿ
ಪೇಳಿದೀ ಕೃತಿಯೊಳಗೆ ತಪ್ಪಿರೆ |
ಶೀಲರಿದ ತಿದ್ದುವುದು ದಯದಿಂ |
ಮೇಲೆ ಹಂಸಕ್ಷೀರನ್ಯಾಯದಿ ಬೇಡಿಕೊಳುತಿಹೆನು ||
ಬಾಲದುರ್ಗಾಧವ ಸದಾಶಿವ |
ಶ್ರೀಲಲಾಮ ಮುಕುಂದ ಶ್ರೀವನ |
ಮಾಲಕೃಷ್ಣರ ನಮಿಪೆ ಪಾಲಿಸಲೆನ್ನನನವರತ             ||೪೬೭||

ರಾಗ ಮೋಹನ ಝಂಪೆತಾಳ
ಮಂಗಳಪದ

ಮಂಗಲಂ ಕರಿಮುಖಗೆ | ಮಂಗಲಂ ಹರಿಸಖಗೆ |
ಮಂಗಲಂ ವಿಧಿಮನೋಹರೆ ವಾಣಿಗೆ ||
ಮಂಗಲಂ ಲೋಕಮಾತೆಗೆ ಮಹಾರ್ಣವ ಸುತೆಗೆ |
ಮಂಗಲಂ ಬಾಲದುರ್ಗೆಗೆ ಭರ್ಗಗೆ                ||೪೬೮||

ಮಂಗಲಂ ಶ್ರೀ ರುಂಡಮಾಲಗಣ ಪಾಲನಿಗೆ |
ಮಂಗಲಂ ವಿಬುಧ ಮನುಮುನಿವರ್ಗಕೇ ||
ಮಂಗಲಂ ಗುರು ರಾಘವೇಂದ್ರ ಭಾರತಿಯರಿಗೆ |

ಮಂಗಲಂ ಸಕಲ ಚೈತನ್ಯಾತ್ಮಗೆ                 ||೪೬೯||
ದೇವದೇವೇಶನಿಗೆ | ದೇವಪತಿ ಪೋಷನಿಗೆ |
ದೇವಾರಿ ವಂಶ ಸಂಹಾರಕನಿಗೇ ||
ದೇವಮುನಿ ನಮಿತಭೂ | ದೇವನೆನಿಸಿದ ವಾಸು |
ದೇವ ದೇವಕಿತನಯ ಶ್ರೀಕೃಷ್ಣಗೇ                ||೪೭೦||

ಜಯ ಮಂಗಲಂ | ನಿತ್ಯ ಶುಭ ಮಂಗಲಂ ||

|| ಶುಭಮಸ್ತು-ಶ್ರೀರಸ್ತು ||